ತಮ್ಮ ಕೃತಿಗಳಲ್ಲಿ ಸಾಕಷ್ಟು ಗಟ್ಟಿತನವನ್ನೂ ಸ್ವಂತಿಕೆಯನ್ನೂ ಮೆರೆದ ನಮ್ಮ ಪ್ರಸಿದ್ಧ ಕಾದಂಬರಿಕಾರರಲ್ಲಿ ಮತ್ತೊಬ್ಬರು ನಿರಂಜನ ಅವರು. ಅ.ನ.ಕೃ. ಅವರ ಶಿಷ್ಯ ಮಂಡಲಿಯಲ್ಲಿ ಒಬ್ಬರಾಗಿದ್ದು ಬಹುಬೇಗ ಅವರ ಪ್ರಭಾವದಿಂದ ತಪ್ಪಿಸಿಕೊಂಡವರಿವರು. ಸಾಮಾಜಿಕ ಅವ್ಯವಸ್ಥೆಗಳನ್ನು ಕಂಡು ಅವರು ರೊಚ್ಚಿಗೇಳುತ್ತಾರೆ. ಆದರೆ ಅಷ್ಟೇ ಸಂಯಮವೂ ವೈಚಾರಿಕತೆಯೂ ಸೂಕ್ಷ್ಮ ವಿಶ್ಲೇಷಣಾ ಶಕ್ತಿಯೂ ಅವರಿಗಿದೆ. ಇತ್ತೀಚಿನ ಕಾದಂಬರಿಗಳಲ್ಲಿ ಅವರ ವಾಸ್ತವಿಕ ದೃಷ್ಟಿ ಮತ್ತಷ್ಟು ಪಕ್ವವಾಗಿದೆ. ಶಕ್ತಿಯುತವಾದ ಸಂಭಾಷಣೆ, ಕುತೂಹಲಕರವೂ ಸಹಜ ಸುಂದರವೂ ಆದ ನಿರೂಪಣೆ ಮತ್ತು ಪ್ರಧಾನವಾಗಿ, ನೆಲದಿಂದ ಮೂಡಿ ಮೇಲೆದ್ದಂತಹ ಸದೃಢ ಪಾತ್ರ ಸೃಷ್ಟಿ – ಅವರ ವೈಶಿಷ್ಟ್ಯಗಳಾಗಿವೆ. ನಮ್ಮ ನಾಡಿನ ಶಿಕ್ಷಕರ ಬವಣೆ ಬಡತನಗಳ ಸಹಜವೂ ಸಹಾನುಭೂತಿಯವೂ ಆದ ಚಿತ್ರಣ “ದೂರದ ನಕ್ಷತ್ರ” ಮತ್ತು “ನವೋದಯ”ಗಳಲ್ಲಿದೆ. ಮಾನವೀಯ ಅಂತಃಕರಣದ ಪ್ರಭಾವೀ ಚಿತ್ರಣ ವಾಗಿದೆ, “ಅಭಯಾಶ್ರಮ”. ಸೆರೆಯಲ್ಲಿದ್ದ ವ್ಯಕ್ತಿಯೊಬ್ಬನ ದಿನಚರಿಯ ರೂಪದಲ್ಲಿರುವ “ವಿಮೋಚನೆ” ತನ್ನ ಹಿನ್ನೋಟ ತಂತ್ರದಿಂದಾಗಿ, ಘಟನೆಗಳ ಸುಸಂಬದ್ಧತೆಯಿಂದಾಗಿ, ನಿರೂಪಣೆಯ ಸೊಗಸಿನಿಂದಾಗಿ ಮನ ಸೆಳೆಯುತ್ತದೆ. “ರಂಗಮ್ಮನ ವಠಾರ” ಅವರ ಒಂದು ಮಹತ್ವದ ಕೃತಿ. ಒಂದು ವಠಾರದಲ್ಲಿರುವ ಹಲವು ಕುಟುಂಬಗಳ ಹಲವು ಮುಖದ ಜೀವನವನ್ನು ಈ ಕೃತಿ ತುಂಬ ರಸವತ್ತಾಗಿ ಅರ್ಥವತ್ತಾಗಿ ನೈಜವಾಗಿ ಚಿತ್ರಿಸುತ್ತದೆ. ರಂಗಮ್ಮನ ಪಾತ್ರ ಕಲ್ಪನೆಯಂತೂ ಅದ್ಭುತವಾದದ್ದು. ಜೀವನದ ಅಂತರಂಗದ ಅರಿವನ್ನೇ ಪಡೆಯದೆ ಶ್ರೀಮಂತಿಕೆಯ ತೊಟ್ಟಿಲಲ್ಲಿದ್ದು, ಕ್ರಮೇಣ ಅದರ ನೈಜ ಮಲ್ಯಗಳನ್ನು ಅರ್ಥಮಾಡಿಕೊಂಡ ತಂದೆ ಮಕ್ಕಳಿಬ್ಬರ ಕತೆ “ಬಂಗಾರದ ಜಿಂಕೆ”. ಕಯ್ಯೂರಿನ ಹುತಾತ್ಮರ ಆದರ್ಶವೂ, ನಿಸ್ವಾರ್ಥವೂ ಆದ ಹೋರಾಟವನ್ನು ಅತ್ಯಂತ ಶಕ್ತಿವತ್ತಾಗಿ ಪ್ರಾಮಾಣಿಕವಾಗಿ ಸ್ಫೂರ್ತಿಯುತ ವಾಗಿ ಬಣ್ಣಿಸುತ್ತದೆ “ಚಿರಸ್ಮರಣೆ”. ಮುಗ್ಧವೂ ಶಾಂತವೂ ಉದಾರವೂ ಆದ ಜೀವನ ನಡೆಸುತ್ತಿದ್ದ ಹಳ್ಳಿಗಳಲ್ಲಿ ನಾಗರಿಕತೆಯ ಪದಾರ್ಪಣದಿಂದ ಉಂಟಾದ ಪರಿಣಾಮವನ್ನು ಕಾದಂಬರಿಸುತ್ತದೆ, “ನೂರೂ ಜುಟ್ಟು ಮೂರು ಜಡೆ”. ಅವರ “ಬನಶಂಕರಿ”, “ಹೆಣ್ಣಾಗಿ ಕಾಡಿತ್ತು ಮಾಯೆ”, “ಅಂಜನ”ಗಳೂ ಹೆಸರಿಸಬೇಕಾದ ಕೃತಿಗಳು. “ಕಲ್ಯಾಣಸ್ವಾಮಿ” ಮತ್ತು “ಸ್ವಾಮಿ ಅಪರಂಪಾರ” ಎಂಬೆರಡು ಐತಿಹಾಸಿಕ ಕಾದಂಬರಿಗಳನ್ನೂ ನಿರಂಜನರು ಬರೆದಿದ್ದಾರೆ. ಹತ್ತೊಂಬತ್ತನೇ ಶತಮಾನದ ಕೊಡಗಿನ ರಾಜ ಚಿಕವೀರ ರಾಜನ ಕಾಲದ ಇತಿಹಾಸ “ಅಪರಂಪಾರ”ದ ವಸ್ತು. ೧೯ನೇ ಶತಮಾನಕ್ಕೆ ನಮ್ಮನ್ನು ಕರೆದೊಯ್ಯುವಂತಹ ಪರಿಸರಣ ನಿರ್ಮಾಣ, ಸತ್ವಭರಿತವಾದ ಪಾತ್ರ ಸೃಷ್ಟಿ, ಪ್ರಾಮಾಣಿಕವಾದ ಐತಿಹಾಸಿಕ ದೃಷ್ಟಿ. ಇವು ಈ ಕೃತಿಯನ್ನು ಒಂದು ಉತ್ತಮ ಐತಿಹಾಸಿಕ ಕಾದಂಬರಿಯನ್ನಾಗಿ ಮಾಡಿವೆ.

ಕ್ರಾಂತಿಕಾರಕವಾದ ರೀತಿಯಲ್ಲಿ ಸಮಾಜದ ಕೊಂಕು ಡೊಂಕುಗಳನ್ನು ಅನ್ಯಾಯ ಅನಾಚಾರಗಳನ್ನು ಅಸಹನೆ ಅಸಮತೆಗಳನ್ನು ಟೀಕಿಸಿ ಉಗ್ರವಾಗಿ ವಿಡಂಬಡಿಸಿ ಕೃತಿ ರಚನೆ ಮಾಡಿದವರು ಬಸವರಾಜ ಕಟ್ಟೀಮನಿಯವರು. ಅಲ್ಲದುದನ್ನು ಹೊಲ್ಲದುದನ್ನು ಕಂಡಾಗ ಅವರು ಕೆಣಕಿದ ಫಣಿಯಾಗುತ್ತಾರೆ. ನೇರ ನಿರ್ದಾಕ್ಷಿಣ್ಯ ಪರಿಣಾಮಕಾರಕ ಮಾತು ಬರೆಹ ಅವರ ಹುಟ್ಟುಗುಣ. “ಮೋಹದ ಬಲೆಯಲ್ಲಿ”, ‘ಜರತಾರಿ ಜಗದ್ದುರು’ಗಳಲ್ಲಿ ಕಪಟ ಸ್ವಾಮಿಗಳ ಸೋಗಿನ ವೈರಾಗ್ಯವನ್ನೂ ಆಂತರಿಕ ಅವ್ಯವಹಾರವನ್ನೂ ಕೆಂಗೆಂಡದ ಕಾವಿನಿಂದ ವಿಡಂಬಿಸಿದ್ದಾರೆ. ಅವರ ನೈತಿಕ ಪ್ರಜ್ಞಾಮೂಲವಾದ ರೋಷ ಕೆಲವೇಳೆ ಕಲೆಯನ್ನು ಹಿಮ್ಮುಖ ಮಾಡಿರುವುದೂ ಉಂಟು. “ಜಲಾಮುಖಿಯ ಮೇಲೆ” ಶ್ರಮಜೀವಿಗಳ ಹೋರಾಟವನ್ನು ತುಂಬ ತೀಕ್ಷ್ಣವಾಗಿ ಅಭಿವ್ಯಕ್ತಿಸುವ ಕೃತಿ. ಅದರ ನೈಜತೆ ನಿರ್ದಿಷ್ಟತೆಗಳು ಮುಟ್ಟಿದರೆ ಸುಡುವಷ್ಟು ತೀವ್ರವಾಗಿವೆ. “ಬೀದಿಯಲ್ಲಿ ಬಿದ್ದವಳು”, ವೇಶ್ಯಾ ಜೀವನವನ್ನು ಕುರಿತದ್ದು. “ಶಿವದಾರ ಜನಿವಾರ” ಮತ್ತು “ನೀ ನನ್ನ ಮುಟ್ಟಬೇಡ” ಕೃತಿಗಳು ನಮ್ಮ ಸಮಾಜವನ್ನು ಶಾಪವಾಗಿ ಕಾಡುತ್ತಿರುವ ಜತಿ ಭೂತವನ್ನು ವಿಶ್ಲೇಷಿಸುತ್ತವೆ. ಮಡಿವಂತಿಕೆಯ ಅಂತರ್ಯ ದಲ್ಲಿ ಹೊಲಸಿನ ಹೊಂಡವನ್ನು ನಿರ್ಮಿಸಿಕೊಂಡಿರುವ ಆಷಾಢಭೂತಿಗಳ ವ್ಯವಹಾರಗಳನ್ನು ಇವು ಸೂಚ್ಯವಾಗಿ ಮನಮುಟ್ಟುವಂತೆ ನಿರೂಪಿಸುತ್ತವೆ. ಸುಸಂಸ್ಕೃತರೆನ್ನಿಸಿಕೊಂಡವರಲ್ಲೂ ಮನೆ ಮಾಡಿರುವ ಅಂಧಶ್ರದ್ಧೆಯನ್ನು ಬಯಲಿಗೆಲೆಯುವ ಕೃತಿ “ಸಾಕ್ಷಾತ್ಕಾರ”. “ನಾನು ಪೋಲೀಸನಾಗಿದ್ದೆ”. ವಸ್ತುವಿನ ನಾವೀನ್ಯತೆಯಿಂದ ಮೆರಗು ಪಡೆದಿದೆ. “ಬೆಳಗಿನ ಗಾಳಿ” ಒಂದು ನಗರದ ಹಲವು ಮುಖದ ಸಮಾಜಘಾತಕ ಸಂಗತಿಗಳ ಮೇಲೆ ಬೆಳೆಕು ಚೆಲ್ಲುತ್ತದೆ. “ಪ್ರಿಯಬಾಂಧವಿ”ಯದೂ ಅದೇ ಧಾಟಿ. “ಖಾನಾವಳಿಯ ನೀಲಾ” ವಾಸ್ತವ ರಮ್ಯವೂ ಮರ್ಮಭೇದಕವೂ ಆದ ಕೃತಿ. ಹಳ್ಳಿಯ ಸೊಗಡನ್ನುಳ್ಳ ಸಹಜ ಸಜೀವ ಕೃತಿ “ಹೆಂಡತಿ”. ದುರಂತ ಪ್ರಣಯದ ಹೃತ್ಪರ್ಶಿಯೂ ಸತ್ವಭರಿತವೂ ಆದ ಕಾದಂಬರಿ “ಪ್ರಪಾತ”. “ಜಲತರಂಗ” ಯೌವನ ಪೂರ್ವ ವಯಸ್ಸಿನ ಒಂದು ಸುಂದರ ಚಿತ್ರಣ. “ಸ್ವಾತಂತ್ರ್ಯದೆಡೆಗೆ” ಮತ್ತು “ಮಾಡಿಮಡಿದವರು” ಸ್ವಾತಂತ್ರ್ಯ ಚಳುವಳಿಯ ಹೋರಾಟದಲ್ಲಿ ಹುತಾತ್ಮರಾದವರ ಸ್ಫೂರ್ತಿದಾಯಕವೂ ಸಹಜವೂ ತೇಜಸಂಪನ್ನವೂ ಆದ ಕಣ್ಕಟ್ಟುವಂಥ ಕೃತಿಗಳು. ಸ್ವತಃ ಸ್ವಾತಂತ್ರ್ಯ ಚಳುವಳಿಯ ಕಾವನ್ನು ಕಂಡುಂಡ ಲೇಖಕರು ತುಂಬ ಪ್ರಭಾವಕಾರಿಯಾಗಿ ಅದರ ವಿವರಗಳನ್ನು ಚಿತ್ರಿಸಿದ್ದಾರೆ. ಐತಿಹಾಸಿಕ ಕಾದಂಬರಿಗಳ ರಚನೆಯಲ್ಲೂ ಕಟ್ಟೀಮನಿ ಯವರು ಸಿದ್ಧಹಸ್ತರಾಗಿದ್ದಾರೆ. “ರಾಯನಾಯಕ”, “ಪೌರುಷ ಪರೀಕ್ಷೆ” ಮತ್ತು “ಸಮರ ಭೂಮಿ” ಅವರ ಚಾರಿತ್ರಿಕ ಕಾದಂಬರಿಗಳು. ಮೂರರಲ್ಲೂ ವೀರರಸ ನೊರೆಗಟ್ಟಿ ಹರಿಯುತ್ತದೆ. ಮಲ್ಲಸರ್ಜ, ಸಂಗೊಳ್ಳಿರಾಯಣ್ಣ ಮುಂತಾದವರು ನಮ್ಮೆದುರು ಜೀವತಳೆದು ನಿಲ್ಲುತ್ತಾರೆ. “ಗಿರಿಯ ನವಿಲು” ಮಹಾದೇವಿಯಕ್ಕನನ್ನು ಕುರಿತ ಕೃತಿ. ಹಳ್ಳಿಯ ರಕ್ತಮಾಂಸ ತುಂಬಿದ ಗಂಡು ಭಾಷೆ, ಜ್ವಲಂತ ಪಾತ್ರ ನಿರ್ಮಿತಿ, ಅನುಭವ ಸಾಂದ್ರತೆ, ಸಾತ್ವಿಕ ರೋಷ ಕಟ್ಟೀಮನಿಯವರ ಕಾದಂಬರಿಗಳ ಪ್ರಮುಖ ಲಕ್ಷಣಗಳಾಗಿವೆ.

ಜೀವನದ ಬಹುವಿಸ್ತಾರವಾದ ನೆಲೆಗಟ್ಟಿನ ಮೇಲೆ ನಿಂತ ಬೃಹತ್ ಕಾದಂಬರಿ ವಿನಾಯಕರ “ಸಮರಸವೇ ಜೀವನ”. ೧೯೩೧ರಲ್ಲಿ ಪ್ರಾರಂಭವಾದ ಅದರ ರಚನೆ ೧೯೫೩ರಲ್ಲಿ ಪೂರ್ಣಗೊಂಡಿದೆ. ಈ ಮಧ್ಯದ ಇಪ್ಪತ್ತೆರಡು ವರ್ಷಗಳ ಅಂತರ, ಗುಣಾವಗುಣಗಳೆರಡನ್ನೂ ಒಟ್ಟಿಗೇ ಅದಕ್ಕೆ ತಂದುಕೊಟ್ಟಿದೆ. ಎರಡು ಕುಟುಂಬಗಳ ವಿರಸ ಘರ್ಷಣೆಯನ್ನು ಕೇಂದ್ರವಾಗಿಟ್ಟುಕೊಂಡು ಆರಂಭವಾದ ಕೃತಿ ಬಹುಬೇಗನೆ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಂಡು ವ್ಯಾಪಕವಾಗಿ ಪ್ರಾದೇಶಿಕವಾಗಿ ರಾಷ್ಟ್ರೀಯವಾಗಿ ಅಂತಾರಾಷ್ಟ್ರೀಯವಾಗಿ ಬೆಳೆದುಬಿಡುತ್ತದೆ. ವಿನೋದ, ವಿಚಾರ, ತರ್ಕ, ತತ್ವ, ಧರ್ಮ, ಸಂಸ್ಕೃತಿ, ಪ್ರೇಮ, ಕಾಮ, ಆದರ್ಶ, ನಿಸರ್ಗ, ಶ್ರದ್ಧೆ, ಸಂಪ್ರದಾಯ, ಶಿಕ್ಷಣ, ಸಂಸ್ಕಾರ, ಮುಂತಾದ ಹಲವು ಹನ್ನೊಂದು ವಿಚಾರಗಳು ಇದರಲ್ಲಿ ಮೇಳವಿಸಿವೆ. ಹಲವು ಪಾತ್ರಗಳು ತುಂಬ ಸದೃಢವಾಗಿ ಸಬಲವಾಗಿ ಮೂಡಿ ಬಂದಿದ್ದರೆ ಕೆಲವು ನಿಷ್ಕಾರಣವಾಗಿ ಮೊಟಕಾಗಿಬಿಟ್ಟಿವೆ. ಹಲವೆಡೆ ಆಶ್ಚರ್ಯಗೊಳಿಸುವಂಥ  ಅದ್ಭುತ ವಾಸ್ತವಿಕ ಚಿತ್ರಣವಿದ್ದರೆ ಮತ್ತೆ ಕೆಲವೆಡೆ ಅತಿಶಯೋಕ್ತಿ ಅತಿವರ್ಣನೆ ಭಾವಾತಿರೇಕ ತುಂಬಿಕೊಂಡಿವೆ. ಭಾಷಾಶೈಲಿಯಲ್ಲಿಯೂ ಇದೇ ರೀತಿಯ ವಿಷಮತೆ ಕಣ್ಣಿಗೆ ಬಡಿಯುತ್ತದೆ. ಆಡು ನುಡಿ ತತ್‌ಕ್ಷಣ ಗ್ರಾಂಥಿಕವಾಗುತ್ತದೆ. ಕೆಲವು ಪಾತ್ರಗಳ ಬಗ್ಗೆ ಲೇಖಕರು ಪಕ್ಷಪಾತ ವಹಿಸಿ ಬಿಡುವುದರಿಂದ ಉಳಿದವು ಛಾಯಾಪಾತ್ರಗಳಾಗಿಬಿಡುತ್ತವೆ. ಆದರೂ ಒಟ್ಟಂದದಲ್ಲಿ ನೋಡುವಾಗ ಈ ದೋಷಗಳು ಪ್ರಖರವಾಗಿ ಕಾಣಿಸದೆ ಕಾದಂಬರಿಯಲ್ಲಿ ಜೀವಂತವಾಗಿ ಉಸಿರಾಡುವ ವೈವಿಧ್ಯಮಯವೂ ಅದ್ಬುತ ರಮ್ಯವೂ  ಆದ ಬದುಕು ನಮ್ಮ ಮನಸ್ಸನ್ನು ತುಂಬುತ್ತದೆ. ಉತ್ತರ ಕರ್ನಾಟಕದ ಜನಜೀವನ ತನ್ನೆಲ್ಲಾ ಸಮಗ್ರತೆ ಯೊಡನೆ ಸಂಕೀರ್ಣತೆಯೊಡನೆ ಇಲ್ಲಿ ಮೈವೆತ್ತಿದೆ. ಕಥಾ ಪಾತ್ರಗಳು ಘಟನೆಗಳು ವಿಚಾರಗಳು ಇಲ್ಲಿ ಇಡಕಿರಿದಿದ್ದರೂ ಅವೆಲ್ಲ ಬಹುಮಟ್ಟಿಗೆ ಸಮನ್ವಯಗೊಂಡು ಸಮರಸಗೊಂಡು ಒಮ್ಮುಖವಾಗಿ ನಡೆದು ಕಾದಂಬರಿಯ ಮಹಾಸೌಧವನ್ನು ಶಿಲ್ಪಿಸಿವೆ.

“ಕಾನೂರು ಹೆಗ್ಗಡತಿ”ಯನ್ನು ಬರೆದ ಕುವೆಂಪು ಇತ್ತೀಚೆಗೆ “ಮಲೆಗಳಲ್ಲಿ ಮದುಮಗಳು” ಕಾದಂಬರಿಯನ್ನು ಸೃಷ್ಟಿಸಿದ್ದಾರೆ. ಗಾತ್ರ ಪಾತ್ರಗಳೆರಡರಲ್ಲೂ ಇದು ನಿಸ್ಸಂದೇಹವಾಗಿ ದೊಡ್ಡದು. ಮಲೆನಾಡಿನ ಮಹಾಭಿತ್ತಿಯ ಮೇಲೆ ರೂಪುಗೊಂಡಿರುವ ಈ ಕೃತಿ “ಹುಲಿಯ ತೆರೆದ ಹಾದಿಯಲ್ಲಿ ತನ್ನ ಅಂತರಂಗದ ಎಳೆಎಳೆಯನ್ನೂ ನಿಷ್ಕಪಟವಾಗಿ ಸಹಜ ರಮ್ಯವಾಗಿ  ಸಾಂದ್ರವಾಗಿ ಬಿಡಿಬಿಡಿಸಿ ಪ್ರದರ್ಶಿಸುತ್ತಾ ನಡೆಯುತ್ತದೆ. ಪ್ರಕೃತಿಯ ಮಡಿಲಲ್ಲಿ ಹುದುಗಿದ ನಾಲ್ಕಾರು ಹಳ್ಳಿಗಳ ವಿವಿಧ ಜತಿಯ ವಿವಿಧ ವರ್ಗದ ಮನೋಧರ್ಮದ ವಿವಿಧ ಸಂಪ್ರದಾಯದ ಜನಜೀವನವನ್ನು ಅತ್ಯುಜ್ವಲವೂ ಅನ್ಯಾದೃಶ್ಯವೂ ಆದ ರೀತಿಯಲ್ಲಿ ನಗ್ನವಾಗಿ ಬಣ್ಣಿಸುತ್ತದೆ ಈ ಕೃತಿ”. ಮದುವೆ ಇಲ್ಲಿನ ವಿವಿಧಾಂಗಗಳನ್ನು ಬೆಸೆಯುತ್ತದೆ. ಇದರಲ್ಲಿ ಕಥಾನಾಯಕನಿಲ್ಲ, ನಾಯಕಿಯಿಲ್ಲ. ಮಲೆನಾಡಿನ ಇಡೀ ಬದುಕಿಗೇ ಇಲ್ಲೆ ನಾಯಕಪಟ್ಟ; ಅದ್ಭುತ ವಾಸ್ತವತೆಗೆ ನಾಯಕಿಯ ಕಿರೀಟ. ಇಲ್ಲಿ ಅವಸರವಿಲ್ಲ, ಅತಿಶಯೋಕ್ತಿಯಿಲ್ಲ, ಅತಿಪ್ರಧಾನತೆಯಿಲ್ಲ, ಅವಜ್ಞೆಯಿಲ್ಲ. ಎಲ್ಲವೂ ವಿಶಿಷ್ಟ, ಎಲ್ಲವೂ ಪ್ರಧಾನ, ಎಲ್ಲವೂ ಸುಸ್ಪಷ್ಟ. ಕುವೆಂಪು ಅವರ ಪ್ರಗಾಢವಾದ ಅನನ್ಯ ಸದೃಶವಾದ ಕಾಡಿನ ನಾಡಿನ ಜೀವನಾನುಭವದ ಸೂಕ್ಷ್ಮತಮಸಂವೇದನೆಗಳನ್ನೂ ಸಶಕ್ತವಾಗಿ ಸೆರೆಹಿಡಿಯಬಲ್ಲ ನೆಲಗಂಪಿನ ವಿಧೇಯಶೈಲಿ, ಸ್ವೋಪಜ್ಞಶೀಲವಾದ ಕಲಾಪ್ರಜ್ಞೆ, ಬೌದ್ದಿಕ ಎಚ್ಚರ ಇವು ಗಳೆಲ್ಲವೂ ಪ್ರಮಾಣಬದ್ಧವಾಗಿ ಸಮ್ಮಿಲನಗೊಂಡಿರುವ ಮಹತ್ಕೃತಿಯಿದು. ಕಥಾ ಸಂವಿಧಾನದಲ್ಲಿ, ವಸ್ತು ನಿರೂಪಣೆಯಲ್ಲಿ ಪಾತ್ರರಚನೆಯಲ್ಲಿ, ಶೈಲಿಯಲ್ಲಿ, ಹಳೆಯ ಜಡನ್ನುಳಿದು ಹೊಸದಾರಿಯನ್ನು ತುಳಿದು ವಿಶಿಷ್ಟ ಲಕ್ಷಣಗಳನ್ನೊಳಗೊಂಡ ಸಂಕೀರ್ಣ ಕಾದಂಬರಿಯಿದು.

೧೦

ಇಟಲಿಯ ಸುಪ್ರಸಿದ್ಧ ಕಲಾಸಾರ್ವಭೌಮ ಮೈಕೆಲ್ ಏಂಜಲೋವಿನ ಸುತ್ತ ರಮ್ಯವಾದ ಕಲಾತ್ಮಕ ಕಾದಂಬರಿಯೊಂದನ್ನು ಹೆಣೆದಿದ್ದಾರೆ ಕೆ.ವಿ. ಅಯ್ಯರ್. ಬಾಲ ಏಸುವಿಗೆ “ರೂಪದರ್ಶಿ”ಯಾದಂಥ ವ್ಯಕ್ತಿ, ಸೈತಾನನ ಸ್ವರೂಪನಾದ “ಜುದಾಸ್”ಗೂ ರೂಪದರ್ಶಿ ಯಾಗಬೇಕಾಗಿ ಬಂದ ಜೀವನವನ್ನು ಹೃದಯವೇದಕವಾಗಿ ಹೇಳುವ ಕೃತಿಯಿದು. ಕೃತಿಯಲ್ಲಿ ಪಡಿಮೂಡಿಸಿರುವ ಇಟಲಿಯ ಪರಿಸರ ತುಂಬ ಸಹಜವೂ ಶಕ್ತಿಯುತವೂ ಆಗಿದ್ದು, ಪಾತ್ರಗಳೂ ಕೂಡ ಮಿಡಿದರೆ ರಕ್ತ ಹನಿಯುವಂತಿವೆ. ಹೊಯ್ಸಳ ಸಾಮ್ರಾಜ್ಞಿ ಶಾಂತಲಾ ದೇವಿಯನ್ನು ಕುರಿತ ಅವರ ಐತಿಹಾಸಿಕ ಕಾದಂಬರಿ ಶೈಲಿಯ ಚಿತ್ತಾಕರ್ಷತೆಯಿಂದ ಕಲ್ಪನೆಯ ಶ್ರೀಮಂತಿಕೆಯಿಂದ ತುಂಬಿಕೊಂಡಿದೆ. ನಿರ್ಜೀವ ಇತಿಹಾಸದ ಪರಿಸರಕ್ಕೆ ಜೀವತುಂಬುವ ಪ್ರಯತ್ನ ಸಾರ್ಥಕವಾಗಿದೆಯಾದರೂ ಚಾರಿತ್ರಿಕ ಕಾದಂಬರಿಕಾರನಿಗಿರಬೇಕಾದ ನಿರ್ಲಿಪ್ತತೆ ಇಲ್ಲವಾಗಿ ಅತಿಯಾದ ಆದರ್ಶಪ್ರಿಯತೆ. ಕೆಲವೆಡೆ ತೀರ ಅಸಹಜವೆನ್ನಿಸುವಷ್ಟು, ಹರಡಿ ಕೊಂಡು ಕೃತಿಯ ಮಲ್ಯವನ್ನು ಕುಗ್ಗಿಸಿಬಿಟ್ಟಿದೆ.

“ಚಿಕವೀರ ರಾಜೇಂದ್ರ” ಕೊಡಗಿನ ಇತಿಹಾಸದ ಮೇಲೆ ರಚಿತವಾದ ಮಾಸ್ತಿಯವರ ಶ್ರೇಷ್ಠ ಐತಿಹಾಸಿಕ ಕಾದಂಬರಿ. ಹತ್ತೊಂಬತ್ತನೆಯ ಶತಮಾನದ ಜನಜೀವನವನ್ನು ಸಂಸ್ಕೃತಿಯನ್ನು ಪಾತ್ರಗಳನ್ನು ಅತ್ಯಂತ ಸಮರ್ಥವಾಗಿ ಅವರು ಪುನರ್ನಿರ್ಮಿಸಿದ್ದಾರೆ. ಅವರ ಸರಳ ಗಂಭೀರ ಶೈಲಿ ಕಾದಂಬರಿಯ ಮಲ್ಯಗಳನ್ನು ಉತ್ಕರ್ಷಿಸಿದೆ. ಚಿಕ್ಕವೀರರಾಜನ ಪಾತ್ರದ ಬೆಳವಣಿಗೆಯಲ್ಲಿ ಪೋಷಿತವಾಗಿರುವ ಪಾಪಪ್ರಜ್ಞೆ ವಿನೂತವಾದುದು; ಸಮರ್ಥವಾದುದು; “ಚೆನ್ನಬಸವನಾಯಕ” ಕೂಡ ಅದೇ ಎರಕದ ಸರಳ ನಿರಾಡಂಬರ ಮಲಿಕ ಕಾದಂಬರಿ.

ಹಿರಿಯ ಲೇಖಕರಾದ ದೇವುಡು ಅವರು “ಮಹಾಬ್ರಾಹ್ಮಣ”, “ಮಹಾಕ್ಷತ್ರಿಯ” ಮತ್ತು “ಮಹಾದರ್ಶನ” ಎಂಬ ಮೂರು ಪೌರಾಣಿಕ; “ಅವಳ ಕತೆ” ಎಂಬ ಐತಿಹಾಸಿಕ, “ಅಂತರಂಗ”, “ಮಲ್ಲಿ”, “ಡಾ. ವೀಣಾ” ಎಂಬ ಸಾಮಾಜಿಕ ಕೃತಿಗಳನ್ನು ರಚಿಸಿದ್ದಾರೆ. ವಿಶ್ವಾಮಿತ್ರನ ಮಹಾಸಾಧನೆ, ನಹುಷ ಚಕ್ರವರ್ತಿಯ ಉದಾತ್ತವಾದ ದಾನ ಹಾಗೂ ವೀರಗುಣಗಳು, ಯಾಜ್ಞವಲ್ಕ್ಯ ಮಹರ್ಷಿಯ ಜ್ಞಾನ ತಪಸ್ಸುಗಳು ಪೌರಾಣಿಕ ಕೃತಿಗಳಲ್ಲಿ ಜೀವದಳೆದಿವೆ. ತಮ್ಮ ಕಲ್ಪನೆಯನ್ನು ಪೌರಾಣಿಕ ಯುಗಕ್ಕೆ ಹರಿಸಿ ಅದನ್ನು ಸಹಜ ಸಂಪನ್ನವಾಗಿ ಮೇಲೆತ್ತಿ ತಂದು ಸಮರ್ಥವಾಗಿ ರೂಪಿಸಿರುವ ಅವರ ಕಲಾಶಕ್ತಿ ಅದ್ಭುತ ವಾದುದು. ಅವರ ಭಾರತೀಯ ಧರ್ಮ ಹಾಗೂ ಸಂಸ್ಕೃತಿಗಳ ಗಾಡಜ್ಞಾನ ಇಲ್ಲಿ ಮಡುಗಟ್ಟಿದೆ. “ಅವಳ ಕತೆ” ವಿಜಯನಗರದ ಇತಿಹಾಸವನ್ನು ಭಿತ್ತಿಯಾಗುಳ್ಳ ಒಂದು ಶೃಂಗಾರ ಕಥೆ. ಸಾಮಾಜಿಕ ಕಾದಂಬರಿಗಳಲ್ಲಿ ಸೂಕ್ಷ್ಮದೃಷ್ಟಿ, ಸಾಂದ್ರವಾದ ಅನುಭವ, ಕುಸುರಿಕಲೆ ಮತ್ತು ನವೀನವೂ ಹರಿತವೂ ಆದ ವೈಚಾರಿಕತೆ ಅಭಿವ್ಯಕ್ತಿಗೊಂಡಿವೆ.

ವಿನೋದ ವಿಚಾರಗಳ ಸಮ್ಮಿಲನವನ್ನು ತಮ್ಮ ಕಾದಂಬರಿಗಳಲ್ಲಿ ಸಾಧಿಸಿದವರು ಗೊರೂರ್ ಅವರು. “ಹೇಮಾವತಿ” ಮತ್ತು “ಊರ್ವಶಿ”, ಹಳ್ಳಿಯ ಬಾಳಿನ ರಸಪೂರ್ಣ ಚಿತ್ರಗಳಾಗಿವೆ. ಅವರ “ನಮ್ಮೂರಿನ ರಸಿಕರು” ಸಹಜ ಸುಂದರವಾದ ರಸಿಕ ಹಾಸ್ಯದ ತುಂಬು ಪ್ರವಾಹ. ಅವರ ಜೀವನಶ್ರದ್ಧೆ, ಸುಸಂಸ್ಕೃತಿ ಮತ್ತು ಸೀಳು ನೋಟುಗಳು ಇಲ್ಲಿ ಶಕ್ತಿವತ್ತಾಗಿ ಅವಿರ್ಭವಿಸಿವೆ.

ವೀರಕೇಸರಿ ಸೀತಾರಾಮಶಾಸ್ತ್ರಿ ಮತ್ತು ಶ್ರೀನಿವಾಸರಾವ್ ಕೊರಟಿ ಅವರು ಬಹುದೊಡ್ಡ ಸಂಖ್ಯೆಯಲ್ಲಿ ಐತಿಹಾಸಿಕ ಕಾದಂಬರಿಗಳನ್ನು ಬರೆದಿದ್ದಾರೆ. ವೀರಕೇಸರಿಯವರು ಮೊಗಲರ ಇತಿಹಾಸವನ್ನು ಆಧರಿಸಿ, “ಫಕೀರರ ವಿದ್ರೋಹ”, “ರಾಣಿ ರೂಪಮತಿ”, “ಸುಲ್ತಾನ ರಜಿಯಾ”, “ಜಹನಾರಾ”, “ಮೊಗಲ್ ಸಾಮ್ರಾಜ್ಯ”, ಮುಂತಾದ ಕೃತಿಗಳನ್ನೂ, ಮೈಸೂರು ಇತಿಹಾಸವನ್ನು ಆಧರಿಸಿ “ಧರ್ಮಗ್ಲಾನಿ”, “ಗೋಲ್ಕೊಂಡ ಪತನ” ಮುಂತಾದ ಕಾದಂಬರಿ ಗಳನ್ನೂ ರಚಿಸಿದ್ದಾರೆ. ಕಲ್ಪನೆಯ ಹೆಚ್ಚಳದಿಂದ, ಶಿಥಿಲವಾದ ಬಂಧದಿಂದ, ಶುಷ್ಕವಾದ ಸಂವಾದದಿಂದ ಇವು ನಿರೀಕ್ಷಿಸಿದ ಪರಿಣಾಮವನ್ನು ಬೀರದೆ ಹೋಗುತ್ತವೆ. “ದೌಲತ್” ಮಾತ್ರ ಪಕ್ವವಾದ ಪಾತ್ರ ಕಲ್ಪನೆಯಿಂದ ಸಮರ್ಥವಾದ ಪರಿಸರ ನಿರ್ಮಾಣದಿಂದ, ಬಂಧ ಶೈಥಿಲ್ಯವಿದ್ದರೂ, ಮನಸೆಳೆಯುತ್ತದೆ. ವಿಜಯನಗರ ಹಾಗೂ ಮೈಸೂರು ಇತಿಹಾಸದ ಮೇಲೆ ಹತ್ತಾರು ಕಾದಂಬರಿಗಳನ್ನು ಕೋರಟಿ ಅವರು ಬರೆದಿದ್ದಾರೆ. “ವ್ಯಾಘ್ರನಖ” ಮತ್ತು “ಪರಮೇಶ್ವರ ಪುಲಿಕೇಶಿ” ಅವರ ಉತ್ತಮ ಕಾದಂಬರಿಗಳು. ಉತ್ತಮ ಪರಿಸರ ಸೃಷ್ಟಿ ಇದ್ದರೂ ಪಾತ್ರಗಳು ಲೇಖಕರ ಸೂತ್ರದಲ್ಲೇ ಯಾಂತ್ರಿಕವಾಗಿ ಆಡುತ್ತವೆ. ವೇಗಯುತ ವಾದ ಕಥನ ಕಲೆ ಇವರ ವೈಶಿಷ್ಟ್ಯ. “ಮಿಸ್ ಲೀಲಾವತಿ”, “ಊರು ಕವಲೊಡೆದಾಗೆ” ಎಂಬ ಅವರ ಸಾಮಾಜಿಕ ಕಾದಂಬರಿಗಳು ಹೆಸರಿಸಬೇಕಾದ ಕೃತಿಗಳು.

ಶ್ರೀರಂಗರು ನಮ್ಮ ಗಮನಾರ್ಹ ಕಾಂದಬರಿಕಾರರಲ್ಲಿ ಒಬ್ಬರು. “ಪ್ರಕೃತಿ”, “ಪುರುಷ”, “ಅನಾದಿ”, “ಗೌತಮನ ಶಾಪ”, “ಪುರುಷಾರ್ಥ” ಇವು ಅವರ ಕಾದಂಬರಿಗಳಲ್ಲಿ ಕೆಲವು. “ಪ್ರಕೃತಿ” ಮತ್ತು “ಪುರುಷ” ಪರಂಪರಾಗತವಾಗಿ ಬಂದಂತಹ ಯಜಮಾನ ಮತ್ತು ಆಳಿನ ಸಂಬಂಧವನ್ನು, ಜತಿಭೇದವನ್ನು ಕುರಿತ ವಿಚಾರಪೂರ್ಣ ಕಾದಂಬರಿಗಳಾಗಿವೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ನಂತರ ತಮ್ಮ ಆದರ್ಶಗಳನ್ನು ತೊರೆದು ಸ್ವಾರ್ಥ ಸಾಧನೆಯ ಬೇರೆ ಬೇರೆ ಮಾರ್ಗಗಳನ್ನವಲಂಬಿಸಿದ ಯುವಕರ ಕತೆ “ಪುರುಷಾರ್ಥ”. ಮಾನವಜೀವನದ ಮೂಲಭೂತವಾದ ಕಾಮ ಪ್ರವೃತ್ತಿಯನ್ನು ಸೂಕ್ಷ್ಮವಾಗಿ ಗಂಭೀರವಾಗಿ ವಿವೇಚಿಸುವ ವೈಚಾರಿಕ ಕಾದಂಬರಿ “ಗೌತಮನ ಶಾಪ”. ಈಚೆಗೆ “ವಿಷಚಕ್ರವ್ಯೂಹ”, “ಸೌಜನ್ಯದ ಬೆಲೆ”ಗಳನ್ನು ಬರೆದಿದ್ದಾರೆ. ಪೌರಾಣಿಕಯುಗದ ಘಟನೆಗಳನ್ನು ಆಧುನಿಕ ಸಮಸ್ಯೆಗಳಿಗೆ ಸಂಕೇತವಾಗಿಟ್ಟುಕೊಂಡು ಸಮರ್ಥವಾಗಿ ನಿರ್ವಹಿಸುವುದರಲ್ಲಿ ಶ್ರೀರಂಗರು ನಿಪುಣರು.

ಹನ್ನೆರಡನೆ ಶತಮಾನದ ಶರಣ ಕ್ರಾಂತಿಯನ್ನು ಸವಿವರವಾಗಿ ಸುಂದರವಾಗಿ ತಮ್ಮ “ಕ್ರಾಂತಿಕಲ್ಯಾಣ” ಕಾದಂಬರಿ ಮಾಲೆಯಲ್ಲಿ ಚಿತ್ರಿಸಿದ್ದಾರೆ ಬಿ. ಪುಟ್ಟಸ್ವಾಮಯ್ಯನವರು. ಶರಣಯುಗ ಸಂಕೀರ್ಣಯುಗವೂ ಹೌದು. ಧರ್ಮ ಸಂಸ್ಕೃತಿ, ಸಾಹಿತ್ಯ, ರಾಜಕಾರಣ ಮುಂತಾಗಿ ಹಲವು ರೂಪದಲ್ಲಿ ನಡೆದ ಆ ಮಹಾಕ್ರಾಂತಿಯನ್ನು ಕಾದಂಬರಿಯ ಮೂಲಕ ಪುನಃ ಸೃಷ್ಟಿಸುವಲ್ಲಿ ಐತಿಹಾಸಿಕ ಸತ್ಯಕ್ಕೆ ಸಂಪೂರ್ಣನಿಷ್ಠರಾಗಿ ನಡೆಯದಿದ್ದರೂ, ನಿರೂಪಣೆ ಹಲವು ವೇಳೆ ನೀರಸವಾಗಿದ್ದರೂ, ಪಾತ್ರ ಕಲ್ಪನೆಯಲ್ಲಿ ವಿಸಂಗತಿ ತಲೆದೋರಿದ್ದರೂ, ಅವರು ಮಾಡಿರುವ ಅಭ್ಯಾಸ ಪೂರ್ಣವಾದ ಪ್ರಯತ್ನ ನಿಜಕ್ಕೂ ಅಭಿನಂದನೀಯ. ಅಲ್ಲಮಪ್ರಭುವನ್ನು ಕುರಿತು, ವಿಜಯನಗರ ಇತಿಹಾಸವನ್ನು ಕುರಿತು ಅವರು ಕಾದಂಬರಿ ಗಳನ್ನು ರಚಿಸಿದ್ದಾರೆ. “ಚಹ ಕಟ್ಟಿದ ಸಾಮ್ರಾಜ್ಯ” ಕುತೂಹಲ ಕೆರಳಿಸುತ್ತದೆ. “ಮಲ್ಮಮ್ಮನ ಪವಾಡ” ಮುಗ್ಧವಾದ ಗಂಡನನ್ನು ಬುದ್ದಿವಂತನನ್ನಾಗಿ ಮಾಡಿದ ಹೆಣ್ಣೊಬ್ಬಳ ಪ್ರದ್ಧಾಪೂರ್ವಕ ಸಾಹಸ ನಿಷ್ಠೆಗಳನ್ನು ಚಿತ್ರಿಸುತ್ತದೆ. ಇದರ ಮತ್ತೊಂದು ರೂಪ “ಅರ್ಧಾಂಗಿ”.

ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲೊಂದು “ರಾವ್‌ಬಹದ್ದೂರ್” ಅವರ “ಗ್ರಾಮಾ ಯಣ”. ಶಾಂತಿ, ಸಂತೃಪ್ತಿ ಶ್ರದ್ಧೆಗಳ ಬೀಡಾಗಿ ಬಾಳುತ್ತಿದ್ದ ಹಳ್ಳಿಯೊಂದು ಸ್ವಾರ್ಥ ವಿಶಾಚಿಗಳ ಕುಟಿಲ ಕಾರಸ್ಥಾನದಿಂದ ನರಕ ಸದೃಶವಾದ ದುರಂತ ಗಂಭೀರ ಕೃತಿಯಿದು. ಜೀವದುಂಬಿ ಕಳಕಳಿಸುವ ಪ್ರಾದೇಶಿಕತೆ ಬಹುಸಂಖ್ಯೆಯ ಪಾತ್ರಗಳಿಂದ ತುಂಬಿದ್ದರೂ, ಅವುಗಳಲ್ಲಿರುವ ಅನನ್ಯ ವಿಶಿಷ್ಟತೆ, ಸಂಕೀರ್ಣವೂ ಸಮೃದ್ಧವೂ, ಸಮರ್ಥವೂ ಆದ ಕಥಾಸಂವಿಧಾನ, ವಿಶಿಷ್ಟವಾದ ಆಡುನುಡಿಗಳಿಂದ ತುಂಬಿದ ಧ್ವನಿಪೂರ್ಣ ಸಂಭಾಷಣೆ, ಅನುಭವ ಶ್ರೀಮಂತಿಕೆ, ಬೌದ್ದಿಕತೆಯ ಹೊಳಪು ಮತ್ತು ಅನಿವಾರ್ಯವಾದ ಸಹಜ ದುರಂತ- ಇವು ಈ ಕಾದಂಬರಿಯ ಮಹತ್ವಕ್ಕೆ, ಮೂಲಕಾರಣಗಳಾಗಿವೆ.

ಇದೇ ಜತಿಗೆ ಸೇರಿದ ಮತ್ತೊಂದು ಕೃತಿ ಚದುರಂಗರ “ಸರ್ವಮಂಗಳಾ”. ಹುಣಸೂರು ತಾಲ್ಲೂಕಿನ ಹಳ್ಳಿಯೊಂದರ, ಕೌಟುಂಬಿಕ ಕತೆ ಇದಾದರೂ ಆ ಪರಿಧಿಯನ್ನು ಮೀರಿ ಕತೆ ವಿಜೃಂಭಿಸುತ್ತದೆ. ಆ ಹಳ್ಳಿಯ ಜನರ ನಂಬಿಕೆ, ಸಂಸ್ಕಾರ, ಸಂಸ್ಕೃತಿ, ಜೀವನ ವಿಧಾನ, ಪ್ರೀತಿ, ಪ್ರೇಮ, ಸರಳತೆಗಳು ಮಣ್ಣಿನ ವಾಸನೆಯೊಡನೆ ಸಶಕ್ತವಾಗಿ ಮೂಡಿಬಂದಿದೆ. ಪರಿಸರವೂ ಅಷ್ಟೇ ಮಧುರ ಸುಂದರವಾಗಿದೆ. ಕಾದಂಬರಿಯ ಕೊನೆ ಕೊನೆಗೆ ರಾಜಕೀಯದ ಗಾಳಿಯೂ ಬೀಸುತ್ತದೆ. ಇಲ್ಲಿನ ಪಾತ್ರಗಳಂತೂ ನಮ್ಮ ಮನೆಯಲ್ಲಿ ಸುತ್ತಮುತ್ತ ಸುಳಿದಾಡುವ ವ್ಯಕ್ತಿಗಳಷ್ಟು ಸತ್ಯವಾಗಿ ಜೀವಂತವಾಗಿ ಕಂಗೊಳಿಸುತ್ತವೆ. ಬಳಸಿರುವ ಭಾಷೆ ಕೃತಿಯ ಸಹಜತೆಗೆ ಮತ್ತಷ್ಟು ಮೆರಗು ನೀಡುತ್ತದೆ. ಕಾದಂಬರಿಯ ದುರಂತ ಕರುಳನ್ನು ಹಿಂಡುತ್ತದೆ. ಅವರದೇ ಆದ “ಉಯ್ಯಾಲೆ” ಆಧುನಿಕ ನಾಗರಿಕ ಗಂಡು-ಹೆಣ್ಣುಗಳ ಮನೋಘರ್ಷಣೆಯನ್ನು ವಿಶ್ಲೇಷಿಸುವ ಒಂದು ಗಮನಾರ್ಹ ಪ್ರಯತ್ನ.

ಆನಂದಕಂದರು “ಮಲ್ಲಿಕಾರ್ಜುನ” ಮತ್ತು “ಮಗಳ ಮದುವೆ” ಎಂಬೆರಡು ಕಾದಂಬರಿಗಳನ್ನು ಈ ಅವಧಿಯಲ್ಲಿ ಬರೆದಿದ್ದಾರೆ. ಮೊದಲನೆಯದು ವಿಜಯನಗರದ ಪ್ರೌಢದೇವರಾಯನ ಕಾಲದ ಇತಿಹಾಸವನ್ನು ಕುರಿತ ಮನೋಜ್ಞ ಕಾದಂಬರಿ; ಎರಡನೆಯದು ಭಾರತದ ಸ್ವಾತಂತ್ರ್ಯ ಸಮರದ ಹಿನ್ನೆಲೆಯನ್ನುಳ್ಳ ವಾಸ್ತವರಮ್ಯವಾದ ಕೌಟುಂಬಿಕ ಕೃತಿ. ಶಾಂತಲಾದೇವಿಯನ್ನು ಕುರಿತ ಸಮೇತನಹಳ್ಳಿ ರಾಮರಾಯರ “ಸವತಿಗಂಧವಾರಣೆ” ಈಚೆಗೆ ಬಂದ ಒಂದು ಉತ್ತಮ ಐತಿಹಾಸಿಕ ಕೃತಿ. ಸಂವಾದಗಳು ಮತ್ತು ಸನ್ನಿವೇಶಗಳು ಸಚಿತ್ರವೂ ಶಕ್ತಿಪೂರ್ಣವೂ ಆಗಿವೆ. ಶಿವಾಜಿಯ ಆಶ್ರಿತನಾದ ಸಾಹಸಿಯೊಬ್ಬನನ್ನು ಕುರಿತ ಕೃತಿ ಸಿ.ಕೆ. ವೆಂಕಟರಾಮಯ್ಯನವರ “ರಘುನಾಥನ ಸಾಹಸ”.

ಎಂ.ಆರ್.ಶ್ರೀ. ಅವರೂ “ಸಾವಿತ್ರಿ” ಹಾಗೂ “ಮಹಾತ್ಯಾಗ” ಕಾದಂಬರಿಗಳನ್ನು ಬರೆದಿದ್ದಾರೆ. ಹಲವು ದೋಷಗಳಿದ್ದರೂ, “ಮಹಾತ್ಯಾಗ” ಮನರಂಜಿಸುತ್ತದೆ.