ಮಾನವನ ಸ್ವಭಾವಸಹಜವಾದ ಕುತೂಹಲ ಮತ್ತು ಕಲ್ಪನೆಗಳ ಫಲವಾಗಿ ಜಗತ್ತಿನ ಎಲ್ಲಾ ಸಾಹಿತ್ಯಗಳಲ್ಲೂ ಆದಿಯಿಂದಲೂ ಕಥೆಗಳು ಮೂಡಿವೆ. ಆಯಾ ದೇಶದ ಭಾವನೆ ಕಲ್ಪನೆ ಸಂಸ್ಕೃತಿ ಪರಿಸರಣ ಮತ್ತು ಪ್ರಭಾವಗಳಿಗನುಗುಣವಾಗಿ ಅವು ಉದ್ಭವಿಸಿ ಕುತೂಹಲವನ್ನು ತಣಿಸಿ ಮನರಂಜನೆಯನ್ನೊದಗಿಸಿವೆ. ಕ್ರಿ.ಪೂ. ೧೯ನೇ ಶತಮಾನದಿಂದಲೇ ಈ ಕಥಾಸಾಹಿತ್ಯ ಸ್ಪಷ್ಟವಾಗಿ ಕುರುಹುದೋರಿದೆ. ನಮ್ಮ ವೇದ ಉಪನಿಷತ್ತುಗಳಲ್ಲಿ, ಭಾರತ ರಾಮಾಯಣಗಳಲ್ಲಿ ಕಥೆಗಳು ಪ್ರಧಾನ ಪಾತ್ರವಹಿಸಿವೆ. ಜತಕ ಕಥೆಗಳು, ಪಂಚತಂತ್ರ, ಕಥಾಸರಿತ್ಸಾಗರ ಮುಂತಾದುವುಗಳು ಕಥೆಯ ಭಂಡಾರಗಳೇ ಆಗಿವೆ. ಗ್ರೀಕ್ ಪುರಾಣಗಳಲ್ಲಿ, ಬೈಬಲ್ಲಿನಲ್ಲಿ ಕಥೆಗಳಿವೆ. ಒಟ್ಟಿನಲ್ಲಿ ಪ್ರಪಂಚದಲ್ಲಿ ಬರಹ ಮೊದಲಾದಾಗಲೇ ಕಥೆಯ ಲೇಖನವೂ ಮೊದಲಾಯಿತು. ಅಂದಿನ ಜನ ತಮ್ಮ ಮನಸ್ಸಿನ ಭಾವನೆಗಳಿಗೆ ಬಾಯಿ ನೀಡಲು ಬಯಸಿದಾಗ, ವಾಸ್ತವ ಜೀವನದ ಗೊಂದಲ ಗಡಿಬಿಡಿ ನೀರಸತೆಗಳಿಂದ ಬಿಡುಗಡೆಗೊಂಡು ರಮ್ಯವಾದ ಆನಂದದಾಯಕವಾದ ದುಃಖ ದೂರವಾದ ಬೇರೊಂದು ಲೋಕದಲ್ಲಿ ಕೆಲಕಾಲದವಾದರೂ ವಿಹರಿಸಲು ಇಚ್ಛಿಸಿದಾಗ ಈ ಕಥೆಗಳು ಮೊಳಕೆಯೊಡೆದು ಮೈದೋರಿದವು. ಆದರೆ ಇವು ಬಹುಮಟ್ಟಿಗೆ ಅದ್ಭುತರಮ್ಯವೂ ಸಾಹಸಪ್ರಧಾನವೂ ನೀತಿಬೋಧಕವೂ ಆಗಿದ್ದುವಲ್ಲದೆ ಸಮಕಾಲೀನ ವಾಸ್ತವ ಜೀವನದ ಸೂಕ್ಷ್ಮಾಂಶಗಳನ್ನೂ ಬಹುಮುಖತೆಯನ್ನೂ ಸಂಕೀರ್ಣತೆಯನ್ನೂ ಪ್ರತಿಬಿಂಬಿಸುವ ಕಲಾತ್ಮಕ ಸೃಷ್ಟಿಯಾಗಿರಲಿಲ್ಲ. ಈ ಕಾರಣದಿಂದಲೇ ಇಂದಿನ  ಸಣ್ಣಕಥೆಗಳಿಗೂ ಅಂದಿನ ಕೇವಲ ಮನೋರಂಜಕವಾದ ಅಜ್ಜಿ ಕಥೆಗಳಿಗೂ ಅಗಾಧವಾದ ವ್ಯತ್ಯಾಸವಿದೆ.

ಇಂದಿನ ಸಣ್ಣಕತೆ ವ್ಯಕ್ತಿಯ ಒಂದು ಮನಸ್ಥಿತಿಯನ್ನೋ, ಜೀವನದ ಒಂದು ಘಟನೆ ಯನ್ನೋ, ಒಂದು ಅನುಭವವನ್ನೋ, ಒಂದು ಪರಿಸರವನ್ನೋ, ಇವೆಲ್ಲದರ ಜಟಿಲತೆ ಯನ್ನೋ ಸೂಕ್ಷ್ಮವಾಗಿ ಚಿಕ್ಕದಾಗಿ ಚೊಕ್ಕವಾಗಿ ಪರಿಣಾಮಕಾರಕವಾಗಿ ಒಡಮೂಡಿಸುತ್ತದೆ. ಇದರಲ್ಲಿ ಭಾವಗೀತೆಯ ಬಿಗುವು, ವೈಯಕ್ತಿಕ ಭಾವಸಂಪನ್ನತೆ, ಸೂಕ್ಷ್ಮ ಕುಸುರಿ, ಸಂಕ್ಷಿಪ್ತಿ ಇರಬೇಕಾದ ಕಾರಣ ಇದರ ರಚನೆ ತುಂಬ ಕಷ್ಟದಾಯಕವಾದದ್ದು. ಅನವಶ್ಯಕವಾದ ಒಂದು ಮಾತೂ, ಘಟನೆಯೂ ಸಣ್ಣಕತೆಯಲ್ಲಿ ಬರದಂತೆ ಕತೆಗಾರ ಎಚ್ಚರ ವಹಿಸಬೇಕಾ ಗುತ್ತದೆ. ಭಾವನೆಗಳ ಸಂಯಮ, ಧ್ವನಿಪೂರ್ಣ ಮಾತುಗಾರಿಕೆ, ಕೇಂದ್ರ ಬಿಂದುವಿನತ್ತ ನೆಟ್ಟಗುರಿ, ಸಹಜ ಐಚ್ಛಿಕ ಶಕ್ತಿಗಳನ್ನು ಕತೆಗಾರ ಸಾಧಿಸಬೇಕಾಗುತ್ತದೆ. ಹೀಗೆ ಅಲ್ಪದಲ್ಲಿ ಕಲ್ಪವನ್ನು ಕೆತ್ತಿ ಅಪೂರ್ವ ಕಲಾಪರಿಣಾಮವನ್ನು ಉಂಟುಮಾಡುವ ಈ ಸಾಹಿತ್ಯ ಪ್ರಕಾರ ಪಾಶ್ಚಾತ್ಯ ಸಾಹಿತ್ಯ ಸಂಪರ್ಕದಿಂದ ನಮಗೆ ದತ್ತವಾಗಿದೆ. ಕಳೆದ ಶತಮಾನದ ಆದಿಯಲ್ಲಿ ಅಮೆರಿಕದಲ್ಲಿ ಪ್ರಾರಂಭವಾದ ಈ ಸಣ್ಣ ಕಥಾಸಾಹಿತ್ಯ ಬಹುಬೇಗನೇ ವಿಶ್ವದಾದ್ಯಂತ ವ್ಯಾಪಿಸಿ ಜನಮನವನ್ನು ಸೂರೆಗೊಂಡಿತು. ಅಮೆರಿಕದ ಎಡ್ಗರ್ ಅಲೆನ್‌ಪೋ, ವಾಷಿಂಗ್‌ಟನ್ ಇರ್ವೀಂಗ್, ಹಾಥಾರ‍್ನ್, ಓ ಹೆನ್ರಿ, ಫ್ರಾನ್ಸಿನ ಬಾಲ್ಜಾಕ್, ಮೋಪಾಸ, ರಷ್ಯಾದ ಪುಷ್ಕಿನ್, ಟಾಲ್‌ಸ್ಟಾಯ್, ಗಾರ್ಕಿ, ಚಕವ್ ಇಂಗ್ಲೆಂಡಿನ ಸ್ಟೀವನ್‌ಸನ್ ಮುಂತಾದವರ ಕೈಯಲ್ಲಿ ಈ ಸಣ್ಣಕತೆ ಸರ್ವಾಂಗ ಸುಂದರವಾಗಿ ಅಭೂತಪೂರ್ವವಾಗಿ ಬೆಳೆಯಿತು. ೧೮೩೩ರಲ್ಲಿ ಪೋನ ‘ಎ ಮ್ಯಾನುಸ್‌ಕ್ರಿಪ್ಟ್ ಫೌಂಡ್ ಇನ್ ಎ ಬಾಟಲ್’ ಪ್ರಕಟವಾದಂದಿನಿಂದ ಇಂದಿನವರೆಗೆ ಸಣ್ಣಕತೆ ಜಗತ್ಸಾಹಿತ್ಯದಲ್ಲಿ ಅಲಕ್ಷಿಸಲಾಗದಂತಹ ಪ್ರಧಾನ ಸ್ಥಾನವನ್ನು ಪಡೆದುಕೊಂಡಿದೆ.

ಬಂಗಾಳದ ಬಾಗಿಲಿನಿಂದ ಭಾರತವನ್ನು ಪ್ರವೇಶಿಸಿದ ಈ ಪ್ರಕಾರ ಕನ್ನಡದಲ್ಲೂ ಬಹು ಬೇಗನೆ ಜನಪ್ರಿಯವಾಯಿತು. ಪಂಜೆಯವರು, ಕೆರೂರು ವಾಸುದೇವಾಚಾರ್ಯರು ಮೊದಮೊದಲು ಕತೆಗಳನ್ನು ಬರೆದರೂ, ಅದರ ಜೀವನಾಡಿಯನ್ನು ಮಿಡಿದು ಅದರ ಸರ್ವ ವೈವಿಧ್ಯವನ್ನೂ ಸಮಗ್ರವಾಗಿ ಸಶಕ್ತರಾಗಿ ಕನ್ನಡದಲ್ಲಿ ಮೂಡಿಸಿ ಕನ್ನಡ ಸಣ್ಣಕತೆಯ ಮಹೋನ್ನತಿಯನ್ನು ಮೆರೆಸಿ ಆಚಾರ್ಯ ಪುರುಷರಾದವರು ಶ್ರೀನಿವಾಸರು.

ಗಾತ್ರದಲ್ಲೂ ಪಾತ್ರದಲ್ಲೂ ಶ್ರೀನಿವಾಸರ ಕಥಾಸೃಷ್ಟಿ ಕಣ್ಮನಗಳನ್ನು ಕೋರೈಸುವಂಥದು ೧೯೧೪ರಲ್ಲಿ ‘ಮಧುರವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ‘ರಂಗಪ್ಪನ ಮದುವೆ’ಯಿಂದ ಹಿಡಿದು ಮೊನ್ನೆ ‘ಸುಧಾ’ದಲ್ಲಿ ಪ್ರಕಟವಾದ ‘ಚಟ್ಟೇಕಾರ ತಾಯಿ’ಯವರೆಗೆ ಸುಮಾರು ಎಂಬತ್ತು ಕಥೆಗಳು ಶ್ರೀನಿವಾಸರ ಲೇಖನಿಯಿಂದ ಬೆಳಕು ಪಡೆದಿವೆ. ಈ ಸಂಖ್ಯೆಯೊಂದೇ ಸಾಕು, ಸಾಮಾನ್ಯವತಿ ತತ್ತರಿಸುವುದಕ್ಕೆ. ಜೊತೆಗೆ ಅವುಗಳ ವಸ್ತು ವೈವಿವಿಧ್ಯ, ರೀತಿ ವೈವಿಧ್ಯ, ನಿರೂಪಣಾ ವೈವಿಧ್ಯಗಳು, ಅವುಗಳೆಲ್ಲವನ್ನೂ ಅನ್ಯಾದೃಶ್ಯವಾಗಿ ಸಂಯಮಿಸಿ ಸಂಯೋಜಿಸಿರುವ ಹೃತ್ಸ್ಪರ್ಶಿಯಾದ ಅಕೃತಕವಾದ ಅಸಾಧಾರಣವಾದ ಕಥನ ಕಲಾಕೌಶಲ ಎಂತಹ ಕಟುವಿಮರ್ಶಕನನ್ನಾದರೂ ಬೆರಗುಗೊಳಿಸಿ ಆಕರ್ಷಿಸುತ್ತವೆ. ಇವುಗಳಲ್ಲಿ ಸಾಮಾಜಿಕ ಕತೆಗಳಿವೆ, ಐತಿಹಾಸಿಕ ಕತೆಗಳು ಪೌರಾಣಿಕ ಕತೆಗಳಿವೆ, ಕಲ್ಪನಾತ್ಮಕ ಕತೆಗಳಿವೆ, ಭಾವನಾತ್ಮಕ ಕತೆಗಳಿವೆ. ಪತ್ರರೂಪದಲ್ಲಿ ದಿನಚರಿಯ ರೂಪದಲ್ಲಿ ಅವುಗಳನ್ನು ಕಡೆದು ನಿರ್ಮಿಸಿದ್ದಾರೆ. ಇವೆಲ್ಲಕ್ಕೂ ಸಹಾನುಭೂತಿಪರವಾದ ಶ್ರದ್ಧಾನ್ವಿತವಾದ ವಿಶಾಲವಾದ ಜೀವನಾನುಭವ ಆಸಕ್ತಿ ಅಭಿರುಚಿಗಳು ಭಾರತೀಯ ಸಂಸ್ಕೃತಿಯ ಜೀವನಪೋಷಕವಾದ ಶುಚಿಗಂಗೆ ಹಿನ್ನೆಲೆಯನ್ನೊದಗಿಸಿವೆ.

ಮೊದಲ ಕತೆಗಳಾದ ರಂಗಪ್ಪನ ಕತೆಗಳು ಹಾಸ್ಯಭಿತ್ತಿಯ ಮೆಲೆ ರಚಿಸಲ್ಪಟ್ಟ ಸುಂದರ ಚಿತ್ರಗಳು. ವಿದ್ಯಾಭ್ಯಾಸವೇ ಅಪರೂಪವಾಗಿದ್ದ ಕಾಲದಲ್ಲಿ ರಂಗ ಇಂಗ್ಲಿಷ್ ಕಲಿತು ಬೆಂಗಳೂರಿನಿಂದ ಬಂದಾಗ, ವಿಚಿತ್ರ ಪ್ರಾಣಿಯನ್ನು ನೋಡುವಂತೆ, ಬೇರೊಂದು ಲೋಕದಿಂದ ಬಂದ ಮನುಷ್ಯನನ್ನು ನೋಡುವಂತೆ ಊರ ಜನರೆಲ್ಲ ಮುತ್ತಿಕೊಂಡು ಅವನನ್ನು ನೋಡುವುದು ನಗೆಯನ್ನುಕ್ಕಿಸುವಂತೆಯೇ ಹಳ್ಳಿಗರ ಮುಗ್ಧತೆಯನ್ನು ಚೆನ್ನಾಗಿ ತೋರಿಸುತ್ತದೆ. ರಂಗ ತಾನು ವಿವಾಹ ಮಾಡಿಕೊಳ್ಳುವುದಿಲ್ಲವೆಂದು ಮದುವೆ ಬಗ್ಗೆ ದೊಡ್ಡ ಭಾಷಣವನ್ನೇ ಬಿಗಿದು ‘ಒಂದು ಕೆನ್ನೆ ಹಾಲು, ಒಂದು ಕೆನ್ನೆ ನೀರು ಆಗಿ, ಬೆರಲು ಕುಡಿಯಲು ಸಹಾ ಬಾರದ ಹುಡುಗಿಯರನ್ನು ತಂದು ಇದುರಿಗೆ ನಿಲ್ಲಿಸಿದರೆ, ಮೆಚ್ಚುವುದು ಹೇಗೆ?’ ಎಂದು ವಾದಿಸುವುದು ಅವನ ಪಟ್ಟಣ ಜ್ಞಾನವನ್ನೂ ವೈಚಾರಿಕತೆಯನ್ನೂ ವ್ಯಕ್ತಪಡಿಸಿದರೆ, ರತ್ನಳನ್ನು ನೋಡಿ ಮಾರುಹೋಗಿ ಅವಳನ್ನು ಮದುವೆಯಾಗಲು ಅವನು ಪಡುವ ಕಾತರ ಕಳವಳ ವಯಸ್ಕನೊಬ್ಬನ ಮನಸ್ಸಿನ ನೈಜಚಿತ್ರವನ್ನು ಸಶಕ್ತವಾಗಿ ಮೂಡಿಸುತ್ತವೆ. ಮೊದಲು ಆಶಾಂಭಂಗವಾಗುವಂತೆ ಮಾಡಿ ಆಸಕ್ತಿಯನ್ನು ಹೆಜ್ಜೆ ಹೆಜ್ಜೆಗೂ ಕೆರಳಿಸಿ ಕೊನೆಗೆ ಅವನಿಗೆ ಮದುವೆ ಮಾಡಿಸುವ ಚಾತುರ್ಯ ಮೆಚ್ಚುವಂಥದು. ‘ರಂಗಪ್ಪನ ಕೋರ್ಟ್‌ಷಿಪ್’ ಅಂತೂ ವಾಕ್ಯವಾಕ್ಯದಲ್ಲೂ ಹಾಸ್ಯರಸವನ್ನು ಹನಿಸುವ ಕಲಾಪೂರ್ಣ ಕತೆ. ಹಸೆಯ ಮೇಲೆ ಕುಳಿತು ರತ್ನಮ್ಮ ‘ಗಡಿಗೇ ತಲೆ ಲಳಿಗೇ ಹೊಟ್ಟೆ ಕೊಳಗದ ಬಾಯಿ’ ಎಂದು ಜರಿಯುವ ಹಾಡು ಮೊದಲುಗೊಂಡು ರಂಗಪ್ಪ ರತ್ನಮ್ಮರ ಪ್ರಣಯ ಪತ್ರಗಳ ಪೂರ್ಣ ನಗುವಿನ ಮಹಾಪೂರವೇ ಹರಿಯುತ್ತದೆ. ನಾಗರಿಕ ಜೀವನದ ಅರಿವಿಲ್ಲದ ಮುಗ್ಧ ರತ್ನಮ್ಮ “ಘಿಣ. ರಂಗರಾಯರಿಗೆ, ನೀವು ಬರೆದ ಕಾಗದ ಬಂತು. ನಾವೆಲ್ಲರೂ ಸೌಖ್ಯ. ಇನ್ನೇನೂ ವಿಶೇಷವಿಲ್ಲ, ರತ್ನಮ್ಮ” ಎಂದು ಪತಿರಾಯರಿಗೆ ಪತ್ರ ಬರೆಯುತ್ತಾಳೆ. ಅವಳಿಂದ ಯಾವುಯಾವುದೋ ರೀತಿಯ ಪ್ರೀತಿಯ ಸಂಬೋಧನೆಯ ಪತ್ರ ಬಯಸಿದ್ದ ರಂಗಪ್ಪ ನಿರಾಶನಾಗುತ್ತಾನೆ. ಅವಳಿಗೆ ಪ್ರಣಯ ಪತ್ರ ಕಲೆಯನ್ನು ಬೋಧಿಸಲು ಪ್ರಾರಂಭಿಸುತ್ತಾನೆ. ಹಳ್ಳಿಯ ಸಂಪ್ರದಾಯದಲ್ಲಿ ಬೆಳೆದ ರತ್ನಮ್ಮ ಬೇರೇನೂ ತೋಚದೆ, ಗಂಡ ದೊಡ್ಡ ಕಾಗದ ಬರೆ ಎಂದಾಗ ಪ್ರಿಯರೆ, ಗೂಳಿ ಗುಟುರು ಹಾಕುತ್ತದೆ. ನಾಯಿ ಬೊಗಳುತ್ತದೆ, ಬೆಕ್ಕು ಮಿಯಾವ್ ಎನ್ನುತ್ದೆ, ಕಾಗೆ ಕರ್ರೆನ್ನುತ್ತದೆ, ಕತ್ತೆ ಕಿರುಚುತ್ತದೆ, ನವಿಲು ಕೇಕೆ ಹಾಕುತ್ತದೆ…’ ಮುಂತಾಗಿ ತಾನೆಲ್ಲೋ ಪ್ರಾಥಮಿಕ ತರಗತಿಗಳಲ್ಲಿ ಓದಿದ ಪಾಠ ಜ್ಞಾನವನ್ನು ಪ್ರದರ್ಶಿಸುತ್ತಾಳೆ. ಹೀಗೆ ಕತೆ ಸಾಗುತ್ತದೆ. ಶುದ್ಧ ಹಾಸ್ಯದ ಕಣ್ಣಿನಲ್ಲಿ ಕಂಡ ಗ್ರಾಮಜೀವನದ ಮೂರು ಸಾಮಾಜಿಕ ಪ್ರಹಸನಗಳಾಗಿ ಇವು ಕಂಗೊಳಿಸುತ್ತವೆ; ಮಾಸ್ತಿಯವರ ಜೀವನಪ್ರಜ್ಞೆಗೆ ಅಭಿವ್ಯಕ್ತಿ ಶಕ್ತಿಗೆ ನಿದರ್ಶನಗಳಾಗಿವೆ. ಆದರೆ ಕಥಾರಂಭದಲ್ಲಿ ಲೇಖಕರು ಹೆಚ್ಚು ತಲೆ ಹಾಕಿರುವುದು ಕತೆಗೆ ಅನವಶ್ಯಕವಾಗಿದೆ.

ತನ್ನ ಶ್ರೀಮಂತಿಕೆ ರೂಪು ರಸಿಕತೆಗಳ ಬಗೆಗೆ ಅಳತೆ ಮೀರಿದ ಅಭಿಮಾನವನ್ನಿಟ್ಟು ಕೊಂಡಿದ್ದ ತರುಣನೊಬ್ಬ ಕಂಡಕಂಡ ಹೆಣ್ಣು ಮಕ್ಕಳೆಲ್ಲಾ ತನಗೆ ಒಲೆಯುವರೆಂದು ಭ್ರಮಿಸಿ ಸತ್ಯದರ್ಶನದಿಂದ ತನ್ನ ಪೊಳ್ಳುತನವನ್ನು ಕಂಡುಕೊಂಡ ಕತೆ ‘ರಂಗಸ್ವಾಮಿಯ ಅವಿವೇಕ’. ತನ್ನನ್ನು ಬಹಳವಾಗಿ ಪ್ರೀತಿಸುತ್ತಿದ್ದ ಸೀತೆ ತನಗೆ ತಕ್ಕವಳಲ್ಲವೆಂದು ಭಾವಿಸಿ, ಗೆಳೆಯನ ಮಡದಿ ತನ್ನ ಪತಿಯ ಸ್ನೇಹಿತನೆಂಬ ಕಾರಣದಿಂದ ಸ್ವಲ್ಪ ಆಸಕ್ತಿವಹಿಸಿದ್ದಕ್ಕೆ ಅವಳು ತನ್ನನ್ನು ಪ್ರೇಮಿಸುತ್ತಿದ್ದಾಳೆಂದೇ ರಂಗಸ್ವಾಮಿ ಭಾವಿಸುವುದು, ಲೋಕಜ್ಞಾನವಿಲ್ಲದೆ ಸರ್ವರಿ ಗಿಂತಲೂ ತಾನು ಮೇಲೆಂದೂ ಸರ್ವರೂ ತನ್ನ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆಂದೂ ಭಾವಿಸುವ ಅವ್ಯಾವಹಾರಿಕತೆಯ ನಿದರ್ಶನವಾಗಿದೆ. ಇವನ ಹುಚ್ಚು ಭಾವನೆ ಹಂತಹಂತವಾಗಿ ಮೇಲೇರುತ್ತಾ ಹೋಗುತ್ತದೆ. ಗೆಳೆಯನ ಹೆಂಡತಿಯ ಚರ್ಯೆಗಳನ್ನೆಲ್ಲಾ ಆತ ತನಗನುಕೂಲವಾಗುವಂತೆ ಹೊಂದಿಸಿಕೊಳ್ಳುತ್ತಾನೆ. ಕೊನೆಗೆ ಆಕೆಯನ್ನು ಹಿಡಿಯಲು ಹೋದಾಗ ‘ಸೀತೆಯ ಪುಣ್ಯಕ್ಕೆ ಎಣೆಯೇ ಇಲ್ಲ’ ಎಂದು ಆಕೆ ಹೇಳುವ ಮಾತು ನೂರು ಕಶಾಘಾತಗಳಿಗಿಂತ ಹೆಚ್ಚಿನ ಪೆಟ್ಟನ್ನು ರಂಗಸ್ವಾಮಿಗೆ ಕೊಡುತ್ತದೆ. ಸೀತೆ ತನಗೆ ತಕ್ಕವಳಲ್ಲವೆಂದು ಭಾವಿಸಿದ್ದ ಗಂಡು ಕೊನೆಗೆ ‘ಸೀತೆಗೆ ಇದುವರೆಗೆ ತಕ್ಕ ಗಂಡನಾಗಿದ್ದೆ. ಇಂದು ಆಯೋಗ್ಯನಾದೆ’ ಎಂದು ರೋಧಿಸುವುದು ಅದ್ಭುತ ಪರಿಣಾಮಕಾರಿಯಾಗಿದೆ. ಈ ಮಾತು ಕೇವಲ ಒಂದು ಸಾಮಾನ್ಯ ಮಾತಾಗಿ ಬರದೆ ಕತೆಯ ಸಾರಸರ್ವಸ್ವವಾಗಿ ಬಂದು ಕತೆಗೆ ಒಂದು ಅಪೂರ್ವವಾದ ಶಕ್ತಿಯುತವಾದ ರಮ್ಯ ಮುಕ್ತಾಯವನ್ನು ನೀಡುತ್ತದೆ. ಅನಾವಶ್ಯಕ ಮಾತಿನ ಅಡ್ಡಾಟವಿಲ್ಲದೆ ಕತೆ ಸವೇಗವಾಗಿ ಸಾಗಿ ನಿರ್ದಿಷ್ಟ ಗುರಿಯನ್ನು ಮುಟ್ಟುತ್ತದೆ.

‘ನಮ್ಮ ಮೇಷ್ಟರು’ ಮತ್ತು ‘ಮೊಸರಿನ ಮಂಗಮ್ಮ’ ನಮ್ಮ ಹಳ್ಳಿಯ ಹೆಣ್ಣು ಮಕ್ಕಳ ತೋರಿಕೆಯ ಕಾಠಿಣ್ಯದ ಒಡಲಲ್ಲಿ ಹುದುಗಿರುವ ಮುಗ್ಧವೂ ಅಕುಟಿಲವೂ ಸಾಂದ್ರವೂ ಆದ ಶುಚಿಪ್ರೇಮವನ್ನು ಪ್ರತಿನಿಧಿಸುವ ಕತೆಗಳು. ಉಪಾಧ್ಯಾಯರ ಬಗ್ಗೆ ನಾವು ತೋರಿಸುವ ನಿರ್ಲಕ್ಷ್ಯ ಅನಾದರಗಳ ಪ್ರತೀಕವಾಗಿ ಮೇಷ್ಟರು ಕಾಣುತ್ತಾರೆ. ಉಪ್ಪಿಗೆ ಕಾಸಿಲ್ಲದೆ, ಹೆಂಡತಿಯ ಮಾತನ್ನು ಕೇಳಲಾಗದೆ, ಶಾಲೆಗೆ ಬಂದು ಅವರು ಮಾಡುವ ಗಡಿಬಿಡಿ ಒಂದೆಡೆ ನಗೆಯನ್ನು ತಂದರೆ, ಮರುಕ್ಷಣದಲ್ಲೇ ಮರುಕವನ್ನು ಹುಟ್ಟುಸುತ್ತದೆ. ಇನ್ಸ್‌ಪೆಕ್ಟರು ಬಂದು ಗದರಿಸಿದಾಗ ‘ಮಹಾಸ್ವಾಮಿ’ ಎನ್ನುವ ಮಾತಲ್ಲದೆ ಬೇರೇನೂ ಅವರ ಬಾಯಿಂದ ಹೊರಡು ವುದೇ ಇಲ್ಲ. ಅವರ ನಿಷ್ಕಪಟತೆ, ನಿಸ್ವಾರ್ಥ, ದೈನ್ಯಜೀವನ ತುಂಬಾ ಸಹಾನುಭೂತಿಪರ ಅಭಿವ್ಯಕ್ತಿಯನ್ನು ಹೊಂದಿವೆ. ಹೆಂಡತಿ ಸ್ವಲ್ಪ ಬಾಯಾಳಿಯಾದರೂ, ‘ನಾನು ಹುಡುಗಿಯೆಂದು ತಿಳಿದು ನಿಮಗೆ ಸಂಬಂಳ ಹೆಚ್ಚಿಸಿಯಾರು. ನಿಜ ಸ್ಥಿತಿಯನ್ನು ತಿಳಿಸಿ’ ಎನ್ನುವಲ್ಲಿನ ಅನ್ಯಾದೃಶ್ಯವಾದ ನಿಷ್ಕಾಪಟ್ಟ, ಸಾಯುವಾಗ ಕಾಲು ಹಿಡಿದುಕೊಂಡು ನಾನು ಹೋಗುತ್ತೇನೆ. ನನ್ನ ಮೆಲೆ ಏನೂ ಕೋಪವನ್ನು ಇಟ್ಟುಕೊಳ್ಳಬೇಡಿ. ನಿಮಗೆ ಬಹಳ ಕಷ್ಟವಾಗುವ ಹಾಗೆ ಮಾಡಿದೆ ಎಷ್ಟೋ ಸಲ, ಎನ್ನುವಲ್ಲಿನ ವಿನಯಶ್ರೀ, ಅಕೃತ್ರಿಮ ಪ್ರೇಮ ನಮ್ಮ ಸಂಸ್ಕೃತಿಯ ಶುದ್ಧಾಂಶಗಳಾಗಿವೆ. ಮಾಸ್ತಿಯವರ ಸೂಕ್ಷ್ಮದರ್ಶಕ ಪ್ರತಿಭೆ ಪಾತ್ರಗಳ ಆಂತರ್ಯವನ್ನು ಹೊಕ್ಕು ಅಲ್ಲಿ ಹುದುಗಿರುವ ಮಾನವೀಯತೆಯ ಸೆಲೆಯನ್ನು ಹೇಗೆ ಮೇಲೆತ್ತಿ ತೋರಿಸಬಲ್ಲುದೆಂಬುದಕ್ಕೆ ಇದು ಸಾಕ್ಷಿಯಾಗಿದೆ. ‘ಮೊಸೂರಿನ ಮಂಗಮ್ಮ’ ಮೊಸರು ಮಾರುವ ಹಳ್ಳಿಯ ಮುದುಕಿಯೊಬ್ಬಳ ಮನೋಘರ್ಷಣೆಯ ಸೂಕ್ಷ್ಮ ಸುಂದರ ಚಿತ್ರ. ತನ್ನ ಗಂಡ ಚಿಕ್ಕಂದಿನಲ್ಲೇ ತನ್ನನ್ನು ತೊರೆದು ನಾಚೂಕಿನ ಹೆಣ್ಣೊಬ್ಬಳಿಗೆ ಆಕರ್ಷಿತನಾಗಿ ಬಾಳನ್ನು ಬರಡುಮಾಡಿ ಹೋದ ತನ್ನ ಧಾರುಣ ಅನುಭವ ಬೇರಾರಿಗೂ ಆಗದಿರಲೆಂದು,  ಗಂಡನ ಕಣ್ಣಿಗೆ ಅಂದವಾಗಿ ಕಾಣುವಂತೆ ಹೆಣ್ಣಿರಬೇಕೆಂದು ಅವಳು ಕೊಡುವ ಬುದ್ದಿವಾದ, ಚಿಕ್ಕಂದಿನಿಂದಲೂ ಸಾಕಿ ಸಲಹಿ ದೊಡ್ಡವನನ್ನಾಗಿ ಮಾಡಿದ ತನ್ನನ್ನು ಕಡೆಗಣಿಸಿ ಎಡಗಾಲ ದಲ್ಲಿ ಬಂದ ಮಡದಿಯ ಮಾತಿಗೆ ತಾಳ ಹಾಕುವ ಮಗನ ಮೇಲೆ ಅಧಿಕಾರ ಹೊಂದುವ ಅವಳ ಚಪಲ, ತನ್ನ ಮಗನನ್ನು ತನ್ನಿಂದ ದೂರಮಾಡುತ್ತಿರುವಳೆಂದು ಸೊಸೆಯ ಮೇಲೆ ಅವಳು ಕಾರುವ ಆಕ್ರೋಶ, ಮೊಮ್ಮಗ ತನ್ನೆಡೆಗೆ ಬರಲಿಲ್ಲವೆಂದು ಹಲುಬುವ ಅವಳ ಹೃದಯದ ತುಡಿತ, ಪರಿಸ್ಥಿತಿಯ ದುರ್ಲಾಭ ಪಡೆಯಲು ಬಂದ ರಂಗಪ್ಪನ ಬೇಳುವೆ ಮಾತಿಗೆ ಬಲಿಯಾಗದೆ ಅವಳು ತೋರುವ ಅಚಂಚಲ ನಿಷ್ಠೆ, ಮಗ ಬೇರೆಯಾದ ಮೇಲೆ ತನ್ನ ಸಂಪಾದನೆ ಮತ್ತಾರಿಗೆಂದು ಆ ಅಪರ ವಯಸ್ಸಿನಲ್ಲಿ ಮಕಮಲ್ ಜಕೀಟು ಹೊಲಿಸಿಕೊಂಡು ಹಾಕಿಕೊಳ್ಳುವ ಅವಳ ಮನೋವಿಭ್ರಮ – ಹೀಗೆ ಅವಳ ಮನಸ್ಸಿನ ಪದರ ಪದರವನ್ನೂ ಸೂಕ್ಷ್ಮವಾಗಿ ವೈಜ್ಞಾನಿಕವಾಗಿ ವಿಶ್ಲೇಷಿಸಿ ಎಲ್ಲಿಯೂ ಅಸಹಜತೆ ಸುಳಿಯದಂತೆ ಅತಿರೇಕ ತಲೆಹಾಕದಂತೆ ತುಂಬ ಒಪ್ಪವಾಗಿ ಸತ್ವಯುತವಾಗಿ ಕಲಾತ್ಮಕವಾಗಿ ಲೇಖಕರು ಚಿತ್ರಿಸಿದ್ದಾರೆ. ಬಳಸಿರುವ ದೇಶಿ ನುಡಿಗಳು, ನಿರ್ಮಿಸಿರುವ ಪರಿಸರ, ಕ್ರಮಕ್ರಮವಾಗಿ ವಿಕಾಸವಾಗುವ ಪಾತ್ರ ಮಹತ್ವ ಎಲ್ಲವೂ ಸಮುಚಿತವಾಗಿದ್ದು ಶ್ರೇಷ್ಠ ಕಥನಕಲೆಗೆ ಮಾದರಿಯಾಗಿವೆ. ‘ಇಂಥ ಕಥೆಯನ್ನು ಸಲೀಸಾಗಿ ಹೇಳಿಬಿಡಬಹುದು’ ಎಂಬ ಮಾತಾಗಲೀ ‘ಲೇಖಕನ ರಕ್ತದಿಂದ ಹುಟ್ಟದ್ದಲ್ಲ ಕತೆ’ ಎಂಬ ಅಸಮಂಜಸ ತೀರ್ಮಾನ ವಾಗಲೀ ಸಂಯಮ ರಹಿತವಾದ ಆಡಂಬರದ ಮಾತಾಗುತ್ತದೆಯಲ್ಲದೆ ಶುಚಿ ವಿಮರ್ಶೆ ಯಾಗುವುದಿಲ್ಲ.

‘ಬೀದಿಯಲ್ಲಿ ಹೋಗುವ ನಾರಿ’ ಒಂದು ಕುತೂಹಲಕರವಾದ ವೃತ್ತಾಂತ. ಪ್ರಾರಂಭವೇ ತುಂಬ ಮನೋಹರ. ಆ ನಾರಿ ಬಹು ಸುಂದರಿಯಾಗಿದ್ದಳು. ರೈಲ್ವೆ ಸ್ಟೇಷನ್ನಿನಲ್ಲಿದ್ದವರಲ್ಲಿ ಮುಕ್ಕಾಲು ಪಾಲು ಜನ ಅವಳ ಕಡೆ ನೋಡುತ್ತಿದ್ದರು….. ಈ ಕೋಲಾಹಲದಲ್ಲಿ ಸಿಕ್ಕಿ ಹೆದರಿದವಳಂತೆ ತೋರುತ್ತಿದ್ದಳು. ಹೆದರಿದಂತೆ ತೋರುತ್ತಿದ್ದುದರಿಂದ ಮತ್ತಷ್ಟು ಸುಂದರಿ ಯಾಗಿ ಕಾಣುತ್ತಿದ್ದಳು. ಈ ಸರಳವಾದ ಸ್ವಾಭಾವಿಕವಾದ ವರ್ಣನೆ ಸಾಂಪ್ರದಾಯಕವಾದ ಕಣ್ಣು ಮೂಗು ತುಟಿಗಳ ವರ್ಣನೆಯಿಂದ ಉಂಟಾಗುವ ಅವಳ ಸೌಂದರ್ಯದ ಕಲ್ಪನೆಗಿಂತ ಹತ್ತು ಪಾಲು ಶಕ್ತಿಯುತವಾಗಿದ್ದು ನಮ್ಮ ಊಹನಾಶಕ್ತಿಗೆ ಸಾಣೆಕೊಟ್ಟು ಆಕೆಯ ಚೆಲುವನ್ನು ಸುಂದರತರವಾಗಿ ನಮಗೆ ತೋರಿಸುತ್ತದೆ. ಆಕೆ ಅಸಹಾಯಕಳೆಂದು ತಿಳಿದು ಸಹಾಯ ಮಾಡುವ ಶ್ರೀನಿವಾಸಯ್ಯನ ದುರುದ್ದೇಶರಹಿತವಾದ ಉದಾತ್ತ ಮನೋಭಾವ ಮೊದ ಮೊದಲು ಅಸಹಜವೆಂಬಂತೆ ಕಂಡರೂ, ಕತೆ ಬೆಳೆದಂತೆ ಅದಕ್ಕೆ ಒಂದು ಘನತೆ ಗಾಂಭೀರ್ಯ ಉದ್ದೇಶ ಲಭ್ಯವಾಗುತ್ತದೆ. ಆಕೆಯ ಒನಪು ವೈಯಾರಗಳು, ಶ್ರೀನಿವಾಸಯ್ಯನ ಶುಚಿತ್ವ, ಗೆಣೆಯನ ಲೋಕಸಹಜವಾದ ವಿಟತನದ ನಡವಳಿಕೆ ತುಂಬ ಸ್ವಾಭಾವಿಕವಾಗಿ ವರ್ಣಿತ ವಾಗಿವೆ. ಆ ವೇಶ್ಯೆ ತನ್ನ ತಂದೆಯ ಪ್ರಸಾದದಿಂದ ಜನಿಸಿದವಳು ಎಂದು ಗೊತ್ತಾದಾಗ ಅವಳು ಪತಿತೆಯೆನ್ನುವ ಭಾವ ತನ್ನಲ್ಲಿಲ್ಲವೆಂದು ಆಕೆಗೆ ಮುತ್ತು ಕೊಡುತ್ತಾನೆ. ಆ ವೇಶ್ಯಾಕುಮಾರಿ ತನ್ನ ಮಗಳು ಕಮಲಳನ್ನು ನೆನಪಿಗೆ ತರುತ್ತಾಳೆ. ಸೌಂದರ್ಯಕ್ಕೆ ಬಂದ ಗತಿಯನ್ನು ನೆನೆದು ಆತ ಖಿನ್ನನಾಗುತ್ತಾನೆ. ಮನೆಯಲ್ಲಿರುವ ಮಗಳು ಶುದ್ಧ ಚರಿತ್ರಳೆಂದು ಲೋಕ ಭಾವಿಸುತ್ತದೆ. ಆದರೆ ಹೊರಗಡೆ ಇರುವವಳು? ಈ ಭಾವ ಅವನನ್ನು ಮುತ್ತುತ್ತದೆ. ಸರ್ವರಲ್ಲಿಯೂ ತನ್ನ ತಂಗಿ, ಮಗಳ ಚಿತ್ರವನ್ನೇ ಕಾಣುವ ಈ ಉದಾತ್ತ ಮನಸ್ಸು ಶ್ರೀನಿವಾಸರ ಅಗಾಧ ಮಾನವೀಯತೆಯ ಅನುಕಂಪೆಯ ನಿರ್ಮಲ ದೃಷ್ಟಿಯ ಫಲರೂಪವಾಗಿದೆ. ಯಾರಾದರೂ ನೋಡಿಯಾರೆಂದು ಅತ್ತಿತ್ತ ನೋಡಿ ಭಿಕ್ಷುಕನಿಗೆ ಕಾಸು ಹಾಕುವ ಶ್ರೀನಿವಾಸಯ್ಯ ಗೋಲ್ಡ್‌ಸ್ಮಿತ್ತನ ‘ಮ್ಯಾನ್ ಇನ್ ಬ್ಲ್ಯಾಕ್’ನನ್ನು ಸ್ಮರಣೆಗೆ ತರುತ್ತಾನೆ.

‘ಇಂದಿರೆಯೊ, ಅಲ್ಲವೋ?’ ಮತ್ತು ‘ಮೇಲೂರು ಲಕ್ಷ್ಮಮ್ಮ’ ಮನೋವೈಜ್ಞಾನಿಕವಾದ ಕತೆಗಳು. ಮೊದಲನೆಯ ಹೆಂಡತಿ ಇಂದಿರೆ ಸತ್ತಮೇಲೆ ನಾರಾಯಣಮೂರ್ತಿ ಮಗುವನ್ನು ನೋಡಿಕೊಳ್ಳಲೆಂದು ಸಾವಿತ್ರಿಯನ್ನು ಮದುವೆಯಾದ. ಆದರೆ ಆಕೆ ಮಗುವನ್ನು ಬೇರೆ ಮಾಡಿದಳು. ಕುಳಿತಲ್ಲಿ ನಿಂತಲ್ಲಿ ಅವನಿಗೆ ಇಂದಿರೆಯ ಪ್ರೇಮಭರಿತವಾದ ನಿಷ್ಕಳಂಕವಾದ ಮುಖ ಕಾಣುತ್ತಿತ್ತು. ಅರ್ಧ ನಿದ್ರಾವಸ್ಥೆಯಲ್ಲಿ ಅವನಿಗೆ ಇಂದಿರೆ ಕಾಣಿಸಿದಳು. ‘ಅವನ ಹೃದಯದಲ್ಲಿ ರಕ್ತಚಲನೆ ಇಂ-ದಿ-ರಾ ಶಬ್ದವನ್ನನುಸರಿಸಿ ನಡೆಯತೊಡಗಿತ್ತು’. ಈ ಅರೆಜಗೃತ ಮನಸ್ಸಿನಲ್ಲಿ ಇಂದಿರೆ ‘ನನಗೆ ನೀವು ಅಂದರೆ ಪ್ರೀತಿ ಅಲ್ಲ, ನನಗೆ ನೀವು ಎಂದರೆ ಬಹು ಹುಚ್ಚು’ – ಎಂದು ಕೆನ್ನೆಗೆ ಕೆನ್ನೆ ಇಡುವ ಚತುರ ಮಾತುಗಾರಿಕೆಯಲ್ಲಿ ತುಂಬಿದ ಅಪಾರ ನಲ್ಮೆ, ಆ ಸಂವಾದಗಳಲ್ಲಿರುವ ಸರಸತೆ ಜೇನ್ಸವಿ ಆನಂದಗಳು ನಾರಾಯಣ ಮೂರ್ತಿಯ ಪ್ರಕೃತ ಸ್ಥಿತಿಯೊಡನೆ ವೈದೃಶ್ಯವನ್ನು ಕಲ್ಪಿಸಿ ಅಗಾಧವಾದ ಪರಿಣಾಮವನ್ನುಂಟು ಮಾಡುತ್ತವೆ. ಅವನು ಮಡದಿಯ ಮೋಹಕ ಕನಸನ್ನು ಕಾಣುತ್ತಿರುವಾಗಲೇ, ಮಗ ತಾಯಿಯ ಲೋಕಕ್ಕೆ ತೆರಳಿದ ಕೊನೆಯ ಸಂಗತಿ ಕರುಣರಸವನ್ನು ತೆರೆತೆರೆಯಾಗಿ ಉಕ್ಕಿಸುತ್ತದೆ. ಶ್ರೀನಿವಾಸರ ಸರಳ ಪದಶಯ್ಯೆ ಭಾವಭಾರದಿಂದ ಇಲ್ಲಿ ಕಂಗೊಳಿಸಿದೆ. ಸಾಮಾನ್ಯರ ಕೈಯಲ್ಲಿ ಅತಿರೇಕದ ಅಪ್ರಬುದ್ಧ ಕಲ್ಪನೆಯಾಬಹುದಾಗಿದ್ದ ಕತೆ ಎಚ್ಚರದಿಂದ ಅನುಭವ ಪ್ರಾಮಾಣ್ಯ ದಿಂದ ನಿರೂಪಣಾ ಕೌಶಲದಿಂದ ಸುಂದರಕತೆಯಾಗಿ ಪರಿಣಮಿಸಿದೆ.

ಹುಟ್ಟುಕುರುಡಿ ಲಕ್ಷ್ಮಮ್ಮ ಗುಣಸಂಪನ್ನೆ. ತಂದೆಯ ಅಕ್ಕರೆಯ ಮಗಳಾಗಿ ಬೆಳೆದು ಅಣ್ಣ ನರಸಿಂಹಯ್ಯನ ವಾತ್ಸಲ್ಯದಿಂದ ಗಂಡನನ್ನೂ ಕೂಡಿದಳು. ಕುರುಡರಾದ ಎರಡು ಮಕ್ಕಳನ್ನು ಹಡೆದು ಅತ್ತೆ ಮತ್ತು ಗಂಡನ ಕೈಯಲ್ಲಿ ಅವಳು ಅನ್ನಿಸಿಕೊಂಡ ಮಾತುಗಳು, ಆದರೂ ಮಕ್ಕಳ ಪ್ರೇಮದಿಂದ ತಾಳಿಕೊಂಡ ಸಹನಾಶೀಲತೆ, ಗಂಡನ ಏಟಿಗೆ ತುತ್ತಾಗಿ ಮಗ ಮಡಿದಾಗ ಪಡುವ ಬವಣೆ, ಕೊನೆಗೆ ತನ್ನಂತೆ ಕುರುಡಿಯಾದ ಮಗಳಿಗೆ ಅವಳು ಬೋಧಿಸುವ ಅನುಭವದ ಸುಖ ಸಂಸಾರದ ಮಾರ್ಗದರ್ಶಕ ಮಾತುಗಳು ಎಂಥವರ ಮನಸ್ಸನ್ನಾದರೂ ಕಲಕುತ್ತವೆ. ಆ ಯಾತನೆ ಅತ್ಯಂತ ಅಸಹನೀಯವಾದದ್ದು. ಒಂದಾದ ಮೇಲೊಂದಾಗಿ ಬಂದೆರಗಿದ ಕಷ್ಟ ಪರಂಪರೆಗಳಿಂದ ಜಿಗುಪ್ಸೆಗೊಂಡು ಗಂಡ ಗೃಹ ತ್ಯಾಗ ಮಾಡಿದ. ಹುಟ್ಟಿದ ಮಗು ಮತ್ತೆ ತೀರಿಕೊಂಡಿತು. ಬುದ್ದಿ ಭ್ರಮಿಸಿತು. ಹುಟ್ಟಿನಿಂದಲೂ ಕಷ್ಟದ ಕುಲುಮೆಯಲ್ಲಿ ಬೆಂದ ಜೀವ ತೊರೆದು ಹೋಗಿ ಗಂಡನಿಗಾಗಿ ಪಡುವ ಪರಿತಾಪ, ಬಾಳಿನಲ್ಲಿ ತಾನು ಕಂಡುಂಡ ಅನುಭವಗಳನ್ನೆ ಬುದ್ದಿಭ್ರಮಣೆಯಲ್ಲಿ ಮತ್ತೆ ಉಚ್ಚರಿಸುವ ದೃಶ್ಯ, ಕರುಳನ್ನು ಕತ್ತರಿಸುತ್ತದೆ. ಸ್ತ್ರೀವಾದಿ ರಚನೆಯಲ್ಲಿ ಶ್ರೀನಿವಾಸರು ತೋರುವ ಅಪಾರ ಚದರ ಆಚ್ಚರ ಸಹಾನುಭೂತಿಗಳು ಈ ಪಾತ್ರದಲ್ಲಿ ಮೈವೆತ್ತಿವೆ.

‘ಕೃಷ್ಣಮೂರ್ತಿಯ ಹೆಂಡತಿ’ ಇಂಥದೇ ಒಂದು ಕರುಣರಮ್ಯ ಚಿತ್ರ. ಬುದ್ದಿವಂತನಾದ ಹುಡುಗ, ರೂಪಸಿಯಾದ ಹುಡುಗಿ. ಹಿರಿಯರ ಇಚ್ಛೆಯಂತೆಯೇ ಮದುವೆ ನಡೆಯಿತು. ಎರಡು ಕುಟುಂಬಗಳ ಮಧ್ಯೆ ವಿರಸ ಬಂದು ಗಂಡ ಹೆಂಡಿರು ದೂರವಾಗಿಯೇ ಇರಬೇಕಾಗಿ ಬಂದರೂ ಅವರಿಬ್ಬರಲ್ಲೂ ಇದ್ದ ಪ್ರೇಮ ಅತಿಶಯವಾದದ್ದು. ಅದರೆ ಕೃಷ್ಣಮೂರ್ತಿ ಯಾವುದೋ ರೋಗಕ್ಕೆ ತುತ್ತಾಗಿ ಬೊಂಬಾಯಿಯಲ್ಲಿ ತೀರಿಹೋದ. ಇದಾವುದನ್ನೂ ತಿಳಿಯದ ಹಸು ಮನಸ್ಸಿನ ಹೆಣ್ಣು ಮಗು ಪತಿಯ ನಿರೀಕ್ಷೆಯಲ್ಲೇ ಜೀವ ಹಿಡಿದಿತ್ತು. ಕೊನೆಗೆ ಗಂಡ ಮಡಿದನೆಂದು ಪರೋಕ್ಷವಾಗಿ ತಿಳಿದಾಗ ಬಾವಿಯಲ್ಲಿ ಬಿದ್ದು ತನ್ನ ನಿಸ್ಸಾರವಾದ ಬಾಳುವೆಯನ್ನು ನೀಗಿಕೊಂಡಿತು. ಒಲಿದು ಒಂದಾಗಿ ಬಾಳಿನ ಸುಖ ಸಂತೋಷ ಗಳನ್ನು ಅನುಭವಿಸಿ ಆನಂದದಿಂದ ಜೀವಿಸಬೇಕಾಗಿದ್ದ ಎರಡು ಜೀವನಗಳು ವಿಧಿಯ ನಿಷ್ಠುರ ವಜಘಾತಕ್ಕೆ ಸಿಕ್ಕಿ ಎಳೆತನದಲ್ಲೇ ಬಾಡಿ ಹೋದ ಹೃದಯಭೇದಕ ಕತೆಯಿದು. ಕತೆ ಹೆಜ್ಜೆ ಹೆಜ್ಜೆಗೂ ಕುತೂಹಲವನ್ನೂ ಕೆರಳಿಸುತ್ತಾ ಸವೇಗವಾಗಿ ಬೆಳೆದು ಪರಿಣಾಮಕಾರೀ ಅಂತ್ಯವನ್ನು ಮುಟ್ಟುತ್ತದೆ. ಆ ಎಳೆ ಹೃದಯದ ಭಾವರಾಗಗಳ ತುಮುಲ ಘರ್ಷಣೆಯ ಚಿತ್ರ ಇಲ್ಲಿ ಇಲ್ಲವಾದರೂ, ಆ ಚರ್ಚೆಯ ಒಂದೆರಡು ರೇಖೆಗಳಲ್ಲೇ ಅದರ ಅಂತರಂಗ ದರ್ಶನವಾಗುತ್ತದೆ. ಆ ತಾಯಿಯ ಮಾತೃಪ್ರೇಮಪುರಸ್ಸರವಾದ ಬವಣೆ ತ್ಯಾಗಗುಣಗಳು ಮನೋಜ್ಞವಾಗಿವೆ. ಆದರೆ ಯಾವ ಸುತ್ತು ಸುಳಿಗಳೂ ಇಲ್ಲದ ನೇರವಾದ ಸರಳವಾದ ಕಥನಕ್ರಮ ಅನುಭವವನ್ನು ಸರಳಗೊಳಿಸಿ ಬಿಡುವುದರಿಂದ, ಆಗಬೇಕಾದಷ್ಟು ತೀವ್ರಾನುಭವ ಪರಿಣಾಮ ಆಗುವುದಿಲ್ಲ.

ಗೂಡಾರ್ಥದ್ಯೋತಕವಾದ ಒಂದು ಅಪೂರ್ವ ರೂಪಕ ಕತೆ ‘ಮಸುಮತ್ತಿ’. ಮಾಸ್ತಿ ಯವರ ಪ್ರಸಿದ್ಧ ಕತೆಗಳಲ್ಲಿ ಇದೂ ಒಂದು. ಒಮ್ಮೆ ಅತ್ಯುಚ್ಚ ವೈಭವದಿಂದ ಲೋಕಾಶ್ಚರ್ಯ ಕರವಾದ ಸಂಸ್ಕೃತಿ ನಾಗರಿಕತೆಗಳಿಂದ ಬಾಳಿ ಬೆಳಗಿದ ಭಾರತ, ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡ ಮೇಲೆ ತನ್ನ ಧನಕನಕಗಳ ಜೊತೆಯಲ್ಲೇ ಅಮೂಲ್ಯ ಕಲಾಕೃತಿಗಳನ್ನು ಕಳೆದುಕೊಂಡಿತು. ನಮ್ಮ ಜನರ ಪ್ರತಿಬೆಯ ಮನೋಜ್ಞ ಸೃಷ್ಟಿಯೆಲ್ಲವನ್ನೂ ಅಜ್ಞಾನದ ದುರ್ಲಾಭ ಪಡೆದು ಉದ್ಧಾರದ ಹೆಸರಿನಲ್ಲಿ ತಮ್ಮ ದೇಶಕ್ಕೆ ಆ ಜನ ಸಾಗಿಸಿದರು. ಒಮ್ಮೆ ನಿರ್ವೀರ್ಯವಾಗಿ ಕಳಾಹೀನವಾಗಿರುವ ಭಾರತ ಮತ್ತೊಮ್ಮೆ ಚೇತರಿಸಿಕೊಂಡರೆ ಆಗ ತನ್ನ ಹಿಂದಿನ ವಿಶಿಷ್ಟತೆಗಳಾವುವನ್ನೂ ಕಾಣದೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಳ್ಳಲು ಕಷ್ಟವಾಗಿ ಮತ್ತೆ ಪತನದ ಹಾದಿ ಹಿಡಿಯಬಹುದು ಎಂಬ ತತ್ವ ಇಲ್ಲಿ ಸುಂದರ ಕತೆಯಾಗಿ ಮೈದಾಳಿದೆ. ಮಸುಮತ್ತಿಯ ವರ್ಣನೆ, ಅಲ್ಲಿನ ಕೊಳದ ಬಳಿ ಕುಳಿತು ಎಮಿಲಿ ಗತಕಾಲದ ಅಲ್ಲಿನ ವೈಭವ ಕ್ರಿಯೆಗಳನ್ನು ಊಹಿಸಿಕೊಳ್ಳುವ ರೋಮಾಂಚನಕಾರೀ ಸನ್ನಿವೇಶ, ಆ ಹಳ್ಳಿಯ ಗತಿಸಿದ ಕಲಾತಪಸ್ವಿಯ ಮೋಹಕ ಮುರಳಿಗಾನದ ಚಿತ್ರ, ಅಪೂರ್ಣ ಚಿತ್ರವನ್ನು ತೋರಿಸಬಾರದೆಂಬ ಮಾತಿನ ಹಿಂದೆ ಅಡಗಿರುವ ಪರಂಪರಾಗತವಾದ ನಂಬಿಕೆ – ಮುಂತಾದವುಗಳು ಹೃದ್ರಮ್ಯವಾಗಿ ನಿರೂಪಿತವಾಗಿವೆ. ಕಲ್ಪಿಸಿರುವ ಸನ್ನಿವೇಶ ತುಂಬ ಸಮಂಜಸವಾಗಿದ್ದು ತುಂಬ ಅರ್ಥವತ್ತಾಗಿವೆ : ‘ಅಣ್ಣಾ, ಈ ಜನ ಭಾರತಮಾತೆ ಎನ್ನುತ್ತಾರಲ್ಲಾ, ಆ ಸುಂದರಿ ಈಗ ಸನ್ನಿಯಿಂದ ಮಲಗಿದ್ದಾಳೆ. ಮಕ್ಕಳು ಹತ್ತಿರ ಕುಳಿತು ಅಮ್ಮಾ ಎಂದು ಅಳುತ್ತಿವೆ. ದೇಹವನ್ನು ನೋಡಿದರೆ ಜೀವ ಇನ್ನು ಈಗಲೋ ಆಗಲೋ ಬರುತ್ತೆ ಎನ್ನುವ ಹಾಗೆ ಕಳೆ ಇದೆ. ಇಂಥಾ ಸಮಯದಲ್ಲಿ ನಾವು ಮೈಯ್ಯ ಮೇಲಿರುವ ಬಳೆ, ಉಂಗುರ, ಮೂಗುತಿಯನ್ನು ತೆಗೆದುಕೊಂಡು ಹೋಗಿ ಅದನ್ನು ವಿರೂಪ ಮಾಡಿದರೆ ಜೀವ ಬಂದಾಗ್ಗೆ ಅದಕ್ಕೆ ದೇಹದ ಗುರುತು ಸಿಕ್ಕದೆ ಹೋಗುವುದು.’ ಈ ಮಾತುಗಳಲ್ಲಿ ಇಡೀ ಕತೆಯ ಸತ್ವ ಕೆನೆಗಟ್ಟಿ ನಿಂತಿದೆ. ಲೇಖಕರ ದೇಶಪ್ರೇಮ ಸಂಸ್ಕೃತಿಯ ಅಭಿಮಾನ ಕಳಕಳಿಗಳು ಇಲ್ಲಿ ಸುವ್ಯಕ್ತವಾಗುತ್ತವೆ. ಆದರೂ ಆವೇಶದ ಉಪದೇಶದ ಧೋರಣೆಯ ಭಾಷಣ ಚಾಪಲ್ಯ ಈ ಕತೆಯಲ್ಲಿ ಇಲ್ಲದಿರುವುದು ಸಂಯಮಪೂರ್ಣ ಕಲೆಗಾರಿಕೆಯ ಕುರುಹಾಗಿದೆ.

‘ಕಾಮನಹಬ್ಬದ ಒಂದು ಕತೆ’ ಮತ್ತು ‘ಕಲ್ಮಾಡಿಯ ಕೋಣ’ಗಳು ಹಳ್ಳಿಗರ ಅಜ್ಞಾನ ಜನ್ಯವಾದ ಮೂಢನಂಬಿಕೆಗಳನ್ನು ವಿಡಂಬಿಸುವ ಕತೆಗಳಾಗಿವೆ. ಆದರೆ ಕಟಕಿಯ ಅವಹೇಳನದ ತಿರಸ್ಕಾರದ ವಿಡಂಬನೆಯಲ್ಲ, ಸಾತ್ವಿಕವಾದ ಆರ್ದ್ರ ಹೃದಯದ ಸಹಾನುಭೂತಿ ಪರವಾದ ವಿಡಂಬನೆ. ಮೊದಲಿನ ಕತೆಯಲ್ಲಿ, ಪತಿಪ್ರಾಣೆಯಾಗಿದ್ದ ಸಾವಿತ್ರಮ್ಮನ ಗಂಡ ಚಿಕ್ಕಂದಿ ನಲ್ಲಿಯೇ ಎಲ್ಲಿಯೋ ಹೋದವನು ಬರಲಿಲ್ಲ. ಕೊನೆಗೆ ಅವನು ಸತ್ತನೆಂಬ ಸುದ್ದಿ ಬಂತು. ಈ ಜನ್ಮದಲ್ಲಿ ಇಲ್ಲವಾದ ಗಂಡನ ಸುಖವನ್ನು ಮುಂದಿನ ಜನ್ಮದಲ್ಲಾದರೂ ಪಡೆಯುವ ಉದ್ದೇಶದಿಂದ ಆಕೆ ಸ್ವಯಿಚ್ಛೆಯಿಂದ ಕಾಮನ ಹಬ್ಬದ ಬೂದಿಯನ್ನು ತಲೆಯ ಮೇಲೆ ಸುರಿಸಿಕೊಂಡು ಅಶುಭ ಮಾಡಿಕೊಳ್ಳುತ್ತಿದ್ದಳು. ವಿಚಿತ್ರವೆಂದರೆ, ಈ ಪ್ರಗಾಢವಾದ ನಂಬಿಕೆ ಶ್ರದ್ಧೆಗಳು ಈ ಜನ್ಮದಲ್ಲಿಯೇ ಸಾವಿತ್ರಮ್ಮನಿಗೆ ಸಂಸಾರ ಸುಖವನ್ನು ಒದಗಿಸುತ್ತವೆ. ಒಂದು ಕಾಮನ ಹಬ್ಬದಲ್ಲಿ ಆಕೆ ಬೂದಿಯನ್ನು ಸುರಿಸಿಕೊಳ್ಳುತ್ತಿರುವಾಗ, ದೇಶಾಂತರ ಹೋಗಿ ಮಡಿದನೆಂದು ಭಾವಿಸಲಾಗಿದ್ದ ಸಾವಿತ್ರಮ್ಮನ  ಗಂಡ ಹಿಂದಿರುಗಿ ಬಂದು ತನ್ನ ಹೆಂಡತಿಯ ಕರುಣಾಜನಕ ಪರಿಸ್ಥಿತಿಯನ್ನು ತಾನೇ ಕಣ್ಣಾರೆ ಕಾಣಬೇಕಾಗುತ್ತದೆ. ಚತುರ ಸಂವಿಧಾನದ, ಪರಂಪರೆಯ ಗಾಳಿ ಬೆಳಕಿನ ಸತ್ಯವನ್ನು ಜೀರ್ಣಿಸಿಕೊಂಡ, ಕುಶಲ ಕಲ್ಪನೆಯ ಕತೆಯಿದು. ಸಾವಿತ್ರಮ್ಮನ ಹೆಸರೂ ಧ್ವನಿಪೂರ್ಣವಾಗಿದೆ. ‘ಕಲ್ಮಾಡಿಯ ಕೋಣ’ ಮತ್ತೊಂದು ರೀತಿಯ ಸಾಮಾಜಿಕ ನಂಬಿಕೆಯ ಮೇಲೆ ನಿಂತ ಹೃದಯವಿದ್ರಾವಕ ಚಿತ್ರ. ಊರ ಮಾರಿಗೆ ಕೋಣಗಳನ್ನು ಬಲಿಕೊಡುವ, ಅದು ಸತ್ಸಾಧನೆಯ ಪೂಣ್ಯಮಾರ್ಗ ಎಂದು ದೃಢವಾಗಿ ನಂಬಿರುವ ಭಯಂಕರ ದೃಶ್ಯವಿಲ್ಲಿದೆ. ಹಳ್ಳಿಗರ ಅಂಧಶ್ರದ್ಧೆ, ನಿಷ್ಠೆ, ಅದನ್ನು ಶತಾಯ ಗತಾಯ ಪಾಲಿಸಲು ಅವರು ತಾಳುವ ನಿಷ್ಠುರ ನಿಲುವುಗಳು ಇಲ್ಲಿ ಜೀವಂತವಾಗಿ ರೂಪುಗೊಂಡಿವೆ. ಇದುವರೆಗೆ ಹತ್ತಾರು ಕೋಣಗಳನ್ನು ತುಸವೂ ಅಳುಕದೆ ನಿರ್ದಯೆಯಿಂದ ಕಡಿದಿದ್ದ ಮುನಿಯ, ತಾನೆ ಸಾಕಿದ ಕೋಣವನ್ನು ತಾನೇ ಕೈಯಾರೆ ಕಡಿಯಬೇಕಾದ ಸಂದಿಗ್ಧ ದುರಂತ ಪರಿಸ್ಥಿತಿಗೆ ಪಕ್ಕಾದಾಗ ಅವನ ಮನದಲ್ಲುಂಟಾಗುವ ಭಾವಸಂಘರ್ಷ, ಹರಿಸುವ ಕಣ್ಣೀರು, ಆ ಪ್ರೀತಿಯ ಪ್ರಾಣಿಯನ್ನು ಕಡಿಯಲೆತನ್ನಿಸಿದಾಗ ಆತನಲ್ಲುಂಟಾಗುವ ನಿಸ್ಸತ್ವ ತುಂಬ ಸಮುಚಿತವಾಗಿ ಸಹಜವಾಗಿ ಘನೀಭೂತವಾಗಿ ಚಿತ್ರಿತವಾಗಿವೆ. ಮಾಸ್ತಿಯವರ ಕರುಣರಸ ಚಿತ್ರಣ ಪರಿಣತಿಗೆ ಇದು ಸಾಕ್ಷಿ ನುಡಿಯುತ್ತದೆ.

‘ಇಲ್ಲಿಯ ತೀರ್ಪು’ ಮತ್ತು ‘ಜೋಗ್ಯೋರ ಅಂಜನಪ್ಪನ ಕೋಳಿಕತೆ’, ಅನಾಗರಿಕರೆಂದು ಅವಿದ್ಯಾವಂತರೆಂದು ಭಾವಿಸಲ್ಪಡುವ ಗ್ರಾಮೀಣರ ಸರಳತೆ, ಸತ್ಯನಿಷ್ಠೆ, ಧೀರ ಮನೋಭಾವ, ನಿಷ್ಕಪಟತೆಗಳನ್ನು ಅಭಿವ್ಯಂಜಿಸುತ್ತದೆ. ‘ವೆಂಕಟಶಾಮಿಯ ಪ್ರಣಯ’, ‘ಸೋರಲೀ ಪ್ರಸಂಗ’ ಗಳು ದುರಂತ ಪ್ರೇಮವನ್ನು ಚಿತ್ರಿಸುವ ಕತೆಗಳು. ಮೊದಲನೆಯದಂತೂ ತುಂಬ ಮನೋಜ್ಞ ವಾದ ಪರಿಣಾಮಕಾರೀ ಕತೆ. ನಾಯಿಂದರ ಹುಡುಗ ವೆಂಕಟಶಾಮಿ ದೊಂಬರ ಹುಡುಗಿಯನ್ನು ಪ್ರೀತಿಸಿ ತಂದೆ ತಾಯಿಗಳ ಊರಿನವರ ಪ್ರಕೋಪಕ್ಕೆ ತಿರಸ್ಕಾರಕ್ಕೆ ತುತ್ತಾಗಿ ಪ್ರಣಯಕ್ಕೋಸ್ಕರ ಊರನ್ನೇ ತೊರೆದ. ಸಾಯುವ ಕಾಲದಲ್ಲಿ ಅವಳ ಸ್ಮರಣೆಯೇ ಅವನಿಗೆ. ಮೂರು ರಾತ್ರಿ ತನ್ನ ಪ್ರೇಮಿಯೊಡನೆ ಮಲಗಿದ್ದುದರಿಂದ ತಮ್ಮ ಹೊಲದ ಪಕ್ಕದ ಆ ಹುಲ್ಲಿನ ಜಗದಲ್ಲಿ ತನ್ನ ಸಮಾಧಿಯಾಗಬೇಕೆಂದು ಆತನ ಬಯಕೆ. ಇದು ದೊಂಬರ ಹುಡುಗಿಯ ಬಗೆಗೆ ಅವನಲ್ಲಿದ್ದ ಅಕುಟಿಲವಾದ, ಸಾತ್ವಿಕವಾದ ಶುದ್ಧ ಪ್ರೇಮವನ್ನು ತೋರಿಸುತ್ತದೆ. ಸಂಪ್ರದಾಯ ದಲ್ಲಿ ಅಪಾರ ಶ್ರದ್ಧೆಯುಳ್ಳ ಮಾಸ್ತಿಯವರು ಇಂತಹ ಸಮಾಜಬಾಹಿರವಾದ ಪ್ರೇಮ ವ್ಯವಹಾರವನ್ನು ನಿರ್ಲಿಪ್ತವಾಗಿ ಹೃದಯಸ್ಪರ್ಶಿಯಾಗಿ ಚಿತ್ರಿಸಿರುವುದು ಅವರ ವಿಶಾಲ ಹೃದಯದ ಉದಾತ್ತ ಭಾವನೆಯ ನೈಜ ಕಲಾಪ್ರಜ್ಞೆಯ ದ್ಯೋತಕವಾಗಿದೆ. ‘ಸೋರಲೀ ಪ್ರಸಂಗ’ ಒಂದು ಹೆಣ್ಣಿಗಾಗಿ ಪರಸ್ಪರ ಕಾದಾಡಿ ಸತ್ತ ಇಬ್ಬರು ತರುಣರ ಕತೆ. ಪರಂಗಿ ದೊರೆಗಳು ನಮ್ಮಲ್ಲಿ ಬಂದು ದೇಶೀಯರನ್ನು ನಡೆಸಿಕೊಳ್ಳುವ ರೀತಿಯನ್ನು ಇದು ಚಿತ್ರಿಸುತ್ತದೆ. ಜೊತೆಗೆ ಅಲ್ಲಿಯ ಕೆಲವರಾದರೂ ಹೇಗೆ ನಮ್ಮ ಸಂಸ್ಕೃತಿಯನ್ನು ನಡವಳಿಕೆ ಯನ್ನು ಗೌರವಿಸುವ ಆದರಿಸುವ ಉದಾರ ಮನೋಭಾವದವರಾಗಿರುತ್ತಾರೆಂಬುದನ್ನೂ ತೋರಿಸಲಾಗಿದೆ. ಸದ್ಗುಣ ಎಲ್ಲಿ ಕಂಡರೂ ಯಾವ ಭೇದವೂ ಇಲ್ಲದೆ ಅದನ್ನು ಹೆಕ್ಕಿ ಎತ್ತಿಹಿಡಿಯುವ ಲೇಖಕರ ಅಂತಃಕರಣ ಇಲ್ಲಿ ಕಾಣುತ್ತದೆ. ‘ಆರಾಬೆಲ್ಲಳ’ ಸರಳ ಹೃದಯ, ಪ್ರೀತಿ ಸೂಸುವ ಮಾತುಗಳು, ಗಂಭೀರ ನಡವಳಿಕೆ ತುಂಬ ಮೆಚ್ಚುವ ರೀತಿಯಲ್ಲಿ ಪ್ರತಿಪಾದಿತ ವಾಗಿವೆ.

‘ಡೂಬಾಯಿ ಪಾದ್ರಿಯ ಒಂದು ಪತ್ರ’ ಟಿಪ್ಪೂಸುಲ್ತಾನನ ಕಾಲದಲ್ಲಿ ನಡೆದ ಒಂದು ಘಟನೆಯನ್ನು ವಿವರಿಸುತ್ತದೆ. ಬಲವಂತ ಮತಾಂತರದಿಂದಾಗಿ ಹಿಂದುವೊಬ್ಬ ಮಹಮ್ಮದೀಯ’ನಾಗಿ, ಮತ್ತೆ ತನ್ನ ಪೂರ‍್ವಮತಕ್ಕೆ ಹಿಂತಿರುಗಲು ಸಾಧ್ಯವಾಗದುದಕ್ಕಾಗಿ ರೊಚ್ಚಿಗೆದ್ದು, ಕೊನೆಗೆ ಟಿಪ್ಪೂವಿನ ರಾಜತನವನ್ನೇ ಉರುಳಿಸಲು ರಾಜಮಾತೆಯೊಡನೆ ಪಿತೂರಿ ನಡೆಸಿ ಸಿಕ್ಕಿ ಬಿದ್ದು ನಗು ನಗುತ್ತಾ ಆನೆ ಕಾಲಿಗೆ ಬಲಿಯಾದ ರೋಮಾಂಚಕಾರೀ ಕತೆಯಿದು. ನಮ್ಮ ಹಿಂದೂ ಧರ್ಮದಲ್ಲಿರುವ ‘ಒಂದೇ ದಾರಿ’ಯ ಸಂಕುಚಿತ ಹುಳುಕೊಂದನ್ನು ತೋರಿಸುವುದರ ಜೊತೆಗೆ ಅದರಿಂದಾಗುವ ಅನಾಹುತ ಪರಂಪರೆಗಳ ಭೀಕರ ಅನುಭವವನ್ನು ಸೊಗಸಾಗಿ ಹೃದ್ಯವಾಗಿ ದೃಢವಾಗಿ ಈ ಕತೆ ಮೂಡಿಸುವುದರಲ್ಲಿ ಯಶಸ್ವಿಯಾಗಿದೆ. ಆದರೆ ಕಥಾರಂಭದ ಅಂಶಗಳು ತೀರ ಉದ್ದವಾಗಿದ್ದು ಮೂಲ ಕತೆಗೆ ಪೋಷಕವಾಗದೆ ಕತೆಯ ನಡೆ ಕುಂಟುವಂತಾಗಿದೆ.

‘ಉಗ್ರಪ್ಪನ ಉಗಾದಿ’ ಮತ್ತು ‘ಬೈಚೇಗೌಡ’ ಹಳ್ಳಿಯ ಜನರ ನಿಸ್ವಾರ್ಥವೂ ಸರಳವೂ ಸದುದ್ದೇಶಪೂರಿತವೂ ಸತ್ಯನಿಷ್ಠಿತವೂ ಆದ ಮನೋಭಾವವನ್ನು ಸೂಕ್ತ ಸಮುಚಿತ ಹಿನ್ನೆಲೆಯೊಡನೆ ಓದುಗರ ಬಗೆಗಣ್ಣಿನೆದುರು ತರುತ್ತವೆ. ಉಗಾದಿಯ ದಿನ ಊಟ ಹೊಡೆದು ಸಡಗರ ಸಂಭ್ರಮಗಳಿಂದ ದಿನ ಕಳೆಯಬೇಕಾದ ಗೌಡ ಉಗ್ರಪ್ಪನಿಗೆ ಅಂದಿನ ಬೆಳಗಿನಿಂದಲೂ ಅನೇಕ ವಿಚಿತ್ರ ಘಟನಾವಳಿಗಳು ಎದುರಾಗಿ ಉಗಾದಿ ಉಗ್ರವೇ ಆಗಿ ಪರಿಣಮಿಸುತ್ತದೆ. ನೀರಿನ ವಿಚಾರವಾಗಿ ಅವನಿಗೂ ಚಿನ್ನಪ್ಪನಿಗೂ ಆದ ಜಗಳದಲ್ಲಿ ಆತ ತೋರುವ ಸಂಯಮ ಅರ್ಪೂವಾದುದು. ‘ಯಾತರ ಗೌಡಿಕೆ. ಮುಠ್ಯಾಳ ಗೌಡಿಕೆ’ ಎಂದು ತುಂಬಿದ ಜನರ ಮಧ್ಯೆ ಮೂದಲಿಸಿದರೂ ಅವನ ಗಾಂಭೀರ್ಯ ಸಮಚಿತ್ತ ಕದಡಲಿಲ್ಲ. ಮನೆಗೆ ಬಂದಾಗ ಗೌಡಿತಿ ‘ಅವನಿಗೆ ಗ್ರಹಚಾರ ಬಿಡಿಸಬೇಕು’ ಎಂದಾಗ, ‘ನಮ್ಮೊಗ ನನ್ನ ಕೆನ್ನೆಗೆ ಹೊಡೆದಾಂತ ನಾನೂ ಬದಲಿಗೆ ಹೊಡೆದರೆ ಆದೀತಾ?’ ಎನ್ನುತ್ತಾನೆ. ಈ ಮಾತು ಅವನ ಘನತೆಯನ್ನು ತೆಕ್ಕನೆ ಮೇಲೇರಿಸುತ್ತದೆ. ನೀರಿನ ಜಗಳ ಪರಿಹರಿಸಿ, ಅಮಲ್ದಾರರಿಗೆ ಬೆಲ್ಲ ಕಳಿಸಿ, ಕಂದಾಯದ ಮಾತನ್ನಾಡಿ, ಚಿರತೆ ಮೆರವಣಿಗೆಯಲ್ಲಿ ಭಾಗವಹಿಸಿ, ಪಂಚಾಂಗ ಶ್ರವಣ ಮಾಡಿ, ಪುರೋಹಿತರ ಮಗನಿಗೆ ಬ್ರಹ್ಮೋಪದೇಶಕ್ಕೆ ಸಹಾಯದ ಭರವಸೆ ಕೊಟ್ಟು ಮನೆಗೆ ಬಂದರೆ ಅಲ್ಲಿಯೂ ಮಗನ ಮದುವೆ ಮಾತು. ಹೀಗೆ ಬೆಳಗಿನಿಂದ ಸಂಜೆಯವರೆಗೂ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಿದರೂ ಅವನಿಗೆ ಬೇಸರದ ಸುಳಿವಿಲ್ಲ, ಅಸಹನೆಯ ಅಂಟಿಲ್ಲ. ಇಂಥ ಉದಾತ್ತ ಗೌಡನ ವ್ಯಕ್ತಿಚಿತ್ರ ತುಂಬ ಸಮರ್ಪಕವಾಗಿ ಸ್ವಾದುವಾಗಿ ಮೂಡಿ ಬಂದಿದೆ. ಇಲ್ಲಿಯ ಒಂದೊಂದು ಮಾತು ಅಗಾಧ ಅನುಭವದಿಂದ ತುಂಬಿ ಜೀವಂತರಮಣೀಯವಾಗಿ ಸಾರ್ಥಕವಾಗಿ ಕಂಗೊಳಿಸುತ್ತದೆ. ಬೈಚೇಗೌಡನದೂ ಇಂಥದೇ ಪಾತ್ರ, ಇನ್ನೂ ಉದಾತ್ತ ವಾದುದು. ತನ್ನೂರಿನ ಶ್ಯಾನುಭೋಗ ಕಂದಾಯ ಹಣವನ್ನು ತಿಂದುಹಾಕಿ ಮೋಸ ಮಾಡಲೆತ್ನಿಸಿದಾಗ, ಒಂದು ಬಗೆಯ ಸಾತ್ವಿಕಕ್ರೋಧದಿಂದ ಅವನಿಗೆ ಬುದ್ದಿಕಲಿಸಲು ಹವಣಿಸುತ್ತಾನೆ. ಆದರೆ ಶ್ಯಾನುಭೋಗರ ತಾಯಿ ಬಂದು ಕೇಳಿಕೊಂಡಾಗ ಅವನ ಸಿಟ್ಟು ಕರಗಿ ಕಣ್ಣೀರಾಗುತ್ತದೆ. ಇಂಥ ಕೃತ್ರಿಮವಾದ ಮೋಸಭರಿತವಾದ ವಾತಾವರಣವನ್ನೇ ತ್ಯಜಿಸಿ ಬೆಂಗಳೂರಿನ ಜೈಲಿನಲ್ಲಿ ಕೆಲಸಕ್ಕೆ ಸೇರಿ ತನ್ನ ಕರ್ತವ್ಯನಿಷ್ಠೆ ಶ್ರದ್ಧೆ ಶುಚಿಹೃದಯಗಳಿಂದ ಮೇಲೇರಿ ಆರ್ಡರ‍್ಲಿಯಾಗುತ್ತಾನೆ. ಆದರೆ ಹೆಜ್ಜೆ ಹೆಜ್ಜೆಗೂ ಅವನ ಸತ್ಯ ಪರೀಕ್ಷೆ ಸತ್ವ ಪರೀಕ್ಷೆ ಕಾದಿರುತ್ತದೆ. ತನ್ನೂರಿನ ಶ್ಯಾನುಭೋಗ ಸೀತಪ್ಪ ಕೊನೆಗೂ ತನ್ನ ಕೆಟ್ಟ ನಡತೆಯಿಂದ ಜೈಲು ಸೇರಿದಾಗ ಬೈಚೇಗೌಡ ಪಡುವ ಯಾತನೆ ತುಂಬಾ ಆದರ್ಶ ಪರವಾದದ್ದು. ಸೀತಪ್ಪನ ಹೆಂಡತಿ ಕಾಯಿಲೆ ಬಿದ್ದಿರುವಳೆಂದು ಕೇಳಿದಾಗ ಅವನ ಕರ್ತವ್ಯಬದ್ಧವಾದ ಹೃದಯದಲ್ಲಿ ಕರುಣೆಯ ಸೆಲೆಯೊಡೆಯುತ್ತದೆ. ಅವನನ್ನು ಅಧಿಕಾರಿಗಳಿಗೆ ಕಾಣದಂತೆ ಒಂದು ದಿನದ ಮಟ್ಟಿಗೆ ಕಳಿಸಿದ್ದರಿಂದ ಕರ್ತವ್ಯ ದ್ರೋಹವಾಯಿತೆಂದು ತಾನೇ ಭಾವಿಸಿ ಅದಕ್ಕೆ ಪ್ರಾಯಶ್ಚಿತ್ತ ರೂಪವಾಗಿ ಆ ಕೆಲಸವನ್ನೇ ಬಿಡುತ್ತಾನೆ. ಉದ್ದಕ್ಕೂ ಮರುಕ ಕರುಣೆ ಆದರ್ಶ ನಿಷ್ಕಪಟತೆ ಪ್ರಾಮಾಣಿಕತೆ ಕಾರ್ಯಪಟುತ್ವಗಳು ಬೈಚೇಗಾಡನ ಪಾತ್ರದಲ್ಲಿ ತುಂಬಿ ನಿಂತಿವೆ. ಆದರೂ ಈ ಪಾತ್ರ ಅಸಹಜವೂ ಜೀವನ ದೂರವೂ ಅನನುಕರಣೀಯ ಆದರ್ಶಪೂರ್ಣವೂ ಆಗದಂತೆ, ನೆಲದಿಂದ ಮೂಡಿಬಂದಷ್ಟು ಸಹಜವಾಗಿ ಸಜೀವವಾಗಿ ಮಾಂಸಲವಾಗಿ ಸೃಷ್ಟಿಸಿರುವುವದರಲ್ಲಿ ಶ್ರೀನಿವಾಸರ ಅದ್ಭುತವಾದ ಪ್ರತಿಭಾ ಪೂರ್ಣವಾದ ಪಾತ್ರ ನಿರ್ಮಾಣ ಕಲೆ ಗೋಚರಿಸುತ್ತದೆ.

‘ಚಂದ್ರವದನಾ’ ವೇಶ್ಯೆಯೊಬ್ಬಳ ಮಾತೃಪ್ರೇಮದ ರಂಜನೀಯ ಕತೆ. ತನ್ನ ಮೋಹಕ ಲಾವಣ್ಯದಿಂದ ಮನೋಜ್ಞ ಅಭಿನಯದಿಂದ ರಸಿಕರ ಕಣ್ಮನಗಳಿಗೆ ಹಬ್ಬವಾಗಿದ್ದ ಬೆಡಗಿನ ಭಾಮಿನಿ ಗರ್ಭವತಿಯಾಗುತ್ತಾಳೆ. ಪುತ್ರವತಿಯಾದರೆ ಅಂಗಸೌಷ್ಠವ ಹಾಳಾಗಿ, ಅದರಿಂದ ಪ್ರೇಕ್ಷಕರನ್ನು ಆಕರ್ಷಿಸದಂತಾಗಿ ಆದಾಯ ಕಡಿಮೆಯಾಗುವುದೆಂದು ಭಾವಿಸಿದ ಮಾವ ಸೂರಪ್ಪ ಅವಳು ತಾಯಾಗದಂತೆ ತಡೆಯಲು ಯತ್ನಿಸುತ್ತಾನೆ. ಆದರೆ ಈ ಸಾಮಾಜಿಕ ತೊಡಕುಗಳೆಲ್ಲವನ್ನೂ ತಾಯ್ತನ ಗೆದ್ದು ವಿಜೃಂಭಿಸುತ್ತದೆ; ಯಾವ ತ್ಯಾಗವನ್ನಾದರೂ ಮಾಡಿ ತಾನು ಮಗುವಿನ ಮಾತೆಯಾಗಬೇಕೆನ್ನುವ ಅವಳ ಹಂಬಲ, ಅದಕ್ಕಾಗಿ ಆಕೆ ಮಾಡಿದ ಸಾಹಸ ಅತ್ಯಂತ ರೋಚಕವಾಗಿವೆ, ಗಂಭೀರ ಸ್ವರೂಪದ್ದಾಗಿವೆ. ಗೃಹಿಣಿಯಾಗಲೀ ವೇಶ್ಯೆ ಯಾಗಲೀ, ಶ್ರೀಮಂತಳಾಗಲೀ, ದರಿದ್ರಳಾಗಲೀ, ಸುರೂಪಿಯಾಗಲೀ ಕುರೂಪಿಯಾಗಲೀ ಹೆಣ್ಣಿಗೆ ತಾಯಿಯಾಗುವುದು ಜೀವನದ ಒಂದು ಉನ್ನತ ಪುಣ್ಯ ಪದವಿ; ಮಹತ್ತರ ಸಾಧನೆ. ಈ ಆಕಾಂಕ್ಷೆಗೆ ಯಾವ ಬೆಲೆಯನ್ನಾದರೂ ತರಲು ಹೆಣ್ಣು ಸಿದ್ಧವಾಗುತ್ತದೆ ಎಂಬುದರ ರಮ್ಯ ನಿರೂಪಣೆ ಇಲ್ಲಿದೆ. ಸ್ತ್ರೀಯರ ಬಗೆಗೆ ಲೇಖಕರಿಗಿರುವ ಅನ್ಯಾದೃಶ್ಯವಾದ ಆದರ ಅನುಕಂಪಗಳು ವೇಶ್ಯೆಯಾದ ಚಂದ್ರವದನೆಯಲ್ಲಿಯೂ ಮಹತ್ವವನ್ನೇ ಗುರುತಿಸುತ್ತವೆ.

ಹೆಣ್ಣು ಗಂಡಿನ ಪ್ರೇಮದ ಮಹೋನ್ನತಿ ಇರುವುದು ಕೇವಲ ದೇಹ ಸಂಪರ್ಕದಲ್ಲಿಲ್ಲ; ಅವರ ಮನೋಧರ್ಮದಲ್ಲಿ – ಎನ್ನುವುದರ ಜೀವಂತ ಚಿತ್ರಣ ‘ವೆಂಕಟಗನ ಹೆಂಡತಿ’. ತನ್ನ ಹೆಂಡತಿ ತನ್ನನ್ನುಳಿದು ಶ್ರೀಮಂತಿಕೆಯ ಆಮಿಷಕ್ಕೊಳಗಾಗಿ ಬೇರೊಬ್ಬನನ್ನು ಸೇರಿದರೂ, ಮನೆತನದ ಮರ್ಯಾದೆ ಮಣ್ಣು ಪಾಲಾಯಿತೆಂದು ಹೆತ್ತವಳೇ ಹಳಹಳಿಸಿದರೂ ವೆಂಕಟಗ ಚಿತ್ತಸ್ಖಲಿತನಾಗುವುದಿಲ್ಲ, ಭಾವಾವೇಶಗಳಿಗೆ ಒಳಗಾಗುವುದಿಲ್ಲ, ಪ್ರತೀಕಾರದ ಪ್ರಚಂಡಾಗ್ನಿ ಯನ್ನು ಹೃದಯದಲ್ಲಿ ಹೊರುವುದಿಲ್ಲ. ಬದಲು, ಅವಳ ಕ್ಷಣಿಕ ದೌರ್ಬಲ್ಯಕ್ಕಾಗಿ ಅಪ್ರಬುದ್ಧ ಮನಸ್ಸಿಗಾಗಿ ಮರುಗುತ್ತಾನೆ. ಅವಳಿಗೆ ಒಳಿತಾಗಲೆಂದು ಹಾರೈಸಿ ಅವಳಿಂದ ದೂರ ಸರಿಯುತ್ತಾನೆ. ಕೊನೆಗೆ ಮಡದಿಯನ್ನಪಹರಿಸಿದ ಶ್ರೀಮಂತ ತಕ್ಕ ಸಾವನ್ನು ಪಡೆದಾಗ ಆ ಹೆಣ್ಣು ಮತ್ತೆ ಮನದಿನಿಯನನ್ನು ಅರಸಿಕೊಂಡು ಬರುತ್ತಾಳೆ. ಆಗಲೂ ಹೇವರಿಸದೆ, ಅಶುಚಿಯ ಭಾವನೆಯನ್ನು ಮನಸ್ಸಿಗೆ ತಾರದೆ, ತೆರೆದ ಹೃದಯದಿಂದ ಉದಾತ್ತ ಅಂತಃಕರಣದಿಂದ ಅವಳನ್ನು ವೆಂಕಟಗ ಆಹ್ವಾನಿಸುತ್ತಾನೆ. ಬೇರೊಬ್ಬನಿಂದ ಜನಿಸಿದ ಮಗುವನ್ನು ಮಡದಿಯ ಸಂತಸಕ್ಕಾಗಿ ತನ್ನದೆಂಬಂತೆಯೇ ಪ್ರೀತಿಸುತ್ತಾನೆ. ಈ ವಿಶಾಲ ಮನೋಭಾವ, ನಿರ್ಮಲ ಸಹಾನುಭೂತಿ, ಅಕುಟಿಲ ಅಕ್ಕರೆ, ಸ್ಥಿತಪ್ರಜ್ಞೆ ವೆಂಕಟಿಗನ ಪಾತ್ರದಲ್ಲಿ ಹಾಸು ಹೊಕ್ಕಾಗಿ ಸೇರಿಸಿಕೊಂಡಿವೆ; ಆ ಸಾಮಾನ್ಯ ಕೂಲಿಕಾರನ ಅಸಾಧಾರಣ ಹೃದಯ ಶ್ರೀಮಂತಿಕೆ ಯನ್ನು ಪ್ರಕಟಗೊಳಿಸಿವೆ. ಹರಿಹರ ತನ್ನ ರಗಳೆಗಳಲ್ಲಿ ಮಾಡಿದಂತೆ, ಕೈಲಾಸಂ ತಮ್ಮ ನಾಟಕಗಳಲ್ಲಿ ಮಾಡಿದಂತೆ, ಶ್ರೀನಿವಾಸರು ತಮ್ಮ ಕತೆಗಳ ಹೃದಯ ಸಿಂಹಾಸನದಲ್ಲಿ ಸಾಮಾನ್ಯತಾಶ್ರೀಗೆ ವೈಭವದ ಪಟ್ಟ ಕಟ್ಟಿ ಕ್ರಾಂತಿಯನ್ನೇ ಮಾಡಿದ್ದಾರೆ. ಕತೆಯೊಳಗೆ ಕತೆ ಹುಟ್ಟುವ ಇಲ್ಲಿಯ ತಂತ್ರವೂ ಅತ್ಯಂತ ಸಹಜವಾಗಿದ್ದು ಉಚಿತವಾಗಿದ್ದು ವಸ್ತುವಿನ ಸ್ವರೂಪಕ್ಕೆ ತಕ್ಕುದಾಗಿದೆ.

‘ಬಿಳಿಗಿರಿ ರಂಗ’ ಗ್ರಾಮ್ಯ ಜನತೆಯ ಅಚಂಚಲ ಶ್ರದ್ಧೆಯನ್ನೂ, ಸರ್ವರಲ್ಲಿಯೂ ದೇವರನ್ನೇ ಕಾಣುವ, ಸಂದೇಹದ ಕಾವಳ ಮುಸುಗದ ನಿರ್ಮಲ ಹೃದಯವನ್ನೂ ಪ್ರತಿಬಿಂಬಿ ಸುತ್ತದೆ. ಅಪರ ವಯಸ್ಸಿನಲ್ಲಿ ಮದುವೆಯಾಗಿ ವಂಶವನ್ನು ಬೆಳಗಿಸುವ ಕುಲಪುತ್ರನಿಲ್ಲವೆಂದು ಹತ್ತು ಕಡೆಗೆ ಹಂಬಲಿಸಿ, ಆ ಬಯಕೆಯ ಪೂರೈಕೆಗಾಗಿ ವಂಚಕರ ಸಮಯ ಸಾಧಕರ ವೇಷಧಾರಿಗಳು ಹೇಳುವ ಮಾತಿಗೆ ಮರುಳಾಗಿ ಮೋಸ ಹೋಗುವ ಮುಗ್ಧ ಜೀವಿಗಳ ಕತೆ ‘ಪುತ್ರಕಾಮೇಷ್ಟಿ’. ಇಳಿವಯಸ್ಸಿನಲ್ಲಿ ಬಂದ ಹರೆಯದ ಹೆಣ್ಣಾದರೂ ಮನೆಗೆ ಮಂಗಳಮಯಿ ಯಾಗಿ ಮನಕ್ಕೆ ಮೆಚ್ಚಾದಳು ಸೀತೆ. ಆದರೂ ಶ್ಯಾಮಣ್ಣನವರ ಹೃದಯದಲ್ಲಿ ಕೊರೆಯುತ್ತಿದ್ದ ವಂಶೋದ್ಧಾರಕನ ಚಿಂತೆ ಸಹಜವಾದದ್ದೇ. ಕುಲಗೋತ್ರಗಳನ್ನು ವಿಚಾರಿಸದೆ ಬೆಳ್ಳಗಿರುವುದೆಲ್ಲವೂ ಹಾಲೆಂದು ನಂಬಿ, ಸಂನ್ಯಾಸಿಯನ್ನು ಕರೆತಂದು ಆರಾಧಿಸಿ ಮಡದಿಯನ್ನು ಏಕಾಂತದಲ್ಲಿ ಅವನ ಗುಹೆಯಲ್ಲಿ ಪೂಜೆಗೆ ಬಿಡುವ ಶ್ಯಾಮಣ್ಣನವರ ಕೊಂಕು ಬಿಂಕಗಳನ್ನರಿಯದ ನಿರ್ದುಷ್ಟ ಮನಸ್ಸು ಮೆಚ್ಚುವಂಥದು. ಪರಂಪರಾಗತವಾಗಿ ಬಂದ ನಂಬಿಕೆಯ ಗಾಢ ಪ್ರಭಾವದಿಂದಾಗಿ ಅವರು ಈ ಮೋಸಕ್ಕೆ ಬಲಿಯಾಗುತ್ತಾರೆ. ಯಾರಲ್ಲೂ ಕಿಲ್ಬಿಷವನ್ನು ಕಾಣಲೊಲ್ಲದ ಅವರ ನಿಶ್ಯಂಕ ಮನೋವೃತ್ತಿಯ ಚಿತ್ರಣ ತುಂಬ ಸೊಗಸಾಗಿ ಬಂದಿದೆ. ಅಂತೆಯೇ ಸೀತಮ್ಮನ ಪತಿಪ್ರೇಮ, ಶ್ರದ್ಧೆ, ಸೌಜನ್ಯಗಳೊಡನೆ ಬೆರೆತಿರುವ ವ್ಯಕ್ತಿಗಳ ಗುಣಾವಗುಣಗಳನ್ನಳೆಯುವ ತರತಮ ಜ್ಞಾನವೂ ಸಮರ್ಥವಾಗಿ ನಿರೂಪಿತವಾಗಿದೆ. ನಮ್ಮ ಜನರ ಮೂಢನಂಬಿಕೆಯ ದುರ್ಲಾಭ ಪಡೆಯುವ ಕಪಟಾಚಾರಿಗಳ ಟೊಳ್ಳುತನವನ್ನೂ ಇದು ಹೃದ್ಯವಾಗಿ ಧ್ವನಿಸುತ್ತದೆ.

ತನ್ನ ಹಾದಿ ತಪ್ಪಿದ ನಡತೆಯಿಂದಾಗಿ ಕೈ ಹಿಡಿದ ಹೆಂಡತಿಯನ್ನು ಬಾಳಿನ ವಸಂತದಲ್ಲೇ ವಂಚಿಸಿ ಪತನದತ್ತ ಸಾಗಿ, ಕೊನೆಗಾಲದಲ್ಲಿ ಪಿತೃ ಹೃದಯವನ್ನು ಪ್ರದರ್ಶಿಸಿ ತನ್ನ ಅದುವರೆಗಿನ ದುಶ್ಚಾರಿತ್ರ್ಯಕ್ಕೆ ಪಶ್ಚಾತ್ತಾಪಗೊಂಡ ವ್ಯಕ್ತಿಯೊಬ್ಬನ ಕರುಣಾಜನಕ ಪ್ರಸಂಗ ‘ನಳಿನಿಯ ತಂದೆ’. ತನ್ನ ಪ್ರಾರಂಭದ ತಪ್ಪಿನಿಂದಾಗಿ ತನ್ನ ಮಗಳಿಗೆ ತಂದೆಯೆನ್ನಿಸಿಕೊಳ್ಳುವ ಸೌಭಾಗ್ಯದಿಂದಲೂ ವಂಚಿತನಾಗಿ ಕೊನೆಗೆ ಮಡದಿಯ ಬಳಿಗೆ ಬಂದು ತಪ್ಪೊಪ್ಪಿಕೊಂಡು, ಒಮ್ಮೆಯಾದರೂ ಅಳಿಯ ಮಗಳನ್ನು ಕಣ್ತುಂಬ ನೋಡಿ ಕೈಯಾರೆ ಸ್ಪರ್ಶಿಸುವ ಭಾಗ್ಯವನ್ನು ಅನುಗ್ರಹಿಸೆಂದು ಬೇಡುವ ದೃಶ್ಯ ಕರುಳು ಕೀಳುವಂತಿದೆ. ಮಗಳ ಭವಿಷ್ಯದ ದೃಷ್ಟಿಯಿಂದ ಅವನು ತಂದೆಯಾಗಿ ಬಾಳುವುದು ಸಾಧ್ಯವೇ ಇಲ್ಲವೆಂದು ಅರಿವಾದಾಗ, ದೂರದಲ್ಲೇ ಇದ್ದು ಅವಳ ಬದುಕು ಮಂಗಳಮಯವಾಗಲೆಂದು ಆಶೀರ್ವದಿಸುತ್ತಾನೆ. ಅಂತ್ಯದ ಅವನ ಈ ಉದಾತ್ತ ನಡವಳಿಕೆ ಹಿಂದಿನ ಚಾಳಿಗಳೆಲ್ಲವನ್ನೂ ಮರೆಯುವಂತೆ ಮಾಡಿ ಓದುಗರಲ್ಲಿ ಮರುಕವನ್ನು ಮೂಡಿಸುತ್ತದೆ. ಗಂಡ ತನ್ನ ಭಾಗಕ್ಕಿಲ್ಲವೆಂಬುದು ನಿಶ್ಚಿತವಾದಾಗ, ವ್ಯಾಸಂಗ ಮಾಡಿ ಮೆಟ್ರಿಕ್ಯುಲೇಷನ್ ಓದಿ ಮುಖ್ಯ ಉಪಾಧ್ಯಾಯಿನಿಯಾಗಿ ಮಗಳನ್ನು ಸಾಕಿದ ಲಕ್ಷ್ಮಮ್ಮನ ದಿಟ್ಟತನ ಗಾಂಭೀರ್ಯ ಸ್ಥೈರ್ಯ ತುಂಬ ಮಹತ್ವದವು, ಕತೆಯ ಆದಿ ಅಂತ್ಯಗಳು ಅನಾವಶ್ಯಕ ಲಂಬನವಿಲ್ಲದೆ ಉಚಿತ ಮಾತುಗಾರಿಕೆಯಿಂದ ಪ್ರಭಾವಕಾರಿಯಾಗಿ ಚಿತ್ರಸಲ್ಪಟ್ಟಿವೆ. ಮಾಸ್ತಿಯವರು ಕೇವಲ ಕತೆ ಹೇಳುವುದಿಲ್ಲ, ಆ ವಸ್ತುಗಳ ಪಾತ್ರಗಳ ಸನ್ನಿವೇಶಗಳ ಆಂತರ್ಯವನ್ನೇ ಬಿಚ್ಚಿ ನಮ್ಮ ಮುಂದೆ ಇಡುತ್ತಾರೆ ಎಂಬುದಕ್ಕೆ ಈ ಕತೆ ಸುಂದರ ನಿದರ್ಶನವಾಗಿದೆ.

ಚೆಲುವೆ ಹೆಣ್ಣೊಬ್ಬಳು ಜನದ ಅಪವಾದದಿಂದಾಗಿ ಗಂಡನಿಂದ ತ್ಯಜಿತಳಾಗಿ, ಹಲವಾರು ವರ್ಷಗಳ ನಂತರ ಆತ ಸನ್ಯಾಸಿಯಾಗಿ ಅದೇ ಊರಿನಲ್ಲಿ ಕಾಣಿಸಿಕೊಂಡು ಮರೆಯಾದಾಗ, ಅವನ ಪ್ರೀತಿಯಿಂದ ವಿರಹದಿಂದ ಭ್ರಮಿತಳಾಗಿ ಮನಬಂದಲ್ಲಿ ಅಲೆದು ತನ್ನ ಬಾಳನ್ನು ನೀಗಿಕೊಂಡ ಹೃದಯ ವಿದ್ರಾವಕ ಕತೆ ‘ಮುನೇಶ್ವರನ ಮರ’. ಜನರಾಡುವ ಬೇಜವಾಬ್ದಾರಿ ಯುತವಾದ ಗಾಳಿ ಮಾತುಗಳು ಹೇಗೆ ಸಂಸಾರಗಳನ್ನೇ ವಿನಾಶದ ಮಡುವಿನಲ್ಲಿ ನೂಕುತ್ತವೆ ಎಂಬುದರ ದಾರುಣ ಚಿತ್ರವಿದು. ಮೊದ ಮೊದಲು ತುಂಬ ಪ್ರೀತಿಯಿಂದಲೇ ನಡೆಯುತ್ತಿದ್ದ ದಾಂಪತ್ಯ ಮಕ್ಕಳಿಲ್ಲದ್ದರಿಂದ ಬೇಸರಪೂರ್ಣವಾಗಲು ಆರಂಭಿಸಿ, ಹಂತಹಂತವಾಗಿ ಬೆಳೆದು ಗಂಡನ ಸನ್ಯಾಸಕ್ಕೂ ಹೆಂಡತಿಯ ದುರ್ಮರಣಕ್ಕೂ ಕಾರಣವಾಯಿತು. ನಿಷ್ಕಾರಣ ನಿಂದೆಯನ್ನು ಕೇಳಿದಾಗ ರಾಜಮ್ಮನ ಹೃದಯದಲ್ಲಿ ಮೂಡುವ ಯಾತನೆ, ಹೆಂಡತಿ ನೀತಿಗೆಟ್ಟವಳೆಂಬ ಮಾತು ಕೇಳಿದಾಗ ರಾಮಯ್ಯ ಅನುಭವಿಸುವ ಮನೋವೇದನೆ, ಮುನಿಯಾಗಿ ಪತಿ ಮರಳಿ ಬಂದಾಗ ಅವಳಲ್ಲಿ ಮೂಡುವ ಹೊಸ ಆಸೆ, ಆತ ಮತ್ತೆ ನಿಷ್ಕರುಣವಾಗಿ ತೊರೆದು ಹೋದಾಗ ಬಾಳಿನ ಎಲ್ಲಾ ಆಶಾ ತಂತುಗಳೂ ಕತ್ತರಿಸಿ ಹೋಗಿ ಆಗುವ ಬುದ್ದಿ ಭ್ರಮಣೆ, ಮಾರ್ಗ ಮಧ್ಯದಲ್ಲಿನ ಅವಳ ದಾರುಣ ಸಾವು- ಹಂತ ಹಂತವಾಗಿ ಕ್ರಮಾನುಗತವಾಗಿ ಕರುಣೆಯ ಪ್ರವಾಹವನ್ನು ಉಕ್ಕಿಸುತ್ತಾ ಹೋಗಿ ಉದ್ದಿಷ್ಟ ಪರಿಣಾಮವನ್ನು ಮುಟ್ಟಿ ಮನಸ್ಸನ್ನು ಮರುಕದ ಹೊಳೆಯಲ್ಲಿ ನಾದುತ್ತವೆ.

‘ಚೆನ್ಮಮ್ಮ’ ಮತ್ತು ‘ಚಿಕ್ಕವ್ವ’ ಇಬ್ಬರು ಹೆಣ್ಣು ಮಕ್ಕಳ ಶೋಕಪೂರ್ಣ ಬಾಳುವೆಯ ಚಿತ್ತವೇಧಕವಾದ ಜೀವಂತ ಚಿತ್ರಗಳು. ಇಬ್ಬರೂ ತಮ್ಮ ಗಂಡಂದಿರ ಅವಿವೇಕದಿಂದಲೇ ತಮ್ಮ ಬಾಳನ್ನು ಗೋಳಿನ ಗೋಳವಾಗಿಸಿಕೊಳ್ಳುತ್ತಾರೆ. ಹಳ್ಳಿಯ ನಿಷ್ಕಪಟ ವಾತಾವರಣ ವನ್ನೂ ಶ್ರಮಪೂರ್ಣ ದುಡಿಮೆಯ ಜೀವನವನ್ನೂ ತೊರೆದು, ಬೆಂಗಳೂರಿನ ಬಣ್ಣದ ವಿಷನಾಗರಿಕತೆಯ ದುಶ್ಚಟಗಳಿಗೆ ಬಲಿಯಾದ ರಾಮಪ್ಪ ತನ್ನನ್ನು ನಂಬಿದ್ದ ಮಡದಿಯನ್ನು ಅನರ್ಥ ಪರಂಪರೆಗಳಿಗೆ ಸಿಕ್ಕಿಸಿ ಆ ವಿಷಧ ವರ್ತುಲದಲ್ಲಿ ತಾನೇ ಮುಳುಗಿ ಹೋಗುತ್ತಾನೆ.

ಚೆನ್ನಮ್ಮನ ಸೌಶೀಲ್ಯ ಸೌಜನ್ಯ ಸಂಯಮ ಕಷ್ಟಸಹಿಷ್ಣುತೆಗಳು ಅತ್ಯಂತ ನೈಜವಾಗಿ ಸಮರ್ಥವಾಗಿ ಕತೆಯಲ್ಲಿ ಮೈದೋರಿವೆ. ಅವಳ ಮನಸ್ಸಿನ ಭಾವರಾಗಗಳ ಅಂತಃಸ್ಪಂದನ ಗಳನ್ನು ಲೇಖಕರು ಚಿತ್ರಿಸಿಲ್ಲವಾದರೂ, ಅವಳ ಒಂದೆರಡು ನಡೆವಳಿಕೆಗಳಲ್ಲೇ ಆಕೆ ಎಂತಹ ಸುಸಂಸ್ಕೃತಿವಂತ ಹೆಣ್ಣು ಎಂಬುದನ್ನು ಮನಗಾಣುತ್ತೇವೆ. ತಾಯ್ನೆಲದ ಅಪ್ಪುಗೆಗಾಗಿ ಅವಳು ಪಡುವ ಹಂಬಲ, ತನ್ನ ಮನೆತನದ ಮೇಲೆ ಬೇಸಾಯ ವೃತ್ತಿಯ ಮೇಲೆ ಅವಳಿಗಿರುವ ಅಭಿಮಾನ ಗೌರವಗಳು ಅಭಿನಂದನಾರ್ಹವಾಗಿವೆ. ತುಂಬಿದ ಸಂಸಾರದಲ್ಲಿ ಮುದುಕನ ಮಡದಿಯಾಗಿ, ವಯಸ್ಸಿಗೆ ಬಂದ ಮಗನ ತಾಯಾಗಿ ಪಾದಾರ್ಪಣೆ ಮಾಡಿದ ಚಿಕ್ಕವ್ವ ನವಸಂಸಾರದ ಸುಖಸಂತೋಷಗಳ ಮಧುರ ಕನಸನ್ನು ಬದಿಗೊತ್ತಿ, ಗತಿಸಿದ ಸವತಿಯ ಚಿಕ್ಕ ಮಗನನ್ನು ತಾಯಿಗಿಂತ ಮಿಗಿಲಾಗಿ ನೋಡಿಕೊಂಡಳು. ಮನೆಯ ಕೆಲಸಕಾರ್ಯಗಳ ನಿರ್ವಹಣೆಯನ್ನು ತುಂಬ ಶ್ರದ್ಧೆಯಿಂದ ದಕ್ಷತೆಯಿಂದ ನಿರ್ವಹಿಸಿದಳು. ದಾಂಪತ್ಯ ಸುಖದ ಆಸೆಗೆ ಸಮಾಧಿ ಮಾಡಿದಳು. ಆದರೆ ದುರ್ದೈವ ಗಂಡನ ಹಿರಿಯ ಮಗನ ರೂಪದಲ್ಲಿ ಅವಳನ್ನು ಕಾಡಿತು. ದಾವೆ ವರಸೆಗಳನ್ನು ನಿರ್ಲಕ್ಷಿಸಿ, ಶೀಲವನ್ನು ಹುದುಗಿಟ್ಟು, ಸಮ ವಯಸ್ಕನೂ ದೃಢಕಾಯನೂ ಆದ ತನ್ನನ್ನು ಸಂಸಾರ ಸುಖವಂಚಿತಳಾದ  ಕಿರಿವಯಸ್ಸಿನ ಆ ತರುಣಿ ಬಯಸುವಳೆಂದು ಭ್ರಮಿಸಿ ಚಿಕ್ಕವ್ವನನ್ನೇ ಬಲಾತ್ಕರಿಸಲು ಕಾಡಲು ಮೊದಲು ಮಾಡಿದ. ಅತ್ತ ಮುದಿಗಂಡನ ಚಾಪಲ್ಯ, ಇತ್ತ ಪ್ರಣಯಿಯಾಗಬಯಸುವ ಹೀನ ಮಗನ ನಿತ್ಯಕೋಟಲೆಗಳಿಂದ ಮಾರ್ಯದೆಯಾಗಿ ಬಾಳುವುದು ಅಸಾಧ್ಯವೆಂದರಿತ ಸಾಧ್ವಿ ಬಾವಿಯಲ್ಲಿ ಬಿದ್ದು ಮರಣವನ್ನಪ್ಪುತ್ತಾಳೆ. ಅವಳ ಸಂದಿಗ್ಧ ಪರಿಸ್ಥಿತಿ, ಹೃದಯದಲ್ಲಿ ದುಃಖದ ಅಗ್ನಿಪರ್ವತವನ್ನೇ ತುಂಬಿಕೊಂಡಿದ್ದರೂ ಕಿರಿಮಗನಿಗೆ ವಾತ್ಸಲ್ಯದ ಅಮೃತವನ್ನು ಸುರಿಸುವ ಪ್ರೇಮಳವಾದ ಹೃದಯ ನಮ್ಮ ಮನಸ್ಸನ್ನು ತಟ್ಟುತ್ತದೆ. ಅವಳ ದುರಂತ ಅತ್ಯಂತ ಅನಿವಾರ್ಯವಾಗಿ ಸಮರ್ಥನೀಯವಾಗಿ ಸಂಭವಿಸಿದೆ. ಅವಳ ಮನೋತುಮುಲವನ್ನು ಚಿತ್ರಿಸದೆ ಕೇವಲ ಸರಳ ನಿರೂಪಣೆಯಲ್ಲೇ ಶಕ್ತಿಯುತವಾಗಿ ಈ ಪಾತ್ರವನ್ನು ಮಾಸ್ತಿಯವರು ಕಡೆದಿಟ್ಟಿದ್ದಾರೆ.

‘ಆಂಗ್ಲ ನೌಕಾ ಕ್ಯಾಪ್ಟನ್’ ಮತ್ತು ‘ಚಟ್ಟೇಕಾರ ತಾಯಿ’ ಉದಾತ್ತವೂ ಸುಸಂಸ್ಕೃತವೂ ಆದ ಮನೋಭಾವದ ಇಬ್ಬರು ಆಂಗ್ಲರ ಪ್ರಭಾವಶಾಲೀ ವ್ಯಕ್ತಿ ಚಿತ್ರಗಳು. ನಿರ್ಮತ್ಸರಶೀಲ ವಾದ ಶುಚಿಪ್ರಜ್ಞೆ ಇದ್ದವರು ಮಹತ್ವವನ್ನು ಎಲ್ಲಿದ್ದರೂ ಗುರುತಿಸಿ ಗೌರವಿಸುತ್ತಾರೆ. ಅಂತೆಯೇ ಆಂಗ್ಲ ನೌಕಾ ಕ್ಯಾಪ್ಟನ್ ತನ್ನ ಕೈಕೆಳಗೆ ಶಿಕ್ಷಣ ಪಡೆಯುತ್ತಿದ್ದ ಹತ್ತು ಜನ ಭಾರತೀಯ ಶೂರ ತರುಣರನ್ನು, ಅವರ ಅಸಾಧಾರಣ ದೇಶ ಪ್ರಮೇಕ್ಕಾಗಿ ಸಾಹಸಕ್ಕಾಗಿ ಮನವಾರೆ ಕೊಂಡಾಡುತ್ತಾನೆ. ರೈಲಿನಲ್ಲಿ ಅವನು ವರ್ತಿಸುವ ರೀತಿ, ತನ್ನ ತಂಡದವರ ಬಗ್ಗೆ ಅವನಿಗಿದ್ದ ಪಿತೃವಾತ್ಸಲ್ಯ ಮೊದಲೇ ನಮ್ಮ ಗಮನ ಸೆಳೆಯುತ್ತವೆ. ಆದರೆ ತಾನಿಲ್ಲದಾಗ ತನ್ನ ಪತ್ನಿಯನ್ನು ಶೀಲಭ್ರಷ್ಟಳನ್ನಾಗಿ ಮಾಡಿದುದನ್ನು ಕಂಡೂ, ಕತೆಗಾರರ ಸಲಹೆಯಂತೆ, ಅವಳನ್ನು ಎಂದಿನಂತೆಯೇ ಉದಾರ ಮನೋಧರ್ಮದಿಂದ ಸಾತ್ವಿಕ ಸಹಾನುಭೂತಿಯಿಂದ ಸ್ವೀಕರಿಸುವ ಆತನ ಹೃದಯದ ಔನ್ನತ್ಯ ಅತ್ಯಂತ ಉಚ್ಚಮಟ್ಟದ್ದು. ಕೆಲವೇ ಮಾತುಗಳಲ್ಲಿ ಕ್ಯಾಪ್ಟನ್ ಪತ್ನಿಯ ನಿಷ್ಕಳಂಕವಾದ ಪತಿಪ್ರೇಮ ಒಡೆದು ಕಾಣುತ್ತದೆ. ಉನ್ನತ ಆದರ್ಶದ ಅನುಕರಣೀಯ ಸುಂದರ ಚಿತ್ರ ಈ ಕತೆ.

ಈ ಎಲ್ಲ ಸಾಮಾಜಿಕ ಕತೆಗಳ ಹಿನ್ನೆಲೆಯಲ್ಲೂ ಲೇಖಕರ ಪ್ರಗಾಢವಾದ ವೈವಿಧ್ಯಮಯ ವಾದ ಜೀವನಾನುಭವ ಮಡುಗಟ್ಟಿ ನಿಂತಿದೆ. ಅನುಭವ ಪ್ರಮಾಣವಿಲ್ಲದ ಕೇವಲ ಊಹನಾವಿಲಾಸದ ಕೃತಕ ಕಥನವಿಲ್ಲಿಲ್ಲ. ಯಾವ ಬಗೆಯ ಎಳೆದಾಟ ಅಸ್ತವ್ಯಸ್ತತೆಗಳಿಲ್ಲದೆ ಶ್ರಮ ಹಠಗಳಿಲ್ಲದೆ ಸುಲಲಿತವಾಗಿ ಸರಳವಾಗಿ ಸರಾಗವಾಗಿ ಸರ್ವ ವೈವಿಧ್ಯದೊಡನೆ ಕಥೆಯನ್ನು ಹೇಳುವ ನಿಪುಣ ಕೌಶಲದಿಂದಾಗಿ ಒಂದೊಂದು ಕತೆಯೂ ಒಂದೊಂದು ತೆರನಾಗಿ ಮನೋರಂಜಕವಾಗಿರುವುದು ಮಾತ್ರವಲ್ಲದೆ, ಆ ಪರಿಣಾಮಕಾರಿಯಾದ ವಿಶಿಷ್ಟಾನುಭವದಲ್ಲಿ ಓದುಗ ಒಂದಾಗುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದೆ. ಈ ವಿಪುಲವಾದ ಕಥಾವಸ್ತುವಿನಲ್ಲಿ ಚರ್ವಿತ ಚರ್ವಣವಿಲ್ಲ, ಹುಡುಕಾಟ ತಡಕಾಟವಿಲ್ಲ. ಜೀವನದ ನೂರು ಮುಖಗಳ ಸಮರ್ಪಕವಾದ ಸಮರ್ಥವಾದ ಸಾರ್ಥಕವಾದ ದರ್ಶನ ಈ ಕತೆಗಳಲ್ಲಿ ಆಗುತ್ತದೆ.