ಕಾಯ ಕಮಲದ ಸೆಜ್ಜೆ ಜೀವರತುನವೆ ಲಿಂಗ
ಭಾವ ಪುಷ್ಪದಿ ಶಿವಪೂಜೆ ಮಾಡುವನ
ದೇವನೆಂದೆಂಬೆ ಸರ್ವಜ್ಞ ||

ಸರ್ವಜ್ಞನ ಭಕ್ತಿಯ ಕಲ್ಪನೆ ಎಷ್ಟು ಉದಾತ್ತ ಎಷ್ಟು ಮಹೋನ್ನತ! ಇಂತಹ ನಿಷ್ಕಪಟ  ನಿಷ್ಕಾಮ ನಿರ್ಮಲಭಕ್ತಿಯನ್ನು ಸಾಧಿಸದೆ ಡಾಂಭಿಕತನದಿಂದ ದೈವಾರಾಧನೆ ಮಾಡಿ ತಮ್ಮನ್ನೂ ಲೋಕವನ್ನೂ ವಂಚಿಸುವ ವೇಷಧಾರಿಗಳನ್ನು ಅತ್ಯುಗ್ರವಾಗಿ ಖಂಡಿಸುತ್ತಾನೆ ಕವಿ. ತಾನು ಹೇಳುವ ವಿಷಯದ ಉದ್ದೇಶದ ನಿಷ್ಕೃಷ್ಟ ಕಲ್ಪನೆ ಅವನಿಗಿರುವುದರಿಂದ ಆ ಮಾತುಗಳು ಚಾಟಿಯಂತೆ ಬಳಸಿ ಬಂದು ಹೃದಯವನ್ನು ಸುತ್ತಿ ಮುತ್ತಿ ಕೆತ್ತುತ್ತವೆ :

ಕೊಲುವ ಕೈಯೊಳು ಪೂಜೆ ಮೆಲುವ ಬಾಯೊಳು ಮಂತ್ರ
ಸಲೆಪಾಪವೆರೆದ ಮನದೊಳಗೆ ಪೂಜಿಪನು
ಹೊಲೆಯ ಕಾಣಯ್ಯ ಸರ್ವಜ್ಞ ||

ಚಿತ್ತವಿಲ್ಲದೆ ಗುಡಿಯ ಸುತ್ತಿದಡೆ ಫಲವೇನು
ಎತ್ತು ಗಾಣವನು ಹೊತ್ತು ತಾ ನಿತ್ಯದಿ
ಸುತ್ತಿ ಬಂದಂತೆ ಸರ್ವಜ್ಞ ||

ಜನಜೀವನದ ಸಹಜ ಬೊಕ್ಕಸದಿಂದ ಸಮೃದ್ದಿಯಾಗಿ ನಿದರ್ಶನಗಳನ್ನೆತ್ತಿಕೊಂಡು ನೇರವಾಗಿ ಅವರ ಮನಸ್ಸಿಗೆ ನಾಟುವಂತೆ ಹೇಳುವ ಕಲೆ ಅನ್ಯಾದೃಶ್ಯವಾಗಿ ಕವಿಗೆ ಸಿದ್ದಿಸಿದೆ. ಆಯಾಯ ಮಟ್ಟದಲ್ಲೇ ನಿಂತು ಅವರ ಮನದ ಕದವನ್ನು ಮುಟ್ಟುತ್ತಾನೆ, ತಟ್ಟುತ್ತಾನೆ, ಕುಟ್ಟುತ್ತಾನೆ. ರೋಸಿದಾಗ ಅತ್ಯಂತ ಅಶ್ಲೀಲವಾಗಿಯೂ ಅವರನ್ನು ಬೈದು ಭಂಗಿಸಿ ಅವರ ಹುಳುಕನ್ನು ಅವರ ಮುಖಕ್ಕೆ ಎತ್ತಿ ಹಿಡಿಯಲು ಆತ ಹಿಂಜರಿಯುವುದಿಲ್ಲ. ಬುದ್ದಿವಂತನಿಗೆ ಸನ್ನೆ ಸಾಕು, ಮೂರ್ಖನಿಗೆ ದೊಣ್ಣೆ ಪೆಟ್ಟೇ ಬೇಕು :

ಹುಸಿದು ಮಾಡುವ ಪೂಜೆ ಮಸಿವಣ್ಣವೆಂತೆನಲು
ಮುಸುಕಿರ್ದ ಮಲವನೊಳಗಿರಿಸಿ ಪೃಷ್ಠವನು
ಹಿಸುಕಿ ತೊಳೆದಂತೆ ಸರ್ವಜ್ಞ ||

ಈ ಗಂಡುನುಡಿ ಗುಂಡುನುಡಿ ಎಷ್ಟು ಪರಿಣಾಮಕಾರಿ ಎಂಬುದನ್ನು ವಿವರಿಸಬೇಕಿಲ್ಲ.

ಜನವನ್ನು ಜಗವನ್ನು ಅಶ್ಲೀಲದಿಂದ ಶೀಲದೆಡೆಗೆ, ಸಂಕೋಚದಿಂದ ವಿಕಾಸದೆಡೆಗೆ, ಭೀತಿಯಿಂದ ಪ್ರೀತಿಯೆಡೆಗೆ, ಬಂಧನದಿಂದ ಮುಕ್ತಿಯೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸುವ ಅಮೃತ ಶಕ್ತಿ ಜ್ಞಾನ. ಇದು ಸರ್ವತ್ರ ಸರ್ವದಾ ಸರ್ವರಿಗೂ ಅತ್ಯಗತ್ಯವಾದ ಅನಿವಾರ್ಯವಾದ ದಿವ್ಯ ವರ. ಇದು ನಡೆಸದ ನಡೆಸಲಾಗದ ಪವಾಡವಿಲ್ಲ. ಇದರ ಸಂಸ್ಪರ್ಶದಿಂದ ಮೂಕ ವಾಚಾಳಿಯಾಗುತ್ತಾನೆ, ಕಡು ದಡ್ಡ ಕಾಳಿದಾಸನಾಗುತ್ತಾನೆ, ಬೆಟ್ಟ ಬಾಗುತ್ತದೆ, ಮುಗಿಲು ಮಣಿಯುತ್ತದೆ, ಮರುಭೂಮಿ ಸುರಭೂಮಿಯಾಗುತ್ತದೆ. ಇದನ್ನು ಸಾಧಿಸಲು ಮಾನವ ಸತತವಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಜೀವವಿಲ್ಲದ ದೇಹ ಕಂಪಿಲ್ಲದ ಹೂವು ಕಾಂತಿಯಿಲ್ಲದ ಕಣ್ಣು ಇದ್ದು ಫಲವೇನು? ಹಾಗೆಯೇ ಜ್ಞಾನದಿಂದಲೇ ಇಹ, ಜ್ಞಾನದಿಂದಲೇ ಪರ, ಅದಿಲ್ಲದೆ ಸಕಲವೂ ತನಗಿದ್ದು ಹಾನಿ ತಪ್ಪದು ಎನ್ನುತ್ತದೆ ಸರ್ವಜ್ಞ ಪ್ರಜ್ಞೆ. ಮಾನವ ಅಗತ್ಯವಾದುದನ್ನು ಅಲಕ್ಷಿಸಿ ಅನಗತ್ಯವಾದುದರೆಡೆಗೆ ಭರದಿಂದ ಧಾವಿಸುತ್ತಿರುವ ಈ ದಿನಗಳಲ್ಲಿ ಈ ಮಾತು ಎಷ್ಟು ವಿಚಾರಣೀಯ, ಮನನೀಯ! ಆದರೆ ಈ ಜ್ಞಾನಿಯ ಸ್ವರೂಪವೆಂಥದು? ಏನು ಅರಿಯದ ಅಜ್ಞಾನಶಿಖರಗಳೂ ತಾವು ಸರ್ವಜ್ಞರೆಂದು ಸಾರಿಕೊಳ್ಳುವಾಗ ನೈಜ ಜ್ಞಾನಿಗಳನ್ನು ಗುರುತಿಸುವ ಬಗೆ ಹೇಗೆ? ತಿಳಿದವನು ತಾನು ತಿಳಿದವನೆಂದು ಡಂಗುರ ಹೊಡೆಯುವುದಿಲ್ಲ. ಸೌಗಂಧಿಕ ಪುಷ್ಪ ತನ್ನತನವನ್ನು ಜಹೀರು ಮಾಡಲು ರಸ್ತೆಯ ಬದಿಗೇ ಬರಬೇಕಿಲ್ಲ. ತಾನು ಜ್ಞಾನಿ ಎನ್ನುವವನು ಅಜ್ಞಾನಿ.

ತನ್ನ ನೋಡಲಿ ಎಂದು ಕನ್ನಡಿಯು ಕರೆಯುವುದೆ?
ತನ್ನಲ್ಲಿ ಜ್ಞಾನವುದಿಸಿದ ಮಹಾತ್ಮನು
ಕನ್ನಡಿಯು ಜಗಕೆ ಸರ್ವಜ್ಞ ||

ಅವನ ನುಡಿಯಿಂದ ನಡೆಯಿಂದ ಕಾಯಕದಿಂದ ಜಗತ್ತು ಅವನ ಅಂತರಂಗದಲ್ಲಿ ಉದಿಸಿದ ಜ್ಞಾನವನ್ನು ಅರಿಯುತ್ತದೆ, ಮಾರ್ಗದರ್ಶನಕ್ಕಾಗಿ ಅವನೆಡೆಗೆ ಧಾವಿಸುತ್ತದೆ, ತನ್ನ ಅರೆಕೊರೆಗಳನ್ನು ಅವನ ನಿರ್ಮಲವಾಣಿಯಿಂದ ಕಂಡು ತಿದ್ದಿಕೊಳ್ಳುತ್ತದೆ. ಜ್ಞಾನಿಯ ಮುಖ ಅವನ ಹೃದಯ ಸಂಪತ್ತಿನ ಪ್ರತೀಕವಾಗಿರುತ್ತದೆ, ಬೆಳಕು ತುಂಬಿದ ಬಲ್ಬಿನಂತೆ; ಅಜ್ಞಾನಿಯಾದ ಡಾಂಭಿಕನ ಮೋರೆ ಅವನ ಮನದ ಕೊಳಕಿನ ಸಂಕೇತವಾಗಿರುತ್ತದೆ, ಬರ್ನಾದ ಬಲ್ಬಿನಂತೆ. ಇದನ್ನೇ ಸರ್ವಜ್ಞ ಸೊಗಸಾದ ಈ ಅರ್ಥ ಶ್ರೀಮಂತ ಮಾತುಗಳಿಂದ ಹೇಳುತ್ತಾನೆ:

ಜ್ಞಾನವುಳ್ಳವನೊಡಲು ಭಾನುಮಂಡಲದಂತೆ
ಜ್ಞಾನ
ವಿಲ್ಲದನ ಬರಿಯೊಡಲು ಹಾಳೂರ
ಶ್ವಾನದಂತಕ್ಕು ಸರ್ವಜ್ಞ ||

ಈ ಮಾತುಗಳಲ್ಲಿ ಎಂತಹ ತ್ರಿಕಾಲ ಸತ್ಯ ಅಡಗಿದೆ ಎಂಬುದನ್ನು ಪರಿಭಾವಿಸಬೇಕು.

ಆದಿಯಲ್ಲಿ ಗುಣಕರ್ಮಕ್ಕನುಸಾರವಾಗಿ ವಿಂಗಡಿಸಲ್ಪಟ್ಟ ಸಮಾಜಕಲ್ಯಾಣಾರ್ಥವಾದ ವಿಶಾಲದೃಷ್ಟಿಯ ವರ್ಣಗಳು ಕಾಲಕ್ರಮೇಣ ತಮ್ಮ ಅಂತರಾರ್ಥವನ್ನೂ ಶುಭದೃಷ್ಟಿಯನ್ನೂ ಕರ್ತವ್ಯ ಪ್ರಜ್ಞೆಯನ್ನೂ ಕಳೆದುಕೊಂಡು ಸಂಕುಚಿತ ವಿಷಯವಲಯಗಳಾಗಿ ಕೊಳೆತ ನಿಯಮಗಳ ಶುಷ್ಕ ಭಂಡಾರವಾಗಿ ಸಮಾಜ ವಿನಾಶಕಾರಿಯಾಗಿ ಮಾರ್ಪಟ್ಟು ಎಂತಹ ಅನರ್ಥ ಪರಂಪರೆಗಳಿಗೆ ದಾರಿಯಾಗಿದೆಯೆಂಬುದು ನಮ್ಮ ಇತಿಹಾಸವನ್ನು ನಿರುಕಿಸಿದವರಿಗೆ ವಿಧಿತವಾಗುವ ಅಂಶ. ಈ ಜತಿಪದ್ಧತಿ ಭಾರತದ ಜನತೆಗೆ ದುಶ್ಯಾಪವಾಗಿ ಅದರ ಪ್ರಗತಿಗೆ ಕ್ಷಯ ಹಿಡಿಸಿಬಿಟ್ಟಿದೆ. ತಿಳಿದವರೂ ತಿಳಿಯದವರೂ ಒಟ್ಟಿಗೇ ಅದರ ದುರುಪಯೋಗ ಮಾಡುತ್ತಿದ್ದಾರೆ. ಅದರ ದುಷ್ಫಲವನ್ನು ದೇಶ ಉಣ್ಣುತ್ತಿದೆ. ಇದರಿಂದ ಎಲ್ಲೆಲ್ಲೂ ಅಸಹನೆ ಅಸೂಯೆ ಅಶಾಂತಿ ಸಂಶಯಗಳ ಭೂತಛಾಯೆ ತಾಂಡವವಾಡಿ ಆತ್ಮವನ್ನು ಕತ್ತಲು ಗೊಳಿಸುತ್ತಿದೆ. ನಮ್ಮ ದೃಷ್ಟಿ ವಿಕಾಸವಾಗದೆ, ನಮ್ಮ ಮೆದುಳಿನ ಬುದ್ದಿ ಹೃದಯದ ಜ್ಞಾನವಾಗದೆ ವಸ್ತುನಿಷ್ಠವಾದ ವೈಜ್ಞಾನಿಕ ವಿಚಾರ ಮೂಡದೆ ಇರುವುದೇ ಈ ಅನರ್ಥಕ್ಕೆ ಕಾರಣವಾಗಿದೆ. ಸರ್ವಜ್ಞನ ಹಿಂದೂ, ಅವನ ಕಾಲದಲ್ಲೂ, ಈಗಲೂ ಅದರ ಸ್ಥಿತಿ ಒಂದೇ ಆಗಿದೆಯೆನ್ನಬಹುದು. ಈ ಜತಿಯ ಬಗ್ಗೆ ಅವನ ಪರಿಶೀಲನೆ ವಿವರಣೆ ಖಂಡನೆ ಮತ್ತು ನೂತನದೃಷ್ಟಿ ಇಂದಿನ ಸ್ವತಂತ್ರ ಭಾರತದ ಅಸ್ವತಂತ್ರ ಮತಿಗಳಿಗೆ ಮಾರ್ಗದರ್ಶಿಯಾಗಿದೆ. ಅವನು ಕೇಳುವ ಪ್ರಶ್ನೆ ಉತ್ತರಾತೀತವಾದುದು :

ನಡೆವುದೊಂದೇ ಭೂಮಿ ಕುಡಿವುದೊಂದೇ ನೀರು
ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ
ನಡುವೆ ಎತ್ತಣದು? ಸರ್ವಜ್ಞ ||

ಭೂಮಿಗೆ ಭೇದವಿಲ್ಲ, ನೀರಿಗೆ ಭೇದವಿಲ್ಲ, ಸುಡುವ ಅಗ್ನಿಗೆ ಭೇದವಿಲ್ಲ. ಇದೆಲ್ಲವನ್ನೂ ಒಂದೇ ರೀತಿಯಾಗಿ ಅನುಭವಿಸುವ ನರರಲ್ಲಿ ಭೇದ ಹೇಗಾಯಿತು? ಮೇಲು ಕೀಳು ಹೇಗಾಯಿತು? ಇದಕ್ಕೆ ಉತ್ತರ ಹೇಳಬಲ್ಲವರಾರು?

ಉತ್ತಮರು ಎಂದು ಉಬ್ಬಿ ಹಾರಾಡುವುದಕ್ಕೆ ಅವರಿಗಿರುವ ಕೋಡಾದರೂ ಏನು? ಹುಟ್ಟುವ ಸ್ಥಾನದಲ್ಲಿ ಏನಾದರೂ ಭೇದ ವ್ಯತ್ಯಾಸ ಇದೆಯೇ?

ಉತ್ತಮರು ಪಾಲ್ಗಡಲೊಳೆತ್ತಿದರೆ ಜನ್ಮವನು?
ಉತ್ತಮರು ಅಧಮರೆನಬೇಡ ಹೊಲೆಯಿಲ್ಲ
ದುತ್ತಮರು ಎಲ್ಲಿ? ಸರ್ವಜ್ಞ ||

ಕವಿಯ ಈ ಯುಕ್ತಿಯುಕ್ತವಾದ ಪ್ರಶ್ನೆಗೆ ಉತ್ತರ ಕೊಡುವ ಎದೆಗಾರಿಕೆ ಯಾರಿಗಿದೆ? ಹಸಿವು ತೃಷೆ ನಿದ್ರೆ ವಿಷಯ ಮೈಥುನ ಬಯಕೆಗಳು ಪಶುಪಕ್ಷಿ ನರರಿಗೆಲ್ಲ ಸರಿಸಮಾನ. ಹಾಗಾದರೆ ಜತಿ ಕುಲ ಎಂಬುದು ಯಾವುದರಿಂದ ಉಂಟಾಯಿತು? ಮಾನವರೆಲ್ಲ ಒಂದೇಯೇ? ಅವರಲ್ಲಿ ತಾರತಮ್ಯವಿಲ್ಲವೇ? ಎಂದರೆ ಉಂಟು ಎನ್ನುತ್ತದೆ ಕವಿಮತಿ. ಆದರೆ ಈ ವ್ಯತ್ಯಾಸ ಮೇಲುಕೀಳು ಎಂಬುದು ಹುಟ್ಟಿನಿಂದ ಉಂಟಾಗುವುದಿಲ್ಲ, ಅವನವನ ಪ್ರವೃತ್ತಿಯಿಂದ ಮಾರ್ಗದಿಂದ ಗುಣದಿಂದ ಉಂಟಾಗುತ್ತದೆ.

ಸತ್ತ ಕತ್ತೆಯ ಹೊತ್ತರೆತ್ತಣದ ಹೊಲೆಯನು
ಉತ್ತಮನೆಂದು ಹೆರರೊಡವೆ ಹೊತ್ತರವ
ನಿತ್ಯವೂ ಹೊಲೆಯ ಸರ್ವಜ್ಞ ||

ಮೇಲುಜತಿಯೆಂಬ ಕಿನಕಾಪಿನ ಮುಸುಕಿನಲ್ಲಿ ಮಾಡಬಾರದ್ದನ್ನು ಮಾಡಿ ಆಡ ಬಾರದ್ದನ್ನು ಆಡಿ ಸಮಾಜ ಕಂಟಕರಾಗಿರುವವರು ಬಹುಮಂದಿ. ಹಾಗೆಯೇ ಕೀಳು ಕುಲದಲ್ಲಿ ಹುಟ್ಟಿದ ತಮ್ಮದಲ್ಲದ ತಪ್ಪಿಗಾಗಿ ಸಮಾಜದ ಬಹಿಷ್ಕಾರಕ್ಕೆ ಕೀಳು ನೋಟಕ್ಕೆ ತುತ್ತಾಗಿ ಶಕ್ತಿಯಿದ್ದರೂ ಗುಣವಿದ್ದರೂ ಅದನ್ನು ಪ್ರದರ್ಶಿಸಿ ಮೇಲ್ಮೆ ಪಡೆಯಲು ಅಶಕ್ತರಾಗಿ ಅವನತಿಯತ್ತ ಜರಿ ಆತ್ಮವಿಸ್ಮೃತಿಯನ್ನೂ ಅಸಹನೆಯನ್ನೂ ತುಂಬಿಕೊಂಡು ಅತೃಪ್ತರಾಗಿ ಕ್ರೋಧತಪ್ತರಾಗಿ ಸಮಾಜಕಂಟಕರಾಗುವವರೂ ಬಹುಮಂದಿ. ಈ ಎರಡು ಅತಿರೇಕಗಳಿಗೂ ಏನು ಪರಿಹಾರ? ವ್ಯಕ್ತಿಯ ಹುಟ್ಟನ್ನು ಗಣಿಸದೆ ಅವನ ಗುಣವನ್ನು ಪ್ರತಿಭೆಯನ್ನು ಶಕ್ತಿಯನ್ನು ಗಣಿಸಿ ಗುಣಿಸುವ ಪ್ರವೃತ್ತಿ ನಮ್ಮಲ್ಲಿ ನೆಲೆಗೊಂಡಾಗ ಈಗ ಮೂಡಿರುವ ಬಹಳಷ್ಟು ಗೊಂದಲ ದ್ವೇಷ ಅಸೂಯೆ ಮರೆಯಾಗುತ್ತವೆ. ಆದರೆ ಇದು ಕೇವಲ ಕಾನೂನಿನಿಂದ ಬಲವಂತದಿಂದ ಸಾಧ್ಯವಿಲ್ಲ. ಇದು ಕೇವಲ ಪ್ರಚಾರ ಸಾಧನವಾಗದೆ ಆಚಾರ ಸಾಧನವಾಗ ಬೇಕು. ಇದರ ಪೃಥಕ್ಕರಣೆ ವಿವೇಚನೆ ಪ್ರಾಮಾಣಿಕವಾಗಿ ನಡೆಯಬೇಕು, ತುಟಿಮಾತಾಗದೆ ಮನಸ್ಸಿನ ಮಾತಾಗಬೇಕು. ಕುಲವಿಲ್ಲ ಯೋಗಿಗೆ, ಛಲವಿಲ್ಲ ಜ್ಞಾನಿಗೆ, ತೊಲೆಕಂಭವಿಲ್ಲ ಗಗನಕ್ಕೆ, ಸ್ವರ್ಗದಲ್ಲಿ ಹೊಲೆಗೇರಿಯಿಲ್ಲ ಎಂಬ ನಿಚ್ಚಳ ಅರಿವು ಮೂಡಬೇಕು. ನಮಗೆ ತಾರಕವಾದ ಬೆಳಕು ಮುಖ್ಯ, ಅದು ಎಲ್ಲಿಂದ ಬಂತು ಹೇಗೆ ಬಂತು ಎಂಬುದರ ಜಿಜ್ಞಾಸೆ ಅಮುಖ್ಯ. ಇದಕ್ಕೆ ಸರ್ವಜ್ಞನ ಪರಿಹಾರವಿದು :

ಜತಿಹೀನನ ಮನೆ ಜ್ಯೋತಿ ತಾ ಹೀನವೇ?
ಜತಿ ವಿಜತಿ ಎನಬೇಡ, ದೇವನೊಲಿ
ದಾತನೇ ಜತ ಸರ್ವಜ್ಞ
ಯಾತರದು ಹೂವೇನು ನಾತರದು ಸಾಲದೆ?
ಉತ್ತಮದ ವರ್ಣಿಗಳೇ ಉತ್ತಮರು ಎನಬೇಡ
ಮತ್ತೆ ತನ್ನಂತೆ ಬಗೆದವರನೆಲ್ಲರನು
ಉತ್ತಮರು ಎನ್ನು ಸರ್ವಜ್ಞ ||

ಸರ್ವಜ್ಞ ತೋರಿದ ಈ ದಾರಿ ಎಷ್ಟು ಸರಳ, ಎಷ್ಟು ಸತ್ವಸಂಪನ್ನ, ಎಷ್ಟು ಲಾಭದಾಯಕ! ವಿವೇಕದ ವಿಶಾಲ ತಳಹದಿ ಇಲ್ಲದ ಜತಿಪದ್ಧತಿ ಎಷ್ಟು ಪ್ರಗತಿಮಾರಕವೋ ಆತ್ಮವಿಘಾತಕವೋ ಅಷ್ಟೇ ವಿನಾಶಕಾರಿ ಡಂಭಾಚಾರ ಪ್ರವೃತ್ತಿ. ಈ ಡಂಭಾಚಾರ ಆಷಾಢ ಭೂತಿತನ ಅಧಿಕವಾದಷ್ಟೂ ಆತ್ಮದ ಬೆಳಕು ಕುಗ್ಗುತ್ತದೆ. ಆಡುವ ಮಾತು ಬುರುಗಾಗುತ್ತದೆ, ಮಾಡುವ ಕಾರ್ಯ ಕೃತಕವಾಗುತ್ತದೆ, ಬದುಕು ಬರಡಾಗಿ ಪರಿಣಾಮರಹಿತವಾಗುತ್ತದೆ. ನಡೆನುಡಿಯ ಅಂತರ ಅಗಲವಾದಷ್ಟೂ ಇಹಪರಗಳ ಅಂತರ ಅಗಾಧವಾಗುತ್ತದೆ; ಹಾಗೆಯೇ ಪ್ರಯತ್ನ ಮತ್ತು ಫಲಗಳ ಸಂಬಂಧವೂ ದೂರವಾಗುತ್ತದೆ. ಈ ವೇಷಗಾರಿಕೆಯನ್ನು ತಿರುಳಿಲ್ಲದ ಶುಷ್ಕಾಚಾರವನ್ನು ಅತ್ಯಂತ ಸೂಕ್ಷ್ಮವಾಗಿ ವಿಡಂಬಿಸುತ್ತಾನೆ. ಸರ್ವಜ್ಞ;

ಅತ್ತಿಮರ ತಾ ಕಾಯ ಹೊತ್ತಿದ್ದ ತೆರನಂತೆ
ತತ್ತ್ವಭೇದವನು ಅರಿಯದೆಲೆ ರುದ್ರಾಕ್ಷಿ
ಹೊತ್ತು ಫಲವೇನು ಸರ್ವಜ್ಞ

ಆತ್ಮಜ್ಞಾನವಿಲ್ಲದೆ ರುದ್ರಾಕ್ಷಿ ಧರಿಸಿದರೆ ಅತ್ತಿಮರ ಕಾಯಿ ಧರಿಸಿದಂತೆ ರಂಜನೆಯಷ್ಟೇ. ಅದರ ಮನಸ್ಸು ಜಡ, ಹಾಗೆಯೆ ಇವನ ಮನಸ್ಸೂ. ಅತ್ತಿ ಹಣ್ಣಿನಿಂದ ಪರರಿಗಾದರೂ ಪ್ರಯೋಜನವುಂಟು, ರುದ್ರಾಕ್ಷಿ ಹೊತ್ತವನಿಂದ ಅದೂ ಇಲ್ಲ. ಕವಿಯ ವಿವೇಚನೆ ಎಂತಹ ಸಾದೃಶ್ಯ ಸಂಪತ್ತನ್ನು ಹೊತ್ತು ಹೊರ ಮೂಡಿ ಮನಸ್ಸನ್ನು ನಾಟುತ್ತದೆ? ಅವನ ತ್ರಿಪದಿಯ ವಿಡಂಬನೆ ತ್ರಿಶೂಲದ ಮುಮ್ಮೊನೆಯಂತೆ ಡಾಂಭಿಕರ ಕರುಳನ್ನು ಕೀಳುತ್ತದೆ;

ಆಲದ ಬಿಳಿಲಂತೆ ಜೋಲು ಜಡೆಗಳ ಬಿಟ್ಟು
ನಾಲಿಗೆ ಕೌಪ ಶುದ್ದಿಲ್ಲ, ಮರಿನಾಯ
ಬಾಲದಂತಕ್ಕು ಸರ್ವಜ್ಞ ||

ಕತ್ತೆ ಬೂದಿಲಿ ಹೊರಳಿ ಮತ್ತೆ ಯತಿಯಪ್ಪುದೇ
ತತ್ತ್ವವರಿಯದೆಲೆ ಭಸಿತವಿಟ್ಟವ ಶುದ್ಧ
ಕತ್ತೆಯಂತೆಂದ ಸರ್ವಜ್ಞ ||

ನೀರು ಮುಳುಗಿದ ವಿಪ್ರ ಹಾರುವಡೆ ಸ್ವರ್ಗಕ್ಕೆ
ಹಾರುವನೊಲು ಮುಳುಗಿಪ್ಪ ಕಪ್ಪೆ ತಾ
ಹಾರದೇಕೆಂದ ಸರ್ವಜ್ಞ ||

ಅಂತರಂಗದಿಂದ ಅರಳಿ ಬರದ ನಿರುಪಯುಕ್ತವಾದ ಆತ್ಮವಂಚಕ ಪರವಂಚಕವಾದ ಈ ಬಹಿರಾಚಾರಗಳಿಂದ ಏನೂ ಸಾಧಿತವಾಗುವುದಿಲ್ಲ. ಇದಕ್ಕೆ ದೈವ ಒಲಿಯುವುದಿಲ್ಲ, ಮುಕ್ತಿ ಬಳಿ ಸಾರುವುದಿಲ್ಲ. ಇದನ್ನೇ ಸಾಧನೆಯೆಂದು ಭಾವಿಸಿದರೆ ಅದಕ್ಕಿಂತ ಮೂರ್ಖತನ ಬೇರೊಂದಿಲ್ಲ. ಏಕೆಂದರೆ :

ಒಡಲ ದಂಡಿಸಿ ಮುಕ್ತಿ ಪಡೆವೆನೆಂಬುವನೆಗ್ಗ
ಬಡಿಗೆಯಲಿ ಹುತ್ತ ಹೊಡೆಯಲಡಗಿಹ ಸರ್ಪ
ಮಡಿದಿಹುದೆ ಹೇಳು ಸರ್ವಜ್ಞ ||

ಇದನ್ನೇ ‘ಭಾಂಡ ಭಾಜನ ಶುದ್ಧವಿಲ್ಲದವರ ಭಕ್ತಿ ಹೆಂಡದ ಮಡಕೆಯ ಹೊರಗೆ ತೊಳೆದಂತೆ’ ಎನ್ನುತ್ತಾರೆ ಬಸವಣ್ಣನವರು. ಆದ್ದರಿಂದ ನಡೆಯಲ್ಲಿ ನುಡಿಯಲ್ಲಿ ಎರಡರಲ್ಲೂ ಎಚ್ಚರವಾಗಿರಬೇಕು ಮಾನವ. ಹಾಗಲ್ಲದೆ ‘ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗ ಹೊಡೆಮರಳಿ ಕಚ್ಚುವ ಹೆಡನಾಗ’ನಾಗುತ್ತದೆ. ಇದನ್ನರಿತು ಅರಗಿಸಿಕೊಂಡು ಮೈಮನಸ್ಸುಗಳನ್ನು ಒಂದು ಗೂಡಿಸುವ ಪ್ರಯತ್ನ ಮಾಡಿದರೆ ನಮ್ಮ ಬದುಕಿನ ಬಹುಪಾಲು ಅನಿಷ್ಟ ಅಮಂಗಳಗಳು ನಿವಾರಣೆಯಾಗಿ ಶ್ರದ್ಧೆ ಪ್ರಾಮಾಣಿಕತೆ ನಂಬಿಕೆಗಳು ಜಗತ್ತಿನಲ್ಲಿ ನೆಲೆಗೊಳ್ಳುತ್ತವೆ.

ಹಲವರು ತಿಳಿದಿರುವಂತೆ ಭಾರತಸಂಸ್ಕೃತಿ ಸಂಸಾರ ವಿಮುಖವಾದುದಲ್ಲ, ಜೀವನ ಪಲಾಯನವಾದಿಯಲ್ಲ, ಸ್ತ್ರೀದ್ವೇಷಿಯಾದುದಲ್ಲ. ಸ್ತ್ರೀಯನ್ನು ಸಂಸಾರವನ್ನು ಜೀವನವನ್ನು ಅದು ಬಹು ಅಕ್ಕರೆಯಿಂದ ಆತ್ಮೀಯತೆಯಿಂದ ಗೌರವದಿಂದ ಕಂಡಿದೆ. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎನ್ನುತ್ತಾನೆ ದೇವರ ದಾಸಿಮಯ್ಯ. ‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ’ ಎನ್ನುತ್ತಾನೆ ಮನು. ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ’ ಎಂದು ಬದುಕಿನ ಹಿರಿಮೆಯನ್ನು ಸಾರುತ್ತಾರೆ ಬಸವಣ್ಣನವರು. ಜೀವನವನ್ನು ಎದುರಿಸಲಾರದೆ ಸೋತು ಓಡಿಹೋಗುವ ಹೇಡಿಗೆ ಎಂದೂ ನಮ್ಮ ಸಂಸ್ಕೃತಿಯಲ್ಲಿ ಮಾನ್ಯತೆಯಿಲ್ಲ, ಅದನ್ನು ಎದುರಿಸಿ ಗೆದ್ದು ಅಥವಾ ಅದನ್ನು ಮೀರಿ ಪರದೆಡೆಗೆ ಮನಮಾಡುವ ಧೀಮಂತ ಕಲಿಗೆ ಮಾತ್ರ ಪುರಸ್ಕಾರ. ಇಹವನ್ನು ಒಪ್ಪಿ ಪರವನ್ನು ಅಪ್ಪುವುದು ನಮ್ಮ ದೃಷ್ಟಿ. ಸಂಸಾರ ಪ್ರೀತಿ ವಿಷಮವ್ಯಾಮೋಹವಾಗಿ ನಮ್ಮ ಸ್ವಾತಂತ್ರ್ಯವನ್ನು ಹರಣ ಮಾಡಿ ಮತಿಯನ್ನು ಮಸುಳಿಸಿ ಪರಲೋಕ ಪ್ರಜ್ಞೆಯನ್ನು ಕುರುಡಾಗಿಸಬಾರದೆಂಬುದೇ ನಮ್ಮ ಎಲ್ಲ ಸಾಧುಸಂತರ ಜ್ಞಾನಿಗಳ ದೃಷ್ಟಿ, ಸಂದೇಶ. ಸರ್ವಜ್ಞ ಈ ತ್ರಿಕಾಲ ಸತ್ಯವನ್ನು ಮರೆತಿಲ್ಲ.

ಹೆಣ್ಣಿನಿಂದಲೆ ಇಹವು ಹೆಣ್ಣಿನಿಂದಲೆ ಪರವು
ಹೆಣ್ಣಿನಿಂದಲೆ ಸಕಲ ಸಂಪದವು, ಹೆಣ್ಣೊಲ್ಲ
ದಣ್ಣಗಳು ಯಾರು ಸರ್ವಜ್ಞ ||

ಎಂದು ಹೆಣ್ಣಿನ ಹಿರಿಮೆಯನ್ನು ಉಚ್ಚಕಂಠದಲ್ಲಿ ಉದ್ಘೋಷಿಸಿ ಅವಳಿಲ್ಲದ ಬದುಕು ಎಷ್ಟು ನಿಸ್ಸಾರ ಎಷ್ಟು ಕಷ್ಟಮಯ ಎಷ್ಟು ವ್ಯರ್ಥ ಎನ್ನುವುದನ್ನು ಸಾರುತ್ತಾನೆ.

ಲಿಂಗವಿಲ್ಲದ ಪೂಜೆ ಗಂಗೆಯಿಲ್ಲದ ತೋಟ
ಹೆಂಗಳಿಲ್ಲದ ಮನೆವಾರ್ತೆ ಅನುದಿನವು
ಭಂಗಕಾಣಯ್ಯ ಸರ್ವಜ್ಞ ||

ಸಂಸಾರವನ್ನು ತೊರೆದು ವಿರಕ್ತನಾಗಿ ಜಂಗಮಜ್ಞಾನಚಕ್ರವಾಗಿ ತಿರುಗಿದ ಕವಿ ಹೆಣ್ಣಿಗೆ ಕೊಟ್ಟಿರುವ ಸ್ಥಾನ ಎಷ್ಟೊಂದು ಮಹೋನ್ನತವಾದುದು! ತನ್ನ ಸುಖ ದುಃಖಗಳಲ್ಲಿ ಸಮಭಾಗಿ ಯಾಗುವ ಧರ್ಮದ ದೀಪವಾದ ಬದುಕಿನ ಊರೆಗೋಲಾದ ಹೆಣ್ಣು ದೊರೆಯುವುದು ಸುಲಭದ ಮಾತ್ರಲ್ಲ.

ಅಂಗನೆಯು ಒಲಿಯುವುದು ಬಂಗಾರ ದೊರೆಯುವುದು
ಸಂಗ್ರಾಮದೊಳಗೆ ಗೆಲುವುದು ಇವು ಮೂರು
ಸಂಗಯ್ಯನೊಲುಮೆ ಸರ್ವಜ್ಞ ||

“Marriages are made in heaven” ಎಂಬ ಸೂಕ್ತಿಯ ಸತ್ಯ ಈ ಉಕ್ತಿಯಲ್ಲಿ ಹುದುಗಿದೆ. ಒಲಿಯದ ದಂಪತಿಗಳಿಗೆ ಬದುಕೊಂದು ಬಲೆ; ಒಲಿದ ಹೃದಯಗಳಿಗೆ ಅದೊಂದು ದಿವ್ಯ ಸುಂದರ ಕಲೆ. ಆದ್ದರಿಂದ ಇಹದ ಬಾಳು ಬಲೆಯಾಗದೆ ಕಲೆಯಾಗ ಬೇಕಾದರೆ ಮನಮೆಚ್ಚಿದ ಹೆಣ್ಣು ವಿಶಾಲ ದೃಷ್ಟಿಯ ಇನಿಯ, ಅಂತಃಕರಣಪೂರ್ಣಕವಾದ ಆಕಳಂಕ ಆತ್ಮೀಯತೆ ಇರಬೇಕು.

ಮನಬಂದ ಹೆಣ್ಣನ್ನು ವಿನಯದಲಿ ಕರೆದಿತ್ತು
ಮನಮುಟ್ಟಿ ಬಾಳ್ವೆ ಮಾಡಿದರೆ ಅಮೃತದ
ಕೆನೆಯ ಸವಿದಂತೆ ಸರ್ವಜ್ಞ ||

ಮದುವೆಯೆಂಬುದು ಕಾಟಾಚಾರದ ಯಾಂತ್ರಿಕ ಬಂಧನವಾಗದೆ ಸಂಪ್ರದಾಯದ ಶುಷ್ಕ ಪದ್ಧತಿಯಾಗದೆ ಹೃದಯಗಳ ಸಮ್ಮಿಳನವಾಗಬೇಕು. ಹಾಗಾದರೆ ಮಾತ್ರ ಅದು ಅರ್ಥಪೂರ್ಣವೂ ಸಾರ್ಥಕವೂ ಸುಂದರವೂ ಆಗುತ್ತದೆ ಎನ್ನುವ ಈ ಪ್ರಗತಿಪರ ಸ್ವತಂತ್ರ ಮನೋಧರ್ಮ ಆಧುನಿಕ ಯುಗದ ವಿಚಾರಧೋರಣೆಯ ಪ್ರತೀಕವಾಗಿದೆ. ಹೆಣ್ಣುಗಂಡಿನ ಮಿಲನ ಮನಸಿನದಾಗದೆ ಕೇವಲ ದೈಹಿಕಾಕರ್ಷಣೆಗೋ ಕುಟುಂಬದ ಬಲವಂತಕ್ಕೋ ಬಲಿ ಬಿದ್ದ ಬಂಧನವಾಗಿಬಿಟ್ಟರೆ ಸಂಸಾರ ತನ್ನ ಮೂಲಭೂತವಾದ ನಿಯಮವನ್ನು ಉಲ್ಲಂಘಿಸಿ ದಂತಾಗಿ, ಎತ್ತು ಏರಿಗೆ ಕೋಣ ನೀರಿಗೆ ಎಳೆದಂತೆ ಏರುಪೇರಾಗಿ ಬಾಳು ಹೋಳಾಗುತ್ತದೆ, ಹುಳಿತು ನಾರುವ ಹೊಂಡವಾಗುತ್ತದೆ. ಆಗ ನಾರಿ ಮಾರಿಯಾಗುತ್ತಾಳೆ. ಆಗ ಗಂಡಿಗೆ ಅನ್ನಿಸುತ್ತದೆ :

ಸೋರುವ ಮನೆಗಿಂತ ದಾರಿಯ ಮರ ಲೇಸು
ಹೋರುವ ಸತಿಯ ಬದುಕಿಂದ ಹೊಡೆದೊಯ್ವ
ಮಾರಿ ಲೇಸೆಂದ ಸರ್ವಜ್ಞ ||

ದುರದೃಷ್ಟವಶದಿಂದ ಹೀಗಾಗದೆ ಅದೃಷ್ಟವಶದಿಂದ,
ಬೆಚ್ಚನೆ ಮನೆಯಾಗಿ ವೆಚ್ಚಕ್ಕೆ ಹೊನ್ನಾಗಿ
ಇಚ್ಛೆಯನು ಅರಿವ ಸತಿಯಾಗೆ ಸ್ವರ್ಗಕ್ಕೆ
ಕಿಚ್ಚು ಹಚ್ಚೆಂದ ಸರ್ವಜ್ಞ  ||

ಸರ್ವಜ್ಞನ ಸಂಸಾರ ಸಂಹಿತೆ ಎಷ್ಟು ಮಧುರ, ಎಷ್ಟು ಮನೋಜ್ಞ, ಎಷ್ಟು ಸಾರ್ವಕಾಲಿಕ? ಇಂಥವನನ್ನು ಜೀವನವಿರೋಧಿ ಸಂಸಾರಮತ್ಸರಿ ಸಂಕುಚಿತ ಮತಿ ಎನ್ನುವುದುಂಟೇ?

ನಮ್ಮ ಜೀವನದ ಹಲವು ಒಳಿತು ಕೆಡುಕುಗಳಿಗೆ ನಮ್ಮ ಸಹವಾಸವೂ ಕಾರಣ. ಮಗು ಒಳ್ಳೆಯ ಪರಿಸರದಲ್ಲಿ ಬೆಳೆದರೆ, ಅದರ ಅವಲೋಕನದಿಂದ ಅನುಕರಣದಿಂದ ಅನುಸರಣದಿಂದ ಅದರ ಪ್ರವೃತ್ತಿಯು ಉತ್ತಮಗೊಳ್ಳುತ್ತದೆ. ಬದಲಾಗಿ ತಂದೆ ತಾಯಿಗಳು ಕುಸಂಸ್ಕೃತಿವಂತರಾದರೆ ಅವರ ಬೈಗುಳ ದುರಾಚಾರಗಳನ್ನು ಅದೂ ಕಲಿಯುತ್ತದೆ. ಅದಕ್ಕೆ ಅರಿವಾಗದಂತೇ ಮನಸ್ಸು ರೂಪುಗೊಳ್ಳುತ್ತಾ ನಡೆಯುತ್ತದೆ. ಹಾಗೆಯೇ ನಮ್ಮ ಸುತ್ತ ಮುತ್ತಲಿನ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಅನುಭವಗಳು ಅನವರತವೂ ತಮ್ಮ ಮುಂದ್ರೆಯನ್ನು ನಮ್ಮ ಮನಸ್ಸಿನ ಮೇಲೆ ಒತ್ತುತ್ತಿರುತ್ತವೆ. ಮೊದಮೊದಲು ಅಂತರಂಗ ಅವುಗಳನ್ನು ಪ್ರತಿಭಟಿಸಿದರೂ ಕ್ರಮಕ್ರಮೇಣ ಬಹಿರಂಗದ ಒತ್ತಡ ಅಧಿಕವಾಗುತ್ತ ಬಂದಂತೆ ತನ್ನ ಸಹಜ ನಿರೋಧ ಶಕ್ತಿಯನ್ನು ಕಳೆದುಕೊಂಡು ಪ್ರಭಾವಕ್ಕೆ ಶರಣಾಗಿ ಅನಂತರ ಪರಿಸರದಂತೆಯೇ ತಾನೂ ಮಾರ್ಪಾಡಾಗುತ್ತದೆ. ಇದು ವೈಜ್ಞಾನಿಕವಾಗಿಯೂ ಸಿದ್ಧವಾಗಿರುವ ಸಂಗತಿ. ಆದ್ದರಿಂದ ನಾವು ಜನರೊಡನೆ ವ್ಯವಹರಿಸುವಾಗ ಸ್ನೇಹವರ್ಧಿಸಿಕೊಳ್ಳುವಾಗ ಅತ್ಯಂತ ಜಗರೂಕರಾಗಿದ್ದು ಅವರ ನಡೆನುಡಿಯನ್ನು ಗಮನಿಸಬೇಕಾಗುತ್ತದೆ. ಸಜ್ಜನರು ಯಾರು, ದುರ್ಜನರು ಯಾರು ಎಂಬುದನ್ನು ಅವರವರ ಗೈಮೆಯಿಂದ ಗುರುತಿಸಿ ಸಾವಧಾನ ವಾಗಿ ತೀರ್ಮಾನಿಸಬೇಕಾಗುತ್ತದೆ. ಸರ್ವಜ್ಞನ ವಿಸ್ತೃತವಾದ ಲೋಕಾನುಭವ ಕುಶಾಗ್ರಮತಿ ಇದನ್ನು ಸುಂದರವಾಗಿ ಸಮರ್ಥವಾಗಿ ಪೃಥಕ್ಕರಿಸುತ್ತದೆ :

ನಾರಂಗಿಯ ಸಸಿಗೆ ನೀರು ತಂದೆರೆದಿಹರೆ
ಮೀರಿದಮೃತವನೀವಂತೆ ಹಿರಿಯರ
ಕಾರುಣ್ಯವೆಂದ ಸರ್ವಜ್ಞ ||

ಸತ್ಯವಂತರ ನುಡಿ ನಡೆ ಸಂಗ ಸದಮಲತೀರ್ಥವಿದ್ದಂತೆ, ಕೇವಲ ಹರಿವ ನೀರಲ್ಲ ವೆನ್ನುತ್ತಾನೆ ಕವಿ. ಹೊಡೆದರೂ ಬಡಿದರೂ ಬೈದರೂ ಭಂಗಿಸಿದರೂ ಸಜ್ಜನ ಸಹವಾಸ ಕಡುಲೇಸು.