ಸಜ್ಜನರ ಸಂಗಮದು ಹೆಜ್ಜೇನು ಕೊಡದಂತೆ
ದುರ್ಜನರ ಸಂಗದೊಡನಾಟ ಬಚ್ಚಲಿನ
ರೊಚ್ಚಿನಂತಿಹುದು ಸರ್ವಜ್ಞ ||

ಸತ್ಯರ ಒಡನಾಟ ಮತ್ತೆ ಸಕ್ಕರೆ ತುಪ್ಪ
ಸತ್ಯವಿಲ್ಲದರ ಒಡನಾಟ ಬೇಲಿಯ
ಒತ್ತಿಯಂತಿಹುದು ಸರ್ವಜ್ಞ ||

ದುರ್ಜನರನ್ನು ಗುರುತಿಸುವುದು ಹೇಗೆ? ಅವರ ನಡೆವಳಿಕೆಯೇ ಅವರ ಮನಸ್ಸಿನ ಕನ್ನಡಿ.

ಬರೆ ಕಂಡು ಕರೆಯದನ ಇರೆ ಕುಳ್ಳಿರೆನ್ನದನ
ಸರಸಸಜ್ಜನಿಕೆ ಇಲ್ಲದನ ಸಖತನವ
ಬೆರೆಸಲೇ ಬೇಡ ಸರ್ವಜ್ಞ ||

ದುರ್ಜನರೇ ತುಂಬಿರುವ ಜಗದಲ್ಲಿ ಸಜ್ಜನರು ಬದುಕುವುದು ಕಷ್ಟ, ಅವರನ್ನು ಗುರುತಿಸುವುದೂ ಕಷ್ಟ. ಆದರೂ ಅತ್ಯಂತ ಎಚ್ಚರಿಕೆಯಿಂದ ಸಹನೆಯಿಂದ ವರ್ತಿಸಿದರೆ ಬದುಕುವುದು ಸಾಧ್ಯ. ಇದನ್ನು ತುಂಬ ಸಶಕ್ತವಾಗಿ ಸಚಿತ್ರವಾಗಿ ಧ್ವನಿಪೂರ್ಣವಾಗಿ ಪ್ರಭಾವಕಾರಿಯಾಗಿ ವಿವರಿಸುತ್ತಾನೆ ಕವಿ :

ದಂತ ಪಂಕ್ತಿಯ ನಡುವೆ ಎಂತಿಪ್ಪುದದು ಜಿಹ್ವೆ
ಅಂತು ದುರ್ಜನರ ಬಳಸಿನಲಿ ಸಜ್ಜನನು
ನಿಂತಿಹನು ನೋಡ ಸರ್ವಜ್ಞ ||

ಇಂಥವರನ್ನು ಅರಿತರಿತು ಸಂಗಮಾಡಬೇಕು. ಜೊತೆಯಂತೆ ಮತಿ. ‘ಸಂಗದಂತೆ ಬುದ್ದಿ, ತಿಂಡಿಯಂತೆ ಲದ್ದಿ’ ಎಂಬ ಜನಪದ ಗಾದೆ ಇದನ್ನೇ ಬೇರೊಂದು ರೀತಿಯಲ್ಲಿ ಹೇಳುತ್ತದೆ. ಸ್ನೇಹ ಸಂಬಂಧ ಬೆಳೆಸುವಾಗ ತುಸು ಎಚ್ಚರ ತಪ್ಪಿದರೂ ಅನಾಹುತ ಪರಂಪರೆಗೆ ದಾರಿಮಾಡಿ ಕೊಡಬೇಕಾಗುತ್ತದೆ ಎಂಬುದನ್ನು ಸಾರಿ ದೂರಿ ಹೇಳುತ್ತಾನೆ ಸರ್ವಜ್ಞ. ಏಕೆಂದರೆ

ಒಳ್ಳಿದರ ಒಡನಾಡಿ ಕಳ್ಳನೊಳ್ಳಿದನಕ್ಕು
ಒಳ್ಳಿದನು ಕಳ್ಳರೊಡನಾಡಿ ಅವ ಶುದ್ಧ
ಕಳ್ಳನೇ ಅಕ್ಕು ಸರ್ವಜ್ಞ ||

ವಿದ್ಯೆಯಲ್ಲಿ ಬುದ್ದಿಯಲ್ಲಿ ಶ್ರೀಮಂತಿಕೆಯಲ್ಲಿ ಧೀಮಂತಿಕೆಯಲ್ಲಿ ಅಧಿಕಾರದಲ್ಲಿ ಅಂತಸ್ತಿ ನಲ್ಲಿ ಕರ್ಮದಲ್ಲಿ ಧರ್ಮದಲ್ಲಿ ಮಾನವರಲ್ಲಿ ಸರ್ವಸಮಾನತೆ ಇರಬೇಕಾದದ್ದು ಸಹಜ, ಅಪೇಕ್ಷಣೀಯ. ಆದರೆ ಇದು ಸುಲಭ ಸಾಧ್ಯವಲ್ಲ. ಇದು ಕೆಲಮಟ್ಟಿಗೆ ಸಾಮಾಜಿಕ, ರಾಜಕೀಯ ಪರಿವರ್ತನೆಗಳಿಂದ ಸಾಧ್ಯವಾಗಬಹುದಾದರೆ ಬಹುಮಟ್ಟಿಗೆ ವೈಯುಕ್ತಿಕ ಶ್ರದ್ಧೆ ಪ್ರಯತ್ನ ಪ್ರತಿಭೆಗಳಿಂದ ಸಾಧ್ಯವಾಗಬೆಕು. ಅವಕಾಶದ ಅಭಾವ ಪರಿಸರದ ಪ್ರಭಾವ ವ್ಯಕ್ತಿಗತವಾದ ದೌರ್ಬಲ್ಯ ಮುಂತಾದವುಗಳಿಂದಾಗಿ ಸಮಾಜದ ಕೆಲಭಾಗ ಅಸ್ವತಂತ್ರವಾಗಿ ಪರಾವಲಂಬಿಯಾಗಿ ಉಳಿಯುತ್ತದೆ. ಉಳ್ಳವರು ಇಲ್ಲದವರಲ್ಲಿ ಅಂತರ ಬೆಳೆಯುತ್ತದೆ. ಆಗ ಇಲ್ಲದವರಲ್ಲಿ ಅತೃಪ್ತಿ ನಿರಾಶೆ ದ್ವೇಷ ಸೇಡು ಸಹಜವಾಗಿ ಅವಿರ್ಭವಿಸುತ್ತವೆ. ಇವುಗಳು ಕಡಿಮೆಯಾಗಿ ಕೆಲಮಟ್ಟಿನ ನೆಮ್ಮದಿಯಾದರೂ ಲಭಿಸಬೇಕಾದರೆ ಇದ್ದವರು ಇಲ್ಲದವರಿಗೆ ನೀಡಬೇಕಾಗುತ್ತದೆ. ಈ ನೀಡಿಕೆಯಲ್ಲಿ ಪ್ರದರ್ಶನ ಅಹಂಭಾವಗಳಿಲ್ಲದ ಅಂತಃಪ್ರೇರಿತವಾದ ಕರುಣೆ ಸಹಾನುಭೂತಿ ಅಕ್ಕರೆ ಕರ್ತವ್ಯಪ್ರಜ್ಞೆ ಇರಬೇಕು. ದೇವರು ಕೊಟ್ಟದ್ದನ್ನು ದೇವರ ಮಕ್ಕಳಿಗೇ ಕೊಡುತ್ತಿದ್ದೇನೆನ್ನುವ ನಿಸ್ವಾರ್ಥ ನಿರಹಂಕಾರಗಳು ಆ ಕೊಡುಗೆಯಲ್ಲಿ ತುಂಬಿರಬೇಕು. ಇದೇ ದಾನ. ಈ ದಾನದಿಂದ ಅಸಮತೆ ಅಸಂತೃಪ್ತಿ ಕ್ಷೀಣವಾಗುತ್ತವೆ. ಅದಕ್ಕೆಂದೇ ಸರ್ವಜ್ಞ ದಾನಿಗೆ ಮಹತ್ವದ ಸ್ಥಾನ ಕೊಟ್ಟಿದ್ದಾನೆ :

ಈವಂಗೆ ದೇವಂಗೆ ಆವುದಂತರವಯ್ಯ
ದೇವನು ಜಗಕೆ ಕೊಡುತಿಹನು ಕೈಯ್ಯಾರೆ
ಈವನೇ ದೇವ ಸರ್ವಜ್ಞ ||

ಆದರೆ ಈ ದಾನಗುಣವನ್ನು ಬೆಳೆಸಿಕೊಳ್ಳುವುದು ಸುಲಭವಲ್ಲ. ಇಲ್ಲದ್ದಕ್ಕೆ ಸಲ್ಲದ್ದಕ್ಕೆ ಅನಿವಾರ್ಯ ಇಕ್ಕಟ್ಟಿನಿಂದ ಮನಬಂದಂತೆ ವೆಚ್ಚಿಸುವ ಮಾನವ ತನ್ನಂತಹ ಬಡಜೀವಿಗಳಿಗೆ ಕೊಡಲು ಹಿಂಜರಿಯುತ್ತಾನೆ. ಮನುಷ್ಯನ ಈ ಪ್ರವೃತ್ತಿಯನ್ನು ಒಳಹೊಕ್ಕು ಬಲ್ಲ ಕವಿ ಅದನ್ನು ವಿಶ್ಲೇಷಿಸುತ್ತಾನೆ :

ದಾನವೆಂದರೆ ತಲೆಯ ಚಾನದಲ್ಲಿ ಕಡಿದಂತೆ
ತಾನೊಂದು ತಪ್ಪು ಮಾಡಿ ನೂರಾರನು
ಮನದಿ ಕೊಡುವ ಸರ್ವಜ್ಞ ||

ಕಳ್ಳರಿಗೆ ಸುಳ್ಳರಿಗೆ ಡೊಳ್ಳರಿಗೆ ಡೊಂಬರಿಗೆ ಸುಳ್ಳುಗೊರವರಿಗೆ ಕೈಬಿಟ್ಟು ಚೆಲ್ಲುವ ವ್ಯಕ್ತಿ ಧರ್ಮಕ್ಕೆ ಎಳ್ಳಷ್ಟು ಕೊಡದೆ ಬೇಡಿದವರಿಗೆ ನೀತಿ ಬೋಧೆ ಮಾಡುತ್ತಾನೆ. ಇಟ್ಟದ್ದು ಕೊಳೆಯುತ್ತದೆ, ಕೊಟ್ಟದ್ದು ಬೆಳೆಯುತ್ತದೆ. ದಾನದಿಂದ ನಷ್ಟವಿಲ್ಲ, ಅಧಿಕ ಲಾಭವೇ ಉಂಟು.

ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಂಗೆ
ಕೊಟ್ಟದ್ದು ಕೆಟ್ಟಿತೆನಬೇಡ ಮುಂದಕ್ಕೆ
ಕಟ್ಟಿಹುದು ಬುತ್ತಿ ಸರ್ವಜ್ಞ ||

ಸಿರಿ ಶಾಶ್ವತವಲ್ಲ. ಇಂದು ವಿಜೃಂಭಿಸಿ ನಾಳೆ ಹೆಸರಿಲ್ಲದಾಗಬಹುದು. ಇರುವಾಗ ನಾವು ಕರೆದು ದಾನ ಮಾಡಿದರೆ ನಮಗೆ ಅಥವಾ ನಮ್ಮ ಮಕ್ಕಳಿಗೆ ನಾಳೆ ಇನ್ನೊಬ್ಬರು ಕರೆದುಕೊಟ್ಟಾರು. ಕೊಡು-ಕೊಳೆಯ ಸಾಮಾಜಿಕ ನ್ಯಾಯ ಈ ತತ್ತ್ವದಲ್ಲಡಗಿದೆ. ಆದ್ದರಿಂದಲೇ ಸರ್ವಜ್ಞ ಘೋಷಿಸುತ್ತಾನೆ :

ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದಡೆ ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ ||

ನಿಜವಾಗಿ ನಾಡಿನಲ್ಲಿ ಬೇಡುವ ಪ್ರವೃತ್ತಿ ಒಳ್ಳೆಯದಲ್ಲ ಎಂಬುದನ್ನು ಕವಿ ಬಲ್ಲ. ಬೇಡುವವರ ನಾಡು ಸೋಮಾರಿಗಳ ಬೀಡೆಂಬುದೂ ಸತ್ಯವೇ. ಆದರೆ ಅನಿವಾರ್ಯವಾಗಿ ಬೇಡುವ ಪರಿಸ್ಥಿತಿ ಬಂದಾಗ ನೀಡದಿರುವುದು ಮಹಾಪಾಪ, ನೀಡುವವರನ್ನು ತಡೆಯುವುದು ಮಹಾಧಿಕ ಪಾಪ. ಹೀಗೆ ನೀಡುವಾಗ, ಆಧುನಿಕ ಶ್ರೀಮಂತ ರಾಷ್ಟ್ರಗಳು ಮಾಡುತ್ತಿರುವಂತೆ ಇಲ್ಲದ ಸಲ್ಲದ ಶರತ್ತುಗಳನ್ನು ವಿಧಿಸಿ, ಕಾಡಿಸಿ ಪೀಡಿಸಿ ಅಲೆಸುವುದು ಶ್ರೇಯಸ್ಕರವಲ್ಲ. ಏಕೆಂದರೆ ಅಲ್ಲಿ ದಾನದ ಮೂಲೋದ್ದೇಶವಾದ ಪ್ರೀತಿ ಔದಾರ್ಯ ಸಹಾನುಭೂತಿಗಳು ಕಣ್ಮರೆಯಾಗುತ್ತವೆ. ಅದಕ್ಕೆಂದೇ ಕವಿ :

ಆಗ ಬಾ ಈಗ ಬಾ ಹೋಗಿ ಬಾ ಎನ್ನದೆಲೆ
ಆಗಲೇ ಕರೆದುಕೊಡುವನ ಧರ್ಮ
ಹೊನ್ನಾಗದೆ ಬಿಡದು ಸರ್ವಜ್ಞ ||

ಎಂದು ಎಚ್ಚರಿಕೆ ಇತ್ತಿದ್ದಾನೆ. ಸಮಯೋಚಿತ ದಾನ ಅತ್ಯಂತ ಅಗತ್ಯವಿರುವಾಗ ಕೊಟ್ಟ ಒಂದು ನುಚ್ಚಿಗೂ ಮಾಣಿಕ್ಯದ ಬೆಲೆ, ಅನಗತ್ಯವಾದಾಗ ಕೊಟ್ಟ ಮಾಣಿಕ್ಯ ನುಚ್ಚಿಗಿಂತಲೂ ಕನಿಷ್ಠ. ಆದ್ದರಿಂದ ದಾನದ ಹಿರಿಮೆ ಇರುವುದು ಆ ವಸ್ತುವಿನಲ್ಲಲ್ಲ, ಅದರ ಹಿಂದಿನ ಸದುದ್ದೇಶದಲ್ಲಿ. ಬೇಡುವವರಿಲ್ಲದಿರುವಾಗಲೂ ವ್ಯಕ್ತಿ ಕರೆದು ಆದರಿಸಿ ದಾನ ಮಾಡ ಬಹುದು, ತನ್ನ ಸ್ವಾರ್ಥ ನಿರ್ಮೂಲನಕ್ಕಾಗಿ ಭಾವನಿರಸನಕ್ಕಾಗಿ ಆತ್ಮಶುದ್ದಿಗಾಗಿ ಶ್ರೇಯಸ್ಸಿ ಗಾಗಿ. ಯಾವುದೇ ಬಹಿರಂಗದ ಒತ್ತಾಯಿವಿಲ್ಲದೆ ಮಾಡುವ ಈ ಅಂತಃಪ್ರೇರಿತ ದಾನ ನಿಜವಾಗಿಯೂ ಶ್ರೇಷ್ಠ. ಆದರೆ ಸತ್ಪಾತ್ರರಿಗೆ ಮಾತ್ರ ದಾನ ಮಾಡಬೇಕೆಂಬುದನ್ನು ಮರೆಯ ಬಾರದು. ಹೀಗೆ ದಾನಗುಣ ಮಾನವ ರೂಢಿಸಿಕೊಳ್ಳಬೇಕಾದ ಹಿರಿಯ ಆದರ್ಶ ಗುಣ ಗಳಲ್ಲೊಂದು.

ಇದಕ್ಕೆ ತೀರಾ ವಿರುದ್ಧವಾದ ದುರ್ಗುಣ ಲೋಭ. ಜಗತ್ತಿಗೆ ಬಂದಿರುವ ಕ್ಷಾಮ ದಾರಿದ್ರ್ಯ ಬಹುಮಟ್ಟಿಗೆ ಈ ಲೋಭಜನಿತವಾದದ್ದು. ತನಗೆ ಅಗತ್ಯವಾದುದಕ್ಕಿಂತ ಹೆಚ್ಚು ಸಂಗ್ರಹಿಸಿ ತಾನೂ ತಿನ್ನದೆ ಪರರಿಗೂ ಕೊಡದೆ ಇರುವಂಥದು ಈ ಲೋಭ. ಇದು ಪರಶೋಷಣೆ ಮಾತ್ರವಲ್ಲದೆ ಸ್ವನೆಮ್ಮದಿ ನಾಶಕವೂ ಹೌದು. ಈ ಲೋಭಿಯ ಮನಸ್ಸು ಎಂದೂ ಪ್ರಶಾಂತವಾಗಿರುವುದು ಸಾಧ್ಯವಿಲ್ಲ. ದೆವ್ವ ಹೊಕ್ಕ ಮನೆಯಂತೆ ಲೋಭ ತುಂಬಿದ ಮನಸ್ಸಿನಿಂದ ಮಾನವೀಯ ಗುಣಗಳು ದೂರ ಸರಿಯುತ್ತವೆ. ಈ ಲೋಭಿ ದುರ್ಬಲನಾದರೆ ತನ್ನನ್ನು ತಾನೇ ನಾಶಗೈದುಕೊಳ್ಳುತ್ತಾನೆ, ಪ್ರಬಲನಾದರೆ ಪರಪೀಡಕನಾಗುತ್ತಾನೆ. ಅಮೃತ ತುಂಬಿದ ಕೆಚ್ಚಲಿನಲ್ಲಿಯೇ ವಾಸಿಸುತ್ತಿದ್ದರೂ ಅದರ ಸವಿಯನ್ನು ಕಾಣದ ಉಣ್ಣೆಯಂತೆ ಇವನ ಬಾಳು. ನಿಕೃಷ್ಟ ಪಕ್ಷಿಯೆನಿಸಿಕೊಂಡ ಕಾಗೆ, ಕೊಳಚೆಯಲ್ಲಿ ವಿಹರಿಸುವ ಕೋಳಿ ಒಂದಗುಳು ಆಹಾರ ಕಂಡರೆ ತನ್ನ ಬಳಗವನ್ನು ಕೂಗಿ ಕರೆದು ಹಂಚಿ ಉಂಡು ತೃಪ್ತಿ ಪಡೆಯುತ್ತವೆ. ಅದಕ್ಕಿಂತ ಹೀನ ಕಡುಲೋಭಿಯ ಬದುಕು. ಕಟ್ಟೆ ಕಟ್ಟುವಾಗ ಹೆಚ್ಚು ನೀರು ಹರಿಯಲು ಕೋಡಿ ಬಿಡುವುದುಂಟು. ಹಾಗೆ ಬಿಡದಿದ್ದರೆ ಕಟ್ಟೆಯೇ ಕೊಚ್ಚಿಕೊಂಡು ಹೋಗುತ್ತದೆ. ಇದೇ ರೀತಿ ತನ್ನ ಸಂಪಾದನೆಯ ಒಂದು ಭಾಗವನ್ನು ವ್ಯಕ್ತಿ ಸದ್ವಿನಿಯೋಗ ಮಾಡಬೇಕು. ಇಲ್ಲದಿದ್ದರೆ ಅದು ಪರರ ಪಾಲಾಗುತ್ತದೆ, ತನ್ನ ಸಂಪತ್ತು ತನಗೇ ವಿಪತ್ತನ್ನು ತರುತ್ತದೆ.

ಉಳ್ಳಲ್ಲಿ ಉಣಲಿಲ್ಲ ಉಳ್ಳಲ್ಲಿ ಉಡಲಿಲ್ಲ
ಉಳ್ಳಲ್ಲಿ ದಾನ ಕೊಡಲೊಲ್ಲದವನೊಡವೆ
ಕಳ್ಳಗೆ ನೃಪಗೆ ಸರ್ವಜ್ಞ ||

‘ಜೀನಗಳಿಸಿದ್ದು ಅಡವಿ ಪಾಲು’, ಆದ್ದರಿಂದ ಇರುವಾಗ ಕೊಟ್ಟು ಉಟ್ಟು ಉಂಡು ಅನ್ಯರಿಗೂ ತನಗೂ ಆನಂದವನ್ನು ತಂದುಕೊಳ್ಳಬೇಕು. ಹಾಗಲ್ಲವಾದರೆ ಈ ಕಾಳಧನ ಕಾಳಸರ್ಪವಾಗಿ ತನ್ನನ್ನೇ ಬಲಿಗೊಳ್ಳುತ್ತದೆ. ಆತ ಆತ್ಮಕಂಟಕನಾಗುತ್ತಾನೆ, ಸಮಾಜ ಕಂಟಕನಾಗುತ್ತಾನೆ. ಇದಕ್ಕೆಂದೇ ಸರ್ವಜ್ಞ ಅಪಾಯದ ಘಂಟೆಯನ್ನು ಮೊಳಗಿಸುತ್ತಾನೆ :

ಎರೆಯಲೊಲ್ಲದ ಲೋಭಿ ಕರೆಯಲೊಲ್ಲದ ಅವು
ಬರಿಗಾಲ ಪಯಣ, ಇವು ಮೂರು, ತನ್ನ ತಾ
ನಿರಿದುಕೊಂಡಂತೆ ಸರ್ವಜ್ಞ ||

ಸರ್ವಜ್ಞ ಕಲ್ಪನಾ ವಿಲಾಸಿಯಲ್ಲ, ಶುದ್ಧ ವಾಸ್ತವವಾದಿ. ಜನಜೀವನದ ಪ್ರಗತಿಗೆ ಶೋಭೆಗೆ ಆರೋಗ್ಯಕ್ಕೆ ಯಾವುಯಾವುದು ಅಗತ್ಯ ಎಂಬುದನ್ನು ತನ್ನ ಅಪಾರವೂ ತಲಸ್ಪರ್ಶಿಯೂ ಅಂತಃಕರಣಪೂರ್ವಕವೂ ಆದ ಲೋಕಾನುಭವದಿಂದ ಕಂಡುಕೊಂಡು ಅವುಗಳನ್ನು ಸುಂದರವಾದ ಅವಿಸ್ಮರಣೀಯವಾದ ಸರಳಾಕರ್ಷಕ ನುಡಿಗಳಲ್ಲಿ ಚಿತ್ರಿಸುತ್ತಾನೆ. ಜೀವನದ ಯಾವ ಅಂಶವೂ ಅವನ ಗಮನದಿಂದ ನುಣುಚಿಕೊಂಡು ಹೋಗಿಲ್ಲ, ಅಥವಾ ಯಾವುದನ್ನೂ ಕ್ಷುಲ್ಲಕವೆಂದು ಆತ ಕಡೆಗಣಿಸಲಿಲ್ಲ. ಇಹದ ಬದುಕು ಸರ್ವ ರೀತಿಯಿಂದಲೂ ಹಸನಾದಾಗಲೇ ಸಂತೃಪ್ತವಾದಾಗಲೇ ಪರಿಪೂರ್ಣವಾದಾಗಲೇ ಪರದ ಕಡೆಗೆ ಗಮನ ಹರಿಸುವುದು ಸಾಧ್ಯ ಸಾಮಾನ್ಯರಿಗೆ ಎಂಬ ಕಟು ಸತ್ಯ ಅವನಿಗರಿವಿದೆ. ಅದಕ್ಕಾಗಿ ಅವರನ್ನು ನಿಂದಿಸುವುದಿಲ್ಲ, ಅವರು ಅಡ್ಡ ಹಾದಿ ಹಿಡಿದಿರುವಾಗ ಮಾತ್ರ ತನ್ನ ವಾಗ್ಗದೆಯಿಂದ ನಿರ್ದಾಕ್ಷಿಣ್ಯವಾಗಿ ಅಪ್ಪಳಿಸುತ್ತಾನೆ. ಅಂತೆಯೇ ಮನುಷ್ಯನ ಮೂಲಭೂತ ಅವಶ್ಯಕತೆಯಾದ ಆಹಾರದ ಬಗೆಗೆ ಅವನು ತೀರಾ ವಾಸ್ತವವಾದ ಸಾರ್ವಕಾಲಿಕ ದೃಷ್ಟಿಯನ್ನು ತಳೆದು ವಿಚಾರ ಗೈಯ್ಯುತ್ತಾನೆ :

ಕೂಳಿಲ್ಲದವನೊಡಲು ಹಾಳು ಮನೆಯಂತಕ್ಕು
ಹೇಳದೆ ಹೊಕ್ಕ ರುಜೆಗಳಿಂ ತನುವುಡಗಿ
ಹಾಳೆಯಂತಕ್ಕು ಸರ್ವಜ್ಞ ||

ಹಸಿವನ್ನು ನಿಗ್ರಹಿಸಲಾರದೆ ಬರಿ ಹೊಟ್ಟೆಯಲ್ಲಿ ಹರಪೂಜೆ ಮಾಡುತ್ತಾ ಮನಸ್ಸು ಅನ್ನಮಗ್ನವಾಗಿರುವಾಗ, ಏಕಾಗ್ರಚಿತ್ರವಿಲ್ಲದೆ ದೈವ ಪ್ರಾರ್ಥನೆ ಮಾಡಿದರೆ ಅದರಿಂದ ಬಂದ ಭಾಗ್ಯವಾದರೂ ಏನು? ಈ ಅನ್ನ ಸಮಸ್ಯೆಯೇ ಜಗತ್ತಿನ ಮೊದಲ ಸಮಸ್ಯೆ, ಮೂಲ ಸಮಸ್ಯೆ. ಅದರಿಂದಲೇ ಕವಿ ಹೇಳುತ್ತಾನೆ, ಧೀರ ಗಂಭೀರ ಅಸಂದಿಗ್ಧ ವಾಣಿಯಲ್ಲಿ:

ಅನ್ನದೇವರ ಮುಂದೆ ಇನ್ನು ದೇವರು ಉಂಟೇ?
ಅನ್ನವುಂಟಾದರುಣಲುಂಟು, ಜಗದೊಳಗೆ
ಅನ್ನವೇ ದೈವ ಸರ್ವಜ್ಞ ||

ಈ ಪ್ರಾಥಮಿಕ ಅವಶ್ಯಕತೆಯನ್ನು ಪೂರೈಸಿಕೊಂಡರೆ ಎಷ್ಟೋ ಸಮಸ್ಯೆಗಳು ನಿವಾರಣೆ ಯಾಗುತ್ತವೆ. ಆದ್ದರಿಂದ ‘ಉದರ ದೈವಕೆ ಜಗದೊಳೆದುರು ದೈವವದೆಲ್ಲಿ ಮೊದಲದರ ಪೂಜೆ’ ಎಂದು ವೀರಘೋಷ ಮಾಡುತ್ತಾನೆ. ಆದರೆ ಆಹಾರವೆಂದರೆ ರಸಗವಳವೇ ಬೇಕಿಲ್ಲ.

ಕಚ್ಚೆ ನಾಲಿಗೆ ಮನವು ಇಚ್ಛೆಯಲಿ ಇದ್ದಿಹರೆ
ನುಚ್ಚು ಮಜ್ಜಿಗೆಯೆ ಹಿತವಕ್ಕು, ಆಯುಷ್ಯ
ಹೆಚ್ಚಾಗಲಕ್ಕು ಸರ್ವಜ್ಞ ||

ಈ ಕಾರಣದಿಂದಲೇ ದಾನಗಳಲ್ಲೆಲ್ಲ ಅನ್ನದಾನವೇ ಶ್ರೇಷ್ಠ ಎಂಬುದು ಸರ್ವಜ್ಞೋಕ್ತಿ.

ಭೂಮಿಯಲ್ಲಿ ಆದರ ಅನುಕಂಪೆ ದಯೆ ನಂಬಿಕೆ ವ್ಯವಹಾರಗಳು ಕೆಲಮಟ್ಟಿಗಾದರೂ ಊರ್ಜಿತಾವಸ್ಥೆಯಲ್ಲಿರುವುದು ಜನದ ಸತ್ಯ ಪ್ರೀತಿಯಿಂದಾಗಿ. ಜಗತ್ತನ್ನು ‘ಸತ್ಯಂ ಶಿವಂ ಸುಂದರಂ’ ಎಂದು ಕರೆದರು ಉಪನಿಷತ್ತಿನ ಋಷಿಗಳು. ‘ಸತ್ಯವೆಂಬುದೇ ಹರನು ಹರನೆಂಬುದೇ ಸತ್ಯ’ ಎಂದ ಕವಿ ರಾಘವಾಂಕ. “Beauty is truth and Truth is beauty” ಎಂದು ಉದ್ಘೋಷಿಸಿದ ಕೀಟ್ಸ್ ಕವಿ. ಗಾಂಧೀಜಿ ತಮ್ಮ ಜೀವನವನ್ನೇ ‘ಸತ್ಯಶೋಧನೆ” ಎಂದು ಕರೆದರು. ಅದು ವಿಶ್ವದ ಅಂತರ್ನಿಹಿತ ಶಕ್ತಿ. ಅದು ತನಗೆ ತಾನೇ ಪರಿಪೂರ್ಣ, ಸ್ವಯಂ ಪ್ರಕಾಶಿತ. ಅದಕ್ಕೆ ಅಳಿವಿಲ್ಲ. ಅದು ಇರುವುದರಿಂದ ಜಗತ್ತು ಉಳಿದಿದೆ. ಅದನ್ನು ಅರಿಯುವುದೇ ಆಚರಿಸುವುದೇ ಬದುಕಿನ ಹಿರಿಮೆ, ಅಮರತೆ. ಆದರೆ ಅದನ್ನರಿತವರು ಅರಿಯಲು ಯತ್ನಿಸುವವರು ವಿರಳ. ಅದರಿಂದ ಬಾಳಿಗೆ ಬೆಳಕು, ಬೆಲೆ. ಮನುಷ್ಯ ಈ ಸತ್ಯವನ್ನು ಸತ್ಯಪ್ರಿಯತೆಯನ್ನು ಸಂಪೂರ್ಣ ತೊರೆದಂದು ಅವನ ವಿನಾಶ ಸಿದ್ಧ. ನಮ್ಮ ಉಳಿವಿಗಾಗಿ ನಮ್ಮ ಒಳಿತಿಗಾಗಿ ಅದನ್ನು ಮನದಲ್ಲಿ ನೆಡಬೇಕು, ದೃಷ್ಟಿಯಲ್ಲಿ ಮೂಡಿಸಿ ಆಚರಣೆಯಲ್ಲಿ ಅಳವಡಿಸಿಕೊಳ್ಳಬೇಕು. ಅದು ಪ್ರಕಟವಾಗುವ ರೀತಿಯೇ ನೀತಿ. ಅವೆರಡಕ್ಕೂ ಅವಿನಾ ಸಂಬಂಧ :

ಬತ್ತಿಯೆಣ್ಣೆಗಳೆರಡು ಹೊತ್ತಿ ಬೆಳಗುವ ತೆರದಿ
ಸತ್ಯನೀತಿಗಳು ಬೆಳಗಿಹವು, ಜೋಡಗಲೆ
ಕತ್ತಲೀ ಜಗವು ಸರ್ವಜ್ಞ ||

ಈ ಸತ್ಯವನ್ನು ಮಸುಕು ಮಾಡುತ್ತಿರುವುದು ಸುಳ್ಳು. ಸತ್ಯದ ದಾರಿ ಧವಳ, ಆದರೆ ಶ್ರಮದಾಯಕ; ಸುಳ್ಳಿನ ದಾರಿ ಸುಲಭ. ಆದ್ದರಿಂದ ಬಹುಮಂದಿ ಇದಕ್ಕೇ ಜೋತು ಬೀಳುತ್ತಾರೆ. ಇದು ಪಾಪದ ಹಾದಿ, ಆತ್ಮವಿನಾಶದ ಬುನಾದಿ. ಈ ಕಾರಣದಿಂದ ಇದನ್ನು ಅತ್ಯಂತ ತೀಕ್ಷ್ಣವಾಗಿ ಖಂಡಿಸುತ್ತಾನೆ. ಅದರ ಭಯಂಕರತೆಯನ್ನು ಮನಗಾಣಿಸುತ್ತಾನೆ ಸರ್ವಜ್ಞ :

ಹುಸಿವನಿಂದೈನೂರು ಪಶುವ ಕೊಂದವ ಲೇಸು
ಶಿಶುವಧೆಯ ಮಾಡಿದವ ಲೇಸು, ಮರೆಯಲಿ
ದ್ದೆಸೆದರೂ ಲೇಸು ಸರ್ವಜ್ಞ ||

ಕಳ್ಳತನವೂ ಇಷ್ಟೇ ವಿಘಾತಕ ಕೃತ್ಯ. ಇದರಿಂದ ಅಪನಂಬಿಕೆ ಭೀತಿ ಮಾತ್ಸರ್ಯಗಳು ಮೂಡಿ ಬದುಕನ್ನು ನರಕ ಮಾಡುತ್ತವೆ. ಆದ್ದರಿಂದ,

ಒಳ್ಳೆಯವನು ಇರದೂರು ಕಳ್ಳನೊಡನಾಟವು
ಸುಳ್ಳನ ಮಾತು ಇವು ಮೂರು ಕೆಸರೊಳಗೆ
ಮುಳ್ಳು ತುಳಿದಂತೆ ಸರ್ವಜ್ಞ ||

ಎಂದು ಎಚ್ಚರಿಸಿ ಅವುಗಳನ್ನು ಮೊಳಕೆಯಲ್ಲೇ ಮೂಲೋತ್ಪಾಟನ ಮಾಡಬೇಕೆಂದು ಹೇಳುತ್ತಾನೆ. ಮದ್ಯಪಾನ ನಮ್ಮ ಸಮಾಜ ಪುರುಷನಿಗಂಟಿದ ಮತ್ತೊಂದು ಪ್ರಬಲ ರೋಗ. ಇದರಿಂದ ಆಗುವ ಹಾನಿ ಅಪಾರ. ಕ್ಷಣಿಕವಾದ ಉದ್ರೇಕದ ಸಂತೋಷಕ್ಕಾಗಿ ಬಾಳನ್ನೇ ಹಾಳು ಮಾಡಿಕೊಳ್ಳುತ್ತಾರೆ ಜನ. ಬಡವರಿಗಂತೂ ಇದು ಪರಮ ವೈರಿ. ಮನೆಮನೆಯನ್ನೂ ರಣರಂಗವಾಗಿಸಿ ಕೊನೆಗೆ ಮಸಣವಾಗಿಸುವ ಅಪಾರ ಶಕ್ತಿ ಇದಕ್ಕುಂಟು. ಇದರಿಂದ ಧನಹಾನಿ, ಮಾನಹಾನಿ, ಪ್ರಾಣವೂ ಹಾನಿ. ಬಾಪೂ ಇದರ ನಿರೋಧಕ್ಕಾಗಿ ಅಹರ್ನಿಶಿ ಶ್ರಮಿಸಿದರು. ಆದರೂ ಈ ಶನಿ ಸಂತಾನ ಅಳಿಯಲಿಲ್ಲ. ಸರ್ವಜ್ಞನ ಸರ್ವಗ್ರಾಹಕ ದೃಷ್ಟಿ ಇದರ ದುಷ್ಪರಿಣಾಮವನ್ನು ಗಮನಿಸದೆ ಹೋಗಿಲ್ಲ :

ಸುರೆಯ ಸೇವಿಸುವಂಗೆ ಸಿರಿಗರ್ವ ಪಿಡಿದಂಗೆ
ದೊರೆಯಲ್ಲಿ ತೇಜಪಡೆದಂಗೆ ಶಿರವಿಹುದು
ಸ್ಥಿರವಲ್ಲ ನೋಡ ಸರ್ವಜ್ಞ ||

ಇಷ್ಟು ಮಾತ್ರವಲ್ಲ, ಅದರ ಪರಿಣಾಮ ಮತ್ತೂ ಘೋರತರ :

ಮದ್ಯಪಾನವ ಮಾಡಿ ಇದ್ದುದೆಲ್ಲವ ನೀಗಿ
ಬಿದ್ದು ಬರುವವನ ಸದ್ದಡಗಿ ಸಂತಾನ
ವೆದ್ದು ಹೋಗುವುದು ಸರ್ವಜ್ಞ ||

ಎಷ್ಟು ಊರು ತಿರುಗಿ ಎಷ್ಟು ಮಂದಿಯ ಬಾಳನ್ನು ಗಮನಿಸಿ ಎಷ್ಟು ಮನೆ ಹೀಗೆ ಹಾಳಾದುದನ್ನು ಕಂಡು ಕರಗಿ ಕಣ್ಣೀರಿಟ್ಟನೋ ಮಾನವ ಪ್ರೇಮಿಯಾದ ಈ ಕವಿ.

ಆಲಸ್ಯ ಸೋಮಾರಿತನಗಳು ಪ್ರಗತಿಯ ಶತ್ರುಗಳು. ಚಿತ್ರ ಸುಂದರವಾಗಿದ್ದರೂ ಒಂದು ಕಪ್ಪು ಕಲೆ ಅದರ ಶೋಭೆಗೆಡಿಸುವಂತೆ ಎಷ್ಟು ಸದ್ಗುಣಗಳಿದ್ದರೂ ಎಷ್ಟು ಶಕ್ತಿಯಿದ್ದರೂ ಅಲಸ್ಯ ಸೋಮಾರಿತನಗಳಿಂದ ನಿರುಪಯುಕ್ತವಾಗುತ್ತವೆ, ನಿರಾಕರ್ಷಕವಾಗುತ್ತವೆ. ಸತತ ಕ್ರಿಯಾಶೀಲತೆ ಜೀವನೋತ್ಕರ್ಷದ ನಿಚ್ಚಣಿಕೆ. ಅಸಾಧ್ಯವಾದದ್ದು ಪ್ರಯತ್ನ ತಪಸ್ವಿಗೆ ಸಾಧ್ಯವಾಗುತ್ತದೆ. ‘ಕೂತುಣ್ಣುವವನಿಗೆ ಕುಡಿಕೆ ಹಣ ಸಾಲದು’. ಇದನ್ನೇ ನಮ್ಮ ಕವಿ ರಮಣೀಯವಾಗಿ ಧ್ವನಿಸುತ್ತಾನೆ :

ಅಲಸಿಕೆಯಲಿರುವಂಗೆ ಕಲಸಲಂಬಿಯಿಲ್ಲ
ಕೆಲಸಕ್ಕೆ ಅಲಸದಿರುವಂಗೆ ಬೇರಿಂದ
ಹಲಸು ಕಾತಂತೆ ಸರ್ವಜ್ಞ ||

ಕಾಯಕವೇ ಕೈಲಾಸವೆಂದ ಬಸವಣ್ಣ. ಕಾಯಕದಿಂದ ಪಡೆಯದ ಧನ ಕಳ್ಳಧನ; ಕಾಯಕದಿಂದಲೇ ಕಾಯಕ್ಕೆ ಗೌರವ ಕೀರ್ತಿ ಪ್ರತಿಷ್ಠೆ. ಅದರಿಂದ ಬರುವ ಸಂತೋಷ ಅನುಪಮವಾದದ್ದು. ಇದು ಲೋಕದ ಕಾರ್ಯವನ್ನು ಸುಗಮಗೊಳಿಸುತ್ತದೆ, ಅನವಶ್ಯಕ ಅಸೂಯೆಯನ್ನು ಅಳಿಸುತ್ತದೆ, ಸಂಪತ್ತನ್ನು ವರ್ಧಿಸುತ್ತದೆ. ಅದಿಲ್ಲದವನು ಪರೋಪ ಜೀವಿ, ಸಮಾಜ ಶತ್ರು, ನಾಚಿಕೆಗೆಟ್ಟವನು. ಇದರ ವರ್ಣನೆಯನ್ನೂ ಕವಿ ವಾಣಿಯಲ್ಲೇ ಕೇಳಬೇಕು:

ಕಾಯಕವು ಉಳ್ಳನಕ ನಾಯಕನು ಎನಿಸಿಪ್ಪ
ಕಾಯಕವು ತೀರ್ದಮರುದಿನವೆ ಸುಡುಗಾಡ
ನಾಯಕನು ಎನಿಪ ಸರ್ವಜ್ಞ ||

ಪ್ರತಿಯೊಬ್ಬನೂ ಕಾಯಕ ಮಾಡದೆ ಶ್ರಮಪಡದೆ ಉಣ್ಣೆನೆಂದು ಪ್ರತಿಜ್ಞೆ ಮಾಡಿದರೆ ಭೂಮಿ ಕರ್ಮಯೋಗಿಗಳ ಬೀಡಾಗಿ ಸಂಪತ್ತಿನ ಸ್ವರ್ಗವಾಗಿ ಆನಂದದ ಆಗರವಾಗುವುದಿಲ್ಲವೇ?

ಮನುಷ್ಯನ ಉನ್ನತಿಯ ಗತಿಯನ್ನು ಮತಿಯ ಗತಿಯನ್ನು ಕುಂಠಿತಗೊಳಿಸುವ ಒಂದು ಮೃತ್ಯು ಸಾಲ. ಇಂದು ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಮಹಾರಾಷ್ಟ್ರಗಳವರೆಗೆ ಈ ಸಾಲದ ಜಟಿಲ ಜಲದಲ್ಲಿ ಬಿದ್ದು ತೊಳಲಾಡುತ್ತಿವೆ. ಇದು ಮನುಷ್ಯನ ಸ್ವತಂತ್ರ ಮನೋವೃತ್ತಿಯನ್ನು ಧೈರ್ಯಸ್ಥೈರ್ಯಗಳನ್ನು ಕುಂದಿಸಿ ದೈನ್ಯಾವಸ್ಥೆಗೆ ಈಡುಮಾಡಿ ಕ್ರಮಕ್ರಮೇಣ ಪೂರ್ಣ ಪರಾವಲಂಬಿಯನ್ನಾಗಿ ಶಕ್ತಿವಿಹೀನನ್ನಾಗಿ ಉತ್ಸಾಹ ಸಂತೋಷ ರಹಿತನನ್ನಾಗಿ ಮಾಡಿ ನಿರಾಶೆಯ ಕಂದರದಲ್ಲಿ ನೂಕುತ್ತದೆ. ನಮ್ಮಲ್ಲಂತೂ ಹಳ್ಳಿಯ ರೈತರು ಸಾಮಾನ್ಯವಾಗಿ ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಬೆಳೆದು ಸಾಲದಲ್ಲೇ ಸಾಯುತ್ತಾರೆ. ಸಾಲವೇ ಅವರಿಗೆ ಪಿತೃದತ್ತವಾಗಿ ಬರುವ ಮೂಲ. ಜನನದಿಂದ ಮರಣದವರೆಗೆ ಇದೇ ವಿಷವರ್ತುಲದಲ್ಲಿ ಸುತ್ತುವ ಜೀವಿ ಏನನ್ನು ತಾನೆ ಸಾಧಿಸಬಲ್ಲ. ಇಂತಹ ವ್ಯಕ್ತಿಗಳಿಂದ ತುಂಬಿದ ರಾಷ್ಟ್ರವೂ ತನ್ನ ಬುದ್ದಿ ಪ್ರತಿಭೆ ಸಂಪನ್ಮೂಲಗಳೆಲ್ಲವನ್ನೂ ಪರರಾಷ್ಟ್ರಕ್ಕೆ ಒತ್ತೆಯಿಡಬೇಕಾಗುತ್ತದೆ. ಆದ್ದರಿಂದ ಆದಿಯಿಂದಲೂ ಈ ಸಾಲದ ಸಾವಿರ ಸಂಕಟಗಳ ಬಗೆಗೆ ಜ್ಞಾನಿಗಳು ವಿವರಿಸುತ್ತಾ ಎಚ್ಚರಿಸುತ್ತಾ ಬಂದಿದ್ದಾರೆ.

ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲಿಗನು ಬಂದು ಎಳೆವಾಗ ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ ||

ಈ ಸಾಲದ ಭೀಕರ ಪರಿಣಾಮ ವರ್ಣನಾತೀತ. ಸಾಲ, ತೆಗೆದುಕೊಳ್ಳುವವರೆಗೆ ಮಾತ್ರ. ಅನಂತರ ಅದು ಕುಳಿತಲ್ಲಿ ನಿಂತಲ್ಲಿ ಹೋದಲ್ಲಿ ಬಂದಲ್ಲಿ ಕುಕ್ಕಿಕುಕ್ಕಿ ಬದುಕಗೊಡದೆ ಸಾಯಗೊಡದೆ ನರಕಯಾತನೆಯಲ್ಲಿ ನರಳಿಸುತ್ತದೆ. ಸಾಲಕ್ಕೆ ಹೆದರದವನು ಶೂಲಕ್ಕೂ ಹೆದರಲಾರ. ಈ ಸಾಲ ಕೊಟ್ಟಣ್ಣನಂತೂ ಪ್ರತ್ಯಕ್ಷ ಯಮನೇ :

ಉದ್ದರಿಯ ಕೊಟ್ಟಣ್ಣ ಹದ್ದಾದ ಹಾವಾದ
ಎದ್ದೆದ್ದು ಬರುವ ನಾಯಾದ ಹುತ್ತದ
ಗೊದ್ದದಂತಾದ ಸರ್ವಜ್ಞ ||

ಈ ಘೋರಮೋಹಿನಿಯಿಂದ ದೂರವಿರಿಯೆಂಬುದೇ ಸರ್ವಜ್ಞನ ಸಂದೇಶ.

ವೇಶ್ಯಾವ್ಯಸನ ಸಮಾಜದ ಘೋರ ಶಾಪಗಳಲ್ಲೊಂದು. ಕಮ್ಯುನಿಸ್ಟ್ ದೇಶಗಳಲ್ಲಿ ಕಾನೂನಿನ ಮೂಲಕ, ಮತ್ತಿತರ ಸಾಮಾಜಿಕ ಸುಧಾರಣೆಗಳ ಮೂಲಕ ಈ ಅಪಮಾನಕಾರಕ ಹವ್ಯಾಸವನ್ನು ತಡೆಗಟ್ಟಲು ಯತ್ನಿಸಿದ್ದರೂ ಪ್ರಪಂಚದ ಬಹುಭಾಗಗಳಲ್ಲಿ ಇನ್ನೂ ಪ್ರಬಲ ವಾಗಿಯೇ ಉಳಿದು ಹಲವು ಸಂಸಾರಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಮಾನವೀಯತೆಯ ದೃಷ್ಟಿಯಿಂದ ಈ ಸಮಸ್ಯೆಯನ್ನು ಪರಿಶೀಲಿಸಿ ಪರಿಹಾರ ಕಾರ್ಯ ಕೈಕೊಳ್ಳುವವರೆಗೆ, ಮಾನವ ಶೀಲ ಉದಾತ್ತವೂ ನಿರ್ಮಲವೂ ಆಗುವವರೆಗೆ ಈ ಪಿಡುಗು ತಪ್ಪಿದ್ದಲ್ಲ.

ಹದ್ದು ಹಾವನು ನುಂಗು ಮದ್ದು ಕುತ್ತವ ನುಂಗು
ನಿದ್ದೆಗೈಯ್ಯುವನ ಮೃತಿನುಂಗು ಸೂಳೆ ತಾ
ಹೊದ್ದಿದರ ನುಂಗು ಸರ್ವಜ್ಞ ||

ಇಲ್ಲಿ ಕೇವಲ ಹೆಣ್ಣಿನದೇ ತಪ್ಪಲ್ಲ. ಹೆಣ್ಣುಗಂಡು ಕೂಡಿಯೇ ಈ ವಿಷಕೂಪವನ್ನು ನಿರ್ಮಿಸುತ್ತವೆ ಎಂಬುದನ್ನು ಕವಿ ಬಲ್ಲ. ಆದ್ದರಿಂದ ಕೇವಲ ವ್ಯಕ್ತಿನಾಶ ಮಾತ್ರವಲ್ಲ, ಕುಟುಂಬ ಸಮಾಜಗಳೂ ಭರಿಸಲಾಗದ ಅನಾಹುತ ಪರಂಪರೆಗೆ ಈಡಾಗುತ್ತವೆ. ಈ ದುರ್ವ್ಯಸನವನ್ನು ದೂರ ಮಾಡಿ ಗೌರವ ಕಾಯಕವನ್ನು ಕೈಗೊಳ್ಳಬೇಕು.

ಮೂರ್ಖತನವನ್ನು ಕಳೆಯುವ ಮದ್ದು ಜಗತ್ತಿನಲ್ಲಿಲ್ಲ. ಮೂರ್ಖನನ್ನು ತಿದ್ದಲು ಹೋದವನು ಮೂರ್ಖನಾಗುತ್ತಾನೆ. ಮೂರ್ಖನಿಗೆ ಬುದ್ದಿ ಹೇಳುವುದೂ ಒಂದೇ, ಗೋರ್ಕಲ್ಲ ಮೇಲೆ ಮಳೆ ಸುರಿಸುವುದೂ ಒಂದೇ ಎಂಬುದು ಸರ್ವಜ್ಞನ ಅನುಭವ. ನಿದ್ದೆ ಮಾಡುವವರನ್ನು ಎಬ್ಬಿಸುವುದು ಸುಲಭ, ನಿದ್ದೆ ಮಾಡುವಂತೆ ನಟಿಸುವವರನ್ನು ಎಬ್ಬಿಸುವುದು ಕರಕಷ್ಟ. ಹಾಗೆಯೇ ಮೂರ್ಖನೂ. ಅವನೊಡನೆ ವಾದ ಸಲ್ಲ. ಕವಿ ತುಂಬ ಚಿತ್ತಸ್ಪರ್ಶಿಯಾದ ಪರಿಣಾಮಕಾರೀ ರೀತಿಯಲ್ಲಿ ಇದನ್ನು ಚಿತ್ರಿಸಿದ್ದಾನೆ :

ನೆಲವನ್ನು ಮುಗಿಲನ್ನು ಹೊಲಿವರುಂಟೆಂದರವ
ಹೊಲಿವರು ಹೊಲಿವರೆನಬೇಕು ಮೂರ್ಖನಲಿ
ಕಲಹ ಬೇಡೆಂದ ಸರ್ವಜ್ಞ ||

ನಮ್ಮ ಸಂಸ್ಕೃತಿಯಲ್ಲಿ ವಿಧಿಶಕ್ತಿಯನ್ನು ಕುರಿತ ನಂಬಿಕೆ ಪ್ರಗಾಢವಾದದ್ದು. ಆದರೆ ಮನುಷ್ಯ ಪ್ರಯತ್ನಶೀಲನಾಗದೆ ಸರ್ವವನ್ನೂ ವಿಧಿಗೊಪ್ಪಿಸಿ ಕುಳಿತರೆ ಹೇಡಿಯಾಗುತ್ತಾನೆ, ಸರ್ವರಂಗಗಳಲ್ಲಿಯೂ ವಿಫಲನಾಗುತ್ತಾನೆ. ಜೀವನ ಸಾಹಸಿಗಳ ಪರೀಕ್ಷಾರಂಗ. ಸಂಕಟ ಬಂದಾಗ ಹಲುಬದೆ ಕೈಚೆಲ್ಲಿ ಕುಳ್ಳಿರದೆ ಅದರೊಡನೆ ಹೋರಾಡಬೇಕು. ಅದನ್ನು ನುಂಗಬೇಕು. ಆಗ ವಿಮುಖವಾಗಿದ್ದ ವಿಧಿ ಮೆಚ್ಚಿ ಸುಮುಖವಾಗುತ್ತದೆ. ಕಷ್ಟ ಸಹಿಷ್ಣುತೆ ಧೀರಮನೋಭಾವ ಇಲ್ಲದಿದ್ದರೆ ಮಾನವತ್ವಕ್ಕೆ ಬೆಲೆಯಿಲ್ಲ. ಸರ್ವಜ್ಞ ಈ ಪೌರುಷ ಸಂಜೀವಿನಿಯನ್ನು ತನ್ನ ತ್ರಿಪದಿಯ ಮೂಲಕ ಸಾರಿ ಬಿತ್ತರಿಸುತ್ತಾನೆ :

ಬಂದುದನೆ ತಾ ಹಾಸಿ ಬಂದುದನೆ ತಾ ಹೊದೆದು
ಬಂದುದೆಲ್ಲವ ನುಂಗಿದರೆ ವಿಧಿಕರ್ಮ
ನಂದಿ ಹೋಗುವುದು ಸರ್ವಜ್ಞ ||

ಪಕ್ಷಾಂತರ ಧರ್ಮಾಂತರ ಪ್ರವೃತ್ತಿಗಳು ಪ್ರಬಲಿಸುತ್ತಿರುವ ಈ ಕಾಲದಲ್ಲಿ ತತ್ತ್ವನಿಷ್ಠೆಯ ಬಗೆಗೆ ಕವಿ ಹೇಳುವ ಮಾತುಗಳು ಸರ್ವದಾ ಸ್ಮರಣೆಯಲ್ಲಿಡಬೇಕಾದವುಗಳು. ಈ ತತ್ತ್ವಾಂತರ ಅಪಾರವಾದ ಆಲೋಚನೆಯ ಆಂತರಿಕ ಒತ್ತಡದಿಂದ ಅನಿವಾರ್ಯವಾಗಿ ಸನ್ಮಾರ್ಗ ಪ್ರವರ್ತಕವಾಗಿ ಆದರೆ ಕ್ಷಮ್ಯ. ಆದರೆ ಕ್ಷಣಕ್ಷಣಕ್ಕೂ ಬಣ್ಣ ಬದಲಿಸುವ ಗೋಸುಂಬೆಯಂತೆ ತಾತ್ಕಾಲಿಕ ಆಮಿಷಗಳಿಗೆ ಬಲಿ ಬಿದ್ದರೆ ಅದಕ್ಕಿಂತ ಘೋರತರ ಅವನತಿ ಬೇರೊಂದಿಲ್ಲ. ತುತ್ತಿನಾತುರಕೆ ತತ್ವವನು ತೊರೆಯುವವನು ಹೆತ್ತ ತಾಯಿಯನು ಮಾರಿ ತೊತ್ತನ್ನು ಕೊಳ್ಳುವ ಕತ್ತೆಗಿಂತ ಕಡೆಯೆಂದು ಹೀಯಾಳಿಸುತ್ತಾನೆ. ಬೇಸಾಯದ ಮಹತ್ವವನ್ನು ಮನಗಂಡು ಅದು ಕೀಳು ಕಾಯಕವಲ್ಲ, ‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು’ ಎಂದು ಕೈವಾರಿ ಸುತ್ತಾನೆ. ‘ಜಗದಿ ಸ್ವಾತಂತ್ರ್ಯವೇ ಲೇಸು’ ಎಂದು ಉಗ್ಘಡಿಸುತ್ತಾನೆ. ಕೋಪ ಅನರ್ಥಕಾರಕ, ಅದು ಪಾಪದ ನೆಲೆಗಟ್ಟು ಎಂದು ಅದರ ತ್ಯಜನ ಮಾರ್ಗವನ್ನು ಉಲ್ಲೇಖಿಸುತ್ತಾನೆ. ನಂಬಿಕೆಯೇ ಜೀವನದ ನೆಲೆಗಟ್ಟೆಂದು ಬೋಧಿಸಿ, ಅದಿಲ್ಲದವನು ಇಬ್ಬಂತಿಯಾಗಿ ಲೋಕ ದಲ್ಲಿ ಏನನ್ನೂ ಸಾಧಿಸಲಾರನೆಂದು ಕಿವಿಮಾತು ಸುರುತ್ತಾನೆ. ವಿವಿಧ ವರ್ಗದ ಜನಗಳ ಗುಣಾವಗುಣಗಳನ್ನು ಅತ್ಯಂತ ನಿರ್ಲಿಪ್ತನಾಗಿ ನಿರ್ವಿಕಾರವಾಗಿ ಕಂಡು ಅವುಗಳ ಒಳಿತು ಕೆಡಕುಗಳನ್ನು ವಿಮರ್ಶೆಗೈಯುತ್ತಾನೆ.

ಇದುವರೆಗೆ ಸರ್ವಜ್ಞ ಕಂಡ ಸಮಾಜದ ವಿವಿಧ ಅಂಶಗಳನ್ನು ಅವುಗಳ ನಿರೂಪಣೆಯಲ್ಲಿ ಕಾಣಬರುವ ರಾಗೋದ್ರೇಕರಹಿತವಾದ ಸರಳ ಸುಂದರ ವಾಸ್ತವ ಮನೋವೃತ್ತಿಯನ್ನು ಸ್ಥೂಲವಾಗಿ ನೋಡಿದೆವು. ಆಡು ಮುಟ್ಟದ ಸೊಪ್ಪಿಲ್ಲ ಎಂಬುದು ಹಳೆಯ ಮಾತು. ಆದರೂ ಸರ್ವಜ್ಞ  ಕಾಣದ ಬದುಕಿಲ್ಲ, ವಿವರಿಸದ ವಸ್ತುವಿಲ್ಲ ಎಂಬುದು ಅಷ್ಟೇ ಸತ್ಯವಾದ ಹೇಳಲೇಬೇಕಾದ ಮಾತು. ಅವನು ನೋಡಿದ ಜೀವನ ಹದಿನೇಳನೇ ಶತಮಾನದ ಕನ್ನಡ ನಾಡಿನದಾದರೂ ಅವನ ದೃಷ್ಟಿ ಅವನ ಪೃಥಕ್ಕರಣೆ ಅವನ ವಿವರಣೆ ಅವನ ಪರಿಹಾರಕ್ರಮ ಇಂದಿಗೂ ಎಂದಿಗೂ ಅನ್ವಯಿಸುವಂಥವುಗಳು. ಅವನ ಗುಣ ದೋಷ ವಿಮರ್ಶೆ ಇಡೀ ಮಾನವ ಸಮುದಾಯಕ್ಕೆ ಸಂಬಂಧಿಸಿದ್ದು. ಆದ್ದರಿಂದಲೇ ಸರ್ವಜ್ಞನ ವಾಣಿಯಲ್ಲಿ, ಬಹುಶಃ ಅವನಿಗೆ ಅರಿವಿಲ್ಲದಂತೆಯೇ ತ್ರಿಕಾಲ ಪ್ರಜ್ಞೆಮೂಡಿ ನಿಂತಿದೆ ಎಂದು ಹೇಳಿದ್ದು. ದೋಷಗಳನ್ನು ಕಂಡಾಗ ರೋಷಭೀಷಣನಾಗಿ ನಿಂದೆಯ ಅಪಹಾಸ್ಯದ ಕಟಕಿಯ ಕೆಂಡದ ಮಳೆಯನ್ನೇ ಕರೆಯುವ ಕವಿ ಗುಣಗಳನ್ನು ಕಂಡಾಗ ಗಂಭೀರವಾಗಿ ಗೌರವವಾಗಿ ವಿನಮ್ರವಾಗಿ ಸಂತೋಷಪರನಾಗಿ ಸ್ತುತಿಸಿ ಅವುಗಳ ಅಗ್ಗಳಿಕೆಯನ್ನು ಅನನ್ಯವಾಗಿ ಮೆರೆಸುತ್ತಾನೆ. ಸಮಾಜ ಶುದ್ಧವಾಗಬೇಕು, ಸತ್ವಭರಿತವಾಗಬೆಕು, ಆದರ್ಶಪೂರ್ಣವಾಗಬೇಕು, ಆನಂದಮಯ ವಾಗಬೇಕು ಎಂಬ ಪ್ರಾಮಾಣಿಕವಾದ ಅಂತಃಕರಣಪೂರ್ವಕವಾದ ಕಳಕಳಿ ಈ ಖಂಡನೆ ಮಂಡನೆಗಳೆರಡರ ಅಂತರಾಳದಲ್ಲೂ ಜೀವಶಕ್ತಿಯಾಗಿ ಹರಿಯುತ್ತಿರುವುದನ್ನು ಯಾರಾದರೂ ಗುರುತಿಸಬಹುದು. ಅವರ ದೃಷ್ಟಿ ಹೇಗೆ ವಾಸ್ತವವಾದರೂ ವಿಶಿಷ್ಟವಾದುದೋ ಅವನ ಅಭಿವ್ಯಕ್ತಿಯೂ ಹಾಗೆ ವಿಶಿಷ್ಟ ತೇಜಶ್ಶಾಲಿಯಾದದ್ದು. ಕನ್ನಡ ದೇಶಿ ಶಬ್ದಗಳು ಎಂತಹ ಗಹನವಾದ ಗೂಢವಾದ ಅನುಭವಗಳನ್ನಾದರೂ ಸಶಕ್ತವಾಗಿ ಅಭಿವ್ಯಕ್ತಿಸಬಲ್ಲವು ಎಂಬುದಕ್ಕೆ ಅವನ ತ್ರಿಪದಿಗಳು ಸಮರ್ಥ ಸಾಕ್ಷಿ. ಕನ್ನಡ ಭಾಷಾಶಕ್ತಿಯ, ಕನ್ನಡ ಸಾಹಿತ್ಯ ಶಕ್ತಿಯ, ಕನ್ನಡಿಗರ ವಿಶ್ವಪ್ರಜ್ಞೆಯ ತ್ರಿಕೂಟಾಚಲ ಸರ್ವಜ್ಞನ ತ್ರಿಪದಿ. ಈ ನಿತ್ಯ ನೂತನವಾದ ಶ್ರೀಮಂತಾನುಭವಗಳ ರತ್ನಸಾಗರದಲ್ಲಿ ಮಿಂದೇಳುವುದು ಓದುಗನ ಪುಣ್ಯ.

ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ
ಎಲ್ಲವರಿಗಿಲ್ಲ ಸರ್ವಜ್ಞ ||

ಸರ್ವಜ್ಞನೆಂಬವನು ಗರ್ವದಿಂದಾದವನೆ
ಸರ್ವರೊಳೊಂದೊಂದು ನುಡಿಗಲಿತು ವಿದ್ಯದ
ಪರ್ವತವೆ ಆದ ಸರ್ವಜ್ಞ ||

ಹೇಳಲರಿಯೆನು ನಾನು ಹೇಳೆನಲು ಹೇಳಿದೆನು

ಬಾಳಲೋಚನನ ಶರಣರ ಆಳಾಗಿ
ಹೇಳಿದೆನು ನೋಡ ಸರ್ವಜ್ಞ ||