ನ.ಕೃ. ಅವರ ಗರಡಿಯಲ್ಲೇ ಸಾಮು ಮಾಡಿ ಅಧಿಕ ಜನಪ್ರಿಯತೆಯನ್ನು ಗಳಿಸಿದ ಮತ್ತೊಬ್ಬ ಪ್ರಸಿದ್ಧ ಕಾದಂಬರಿಕಾರರೆಂದರೆ ತ.ರಾ.ಸು. ಅವರು. ಆದರೆ ಅವರು ಬಹುಬೇಗ ಗುರುವನ್ನು ಹಿಂದೆ ಹಾಕಿ ಮಿಂಚಿನಂತೆ ಮುನ್ನಡೆದರು. ಮೊದ ಮೊದಲಿನ ಕಾದಂಬರಿಗಳಲ್ಲಿ ಅಸಹಜ ಆದರ್ಶವಾದ, ಸತ್ವರಹಿತ ಸುಧಾರಣೋತ್ಸಾಹ, ಅತಿಯಾದ ಭಾವನಾವಶತೆಗಳ ಅ.ನ.ಕೃ. ಅಚ್ಚು ಕಣ್ಣಿಗೆ ಬಡಿಯುವಂತೆ ಕಾಣಿಸಿಕೊಳ್ಳುತ್ತದೆಯಾದರೂ, ಕಾಲ ಸರಿದಂತೆ ತಮ್ಮದೇ ಆದ ವ್ಯಕ್ತಿತ್ವವನ್ನೂ, ಶೈಲಿಯನ್ನೂ ನಿರೂಪಣಾನಾವೀನ್ಯತೆಯನ್ನೂ ಅವರು ರೂಪಿಸಿಕೊಂಡು ಕಾದಂಬರಿ ಪ್ರಪಂಚದ ನವದಿಗಂತಗಳ ಅನ್ವೇಷಣೆ ಮಾಡಿದರು; ಸಮಕಾಲೀನ ಸಮಾಜದ ವಿವಿಧ ಮುಖಗಳ ಅನಾವರಣ ಮಾಡಿದ್ದಲ್ಲದೆ ಪುರಾಣ ಇತಿಹಾಸಗಳ ಆಳಕ್ಕೂ ಇಳಿದು ಶ್ರದ್ಧೆಯಿಂದ ಅಭ್ಯಸಿಸಿ ಅವುಗಳನ್ನು ತಮ್ಮ ಲೇಖನಿಯಿಂದ ಪುನಃ ಸೃಷ್ಟಿಸಿದರು. ಪ್ರಯೋಗಪ್ರಿಯತೆ ತ.ರಾ.ಸು. ಅವರ ರಕ್ತಗುಣ. ಅವರ ಕೃತಿಗಳಲ್ಲಿ ವಿಪುಲವಾದ ವಸ್ತು ವೈವಿಧ್ಯವಿರುವಂತೆಯೇ ತಂತ್ರ ವೈವಿಧ್ಯವೂ ಇದೆ. ಓದುಗರನ್ನು ಉಸಿರುಗಟ್ಟಿಸುವಂಥ ಓಟದಲ್ಲಿ ಕಥೆ ಹೇಳುವ ಕಲೆ ಅವರಿಗೆ ಸಿದ್ದಿಸಿದೆ; “ಹೊಸಗನ್ನಡದ ಗದ್ಯಶಿಲ್ಪಿಗಳಲ್ಲಿ ತ.ರಾ.ಸು. ಒಬ್ಬರು. ಇದು ತ.ರಾ.ಸು. ಅವರದೇ ಬರವಣಿಗೆ ಎಂದು ಖಚಿತವಾಗಿ ಗುರುತಿಸಲು ಸಾಧ್ಯವಾಗುವಷ್ಟು ಮಟ್ಟಿಗೆ ಅವರ ವಿಶಿಷ್ಟತೆಯಿದೆ. ಅವರ ಲೇಖನಿ ಹೆಚ್ಚು ಪ್ರಖರ. ಕುಂಚದ ಬಣ್ಣದ ಹೆಚ್ಚಳ. ನಿರೂಪಣೆ ಹೆಚ್ಚು ದಾರುಣ. ಹೇಳಬೇಕಾದುದನ್ನು ಎಷ್ಟು ಬಗೆಯಲ್ಲಿ ಒತ್ತಿ ಹೇಳಿದರೂ ಅವರಿಗೆ ತೃಪ್ತಿಯಿಲ್ಲ. ರಸಾತಳಕ್ಕೆ ಚಿಮ್ಮುವ ಸೀಸದ ಗುಂಡಿನಂತೆ ಮುಂದೆ ಸಾಗಿದಂತೆಲ್ಲಾ ಅವರ ಲೇಖನಿಗೆ ಹೆಚ್ಚಿನ ವೇಗಪ್ರಾಪ್ತವಾಗಿ ಕಣ್ಣಿಗೆ ಕಟ್ಟುವಂತೆ ವರ್ಣಿಸಬಲ್ಲ ಶಕ್ತಿ ಅವರಿಗಿದೆ; ಅಂತೆಯೇ ಪಾತ್ರಾಂತರಂಗವನ್ನು ಪ್ರವೇಶಿ ಅಲ್ಲಿನ ಸೂಕ್ಷ್ಮತಮ ಸಂವೇದನೆಗಳನ್ನು ಅರಿತು ಅರಗಿಸಿ ಕೊಂಡು ಅವುಗಳನ್ನು ಮರಳಿ ವಿವರ ವಿವರವಾಗಿ ಚಿತ್ರಿಸಬಲ್ಲ ಅಭಿವ್ಯಕ್ತಿ ಕೌಶಲವೂ ಇದೆ”. ಬಿರುಗಾಳಿಯ ವೇಗದಲ್ಲಿ ಓಡುವ ಓಜಸ್ವೀ ಶೈಲಿ, ಹರಿತವಾದ ಮೊನೆಯಾದ ಸಂಭಾಷಣೆ, ಸಹಜ ಸಜೀವ ಪರಿಸರ ಸೃಷ್ಟಿ, ಸದೃಢ ಪಾತ್ರಕಲ್ಪನೆ ಮತ್ತು ಅಭ್ಯೂಸಪೂರ್ಣ ವಾದ ವೈಚಾರಿಕತೆ – ಇವು ತ.ರಾ.ಸು. ಕಾದಂಬರಿಗಳ ಪ್ರಧಾನ ಲಕ್ಷಣಗಳಾಗಿವೆ.

ಸುಮಾರು ನಲವತ್ತಕ್ಕಿಂತ ಹೆಚ್ಚು ಕಾದಂಬರಿಗಳನ್ನು ತ.ರಾ.ಸು. ಬರೆದಿದ್ದಾರೆ. ಅವುಗಳಲ್ಲಿ ಕೆಲವಾದರೂ ಒಂದಲ್ಲ ಒಂದು ರೀತಿಯಿಂದ ಗಮನ ಸೆಳೆಯುವ ಕೃತಿಗಳಾಗಿವೆ.

ಹೆಣ್ಣಿನ ಸ್ವಾತಂತ್ರ್ಯದ ಬಯಕೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ “ಬಿಡುಗಡೆಯ ಬೇಡಿ” ಒಂದು ಉತ್ತಮ ಕೃತಿ. ಅದರ ತಂತ್ರ ಮೆಚ್ಚುವಂಥದು. “ಮಸಣದ ಹೂವು” ವೇಶ್ಯಾ ಸಮಸ್ಯೆಯ ಬಹುಮುಖತೆಯನ್ನು ತುಂಬ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಅ.ನ.ಕೃ. ಅವರು ಹತ್ತು ಕಾದಂಬರಿಗಳಲ್ಲಿ ಹೇಳಿದ್ದನ್ನು ತ.ರಾ.ಸು. ಒಂದು ಕೃತಿಯಲ್ಲಿ ಹೇಳಿದ್ದಾರೆ. ಅಲ್ಲಿಗಿಂತ ಆಳವೂ ದಾರುಣವೂ ಸೂಕ್ಷ್ಮವೂ ತೀಕ್ಷ್ಣವೂ ಆದ ಹೃದಯವಂತ ಚಿತ್ರಣವಿಲ್ಲಿದೆ. ಅನಾಥ ಬಾಲಕನೊಬ್ಬನ ಕರುಣಾನಜನಕ ಕಥೆ “ಪುರುಷಾವತಾರ”. ನಮ್ಮ ಇಂದಿನ ರಾಜಕೀಯ ರಂಗದಲ್ಲಿ ತುಂಬಿರುವ ಪರಪೀಡಕ ಸ್ವಾರ್ಥಿ ಪುಢಾರಿಗಳ ಕಾರ್ಯರಂಗದ ವಿಷವರ್ತುಲವನ್ನು ಪರಿಚಯಿಸುವ ಶಕ್ತ ಕೃತಿ “ಕಾರ್ಕೋಟಕ”. ನಾಗರಿಕ ಸಮಾಜದಲ್ಲಿ ಭದ್ರವಾಗಿ ಬೇರೂರುತ್ತಿರುವ ಅತಿ ಸಂತಾನ ಸಮಸ್ಯೆ, ಪ್ರೇಮದ ಫಲವಾದ ಮಕ್ಕಳನ್ನು ಪಡೆಯದೆಯೇ ಲೈಂಗಿಕ ಭೋಗ ತೃಷೆಯನ್ನು ತಣಿಸಿಕೊಳ್ಳುವ ಆಧುನಿಕ ಮನೋವೃತ್ತಿ – ಇವುಗಳ ವಿವಿಧ ಮುಖ ಪರಿಣಾಮಗಳನ್ನು ತುಂಬ ಸಮರ್ಥವಾಗಿ ಕಲಾತ್ಮಕವಾಗಿ ವಿವೇಚಿಸುವ ಸಾರ್ಥಕ ಕೃತಿ “ಬೇಡದ ಮಗು”. “ಹಂಸಗೀತೆ” ಸಂಗೀತಗಾರನೊಬ್ಬನ ಬಾಳಿನ ಹಂದರದ ಮೇಲೆ ಹಿಂದಿನ ಮತ್ತು ಇಂದಿನ ಸಂಸ್ಕೃತಿಯನ್ನು ವಿಶಿಷ್ಟ ತಂತ್ರದಲ್ಲಿ ಕುಶಲವಾಗಿ ಮನೋಜ್ಞವಾಗಿ ಚಿತ್ರಿಸುತ್ತದೆ. ಕೃತಿಯಲ್ಲಿ ಬಂದಿರುವ ಚಿತ್ರದುರ್ಗದ ಪರಿಸರ ತುಂಬ ಸಹಜವಾಗಿದೆ, ಜೀವಂತವಾಗಿದೆ. ನೆಮ್ಮದಿಯ ನೆಲೆಯಾಗಿ ಭಕ್ತಿ ಗೌರವಗಳ ಬೀಡಾಗಿ ಅತಿಥಿಗಳ ಆಶ್ರಯವಾಗಿ ಇದ್ದ ಕುಟುಂಬವೊಂದು ಸ್ವಾರ್ಥಿಗಳೂ ವಿಘ್ನಸಂತೋಷಿ ಗಳೂ ಕಿಡಿಗೇಡಿಗಳೂ ಆದ ಅನ್ಯರ ಪ್ರವೇಶದಿಂದ ಅಂತಃಕಲಹದ ಅಗ್ನಿಕುಂಡವಾಗಿ ದಹಿಸಿಹೋದ ಕರುಳು ಹಿಂಡುವ ಪರಮ ದಾರುಣಚಿತ್ರ “ಚೆಂದವಳ್ಳಿಯ ತೋಟ”. ನೈಜವೂ ಸತ್ವಪೂರ್ಣವೂ ಆದ ಗ್ರಾಮಪರಿಸರ, ಹರಿತವೂ ಅರ್ಥಪೂರ್ಣವೂ ಭೂವಾಸನಾಯುಕ್ತವೂ ಆದ ಸಂಭಾಷಣೆ, ಪ್ರಮಾಣಬದ್ಧವಾಗಿ ಮೂಡಿನಿಂತಿರುವ ಪಾತ್ರಗಳು, ಸಂಯಮಪೂರ್ಣ ವಾದ ನಿರೂಪಣೆ – ಇವನ್ನೊಂದು ಉತ್ಕೃಷ್ಟ ಕಾದಂಬರಿಯನ್ನಾಗಿ ಮಾಡಿವೆ. ದೈವನಿಷ್ಠೆ, ವ್ಯಕ್ತಿನಿಷ್ಠೆ, ಸಮಾಜನಿಷ್ಠೆ ಎಂಬ ಮೂರು ಮುಖಗಳನ್ನು ಪ್ರತಿನಿಧಿಸುವ ಕಾದಂಬರಿಗಳು “ಮೊದಲ ನೋಟ”, “ಗೃಹಪ್ರವೇಶ ಮತ್ತು ರಾಜೇಶ್ವರಿ”. “ಕೇದಿಗೆ ಮನ” ಮತ್ತು “ಕಣ್ಣು ತೆರೆಯಿತು”, ವೈದ್ಯಕೀಯ ಜೀವನದ ಚೌಕಟ್ಟಿನಲ್ಲಿ ಪ್ರೇಮ-ಕಾಮ, ಸೇವೆ-ಸ್ವಾರ್ಥ, ರಾಜಕೀಯಗಳ ಸಂಘರ್ಷಣೆಯನ್ನು ಕುರಿತ ಆಕರ್ಷಕ ಕೃತಿಗಳು. “ನಾಗರ ಹಾವು”, “ಎರಡು ಹೆಣ್ಣು ಒಂದು ಗಂಡು” ಮತ್ತು “ಸರ್ಪ ಮತ್ಸರ” ತಮ್ಮ ಭಾವೋತ್ಕಟತೆಯಿಂದ ರೋಚಕ ಶೈಲಿಯಿಂದ ರಮ್ಯವಾಗಿವೆ. ಆದರೆ ಸಂಯಮ ಮತ್ತು ವೈಚಾರಿಕತೆಗಳು ಜೊತೆಗೂಡಿದ್ದಲ್ಲಿ ಇವು ಉತ್ತಮ ಮನೋವಿಶ್ಲೇಷಣಾತ್ಮಕ ಕಾದಂಬರಿಗಳಾಗುವ ಸಾಧ್ಯತೆಯಿತ್ತು. ಧರ್ಮ ನಮಗೆ ಅಪದ್ಧರ್ಮವಾಗಿ ಸ್ವಾರ್ಥ ಸಾಧನವಾಗಿದ್ದು ಅದರ ಪರಿಣಾಮ ಹೇಗೆ ಮನುಷ್ಯನನ್ನು ದುರ್ಬಲಗೊಳಿಸುತ್ತದೆ ಎಂಬುದನ್ನು ಕುರಿತ ಕೃತಿ, “ಮರಳು ಸೇತುವೆ”. ಸಹಜತೆ ಮತ್ತು ಸರಸತೆ ಇದರ ಜೀವಾಳ. ಮಧ್ಯಮವರ್ಗದ ಸಮಾಜದ ಹೆಣ್ಣೊಬ್ಬಳ ಸುಪ್ತ ಆಸೆ ಅಭೀಪ್ಸೆಗಳ ಸುತ್ತ ಹೆಣೆಯಲಾದ ಪರಿಣಾಮಕಾರೀ ಕೃತಿ “ಪಂಜರದ ಪಕ್ಷಿ”. ಪ್ರಜ್ಞಾ ಪ್ರವಾಹದ ನೂತನ ತಂತ್ರವನ್ನು ತುಂಬ ಸಮರ್ಥವಾಗಿ ಬಳಸಿಕೊಂಡು ವೈಚಾರಿಕ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಪದರ ಪದರವಾಗಿ ಬಿಡಿಸಿ ನೋಡುವ ಈ ಪ್ರಯತ್ನ ನಿಜಕ್ಕೂ ಅಭಿನಂದನೀಯ. “ಶಿಶುದೈತ್ಯ” ಒಂದು ಉತ್ತಮ ಪ್ರಯತ್ನ. ಮೆಚ್ಚಿ ಬಂದ ಹೆಣ್ಣು ಮನೆಗೆ ಮಂಗಳ ಲಕ್ಷ್ಮಿಯಾಗುವ ಬದಲು ಮಹಾಮಾರಿಯಾಗಿ ಕುಟುಂಬದ ವಿನಾಶಕ್ಕೆ ಕಾರಣವಾದ ದುರಂತ ಸಾಂಸಾರಿಕ ಕೃತಿ “ಶುಕ್ರವಾರದ ಲಕ್ಷ್ಮಿ”. ಸಹಜವಾಗಿಯೇ ಬಡತನದ ರಾಕ್ಷಸ ದವಡೆಗೆ ಸಿಕ್ಕಿ ಜೀವನವಿಡೀ ದುಃಖ-ಸಂಕಷ್ಟಗಳ ಕೆಂಡದುಂಡೆಗಳನ್ನೇ ನುಂಗಿದ ಪ್ರಾಥಮಿಕ ಶಾಲಾ ಉಪಾಧ್ಯಾಯನೊಬ್ಬನ ಕುಟುಂಬದ ಹೃದಯ ವಿದ್ರಾವಕ ಚಿತ್ರಣ “ಬೆಂಕಿಯ ಬಲೆ. ಭಾವೋದ್ದೇಗಕ್ಕೆ, ಉಪನ್ಯಾಸಕ್ಕೆ ಸುಲಭವಾಗಿ ಎಡೆಗೊಡಬಹುದಾದ ವಸ್ತುವಾದರೂ ತುಂಬು ಸಹಜತೆಯಿಂದ ಸಮರ್ಥ ನಿರೂಪಣೆಯಿಂದ ಮನಸೆಳೆಯುತ್ತದೆ. ಪ್ರಕೃತಿ ಸಹಜವಾದ ಅದಮ್ಯ ಬಯಕೆ ಮತ್ತು ಪರಿಣಾಮ ಭೀತಿ – ಇವುಗಳ ನಡುವೆ ಸಿಕ್ಕಿದ ಆಧುನಿಕ ನಾಗರಿಕ ಯುವಕನೊಬ್ಬನ ಸಮಸ್ಯಾಗ್ರಸ್ತ ಬಾಳಿನ ಸುತ್ತ ನಿರ್ಮಿಸಲಾದ ಕೃತಿಗಳು “ಆಕಸ್ಮಿಕ” ಮತ್ತು “ಅಪರಾಧಿ”. ಮಹಾಭಾರತದ ಘಟನೆಯೊಂದನ್ನು ಸಾಂಕೇತಿಕವಾಗಿಟ್ಟುಕೊಂಡು ಮನುಷ್ಯನ ಬಾಳಿನ ಬಹು ಬ್ರಬಲ ಪ್ರವೃತ್ತಿಯಾದ ಲೈಂಗಿಕತೆಯನ್ನು ಕುರಿತು ವಿಶ್ಲೇಷಣಾತ್ಮಕವಾಗಿ ಬರೆದ ಕೃತಿ “ಯಕ್ಷ ಪ್ರಶ್ನೆ”. ಕೃತಿಯ ಸೂಚ್ಯವೂ ಹರಿತವೂ ಧ್ವನಿಪೂರ್ಣವೂ ಆದ ಶೈಲಿ ತುಂಬ ಮೆಚ್ಚುವಂಥದು. ಮತೋದ್ಧಾರದ ಹೆಸರಿನಲ್ಲಿ ಸ್ವಾರ್ಥದ ಡೊಳ್ಳು ಬೆಳೆಸುವ ಜನರ ಆಚಾರ ವಿಚಾರಗಳಿಗಿರುವ ವಿಷಮದ್ದಂದ್ವವನ್ನು ಬಣ್ಣಿಸುತ್ತದೆ, “ಎಲ್ಲ ಅವನ ಹೆಸರಿನಲ್ಲೇ”. ಗ್ರಾಮೋದ್ಧಾರದ ಆದರ್ಶವನ್ನು ತಲೆಯಲ್ಲಿ ಹೊತ್ತ ಯುವಕ ಎದುರಾದ ಎಡರು ತೊಡರುಗಳನ್ನು ನಿಷ್ಠೆಯಿಂದ ಗೆದ್ದು ತನ್ನ ಉದ್ದೇಶದಲ್ಲಿ ಸಫಲನಾದ ಸ್ವಾರಸ್ಯಕಾರೀ ಚಿತ್ರಣ “ಮಾರ್ಗದರ್ಶಿ”, “ಭಾಗ್ಯಶಿಲ್ಪಿ” ಮತ್ತು “ಬೆಳಕಿನ ಬೀದಿ”ಗಳಲ್ಲಿದೆ. ಗ್ರಾಮ ಜೀವನದ ಬಹುಮುಖಗಳನ್ನು ತುಂಬ ಸಹಜವಾಗಿ ರಸವತ್ತಾಗಿ ಶಕ್ತಿವತ್ತಾಗಿ ಈ ಕಾದಂಬರಿ ಮಾಲೆ ಬಣ್ಣಿಸುತ್ತದೆ. ಆದರೆ ತ.ರಾ.ಸು. ಕುತೂಹಲ ಕೆರಳುವ ಮನಂಬುಗುವ ಭಾವೋತ್ಕಟತೆಯಿಂದ ಹೇಳುತ್ತಿದ್ದರೂ ಅದನ್ನೂ ತುಂಡರಿಸಿ ಬೇರೆ ಬೇರೆ ಭಾಗವಾಗಿ ಮಾಡಿ ಹೇಳುವ ಅಪಾಯಕಾರೀ ಚಟವನ್ನೇ ಬೆಳೆಸಿಕೊಂಡಿರುವುದು ರಸಭಂಗಕ್ಕೆ ಒಟ್ಟಂದದ ಪರಿಣಾಮರಾಹಿತ್ಯಕ್ಕೆ ಕಾರಣವಾಗುತ್ತದೆ. “ಚಕ್ರತೀರ್ಥ”, “ಮುಂಜವಿನಿಂದ ಮುಂಜವು” ಮತ್ತು “ಚಂದನದಗೊಂಬೆ” ಸ್ಮರಣೀಯ ಕೃತಿಗಳು. “ಚಂದನದ ಗೊಂಬೆ” ಸಹಜತಂತ್ರದ ಸೊಗಸಿನಿಂದ ಸಂಕೀರ್ಣತೆಯ ಸತ್ವದಿಂದ ಸಂವಿಧಾನದ ಅರ್ಥವಂತಿಕೆಯಿಂದ ಸಂಯಮ ಪೂರ್ಣವೂ ಗಂಭೀರವೂ ಆದ ನಿರೂಪಣೆಯಿಂದ ಮಹತ್ವದ್ದಾಗಿದೆ.

ಕನ್ನಡದ ಹೆಮ್ಮೆಯ ದೊರೆ ನೃಪತುಂಗನನ್ನು ಮತ್ತು ಬೆಳ್ಗೊಳಗದ ಜಗದ್ಭವ್ಯ ಗೊಮ್ಮಟನನ್ನು ನಿರ್ಮಾಣ ಮಾಡಿಸಿದ ಚಾವುಂಡರಾಯನನ್ನು ಕುರಿತ ಕಾದಂಬರಿಗಳು ತ.ರಾ.ಸು. ಅವರ ಮಲಿಕ ಐತಿಹಾಸಿಕ ಕಾದಂಬರಿಗಳು. ಐತಿಹಾಸಿಕ ಕಾದಂಬರಿಗೇ ಹೇಳಿ ಮಾಡಿಸಿದಂತಿರುವ ಓಜೋಪೂರ್ಣವೂ ಅದ್ಭುತ ಶಕ್ತಿಸಂಪನ್ನವೂ, ಅತಿಶಯೋಕ್ತಿ ಸಮನ್ವಿತವೂ ನಾಟಕೀಯವೂ ಮೊನಚೂ ಆದ ಅವರ ಶೈಲಿಯಿಂದ ಮೂಡಿಬಂದಿರುವ ಚಿತ್ರದುರ್ಗ ಮತ್ತು ಹೊಯ್ಸಳ ರಾಜ್ಯಗಳ ಇತಿಹಾಸವನ್ನು ಕುರಿತ ಕಾದಂಬರಿಗಳು ತುಂಬ ಜನಪ್ರಿಯತೆಯನ್ನು ಪಡೆದಿವೆ. “ಬೆಳಕು ತಂದ ಬಾಲಕ” ನಚಿಕೇತನನ್ನು ಕುರಿತ ಒಂದು ಕಲಾತ್ಮಕ ಪೌರಾಣಿಕ ಕಾದಂಬರಿ. ನಚಿಕೇತನ ಜ್ಞಾನದಾಹದ ತೀವ್ರತೆ, ಯಮನ ಕಠಿಣ ಪರೀಕ್ಷೆ, ಪೌರಾಣಿಕ ವಾತಾವರಣ ತುಂಬ ಜೀವಂತಾಭಿವ್ಯಕ್ತಿಯನ್ನು ಪಡೆದಿವೆ. ಪ್ರಭು ದೇವರನ್ನು ಕುರಿತ “ಅಗ್ನಿರಥ-ಮುಕ್ತಿಪಥ” ಪವಾಡಗಳ ಕಣ್ಣಿನಿಂದ ಕಂಡ, ಐತಿಹಾಸಿಕ ದೃಷ್ಟಿಯಿಲ್ಲದ ನಿಷ್ಪರಿಣಾಮಕಾರಿಯಾದ ಕೃತಿ. ಅತಿಶಯೋಕ್ತಿಯ ದೌರ್ಬಲ್ಯ, ಅತ್ಯುತ್ಕಟತೆ, ಅವಸರದ ಮುಕ್ತಾಯಗಳಿಂದ ತ.ರಾ.ಸು. ಅವರ ಬಹುಕೃತಿಗಳು ನರಳಿದರೂ, ನಮ್ಮ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಕೆಲವಾದರೂ ಉತ್ತಮ ಕಾದಂಬರಿಗಳು ಅವರಿಂದ ನಿರ್ಮಿತವಾಗಿವೆ ಎಂಬುದು ಸಂತಸದ ಸಂಗತಿ.

“ಮುಗಿಲು ಮಲ್ಲಿಗೆ”ಯನ್ನು  ಅರಳಿಸುತ್ತಾ ೧೯೪೮ರಲ್ಲಿ ಕನ್ನಡ ಕಾದಂಬರಿ ಲೋಕಕ್ಕೆ ಕಾಲಿಟ್ಟ ಕೃಷ್ಣಮೂರ್ತಿ ಪುರಾಣಿಕರು ಈ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಅರುವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಹೆಣೆದಿದ್ದಾರೆ. ಬಹುಮಟ್ಟಿಗೆ ಮಧ್ಯಮವರ್ಗದ ಕುಟುಂಬ ಜೀವನದ ಸುತ್ತ ಇವರ ಬರವಣಿಗೆಯ ಗಾಣ ಸುತ್ತುತ್ತದೆ. “ಅತ್ತೆ-ಸೊಸೆಯ ಪ್ರಶ್ನೆ, ಅಣ್ಣ-ತಮ್ಮಂದಿರ ಪ್ರಶ್ನೆ, ಅತ್ತಿಗೆ-ಮೈದುನರ ಪ್ರಶ್ನೆ, ಮಾವ-ಅಳಿಯ, ಅಕ್ಕ-ತಂಗಿ, ಈ ಮನೆತನದ ಸಂಬಂಧಗಳು ಎಷ್ಟೋ ಅಷ್ಟು ಸಮಸ್ಯೆಗಳು ಅಂತಲೇ ಹೇಳಬೇಕು. ಹೀಗೆ ನಾನು ನನ್ನ ಸುತ್ತಲಿನ ಸಾಂಸಾರಿಕ ಚಿತ್ರಗಳನ್ನೆ ನನ್ನ ಕಾದಂಬರಿ ಸೃಷ್ಟಿಗೆ ಮೂಲ ದ್ರವ್ಯವಾಗಿ ಆಯ್ದುಕೊಂಡೆ” ಎಂದು ಅವರು ಹೇಳುತ್ತಾರೆ. ಮೆದುಳಿಗೆ ಸ್ವಲ್ಪವೂ ಶ್ರಮನೀಡದೆ ಅವರು ಬಹು ಸುಲಭವಾಗಿ ಸರಾಗವಾಗಿ ಕಥೆ ಹೇಳಿಕೊಂಡು ಹೋಗುತ್ತಾರೆ. ಅಜ್ಜಿಯ ಕತೆಗಳಂತೆ ಅವು ಮನೋರಂಜಕವಾಗಿಯೂ ಇವೆ. ಆದುದರಿಂದ ಬುದ್ದಿ ಬಲಿಯದ ಸಾಮಾನ್ಯವಾಚಕ ವರ್ಗಕ್ಕೆ ಅವು ಅಚ್ಚುಮೆಚ್ಚು. ಸಮಸ್ಯೆಗಳನ್ನೆತ್ತಿಕೊಂಡರೂ ಅವಕ್ಕೆ ಬಲು ಸರಳ ಪರಿಹಾರ ಅವರ ಬತ್ತಳಿಕೆಯಲ್ಲಿದೆ. “ಜೀವನದ ಸವಿ ಕಹಿಗಳು ದೇವದೇವನ ಕೊಡುಗೆಯಾಗಿರುತ್ತದೆ” ಎಂಬ ಮನೋಧರ್ಮದಿಂದ ಹೊರಟ ಲೇಖಕರಿಂದ ನಾವು ವೈಚಾರಿಕತೆಯನ್ನು ಸಂಕೀರ್ಣತೆಯನ್ನು ನಿರೀಕ್ಷಿಸುವುದಂತೂ ಸಾಧ್ಯವಿಲ್ಲದ ಮಾತು. ಕೃತಕ ಸನ್ನಿವೇಶಗಳು, ಅಪಕ್ವ ವಿಚಾರ, ಅತಿ ತೆಳುವಾದ ಅನುಭವ, ನಿರ್ಜೀವ ಸಂಭಾಷಣೆ, ಅಪ್ರಬುದ್ಧ ಪಾತ್ರ ಕಲ್ಪನೆ, ಅತಿಯಾದ ಆದರ್ಶ – ಇವು ಅವರ ಕಾದಂಬರಿಗಳಲ್ಲಿ ಅಸಂಬದ್ಧವಾಗಿ ತುಂಬಿ ಕೊಂಡಿವೆ. “ಮಡಿವಂತಿಕೆಯ ಮನೋಭಾವ ಅವರ ಕಾದಂಬರಿಗಳಲ್ಲಿ ಪ್ರಭೂತವಾಗಿ ಪ್ರತಿಬಿಂಬಿತವಾಗಿದೆ” ಈ ಕಾರಣಗಳಿಂದಾಗಿ ಅವು ಆಕಾಶ ಪುರಾಣಗಳಾಗುತ್ತವೆಯೇ ಹೊರತು ನೆಲದಲ್ಲಿ ಬೇರುಬಿಟ್ಟ ಜೀವನದ ಪ್ರಾಮಾಣಿಕ ಪೃಥಕ್ಕರಣೆಯಾಗುವುದಿಲ್ಲ. ವಿಶಿಷ್ಟ ಶೈಲಿಯೂ ಅವರಿಗೆ ಸಿದ್ದಿಸಿಲ್ಲ. ಅವರ “ಭಾಷೆ ಸವೆದ ನಾಣ್ಯದಂತೆ ತನ್ನ ಪೇಟೆಯ ಬೆಲೆ ಯನ್ನು ಕೂಡ ಕಳೆದುಕೊಂಡುಬಿಟ್ಟಿದೆ”.

ರಾಷ್ಟ್ರೋನ್ನತಿಯ ಜೀವನಾಡಿಗಳಾದ ವಿದ್ಯಾರ್ಥಿಗಳ ಅಂತರಂಗ ಸಂಸ್ಕರಣ ಕಾರ್ಯದಲ್ಲಿ ಶಿಕ್ಷಕರ ಮತ್ತು ಪೋಷಕರ ಹೊಣೆಗಾರಿಯೇನೆಂಬುದನ್ನು ಕುರಿತದ್ದು “ರಂಗರೋಹಿಣಿ”. ಮಾನವ ಜೀವಿತದಲ್ಲಿನ ದೈವೀ ಕೈವಾಡವನ್ನು, ಅದನ್ನು ಸಹಿಸಬೇಕಾದ ಬಗೆಯನ್ನು ನಿರೂಪಿ ಸುವ ಕೃತಿ “ಮದುವೆಯ ಹಾಡು”. ಚಿತ್ರ ಕಲಾವಿದನೊಬ್ಬನ ಬಾಳನ್ನು ತುಂಬ ಸಿನಿಮೀಯ ರೀತಿಯಲ್ಲಿ ಹೇಳುತ್ತದೆ. “ಕೊನ್ನಾರ ಕಿಂಕಿಣಿ”. “ಮಂಜುಳಾ” ಧ್ಯೇಯನಾಧನೆಗೆ ಹೋರಾಟ ಅನಿವಾರ್ಯವೆಂಬುದನ್ನು ಚಿತ್ರಿಸುತ್ತದೆ. ಒಂದಾದ ಮೇಲೊಂದರಂತೆ ತನ್ನ ಮದುವೆಗೆ ಬಂದ ಅಡ್ಡಿಗಳಿಂದಾಗಿ ಮನೋವಿಭ್ರಮಕ್ಕೊಳಗಾದ ಹೆಣ್ಣು ತರುಣ ಡಾಕ್ಟರರ ಸಹಚರ್ಯ ದಿಂದಾಗಿ ಆರೋಗ್ಯ ಮನಸ್ಕಳಾಗಿ ಅವರನ್ನೇ ಕೈ ಹಿಡಿದಿದ್ದು “ಮಂಗಲಾಕ್ಷತೆ”ಯ ವಸ್ತು. ಸುಂದರ ಮನೋವಿಶ್ಲೇಷಣಾತ್ಮಕ ಸತ್ವಶಾಲೀ ಕೃತಿಯಾಗಬಹುದಾಗಿದ್ದ ವಸ್ತು ಪುರಾಣಿಕರ ಲಘು ದೃಷ್ಟಿಯಿಂದಾಗಿ ಜಳಾಗಿ ಕೃತಕವಾಗಿ ಸಪ್ಪೆಯಾಗಿಬಿಟ್ಟಿದೆ. ಯುದ್ಧದಿಂದಾಗುವ ಅನಾಹುತ ಪರಂಪರೆಯನ್ನು ಆಧಾರವಾಗುಳ್ಳ ಕೃತಿ “ವಸುಂಧರಾ”. ವಸ್ತು ಒಳ್ಳೆಯದು; ನಿರೂಪಣೆ ಹಳಸಲು; ಕಲೆಗಾರಿಕೆ ಕಳಪೆ. ತನ್ನ ತಮ್ಮ ತಂಗಿಯರನ್ನು ಸಂತೋಷವಾಗಿಡಲು ಕಳ್ಳತನ ಕೈಗೊಂಡು ಜೈಲುವಾಸ ಕಂಡು ಮರಳಿ ಬಂದು ಬವಣೆಯ ಬಾಳನ್ನೆದುರಿಸಿದ ವ್ಯಕ್ತಿಯೊಬ್ಬನ ಕರುಣಾಜನಕ ಕಥೆ “ವಸಂತಲಕ್ಷ್ಮಿ”. ಆಸ್ಪತ್ರೆಯ ಜೀವನವನ್ನು ಹಿನ್ನೆಲೆ ಯಾಗುಳ್ಳ ಕೃತಿಗಳು “ಕಲ್ಯಾಣಧಾಮ” ಮತ್ತು “ಸರಿತಾ ಸತ್ಯವತಿ”. ಕಷ್ಟ ಪರಂಪರೆಗಳಿಂದ ತುಂಬಿದ ಬದುಕಿನಲ್ಲಿ ತಾಳ್ಮೆ ಸಹಕಾರ ಶ್ರದ್ಧೆ ಧ್ಯೇಯಗಳಿದ್ದರೆ ಹೊಸ ಬಾಳು ಮೂಡುವುದು ಅಸಾಧ್ಯವಲ್ಲವೆಂಬುದನ್ನು ಸೂಚಿಸುತ್ತದೆ “ಹೊಸಬಾಳು”. ಇಂದಿನ ಹಳ್ಳಿಯ ಬಾಳಿನ ಒಂದು ಸುರಸ ಚಿತ್ರಣ “ಮಂದಾರ ಮಂದಾಕಿನಿ”. ವರದಕ್ಷಿಣೆಯ ಅನ್ಯಾಯಕ್ಕೆ ಬಲಿಯಾದ ಹೆಣ್ಣೊಬ್ಬಳ ಕರುಳು ಮಿಡಿಯುವ ಕಥೆ “ಕುಲವಧು”. ಅವಿಭಕ್ತ ಕುಟುಂಬದ ಏಳುಬೀಳಿನ ರಮ್ಯವೂ ಕರುಣಾಪೂರ್ಣವೂ ಆದ ಚಿತ್ರಗಳು “ತುಂಬಿದ ಮನೆ”, “ಬಿರಿದ ಭೂಮಿ” ಮತ್ತು “ಹಸಿರು ನೆಲ”. ಆದರ್ಶ ಶಿಕ್ಷಕನೊಬ್ಬನ ಉದಾತ್ತ ಬಾಳುವೆಯ ಕೌಟುಂಬಿಕ ಕೃತಿ “ತಂಪುನೆಳಲು”. “ಮುತ್ತೈದೆ”, “ಮನೆ ತುಂಬಿದ ಹೆಣ್ಣು”, “ಧರ್ಮ ದೇವತೆ”, “ಭಾಗೀರಥಿ”, “ಮಣ್ಣಿನ ಮಗಳು” ಹೆಸರುಗಳೇ ಸೂಚಿಸುವಂತೆ ಪುರಾಣಿಕರು ಕಂಡ ಆದರ್ಶ ನಾರೀಮಣಿ ಯರ ಮಾದರಿ ಚಿತ್ರಗಳು.