ಮಾಸ್ತಿಯವರು ಸಾಕಷ್ಟು ಸಂಖ್ಯೆಯಲ್ಲಿ ಐತಿಹಾಸಿಕ ಹಿನ್ನೆಲೆಯ ಕತೆಗಳನ್ನೂ ರಚಿಸಿದ್ದಾರೆ. ಮೊದಲ ಭಾಗದ ಕತೆಗಳಲ್ಲಿ ಜನಸಾಮಾನ್ಯರ ಬಾಳಿನ ದಿನನಿತ್ಯದ ಘಟನೆಗಳಲ್ಲಿ ಹುದುಗಿ ರುವ ಕುತೂಹಲಕರವಾದ ಜೀವನಪರಿಪೋಷಕವಾದ ಪರಿಣಾಮಕಾರಕವಾದ ಅಂಶಗಳನ್ನು, ಅವುಗಳ ಆಂತರ್ಯದ ಸಂಸ್ಕೃತಿ ಪರಿಪಾಕವನ್ನು ಚಿತ್ರಿಸಿದ್ದರೆ, ಇವುಗಳಲ್ಲಿ ಉನ್ನತ ಅಧಿಕಾರಗಳಲ್ಲಿ ಭೋಗ ವೈಭವಗಳ ಆಡಂಬರದಲ್ಲಿ ಇರುವ ವ್ಯಕ್ತಿಗಳ ಬದುಕಿನ ಹಲವು ಸ್ಮರಣೀಯ ಕ್ಷಣಗಳನ್ನು ಮೇಲೆತ್ತಿ ಅವುಗಳಿಗೆ ಕಲಾತ್ಮಕ ಚೌಕಟ್ಟನ್ನು ಹಾಕಿದ್ದಾರೆ; ಅವುಗಳಲ್ಲಿ ಹುದುಗಿರುವ ಜೀವನ ಮಲ್ಯಗಳನ್ನು ಆಯಾ ವಿಶಿಷ್ಟ ಪರಿಸರದೊಡನೆ ನಮಗೆ ಮನಃಸ್ಪರ್ಶಿಯಾಗಿ ಪರಿಚಯಿಸುತ್ತಾರೆ. ‘ಬಾದಷಹನ ನ್ಯಾಯ’ ಮತ್ತು ‘ಬಾದಷಹನ ದಂಡನೆ’ಗಳು ಪರ್ಷಿಯಾ ಚಕ್ರವರ್ತಿಯಾದ ಷಾಹ ಅಬ್ಬಾಸನ ನ್ಯಾಯ ನಿಷ್ಠುರತೆ, ನಿಷ್ಪಕ್ಷ ಮನೋಭಾವ, ಪ್ರಾಮಾಣಿಕತೆ ಮತ್ತು ಅಸಾಧಾರಣ ಬುದ್ದಿ ಕೌಶಲಗಳನ್ನು ಪ್ರತಿನಿಧಿಸುತ್ತವೆ. ಮಹಮ್ಮದೀಯ ಮತ್ತು ಕ್ರೈಸ್ತರಿಬ್ಬರ ನಡುವಣ ವ್ಯವಹಾರದಲ್ಲಿ ಮೊದಲನೆಯವನ ಪರವಾಗಿ ತೀರ್ಪು ಹೇಳಿ, ಅಸಾಮಾನ್ಯ ಚಾಣಾಕ್ಷತನದಿಂದ ಕೊನೆಗೆ ಅವನ ಅಪರಾಧವನ್ನು ಬಯಲಿಗಳೆದು ಕ್ರೈಸ್ತರವನಿಗೆ ನ್ಯಾಯ ದೊರಕಿಸಿಕೊಟ್ಟ ಕತೆ ‘ಬಾದಷಹನ ನ್ಯಾಯ’. ‘ಬಾದಷಹನ ದಂಡನೆ’ಯಂತೂ ತುಂಬ ಕುತೂಹಲಕಾರಿಯಾದ ಕಲಾತ್ಮಕ ಕತೆ. ರಾಜಕುಮಾರ ಪರಧರ್ಮೀಯ ಬಡ ಹುಡುಗಿಯೊಂದನ್ನು ಬಲಾತ್ಕಾರದಿಂದ ವಶಪಡಿಸಿ ಕೊಳ್ಳಲೆತ್ನಿಸುತ್ತಿದ್ದಾನೆಂಬ ದೂರು ಬರುತ್ತದೆ. ಅದನ್ನು ಬೆಂಬಲಿಸುವ ಕುರುಹುಗಳೂ ಚಕ್ರವರ್ತಿಗೆ ದೊರೆಯುತ್ತವೆ. ಯಾರೆ ಆಗಲಿ, ತಪ್ಪಿ ನಡೆದವರಿಗೆ ದಂಡನೆ ಅನಿವಾರ್ಯವೆಂದು ತಾನೇ ಆ ಹುಡುಗಿಯ ಗುಡಿಸಲಿಗೆ ಬರುತ್ತಾನೆ. ಒಳಗಿದ್ದ ರಾಜಕುಮಾರ ಹೊರಬಂದಾಗ ತುಸುವೂ ಹಿಂಜರಿಯದೆ ಯೋಚಿಸದೆ ಕತ್ತಿ ಬೀಸಿ ರುಂಡವನ್ನು ಕತ್ತರಿಸುತ್ತಾನೆ. ರಾಜ್ಯದ ಭಾವೀ ದೊರೆ ಸತ್ತನೆಂದು ನಾವು ಭಾವಿಸುವಷ್ಟರಲ್ಲೇ ಕತೆ ಅನಿರೀಕ್ಷಿತವಾದ ಹಿತಕರವಾದ ಆದರೂ ಅಸಹಜವಲ್ಲದ ತಿರುವನ್ನು ಪಡೆಯುತ್ತದೆ. ಖಡ್ಗಕ್ಕೆ ಬಲಿಯಾದವನು ರಾಜಕುಮಾರನಾಗಿರದೆ ಆತನ ದುಷ್ಟ ಸ್ನೇಹಿತನಾಗಿರುತ್ತಾನೆ. ಇಂತಹ ವಿಸ್ಮಯಕಾರಿಯಾದ ಅಂತ್ಯ ಪರಿಣಾಮವನ್ನೊಳಗೊಂಡು ಚಿತ್ತದಲ್ಲಿ ಊರಿ ನಿಲ್ಲುತ್ತದೆ ಈ ಕತೆ.

‘ನಿಜಗಲ್ಲಿನ ರಾಣಿ’ ಮತ್ತು ‘ಪೆನುಗೊಂಡೆಯ ಕೃಷ್ಣಮೂರ್ತಿ’ ನಮ್ಮ ಕ್ಷತ್ರಿಯ ಹೆಣ್ಣು ಮಕ್ಕಳ ನಿಸ್ವಾರ್ಥ ತ್ಯಾಗವನ್ನೂ ಧೀರೋದಾತ್ತತೆಯನ್ನೂ ಸತ್ವಯುಕ್ತವಾಗಿ ಅಭಿವ್ಯಂಜಿಸುವ ಕತೆಗಳಾಗಿವೆ. ತನ್ನ ತಮ್ಮನ ಸ್ವಾರ್ಥ ಲಾಲಸೆಯಿಂದ ಮರಾಠರು ನಿಜಗಲ್ಲು ದುರ್ಗಕ್ಕೆ ನುಗ್ಗಿ ವಿಜಯ ಸಾಧಿಸಿದಾಗ, ತನ್ನ ಪತಿಯನ್ನು ಕಳೆದುಕೊಂಡಳು ರಾಣಿ ಗಿರಿಜವ್ವೆ. ವಿಜಯ ಕಾಣಿಕೆಯಾಗಿ ಮರಾಠಾ ಸರದಾರನಿಗೆ ವಶವಾಗಲು ಒಪ್ಪಿ, ಆ ಮುನ್ನ ತನ್ನ ತಮ್ಮನೊಡನೆ ದುರ್ಗದ ಮೇಲೆ ಉತ್ಸವ ಮಾಡಿಕೊಳ್ಳಲು ಬಯಸುತ್ತಾಳೆ. ಎಳೆಯ ಕಂದನನ್ನು ಹಿರಿಯ ರಾಣಿಗೆ ಒಪ್ಪಿಸಿ, ಕೋಟೆ ಗೋಡೆಯ ಮೇಲೆ ವಿದ್ರೋಹಿ ತಮ್ಮನೊಡನೆ ಮೆರವಣಿಗೆಯಲ್ಲಿ ಭಾಗವಹಿಸುತ್ತಾಳೆ. ಕೊನೆಗೆ ಗದ್ದುಗೆ ಬಂಡೆಯ ಬಳಿಗೆ ಬಂದು ‘ಕಸ್ತೂರಿ ನಿನ್ನಿಂದ ನನಗೆ ಈ ಪದವಿ ಬಂತು. ನಿನ್ನನ್ನು ನಾನು ಮರೆಯಬಾರದು’ ಎಂದು ಕಟಕಿಯಾಡಿ ಅವನನ್ನಪ್ಪಿಕೊಂಡು ಕೆಳಕ್ಕೆ ಧುಮುಕುತ್ತಾಳೆ. ಈ ವೀರರಾಣಿಯ ಸಾಹಸ ಸಂಪನ್ನ ಮನೋಧರ್ಮ ನಮ್ಮ ಸಂಸ್ಕೃತಿಯ ಜೀವಾಳವಾಗಿದೆ. ಈಕೆಯ ದುರಂತ ಕಣ್ಣೀರಿನ ಜೊತೆಗೆ ಹೆಮ್ಮೆಯನ್ನೂ ಮೂಡಿಸುತ್ತದೆ. ಶ್ರೀರಂಗರಾಯನ ಆಲಸ್ಯ ವಿಲಾಸಗಳ ಫಲವಾಗಿ ಪೆನುಕೊಂಡೆಯು ಮಹಮ್ಮದೀಯರ ದಾಳಿಗೆ ತುತ್ತಾದಾಗ ತಾಯಿ ಲಕ್ಷ್ಮಾಂಬೆಯೂ ಚಿಕ್ಕರಾಯನೂ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಊರ ಹೊರಗಿನ ಒಂದು ನೆಲಮಾಳಿಗೆಯಲ್ಲಿ ತಾವು ಭಜಿಸುತ್ತಿದ್ದ ಕೃಷ್ಣವಿಗ್ರಹದ ಸಮೇತ ಆಶ್ರಯ ಪಡೆಯುತ್ತಾರೆ. ಆದರೆ ಶತ್ರು ಅಲ್ಲೇ ಬೀಡನ್ನು ಬಿಟ್ಟಿದ್ದರಿಂದ ಹೊರಗೆ ಬರಲಾರದೆ ಅನ್ನಪಾನಾದಿಗಳಿಲ್ಲದೆ ಅವರು ಜೀವಂತ ಸಮಾಧಿಯಾಗುತ್ತಾರೆ. ಇನ್ನೊಂದು ವರ್ಷದ ನಂತರ ಅಲ್ಲಿ ದೊರೆತ ಕೃಷ್ಣವಿಗ್ರಹದಿಂದ ಈ ಹೃದಯ ವಿದ್ರಾವಕ ಕತೆ ಬೆಳಕಿಗೆ ಬರುತ್ತದೆ. ಚಿಕ್ಕರಾಣಿಯ ಮನೋನಿಷ್ಠೆ, ಲಕ್ಷ್ಮಾಂಬೆಯ ದೇಶಪ್ರೇಮ, ಸಾಹಸ ಮನೋಭಾವ, ರೈತನ ಸ್ವಾಮಿಭಕ್ತಿಗಳು ತುಂಬ ಸಶಕ್ತವಾಗಿ ಮೂಡಿಬಂದಿವೆ. ಅವರ ಸಾವಿನ ಘಟನೆಯಂತೂ ಎದೆಯನ್ನು ಕರಗಿಸುತ್ತದೆ. ಆದರೆ ಆರಂಭ ಸ್ವಲ್ಪ ಲಂಬಿತವಾಗಿ ನಿರ್ಜೀವ ವರದಿಯಾಗಿ ಕಥಾಕಟ್ಟಡ ಶಿಥಿಲವಾಗಿದೆ.

‘ಸಾರಿಪುತ್ರನ ಕಡೆಯ ದಿನಗಳು’ ಮತ್ತು ‘ಕವಿಯ ಬಾಳ ಕೊನೆಯ ದಿನ’ ಭಾವಗೀತೆಯ ಸಂಯಮತೆ, ಬಿಗುವು, ಭಾವಸಾಂದ್ರತೆ, ರಸೋತ್ಕಟತೆ ಮತ್ತು ಕಲಾಪರಿಣಾಮಗಳನ್ನುಳ್ಳ ಉತ್ಕೃಷ್ಟ ಕತೆಗಳು. ಬುದ್ಧನ ಪ್ರಿಯ ಶಿಷ್ಟನಾದ ಸಾರಿಪುತ್ರ ಗುರುವಿನ ಮಹಾನಿರ್ವಾಣದ ನಂತರ, ನಾಲ್ವತ್ತು ವರ್ಷಗಳ ಹಿಂದೆ ಬಿಟ್ಟು ಬಂದಿದ್ದ ಊರಿಗೆ ಬರುತ್ತಾನೆ. ತನ್ನ ಪೂರ್ವಾಶ್ರಮದ ಮಡದಿ ಮಗಳು. ಅಳಿಯಂದಿರನ್ನು ಸಂಧಿಸುತ್ತಾನೆ. ತಾನು ಹೊರಟಾಗಿನ ಸ್ಥಿತಿಗತಿಗಳನ್ನೂ ಈಗಿನ ಬದಲಾವಣೆಗಳನ್ನೂ ಆತ ನಿರ್ಲಿಪ್ತವಾಗಿ ನೆನೆಯುತ್ತಾನೆ. ಮಧ್ಯ ಮಧ್ಯೆ ಗುರುದೇವನೊಡನೆ ತಾನು ಕಳೆದ ಅಮೃತಗಳಿಗೆಗಳನ್ನು ಮೆಲುಕು ಹಾಕುತ್ತಾನೆ. ಅದನ್ನು ನೆನೆದಷ್ಟೂ ಅವನಿಗೆ ಅಭಿಮಾನ ಗೌರವಗಳು ಉಕ್ಕಿ ಬರುತ್ತವೆ. ಆ ಊರಿನ ಹಿರಿಯರ ನಡುವೆ, ಮಕ್ಕಳ ನಡುವೆ, ದೀಕ್ಷೆವಹಿಸಿದ ಹೆಂಡತಿಯ ನಡುವೆ ಆತ ಗುರುವಿನ ಉಪದೇಶಗಳನ್ನು ಪ್ರಚಾರ ಮಾಡುತ್ತಾ ಅವರ ಮಢ್ಯವನ್ನು ಕಳೆಯುತ್ತಾ ಅತ್ಯಂತ ಆನಂದದಲ್ಲಿ ಆಶಾದೂರನಾಗಿ ದಿನಗಳೆಯುತ್ತಾನೆ. ಈ ಒಂದೊಂದು ಚಿತ್ರವೂ ರಮ್ಯ ಸ್ಮರಣಮಾಲಿಕೆಯಾಗಿ ಅಪೂರ್ವವಾದ ಕಲಾಕೌಶಲದಿಂದ ಮೆರೆಯುತ್ತದೆ. ಕತೆಯ ಪ್ರಶಾಂತ ರಮ್ಯ ವಾತಾವರಣ, ಸಾರಿಪುತ್ರನ ಮತ್ತು ಬುದ್ಧ ಗುರುವಿನ ನುಡಿಗಳಲ್ಲಿನ ಬೆಳುದಿಂಗಳ ತಂಪು ಕತೆಯಲ್ಲಿ ಭಟ್ಟಿಯಿಳಿದು ಉಜ್ವಲ ಪರಿಣಾಮವನ್ನುಂಟು ಮಾಡುತ್ತದೆ. ಘಟನೆಗಳ ಪರಿಸರದ ಚಿತ್ರಣ ತುಂಬ ನೈಜವೂ ಜೀವಂತವೂ ಆಗಿದೆ. ಕವಿಯ ಬಾಳ ಕೊನೆಯ ದಿನ’ ಮಹಾಕವಿ ಗಯಟೆಯ ಮರಣ ದಿನದಂದು ಆತನ ಸ್ಮರಣೆಯಲ್ಲಿ ಮೂಡಿದ ಅವನ ಜೀವನದ ಪ್ರಮುಖ ಘಟನೆಗಳ ಸಿಂಹಾವಲೋಕನ. ವಾತ್ಸಲ್ಯಮಯಿಯಾದ ತಾಯಿ, ಹಠಗಾರನಾದ ತಂದೆ, ಹುಟ್ಟಿದ ಊರು, ದುಡಿತದಿಂದ ದೊರೆಯುತ್ತಿದ್ದ ಸುಖಸಂತೃಪ್ತಿ, ಬಾಳಿನಲ್ಲಿ ಬಂದು ಹೋದ ಪ್ರಣಯಿನಿಯರು, ತನ್ನನ್ನು ಪ್ರೋಮಿತ್ರರು, ತನಗೆ ಕೀರ್ತಿ ತಂದ ಕೃತಿಗಳು, ತಾನು ಅಮಿತವಾಗಿ ಗೌರವಿಸುತ್ತಿದ್ದ ಷೇಕ್ಸ್‌ಪಿಯರ್, ಹಾಫೀಸ್, ಕಾಳಿದಾಸ – ಹೀಗೆ ಎಲ್ಲವೂ ಎಲ್ಲರೂ ಅಲ್ಲಿ ಸುಳಿದು ಬರುತ್ತಾರೆ. ಸುರುಳಿ ಸುರುಳಿಯಾಗಿ ಅವನ ಜೀವನ ಚಿತ್ರಗಳು ವರ್ಣಮಯವಾಗಿ ರಮ್ಯವಾಗಿ ಬಿಚ್ಚಿಕೊಳ್ಳುವ ಕಲೆಗಾರಿಕೆ ಓದುಗರ ಮೇಲೆ ಅದ್ಭುತ ಪ್ರಭಾವ ಬೀರುತ್ತದೆ. ಮೇಲುನೋಟದವರಿಗೆ ಗಯಟೆಯದು ತುಂಬ ಅಶುಚಿಯ ಜೀವನ; ಆದರೆ ಕಲಾವಿದನ ವಿಶಿಷ್ಟ ದೃಷ್ಟಿಯಲ್ಲಿ ಅವೆಲ್ಲವೂ ಮರೆಯಾಗಿ ಒಂದು ಅಲೌಕಿಕ ಮೆರುಗು ಅವಕ್ಕೆ ಬಂದಿರುವುದನ್ನು ಕಾಣುತ್ತೇವೆ.

ವಿಶಾಲಾಕ್ಷ ಪಂಡಿತನ ವಿಶಾಲ ಮನೋಧರ್ಮವನ್ನೂ ಕರ್ತವ್ಯಪ್ರಜ್ಞೆಯನ್ನೂ ರಾಜನೀತಿ ನೈಪುಣ್ಯವನ್ನೂ ನಿಸ್ವಾರ್ಥ ನಿಷ್ಕಾಪಟ್ಯಗಳನ್ನೂ ಕಲಾಪೂರ್ಣವಾಗಿ ತೋರಿಸುವ ಕತೆ ‘ಪಂಡಿತನ ಮರಣಶಾಸನ’. ಅವನ ಪಕ್ಷಾತೀತವಾದಿ ನಿಲುವು, ವಾದವೈಖರಿ, ಸತ್ಯವನ್ನು ನೇರವಾಗಿ ಹೇಳುವ ನಿರ್ಭಯತೆ, ಗುಣಾವಗುಣಗಳನ್ನು ಅತಿಶೀಘ್ರವಾಗಿ ಗುರುತಿಸುವ ಚಾಣಾಕ್ಷತನಗಳು ಹೃನ್ಮೋಹಕ ಆಭಿವ್ಯಕ್ತಿಯನ್ನು ಪಡೆದಿವೆ. ಆತನ ದಾರುಣ ಮರಣ ಮಹಾ ವಿಷಾದವನ್ನೂ ಮರುಕವನ್ನೂ ಮನದಲ್ಲಿ ತುಂಬುತ್ತದೆ. ಅಂತೆಯೇ ತಾವು ಸಾಯುವ ಗಳಿಗೆಯಲ್ಲಿ ಪೂರ್ವವೈರವನ್ನು ಮರೆತು ರಾಜ್ಯ ಕಲ್ಯಾಣೈಕ ದೃಷ್ಟಿಯಿಂದ ತಿರುಮಲಾರ್ಯರಿಗೆ ಪ್ರಧಾನ ಪದವಿಯನ್ನು ನೀಡಬೇಕೆಂದು ಮಹಾರಾಜರಿಗೆ ಹೇಳುವ ಮಾತು ಅವರ ವ್ಯಕ್ತಿತ್ವವನ್ನು ಔನ್ನತ್ಯಕ್ಕೊಯ್ಯುತ್ತದೆ. ಹೀಗೆ ಕೇವಲ ಕೆಲವೇ ಮಾತುಗಳಲ್ಲಿ ಪಾತ್ರ ಮನೋಧರ್ಮವನ್ನು ಬಿಚ್ಚಿಡುವ ಚತುರಕಲೆ ಇಲ್ಲಿದೆ.

ಮಹಾಭೀಕರವಾದ ಕಳಿಂಗ ಸಮರ ಕೊನೆಗೊಂಡು, ಅಲ್ಲಿನ ವಿಜಯದ ಫಲವಾಗಿ ನಡೆದ ಅಮಾನುಷ ಅತ್ಯಾಚಾರಗಳನ್ನು ಉಪಗುಪ್ತನ ಜೊತೆಯಲ್ಲಿ ಸ್ವತಃ ದರ್ಶಿಸಿದ ಚಕ್ರವರ್ತಿ ಅಶೋಕ, ಆ ಕ್ಷುದ್ರ ಬಯಕೆಗೆ ಹೇಸಿ ಕಡುನೊಂದು ಸಂತಪ್ತ ಮನಸ್ಥಿತಿಯಲ್ಲಿ ಬಿಡಾರಕ್ಕೆ ತೆರಳಿದಾಗ, ಬಾಗಿಲಲ್ಲೇ ಬುದ್ಧಮೂರ್ತಿ ಅವನಿಗೆ ಕಾಣಿಸುತ್ತದೆ. ತನ್ನ ವಿಜಯದಿಂದಾದ ಅನಾಹುತ ಪರಂಪರೆಗಳನ್ನು ಕಣ್ಣಾರೆ ಕಂಡು ಜರ್ಝರಿತ ಹೃದಯನಾಗಿದ್ದ ಅಶೋಕ ತಾನು ಮುಂದೆಂದೂ ಯುದ್ಧ ಮಾಡುವುದಿಲ್ಲವೆಂದು ಆ ಮೂರ್ತಿಗೆ ಮಾತು ಕೊಟ್ಟು ಪ್ರಿಯದರ್ಶಿಯಾಗುತ್ತಾನೆ. ಇದೇ ‘ಪ್ರಿಯದರ್ಶಿ ಅಶೋಕ’ ಕತೆಯ ವಸ್ತು. ಉಪಗುಪ್ತನ ಪ್ರಶಾಂತ ನಡೆನುಡಿ, ಅಶೋಕ ಕಂಡ ಭೀಕರ ದೃಶ್ಯಗಳು ಕಣ್ಣಿಗೆ ಕಟ್ಟುವಷ್ಟು ಸಹಜವಾಗಿ ಜ್ವಲಂತವಾಗಿ ಚಿತ್ರಿತವಾಗಿವೆ. ವಿನಯಪರನೂ ಗುರುಭಕ್ತನೂ ಜ್ಞಾನಿಯೂ ಮಹಾ ಸಾಹಸಿಯೂ ಆದ ಅಲೆಕ್ಸಾಂಡರ್ ವಿಜಯದ ಮೇಲೆ ವಿಜಯವನ್ನು ಸಾಧಿಸಿದ. ಹೊಗಳುಭಟ್ಟರ ಮಧ್ಯೆ ಸಿಕ್ಕಿದ ಈ ಜಗಜ್ಜೇತನಿಗೆ ತಾನೇ ದೇವರೆಂಬ ಗರ್ವ ಮೂಡಿತು. ಅದನ್ನು ವಿರೋಧಿಸಿದ ಅರಿಸ್ಟಾಟಲನ ಸೋದರ ಸೊಸೆಯ ಮಗನಾದ ಕ್ಲಿಯಾಂತೀಸ್‌ನನ್ನು ಕೋಪದಲ್ಲಿ ಕೊಂದು ಹಾಕಿದ. ಇದೇ ವಿಖ್ಯಾತ ಗುರುವಿಗೆ ವಿಖ್ಯಾತ ಶಿಷ್ಯ ಕೊಟ್ಟ ಗುರುದಕ್ಷಿಣೆಯಾಯಿತು. ಗುರುವಿನ ಮನದ ಆತಂಕ ಕಳವಳಗಳು, ಅಲೆಕ್ಸಾಂಡರನ ಮನದ ಗರ್ವ ಅಭಿಮಾನ ಕೋಪಗಳು ಕ್ಷಣಕ್ಷಣಕ್ಕೂ ಉಕ್ಕೇರುವುದನ್ನು ಕತೆಗಾರರು ಸೊಗಸಾಗಿ ನಿರೂಪಿಸಿದ್ದಾರೆ. ತನ್ನ ಚಕ್ರಾಧಿಪತ್ಯದ ಒಂದು ಊರಿನ ಜನ ತಾನು ನೇಮಿಸಿದ ಮಾಂಡಲಿಕನನ್ನು ಕೊಂದುದರ ಕಾರಣ, ಆ ಊರಿನ ನರಜಂತುಗಳೆಲ್ಲವನ್ನೂ ಚಕ್ರವರ್ತಿ ಕೊಲ್ಲಿಸಿದಾಗ, ಆ ಅರಿಯದ ಅಮಾಯಕ ಜನತೆಯನ್ನು ಕೊಲ್ಲಿಸಿದ ಪಾಪವನ್ನು ಒಪ್ಪಿಕೊಂಡಲ್ಲದೆ ದೇವಾಲಯದೊಳಕ್ಕೆ ಬಿಡುವುದಿಲ್ಲವೆಂದು ಚಕ್ರವರ್ತಿಯನ್ನೇ ಶಾಸನ ಮಾಡಿ ಎದುರಿಸಿದ ಧರ್ಮವೀರನೂ ಸತ್ಯವ್ರತನೂ ಆದ ಪಾದ್ರಿಯ ಧೀಮಂತ ರೋಚಕ ಕತೆ ‘ಅಂಬ್ತೋಸ್ ಅಪ್ಪಾಜಿ’.

ಹುಟ್ಟಿದಂದಿನಿಂದ ವೀರಕುಮಾರನಂತೆ ಬೆಳೆದು, ರಣರಂಗದಲ್ಲೂ ಪತಿಯ ಜೊತೆ ಯಲ್ಲಿಯೇ ವೈರಿಗಳನ್ನು ಎದುರಿಸಿ ಹೋರಾಡಿ ಜೀವತ್ಯಾಗ ಮಾಡಿದ ‘ಸಾವಿಯಬ್ಬೆ’ಯ ಕತೆ, ಮತ್ತು ಚೊಚ್ಚಲ ಬಸುರಿಯಾದ ಮಡದಿಯನ್ನೂ ದಿಕ್ಕಿಲ್ಲದ ತಾಯಿ ಅತ್ತೆಯರನ್ನೂ ಬಿಟ್ಟು ಜೀವವನ್ನು ತೃಣವಾಗಿಸಿ ಶತ್ರುಗಳೊಡನೆ ಹೋರಾಡಿ ಸಾವನ್ನಪ್ಪಿದ ‘ಹೊಯ್ಸಳ ದಳಪತಿ’ಯ ಕತೆ ನಮ್ಮ ನಾಡಿನ ವೀರಪರಂಪರೆಯ ರಮ್ಯೋಜ್ವಲ ಅಧ್ಯಾಯಗಳಾಗಿವೆ. ‘ಆಟಿಲನ ದಾಕ್ಷಿಣ್ಯ’ ಕ್ರೂರಿಯ ಹೃದಯದಲ್ಲೂ ಮಾನವೀಯತೆಯ ಜೀವನದಿ ಹರಿಯುತ್ತಿ ರುವುದರ, ಆಸಕ್ತಿಯನ್ನು ಅರಳಿಸುತ್ತಾ ಹೋಗುವ ರಸಪೂರ್ಣ ಕತೆ. ಪ್ರಪಂಚವನ್ನೇ ನಡುಗಿಸಿದ ಪುರುಷಸಿಂಹ ನೆಪೋಲಿಯನ್ ಸೆರೆಸಿಕ್ಕಿ ವಿದೀರ್ಣ ಹೃದಯನಾಗಿ, ಕನಸಿನಲ್ಲಾದ ಅಭಿಮಾನ ಭಂಗಕ್ಕೇ ಮಗುವಿನಂತೆ ಕಣ್ಣೀರಿಡುವ ಕರುಣಾಮಯ ಕತೆ ‘ನೆಪೋಲಿಯನ್ನನ ಸೋಲು’. ತಂದೆ ಮಾಡಿದ ತಪ್ಪಿಗೆ ಏನೂ ಅರಿಯದ ಬಾಲಕ ಅಮಾನುಷ ಹಿಂಸೆಗೊಳಗಾಗಿ ಮಡಿದ ಹೃದಯಭೇದಕವಾದ ದೃಶ್ಯ ‘ಕೊನೆಯ ಕಾಪೆಟ್’. ಶ್ರೀಮಂತನೂ ಉನ್ನತ ವಿದ್ಯಾವಂತನೂ ಅಲ್ಲದಿದ್ದರೂ ದೈವದತ್ತವಾದ ಅದ್ಭುತ ಪ್ರತಿಭೆಯಿಂದ ಕಲಾಪೂರ್ಣವಾದ ಮಹಾನಾಟಕಗಳನ್ನು ರಚಿಸಿದರೂ, ಸಮಕಾಲೀನ ನಾಟಕಕಾರರ ಅಸೂಯೆ ಅವಹೇಳನಗಳಿಗೆ ಗುರಿಯಾದರೂ ತುಂಬ ಘನತೆ ಗಾಂಭೀರ್ಯ ಸೌಜನ್ಯಗಳಿಂದ ನಡೆದುಕೊಂಡ ಷೇಕ್ಸ್‌ಪಿಯರನ ಒಂದು ಉದಾತ್ತ ಚಿತ್ರ ‘ಮಾಸ್ಟರ್ ವಿಲಿಯಮ್’.

ಹೀಗೆ ಭಾರತೀಯ ಹಾಗೂ ಆಂಗ್ಲ ಇತಿಹಾಸಗಳ ಪುಟಗಳಿಂದ ಕಥಾ ವಸ್ತುಗಳನ್ನಾಯ್ದು ಕೊಂಡು ಅವೆಲ್ಲವನ್ನೂ ಏಕಪ್ರಕಾರವಾದ ಸಾಮರ್ಥ್ಯದಿಂದ ಉಚಿತ ಹಿನ್ನೆಲೆಯೊಡನೆ ಸುಂದರವಾಗಿ ಸಹಜವಾಗಿ ಜೀವಂತವಾಗಿ ನಿರೂಪಿಸಿ, ನೀರಸವಾದ ವರದಿಗಳು ಲೇಖಕರ ಕಲ್ಪನಾ ಕೌಶಲದಿಂದ ರಕ್ತ ಮಾಂಸಗಳನ್ನು ತುಂಬಿಕೊಂಡು ಸಾವಯವತೆಯನ್ನು ಪಡೆದುಕೊಂಡು ಕಳೆದುಂಬಿ ಕಳಕಳಿಸಿ ಎದ್ದು ನಿಲ್ಲುತ್ತವೆ. ಆದರೆ ವೀರ ರೌದ್ರ ಸನ್ನಿವೇಶ ಗಳನ್ನು ಚಿತ್ರಿಸುವಾಗಲೂ ಅವರ ಲೇಖನಿ ಓಜೋಪೂರ್ಣವಾಗದೆ ನಿರುದ್ವೇಗದಿಂದ ಸಾವಧಾನವಾಗಿ ಸಾಗುವುದರಿಂದ ಅವರ ಸ್ವಭಾವಸಿದ್ಧವಾದ ಮೃದುತ್ವದ ಸೋಂಕು ತಗುಲಿ ರಭಸ ಶಕ್ತಿ ಕಾವುಗಳು ಕುಗ್ಗುವುದರಿಂದ ಆಗಬೇಕಾದಷ್ಟು ಗಾಢಪ್ರಭಾವ ಆಗುವುದಿಲ್ಲ. ಐತಿಹಾಸಿಕ ಕತೆಗಳಾದರೂ ಸಾಮಾಜಿಕ ಕತೆಗಳಂತೆಯೇ ಓದುಗರಿಗೆ ಭಾಸವಾದರೆ ಆಶ್ಚರ್ಯವಿಲ್ಲ.

ಪುರಾಣಗಳಿಂದಲೂ ಕಥಾವಸ್ತುಗಳನ್ನು ಆರಿಸಿಕೊಂಡು ಅವಕ್ಕೆ ತಮ್ಮ ಪ್ರತಿಭೆಯ ಜೀವಪ್ರಭೆಯನ್ನು ತುಂಬಿ ರಮ್ಯವಾದ ಸಾರ್ವಕಾಲಿಕ ಕತೆಗಳನ್ನು ಮಾಸ್ತಿಯವರು ಸೃಷ್ಟಿಸಿದ್ದಾರೆ. ದುಶ್ಯಂತನೊಂದಿಗೆ ಪುತ್ರ ಸಮೇತಳಾಗಿ ರಾಜಧಾನಿಗೆ ಹಿಂದಿರುಗಿದ ಶಕುಂತಲೆ ಸವತಿಯಾದ ಹಂಸಪದಿಕೆಯೊಡನೆ ಕಣ್ವಾಶ್ರಮಕ್ಕೆ ಮರಳಿ ಬಂದು ಆ ಲತೆ, ಆ ಸಖಿಯರು, ಗೌತಮಿ, ಮುನಿಕುಮಾರರು, ಜಿಂಕೆ ಮುಂತಾದುವನ್ನು ಕಂಡ ಆತ್ಮೀಯವಾದ ರಸಭರಿತ ಚಿತ್ರಣವೇ ಹೇಮಕೂಟದಿಂದ ಹಿಂದಿರುಗಿದ ಮೇಲೆ. ಹಲವು ವರ್ಷಗಳ ದುಃಖ ವ್ಯಥೆ ವಿಯೋಗಗಳ ನಂತರ ಶಕುಂತಳೆ ಸಂತೋಷವಾಗಿ ಬಂದು ತನ್ನ ಬಾಲ್ಯದ ದಿನಗಳನ್ನು ಸ್ಮರಿಸಿಕೊಳ್ಳುವುದು, ಸಖಿಯರೊಡನೆ ವಿಹರಿಸುವುದು, ಗೌತಮಿಯಿಂದ ಕತೆ ಕೇಳುವುದು, ಭರತಕುಮಾರನ ತುಂಟತನ, ಕಣ್ವರ ಪ್ರಶಾಂತಿ – ಒಂದೊಂದೂ ಅಸಾಧಾರಣವಾದ ಪ್ರಭಾವವನ್ನುಂಟುಮಾಡುತ್ತವೆ. ಕಾಳಿದಾಸ ಸೃಷ್ಟಿಸಿದ ವಾತಾವರಣವನ್ನೇ ಕಾವ್ಯಮಯವಾಗಿ ಮೂಡಿಸುತ್ತವೆ. ಲೋಕ ಕವಿಯ ಲೋಕೋತ್ತರ ಕೃತಿಗೆ ಒಂದು ಅನರ್ಘ್ಯವಾದ ಅನುಬಂಧವಿದು. ಕೇವಲ ಊಹೆಯಿಂದಲೇ ಸೃಷ್ಟಿಸಿದ, ನಮ್ಮ ಸಾಹಿತ್ಯದ ಪರಮ ಶ್ರೇಷ್ಠ ಮನೋಜ್ಞ ಕತೆಗಳಲ್ಲೊಂದು ಇದು. ಇಂಥದೇ ಮತ್ತೊಂದು ಅತ್ಯಾಕರ್ಷಕ ಕತೆ “ಗೌತಮಿ ಹೇಳಿದ ಕತೆ”. ಇದರಲ್ಲಿನ ನರ್ಮದೆ, ಭಾರದ್ವಾಜರ ಅಫಲಿತ ಪ್ರಣಯ, ದತ್ತ ಕಾಶ್ಯಪನ ನಿರ್ಮಲವಾದ ಸ್ಥಿರಸಂಕಲ್ಪ, ತಪೋಸಂಪತ್ತಿ, ನರ್ಮದೆಯ ಹೃದಯದ ರಾಗಭಾವಗಳು ಮುಂತಾದವು ತುಂಬ ಸಮ್ಮೋಹಕವಾಗಿ ಔಚಿತ್ಯಪೂರ್ಣವಾಗಿ ಸಂದರ್ಭಾನುಗುಣವಾದ ಶಕ್ತ ಹಿನ್ನೆಲೆಯೊಡನೆ ಕಲಾಪೂರ್ಣವಾಗಿ ನಿರೂಪಿತವಾಗಿವೆ. “ಮಂತ್ರೋದಯ” ಮಹರ್ಷಿ ವಾಸುದೇವ ದ್ವೈಪಾಯನರ ಕರ್ಮಯೋಗದ ಕೊನೆಯ ದಿನವನ್ನು ಚಿತ್ರಿಸುವ ರಂಜನೀಯ ಗಂಭೀರ ಕೃತಿ. ದ್ವೈಪಾಯನರ ಅಗಾಧ ಮನ ಚಾಚೂ ತಪ್ಪದ ಅವರ ದಿನಚರಿಯ ಕಾಯಕ, ಬಾಲ್ಯದಿಂದಲೂ ಬಂದ ನಿರ್ಲಿಪ್ತತೆಗಳು ಅತ್ಯಂತ ಸೊಗಸಾಗಿ ವರ್ಣಿತವಾಗಿವೆ. ಅವರಾಡುವ ಕೆಲವೇ ಮಾತುಗಳಿಂದ ಅವರ ಹೃದಯದ ಪರಿಪಕ್ವ ಸ್ಥಿತಿಯನ್ನೂ ಅಪರಿಮಿತ ಜ್ಞಾನವನ್ನೂ ಸೂಚ್ಯವಾಗಿ ಜಣ್ಮೆಯಿಂದ ಲೇಖಕರು ಬಹಿರಂಗಪಡಿಸುತ್ತಾರೆ. ಅವರು ಮರಣವನ್ನೂ ಅತ್ಯಂತ ಲೀಲಾಜಲವಾಗಿ ಸ್ವಯಿಚ್ಛೆಯಿಂದ ಸ್ವಾಗತಿಸುವ ಸನ್ನಿವೇಶವಂತೂ ತುಂಬ ಉಜ್ವಲವಾಗಿದೆ. ಹೀಗೆ ಮಾಸ್ತಿಯವರ ಸರ್ವಂಕಷವಾದ ಪ್ರಖರ ಪ್ರತಿಭೆ ಪುರಾಣ ಪ್ರಪಂಚವನ್ನು ಮತ್ತೊಮ್ಮೆ ತನ್ನ ವೈಭವ ಔಚ್ವಲ್ಯ ಔನ್ನತ್ಯಗಳೊಡನೆ ಮರುಸೃಷ್ಟಿಸಿದೆ.

ಸಾಂಕೇತಿಕವಾದ ಹಾಗೂ ಆವರಣ ಪ್ರಧಾನವಾದ ಕತೆಗಳೂ ಕೆಲದಿವೆ. ‘ಕಾಕಲೋಕ’ ಜಗತ್ತಿನಲ್ಲಿ ದುಷ್ಟರ ಪ್ರಾಬಲ್ಯದಿಂದ ದೀನ ದುರ್ಬಲ ಸಾಧು ಜೀವಿಗಳಿಗೆ ದಿನನಿತ್ಯವೂ ಆಗುತ್ತಿರುವ ಅನ್ಯಾಯ ಪರಂಪರೆಗಳನ್ನು ಅದ್ಭುತವಾಗಿ ಸಾಂಕೇತಿಸುವ ಧ್ವನಿಪೂರ್ಣ ಕತೆ. ‘ಒಂದು ಹಳೆಯ ಕತೆ’ ಆವರಣ ಪ್ರಧಾನವಾದ ರೂಪಕ ಕತೆ. ತಾನು ಪರಮೋನ್ನತ ವಿರಾಗಿಯೆಂದು, ರೂಪವಿಲಾಸ ವಿಭ್ರಮಗಳು ತನ್ನನ್ನು ತಟ್ಟಲಾರವೆಂದೂ ಭಾವಿಸಿದ್ದ ಸನ್ಯಾಸಿಯೊಬ್ಬ, ಯಾವ ವೃದ್ಧನನ್ನೇ ಆಗಲಿ, ಯಾವ ಜ್ಞಾನಿಯನ್ನೇ ಆಗಲಿ, ಯಾವ ಸನ್ಯಾಸಿಯನ್ನೇ ಆಗಲಿ ಸ್ತ್ರೀರೂಪ ನಿಜವಾಗಿಯೂ ಸೆಳೆಯಬಲ್ಲದು ಎಂಬ ವ್ಯಾಸ ವಾಕ್ಯವನ್ನು ತಿದ್ದಿಸಿ ‘ಸನ್ಯಾಸಿಯನ್ನು ಸೆಳೆಯಲಾರದು’ ಎಂದು ಮಾರ್ಪಡಿಸುತ್ತಾನೆ. ಅದನ್ನೇ ಯೋಚಿ ಸುತ್ತಿದ್ದ ಯೋಗಿ ಆಶ್ರಮದ ಬಳಿ ಅನುಪಮ ಸುಂದರಿಯೊಬ್ಬಳನ್ನು ಕಾಣುತ್ತಾನೆ. ಕಂಡು ಬೆರಗಾಗುತ್ತಾನೆ. ತನ್ನ ವಾಕ್ಯವನ್ನು ನಿಜವಾಗಿಯೂ ಸಾಧಿಸಿ ತೋರಿಸುವ ಕಾಲ ಬಂದಿದೆ ಯೆಂದು ಸಂತಸಗೊಂಡ ಸನ್ಯಾಸಿ ಹಂತಹಂತವಾಗಿ ತನ್ನ ಮನಸ್ಸನ್ನು ಗೆಲ್ಲುವ ಬದಲು ಕ್ರಮಕ್ರಮವಾಗಿ ಆ ರೂಪಿಗೆ ಮಾರುಹೋಗುತ್ತಾನೆ. ಕೊನೆಗೆ ಅವನ ಅಹಂ ವಾಕ್ಯ ತಿರುಗುಮುರುಗಾಗಿ ಮೋಹಪರವಶನಾಗುತ್ತಾನೆ. ಆ ಅದಮ್ಯ ಆಸೆಗೆ ಸಿಕ್ಕಿ ಆ ಸ್ತ್ರೀ ಮಲಗಿದ್ದ ಕೊಠಡಿಯ ಬಾಗಿಲನ್ನು ತಳ್ಳಿದಾಗ ಸ್ತ್ರೀಗೆ ಬದಲು ಜಟಾಧಾರಿಯಾದ ವ್ಯಾಸರು ಕಾಣುತ್ತಾರೆ. ಆಗ ತಪ್ಪಿನ ಅರಿವಾಗುತ್ತದೆ ಸನ್ಯಾಸಿಗೆ. ಮನದಲ್ಲಿ ಬೆಟ್ಟವಾಗಿ ಮೂಡಿದ್ದ ಗರ್ವ ಬೆಣ್ಣೆಯಾಗಿ ಕರಗುತ್ತದೆ. ಈ ಕತೆಗೆ ಹಿನ್ನೆಲೆಯಾಗಿರುವ ಸಂಜೆ, ಕತ್ತಲು, ಮಳೆಗಳು ವಾತಾವರಣದ ತೀವ್ರತೆಯನ್ನು ಹೆಚ್ಚಿಸಿ ಕತೆಗೆ ಒಂದು ಅಪೂರ್ವ ಸಶಕ್ತ ಕಳೆಯನ್ನೂ ನೀಡುತ್ತವೆ. ಅತ್ಯಂತ ಕುತೂಹಲಕರವಾಗಿ ರಹಸ್ಯಾತ್ಮಕವಾಗಿ ಕತೆ ಬೆಳೆಯುತ್ತಾ ಹೋಗುವ ರೀತಿ, ಪಡೆಯುವ ಮುಕ್ತಾಯ ವಿಸ್ಮಯಕಾರಿಯಾಗಿವೆ. ‘ಇನ್ನೊಂದು ಹಳೆಯ ಕತೆ’ಯೂ ಇಷ್ಟೇ ಪರಿಣಾಮ ರಮಣೀಯವಾಗಿದೆ. ಭಕ್ತಿ ಕೇವಲ ಮಂತ್ರಪಠನದಲ್ಲಿ ಆಡಂಬರದ ಆರಾಧನೆಯಲ್ಲಿ ಇದ್ದರೆ ಪ್ರಯೋಜನವಿಲ್ಲ, ಸರ್ವದಾ ಮನಸ್ಸು ಭಗವನ್ಮಯವಾಗಿರಬೇಕು ಎಂಬ ತತ್ವವನ್ನು ಸಾರುವ ತಾತ್ವಿಕ ಕತೆಯಿದು.

‘ಮಲೆನಾಡಿನ ಪಿಶಾಚಿ’ ಅತ್ಯಂತ ಪ್ರಭಾವಪೂರ್ಣವಾದ ರೋಮಾಂಚಕಾರಿಯಾದ ಭಯಾನಕ ಕತೆ. ಬಾಣಂತಿಯನ್ನು ಕೊಂದು, ಬದಲು ಪಿಶಾಚವೇ ಸ್ತ್ರೀಯಾಗಿ ಸಂಸಾರ ನಡೆಸುವುದು, ಅರ್ಧರಾತ್ರಿಯಲ್ಲಿ ಭೂತೇಶ್ವರ ಗುಡಿಗೆ ಹೋಗಿ ತನ್ನ ನಾಲಿಗೆಯಿಂದ ದೀಪದ ಕುಡಿಯನ್ನು ಮಿಟುವುದು, ರಕ್ತವನ್ನು ಹೆಪ್ಪುಗಟ್ಟಿಸುವಷ್ಟು ಪರಿಣಾಮಕಾರಿಯಾಗಿ ವರ್ಣಿತವಾಗಿವೆ. ಆದಿಯಿಂದ ಅಂತ್ಯದವರೆಗೂ ಕತೆ ಏಕಮುಖವಾಗಿ ಬಿಗಿಯಾಗಿ ಕುತೂಹಲಕರವಾಗಿ ಅವಯವಸಂಪುಷ್ಟವಾಗಿ ಬೆಳೆಯುತ್ತಾ ಹೋಗಿ ಭಯಂಕರ ಪ್ರಭಾವದ ಮುಕ್ತಾಯವನ್ನು ಪಡೆಯುವ ಈ ಕತೆ ಕನ್ನಡದ ದೆವ್ವದ ಕತೆಗಳಲ್ಲಿಯೇ ವಿಶಿಷ್ಟವಾದದ್ದು. ಆದರೆ ಕತೆಗಾರರ ಕೋಮಲ ಮನಸ್ಸು ಈ ಪರಿಣಾಮ ಸಾಂದ್ರವಾಗಿ ಚಿರಕಾಲಿಕವಾಗಿ ಮೂಡಲು ಅವಕಾಶ ಕೊಡುವುದಿಲ್ಲ. ಕೊನೆಗೆ ಇದು ಕಟ್ಟುಕತೆ, ಇದರಲ್ಲಿ ನಿಜವಿಲ್ಲ ಎಂದು ಹೇಳಿ ಪರಿಣಾಮದ ತೀವ್ರ ಕಾವನ್ನು ತಟ್ಟನೆ ಇಳಿಸಿಬಿಟ್ಟಾಗ “ಅಯ್ಯೋ” ಎನಿಸುತ್ತದೆ. ತಾವು ಸೃಷ್ಠಿಸಿದ ಧ್ವನಿ ಸಮುದ್ರವನ್ನು ತಾವೇ ಸೋರಿಹಾಕುವುದು ಶ್ರೀನಿವಾಸರ ಕತೆಗಳಲ್ಲಿ ಸಾಮಾನ್ಯವಾಗಿ ಬಿಟ್ಟಿರುವುದು ಕಲೆಯ ದೃಷ್ಟಿಯಿಂದ ಒಂದು ದೊಡ್ಡ ದೌರ್ಬಲ್ಯ.

“ವೆಂಕಟರಾಯನ ಪಿಶಾಚಿ” ಸುಪ್ತ ಮನಸ್ಸಿನಲ್ಲಿದ್ದ ಭೂತದ ಭಯ ಕನಸಾಗಿ ಕಾಡಿದ ಸುಂದರ ಕತೆ.

“ಸುಬ್ಬಣ್ಣ” ಶ್ರೀನಿವಾಸರ ಒಂದು ಮಹೋನ್ನತ ಪ್ರತಿಭಾಸೃಷ್ಟಿ. ಕರಿಯನ್ನು ಕನ್ನಡಿಯಲ್ಲಿ ಅಡಗಿಸಿದಂತೆ ಒಬ್ಬ ಗಾನಯೋಗಿಯ ಜೀವನ ವೃತ್ತಾಂತವನ್ನು ಆ ತಲೆಮಾರಿನ ಜನದ ನಡೆನುಡಿಗಳೊಡನೆ ಅತ್ಯಂತ ಚೊಕ್ಕವಾಗಿ ಹೃದ್ಯವಾಗಿ ಸಾರಭೂತವಾಗಿ ಕೇವಲ ೮೫ ಪುಟಗಳಲ್ಲಿ ಚಿತ್ರಿಸಿದ ಒಂದು ಅಸಾಧಾರಣ ಕಲಾಕೃತಿಯಿದು. ಸರಳವಾಗಿ ನಿರರ್ಗಳವಾಗಿ ಹರಿಯುವ ಕಥನ ಧಾರೆಯಲ್ಲಿ ಸುಬ್ಬಣ್ಣನವರ ಜೀವನ ಸಾಧನೆ ತುಂಬ ಸ್ವಾಭಾವಿಕವಾಗಿ ಮೆಟ್ಟಲು ಮೆಟ್ಟಲಾಗಿ ಅರಳಿ ಬಂದಿದೆ. ಸಂಸ್ಕೃತವನ್ನು ಕಲಿತು ರಾಜರನ್ನು ಆಶೀರ್ವದಿಸ ಬೇಕಾದ ಮಗ ಪಾತ್ರದವರಂತೆ ಸಂಗೀತದ ಬೆನ್ನು ಬಿದ್ದದ್ದು ತಂದೆಯ ಅಸಮಾಧಾನಕ್ಕೆ ಕಾರಣವಾಯಿತು. ಆದರೆ ಗಾನವಿದ್ಯೆಯನ್ನು ಸಾಧಿಸುವ ಹಂಬಲ ಹಿರಿದಾಗಿ ಬೆಳೆದು ಸುಬ್ಬಣ್ಣ ಮನೆ ಮಠ ಮಡದಿ ಎಲ್ಲವನ್ನೂ ನಿರ್ಲಕ್ಷಿಸಿ ಹಗಲಿರುಳೂ ಅವರ ಆರಾಧನೆಯಲ್ಲೇ ತೊಡಗುತ್ತಾನೆ. ಎಲ್ಲಿ ಎಂದರೆ ಅಲ್ಲಿ ಸಂಗೀತವನ್ನಾಸ್ವಾದಿಸಲು ಹೋದಾಗ ವೇಶ್ಯೆಯರ ಪರಿಚಯವೂ ಆಗುತ್ತದೆ. ಆದರೆ ಆ ಸಹವಾಸ ಅವನ ಸಂಗೀತ ತಪಸ್ಸಿಗೆ ತೊಡಕಾಗದೆ ತೊಡವಾಯಿತು. ಕೇವಲ ಬಾಯಿ ಹಾಡುಗಾರಿಕೆಯಲ್ಲಲ್ಲದೆ ಮೃದಂಗ ಪಿಟೀಲುಗಳಲ್ಲಿಯೂ ಪ್ರಾವೀಣ್ಯವನ್ನು ಗಳಿಸಿದನು. ಆದರೆ ತಾನು ಹಣ ಸಂಪಾದಿಸಲು ಸಾಧ್ಯವಾಗಿ, ಮನೆಯ ವಾತಾವರಣ ಅಸಹನೀಯವಾದಾಗ ಮಡದಿ ಮಗುವನ್ನು ಕರೆದುಕೊಂಡು ಅರ್ಧ ರಾತ್ರಿಯಲ್ಲೇ ಮನೆಯಿಂದ ಹೊರಟು ಕಲ್ಕತ್ತೆಯನ್ನು ಸೇರುತ್ತಾನೆ. ಕೊಂಚ ಕಾಲ ಶಾಂತಿ ಸುಖ ಸಮಾಧಾನಗಳಿಂದ ಜೀವನ ಕಳೆದ ನಂತರ ಸಂಸಾರದ ಮೇಲೆ ವಿಧಿಯ ಬರಸಿಡಲು ಎರಗುತ್ತದೆ. ಹೆಂಡತಿ ಮಕ್ಕಳು ಕಣ್ಮರೆಯಾಗುತ್ತಾರೆ. ಬಾಳು ಬೇಸರದ ಬೀಡಾಗುತ್ತದೆ. ಪಿಟೀಲನ್ನು ಹಿಡಿದು ಶಾಂತಿಯನ್ನು ಅರಸಿ ಊರೂರು ಅಲೆದು ಕೊನೆಗೊಮ್ಮೆ ಮೈಸೂರಿಗೆ ಬಂದಾಗ ತಾಯಿ ತಂದೆಗಳು ನಿಧನರಾಗಿರುವುದನ್ನು ಕೇಳುವ ದೌರ್ಭಾಗ್ಯ ಅವನದಾಗುತ್ತದೆ. ಕಿತ್ತು ತಿನ್ನುತ್ತಿದ್ದ ಬಾಲ್ಯದ ನೆನಪಿನಿಂದ ಬಿಡುಗಡೆ ಹೊಂದಲು ತೊರೆಯಪುರಕ್ಕೆ ಬರುತ್ತಾನೆ. (ಹೆಸರು ಸಾಂಕೇತಿಕವಾಗಿದೆ) ಅಲ್ಲಿ ವೇಶ್ಯಾಪುತ್ರ ವೆಂಕಟರಮಣ ಮತ್ತು ಸುಬೇದಾರರ ಮಗಳು ಲಲಿತೆಗೆ ಸಂಗೀತ ಕಲಿಸುತ್ತಾನೆ. ಆದರೆ ಯಾರನ್ನೂ ಹಚ್ಚಿಕೊಳ್ಳದೆ ಏನನ್ನೂ ಹಚ್ಚಿಕೊಳ್ಳದೆ ನಿರ್ಲಿಪ್ತವಾಗಿ ನಿಶ್ಚಿಂತನಾಗಿ ಕಾಲ ಕಳೆದು ಕೊನೆಗೊಮ್ಮೆ ಅಪೂರ್ವವಾದ ರೀತಿಯಲ್ಲಿ ಇಹಜೀವನವನ್ನು ಮುಕ್ತಾಯಗೊಳಿಸುತ್ತಾನೆ. ಇಷ್ಟು ಕತೆ ಎಳೆಎಳೆಯಾಗಿ ಸುಬ್ಬಣ್ಣನ ಜೀವನ ರೇಖೆಗಳನ್ನು ಜೀವಂತವಾಗಿ ಕಾಂತಿಯುಕ್ತವಾಗಿ ಚಿತ್ರಿಸುತ್ತದೆ. ಅವನ ಆರಂಭದ ಸಿಟ್ಟು ಸಿಡುಕು ಹಠ ಮಾಯವಾಗಿ ಮಡದಿಯ ಬಗ್ಗೆ ಮಕ್ಕಳ ಬಗ್ಗೆ ಪ್ರೀತಿ ಪ್ರೇಮಗಳು ಬೆಳೆಯುತ್ತವೆ. ಸಂಗೀತ ಸಾಧನೆಯ ಜೊತೆ ಜೊತೆಯಾಗಿಯೇ ಅವನ ಮನಸ್ಸೂ ಬೆಳೆಯುತ್ತಾ ಉದಾತ್ತವಾಗುತ್ತಾ ಹೋಗುತ್ತದೆ. ಮಡದಿ ಮಕ್ಕಳು ಮರಣಿಸಿದಾಗ ಜೀವ ಅಧೀರವಾದರೂ ತೀವ್ರ ಶೋಖಸಂತಪ್ತವಾದರೂ ಕೊನೆಕೊನೆಗೆ ಅದೆಲ್ಲವೂ ಕರಕರಗಿ ಸಂಗೀತದ ಆನಂದ ಪ್ರಶಾಂತತೆ ಅವನ ಜೀವನವನ್ನು ತುಂಬಿ ನಿಲ್ಲುತ್ತದೆ. ಅದರಲ್ಲಿ ಯಾವ ಸಾಂಸಾರಿಕ ಲೌಕಿಕ ಕ್ಲೇಶ ಕ್ಷೋಭೆಗಳೂ ಸುಳಿಯದೆ ಒಂದು ರೀತಿಯ ಯೋಗಿ ಸಹಜವಾದ ಜೀವಕಾರುಣ್ಯ ಉನ್ನತ ಜೀವನದೃಷ್ಟಿ ತಾತ್ವಿಕನಿಷ್ಠೆ ದೈವಭಕ್ತಿಗಳು ಬಲಿತು ಕೊನೆಗೆ ಅವನು ನಿಜವಾಗಿಯೂ ಯೋಗಿಯೇ ಆಗಿ ಪರವನ್ನಪ್ಪುತ್ತಾನೆ. ಅವನ ಹೆಂಡತಿ ಲಲಿತಮ್ಮನ ಪಾತ್ರವೂ ಅಷ್ಟೇ ಉದಾತ್ತವಾದದ್ದು, ಆದರ್ಶವಾದದ್ದು. ಅತ್ತೆ ಮಾವಂದಿರೆದುರು ಎದುರು ವಾದಿಸದೆ ಗಂಡನಿಗೆ ಅನುಕೂಲಳಾಗಿ ತಗ್ಗಿ ಬಗ್ಗಿ ತುಂಬ ಸಹನೆ ಸಂಯಮಗಳಿಂದ ಆಕೆ ನಡೆದುಕೊಳ್ಳುತ್ತಾಳೆ. ಅತ್ತೆ ಬೈದು ಭಂಗಿಸಿದರೂ ಆಕೆಗೆ ಅವರ ಮೇಲೆ ಕೋಪ ತಾಪಗಳಿಲ್ಲ. ಪತಿಯು ಹಠಮಾರಿತನದಿಂದ ಮನೆಬಿಟ್ಟು ಹೊರಟಾಗ ಅತ್ತೆ ಮಾವಂದಿರಿಗಾಗಿ ಅವಳು ಮರುಗುತ್ತಾಳೆ. ಕೊನೆಗೆ ತನ್ನ ಮಾತು ನಡೆಯದ ನಾಣ್ಯವಾದಾಗ ಕಲ್ಕತ್ತೆಯಲ್ಲಿ ನೆಲೆಸಿ ಪತಿಗೆ ಅನುಕೂಲೆಯಾಗಿ ಮಕ್ಕಳ ಮಮತೆಯ ತಾಯಿಯಾಗಿ ಅವರಿಗೆ ಸಂತೋಷದ ಸವಿಯನ್ನೂಡುತ್ತಾಳೆ. ಮಕ್ಕಳೆಲ್ಲರೂ ಅಕಾಲದಲ್ಲಿ ತೊಟ್ಟು ಕಳಚಿಕೊಂಡಾಗ ಆ ಅಸಹನೀಯ ಆಘಾತವನ್ನು ಭರಿಸಲಾಗದ ಆ ಸುಕೋಮಲ ಹೆಣ್ಣು ಹೃದಯ ಕಾಲವಶವಾಗುತ್ತದೆ. ಮೊದಮೊದಲು ಸಿಡುಕಿನಿಂದ ಅತ್ತೆಯೆಂಬ ಸಂಪ್ರದಾಯದತ್ತವಾದ ಅಧಿಕಾರದಿಂದ ವರ್ತಿಸಿದರೂ, ಆ ಕಾರಣದಿಂದಲೇ ಇದ್ದೊಬ್ಬ ಮಗ ಮನೆ ಬಿಟ್ಟು ಹೋದಾಗ ತಾಯಿಯ ಹೃದಯ ದುಃಖದಿಂದ ನೀರಾಗುತ್ತದೆ. ಅಂತಹ ಗುಣವಂತ ಸೊಸೆಯನ್ನು ತಾನು ಬಾಳಿಸಲಿಲ್ಲವಲ್ಲಾ ಎಂದು ಪಶ್ಚಾತ್ತಾಪದಿಂದ ಆಕೆ ಮಮ್ಮಲ ಮರುಗುತ್ತಾಳೆ. ಶಾಸ್ತ್ರಿಗಳಂತೂ ತುಂಬ ಮೃದು ಹೃದಯರು. ಒಂದೆಡೆ ಹಠಮಾರಿಯಾದ ಮಗ, ಮತ್ತೊಂದೆಡೆ ಕೋಪಾವಿಷ್ಠಳಾದ ಹೆಂಡತಿ – ಇವರ ಮಧ್ಯೆ ಅವರ ಸ್ಥಿತಿ ಶೋಚನೀಯ ವಾಗುತ್ತದೆ. ಮಗನ ಬಗ್ಗೆ ಸೊಸೆಯ ಬಗ್ಗೆ ಅವರಿಗಿದ್ದ ಪ್ರೇಮ ಅಗಾಧ. ಕೊನೆಗೆ ಅಲ್ಲಿಯಾದರೂ ತಮ್ಮ ಕಣ್ಬೆಳಕಾದ ಮಗನನ್ನು ಕಂಡೇವೆಂಬ ಹಿರಿಯಾಸೆಯಿಂದ ಉತ್ಸವದ ನೆಪಮಾಡಿಕೊಂಡು ಆ ಇಳಿವಯಸ್ಸಿನಲ್ಲಿ ಕಾಶಿಗೂ ಹೋಗುತ್ತಾರೆ. ಮಗ ಅಲ್ಲಿಗೆ ಬಂದೂ ಕಾಣಿಸಿಕೊಳ್ಳದೆ ಹೋದಾಗ ಅವರಿಗೆ ಘೋರವಾದ ನಿರಾಶೆಯಾಗುತ್ತದೆ. ಅದೇ ಕೊರಗಿನಲ್ಲಿ ಜೀವನಯಾತ್ರೆಯನ್ನು ಮುಗಿಸುತ್ತಾರೆ.

ಕೆಲವೇ ಕ್ಷಣಗಳು ಮಿಂಚಿ ಮರೆಯಾಗುವ ವೇಶ್ಯೆ ನೀಲಾಸಾನಿ, ಮಿಠಾಯಿ ಮಾರುವ ಮುದುಕಿ, ಟಿಕೀಟು ತೆಗೆದುಕೊಡುವ ಸಾಹುಕಾರ, ವೇಶ್ಯಾಪುತ್ರನಾದ ವೆಂಕಟರಮಣ, ಸುಬೇದಾರ ದಂಪತಿಗಳು ಶ್ರೀನಿವಾಸರ ಪರಿಪಕ್ವ ಪಾತ್ರ ನಿರ್ಮಾಣ ಕೌಶಲದಿಂದ ನಮ್ಮ ಹೃದಯದಲ್ಲಿ ಚಿರವಾಗಿ ಉಳಿಯುತ್ತಾರೆ. ಸರಳವಾದ ಲಲಿತವಾದ ಪದಪುಂಜಗಳು, ಪುಟ್ಟಪುಟ್ಟ ವಾಕ್ಯಗಳು ಅಲಂಬಿತ ಗಂಭೀರ ನಿರೂಪಣೆ – ಇವುಗಳಿಂದಲೇ ಉನ್ನತ ಜೀವವೊಂದರ ಸಾಧನಾ ಮಾರ್ಗದ ಹೃತ್ಸ್ಪರ್ಶಿಯಾದ ಚಿರಮಲ್ಯದ ಚಿತ್ರವೊಂದನ್ನು ಕಲ್ಪಿಸಿದ ಈ ಕಥನಕಲೆ ಅಸಾಧಾರಣವಾದದ್ದು. ಪ್ರಸಿದ್ಧ ವಿದ್ಯಾಂಸರಾದ ಶ್ರೀ ಕಾಕಾ ಕಾಲೇಲ್‌ಕರ್ ಅವರು ಹೇಳಿರುವಂತೆ ಈ ಕತೆ ಸಂಪೂರ್ಣವಾಗಿ ಸರಳವಾಗಿದೆ ಮತ್ತು ಈ ಕಾರಣದಿಂದಲೇ ತನ್ನ ಹದಿನಾರು ಕಲೆಗಳಿಂದ ಪ್ರಕಾಶಿತವಾಗಿದೆ.

ಶ್ರೀನಿವಾಸರ ನಿರೂಪಣಶಕ್ತಿ ಅದ್ಭುತವಾದದ್ದು. ಶ್ರೀ ಎಲ್.ಎಸ್. ಶೇಷಗಿರಿರಾಯರು ಹೇಳುವಂತೆ “ಪ್ರತಿ ಭಾವನೆಯನ್ನೂ ಮುಗ್ಧತೆಯಿಂದ – ಹಿಡಿದು ನಿರ್ಲಿಪ್ತತೆಯವರೆಗೆ, ಸ್ವಾರ್ಥದ ಬಲೆಯ ಸೆರೆತನದಿಂದ ನಿಸ್ವಾರ್ಥ ಸೇವೆಯ ಪರಾಕಾಷ್ಠತೆಯವರೆಗೆ ಮನಸ್ಸು ಮುಟ್ಟಬಹುದಾದ ಎಲ್ಲ ಸ್ಥಿತಿಗಳನ್ನೂ – ಸ್ಪಷ್ಟವಾಗಿ, ಪರಿಣಾಮಕಾರಿಯಾಗಿ ಶ್ರೀನಿವಾಸರು ಚಿತ್ರಿಸಬಲ್ಲರು ಎನ್ನುವುದಕ್ಕೆ ಅವರು ಯಶಸ್ವಿಯಾಗಿ ಚಿತ್ರಿಸಿರುವ ಪಾತ್ರಗಳನ್ನು ನೆನೆದರೆ ಸಾಕು”. ಅವರ ಕಥಾಪ್ರಪಂಚದ ಮುನ್ನೂರಕ್ಕೂ ಹೆಚ್ಚಿನ ಪಾತ್ರಗಳಲ್ಲಿ ಒಂದರಂತೆ ಮತ್ತೊಂದಿಲ್ಲ; ಒಂದೊಂದರಲ್ಲೂ ತನ್ನದೇ ಆದ ಭಾವನೆಗಳು, ಪರಿಸರಗಳು, ಗುರಿಗಳು, ಗಮನಗಳು, ಸಂಸ್ಕಾರ ಸಂವೇದನೆಗಳು ಕ್ರಿಯೆ ಕಾರಣಗಳು ಮೂಡಿನಿಂತಿವೆ. ತಾರುಣ್ಯದಲ್ಲೇ ದುಃಖದ ಬೆಂಕಿಯಲ್ಲಿ ಹಾಯ್ದು ಸಂಯಮ ಸಹನೆ ತಪಸ್ಸುಗಳ ಪ್ರತೀಕವಾದ ಶಕುಂತಲೆ, ಕರ್ಮಯೋಗದಿಂದ ಜೀವನ್ಮುಕ್ತಿಯನ್ನು ಸಾಧಿಸಿಕೊಂಡ ಮಹರ್ಷಿ ದ್ವೈಪಾಯನ, ಗಂಡನೊಡನೆ ಹೋಗಿ ರಣರಂಗದಲ್ಲಿ ಹೋರಾಡಿ ಮಡಿದ ವೀರ ರಮಣಿ ಸಾವಿಯಬ್ಬೆ, ತಮ್ಮನನ್ನು ತೋಳಿನಲ್ಲಿ ಬಂಧಿಸಿ ಮೃತ್ಯುಮುಖಕ್ಕೆ ಸಾಗಿದ ಸುಶೀಲೆ ನಿಜಗಲ್ಲಿನ ರಾಣಿ, ಕಾರುಣ್ಯಮೂರ್ತಿಯಾದ ಬುದ್ಧ, ವಯೋವೃದ್ಧೆಯೂ ಜ್ಞಾನವೃದ್ಧೆಯೂ ಆದ ಗೌತಮಿ, ಮೋಹ ಪರವಶಳಾದ ಸುಂದರಿ ನರ್ಮದಾ, ಸತ್ಯನಿಷ್ಠೆಯ ಪ್ರತೀಕವಾದ ಬೈಚೇಗೌಡ, ತಮ್ಮ ವಿಶಿಷ್ಟ ಪ್ರೇಮಭಾವಗಳಿಂದ ಬೆಳಗುವ ವೆಂಕಟಶಾಮಿ ಮತ್ತು ವೆಂಕಟಿಗ, ಜಗಜ್ಜೇತನಾದ ಅಲೆಕ್ಸಾಂಡರ್, ನ್ಯಾಯನಿಷ್ಠನಾದ ಬಾದಷಹ, ಅಭಿಮಾನಭಂಗದಿಂದ ಕಣ್ಣೀರಿಡುವ ಅಜೇಯ ವೀರ ನೆಪೋಲಿಯನ್, ಹಿರಿಯ ಆದರ್ಶವನ್ನು ಬೆಳಗಿದ ಸಾಮ್ರಾಟ್ ಅಶೋಕ, ಕರ್ತವ್ಯನಿಷ್ಠೆಯ ಉಗ್ರಪ್ಪ, ಲಘು ಪ್ರವೃತ್ತಿಯ ರಂಗಪ್ಪ, ತಮ್ಮ ಕಲಾಕೌಶಲದಿಂದ ಲೋಕವನ್ನೇ ಬೆರಗುಗೊಳಿಸಿದ ಗಯಟೆ, ಷೇಕ್ಸ್‌ಪಿಯರ್, ಅಪಕ್ವ ಮನಸ್ಸಿನ ಸನ್ಯಾಸಿ, ಮಕ್ಕಳ ಪ್ರೇಮವೂ ಬೇಕು ಹಾಗೂ ಅವರ ಮೇಲಿನ ಅಧಿಕಾರವೂ ಬೇಕು ಎನ್ನುವ ಮೊಸರಿನ ಮಂಗಮ್ಮ, ನಿಸ್ವಾರ್ಥ ಉದಾತ್ತ ಸೌಂದರ್ಯಾರಾಧಕಿ ಎಲಿಸಾ- ಹೀಗೆ ನೂರಾರು ಪಾತ್ರಗಳು ಶ್ರೀನಿವಾಸರ ಪ್ರಖರ ಪ್ರತಿಬೆಯ ಅಮರ ಸಾಕ್ಷಿಗಳಾಗಿ ಎದ್ದು ನಿಲ್ಲುತ್ತವೆ. ಮರಕ್ಕೆ ಎಲೆಗಳು ಮೂಡುವಷ್ಟು ಸಹಜವಾಗಿ, ದೀಪದಿಂದ ಬೆಳಕು ಬರುವಷ್ಟು ಸಹಜವಾಗಿ, ಹೂವು ಕಾಯಾಗಿ ಹಣ್ಣಾಗುವಷ್ಟು ಸಹಜವಾಗಿ, ವೀಣೆಯಿಂದ ವಾಣಿ ಹೊಮ್ಮುವಷ್ಟು ಸಹಜವಾಗಿ ಮಾಸ್ತಿಯವರ ಲೇಖನಿಯಿಂದ ಪಾತ್ರಗಳು ಹುಟ್ಟಿ ಬೆಳೆದು ಸ್ವಾಭಾವಿಕ ಪ್ರಭಾಸತ್ವದಿಂದ ಕಂಗೊಳಿಸುತ್ತವೆ. ಯಾವ ಜೀವಿಯೂ ಸಂಪೂರ್ಣ ಕೆಟ್ಟವನಲ್ಲ; ಆತನ ಬಹಿರ್ಗತ ಕಠೋರತೆಯ ಒಡಲಲ್ಲಿ ಸಹಾನುಭೂತಿ ಪ್ರೇಮ ಕರುಣೆಗಳು ಕಿಂಚಿತ್ ಪ್ರಮಾಣದಲ್ಲಾದರೂ ಗುಪ್ತವಾಗಿದ್ದು ಹಲವು ಶುಭಕ್ಷಣಗಳಲ್ಲಿ ಮೇಲೆದ್ದು ಮೈದೋರುತ್ತವೆ-ಎಂಬುದು ಲೇಖಕರ ಸಿದ್ಧಾಂತವಾಗಿದೆ. ಅವರ ಅಸಾಧಾರಣ ಅನುಕಂಪೆ, ಅನುಪಮ ಮಾನವೀಯತೆ, ಮಾತೃಹೃದಯ, ಶುಭೈಕದೃಷ್ಟಿಗಳು ಕ್ರೂರಿಯಲ್ಲೂ ಒಳ್ಳೆಯತನವನ್ನೇ ಕಂಡು ಅವನನ್ನು ಪೂರ್ಣ ಮಾನವನನ್ನಾಗಿ ಚಿತ್ರಿಸುತ್ತವೆ. ಅವರ ಪಾತ್ರಗಳ ವೈವಿಧ್ಯ ವೈಶಿಷ್ಟ್ಯ ಗಾತ್ರ ಗಾರುಡಿಗತನಗಳು ಅವರ ಸುಸಮೃದ್ಧವೂ ನೇರವೂ ಶ್ರದ್ಧಾಪೂರ್ಣವೂ ಆದ ಜೀವನಾನುಭವಗಳ ಪ್ರತೀಕವಾಗಿವೆ.

ವ್ಯಕ್ತಿಗಳ ತತ್ವಗಳ ಸಮಸ್ಯೆಗಳ ಅವಕಾಶಗಳು ತೀವ್ರ ಸ್ವರೂಪದ ಸಂಘರ್ಷ ಚಕಮಕಿ ಅವರ ಕೃತಿಗಳಲ್ಲಿ ಕಾಣುವುದಿಲ್ಲವಾದರೂ ಹೇಳುವ ಕೆಲವೇ ಸಶಕ್ತ ಮಾತುಗಳು ಅವುಗಳ ಆಂತರ್ಯವನ್ನು ತೆರೆದು ತೋರುವ ಕೀಲಿಕೈಗಳಾಗುತ್ತವೆ. ಭೋರ್ಗರೆಯುವ ಜಲಪಾತದ ಆವೇಶ ಆವೇಗಗಳಿಲ್ಲದೆ ತಿಳಿಯಾಗಿ ತಿರುಳಾಗಿ ತನಿಯಾಗಿ ಮಂಜುಳವಾಗಿ ಸರಳಾತಿ ಸರಳವಾಗಿ ಶೈಲಿ ಹರಿಯುತ್ತದೆ. ಈ ಶೈಲಿ ಸರಳವಾದರೂ ಸತ್ವಹೀನವಲ್ಲ, ಸಹಜವಾದರೂ ಸ್ವಾರಸ್ಯರಹಿತವಲ್ಲ, ಅನಲಂಕೃತವಾದರೂ ಅನಾಕರ್ಷಕವಲ್ಲ. ಮಾಸ್ತಿಯವರ ಆಡಂಬರ ರಹಿತ ನಿಗರ್ವಿ ವ್ಯಕ್ತಿತ್ವವೇ ಅವರ ಕತೆಗಳ ಶೈಲಿಯಾಗಿ ಮೂರ್ತೀಭವಿಸಿದೆ. ಈ ಬರವಣಿಗೆ ಸುಲಿದ ಬಾಳೆಯ ಹಣ್ಣಿನಂತೆ ತೀರ ಸರಳ; ಅಷ್ಟೇ ರುಚಿಕರ, ಶಕ್ತಿಸಮನ್ವಿತ, ಆದರೆ ಅನನುಕರಣೀಯ.

ಇಲ್ಲಿ ತಂತ್ರದ ಕಸರತ್ತಿಲ್ಲ, ಪ್ರಾಸದ ತ್ರಾಸವಿಲ್ಲ, ನಿರರ್ಥಕ ಪದಗಳ ಮೆರವಣಿಗೆ ಇಲ್ಲ, ಭಾಷಣ ಚಾಪಲ್ಯವಿಲ್ಲ, ಅತ್ಯಾದರ್ಶದ ಅಬ್ಬರವಿಲ್ಲ, ಅತಿ ಬುದ್ದಿಯ ಅರ್ಥಹೀನ ತರ್ಕವಿಲ್ಲ, ಜೀವನದೂರವಾದ ಶುಷ್ಕ ವೇದಾಂತವಿಲ್ಲ, ಸಾಮಾಜಿಕವಾದ ಮಡಿಮೈಲಿಗೆಯ ಹಾರಾಟವಿಲ್ಲ, ಸುಧಾರಣಾವಾದಿಯ ಆವೇಶದ ಕ್ರಾಂತಿ ಕಹಳೆಯಿಲ್ಲ; ಎಲ್ಲವೂ ಸರಳ, ಸಹಜ, ನೇರ, ಸ್ಪಷ್ಟ, ಶಾಂತ. ಸುಸಂಸ್ಕೃತಿಯ ಸ್ವಚ್ಛ ತರಂಗಿಣಿ ಈ ಕತೆಗಳ ನಾಡಿನಾಡಿಯಲ್ಲಿ ಹರಿದಾಡುವುದನ್ನು ನಾವು ಕಾಣುತ್ತೇವೆ. ಬೈಚೇಗೌಡನಾಗಲಿ, ವೆಂಕಟಿಗನಾಗಲಿ, ಬೀದಿಯಲ್ಲಿ ಹೋಗುವ ನಾರಿಯಾಗಲಿ, ಮೊಸರಿನ ಮಂಗಮ್ಮನಾಗಲಿ, ಮೇಲೂರಿನ ಲಕ್ಷ್ಮಮ್ಮನಾಗಲಿ, ನಿಜಗಲ್ಲಿನ ರಾಣಿಯಾಗಲಿ ಎಲ್ಲರೂ ಈ ಮೂಲ ಸಂಸ್ಕೃತಿಯ ಅನಂತ ಮುಖಗಳೇ; ಎಲ್ಲರಲ್ಲೂ ಹರಿಯುವುದು ಈ ಜೀವನಪೋಷಕವಾದ ನಿರ್ದಿಷ್ಟವಾದ ಆಕೃತಕವಾದ ಸಾತ್ವಿಕವಾದ ಸುಸಂಸ್ಕೃತಿಯ ಸೆಲೆಯೇ. ಆದರೆ ಪಾತ್ರ ಬೇರೆ; ಪರಿಣಾಮ ಬೇರೆ. ಈ ಕತೆಗಳಲ್ಲಿ ಸಂಪ್ರದಾಯ ಶ್ರದ್ಧೆಯ ಸಾಂದ್ರತೆಯನ್ನೂ ಕಾಣುತ್ತೇವೆ. ಆದರೆ ಲೇಖಕರ ಸಂಪ್ರದಾಯ ಪ್ರೀತಿ ಅಂಧಾಭಿಮಾನವಾಗಿ ಪ್ರಗತಿಯ ಬಗ್ಗೆ ಸುಧಾರಣೆಯ ಬಗ್ಗೆ ಅನುಚಿತ ಆಕ್ರೋಶ ಕಾರುವುದಿಲ್ಲ. ಸಂಪ್ರದಾಯ ಮತ್ತು ಸುಧಾರಣೆಗಳೆರಡರಲ್ಲೂ ಗುಣೈಕದೃಷ್ಟಿ ಅವರದು. ಅವರ ಈ ಕತೆಗಳಲ್ಲಿ ಆದರ್ಶಪ್ರಿಯತೆ ಇದೆ. ಆದರೆ ಇದರಿಂದ ವಾಸ್ತವಿಕತೆಗೆ ಊನವಾಗಿಲ್ಲ. ಮೊಗ್ಗೊಂದು ಅರಳರಳಿ ತನ್ನ ದಳಗಳನ್ನು ತೆರೆತೆರದು ತನ್ನ ವರ್ಣವೈವಿಧ್ಯ ವನ್ನು ಮೆರೆದು, ತನ್ನ ಸಮಗ್ರ ಸೌಂದರ್ಯದಲ್ಲಿ ಅಂತರ್ಗತವಾಗಿರುವ ಪರಿಮಳವನ್ನು ಅದೃಶ್ಯವಾಗಿ ಹೊರಚೆಲ್ಲಿ ರಸಿಕರನ್ನು ಸೆಳೆಯುವಂತೆ, ವಾಸ್ತವತೆಯ ಅಂತರಂಗದಲ್ಲಿಯೇ ಆದರ್ಶದ ಪರಿಮಳವನ್ನು ಹುದುಗಿಸಿಟ್ಟು ಅದು ಜೀವನಧರ್ಮ ಸಾಧಕವಾಗುವಂತೆಯೂ ಹೃದಯರಂಜಕವಾಗುವಂತೆಯೂ ಅಪ್ರಯತ್ನ ಪೂರ್ವಕವಾಗಿ ಅತಿ ಸಹಜವಾಗಿ ನಿರೂಪಿಸುತ್ತಾರೆ.

ಶ್ರೀನಿವಾಸರ ಹೆಚ್ಚಿನ ಕಥಾಶೀರ್ಷಿಕೆಗಳು ಸೂಚ್ಯವೂ ಧ್ವನಿಪೂರ್ಣಾವೂ ಆಗದೆ ಕೇವಲ ವಿವರಣಾತ್ಮಕವಾಗಿರುವುದು ನಿಜ. ಆದರೆ ಲೋಕದ ಅವಜ್ಞೆಗೆ ಸುಲಭವಾಗಿ ಪಾತ್ರವಾಗುವ  ಸರಳ ಸ್ವಾಭಾವಿಕ ಸಂಗತಿಗಳು ಶ್ರೀನಿವಾಸರ ಜೀವನ ಪ್ರೀತಿಯಿಂದ ಸೂಕ್ಷ್ಮ ಕಲಾದೃಷ್ಟಿಯಿಂದ  ಅನುದ್ವಿಗ್ನಪೂರ್ಣವಾದ ಕಥನಶೈಲಿಯಿಂದ ಹೊಸದಾಗಿ ರಮ್ಯವಾಗಿ ಆಕರ್ಷಣೀಯವಾಗಿ ವಿಶಿಷ್ಟವಾಗಿ ಕಂಗೊಳಿಸುತ್ತವೆ. ಸಾಮಾನ್ಯತೆಯಲ್ಲಿನ ಅಸಾಮಾನ್ಯತೆಯನ್ನು ದರ್ಶನ ಮಾಡಿಸುತ್ತವೆ.

೧೦

ಜೀವನದ ನೈಜವಾದ ನಿಕಟವಾದ ಅರಿವು, ವಿಶಾಲವೂ ಗಾಢವೂ ಅಂತಃಕರಣ ಪೂರ್ವಕವೂ ಆದ ಲೋಕಾನುಭವ, ಸೂಕ್ಷ್ಮನಿರೀಕ್ಷಣಾ ಸಾಮರ್ಥ್ಯ, ಸರಳ ಸುಂದರವೂ ಸುಕುಮಾರವೂ ಸತ್ವಸಂಪನ್ನವೂ ಆದ ಅಭಿವ್ಯಕ್ತಿ, ಆದರ್ಶ ಅಭಿರುಚಿ, ಸ್ವಸ್ಥಚಿತ್ತ, ಶಿವಪರವಾದ ಜೀವನಮಲ್ಯದಲ್ಲಿ ಆಸಕ್ತಿ, ಕನ್ನಡ ಸಂಸ್ಕೃತಿಯ ಅದಮ್ಯ ಅಭಿಮಾನ, ಉದಾತ್ತತೆಯ ಹಂಬಲ, ಉತ್ತಮ ಕಲಾ ನೈಪುಣ್ಯ – ಇವುಗಳ ಸಮ್ಮಿಲನ ಒಮ್ಮಿಲನಗಳೇ ಮಾಸ್ತಿಯವರ ಕತೆಗಳು.

ಒಟ್ಟಿನಲ್ಲಿ ಶ್ರೀನಿವಾಸರ ಕತೆಗಳು ಶೈಲಿಯ ಸೌಭಾಗ್ಯದಲ್ಲಿ ವಸ್ತುವಿನ ಘನತೆಯಲ್ಲಿ ನಿರೂಪಣೆಯ ಸೊಗಸಿನಲ್ಲಿ ಪಾತ್ರಕಲ್ಪನೆಯ ಕಲಾತ್ಮಕತೆಯಲ್ಲಿ ತುಂಬ ಮೇಲ್ಮಟ್ಟದ ರಚನೆಗಳಾಗಿವೆ; ಕನ್ನಡ ಕಥಾಸಾಹಿತ್ಯವನ್ನು ಲೋಕಸಾಹಿತ್ಯದ ಶಿಖರಕ್ಕೇರಿಸುವ ವ್ಯಾಪಕ ಸತ್ವ ಸಂಪನ್ನತೆಯನ್ನು ಪಡೆದಿವೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಈ ದೃಷ್ಟಿಯಿಂದ ಅವರು ನಿಜವಾಗಿಯೂ ಕನ್ನಡ ಸಣ್ಣಕತೆಗಳ ಪಿತಾಮಹರು.