೧೧

ಈ ಕಾಲುಶತಮಾನದಲ್ಲಿ ಬಹುಮಂದಿ ಲೇಖಕಿಯರು ಕಾದಂಬರಿ ಲೋಕವನ್ನು ಪ್ರವೇಶಿಸಿರುವುದು ಒಂದು ಸಂತಸದ ಸಂಗತಿ. ಇವರಲ್ಲಿ ಅಗ್ರಗಣ್ಯರು ದಿ. ತ್ರಿವೇಣಿ ಅವರು. ಇಪ್ಪತ್ತೆರಡು ಕಾದಂಬರಿಗಳನ್ನು ಅವರು ರಚಿಸಿದ್ದಾರೆ. ಮಧ್ಯಮ ವರ್ಗದ ಕುಟುಂಬ ಗಳ – ಹೆಚ್ಚಾಗಿ ಸತಿಪತಿ ಸಂಬಂಧವಾದ-ಜೀವನದ ಲಲಿತ ಸುಂದರ ಅಭಿವ್ಯಕ್ತಿ ಇವರ ಕೃತಿಗಳಲ್ಲಿ ಪ್ರಧಾನವಾಗಿ ಕಾಣುತ್ತದೆ. ಹೆಣ್ಣಿನ ಮನಸ್ಸಿನ ಬಹುಮುಖಗಳನ್ನು ಸೂಕ್ಷ್ಮ ಸಂವೇದನೆಗಳನ್ನು ಸಹಜವಾದ ಆತ್ಮೀಯತೆಯಿಂದ ಅವರು ಚಿತ್ರಿಸುತ್ತಾರೆ. ಮನಶ್ಯಾಸ್ತ್ರದ ಅಧ್ಯಯನ ಕೆಲವು ಕೃತಿಗಳ ಬೆನ್ನಲುಬಾಗಿದೆ. ಸರಳ ಶೈಲಿ, ಮಧುರ ಸಂಭಾಷಣೆ, ವಸ್ತುನಿಷ್ಠತೆ ಅವರ ಕಾದಂಬರಿಗಳ ಜೀವಾಳ. ಆದರೆ ಆಳವಾದ ವಿಶಾಲವಾದ ಅನುಭವ ಸಂಪತ್ತಾಗಲೀ ಸ್ಪಷ್ಟ ವೈವಿಧ್ಯತೆಯಾಗಲೀ ಕಾಣುವುದಿಲ್ಲ. ವಿಷಮ ದಾಂಪತ್ಯದ ವಿವಿಧ ಸ್ತರಗಳನ್ನು ಮನೋವಿಜ್ಞಾನದ ಬೆಳಕಿನಲ್ಲಿ ರಮ್ಯವಾಗಿ ನಿರೂಪಿಸುವ ಕೃತಿ “ಕೀಲುಗೊಂಬೆ”. ಹೆಣ್ಣಿನ ಮನಸ್ಸಿನಲ್ಲಿ ಮೂಡಿದ ಸಂಶಯ ಕೀಟ ಹೇಗೆ ಬೃಹದಾಕಾರವಾಗಿ ಬೆಳೆದು ಜೀವನವನ್ನು ದಾರುಣವನ್ನಾಗಿ ಮಾಡಿ ದುರಂತಕ್ಕೆ ನೂಕುತ್ತದೆ ಎಂಬುದರ ಸುಂದರ ವಿಶ್ಲೇಷಣೆ “ಶರಪಂಜರ”. ಸಂಪ್ರದಾಯಬದ್ಧ ಕುಟುಂಬದ ರೀತಿ-ನೀತಿಗಳನ್ನು ಹಳೆಯ ಹೊಸ ತಲೆಮಾರುಗಳ ನಡುವೆ ನಡೆದ ಸಹಜ ಘರ್ಷಣೆಯನ್ನು ಸಾರ್ಥಕವಾಗಿ ಸಮರ್ಥವಾಗಿ ಮೂಡಿಸಿರುವ ಕೃತಿ “ಹೆಣ್ಣೆಲೆ ಚಿಗುರಿದಾಗ”. ಅವರ “ಬೆಕ್ಕಿನ ಕಣ್ಣು”, “ಬೆಳ್ಳಿಮೋಡ”, “ದೂರದ ಬೆಟ್ಟ” ಮತ್ತು “ಮುಚ್ಚಿದ ಬಾಗಿಲು” ಹೆಸರಿಸಬೇಕಾದ ಕೃತಿಗಳು.

ಸ್ತ್ರೀ ಸ್ವಾತಂತ್ರ್ಯದ ಸಮಸ್ಯೆಯನ್ನು ವಿವಿಧ ದೃಷ್ಟಿಕೋನಗಳಿಂದ ನಿರೂಪಿಸುವ ಕೃತಿ ಅನುಪಮಾ ನಿರಂಜನ ಅವರ “ನೂಲು ನೆಯ್ದ ಚಿತ್ರ” ತುಂಬ ಚಿತ್ತಸ್ಪರ್ಶಿಯಾಗಿ ಚಿತ್ರಿತ ವಾಗಿದೆ. ವೈದ್ಯಕೀಯ ಕ್ಷೇತ್ರದ ಹೊರಗೊಳಗುಗಳನ್ನು ಸತ್ವಪೂರ್ಣವಾಗಿ ಬಣ್ಣಿಸುವ ಕಲಾತ್ಮಕ ಕೃತಿ, “ಶ್ವೇತಾಂಬರಿ” ಅವರ ಶ್ರೇಷ್ಠ ಕಾದಂಬರಿ. ಅಕ್ಕತಂಗಿಯರ ಜೀವನ ಪ್ರವಾಹವನ್ನು ಕುರಿತ “ಸ್ನೇಹಪಲ್ಲವಿ” ಮತ್ತು “ಹೃದಯವಲ್ಲಭ”ಗಳೂ ಅವರವೇ. ಎಂ.ಕೆ. ಇಂದಿರಾ, ಅಲ್ಪಕಾಲದಲ್ಲಿ ಸಮೃದ್ಧ ಬರೆಹ ಸೃಷ್ಟಿಸಿದ್ದಾರೆ. “ತುಂಗಭದ್ರ”, “ಸದಾನಂದ”, “ಗೆಜ್ಜೆಪೂಜೆ”, “ಕಲಾದರ್ಶಿ” ಮುಂತಾದ ಕಾದಂಬರಿಗಳ ಕರ್ತೃ ಅವರು. ಸರಳ ನಿರರ್ಗಳ ನಿರೂಪಣೆ ಅವರ ಸ್ವತ್ತು. “ಕಲಾದರ್ಶಿ”ಯ ಮಲೆನಾಡಿನ ಪರಿಸರ ರಮ್ಯವಾಗಿದೆ. ವಾಣಿ ಅವರ “ಬಿಡುಗಡೆ”, “ಎರಡು ಕನಸು”, “ಮನೆ ಮಗಳು”, “ಶುಭ ಮಂಗಳ”, “ಕಾವೇರಿಯ ಮಡಿಲಲ್ಲಿ” ಮುಂತಾದುವನ್ನು ಕೇವಲ ಮನರಂಜನೆಗಾಗಿ ಓದಬಹುದು. ವೇಗಶಾಲಿಯಾದ ಬರವಣಿಗೆ ಅವರಿಗೆ ವಶವಾಗಿದೆ. ಉಷಾದೇವಿಯವರು, “ಮೊಗ್ಗಿನಜಡೆ”, “ಧೂಮಕೇತು”, “ಮುರಿದ ಸರಪಳಿ” ಮುಂತಾಗಿ ಸುಮಾರು ಹತ್ತು ಕಾದಂಬರಿಗಳನ್ನು ಬರೆದಿದ್ದಾರೆ. ಮನಸ್ಸಿನ ವಿವಿಧ ವಿಕಾರಗಳನ್ನು ಇವರು ಸಮರ್ಥವಾಗಿ ಚಿತ್ರಿಸಬಲ್ಲರು. ದಿ. ಎಂ.ಕೆ. ಜಯಲಕ್ಷ್ಮಿ ಯವರು “ಸಂಸಾರ ಸಮರ”, “ಬಾಳು ಬೆಳಗಿತು”, “ಕನಸಿನ ಕಡೆ” ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಕುಟುಂಬ ಜೀವನದ ಹಲವು ಮುಖಗಳ ಪರಿಚಯವಿಲ್ಲಿದೆ. ಅವಶ್ಯಕತೆಗಿಂತ ಹೆಚ್ಚು ಪಾತ್ರಗಳನ್ನು ಘಟನೆಗಳನ್ನು ಅಡುಕುವುದರಿಂದ ಕಥೆ ಹೊಲಬುದಪ್ಪುತ್ತದೆ. ಕೆ. ಶಾರದ, ಎನ್. ಶಾರದ, ಎಚ್.ಆರ್. ಇಂದಿರಾ, ಅರ್ಯಾಂಬ ಪಟ್ಟಾಭಿ, ಪಂಕಜ, ಲಲಿತಾಂಬಾ ಚಂದ್ರಶೇಖರ್, ನೀಳಾದೆವಿ ತಪಸ್ವಿನಿ, ಮಲ್ಲಿಕಾ, ಛಾಯಾದೇವಿ ನಂಜಪ್ಪ, ಎಂ.ಸಿ. ಪದ್ಮಾ ಮುಂತಾಗಿ ಇನ್ನೂ ಹಲವು ಲೇಖಕಿಯರು ಕಾದಂಬರಿಗಳನ್ನು ಬರೆದಿದ್ದಾರೆ. ಅಭ್ಯಾಸ ಅನುಭವಗಳ ಕೊರತೆ ಇವುಗಳ ಸರ್ವಸಾಮಾನ್ಯ ದೋಷವಾಗಿದೆ. ಪ್ರಶಾಂತವಾದ ತಿಳಿಯಾದ ಭಾವಗಳಿಗೆ ಸನ್ನಿವೇಶಗಳಿಗೆ ಇವುಗಳಲ್ಲಿ ಬರವಿಲ್ಲ.

೧೨

ವಿ.ಎಂ. ಇನಾಂದಾರ್ ಅವರು “ಶಾಪ”, “ಮೂರಾಬಟ್ಟೆ”, “ಕನಸಿನ ಮನೆ”, “ಈ ಪರಿಯ ಸೊಬಗು”, “ಸ್ವರ್ಗದ ಬಾಗಿಲು”, “ಚಿತ್ರಲೇಖೆ”, “ಊರ್ವಶಿ” ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ಬಂಜೆ ಬಾಳಿನ ಬವಣೆಯನ್ನೂ ಅದರಿಂದ ಮೂಡುವ ಸಮಸ್ಯೆಗಳನ್ನೂ ಸಮರ್ಥವಾಗಿ ಚಿತ್ರಿಸುತ್ತದೆ “ಸ್ವರ್ಗದ ಬಾಗಿಲು”. “ಶಾಪ” ಆನುವಂಶಿಕತೆಯ ದುರಂತವನ್ನು ಹೃತ್ಸ್ಪರ್ಶಿಯಾಗಿ ಹೇಳುತ್ತದೆ. ಅವರ “ಚಿತ್ರಲೇಖ” ಹೆಣ್ಣು-ಗಂಡುಗಳ ಸಂಬಂಧ ಸಮಸ್ಯೆಯನ್ನೂ ಸೂಕ್ಷ್ಮವಾಗಿ ವಿಶ್ಲೇಷಿಸುತ್ತದೆ. “ನಿಸರ್ಗ”, “ರಾಮಣ್ಣ ಮಾಸ್ತರು”, “ಅಶೋಕ ಚಕ್ರ”, “ಶ್ರೇಯಾಂಸ”, “ರಾಷ್ಟ್ರ ಪುರುಷ”, “ಹದಗೆಟ್ಟ ಹಳ್ಳಿ” ಮುಂತಾದ ಹಲವು ಕಾದಂಬರಿಗಳ ಕರ್ತೃ ಮಿರ್ಜಿ ಅಣ್ಣಾರಾಯರು. ನಿರುದ್ವಿಗ್ನವಾಗಿ ಕಥೆ ಹೇಳುವ ಕಲೆ ಅವರಿಗೆ ಸಾಧಿಸಿದೆ. “ನಿಸರ್ಗ” ಅವರ ಕಲಾಪೂರ್ಣ ಕಾದಂಬರಿ. ಬರಗಾಲದ ಬವಣಿಯನ್ನು ಪ್ರಾದೇಶಿಕತೆಯ ಸಹಜ ಹಿನ್ನೆಲೆಯೊಡನೆ ಮುಗಳಿಯವರು “ಅನ್ನ”ದಲ್ಲಿ ಕರುಣಪೂರ್ಣವಾಗಿ ಚಿತ್ರಿಸಿದ್ದಾರೆ. ಎಂ.ವಿ. ಸೀತಾರಾಮಯ್ಯನವರ, “ಜೀವನದ ಜೊತೆಗಾತಿ”, “ತಾಯಬಯಕೆ”, “ಕುಂಕುಮ ಭಾಗ್ಯ”, “ಮಾವನ ಮಗಳು” ಕಾದಂಬರಿಗಳು ಒಂದಲ್ಲ ಒಂದು ಬಗೆಯಲ್ಲಿ ಗಮನಾರ್ಹವಾಗಿವೆ. ಸರಳ ಸುಂದರವಾದ ರಸವತ್ತಾದ ಬರವಣಿಗೆ ಅವರದು. “ಓದಿದ ಹುಡುಗಿ”, “ಅವಳ ತಂಗಿ”, “ನಾಲ್ಕನೆಯ ಮನೆ”, “ಸತ್ಯಭಾಮ” ಕಾದಂಬರಿಗಳ ರಚಕರು ನರೇಂದ್ರಬಾಬುರವರು. “ನಾಲ್ಕನೆಯ ಮನೆ”ಯ ದುರಂತ ಚಿತ್ರ ತುಂಬ ಪರಿಣಾಮಕಾರಿಯಾಗಿದೆ. ಗೃಹಜೀವನದ ಸೂಕ್ಷ್ಮಚಿತ್ರ “ಸತ್ಯಭಾಮ”. ಹೇಮಂತರ “ಭಗ್ನಮಂದಿರ” ಕಾಲೇಜು ಜೀವನದ ಹಿನ್ನೆಲೆಯುಳ್ಳ ಕೃತಿ. ಮ.ನ. ಮೂರ್ತಿ ಅವರು ಟೀಪೂವಿನ ಜೀವನದ ಸಮಗ್ರ ಇತಿಹಾಸವನ್ನು “ಸಂಧಾನ”. “ಸಂವಿಧಾನ” ಮತ್ತು “ಸಂಹಾರ” ಎಂಬ ಮೂರು ಕೃತಿಗಳಲ್ಲಿ ಚಿತ್ರಿಸಿದ್ದಾರೆ. “ನಾಟ್ಯರಾಣಿ ಶಾಂತಲಾ” ಅವರ ಈಚಿನ ಐತಿಹಾಸಿಕ ಬರೆಹ. ಸಂಗೀತ ಕಲಾವಿದನೊಬ್ಬನ ಬಾಳನ್ನು ಕುರಿತದ್ದು – “ಗಾಯನ ಚಕ್ರವರ್ತಿ”, ಅವರ “ಚಿತ್ರನಾಯಕಿ”, “ಮೀನಾ” ಮೆಚ್ಚಬಹುದಾದ ಕೃತಿಗಳು. ಮಧ್ಯಮ ವರ್ಗದ ಸಮಾಜ ಜೀವನದ ಆಗುಹೋಗುಗಳನ್ನು “ವಾತ್ಯಲ್ಯಪಥ”, “ಹೇಮಂತಗಾನ”, “ಅನುರಕ್ತೆ” ಕೃತಿಗಳಲ್ಲಿ ವ್ಯಾಸರಾಯ ಬಲ್ಲಾಳರು ಲಲಿತವಾಗಿ ಸುಂದರವಾಗಿ ನಿರೂಪಿಸಿದ್ದಾರೆ. ನವಭಾರತದ ಸರ್ವತೋಮುಖ ಬೆಳವಣಿಗೆಗಾಗಿ ಟೊಂಕಕಟ್ಟಿ ನಿಂತ ಆದರ್ಶವಾದಿ ಯುವಕನೊಬ್ಬನ ಬಾಳಕಥೆ ಅಶ್ವತ್ಥರ “ಹಂಬಲ” ಎಂಬ ದೊಡ್ಡ ಕಾದಂಬರಿಯ ವಸ್ತು. ಘಟನಾವಳಿಗಳ ಚಿತ್ರಣ, ಸನ್ನಿವೇಶ ಸೃಷ್ಟಿ ತುಂಬ ಶಕ್ತಿವತ್ತಾಗಿವೆ. ಎನ್ಕೆಯವರು “ಸಾವಿನ ಉಡಿಯಲ್ಲಿ”, “ಎರಡನೆಯ ಸಂಬಂಧ”, “ಗೌರೀಶಂಕರ” ಕಾದಂಬರಿಗಳನ್ನು ಬರೆದಿದ್ದಾರೆ. “ಗೌರಿಶಂಕರ” ಅರವಿಂದರ ಆಧ್ಯಾತ್ಮವನ್ನು ಹಿನ್ನೆಲೆಯುಳ್ಳುದಾದರೆ, “ಸಾವಿನ ಉಡಿಯಲ್ಲಿ” ದಾಂಪತ್ಯ ಜೀವನದ ಸಿಹಿಕಹಿಗಳನ್ನು ಸುರಸವಾಗಿ ಪ್ರತಿಬಿಂಬಿಸುತ್ತದೆ. ಭಾರತೀಸುತರು “ಸಂತಾನ ಭಿಕ್ಷೆ”, “ಕೊಳಲಿನ ಕರೆ”, “ಹುಲಿಯಬೋನು”, “ಚಿಗುರುಹಾಸಿಗೆ”, “ಎಡಕಲ್ಲು ಗುಡ್ಡದ ಮೇಲೆ”, “ವೈದ್ಯನ ಮಗಳು” ಮುಂತಾದ ಕಾದಂಬರಿಗಳ ಕರ್ತೃಗಳು. ಬಂಜೆತನದಲ್ಲಿ ಬೆಂದು ಬೇರೊಬ್ಬನಿಂದ ಮಗುವನ್ನು ಪಡೆದ ಕತೆ “ಸಂತಾನ ಭಿಕ್ಷೆ”. ಪಣಿಯರ ಜೀವನದ ಹಿನ್ನೆಲೆಯಲ್ಲಿ ಶ್ರೀಮಂತ ಕೂಲಿಕಾರರ ಸಮಸ್ಯೆಯನ್ನು ವಿಶ್ಲೇಷಿಸುವ ಕೃತಿ “ಕೊಳಲಿನ ಕರೆ”. “ಹುಲಿಯಬೋನು” ಮತ್ತು “ಚಿಗುರು ಹಾಸಿಗೆ”ಗಳೂ ಗಡಿನಾಡ ಪರಿಶಿಷ್ಟ ವರ್ಗದ ಜೀವನ ಚಿತ್ರಗಳು. ವೈದ್ಯನ ಮಗಳು ಐತಿಹಾಸಿಕ. ಉತ್ತಮ ಚಿತ್ರಣ ಶಕ್ತಿ ಹಾಗೂ ಅನುಭವ ಇರುವ ಭಾರತೀಸುತರು ಇನ್ನು ಹೆಚ್ಚು ಸತ್ವಪೂರ್ಣ ಕೃತಿಗಳನ್ನು ನೀಡಬೇಕು. ಎಸ್. ಅನಂತನಾರಾಯಣ ಅವರು ಹಲವು ಕಾದಂಬರಿಗಳ ತಂದೆಯಾಗಿದ್ದರೂ “ಅತ್ತಿಗೆ” ಅವರ ಉತ್ತಮ ಕೃತಿ. ಶ್ರೀನಿವಾಸ ಉಡುಪ ಮತ್ತು ಸೂರ್ಯನಾರಾಯಣ ಚಡಗ ಅವರು ಹೆಚ್ಚು ಸಂಖ್ಯೆಯ ಕಾದಂಬರಿಗಳನ್ನು ಬರೆದ ಯುವ ಲೇಖಕರಾಗಿದ್ದಾರೆ. ಪುರಾಣಿಕರಂತೆ ಮಧ್ಯಮ ವರ್ಗದ ಕುಟುಂಬದ ಹೆಣ್ಣಿನ ಬಾಳಿನ ಶಿಥಿಲ ಚಿತ್ರಗಳಲ್ಲೇ ಅವರ ಪ್ರತಿಭೆ ವ್ಯಯವಾಗುತ್ತಿದೆ.

ಕಡಿದಾಳ್ ಮಂಜಪ್ಪನವರು “ಪಂಜರವಳ್ಳಿಯ ಪಂಜು” ಮತ್ತು “ನಾಳೆಯ ನೆಳಲು” ಎಂಬೆರಡು ಕಾದಂಬರಿಗಳನ್ನು ಬರೆದಿದ್ದಾರೆ. ಎರಡೂ ರಾಜಕೀಯಕ್ಕೆ ಸಂಬಂಧಿಸಿದವುಗಳೇ. ಮೊದಲನೆಯದು ರಾಷ್ಟ್ರದ ಸೇವೆಗೆ ಕಂಕಣಕಟ್ಟಿ ನಿಂತ ಆದರ್ಶ ಯುವಕನೊಬ್ಬನ ಸಾಹಸ ಚಿತ್ರವಾದರೆ, ಎರಡನೆಯದು ನಾಳೆ ರೂಪಗೊಳ್ಳಬಹುದಾದ ರಾಷ್ಟ್ರದ ಕನಸನ್ನು ಕುರಿತದ್ದು. ಎರಡರಲ್ಲೂ ದಟ್ಟವಾದ ಅನುಭವದ ಹಾಸಿದೆಯಾದರೂ ಕಲೆಗಾರಿಕೆಯಿಲ್ಲವಾಗಿದೆ. ಕೋ ಚೆನ್ನಬಸಪ್ಪನವರು “ಹಿಂತಿರುಗಿ ಬರಲಿಲ್ಲ”, “ಪೂರ್ಣವತಿ” ಕಾದಂಬರಿಗಳ ಕರ್ತೃ. ಶರಣ ಸಾಹಿತ್ಯದ ಪ್ರಾಮಾಣಿಕವೂ ವಿಫುಲವೂ ಆದ ಜ್ಞಾನಾನುಭವಗಳಿಂದ ಮೂಡಿಬಂದಿವೆ, ಎಚ್. ತಿಪ್ಪೇರುದ್ರಸ್ವಾಮಿಯವರ “ಪರಿಪೂರ್ಣದೆಡೆಗೆ”. “ಕದಳಿಯ ಕರ್ಪೂರ” ಮತ್ತು “ಜ್ಯೋತಿ ಬೆಳಗುತಿದೆ” ಕೃತಿಗಳು. ಇವು ಕ್ರಮವಾಗಿ ಪ್ರಭುದೇವ, ಮಹಾದೇವಿಯಕ್ಕ ಮತ್ತು ನಿಜ ಗುಣಶಿವಯೋಗಿಗಳ ಬದುಕನ್ನು ಕುರಿತವುಗಳಾಗಿವೆ. ಇವುಗಳ ಬಗ್ಗೆ ತಾತ್ವಿಕ ಭಿನ್ನಾಭಿಪ್ರಾಯಗಳಿರಬಹುದಾದರೂ ಇತಿಹಾಸದಿಂದ ತಂದೆ ಜೀವಂತ ಪರಿಸರಗಳ ಸುಂದರ ಸೃಷ್ಟಿಯಿಂದ, ಕಾವ್ಯಮಯ ಶೈಲಿಯಿಂದ ಇವು ರಮ್ಯವಾಗಿವೆ. ಅವರ “ಸತ್ಯಾಶ್ರಯ ಸಾಮ್ರಾಜ್ಯ ಪುಲಿಕೇಶಿಯನ್ನು ಕುರಿತದ್ದು. ದೇಜಗೌ ಅವರ “ಕಡುಗಲಿ ಕುಮಾರರಾಮ” ಕನ್ನಡ ವೀರನೊಬ್ಬನನ್ನು ಕುರಿತ ಪ್ರಭಾವಕಾರೀ ಚಿತ್ರಣ. “ಅತ್ತಿಮಬ್ಬೆ”, “ಚೇಳಿನಿ”, “ರತ್ನಾಕರ” ಜೈನ ಧರ್ಮದ ಆವರಣವನ್ನು ಪರಿಚಯಿಸುತ್ತವೆ. ಹಂಪನಾ ಅವರ “ನಾಗಶ್ರೀ” ಈ ದೃಷ್ಟಿಯಿಂದ ಒಂದು ಉತ್ತಮ ಕೃತಿ. ದೇವೇಂದ್ರಕುಮಾರ ಹಕಾರಿಯವರ “ಚೆಲ್ವಕೋಗಿಲೆ” ನಿಜಗುಣರನ್ನು ಕುರಿತ ಕೃತಿ. ಅವರ ಮತ್ತೊಂದು ಕಾದಂಬರಿ “ಕೂಗುತಿದೆ ಕಲ್ಲು”, “ಅಜಂತ ಮತ್ತು ಎಲ್ಲೋರಗಳ ಕಲಾಸ್ಫೂರ್ತಿಯಿಂದ ಮೂಡಿದ ಕಾಲ್ಪನಿಕ ಕೃತಿ. ಉಳ್ಳಾಲದ ರಾಣಿ ಅಬ್ಬಕ್ಕನು ವೀರಜೀವನವನ್ನು ಚಿತ್ರಿಸುವ ರಾ.ಮೊ. ವಿಶ್ವಾಮಿತ್ರರ, “ಆಭಯಾರಾಣಿ” ನೆನಪಿಡಬೇಕಾದ ಕೃತಿ. “ಹೊಯ್ಸಳ ವೀರಬಲ್ಲಾಳ”ನನ್ನು ಕುರಿತು ಜಿ.ಎ. ರೆಡ್ಡಿಯವರೂ ಭಗತ್‌ಸಿಂಗನನ್ನು ಕುರಿತು ಪ.ಸು. ಭಟ್ಟ ಅವರೂ ಕಾದಂಬರಿ ರಚನೆ ಮಾಡಿದ್ದಾರೆ.

ನಾಗರಿಕತೆಯ ನಂಜುಸೋಂಕದ ಗಿರಿಜನವರ್ಗದ ಮುಗ್ಧ ಮಧುರವೂ ದುಃಖದಾಯಕನು ಆದ ಬದುಕನ್ನು ಸಾಕಷ್ಟು ಸಮರ್ಥವಾಗಿ ಪರಿಸರ ಜೀವಂತಿಕೆಯೊಡನೆ ಕುಲಕರ್ಣಿ ಬಿಂದುಮಾಧವರು ಚಿತ್ರಿಸಿಕೊಟ್ಟಿದ್ದಾರೆ, ತಮ್ಮ “ಬಲಿಪೀಠ” ಮತ್ತು “ಬನವಾಸಿ”ಗಳಲ್ಲಿ ಹಿಂದೂ-ಮುಸ್ಲಿಂ ಬಾಂಧವ್ಯದ ಹಿನ್ನೆಲೆಯುಳ್ಳ ಪ್ರಣಯಕಥೆ ಅಕ್ಬರ್ ಆಲಿಯವನ “ನಿರೀಕ್ಷೆ” ಯಲ್ಲಿದೆ. ಸೂರ್ಯನಾಥ ಕಾಮತರ “ಥೇಮ್ಸ್‌ನಿಂದ ಗಂಗೆಗೆ” ವಿದೇಶದಿಂದ ಭಾರತ ಬಂದ ಹೆಣ್ಣೊಬ್ಬಳು ಇಲ್ಲಿನ ರೀತಿನೀತಿಗಳನ್ನು ಮೈಗೂಡಿಸಿಕೊಂಡ ಸ್ವಾರಸ್ಯವಾದ ಕಥೆ. ವಸ್ತು ಹೊಸದು, ಕಲೆಗಾರಿಕೆ ಕಡಿಮೆ. ತಾಯಿಯ ಅತಿಮುದ್ದಿನಿಂದ ಹಾಳಾದ ಮಕ್ಕಳಿಬ್ಬರ ಉತ್ತಮ ರಸಪೂರ್ಣ ಕಾದಂಬರಿ ಎಂ.ಎಸ್. ಅನಂತರಾವ್ ಅವರ “ಪಾರ್ವತಿಯ ಭಾಗ್ಯ”. ಇಲ್ಲಿನ ಸಂಕೀರ್ಣತೆಯ ಸೂಕ್ಷ್ಮ ಚಿತ್ರಣ ತುಂಬ ಪರಿಣಾಮಕಾರಿಯಾಗಿದೆ. ವಿಶುಕಮಾರ್ ಅವರು “ಭಗವಂತನ ಆತ್ಮಕಥೆ”, “ಗಗನಗಾಮಿಗಳು” ಮತ್ತು “ನೆತ್ತರಗಾನ”ಗಳನ್ನು ಬರೆದಿದ್ದಾರೆ. ಎರಡನೆಯದು ವೈಜ್ಞಾನಿಕವಾದ ವಸ್ತುವಿನ ದೃಷ್ಟಿಯಿಂದ ಗಮನಾರ್ಹ. ಕೊನೆಯದು ಯಕ್ಷಗಾನ ಕಲಾವಿದನ ಬಾಳನ್ನು ಚಿತ್ರಿಸುತ್ತದೆ. “ಹೇಮಂತ” ಮತ್ತು “ಪಥಭ್ರಾಂತ” ಪ್ರಿಯದರ್ಶಿಯವರ ಲೇಖನದ ಫಲಗಳು. ಬೃಹತ್ ಗಾತ್ರದ “ಪಥಭ್ರಾಂತ” ಚಿತ್ರಕಲಾವಿದನೊಬ್ಬನ ವರ್ಣಮಯ ಜೀವಿತ ಕಥೆ. ಪ್ರಮಾಣ ಪರಿಜ್ಞಾನ ಮತ್ತು ಹೆಚ್ಚಿನ ಸಂಯಮಗಳಿದ್ದರೆ ಇದೊಂದು ಉತ್ಕೃಷ್ಟ ಕಾದಂಬರಿಯಾಗಬಹುದಾಗಿತ್ತು. ಜಿ. ವೆಂಕಟಯ್ಯ ನವರು “ನೊಂದಜೀವ”, “ಮುರಿದ ಮದುವೆ”, “ಚಂದನದ ಕೊರಡು” ಮುಂತಾದ ಕಾದಂಬರಿಗಳನ್ನು ಬರೆದಿದ್ದಾರೆ. “ಚಂದನದ  ಕೊರಡು” ಆದರ್ಶ ವೈದ್ಯನೊಬ್ಬನನ್ನು ಕುರಿತ ಸುರಸಬರವಣಿಗೆ. ನಾ. ರಾಜಣ್ಣ ಅವರು “ನಾ ಸಾಯಲಾರೆ”, “ವಜ್ರದುಂಗುರ”, “ಮುಗಿಲಮಾಲೆ”ಗಳನ್ನು ರಚಿಸಿದ್ದಾರೆ. ಮೊದಲೆರಡು ಕೌಟುಂಬಿಕ ಚಿತ್ರಗಳು; ಕೊನೆಯದು ಕಲಾವಿದನೊಬ್ಬನ ಜೀವನಚಿತ್ರಣ. ಶೇಷನಾರಾಯಣ ಅವರು “ಮೂಲಾನಕ್ಷತ್ರ”, “ಕಪಿಲೆ”, “ಪದ್ಮರಂಗು” ಮತ್ತು “ನೊರೆ” ಎಂಬ ನಾಲ್ಕು ಕಾದಂಬರಿಗಳನ್ನು ನಿರ್ಮಿಸಿದ್ದಾರೆ. ಪ್ರಾಣಿಜೀವನವನ್ನು ತುಂಬ ಸ್ವಾಭಾವಿಕವಾಗಿ ಕೃತಿಗಳಲ್ಲಿ ತರಬಲ್ಲ ಶಕ್ತಿ ಅವರಿಗಿದೆ. “ಕಪಿಲೆ”ಯಲ್ಲಿ ಹಸು, “ಪದ್ಮರಂಗು”ವಿನಲ್ಲಿ ಹಾವು ಪ್ರಧಾನಪಾತ್ರಗಳು. ಹಳ್ಳಿಯ ರೈತನ ದುಃಖದಾಯಕ ಜೀವನದ ದಾರುಣ ಚಿತ್ರ “ನೊರೆ”. ಎಚ್ಚೆಸ್ಕೆಯವರು “ಬಯಕೆಯ ಬೆಲೆ”, “ಮುಕ್ತಿಮಾರ್ಗ”, “ಕುರುಕ್ಷೇತ್ರ”ಗಳ ಕರ್ತೃ. ಮೊನಚಾದ ಶೈಲಿ, ರಸವತ್ತಾದ ನಿರೂಪಣೆ ಅವರ ಕೃತಿಗಳ ವೈಶಿಷ್ಟ್ಯ. “ರಾಜಬಲಿ”, “ತಣ್ಣಗಿನ ಬೆಂಕಿ”, “ಉತ್ತರಾಯಣ” ಮುಂತಾದ ಪೌರಾಣಿಕ ಕಾದಂಬರಿಗಳನ್ನು ರಚಿಸಿದ್ದಾರೆ ಸತ್ಯಕಾಮ ಅವರು. ಬಿ. ಮಲ್ಲರಾಜ ಅರಸ್  ಅವರ “ಗ್ರಾಮಸೇವಕ ರಾಮಚಂದ್ರ”, “ರಾಮನಹಳ್ಳಿಯ ಹೊಸಬಾಳು”, “ಗ್ರಾಮಸುಧಾರಣ ಪ್ರಚಾರದ ನೀರಸ ಕೃತಿಗಳು. ಕೃ.ನ. ಮೂರ್ತಿಯವರು “ಹೂವಿನ ಸೆರೆ”, “ಗ್ರಾಮಸೇವಕ”, “ಸರ್ವೋದಯ” ಮುಂತಾದ ಕೃತಿಗಳನ್ನು ಬರೆದಿದ್ದಾರೆ. ವಸ್ತುದೃಷ್ಟಿಗಳಲ್ಲಿ ಹೊಸತನ ವಿದ್ದರೂ ನಿರೂಪಣೆ ಸವಕಲು.

ಗೊರೂರನ್ನು ಬಿಟ್ಟರೆ ಈ ಅವಧಿಯಲ್ಲಿ ಚೇತೋಹಾರಿಯಾದ ಹಾಸ್ಯವನ್ನು ತಮ್ಮ ಕಾದಂಬರಿಗಳಲ್ಲಿ ತಂದವರು ಇಲ್ಲವೆನ್ನುವಷ್ಟು ಕಡಿಮೆ. ಚತುರಮತಿಗಳಾದ “ಬೀಚಿ”ಯವರು ತಮ್ಮ “ದಾಸಕೂಟ”, “ಸತೀಸೂಳೆ”, “ಸರಸ್ವತೀ ಸಂಹಾರ”, “ಖಾದಿಸೀರೆ” ಮುಂತಾದ ಕೃತಿಗಳಲ್ಲಿ ಹಾಸ್ಯವನ್ನು ತರಲು ಯತ್ನಿಸಿದ್ದರೂ ಅದು ಕಲಾತ್ಮಕವಾಗಿ ಅಭಿವ್ಯಕ್ತಿಗೊಳ್ಳದೆ ವಿಕೃತಹಾಸ್ಯವಾಗಿ ಚುಚ್ಚು ಕಾಯಕ ಮಾಡುತ್ತದೆ. ನಾಡಿಗೇರ್ ಕೃಷ್ಣರಾಯರ ಹೆಸರನ್ನು ಈ ಸಂದರ್ಭದಲ್ಲಿ ಹೇಳದಿರುವುದು ಒಳ್ಳೆಯದು. ದಾಶರಥಿದೀಕ್ಷಿತರ “ಗಂಡಾಗಿ ಕಾಡಿದ್ದ ಗುಂಡ” ಈ ದೃಷ್ಟಿಯಿಂದ ಒಂದು ಸ್ಮರಣೀಯ ಕೃತಿ. ನಾಟಕಕಾರ ಎ.ಎಸ್. ಮೂರ್ತಿ ಅವರು ಕಾದಂಬರಿ ರಂಗಕ್ಕೆ ಕಾಲಿಟ್ಟು ಹಾಸ್ಯಭರಿತವಾದ “ನಾನೂ ನೀನೂ ಜೋಡಿ”, “ಕಳ್ಳರ ಸಂತೆ”, ಕೃತಿಗಳನ್ನು ರಚಿಸಿದ್ದಾರೆ. ಹಳೆಯ ತಲೆಮಾರಿನ ಶ್ರೇಷ್ಠ ಹಾಸ್ಯ ಬರಹಗಾರಲ್ಲೊಬ್ಬರಾದ ಕಸ್ತೂರಿಯವರು “ರಂಗನಾಯಕಿ”ಯನ್ನು ಕರೆತಂದಿದ್ದಾರಾದರೂ ಅದರಲ್ಲಿ ಹಿಂದಿನ ಹೊಳಪು ಸತ್ವ ಇಲ್ಲ.

ಬಿ.ಜಿ. ಸತ್ಯಮೂರ್ತಿ, ದಯಾನಂದ ತೊರ್ಕೆ, ಎಂ. ಶಿವಾಜಿರಾವ್, ರಘುಸುತ, ವಿ.ಜಿ. ಕೃಷ್ಣಮೂರ್ತಿ, ಮಾ.ರಾ. ಶೇಷಗಿರಿ, ಗಿರಿಜನಂದನ, ರಮಾಕಾಂತ, ಜ್ಞಾನಾನಂದ ಮುಂತಾದ ತರುಣರು ಕಾದಂಬರಿಯ ವ್ಯವಸಾಯಕ್ಕೆ ಕೈ ಇಟ್ಟಿದ್ದಾರೆ. ಅನುಭವ ಅಭ್ಯಾಸಗಳನ್ನು ಬೆಳೆಸಿಕೊಂಡು ಕಲಾದೃಷ್ಟಿಯ್ನು ಮೊನೆಗೊಳಿಸಿಕೊಂಡರೆ ಅವರು ಉತ್ತಮ ಕೃತಿ ನಿರ್ಮಾಣ ಮಾಡುವುದು ಸಾಧ್ಯ.

೧೩

ಇತ್ತೀಚಿನ ವರ್ಷಗಳಲ್ಲಿ ಬೆಳಕಿಗೆ ಬಂದು ತುಂಬ ಭರವಸೆಯನ್ನು ಮೂಡಿಸುತ್ತಿರುವ ಮತ್ತೊಂದು ಪ್ರಮುಖ ಹೆಸರು ಎಸ್.ಎಲ್. ಭೈರಪ್ಪ ಅವರದು. “ಭೀಮಕಾಯ”ದಿಂದ ಹಿಡಿದು “ತಬ್ಬಲಿಯು ನೀನಾದೆ ಮಗನೆ”ವರೆಗಿನ ಕಾದಂಬರಿಗಳನ್ನು ನೋಡಿದಾಗ ಕೃತಿಯಿಂದ ಕೃತಿಗೆ ಅವರ ಲೇಖನ ಕಲೆ ಸತ್ವಶಾಲಿಯಾಗಿ ಬೆಳೆಯುತ್ತಾ ಹೋಗುತ್ತಿರುವುದು ಕಾಣಿಸುತ್ತದೆ. ಕಾರಂತರಂತೆ ನಿಗೂಢವೂ, ಆಳವೂ, ಸಂಕೀರ್ಣವೂ, ಸುವಿಶಾಲವೂ ಆದ ಜೀವನವೃಕ್ಷದ ಬೇರುಗಳನ್ನು ಅದರೆಲ್ಲಾ ಶಕ್ತಿಯೊಡನೆ ಭದ್ರವಾಗಿ ಅಪ್ಪಿ ಹಿಡಿದಿರುವುದರಿಂದ ಅವರ ಕೃತಿಗಳ ಓದು ನಿರರ್ಥಕವಾಗುವುದಿಲ್ಲ. ವಸ್ತುವಿನ ಘನತ್ವ, ನಿರೂಪಣೆಯ ಸೊಗಸು, ಸಬಲವಾದ ವೈಚಾರಿಕತೆ ಅವರ ಕಾದಂಬರಿಯ ಲಕ್ಷಣಗಳು. ನೆಲಗಂಪನಿಂದ ಕಳಕಳಿಸುವ ಪಾತ್ರಾನುಸಾರಿಯಾದ ಸಜೀವ ಸಂಭಾಷಣೆ ಅವರ ಕಾದಂಬರಿಗಳ ಮತ್ತೊಂದು ಮೆಚ್ಚಬೇಕಾದ ಗುಣ. ಅಂಧಾಭಿಮಾನ ಮೂಲವಲ್ಲದ ಭಾರತೀಯ ಧರ್ಮ ಮತ್ತು ಸಂಸ್ಕೃತಿಗಳ ಬಗೆಗಿನ ಗಾಢವೂ ಶ್ರದ್ಧಾನಿತ್ಯವೂ ಆದ ಬುದ್ದಿಪೂರ್ವಕ ಅಭ್ಯಾಸ ಅವರ ಕಾದಂಬರಿ ಕಲೆಗೆ ಒಂದು ವಿಶಿಷ್ಟತೆಯನ್ನು ತಂದುಕೊಟ್ಟಿದೆ. ಅವರ ಪ್ರಾಥಮಿಕ ಕೃತಿ “ಭೀಮಕಾಯ” ಗರಡಿಯಾಳುಗಳ ಜೀವನವನ್ನು ಕುರಿತದ್ದು. ವಸ್ತು ಹೊಸದು, ನಿರೂಪಣೆ ನೀರಸ. ಸ್ವಾತಂತ್ರ್ಯದತ್ತವಾದ ಚುನಾವಣೆಗಳು, ಒಲಿದು ಒಂದಾಗಿದ್ದ ಮುಗ್ಧ ಹೃದಯದ ಹಳ್ಳಿಗರ ಮೇಲೆ ಬೀರಿದ ದುಷ್ಪರಿಣಾಮಗಳ ವಾಸ್ತವಿಕ ಚಿತ್ರ “ಮತದಾನ”. ಭಾಷೆಯಲ್ಲಿ ಹಳ್ಳಿಯ ಸಹಜತೆಯ ಸೊಗಡಿದೆ, ಶಕ್ತಿಯಿದೆ. ಆದರೆ ಕಾದಂಬರಿಗೆ ಮೂಲವಾದ ಸಂವೇದನೆ ತೀರ ಆಳವಾದದ್ದಲ್ಲ ಎನ್ನಿಸುತ್ತದೆ. ಪ್ರಾಚೀನ ಕಾಲದಿಂದಲೂ ಹಲವಾರು ಕಾರಣಗಳಿಂದ ತಂಡತಂಡವಾಗಿ ಭಾರತಕ್ಕೆ ಬಂದ ಭಿನ್ನ ಭಿನ್ನ ಸಂಸ್ಕೃತಿಯ ಜನರು ಹಿಂದೂ ಸಂಸ್ಕೃತಿಯ ಉದಾರ ಗರ್ಭದಲ್ಲಿ ಲೀನವಾದರು. ಆದರೆ ನಮ್ಮ ಸಂಸ್ಕೃತಿಗೆ ಶರಣಾಗದೆ ಪ್ರತ್ಯೇಕ ದ್ವೀಪವಾಗಿಯೇ ಇರುವ ಕ್ರಿಸ್ತಧರ್ಮ ತನ್ನ ಬೇರುಗಳನ್ನು ಮುಗ್ಧ ಜನಗಳ ಹೃದಯದಲ್ಲಿ ಬಿಡಲು ತೊಡಗಿದಾಗ ಉಂಟಾಗುವ ಸಾಂಸ್ಕೃತಿಕ ಘರ್ಷಣೆಯನ್ನು ತುಂಬ ಸಾರ್ಥಕವಾಗಿ ಶಕ್ತಿವತ್ತಾಗಿ ಸ್ವಾಭಾವಿಕ ವಾಗಿ ಚಿತ್ರಿಸಿದ್ದಾರೆ “ಧರ್ಮಶ್ರೀ”ಯಲ್ಲಿ. ನೂತನ ಸಮಸ್ಯೆಯನ್ನೆತ್ತಿಕೊಂಡು ಬರೆದ ಈ ಕೃತಿ ನಿಜಕ್ಕೂ ವಿಶಿಷ್ಟವಾಗಿದೆ. ಪ್ರೇಮ ಜಗತ್ತಿನ ಮೂರು ಪ್ರಧಾನ ಮುಖಗಳನ್ನು ತುಂಬ ಸದೃಢವಾಗಿ ಜೀವಂತವಾಗಿ ಅರ್ಥಪೂರ್ಣವಾಗಿ ಶಿಲ್ಪಿಸಿರುವ ಕೃತಿ “ದೂರ ಸರಿದರು”. ತುಸು ಎಚ್ಚರದಪ್ಪಿದ್ದರೆ ಹಳಸಲಾಗಬಹುದಾಗಿದ್ದ ವಸ್ತು ಈ ಲೇಖನಿಯಲ್ಲಿ ಸ್ಮರಣೀಯ ರೂಪಧಾರಣೆ ಮಾಡಿದೆ. ಶ್ರದ್ಧಾನ್ವಿತವೂ ಸುಸಂಸ್ಕೃತವೂ ಸೂಕ್ಷ್ಮವೂ ವಿಚಾರಶೀಲವೂ ಆದ ಜೀವನದೃಷ್ಟಿ ಮತ್ತು ಅನುಭವ ತೀವ್ರತೆ ಇಲ್ಲಿ ಹರಡಿದೆ. ಕೃತಿಯನ್ನು ಓದಿ ಮುಗಿಸಿದಾಗ ಪಾಶ್ಚಾತ್ಯ ದುರಂತ ನಾಟಕವೊಂದನ್ನು ನೋಡಿದ ಅನುಭವ ಮನಸ್ಸನ್ನು ತುಂಬುತ್ತದೆ. ಅಧಿಕ ಸಂಖ್ಯೆಯ ಘಟನೆಗಳು ಮತ್ತು ಅಧಿಕ ಸಂಖ್ಯೆಯ ಪಾತ್ರಗಳಿಂದ ತುಂಬಿ ಹೆಜ್ಜೆ ಹೆಜ್ಜೆಗೂ ಕುತೂಹಲಕರವಾಗಿ ಸಮರ್ಥವಾಗಿ ಬೆಳೆಯುತ್ತಾ ಹೋಗುವ “ವಂಶವೃಕ್ಷ” ಕನ್ನಡದ ಶ್ರೇಷ್ಠ ಕಾದಂಬರಿಗಳ ಸಾಲಿನಲ್ಲಿ ನಿಸ್ಸಂದೇಹವಾಗಿ ಗಣನೀಯ ಸ್ಥಾನ ಪಡೆದು ಕೊಳ್ಳುತ್ತದೆ. ಪಾಪ-ಪುಣ್ಯ, ಸ್ವರ್ಗ-ನರಕ, ಸನಾತನ-ವಿನೂತನ, ಶ್ರದ್ಧೆ-ಸಂಶಯ, ಪ್ರೇಮ-ಕಾಮ, ಆಚಾರ-ವಿಚಾರ ಮುಂತಾದ ಬದುಕಿನ ಮೂಲದ್ವಂದ್ವಗಳ ವಿಶಾಲ ಹಾಸುಳ್ಳ ಈ ಕೃತಿ ಸಹಜ ರಮ್ಯವಾಗಿ ಪ್ರಮಾಣಬದ್ಧವಾಗಿ ಅರಳುತ್ತಾ ಅತ್ಯಂತ ಉಚಿತವೂ ಕಲಾ ಪೂರ್ಣವೂ ಆದ ಮುಕ್ತಾಯವನ್ನು ಪಡೆಯುತ್ತದೆ. ತುಸು ಹದ ತಪ್ಪಿದರೂ ಅಸಹಜವೂ ಕೃತಕವೂ ಆಗಬಹುದಾಗಿದ್ದ ಪಾತ್ರಗಳನ್ನು ಕಡೆಯುವಲ್ಲಿ ಲೇಖಕರು ತುಂಬು ಕೌಶಲವನ್ನು ವ್ಯಕ್ತಪಡಿಸಿದ್ದಾರೆ. ಜನ್ಮಾಂತರ, ಆತ್ಮದ ಅಮರತ್ವ, ದೈವಶ್ರದ್ಧೆ ಮಢ್ಯ, ವಾತ್ಸಲ್ಯಬಲ, ಬೌದ್ದಿಕ ಜಿಜ್ಞಾಸೆ ಮುಂತಾದ ಹಲವು ಘಟಕಗಳನ್ನು ಒಮ್ಮುಖವಾಗಿ ಸಂಯೋಜಿಸಿ ನಿರ್ಮಿಸಿದ ವಿಚಾರ ಪ್ರಚೋದಕ ಕೃತಿ “ನಾಯಿನೆರಳು”. ಮೂಲಭೂತವಾಗಿ ಏಳುವ ಸಹಜತೆಯ ಪ್ರಶ್ನೆಯನ್ನು ಕ್ಷಣಕಾಲ ಮರೆತಲ್ಲಿ ಈ ಕೃತಿ ನೀಡುವ ಅನುಭವ ಸೃಷ್ಟಿಸುವ ಆವರಣ ತುಂಬ ಪ್ರಭಾವಕಾರಿಯೂ ಆನಂದದಾಯಕವೂ ಆದದ್ದು. ಅವರ ಇತ್ತೀಚಿನ ಕೃತಿ “ತಬ್ಬಲಿಯು ನೀನಾದೆ ಮಗನೆ” ಹಳ್ಳಿಯ ಬಾಳಿನ ಒಂದು ರುದ್ರರಮ್ಯ ಅಧ್ಯಾಯ. “ಗೋವಿನ ಹಾಡ”ನ್ನು ಸಾಂಕೇತಿಕ ಹಿನ್ನೆಲೆಯಾಗಿಟ್ಟುಕೊಂಡು ರಚಿತವಾದ ಈ ಕೃತಿಯಲ್ಲಿ ಪರಂಪರೆಯ ಪ್ರಜ್ಞೆ, ಮಗ್ಧ್ಯಮೂಲವಾದ ದೃಢ ಸಂಕಲ್ಪ, ದೈವಭಕ್ತಿ, ಸಾತ್ವಿಕತಾದತ್ತವಾದ ಮನಶ್ಯಾಂತಿ, ಪಾರಮಾರ್ಥಿಕ ದೃಷ್ಟಿ ಒಂದೆಡೆ; ವಿವೇಕ, ವಿಚಾರ, ವೈಜ್ಞಾನಿಕತೆ, ವಿಶ್ವಭ್ರಾತೃತ್ವ, ಅತಿಲೌಕಿಕತಾದತ್ತವಾದ ಪ್ರಯೋಜನ ದೃಷ್ಟಿ ಮತ್ತೊಂದೆಡೆ. ಇವುಗಳ ಅನಿವಾರ್ಯ ಘರ್ಷಣೆಯನ್ನು, ತತ್ಫಲವಾಗಿ ಇಬ್ಬಣದಲ್ಲೂ ಉದಿಸುವ ಮಾನಸಿಕ ವಿಪ್ಲವವನ್ನು ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ತಟ್ಟುವಂತೆ ಚಿತ್ರಿಸಲಾಗಿದೆ. ಹಳ್ಳಿಯ ರಕ್ತ ತುಂಬಿದ ಭಾಷೆ, ಹಳ್ಳಿಯ ಮನಸು ಮಾಂಸಗಳನ್ನು ಹೊತ್ತು ದುತ್ತೆಂದು ಎದ್ದುನಿಲ್ಲುವೆ ಪರಿಸರ, ಸಾಲು ಸಾಲಿನಲ್ಲೂ ಹರಿಯುವ ಸತ್ವಶಾಲಿಯಾದ ಜೀವಂತಾನುಭವ, ಮನಸ್ಸಿನ ಎಳೆ ಎಳೆಯನ್ನು ಬಿಡಿ ಬಿಡಿಸಿ ನೋಡುವ ವಿಶ್ಲೇಷಕ ಪ್ರಜ್ಞೆ, ಆದಿಯಿಂದ ಅಂತ್ಯದವರೆಗೂ ಕಾವುಗೊಂಡು ಪ್ರಜ್ಞಲಿಸುವ ಕಲಾತ್ಮಕ ಎಚ್ಚರ – ಇವು ಈ ಕೃತಿಯನ್ನು ಒಂದು ಮಹತ್ವದ ಕಾದಂಬರಿ ಯನ್ನಾಗಿ ಮಾಡಿವೆ.

೧೪

ಎಂದಿಗಿಂತ ಹೆಚ್ಚಾಗಿ ಇದು ಕಾದಂಬರಿ ರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಅವು ಸಾರ್ಥಕವಾಗಲಿ, ಬಿಡಲಿ, ಆ ಪ್ರಯತ್ನ ಆ ಪ್ರಾಮಾಣಿಕತೆ ಮೆಚ್ಚಲೇಬೇಕಾದಂಥವುಗಳು. ಮನೋಹರ ಗ್ರಂಥಮಾಲೆಯವರು ನಡೆಸಿದ ಒಂದು ನೂತನ ಪ್ರಯೋಗ ಫಲವಾಗಿ “ಖೋ” ಕಾದಂಬರಿ ಮೂಡಿಬಂದಿದೆ. ಇದರ ಹನ್ನೊಂದು ಆಧ್ಯಾಯ ಗಳನ್ನು ಹನ್ನೊಂದು ಜನ ಲೇಖಕರು ಬರೆದಿದ್ದಾರೆ. ಇದರಿಂದಾಗಿ ವಸ್ತುನಿರ್ವಹಣೆಯಲ್ಲಿ, ನಿರೂಪಣೆಯಲ್ಲಿ, ಶೈಲಿಯಲ್ಲಿ, ವಿಚಾರದಲ್ಲಿ, ಶೈಥಿಲ್ಯ ಅಸಮತೆ ಉಂಟಾಗಿರುವುದು ನಿಜ. ಆದರೂ ಒಂದು ವಸ್ತುವನ್ನು ವಿವಿಧ ಜನರ ಬುದ್ದಿಶಕ್ತಿ ಕಲ್ಪನಾಶಕ್ತಿಗಳು ವಿವಿಧ ದೃಷ್ಟಿಗಳಿಂದ ಕಂಡು ಅವುಗಳೆಲ್ಲವನ್ನೂ ಒಮ್ಮುಖವಾಗಿ ಹರಿಸುವ ಸಾಧ್ಯತೆಯಿದೆ ಎಂಬ ಸಂಗತಿಯೇ ತುಂಬ ಮಹತ್ವದ್ದಾಗಿದೆ. ಶಂಕರ ಮೊಕಾಶಿಯವರ “ಗಂಗವ್ವ ಮತ್ತು ಗಂಗಾಮಾಯಿ” ಈ ಕಾಲಮಾನದ ಸಮರ್ಥ ಕೃತಿಗಳಲ್ಲೊಂದಾಗಿದೆ. ಗತಕಾಲದ ಶಕ್ತಿಗಳಿಂದ ತನ್ನನ್ನು ತಾನು ಸಂರಕ್ಷಿಸಿಕೊಂಡು ಹೊಸದಾದ ಸೋಲರಿಯದ ಸತ್ವಪೂರ್ಣವಾದ ಸರ್ವಬಂಧನ ವಿಮುಕ್ತವಾದ ಬಾಳನ್ನು ಬಾಳಬೇಕೆಂಬ ಪ್ರಯತ್ನ, ಅದಕ್ಕಾಗಿ ನಡೆಸುವ ಹೋರಾಟ ಈ ಕಾದಂಬರಿಯ ಕೇಂದ್ರವಸ್ತು. ಇಲ್ಲಿಯ ಪಾತ್ರಗಳ ಘನಗಟ್ಟಿತನ ಇದರ ಸಫಲತೆಗೆ ಪ್ರಧಾನ ಕಾರಣ. ನೈತಿಕ ದೃಷ್ಟಿ ಇದ್ದರೂ ಅದು ದಟ್ಟವಾದ ಬದುಕಿನ ತೀವ್ರತೆಯಲ್ಲಿ ವಾಸ್ತವತೆಯಲ್ಲಿ ಕಲೆಗಾರಿಕೆಯಲ್ಲಿ ಸಮರ್ಪಿತವಾಗುತ್ತದೆ. ಇದರ ತಂತ್ರದಲ್ಲಿ ನಾವೀನ್ಯತೆ ಯೇನೂ ಇಲ್ಲ. ರಾಮಚಂದ್ರ ಕೊಟ್ಟಲಗಿಯವರ “ದೀಪಹತ್ತಿತು” ಮೂರು ತಲೆಮಾರುಗಳ ಜೀವನಕಥೆ. ಇದರ ವಿಶಿಷ್ಟತೆಯೆಲ್ಲಾ ಇದರ ಭಾಷೆಯಲ್ಲಿದೆ. ಕನ್ನಡ, ಸಂಸ್ಕೃತ, ಮರಾಠಿ ಮುಂತಾದ ಬೇರೆ ಬೇರೆ ಭಾಷೆಗಳ ಪದಗಳನ್ನು ಧೈರ್ಯವಾಗಿ ಸಂದರ್ಭೋಜಿತವಾಗಿ ಸಮರ್ಥವಾಗಿ ಬಳಸಿ ಒಂದು ನೂತನ ಪ್ರಯೋಗ ಮಾಡಿದ್ದಾರೆ. ಶಾಂತಿನಾಥ ದೇಸಾಯಿ ಅವರ “ಮುಕ್ತಿ” ಪ್ರಜ್ಞಾಪ್ರವಾಹದ ತಂತ್ರವನ್ನು ಸಾರ್ಥಕವಾಗಿ ಅಳವಡಿಸಿಕೊಂಡ ಸತ್ವಶಾಲೀ ಕೃತಿ. ತನ್ನನ್ನು ಸುತ್ತಮುತ್ತ ಕಾಡುತ್ತಿದ್ದ ಈ ನೆಲಕ್ಕಂಟಿದ ಭಾವನೆಗಳಿಂದ ಪಾರಾಗಲು ಇವುಗಳ ಸೋಂಕಿಲ್ಲದ ಬೇರೊಂದು ಪ್ರದೇಶಕ್ಕೆ ಆಫ್ರಿಕೆಗೆ ಹೋಗಲು ಬಯಸಿದ ಯುವಕನೊಬ್ಬನ ಭಾವಲಹರಿಯಿದು. ತನ್ನನ್ನು ಕಿತ್ತು ತಿನ್ನುತ್ತಿದ್ದ ಅನುಭವಗಳ ತೀವ್ರತೆ ಯನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಅವುಗಳನ್ನು ಹೊರಹಾಕಲು ಪ್ರಯತ್ನಿಸಿದಾಗ ತನ್ನೊಳಗೆ ತಾವು ಪ್ರವೇಶಿ ಹುಡುಕಾಟವಾಡಿದಾಗ ಮೂಡಿದ ಸ್ವಾಂತರಂಗದರ್ಶನವಿದು. ಬಳಸಿರುವ ಭಾಷೆ ಹೇಳಿರುವ ರೀತಿ ತುಂಬ ಸ್ವೋಪಜ್ಞವೂ ಶಕ್ತಿಸಂಪನ್ನವೂ ಆಗಿದೆ. ಯಶವಂತ ಚಿತ್ತಾಲರ “ಮೂರು ದಾರಿಗಳು” ಮತ್ತೊಂದು ಗಮನಾರ್ಹ ಸಾಧನೆ. ಸಾರ್ವತ್ರಿಕ ವಾಗಿ ಎದುರಿಸಬೇಕಾಗಿ ಬಂದ ಸಮಸ್ಯೆಯನ್ನು ಮೂರು ಜನರು ಮೂರು ವಿಧವಾದ ದೃಷ್ಟಿಕೋನಗಳಿಂದ ಬಿಡಿಸುವುದೇ ಇಲ್ಲಿಯ ವಸ್ತು. ಈ ಹೊಸ ಬಗೆಯ ತಂತ್ರ ಪ್ರಯೋಗದಲ್ಲಿ ಮತ್ತು ಅದರ ನಿರ್ವಹಣೆಯಲ್ಲಿ ಕೃತಕತೆ ತಲೆಹಾಕದೆ ಅರ್ಥಸಂಪನ್ನತೆ ತುಂಬಿಕೊಂಡಿರುವುದೇ ಅದರ ಯಶಸ್ಸಿಗೆ ಸಮರ್ಥ ಸಾಕ್ಷಿಯಾಗಿದೆ. ಕುಸುಮಾಕರ ದೇವರಗಣ್ಣೂರು ಅವರ “ನಾಲ್ಕನೆಯ ಆಯಾಮ” ಮತ್ತೊಂದು ಸ್ಮರಣೀಯ ಕೃತಿ. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ತರುಣನೊಬ್ಬನ ಮನೋವಿಶ್ಲೇಷಣೆಯಿದು. ವಾಸವಾಗಿದ್ದ ಮನೆಯ ಸನ್ನಿವೇಶ, ತಂದೆ ತಾಯಿಗಳ ಪರಸ್ಪರ ವಿರುದ್ಧ ಸ್ವಭಾವ, ಬಾಲ್ಯದ ಅನುಭವಗಳು, ದೊರೆತ ಸಹವಾಸಗಳು, ಬೆಳೆದ ಬಂಡುಕೋರತನ, ಆತ್ಮಾವಹೇಳನ ಮುಂತಾದವುಗಳನ್ನು ಅವನ ಭಾವನಾಲಹರಿಯ ಹಂದರದ ಮೇಲೆ ಹಬ್ಬಿಸಿ ತನ್ನತನಕ್ಕಾಗಿ ಆತ ನಡೆಸುವ ತೀವ್ರ ಹೋರಾಟದ ಸಜೀವ ಸಶಕ್ತ ಚಿತ್ರವನ್ನು ಮುಂದಿಡುತ್ತದೆ ಈ ಕಾದಂಬರಿ. ಸಂಪ್ರದಾಯವನ್ನು ಒದ್ದು ಸೂಳೆಯ ಜೊತೆಯಲ್ಲಿ ಸಂಸಾರ ಮಾಡಿದ ವ್ಯಕ್ತಿಯೊಬ್ಬ ಸತ್ತಾಗ, ಅವನ ಶವಸಂಸ್ಕಾರ ಮಾಡಲು ಹಿಂದೆ ಮುಂದೆ ನೋಡಿದ ಬ್ರಾಹ್ಮಣ ಮುಖಂಡರುಗಳು ಸ್ವಬಾಳಿನ ವಿಮರ್ಶೆ ನಡೆಸಿ ಸತ್ತವನಿಗಿಂತ ತಾವು ಮೇಲಲ್ಲವೆಂದು ಅರಿತುದು ಯು.ಆರ್. ಅನಂತಮೂರ್ತಿಯವರ “ಸಂಸ್ಕಾರ”ದ ವಸ್ತು. “ಹೊರ ಸಂಸ್ಕಾರಗಳು ಒಳಗಿನ ಸಂಸ್ಕಾರಗಳನ್ನು ಎಷ್ಟೇ ಭದ್ರವಾಗಿ ಅದುಮಿಟ್ಟರೂ ಒಂದು ಸಲ ಒಳಸಂಸ್ಕಾರಗಳು ಹುತ್ತದೊಳಗಿನ ಹಾವಿನಂತೆ ಹೊರಬರುವುದನ್ನು ಇಲ್ಲಿ ಚೆನ್ನಾಗಿ ಪ್ರತಿಪಾದಿಸಲಾಗಿದೆ”. ಕಾದಂಬರಿಯ ಪರಿಸರ ಅತ್ಯಂತ ಸಶಕ್ತವಾಗಿ ತನ್ನೆಲ್ಲಾ ವಿಶಿಷ್ಟತೆಯೊಡನೆ ಸಹಜವಾಗಿ ಮೂಡಿಬಂದಿದೆ. ತೀಕ್ಷ್ಣ ವೈಚಾರಿಕತೆಯೊಡನೆ ಮಿಳಿತವಾದ ನೆಲಗಟ್ಟಿನ ತಾಯಿ ಭಾಷೆಯ ಬಿಗಿ ಬನಿದನಿ ಮಹತ್ವದ ಪರಿಣಾಮವನ್ನುಂಟು ಮಾಡುತ್ತವೆ. ಭಾಷೆಯನ್ನು ಇಷ್ಟು ಚೈತನ್ಯಪೂರ್ಣವಾಗಿ ಸಮುಚಿತವಾಗಿ ಬಳಸುವ ಲೇಖಕರು ಅತಿ ವಿರಳ. “ನನ್ನ ಯೋಗ್ಯತೆ ಏನೆಂದು ನಾನು ಕಂಡುಕೊಳ್ಳಬೇಕಾಗಿದೆ. ಘಟನೆ ಘಟನೆಗಳನ್ನೇ ಹಿಡಿದೆತ್ತಿ ನನ್ನ ಸ್ವರೂಪವನ್ನು ನಾನು ನಿರ್ಮಾಣ ಮಾಡಬೇಕಾಗಿದೆ” ಎಂಬ ಮನೋಧರ್ಮವುಳ್ಳ ಯುವಕನ ಸ್ವಸ್ವರೂಪದರ್ಶನ ಪೂರ್ಣಚಂದ್ರ ತೇಜಸ್ವಿ ಅವರ ಕಿರುಕಾದಂಬರಿ “ಸ್ವರೂಪ”. ನಾಯಕನ ಅಂತರಂಗದ ಸೂಕ್ಷ್ಮ ಪ್ರತಿಕ್ರಿಯೆಗಳ ಶಕ್ತಾಭಿವ್ಯಕ್ತಿ ಇದರ ಪ್ರಧಾನ ಗುಣ. ಇದೊಂದು ವೈಚಾರಿಕ ಕೃತಿ. ನೀರಸವೂ ಸಂಪ್ರದಾಯ ಜಡವೂ ಕೃತಕವೂ ಅಪ್ರಾಮಾಣಿಕವೂ ಸತ್ವಹೀನವೂ ಮಲ್ಯರಹಿತವೂ ಆದ ಒಂದು ವಾತಾವರಣದಿಂದ ತನ್ನನ್ನು ತಾನು ಬಿಡಿಸಿಕೊಂಡು ಸರ್ವಪ್ರಭಾವ ದೂರವಾದ ಸ್ವತಂತ್ರವೂ ಜೀವಂತವೂ ತೀವ್ರವೂ ಪ್ರಾಮಾಣಿಕವೂ ಆದ ಬದುಕನ್ನು ಬಾಳಲು ತನ್ನ ಅನಿಸಿಕೆಗಳೊಡನೆ ತಾನೇ ಹೋರಾಡುವ ಯುವಕನೊಬ್ಬನ ಮನೋಭಾವನೆಯ ಸಾಂಕೇತಿಕ ಹಾಗೂ ಪರಿಣಾಮಕಾರೀ ಚಿತ್ರಣ ಲಂಕೇಶರ “ಬಿರುಕು”. ಅನಿಸಿಕೆಗೂ ಆಚರಣೆಗೂ ಇರುವ ಬಿರುಕು ಇಲ್ಲಿ ಅಭಿವ್ಯಕ್ತಿ ಪಡೆದಿದೆ. ಲಂಕೇಶರ ತೀವ್ರತೆ ಹಾಗೂ ಮೊನಚಾದ ಬೌದ್ದಿಕತೆಯನ್ನು ಒಮ್ಮೊಮ್ಮೆ ಅವರ ಶೈಲಿ ಹೊರಲಾರದೆ ಹೋಗಿದೆಯೆನಿಸಿದರೂ ಒಟ್ಟಿನಲ್ಲಿ ತುಂಬ ಕಸುವುಳ್ಳ ಭಾಷಾ ಪ್ರಯೋಗ  ಕೃತಿಯಲ್ಲಿದೆ.

೧೫

ಅನುವಾದಿತ ಹಾಗೂ ಪತ್ತೆದಾರಿ ಕಾದಂಬರಿಗಳನ್ನು ಕುರಿತು ನಾನಿಲ್ಲಿ ಪ್ರಸ್ತಾಪಿಸಿಲ್ಲ; ಅವು ಸಮೀಕ್ಷಣೀಯವಲ್ಲವೆಂದು ನನ್ನ ಅಭಿಪ್ರಾಯವಲ್ಲ. ಗೊರೂರ್, ಆನಂದ, ದೇಜಗೌ, ನಿರಂಜನ, ತ.ರಾ.ಸು., ಕಟ್ಟೀಮನಿ, ನಾರಾಯಣ ಸಂಗಮ, ಅಹೋಬಲ ಶಂಕರ, ಗೋಪಾಲಕೃಷ್ಣ ಅಡಿಗ, ಎಂ.ವಿ. ಸೀತಾರಾಮಯ್ಯ, ಕೈ. ವೆಂಕಟರಾಮಪ್ಪ, ಮತ್ತೂರು ಕೃಷ್ಣಮೂರ್ತಿ, ಮ.ಸು. ಕೃಷ್ಣಮೂರ್ತಿ, ಬಿ. ಪುಟ್ಟಸ್ವಾಮಯ್ಯ, ಎಸ್. ಅನಂತನಾರಾಯಣ, ಎಚ್.ಎಲ್. ನಾಗೇಗೌಡ, ವೀರಭದ್ರ, ಡಿ.ವಿ. ರಾಘವೇಂದ್ರ, ಎಂ. ಕೇಶಭಟ್, ಎಚ್.ವಿ. ಸಾವಿತ್ರಮ್ಮ, ಚಿ.ನ. ಮಂಗಳ ಮುಂತಾದ ಲೇಖಕರು, ಭಾರತೀಯ ಹಾಗೂ ಭಾರತೇತರ ಭಾಷೆಗಳ ಸುಪ್ರಸಿದ್ಧ ಕಾದಂಬರಿಗಳನ್ನು ಅನುವಾದಿಸಿ ಕನ್ನಡದ ಕಣಜವನ್ನು ಶ್ರೀಮಂತ ಗೊಳಿಸಿದ್ದಾರೆ. ಆದರೆ ಇದೇ ಮಾತನ್ನು ಪತ್ತೇದಾರಿ ಕಾದಂಬರಿಗಳ ಬಗ್ಗೆ ಹೇಳುವುದು ಸಾಧ್ಯವಿಲ್ಲ. ಸ್ವತಂತ್ರ ವಿಶಿಷ್ಟತೆಯಿಂದ ಕೂಡಿದ ಸಮರ್ಥ ಹಾಗೂ ಕಲಾಪೂರ್ಣ ಪತ್ತೇದಾರಿ ಕೃತಿ ಒಂದೇ ಒಂದಾದರೂ ನನಗೆ ತಿಳಿಮದಟ್ಟಿಗೆ ಇಲ್ಲ. ದಿವಂಗತ ರಾಮಮೂರ್ತಿಯವರು ಈ ಬಗ್ಗೆ ಸ್ವಲ್ಪ ಪ್ರಯತ್ನ ನಡೆಸಿದ್ದುಂಟು. ಉಳಿದವರ ಕೃತಿಗಳಲ್ಲಿ ನಮಗೆ ಕಾಣುವುದು ಕೇವಲ ಅಶ್ಲೀಲ ಮೀಮಾಂಸೆ; ಕಳ್ಳ ಸರಕುಗಳ ಕಲಾರಹಿತ ಪ್ರದರ್ಶನ.

೧೬

ಮೇಲಿನ ಸಮೀಕ್ಷೆ ಸುಸಂಪೂರ್ಣವಲ್ಲ ಎಂಬುದರ ನಿಚ್ಚಳ ಅರಿವು ನನಗಿದೆ. ಕೆಲವು ಲೇಖಕರ ಹಾಗೂ ಕೃತಿಗಳ ಸಾಫಲ್ಯ ವೈಫಲ್ಯಗಳ ಬಗ್ಗೆ ನಿರ್ದಿಷ್ಟವಾಗಿ ಸ್ಪಷ್ಟವಾಗಿ ಏನನ್ನೂ ಹೇಳುವುದು ಸಾಧ್ಯವಾಗಿಲ್ಲ. ವಿಸ್ತಾರ ಭಯದಿಂದ ಕೆಲವನ್ನು ಹೆಸರಿಸಿಯೇ ತೃಪ್ತಿಗೊಳ್ಳ ಬೇಕಾಗಿದೆ. ಕೊನೆ ಕೊನೆಯ ಭಾಗ ಕೇವಲ ಹೆಸರಿನ ಪಟ್ಟಿಯಂತೆ ಕಾಣಲೂಬಹುದು. ಅಂಥವರಿಗೆ ಸರಿಯಾದ ನ್ಯಾಯ ದೊರೆತಿಲ್ಲವೆಂದು ಅನ್ನಿಲೂಬಹುದು. ಆದರೂ ಚಿರಂತನ ಮಲ್ಯವುಳ್ಳವುಗಳೆಂದು ನನಗೆ ಅನ್ನಿಸಿದ ಪ್ರಮುಖ ಕೃತಿಗಳನ್ನು ಈ ಪ್ರಬಂಧದ ಹಾಗೂ ನನ್ನ ಇತಿಮಿತಿಯಲ್ಲಿ ಕೆಲಮಟ್ಟಿಗಾದರೂ ವಿವೇಚಿಸಲು ಪ್ರಯತ್ನಿಸಿದ್ದೇನೆ. ಇದರಿಂದ ಧ್ವನಿತವಾಗುವುದು ಇಷ್ಟು. ಮೊದಲೇ ಹೇಳಿದ ಮಾತನ್ನು ಕೊನೆಯಲ್ಲೂ ಹೇಳುವುದಾದರೆ, ಸಂಖ್ಯಾಬೃಹತ್ತಿಗೆ ತಕ್ಕಂತೆ ಗುಣಮಹತ್ವದ ಕಾದಂಬರಿಗಳು ಅಧಿಕ ಸಂಖ್ಯೆಯಲ್ಲಿ ಬೆಳೆಯಲಿಲ್ಲವಾದರೂ ಇರುವಷ್ಟರ ಮಟ್ಟಿಗೂ ನಾವು ಯಾರಿಗೂ ತಲೆ ತಗ್ಗಿಸಬೇಕಾಗಿಲ್ಲ. “ಮಲೆಗಳಲ್ಲಿ ಮದುಮಗಳು”, “ಗ್ರಾಮಾಯಣ”, “ಅಳಿದ ಮೇಲೆ”, “ಆಳ ನಿರಾಳ”, “ಸಂಸ್ಕಾರ”, “ವಂಶವೃಕ್ಷ, “ತಬ್ಬಲಿಯು ನೀನಾದೆ ಮಗನೆ” ಮುಂತಾದ ಕಾದಂಬರಿಗಳು ನಮ್ಮ ಹೆಮ್ಮೆಗೆ ಕೋಡು ಮೂಡಿಸುತ್ತವೆ. ವಸ್ತುವಿನ ಆಯ್ಕೆಯಲ್ಲಿ, ತಂತ್ರದಲ್ಲಿ, ನಿರೂಪಣೆಯ ನಾವೀನ್ಯತೆಯಲ್ಲಿ ಭಾಷೆಯ ಬಳಕೆಯಲ್ಲಿ, ಬುದ್ದಿಶಕ್ತಿ ಮತ್ತು ಪ್ರತಿಭಾಶಕ್ತಿಗಳ ಸಮ್ಮಿಲನದಲ್ಲಿ ಇಂದಿನ ಹೊಸಪೀಳಿಗೆ ಹೊಸ ಹೊಸ ಪ್ರಯೋಗಗಳನ್ನು ಶ್ರದ್ಧಾಪೂರ್ವಕ ವಾಗಿ ಮಾಡುತ್ತಿದ್ದಾರಾದ್ದರಿಂದ ಕನ್ನಡ ಕಾದಂಬರಿಯ ಭವಿಷ್ಯ ಇನ್ನು ಮುಂದೆಯೂ ಆಶಾದಾಯಕವಾಗಿಯೇ ಇದೆಯೆಂಬುದರಲ್ಲಿ ಯಾವ ಸಂಶಯವೂ ಇಲ್ಲ.