ಸಿದ್ಧರಾಮ

ಲೋಕಹಿತಕ್ಕಾಗಿ ಸ್ವಾರ್ಥರಹಿತನಾಗಿ ಕರ್ಮವೇ ಕೈಲಾಸವೆಂದು ದುಡಿಯುತ್ತಿದ್ದ ಕರ್ಮ ಯೋಗಿ ಸಿದ್ಧರಾಮ. ಅವನ ಭೂತದಯೆ ಸಾಕಾರನಿಷ್ಠೆ ತುಂಬ ಪ್ರಸಿದ್ಧವಾದದ್ದು. “ಸಾಕಾರನಿಷ್ಠೆ ಭೂತಂಗಳೊಳನುಕಂಪೆ” ಎಂಬುದಾಗಿ ಅವನ ಜೀವನದ ಪ್ರಮುಖ ಧ್ಯೇಯ ವನ್ನು ನಿರೂಪಿಸುತ್ತಾನೆ, ರಾಘವಾಂಕ. ಈ ಜೀವಕಾರುಣ್ಯ ಆತ್ಮಸಾಕ್ಷಾತ್ಕಾರ ಪಥದ ಒಂದು ಮೆಟ್ಟಿಲೇ ಹೊರತು, ಅದೇ ಪರಮಸಿದ್ದಿಯಲ್ಲ. ಆದರೆ ಆ ಮೆಟ್ಟಿಲಲ್ಲೇ ನಿಂತು ಮುನ್ನಡೆಯದೆ ಇದ್ದ ಅವನಿಗೆ ಮಾರ್ಗದರ್ಶನ ಮಾಡಲು ಪ್ರಭುದೇವ ಬೆಳಕಿನ ಗಾಳಿಯಾಗಿ ಬೀಸಿ ಬರುತ್ತಾನೆ. ‘ಕೆರೆಯ ಕಟ್ಟಿಸುವ ಒಡ್ಡನ ಪ್ರತಾಪವೇನೆಂಬೆನಯ್ಯಾ’ ಎಂದು ವಿಡಂಬಿ ಸುತ್ತಾನೆ. ತಾನು ಕಟ್ಟಿದ ಪರಮಾನಂದ ಜಲಭರಿತ ಕೆರೆಯನ್ನು ವಿವರಿಸುತ್ತಾನೆ.

ತನುವೆಂಬ ಏರಿಗೆ ಮನವೆಂಬ ಕಟ್ಟೆ; ಆಚಾರವೆಂಬ ಸೋಪಾನ;
ಪರಮಾನಂದವೆಂಬ ಜಲವತುಂಬಿ ಕೆರೆಯ ಕಟ್ಟಬಲ್ಲವರಾರನೂ
ನಾಕಾಣೆ. ನಾನು ಕಟ್ಟಿದರೆ ಕೆರೆ ಸ್ಥಿರವಾಯಿತ್ತು ಗೊಹೇಶ್ವರಾ,
ನಿಮ್ಮಾಣೆ

ತಮ್ಮ ಗುರುವನ್ನು ಬೇಕೆಂದೇ ಒಡ್ಡರಾಮನೆಂದು ಕರೆದ ಪ್ರಭುವಿನ ಮೇಲೆ ಶಿಷ್ಯರು ಕೋಪಿಸಿಕೊಳ್ಳುತ್ತಾರೆ. ಆ ಕೋಪ ಸಾಗದಿರಲು ಗುರುವನ್ನು ಕರೆತರುತ್ತಾರೆ. ಬಂದವರು ಯಾರೆಂದರಿಯದೆ ಕೋಪದ ಕಿಡಿಗಾರುತ್ತಾನೆ ಸಿದ್ಧರಾಮ. (ಇದನ್ನೇ ನೊಸಲಕಣ್ಣನ್ನು ತೆರೆದನೆಂದು ಸಾಂಕೇತಿಕವಾಗಿ ಚಿತ್ರಿಸುತ್ತದೆ ಶೂನ್ಯ ಸಂಪಾದನೆ) ಆದರೆ ಆ ಕೋಪ ಪ್ರಭುವಿನ ಮುಂದೆ ನಿಷ್ಪರಿಣಾಮಕಾರಿಯಾದಾಗ ಬೆರಗುಗೊಂಡು ಅವನನ್ನರಸಿ ಬರುತ್ತಾನೆ; ಕೋಪ ಪಶ್ಚಾತ್ತಾಪವಾಗಿ, ಹೆಮ್ಮೆ ದೈನ್ಯವಾಗಿ ಪರಿಣಮಿಸುತ್ತದೆ. ಪ್ರಭುವಿನ ಶ್ರೀ ಮೂರ್ತಿಯನ್ನು ಕಂಡ ತತ್‌ಕ್ಷಣ ಪರಮ ಹರುಷದಲ್ಲಿ ಓಲಾಡುತ್ತಾನೆ.

ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತೆ, ಎಲೆ ಅಯ್ಯ! ನಿಮ್ಮ ಕಂಡು ಕಂಗಳು ಕಡೆಗೋಡಿವರಿದವಯ್ಯಾ; ಎನ್ನ ಮನಕ್ಕೆ ಮನವೇದ್ಯವಾದರೆ ಕೈ ಮರೆದೆನೆಲೆ ಹಾ! ಅಯ್ಯೋ ಕಪಿಲ ಸಿದ್ಧ ಮಲ್ಲಿನಾಥನ ಕಂಡ ಸುಖವು ಆರಿಗೆಯೂ ಇಲ್ಲ ಎಂದು ನಮಸ್ಕರಿ ಸುತ್ತಾನೆ, ಮನ್ನಿಸೆಂದು ಪರಿ ಪರಿಯಾಗಿ ಹಲುಬಿ ಹಂಬಲಿಸುತ್ತಾನೆ. ಆದರೆ ಅವನ ಅಹಂಕಾರವನ್ನು ಪೂರ್ಣನಿರಸನ ಮಾಡಿ ಒಳಗಿನ ಜ್ಯೋತಿಯನ್ನು ಉದ್ಭೋಧಗೊಳಿಸ ಬೇಕಾದ್ದರಿಂದ, ಅವನ ಸ್ತೋತ್ರಕ್ಕೆ ಓಗೊಡದೆ ‘ಗೊಹೇಶ್ವರನ ನಿಲುವು ಬರಿಯ ಸ್ತೋತ್ರಕ್ಕೆ ಸಿಕ್ಕದು ಕಾಣಾ ಸಿದ್ಧರಾಮಯ್ಯ’ ಎಂದು ಜರೆಯುತ್ತಾನೆ.

‘ನುಡಿಯಲ್ಲಿ ಭಕ್ತಿಯನಾಡಿ ನಡೆಯಿಲ್ಲದಿದ್ದರೆ ಕಡೆಮುಟ್ಟ, ಶಿವನೊಲಿವುದು ಹುಸಿ’ ಎಂದು ನಿಷ್ಠುರವಾಗಿ ನುಡಿಯುತ್ತಾನೆ.

ಭಕ್ತನಿದ್ದ ಠಾವಿಂಗೆ ಕರ್ತ ಬಂದರೆ ಅತ್ತಿತ್ತ ಹರಿಯದೆ ನಂಬಬೇಕು ನೋಡಾ! ಕರ್ತನ ಕಂಡು ಭೃತ್ಯನುರಿಯನುಗುಳಿದರೆ, ಬಳಿಕಲೀಕರ್ತುತನ ಭೃತ್ಯಭಾವಕ್ಕೆ ಸಂಬಂಧವೇನು? ತಪ್ಪಿ ತಪ್ಪಿ ತಿದ್ದಿಕೊಂಡಿಹೆನೆಂದರೆ ಹಸನಾಗಬಲ್ಲುದೇ? ಗೊಹೇಶ್ವರಲಿಂಗದ ಶರಣಾನಾ ರೆಂಬುದನೀನೆತ್ತಬಲ್ಲೆ

ಹೋಗಾ ಮರುಳು ಸಿದ್ಧರಾಮಾ – ಎಂದು ಮತ್ತೆ ಮತ್ತೆ ಕಟಕಿಯಾಡಿದಾಗ

ಸಿದ್ಧರಾಮನ ಅಂತರಂಗ ನೊಂದು ಅವನ ಸಹಜ ವಿನಯದ ಕೋಡಿ ಹರಿಯುತ್ತದೆ:

ಎನ್ನ ಭರಭಾರ ನಿಮ್ಮದಯ್ಯಾ! ಎನ್ನ ಹಾನಿವೃದ್ದಿ ನಿಮ್ಮದಯ್ಯ:
ಎನ್ನ ಕರಕರ ಕಾಡದಿರು ತಂದೆ! ನಿನ್ನ ಕಾಟವೆನ್ನ ಪ್ರಾಣದೋಟ
ಕಪಿಲಸಿದ್ಧ ಮಲ್ಲಿನಾಥಾ ಕೊಲ್ಲುಕಾಯಿ, ನಿಮ್ಮ ಧರ್ಮದವ ನಾನು.

– ಎಂದು ಕಲ್ಲೂ ಕರಗುವಂತೆ ಸಿದ್ಧರಾಮ ಮೊರೆಯಿಡುತ್ತಾನೆ. ಆಗ ಪ್ರಭುವಿನ ಹುಸಿಮುನಿಸು ಹಾರುತ್ತದೆ, ನಸುನಗು ಮೂಡುತ್ತದೆ. ಅವನನ್ನು ಸಾಂತ್ವನದ ನುಡಿಗಳಿಂದ ಸಮಾಧಾನಗೊಳಿಸಿ ಮುಖ್ಯ ವಿಷಯಕ್ಕೆ ಬರುತ್ತಾನೆ. ಕಾಯವೇ ಲಿಂಗ, ಪ್ರಾಣವೇ ಶರಣನಾದ ಶರಣನಿಗೆ ಬೇರೆ ದೇವಾಲಯವನ್ನು ಮಾಡಿಸಬೇಕು ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ‘ಅಣುವಿನಲ್ಲಿ ಅಣುವಾಗಿ ಮನದೊಳಗೆ ಘನವಾಗಿ ಜಗದೊಳಗೆಲ್ಲಿಯೂ ನೀವೇ ಇರುವುದ ರಿಂದ ನಾನು ಮಾಡಿದೆನಷ್ಟೆ, ನನಗೆ ಬೇರೆ ಸ್ವತಂತ್ರವಿಲ್ಲ’ ಎಂದು ಸಹಜವಾಗಿಯೇ ಸಿದ್ಧರಾಮ ಉತ್ತರಿಸುತ್ತಾನೆ. ಕೆರೆ ದೇಗುಲಗಳೆಲ್ಲವೂ ಹಿಂದಣ ಅಡಿವಜ್ಜೆಗೆ ರೂಪಷ್ಟೇ. ಆದುದರಿಂದ ಹಿಂದಿನ ಮುಂದಿನ ಸಂದನ್ನಳಿದು ಗೊಹೇಶ್ವರ ಲಿಂಗದಲ್ಲಿ ಸಂದರಿಬೇಕು ಎಂದಾಗ ಸಿದ್ಧರಾಮನ ಹೃದಯದಲ್ಲಿ ಸಂಶಯದ ತರಂಗವೇಳುತ್ತದೆ: ಕೃಷಿಯ ಮಾಡಿ ಉಣ್ಣದೆ ಹಸಿವು ಹರಿವ ಪರಿ ಇನ್ನೆಂತು? ಕರ್ಮಯೋಗವ ಮಾಡದೆ ನಿರ್ಮಲ ಸುಚಿತ್ತವನರಿವ ಪರಿ ಇನ್ನೆಂತು? – ಎಂದು ಪ್ರಶ್ನಿಸಿದಾಗ, ಪ್ರಭುದೇವ ಬಹು ಸಮರ್ಪಕವಾದ ಪರಿಣಾಮಕಾರಿಯಾದ ಉತ್ತರವನ್ನು ಕೊಡುತ್ತಾನೆ. ಸಾಯುವವರೆಗೂ ಸಾಧನೆಯನ್ನೇ ಮಾಡುತ್ತಾ ಕುಳಿತರೆ ಕೂಡು ವುದು ಯಾವಾಗ? ಸಾಧನೆ ಒಂದು ಹಂತದವರೆಗೆ ಬೇಕು, ಅನಂತರ ಅದರ ಪ್ರಯೋಗ ಮಾಡಬೇಕು, ಫಲ ಕಾಣಬೇಕು. ಹಾಗೆಯೇ ಕೆರೆಕಟ್ಟೆಗಳ ನಿರ್ಮಾಣ, ಜೀವಕಾರುಣ್ಯ ಎಲ್ಲವೂ ಸಾಧಕನಿಗೆ ಬೇಕು. ಆದರೆ ಅದೇ ಸ್ತರದಲ್ಲಿ ನಿಲ್ಲಬಾರದು. ತಾನು ಮುಟ್ಟಬೇಕಾದ ಗುರಿ ಇನ್ನೂ ಮುಂದಿದೆ ಎಂದು ತಿಳಿದು ಅದರೆಡೆಗೆ ಸಾಗುವ ಎಚ್ಚರಬೇಕು – ಇದು ಪ್ರಭುವಿನ ಆಶಯ. ಹೀಗೆಯೇ ಸಂವಾದ ಕುತೂಹಲಕರವಾಗಿ ಅರಳುತ್ತಾ ಸಾಗುತ್ತದೆ. ಸಿದ್ಧರಾಮನ ಮನಸ್ಸಿನಲ್ಲೆದ್ದ ಸಂದೇಹಗಳಿಗೆ ಒಂದೊಂದಾಗಿ ಪರಿಹಾರವಿತ್ತು, ಅವನನ್ನು ಸಾಕ್ಷಾತ್ಕಾರಕ್ಕೆ ಕಾತರಿಸುವಂತೆ ಮಾಡುತ್ತಾನೆ. ಕೊನೆಗೆ ತಾನು ಇದುವರೆಗೂ ನಿಂತದ್ದು ಮಾರ್ಗದಲ್ಲಿ, ಮನೆಯಲ್ಲಲ್ಲ ಎಂಬುದರ ಅರಿವು ಅವನಿಗಾಗುತ್ತದೆ. ಆಗ ತ್ರಿವಿಧಲಿಂಗ ಸಂಬಂಧ ಅಳವಡುವಂತೆ ಮಾಡು ಎಂದು ಬಿನ್ನವಿಸಿಕೊಳ್ಳುತ್ತಾನೆ :

ನೀರುಕ್ಷೀರದ ಸಂದುಗಳ ಹಂಸೆ ಬಿಚ್ಚಬಲ್ಲುದು ನೋಡಯ್ಯಾ! ದೇಹದ
ಜೀವನದ ಸಂದ ನೀವು ಬಿಚ್ಚಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯ? ನೀನಿಕ್ಕಿದ
ತೊಡಕ ಬಿಡಿಸಬಾರದು; ನೀನು ಬಿಡಿಸಿದ ತೊಡಕನಿಕ್ಕಬಾರದು
ಕಪಿಲ ಸಿದ್ಧಮಲ್ಲಿನಾಥಯ್ಯ, ನೀನೆನ್ನ ಕಾಯಕದ ಜೀವದ ಹೊಲಿಗೆಯ
ಬಿಡಿಸಾ, ನಿಮ್ಮ ಧರ್ಮ

– ಬೇಡುತ್ತಾನೆ. ಇದಕ್ಕೆ ‘ನಿನ್ನ ಅಂತರಂಗವನ್ನು ತೊಳೆದು ಶುದ್ದಿ ಮಾಡು. ಆಗ ಸರ್ವ ಸಂದೇಹವೂ ಅಳಿದು ಶಿವತತ್ವ ಸಿದ್ದಿಯಾಗುತ್ತದೆ ಎಂದು ಪ್ರಭು ಉತ್ತರಿಸುತ್ತಾನೆ. ಕೊನೆಗೆ ‘ಯೋಗಶಾಸ್ತ್ರ’ದ ಕಡೆಗೆ ಸಂವಾದ ತಿರುಗುತ್ತದೆ. ಸಂಪೂರ್ಣ ಶೂನ್ಯಸ್ಥಿತಿಯನ್ನು ಪಡೆಯುವ ಆ ಅನುಭವೈಕ್ಯ ಸ್ಥಿತಿಯನ್ನು ನಂತರ ಪ್ರಭುವೆ ವಿವರಿಸುತ್ತಾನೆ:

ಕರ್ಪೂರದ ಗಿರಿಯನುರಿ ಹಿಡಿದ ಬಳಿಕ ಇದ್ದಿಲುಂಟೆ?
ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ? ಕೆಂಡದ
ಗಿರಿಯ ಅರಗಿನ ಬಾಣದಲೆಚ್ಚಿದ ಬಳಿಕ ಮರಳಿ ಬಾಣವ
ನರಸಲುಂಟೆ? ಗೊಹೇಶ್ವರಲಿಂಗವನರಿದ ಬಳಿಕ ದೇವರೆಂದು
ಅರಸಲುಂಟೆ ಸಿದ್ಧರಾಮಯ್ಯ

ಉರಿ ಮತ್ತು ಕರ್ಪೂರ, ಮಂಜು ಮತ್ತು ಬಿಸಿಲು, ಕೆಂಡ ಮತ್ತು ಅರಗು ಇವುಗಳ ಸಂಬಂಧ ಉಂಟಾದಾಗ ಎರಡೂ ಅಲ್ಲದ ಬೇರೊಂದು ಸ್ಥಿತಿ ಸಿದ್ದಿಸುತ್ತದೆ; ಒಂದರೊಳ ಗೊಂದು ಅಡಗುತ್ತದೆ. ಅಂತೆಯೇ ಪರಮ ಪರಿಪೂರ್ಣತೆಯ ಸ್ಥಿತಿಯೂ ಸಹ. ಇದನ್ನು ವಿವರಿಸಿದಾಗ ಸಿದ್ಧರಾಮ ಇಷ್ಟಲಿಂಗವನ್ನು ಹಿಡಿದು ನಿಜಲಿಂಗೈಕ್ಯವನ್ನು ಕಾಣುವ ರೀತಿಯನ್ನು ಕೇಳಿದಾಗ ‘ಗೊಹೇಶ್ವರಲಿಂಗದಲ್ಲಿ ಕುರುಹು ಹಿಡಿದು ಕುರುಹುಗೆಡಬೇಕು’ ಎಂದು ಹೇಳಿ ಅದನ್ನು ಕರುಣಿಸುವುದಕ್ಕೋಸ್ಕರ ಕಲ್ಯಾಣಕ್ಕೆ ಕರೆತರುತ್ತಾನೆ. ಅಲ್ಲಿ ಚನ್ನಬಸವಣ್ಣನಿಂದ ಲಿಂಗದೀಕ್ಷೆಯಾಗುತ್ತದೆ; ಪ್ರಭುವಿನ ಮಹಾಧ್ಯಕ್ಷತೆಯಲ್ಲಿ ಅನುಭವಮಂಟಪದಲ್ಲಿ ನಡೆದ ವಿಚಾರಮಂಥನದಿಂದ ತನ್ನ ಮನಸ್ಸಿನ ಎಲ್ಲ ಕಾವಳವನ್ನು ಕಳೆದುಕೊಂಡು ಮಹಾಸಾಧಕನಾಗಿ ಸಿದ್ಧನೇ ಆಗುತ್ತಾನೆ :

ಇನ್ನು ಜನನವು ಇಲ್ಲ ಮುನ್ನವೇ ಸಂದಳಿದೆ
ಮನ್ನಣೆಯಿಂದ ನೀ ಕಳುಹಿದಂತ ಉನ್ನತೋನ್ನತನಾದೆ
ಚೆನ್ನಬಸವಣ್ಣನ ಕರುಣದಿಂದ ನಿನ್ನ ರೂಪಾದೆ
ಇನ್ನೆನಗೆ ಅರಿದುಂಟೇ? ಕಪಿಲ ಸಿದ್ಧಮಲ್ಲಿಕಾರ್ಜುನಾ

– ಎನ್ನುವ ಮಹೋನ್ನತ ಮಟ್ಟವನ್ನು ಮುಟ್ಟುತ್ತಾನೆ. ಹೀಗೆ ಸಿದ್ಧರಾಮನ ಕರ್ಮಯೋಗ ಮತ್ತು ಭಕ್ತಿಯೋಗಗಳ ಸತ್ವಭರಿತ ಚಿತ್ರವನ್ನು ಶೂನ್ಯ ಸಂಪಾದನೆ ಸುಂದರವಾಗಿ ಶಿಲ್ಪಿಸಿದೆ.

ಬಸವಣ್ಣ

ಒಂದು ರೀತಿಯಲ್ಲಿ ಅಲ್ಲಮಪ್ರಭು ಶೂನ್ಯ ಸಂಪಾದನೆಯ ಕೇಂದ್ರ ಶಕ್ತಿಯಾದರೆ, ಮತ್ತೊಂದು ರೀತಿಯಲ್ಲಿ ಬಸವಣ್ಣ. ಎಲ್ಲ ಶರಣರಿಗೂ ಪರಿಪೂರ್ಣತೆಯ ದಾರಿಯನ್ನು ತೋರುವ ದೀಪಸ್ತಂಭವಾಗಿ ಪ್ರಭುದೇವ ಬೆಳಗಿದರೆ, ಅವರೆಲ್ಲರೂ ಒಂದೆಡೆ ಕಲೆತು ತಮ್ಮ ತಮ್ಮ ನಿಲುವನ್ನು ಬಿತ್ತರಿಸಿ ಚರ್ಚಿಸಿ ಉಳಿದವರ ಮಾತುಗಳ ಬೆಳಕಿನಲ್ಲಿ ತಮ್ಮ ಸರಿಯಾದ ಸ್ಥಿತಿಯನ್ನರಿತು ಸಮಾಧಾನ ಹೊಂದಿ ಸಾಧನೆಯ ಪಥದಲ್ಲಿ ಸಾಗಲು ಅನು ವಾಗುವ ಜ್ಞಾನಕೇಂದ್ರವಾದ ಅನುಭವಮಂಟಪವನ್ನು ನಿರ್ಮಿಸಿದವನು ಬಸವಣ್ಣ. ಆದರೆ ಅದರ ಅಗ್ರಪೀಠವನ್ನು ಪ್ರಭುವಿಗೊಪ್ಪಿಸಿದುದು ಅವನ ವಿನಯಶ್ರೀಯನ್ನೂ ಜ್ಞಾನದ ಹಸಿವನ್ನೂ ತೋರಿಸುತ್ತದೆ. ತನಗಿಂತ ಎಷ್ಟೋ ಕಿರಿಯನಾದ ಚನ್ನಬಸವಣ್ಣ ಗುರುವಾಗಿ ತನಗೆ ಅನುಗ್ರಹ ತೋರಿಸಬೇಕೆಂದು ಕೇಳಿಕೊಂಡಾಗ ‘ನಾನೊಬ್ಬರಿಗೆ ಉಪದೇಶವ ಮಾಡಲಮ್ಮೆನು ತತ್ವವಹಿಡಿದವರಿಗೆ ತೊತ್ತಾಗಿ ನಡೆವೆನು’ ಎಂಬಂತಹ ತುಂಬುವಿನಯದ ಮಾತಾಡುತ್ತಾರೆ. ಆಗ ಚೆನ್ನಬಸವಣ್ಣ ‘ಕೂಡಲ ಚೆನ್ನಸಂಗಮದೇವರು ಸಾಕ್ಷಿಯಾಗಿ ನೀವು ಉಪದೇಶವ ಮಾಡಿದರೆ ಮರ್ತ್ಯಲೋಕದ ಮಹಾಗಣಂಗಳ ಕೈಯಲ್ಲಿ ಅಹುದಹುದೆನಿಸುವೆ’ ಎಂದಾಗ ‘ಕೂಡಲಸಂಗಮದೇವರ ಸಾಕ್ಷಿಯಾಗಿ ಎನಗೆಯೂ ನೀನೆ ಕರ್ತನಾದ ಕಾರಣ ನಾನು ಬೇಕೆನಲಮ್ಮೆ ಬೇಡಾ ಎನಲಮ್ಮೆನು ಕಾಣಾ ಚೆನ್ನಬಸವಣ್ಣಾ’ ಎನ್ನುತ್ತಾರೆ. ಈ ಸಂಪಾದನೆಯ ಉದ್ದಕ್ಕೂ ಇಂಥದೇ ನಿರಹಂಕಾರ, ವಿನಯಶೀಲತೆ, ಸೌಜನ್ಯ, ಸೌಶಿಲ್ಯ ಸದ್ಭಕ್ತಿಗಳ ಶ್ರೀಮೂರ್ತಿಯಾಗಿ ಬಸವಣ್ಣನವರನ್ನು ಕಾಣುತ್ತೇವೆ. ಪ್ರಭುದೇವರು ಸಿದ್ಧರಾಮ ನೊಡನೆ ಬಂದು ಮಹಾದ್ವಾರದಲ್ಲಿ ಕಾದು ನಿಂತಾಗ ತಮ್ಮನ್ನು ಮುಸುಗಿದ ಕ್ಷಣಕಾಲದ ಮೈಮರೆವಿಗಾಗಿ ಅವರು ಪಡುವ ಪಶ್ಚಾತ್ತಾಪ, ಎಳೆಮಗುವಿನಂತಹ ಮುಗ್ಧಮನದ ಮೊರೆ ಕರೆಗಳು, ದೈನ್ಯ, ಶುದ್ಧಭಕ್ತಿಯ ನಿರ್ಭರತೆಗಳು ಇಲ್ಲಿ ಸೊಗಸಾಗಿ ಮನಂಬುಗುವಂತೆ ವರ್ಣಿತವಾಗಿವೆ. ಅಂಥವೇ ರಸಪೂರ್ಣ ಭಾವಭರಿತ ಸತ್ವಯುಕ್ತ ವಚನಗಳನ್ನು ಸಂಪಾದನೆಕಾರರು ಇಲ್ಲಿ ಸಂಕಲಿಸಿದ್ದಾರೆ. ಅವರನ್ನು ಕುರಿತು ಪ್ರಭುಹೇಳುವ ಕೆಳಗಿನ ವಚನ ಅವರ ಮಹಿಮಾನ್ವಿತ ವ್ಯಕ್ತಿತ್ವವನ್ನೂ ಕಾರ್ಯರಂಗವನ್ನೂ ತುಂಬ ಸಮಂಜಸವಾಗಿ ಕನ್ನಡಿಸುತ್ತದೆ :

ಸಿದ್ಧರಾಮನಿಗೆ ಕಲ್ಯಾಣವನ್ನು ತೋರಿಸಿ ಅಲ್ಲಮ ಪ್ರಭು ಹೇಳುತ್ತಾನೆ:

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತಿದ್ದಿತಯ್ಯ ಶಿವನ ಪ್ರತಾಪ! ಬೆಳಗಿನೊಳಗೆ
ಒಪ್ಪುತಿರ್ದರಯ್ಯ ಅಸಂಖ್ಯಾತ ಭಕ್ತಗಣಂಗಳು. ಶಿವಭಕ್ತನಿರ್ದ
ಕ್ಷೇತ್ರ ಅವಿಮುಕ್ತ ಕ್ಷೇತ್ರವೆಂಬುದು ಹುಸಿಯೇ? ಶಿವಭಕ್ತನಿರ್ದ
ದೇಶ ಪಾವನವೆಂಬುದು ಹುಸಿಯೇ? ಗೊಹೇಶ್ವರಲಿಂಗದಲ್ಲಿ ಎನ್ನ
ಪರಮಾರಾಧ್ಯರು ಸಂಗನಬಸವಣ್ಣನ ಮಹಿಮೆಯ ನೋಡಾ ಸಿದ್ಧರಾಮಯ್ಯ

ಬಸವಣ್ಣನ ವ್ಯಕ್ತಿತ್ವಕ್ಕೆ ಈ ವಚನಕ್ಕಿಂತ ಹೆಚ್ಚಿನ ವ್ಯಾಖ್ಯಾನಬೇಕಿಲ್ಲ. ಪ್ರಭುದೇವರು ಮಹಾಮನೆಗೆ ಬಂದಾಗ ಬಸವಣ್ಣ ತಾನೇ ಬರದೆ ಹಡಪದ ಅಪ್ಪಣ್ಣನನ್ನು ಕರೆಯ ಕಳುಹಿಸುತ್ತಾನೆ. ಇವರ ಮೈಮರೆವನ್ನು ಕಂಡ ಪ್ರಭುದೇವನಿಗೆ ಅಚ್ಚರಿಯಷ್ಟೇ ವ್ಯಾಕುಲವೂ ಆಗುತ್ತದೆ. ಇಂತಹ ಸದ್ವಿನಯದ ಧವಳಮೂರ್ತಿಯ ಸ್ಥಿತಿಯೇ ಹೀಗಾದರೆ ಉಳಿದ ಸಾಮಾನ್ಯರ ಪಾಡೇನು? ಆದುದರಿಂದ ‘ಹಿರಿಯರು ಬಂದರೆ ಇದಿರೆದ್ದು ಬಾರದವರ ಮನೆಗೆ ಅಡಿಯಿಡೆರಾವೆಂದು’ ನಿರ್ದಾಕ್ಷಿಣ್ಯವಾಗಿ ಹೇಳುತ್ತಾರೆ. ಆ ವೇಳೆಗೆ ಚೆನ್ನಬಸವಣ್ಣ ನಿಜ ಸಂಗತಿಯನ್ನು ಬಸವಣ್ಣನಿಗೆ ಬಿತ್ತರಿಸಿದಾಗ, ಅವರ ಮರೆವು ಮರೆಯಾಗಿ ಭಯ ಬಲಿತು ಕಣ್ಣೀರು ಕೋಡಿಬಿದ್ದು ಅವನ ಪಾದದ ಮೇಲೆಯೇ ಬಿದ್ದು ಪ್ರಭುದೇವರ ಮುನಿಸನ್ನು ತಿಳಿಸಿಕೊಡಿ ಎಂದು ಅಂಗಲಾಚುತ್ತಾರೆ. ‘ಇನ್ನೇವೆನಿನ್ನೇವೆ ಕೆಮ್ಮನೆ ಕೆಟ್ಟೆನು’ ಎಂದು ಹಲುಬುತ್ತಾರೆ. ‘ನವರತ್ನವ ಕಿತ್ತು ಮಡುವಿನೊಳಗೆ ಹಾಯ್ಕಿದ ಕಪಿಯಂತಾಯಿತ್ತೆನ್ನ ಭಕ್ತಿ’ ಎಂದು ಆತ್ಮನಿಂದೆಗೈಯುತ್ತಾರೆ. ಇತರ ಶರಣರೊಡನೆ ಪ್ರಭುವಿನ ಬಳಿಗೆ ಬಂದು ಪರಿಪರಿ ಯಾಗಿ ಬೇಡುತ್ತಾರೆ :

ತಂದೆ ನೀವು ತಾಯಿ ನೀವು ಬಂಧು ನೀವು ಬಳಗ ನೀವು ನೀವಲ್ಲದೆ
ಮತ್ತಾರೂ ಇಲ್ಲ. ಕೂಡಲ ಸಂಗಮದೇವಾ, ಹಾಲಲದ್ದು ನೀರಲದ್ದು
ಮಸಿಯನೇಸುಕಾಲ ಬೆಳಗಿದರೆ ಬಿಳಿದಾಗ ಬಲ್ಲುದೆ?
ಕರ್ಮಸ್ಥಿತಿ ಬೆನ್ನ ಬಿಡದು ಅನಂತ ಕೋಟಿ ಸನ್ಮಾನವ
ಮಾಡಿದಡೇನು? ಒಂದು ನಿರ್ಮಿಷದ ಉದಾಸೀನ ಕೆಡಿಸಿತ್ತು.
ಕೂಡಲ ಸಂಗಮದೇವಾ, ನಿಮ್ಮ ನಂಬಿಯೂ ನಂಬದ ಡಂಬಕ ನಾನು

– ಮುಂತಾಗಿ ಬಗೆಬಗೆಯಾಗಿ ಮೊರೆಯಿಟ್ಟು ಕೃಪಾಯಾಚನೆ ಮಾಡುತ್ತಾರೆ. ಆದರೆ ಪ್ರಭು ಕರಗುವುದಿಲ್ಲ, ಕನಲುತ್ತಾನೆ; ಗೊಹೇಶ್ವರನ ಶರಣರ ಕೂಡೆ ಅಹಂಕಾರವ ಹೊತ್ತಿರ್ಪವರ ಕಂಡಡೆ ನಾನೊಲ್ಲೆ ಕಾಣಾ’ ಎಂದು ತಿರಸ್ಕರಿಸುತ್ತಾನೆ, ‘ಮಾಟ ಕೂಟವೆಂಬ ಕೀರ್ತಿಗೆ ಸಿಲುಕಿ ಜಂಗಮವೆ ಲಿಂಗವೆಂಬುದು ಮರದೆಯೆಲ್ಲಾ ಬಸವಾ! ಗೊಹೇಶ್ವರನ ಶರಣರಿಗೆ ತ್ರಿಕರಣವನ್ನೊಪ್ಪಿಸಿದಲ್ಲದೆ ಭಕ್ತನಾಗಬಾರದು ಕಾಣಾ ಸಂಗನ ಬಸವಣ್ಣ’ ಎಂದು ಮೂದಲಿಸುತ್ತಾನೆ. ಅದಕ್ಕೆ ಬಸವಣ್ಣ,

ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ
ನಿಮ್ಮ ಶರಣರಿಗೆಎಂದುತ್ತರಿಸಿದರೆ ಅದನ್ನು ತಟಕ್ಕನೆ ಖಂಡಿಸಿ,
ಮೇರುಗಿರಿಗಳೆಲ್ಲವು ಪ್ರಮಥರೊಡವೆ, ರಜತಗಿರಿಗಳೆಲ್ಲವೂ ಪುರಾತನ
ರೊಡವೆ ಚತುರ್ದಶ ಭುವನೆಲ್ಲವು ಲಿಂಗದೊಡವೆ, ಪೃಥ್ವಿಯೆಂಬುದು
ಕರ್ತಾರನ ಕಮ್ಮಟ, ಅಚ್ಚಿನ ಮೊಳೆ, ಬಾಧಿಸದ ಮನೆ. ತನುಮನ
ಧನಂಗಳೆಲ್ಲವು ನಮ್ಮ ಗೊಹೇಶ್ವರಲಿಂಗದ ಸೊಮ್ಮು. ನೀನೇನಕೊಟ್ಟು
ಭಕ್ತನಾದೆ ಹೇಳಾ ಬಸವಣ್ಣಾ

– ಎಂದು ಪ್ರಶ್ನಿಸುವುದರ ಮೂಲಕ ಈ ಅಹಂಕಾರಭಾವ ಬಸವಣ್ಣನಂಥವನಿಗೆ ಸಲ್ಲ ದೆಂದು ಪರೋಕ್ಷವಾಗಿ ಸೂಚಿಸುತ್ತಾನೆ. ಆಗ ಮತ್ತಷ್ಟು ಆರ್ದ್ರ ಭಾವದಿಂದ,

ಬೆದಕದಿರು ಬೆದಕದಿರು; ಬೆದಕಿದರೆ ಹುರುಳಿಲ್ಲ. ಚಿತ್ತರಟ್ಟೆಯ
ಕಾಯಲ್ಲಿ ಮತ್ತೇನನರಸುವಿರಿ? ನಿಮ್ಮುತ್ತಮಿಕೆಯನೆ ಮೆರೆಯಿರಯ್ಯ
ಕೂಡಲ ಸಂಗಮದೇವಾ

– ಎಂದು ಅತ್ಯಂತ ದೀನವಾಣಿಯಿಂದ ಮೊರೆಯಿಟ್ಟಾಗ ಪ್ರಭುದೇವರ ಮನಸ್ಸು ಮೃದುವಾಗುತ್ತದೆ, ಹೆಚ್ಚು ಕಾಡುವುದು ಸಾಕೆನಿಸುತ್ತದೆ. ತಮ್ಮ ಈ ವರ್ತನೆಗೆ ಕಾರಣವನ್ನು ಹೇಳುತ್ತಾರೆ :

ಸೂಲೆ ಹಲಬರನುಳಿದಳೆಂದು ನಿಂದಿಸುವರಿಲ್ಲ ಕೇಳಾ
ಪತಿವ್ರತೆ ತನ್ನ ಪುರುಷನಲ್ಲದೆ ಮತ್ತೊಬ್ಬನ ಮುಖವ ನೋಡಿದರೆ
ಅವಳ ಚಾಂಡಾಲಗಿತ್ತಿ ಎಂಬುದು ಲೋಕವೆಲ್ಲವು. ಕೀರ್ತಿವಾರ್ತೆಗೆ
ಮಾಡುವ ಭಕ್ತ ತಪ್ಪಿದರೆ, ಅದ ಮನಕ್ಕೆ ತರಲಿಲ್ಲ. ಸಜ್ಜನಸದ್ಭಕ್ತ
ನೆಡಹಿದರೆ ಅದ ಸೈರಿಸಬಾರದು ಕೇಳಾ.
ನಮ್ಮ ಗೊಹೇಶ್ವರಲಿಂಗಕ್ಕೆ ಆದಿಯಿಂದತ್ತ ನೀನೇ ಭಕ್ತನಾದ
ಕಾರಣ ಮನನೊಂದಿತ್ತು ಕಾಣಾ ಸಂಗನ ಬಸವಣ್ಣ

ಈ ಸನ್ನಿವೇಶ ಸಂಪಾದನೆಕಾರರ ಚತುರ ಸಂಯೋಜನೆಯಿಂದ ತುಂಬು ರಂಜನೀಯವಾಗಿ ಕ್ರಿಯಾಪೂರ್ಣವಾಗಿ ನಾಟಕೀಯವಾಗಿ ಬೆಳೆಬೆಳೆಯುತ್ತಾ ಹೋಗಿ ಶಿಖರವನ್ನು ಮುಟ್ಟುತ್ತದೆ: ಅಂತೆಯೇ ಬಸವಣ್ಣನವರ ಭಾವೋಜ್ವಲವಾದ ನಿರಾಡಂಬರ ಸರಳ ಮಹಾವ್ಯಕ್ತಿತ್ವವನ್ನೂ ಮೆರೆಸುತ್ತದೆ. ಮರುಳು ಶಂಕರದೇವರ ಪ್ರಸಂಗದಲ್ಲಿಯೂ ಬಸವಣ್ಣನವರ ನೈಜಂತರಂಗದ ರಮ್ಯ ಚಿತ್ರ ನಮಗೆ ದೊರೆಯುತ್ತದೆ.

ಕಾಯಕವೇ ಕೈಲಾಸವೆಂಬ ಬಸವಣ್ಣನವರ ಮಾತನ್ನು ವೀರನಿಷ್ಠೆಯಿಂದ ಅಂಗೀಕರಿಸಿ ಗುರುಲಿಂಗಜಂಗಮಗಳಿಗಿಂತಲೂ ಅದೇ ಸರ್ವಶ್ರೇಷ್ಠವೆಂದು ನಂಬಿ ನಡೆದ ಆಯ್ದಕ್ಕಿ ಮಾರಯ್ಯ, ಬಟ್ಟೆಯನ್ನು ಮಡಿಮಾಡುವ ಬಹಿರಂಗದ ಕಾಯಕದಿಂದ ಅಂತರಂಗವನ್ನು ಮಡಿಗೈಯುವ ಆಧ್ಯಾತ್ಮಿಕ ಕಾಯಕದ ಮಡಿವಾಳ ಮಾಚಯ್ಯ, ಜೀವನವಿಡೀ ರಹಸ್ಯ ಸಾಧನೆಯಲ್ಲೇ ನಿರತನಾಗಿದ್ದು ಪ್ರಭು ದರ್ಶನದಿಂದ ಮಿಂಚಿ ಮಾಯವಾದ ಗುಪ್ತ ಭಕ್ತ ಮರುಳಶಂಕರದೇವ, ರಾಜವೈಭವದ ಉತ್ತುಂಗ ಸಿಂಹಾಸನದಿಂದಿಳಿದು ಬಂದು ಕಟ್ಟಿಗೆ ಮಾರುವ ಕಾರ್ಯವನ್ನು ಕೈಗೊಡು ಪರಸ್ಪರ ಪೂರಕಶಕ್ತಿಗಳಾಗಿ ಬಾಳಿ ಬೆಳಗಿ ಕೈವಲ್ಯವನ್ನು ಕಂಡ ಮೋಳಿಗೆಯ ಮಾರಯ್ಯ ದಂಪತಿಗಳು, ಸತ್ಯನಿಷ್ಠನಾದ ಘಟ್ಟಿವಾಳಯ್ಯ, ಜಂಗಮ ದಾಸೋಹವೇ ಇಷ್ಟಲಿಂಗ ಧಾರಣೆಗಿಂತಲೂ ಸರ್ವಶ್ರೇಷ್ಠವೆಂದು ಭಾವಿಸಿದ ನುಲಿಯ ಚಂದಯ್ಯ, ರಸವಾದ ನಿಪುಣನಾಗಿದ್ದು ದೈಹಿಕ ಪರಿಪೂರ್ಣತೆಯೇ ಆಧ್ಯಾತ್ಮಿಕ ಪರಿಪೂರ್ಣತೆ ಎಂದು ನಂಬಿದ್ದ ಗೋರಕ್ಷ – ಮುಂತಾದ ಹರಶರಣರ ಉಜ್ವಲ ವ್ಯಕ್ತಿತ್ವಗಳು ಅವುಗಳನ್ನು ಬೆಳಗುವ ಉಚಿತ ಪ್ರಸಂಗಗಳೊಡನೆ ಶೂನ್ಯ ಸಂಪಾದನೆಯಲ್ಲಿ ಮೂಡಿಬಂದಿವೆ. ಇವುಗಳ ನಾಟಕೀಯತೆ, ಸಂಯೋಜನ ಚಾತುರ್ಯ ನಿಸ್ಸಂದೇಹವಾಗಿಯೂ ಮೇಲ್ಮಟ್ಟದ ಪ್ರತಿಭೆಯ ಅಂಶಗಳಾಗಿವೆ.

ಸಾಹಿತ್ಯ ಸೌರಭ

ಇಲ್ಲಿ ಸಂಕಲಿತವಾಗಿರುವ ೧೫೦೦ಕ್ಕಿಂತಲೂ ಹೆಚ್ಚಿನ ವಚನಗಳನ್ನು ಸ್ಥೂಲವಾಗಿ ಎರಡು ವಿಭಾಗ ಮಾಡಬಹುದು. ಒಂದು, ತಮ್ಮ ಅನುಭವವನ್ನು, ತಿಳಿದ ತತ್ವವನ್ನು, ಆಧರಿಸಿದ್ದ ನಂಬಿಕೆಯನ್ನು ಶುಷ್ಕವಾಗಿ ಬೋಧಿಸಿದ ವಚನಗಳು. ಇವುಗಳ ನೇರ ಉದ್ದೇಶ, ತಮ್ಮ ವಿಚಾರ ಪ್ರಣಾಲಿ ಜನರಿಗೆ ತಲಪಬೇಕು-ರೀತಿ, ಮಾತು ಶುಷ್ಕವಾಗಿದ್ದರೂ ಸರಿ, ಸವಿಯಾಗಿದ್ದರೂ ಸರಿ. ಇವುಗಳಲ್ಲಿ ವಿಚಾರವಿದ್ದರೂ ವಿಶೇಷತೆಯಿಲ್ಲ; ತತ್ವವಿದ್ದರೂ ತನಿರುಚಿಯಿಲ್ಲ; ಅನುಭಾವವಿದ್ದರೂ ಆತ್ಮಗಮ್ಯವಾದ ಆನಂದರೂಪವಾದ ಸೌಂದರ್ಯ ಮಾಧುರ್ಯ ಸೌಕುಮಾರ್ಯಗಳಿಲ್ಲ. ಇವು ಕೇವಲ ಶಾಸ್ತ್ರ; ವಚನಶಾಸ್ತ್ರ. ಇಂತಹ ವಚನಗಳ ಸಂಖ್ಯೆ ಇಲ್ಲಿ ತುಂಬ ಕಡಿಮೆ. ಎರಡನೆಯ ಗುಂಪು: ಇವು ಅನುಭವದ ಅಮೃತ ಮಂಥನದಿಂದ, ಹೃದಯದ ಆಳದಿಂದ ಮೂಡಿ, ರಸಾಮೃತವನ್ನು ಕುಡಿದು ಅನೂನ ಸೌರಭವನ್ನೊಡಗೊಂಡು ಅರಳಿದವುಗಳು. ಇವುಗಳಲ್ಲೂ ಅನುಭಾವವಿದೆ, ನೀತಿಯಿದೆ, ತತ್ವವಿದೆ. ಇದೇ ಸರ್ವ ಹೃದಯಾಹ್ಲಾದಕಾರಿಯಾದ ಆನಂದ ರೂಪಿಯಾದ ಕಾವ್ಯತ್ವ. ಈ ಕಾವ್ಯತ್ವದಿಂದಲೇ ವಚನ ಸಾಹಿತ್ಯ ಕೀರ್ತಿ ಬಹುಮಟ್ಟಿಗೆ ಸಾಹಿತ್ಯಾಭ್ಯಾಸಿಗಳ ಹೃದಯದಲ್ಲಿ ಹಸಿರಾಗಿರುವುದು.

ಹಿಂದೆಯೇ ಹೇಳಿದಂತೆ ವಚನ ವಾಙ್ಮಯವೆಂದೊಡನೆ ನಮ್ಮ ಕಣ್ಮುಂದೆ ಬಂದು ನಿಲ್ಲುವ ಮೂರ್ತಿ ಬಸವಣ್ಣನವರದು. ಇವರ ಸಮಗ್ರ ಜೀವನವೆಲ್ಲಾ ಸತ್ಯ ತತ್ವಗಳ ಪರೀಕ್ಷಾರಂಗವಾಗಿತ್ತು. ತಮ್ಮ ಅಂತರಂಗದ ಸಮಸ್ತ ತರತರಂಗಳನ್ನು ಅವರಂತೆ ನುಡಿದು ಹೊರಸೂಸಿದ ವಚನಕಾರ ಅನುಭಾವಿ ಮತ್ತೊಬ್ಬ ದೊರಕುವುದು ಕಷ್ಟ. ಅವರದು ಮೂಲತಃ ಕವಿಹೃದಯ. ಅದರ ಜೊತೆಗೆ ಉತ್ಕಟವಾದ ಶಿವಭಕ್ತಿ. ಭಕ್ತವಾಣಿ ಶಾರದಾವಾಣಿಗಳೆರಡೂ ಅವರ ವಚನಗಳಲ್ಲಿ ಸಮತಾನವಾಗಿ ಮಿಡಿಯುತ್ತವೆ. ಅಂತರ್ನಿರೀಕ್ಷಣೆ ಅವರಲ್ಲಿ ಅತಿ ವಿಪುಲ. ‘ಎನ್ನ ಚಿತ್ತ ಅತ್ತಿಯ ಹಣ್ಣು ನೋಡಯ್ಯ’, ‘ಮಸಿಯನೇಸುಕಾಲ ಬೆಳಗಿದರೇನು ಬಿಳಿದಾಗಬಲ್ಲುದೆ’, ‘ಎನಿಸುಕಾಲ ಕಲ್ಲು ನೀರೊಳಗಿರ್ದರೇನು ನೆನೆದು ಮೃದುವಾಗ ಬಲ್ಲುದೆ’-ಮುಂತಾದ ವಚನಗಳಲ್ಲಿ ತಮ್ಮ ಅಸಹಾಯಕ ಪರಿಸ್ಥಿತಿಯನ್ನು ಮನಂಬುಗುವಂತೆ ಹೇಳಿಕೊಂಡಿದ್ದಾರೆ.

ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾಯಿತ್ತೆನ್ನ ಭಕ್ತಿ.’
ಉಪ್ಪು ಅಪ್ಪುವಿನಲ್ಲಿ ಅದ್ದಿ ಮೆಲ್ಲಿದಂತಾಯಿತ್ತೆನ್ನ ಭಕ್ತಿ

‘ಒಲೆ ಹೊತ್ತಿ ಉರಿದರೆ ನಿಲಬಹುದಲ್ಲದೆ, ನೆಲ ಹೊತ್ತಿ ಉರಿದರೆ ನಿಲಬಹುದೆ’ – ಇಂತಹ ವಚನಗಳನ್ನು ಅವುಗಳ ಉಪಮಾ ಸೌಂದರ್ಯಕ್ಕಾಗಿಯೇ ಸವಿಯಬಹುದು. ಅತ್ಯಂತ ಸರಳವಾದ ಸವಿಯಾದ ತಿಳಿಯಾದ ತಿರುಳಾದ ಕನ್ನಡದಲ್ಲಿ ತಮ್ಮ ವಿಚಾರಧಾರೆ ಯನ್ನು ಹರಿಸಿ ಕನ್ನಡನುಡಿಯ ಶಕ್ತಿ ಸಂಪನ್ನತೆಯನ್ನು ತೋರಿಸಿಕೊಟ್ಟಿದ್ದಾರೆ.

ಅನುಭಾವದ ಮಹೋತ್ತುಂಗ ಶಿಖರವನ್ನೇರಿ ನಿಂದ ಪ್ರಭುವಿನ ಜ್ಞಾನವಾಣಿ ಸಾಮಾನ್ಯರಿಗೆ ಅರ್ಥವಾಗುವುದು ಕಷ್ಟ. ಆದರೂ ಆ ಅನುಭಾವದ ನಿರಾಕಾರತೆಯನ್ನು ಆ ಅತೀವ ದರ್ಶನದ ತಿಳಿವನ್ನು ಹಲವಾರು ಸಂಕೇತಗಳ ಮೂಲಕ ಪ್ರತಿಮೆಗಳ ಮೂಲಕ ಹೇಳಲು ಪ್ರಯತ್ನಿಸಿದ್ದಾನೆ ಪ್ರಭು. ಅವನ ಒಂದೊಂದು ಪ್ರತೀಕ ಪ್ರತಿಮೆಗಳನ್ನು ಕಂಡಾಗಲೆಲ್ಲಾ ಭವ್ಯತೆಯ ಸ್ಪರ್ಶ ವಾಗುತ್ತದೆ. ಅವನ ವಚನಗಳು ಬಹುಮಟ್ಟಿಗೆ ಪ್ರತಿಮಾಲೋಕದವೇ ಆಗಿವೆ. ಆದರೂ ಹಲವು ವಚನಗಳು ಅತ್ಯಂತ ಮನೋಜ್ಞ ಸುಂದರ ಉಪಮೆಗಳಿಂದ ಕಂಗೊಳಿಸುತ್ತವೆ. ‘ತನುವ ತೋಟವ ಮಾಡಿ, ಮನವ ಗುದ್ದಲಿ ಮಾಡಿ’, ‘ತನುವೆಂಬ ಏರಿಗೆ ಮನವೆಂಬ ಕಟ್ಟೆ’, ‘ಕಲ್ಲುಮನೆಯಮಾಡಿ, ಕಲ್ಲದೇವರ ಮಾಡಿ’ ಮುಂತಾದ ವಚನಗಳನ್ನು ಹಿಂದೆಯೇ ನೋಡಿದ್ದೇವೆ. ಅನುಪಯುಕ್ತವಾದ ಶುಷ್ಕವಾದ ಬಾಹ್ಯಾಚಾರ ಆಡಂಬರಗಳನ್ನು ಈ ರೀತಿ ವಿಡಂಬಿಸುತ್ತಾನೆ ಪ್ರಭು.

ಕಳ್ಳಗಂಜಿ ಕಾಡಹೊಕ್ಕಡೆ ಹುಲಿತಿಂಬುದ ಮಾಣ್ಬುದೇ
ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪತಿಂಬುದ ಮಾಣ್ಬುದೇ
ಕಾಲಕ್ಕಂಜಿ ಭಕ್ತನಾದೊಡೆ ಕರ್ಮತಿಂಬುದ ಮಾಣ್ಬುದೇ
ಮೃತ್ಯುವಿನ ಬಾಯಿ ತುತ್ತಾದ ವೇಷಡಂಭರನೇನೆಂಬೇ ಗುಹೇಶ್ವರಾ

ಆತ್ಮಶಕ್ತಿಯಿದ್ದರೂ ಅದು ಸಂಘರ್ಷಕ್ಕೆ ಒಳಗಾದಾಗ ಮಾತ್ರ ಹೊರಹೊಮ್ಮಿ ತನ್ನ ಸಹಜ ಸ್ವರೂಪವನ್ನು ತೋರಿಸುತ್ತದೆ. ಆ ಸಂಘರ್ಷ ಒದಗುವ ಸನ್ನಿವೇಶ ಮಾತ್ರ ಮೂಡಿ ಬರಬೇಕು. ಜೀವಾತ್ಮ ಪರಮಾತ್ಮರ ಸಂಬಂಧವೂ ಇದೇ ರೀತಿ. ಇದನ್ನು ಈ ವಚನದ ಮುಖಾಂತರ ತುಂಬ ಸಶಕ್ತನಾಗಿ ಪಡಿಮೂಡಿಸಿದ್ದಾರೆ :

ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ?
ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ?
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು
ಗೊಹೇಶ್ವರ ನಿಂದ ನಿಲುವನನುಭವ ಸುಖಿ ಬಲ್ಲ.

ಇಂತಹ ವಚನಗಳಲ್ಲಿ ಮಾತಿಗೆ ಅಗಾಧಶಕ್ತಿಯನ್ನು ತುಂಬಿರುವುದನ್ನು ಕಾಣಬಹುದು. ಇಂತವುಗಳಲ್ಲೆಲ್ಲಾ ಅಗಾಧಜ್ಞಾನದ ಬೆಳಕಿದೆ; ಭಾವದ ಬಳುಕಿದೆ; ಕಲ್ಪನೆಯ ಭವ್ಯತೆಯೂ ಇದೆ.

ಸಾಹಿತ್ಯದ ವಸಂತ ವಿಲಾಸವನ್ನು ಮಹಾದೇವಿಯಕ್ಕನ ವಚನಗಳಲ್ಲಿ ವಿಶೇಷವಾಗಿ ಕಾಣಬಹುದು. ಆಕೆ ಪರಮಭಕ್ತೆಯೂ ಶ್ರೇಷ್ಠ ಅನುಭಾವಿಯೂ ಆಗಿದ್ದುದರಿಂದ ಅವಳ ವಚನಗಳು ಅಮೃತದ ಉಣಿಸಾಗಿವೆ, ಕಲ್ಪನಾ ಸೌಂದರ್ಯದ ಪುಂಜಗಳಾಗಿವೆ. ಅವಳದು ಸಹಜವಾಗಿ ಕವಿಹೃದಯ. ಪ್ರಭುದೇವ ಆಕೆಯನ್ನು ಹೊಗಳಿ ನುಡಿದಾಗ ಅವಳಾಡುವ ವಚನ ಸುಂದರ ಸಾದೃಶ್ಯಗಳ ಜೀವಂತ ಕವಿತೆಯಾಗಿದೆ :

ಚಂದನವ ಕಡಿದು ಕೊರೆದು ತೇಯ್ದಡೆ ನೊಂದೆನೆಂದು ಕಂಪಬಿಟ್ಟಿತ್ತೆ?
ತಂದು ಸುವರ್ಣವ ಕಡಿದೊರೆದೊಡೆ ಬೆಂದು ಕಳಂಕ ಹಿಡಿಯಿತ್ತೆ?
ಸಂದು ಸಂದನು ಕಡಿದ ಕಬ್ಬನು ತಂದು ಗಾಣದಲ್ಲಿ ಅರೆದಡೆ ಬೆಂದು
ಪಾಕಗೊಳಸಕ್ಕರೆಯಾಗಿ ನೊಂದೆನೆಂದು ಸಿಹಿಯ ಬಿಟ್ಟಿತ್ತೆ? ನಾ ಹಿಂದೆ
ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು ನಿಮಗೆ ಹಾನಿ ಎನ್ನ
ತಂದೆ ಚೆನ್ನಮಲ್ಲಿಕಾರ್ಜುನದೇವಯ್ಯ, ಕೊಂದಡೆ ಶರಣೆಂಬುದ ಮಾಣೆ

ಚೆನ್ನನನ್ನು ಅರಸುತ್ತಾ ಹೊರಟ ಅವಳಿಗೆ ಚೇತನಾಚೇತನಗಳ ಅರಿವಿರುವುದಿಲ್ಲ. ಎಲ್ಲವೂ ಅವಳೆದುರು ಜೀವದುಂಬಿ ನರ್ತಿಸುತ್ತವೆ. ಚೆನ್ನನನ್ನು ಕುರಿತ ಅವಳ ಉತ್ಕಟ ಹಂಬಲ ಮಧುರ ವಚನಸುಧಾ ತರಂಗಿಣಿಯಾಗಿ ಹರಿದಿದೆ. ಆ ನಿರರ್ಗಳ ವಚನ ವೈಖರಿ, ಉನ್ನತ ಭಾವಗಳ ಆ ನಿರ್ಮಲ ಸ್ತೋತ್ರ, ಉಪಮೆ ರೂಪಕಗಳ ಆ ಸಹಜ ಸೊಬಗು, ರಿಂಗಣಗುಣಿವ ಆ ಮಧುರ ಪದಬಂಧ – ಇವೆಲ್ಲವೂ ಅಕ್ಕನ ವಚನಗಳನ್ನು ಉತ್ತಮ ಭಾವಗೀತೆಗಳೆಂದು ಗಣಿಸಲು ಕಾರಣವಾಗಿವೆ. ಅವುಗಳಲ್ಲಿ ಮತ ಪ್ರಕ್ರಿಯೆ ತುಂಬ ಕಡಿಮೆ, ಇಲ್ಲವೆಂದರೂ ಸಲ್ಲುತ್ತದೆ. ಸತಿಪತಿ ಭಾವದ ಪಾರಮಾರ್ಥಿಕ ಶೃಂಗಾರ ಅವಳ ಸಾಹಿತ್ಯಿಕ ವಚನಗಳ ನಾಡಿನಾಡಿಯಲ್ಲಿ ಹರಿಯುತ್ತಿದೆ :

ಚಿಲಿಮಿಲಿಯೆಂದೋದುವ ಗಿಳಿಗಳಿರಾ ನೀವು ಕಾಣಿರೇ?
ಸ್ವರವೆತ್ತಿ ಪಾಡುವ ಕೋಗಿಲೆಗಳಿರಾ ನೀವು ಕಾಣಿರೇ?
ಎರಗಿ ಬಂದಾಡುವ ತುಂಬಿಗಳಿರಾ ನೀವು ಕಾಣಿರೇ?
ಸರೋವರದೊಳಗಾಡುವ ಹಂಸೆಗಳಿರಾ ನೀವು ಕಾಣಿರೇ?
ಚೆನ್ನಮಲ್ಲಿಕಾರ್ಜುನನೆಲ್ಲಿಹನೆಂದು ಹೇಳಿರೇ

– ಈ ಒಂದು ವಚನ ಸಾಕು, ಅಕ್ಕನ ವಚನಗಳ ಭಾವಸಂಪತ್ತಿಯನ್ನು ಸೂಚಿಸಲು. ಎಂತಹ ಉತ್ಕಟವಾದ ಮೊರೆ, ಭಾವಸೌಂದರ್ಯ, ಅರ್ಥ ಗಾಂಭಿರ್ಯ, ಮೃದುಮಂಜುಳ ನಾದಲೀಲೆ, ಪ್ರಾಸದ ಲಾಸ್ಯ ಇಲ್ಲಿ ತುಂಬಿದೆ ಎನ್ನುವುದು ಅನುಭವವೇದ್ಯ, ಕನ್ನಡ ವಚನ ಸಾಹಿತ್ಯದಲ್ಲಿ ಇದೊಂದು ಅಪೂರ್ವವಾದ ರಚನೆ. ಇದರಿಂದಲೇ ಚೆನ್ನಬಸವಣ್ಣ,

ಆದ್ಯರ ಅರುವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ,
ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ,
ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ,
ಅಜಗಣ್ಣನ ಐದು ವಚನಕ್ಕೆ ಕೂಡಲ ಚೆನ್ನ ಸಂಗಯ್ಯನಲ್ಲಿ
ಮಹಾದೇವಿಯಕ್ಕಗಳ ಒಂದು ವಚನ ನಿರ್ವಚನಕಾಣಾ ಸಿದ್ಧರಾಮಯ್ಯ

ಎಂದು ಮುಕ್ತಕಂಠದಿಂದ ಹಾಡಿ ಹೊಗಳಿದ್ದಾನೆ. ಅಕ್ಕನ ಸಾಹಿತ್ಯ ಸೌರಭದ ಹಲವು ವಚನಗಳು ಇಲ್ಲಿ ಸೇರ್ಪಡೆಗೊಂಡಿವೆ. ಇವು ಅನುಭಾವ, ಆದರ್ಶ ಪ್ರೇಮ ಮತ್ತು ಉಜ್ವಲ ವಾದ ಕಾವ್ಯಸತ್ವ ಇವುಗಳ ತ್ರಿವೇಣೀ ಸಂಗಮವಾಗಿವೆ.

ಕರ್ಮಯೋಗಿಯಾಗಿ ಮೆರೆದ ಸೊನ್ನಲಿಗೆಯ ಸಿದ್ಧರಾಮನ ಕೆಲವು ವಚನಗಳೂ ಸಾಹಿತ್ಯ ಗುಣದಿಂದ ಕೂಡಿವೆ. ಇವನ ವಚನಗಳಲ್ಲಿ ಸಹಜತೆ ಇದೆ, ಸರಳತೆ ಇದೆ. ಅನುಭಾವ ಮತ್ತು ಭಕ್ತಿಗಳೆರಡರ ಸಮರಸ ಸಂಗಮ ಇಲ್ಲಿ ವ್ಯಕ್ತವಾಗುತ್ತದೆ. “ಅನಂತ ಕೋಟಿ ದೇವರುಗಳೆಲ್ಲರು ತಂಡ ತಂಡದಲ್ಲಿ ಪ್ರಣಾಮಗೈಯ್ಯಲು ಅವರ ಮಕುಟ ಸಂಘಟ್ಟರಜ ಉದುರಲಿಕ್ಕೆ ಅಲ್ಲಿ ರಜತಗಿರಿಗಳಾದವು ಕಪಿಲಸಿದ್ಧ ಮಲ್ಲಿಕಾರ್ಜುನ ನಿಮ್ಮ ಮುಂದೆ”- ಎಂಬಲ್ಲಿ ಕಲ್ಪನಾ ಸೌಂದರ್ಯದ ಭವ್ಯತೆ ಇದೆ.

ಇಲ್ಲಿ ಸಂಕಲಿತವಾಗಿರುವ ವಚನಗಳಲ್ಲಿ ಹಲವು ಎಲ್ಲ ಕಾಲಕ್ಕೆ ನಿಲ್ಲಬಲ್ಲ ಚಿರಂತನ ತತ್ವವನ್ನೊಳಗೊಂಡಿವೆ. ಕೆಲವು ಉಪನಿಷತ್ತಿನ ವಾಣಿಯನ್ನು ನೆನಪಿಗೆ ತರುತ್ತವೆ. ಎಂತಹ ಕಷ್ಟಸಾಧ್ಯವಾದ ವಿಚಾರಗಳನ್ನೂ ಕೂಡ ಅಭಿವ್ಯಕ್ತಿಸಲು ಕನ್ನಡ ನುಡಿ ಶಕ್ತವಾಗಿದೆ ಎಂಬುದನ್ನು ವಚನಗಳು ಸಾರುತ್ತವೆ. ಸಾಮ್ಯಗಳೂ, ಗಾದೆಮಾತುಗಳೂ ಒಳ್ನುಡಿಗಳೂ ಇಲ್ಲಿ ಹೇರಳವಾಗಿವೆ. ದೇಸಿ ಪ್ರಚುರವಾದ ಜನರ ಆಡುನುಡಿಯನ್ನು ಸಾಹಿತ್ಯ ಮಾಧ್ಯಮ ವಾಗಿಸಿದ ಕೀರ್ತಿ ಈ ವಚನಗಳದು. ಸಂಸ್ಕೃತದ್ದ ಅನಾವಶ್ಯಕವಾದ ಅಪಾರ ವೀರಗೌರವವನ್ನು ಕುಗ್ಗಿಸಿ, ತಾಯಿನುಡಿಯ ಘನತೆ ಗಾಂಭೀರ್ಯ ಗೌರವಗಳನ್ನು ವಚನಗಳು ಹೆಚ್ಚಿಸಿದವು. ಪಂಡಿತರ ತುತ್ತಾಗಿದ್ದು ಸಾಮಾನ್ಯರ ಕನಸಾಗಿದ್ದ ಕನ್ನಡ ಸರಸ್ವತಿಯನ್ನು ಉದ್ಧರಿಸಿ ಆಕೆಯನ್ನು ಜನಮನದ ಆರಾಧ್ಯಮೂರ್ತಿಯನ್ನಾಗಿ ಮಾಡಿದ ವಚನಸಾಹಿತ್ಯದ ಸೇವೆ ಅಪಾರ.

ಕೊನೆಮಾತು

ಇದುವರೆಗೆ ನೋಡಿದಂತೆ ಶೂನ್ಯಸಂಪಾದನೆ ಕೇವಲ ಒಂದು ವಚನ ಸಂಕಲನ ಗ್ರಂಥವಲ್ಲ, ಅದು ಆಧ್ಯಾತ್ಮ ಸಾಹಸಿಗಳ ಧೀಮಂತ ವಿಚಾರ ವಿಮರ್ಶೆಗಳ ಚರ್ಚಾರಂಗ. ಇಲ್ಲಿ ಬರುವ ಪ್ರತಿಯೊಂದು ವ್ಯಕ್ತಿಯೂ ಪ್ರಸಂಗವೂ ವಿಶಿಷ್ಟ ಜೀವಕಳೆಯಿಂದ ಕೂಡಿದ್ದು ವೈವಿಧ್ಯಪೂರ್ಣವಾದ ವಿಷಯ ವಿವೇಚನೆಯನ್ನು ನಡೆಸಿವೆ. ಗುರುಶಿಷ್ಯ ಸಂಬಂಧ, ಕಾಯಕ ಮಹತ್ವ, ಸ್ಥಾವರಲಿಂಗನಿಷ್ಠೆ, ಜಂಗಮದಾಸೋಹ, ಗುರುಮಹತ್ವ, ವೈರಾಗ್ಯ, ಗುಪ್ತಭಕ್ತಿ, ದೈಹಿಕಶ್ರದ್ಧೆ, ಅರಿವು-ಮರೆವು – ಮುಂತಾದ ಹಲವಾರು ಗಹನ ವಿಚಾರಗಳ ಸಮಾಲೋಚನೆಯ ಸಂಗಮಸ್ಥಾನವಾಗಿದೆ; ಹಾಗೆಯೇ ಸಾಹಿತ್ಯ ಮಧುತುಂಬಿದ ರಸವತ್ ಕೃತಿಯೂ ಆಗಿದೆ.

ಇದೊಂದು ಅಸಾಮಾನ್ಯ ಜ್ಯೋತಿರ್ಲೋಕ. ಇಲ್ಲಿನ ಅದ್ವಿತೀಯ ಮಹಾಜ್ಯೋತಿ ಅಲ್ಲಮಪ್ರಭು. ಉಳಿದ ಶರಣಜ್ಯೋತಿಗಳೂ ತಮ್ಮದೇ ಆದ ಪ್ರಕಾಶ, ಪ್ರಭಾವ, ಪರಿಣಾಮ ಗಳಿಂದ ಬೆಳಗಿ ನಮ್ಮನ್ನಾಕರ್ಷಿಸುತ್ತವೆ, ಪ್ರಭುವಿನ ಮಹಾಪ್ರಭೆಯಿಂದ ತಮ್ಮ ವ್ಯಕ್ತಿತ್ವವನ್ನು ಕಾಂತಿಯನ್ನು ಮಸುಳಿಸಿಕೊಳ್ಳದೆ ಮೇಲೇರಿಸಿಕೊಂಡಿವೆ. ಅವುಗಳ ತೈಲ ಕಡಿಮೆಯಾದಾಗ ತುಂಬಿ, ಉರಿ ಮಂಕಾದಾಗ ಉದ್ದೀಪಿಸುತ್ತಾನೆ ಪ್ರಭು. ತನ್ನ ಬಾಳಿನ ಕೊನೆಯವರೆಗೂ ಬೆಳಕಿನ ಬೆಟ್ಟವಾಗಿ ತಿರುಗಿ, ಅರ್ಧಜ್ಞಾನದ ಅವಸ್ಥೆಯಲ್ಲಿ ದಾರಿಗಾಣದೆ ತೊಳಲುತ್ತಿದ್ದವರ ಬಳಿಗೆ ತಾನಾಗಿ ನಡೆದು ಅವರನ್ನು ಶೂನ್ಯ ಸಂಪಾದನೆಯ ಜ್ಯೋತಿಃಪಥಕ್ಕೆ ಕರೆತರುತ್ತಾನೆ. ಅವರುಗಳಲ್ಲಿನ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ನಿಷ್ಠುರವಾಗಿ ಖಂಡಿಸುತ್ತಾನೆ. ಹೊಸ ವಿಚಾರಗಳನ್ನು ಮಂಡಿಸುತ್ತಾನೆ, ಸಂಶಯಗಳನ್ನು ನಿವಾರಿಸುತ್ತಾನೆ, ಆತ್ಮಜ್ಞಾನದ ಸಾಕ್ಷಾತ್ಕಾರ ಮಾಡಿಸುತ್ತಾನೆ.

ಹೀಗೆ ಅಧ್ಯಾತ್ಮ, ಸಾಹಿತ್ಯ, ವೈಚಾರಿಕ ಸಂಘರ್ಷ, ವ್ಯಕ್ತೇತಿಹಾಸಗಳನ್ನು ಅತ್ಯಂತ ಸಹಜವಾಗಿ ಗರ್ಭೀಕರಿಸಿಕೊಂಡು ನಾಟಕೀಯ ಕ್ರಿಯಾಪೂರ್ಣತೆಯನ್ನೊಳಗೊಂಡ ಸಾರ್ವತ್ರಿಕವಾದ ಸಾರ್ವಕಾಲಿಕವಾದ ಒಂದು ವೈಶಿಷ್ಟ್ಯಪೂರ್ಣ ಕೃತಿ ಈ ಶೂನ್ಯ ಸಂಪಾದನೆ.