ಸಾಹಿತ್ಯ ಪ್ರಕಾರಗಳಲ್ಲಿ ಜೀವನ ಚರಿತ್ರೆ ಒಂದು ಮುಖ್ಯವಾದ ಅಂಗ. ಇದು ಕತೆ, ಕಾದಂಬರಿ, ಕಾವ್ಯ ಮುಂತಾದ ಸೃಜನಶೀಲ ಪ್ರಕಾರಗಳಿಂದ ಭಿನ್ನವಾದುದು; ಚರಿತ್ರೆಗೆ ಹತ್ತಿರವಾದದ್ದು. ಚರಿತ್ರೆಯ ನಿಷ್ಠುರ ವಾಸ್ತವ ಮತ್ತು ಸೃಜನಶೀಲ ಸಾಹಿತ್ಯದ ಭಾವನಿರ್ಭರತೆ ಹಾಗೂ ವಿಮರ್ಶೆಯ ಆಲೋಚನಾಪರತೆ ಮೂರೂ ಮಧುರವಾಗಿ ಮೇಳೈಸಿದ ವಿಶಿಷ್ಟ ಪ್ರಕಾರ ಇದು. ಚರಿತ್ರೆ ಒಂದು ದೇಶದ ಅಥವಾ ಜನಾಂಗದ ಏಳು-ಬೀಳುಗಳನ್ನು, ಸಾಹಸ ಸಾಧನೆಗಳನ್ನು ರೋಚಕತೆಗೆ, ಕಲ್ಪನೆಗೆ ಎಡೆಯಿಲ್ಲದಂತೆ ಬಹಳಮಟ್ಟಿಗೆ ಶುಷ್ಕವಾಗಿ ಚಿತ್ರಿಸುತ್ತದೆ. ಆದರೆ ಜೀವನಚರಿತ್ರೆ ವ್ಯಕ್ತಿಯೊಬ್ಬನ ವೈಯಕ್ತಿಕ ಬದುಕಿನ ಪದರ ಪದರಗಳಿಗೆ ಏಳು-ಬೀಳುಗಳಿಗೆ, ಸಾಧನೆ-ಸಿದ್ದಿಗಳಿಗೆ ಕಾರಣಗಳನ್ನು, ಅದರ ಪರಿಸರ ಸಮೇತವಾಗಿ ಆಪ್ತತೆಯಿಂದ ಮತ್ತು ಮನೋನಿಷ್ಠವೂ, ಬುದ್ದಿನಿಷ್ಠವೂ ಆದ ವಿಶಿಷ್ಟ ದೃಷ್ಟಿಕೋನದಿಂದ ಚಿತ್ರಿಸುತ್ತದೆ. ಹೀಗಾಗಿ ಸಾಹಿತ್ಯದ ರಸಾಂಶಗಳು ಜೀವನ ಚರಿತ್ರೆಯಲ್ಲಿ ಹೇರಳವಾಗಿ ದೊರೆಯುತ್ತವೆ ಮತ್ತು ದೊರೆಯಬೇಕು. ಆದರೆ ಇಲ್ಲಿ ಲೇಖಕನಿಗೆ ಅಧಿಕ ಸ್ವಾತಂತ್ರ್ಯವಿಲ್ಲ; ಅಷ್ಟೇ ಅಲ್ಲ ಕಲ್ಪನೆಗಳಿಗೆ ಯಾವ ಅವಕಾಶವೂ ಇಲ್ಲ. ಹೀಗಾಗಿ ಜೀವನ ಚರಿತ್ರೆ ಸೃಜನಶೀಲ ಸಾಹಿತ್ಯದ ಆನಂದಾನುಭವವನ್ನು ಮತ್ತು ಶುದ್ಧ ಇತಿಹಾಸದ ವಾಸ್ತವ ಲೋಕದ ಅನುಭವ ವನ್ನು ಒಟ್ಟಾಗಿಯೇ ತಂದುಕೊಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಬದುಕು ಒಂದೊಂದು ಜೀವನ ಚರಿತ್ರೆಯ ವಸ್ತುವಾಗುತ್ತದೆ. ಆದರೆ ರಾಜಕೀಯ, ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ, ವೈಜ್ಞಾನಿಕ, ಶೈಕ್ಷಣಿಕ, ಕಲೆ – ಇತ್ಯಾದಿ ಕ್ಷೇತ್ರಗಳಲ್ಲಿ ವಿಶಿಷ್ಟವಾದ ಸಾಧನೆಯನ್ನು ತನ್ನ ಸತತ ಪರಿಶ್ರಮದಿಂದ, ಪ್ರತಿಭೆಯಿಂದ ಮತ್ತು ಬುದ್ದಿವಂತಿಕೆಯಿಂದ ಮಾಡಿದ ವ್ಯಕ್ತಿಯ ಜೀವನ ಉತ್ತಮ ಜೀವನ ಚರಿತ್ರೆಗೆ ಆಕರವಾಗುತ್ತದೆ. ಹೀಗೆ ಸಾಹಿತ್ಯದ ಸತ್ವವನ್ನು, ಚರಿತ್ರೆಯ ಸತ್ಯವನ್ನು ಅವಿಭಾಜ್ಯವಾಗಿ ಸಮರಸಗೊಳಿಸಿಕೊಂಡು ಮೂಡಿದ ಕೃತಿಗಳು ಉತ್ಕೃಷ್ಟ ಜೀವನ ಚರಿತ್ರೆಗಳಾಗಿ ಪರಿಣಮಿಸುತ್ತವೆ.

ಭಾರತೀಯರಲ್ಲಿ ತಮ್ಮ ಜೀವನ ಕತೆಯನ್ನು ತಾವೇ ಹೇಳಿಕೊಳ್ಳುವ ಪ್ರವೃತ್ತಿ ಪಾಶ್ಚಾತ್ಯರಷ್ಟು ಅಧಿಕ ಪ್ರಮಾಣದಲ್ಲಿ ಕಂಡು ಬರುವುದಿಲ್ಲ. ಹಾಗೆಯೇ ಇತರ ವ್ಯಕ್ತಿಗಳ ಬದುಕನ್ನು ಅತ್ಯಂತ ಹತ್ತಿರದಿಂದ ಗಮನಿಸಿ ನಿಷ್ಪಕ್ಷಪಾತವಾಗಿ ಅದನ್ನು ಬೆಳಕಿಗೊಡ್ಡುವ ಇತಿಹಾಸಪ್ರಜ್ಞೆ ಕೂಡ ನಮ್ಮವರಿಗೆ ಕಡಿಮೆಯೆಂದೇ ಹೇಳಬೇಕು. ಕನ್ನಡ ಸಾಹಿತ್ಯವೂ ಇದಕ್ಕೆ ಅಪವಾದವಲ್ಲ. ಆದರೂ ಜೀವನ ಚರಿತ್ರೆಯ ಕ್ಷೇತ್ರದಲ್ಲಿ ಇತ್ತೀಚೆಗೆ ಮೂಡಿರುವ ಒಲವು, ಬಂದಿರುವ ಬೆಳೆ ತೀರಾ ನಿರಾಶಾದಾಯಕವಾದದ್ದೇನೂ ಅಲ್ಲ. ಈ ನಿಟ್ಟಿನಿಂದ ನೋಡಿದಾಗ ಸ್ವಾತಂತ್ರ್ಯೋತ್ತರ ಕಾಲದಲ್ಲಿ ರಚನೆಯಾಗಿರುವ ಜೀವನಚರಿತ್ರೆಗಳ ಸಂಖ್ಯೆ ಸಾವಿರದ ಅಂಕಿಯನ್ನು ದಾಟಿರುವುದು ಗಮನಾರ್ಹ.

ಈ ಜೀವನ ಚರಿತ್ರೆಗಳಲ್ಲಿ ಎರಡು ವಿಧ. ೧. ತನ್ನ ಜೀವನವನ್ನು ಕುರಿತು ವ್ಯಕ್ತಿಯೊಬ್ಬ ತಾನೇ ಬರೆದುಕೊಂಡದ್ದು, ಆತ್ಮಕತೆ. ೨. ಮತ್ತೊಬ್ಬ ವ್ಯಕ್ತಿಯ ಜೀವನದ ಬಗ್ಗೆ ಲೇಖಕನೊಬ್ಬ ತಾಳಿದ ಆದರ, ಗೌರವಗಳ ಫಲವಾಗಿ ಮತ್ತು ಆ ವ್ಯಕ್ತಿಯ ಜೀವನದ ಬಹುಮುಖಗಳನ್ನು ಅರಿತ ಹಾಗೂ ಅಭ್ಯಾಸ ಮಾಡಿದ ಫಲವಾಗಿ ಮೂಡಿಬಂದ ಜೀವನ ನಿರೂಪಣೆ. ಆತ್ಮಕತೆಯ ಕ್ಷೇತ್ರದಲ್ಲಿ ಬಂದಿರುವ ಕೃತಿಗಳ ಸಂಖ್ಯೆ ತುಂಬಾ ಕಡಿಮೆ. ಬಹುಶಃ ಇದಕ್ಕೆ ವಿಶಿಷ್ಟ ಬದುಕನ್ನು ಬದುಕಿದ ವ್ಯಕ್ತಿಗೆ ಲೇಖನ ಕಲೆ ಸಿದ್ದಿಸದಿರುವುದು, ತನ್ನ ಜೀವನ ಸಾಧನೆಗಳ ಬಗ್ಗೆ ನಿರ್ಲಿಪ್ತತೆಯಿಂದಿರುವುದು ಅಥವಾ ತನ್ನದನ್ನು ತಾನೇ ಹೇಳಿಕೊಳ್ಳಲಾರದ ಸಂಕೋಚ ಹಾಗೂ ವಿನಯಶೀಲತೆಗಳು ಕಾರಣವಿರಬಹುದು. ಅನ್ಯಜೀವನ ಕಥನವನ್ನು ಕುರಿತ ಬರವಣಿಗೆಗಳು ಗಮನಾರ್ಹ ಸಂಖ್ಯೆಯಲ್ಲಿವೆ. ಈ ಬರಹಗಳಲ್ಲಿ ರಾಜ-ಮಹಾರಾಜರ, ರಾಜಕಾರಣಿಗಳ, ಸಾಹಿತಿಗಳ, ಕಲಾವಿದರ, ವಿಜ್ಞಾನಿಗಳ, ಸಮಾಜ ಸುಧಾರಕರ, ಧರ್ಮಬೋಧಕರ, ಮತಸ್ಥಾಪಕರ, ಕ್ರೀಡಾಪಟುಗಳ, ಶಿಕ್ಷಣತಜ್ಞರ, ಮಹರ್ಷಿಗಳ ಬದುಕುಗಳು ಬಿಂಬಿತವಾಗಿದೆ.

ಸ್ವಾತಂತ್ರ್ಯೋತ್ತರ ಕಾಲದಲ್ಲಿ ರಾಜ-ಮಹಾರಾಜರ ಬಗೆಗಿನ ಅಭಿಮಾನ ಗೌರವಗಳು ಸಹಜವಾಗಿಯೇ ಕಡಿಮೆಯಾದ್ದರಿಂದ ಅವರ ಬಗೆಗಿನ ಚರಿತ್ರೆಗಳು ಸ್ವಾಭಾವಿಕವಾಗಿಯೇ ಅಗಣನೀಯವಾಗಿವೆ. ಆದರೂ ಅಶೋಕ, ಮಹಾರಾಣಿ ಲಕ್ಷ್ಮೀಬಾಯಿ, ಛತ್ರಪತಿ ಶಿವಾಜಿ, ರಾಜರ್ಷಿ – ಮುಂತಾದ ಕೆಲವೇ ಕೆಲವು ಕೃತಿಗಳು ಪ್ರಕಟವಾಗಿವೆ. ಇವುಗಳಲ್ಲಿ ಬಹಳಮಟ್ಟಿಗೆ ಈ ಚಾರಿತ್ರಿಕ ವ್ಯಕ್ತಿಗಳ ಜೀವನದ ಕೆಲವು ಎಳೆಗಳನ್ನು ಮಾತ್ರ ಗುರ್ತಿಸಲಾಗಿದ್ದು ಹೆಚ್ಚು ಕಡಿಮೆ ಅವು ವೈಭವೀಕರಣಗೊಂಡಿವೆ. ಗುಣ-ದೋಷಗಳೆರಡಕ್ಕೂ ಕನ್ನಡಿ ಹಿಡಿಯಬೇಕಾದ ಜೀವನ ಚರಿತ್ರೆಯ ಒಂದು ಮುಖ ಮಾತ್ರ ಇಲ್ಲಿ ಪ್ರಕಟವಾಗಿವೆ.

ರಾಜಕಾರಣಿಗಳನ್ನು ಮತ್ತು ರಾಷ್ಟ್ರಕ್ಕಾಗಿ ಹಲವು ಮುಖಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಕುರಿತು ಸ್ವಾತಂತ್ರ್ಯೋತ್ತರ ಕಾಲದ ಜನರ ಮನಸ್ಸಿನಲ್ಲಿ ಅಪಾರ ಅಭಿಮಾನ ಕೆನೆಗಟ್ಟಿತು. ಸ್ವಾತಂತ್ರ್ಯ ಸಂಪಾದನೆಗಾಗಿ, ಜೀವನ ಮಲ್ಯಗಳ ಆಚರಣೆಗಾಗಿ, ಜನತೆಯ ಬದುಕಿನ ಅಂತಃಕರಣಪೂರ್ವಕ ಪ್ರೀತಿಗಾಗಿ ತಮ್ಮ ತನು, ಮನ, ಧನಗಳನ್ನು ಮೀಸಲಿಟ್ಟ ವ್ಯಕ್ತಿಗಳ ಜೀವನ ನಮ್ಮ ಜನರಿಗೆ ಹೊಸ ಸ್ಫೂರ್ತಿಯನ್ನು ನೀಡುವ ಆದರ್ಶವಾಯಿತು. ಈ ಕಾರಣದಿಂದ ರಾಷ್ಟ್ರನಾಯಕರನ್ನು ಕುರಿತಾದ ಜೀವನ ಚರಿತ್ರೆಗಳು ಭಾರತದ ಎಲ್ಲಾ ಭಾಷೆಗಳಲ್ಲಿ ಬಂದಂತೆಯೇ ಕನ್ನಡದಲ್ಲೂ ಬಂದಿವೆ. ಇವುಗಳಲ್ಲಿ ಕೆಲವು ತುಂಬ ಉತ್ಕೃಷ್ಟವಾದ ಹೆಬ್ಬೊತ್ತಿಗೆಗಳು. ಮಹಾತ್ಮಾಗಾಂಧೀಜಿಯನ್ನು ಕುರಿತಾದ ಗ್ರಂಥಗಳ ಸಂಖ್ಯೆ ಇವುಗಳಲ್ಲಿ ಅಧಿಕ. ಬಿ.ಆರ್. ನಂದ ಅವರು ಬರೆದ – “ಮಹಾತ್ಮಾಗಾಂಧಿ” ಎಂಬ ಹಾಗೂ ಮಹದೇವ ಭಾಯಿಯವರು ಬರೆದ “ದಿನಚರಿ” ಎಂಬ ಬೃಹತ್ ಗ್ರಂಥಗಳು ಕನ್ನಡ ಜೀವನ ಚರಿತ್ರೆಗೆ ವಿಶೇಷ ಕೊಡುಗೆಗಳಾಗಿವೆ. “ಯುಗ ಪುರುಷಗಾಂಧಿ” ಮುಂತಾದ ನೂರಾರು ಸಣ್ಣ ದೊಡ್ಡ ಕೃತಿಗಳು ರಚಿತವಾಗಿರುವುದಲ್ಲದೆ, ಗಾಂಧೀಜಿಯವರ ಆತ್ಮಕತೆಯೂ ಕನ್ನಡಕ್ಕೆ ಲಭ್ಯವಾಗಿದೆ. ಭಾರತದುದ್ದಕ್ಕೂ ಹಾಸಿಕೊಂಡ ಗಾಂಧೀಜಿಯವರ ಬದುಕಿನ ಒಳ ಹೊರ ತರಂಗಗಳನ್ನು ಅವರ ಜಗದಾಶ್ಚರ್ಯಕರವಾದ ಅದ್ವಿತೀಯ ಸಾಧನೆಗಳನ್ನು ಈ ಕೃತಿಗಳು ಅಭಿಮಾನದ ಬಣ್ಣದಲ್ಲಿ ಚಿತ್ರಿಸುವ ಮೂಲಕ ಕನ್ನಡ ಓದುಗರ ಮನದಲ್ಲಿ ಗಾಂಧೀಜಿಯ ಮಹತ್ತರ ಬದುಕನ್ನು ಅನ್ಯಾದೃಶವಾಗಿ ಮುದ್ರೆಯೊತ್ತಿವೆ. ಬಾಬು ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಭ ಬಾಯಿ, ದಾದಾಬಾಯಿ ನವರೋಜಿ, ಲೋಕಮಾನ್ಯ ತಿಲಕ್, ಮಹದೇವ ಗೊಂವಿಂದ ರ‍್ಯಾನಡೆ, ಮಲಾನ ಅಜದ್, ಜಯಪ್ರಕಾಶ್ ನಾರಾಯಣ, ಅಜತಶತ್ರು, ಗಡಿನಾಡು ಗಾಂಧಿ – ಮುಂತಾದ ಕೃತಿಗಳು ನಮ್ಮ ರಾಷ್ಟ್ರನಾಯಕರ ಅದಮ್ಯ ಜೀವನವನ್ನು ಆದರ್ಶಪರ ಹೋರಾಟದ ರೋಮಾಂಚಕಾರಿ ಚಿತ್ರವನ್ನು ನೀಡುತ್ತವೆ. ಡಾ. ಅಂಬೇಡ್ಕರ್ ಅವರನ್ನು ಕುರಿತು ಇತ್ತೀಚಿನ ದಿನಗಳಲ್ಲಿ ಅಧಿಕ ಒಲವು ಮೂಡುತ್ತಿರುವುದು ಶುಭ ಸೂಚನೆಯಾಗಿದೆ. ಸಹಸ್ರಾರು ವರ್ಷಗಳಿಂದ ಮೇಲುವರ್ಗದ ತುಳಿತಕ್ಕೊಳಗಾಗಿ ಸರ್ವ ರೀತಿಯಿಂದಲೂ ಶೋಷಿತರಾದ ಅಸ್ಪೃಶ್ಯರ ಬದುಕನ್ನು ಹಸನುಗೊಳಿಸುವುದಕ್ಕಾಗಿ, ಭಾರತದ ಜನತೆಯ ಸಮಾನತೆಯ ನೆಲೆಯಲ್ಲಿ ಅವರನ್ನು ನಿಲ್ಲಿಸುವುದಕ್ಕಾಗಿ ತಮ್ಮ ಬದುಕನ್ನು ಗಂಧದಂತೆ ತೇಯ್ದ ಈ ಮಹಾವ್ಯಕ್ತಿಯ ಜೀವನವನ್ನು ಕುರಿತು ಡಾ. ದೇ. ಜವರೇಗೌಡ, ಪೊ. ಇನಾಂದಾರ್, ಪ್ರೊ. ಎಚ್.ಎಸ್.ಕೆ., ದೇವಯ್ಯ ಹರವೆ, ಜಕೊಬ್ ಲೋಬೊ, ಪ್ರೊ. ಎಚ್.ಜೆ. ಲಕ್ಕಪ್ಪಗೌಡ, ಬಸವರಾಜ ಕೆಸ್ತೂರ್, ಕಮಲಾ ಹಂಪನಾ, ಮನಜ – ಮುಂತಾದವರು ಮನನೀಯವಾದ ಕೃತಿಗಳನ್ನು ರಚಿಸಿದ್ದಾರೆ. ಅಂಬೇಡ್ಕರ್ ಜೀವನದ ಅಂತಃಕರಣ ಕಲಕುವ ಘಟನೆಗಳನ್ನು, ಅವರು ದಲಿತರ ಬದುಕಿನಲ್ಲಿ ಬೆಳಗಿಸಿದ ಬೆಳಕನ್ನು ಇವು ಜ್ವಲಂತವಾಗಿ ಚಿತ್ರಿಸುವಲ್ಲಿ ಯಶಸ್ವಿಯಾಗಿವೆ. ಗಡಿನಾಡು ಗಾಂಧಿ, ಅಬ್ದುಲ್ ಗಫಾರ್ ಖಾನ್‌ರನ್ನು ಕುರಿತು ಡಾ. ಹಂಪನಾ ಮುಂತಾದವರು ಕೃತಿಗಳನ್ನು ರಚಿಸಿದ್ದಾರೆ. ಡಾ. ದೇ.ಜ.ಗೌ ಅವರು ಮೋತಿಲಾಲ್ ನೆಹರು, ಗೋಪಾಲಕೃಷ್ಣ ಗೋಖಲೆ, ನಮ್ಮ ನೆಹರು ಮುಂತಾದ ಕೃತಿಗಳನ್ನು ರಚಿಸುವುದರ ಮೂಲಕ ಈ ರಾಷ್ಟ್ರನಾಯಕರ ಬದುಕನ್ನು ಸುಂದರವಾಗಿ ಅನಾವರಣಗೊಳಿಸಿದ್ದಾರೆ. ಶ್ರೀರಂಗರ “ನಮ್ಮ ನೆಹರು” ಕೂಡ ಗಮನಿಸ ಬೇಕಾದ ಕೃತಿ. ಕವಿಯಾಗಿ, ದಾರ್ಶನಿಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಖ್ಯಾತರಾದ ಅರವಿಂದರ ಬಗೆಗೆ ರಂ.ರಾ. ದಿವಾಕರ್, ಕೋ. ಚನ್ನಬಸಪ್ಪ ಮುಂತಾದವರು ಉತ್ತಮ ಮಾಹಿತಿಯನ್ನುಳ್ಳ ಕೃತಿರಚನೆ ಮಾಡಿದ್ದಾರೆ. ಭಾರತದ ರಾಜಕಾರಣದಲ್ಲಿ ಹಲವಾರು ವೈಶಿಷ್ಟ್ಯಗಳಿಗೆ ಕಾರಣವಾದ ಶ್ರೀಮತಿ ಇಂದಿರಾಗಾಂಧಿಯವರನ್ನು ಕುರಿತು “ಇಂದಿರಾ ಪ್ರಿಯದರ್ಶಿನಿ” ಮುಂತಾದ ಗ್ರಂಥಗಳು ಹೊರಬಂದಿವೆ. ಭಾರತದ ರಾಜಕಾರಣದಲ್ಲಿ ತಮ್ಮ ಜನಪರ ನಿಲುವಿನಿಂದ ಖ್ಯಾತರಾದ ಡಾ. ಲೋಹಿಯಾ ಅವರ ಜೀವನವನ್ನು ಕುರಿತು ತಿಪ್ಪೇಸ್ವಾಮಿ, ಹೇಮಾ ಬರೆದ ಕೃತಿಗಳು ಗಮನಾರ್ಹವಾಗಿವೆ. ಮದರ್ ಥೆರೇಸಾ ಅವರನ್ನು ಕುರಿತ ವಿ.ಬಿ. ಮೊಳಿಯಾರ, ವಿ.ವಿ. ಜೋಷಿ ಬರೆದ ಕೃತಿಗಳು ಆಕೆಯ ತ್ಯಾಗಮಯ ಶಿವಜೀವನವನ್ನು, ನಿರ್ಮಲ ಅಂತಃಕರಣವನ್ನು ಪ್ರತಿನಿಧಿಸುತ್ತವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ದೇಶೀಯರಷ್ಟೇ ನಿಷ್ಠೆಯಿಂದ ಭಾಗವಹಿಸಿದ ಸೋದರಿ ನಿವೇದಿತಾರ ಬಗೆಗಿನ ಪ್ರಭುಶಂಕರರ ಕೃತಿಯೂ ಕೂಡ ಮುಖ್ಯವಾದದ್ದು. ಡಾ. ಬಿ.ಸಿ. ರಾಯ್ ಅವರನ್ನು ಕುರಿತ ಎಚ್.ಎಸ್. ದೊರೆಸ್ವಾಮಿಯವರ ಕೃತಿ, ಕಮಲಾದೇವಿ ಚಟ್ಟೋಪಾಧ್ಯಾಯರನ್ನು ಕುರಿತ “ನಾನೊಂದು ಕನಸು ಕಂಡೆ” ಎಂಬ ಹೆಸರಿನಲ್ಲಿ ಸರೋಜಿನಿ ಶಿಂತ್ರಿಯವರು ಬರೆದಿರುವ ಕೃತಿಗಳೂ ಕೂಡ ಉಲ್ಲೇಖನೀಯ. ಸಮಕಾಲೀನ ರಾಜಕೀಯ ವ್ಯಕ್ತಿಗಳನ್ನು ಕುರಿತು ಬರೆಯುವುದು ಅತ್ಯಂತ ಕಷ್ಟಕರವಾದ ಸಂಗತಿ. ಅವರ ಶತ್ರುಗಳು ಮತ್ತು ಮಿತ್ರರುಗಳೂ ಜೀವಂತವಾಗಿರುವ ಕಾಲದಲ್ಲಿ, ಅವರ ಬದುಕಿನ ಬಗೆಗೆ ಪರ-ವಿರೋಧಗಳು ಹಸಿಹಸಿಯಾಗಿರುವ ಸಂದರ್ಭದಲ್ಲಿ ಬರೆಯಲಾಗುವ ಜೀವನ ಚರಿತ್ರೆ ನಿಷ್ಪಕ್ಷಪಾತವಾಗಿರುವುದು ಕಷ್ಟ. ಇಂಥ ಕಡುಕಷ್ಟದ ಕಾಯಕವನ್ನು ಕೈಗೊಂಡು ಡಾ. ದೇ.ಜ.ಗೌ. ಅವರು ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ. ಇವರು ಬರೆದ ನಿಜಲಿಂಗಪ್ಪ ಮತ್ತು ಕೆ.ವಿ. ಶಂಕರಗೌಡ ಅವರ ಜೀವನಚರಿತ್ರೆಗಳು ಸಮಕಾಲೀನ ರಾಜಕಾರಣಿಗಳ ಜೀವನ ಚರಿತ್ರೆಗಳನ್ನು ಹೇಗೆ ಬರೆಯಬಹುದೆಂಬುದಕ್ಕೆ ಮಾದರಿಯಾಗಿವೆ. ಲೇಖಕರು ಮತ್ತು ಕೃತಿನಾಯಕರ ನಡುವಣ ಆಪ್ತ ಸಂಬಂಧಗಳ ಕಾರಣದಿಂದಾಗಿ ಅಲ್ಲಲ್ಲಿ ಅತ್ಯುಕ್ತಿಗಳು ತಲೆದೋರಿವೆಯೆನಿಸಿದರೂ ಈ ಕೃತಿಗಳ ರಚನೆಯಲ್ಲಿ ಅವರು ಕಲೆ ಹಾಕಿರುವ ಸಾಮಗ್ರಿ ಬೆರಗು ಹುಟ್ಟಿಸುತ್ತದೆ ಮಾತ್ರವಲ್ಲ, ನಿಜಜೀವನದ ಚರಿತ್ರೆಯನ್ನು ಬರೆಯುವ ಅವರ ಪ್ರಾಮಾಣಿಕ ಹಂಬಲಕ್ಕೆ ಸಾಕ್ಷಿ ನುಡಿಯುತ್ತದೆ. ಕರ್ನಾಟಕದ ಲೋಹಿಯಾ ಎನಿಸಿಕೊಂಡ ಶಾಂತವೇರಿ ಗೋಪಾಲಗೌಡರನ್ನು ಕುರಿತು ಡಾ. ವಿಷ್ಣುಮೂರ್ತಿ ಯವರು ರಚಿಸಿರುವ ಎರಡು ಕೃತಿಗಳು ಅವರ ಜನಪರ ಹೋರಾಟದ ಆದರ್ಶವನ್ನು ಖಚಿತ ವೈಚಾರಿಕ ನಿಲುವನ್ನು ಮತ್ತು ದಿಟ್ಟ ಪ್ರಾಮಾಣಿಕ ಬದುಕನ್ನು ಯಶಸ್ವಿಯಾಗಿ ಬಿಂಬಿಸಿವೆ. ಗೋಪಾಲಗೌಡರ ಬಗ್ಗೆ ಕೋಣಂದೂರು ವೆಂಕಪ್ಪನವರು ಸಂಪಾದಿಸಿರುವ “ಜೀವಂತ ಜಲೆ” ಎಂಬ ಕೃತಿ ಕೂಡ ಅವರ ಬದುಕಿನ ಬಹುಮುಖತೆಯನ್ನರಿಯಲು ಸಹಾಯಕವಾಗುವ ಪ್ರಮಾಣಭೂತ ಗ್ರಂಥ. ಕರ್ನಾಟಕದ ರಾಜಕಾರಣದಲ್ಲಿ ಅವಕಾಶವಂಚಿತ ಜನಾಂಗಗಳಿಗೆ ಪ್ರಾಣ ತ್ರಾಣಗಳನ್ನು ಕೊಟ್ಟ ದೇವರಾಜ ಅರಸು ಅವರನ್ನು ಕುರಿತು ವೆಂಕಪ್ಪನವರು ಸಂಪಾದಿಸಿರುವ ಗ್ರಂಥ ಕೂಡ ಈ ನಿಟ್ಟಿನಲ್ಲಿ ಅತ್ಯಂತ ಗಮನಾರ್ಹ ಕೃತಿ.

ಕನ್ನಡದಲ್ಲಿ ಸಾಹಿತಿಗಳು ಮತ್ತು ಕಲಾವಿದರನ್ನು ಕುರಿತು ಪ್ರಕಟಗೊಂಡಿರುವ ಜೀವನ ಚರಿತ್ರೆಗಳು, ಜೀವನ ಚರಿತ್ರೆಗಳ ಇತಿಹಾಸದಲ್ಲಿ ಅತ್ಯಂತ ಸತ್ವಪೂರ್ಣವೂ ಅಭ್ಯಾಸಪೂರ್ಣವೂ ಅಭಿಮಾನಾಸ್ಪದವೂ ಆಗಿವೆ. ನಮ್ಮ ಸಾಹಿತಿ ಕಲಾವಿದರ ಬಗ್ಗೆ ನಮ್ಮ ಲೇಖಕರು ತಾಳಿರುವ ಗೌರವದ ಮತ್ತು ಗಂಭೀರ ದೃಷ್ಟಿಯ ದ್ಯೋತಕಗಳಾಗಿ ಇವು ರಚನೆಗೊಂಡಿವೆ. ಈ ಗೌರವ ಶುದ್ಧ ಜೀವನ ಚರಿತ್ರೆಗಳ ರೂಪದಲ್ಲಿ, ಅಭಿನಂದನಾ ಗ್ರಂಥಗಳ ರೂಪದಲ್ಲಿ, ಮಕ್ಕಳಿಗೆ ಆಕರ್ಷಕವೆನಿಸುವ ಜೀವನದ ಪರಿಚಯ ರೂಪದಲ್ಲಿ ವ್ಯಕ್ತಿಚಿತ್ರಗಳ ರೂಪದಲ್ಲಿ ಹೊಮ್ಮಿದೆ. ಕರ್ನಾಟಕ ಪ್ರಹಸನ ಪಿತಾಮಹರೆಂದು ಅಭಿವರ್ಣಿತ ರಾದ ಕೈಲಾಸಂ ಅವರ ವಿಶಿಷ್ಟ ಸಂಕೀರ್ಣ ಬದುಕನ್ನು ಮತ್ತು ಅವರ ಬರಹಗಳ ಸೃಷ್ಟಿಯ ಹಿನ್ನೆಲೆ ಹಾಗೂ ಸ್ವರೂಪವನ್ನು ಕುರಿತು ೧೯೫೦ರಷ್ಟು ಹಿಂದೆಯೇ ಪ್ರಕಟವಾದ “ಕೈಲಾಸಂ ದರ್ಶನ”, ಕೈಲಾಸಂ ನೆನಪು, ಸ್ಮರಣ ಗ್ರಂಥಗಳು ಕೈಲಾಸಂ ಅವರ ಬದುಕು ಬರಹಗಳ ಅಧ್ಯಯನಕ್ಕೆ ಉತ್ತಮ ಪೀಠಿಕೆಗಳಾಗಿವೆ. ಕೆಲವು ಮುಖ್ಯ ಸಾಹಿತಿಗಳ ಬದುಕನ್ನು ಅವರವರ ನಿರೂಪಣೆಯಲ್ಲೇ ಸೆರೆಹಿಡಿಯಲಾದ ೧೯೫೧ರಷ್ಟು ಹಿಂದೆಯೇ ಪ್ರಕಟವಾದ ‘ಕನ್ನಡ ಸಾಹಿತ್ಯಜ್ಞರ ಆತ್ಮಕಥನ’ ಒಂದು ವಿಶಿಷ್ಟವಾದ ಕೃತಿ. ಪಾಶ್ಚಾತ್ಯ ಸಾಹಿತಿಗಳಂತೆ ತಮ್ಮ ಬದುಕಿನ ಬಗೆಗೆ ತಾವೇ ವಿಶ್ಲೇಷಿಸಿಕೊಂಡ ಆತ್ಮಕಥೆಗಳು ನಮ್ಮಲ್ಲಿ ತುಂಬಾ ವಿರಳವೆಂದೇ ಹೇಳಬೇಕು. ಇವುಗಳಲ್ಲಿ ಕುವೆಂಪು ಅವರ “ನೆನಪಿನ ದೋಣಿಯಲ್ಲಿ” ಎಂಬ ಎರಡು ಸಂಪುಟಗಳು, ಮಾಸ್ತಿಯವರ “ಭಾವ” ಎಂಬ ಹೆಸರಿನ ಮೂರು ಸಂಪುಟಗಳು, ಕಾರಂತರ ಹುಚ್ಚು ಮನಸ್ಸಿನ ಹತ್ತು ಮುಖಗಳು, ಸ್ಮೃತಿಪಟಲದಿಂದ ಕೃತಿಗಳು, ಕಟ್ಟೀಮನಿಯವರ “ಕಾದಂಬರಿಕಾರನ ಆತ್ಮಕತೆ” ಎಂಬ ಬರಹಗಳು, ದೇ.ಜ.ಗೌ. ಅವರ “ಹೋರಾಟದ ಬದುಕು” ಎಂಬ ಕೃತಿಯ ಎರಡು ಸಂಪುಟಗಳು ಇಲ್ಲಿ ಹೆಚ್ಚು ಉಲ್ಲೇಖಪಾತ್ರವಾಗಿವೆ.

ನಮ್ಮ ಸಂದರ್ಭದ ಮಹಾಲೇಖಕರಾದ ಕುವೆಂಪು ಅವರ ಬಾಲ್ಯ ಜೀವನ, ಅವರಿಗೆ ನಿಸರ್ಗದಿಂದ ಮತ್ತು ಗ್ರಾಮೀಣ ಬದುಕಿನಿಂದ ದೊರೆತ ಪ್ರೇರಣೆಗಳು, ಅವರ ಕಾವ್ಯಶಕ್ತಿ ಉದ್ದೀಪನೆಗೊಂಡ ವಿಧಾನ, ರಾಮಕೃಷ್ಣ, ವಿವೇಕಾನಂದ – ಮುಂತಾದ ಮಹಾವ್ಯಕ್ತಿಗಳ ಜೀವನ ಅವರನ್ನು ಪ್ರಭಾವಿಸಿದ ಬಗೆ, ಅವರ ಹಲವಾರು ಇಂಗ್ಲಿಷ್ ಕನ್ನಡ ಕವನಗಳು, ಕೃತಿಗಳು ಮೂಡಿದ ಸಂದರ್ಭಗಳು – ಇವುಗಳೆಲ್ಲದರ ಅಪೂರ್ವವೂ, ರೋಮಾಂಚಕಾರಿಯೂ ಆದ ವಿವರಗಳು ತುಂಬ ಅದ್ಭುತ ರೀತಿಯಲ್ಲಿ ನೆನಪಿನ ದೋಣಿಯಲ್ಲಿ ಅನಾವರಣಗೊಂಡಿವೆ. ಕವಿ ಜೀವನ ಹೇಗೆ ವಿಕಾಸವಾಯಿತೆಂಬ ರೋಚಕ ಹಿನ್ನೆಲೆ ಆತ್ಮಕತೆಯಲ್ಲಿ ದೊರೆಯುತ್ತದೆ. ಅವರ ಹಲವು ಕೃತಿಗಳನ್ನು ಮತ್ತು ಕೃತಿಗಳಲ್ಲಿ ವ್ಯಕ್ತವಾಗಿರುವ ದೃಷ್ಟಿಯನ್ನು ಅರ್ಥ ಮಾಡಿಕೊಳ್ಳಲು ಈ ಕೃತಿ ಒಂದು ಮಾರ್ಗದರ್ಶಕ ದೀಪಸ್ಥಂಭವಾಗಿದೆ. ಆದರೆ ಕುವೆಂಪು ಅವರ ಕಾವ್ಯ ಜೀವನದ ಆದ್ಯಂತದ ವಿವರಗಳು ಪೂರ್ಣವಾಗಿ ಇಲ್ಲಿ ದೊರೆಯದೆ ಕೃತಿ ಅಪೂರ್ಣಗೊಂಡಿರುವುದು ಸಾಹಿತ್ಯ ಪ್ರಿಯರಿಗೆ ಒಂದು ವಿಷಾದದ ಸಂಗತಿಯೆನಿಸುತ್ತದೆ. ನಮ್ಮ ಸಾಹಿತ್ಯದ ಹಲವು ಮುಖಗಳಿಗೆ ತಮ್ಮ ವಿಶಿಷ್ಟತೆಯ ಸ್ಪರ್ಶವನ್ನು ಮಾಡಿದ ಮತ್ತು ನಮ್ಮ ಸಾಹಿತಿಗಳನೇಕರ ಬದುಕಿನಲ್ಲಿ ದೊಡ್ಡ ಪ್ರೇರಣೆಯಾಗಿರುವ ಮಾಸ್ತಿಯವರ ವಿವರಗಳು ಅವರ ಕೃತಿಯಲ್ಲಿ ಅನ್ಯಾದೃಶ್ಯವಾಗಿ ಬಿಚ್ಚಿಕೊಂಡಿವೆ. ಅವರ ಬಾಲ್ಯದ ಬಡತನದ ಬದುಕು, ಪ್ರಯತ್ನ ಪರಿಶ್ರಮಗಳಿಂದೇರಿದ ಎತ್ತರ, ವೃತ್ತಿ ಜೀವನದ ಸಿಹಿ-ಕಹಿ ಪ್ರಸಂಗಗಳು, ಅವರ ಸಾಹಿತ್ಯದ ವಸ್ತು ಸಂಗತಿಗಳಿಗೆ ಸ್ಫೂರ್ತಿಯಾದ ಸಂದರ್ಭಗಳು, ಅವರ ಬದುಕಿನಲ್ಲಿ ಹಾದುಹೋದ ವ್ಯಕ್ತಿಗಳು, ಅವರ ಕೃತಿಗಳ ಹಿನ್ನೆಲೆಗಳು ಇತ್ಯಾದಿಗಳೆಲ್ಲ ಅತ್ಯಂತ ಸರಳವೂ, ಆಪ್ತವೂ ಆದ, ನಿರೂಪಣೆಯನ್ನು ಪಡೆದುಕೊಂಡಿವೆ.

ಮಾಸ್ತಿಯವರ ಜೀವನ ಹಾಗೂ ಕೃತಿಗಳನ್ನರಿಯಲು ಇದೊಂದು ಆಕರ ಗ್ರಂಥವಾಗಿದೆ. ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಮಾತ್ರವಲ್ಲದೆ, ಬದುಕಿನ ನಾನಾ ಮುಖಗಳಲ್ಲಿ ಕಾರಂತರು ತೊಡಗಿಕೊಂಡ ಬಗೆ, ಅವರ ಪ್ರಯೋಗಶೀಲತೆ, ಸತ್ಯ ನಿಷ್ಠುರತೆ ಸಾಹಸಶೀಲತೆಗಳು, ಅವರು ಸಂಚರಿಸಿದ ದೇಶಗಳು, ಕಂಡ ವ್ಯಕ್ತಿ-ದೃಶ್ಯಗಳು, ಬರೆದ ಕೃತಿಗಳು ಇವುಗಳ ಮುಖ್ಯವಾದ ಸಂಕ್ಷಿಪ್ತ ಹಿನ್ನೆಲೆಯ ಅಪೂರ್ವ ಮಾಹಿತಿಯನ್ನು ಅವರ ಆತ್ಮಕಥನ ದೊರಕಿಸುತ್ತದೆ. ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಇಷ್ಟೆಲ್ಲ ಸಾಧನೆಗಳನ್ನು ಮಾಡಬಲ್ಲನೇ ಎಂಬ ಬೆರಗು ನಮ್ಮನ್ನು ಆವರಿಸುವುದರ ಜೊತೆಗೆ, ಮನುಷ್ಯನ ಸಾಧನೆಯ ಪರಿಧಿಗಳನ್ನು ವಿಸ್ತರಿಸಿ ತೋರಿಸುವಂಥ ಗ್ರಂಥವಿದೆಂಬುದು ಮನವರಿಕೆಯಾಗುತ್ತದೆ. ಮೇಲಿನ ಮೂರೂ ಆತ್ಮಕಥನಗಳು ಕನ್ನಡಕ್ಕೆ ಮಾತ್ರವಲ್ಲ, ಎಲ್ಲಾ ಭಾಷೆಗೂ ಗೌರವ ತರುವಂಥ ಮಹತ್ವದ ಕೃತಿಗಳಾಗಿವೆ. ಕಟ್ಟೀಮನಿಯವರ ಕೃತಿ ಅವರ ಹಳ್ಳಿಯ ಬವಣೆಯ ಬದುಕನ್ನು, ಅವರ ಮಲ್ಯ-ನಿಷ್ಠುರವಾದ ವಿಚಾರಹರಿಯನ್ನು, ಜನಪರ ಹೋರಾಟದ ನಿಲುವನ್ನು ಮತ್ತು ಅವರ ಬರಹದ ಪಥ ನಿರ್ಮಾಣಗೊಂಡ ಚಿತ್ರವನ್ನು ತುಂಬಾ ಸೊಗಸಾಗಿ ಸೆರೆಹಿಡಿಯುತ್ತದೆ. ದೇ.ಜ.ಗೌ. ಅವರ ಹೋರಾಟದ ಬದುಕು ಒಂದು ವಿಶಿಷ್ಟ ಕೃತಿ. ಗುಡಿಸಿಲಿನಲ್ಲಿ ಹುಟ್ಟಿ, ಹಳ್ಳಿಯ ಪರಿಸರ ತಂದೊಡ್ಡುವ ನೂರಾರು ಅಡ್ಡಿ ಆತಂಕಗಳ ನಡುವೆ ತನ್ನ ಬದುಕಿನ ಗೆರೆಯನ್ನು ಗುರ್ತಿಸಿಕೊಂಡು, ತಮ್ಮ ಸತತ ಪ್ರಯತ್ನಶೀಲತೆಯಿಂದ; ಶ್ರದ್ಧೆ, ಹಠ, ಛಲ ಗಳಿಂದ ತಮ್ಮ ಬದುಕನ್ನು ಶಿಲ್ಪಿಸಿಕೊಂಡು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಯಾಗುವ ಎತ್ತರಕ್ಕೆ ಬೆಳೆದ ತಮ್ಮ ಚೇತನವನ್ನು ದೇ.ಜ.ಗೌ. ಇಲ್ಲಿ ಪ್ರಾಂಜಲವಾಗಿ ನಿರೂಪಿಸಿದ್ದಾರೆ. ಇವೆರಡೂ ಸಂಪುಟಗಳನ್ನು ಗಮನಿಸಿದಾಗ ಅವರು ಬರೆಯದೆ ಬಿಟ್ಟ ಹಲವಾರು ಸಂಗತಿಗಳು ಇವೆ ಎನಿಸುತ್ತದೆ. ಆಡಳಿತ ಜೀವನದ ನಡುವೆಯೂ ವಿರಾಮ ದೊರಕಿಸಿಕೊಂಡು ಜೀವನದೀಕ್ಷೆಯೆಂಬಂತೆ ತಮ್ಮ ಅವಿರತ ದುಡಿಮೆಯಿಂದ ಅವರು ರಚಿಸಿದ ೭೦ಕ್ಕೂ ಹೆಚ್ಚಿನ ಕೃತಿಗಳ ಬರವಣಿಗೆಯ ಹಿನ್ನೆಲೆಯನ್ನು ಈ ಆತ್ಮಕಥನ ಒಳಗೊಂಡಿದ್ದರೆ ಈ ಕೃತಿ ಇನ್ನೂ ಹೆಚ್ಚು ಸುಪುಷ್ಟವೂ, ಉಪಯುಕ್ತವೂ ಆಗುತ್ತಿತ್ತೆನಿಸುತ್ತದೆ. ಓಜಃ ಪೂರ್ಣವಾದ, ಭಾವದೀಪ್ತವಾದ ಈ ಕೃತಿಯ ಶೈಲಿ ಕೂಡ ಅನನ್ಯವಾಗಿದೆ.

ನಮ್ಮ ಸಾಹಿತಿಗಳನ್ನು ಕುರಿತ ಅಭಿನಂದನಾ ಗ್ರಂಥಗಳು ಜೀವನ ಚರಿತ್ರೆಯ ಮತ್ತೊಂದು ಮುಖವನ್ನು ತೆರೆಯುತ್ತವೆ. ಕುವೆಂಪು ಅವರನ್ನು ಕುರಿತ ಉಡುಗೊರೆ, ಕವಿಶೈಲ, ಗಂಗೋತ್ರಿ, ಸಹ್ಯಾದ್ರಿ, ಅವಲೋಕನ – ಗ್ರಂಥಗಳು ಕುವೆಂಪು ಅವರ ಜೀವನ ಮತ್ತು ಕೃತಿಗಳ ಆಳವಾದ ಪರಿಚಯವನ್ನು ಮಾಡಿಕೊಡಲು ಪ್ರಯತ್ನಿಸಿರುವ ಮುಖ್ಯ ಗ್ರಂಥಗಳು. ಅದರಲ್ಲೂ ಗಂಗೋತ್ರಿ ಮತ್ತು ಸಹ್ಯಾದ್ರಿ ಗ್ರಂಥಗಳು ಅಭಿನಂದನಾ ಗ್ರಂಥಗಳ ಇತಿಹಾಸದಲ್ಲಿಯೇ ಮಹತ್ವಪೂರ್ಣವಾಗಿದ್ದು ನೂರಾರು ವ್ಯಕ್ತಿಗಳು ಅವರ ಜೀವನವನ್ನು ಮತ್ತು ಕೃತಿಗಳನ್ನು  ಶ್ರದ್ಧೆಯಿಂದ ಕಂಡ ವಿಶಿಷ್ಟ ಒಳನೋಟಗಳ ಅಭೂತಪೂರ್ವ ಚಿತ್ರಗಳಾಗಿವೆ. ಇವು ಇತಿಹಾಸ ಕಾರರಿಗೆ ಮತ್ತು ಸಾಹಿತ್ಯ ವಿಮರ್ಶಕರಿಗೆ ಅತ್ಯಂತ ಅಗತ್ಯವಾದ ಮಹತ್ವದ ಸಾಮಗ್ರಿ ಯೆನ್ನೊದಗಿಸುತ್ತವೆ. ಬಿ.ಎಂ.ಶ್ರೀಯವರನ್ನು ಕುರಿತಾದ ಸಂಭಾವನೆ, ಪಂಜೆಯವರನ್ನು ಕುರಿತಾದ ‘ಪಂಜೆಯವರ ನೆನಪಿಗಾಗಿ’, ‘ಮುಳಿಯ ತಿಮ್ಮಪ್ಪಯ್ಯನವರನ್ನು ಕುರಿತ ಶ್ರದ್ಧಾಂಜಲಿ, ದಿವಾಕರರನ್ನು ಕುರಿತ ಕರ್ನಾಟಕ ದರ್ಶನ, ಎಸ್.ವಿ. ರಂಗಣ್ಣನವರನ್ನು ಕುರಿತ ಬಾಗಿನ, ಕೆ.ಜಿ. ಕುಂದಣಗಾರರನ್ನು ಕುರಿತ “ಕುಂದಣ”, ಫ.ಗು. ಹಳಕಟ್ಟಿಯವರನ್ನು ಕುರಿತ “ವಚನಶಾಸ್ತ್ರ ಪಿತಾಮಹ”,  ಎ.ಆರ್. ಕೃಷ್ಣಶಾಸ್ತ್ರಿಯವರನ್ನು ಕುರಿತ “ಅಭಿನಂದನೆ”, ಮಾಸ್ತಿಯವರನ್ನು ಕುರಿತ “ಶ್ರೀನಿವಾಸ ಮತ್ತು ಶ್ರೀನಿವಾಸ ಸಾಹಿತ್ಯ”, ಗೋಕಾಕರನ್ನು ಕುರಿತ “ವಿನಾಯಕ ವಾಜ್ಮಯ”, ಕಾರಂತರನ್ನು ಕುರಿತ “ಕಾರಂತ ಪ್ರಪಂಚ”, ಕಟ್ಟೀಮನಿ ಯವರನ್ನು ಕುರಿತ “ಕಟ್ಟೀಮನಿ ಬದುಕು ಬರಹ”, ದೇ.ಜ.ಗೌ. ಅವರನ್ನು ಕುರಿತ “ದೇ.ಜ.ಗೌ. ೫೦”, “ಅಂತಃಕರಣ”, “ರಸಷಷ್ಟಿ”, “ಎಪ್ಪತ್ತರ ಹೊಸ್ತಿಲಲ್ಲಿ” ತೀ.ನಂ.ಶ್ರೀ ಯವರನ್ನು ಕುರಿತ “ಶ್ರೀಕಂಠತೀರ್ಥ”, “ಡಿ.ಎಲ್.ಎನ್.ರನ್ನು ಕುರಿತ “ಉಪಾಯನ” ತ.ಸು. ಶಾಮರಾಯರನ್ನು ಕುರಿತ “ಸ್ವಸ್ತಿ”, ಡಾ. ತಿಪ್ಪೇರುದ್ರಸ್ವಾಮಿಯವರನ್ನು ಕುರಿತ “ಶಿವಚಿಂತನೆ” ಮುಂತಾದ, ಒಂದಕ್ಕಿಂತ ಒಂದು ಗಾತ್ರದಲ್ಲಿ ಗುಣದಲ್ಲಿ ಅತಿಶಯವಾದ ಅಭಿನಂದನಾ ಗ್ರಂಥಗಳು ಕನ್ನಡದ ಸಾಹಿತ್ಯ ಸಂಪತ್ತನ್ನು ಗಮನಾರ್ಹವಾಗಿ ವರ್ಧಿಸಿವೆ ಮಾತ್ರವಲ್ಲ, ನಮ್ಮ ಮುಖ್ಯ ಲೇಖಕರ ಜೀವನಧೋರಣೆಗಳನ್ನು ಮತ್ತು ಸಾಹಿತ್ಯಿಕ ಸಾಧನೆಗಳನ್ನು ತುಂಬಾ ಸಮರ್ಥವಾಗಿ ನಿರೂಪಿಸಿವೆ.