ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಡೆದಿರುವ ಕೃಷಿ ಯನ್ನು ನಿರುಕಿಸುವಾಗ ಸಂತೋಷ, ವಿಷಾದಗಳೆರಡೂ ಒಡನೊಡನೆಯೇ ಉದ್ಭವಿಸುತ್ತವೆ. ಈ ಅವಧಿಯಲ್ಲಿ ಸುಮಾರು ನೂರ ಐವತ್ತಕ್ಕೂ ಹೆಚ್ಚು ಮಂದಿ ಲೇಖಕರು ಸುಮಾರು ಸಾವಿರದ ಇನ್ನೂರಕ್ಕಿಂತಲೂ ಹೆಚ್ಚು ಕಾದಂಬರಿಗಳನ್ನು ಸೃಷ್ಟಿಸಿದ್ದಾರೆ, ಕಡೆದಿದ್ದಾರೆ, ಕೊರೆದಿದ್ದಾರೆ. ಸುಲಭ ಕೀರ್ತಿಕಾಮನೆಯಿಂದ, ಪ್ರಕಟಿಸುವವರಿದ್ದಾರೆಂಬ ಭಂಡ ಧೈರ್ಯ ದಿಂದ ಚಲನಚಿತ್ರದಲ್ಲಿ ಕಂಡ, ಪತ್ರಿಕೆಯಲ್ಲಿ ಓದಿದ, ಯಾರಿಂದಲೋ ಕೇಳಿದ, ಎಲ್ಲಿಂದಲೋ ಕದ್ದ ತಲೆಬುಡವಿಲ್ಲದ ಘಟನೆಗಳನ್ನು ಅಭ್ಯಾಸ ಅನುಭವ ಆಲೋಚನೆಗಳ ಬಂಡವಾಳವೇ ಇಲ್ಲದ ಕ್ಷಯಗ್ರಸ್ತ ಶೈಲಿಯಲ್ಲಿ ಕಾಗದದ ಮೇಲೆ ಕಕ್ಕಿ ಮಾಡಿದ ಅಕ್ಷರ ವ್ಯಭಿಚಾರಗಳೆಲ್ಲವನ್ನೂ ಗಣನೆಗೆ ತೆಗೆದುಕೊಂಡರೆ ಈ ಸಂಖ್ಯೆ ದ್ವಿಗುಣವಾದರೂ ಆಶ್ಚರ್ಯವಿಲ್ಲ. ಈ ಸಂಖ್ಯಾ ಬಾಹುಳ್ಯವನ್ನು ಗಮನಿಸುವಾಗ ಬೇಂದ್ರೆಯವರ ‘ಮೂವತ್ತು ಮೂರು ಕೋಟಿ’ ಕವನ ತಪ್ಪದೆ ನೆನಪಿಗೆ ಬರುತ್ತದೆ. ಯಾವನೇ ಲೇಖಕ ಇಷ್ಟೆಲ್ಲವನ್ನೂ ಅಭ್ಯಾಸ ಮಾಡುವುದು ಆಗದ ಮಾತು. ಅದಕ್ಕೆ ತಕ್ಕ ಅನುಕೂಲವೂ ಇಲ್ಲ, ಅದು ಅಗತ್ಯವೂ ಅಲ್ಲ; ಈ ಸಮೀಕ್ಷೆಯ ಪರಿಮಿತ ಚೌಕಟ್ಟಿನಲ್ಲಿ ಅಭ್ಯಸಿಸಿದ ಕೃತಿಗಳ ಸವಿವರ ವಿವೇಚನೆಯೂ ಸಾಧ್ಯವಿಲ್ಲ.

ಅವಾಸ್ತವ ಪ್ರಣಯ, ಅಪಕ್ವ ಆದರ್ಶವಾದ, ಹಸಿ ಹಸಿ ಭಾವನೆಗಳ ಶಿಥಿಲ ನೆಯ್ಗೆ, ಕಥಾ ಸಂವಿಧಾನದ ಸಡಿಲತೆ, ಅನುಭವದ ತೇಲುತನ, ಸತ್ವರಹಿತ ಉತ್ಸಾಹಾಧಿಕ್ಯ, ನಿಷ್ಕಾರಣ ರೊಚ್ಚು, ಸುಲಭೋಪದೇಶ ಚಾಪಲ್ಯ; ಅಗ್ಗದ ಸುಧಾರಣಾವಾದ, ಎರವಲು ಬಂಡವಾಳ, ಅತಿರೇಕದ ಭಾವನಾವಶತೆ, ಪ್ರತಿಭಾದಾರಿದ್ರ್ಯ, ಪರಿಶ್ರಮವಿಹೀನತೆ, ವಿಚಾರಶೂನ್ಯತೆ, ಹಳಸಲು ಭಾಷೆ, ಅಸ್ಪಷ್ಟೋದ್ದೇಶ, ಸಂಖ್ಯಾರತಿ – ಇವೇ ನಮ್ಮ ಬಹುಪಾಲು ಕಾದಂಬರಿಗಳಿಗೆ ಬಡಿದಿರುವ ಬಾಲಗ್ರಹ ಪೀಡೆಗಳು. ಇದರಿಂದಾಗಿ ಕೇವಲ ಮನರಂಜನೆಯ ಮೂರನೆ ಸ್ತರದಲ್ಲೇ ವಿಹರಿಸಬಯಸುವ ಲಘುಪ್ರವೃತ್ತಿಯ ಅಲಸ ವಿಲಾಸಿಗಳಿಗೆ ವಿಪುಲಗ್ರಾಸ ವನ್ನೊದಗಿಸುವ ಲೇಖಕರೇ ನಮ್ಮಲ್ಲಿ ಅಧಿಕ ಸಂಖ್ಯೆಯಲ್ಲಿ ಅಣಬೆಗಳಂತೆ ಹುಟ್ಟಿ ಕೊಂಡಿದ್ದಾರೆಯೇ ಹೊರತು ನೈಜ ಕಲಾಪ್ರಜ್ಞೆಯಿಂದ ತೊಡಗುವ, ಗಂಭೀರ ವಿಚಾರವಂತ ವ್ಯಾಸಂಗಿಯ ಮನೋಭಿತ್ತಿಯ ಮೇಲೆ ಅಚ್ಚಳಿಯದ ಮುದ್ರೆಯನ್ನೊತ್ತುವ, ಕಾದಂಬರಿಗಳ ರಚಕರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರವೆಂಬುದು ಮರೆಯಲಾಗದ ವಿಷಾದನೀಯ ಸತ್ಯ ಸಂಗತಿಯಾಗಿದೆ. ಆದರೂ ಇತರ ಭಾರತೀಯ ಭಾಷೆಗಳ ಶ್ರೇಷ್ಠತಮ ಕಾದಂಬರಿಗಳಿಗೆ ಹೊಯ್‌ಕಯ್ಯಾಗಿ ನಿಲ್ಲುವಂತಹ ಕೆಲವಾದರೂ ಚಿರಕಾಲಿಕ ಮಹತ್ವದ ಕಲಾಕೃತಿಗಳು ನಮ್ಮಲ್ಲಿ ಮೂಡಿವೆಯೆಂಬುದೂ ಅಷ್ಟೇ ಸತ್ಯವಾದ ಸ್ಮರಣೀಯವಾದ ಅಭಿಮಾನಾಸ್ಪದವಾದ ವಿಚಾರವಾಗಿದೆ.

ಕನ್ನಡ ಕಾದಂಬರಿ ಲೋಕದ ಎತ್ತರಬಿತ್ತರಗಳನ್ನು ಹಾಸುಬೀಸುಗಳನ್ನು ಶ್ರದ್ಧಾಪೂರ್ವಕವಾಗಿ ಕಲಾತ್ಮಕವಾಗಿ ಉಚ್ಚಮಟ್ಟಕ್ಕೆ ವಿಸ್ತರಿಸಿ ಇತರ ಸಮಕಾಲೀನ ಭಾರತೀಯ ಸಾಹಿತ್ಯದ ಈ ಪ್ರಕಾರಕ್ಕೆ ಹೆಗಲೆಣೆಯಾಗಿ ಮೆರೆಸಿದವರಲ್ಲಿ ಪ್ರಾತಃಸ್ಮರಣೀಯವಾದ ಹೆಸರು ಕಾರಂತರದು. ಈ ಇಪ್ಪತ್ತೈದು ವರ್ಷಗಳಲ್ಲಿ ಅವರು ಬರೆದಿರುವ ಕಾದಂಬರಿಗಳು ಇತರರಿಗೆ ಹೋಲಿಸಿದಾಗ ಸಂಖ್ಯಾ ಬಾಹುಳ್ಯದಿಂದ ಕಡಿಮೆಯೆನಿಸಿದರೂ, ಗುಣಮಲ್ಯದಿಂದ ಗಮನಾರ್ಹವಾದವುಗಳಾಗಿವೆ. ವಿಶಾಲವೂ ವೈವಿಧ್ಯಭರಿತವೂ ಆದ ಲೋಕಾನುಭವ ಜೀವನಾನುಭವಗಳು ಅವರ ಕೃತಿಗಳಲ್ಲಿ ಮಡುಗಟ್ಟಿವೆ. ಅವರ ಯಾವುದೇ ಕಾದಂಬರಿಯನ್ನು ತೆರೆದರೂ ವ್ಯಾಪಕವೂ ಸಾಂದ್ರವೂ ಸಂಕೀರ್ಣವೂ ಆದ ಬದುಕು ತನ್ನ ನೂರುಮುಖಗಳಲ್ಲಿ ಗಹನ ಗಂಭೀರವಾಗಿ ಸಹಜರಮ್ಯವಾಗಿ ಕುತೂಹಲಕಾರಿಯಾಗಿ ತೆರೆದು ಕೊಳ್ಳುತ್ತಾ ಹೋಗುತ್ತದೆ. ಅನುಭವದ ಗಟ್ಟಿತನ, ಆರ್ದ್ರವಾದ ಆತ್ಮೀಯತೆ, ಪ್ರಖರವೂ ಪರಿಣಾಮಕಾರಿಯೂ ಆದ ವೈಚಾರಿಕತೆ, ಸಮಸ್ಯೆಗಳ ಶ್ರದ್ಧಾಪೂರ್ವಕ ಅಭ್ಯಾಸ, ತಾಯ್ನೆಲದ ಸಹಜೋಗ್ರಕಂಪು, ಜೀವಂತ ಪಾತ್ರ ನಿರ್ಮಾಣ, ಕಣ್ಕಟ್ಟುವ ಪರಿಸರಸೃಷ್ಟಿ, ಪ್ರಾಮಾಣಿಕ ಕಲೆಗಾರಿಕೆ – ಇವು ಇವರ ಕಾದಂಬರಿಗಳ ಪ್ರಮುಖ ಲಕ್ಷಣಗಳು. ಭೂತ, ನೃತ್ಯ, ಸಂಗೀತ, ಸಾಹಿತ್ಯ, ಯಕ್ಷಗಾನ, ಸಮಾಜ ಸುಧಾರಣೆ, ಶಿಕ್ಷಣ, ರಾಜಕೀಯ, ಕೃಷಿ, ವ್ಯಾಪಾರ, ವಿಜ್ಞಾನ, ರೂಢಿಮಢ್ಯ, ಡಂಭಾಚಾರ, ದೈವಶ್ರದ್ಧೆ, ಪ್ರಣಯ ವಾತ್ಸಲ್ಯ, ಸಮಾಜವಾದ, ಆಷಾಢಭೂತಿತನ, ಕಪಟ ಸ್ವಾರ್ಥ – ಹೀಗೆ ಬಾಳಿನ ಅನಂತಮುಖಗಳನ್ನು ತಬ್ಬಿನಿಂತ ವಸ್ತು ಸಮುದಾಯ ಅವರ ಕೃತಿಗಳ ಅಂತರಂಗ ಸಂಪತ್ತು. ಚಿತ್ರಿತವಾಗಿರುವ ಬದುಕಿನ ಅಂಗುಲ ಅಂಗುಲದಲ್ಲೂ ಓದುಗ ಸಕ್ರಿಯವಾಗಿ ಭಾಗವಹಿಸಿದಂಥ ದಟ್ಟವಾದ ಅನುಭವ ಪರಿಣಾಮವನ್ನುಂಟುಮಾಡುವ ಹಿರಿಯ ಗುಣ ಅವರ ಕಾದಂಬರಿಗಳ ವೈಶಿಷ್ಟ್ಯ.

ಈ ಅವಧಿಯಲ್ಲಿ ಸುಮಾರು ಹದಿನೇಳು ಕಾದಂಬರಿಗಳನ್ನು ಕಾರಂತರು ಬರೆದಿದ್ದಾರೆ. “ಮರಳಿ ಮಣ್ಣಿಗೆ”, “ಬೆಟ್ಟದ ಜೀವ”, “ಚೋಮನ ದುಡಿ”ಯಂಥ ಸರ್ವಶ್ರೇಷ್ಠ ಕೃತಿಗಳಲ್ಲಿ ಅವರು ನಿಸರ್ಗವನ್ನು ಒಂದು ಜೀವಂತ ಹಿನ್ನೆಲೆಯಾಗಿ ವರ್ಣಿಸಿದ್ದಾರೆ; “ಕುಡಿಯರ ಕೂಸು” ಕೃತಿಯಲ್ಲಿ ಅದೇ ಪ್ರಧಾನರಂಗವಾಗಿದೆ. ಪ್ರಕೃತಿಯ ಮಕ್ಕಳಾದ ಮಲೆಯ ಕುಡಿಯರ ಸಾಹಸಭರಿತವೂ ಶ್ರದ್ಧಾನ್ವಿತವೂ, ಮುಗ್ಧವೂ ಆದ ಬದುಕಿನ ರುದ್ರರಮ್ಯ ವಾಸ್ತವ ಚಿತ್ರಣ ವಿಲ್ಲಿದೆ. ಇಲ್ಲಿಯ ಪಾತ್ರಗಳ ನಾಡಿನಾಡಿಯಲ್ಲಿ ಕಾಡಿನ ಹಾಡು ಹರಿಯುವಂಥ ಸತ್ವಪೂರ್ಣ ಬರವಣಿಗೆ ಇದು. ನಿಷ್ಠಾವಂತ ಕೃಷಿಗಾರನೊಬ್ಬನ ಜೀವನದ ಏರಿಳಿತವನ್ನು ಹೃದಯಂಗಮ ವಾಗಿ ನಿರೂಪಿಸುತ್ತದೆ, “ಚಿಗುರಿದ ಕನಸು”. ಇಲ್ಲಿ ಪೌರ್ವಾತ್ಯ ಪಾಶ್ಚಾತ್ಯ ಸಂಸ್ಕೃತಿಗಳೆರಡರ ಮಧುರ ಸಂಮಿಲನವನ್ನು, ಅದರ ಅಮೃತ ಫಲವನ್ನೂ ಕಾಣಬಹುದು. ಎರಡನೆ ಮಹಾ ಯುದ್ಧ ಒಂದು ಹಳ್ಳಿಯ ಜೀವನದ ಮೇಲೆ ಬೀರಿದ ಪರಿಣಾಮ, ನೈತಿಕ ಅಧಃಪತನ, ಅಂಥ ವಿಷದ ಕಡಲಲ್ಲೂ ದೃಢವಾಗಿ ಪ್ರಾಮಾಣಿಕವಾಗಿ ಜನಸೇವಕರಾಗಿ, ನಿಂತ ನಿಸ್ವಾರ್ಥಿ ವೈದ್ಯ – ಇವರ ಸುತ್ತ ಹೆಣೆಯಲಾದ ಕೃತಿ, “ಜರುವ ದಾರಿಯಲ್ಲಿ”. ಇಲ್ಲಿನ ಕಾರಂತರ ಕಟು ವಿಡಂಬನೆ ತುಂಬ ಪರಿಣಾಮಕಾರಿಯಾಗಿದೆ. ಕಲೆ ಕೇವಲ ಅಭ್ಯಾಸದಿಂದ ಬರುವಂಥದಲ್ಲ, ಆಂತರಂಗಿಕ ಭಾವನೆಗಳ ಒತ್ತಡದ ಅನಿವಾರ್ಯ ಅಭಿವ್ಯಕ್ತಿಯಾಗಿ ಅದು ಮೂಡಿರಬೇಕು. ಅದನ್ನು ಬದುಕಿ ತೋರಿಸಬೇಕು. ಹೀಗೆ ಬದುಕಿ ತೋರಿಸ ಹೊರಟ ನೃತ್ಯ ಕಲಾವಿದನೊಬ್ಬನ ಬಾಳಿನ ಸಿಹಿ-ಕಹಿ ಸಾಧನೆ-ಸಿದ್ದಿಗಳನ್ನು ಸುಂದರವಾಗಿ ಕಲಾ-ಪೂರ್ಣವಾಗಿ ಕುಂಚಿಸಿದ ಕೃತಿ “ಮೊಗ ಪಡೆದ ಮನ”. “ಮುಗಿದ ಯುದ್ಧ” ಶಾಲಾ ಶಿಕ್ಷಕನೊಬ್ಬ ದಾರುಣ ಬಡತನದ ಕರಾಳದವಡೆಗೆ ಸಿಕ್ಕು ತನ್ನ ಶ್ರದ್ಧೆ ಸಂಸ್ಕಾರ ಆದರ್ಶಗಳ ಬಲಿತೆತ್ತು ಪತನೋನ್ಮುಖನಾದ ಕರುಣಪೂರ್ವಕತೆ. ಗಾಂಧೀಜಿ ಕಂಡ ಆದರ್ಶ ರಾಜಕೀಯ ವನ್ನು ನನಸಾಗಿ ಮಾಡಿ, ಬಾಳಲು ಪಣತೊಟ್ಟು ಕ್ಷುದ್ರ ರಾಜಕಾರಣಿಗಳ ಕೈತವಕ್ಕೆ ಬಲಿಯಾದ ಯುವಕನೊಬ್ಬನ ಕತೆ “ಔದಾರ್ಯದ ಉರುಳಲ್ಲಿ”. ಮನುಷ್ಯ ಸ್ವಭಾವದ ವಿವಿಧ ಸ್ವರೂಪ ಗಳ ಪೃಥಕ್ಕರಣೆ ಇಲ್ಲಿ ತುಂಬ ಶಕ್ತಿವತ್ತಾಗಿ ಮೂಡಿಬಂದಿದೆ. ಮೂವರು ಹೆಣ್ಣುಮಕ್ಕಳ ವಿಭಿನ್ನ ಜೀವನದೃಷ್ಟಿಗಳು, ಅವುಗಳಿಗೆ ಅವರು ತಂದುಕೊಂಡ ಪರಿಹಾರಗಳು – ಇವುಗಳ ಸುತ್ತ ಹಬ್ಬಿದ ಕೃತಿ “ಬತ್ತದ ತೊರೆ”. “ಕರುಳಿನ ಕರೆ”, “ಒಡಹುಟ್ಟಿದವರು” ಮಾತೃಪ್ರೇಮದ ಮಹತಿಯನ್ನು ರಕ್ತ ಬಾಂಧವ್ಯದ ಶಕ್ತಿಯನ್ನು ಮನೋಜ್ಞವಾಗಿ ವರ್ಣಿಸುತ್ತವೆ. “ಜಗದೋ ದ್ದಾರನಾ” ಮೂಢನಂಬಿಕೆಗಳ ವರ್ತುಲದಲ್ಲಿ ಸುತ್ತುತ್ತಿರುವ ಮುಗ್ಧ ಮನಸ್ಸಿನ ಜನರನ್ನು ತನ್ನ ವೇಷ ಆಡಂಬರಗಳ ಅದ್ದೂರಿಯ ಮೋಸ ಜಲದಲ್ಲಿ ಸಿಕ್ಕಿಸಿ, ಭೋಗ ವೈಭವಗಳಲ್ಲಿ ಬಾಳುವೆ ನಡೆಸಿ, ಕೊನೆಗೆ ನಿರ್ಗತಿಕನಾದ ಟೊಳ್ಳು ವ್ಯಕ್ತಿಯೊಬ್ಬನನ್ನು ಕುರಿತ ಕರುಳು ಚುಚ್ಚುವ ವ್ಯಂಗ್ಯಾತ್ಮಕ ಬರಹ. ಆದರೆ ಇಲ್ಲಿ ಕಲೆಗಾರಿಕೆಗಿಂತ ಲೇಖಕರ ಚಾಪಲ್ಯವೇ ಹೆಚ್ಚು ಮೆರೆದಿದೆ. ಆಧುನಿಕತೆ, ಆನುವಂಶಿಕತೆ, ದುರಾಶೆ, ವಂಚಕತನ, ಶ್ರದ್ಧೆ ಹಾಗೂ ಮಢ್ಯಗಳ ಆವರಣವನ್ನುಳ್ಳ ಸತ್ವಪೂರ್ಣಕೃತಿ “ನಂಬಿದವರ ನಾಕ ನರಕ”. ವ್ಯಕ್ತಿಗಳು ಬೆಳೆದ ಪರಿಸರಕ್ಕನುಗುಣವಾಗಿ ಮೂಡಿದ ನಂಬಿಕೆಗಳು ಹೇಗೆ ಅವರ ಬಾಳನ್ನು ರೂಪಿಸುವ ಶಕ್ತಿಗಳಾಗುತ್ತವೆಂಬುದನ್ನು ಮನಶ್ಯಾಸ್ತ್ರ ಮತ್ತು ಮಾನವಶಾಸ್ತ್ರದ ಹಿನ್ನೆಲೆಯಲ್ಲಿ ತುಂಬ ಸ್ವಾಭಾವಿಕವಾಗಿ ಸೂಕ್ಷ್ಮವಾಗಿ ವಿಶ್ಲೇಷಿಸುವ; ಕಲೆ, ವಿಚಾರ ಹಾಗೂ ವಸ್ತುಸಾಂದ್ರತೆಗಳ ಸಮರಸ ಸಂಗಮದ ವಿಶಿಷ್ಟ ಕೃತಿಯಿದು. ಕಾರಂತರ ಶ್ರೇಷ್ಠ ಕಾದಂಬರಿಗಳಲ್ಲಿ ಇದೂ ಒಂದು. ಹಾಗೆಯೇ ಅವರ “ಸಮೀಕ್ಷೆ”ಯೂ ಗಮನಾರ್ಹವಾದುದು. ಹಲವು ಹತ್ತು ಜನರ ಜೀವನ ವಿಧಾನಗಳನ್ನು ವೈಚಾರಿಕತೆಯ ಮಾನದಂಡದಿಂದ ಒರೆಹಚ್ಚಿ ನೋಡುವ ಒಂದು ಸುಂದರ ಪ್ರಯತ್ನವಿದು. ಪಾತ್ರಗಳ ವಿಶಿಷ್ಟ ಸ್ವರೂಪ ಚಿತ್ರಣದಲ್ಲಿ ಅವರ ಸ್ವಂತಿಕೆ ಎದ್ದು ಕಾಣುತ್ತದೆ. ಪ್ರವಾಸಕ್ಕಾಗಿ ರೈಲೊಂದರಲ್ಲಿ ಕಲೆತ ಬಗೆಬಗೆಯ ಜನರ ಶ್ರದ್ಧೆ, ನಂಬಿಕೆ, ಆಚಾರ, ವಿಚಾರ, ಧ್ಯೇಯ, ಧೋರಣೆಗಳನ್ನು ತುಂಬ ರಸವತ್ತಾಗಿ ಔಚಿತ್ಯಪೂರ್ಣ ವಾಗಿ ವಾಸ್ತವ ರಮ್ಯವಾಗಿ ನಿರೂಪಿಸುತ್ತದೆ, “ಆಳ-ನಿರಾಳ”. ಇಲ್ಲಿ ವಿಚಾರ ಮುಂದಾಗಿದ್ದರೂ ಕಲೆಗಾರಿಕೆ ಹಿಂದಾಗಿಲ್ಲ; ಕತೆಯ ಅಂತಃಸೂತ್ರ ಪಥಭ್ರಾಂತವಾಗಿಲ್ಲ. ಸಾಂದ್ರವಾದ ಮಾನವೀಯ ಅಂತಃಕರಣದ ಕಂಪು ಕೃತಿಯ ತುಂಬೆಲ್ಲಾ ಆವರಿಸಿ ಆವರಣವನ್ನು ನಮ್ಮದಾಗಿ ಸುತ್ತದೆ. ಇದು ಕಾರಂತರ ತೀಕ್ಷ್ಣವಾದ ಪ್ರಾಮಾಣಿಕವಾದ ಬಹುಮುಖ ವಿಚಾರ ಪ್ರಣಾಲಿ ಯನ್ನೂ ಸೂಕ್ಷ್ಮಸಂವೇದನಾಶಕ್ತಿಯನ್ನೂ ಕಾದಂಬರಿ ಶಿಲ್ಪದ ಪಕ್ವವಾದ ನಿರ್ವಹಣಾ ಸಾಮರ್ಥ್ಯ ವನ್ನೂ ಅಭಿವ್ಯಂಜಿಸುತ್ತದೆ. “ಇದ್ದರೂ ಚಿಂತೆ” ವ್ಯಾಪಾರೋದ್ಯಮದಲ್ಲಿ ತೊಡಗಿ ಶ್ರೀಮಂತಿಕೆಯ ಶಿಖರಕ್ಕೇರಿದರೂ ಮನೋನೆಮ್ಮದಿಯನ್ನು ಪಡೆಯದ ಇಬ್ಬರು ವ್ಯಕ್ತಿಗಳ ಸುತ್ತ ಹೆಣೆದ ಕೃತಿ. ಆದರೆ ಏಕೋ ಕಾರಂತರ ಉಳಿದ ಕೃತಿಗಳಲ್ಲಿ ಕಾಣುವಂತಹ ಗಾಢ ಪರಿಣಾಮಕಾರಿಯಾದ ಜೀವನದ ಆಳ ವಿಸ್ತಾರಗಳಿಲ್ಲದೆ ಮೂಗಿಗೆ ಹೊಡೆಯುವಂತಹ ವಾಸ್ತವತೆಯ ಸೊಗಡಿಲ್ಲದೆ ಕೃತಿ ಹಗುರವಾಗಿ ತೋರುತ್ತದೆ.

“ಆಳಿದ ಮೇಲೆ” ಹಲವು ದೃಷ್ಟಿಗಳಿಂದ ಮಹತ್ವದ ಕೃತಿಯಾಗಿದೆ. ಆಳಿದ ಮೇಲೆ ಬಾಳಿನಲ್ಲಿ ಉಳಿಯುವುದೇನು ಎಂಬುದರ ವೈಜ್ಞಾನಿಕ ಶೋಧನೆ ಹಾಗೂ ಅದರ ಸರ್ವಸಮರ್ಥ ನಿರೂಪಣೆ ಇಲ್ಲಿದೆ. “ಕಾದಂಬರಿಕಾರರಿಗೆ ಆಕಸ್ಮಿಕವಾಗಿ ಗೆಳೆಯರಾಗಿ ತೀರಿಕೊಂಡ ಯಶವಂತರಾಯರ ದಿನಚರಿಯಿಂದ, ಅವರ ಚಿತ್ರಗಳಿಂದ, ಅವರು ಹಿಂದೆ ಬಿಟ್ಟ ಬಂಧುಗಳಿಂದ ಅವರ ವ್ಯಕ್ತಿತ್ವವನ್ನು ಪುನರ್ರಚಿಸಿದ್ದಾರೆ. ಹಂತಹಂತವಾಗಿ ಸಂಕೀರ್ಣ ವಾಗಿ ಬೆಳೆಯುತ್ತಾ ಅಪೂರ್ವ ಸಂಯಮದ ಕಲಾಪ್ರಜ್ಞೆಯಿಂದ ರಕ್ತಮಾಂಸಗಳನ್ನು ತುಂಬಿಕೊಳ್ಳುತ್ತಾ ಬೆರಗುಗೊಳಿಸುವ ಸುಂದರ ಸುಸಂಬದ್ಧತೆಯಲ್ಲಿ ಮೂಡಿನಿಂತಿರುವ ಈ ಕೃತಿ ತಂತ್ರ ನಾವೀನ್ಯತೆಯಿಂದ ಜೀವಂತ ಪಾತ್ರಪೋಷಣೆಯಿಂದ ಧ್ವನಿಪೂರ್ಣ ಭಾಷಾ ಪ್ರಯೋಗದಿಂದ ಕನ್ನಡದ ಅತಿ ಶ್ರೇಷ್ಠ ಕಾದಂಬರಿಗಳಲ್ಲೊಂದಾಗಿ ನಿಲ್ಲುತ್ತದೆ. ಕನಸುಗಾರ ನೊಬ್ಬನ ಮನಸ್ಸಿನ ಹರಿಯುವಿಕೆಯನ್ನು ಕನಸಿಗೂ ಬದುಕಿನ ಘಟನೆಗಳಿಗೂ ಇರುವ ನೈಜ ಸಂಬಂಧವನ್ನು ನಿರೂಪಿಸುವ ಕೃತಿ “ಸ್ವಪ್ನದ ಹೊಳೆ”. ಪೂರ್ವಭಾಗದಲ್ಲಿ ಗಂಭೀರವಾಗಿ ನಿಧಾನವಾಗಿ ಸಜೀವವಾಗಿ ಸರಿಯುವ ಕತೆ ಉತ್ತರ ಭಾಗದಲ್ಲಿ ಅನಾವಶ್ಯಕ ಆತುರದಿಂದ ಹರಿದು ಕಲಾತ್ಮಕ ಅಂತ್ಯವನ್ನು ಕಾಣದೆ ಬಸವಳಿಯುತ್ತದೆ, ನಿರಾಶೆಯನ್ನುಂಟುಮಾಡುತ್ತದೆ. “ನಾಲಿಗೆ ಮತ್ತು ಕಿವಿಗಳ ನಡುವೆ, ಕಣ್ಣು, ಕಿವಿ ಮತ್ತು ಮನಸ್ಸುಗಳ ನಡುವೆ ವಿಚಾರ, ವಿವೇಕ, ಸಹಾನುಭೂತಿಗಳ ಸೇತುವೆಯೊಂದು ರಚನೆಗೊಳ್ಳಬೇಕು” ಎಂಬ ಅಭಿಪ್ರಾಯದ ಆಧಾರದ ಮೇಲೆ ರೂಪುಗೊಂಡ ಕಾದಂಬರಿ  “ಒಂಟಿ ದನಿ”. ವಿವಿಧ ಸರಣಿಯ, ಮುಖ್ಯವಾಗಿ ಕಲಾ ಮಾಧ್ಯಮದ, ವಿಚಾರ ಲಹರಿಯನ್ನು ಬಿಂಬಿಸುವ ಈ ಕೃತಿ ಕೇವಲ ಚರ್ಚೆ ತರ್ಕಗಳ ಗೊಂದಲದ ಸಮುದಾಯವಾಗಿ ಒಟ್ಟಂದದಲ್ಲಿ ಯಾವ ನಿಶ್ಚಿತ ಪರಿಣಾಮವನ್ನೂ ಬೀರದೆ ಅಸಫಲವಾಗುತ್ತದೆ. ಇತ್ತೀಚಿನ ಕಾದಂಬರಿಗಳಲ್ಲಿ ಕಾರಂತರ ಕಲೆಗಾರಿಕೆ ಕಡಿಮೆಯಾಗಿ ಅವರು ತರ್ಕನಿಪುಣರಾಗುತ್ತಿದ್ದಾರೇನೋ ಎನ್ನಿಸುತ್ತದೆ. “ವ್ಯಕ್ತಿಯ ಬೆಳವಣಿಗೆಗೆ ಅಂಧಪರಂಪರೆಯ ಹಾದಿಗಿಂತ ಪ್ರಜ್ಞಾಬದ್ಧ ಜೀವನ ಇನ್ನಷ್ಟು ನೆರವಾಗಬಲ್ಲುದು” ಎಂಬ ತತ್ವದ ರಸಮಯ ವ್ಯಾಖ್ಯಾನ “ಇನ್ನೊಂದೇ ದಾರಿ”. ಅಂಧಶ್ರದ್ಧಾ ಮೂಲವಾದ ಪರಂಪರಾಗತ ನಂಬಿಕೆಯ ನೆರಳಿನಲ್ಲಿ, ಜೀವನ ಸಮಸ್ಯೆಗಳನ್ನು ಬುದ್ದಿ ಮೂಲವಾಗಿ ವಿವೇಚಿಸದೆ, ಎಲ್ಲಕ್ಕೂ ಅರ್ಥವರಿಯದ ಅರ್ಥವಿಲ್ಲದ ಸಂಪ್ರದಾಯದೆಡೆಗೆ ಬೆರಳು ಮಾಡಿ ಅದರ ಭಯದಿಂದ ಭ್ರಮಾತ್ಮಕವೂ ದುಃಖದಾಯಕವೂ ಆದ ಬದುಕನ್ನು ನಡೆಸುವ ಹಳೆಯ ತಲೆಮೊರೆ; ವೈಜ್ಞಾನಿಕ ಸಮರ್ಥನೆಯಿಲ್ಲದೆ ಯಾವುದನ್ನೂ ಒಪ್ಪಲಾರದ, ಎಲ್ಲವನ್ನೂ ಬುದ್ದಿಯ ಬೆಳಕಿನಲ್ಲಿ ತೀಕ್ಷ್ಣವಾಗಿ ವಿಶ್ಲೇಷಿಸಿ ವಿಮರ್ಶಿಸಿ ಅದರಿಂದ ಉದ್ಭೋಧವಾಗು ವುದನ್ನು ಮಾತ್ರವೇ ಸ್ವೀಕರಿಸುವ ಸ್ವತಂತ್ರ ಪ್ರಜ್ಞಾಯುಳ್ಳ ಆಧುನಿಕ ಮನಸ್ಸು – ಇವುಗಳ ಸಂಘರ್ಷವನ್ನು ಸಮರ್ಥವಾಗಿ ಮನೋಜ್ಞವಾಗಿ ಕಲಾಪೂರ್ಣವಾಗಿ ಚಿತ್ರಿಸುತ್ತದೆ ಈ ಕೃತಿ. ದಿನದಿನವೂ ಬೆಳೆಯುತ್ತಿರುವ ಕಾರಂತರ ಜೀವಂತ ವಿಚಾರಮತಿಯನ್ನು, ಬದುಕಿನ ಬಗ್ಗೆ ಅವರಿಗಿರುವ ಪ್ರಾಮಾಣಿಕ ಕಳಕಳಿಯನ್ನು ಇದು ಸೊಗಸಾಗಿ ಸೂಚಿಸುತ್ತದೆ; ಹಿಂದಿನ ಕಾದಂಬರಿ ಮೂಡಿಸಿದ್ದ ನಿರಾಶೆಯನ್ನು ತೊಡೆದು ಹಾಕುತ್ತದೆ. “ಮೂಕಜ್ಜಿಯ ಕನಸುಗಳು” ಈಗತಾನೇ ಪ್ರಕಟವಾಗಿದೆ. ಇತಿಹಾಸ, ಧರ್ಮ, ಸಂಸ್ಕೃತಿ, ಭಕ್ತಿ, ಲೈಂಗಿಕತೆ, ಮಾನವೀಯತೆ, ಮತಾಚಾರ ಮುಂತಾದ ಮೂಲಭೂತ ತತ್ವಗಳ ಬಗ್ಗೆ ಅಂಧಶ್ರದ್ಧೋತ್ಪಾಟನಶೀಲವೂ ವೈಜ್ಞಾನಿಕವೂ ಕ್ರಾಂತಿಕಾರಕವೂ ಆದ ವಿವೇಚನಾ ದೃಷ್ಟಿ ಹರಿಸುವ ವಿನೂತನ ಕಾದಂಬರಿ ಯಿದು. ಕಾರಂತರ ಸದಾ ಎಚ್ಚತ್ತಿರುವ ಚಿಂತನಶೀಲತೆಗೆ ನಿರ್ಭೀತ ಮನೋಧರ್ಮಕ್ಕೆ ಇದೊಂದು ಪ್ರೋಸಾಕ್ಷಿ. ಆದರೆ ಈ ವಿಚಾರಗಳ, ನಿರೂಪಣೆಗೆಂದೇ ಕೃತಿ ಸೃಷ್ಟಿಯಾದಂತಾಗಿರುವುದರಿಂದ ಬಂದ ಸಡಿಲವಾಗಿ, ಭಾವಗಳು ಹರಿಹಂಚಾಗಿ, ನಿರೂಪಣೆ ಪೇಲವವಾಗಿ ಪರಿಣಾಮದಲ್ಲಿ ಕೃತಿ ವಿಫಲವಾಗುತ್ತದೆ. ಕೆಲವು ಕಡೆ ಬರುವ ವಿಡಂಬನತೀಕ್ಷ್ಣತೆ ಜವಾಬ್ದಾರಿಯುತವಾದ ಸಮರ್ಥ ವಿವೇಚನೆಯ ತಳಹದಿಯ ಮೇಲೆ ನಿಂತಿಲ್ಲ. ಅಲ್ಲಲ್ಲಿ ಅಸಹಜತೆ ಹಣುಕಿ ಹಾಕಿದೆ. ಮುಕ್ತಾಯ ಕಲಾಪೂರ್ಣವಾಗಿಲ್ಲ. ಆದುದರಿಂದ ಇದು ಹೊಸ ದಾರಿಯ ಕೃತಿಯೇ ಹೊರತು ಹೊಸ ವಿಕ್ರಮ ಸ್ಥಾಪಿಸುವಂಥ ಕಲಾಕೃತಿಯಲ್ಲ. ಬುದ್ದಿ ಪ್ರಖರತೆ, ಅನುಭವ ವೈಶಾಲ್ಯ, ಅದಮ್ಯವಾದ ಜೀವನ ಶ್ರದ್ಧೆ, ನವಾನ್ವೇಷಕ ಪ್ರತಿಭೆ, ಕಲಾತ್ಮಕ ನಿರೂಪಣೆ ಮತ್ತು ಸಂಯಮ ಪೂರ್ಣರಚನೆ – ಇವುಗಳಿಂದಾಗಿ ಕಾರಂತರು ಈ ಕಾಲು ಶತಮಾನದ ಸರ್ವಶ್ರೇಷ್ಠ ಕಾದಂಬರಿಕಾರರಾಗಿ ನಿಲ್ಲುತ್ತಾರೆ.

ಎರಡನೆಯದಾಗಿ ನಾವು ನೆನೆಯಲೇ ಬೇಕಾದ ಹೆಸರು ಶ್ರೀ ಅ.ನ. ಕೃಷ್ಣರಾಯ ಅವರದು. ಕನ್ನಡ ಓದುಗ ಬಳಗದ ಹಸಿವನ್ನು ಕೆರಳಿಸಿ ಆಸಕ್ತಿಯನ್ನು ಅರಳಿಸಿ ಕಾದಂಬರಿಯನ್ನು ಅತ್ಯಂತ ಜನಪ್ರಿಯ ಪ್ರಕಾರವನ್ನಾಗಿ ಮಾಡಲು ಹಗಲಿರುಳೂ ಶ್ರದ್ಧೆಯಿಂದ ಶ್ರಮಿಸಿದವರಲ್ಲಿ ಅನಕೃ ಅವರು ಅದ್ವಿತೀಯರು; ಬಹುಶಃ ಇಡೀ ಭಾರತದಲ್ಲೇ ಅತ್ಯಧಿಕ ಸಂಖ್ಯೆಯ ಕೃತಿ ನಿರ್ಮಾಣ ಮಾಡಿದವರಲ್ಲೂ ಅವರು ಅದ್ವಿತೀಯರು. ಸುಪ್ರಸಿದ್ಧ ವಿಮರ್ಶಕರೊಬ್ಬರು ಹೇಳುವಂತೆ “ಜನಪ್ರಿಯತೆ ಎನ್ನುವ ಗುಣವನ್ನು ಕನ್ನಡಕ್ಕೆ ತಂದವರೇ ಅ.ನ. ಕೃಷ್ಣರಾಯರು”. “ಸಮಸ್ತ ಜನಸ್ತೋಮ ನನ್ನ ಶ್ರಾವಕರಾಗಬೇಕೆಂದು ಬಯಸುವ ನಾನು ಕಾದಂಬರಿಗಳನ್ನೆ ಹೆಚ್ಚಾಗಿ ಬರೆಯುತ್ತಿದ್ದೇನೆ” ಎನ್ನುವ ಅನಕೃ ಸುಮಾರು ನೂರಹದಿನೈದು ಕಾದಂಬರಿಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಸುಮಾರು ತೊಂಬತ್ತು ಕೃತಿಗಳು ೧೯೪೨ರಿಂದ ಈಚೆಗೆ ರಚಿತವಾಗಿವೆ. ಅವುಗಳ ವಸ್ತು ವೈವಿಧ್ಯ ಬೆರಗುಗೊಳಿಸುವಂಥದು; “ಪಾನನಿರೋಧ, ಅವಿಭಕ್ತ ಕುಟುಂಬ, ಆಧುನಿಕ ವಿದ್ಯಾಭ್ಯಾಸ, ಸ್ತ್ರೀಸ್ವಾತಂತ್ರ್ಯ, ದಾಂಪತ್ಯ ವಿಚ್ಛೇದನ, ಜೈಲುಗಳ ದುರವಸ್ಥೆ, ಬಣ್ಣದ ಚಿಟ್ಟೆಯಾದ ಹೆಣ್ಣು, ತಾಯಿಯಾದ ಹೆಣ್ಣು, ಸೂಳೆಯಾದ ಹೆಣ್ಣು, ಹಾದಿ ತಪ್ಪಿದ ಶ್ರೀಮಂತ ಗೃಹಿಣಿ, ಪ್ರೇಮದ ಪವಿತ್ರತೆ, ಕಾಮದ ಕೊಳೆ, ಕಿಚ್ಚು, ರಾಜಕೀಯದ ಸಮಸ್ಯೆಗಳು, ಗ್ರಾಮ ಜೀವನದ ಅವನತಿ, ಜತೀಯತೆಯ ಭೂತ – ಇಂತಹ ಸುವಿಶಾಲ  ಹರಹು. ಆದರೆ ಅವುಗಳ ನಿರೂಪಣೆಯಲ್ಲಿ ವೈಶಿಷ್ಟ್ಯವಿಲ್ಲ, ಗುರುತ್ವವಿಲ್ಲ. ಅವರು ಸೃಜಿಸುವ ಪಾತ್ರಗಳಿಗೆ ಕಪ್ಪು-ಬಿಳುಪು ಎರಡೇ ಮುಖ. ಕಪ್ಪು ಹಠಾತ್ತನೆ ಬಿಳುಪಾಗುತ್ತದೆ; ಬಿಳುವು ಕಪ್ಪಾಗುತ್ತದೆ. ಅವುಗಳಿಗೆ ಸುಸಮರ್ಥವಾದ ಮನೋವೈಜ್ಞಾನಿಕ ಹಿನ್ನೆಲೆಯಿಲ್ಲ. ರಮ್ಯಾಕರ್ಷಕವೂ ಸರಳ ನಿರರ್ಗಳವೂ ಚಾತುರ್ಯಪೂರ್ಣವೂ ಆದ ಸಂಭಾಷಣೆ ಅನಕೃ ಕಾದಂಬರಿಗಳ ಪ್ರಧಾನ ಲಕ್ಷಣ; ಅದೇ ಅವುಗಳ ಜನಪ್ರಿಯತೆಗೆ ಮೂಲಕಾರಣ. ಬರೀ ಸಂಭಾಷಣೆಯಲ್ಲೆ ಇಡೀ ಕೃತಿಯ ಕಟ್ಟಡವನ್ನು ಕಟ್ಟಿ ನಿಲ್ಲಿಸುವ ಅಸಾಧಾರಣ ಕಲೆ ಅವರಿಗೆ ಸಿದ್ದಿಸಿದೆ. ಕುತೂಹಲಕರವಾಗಿ, ಮನೋರಂಜಕವಾಗಿ ಕಥೆ ಹೇಳುವ ಕಲೆ ಅವರಿಗೆ ಸಾಧಿಸಿದ್ದರೂ ಅದರ ಚರ್ವಿತಚರ್ವಣದಿಂದಾಗಿ ಪ್ರಜ್ಞಾವಂತ ಓದುಗ ನಿರಾಶೆಗೊಳ್ಳ ಬೇಕಾಗುತ್ತದೆ. ಆದರೂ “ಯಾವ ಲೇಖಕನೂ ಚರ್ವಿತ ಚರ್ವಣ ಮಾಡಲು ಸಾಧ್ಯವೇ ಇಲ್ಲ” ಎನ್ನುವ ಮೊಂಡವಾದ ಅವರದು. ವಿಪುಲವಾದ ವಿಚಾರಗಳು ಸಮಸ್ಯೆಗಳು ಅವರ ಕಾದಂಬರಿಗಳಲ್ಲಿ ಮೂಡಿಬರುವುದುಂಟು. ಆದರೆ ಅವು ವಾಸ್ತವವೂ ಕಲಾತ್ಮಕವೂ ಆದ ಪರಿಹಾರಗಳನ್ನು ಕಂಡುಕೊಳ್ಳದೆ ಸತ್ವಹೀನವಾಗಿ ತೀರ ಲಘುವಾಗಿ ಪರ್ಯವಸನಾವಾಗುತ್ತವೆ. ಹಲವೊಮ್ಮೆ ಮೂಲಶಿಲ್ಪಕ್ಕೆ ಸಾವಯದ ಸಂಬಂಧ ಹೊಂದಿರದ ವಿಚಾರಗಳು ಬಂದು ತೇಪೆ ಹಾಕಿದಂತಾಗುತ್ತದೆ; ಚರ್ಚೆಗೋಸ್ಕರ ಚರ್ಚೆ, ಕೇವಲ ಪುಟ ಬೆಳೆಯುವುದಕ್ಕೆಂಬಂತೆ, ಬರುತ್ತದೆಯೇ ಹೊರತು ಪಾತ್ರಾಂತರಂಗದ ನೈಜಭಿವ್ಯಕ್ತಿಯಾಗಿ ಬರುವಂತೆ ಕಾಣುವುದಿಲ್ಲ. ಹೀಗಾಗಿ ಅವರ ಕೃತಿಗಳು ನರಚಲು ಮೈಯ್ಯ ನರೆಗೂದಲಿನ ಬಾಲಕರಂತಾಗಿಬಿಟ್ಟಿವೆ.

“ನಟಸಾರ್ವಭೌಮ” ಅವರ ಬೃಹದ್ಗಾತ್ರದ ಕಾದಂಬರಿ. ವರನಟ ವರದಾಚಾರ್ಯರ ಬದುಕಿನ ಮೇಲೆ ಬೆಳಕು ಚೆಲ್ಲುವ ಈ ಕೃತಿ ಅವರ ಕಲಾವಿದಗ್ಧತೆಗೆ ಮಸಿ ಬಳಿದಿದೆ. ಇಲ್ಲಿಯ ನಾಯಕ ಆದಿಯಿಂದ ಅಂತ್ಯದವರೆಗೂ ಎಳಕನಾಗಿಯೇ ಉಳಿಯುತ್ತಾನೆ. ಅವನ ಅಂತರಂಗ ಜೀವನದ ಸೂಕ್ಷ್ಮ ಸಂವೇದನೆಗಳಿಗೆ ಯಾವ ಬೆಲೆಯನ್ನೂ ಕೊಡದೆ ಕೇವಲ ಬಹಿರಂಗದ ಸಿನಿಮೀಯ ಘಟನೆಗಳ ಸೃಷ್ಟಿಯಿಂದಲೇ ಅವನನ್ನು ದೊಡ್ಡವನೆಂದು ಲೇಖಕರು ಸಾರುತ್ತಾರೆ. ಅವನ ವಿಶೃಂಖಲ ಪ್ರಣಯ, ಅಸಮರ್ಥನೀಯ ಬಾಲಿಶ ಔದಾರ್ಯ ಅಪ್ರಬುದ್ಧತೆಯ ಕುರುಹಾಗಿವೆ. ಅಭಿನಯದ ಬಗ್ಗೆ ನಾಟಕ ಸಾಹಿತ್ಯದ ಬಗ್ಗೆ ಅವನಾಡುವ ಮಾತುಗಳು ಕೃತಕವಾಗಿ ಕಾಣುತ್ತವೆ. ಕನ್ನಡ ನಾಡಿನ ನಾಟಕರಂಗದ ವಿಶಿಷ್ಟತೆಯನ್ನು ಇತಿಹಾಸವನ್ನು ಪ್ರತಿನಿಧಿಸುವ ಮಹತ್ತರ ಕಲಾಕೃತಿಯಾಗಬಹುದಾಗಿದ ವಸ್ತು ಅ.ನ.ಕೃ. ಅವರ ಅಸಡ್ಡೆಯಿಂದಾಗಿ, ಬಾಳಿನ ಮೇಲ್ಮೈ ವಿವರಗಳಲ್ಲೇ ತೃಪ್ತವಾಗುವ ಲಘು ದೃಷ್ಟಿಕೋನ ದಿಂದಾಗಿ, “ಒಂದು ದಂತ ಕಥೆಯಂತೆ ಮನೋರಂಜಕವಾಗಿದೆ, ಅಷ್ಟೇ ಹಗುರವೂ  ಆಗಿದೆ”.

ವೇಶ್ಯಾ ಸಮಸ್ಯೆಯನ್ನೆತ್ತಿಕೊಂಡು “ನಗ್ನಸತ್ಯ”, “ಶನಿಸಂತಾನ”, “ಸಂಜೆಗತ್ತಲು” ಮುಂತಾಗಿ ಹಲವು ಕಾದಂಬರಿಗಳನ್ನು ಅ.ನ.ಕೃ. ಹೆಣೆದಿದ್ದಾರೆ. ವೇಶ್ಯೆಯರ ಮಾನಸಿಕ ಸಂವೇದನೆಗಳ ಚಿತ್ರಣಕ್ಕಿಂತ, ಅವುಗಳಿಗೆ ಕಾರಣವಾದ ಪರಿಸರದ ಘಟನೆಗಳ ವೈಜ್ಞಾನಿಕ ವಿಶ್ಲೇಷಣೆಗಿಂತ, ಬಹಿರಂಗದ ರಂಗು ರುಚಿಯ ವರ್ಣಮಯ ವಿವರಗಳನ್ನು ಪುಂಖಾನುಪುಂಖ ವಾಗಿ ಕೊಟ್ಟು ಯುವ ಓದುಗರ ಮನಸ್ಸನ್ನು ಕೆರಳಿಸಿ ಅಸ್ತವ್ಯವಸ್ಥಗೊಳಿಸುವುದರಲ್ಲಿ ಮಾತ್ರ ಇವು ಸಾರ್ಥಕ್ಯವನ್ನು ಪಡೆಯುತ್ತವೆ. ಕೇವಲ ವಿಸ್ಕಿ ಸೋಡಾ ಬಾಟಲುಗಳ ಓಡಾಟ, ನೋಟುಗಳ ತೂರಾಟ, ಸೆರಗಿನ ಹಾರಾಟ, ದೀಪದ ಆರಾಟಗಳಲ್ಲೇ ಈ ಕೃತಿಗಳ ವಾಸ್ತವವಾದ ಮುಕ್ತಿ ಹೊಂದುತ್ತದೆ.

ಸಾಹಿತಿಯ ಜೀವನವನ್ನು ಕುರಿತ, “ಸಾಹಿತ್ಯ ರತ್ನ”, “ಗಾಜಿನ ಮನೆ”, “ಕನ್ನಡಮ್ಮನ ಗುಡಿಯಲ್ಲಿ” ಮತ್ತು “ದೀಪಾರಾಧನೆ” ಕಾದಂಬರಿ ಮಾಲೆ ಲೇಖಕರ ವೈಯಕ್ತಿಕ ವಿಚಾರಗಳ ಪ್ರಚಾರ ಮಾಧ್ಯಮವಾಗಿ ಮಾತ್ರ ಉಳಿದಿವೆ. ಅಸಮರ್ಪಕ ಪಾತ್ರ ಪೋಷಣೆ, ಅಸಹಜ ಸನ್ನಿವೇಶಗಳು, ಲಘುವಾದ ಜೀವನ ದೃಷ್ಟಿ – ಇವುಗಳು ರಾಹುವಾಗಿ ಈ ಕೃತಿಗಳನ್ನು ಕಾಡಿವೆ.

ಹೆಣ್ಣೆಂದರೆ ಅ.ನ.ಕೃ. ಅವರಿಗೆ ಅಪಾರ ಗೌರವ ಅಭಿಮಾನ. ಮಾತೃಭಾವದ ಹಿರಿಮೆ ಯನ್ನು ಸಾರುವ ಕೃತಿಗಳು “ಗೃಹಲಕ್ಷ್ಮಿ”,  “ರುಕ್ಮಿಣಿ”, “ತಾಯಿ ಮಕ್ಕಳು”. ಹಾಗೆಯೇ ನಮ್ಮ ಧರ್ಮ ಸಂಸ್ಕೃತಿಗಳ ಮಹತ್ವವನ್ನು ಕುರಿತು ಬರೆದವುಗಳು “ಆಶೀರ್ವಾದ” ಮತ್ತು “ಅನುಗ್ರಹ”. ಜಟಕಾ ಸಾಬಿಯ ಮಗನೊಬ್ಬ ಘನ ಸಂಗೀತ ವಿದ್ವಾಂಸನಾಗಿ ಹೆಣ್ಣು ಹೊನ್ನುಗಳ ಮೋಹಕ್ಕೊಳಗಾಗಿ ಪತಿತನಾಗಿ ಕೊನೆಗೆ ಜಟಕಾ ಬಂಡಿಯನ್ನೇ ಆಶ್ರಯಿಸುವ ಕತೆ “ಮೀಯಾ ಮಲಾರ್”. ಮೊದಲಿನಿಂದ ಕೊನೆಯವರೆಗೂ ಅಸಹಜತೆಯ ಅತಿರೇಕ. ಸಮಾಜದಲ್ಲಿ, ಸರಿಯಾದ ಸ್ಥಾನಮಾನ ಗೌರವಗಳಿದ್ದರೂ ಅಡ್ಡಹಾದಿ ತುಳಿದ ಹೆಣ್ಣು ಮತ್ತು ಅವಳ ಸುತ್ತಲಿನ ಸ್ವಾರ್ಥ ಸಾಧಕ ವಿಷಕ್ರಿಮಿಗಳನ್ನು ಕುರಿತ ಕೃತಿ “ಪಂಕಜ”. ಇಲ್ಲಿಯೂ ಸಹಜತೆಗಾಗಲೀ ವಿವೇಚನೆಗಾಗಲೀ ಬೆಲೆಯಿಲ್ಲ. ಒಂದಾದ ಮೇಲೊಂದರಂತೆ ಸಂಸಾರದಲ್ಲಿ ಬಂದೊದಗಿದ ಆಘಾತಗಳಿಂದಾಗಿ ಬೇಸತ್ತು ಕ್ರಿಸ್ತ ಮತವನ್ನವಲಂಬಿಸಿದ ಯುವಕನೊಬ್ಬನ ಬಾಳಕತೆ “ದೇವಪ್ರಿಯ”. ಜವಾಬ್ದಾರಿಯುತವಾದ ಕಲಾಪ್ರಜ್ಞೆ ಇದ್ದಿದ್ದರೆ ಉತ್ತಮ ಮನೋವಿಶ್ಲೇಷಣಾತ್ಮಕ ಕಾದಂಬರಿಯಾಗಬಹುದಾಗಿದ್ದ ವಸ್ತು ಅ.ನ.ಕೃ. ಕೈಯ್ಯಲ್ಲಿ ಆರಾಮಕುರ್ಚಿಯ ರಸವಿಹೀನವಾದ ಗರಿಹಗುರ ಕೃತಿಯಾಗಿದೆ. ಸ್ವಾರ್ಥ, ಮತ್ಸರ, ಅಜ್ಞಾನ ಮೂಲವಾದ ಹುಚ್ಚು ದುರಭಿಮಾನಗಳಿಂದ ಹಗರಣದ ಬೀಡಾಗಿರುವ ಇಂದಿನ ಹಳ್ಳಿಗಳ ಸಹಜ ಚಿತ್ರಗಳು “ಕುಲಪುತ್ರ” ಮತ್ತು “ಭೂಮಿತಾಯಿ”. ಗ್ರಾಮ ಜೀವನದ ಗಾಢಾನುಭವ ಮತ್ತು ಪಾತ್ರಾಂತರಂಗದ ಸೂಕ್ಷ್ಮ ವಿಶ್ಲೇಷಣೆಗಳಿದ್ದು, ಕಲೆಗಾರಿಕೆಯಲ್ಲಿ ಸ್ವಲ್ಪ ಹೆಚ್ಚಿನ ಸಂಯಮವನ್ನು ತೋರಿದ್ದರೆ ಇವುಗಳು ಉತ್ಕೃಷ್ಟ ಕಲಾ ಕೃತಿಗಳಾಗುವ ಸಾಧ್ಯತೆಯಿತ್ತು. ನಾಟಕೋಪಜೀವಿಗಳ ಕಥೆಯನ್ನೊಳಗೊಂಡ “ಅಭಿಮಾನ”, ಕೀರ್ತಿ ಕಾಂಚನಗಳಿಗಾಗಿ ಭ್ರಮಿಸಿ ಪಾತರಗಿತ್ತಿಯಾದ ನೃತ್ಯ ಕಲಾವಿದೆಯೊಬ್ಬಳನ್ನು ಕುರಿತ “ಭುವನ ಮೋಹಿನಿ” ತೀರ ಸಾಮಾನ್ಯ ಕೃತಿಗಳು. ಉದಾತ್ತ ಬಾಳಿನ ಹಂಬಲದಿಂದ ಕಷ್ಟದ ಕುಲುಮೆ ಯಲ್ಲಿ ಬೇಯುತ್ತಿರುವ ಮತ್ತು ಉದಾತ್ತತೆಯನ್ನು ಧಿಕ್ಕರಿಸಿಯೂ ನೆಮ್ಮದಿಯಿಲ್ಲದೆ ತೊಳಲಾಡುವ ಇಬ್ಬಗೆಯ ಜೀವನ ವಿಧಾನವನ್ನು ಕುರಿತದ್ದು “ಅಪರಾಜಿತ”. ಮುದ್ರಣ ವೃತ್ತಿಯ ಜನಜೀವನದ ಒಂದು ಕರುಣಕತೆ “ಶುಭಸಮಯ”. ಪುಢಾರಿಗಳಿಂದ ನಮ್ಮ ನಾಡಿನ ರಾಜಕೀಯ ಹಾಗೂ ಸಾಮಾಜಿಕ ಜೀವನದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ನಿರೂಪಣೆ “ಆದಾರಿ-ಈದಾರಿ”. ಪೌರಾಣಿಕವಾದ ಸಮುದ್ರ ಮಥನವನ್ನು ಸಾಂಕೇತಿಕ ವಾಗಿಟ್ಟುಕೊಂಡು ನಾಲ್ಕು ಸಂಸಾರಗಳ ಜೀವನ ಮಾರ್ಗವನ್ನು ಚಿತ್ರಿಸುವ ಕೃತಿ “ಅಮೃತ ಮಂಥನ”. ಅ.ನ.ಕೃ. ಅವರ ನೂರನೇ ಕೃತಿ “ಗರುಡುಮಚ್ಚೆ” ಹಾವಾಡಿಗನೊಬ್ಬನ ಬದುಕನ್ನು ಕುರಿತ ಸಾಮಾನ್ಯ ರಚನೆ. ನಮ್ಮ ದೇಶಕ್ಕೆ ಬಂದ ರಾಜಕೀಯ ಸ್ವಾತಂತ್ರ್ಯ ನಮ್ಮ ಧರ್ಮ ಸಂಸ್ಕೃತಿಗಳ ವಿನಾಶಕ್ಕೆ ಹೇಗೆ ಕಾರಣವಾಗಿದೆಯೆಂಬುದನ್ನು ಚಿತ್ರಿಸುವ ಕೃತಿ “ಮನೆಯಲ್ಲಿ ಮಹಾಯುದ್ಧ”.

ವಿಜಯನಗರದ ಸಾಮ್ರಾಜ್ಯದ ಉನ್ನತಿ ಅವನತಿಗಳನ್ನು ಕುರಿತ ಒಂಬತ್ತು ಐತಿಹಾಸಿಕ ಕಾದಂಬರಿಗಳನ್ನೂ ಅ.ನ.ಕೃ. ಬರೆದಿದ್ದಾರೆ. ಶೈಲಿಯ ಮೋಹಕತೆ, ವೇಗಗಾಮಿಯಾದ ಕಥನಕಲೆಯ ರೋಚಕತೆ ಮತ್ತು ಅತಿಯಾದ ಭಾವನಾವಶತೆಗಳಿಂದ ಇವು ಓದಿಸಿಕೊಂಡು ಹೋಗುತ್ತವೆಯೇ ಹೊರತು, ಎತ್ತಿ ಹೇಳುವಂಥ ವಿಶಿಷ್ಟತೆಯೇನೂ ಕಾಣುವುದಿಲ್ಲ. ಈ ಒಂಬತ್ತು ಕೃತಿಗಳಲ್ಲಿ ಒಂದಾದರೂ ಹೆಮ್ಮೆಯಿಂದ ಉದಾಹರಿಸುವಂಥ ಮಹತ್ವದ ಕೃತಿಯಿಲ್ಲದಿರುವುದು ಬೆರಗಿನ ಹಾಗೆಯೇ ಕೊರಗಿನ ಸಂಗತಿಯಾಗಿದೆ. ಪ್ರತಿಭಾ ಸಂಪನ್ನರೂ ಸುಸುಮರ್ಥರೂ ಸಾಹಸಿಗಳೂ ಆದ ಅ.ನ.ಕೃ. ಅವರ ಕಲಾಶಕ್ತಿ ಹಾಗೂ ಬುದ್ದಿಶಕ್ತಿಗಳು ಹೀಗೆ ಪತನೋನ್ಮುಖವಾಗಿ ಗುಂಡಿಗೊಸರುಗಳಲ್ಲಿ ಹರಿದು ನಾತಗಟ್ಟಿ ನಿಷ್ಪ್ರಯೋಜಕ ವಾಗುತ್ತಿರುವುದು ಒಂದು ವಿಷಾದನೀಯ ದುರಂತ. ಒಬ್ಬ ಕಾದಂಬರಿಕಾರ ಬರೆದ ಹಲವಾರು ಕಾದಂಬರಿಗಳಲ್ಲಿ ಎಲ್ಲವೂ ಅತಿಶ್ರೇಷ್ಠವಾಗಿರಬೇಕೆಂದು ನಾನು ನಿರೀಕ್ಷಿಸುವುದಿಲ್ಲ. ಅದು ಸಾಧ್ಯವೂ ಅಲ್ಲ. ಅದರಲ್ಲೂ ಕಾದಂಬರಿಕಾರರ ಕಲೆಗೂ ಉದರಕ್ಕೂ ನಂಟಸ್ಥಿಕೆ ಬೆಳೆದಾಗ, ಎಷ್ಟೋ ವೇಳೆ ಕಲೆ  ಹಿಂದೆ ನಿಲ್ಲುತ್ತದೆ ಎಂಬುದನ್ನು ಒಪ್ಪಿಕೊಂಡಾಗಲೂ ಈ ಕಾಲು ಶತಮಾನದ ಅವಧಿಯ ಕಾದಂಬರಿ ಸೃಷ್ಟಿಯಲ್ಲಿ ಅ.ನ.ಕೃ. ಸಾಧಿಸಿದ್ದೇನು? ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತವೆ.