ಶೂನ್ಯ ಸಂಪಾದನೆ’ ಕನ್ನಡದಲ್ಲಿ ಒಂದು ಅಭೂತ ಪೂರ್ವವಾದ ಸಂವಾದಾತ್ಮಕವಾದ ತರ್ಕಬದ್ಧವಾದ ಆಲೋಚನಾಪ್ರಚೋದಕವಾದ ವಿಚಾರ ಪರಿಪೂರ್ಣವಾದ ಆಧ್ಯಾತ್ಮಿಕ ಜ್ಞಾನಪ್ರತಿಭೆಯ ಮಹಾಸಂಗಮ; ಮಹಾಮತಿಗಳ ಆತ್ಮಜ್ಞಾನದ ಪ್ರಾಮಾಣಿಕ ಸಂಘರ್ಷಣೆಯ ಶ್ರೀಮಂತ ನಾಟಕ ರಂಗ; ಜ್ಞಾನ ಮೇರುವಾದ ಜಂಗಮ ಹಿಮಾಚಲವಾದ ಖಂಡಿತವಾದಿ ಸತ್ಯ ನಿಷ್ಠುರಿ ಪ್ರಭುದೇವರ ಅಸೀಮ ಅಸಾಮಾನ್ಯ ವ್ಯಕ್ತಿತ್ವದ ಸುತ್ತ ಹಬ್ಬಿ ಹರಡಿದ ಅನುಭಾವದ ಅನಂತ ಸಾಗರ; ಹತ್ತಿರ ಬಂದವರ ಆತ್ಮದ ಕತ್ತಲನ್ನು ಕಳೆದು ಬೆಳಕನ್ನು ತುಂಬುವ ಮೇಲೆತ್ತುವ ಆನಂದಮಗ್ನವಾಗಿಸುವ ಮಹಾಚೇತನಗಳ ವಿದ್ಯುದ್ವಿಹಾರ ರಂಗ; ಕರ್ಮಯೋಗಿಗಳ, ಜ್ಞಾನಯೋಗಿಗಳ, ಭಕ್ತಿಯೋಗಿಗಳ, ಶರಣಪ್ರಾಣರುಗಳ, ಶಿವಾರ್ಪಿತ ಕಾಯಕಿಗಳ, ಮಹಾನುಭಾವಿಗಳ ತಪೋಮಂದಿರ. ವಾದ ವಿವಾದಗಳ ಹಾಸ್ಯ ಪರಿಹಾಸ್ಯಗಳ ವ್ಯಂಗ್ಯ ವಿಡಂಬನೆಗಳ ವೈವಿಧ್ಯಮಯ ವರ್ಣಕಾರಂಜಿಗಳ ಜೀವಂತ ನರ್ತನವನ್ನು, ಉಪಮೆ ರೂಪಕಗಳ ಪ್ರತೀಕ ಪ್ರತಿಮೆಗಳ ಮಿಂಚಿನ ಹೊಳಪನ್ನು, ತಿಳಿವಿನ ಬೆಳದಿಂಗಳನ್ನು ನಾವು ಇಲ್ಲಿ ಕಾಣಬಹುದು. ಇಲ್ಲಿನ ಪ್ರಶ್ನೋತ್ತರಗಳ ಸೆಳೆಮಿಂಚು ಉನ್ನತ ಜೀವನದರ್ಶನದ ದಿವ್ಯಪ್ರಭೆ ನಮ್ಮನ್ನಾವರಿಸಿ  ಆಕರ್ಷಿಸಿ ಅರಿವನ್ನೂಡಿ ಹೃದಯವನ್ನು ಶಿವಪರವಾಗಿಸುತ್ತದೆ, ವಿಚಾರಗಳನ್ನು ಕೆರಳಿಸಿ ಅರಳಿಸಿ ಬೌದ್ದಿಕ ಹಸಿವನ್ನು ಹಿಂಗಿಸಲು ಸಾಧನವನ್ನೊದಗಿಸುತ್ತದೆ, ವೀರಶೈವರಿಗೆ ಮಾತ್ರವೇ ಅಲ್ಲದೆ ನಿರ್ಮತ್ಸರ ಜ್ಞಾನಪಿಪಾಸು ಗಳೆಲ್ಲರಿಗೂ ಅತ್ಯುನ್ನತ ಜ್ಞಾನ ದೀಪ್ತಿಯನ್ನು ಮುಕ್ತಹಸ್ತದಿಂದ ನೀಡುತ್ತದೆ. ಇಂತಹ ಉದ್ಗ್ರಂಥ ಕನ್ನಡ ಸಾಹಿತ್ಯದ ಒಂದು ವಿಶಿಷ್ಟವಾದ ಅಮೂಲ್ಯ ಭಾಗವಾದ ಶ್ರೇಷ್ಠ ಶರಣವಚನಗಳ ಸಂಕಲನ ಗ್ರಂಥವಾಗಿದೆ.

ಹಿನ್ನೆಲೆ

ಕ್ರಿಸ್ತಶಕ ಹತ್ತನೆಯ ಶತಮಾನವನ್ನು ಕನ್ನಡ ಸಾಹಿತ್ಯದ ಸುವರ್ಣ ಯುಗವೆಂದು ಕರೆಯುವುದು ರೂಢಿಯಾಗಿದೆ, ಸಮಂಜಸವಾಗಿದೆ. ಮುಂದಿನದಾದ ೧೧ನೆಯ ಶತಮಾನ ದಲ್ಲಿ ಹಿಂದಿನ ಶತಮಾನದಲ್ಲಿ ಪ್ರಕಟಗೊಂಡ ಉತ್ತುಂಗವಾದ ಉಜ್ವಲ ಪ್ರತಿಭೆ ಗೋಚರ ವಾಗುವುದಿಲ್ಲ. ಆದರೆ ೧೨ನೆಯ ಶತಮಾನವು ಹಲವಾರು ದೃಷ್ಟಿಗಳಿಂದ ೧೦ನೆಯ ಶತಮಾನಕ್ಕೆ ಸಮಾನವಾಗಿಯಲ್ಲದಿದ್ದರೂ ಸಂವಾದಿಯಾಗಿ ಮಹೋನ್ನತವಾಗಿದೆ, ವೈಶಿಷ್ಟ್ಯಪೂರ್ಣವಾಗಿದೆ. ಈ ಶತಮಾನ ಪ್ರಮುಖವಾಗಿ ಮತಪ್ರಾಬಲ್ಯದ ಕಾಲವಾಗಿತ್ತು. ಜೈನ, ವೀರಶೈವ, ವೈಷ್ಣವ ಮತಗಳು ಒಂದರೊಡನೊಂದು ಸ್ಪರ್ಧಿಸಿ ತಮ್ಮ ತಮ್ಮ ಧರ್ಮದ ಹಿರಿಮೆಗರಿಮೆಗಳನ್ನು ಪ್ರತಿಪಾದಿಸಿ ಜನಮನವನ್ನು ತಮ್ಮತ್ತ ಸೆಳೆಯಲು ಯತ್ನಿ ಸುತ್ತಿದ್ದವು. ಅಜ್ಞಾನ, ಡಾಂಭಿಕತೆ, ಮೂಢಾಚಾರಗಳು ಪ್ರಬಲಿಸಿ ಸಮಾಜವನ್ನು ಏಕಾಪೋಶನ ತೆಗೆದುಕೊಳ್ಳುತ್ತಿದ್ದವು. ಈ ಅವ್ಯವಸ್ಥೆಯನ್ನು ಅಳಿಸಿ, ಡಂಭಾಚಾರಗಳನ್ನು ಮುರಿದು, ಅಜ್ಞಾನದ ಅಂಧಕಾರವನ್ನು ಹರಿಸಲು, ಜನತೆಯಲ್ಲಿ ಸತ್ಸಂಪ್ರದಾಯ ಸದಾಚಾರ ಸದ್ಭಕ್ತಿ ನಿಷ್ಠೆಗಳನ್ನು ಬಿತ್ತಲು, ಸಮಾಜವನ್ನು ಪ್ರಗತಿಯ ದಾರಿಯಲ್ಲಿ ಕೊಂಡೊಯ್ಯಲು ಪ್ರಭಾವ ಶಾಲಿಯಾದ ಅಪೂರ್ವ ಚೇತನವೊಂದು ಅತ್ಯವಶ್ಯಕವಾಗಿ ಬೇಕಾಗಿತ್ತು. ಅಂತಹ ಅತ್ಯುತ್ಕಟ ಪರಿಸ್ಥಿತಿಯಲ್ಲಿ ಜನಮನದ ಆಶಾಸೂರ್ಯನಾಗಿ ಮೂಡಿ ಬಂದರು ಬಸವಣ್ಣನವರು.

ಧರ್ಮರಂಗದಲ್ಲಿ ಮಾತ್ರವಲ್ಲದೆ ಸಾಹಿತ್ಯರಂಗದಲ್ಲೂ ಇದೇ ಅವ್ಯವಸ್ಥೆ ತಲೆಹಾಕಿತ್ತು. ಸಾಹಿತ್ಯವು ‘ಪಂಡಿತರ ವಿವಿಧ ಕಳಾಮಂಡಿತರ’ ಸೊತ್ತಾಗಿ, ಸಂಪ್ರದಾಯ ಶರಣತೆ ಅತಿಯಾಗಿ, ಸಂಸ್ಕೃತದ ಪ್ರಾಚುರ್ಯ ಅತಿಶಯವಾಗಿ, ಜನಸಾಮಾನ್ಯರ ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕುವ ಪ್ರವೃತ್ತಿ ಪ್ರಬಲವಾಗಿತ್ತು. ಹೀಗಿರುವಾಗ ಜನಸಾಮಾನ್ಯಕ್ಕೆ ಅರಿವಾಗುವಂತೆ ತಮ್ಮ ಮತತತ್ವವನ್ನು ಪ್ರತಿಪಾದಿಸಿ ಅವರ ಒಲವನ್ನು ಗಳಿಸಲು ಹೊಸದಾದ ಒಂದು ಸಾಹಿತ್ಯ ಮಾಧ್ಯಮ ಅನಿವಾರ್ಯವಾಗಿತ್ತು. ಇಂತಹ ಅನಿವಾರ್ಯತೆಯಲ್ಲಿ ಮೂಡಿ ಬಂದ ಸಾಹಿತ್ಯ ಪ್ರಕಾರವೇ ವಚನ ಸಾಹಿತ್ಯ.

ವಚನ ವಾಙ್ಮವೆಂದೊಡನೆಯೇ ನಮ್ಮ ಕಣ್ಮುಂದೆ ಬಂದು ನಿಲ್ಲುವ ಮೂರ್ತಿ ಬಸವಣ್ಣನವರದು. ವಚನ ರಚನೆ ಬಸವಣ್ಣನವರಿಗಿಂತ ಹಿಂದೆಯೇ ನಡೆದಿದ್ದರೂ, ಅದಕ್ಕೆ ಒಂದು ಸುವ್ಯವಸ್ಥಿತ ರೂಪುಕೊಟ್ಟು, ಅದರ ವ್ಯಾಪ್ತಿಯನ್ನು ವಿಶಾಲಗೊಳಿಸಿ, ಔನ್ನತ್ಯವನ್ನು ಏರಿಸಿ, ಮಹತ್ತನ್ನು ಮೆರೆಸಿ, ಕೀರ್ತಿಯನ್ನು ಬೆಳಗಿಸಿದವರೆಂದರೆ ಬಸವಣ್ಣನವರೆಂಬುದು ನಿಶ್ಚಿತ, ನಿರ್ವಿವಾದ. ಪಾರಮಾರ್ಥಿಕತೆ ಅವರ ಹೃದಯದಲ್ಲಿ ಮೊಳೆತು ಮರವಾಗಿ ಪೂತು ಫಲಭರಿತವಾಗುವವರೆಗೆ, ಅವರ ಮನದಲ್ಲಿ ಜೀವನದಲ್ಲಿ ನಡೆದ ಪ್ರತಿಯೊಂದು ಅಂಶವೂ ಅವರ ವಚನಗಳಲ್ಲಿ ನಿಚ್ಚಳವಾಗಿ ಮೂಡಿಬಂದಿದೆ. ಅಂತರಂಗ ನಿವೇದನೆ, ಧರ್ಮಪ್ರಕ್ರಿಯೆ, ಸಮಾಜಬೋಧೆ, ತಾವು ಸಂಪರ್ಕ ಹೊಂದಿದ ವ್ಯಕ್ತಿ ಸಂಗತಿಗಳು ಎಲ್ಲವನ್ನೂ ಅವರು ವಚನಗಳಲ್ಲಿ ಪ್ರತಿಬಿಂಬಿಸಿದ್ದಾರೆ. ಅವರು ಕಲ್ಯಾಣದಲ್ಲಿ ಸ್ಥಾಪಿಸಿದ ಅನುಭವಮಂಟಪ ಜ್ಞಾನ ಜಿಜ್ಞಾಸುಗಳಿಗೆ, ಸಾಧಕರಿಗೆ, ಭಕ್ತರಿಗೆ ಒಂದು ವಿಚಾರ ಕೇಂದ್ರವಾಯಿತು. ಅವರೆಲ್ಲರೂ ತಾವು ಕಂಡ ನಂಬಿದ ಸತ್ಯಗಳನ್ನು ಆ ಶರಣಗಡಣದೆದುರು ಬಿತ್ತರಿಸಿದರು. ಪ್ರಭುದೇವರ ಪರಿಣತ ಪ್ರಜ್ಞೆಯ ಮಹಾಪ್ರಭೆಯಿಂದ ತಮ್ಮ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು. ಆ ಅರಿವನ್ನು ವಚನಗಳ ಮೂಲಕ ಪ್ರಕಟಿಸಿದರು, ಜನತೆಯಲ್ಲಿ ಪ್ರಸಾರ ಮಾಡಿದರು. ಇಂತಹ ೧೦೮ ಕೋಟಿ ವಚನಗಳು ರಚಿತವಾಗಿದ್ದವೆಂಬ ಐತಿಹ್ಯವೊಂದೊಂಟು. ಇದು ಈ ವಚನಗಳ ವ್ಯಾಪ್ತಿಯನ್ನು ಸುವ್ಯಕ್ತಗೊಳಿಸುತ್ತದೆ. ಈಗ ತಿಳಿದಿರುವಂತೆ ಸುಮಾರು ೨೧೩ ವಚನಕಾರರು ಸುಮಾರು ೮೦೦೦ ವಚನಗಳನ್ನು ರಚಿಸಿರುವಂತೆ ಗೊತ್ತಾಗುತ್ತದೆ. ಇವು ಪಂಡಿತರನ್ನು ಮೆಚ್ಚಿಸಿ ವರಕವಿಗಳೆಂದು ಬಿರುದುಗಳಿಸಲು ಬರೆದವುಗಳಲ್ಲ; ಜ್ಞಾನ ಮತ್ತು ಅಧ್ಯಾತ್ಮ ಗಂಗೆಯನ್ನು ಜನಮನಕ್ಕೆ ಹರಿಸಿ ಅವರ ಆತ್ಮಸಂಸ್ಕಾರಗೊಳಿಸಲು ಬರೆದವುಗಳು. ಇವು ಆಯಾಯಾ ಸನ್ನಿವೇಶಗಳಲ್ಲಿ ಪರಿಸರದ ಪ್ರಭಾವ ಮತ್ತು ಪ್ರಚೋದನೆಯಿಂದ ಶರಣರ ಹೃದಯದಲ್ಲಿ ಮೂಡಿದ ಮಾತುಗಳಾಗಿರಬೇಕು; ಬಹುಶಃ ರಚನೋದ್ದೇಶದಿಂದಲೇ ಒಂದೆಡೆ ಕುಳಿತು ತಿಣುಕಿ ಬರೆದವುಗಳಾಗಿರಲಾರವು. ಏಕೆಂದರೆ ಮೆಟ್ಟು ಹೊಲೆಯುವ, ಹುಲ್ಲು ಕೊಯ್ಯುವ, ಅಕ್ಕಿ ಆಯುವ, ಬಟ್ಟೆ ಒಗೆಯುವ, ದನಕಾಯುವ, ಭೂಮಿಯುಳುವ, ಮಡಕೆ ಮಾಡುವ – ಮುಂತಾದ ವಿವಿಧ ಕಾಯಕದವರಾಗಿದ್ದ ಎಲ್ಲ ಶರಣರೂ ಅಕ್ಷರ ಜ್ಞಾನಿಗಳಾಗಿದ್ದರೆಂದು ಹೇಳುವಂತಿಲ್ಲ. ಶರಣರ ಬಾಯಿಂದ ಇಂತಹ ವಚನಗಳು ಹೊರಟಾಗ ಕೇಳಿದವರು ಯಾರೋ ಬರೆದಿಟ್ಟಿರಬೇಕು. ಅನುಭವಮಂಟಪದಲ್ಲಿ ಈ ಕಾಯಕಕ್ಕೇ ನಿಯಮಿತರಾದವರೂ ಇದ್ದರು. ಬಸವಣ್ಣ, ಪ್ರಭುದೇವ, ಚನ್ನಬಸವಣ್ಣ ಮುಂತಾದ ಅಕ್ಷರ ಜ್ಞಾನಿಗಳು ತಮ್ಮ ಮನದ ಸಹಜ ಸ್ಫೂರ್ತಭಾವಗಳಿಗೆ ಬರವಣಿಗೆಯ ಮೂಲಕ ರೂಪ ಕೊಟ್ಟಿರಲೂಬಹುದು. ಆದರೆ ಕಲ್ಯಾಣದಲ್ಲಿ ನಡೆದ ಕ್ರಾಂತಿಯ ಫಲವಾಗಿ ಈ ವಚನ ರಚನೆ ಸ್ಥಗಿತಗೊಂಡು, ಶರಣರು ಚೆಲ್ಲಾಪಿಲ್ಲಿಯಾಗಿ, ಅವರೊಡನೆ ಈ ಅಮೂಲ್ಯ ವಚನಗಳೂ ದಿಕ್ಕಾಪಾಲಾದುವು. ಮುಂದೆ ಹದಿಮೂರನೇ ಶತಮಾನದಲ್ಲಿ ಎರಗಿದ ಮಹಮ್ಮದೀಯರ ದಾಳಿ ಈ ಧರ್ಮಪ್ರಸಾರವನ್ನೂ ಸಾಹಿತ್ಯದ ರಚನೆಯನ್ನೂ ಕುಂಠಿತಗೊಳಿಸಿತು. ಮುಂದೆ ಹಲವರು ವಚನಗಳನ್ನು ರಚಿಸಿದರೂ ಬಸವಣ್ಣನವರ ಪ್ರಭಾವಲಯ ದಲ್ಲಿ, ಅನುಭವಮಂಟಪದ ವಿಚಾರ ಕ್ರಾಂತಿಯ ಜ್ಞಾನ ಘರ್ಷಣೆಯ ಹಿನ್ನೆಲೆಯಲ್ಲಿ ಮೂಡಿದ ವಚನಗಳ ಔಜ್ವಲ್ಯವನ್ನು ಸಂಖ್ಯೆಯನ್ನು ಮುಟ್ಟಲಿಲ್ಲ.

ಸುದೈವವಶಾತ್ ೧೫ನೆಯ ಶತಮಾನ ಮತ್ತೆ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಪುನರುತ್ಥಾನಕ್ಕೆ ಬೆಳಕು ನೀಡಿತು. ವಿಜಯನಗರ ಸಾಮ್ರಾಜ್ಯದ ಉದಯ, ಅದರ ಅರಸುಗಳ ಸರ್ವಧರ್ಮಸಹಿಷ್ಣುತೆಯಿಂದಾಗಿ ಮತ್ತೆ ನಮ್ಮ ಧರ್ಮಗಳು ಚೇತರಿಸಿಕೊಂಡವು; ಕಳೆಗುಂದಿದ್ದ ಧರ್ಮಪ್ರಚಾರ ಸಾಹಿತ್ಯಪ್ರಚಾರ ಕಾರ್ಯಕ್ರಮಗಳು ಜೀವಗೊಂಡವು. ಅಂತೆಯೇ ವೀರಶೈವ ಧರ್ಮವೂ ತನಗೆ ಮುಸುಗಿದ್ದ ಕಾವಳವನ್ನು ಕೊಡವಿ ಮೇಲೆದ್ದಿತು. ಕ್ರಾಂತಿಯ ಕಾಲದಲ್ಲಿ. ನಂತರದ ಮಹಮ್ಮದೀಯರ ದಾಳಿಯ ಕಾಲದಲ್ಲಿ ಚೆಲ್ಲಾಪಿಲ್ಲಿಯಾಗಿ ಚೆದರಿ ಹೋಗಿದ್ದ ತಮ್ಮ ಪ್ರಾಚೀನರ ಅತ್ಯಮೂಲ್ಯ ವಚನ ರಚನೆಗಳನ್ನು ಸಂಗ್ರಹಿಸುವ ಮತ್ತು ಅವುಗಳಲ್ಲಿನ ಅಂತಸ್ಸಾರವನ್ನು ಬಹಿರ್ಗತಗೊಳಿಸಿ ಜನತೆಯಲ್ಲಿ ಪ್ರಸಾರಿಸುವ ಪವಿತ್ರೋದ್ದೇಶ ಹಲವು ಧಾರ್ಮಿಕ ಮುಂದಾಳುಗಳಲ್ಲಿ ಮನೆ ಮಾಡಿತು. ಈ ಕಾರ್ಯ ‘ಮುಖ್ಯವಾಗಿ ಮೂರು ಮಾರ್ಗಗಳಲ್ಲಿ ನಡೆಯಿತು. ಸಂಕಲನ, ವ್ಯವಸ್ಥಾಪನ, ವ್ಯಾಖ್ಯಾನ’. ಈ ಕಾಯಕದ ಫಲವೇ ಜಕ್ಕಣಾರ್ಯ, ‘ಏಕೋತನರ ಸ್ಥಲ’, ಮಹಲಿಂಗದೇವನ ‘ಏಕೋತ್ತರ ಶತಸ್ಥಲ’, ಕಲ್ಲುಮಠದ ಪ್ರಭುದೇವರ ‘ಲಿಂಗ ಲೀಲಾವಿಲಾಸ ಚಾರಿತ್ರ್ಯ’, ಚೆನ್ನಂಜೇದೇವರ ‘ಬಸವಸ್ತೋತ್ರದ ವಚನಗಳು’ ಮುಂತಾದುವು. ಇದೇ ಪ್ರಯತ್ನದ ಫಲ, ಹಲವು ದೃಷ್ಟಿ ಗಳಿಂದ ವಿಶಿಷ್ಟವೂ ಅಪೂರ್ವವೂ ಆಗಿರುವ ‘ಶೂನ್ಯ ಸಂಪಾದನೆ’.

ಶೂನ್ಯ ಸಂಪಾದನೆ

ಇದೊಂದು ನವೀನ ರೀತಿಯ ವಚನ ಸಂಕಲನ. ಉಳಿದ ಸಂಕಲನಗಳಂತೆ ಷಟ್ಸ್ಥಲಗಳಿಗೆ ಸಂಬಂಧಿಸಿದಂತೆ ವಚನಗಳನ್ನು ವರ್ಗೀಕರಿಸಿ ಇಲ್ಲಿ ಸಂಗ್ರಹಿಸಿಲ್ಲ. ಈ ಷಟ್ಸ್ಥಲಪ್ರಭೆಯನ್ನು ಅದರ ಅಂತರ್ಗತವಾದ ತಾತ್ವಿಕ ವಿಚಾರಲಹರಿಯನ್ನು ಮಾತ್ರವೇ ವೀರಶೈವ ಧರ್ಮೀಯರಿಗೆ ತಿಳಿಸಿಕೊಡುವ ಉದ್ದೇಶದಿಂದ ಇದು ರಚಿತವಾದಂತೆ ತೋರುವುದಿಲ್ಲ. ಉಪಲಬ್ಧವಾದ ವಿಪುಲ ವಚನರಾಶಿಯನ್ನು ಅಭ್ಯಸಿಸಿದವರಿಗೆ ಅವುಗಳಲ್ಲಿರುವ ಕೆಲವು ಸಂವಾದಾತ್ಮಕವಾದ ಪ್ರಶ್ನೋತ್ತರ ರೂಪವಾದ ಸಂಬೋಧನಾತ್ಮಕವಾದ ವಚನಗಳು ಕುತೂಹಲವನ್ನು ಕೆರಳಿಸಿರ ಬೇಕು. ಆ ವಚನಗಳು ಯಾರಿಗೆ ಯಾವ ಸಂದರ್ಭದಲ್ಲಿ ಉದ್ದೇಶಿಸಿ ಆಡಿದವುಗಳಾಗಿರ ಬೇಕೆಂಬ ಆಲೋಚನೆ ಅರಳಿರಬೇಕು. ಇದಕ್ಕೆ ಶರಣರ ಬಗ್ಗೆ ಪರಂಪರಾಗತವಾಗಿ ಬಂದ ಕಥೆಗಳು ಬೆಂಬಲವಾಗಿ ಆಯಾ ಕಥೆಗಳಿಗೆ ತಕ್ಕಂತೆ, ವಚನಗಳ ಅಂತರ್‌ಪ್ರಮಾಣದಿಂದಲೇ ಕೆಲಮಟ್ಟಿಗೆ ಊಹಿಸಬಹುದಾದ ಸನ್ನಿವೇಶಗಳಿಗೆ ತಕ್ಕಂತೆ ವಚನಗಳನ್ನು ಅಳವಡಿಸಿ ಸಂಯೋಜಿಸುವ ಸುಂದರ ಕಲ್ಪನೆ ಮೂಡಿರಬೇಕು. ಆಗ ಆ ಕಾಲದ ಹಲವಾರು ಪ್ರಮುಖ ಶರಣರ ಬಾಳಿನಲ್ಲಿ ಬಂದು, ಒಂದಲ್ಲ ಒಂದು ಸಂದರ್ಭದಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಅವರಿಗೆ ತನ್ನ ಪ್ರಚಂಡ ತೇಜಸ್ಸಿನ ಪರಿಣತ ಜ್ಞಾನದಿಂದ ಮಾರ್ಗದರ್ಶನ ನೀಡಿ ತಿದ್ದಿ ತೀಡಿ ಅವರ ಹೃದಯದ ಸಂದೇಹ ಸಂಘರ್ಷಗಳಿಗೆ ಸಮಾಧಾನ ನೀಡಿ ಪರಮ ಪರಿಪೂರ್ಣತೆಯತ್ತ ಅವರನ್ನು ನಡೆಸಲು ಸಹಾಯಕನಾದ ಅನುಭಾವದ ಧವಳಗಿರಿಯನ್ನೇರಿ ನಿಂತ ಮಹಾಜ್ಞಾನಿ ಪ್ರಭುದೇವ ಸಹಜವಾಗಿಯೇ ಈ ಕಲ್ಪನೆಯ ಕೇಂದ್ರವಾದ. ಅವನ ಉಜ್ವಲ ವ್ಯಕ್ತಿತ್ವದ ಸುತ್ತ ನಡೆದ ಸಂಗತಿ ಇದರ ವಸ್ತುವಾಯಿತು. ಈ ವಸ್ತುವಿಗೆ ತಕ್ಕಂತಹ ವಿಶಿಷ್ಟ ವಿಚಾರ ವೈಭವದ ಹೃದಯಾಕರ್ಷಕವಾದ ಸುಂದರ ಕಾವ್ಯ ಸೌರಭದ ವಚನಗಳ ಸಂಯೋಜನೆ ನಡೆಯಿತು. ಆದುದರಿಂದ ಕುತೂಹಲಭರಿತವಾದ ಸುವಿಚಾರಸಂಪನ್ನವಾದ ಬುದ್ದಿ ಪ್ರಚೋದಕವಾದ ಅಂತರಂಗ ಪರಿಪಾಕ ಕಾರಣವಾದ ಚಿತ್ತಾಕರ್ಷಕ ನಾಟಕೀಯ ಕೃತಿಯಾಗಿ ಇದು ಮೂಡಿತು.

ಇದು ಹೀಗೆಯೇ ಖಚಿತವಾಗಿ ನಡೆದದ್ದಲ್ಲವಾದರೂ ನಡೆದಿರಬಹುದೆಂಬ ಭಾವನೆ ಯನ್ನುಂಟು ಮಾಡುವ ದೃಶ್ಯಗಳ ವಿಂಗಡಣೆ, ಅದಕ್ಕೆ ತಕ್ಕ ವಚನಗಳ ಜೋಡಣೆ, ಸ್ವಲ್ಪ ಸಾಂಗತ್ಯ ತಪ್ಪಿದಾಗ ಅವುಗಳನ್ನು ಅತಿ ಜಣ್ಮೆಯಿಂದ ಕೂಡಿಸುವ ಸಂಕಲನಕಾರರ ಸಂಬಂಧ ಸೂಚಕವಾದ ಸ್ವತಂತ್ರ ವಾಕ್ಯಗಳು ವಿವರಣೆಗಳು, ಮೊದಲಿನಿಂದ ಕೊನೆಯವರೆಗೂ ಕಾಲಾನುಕ್ರಮದಲ್ಲಿ ಹಂತ ಹಂತವಾಗಿ ಸಹಜವಾಗಿ ಸ್ವಾರಸ್ಯಪೂರ್ಣವಾಗಿ ಬೆಳೆದುಕೊಂಡು ಹೋಗುವ ಸನ್ನಿವೇಶಗಳು – ಇವು ಈ ಸಂಕಲನದ ಮೊದಲ ನೋಟಕ್ಕೆ ಕಾಣುವ ಮುಖ್ಯ ವಿಶೇಷಗಳು. ಇವು ಸಂಪಾದನಕಾರರ ಸ್ವತಂತ್ರಮತಿಯನ್ನೂ ಸೃಷ್ಟ್ಯಾತ್ಮಕ ಪ್ರತಿಭೆಯನ್ನೂ ದರ್ಶನ ದೃಷ್ಟಿಯನ್ನೂ ನಿಚ್ಚಳವಾಗಿ ಪ್ರತಿಬಿಂಬಿಸುತ್ತವೆ.

‘ಶೂನ್ಯ ಸಂಪಾದನೆ’ ಎಂಬ ಈತಲೆ ಬರಹವೇ ಅತ್ಯಂತ ಅರ್ಥಪೂರ್ಣವಾದ ಭಾವಸಂಪನ್ನವಾದ ಧ್ವನಿಗರ್ಭಿತವಾದ ಪದವೃಂದ. ‘ಶೂನ್ಯ’ ಎಂದರೆ ಸೊನ್ನೆ; ಏನೂ ಅಲ್ಲದ ಸ್ಥಿತಿ. ಇಂತಹ ನಿರ್ಲಿಪ್ತ ನಿರಾಲಂಬ ಸ್ಥಿತಿಯನ್ನು ಸಂಪಾದಿಸುವುದೇ ಜೀವದ ಗುರಿ. “ವೀರಶೈವ ಧಾರ್ಮಿಕ ಸಾಹಿತ್ಯದಲ್ಲಿ ಶೂನ್ಯ ಎಂಬ ಮಾತನ್ನು ಅಷ್ಟಾವರಣಗಳ ಬೆಲೆಯನ್ನರಿತು ಷಟ್ಸ್ಥಲ ಮಾರ್ಗವಾಗಿ ಉಪಾಸನೆ ಮಾಡಿದ ಸಾಧಕನಿಗೆ ಸಾಧನೆಯ ಅಂತ್ಯದಲ್ಲಿ ಒದಗುವ ಬ್ರಹ್ಮ ಸಾಕ್ಷಾತ್ಕಾರ ಎಂಬ ಅರ್ಥದಲ್ಲಿ, ಆ ಸಾಕ್ಷಾತ್ಕಾರದ ಅನುಭವ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ”. ಮಾನವ ಸ್ವಭಾವ ಸಹಜವಾದ ಆಸೆ, ಮೋಹ, ದ್ವೇಷ, ಅಹಂಕಾರ ಮಮಕಾರಗಳನ್ನು ಸಂಪೂರ್ಣವಾಗಿ ಇಲ್ಲಗೈದುಕೊಳ್ಳಬೇಕು. ಇವುಗಳ ಸಂಪೂರ್ಣ ನಿರಸನವಾದೊಡನೆಯೇ ಒಂದು ಹೊಸ ಅನುಭವ ಹೊಸ ಶಕ್ತಿ ಹೊಸ ಬೆಳಕು ಹೊಳೆಯುತ್ತದೆ. ಹಾಗೆ ಹೊಳೆದದ್ದು ಆತ್ಮದಲ್ಲಿ ಉಳಿಯುತ್ತದೆ, ಬೆಳೆಯುತ್ತದೆ; ಬೆಳೆದು ಬೃಹದ್ಟ್ಯಾಪಿಯಾಗಿ ಪರಮ ಪರಿಪೂರ್ಣತೆಯನ್ನು ಹೊಂದುತ್ತದೆ. ಆದುದರಿಂದ “ಶೂನ್ಯ ವೆಂದರೆ ಸಾಮಾನ್ಯವಾದ ನಿಷೇಧಾರ್ಥಕವಲ್ಲ, ಎಲ್ಲವನ್ನೂ ಒಳಗೊಂಡ ಶೂನ್ಯ. ಎಲ್ಲವನ್ನೂ ಸೇರಿಸಿಕೊಂಡು, ಎಲ್ಲಕ್ಕೂ ಅತೀತವಾಗಿ ತಾನೇ ತಾನಾದ ನಿರಾಲಂಬ ಶೂನ್ಯ”. ಇಂತಹ ಪರಿಪೂರ್ಣತೆಯನ್ನು – ಶೂನ್ಯವನ್ನು – ಸಂಪಾದಿಸಿದ ಮಹಾಶರಣರ ದಿವ್ಯ ವಿಚಾರ ಶ್ರೀಮಂತರ ಪ್ರಭೆಯ ಸಂಗಮವೇ ಈ ‘ಶೂನ್ಯ ಸಂಪಾದನೆ’.

ವಿವಿಧ ಸಂಪಾದನೆಗಳು

ಇದುವರೆಗೆ ನಾಲ್ಕು ಶೂನ್ಯ ಸಂಪಾದನೆಗಳು ನಮಗೆ ದೊರೆತಿವೆ. ಹರಶರಣರ ಶ್ರೇಷ್ಠ ಅನುಭಾವ ವಚನಗಳನ್ನು ಈ ಒಂದು ಸುವ್ಯವಸ್ಥಿತ ರೂಪದಲ್ಲಿ ನಾಟಕೀಯವಾಗಿ ಮಾಲೆಗಟ್ಟಬಹುದೆಂಬ ಸುಂದರ ಕಲ್ಪನೆ ಬಹುಶಃ ಮೊಟ್ಟಮೊದಲು ಬಂದದ್ದು ಶಿವಗಣ ಪ್ರಸಾದಿ ಮಹಾದೇವಯ್ಯನವರಿಗೆ. ಇತರ ಮೂರು ಸಂಪಾದನೆಗಳೂ ಇದರ ಆಧಾರದ ಮೇಲೆಯೇ ರಚಿತವಾಗಿವೆ. ಇದರ ಹಸ್ತಪ್ರತಿಯ ಕೊನೆಯಲ್ಲಿ ಹೀಗಿದೆ: ಇದು ಪರಮ ಗುರು ಪರಮ ವೀರಶೈವ ಸಿದ್ಧಾಂತ ತತ್ವಜ್ಞಾನ. ಇದು ವೀರಶೈವಾಚಾರ ಪ್ರತಿಷ್ಠಾಪನಾ ಚಾರ್ಯ. ಇದು ದಿವ್ಯ ವೇದಾಂತ ಶಿರೋಮಣಿ….ಇದು ಅಜ್ಞಾನ ತಿಮಿರಾಂಜನ ತಂತ್ರಮಪ್ಪ ಪ್ರಭುದೇವರ ಶೂನ್ಯ ಸಂಪಾದನೆಯ ಮಹಾಪ್ರಸಂಗಮಂ ಬಸವರಾಜ ದೇವರು ಪ್ರಭು ದೇವರು ಮುಖ್ಯವಾದ ಅಸಂಖ್ಯ ಮಹಾಗಣಂಗಳ ವಚನಗಳಿಂ ಕಥಾಸಂಗತವ ಮಾಡಿ ಶಿವಗಣ ಪ್ರಸಾದಿ ಮಹಾದೇವಗಳು ತತ್ಸಿವಗಣಂಗಳ ಶಿವಾನುಭಾವ ಶ್ರೋತೃದ್ವಾರ ಮುಖಕ್ಕೆ ನಿರ್ಮಳದರ್ಪಣವೆನೆ ಸಮರ್ಪಿಸಿದನು. ಈ ಕೃತಿಯಲ್ಲಿ ಸ್ಥಲ ವಿಭಾಗಗಳಿವೆ – ಪಿಂಡಸ್ಥಲ, ಸಂಸಾರ ಹೇಯಸ್ಥಲ, ಮಾಯಾ ವಿಡಂಬನ ಸ್ಥಲ ಮುಂತಾಗಿ. ಇದರಲ್ಲಿ ಸಿದ್ಧರಾಮನ ದೀಕ್ಷಾ ಪ್ರಸಂಗವಿಲ್ಲ. ಪ್ರಭುದೇವರ ಜನನ ಸಾಧನೆಗಳ ವಿಚಾರದಲ್ಲಿ ಹರಿಹರನನ್ನೇ ಬಹು ಮಟ್ಟಿಗೆ ಈತ ಅನುಸರಿಸಿದ್ದಾನೆ.

ಎರಡನೆಯದಾದ ಹಲಗೆದೇವರ ಶೂನ್ಯ ಸಂಪಾದನೆ ತುಂಬ ವಿಸ್ತೃತವಾದ ಗ್ರಂಥ. ಸಾಧ್ಯವಾದಷ್ಟು ಹೆಚ್ಚು ಸಂಖ್ಯೆಯ ವಚನಗಳನ್ನು ಅಳವಡಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಇಲ್ಲಿನ ಮುಖ್ಯ ವಿಶೇಷವೆಂದರೆ ಮೊದಲನೆಯ ಸಂಪಾದನೆಯಲ್ಲಿ ಇಲ್ಲದ ಸಿದ್ಧರಾಮನ ಲಿಂಗದೀಕ್ಷೆಯ ಪ್ರಕರಣವನ್ನು ಸೇರಿಸಿರುವುದು. ಇದನ್ನು ವಿಸ್ತಾರವಾಗಿಯೇ ಬೆಳೆಸಿದ್ದಾರೆ.

ಮೂರನೆಯದು ಗುಮ್ಮಳಾಪುರದ ಸಿದ್ಧಲಿಂಗಯತಿಯಗಳದು. ಇಲ್ಲಿ ಔಚಿತ್ಯ ದೃಷ್ಟಿ ಯನ್ನು ಹೆಚ್ಚಾಗಿ ಕಾಣುತ್ತೇವೆ. ಸಿದ್ಧರಾಮನ ಪ್ರಕರಣವನ್ನು ಕೆಲಮಟ್ಟಿಗೆ ಸಂಗ್ರಹಿಸಿದ್ದಾರೆ. ಆಯ್ದಕ್ಕಿ ಮಾರಯ್ಯ ಮತ್ತು ಗೋರಕ್ಷನ ಪ್ರಸಂಗಗಳನ್ನು ಹೊಸದಾಗಿ ಅಳವಡಿಸಿದ್ದಾರೆ. ಇಲ್ಲಿನ ಮುಖ್ಯ ವ್ಯತ್ಯಾಸ ಪ್ರಭುದೇವರ ಜನ್ಮ ವೃತ್ತಾಂತದಲ್ಲಿ.

ನಾಲ್ಕನೆಯ ಶೂನ್ಯ ಸಂಪಾದನೆ ಗೂಳೂರ ಸಿದ್ಧವೀರಣ್ಣೊಡೆಯರದು. ಇವರು ಸಿದ್ಧರಾಮನ ದೀಕ್ಷಾಪ್ರಸಂಗ, ಪ್ರಭುವಿನ ಜನ್ಮ ವೃತ್ತಾಂತಗಳಲ್ಲಿ ಸಿದ್ಧಲಿಂಗಯತಿಗಳನ್ನೇ ಅನುಸರಿಸಿರುವುದು ಕಾಣಬರುತ್ತದೆ. ಹಿಂದಿನ ಸಂಪಾದನೆಗಳ ಜೊತೆಗೆ ಮೋಳಿಗಯ್ಯ ಮತ್ತು ಘಟ್ಟಿವಾಳಯ್ಯಗಳ ಸಂಪಾದನೆಗಳನ್ನು ಸಂಗ್ರಹಿಸಿ ಅಳವಡಿಸಿದ್ದಾರೆ. ಸಿದ್ಧವೀರಣ್ಣೊಡೆ ಯರ ಸಂಪಾದನೆಯಲ್ಲಿ ಸಂಯೋಜನೆಯಲ್ಲಿ ಹೆಚ್ಚಿನ ಕಲಾದೃಷ್ಟಿ ಇದೆ. ಅವರು ಕೃತಿಯನ್ನು ಸಂಧಿಗಳನ್ನಾಗಿ ವಿಭಾಗಿಸಿ ಪ್ರತಿಯೊಂದಕ್ಕೂ ‘ಉಪದೇಶ’ ಅಥವಾ ‘ಸಂಪಾದನೆ’ ಎಂದು ನಾಮಕರಣ ಮಾಡಿದ್ದಾರೆ. ಪ್ರತಿಸಂಧಿಯ ಪ್ರಾರಂಭದಲ್ಲೂ ಒಂದೊಂದು ಕಂದ ಪದ್ಯವಿದ್ದು ಷಟ್ಪದಿ ಕಾವ್ಯಗಳಲ್ಲಿನ ಸೂಚನಾ ಪದ್ಯಗಳಂತೆ ಅವುಗಳಲ್ಲಿ ಆಯಾ ಸಂಧಿಯ ಪ್ರಧಾನ ವಿಷಯವನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಅದಾದನಂತರ ಪ್ರತಿ ಪ್ರಸಂಗದ ಹಿನ್ನೆಲೆಯನ್ನು ಗದ್ಯದಲ್ಲಿ ವಿವರಿಸುತ್ತಾರೆ. ಸಂಧಿಯ ಕೊನೆಯಲ್ಲಿ ‘ಇಂತೀ ಶ್ರೀಮತ್ ಸಕಲಗುಣ ಪುರಾತನದೊಳ್ ಪ್ರಭುದೇವರು ಮಹಾನುಭಾವಸದ್ಗೋಷ್ಠಿಯಂ ಮಾಡಿದ ಶೂನ್ಯ ಸಂಪಾದನೆಯೊಳ್ ಪ್ರಥಮೋಪದೇಶ ಸಮಾಪ್ತಂ’ ಮುಂತಾಗಿ ಗದ್ಯ ಬರುತ್ತದೆ. ಆಯಾ ಸಂಧಿಯಲ್ಲಿ ಬಳಸಿದ ವಚನಗಳ ಸಂಖ್ಯೆಯನ್ನೂ ಕೊಡುತ್ತಾರೆ. ಹೀಗೆ ಈ ಕೃತಿ ಆಧುನಿಕ ಗ್ರಂಥ ಸಂಪಾದನೆಯ ದೃಷ್ಟಿಯಿಂದಲೂ ಆದರಣೀಯ ಪರಿಷ್ಕೃತ ರೂಪವನ್ನು ಪಡೆದಿದೆ.

ಕೃತಿಯ ಒಟ್ಟಂದ

ಇದರಲ್ಲಿ ಪ್ರಥಮೋಪದೇಶ, ಮುಕ್ತಾಯಕ್ಕಗಳ ಸಂಪಾದನೆ, ಸಿದ್ಧರಾಮಯ್ಯಗಳ ಸಂಪಾದನೆ, ಬಸವೇಶ ಚನ್ನಬಸವೇಶಂಗನುಗ್ರಹ ಮಾಡಿದ ಸಂಪಾದನೆ, ಪ್ರಭು ಕಲ್ಯಾಣಕೆ ಬಂದ ಸಂಪಾದನೆ, ಮರುಳು ಶಂಕರ ದೇವರ ಸಂಪಾದನೆ, ಬಸವೇಶ್ವರನ ಸಂಪಾದನೆ, ಚೆನ್ನಬಸವೇಶ್ವರನ ಸಂಪಾದನೆ, ಮಡಿವಾಳಯ್ಯಗಳ ಸಂಪಾದನೆ, ಸಿದ್ಧರಾಮೇಶ್ವರನ ಗುರು ಕರುಣ, ಪ್ರಭುದೇವರ ಪೂಜಸ್ತುತಿ, ಆಯ್ದಕ್ಕಿ ಮಾರಯ್ಯಗಳ ಸಂಪಾದನೆ, ಮೋಳಿಗಯ್ಯಗಳ ಸಂಪಾದನೆ, ನುಲಿಯ ಚಂದಯ್ಯಗಳ ಸಂಪಾದನೆ, ಘಟ್ಟಿವಾಳಯ್ಯನ ಸಂಪಾದನೆ, ಮಹಾದೇವಿಯಕ್ಕಗಳ ಸಂಪಾದನೆ, ಪ್ರಭು ದೇಶಾಂತರ ಹೋಗಿ ಬಂದ ಸಂಪಾದನೆ, ಪ್ರಭು ದೇವರು ಶೂನ್ಯ ಸಿಂಹಾಸನವನೇರಿದ ಸಂಪಾದನೆ, ಪ್ರಭುದೇವರ ಆರೋಗಣೆ, ಶರಣರ ಅವಸಾನ ಪರಾಮರಿಕೆ ಮತ್ತು ಗೋರಕ್ಷನ ಸಂಪಾದನೆ ಹಾಗೂ ಎಲ್ಲಾ ಗಣಂಗಳ ಐಕ್ಯ ಎಂಬ ಇಪ್ಪತ್ತೊಂದು ಉಪದೇಶಗಳಿವೆ.

ಈ ಎಲ್ಲ ಸಂಪಾದನೆಗಳಲ್ಲೂ ಬಹುಮಟ್ಟಿಗೆ ಪ್ರಧಾನ ಪಾತ್ರವನ್ನು ವಹಿಸುವವನು ಅಲ್ಲಮಪ್ರಭು. ‘ಎಲ್ಲಿಯೋ ಹುಟ್ಟಿ, ಕಾಡಿನಲ್ಲಿ ಕಣಿವೆಗಳಲ್ಲಿ ಮೊರೆದು, ಅನಂತರ ಬಯಲು ಪ್ರದೇಶದಲ್ಲಿ ಶಾಂತವಾಗಿ ಹರಿದು ಅನೇಕ ತೀರ್ಥಗಳನ್ನು ಕಲ್ಪಿಸಿ, ಜೀವಜಂತು ಗಳನ್ನು ಗದ್ದೆಗಳನ್ನು ತಣಿಸಿ, ಬಳಿಕ ಸಾಗರದಲ್ಲಿ ಲೀನಗೊಳ್ಳುವ ನದಿಯಂತೆ ಅಲ್ಲಮನ ಬಾಳು’. ಅನಿಮಿಷ ದೇವರೇ ತಮ್ಮ ಗುರುವೆಂದು ಧ್ಯಾನದೃಷ್ಟಿಯಿಂದ ತಿಳಿದು ಬರುತ್ತಿರುವಾಗ ದಾರಿಯಲ್ಲಿ ಸಿಕ್ಕಿದ ಕರ್ಮನಿಮಗ್ನನಾದ ತೋಟಿಗ ಗೊಗ್ಗಯ್ಯನಿಂದ ಹಿಡಿದು, ತನ್ನ ದೇಹವೇ ಪರಮಶ್ರೇಷ್ಠ, ಆ ದೈಹಿಕ ಪರಿಪೂರ್ಣತೆಯೇ ನಿಜವಾದ ಆಧ್ಯಾತ್ಮಿಕ ಪರಿಪೂರ್ಣತೆ ಎಂದು ಭಾವಿಸಿದ್ದ ಗೋರಕ್ಷಕನವರೆಗಿನ ಎಲ್ಲ ಶರಣರೂ ಪ್ರಭುವಿನ ಆಗಮನದಿಂದ ತಮ್ಮ ತಪ್ಪನ್ನು ಅರಿತು ತಿದ್ದಿಕೊಂಡು ಚರಮಗುರಿಯಾದ ಆತ್ಮಸಾಕ್ಷಾತ್ಕಾರದ ಗಿರಿಶಿಖರವನ್ನು ಮುಟ್ಟಿದರು. ಈ ರಸಪೂರ್ಣ ಸನ್ನಿವೇಶಗಳ ವೈಚಾರಿಕ ನೈಜಚಿತ್ರವೇ ಈ ಶೂನ್ಯ ಸಂಪಾದನೆ.

ಇಲ್ಲಿರುವ ಇಪ್ಪತ್ತೊಂದು ಸಂಪಾದನೆಗಳಲ್ಲಿ ಒಂದೊಂದೂ ಒಂದೊಂದು ತೆರ. ಪ್ರತಿಯೊಂದಕ್ಕೂ ತನ್ನದೆ ಆದ ವಿಚಾರ, ಸಮಸ್ಯೆ, ನಂಬಿಕೆ. ಅವುಗಳಿಗೆ ಸರ್ವಸಮಂಜಸ ಮುಕ್ತಾಯ ಪ್ರಭುದೇವನಿಂದ. ಶೂನ್ಯಸಂಪಾದನೆಯ ಪ್ರಾರಂಭದಿಂದಲೇ ಅವನ ಪ್ರಜ್ಞೆ ಶ್ರೀಮಂತಿಕೆಯ ದಿವ್ಯವಾಣಿ ಮೊಳಗುತ್ತದೆ :

ಕಲ್ಲೊಳಗಣ ಪಾವಕನಂತೆ, ಉದಕದೊಳಗಣ ಪ್ರತಿಬಿಂಬದಂತೆ,
ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಯಬ್ದದಂತೆ
ಗೊಹೇಶ್ವರಾ, ನಿಮ್ಮ ಶರಣ ಸಂಬಂಧ.

ಕಲ್ಲಿನಲ್ಲಿ ಅಗ್ನಿ ಅಡಗಿರುವಂತೆ, ಜಲದಲ್ಲಿ ಪ್ರತಿಬಿಂಬ ಮೂಡಿರುವಂತೆ, ಬೀಜದ ಅಂತರಂಗದಲ್ಲಿ ಹಿರಿವೃಕ್ಷ ಅಡಗಿರುವಂತೆ, ಶಬ್ದದಲ್ಲಿ ನಿಶ್ಯಬ್ದ ಗೂಡು ಕಟ್ಟಿರುವಂತೆ ಭಕ್ತ ಭಗವಂತನ ಸಂಬಂಧ ಗುಪ್ತವಾಗಿರುತ್ತದೆ. ಅದು ದೃಶ್ಯ ಗೋಚರವಲ್ಲ, ಅಂತರಂಗ ಗೋಚರ ಎಂಬ ಪಿಂಡಸ್ಥಲಕ್ಕೆ ಸೇರಿದ ವಚನದ ಈ ಉಪಮೆಗಳನ್ನು ಕಂಡಕೂಡಲೇ ಅವುಗಳ ಅಪಾರ ಅರ್ಥಸಂಚಯಕ್ಕೆ ಸಾಮಂಜಸ್ಯಕ್ಕೆ ಬೆರಗಾಗುತ್ತೇವೆ. ಅಲ್ಲಿಂದ ಗೊಗ್ಗಯ್ಯ ನನ್ನು ಸಂಧಿಸುತ್ತಾನೆ ಪ್ರಭುದೇವ. ಕೃಷಿಕಾಯಕವೇ ಪರಮ ಪರಿಪೂರ್ಣ ಕೈಲಾಸವೆಂದು ಭಾವಿಸಿ ಅದರಾಚೆಯ ಸತ್ಯವನ್ನರಿಯದಿದ್ದ ಅವನಿಗೆ ನಿಜವಾಗಿ ಮಾಡಬೇಕಾದ ತೋಟದ ಕೃಷಿಯನ್ನು ಈ ಸುಂದರ ವಚನದಲ್ಲಿ ವಿವರಿಸುತ್ತಾನೆ :

ತನುವ ತೋಟವ ಮಾಡಿ, ಮನವ ಗುದ್ದಲಿ ಮಾಡಿ, ಅಗೆದು
ಕಳೆದೆನಯ್ಯ ಭ್ರಾಂತಿನ ಬೇರ, ಒಡೆದು ಸಂಸಾರದ ಹೆಂಟೆಯ
ಬಗೆದು ಬಿತ್ತಿದೆನಯ್ಯ ಬ್ರಹ್ಮ ಬೀಜವ, ಅಖಂಡ ಮಂಡಲವೆಂಬ
ಬಾವಿ, ಪವನವೇ ರಾಟಾಳ, ಸುಷುಮ್ನಾ ನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು ಸಮತೆ ಸೈರಣೆಯೆಂಬ
ಬೇಲಿಯನಿಕ್ಕಿ, ಅವಾಗಳೂ ತೋಟದಲ್ಲಿ ಜಗರವಿದ್ದು
ಸಸಿಯ ಸಲಹಿದೆನು ಕಾಣಾ ಗೊಹೇಶ್ವರಾ.

ಗೊಗ್ಗಯ್ಯನ ತೋಟದ ಕಾಯಕವನ್ನೇ ಉಪಮೆಯಾಗಿ ಬಳಸಿಕೊಂಡು ಹೃದಯ ವ್ಯವಸಾಯವನ್ನು ಮಾಡಿ ಪಂಚೇಂದ್ರಿಯಗಳನ್ನು ಗೆದ್ದು ಬ್ರಹ್ಮ ಜ್ಞಾನದ ಸಸಿಯನ್ನು ಬೆಳೆಸುವ ಮಹಾಕೃಷಿಯನ್ನು ಮಾಡಬೇಕೆಂದು ಹೇಳುವ ಈ ವಚನ ಉಪಮೆಯ ಸೊಗಸಿನಿಂದ ಭಾವದ ಭಾರದಿಂದ ಕಂಗೊಳಿಸುತ್ತದೆ. ಇಲ್ಲಿಂದ ಮುಂದೆ ‘ಅರಸುವ ಬಳ್ಳಿ ಕಾಲ ಸುತ್ತಿತ್ತೆಂಬಂತೆ, ಬಯಸುವ ಬಯಕೆ ಕೈಸಾರುವಂತೆ’ ಗುರು ಅನಿಮಿಷ ದೇವರನ್ನು ದರ್ಶಿಸಿ ಆ ‘ಕಾಣಬಾರದ ಕಾಯ, ನೋಡಬಾರದ ತೇಜ, ಉಪಮಿಸಬಾರದ ನಿಲುವನ್ನು’ ಕೊಂಡಾಡಿ ಪುಳಕಿತಗಾತ್ರನಾಗುತ್ತಾನೆ. ‘ಸ್ಫಟಿಕದ ಘಟದಂತೆ ಒಳ ಹೊರಗಿಲ್ಲ’ದ ಆ ಗುರುಮೂರ್ತಿಯ ಮಹಿಮೆಗೆ ಬೆರಗಾಗುತ್ತಾನೆ. ‘ನೀನೆನಗೆ ಗುರುವಪ್ಪೊಡೆ, ನಾ ನಿನಗೆ ಶಿಷ್ಯನಪ್ಪೊಡೆ,…. ನೀನೆನ್ನ ಕಲಸ್ಥಲಕ್ಕೆ ಬಂದು ಕಾರುಣ್ಯವ ಮಾಡಾ ಗೊಹೇಶ್ವರಾ’ ಎಂದು ಮೊರೆಯಿಡುತ್ತಾನೆ. ‘ಜ್ಯೋತಿಯೊಳಗಿರ್ಪ ಕರ್ಪುರಕ್ಕೆ, ಅಪ್ಪುವಿನೊಳಿಪ್ಪ ಉಪ್ಪಿಂಗೆ, ಈ ಗುರುವಿನೊಳಿಪ್ಪ ಶಿಷ್ಯಂಗೆ’ ಭೇದವಿಲ್ಲವೆಂದು ಭಾವಿಸಿ ಅನಿಮಿಷ ದೇವರ ಶ್ರೀಪಾದಕ್ಕೆ ಶರಣೆಂದು ಆ ಕರಸ್ಥಲದ ಲಿಂಗವನ್ನು ತಾನೆ ಅವಗ್ರಹಿಸಿಕೊಂಡಾಗ ಗುರುನಿರ್ವಯಲನೈದುತ್ತಾನೆ. ಈ ಅಪೂರ್ವ ಘಟನೆಗೆ ಬೆರಗುಗೊಂಡ ಪ್ರಭುದೇವ ಗುರುವಿಯೋಗಕ್ಕಾಗಿ ಕ್ಷಣಕಾಲ ಪರಿಪತಪಿ ಸುತ್ತಾನೆ. ಆಗ ಅವನಿಗೆ ಸ್ಫುರಿಸುತ್ತದೆ, ಗುರು ಅಳಿದಿಲ್ಲ, ತನ್ನ ಕರಸ್ಥಲದಲ್ಲಿ ಮನಸ್ಥಲದಲ್ಲಿ ಐಕ್ಯಗೊಂಡಿದ್ದಾನೆ ಎಂಬ ನೈಜ ಸಂಗತಿ. ಹೀಗೆ ಗುರುಶಿಷ್ಯರಿಬ್ಬರೂ ಸಮರಸರಾಗುತ್ತಾರೆ. ಪ್ರಭು ತಾನೆ ಗುರುವಾಗುತ್ತಾನೆ. ತಾನು ಪಡೆದ ಗುರುಕರುಣದ ಬೆಳಕನ್ನು ಉಳಿದವರಿಗೂ ಹಂಚಲು ಸಂಚರಿಸುತ್ತಾನೆ. ಈ ಪ್ರಸಂಗ ತುಂಬ ದರ್ಶನಾತ್ಮಕವಾದುದಾಗಿದೆ. ಈ ಪ್ರಥಮೋಪದೇಶ ಗ್ರಂಥದ ಹೆಬ್ಬಾಗಿಲಾಗಿರುವಂತೆಯೇ ಇದರಲ್ಲಿ ಬರುವ ಶರಣರ ಅಂತರಂಗಕ್ಕೆ ತೆರೆದ ಅಧ್ಯಾತ್ಮದ ಬಾಗಿಲೂ ಆಗಿದೆ. ಪ್ರಭು ಇಲ್ಲಿ ಗುರುವನ್ನು ಕಂಡು ಬೆಳಕನ್ನು ಪಡೆದಂತೆ ಉಳಿದ ಶರಣರೂ ಪ್ರಭುವಿನ ರೂಪದಲ್ಲಿ ತಮ್ಮ ತಮ್ಮ ಗುರುವನ್ನು ಕಂಡು ಆತ್ಮಸಾಕ್ಷಾತ್ಕಾರದ ಕೀಲಿಕೈಯನ್ನು ಅವನಿಂದ ಪಡೆಯುತ್ತಾರೆ, ಆ ವಿಚಾರದ್ಯುತಿಯಿಂದ ತಾವೂ ದರ್ಶನದೀಪ್ತರಾಗುತ್ತಾರೆ. ಇಲ್ಲಿಂದ ಮುಂದೆ ನಡೆಯುತ್ತದೆ ಈ ಅಧ್ಯಾತ್ಮ ಮಹಾಸಾಗರ, ಕಂಡಕಂಡವರಿಗೆ ಬಯಸಿಬಂದವರಿಗೆ ಜೀವನದಾನ ಮಾಡಲು.

ಎರಡನೆಯ ಸಂಪಾದನೆ ಮಹಾಶರಣೆ ಮುಕ್ತಾಯಕ್ಕನಿಗೆ ಸಂಬಂಧಿಸಿದ್ದು. ಮಹಾಮತಿ ವಂತಳಾಗಿದ್ದೂ ಪ್ರೀತಿಯ ಸೋದರ ಗುರು ಅಜಗಣ್ಣನ ವಿಯೋಗದಿಂದ ಶೋಕ ಸಂತಪ್ತಳಾಗಿದ್ದು ಅಜ್ಞಾನಿಯಂತೆ ವರ್ತಿಸುತ್ತಿದ್ದ ಮುಕ್ತಾಯಕ್ಕನ ಬಳಿಗೆ ಬರುತ್ತಾನೆ ಪ್ರಭುದೇವ. ಈ ಪ್ರಸಂಗ ಅತ್ಯಂತ ವಿಚಾರಪ್ರದವೂ ಕುತೂಹಲಭರಿತವೂ ರೋಚಕವೂ ಆದದ್ದು. ‘ಅಂಗೈಯೊಳಗೊಂದು ಅರಳ್ದ ತಲೆಯ ಹಿಡಿದುಕೊಂಡು, ಕಂಗಳ ಮುತ್ತ ಪವಣಿಸುವಾಕೆ ನೀನಾ ಅಜಗಣ್ಣನ ಬೆನ್ನ ಬಳಿಯರು ಹೇಳಾ?’ ಎಂದು ಪ್ರಭು ಪ್ರಶ್ನಿಸುತ್ತಾನೆ. ತಾನವಳೆಂದು ಮುಕ್ತಾಯಕ್ಕ ಉತ್ತರಿಸುತ್ತಾಳೆ. ನಂತರ ಪ್ರಭು ಸಂತೈಸುತ್ತಾನೆ :

ಅಱತು ಮರಹುಗೆಟ್ಟು, ತನ್ನಲ್ಲಿ ತಾನು ಸನ್ನಿಹಿತನಾದಂಗೆ
ದುಃಖಿಸುವರೆ ಹೇಳು? ಶೋಕಿಸುವರೆ ಹೇಳು? ಒಡಲಿಲ್ಲದಾತಂಗೆ
ಎದೆಯಲೊಂದು ಅಳಿವುಂಟೆಂದು ನುಡಿದು ಹೇಳುವ ಮಾತು ಭ್ರಾಂತು
ನೋಡಾ! ಎರಡಿಲ್ಲದ ಐಕ್ಯಂಗೆ ಒಳಹೊರಗಿಲ್ಲ ನೋಡಾ,
ಗುಹೇಶ್ವರನ ಶರಣ ಅಜಗಣ್ಣಂಗೆ.

ಆದರೂ ‘ಎಂತು ಮರೆವೆನಯ್ಯ ಎನ್ನ ಅಜಗಣ್ಣ ತಂದೆಯನು?’ ಎಂದು ಮುಕ್ತಾಯಕ್ಕ ಪ್ರಲಾಪಿಸಿದಾಗ, ಕಂಡೆ ಕಾಣೆ ಕೂಡಿದೆ ಎಂಬುವುಗಳೆಲ್ಲ ಕಣ್ಣಿನ ಮನದ ಅರಿವಿನ ಮರವಿನ ಮರವುಗಳು. ಈ ಭ್ರಾಂತಿಯನ್ನು ಬಿಡಬೇಕೆನ್ನುತ್ತಾನೆ ಪ್ರಭು. ಅಗ್ನಿಕರಗಿ ಕರ್ಪೂರ ಉಳಿದಂತೆ ದೇಹವಿದ್ದೂ ದೇಹವಿಲ್ಲದಂತಾದ ಸೋಜಿಗವನ್ನು ಮುಕ್ತಾಯಕ್ಕ ಹೇಳಿದಾಗ ‘ಅಳಿದವನೂ ಅಲ್ಲ, ಉಳಿದವನೂ ಅಲ್ಲ, ನಿನ್ನಲ್ಲೇ ನೀನು ತಿಳಿದು ನೋಡು’ ಎಂದ ಪ್ರಭು. ಹೀಗೆಯೇ ಚರ್ಚೆ ಜೀವಂತವಾಗಿ ಸಾಗುತ್ತದೆ. ಗುರುಶಿಷ್ಯನಿಗೆ ಯಾವುದೂ ದೂರವಿಲ್ಲ. ‘ಗುರುವೆ ಶಿಷ್ಯನಾದ ತನ್ನ ವಿನೋದಕ್ಕೆ; ಶಿಷ್ಯನೆ ಗುರುವಾದ ತನ್ನ ವಿನೋದಕ್ಕೆ’. ಒಂದು ಸ್ಥಿತಿಯವರೆಗೆ ಮಾತ್ರ ಗುರು. ಆ ಹಂತ ಮೀರಿದ ನಂತರ ಗುರುವು ತಾನೇ ಆಗುತ್ತಾನೆ ಎಂಬುದು ಪ್ರಭುವಿನ ನಿಲವು. ‘ಈ ಅದ್ವೈತ ಶಿಶುಕಂಡ ಕನಸಿನಂತೆ. ಇದನ್ನು ನುಡಿದು ಹೇಳಲು ಸಾಧ್ಯವೇ’ ಎಂದರೆ ‘ಶಿವಶರಣರು ಶಬ್ದ ಸೂತಕಿಗಳಲ್ಲ’ ಎಂಬುದು ಪ್ರಭುವಿನ ಉತ್ತರ. ಈಗ ಬಹುಶಃ ಪ್ರಭುವಿನ ಜೀವಮಾನದಲ್ಲೇ ಯಾರೂ ಆಡದಿದ್ದ ಮಾತನ್ನು ಖಂಡತುಂಡ ವಾಗಿ ನಿರ್ದಾಕ್ಷಿಣ್ಯವಾಗಿ ಹೇಳುತ್ತಾಳೆ ಮುಕ್ತಾಯಕ್ಕ:

ನುಡಿಯ ಹಂಗಿನ್ನೂ ನಿಮಗೆ ಹಿಂಗದು. ನಡೆಯನೆಂತು ಪರರಿಗೆ
ಹೇಳುವಿರಿ? ಒಡಲ ಹಂಗಿನ ಸುಳುವು ಬಿಡದು; ಎನ್ನೊಡನೆ
ಮತ್ತೇತರನುಭವವಣ್ಣ? ತಾನಾದಲ್ಲದೆ ಇದಿರಿಂಗೆ ಹೇಳಬಹುದೆ?
ಅರಿವ ತೋರಬಲ್ಲಡೆ ತನ್ನನರುಹದೆ ಅರಿವನು ಕಾಣಾ ಎನ್ನ
ಅಜಗಣ್ಣ ತಂದೆ

ಪ್ರಭು ಶಾಂತವಾಗಿ ಉತ್ತರಿಸುತ್ತಾನೆ: ಶರಣ ನಡೆದರೆ ನಿರ್ಗಮನಿ, ನುಡಿದರೆ ನಿಶ್ಯಬ್ದಿ. ಇಷ್ಟಾದರೂ ಆಕೆಗೆ ಅಜಗಣ್ಣನ ಮೋಹ ಬಿಟ್ಟಿಲ್ಲ. ‘ನಾನೆ ನಾನಾದೆನೆಂಬಲ್ಲಿ ನೀನೆಂಬುದಿದೆ. ಅರಿದು ಮರೆದ ಪರಿ ಎಂತು ಹೇಳಾ’ ಎಂದು ಪ್ರಶ್ನಿಸುತ್ತಾಳೆ. ‘ತನ್ನಲ್ಲಿ ತಾನು ತದ್‌ಗತವಾಗಿಪ್ಪ ಶಿವಯೋಗಿಗೆ ಭಿನ್ನವಿಲ್ಲ ನೋಡಾ, ಗುಹೇಶ್ವರ ಸಾಕ್ಷಿಯಾಗಿ’ ಎಂದು ಸಮಾಧಾನ ಹೇಳಿದಾಗ ಮುಕ್ತಾಯಕ್ಕನಿಗೆ ನಿಜ ಅರಿವಾಗುತ್ತದೆ. ಆಗ

ಅಹುದಹುದು ಶಿವಶರಣರ ಮಹಿಮೆ ಆರಿಗೆಯೂ ಕಾಣಬಾರದು
ಕಬ್ಬುನ ಉಂಡ ನೀರಿನಂತೆ, ಕಬ್ಬಿಸಿಲುಂಡ ಅರಿಸಿನದಂತೆ,
ಉರಿಯೊಳಡಗಿದ ಕರ್ಪುರದಂತೆ, ಬಯಲನಪ್ಪಿದ ವಾಯುವಿನಂತೆ
ಇಪ್ಪ ನಿಲವ ನುಡಿದು ಹೇಳಿಹೆನೆಂಬ ಮಾತಿಂಗೆ ಅಳವಡುವುದೆ?
ಅರಿವಡೆ ಮಡಿಯಿಲ್ಲ, ನೆನೆದರೆ ಮನವಿಲ್ಲ ಎನ್ನ ಅಜಗಣ್ಣ ತಂದೆಯ
ನೊಳಕೊಂಡಿಪ್ಪ ನಿಮ್ಮ ಮಹಿಮೆಗೆ ನಮೋ ನಮೋ ಎನುತಿರ್ದೆನು

ಪ್ರಭುವಿನ ನಿಲವನ್ನೊಪ್ಪಿ ತನ್ನ ಸಂಶಯವನ್ನು ದೂರಮಾಡಿಕೊಂಡು ಸಂತಾಪ ನೀಗಿ ಕೊಂಡು ಶರಣೆನ್ನುತ್ತಾಳೆ. ನಂತರ ಅವನ ಉಪದೇಶವನ್ನು ಹೊಂದಿ ಉರಿಯುಂಡ ಕರ್ಪುರ ವಾಗುತ್ತಾಳೆ. ಈ ಪ್ರಸಂಗ ತುಂಬ ಕಲಾತ್ಮಕವಾಗಿ ಮೂಡಿದೆ. ಕ್ಷಣಕ್ಷಣಕ್ಕೆ ಉತ್ತರ ಪ್ರತ್ಯುತ್ತರಗಳ ಮಿಂಚು ಸುಳಿಯುತ್ತದೆ, ವಿಚಾರ ನಿಚ್ಚಳವಾಗುತ್ತದೆ. ಗುರುಶಿಷ್ಯ ಸಂಬಂಧದ ಗಹನತೆಯನ್ನು ಸೂಕ್ಷ್ಮತೆಯನ್ನು ಇಲ್ಲಿ ಹಂತಹಂತವಾಗಿ ಬಿಡಿಸಿತೋರಿಸಲಾಗಿದೆ. ಅಂತಹ ವಿಚಾರಾತ್ಮಕ ವಚನಗಳನ್ನು ಇಲ್ಲಿ ಅಳವಡಿಸಿದ ಸಂಪಾದನೆಕಾರನ ದೃಷ್ಟಿ ದೊಡ್ಡದು. ಪ್ರಭುವನ್ನೇ ಎದುರಿಸಿ ನಿಂತು ಅಧ್ಯಾತ್ಮದ ಹಲವು ಸ್ತರಗಳನ್ನು ಬಿಡಿಸಿ ತೋರಿಸುವಂತೆ ಮಾಡಿದ ಧೀರ ಧೀಮಂತ ಶರಣೆ ಮುಕ್ತಾಯಕ್ಕ. ಈ ಸನ್ನಿವೇಶದ ಅವರ ವಚನಗಳೂ ಅಷ್ಟೇ ಸುಂದರ ಸಾಹಿತ್ಯಾತ್ಮಕವಾಗಿ ಪ್ರಭಾವಯುತವಾಗಿವೆ.

ಅಕ್ಕಮಹಾದೇವಿ

ಮಹಾದೇವಿಯಕ್ಕ ಅನುಭಾವ ಜಗತ್ತಿನಲ್ಲಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಮರೆಯಲಾಗದ ಮಹಾಚೇತನ; ಮಹಿಳಾ ಕುಲಕ್ಕೆ ಒಂದು ಆದರ್ಶ ರತ್ನ. ಸಮಾಜದ ತೊಡಕುಗಳನ್ನು ಮುರಿದು, ವಿವಾಹ ಪ್ರಸಂಗದ ಬಂಧನವನ್ನು ಹರಿದೊಗೆದು ಚೆನ್ನಮಲ್ಲಿಕಾರ್ಜುನನೊಬ್ಬನೇ ತನ್ನ ಪತಿ, ಅವನೇ ಪರಮಗತಿ ಎಂದು ಹೊರಟ ವೀರವಿರಕ್ತೆ ಅಕ್ಕನ ಕಲ್ಯಾಣದ ಭೇಟಿಯ ಸಂದರ್ಭ ಈ ಕೃತಿಯಲ್ಲಿ ತುಂಬ ಸೊಗಸಾಗಿ ಮೂಡಿನಿಂತಿದೆ. ಹರಯದ ಹೆಣ್ಣಾಗಿ ಕೇಶಾಂಬರಧಾರಿಣಿಯಾಗಿ ಕಲ್ಯಾಣಕ್ಕೆ ಕಾಲಿಟ್ಟ ಗಳಿಗೆಯಿಂದ ಹೆಜ್ಜೆ ಹೆಜ್ಜೆಗೆ ಅಗ್ನಿಪರೀಕ್ಷೆಗೊಳಗಾಗಬೇಕಾಯಿತು. ಪ್ರಥಮತಃ ಕಿನ್ನರಿ ಬೊಮ್ಮಯ್ಯನ ಪರೀಕ್ಷೆ, ‘ಕಾಯದಲ್ಲಿ ಕಳವಳ, ಪ್ರಾಣದಲ್ಲಿ ಮಾಯೆಯಿರುವಾಗ, ಏತರಮನ? ಇದೇತರ ನಿರ್ವಾಣ?’ ಎಂದು ಆತ ಕೇಳಿದಾಗ ಅಕ್ಕ ಕೊಡುವ ಉತ್ತರ ಅತ್ಯಂತ ಮನೋಜ್ಞವಾಗಿದೆ :

ಅಂಗ ಭಂಗವ ಲಿಂಗ ಸುಖದಿಂದ ಗೆಲಿದೆ
ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ. ಜೀವದ
ಭಂಗವ ಶಿವಾನುಭಾವದಿಂದ ಗೆಲಿದೆ. ಕರಣದ ಕತ್ತಲೆಯ ಬೆಳಗ
ನುಟ್ಟು ಗೆಲಿದೆ. ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ
ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯ ಚೆನ್ನಮಲ್ಲಿಕಾರ್ಜುನ
ಕಾಮನ ಕೊಂದು ಮನಸಿಜನಾಗುಳುಹಿದರೆ ಮನಸಿಜನ ತಲೆಯ
ಬರಹವ ತೊಡೆದೆನು.

ಅಕ್ಕನ ಬಗ್ಗೆ ಹೇಳಬಹುದಾದ ಎಲ್ಲ ಪ್ರಶ್ನೆಗಳಿಗೂ ಉತ್ತರ ರೂಪದಂತಿದೆ ಈ ವಚನ.  ಈಶ್ವರ ಕಾಮನನ್ನು ಕೊಂದರೂ ಮನಸಿಜನನ್ನಾಗಿ ಮಾಡಿದ. ಆದರೆ ಅಕ್ಕ ಆತನನ್ನು ಮನಸಿನಿಂದಲೂ ತೊಡೆದು ಅವನ ಹಣೆಯ ಬರಹವನ್ನು ಅಳಿಸಿದಳು. ಅವಳು ಏರಿನಿಂತ ವೈರಾಗ್ಯದ ಎತ್ತರವನ್ನು ತೋರಿಸುತ್ತದೆ ಈ ವಚನ.

ಇಲ್ಲಿಂದ ಮುಂದೆ ಬಸಣ್ಣನವರ ಮಹಾಮನೆಗೆ ಬಂದು ‘ನಿಮ್ಮ ಶರಣ ಸಂಗನ ಬಸವಣ್ಣನ ಶ್ರೀಪಾದವ ಕಂಡೆ, ಮಿಗೆ ಮಿಗೆ ನಮೋ ಎನುತಿರ್ದೆನು’ ಎಂದು ನಮಸ್ಕರಿಸಿದಾಗ ಸಹಜವಿನೀತನೂ ಶರಣಪ್ರಾಣನೂ ಗುಣ್ಯೆಕಗ್ರಾಹಿಯೂ ಆದ ಬಸವಣ್ಣ ಬಿನ್ನವಿಸುತ್ತಾನೆ ಪ್ರಭುವಿಗೆ :

ಕಾಯದ ಲಜ್ಜೆಯ ಕಲ್ಪಿತವ ಕಳೆದು, ಜೀವದ ಲಜ್ಜೆಯ ಮೋಹವನಳಿದು, ಮನದ ಲಜ್ಜೆಯ ನೆನಹ ಸುಟ್ಟು, ಭಾವ ಕೂಟ ಬತ್ತಲೆಯೆಂದರಿದು, ತವಕದ ಸ್ನೇಹ ವ್ಯವಹಾರಕ್ಕೆ ತಗದು ಕೂಡಲ ಸಂಗಮದೇವಯ್ಯ, ಎನ್ನ ಹೆತ್ತತಾಯಿ ಮಹಾದೇವಿಯಕ್ಕನ ನಿಲವ ನೋಡಯ್ಯ ಪ್ರಭುವೆ.

ಅಕ್ಕಮಹಾದೇವಿಯ ಅಂತರಂಗ ಎಷ್ಟು ಸ್ಪಷ್ಟವಾಗಿ ಬಸವಣ್ಣನಿಗೆ ತಿಳಿದಿತ್ತೆಂಬುದಕ್ಕೆ ಇದು ಸಾಕ್ಷಿಯಾಗಿದೆ ಮಾತ್ರವಲ್ಲದೆ, ಆ ಮಂಟಪದಲ್ಲಿದ್ದ ಇತರರಿಗೂ ಅದರ ದರ್ಶನ ಮಾಡಿಸುತ್ತದೆ. ಆದರೆ ಪ್ರಭುದೇವ ಒರೆಹಚ್ಚದೆ ಪ್ರಾಮಾಣಿಕವಾಗಿ ಪರೀಕ್ಷಿಸದೆ ಯಾರನ್ನೂ ಸುಲಭವಾಗಿ ಒಪ್ಪುವ ಜಯಮಾನದವನಲ್ಲ. ಬೆದಕದೆ ವಿಚಾರ ಮಾಡದೆ ಸತ್ಯವನ್ನು ಮುಚ್ಚಿಡುವುದರಿಂದ ಪ್ರಯೋಜನವಿಲ್ಲ. ಆದುದರಿಂದ ಆತ ಜನದ ಮನಸ್ಸಿನ ಪ್ರಶ್ನೆಗೆ ಬಾಯಿಗೊಡುತ್ತಾನೆ :

‘ನಿನ್ನ ಪತಿಯ ಕುರುಹ ಹೇಳಿದರೆ ಬಂದು ಕುಳ್ಳಿರು. ಅಲ್ಲದಿರೆ ತೊಲಗು ತಾಯೆ’.

ಮಹಾದೇವಿ ಇದನ್ನು ನಿರೀಕ್ಷಿಸಿದ್ದಳೆಂದು ತೋರುತ್ತದೆ. ಆಕೆ ಅಂಜದೆ ಅಳುಕದೆ ಉತ್ತರಿಸುತ್ತಾಳೆ :

ಹರನೆ ನೀನೆನಗೆ ಗಂಡನಾಗಬೇಕೆಂದು ಅನಂತಕಾಲ ತಪಸಿದ್ದೆ ನೋಡ.
ಹಸೆಯ ಮೇಲಣ ಮಾತ ಬೆಸಗೊಳ್ಳಲಟ್ಟಿದರೆ,
ಶಶಿಧರನ ಹತ್ತಿರ ಕಳುಹಿದರೆಮ್ಮವರು ಭಸ್ಮವನೆ ಹೂಸಿ,
ಕಂಕಣವನೆ ಕಟ್ಟಿ, ಚೆನ್ನಮಲ್ಲಿಕಾರ್ಜುನ ತನಗೆ ನಾನಾಗಬೇಕೆಂದು
ಇದು ಕಾರಣ ಚೆನ್ನಮಲ್ಲಿಕಾರ್ಜುನ ಗಂಡನೆನಗೆ
ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧವಿಲ್ಲವಯ್ಯಾ ಪ್ರಭುವೆ’.

ಆದರೆ ಇಷ್ಟಕ್ಕೇ ಸುಮ್ಮನಾಗಲಿಲ್ಲ ಪ್ರಭು. ಅವಳ ಕೇಶಾಂಬರವನ್ನು ಕುರಿತು, ಕೇಶ ಮರೆಯಾದರೆ ಅಭಿಮಾನ ಮರೆಯಾಗದು; ಅಪಮಾನ ಹೇಗೆ ಹರಿಯಲು ಸಾಧ್ಯ? ಶಾರೀರಕ ಮೋಹವನ್ನು ನಿಶ್ಯೇಷ ಮಾಡಿದ ತನ್ನ ನಿಲುವನ್ನು ಆಕೆ ಹೇಳುತ್ತಾಳೆ.

ಕಾಯ ಕರ್ರನೆ ಕಂದಿದಡೇನಯ್ಯಾ? ಕಾಯ ಮಿರ್ರನೆ ಮಿಂಚಿದ
ಡೇನಯ್ಯ? ಅಂತರಂಗ ಶುದ್ಧವಾದ ಬಳಿಕ, ಚೆನ್ನಮಲ್ಲಿಕಾರ್ಜುನ.

ಇದರಲ್ಲಿ ಆಕೆಯ ಸರಳ ನಿಗರ್ವಿವ್ಯಕ್ತಿತ್ವದ ಸರ್ವಸಮರ್ಪಣ ಭಾವ ಸುವ್ಯಕ್ತವಾಗುತ್ತದೆ. ಕೊನೆಗೆ ತನ್ನ ಲಿಂಗೈಕ್ಯದ ಸ್ಥಾನ, ಕಾಲ, ಸ್ಥಿತಿಗಳನ್ನು ಬೆಸಗೊಂಡಾಗ ಪ್ರಭು ಕದಳಿವನವನ್ನು ನಿರ್ದೇಶಿಸುತ್ತಾನೆ. ಅಕ್ಕ ಕಲ್ಯಾಣವನ್ನು ಬೀಳ್ಕೊಂಡು ಹೊರಡುವ ಸನ್ನಿವೇಶ ತುಂಬ ಹೃದ್ಯವಾಗಿದೆ. ಮದುವೆಯಾದ ಮಗಳು ತೌರೂರನ್ನು ಬೀಳ್ಕೊಂಡು ಪತಿಗೃಹದೆಡೆಗೆ ಸಜಲ ನಯನಳಾಗಿ ತೆರಳುವ ಸಂದರ್ಭವನ್ನು ನೆನಪಿಗೆ ತರುತ್ತದೆ. ಅಂತಹ ಮನನೀಯವಾದ ಮಧುರವಚನಗಳನ್ನು ಈ ಪ್ರಸಂಗದಲ್ಲಿ ಶೂನ್ಯಸಂಪಾದನಕಾರರು ಕಲೆ ಹಾಕಿದ್ದಾರೆ :

ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ, ಬೆಳೆದೆನು ಅಸಂಖ್ಯಾತರ ಕರುಣದೊಳಗೆ. ಭಾವವೆಂಬ ಹಾಲು, ಸಜ್ಜನವೆಂಬ ತುಪ್ಪ, ಪರಮಾರ್ಥವೆಂಬ ಸಕ್ಕರೆಯ ಸಿಕ್ಕಿದರು ನೋಡಾ! ಇಂತಪ್ಪ ತ್ರಿವಿಧಾಮೃತವನ್ನು ತಣಿಯಲೆರೆದು ಸಲಹಿದರೆನ್ನ. ವಿವಾಹ ಮಾಡಿದಿರಿ. ರಯವಪ್ಪ ಗಂಡಗೆ ಕೊಟ್ಟಿರಿ. ಕೊಟ್ಟು ಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ. ಬಸವಣ್ಣ ಮೆಚ್ಚಲೊಗೆತನವ ಮಾಡುವೆ. ಚೆನ್ನಮಲ್ಲಿಕಾರ್ಜುನನ ಕೈವಿಡಿದು ನಿಮ್ಮ ತಲೆಗೆ ಹೂವ ತಹೆನಲ್ಲದೆ ಹುಲ್ಲು ತಾರೆನವಧರಿಸಿ ನಿಮ್ಮಡಿಗಳೆಲ್ಲರೂ ಮರಳಿ ಬಿಜಯಂಗೈವುದು. ಶರಣು ಶರಣಾರ್ಥಿ.

ಶರಣರೆಲ್ಲರೂ ಸಾಲಾಗಿ ನೆರೆದು ಕಂಗಳಲ್ಲಿ ನೀರು ತುಂಬಿ ಮನಾಶೀರ್ವಾದದಿಂದ ಬೀಳ್ಕೊಡುವ, ಅಕ್ಕ ಹಿಂದೆ ಹಿಂದೆ ನೋಡುತ್ತಾ ಅವರನ್ನು ಅಗಲಲಾರದೆ ಅಗಲುತ್ತಾ ಕೊನೆಯ ಬಾರಿಗೆ ಅವರಿಗೆ ಮತ್ತು ಲೋಕಕ್ಕೆ ಶರಣು ಹೇಳುವ ಈ ದೃಶ್ಯ ಕಣ್ಣಿಗೆ ಕಟ್ಟಿದಂತೆ ಹೃದಯದಲ್ಲಿ ಕೊರೆದಂತೆ ತುಂಬ ಪ್ರಭಾವಕಾರಿಯಾಗಿ ಚಿತ್ರಿತವಾಗಿದೆ.