ಒಂದು ಅರ್ಥದಲ್ಲಿ ಕವಿ ಕಾಲ ದೇಶ ಧರ್ಮನಿಬದ್ಧ; ಮತ್ತೊಂದು ಅರ್ಥದಲ್ಲಿ ಆತ ಕಾಲಾತೀತ, ದೇಶಾತೀತ, ಧರ್ಮಾತೀತ. ತೋರಿಕೆಗೆ ಇವೆರಡೂ ಪರಸ್ಪರ ವಿರುದ್ಧವೆಂದು  ಕಂಡರೂ ವಸ್ತುಶಃ ಇವು ಒಂದಕ್ಕೊಂದು ಪೂರಕ, ಪೂರ್ಣಕ. ಸಾಗರದಲ್ಲಿನ ನದಿಯಂತೆ ಗಾಳಿಯಲ್ಲಿನ ಕಂಪಿನಂತೆ ತಾಯಿಯಲ್ಲಿನ ಮಗುವಿನಂತೆ ಒಂದನೆಯ ಅರ್ಥ ಎರಡನೆಯ ಅರ್ಥದಲ್ಲಿ ಸ್ವಯಿಚ್ಛೆಯಿಂದ ವಿಲಯನಗೊಳ್ಳುತ್ತದೆ, ತನ್ನ ಸಾರ್ಥಕತೆಗಾಗಿ ಸಾಯುಜ್ಯಕ್ಕಾಗಿ. ಸಾಮಾನ್ಯ ಕವಿ ಒಂದನೆಯ ಅರ್ಥದ ಪೂಜರಿಯಾದರೆ ಶ್ರೇಷ್ಠಕವಿ ಎರಡನೆಯ ಅರ್ಥದ ಸಾಕಾರ ಸ್ವರೂಪ.

ಮನುಷ್ಯ ತನಗೆ ತಾನೇ ಸಂಪೂರ್ಣನಲ್ಲ, ಸ್ವತಂತ್ರನಲ್ಲ. ಅವನ ಪ್ರತಿಯೊಂದು ಅನಿಸಿಕೆಯ ಹಿಂದೆ ಅಭಿವ್ಯಕ್ತಿಯ ಹಿಂದೆ ಗೈಮೆಯ ಹಿಂದೆ ಅವನವರೆಗಿನ ಇಡೀ ಮನುಕುಲದ ಬೋಧನೆಯ ಸಾಧನೆಯ ಪ್ರತಿಮಾತ್ಮಕ ಹಿನ್ನೆಲೆಯಿದೆ. ಈ ಪ್ರಸ್ಫುಟ ಬುನಾದಿಯ ಮೇಲೆ ನಿಂತು ವ್ಯಕ್ತಿ ಆ ಎಳೆಗಳನ್ನು ಹಿಡಿದು ತನ್ನ ಭಾವ ಬುದ್ದಿ ಪ್ರತಿಭೆಗಳಿಗೆ ತಕ್ಕಂತೆ ಅವುಗಳನ್ನು ಮಾರ್ಪಡಿಸುತ್ತಾನೆ, ನೇರ್ಪಡಿಸುತ್ತಾನೆ, ನೂತನಿಸುತ್ತಾನೆ, ಮುಂದುವರಿಸುತ್ತಾನೆ. ಆಗ ಅದು ಅಭೂತಪೂರ್ವವೆಂಬಂತೆ ಸ್ವತಂತ್ರವೆಂಬಂತೆ ಗೋಚರಿಸುತ್ತದೆ. ಮಗ ಬೇರೆಯೇ ವ್ಯಕ್ತಿಯಾಗಿದ್ದರೂ ತನ್ನ ತಾತನ ತಂದೆಯ ತಾಯಿಯ ಅಂಶಗಳನ್ನು ಹೊತ್ತು ಅವರ ವಂಶವನ್ನು ಮುಂದುವರಿಸುವಂತೆ, ನಮ್ಮ ಅಭಿಪ್ರಾಯಗಳು ಸಾಧನೆಗಳು ಸ್ವತಂತ್ರವೂ ಮಹತ್ವಪೂರ್ಣವೂ ಆದುವೆಂದು ಭಾಸವಾದರೂ ಅವುಗಳ ಅಂತರಾಳದಲ್ಲಿ ಮಾನವ ಜನಾಂಗದ ಭೂತಕಾಲದ ಸಾಧನೆಯ ಅಂಶಗಳು ನಮಗರಿವಿಲ್ಲದಂತೆಯೇ ಅಡಗಿಕೊಂಡಿವೆ. ಸುಪ್ರಸಿದ್ಧ ಮನೋವಿಜ್ಞಾನಿ ಯೂಂಗ್ ಇದೇ ಅಭಿಪ್ರಾಯವನ್ನು ಮಾನವ ಮನದಲ್ಲಿ ಜನಾಂಗೀಯ ಸುಪ್ತಮನಸ್ಸು (Racial unconsciousness) ಇದೆ ಎನ್ನುವಲ್ಲಿ ವ್ಯಕ್ತ ಪಡಿಸಿದ್ದಾನೆ. ಮಾತ್ರವಲ್ಲ, ಕಾವ್ಯದಲ್ಲಿ ಮನುಷ್ಯನ ಮನಸ್ಸಿನ ಬೆಳವಣಿಗೆಯ ಹಂತಗಳು ಸೂಕ್ಷ್ಮವಾಗಿ ಆವಿರ್ಭವಿಸಿವೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಯಾವ ಸೃಷ್ಟಿಯೂ ಆಕಸ್ಮಿಕವಲ್ಲ. ಎಂದರೆ ಪಂಪನವಾಣಿಯಲ್ಲಿ, ಪಂಪತನ ತುಂಬಿದ್ದರೂ, ಹತ್ತನೇ ಶತಮಾನದ ವರೆಗಿನ ವ್ಯಾಸಾದಿಯಾದ ಭಾರತಕಾರರ ಧ್ವನಿ ಅಂತರ್ನಿಹಿತವಾಗಿದೆ; ಕುವೆಂಪುವಾಣಿಯಲ್ಲಿ ಉಪನಿಷತ್ತಿನ ಋಷಿಗಳಿಂದ ಹಿಡಿದು ವಾಲ್ಮೀಕ್ಯಾದಿಯಾದ ರಾಮಾಯಣಕಾರರ ಅಂತರಂಗದ ಸ್ಪಂದನಗಳಿವೆ ಎಂದರ್ಥ. ಅವುಗಳನ್ನೊಳಗೊಂಡು ಅವುಗಳನ್ನು ಮೀರಿ ನಿಂತಿರುವುದರಲ್ಲೇ ಆ ಕವಿಗಳ ಕೃತಿಗಳ ಶ್ರೇಷ್ಠತೆ ಅಡಗಿದೆ. ಈ ‘ಭೂತ’ ಪ್ರಜ್ಞೆ ಅಥವಾ ವಿಶಾಲಾರ್ಥದಲ್ಲಿ ಪರಂಪರೆಯ ಪ್ರಜ್ಞೆ ಕೆಲವು ಕವಿಗಳಲ್ಲಿ ಪ್ರಗಾಢವಾಗಿರಬಹುದು, ಕೆಲವರು ಉದ್ದೇಶಪೂರ್ವಕ ವಾಗಿ ಅದನ್ನು ಧಿಕ್ಕರಿಸಲು ಅಥವಾ ಅದರಿಂದ ಭಿನ್ನವಾಗಲು ಪ್ರಯತ್ನಿಸಬಹುದು. ಏನೇ ಆದರೂ ಯಾವ ಕವಿಯೂ ಈ ಭೂತಪ್ರಜ್ಞಾವಲಯದಿಂದ ಪೂರ್ಣವಾಗಿ ಪಾರಾಗಲಾರ. ಏಕೆಂದರೆ ಮುಂದೆ ಅದು ವಿವಿಧ ರೂಪದಲ್ಲಿ ಗತಿಯಲ್ಲಿ ವಿಜೃಂಭಿಸುತ್ತದೆ. ಇದನ್ನೊಳಗೊಂಡ ಸಾಹಿತ್ಯವೂ ಸತ್ವಸಂಪನ್ನವಾಗುತ್ತದೆ, ಘನವಾಗುತ್ತದೆ, ವಿಚಾರಪ್ರಚೋದಕವಾಗುತ್ತದೆ.

ಈ ದಿಸೆಯಲ್ಲಿ ಮಾಡ್‌ಬಾಡ್ಕಿನ್ ಎಂಬಾಕೆಯ ‘Archetypal Patterns in peoetry’ ಒಂದು ಮಹತ್ವದ ಕೃತಿ.

‘No peot, no artist of any art, has his compete meaning alone. His significance, his appreciations is the appreciations of his relations to the dead poets and artists. You cannot value him alone……”
– T.S. Eliot : Sacred Wood, p. 53.

ಈ ಭೂತಪ್ರಜ್ಞೆಯಂತೆಯೇ ವರ್ತಮಾನ ಪ್ರಜ್ಞೆ ಅಥವಾ ಸಮಕಾಲೀನ ಪ್ರಜ್ಞೆಯೂ ಸಾಹಿತ್ಯದಲ್ಲಿ ಮರೆಯಲಾಗದ ಅಂಶ. ಭೂತದ ಬೇರಿನ ಕಾಂಡವಾಗಿರುವ ಕವಿ, ಆ ಕಾಂಡ  ನಿಂತಿರುವ ವರ್ತಮಾನವನ್ನು ಕಡೆಗಣಿಸುವುದು ಸಾಧ್ಯವಿಲ್ಲ. ಆ ಗಾಳಿ ಬೆಳಕುಗಳನ್ನು ಕುಡಿದು ಜೀವಿಸುವ ಕವಿ ಅಂದಂದಿನ ಸಹಜವಾದ ಆಲೋಚನೆಗಳನ್ನೂ ಅನುಭವಗಳನ್ನೂ ತನ್ನಲ್ಲಿ ಅಂತರ್ಗತ ಮಾಡಿಕೊಂಡು ಅವುಗಳ ಬಗೆಗೆ ತನ್ನ ವಿಶಿಷ್ಟ ಪ್ರತಿಕ್ರಿಯೆಗಳನ್ನು ತೋರಿಸಬೇಕಾಗುತ್ತದೆ. ಏಕೆಂದರೆ ಸಾಹಿತ್ಯ ಜೀವನದಿಂದ ಹುಟ್ಟಿ ಜೀವನದಿಂದ ಪೋಷಣೆ ಗೊಂಡು ಜೀವನಕ್ಕೆ ಬೆಳಕನ್ನು ನೀಡುವಂಥದು. ಆದ್ದರಿಂದಲೇ “Literature is the criticism of life” ಎಂದು ಮ್ಯಾಥೂ ಆರ್ನಾಲ್ಡರೂ, Literature is the golden mirror of contemporary society” ಎಂದು ಸ್ವಾಮಿ ವಿವೇಕಾನಂದರೂ ಕರೆದಿದ್ದಾರೆ. ಈ ಹೇಳಿಕೆಗಳಲ್ಲಿರುವ ಅರೆಕೊರೆಗಳನ್ನು ಸದ್ಯಕ್ಕೆ ಕೈಬಿಟ್ಟು ಸ್ಥೂಲಾರ್ಥವನ್ನು ಒಪ್ಪಿಕೊಳ್ಳ ಬೇಕಾಗುತ್ತದೆ. ಮಾನವನ ಮೂಲಭೂತ ಪ್ರವೃತ್ತಿಗಳು ಎಲ್ಲ ಕಾಲಕ್ಕೂ ಒಂದೇ ಆದರೂ ಬದಲಾಗುವ ಕಾಲಗತಿಗನುಗುಣವಾಗಿ ಅವುಗಳ ಸ್ಥಿತಿಗತಿಗಳು ಯತಿ ಮತಿಗಳು ವ್ಯತ್ಯಾಸ ಹೊಂದುತ್ತವೆ; ಈ ವ್ಯತ್ಯಾಸಗಳು ಅಂದಂದಿನ ಸಾಹಿತ್ಯದಲ್ಲಿ ‘ಪ್ರತಿಬಿಂಬಿತ’ವಾಗುತ್ತವೆ, ಅಥವಾ ‘ಪ್ರತಿಭಾವಿತ’ವಾಗುತ್ತವೆ. ಈ ಅಂಶಗಳನ್ನು ತನ್ನ ಕೃತಿಯಲ್ಲಿ ಅಭಿವ್ಯಕ್ತಿಸದ ಕವಿ ಗತಕಾಲೀನ ಅನುಭವಗಳ ಕಗ್ಗವಿಯಲ್ಲಿ ಕುಳಿತ, ವಾಸ್ತವತೆಯನ್ನು ಮರೆತ, ಜೀವನ ವಿಮುಖಿಯೂ ಪ್ರಗತಿವಿರೋಧಿಯೂ ಆಗುತ್ತಾನೆ. ಹಾಗೆಯೇ ಕೇವಲ ಭವಿಷ್ಯತ್ಕಾಲೀನವಾದ ಅಸ್ಪಷ್ಟ ಊಹೆ ಕಲ್ಪನೆಗಳ ಬೆನ್ನು ಹತ್ತಿದ ಕವಿ ಪಲಾಯನಿಯಾಗುತ್ತಾನೆ, ಅವನ ಕೃತಿ ಜೀವಂತವಾಗದೆ ಸತ್ವಭರಿತವಾಗದೆ ಲಘುವಾಗುತ್ತದೆ, ಅಪ್ರಾಮಾಣಿಕವಾಗುತ್ತದೆ. ಅವನು ಬದುಕಿದ ಕುರುಹು ಆ ಕೃತಿಯಲ್ಲಿ ಇಲ್ಲವಾಗುತ್ತದೆ. ಸಾಹಿತ್ಯದ ಪರಿಣಾಮ ಉಪಯುಕ್ತ ವಾಗಿರಬೇಕಾದರೆ ಆಕರ್ಷಕವೂ ಅನುಸರಣೀಯವೂ ಆಗಿರಬೇಕಾದರೆ ಅದು ಜೀವನ ಸಂಬಂಧಿಯಾಗಿರಬೇಕು. ಆದ್ದರಿಂದ “ಸಮಕಾಲೀನ ಪ್ರಜ್ಞೆ ಎಂದರೆ, ಆಯಾ ಕವಿ ತಾನು ಬದುಕಿದ ಆ ಒಂದು ಕಾಲದ ಅಥವಾ ಶತಮಾನದ ಸಮಕಾಲೀನ ಜೀವನವನ್ನು ಎಷ್ಟರ ಮಟ್ಟಿಗೆ ಜೀವಂತವಾಗಿ ಅನುಭವಿಸಿ ತನ್ನ ಕೃತಿಯಲ್ಲಿ ಅಭಿವ್ಯಕ್ತಗೊಳಿಸಿದ್ದಾನೆ ಎನ್ನುವುದನ್ನು ಕುರಿತದ್ದು”. ಈ ಸಮಕಾಲೀನ ಅಥವಾ ವರ್ತಮಾನ ಪ್ರಜ್ಞೆ ಹಳೆಯ ವಸ್ತುಗಳನ್ನು ಸಂಗತಿಗಳನ್ನು ಆಧರಿಸಿದ ಕೃತಿಗಳಲ್ಲಿ ಸೂಚ್ಯವಾಗಿಯೂ ಸಮಕಾಲೀನ ವಸ್ತುಸಂಗತಿಗಳನ್ನು ಆಧರಿಸಿದ ಕೃತಿಗಳಲ್ಲಿ ಸ್ಫುಟವಾಗಿಯೂ ಪ್ರಕಟವಾಗುತ್ತದೆ, ಆಗಬೇಕು. ಸುಧಾರಣಾ ಮನೋಭಾವದ ಕವಿಗಳಲ್ಲಂತೂ ಈ ಪ್ರಜ್ಞೆ ಅತ್ಯಧಿಕ ಪ್ರಮಾಣದಲ್ಲಿ ಅಭಿವ್ಯಕ್ತವಾಗುತ್ತದೆ.

ಉತ್ತಮ ಸಾಹಿತ್ಯ ಕೇವಲ ಭೂತಪ್ರಜ್ಞೆಯನ್ನಾದರಿಸಿದ ಪುರಾಣವೂ ಅಲ್ಲ, ಕೇವಲ ವರ್ತಮಾನ ಪ್ರಜ್ಞೆಯನ್ನಾಧರಿಸಿದ ಚರಿತ್ರೆಯೂ ಅಲ್ಲ. ಇವೆರಡನ್ನೂ ಉಚಿತ ಪ್ರಮಾಣದಲ್ಲಿ ಒಳಗೊಂಡು ಮೂರನೆಯ ಪ್ರಜ್ಞೆಯೊಂದನ್ನು ಅದು ಹವಣರಿತು ತನ್ನಲ್ಲಿ ಗರ್ಭೀಕರಿಸಿ ಕೊಂಡಿರುತ್ತದೆ. ಇದೇ ಭವಿಷ್ಯತ್ ಪ್ರಜ್ಞೆ. ಈ ಪ್ರಜ್ಞೆಯನ್ನೊಳಗೊಂಡ ಕವಿಗಳು ಯಾವ ಸಾಹಿತ್ಯದಲ್ಲಾದರೂ ವಿರಳವೇ. ಇವರನ್ನು ದರ್ಶನಕವಿಗಳೆಂದೂ ಹೆಸರಿಸುವುದುಂಟು. ಇಂತಹ ಕವಿಗಳು ತಮ್ಮ ಹಿಂದಿನ ಅಂದಿನ ಅಂಶಗಳ ಪೃಥಕ್ಕರಣೆಯನ್ನು ಪ್ರತಿಮಾಕರಣವನ್ನು ತಮ್ಮ ಕೃತಿಗಳಲ್ಲಿ ಮಾಡುವುದರ ಜೊತೆಗೆ ತಮ್ಮ ದೈವದತ್ತವಾದ ಭವಿಷ್ಯದ್ಧರ್ಶನಮಾಡಿ ಆ ಸಂಭವನೀಯ ಸತ್ಯಗಳನ್ನೂ ಅಭಿವ್ಯಕ್ತಿಸಿರುತ್ತಾರೆ. ‘ವೃಕ್ಷವು ಬೀಜದಲ್ಲಿ ಅನನುಭೂತ ವಾಗಿರುವಂತೆ ಭವಿಷ್ಯತ್ ಪ್ರಜ್ಞೆ. ಈ ಪ್ರಜ್ಞೆಯನ್ನೊಳಗೊಂಡ ಕವಿಗಳು ಯಾವ ಸಾಹಿತ್ಯ ದಲ್ಲಾದರೂ ವಿರಳವೇ. ಇವರನ್ನು ದರ್ಶನ ಕವಿಗಳೆಂದೂ ಹೆಸರಿಸುವುದುಂಟು. ಇಂತಹ ಕವಿಗಳು ತಮ್ಮ ಹಿಂದಿನ ಅಂದಿನ ಅಂಶಗಳ ಪೃಥಕ್ಕರಣೆಯನ್ನು ಪ್ರತಿಮಾಕರಣವನ್ನು ತಮ್ಮ ಕೃತಿಗಳಲ್ಲಿ ಮಾಡುವುದರ ಜೊತೆಗೆ ತಮ್ಮ ದೈವದತ್ತವಾದ ಪ್ರತಿಭೆಯಿಂದ ಪ್ರತಿಭಾ ಶಕ್ತಿಯಿಂದ ಭವಿಷ್ಯದ್ದರ್ಶನಮಾಡಿ ಆ ಸಂಭವನೀಯ ಸತ್ಯಗಳನ್ನೂ ಅಭಿವ್ಯಕ್ತಿಸಿರುತ್ತಾರೆ.” ಇದನ್ನು ಶ್ರೇಷ್ಠಕವಿ ಕಂಡು ಕಾಣಿಸುತ್ತಾನೆ. “All art including contemporary art is hostorical” ಎಂಬ Hellen Gardner ಅವರ ಮಾತು, “Poets art the mirrors of the gigantic shadows which futuriay casts on present’ ಎಂಬ ಶೆಲ್ಲಿಯ ಮಾತೂ ಇದನ್ನೇ ಸಮರ್ಥಿಸುತ್ತವೆ. ಕೇವಲ ಒಂದು ಕಾಲದ ಒಂದು ದೇಶದ ಪ್ರಜ್ಞೆಯನ್ನು ಮಾತ್ರವೇ ಅಭಿವ್ಯಕ್ತಿಸುವ ಕಾವ್ಯ ಸರ್ವಕಾಲ ಸರ್ವದೇಶಗಳಲ್ಲೂ ಸಹೃದಯರಿಗೆ ವಿಚಾರ ಪ್ರಚೋದನೆಯನ್ನೂ ರಸಾನಂದವನ್ನೂ ನೀಡಲಾರದು. ತನ್ನ ಭೂತ ಮತ್ತು ವರ್ತಮಾನ ಪ್ರಜ್ಞೆಯನ್ನು ಸಾರ್ವಕಾಲಿಕ ಪ್ರಜ್ಞೆಯನ್ನಾಗಿ ಮಾರ್ಪಡಿಸುವುದರಲ್ಲಿಯೇ ಕವಿಕೌಶಲದ ಅಗ್ಗಳಿಕೆಯಿದೆ. ಈ ಅಗ್ಗಳಿಕೆ ಈ ಪ್ರಜ್ಞೆ ಇರುವುದರಿಂದಲೇ ಯಾವುದೋ ಕಾಲದಲ್ಲಿ ಬರೆದ ವ್ಯಾಸ ವಾಲ್ಮೀಕಿ ಭಾಸ ಕಾಳಿದಾಸ, ಪಂಪ, ಷೇಕ್ಸ್‌ಪಿಯರ್ ಮುಂತಾದ ಕವಿ ಕೃತಿಗಳು ಇಂದೂ ಪುನರ್ಪಠಿತವಾಗುತ್ತಿರುವುದು. “The experience of a poem is the experience both of a moment and of a life time” ಎಂಬ ಎಲಿಯಟ್ ವಾಣಿ ಈ ದೃಷ್ಟಿಯಿದ ತುಂಬ ಸಮಂಜಸವಾದದ್ದು. ಈ ಭವಿಷತ್ ಪ್ರಜ್ಞೆಯುಳ್ಳ ಕವಿ ಸರ್ವೋಪಕಾರಿಯೂ ಸರ್ವವಂದ್ಯನೂ ಆಗುತ್ತಾನೆ.

“ಕವಿ ಮನುಷ್ಯ ವ್ಯಕ್ತಿಯಾಗಿ ಯಾವುದೋ ಒಂದು ಕಾಲದಲ್ಲಿ ಬದುಕುವಂತೆ ಕಂಡರೂ, ಅವನು ತನ್ನ ಕಾವ್ಯದ ಸತ್ವದಿಂದ ಬದ್ಧನಾದಂತೆ ಕಂಡರೂ, ವಾಸ್ತವವಾಗಿ ಅವನು ಹಿಂದು-ಇಂದು – ಮುಂದುಗಳನ್ನೊಳಗೊಳ್ಳುವ ಕಾಲಾತೀತ ವರ್ತಮಾನದ ನೆಲೆಗೆ ನಿಲ್ಲುತ್ತಾನೆ” ಇಂತಹ ನೆಲೆಯಲ್ಲಿ ಬಹುಮಟ್ಟಿಗೆ ನಿಲ್ಲುವ ಭೂತಪ್ರಜ್ಞೆ, ವರ್ತಮಾನಪ್ರಜ್ಞೆ ಮತ್ತು ಭವಿಷ್ಯತ್ ಪ್ರಜ್ಞೆಗಳೆಂಬ ತ್ರಿಕಾಲಪ್ರಜ್ಞೆಯನ್ನುಳ್ಳ ಕವಿಗಳಲ್ಲಿ ಕನ್ನಡದ ಸರ್ವಜ್ಞ ಒಬ್ಬ.

ಸರ್ವಜ್ಞ ಹದಿನೇಳನೆಯ ಶತಮಾನದ ಮಹಾ ಅನುಭಾವಿ, ವಿಚಾರವಂತ, ಬುದ್ದಿ ಶ್ರೀಮಂತ. ಅವನು ಯಾವ ಮತದವನೂ ಅಲ್ಲ, ಎಲ್ಲ ಮತದವನು. ಸರ್ವಮತಗಳ ಸಾರವೂ ಅವನ ಮತಿಕೋಶದಲ್ಲಿ ಮಡುಗಟ್ಟಿ ಮೆರೆದಿದೆ. ಅವನಿಗೆ ಊರೆಲ್ಲ ನೆಂಟರು, ಕೇರಿಯೆಲ್ಲವು ಬಳಗ, ಧಾರುಣಿಯೆಲ್ಲ ಕುಲದೈವ. ಅವನಿಗೆ ಯಾರ ಹಂಗೂ ಇಲ್ಲ. ಹಿಂಡನಗಲಿದ ಗಜದಂತೆ ಇದ್ದು ‘ಕರದಿ ಕಪ್ಪುರ ಉಂಟು ಹಿರಿದೊಂದು ನಾಡುಂಟು ಹರನೆಂಬ ದೈವ ನನಗುಂಟು’ ಎಂದು ಸಾರಿ ಯಾರಿಗೂ ಸಿಕ್ಕದೆ ಯಾವುದಕ್ಕೂ ದಕ್ಕದೆ ಸರ್ವತಂತ್ರ ಸ್ವತಂತ್ರನಾಗಿ ಬದುಕಿದವನು ಅವನು. ಊರೂರು ತಿರುಗಿ ತೆರೆದ ಕಣ್ಣಿನಿಂದ ತೆರೆದ ಮನಸ್ಸಿನಿಂದ ಜನಜೀವನದ ಸೂಕ್ಷ್ಮಾತಿ ಸೂಕ್ಷ್ಮ ಅಂಶಗಳನ್ನು ಅವರ ಲೇಸುಪೊಲ್ಲಮೆಗಳನ್ನು ಅಂಕುಡೊಂಕುಗಳನ್ನು ಕುಟಿಲತೆ ಜಟಿಲತೆಗಳನ್ನು ಡಾಂಭಿಕತನ ದುರ್ವರ್ತನೆಗಳನ್ನು ಆಸೆನಿರಾಶೆಗಳನ್ನು ಸೋಲು ಗೆಲುವುಗಳನ್ನು – ಕಂಡು ವೈವಿಧ್ಯಮಯವಾದ ಅನುಭವಗಳ ಮಳೆಯಲ್ಲಿ ನೆಂದು ತನ್ನ ಭಾವಕೋಶವನ್ನು ತುಂಬಿಕೊಂಡವನು. ಸಾಂಸಾರಿಕ ಜೀವನವನ್ನವನು ತೊರೆದ ಸೂಚನೆಯಿದ್ದರೂ ಅದರ ಬಗೆಗೆ ಅವನಿಗೆ ಮತ್ಸರ ರೊಚ್ಚು ಬೆಳೆಯಲಿಲ್ಲ. ಅದು ನಿರ್ವರ್ಣ ನಿಸ್ಸಾರ ನಿರಾಕರ್ಷಕ ನಿರ್ಲಕ್ಷ್ಯನೀಯ ಎಂದು ಸಾರಿ ಬೊಬ್ಬಿಡಲಿಲ್ಲ. ಬದಲಾಗಿ ಆ ಜನತೆಯ ನಾನಾಮುಖ ಜೀವನದ ಬಗೆಗೆ ಅವನಿಗೆ ಅಪಾರವಾದ ಆಸಕ್ತಿ, ಅದಮ್ಯವಾದ ಆಶಾವಾದ, ನಿರ್ಹೇತುಕವಾದ ನಿತಾಂತಪ್ರೀತಿ. ಆದ್ದರಿಂದಲೇ ಜನರ ಭಾಷೆಯ ಬಗೆಗೆ ಭಾವನೆಯ ಬಗೆಗೆ ಆಹಾರದ ಬಗೆಗೆ ವಿಚಾರದ ಬಗೆಗೆ ಗುರಿಯ ಬಗೆಗೆ ದಾರಿಯ ಬಗೆಗೆ ಆಳವಾದ ಆರ್ದ್ರವಾದ ಅರಿವು ಅವನಿಗೆ. ಇಹದ ಬದುಕು-ಸಹ್ಯವಾಗಬೇಕು, ದೋಷದೂರವಾಗಬೇಕು, ಸತ್ವಭರಿತವಾಗಬೇಕು, ಆನಂದಮಯ ವಾಗಬೇಕು ಎಂಬುದು ಅವನ ಹೆಬ್ಬಯಕೆ. ಈ ಕಾರಣದಿಂದಲೇ ಯಾವೊಂದು ಸಂಸಾರಕ್ಕೂ ಅಂಟಿಕೊಳ್ಳದ ಅವನು ಲೋಕ ಸಂಸಾರಿಯಾದ. ಆ ಮಮತಾಮೂಲವಾದ ಸಾತ್ವಿಕ ಕ್ರೋಧದಿಂದ ಜನರ ಹೃದಯದಲ್ಲಿ ಮನೆ ಮಾಡಿರುವ ಮಾರಕಪ್ರಾಯವಾದ ರೋಗಗಳನ್ನು ಮೂಲೋತ್ಪಾಟಿಸಲು ಕಂಕಣ ಬದ್ಧನಾದ. ತೀಕ್ಷ್ಣವಾದ ಹರಿತವಾದ ನೇರವಾದ ನಿರ್ಮತ್ಸರ ಶೀಲವಾದ ನಿರ್ದಾಕ್ಷಿಣ್ಯವಾದ ನಿರ್ದಿಷ್ಟವಾದ ಪ್ರಾಮಾಣಿಕವಾದ ಪರಿಣಾಮಕಾರೀ ಮಾತು ಗಳಿಂದ ಅವುಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಸಮಾಜ ವೈದ್ಯನಾದ. ಮುಚ್ಚುಮರೆಯಿಲ್ಲದ ಆತನ ಸ್ವಚ್ಛ ಸತ್ವಶೀಲ ಮಾತುಗಾರಿಕೆಯಲ್ಲಿ ನಿರ್ಭೀತಿಯಿದೆ, ಸರಳ ಶಕ್ತಿಯಿದೆ, ಸಿಡಿಲಿನ ಶಾಖವಿದೆ, ಗುಡುಗಿನ ಮೊಳಗಿದೆ, ಮಿಂಚಿನ ಹೊಳಪಿದೆ, ಕುಳಿರ್ಗಾಳಿಯ ಶೀತಲತೆಯಿದೆ, ಖಡ್ಗದ ಹರಿತವಿದೆ, ಪಾದರಸದ ಪಟುತ್ವವಿದೆ, ಅಮೃತದ ಚೇತನದಾಯಕತ್ವವಿದೆ; ಅಂತೆಯೇ ಸುಧಾರಣೆಯ ಕಳಕಳಿಯಿದೆ ವ್ಯಾಪಕವಾದ ಜೀವನ ನೀತಿಯಿದೆ. ಜನರ ರೋಗಗಳಿಗೆ ಜನರ ಆಡುನುಡಿಯಲ್ಲೇ ಚಿಕಿತ್ಸೆ ಮಾಡುವ ಅವನ ವಿಧಾನ ತುಂಬಾ ಮನನೀಯವಾಗಿದೆ, ಪರಿಣಾಮಕಾರಿಯಾಗಿದೆ. ಲೋಕ ಬೆಳೆದಂತೆ, ನಾಗರಿಕತೆ ಹೆಚ್ಚಿದಂತೆ, ಜನಸಂಖ್ಯೆ ಅಧಿಕವಾದಂತೆ ಅದರ ಸಮಸ್ಯೆಗಳೂ ರೋಗಗಳೂ ಬೆಳೆಯುತ್ತಾ ಸಂಕೀರ್ಣವಾಗುತ್ತಾ ಹೋಗುತ್ತವೆ. ಸರ್ವಜ್ಞ ಕಂಡ, ಕಂಡು ಬೆಚ್ಚಿದ, ಬೆಚ್ಚಿ ಚುಚ್ಚಿದ ರೋಗಗಳು ಒಂದಲ್ಲ, ಹಲವಾರು.

ಪಾಪಮಿದು ಪುಣ್ಯಮಿದು ಹಿತ
ರೂಪಮಿದಹಿತ ಪ್ರಕಾರಮಿದು ಸುಖಮಿದು ದುಃ
ಖೋಪಾತ್ತಮಿದೆಂದಱಪುಗು
ಮಾ ಪರಮಕವಿಪ್ರಧಾನರಾ ಕಾವ್ಯಂಗಳ್

ಎಂದು ಕವಿರಾಜಮಾರ್ಗಕಾರ ಸಾವಿರ ವರುಷಗಳ ಹಿಂದೆ ಉದ್ಘೋಷಿಸಿದ ಮಾತು ಇಂದಿಗೂ ಸತ್ಯವಾಗಿದೆ. ನೀತಿ ಕಾವ್ಯದಲ್ಲಿರಬೇಕೇ ಬೇಡವೇ ಎಂಬುದು ಬೇರೆ ಪ್ರಶ್ನೆ. ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸುವ ಆಡಿದ್ದನ್ನೆಲ್ಲ ಹಾಡಾಗಿ ಮಾಡುವ ಅಪೂರ್ವ ಪರಿವರ್ತನಾಶಕ್ತಿ ಇರುವವರಿಗೆ ಶುಷ್ಕವಾಗಿ ತೋರುವ ನೀತಿಯನ್ನು ರಮಣೀಯವಾಗಿ ಅಸ್ವಾದನೀಯವಾದ ಕಾವ್ಯವನ್ನಾಗಿ ಮಾಡುವುದು ಅಸಾಧ್ಯವಲ್ಲ. ಜೀವನದರ್ಶಿಯಾದ ಜೀವನ ಚಿಕಿತ್ಸಕವಾದ ನೀತಿಯ ಮಾತುಗಳು ಸರ್ವಜ್ಞನ ರಸಹೃದಯವನ್ನು ಹೊಕ್ಕು ಬರುವಾಗ ಸುಂದರವಾದ ಆಕರ್ಷಕವಾದ ಅವಿಸ್ಮರಣೀಯವಾದ ಕಾವ್ಯಖಂಡಗಳಾಗಿ ಪರಿವರ್ತಿತವಾಗಿವೆ. ಅವನ ಜೀವನಪ್ರಜ್ಞೆ ಎಷ್ಟು ಪ್ರಗಾಢವಾದದ್ದೋ ಅವನ ಮಾತಿನ ರೀತಿಯೂ ಅಷ್ಟೇ ಪ್ರಭಾವಕಾರಿಯಾದದ್ದು. ಜೀವನ ಧರ್ಮ ಕಾವ್ಯ ಧರ್ಮಗಳೆರಡೂ ಅವಿನಾಸಂಗಿಗಳಾಗಿ ಕೈ ಕೈ ಹಿಡಿದು ನಡೆದಿವೆ ಇಲ್ಲಿ. ಮುನ್ನೂರು ವರ್ಷಗಳಿಗೂ ಹಿಂದೆ ಅವನು ಆಡಿದ ಮಾತುಗಳು ಇಂದೂ ಮುಂದೂ ಆದರಣೀಯವಾಗಿವೆ ಆದರ್ಶಪ್ರಾಯವಾಗಿವೆ, ಮತ್ತೆ ಮತ್ತೆ ಪರ‍್ಯಾಲೋಚಿಸಿ ಅರಿತು ಅರಗಿಸಿ ಕೊಳ್ಳಬೇಕಾದವುಗಳಾಗಿವೆ. ಅಚ್ಚಗನ್ನಡದ ಸರಳ ಸುಂದರ ಜನಪ್ರಿಯ ತ್ರಿಪದಿಗಳಲ್ಲಿ ತುಂಬಿರುವ ಅವನ ತ್ರಿಕಾಲ ಪ್ರಜ್ಞೆ ನಿಜಕ್ಕೂ ಬೆರಗುಗೊಳಿಸುತ್ತದೆ.

ಸರ್ವಜ್ಞನದು ಪ್ರಸಿದ್ಧವಾದ ಪ್ರಭುಸಮ್ಮಿತವಲ್ಲ, ಮಿತ್ರಸಮ್ಮಿತವಲ್ಲ, ಕಾಂತಾ ಸಮ್ಮಿತವಲ್ಲ, ಮಾತೃಸಮ್ಮಿತವೂ ಅಲ್ಲ, ಪಿತೃಸಮ್ಮಿತ. ತಂದೆಯಲ್ಲಿರುವ ಗೈರತ್ತು ಜೂರತ್ತು ನಿರ್ಭೀತಿ, ಪ್ರೀತಿಪೂರ್ಣವಾದ ಕಾಠಿಣ್ಯ, ನಿಶ್ಚಲವಾದ ಮನೋದಾರ್ಢ್ಯ, ಬಡಿದು ಬುದ್ದಿ ಕಲಿಸುವ  ಮನೋಧರ್ಮ ಅವನಲ್ಲಿವೆ. ಮಾನವ ಕಲ್ಯಾಣಾಕಾಂಕ್ಷಿಯಾದ ಅವನು ಕಾಣದ ಹೇಳದ ವಿಷಯವಿಲ್ಲ. ದೇವರು ಧರ್ಮ ಅರ್ಥ ಕಾಮ ಮೋಕ್ಷನೀತಿ ಆಚಾರ ವಿಚಾರ ಡಾಂಭಿಕತನ ಜತಿ ವಿದ್ಯೆ ಓದು ಗುರು-ಶಿಷ್ಯ ಸಂಬಂಧ ಭಕ್ತಿ ವೇಶ್ಯಾಸಮಸ್ಯೆ ಸತಿಪತಿ ಸಂಬಂಧ ಕಳ್ಳತನ ಅಹಂಕಾರ ಇಂದ್ರಿಯನಿಗ್ರಹ ದೇಶಾಭಿಮಾನ ಭಾಷಾಭಿಮಾನ ಸ್ತ್ರೀ ಮೂಢಾಚರಣೆಗಳು ಸಹವಾಸಫಲ ಬಡತನ ಸಿರಿತನ ವೈರಾಗ್ಯ ದಾನ ಉದಾರಿ ಜಿಪುಣ ಮಾತುಗಾರಿಕೆ ಸಾಲ ಭೋಜನ ಮದ್ಯಪಾನ ರಾಜನೀತಿ ಆಹಾರ ವೈದ್ಯ ಹಣ ವಿವಿಧ ವೃತ್ತಿ ಗಳು ಇತ್ಯಾದಿ ಇತ್ಯಾದಿಯಾದ ಸಾರ್ವತ್ರಿಕ ಸಂಗತಿಗಳ ವಿಶ್ವಕೋಶವಾಗಿದೆ ಅವನ ತ್ರಿಪದಿ ಪ್ರಪಂಚ. ಅವುಗಳಲ್ಲಿ ಅನುಭವದ ಕೆನೆಯುಂಟು, ಅರಿವಿನ ಮೊನೆಯುಂಟು, ತತ್ತ್ವದ ತೆನೆಯುಂಟು. ಅವುಗಳ ರೀತಿ ರಮ್ಯ, ಶೈಲಿ ಸರಳ, ಭಾಷೆ ಬಂಧುರ, ಉದ್ದೇಶ ಉದಾತ್ತ. ಈ ನಿರ್ಲಿಪ್ತನ ಈ ನಿರಂಕುಶಮತಿಯ ಈ ಲೋಕವಿರಕ್ತನ ಈ ಜೀವನಾನುರಕ್ತನ ಈ ಮತಮುಕ್ತನ ಈ ಸತ್ಯಸಿಕ್ತನ ತ್ರಿಪದಿಗಳಲ್ಲಿ ತುಂಬಿ ಸೂಸಿರುವ ಸಾರ್ವಕಾಲಿಕ ಸತ್ಯಗಳನ್ನು ಈಗ ಪರೀಕ್ಷಿಸಬಹುದು.

ವಿದ್ಯೆ ಜೀವನ ಪರಿಷ್ಕಾರಕವಾದ ಜೀವನ ಪೋಷಕವಾದ ಸಂಜೀವಿನಿ. ಅದು ಬುದ್ದಿಯನ್ನು ಬಲಿಯಿಸುತ್ತದೆ, ಭಾವವನ್ನು ಬೆಳೆಸುತ್ತದೆ, ಹೃದಯವನ್ನು ವಿಕಸಿಸುತ್ತದೆ. ಆ ಮೂಲಕ ಲೋಕ ಜೀವಿಗೆ ನಿಕಟವೂ ಪ್ರಕಟವೂ ಸಹ್ಯವೂ ಆತ್ಮೀಯವೂ ಆಗುವಂತೆ ಮಾಡುತ್ತದೆ. ಜೀವನದಲ್ಲಿ ಇಂತಹ ಮಹತ್ಪರಿವರ್ತನೆಯನ್ನುಂಟುಮಾಡಬಲ್ಲ ಶಿಕ್ಷಣವನ್ನು ನೀಡುವುದು ತಂದೆ ತಾಯಿಗಳ ಆದ್ಯ ಕರ್ತವ್ಯ. ಅವರು ಕರ್ತವ್ಯ ವಿಮುಖರಾದರೆ?

ವಿದ್ಯೆ ಕಲಿಸದ ತಂದೆ, ಬುದ್ದಿ ಹೇಳದ ಗುರುವು
ಬಿದ್ದಿರಲು ಬಂದು ನೋಡದ
ತಾಯಿಯು ಶುದ್ಧ ವೈರಿಗಳು ಸರ್ವಜ್ಞ ||

ಜೀವನದಾತನಾದ ತಂದೆ ಜೀವನವೈರಿಯಾಗುತ್ತಾನೆ, ಎಂದೆಂದೂ ಮರೆಯಲಾಗದ ಪೂರೈಸಿಕೊಳ್ಳಲಾಗದ ಕೊರತೆಯನ್ನುಂಟುಮಾಡಿ – ವಿದ್ಯೆ ಕಲಿಸದಿದ್ದರೆ. ಕಡ್ಡಾಯ ಶಿಕ್ಷಣದ ಈ ದಿನಗಳಲ್ಲಿ ಸರ್ವಜ್ಞ ಅಂದು ಸಾರಿದ ಸತ್ಯ ಗಮನಾರ್ಹವಾಗಿದೆ. ವಿದ್ಯೆಯಿಂದ ಬರುವ ಸುಖ, ಅವಿದ್ಯೆಯಿಂದ ಬರುವ ಹಾನಿಗಳನ್ನು ತೀವ್ರ ಪರಿಣಾಮಕಾರಿಯಾದ ಮಾತುಗಳಲ್ಲಿ ಎದೆಗೆ ಗುದ್ದಿದಂತೆ ಹೀಗೆ ಹೇಳುತ್ತಾನೆ :

ವಿದ್ಯೆವುಳ್ಳವನ ಮುಖವು ಮುದ್ದು ಬರುವಂತಿಕ್ಕು
ವಿದ್ಯೆವಿಲ್ಲದನ ಬರಿಮುಖವು ಹಾಳೂರು
ಹದ್ದಿನಂತಿಕ್ಕು ಸರ್ವಜ್ಞ ||

ಆದರೆ ಈ ಓದು ಕೇವಲ ಅಕ್ಕರಿಗತನವಾಗಬಾರದು. ಹೂರಣ ಬಿಟ್ಟು ಕಣಕ ತಿಂದರೆ ರುಚಿಯಿದ್ದೀತೆ? ಅದರ ಅಂತರಂಗದ ಅರಿವಿದ್ದರೆ ಮಾತ್ರ ಅದು ಜೀವನತಾರಕವಾಗುತ್ತದೆ. ಅದಕ್ಕೆ ಸರ್ವಜ್ಞನ ಸುಂದರ ವ್ಯಾಖ್ಯಾನವಿದು :

ಓದಿದ ಓದು ತಾ ಮೇದ ಕಬ್ಬಿನ ಸಿಪ್ಪೆ
ಓದಿನ ಒಡಲನರಿದಿಹರೆ ಸಿಪ್ಪೆ
ಬ್ಬಾದಂತೆ ಕಾಣೊ ಸರ್ವಜ್ಞ ||

ಸದ್ವಿದ್ಯೆಯನ್ನು ಕಲಿಯಬೇಕಾದರೆ ಸದ್ಗುರುವಿನ ಆಶ್ರಯ ಆರಾಧನೆ ಬೇಕು. ಅವನು ಆತ್ಮಶುದ್ದಿಯನ್ನು ಜೀವನಯಾನವನ್ನು ದೈವದರ್ಶನ ಮಾರ್ಗವನ್ನು ಬೋಧಿಸುತ್ತಾನೆ. ಅಂತಹ ಗುರುವು ದೈವಕೃಪೆಯಿಂದಲೇ ದೊರೆಯುತ್ತಾನೆ.

ಗುರುವಿಂಗು ದೈವಕ್ಕು ಹಿರಿದು ಅಂತರವುಂಟು
ಗುರು ತೋರ್ವ ದೈವದೆಡೆಯನ್ನು ದೈವ ತಾ
ಗುರುವ ತೋರುವುದು ಸರ್ವಜ್ಞ ||

ಗುರುವಿನ ಮಹತ್ವ ಅಗಾಧ, ನಿಜ. ಎಂಥವರು ಬೇಕಾದರೂ ಗುರುವಾಗಬಹುದೇ? ಇಲ್ಲ, ಅದಕ್ಕೂ ನಿರ್ದಿಷ್ಟವಾದ ಗೊತ್ತು ಗುರಿ ಅರ್ಹತೆಗಳುಂಟು.

ಹೇಳಬಲ್ಲಡೆ ಗುರುವು ಕೇಳಬಲ್ಲಡೆ ಶಿಷ್ಯ
ಹೇಳಲು ಕೇಳಲರಿಯದಾ ಗುರುಶಿಷ್ಯ
ಮೇಳವೆಂತೆಂದ ಸರ್ವಜ್ಞ ||

ಗುರುಶಿಷ್ಯರಿಬ್ಬರೂ ಯೋಗ್ಯರಾಗಿದ್ದರೆ ಮಾತ್ರ ಯೋಗ್ಯ ಲಾಭ ದೊರೆಯುತ್ತದೆ. ಆದರೆ ಉದಾಸೀನದಿಂದ ಗುರು, ಕೇವಲ ಗೌರವದಿಂದ ಶಿಷ್ಯ ಇದ್ದರೆ ಸಾಲದು. ಅವರಲ್ಲಿ ಪರಸ್ಪರ ಪ್ರಶ್ನೆ – ಉತ್ತರ, ಸಂದೇಹ – ಸಮಾಧಾನ ಮೂಡಬೇಕು. ಸಮಸ್ಯೆಗಳ ವಿಚಾರಗಳ ಸಂಘರ್ಷವಾಗಬೇಕು. ಶಿಷ್ಯನನ್ನು ಗುರುವೂ ಗುರುವನ್ನು ಶಿಷ್ಯನೂ ಒರೆದೊರೆದು ಕೊರೆಕೊರೆದು ನೋಡಬೇಕು, ಪರೀಕ್ಷಿಸಬೇಕು. ಸದುದ್ದೇಶಪೂರ್ಣವಾದ ಈ ಸಂಘರ್ಷದಿದ ಅವಿನಾಶಿಯಾದ ಸತ್ಯಜ್ಞಾನ ಹೊರಹೊಮ್ಮುತ್ತದೆ. ಗುರುವೂ ಬೆಳೆಬೆಳೆಯುತ್ತಾ ಹೋಗು ತ್ತಾನೆ, ಶಿಷ್ಯನೂ ತಿಳಿತಿಳಿಯುತ್ತಾ ಹೋಗುತ್ತಾನೆ. ಇದನ್ನು ತುಂಬ ಸಮುಚಿತವಾಗಿ  ಸಹಜೋಪಮೆಯಿಂದ ಕಣ್ಣಿಗೆ ಕಟ್ಟುವಂತೆ ಹೇಳುತ್ತಾನೆ ಸರ್ವಜ್ಞ :

ಕಟ್ಟಿಗೆಗಳೆರಡನ್ನು ಕಟ್ಟಿಟ್ಟರೇಹುದು
ಗಟ್ಯಾಗಿ ಎರಡ ಮಥಿಸಲ್ಕೆ ಬೇಗೆಯದು
ಬೆಟ್ಟಕೊಂಡಂತೆ ಸರ್ವಜ್ಞ ||

ಜ್ಞಾನ ಸಂಪಾದನೆಯ ಈ ಮೂಲ ನಿಮಯವನ್ನು ಮರೆತಿರುವುರಿಂದಲೇ ಇಂದು ನಮ್ಮ ವಿದ್ಯೆ ನಿಸ್ಸತ್ವವೂ ನಿರುಪಯುಕ್ತವೂ ಗುರಿವಿಹೀನವೂ ಆಗಿದೆಯೆಂಬುದನ್ನು ಗಮನಿಸಬೇಕು.

ಮಾತೆಂಬುದು ಮನುಷ್ಯನ ಮೂಲಧನಗಳಲ್ಲಿ ಒಂದು. ಅದರ ಪ್ರಕಾರ ಪರಿಣಾಮ ಅಪಾರ. ‘ಮಾತೆಂಬುದು ಜ್ಯೋತಿರ್ಲಿಂಗ’ ಎಂದರು ಬಸವಣ್ಣನವರು. ‘ಮಾತು ಬಲ್ಲವನು ಮೂಲೋಕ ಗೆದ್ದ’ ಎಂದಿತು ಜನವಾಣಿ. ಮಾತಾಡುವುದು ಮುಖ್ಯವಲ್ಲ, ಹೇಗೆ ಆಡ ಬೇಕೆಂಬುದು ಮುಖ್ಯ. ಆ ಅಮೂಲ್ಯ ನಿಧಿಯನ್ನು ಸೂಕ್ತವರಿತು ಸುಂದರವಾಗಿ ಶಕ್ತಿಯುತ ವಾಗಿ ಬಳಸಬೇಕು. ಅರಿತು ಆಡಿದ ಹೃದಯದಾಳದಿಂದ ಮೂಡಿದ ಪ್ರತಿ ಮಾತೂ ಮಾಣಿಕ್ಯದಂತೆ ಮೋಹಕ ಮಲಿಕ ಮಿತ ಹಿತ. ಈ ಮಾತುಬಲ್ಲತನ ಒಂದು ದೇವಕಲೆ.

ಮಾತು ಬಲ್ಲಾತಂಗೆ ಯೇತವದು ಸುರಿದಂತೆ
ಮಾತಾಡಲರಿಯದಾತಂಗೆ ಬರಿಯೇತ
ನೇತಾಡಿದಂತೆ ಸರ್ವಜ್ಞ ||

ಸಾಹಿತ್ಯ ಕಲೆಯಲ್ಲಂತೂ ಸರ್ವಜ್ಞನ ಈ  ಮಾತು ಸರ್ವದಾ ದಾರಿದೀಪವಾಗಬೇಕು.

ಜಗತ್ತಿನಲ್ಲಿ ದೈವದ ಹೆಸರಿನಲ್ಲಿ ಧರ್ಮದ ಹೆಸರಿನಲ್ಲಿ ಅಪಾರವಾದ ಘರ್ಷಣೆಯಾಗಿ ರುವುದುಂಟು, ಸಮರಗಳೇ ನಡೆದಿರುವುದುಂಟು, ಜನಜೀವನ ಉಲ್ಲೋಲ ಕಲ್ಲೋಲವಾಗಿ ಅಶಾಂತಿಯ ಆಗರವಾಗಿರುವುದುಂಟು. ಇದು ಮಾನವನ ಹೃದಯಸಂಕೋಚದ ಬುದ್ದಿಮಾಂದ್ಯದ ಪರಿಣಾಮವಲ್ಲದೆ ಬೇರೆಯಲ್ಲ. ನೂರೆಂಟು ದೈವಗಳ ಕಲ್ಪನೆಯಿಂದ ನಮ್ಮ ಚಿತ್ತೈಕಾಗ್ರತೆಗೆ ಚ್ಯುತಿ ಬಂದು ನಂಬುಗೆ ಶಿಥಿಲವಾಗಿ ಸಂಶಯ ಪ್ರಬಲಿಸಿ ದೊರೆಯಬೇಕಾದ ಸತ್ಫಲ ಸುದೂರದಲ್ಲಿ ನಿಂತು ಅಣಕಿಸುತ್ತಿದೆ. ಇದರಿಂದ ಜನಜನದ ಮಧ್ಯೆ ಮನಮನದ ಮಧ್ಯೆ ಪ್ರತ್ಯೇಕತೆಯ ಗೋಡೆಗಳೆದ್ದಿವೆ. ಇದನ್ನು ತೊರೆದು ಈ ಜಗತ್ತೆಲ್ಲವೂ ಒಂದೇ ಶಕ್ತಿಯ ಸೃಷ್ಟಿ, ನಾವೆಲ್ಲ ಅವನ ಮಕ್ಕಳು ಎಂದು ಭಾವಿಸಿದರೆ, ನಂಬಿದರೆ, ನಡೆದರೆ ಈ ಭುವನ ಒಂದೇ ಭವನದಂತಾಗುತ್ತದೆ. ಮೈತ್ರಿ, ಪ್ರೀತಿ, ಸಹಾನು ಭೂತಿಗಳ ಹೊಮ್ಮಳೆ ಸುರಿಯುತ್ತದೆ. ಇದಕ್ಕೆ ಸರ್ವಜ್ಞನ ಮಾತೇ ಕೀಲಿಕೈ.

ಒಬ್ಬನಲ್ಲದೆ ಜಗಕೆ ಇಬ್ಬರುಂಟೇ ಮತ್ತೆ
ಒಬ್ಬ ಸರ್ವಜ್ಞ ಕರ್ತನೀ ಜಗಕೆಲ್ಲ
ಒಬ್ಬನೇ ದೈವ ಸರ್ವಜ್ಞ ||

ದೇವ ದೇವ ಮಾದೇವನೆನಬೇಡ
ದೇವರದೇವ ಭುವನದ ಪ್ರಾಣಿಗಳಿ
ಗಾದವನೆ ದೇವ ಸರ್ವಜ್ಞ ||

ಆ ವಿಶ್ವವಿಶಾಲದೃಷ್ಟಿ ಬೆಳೆಸಿಕೊಂಡಾಗ ಅನವಶ್ಯಕ ಗೊಂದಲ ತಪ್ಪಿ ಆತ್ಮ ಕಲ್ಯಾಣ ಸಾಧಿತವಾಗುತ್ತದೆ.

ಚಿತ್ರವನು ನವಿಲಿನೊಳು ವಿಚಿತ್ರವನು ಗಗನದೊಳು ಕೆತ್ತಿದ, ಕುಂಬಳಕೆ ಹಿಡಿ ಹಣ್ಣನ್ನು ಆಲಕ್ಕೆ ಮಿಡಿಹಣ್ಣನ್ನು ಮೂಡಿಸಿದ ಆ ಮಹಾಶಕ್ತಿಯ ಬಗೆಗೆ ಅಚಂಚಲವಾದ ನಿರ್ಮಲವಾದ ನಿಷ್ಠೆ ಭಕ್ತಿ ಅತ್ಯವಶ್ಯಕ. ಆತನ ಮಹದುಪಕಾರಕ್ಕೆ, ಬದಲು ಆತನಿಗೆ ನಿವೇದಿಸಬೇಕಾದದ್ದು ಭಕ್ತಿ. ಅವನು ನಲಿಯುವುದು ಒಲಿವುದು ಅದಕ್ಕೆ ಮಾತ್ರ. ಭವದಿಂದ ದಿವದೆಡೆಗೆ ನಮ್ಮನ್ನು ಕರೆದೊಯ್ಯುವ ದಿವ್ಯ ಮಂಗಳ ಶಕ್ತಿಯದು. ಅಂತಹ

ಭಕ್ತಿಯಿಂದಲೆ ಮುಕ್ತಿ ಭಕ್ತಿಯಿಂದಲೆ ಶಕ್ತಿ
ಭಕ್ತಿವಿರಕ್ತಿಯಳಿದರೀ ಜಗದಲ್ಲಿ
ಮುಕ್ತಿಯಿಲ್ಲೆಂದ ಸರ್ವಜ್ಞ ||

ಆದರೆ ಈ ಭಕ್ತಿ ಸುಲಭ ಸಾಧ್ಯವಲ್ಲ. ಕೇವಲ ಬಹಿರಾಚಾರದ ಭಕ್ತಿ ವ್ಯಾಯಾಮ ವಾದೀತು, ಮನರಂಜನೆಯಾದೀತು, ಆತ್ಮೋತ್ಥಾನಕಾರಿಯಾಗುವುದಿಲ್ಲ, ಅಜ್ಞೆತಿಮಿರರವಿಯಾಗುವುದಿಲ್ಲ. ಅಂತರಂಗ, ಬಹಿರಂಗ ಶುದ್ದಿಯಿರಬೇಕು. ಆಡುವುದೊಂದು ಮಾಡುವುದು ಮತ್ತೊಂದು ಸಲ್ಲದು. ಮೈಮನಸುಗಳ ಒಮ್ಮಿಲನ ಸಮ್ಮಿಲನದಲ್ಲಿ ಸತತವೂ ಶ್ರದ್ಧಾ ಯುತವೂ ಆದ ಸಾಧನೆಯಲ್ಲಿ ಅದು ಸಹಜವಾಗಿ ಗಿಡದಿಂದ ಹೂವು ಹೂವಿನಿಂದ ಕಂಪು ಒಗೆಯುವಂತೆ ಅರಳಿ ಬರಬೇಕು. ದೇಹವೇ ದೇವಾಲಯವಾಗಬೇಕು, ಜೀವವೇ ಶಿವನಾಗ ಬೇಕು; ನಾನೆಂಬುದು ಸುಟ್ಟು ಸೊನ್ನೆಯಾಗಬೇಕು. ಅದು ಭಕ್ತಿ, ಅಂಥವನು ನಿಜಭಕ್ತ.