ಕಾದಂಬರಿಗಳಾದರೂ ಜೀವನ ಚರಿತ್ರೆಯ ವಾಸ್ತವಗೆರೆಗಳನ್ನು ಮಿಂಚಿಸುವ, ಆ ಮೂಲಕ ವ್ಯಕ್ತಿ ಜೀವನದೆಡೆಗೆ ಹೊಸಬೆಳಕನ್ನು ಹಾಯಿಸುವ ಕೆಲವು ಕೃತಿಗಳು ನಮ್ಮಲ್ಲಿ ಬಂದಿವೆ. ತ.ರಾ.ಸು. ಅವರ “ನೃಪತುಂಗ”, “ಶಿಲ್ಪಶ್ರೀ”, ಡಾ. ಎಚ್. ತಿಪ್ಪೇರುದ್ರಸ್ವಾಮಿಯವರ “ಕದಳಿಯ ಕರ್ಪೂರ”, “ಪರಿಪೂರ್ಣದೆಡೆಗೆ”, ಜಡದಲ್ಲಿ ಜಂಗಮ, ಜ್ಯೋತಿ ಉರಿಯುತಿದೆ, ಕರ್ತಾರನ ಕಮ್ಮಟ, ಡಾ. ಜಿ.ಎಸ್. ಶಿವರುದ್ರಪ್ಪನವರ ‘ಕರ್ಮಯೋಗಿ’, ಬಿ. ಪುಟ್ಟಸ್ವಾಮಯ್ಯನವರ “ಕ್ರಾಂತಿ ಕಲ್ಯಾಣ” ಮುಂತಾದವು ಈ ಸಾಲಿಗೆ ಸೇರುತ್ತವೆ. ಇತಿಹಾಸದ ಚೌಕಟ್ಟಿನಲ್ಲಿ ಕಲ್ಪನೆಯ ಕಾಮನಬಿಲ್ಲನ್ನು ನೇಯ್ದ ಈ ಕೃತಿಗಳು ಈ ಮಹಾವ್ಯಕ್ತಿತ್ವಗಳ ಚೇತನವನ್ನು ಧ್ವನಿಪೂರ್ಣವಾಗಿ ಹಿಡಿದಿಟ್ಟಿವೆ. ದ.ಬ. ಕುಲಕರ್ಣಿಯವರ ಬದುಕು ಬಾಳು-ಲೇಖಕನೊಬ್ಬ ಬವಣೆ-ಬಡತನಗಳ ಮಧ್ಯದಲ್ಲೂ ಸಾಹಿತ್ಯ ಸೃಷ್ಟಿಯನ್ನು ಸಾಧಿಸಿದ ರೋಚಕ ಕೃತಿ. ವಸುದೇವ ಭೂಪಾಲಂರವರ “ಗೊಂಚಲ್ಮಿಂಚು”, ದೇ.ಜ.ಗೌ. ಅವರ “ಸಾಹಿತಿಗಳ ಸಂಗದಲ್ಲಿ” ಮತ್ತು “ದಾರಿದೀಪಗಳು”, ಎಚ್.ಜೆ. ಲಕ್ಕಪ್ಪಗೌಡರ “ಗೋಪುರದ ದೀಪಗಳು”, ಕಮಲಾ ಹಂಪನಾ ಅವರ “ಮುಗಿಲ ಮಲ್ಲಿಗೆ”, ಸಿ.ಪಿ.ಕೆ. ಅವರ “ಹಿರಿಯರ ಗೆರೆಗಳು”, ಮಹಾಬಲೇಶ್ವರ ಭಟ್ಟರ “ಸಾಹಿತ್ಯ ಶಿಲ್ಪಿಗಳು” ಮುಂತಾದವು ಸಂಕ್ಷಿಪ್ತವಾದ ಶಿಸ್ತಿನಲ್ಲಿ ಹಿರಿಯ ಲೇಖಕರ ಜೀವನ, ಸಾಧನೆಗಳನ್ನು ಸಾರ್ಥಕವಾಗಿ ಮಿಂಚಿಸುವ ಸಫಲ ಪ್ರಯತ್ನಗಳು. ಇವಲ್ಲದೆ ಕನ್ನಡ ಸಾಹಿತ್ಯ ಪರಿಷತ್ತು, ಪಂಪ, ಕುಮಾರವ್ಯಾಸ, ರನ್ನ, ಹರಿಹರ, ಲಕ್ಷ್ಮೀಶ – ಮುಂತಾದವರ ಜೀವನ ಹಾಗೂ ಕೃತಿಗಳ ವಿಶ್ಲೇಷಣಾತ್ಮಕ ಗ್ರಂಥಗಳನ್ನು ಪ್ರಕಟಿಸಿರುವುದು ಇಲ್ಲಿ ಸ್ಮರಣೀಯ. ಇವು ಮೂಲತಃ ಸಾಹಿತ್ಯ ವಿಮರ್ಶೆಯ ವರ್ಗಕ್ಕೆ ಸೇರಿದರೂ ಅವು ತೋರುವ ಕವಿ ಜೀವನದ ಬೆಳಕನ್ನು ನಾವು ನಿರಾಕರಿಸುವಂತಿಲ್ಲ. ದೇ.ಜ.ಗೌ. ಬರೆದಿರುವ “ರಾಷ್ಟ್ರಕವಿ ಕುವೆಂಪು” ನಮ್ಮ ಕಾಲದ ಮೇರು ಸಾಹಿತಿಯೊಬ್ಬರ ಅದ್ವಿತೀಯ ಸಾಧನೆಯ ಭವ್ಯಚಿತ್ರ. ಕೃತಿಯ ನಾಯಕ ಮತ್ತು ಲೇಖಕ ಏಕ ಮನೋಧರ್ಮದವ ರಾಗಿರುವಾಗ ಮತ್ತು ತನ್ನ ನಾಯಕನ ಬಗ್ಗೆ ಲೇಖಕನಿಗೆ ಅಪಾರ ಅದರ ಅಭಿಮಾನಗಳಿರುವಾಗ ಎಂಥ ಉತ್ಕೃಷ್ಟ ಕೃತಿ ಮೂಡಬಲ್ಲುದೆಂಬುದಕ್ಕೆ ಇದು ಸಾಕ್ಷಿಯಾಗಿದೆ. ನೆರಂಗರು ಬರೆದ “ಕವಿ ವಿನಾಯಕ”, ಹುರುಳಿಯವರು ರಚಿಸಿದ “ಪೂಜ್ಯ ಉತ್ತಂಗಿಯವರ ಜೀವನ ಚರಿತ್ರೆ”, ಕಮಲಾ ಹಂಪನಾ ಅವರ “ಹೆಳವನ ಕಟ್ಟೆ ಗಿರಿಯಮ್ಮ”, ತ.ರಾ.ಸು. ಅವರ “ಪದ್ಮಭೂಷಣ” ಡಾ. ಡಿ.ವಿ. ಗುಂಡಪ್ಪ, ವಿ.ಎಂ. ಇನಾಂದಾರರ “ಬಿ.ಎಂ.ಶ್ರೀ. ಬದುಕು ಬರಹ”, ಡಾ. ಹಾ.ಮಾ.ನಾ. ಮತ್ತು ಶ್ರೀಧರರು ಬರೆದಿರುವ “ರವೀಂದ್ರನಾಥ ಠಾಕೂರರ ಬಗೆಗಿನ ಕೃತಿಗಳು”, ಪ್ರಭುಶಂಕರರ “ಕುವೆಂಪು”, ಡಾ. ಎಂ. ಚಿದಾನಂದಮೂರ್ತಿಯವರ “ಬಸವಣ್ಣ” ನವರು, ಡಾ. ಸಾ.ಶಿ. ಮರುಳಯ್ಯನವರ “ಮಧುರ ಚೆನ್ನ”, ಜಿ. ವರದರಾಯ ಪೈ ಅವರ “ಎಂ.ಎಸ್. ಕಾಮತ್” ಮೊದಲಾದ ಕೃತಿಗಳು ವಿವಿಧ ಗಾತ್ರದಲ್ಲಿ ಮತ್ತು ಪಾತ್ರದಲ್ಲಿ ನಮ್ಮ ಸಾಹಿತಿಗಳ ಬದುಕನ್ನು ಸ್ಮರಣೀಯವಾಗಿ ಸೆರೆಹಿಡಿದ ಕೃತಿಗಳಾಗಿವೆ. ಖ್ಯಾತ ಏಕಾಂಕಕಾರ ಎನ್ಕೆಯವರ ಬದುಕನ್ನು ಕುರಿತು ಸಿದ್ಧಲಿಂಗಪಟ್ಟಣಶೆಟ್ಟಿಯವರು ಸಂಪಾದಿಸಿದ “ನಾನಿಯ ನೆನಪುಗಳು” ಮತ್ತೊಂದು ಗಮನಾರ್ಹವಾದ ಕೃತಿ. ಅ.ನ.ಕೃ. ಅವರು ಕನ್ನಡದ ದಿಗ್ಗಜಗಳನ್ನು ಕುರಿತು ಬಹಳ ಹಿಂದೆಯೇ ಕೃತಿಯನ್ನು ರಚಿಸಿದ್ದುಂಟು. ನಮ್ಮ ಹಿರಿಯ ಸಾಹಿತಿಗಳಾದ ವಿ.ಸೀ. ಅವರು ಮತ್ತು ಡಿ.ವಿ.ಜಿ. ಅವರು ತಮ್ಮ ವಲಯಕ್ಕೆ ಬಂದ ಮೆಚ್ಚಿನ ಹತ್ತಾರು ಲೇಖಕರನ್ನು ಕುರಿತು ತುಂಬಾ ಆತ್ಮೀಯವಾದ ವ್ಯಕ್ತಿ ಚಿತ್ರಗಳನ್ನು ನೀಡಿದ್ದಾರೆ. ಈ ದೃಷ್ಟಿಯಿಂದ ವಿ.ಸೀ.ಯವರ “ಮಹನೀಯರು”, ಡಿ.ವಿ.ಜಿ.ಯವರ “ಜ್ಞಾಪಕ ಚಿತ್ರಶಾಲೆ”, ವಿಶಿಷ್ಟವಾದ ಕೃತಿಗಳು. ಉಡುಪಿಯ ಎಂ.ಜಿ.ಎಂ. ಕಾಲೇಜು, ಕಾರಂತ, ಪು.ತಿ.ನ., ವಿ.ಸೀ., ಗೋವಿಂದ ಪೈ ಮುಂತಾದ ಸಾಹಿತಿಗಳನ್ನು ಕುರಿತು ಕಿರುಹೊತ್ತಿಗೆಗಳನ್ನು ಪ್ರಕಟಿಸಿದೆ. ಕರ್ನಾಟಕದ ಮೂರು ವಿಶ್ವವಿದ್ಯಾಲಯಗಳು ಸಾಹಿತಿಗಳ ಜೀವನ ಪರಿಚಯ ವನ್ನುಳ್ಳ ಕಿರುಹೊತ್ತಿಗೆಗಳನ್ನು ಪ್ರಕಟಿಸಿ ಸಾಮಾನ್ಯ ಓದುಗರಿಗೆ ನಮ್ಮ ಲೇಖಕರ ಕಿರುಪರಿಚಯವನ್ನು ಮಾಡಿಕೊಟ್ಟಿವೆ. ಕನ್ನಡ ಸಾಹಿತ್ಯ ಪರಿಷತ್ತು ಆಲೂರು ವೆಂಕಟರಾಯರು, ಎಚ್.ವಿ. ನಂಜುಂಡಯ್ಯ, ಮಧುರ ಚೆನ್ನ, ರಾ. ನರಸಿಂಹಾಚಾರ್ಯ, ಗಳಗನಾಥ, ಸುಬೋಧ ರಾಮರಾಯರು, ಮುಳಿಯ ತಿಮ್ಮಪ್ಪಯ್ಯ, ಅ.ನ.ಕೃ., ಎಂ.ಆರ್. ಶ್ರೀ, ತ್ರಿವೇಣಿ, ಚ. ವಾಸುದೇವಯ್ಯ, ಬಿ.ಎಂ.ಶ್ರೀ., ಗೋವಿಂದ ಪೈ ಮುಂತಾದ ಸಾಹಿತ್ಯ ಕ್ಷೇತ್ರದ ಮಹಾಬಲರನ್ನು ಕುರಿತು ಪರಿಚಯಾತ್ಮಕ ಗ್ರಂಥಗಳನ್ನು ಪ್ರಕಟಿಸುವುದರ ಮೂಲಕ ಅವರ ಸಾಧನೆಯನ್ನು ಸಾಮಾನ್ಯ ಜನತೆಯ ಮನಸ್ಸಿನಲ್ಲಿ ಬಿಂಬಿಸಲು ಸಾರ್ಥಕ ಪ್ರಯತ್ನ ಮಾಡಿದೆ. ಇತ್ತೀಚೆಗೆ ತಾನೇ ಪ್ರಕಟವಾದ ಖ್ಯಾತ ಕಲಾವಿದ ಕೆ.ಕೆ. ಹೆಬ್ಬಾರರ ಕಲೆ ಮತ್ತು ಬದುಕನ್ನು ಕುರಿತ ಪ್ರೊ. ಕು.ಶಿ. ಹರಿದಾಸಭಟ್ಟರ ಕೃತಿ ಜೀವನ ಚರಿತ್ರೆಗಳ ಸಾಲಿನಲ್ಲಿ ಇತ್ತೀಚಿನ ಒಂದು ಉತ್ಕೃಷ್ಟ ಬರಹವಾಗಿದೆ.

ನಮ್ಮ ಕಲಾರಂಗದ ಧೀಮಂತ ವ್ಯಕ್ತಿಗಳನ್ನು ಕುರಿತು ಹಲವು ಕೃತಿ ಪ್ರಕಟವಾಗಿರುವುದು ಗಮನಾರ್ಹವಾಗಿದೆ. ರಾಷ್ಟ್ರದ ಗಡಿಯನ್ನು ದಾಟಿ ಧವಳಕೀರ್ತಿಯನ್ನು ಸಂಪಾದಿಸಿದ ಸಂಗೀತ ಕ್ಷೇತ್ರದ ಮಹಾಸಾಧಕ ಡಾ. ಮಲ್ಲಿಕಾರ್ಜುನ ಮನ್ಸೂರರ “ನನ್ನ ರಸಯಾತ್ರೆ” ಸಂಗೀತ ಕಲಾವಿದನೊಬ್ಬನ ಸಾಧನೆಯ ಜ್ಯೋತಿಃ ಪಥದ ಸುಂದರ ಚಿತ್ರಣ. ಮನ್ಸೂರರು ಇಲ್ಲಿ ವಸ್ತುನಿಷ್ಠವಾಗಿ, ಸರಳವಾಗಿ ತಮ್ಮ ಬದುಕಿನ ವಿವರಗಳನ್ನು ಹೃದಯಸ್ಪರ್ಶಿಯಾಗಿ ಬಿಚ್ಚಿಟ್ಟಿದ್ದಾರೆ. ಇದೇ ಸಾಲಿಗೆ ಸೇರುವ ಮತ್ತೊಂದು ಉತ್ತಮ ಆತ್ಮಕಥೆ ಶ್ರೀ ಜೋಳದ ರಾಶಿ ದೊಡ್ಡಣ್ಣ ಗೌಡರದು. ಶ್ರೀ ಅ.ನ.ಕೃ. ಅವರು ಮೊತ್ತಮೊದಲ ಬಾರಿಗೆ ವೀಣೆಶೇಷಣ್ಣ, ಪಿಟೀಲು ಚೌಡಯ್ಯ, ವರದಾಚಾರ್ ಮುಂತಾದ ಸಂಗೀತ, ಚಿತ್ರ ಹಾಗೂ ನಾಟಕ ಕ್ಷೇತ್ರದ ಮಹಾನ್ ಕಲಾವಿದರ ಬದುಕನ್ನು ಕುರಿತು ‘ಕರ್ನಾಟಕದ ಕಲಾವಿದರು’ ಎಂಬ ಹೊತ್ತಿಗೆ ಯೊಂದನ್ನು ಪ್ರಕಟಿಸಿ ಕಲಾವಿದ ಬದುಕಿನ ಬಗ್ಗೆ ಜನಮನದ ಗಮನವನ್ನು ಸೆಳೆದಿದ್ದರು. ಇದೇ ಸಂದರ್ಭದಲ್ಲಿ ಮತ್ತೊಂದು ಮಹತ್ವದ ಕೃತಿಯನ್ನು ನೆನೆಯಬೇಕು. ಅದು ಸುಪ್ರಸಿದ್ಧ ನಾಟಕ ಕಲಾವಿದ, ನಾಟಕರತ್ನ ಗುಬ್ಬಿ ವೀರಣ್ಣನವರ ಕಲೆಯೇ ಕಾಯಕ. ಸತತ ಸಾಧನೆ, ಅವಿರತ ಪ್ರಯತ್ನ, ಕಲೆಯ ಗೀಳು, ಸ್ವಯಾರ್ಜಿತ ಪ್ರತಿಭೆ ಮತ್ತು ವ್ಯವಹಾರ ಜ್ಞಾನಗಳು ಒಗ್ಗೂಡಿದಾಗ ಕಲಾವಿದ ಯಾವ ಎತ್ತರಕ್ಕೇರಬಲ್ಲನೆಂಬುದನ್ನು ಈ ಕೃತಿ ಕುತೂಹಲಭರಿತ ವಾಗಿ ಮತ್ತು ಮನೋಜ್ಞವಾಗಿ ವಿವರಿಸುತ್ತದೆ. “ಚಿಗುರು ನೆನಪು” ಎಂಬ ಕೃತಿಯನ್ನು ಶಾ.ಮ. ಕೃಷ್ಣರಾಯರು ಪ್ರಕಟಿಸಿದ್ದಾರೆ. ಇದು ಹಿರಿಯರಾದ ಕಲಾವಿದ ಬಸವರಾಜ ಮನ್ಸೂರರರ ಆತ್ಮಕತೆ. ರಂಗ ಜೀವನದ ಅಂತಃಕರಣ ಕಲಕುವ ಒಳನೋಟಗಳು ಇಲ್ಲಿ ದೊರೆಯುತ್ತವೆ. ಹ.ವೆಂ. ಸೀತಾರಾಮಯ್ಯನವರ “ಕರ್ನಾಟಕ ರಂಗ ಕಲಾವಿದರು” ಎಂಬ ಸಾಮಾನ್ಯ ಜನರ ಮನಸ್ಸಿನಿಂದ ಬಹುಬೇಗ ಮರೆಯಾಗುವ ಕಲಾವಿದರ ಹಿರಿಮೆಯನ್ನು ತುಂಬಾ ಆಪ್ತವಾಗಿ ಚಿತ್ರಿಸುವ ಗಮನೀಯವಾದ ಕೃತಿ. ಹಿರೇಮಠ ಗವೀಸರ “ಕಲಾವಿದರು ನಡೆದು ಬಂದ ದಾರಿ”, ಎಸ್. ನಾಗರಾಜ್ ಬರೆದ “ಡಾ. ರಾಜಕುಮಾರ್” ಕೃತಿಗಳನ್ನು ಇಲ್ಲಿಯೇ ಹೆಸರಿಸಬೇಕು. ಮ.ಸು. ಕೃಷ್ಣಮೂರ್ತಿಯವರ ‘ವಾಗ್ಗೇಯಕಾರ ವಾಸುದೇವಾ ಚಾರ್ಯ’, ಎಸ್. ಕೃಷ್ಣಮೂರ್ತಿಯವರ “ಸಂಗೀತ ಕಲಾನಿಧಿ” ಕೃತಿಗಳು ವಾಸುದೇವಾ ಚಾರ್ಯರ ಸಂಗೀತ ಸಾಧನೆಯ ಉಜ್ವಲತೆಯನ್ನು ಮುಂದಿಡುತ್ತವೆ. ಡಿ.ವಿ.ಜಿ.ಯವರ “ಕಲೋಪಾಸಕರು”, ಸ್ವತಃ ಕಲೋಪಾಸಕರಾದ ಲೇಖಕರ ಬದುಕಿನಲ್ಲಿ ಮಹತ್ವದ ಸ್ಪಂದನಗಳನ್ನೇಳಿಸಿದ ಹತ್ತಾರು ಕಲಾವಿದರ ನೆನಪಿನ ಚಿತ್ರಶಾಲೆಯಾಗಿದೆ. ಅಲ್ಲದೆ, ವೀಣೆ ಶೇಷಣ್ಣ, ಚೌಡಯ್ಯ, ದೇವೇಂದ್ರಪ್ಪ, ಹೊನ್ನಪ್ಪ ಭಾಗವತರ್, ವರದಾಚಾರ್ಯ – ಮುಂತಾದ ಶ್ರೇಷ್ಠ ಕಲಾವಿದರನ್ನು ಕುರಿತ ಜೀವನಚರಿತ್ರೆಗಳು ಕೂಡ ಈ ಅವಧಿಯಲ್ಲಿ ಪ್ರಕಟವಾಗಿವೆ. ಚಿತ್ರ ಕಲಾವಿದ ತಿಪ್ಪೇಸ್ವಾಮಿಯವರನ್ನು ಕುರಿತು ಡಾ. ಜೀ.ಶಂ.ಪ., ಪಿಕಾಸೋವನ್ನು ಕುರಿತು ಸುರೇಶ ಕುಲಕರ್ಣಿ-ಚಿಕ್ಕಹೊತ್ತಿಗೆಗಳನ್ನು ಬರೆದು ಪರಿಚಯಿಸಿದ್ದಾರೆ. ಐ.ಬಿ.ಎಚ್. ಪ್ರಕಾಶನ, ವಯಸ್ಕರ ಶಿಕ್ಷಣ ಸಮಿತಿ, ನ್ಯಾಶನಲ್ ಬುಕ್ ಟ್ರಸ್ಟ್, ಸಾಹಿತ್ಯ ಅಕಾಡೆಮಿ – ಮುಂತಾದ ಸಂಸ್ಥೆಗಳು ಈ ಸಾಹಿತಿ ಕಲಾವಿದರ ಬದುಕನ್ನು ಕುರಿತು ಮಕ್ಕಳಿಗೆ ಮತ್ತು ಹೊಸದಾಗಿ ಅಕ್ಷರಾಭ್ಯಾಸ ಮಾಡುವವರಿಗೆ ಹಾಗೂ ಸಾಹಿತ್ಯ ಪ್ರವೇಶಕರಿಗೆ ಮಾಹಿತಿ ಒದಗಿಸುವಂಥ ನೂರಾರು ಸಂಖ್ಯೆಯ ಹೊತ್ತಗೆಗಳನ್ನು ಪ್ರಕಟಿಸಿವೆ. ಇವೆಲ್ಲ ಪೂರ್ಣ ಪ್ರಮಾಣದ ಜೀವನ ಚರಿತ್ರೆಗಳಲ್ಲವಾದರೂ ಈ ಪ್ರತಿಭಾವಂತರ ಮುಖ್ಯ ಸಾಧನೆಗಳತ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ ಎನ್ನಬೇಕು.

ಧಾರ್ಮಿಕ ಕ್ಷೇತ್ರದ ಬಗ್ಗೆ ಕನ್ನಡ ಲೇಖಕರ ವ್ಯಾಮೋಹ ಮರೆಯಾಗಿಲ್ಲ. ಅವರು ನಡೆದ ದಾರಿ, ಬೋಧಿಸಿದ ತತ್ವ ಇಂದೂ ಅನುಷ್ಠಾನಕ್ಕೆ ಅರ್ಹವಾಗಿದೆಯೆಂಬುದು ಈ ಲೇಖಕರ ನಂಬಿಕೆ. ಭಗವಾನ್ ಬುದ್ಧನನ್ನು ಕುರಿತ ಧರ್ಮಾನಂದ ಕೋಸಂಬಿಯವರ ಉದ್ಗ್ರಂಥ ಕನ್ನಡಕ್ಕೆ ಅನುವಾದವಾಗಿ ಬಂದಿದೆ. ಬುದ್ಧನನ್ನು ಕುರಿತು ಹೊರಬಂದಿರುವ ಮಕ್ಕಳ ಪುಸ್ತಕಗಳಂತೂ ಲೆಕ್ಕವಿಲ್ಲ. ಭಗವಾನ್ ಮಹಾವೀರನನ್ನು ಕುರಿತು ಚಿಕ್ಕ ಕೃತಿಗಳಲ್ಲದೆ ಮಿರ್ಜಿ ಅಣ್ಣಾರಾಯ ಮತ್ತು ವಸಂತರಾಜಯ್ಯ ಅವರು ಬರೆದ ಗ್ರಂಥಗಳನ್ನು ಇಲ್ಲಿ ಉಲ್ಲೇಖಿಸಬೇಕು. ಉ.ಕ. ಸುಬ್ರಾಯಚಾರ್ಯರು ಏಸುಕ್ರಿಸ್ತನನ್ನು ಕುರಿತು ಒಂದು ಉತ್ತಮ ಗ್ರಂಥ ಬರೆದಿದ್ದಾರೆ. ದೇವದತ್ತ ಎಂಬುವರು “ಮಾನವಪುತ್ರ ಜೀಸಸ್” ಎಂಬ ಹೆಸರಿನಲ್ಲಿ ಖಲೀ ಗಿಬ್ರಾನನ ಕೃತಿಯನ್ನು ಅನುವಾದಿಸಿದ್ದಾರೆ. ಜಿ. ಹನುಮಂತರಾಯರು “ಧರ್ಮ ದೀಪಕರು” ಎಂಬ ಶೀರ್ಷಿಕೆಯಲ್ಲಿ ವಿಶ್ವದ ಮುಖ್ಯ ಧರ್ಮ ಜಿಜ್ಞಾಸುಗಳನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಶ್ರೀ ಶಂಕರಾಚಾರ್ಯರನ್ನು ಕುರಿತು ಐದಾರು ಗ್ರಂಥಗಳು ಬೆಳಕಿಗೆ ಬಂದಿವೆ. ಮಧ್ವಮತಾಚಾರ್ಯರಾದ ಮಧ್ವಾಚಾರ್ಯರನ್ನು ಕುರಿತು ಕೂಡ ಗ್ರಂಥ ಪ್ರಕಟ ವಾಗಿವೆ. ವೈಷ್ಣವಮತ ಸ್ಥಾಪಕರಾದ ಶ್ರೀ ರಾಮಾನುಜಚಾರ್ಯರನ್ನು ಕುರಿತು “ಶ್ರೀ ರಾಮಾನುಜ”, “ಸಂತ ಶ್ರೀ ರಾಮಾನುಜ”, “ಆಚಾರ್ಯ ರಾಮಾನುಜ” ಎಂಬ ಗ್ರಂಥಗಳು ಪ್ರಕಟವಾಗಿವೆ. ಇವುಗಳಲ್ಲಿ ಪ್ರೊ. ಎಚ್.ಎಸ್.ಕೆ.ಯವರು ಬರೆದಿರುವ “ಶ್ರೀ ರಾಮಾನುಜ” ಎಂಬ ಗ್ರಂಥ ತನ್ನ ವಸ್ತುನಿಷ್ಠ ದೃಷ್ಟಿಯಿಂದ, ಸರಳ ಸುಂದರ ನಿರೂಪಣೆಯಿಂದ ಉತ್ತ್ಪೇಕ್ಷಿತವಲ್ಲದ ಸಂಯಮಶೀಲ ಕಲೆಗಾರಿಕೆಯಿಂದ ಒಂದು ಉತ್ತಮ ಕೃತಿಯಾಗಿದೆ. ಡಿ. ಕೃಷ್ಣಯ್ಯಂಗಾರ್ “ಆಳ್ವಾರರ ದಿವ್ಯಜೀವನ” ಎಂಬ ಕೃತಿಯನ್ನು ಲೇಖಿಸಿದ್ದಾರೆ. ಓ.ಎನ್. ಲಿಂಗಣ್ಣಯ್ಯನವರ “ಶಿವಯೋಗಿ ಸಿದ್ಧರಾಮ”, ಗ.ಸ. ಹಾಲಪ್ಪನವರ “ವಿಶ್ವಮಾನವ”, ಶಿವಮೂರ್ತಿಶಾಸ್ತ್ರಿಗಳ “ವೀರಶೈವ ಮಹಾಪುರುಷರು”, ಡಾ. ಪ್ರಭುಶಂಕರರ “ಬೆರಗು”, ವೀರಶೈವ ಶರಣರನ್ನು ಕುರಿತ ಕೆಲವು ಮುಖ್ಯ ಜೀವನಕಥನಗಳಾಗಿವೆ. ತಂತ್ರ, ದೃಷ್ಟಿಗಳ ಹೊಸತನದಿಂದ, ಚಿತ್ರಣದ ಕುಸುರಿನಿಂದ ಡಾ. ಪ್ರಭುಶಂಕರ ಅವರ “ಬೆರಗು” ಒಂದು ಅನನ್ಯ ಕೃತಿಯಾಗಿದೆ. ಪ್ರೊ. ಎಸ್.ಕೆ. ರಾಮಚಂದ್ರರಾಯರು ಬರೆದ “ಶಾರದಾ ಪೀಠದ ಮಾಣಿಕ್ಯ” ಎಂಬ ಚಂದ್ರಶೇಖರ ಭಾರತಿ ಸ್ವಾಮಿಗಳನ್ನು ಕುರಿತ ಗ್ರಂಥ ಕೂಡ ಇಲ್ಲಿ ಉಲ್ಲೇಖನೀಯ. ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಶಾರದಾದೇವಿ, ಶ್ರೀ ಅರವಿಂದರು – ಮುಂತಾದವರನ್ನು ಕುರಿತ ಹೇರಳ ಗ್ರಂಥಗಳು ಬೆಳಕಿಗೆ ಬಂದಿವೆ. ವೀರಶೈವ ಪುಣ್ಯಪುರುಷರನ್ನು ಕುರಿತು ಗದುಗಿನ ತೋಂಟದಾರ್ಯ ಸಂಸ್ಕಾನ ನೂರಕ್ಕೂ ಹೆಚ್ಚು ಕಿರುಜೀವನ ಚರಿತ್ರೆಗಳನ್ನು ಪ್ರಕಟಿಸಿದೆ. ಈ ಕೃತಿಗಳಲ್ಲಿ ವೀರಶೈವ ಧರ್ಮಕ್ಕೆ ಸೇರಿದ ಸಮಾಜ ಸುಧಾರಕರು, ಆದರ್ಶ ಅಧಿಕಾರಿಗಳು, ಮಠಪತಿಗಳು, ಶಿಕ್ಷಣತಜ್ಞರು, ನ್ಯಾಯಮೂರ್ತಿಗಳು, ರಾಜಕೀಯ ಧುರೀಣರು, ಸಾಹಿತಿಗಳು, ಸಂಗೀತಗಾರರು, ನಾಟಕ ಕಲಾವಿದರು, ದಾನಿಗಳು, ಚಿತ್ರಕಲಾವಿದರು ಮುಂತಾದ ಸಮಾಜದ ಹಲವು ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿದ ವ್ಯಕ್ತಿಗಳ ಜೀವನವನ್ನು ಸಂಕ್ಷಿಪ್ತವಾಗಿ ಮತ್ತು ಸರಳವಾಗಿ ಅನಾವರಣಗೊಳಿಸಲಾಗಿದೆ. ಇದೊಂದು ಪ್ರಶಂಸನೀಯ ಪ್ರಯತ್ನವೆನ್ನಬಹುದು.

ಸಂತರಾದ ವಿನೋಬಾ, ಪುರಂದರದಾಸರು, ಕನಕದಾಸರು, ಕಬೀರರು ಮುಂತಾದವರನ್ನು ಕುರಿತು ಕೂಡ ಕೆಲವು ಹೊತ್ತಿಗೆಗಳು ಪ್ರಕಟವಾಗಿವೆ. ಪುರಂದರದಾಸರನ್ನು ಕುರಿತು ಸರ್ಕಾರ ಪ್ರಕಟಿಸಿರುವ ಮೂರು ಸಂಪುಟಗಳ ಹೆಬ್ಬೊತ್ತಿಗೆ ಅವರ ಜೀವನ ವಿವರವನ್ನು ಮಾತ್ರವಲ್ಲದೆ ಅವರ ಸಾಹಿತ್ಯವನ್ನು ಕೂಡ ಇಡಿಯಾಗಿ ನಮ್ಮೆದುರು ಇಡುತ್ತದೆ. ಕನಕದಾಸರನ್ನು ಕುರಿತು “ಕನಕ ಕಿರಣ”, “ಕವಿಕನಕದಾಸರು”, “ಕನಕದಾಸರು”, “ಕನಕದಾಸರ ಜೀವನ ಕಾಲ ವಿಚಾರ” ಮುಂತಾದ ಗಮನಾರ್ಹ ಕೃತಿಗಳು ಪ್ರಕಟವಾಗಿವೆ. ಇವುಗಳಲ್ಲಿ “ಕನಕಕಿರಣ” ಕನಕದಾಸರನ್ನು ಕುರಿತ ಒಂದು ಮುಖ್ಯ ಸಂದರ್ಭ ಗ್ರಂಥವೂ ಆಗಿದೆ.

ಪಾಶ್ಚಾತ್ಯ ರಾಷ್ಟ್ರನಾಯಕರನ್ನು, ತತ್ವಜ್ಞಾನಿಗಳನ್ನು, ಸಮಾಜ ಸುಧಾರಕರನ್ನು ಸಾಹಿತಿ ಗಳನ್ನು ಕುರಿತು ಕೂಡ ಕೆಲವು ಗ್ರಂಥಗಳು ಈ ಅವಧಿಯಲ್ಲಿ ಪ್ರಕಟವಾಗಿವೆ. ರಷ್ಯಾದ ರಾಜಕಾರಣದಲ್ಲಿ ಹೊಸಯುಗವನ್ನು ಆರಂಭಿಸಿದ ಜೋಸೆಫ್ ಸ್ಟ್ಯಾಲಿನ್, ಕಾರ್ಲ್‌ಮಾರ್ಕ್ಸ್, ಲೆನಿನ್ ಅವರ ಜೀವನ ಸಾಧನೆಯನ್ನು ಕುರಿತು ಕೆಲವು ಗ್ರಂಥಗಳು ಪ್ರಕಟವಾಗಿವೆ. ಹಾಗೆಯೇ ವಾಟರ್‌ಗೇಟ್ ಹಗರಣದಿಂದ ಅಧಿಕಾರದಿಂದ ನಿರ್ಗಮಿಸಿದ ಅಮೇರಿಕಾದ ಅಧ್ಯಕ್ಷ ನಿಕ್ಸನ್, ಚಿಕ್ಕ ವಯಸ್ಸಿನಲ್ಲಿಯೇ ಅಧ್ಯಕ್ಷ ಗದ್ದುಗೆಯನ್ನೇರಿ ಹಂತಕನ ಗುಂಡಿಗೆ ಬಲಿಯಾದ ಉದಾರ ಧೋರಣೆಯ ಕೆನಡಿ, ಆಫ್ರಿಕಾದ ಜನರ ಸುಪ್ತ ಸ್ವಾತಂತ್ರ್ಯಕಾಂಕ್ಷೆಯ ಮಹಾಮೂರ್ತಿಯಾಗಿ ಹುತಾತ್ಮನಾದ ಮಾರ್ಟಿನ್ ಲೂಥರ್‌ಕಿಂಗ್ ಕುರಿತು ಮೂರು ಪುಸ್ತಕಗಳು ಬಂದಿವೆ. ಇವು ಗಳಲ್ಲಿ ಮಾರ್ಟಿನ್ ಲೂಥರ್‌ಕಿಂಗ್ ಎಂಬ ದೇ.ಜ.ಗೌ. ಅವರ ಕೃತಿ ಆಕರ್ಷಕ ಶೈಲಿಯಿಂದ, ಭಾವದೀಪ್ತವಾದ ಬರವಣಿಗೆಯಿಂದ ನಾಯಕನ ಸ್ಫೂರ್ತಿದಾಯಕ ಜೀವನವನ್ನು ತುಂಬಾ ಜೀವಂತವಾಗಿ ಹಿಡಿದಿಟ್ಟಿದೆ. ನೀಗ್ರೋಗಳ ಗುಲಾಮಗಿರಿಯ ರದ್ದಿಗಾಗಿ ಶ್ರಮಿಸಿದ ಆದರ್ಶವ್ಯಕ್ತಿ ಅಬ್ರಾಹಂಲಿಂಕನ್ ಕುರಿತು ಕೂಡ ಕೃತಿಯೊಂದು ರಚಿತವಾಗಿದೆ. ರಾಜ್ಯತತ್ವ ವಿಶಾರದನಾದ ಜನ್‌ಸ್ಟುಯರ್ಟ ಮಿಲ್ ಕೂಡ ನಮ್ಮ ಜೀವನಚರಿತ್ರೆಕಾರರಿಗೆ ವಸ್ತು ವಾಗಿದ್ದಾನೆ. ಎಡ್ಮಂಡ್ ಬರ್ಕ್, ಸ್ಯಾಮುಯಲ್ ಜನ್ಸನ್, ಬೆಂಜಮಿನ್ ಫ್ರಾಂಕ್ಲಿನ್, ಸಾಕ್ರೆಟಿಸ್, ಪಾಶ್ಚಾತ್ಯ ಮಹಾಪುರುಷರು, ವಿಖ್ಯಾತ ಆಂಗ್ಲ ಸಾಹಿತಿಗಳು ಇವು ಇತರ ಕೆಲವು ಕೃತಿಗಳು ಟಾಲ್‌ಸ್ಟಾಯ್‌ನನ್ನು ಕುರಿತು ಆರ್.ಎಲ್. ಅನಂತರಾಮಯ್ಯನವರು ಬರೆದಿರುವ “ಟಾಲ್‌ಸ್ಟಾಯ್” ಎಂಬ ಕೃತಿ ಮತ್ತು ಅಧ್ಯಯನ ಸಂಸ್ಥೆ ಪ್ರಕಟಿಸಿದ “ಟಾಲ್‌ಸ್ಟಾಯ್” ಎಂಬ ಮತ್ತೊಂದು ಗ್ರಂಥ ರಷ್ಯಾದ ಮಹಾನ್ ಸಾಹಿತಿಯೊಬ್ಬನ ಬಾಳು ಬದುಕುಗಳ ಉಜ್ವಲ ಜೀವಂತಗಾಥೆಯನ್ನು ನಿರೂಪಿಸುತ್ತವೆ. ಟಾಲ್‌ಸ್ಟಾಯ್ ಮತ್ತು ಗಾರ್ಕಿಯವರ ಜೀವನ ಕತೆಗಳು ಕನ್ನಡಕ್ಕೆ ಬಂದಿವೆ.

ಪ್ರಖ್ಯಾತ ವಿಜ್ಞಾನಿಗಳ ಜೀವನ ಪರಿಚಯವನ್ನು ಮಾಡಿಕೊಂಡುವ ಕೆಲವು ಪ್ರಯತ್ನಗಳು ನಡೆದಿವೆ. ಜೀವುಬಾಯಿ ಲಕ್ಷ್ಮಣರಾವ್ ಅವರು ಚಾರ್ಲ್ಸ್ ಡಾರ್ವಿನ್‌ನ ತತ್ವನಿಷ್ಠೆ, ದೈವಭಕ್ತಿ, ಶ್ರದ್ಧಾಯುತ ಅಭ್ಯಾಸ ಮತ್ತು ವಿಜ್ಞಾನ ಸಾಧನೆಗಳನ್ನು ಕುರಿತು ಚಿಕ್ಕದಾದರೂ ಸುಂದರವಾದ ಕೃತಿಯೊಂದನ್ನು ರಚಿಸಿದ್ದಾರೆ. ಭೌತವಿಜ್ಞಾನ ಜಗತ್ತಿನಲ್ಲಿ ಕ್ರಾಂತಿ ಎಬ್ಬಿಸಿದ ಐನ್‌ಸ್ಟೀನ್‌ನನ್ನು ಕುರಿತು ಶ್ರೀ ಎಚ್. ವಿ. ಶ್ರೀರಂಗರಾಜು ಅವರು ರಚಿಸಿರುವ “ಐನ್‌ಸ್ಟೀನ್” ಎಂಬ ಕೃತಿ ವಿಜ್ಞಾನಿಗಳ ಜೀವನ ಚರಿತ್ರೆಯಲ್ಲಿ ಒಂದು ಬಹುಮುಖ್ಯ ಗ್ರಂಥ. ಲೇಖಕರು ತಮ್ಮ ಸರಳವೂ ಸ್ಪಷ್ಟವೂ ಆದ ಭಾಷೆಯ ಮೂಲಕ ಯಾವ ಉದ್ವೇಗ ಉತ್ಪ್ರೇಕ್ಷೆಗಳಿಗೂ ವಶವಾಗದೆ ಐನ್‌ಸ್ಟೀನನ ಜೀವನವನ್ನು ಚಿತ್ರಿಸಿದ್ದಾರೆ. ಥಾಮಸ್ ಜೆಫರ್‌ಸನ್, ಅಲೆಗ್ಸಾಂಡರ್ ಫ್ಲೆಮಿಂಗ್, ಥಾಮಸ್ ಎಡಿಸನ್, ಸಿ.ವಿ. ರಾಮನ್, ಜಗದೀಶ ಚಂದ್ರಬೋಸ್, ಪ್ರಫುಲ್ಲಚಂದ್ರರಾಯ್-ಮುಂತಾದವರ ಸಂಕ್ಷಿಪ್ತ ಜೀವನಚರಿತ್ರೆಗಳು ನಮಗೆ ಈ ಅವಧಿಯಲ್ಲಿ ಪರಿಚಯವಾಗುತ್ತವೆ. ಮೇಡಂ ಕ್ಯೂರಿಯನ್ನು ಕುರಿತು ದೇ.ಜ.ಗೌ. ಪ್ರಕಟಿಸಿದ ಗ್ರಂಥ ಒಂದು ಸಮರ್ಥ ಜೀವನ ಚಿತ್ರವಾಗಿದೆ. ಹಾಗೆಯೇ ಗಣಿತಶಾಸ್ತ್ರದ ಮಹಾಮೇಧಾವಿ ಯಾದ ಶ್ರೀನಿವಾಸ ರಾಮಾನುಜಂ ಅವರನ್ನು ಕುರಿತು ಜಿ.ಟಿ. ನಾರಾಯಣರಾವ್ ಬರೆದಿರುವ ಜೀವನಚರಿತ್ರೆ ಒಂದು ಮುಖ್ಯ ಆಕರ ಗ್ರಂಥ. ಹಾಗೆಯೇ ಅವರು ಬರೆದಿರುವ ಕೆಪ್ಲರ್, ರಾಮಾನುಜಂ ವೆಂಕಟರಾಮನ್, ಗೌಸ್ ಮತ್ತು ಲೈಫೆನಿಟ್ಸ್ ಎಂಬ ಐವರು ಪ್ರಸಿದ್ಧ ವಿಜ್ಞಾನ ಸಾಧಕರನ್ನು ಕುರಿತ “ಐವರು ವಿಜ್ಞಾನಿಗಳು” ಎಂಬ ಕೃತಿ ಕೂಡ ಉಲ್ಲೇಖನಾರ್ಹ. ತಿಳಿಯಾದ, ಸರಳವಾದ, ರುಚಿಕಟ್ಟಾದ, ಸಾಹಿತ್ಯ ಸಂಸ್ಪರ್ಶವುಳ್ಳ ಭಾಷೆಯಲ್ಲಿ ಈ ವ್ಯಕ್ತಿ ಚಿತ್ರಣಗಳನ್ನು ಶ್ರೀ ನಾರಾಯಣರಾವ್ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.

ಹೀಗೆ ಕನ್ನಡದಲ್ಲಿ ಸ್ವಾತಂತ್ರ್ಯೋತ್ತರ ನಲವತ್ತು ವರ್ಷಗಳಲ್ಲಿ ಸಾವಿರಕ್ಕೂ ಮೇಲ್ಪಟ್ಟು ಜೀವನಚರಿತ್ರೆಗಳು ಪ್ರಕಟವಾಗಿವೆ. ನಿಖರವಾಗಿ ಪ್ರಕಟವಾದ ಗ್ರಂಥಗಳ ಮಾಹಿತಿ ದೊರೆಯುವ ಸೌಲಭ್ಯ ಕರ್ನಾಟಕದಲ್ಲಿ ಲಭ್ಯವಿಲ್ಲದಿರುವುದರಿಂದ ಒಂದು ಕ್ಷೇತ್ರದಲ್ಲಿ ಪ್ರಕಟವಾದ ಎಲ್ಲಾ ಕೃತಿಗಳನ್ನು ಅಭ್ಯಾಸ ಮಾಡುವುದಿರಲಿ, ಅವುಗಳ ಹೆಸರನ್ನೂ ಪೂರ್ಣವಾಗಿ ತಿಳಿಯುವ ಅವಕಾಶ ಎಂಥ ಶ್ರದ್ಧಾವಂತ ವಿಮರ್ಶಕನಿಗೂ ದೊರೆಯುವುದಿಲ್ಲ. ಆದ್ದರಿಂದ ಅಲ್ಲಿ ಇಲ್ಲಿ ದೊರೆತಷ್ಟು ಮಾಹಿತಿಯಿಂದ ಮೇಲಿನ ಸಮೀಕ್ಷೆಯನ್ನು ಮಾಡಲಾಗಿದೆ. ಈ ಗ್ರಂಥಗಳ ಅವಲೋಕನದಿಂದ ಒಂದಂಶ ಪ್ರಕಟವಾಗುತ್ತದೆ. ಸುಮಾರು ಐದು ಆತ್ಮಕತೆಗಳನ್ನು ಬಿಟ್ಟರೆ ಸಾಹಿತ್ಯ ಸಂಸ್ಪರ್ಶವನ್ನುಳ್ಳ ವ್ಯಾಪಕ ವಿವರದ ಕಲಾತ್ಮಕ ಕೃತಿಗಳೆಂದು ಹೆಸರಿಸಬಹುದಾದಂಥವು ಇಲ್ಲವೆಂದರೆ ಯಾರೂ ಅಸಮಾಧಾನಗೊಳ್ಳಬೇಕಾಗಿಲ್ಲ. ಹಾಗೆಯೇ ಅನ್ಯಕಥನವನ್ನುಳ್ಳ ಜೀವನ ಚರಿತ್ರೆಗಳಲ್ಲೂ ಬಹುಶಃ ಒಂದು ನೂರು ಕೃತಿಗಳಿಗಿಂತ ಹೆಚ್ಚು ಉತ್ತಮ ಬರಹಗಳನ್ನು ಹೆಸರಿಸುವುದು ಸಾಧ್ಯವಿಲ್ಲ. ಕೆಲವು ಜೀವನಚರಿತ್ರೆಗಳಲ್ಲಿ ಆ ಚರಿತ್ರೆಯ ನಾಯಕನ ಪಾರ್ಶ್ವ ಜೀವನ ಮಾತ್ರ ದೊರೆಯುತ್ತದೆ. ಇನ್ನೂ ಕೆಲವು ಕೃತಿಗಳಲ್ಲಿ ತಮ್ಮ ಅಭಿಮಾನಿ ನಾಯಕನ ಜೀವನಕ್ಕೆ ಭೂತಗನ್ನಡಿ ಹಿಡಿದು ತೋರಿಸುವ ಪ್ರಯತ್ನಗಳು ಕಾಣಬರುತ್ತವೆ. ದೋಷ-ದೌರ್ಬಲ್ಯಗಳಿಲ್ಲದ ಬದುಕಿಲ್ಲ. ಗುಣಶಕ್ತಿಗಳ ಜೊತೆಯಲ್ಲೇ ದೋಷ ದೌರ್ಬಲ್ಯಗಳು ಅಡಕಗೊಂಡಿರುವ ಚಿತ್ರಣವೇ ನಿಜವಾದ ವಸ್ತುನಿಷ್ಠ ಜೀವನ ಚಿತ್ರಣವಾಗುತ್ತದೆ. ಆದರೆ ನಮ್ಮ ಬಹುಪಾಲು ಜೀವನ ಚರಿತ್ರೆಗಳಲ್ಲಿ ಕೃತಿನಾಯಕನ ದೌರ್ಬಲ್ಯಗಳಿಗೆ ಉದ್ದೇಶಪೂರ್ವಕವಾಗಿ ಕಣ್ಣು ಮುಚ್ಚುವ ಪ್ರವೃತ್ತಿ ಕಂಡುಬಂದ ಆ ವ್ಯಕ್ತಿತ್ವದ ಚಿತ್ರಣ ಮುಕ್ಕಾಗುತ್ತದೆ. ಇನ್ನೂ ಹಲವಾರು ಕೃತಿಗಳು ಸಗಟು ಖರೀದಿಗೆ, ತುರ್ತಿಗೆ ಒಳಗಾಗಿ ಜನಿಸಿದ ಅವಸರದ ಶಿಶುಗಳು. ಇವುಗಳಲ್ಲಿ ಜೀವನ ಚರಿತ್ರೆಯ ನಿರ್ದಿಷ್ಟ ಚೌಕಟ್ಟನ್ನಾಗಲಿ, ಶಿಸ್ತನ್ನಾಗಲಿ ಬರವಣಿಗೆಯ ಸಂಯಮವನ್ನಾಗಲಿ, ಮಾಹಿತಿಯ ಅಭ್ಯಾಸಪೂರ್ಣ ಜೀವನದ್ರವ್ಯವನ್ನಾಗಲಿ ನಾವು ಕಾಣುವುದು ಸಾಧ್ಯವೇ ಇಲ್ಲ. ಮತ್ತೆ ಹಲವು ನಿರೂಪಣೆಯ ಅಸಾಮರ್ಥ್ಯದಿಂದ, ಭಾಷಾಕೌಶಲದ ಅಭಾವದಿಂದ, ಪಾತ್ರವಿಕಾಸ ಚಿತ್ರಣಶಕ್ತಿಯ ಕೊರತೆ ಯಿಂದ ಮತ್ತು ತಮ್ಮ ನಾಯಕನ ಸಂಕೀರ್ಣ ತಿಳಿವಳಿಕೆ ಮತ್ತು ಸಾಧನೆಗಳನ್ನು ಸಮನ್ವಯ ಗೊಳಿಸಲಾರದ ದುರ್ಬಲತೆಯಿಂದ ನರಳುತ್ತಾ ಬೇಸಿಗೆಯ ನದಿಯಾಗಿ ಸಾಗುತ್ತವೆ. ಅನ್ಯರಾಜ್ಯಗಳ ಸಾಹಿತಿಗಳ, ಕಲಾವಿದರ, ರಾಜಕಾರಣಪಟುಗಳ ಹಾಗೆಯೇ ವಿದೇಶದ ವಿವಿಧ ಕ್ಷೇತ್ರಗಳ ಮಹಾನ್‌ಸಾಧಕರ ಜೀವನವನ್ನು ಸಾವಧಾನಶೀಲವಾಗಿ ಅಭ್ಯಸಿಸಿದ, ಅರಗಿಸಿಕೊಂಡ ಕಲಾಪ್ರಪೂರ್ಣ ಕೃತಿಗಳು ಇನ್ನೂ ಬರಬೇಕಾಗಿವೆ. ಜೀವನಚರಿತ್ರೆಯನ್ನು ಒಂದು ಅತ್ಯುತ್ತಮ ಸಾಹಿತ್ಯ ಪ್ರಕಾರವೆಂದು ಗಣಿಸುವ ಮತ್ತು ಅದನ್ನು ರೂಢಿಸಿಕೊಳ್ಳು ವುದಕ್ಕಾಗಿ ಸತತ ಸಾಧನೆ ಮಾಡುವ ಲೇಖಕರಿಂದ ಮಾತ್ರ ಇಂಥ ಜೀವನ ಚರಿತ್ರೆಯನ್ನು ನಿರೀಕ್ಷಿಸುವುದು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಸ್ವಾತಂತ್ರ್ಯೋತ್ತರ ಕಾಲದ ಜೀವನ ಚರಿತ್ರೆಗಳ ಇತಿಹಾಸದಲ್ಲಿ ವಿಪುಲತೆ ಗಮನಾರ್ಹವಾಗಿ ಕಂಡುಬಂದರೂ ಸಫಲತೆ ಮಾತ್ರ ಇನ್ನೂ ಕೈಗೆಟಕಿಲ್ಲ ಎನ್ನುವಂಥ ಅನಿಸಿಕೆ ನನ್ನದು. ಅಭಿನಂದನಾ ಗ್ರಂಥಗಳು ಮಾತ್ರ ಈ ಮಾತಿಗೆ ಅಪವಾದ.