ಬಹುಮಟ್ಟಿನ ಪ್ರಗತಿಶೀಲ ಕತೆಗಳಲ್ಲಿ ಮುಟ್ಟಿದರೆ ಮೈ ಕತ್ತರಿಸುವಂತಹ ಆವೇಶಯುತವಾದ, ಹಿರಿದ ಖಡ್ಗದ ಹರಿತವನ್ನುಳ್ಳ ಬರವಣಿಗೆಯನ್ನು ಉಪಯೋಗಿಸಿದ ಕಟ್ಟೀಮನಿ ಯವರು ಸಾವಧಾನಶೀಲರಾಗಿದ್ದಾಗ ಸುಂದರವಾದ ಮನಃಸ್ಪರ್ಶಿಯಾದ ಭಾವಪೂರ್ಣವಾದ ವರ್ಣನೆಗಳನ್ನು ನೀಡಬಲ್ಲರೆಂಬುದು ಅವರ ಕತೆಗಳೆಲ್ಲವನ್ನೂ ನಿಷ್ಪಕ್ಷಪಾತವಾಗಿ ಅವಲೋಕಿಸಿದಾಗ ಗಮನಕ್ಕೆ ಬಾರದೆ ಇರದು. ಈ ವರ್ಣನೆಗಳು ಅವರ ಕತೆಯ ಬಹಿರಂಗಕ್ಕೆ ಸಂಬಂಧಿಸಿದವುಗಳಾಗಿರದೆ ಆಂತರ್ಯದ ಭಾವಾಭಿವ್ಯಕ್ತಿಗೆ ಸಂಬಂಧಿಸಿದವುಗಳಾಗಿರುವುದ ರಿಂದ ಅವುಗಳ ಮಹತ್ವ ಹಿರಿದಾಗುತ್ತದೆ.

‘ಒಲೆಯಲ್ಲಿ’ನ ಬೆಂಕಿ ಹೋಮಾಗ್ನಿಯಂತೆ ಧಗಧಗಿಸುತ್ತಿತ್ತು. ಪಾತ್ರೆಯಲ್ಲಿದ್ದ ಹಾಲು ಉಕ್ಕೇರಿ ಬಂದು ಅಗ್ನಿದೇವತೆಯನ್ನು ತೃಪ್ತಿಪಡಿಸುತ್ತಲಿತ್ತು. ‘ಮಳೆಯ ನಂತರದ ಮುಗಿಲಿನಂತೆ ಅವಳ ಕಣ್ಣು ಆತನಿಗೆ ಕಾಣಿಸಿದವು’. ‘ಬರದ ದೇವಿ’ ಕತೆಯ ವಸ್ತು ವಿನ್ಯಾಸವನ್ನು ಗಮನಿಸಿದವರಿಗೆ ಈ ಮಾತುಗಳ ಧ್ವನಿಪೂರ್ಣತೆಯ ಅರಿವಾಗುತ್ತದೆ.

ಹುಲಿಯಣ್ಣನ ಮಗಳ ಈ ಚಿತ್ರ ಎಷ್ಟು ಸುಂದರವಾಗಿದೆ ನೋಡಿ :

“ಮೂರು ಆಳೆತ್ತರ ಸೊಕ್ಕಿ ಬೆಳೆದು, ಕಾಳು ತುಂಬಿದ ತೆನೆಗಳ ಭಾರದಿಂದ ಬಾಗಿ, ಗಾಳಿ ಬೀಸಿದಾಗ ಬಳುಕಿ, ಬಯಲಾಟದ ನಾಯಿಕೆಯಂತೆ ನರ್ತಿಸುತ್ತಿದ್ದ ಜೋಳದ ನಡುವಿನ ಕಿರುದಾರಿಯಲ್ಲಿ ಬರುತ್ತಿದ್ದ ಬೀರ, ತುಸು ದೂರದಲ್ಲಿ ಎತ್ತರವಾದ ಅಟ್ಟಣೆಯ ಮೇಲೆ, ಉಟ್ಟ ಸೀರೆಯನ್ನು ಹಿಂದೆ ಹೊರಳಿಸಿ ಗಂಡು ಗಚ್ಚೆ ಹಾಕಿ, ಪುರಾಣ ಕಾಲದ ವೀರ ರಮಣಿಯರಂತೆ ಎದೆಯುಬ್ಬಿಸಿ ನಿಂತು ಬೆಳೆದು, ಮೇಲೆಲ್ಲ ತೀಕ್ಷ್ಣ ದೃಷ್ಟಿಯೋಡಿಸುತ್ತ, ಆಗಾಗ ಹೇ ಎಂದು ಕೂಗುತ್ತ ಠೀವಿಯಿಂದ ಬಲಗೈ ಎತ್ತಿ ಕವಣೆ ಬೀಸುತ್ತ, ತೆನೆಗಳ ಕಾಳು ಕದಿಯುವ ಹಕ್ಕಿಗಳನ್ನೋಡಿಸುತ್ತಲಿದ್ದ ಹೊನ್ನಿನ ಬೆಡಗಿನ ನಿಲುವನ್ನು ಕಂಡು ಮಂತ್ರ ಮುಗ್ಧನಂತೆ ನಿಂತುಕೊಂಡ”.

ಈ ವರ್ಣನೆ ತನಗೆ ತಾನೇ ಅಚ್ಚುಕಟ್ಟಾದ ಒಂದು ಚಿತ್ರವಾಗುವುದರ ಜೊತೆಗೆ ಮುಂದಿನ ಕತೆಗೆ ಸಶಕ್ತ ಹಿನ್ನೆಲೆಯಾಗಿಯೂ ನಿಂತಿದೆ. ಅದರಲ್ಲಿ ಇದರ ವೈಶಿಷ್ಟ್ಯವಿದೆ.

‘ಸಮುದ್ರಕ್ಕೆ ಅಂಟಿಕೊಂಡ ದೀಪಸ್ತಂಭದಂತೆ ಅವರು ತಮ್ಮ ನಿಶ್ಯಯಕ್ಕೆ ಗಟ್ಟಿಯಾಗಿ ಅಂಟಿಕೊಂಡು ಬಿಟ್ಟರು’. ‘ಯಾವಾಗಲೂ ಹೂಮಳೆಯಲ್ಲಿ ಆಡುತ್ತಿದ್ದವರಿಗೆ ಶಿಲಾವೃಷ್ಟಿ ಹೇಗೆ ಸಹನವಾದೀತು’, ‘ಮಳೆ ಬೀಳುವಾಗ ಹಠಾತ್ತಾಗಿ ಬಿಸಿಲು ಸೂಸಿದ ಹಾಗೆ’, ‘ಅವನ ಕಣ್ಣು ಮುಚ್ಚಿದರೂ ಕಣ್ಣ ಬೊಂಬೆ ಮಾತ್ರ ಕಿಡಿಗೇಡಿ ಹುಡುಗರಂತೆ ನೂರಾರು ಕಲ್ಪನಾ ಚಿತ್ರ ಕಟ್ಟುತ್ತಿತ್ತು’. ಸಮೀಪದಲ್ಲಿದ್ದ ಗುಡಿಸಲಿನ ಬಾಗಿಲಲ್ಲಿ ಚಿಲಿಮಿ ಸೇದುತಲಿದ್ದ ರೈತನೊಬ್ಬ ಹಸಿಮೇವು ತಿಂದು ತೂಗಾಡುತ್ತಾ ಬರುವ ಹೋರಿಯಂತೆ ನಿರ್ಲಕ್ಷ್ಯದಿಂದ ಅಡಿಯಿಡುತ್ತಾ ಬಂದ ಬಾಬುವನ್ನು ಕಂಡು ಕೇಳಿದ. ‘ಕೃಷ್ಣಪಕ್ಷದಾ ಕಾಳ ರಾತ್ರಿ’, ‘ಆಕಾಶದಲ್ಲಿ ಮಿನುಗುತ್ತಿದ್ದ ನಕ್ಷತ್ರಗಳ ಮಂದ ಬೆಳಕಿನಲ್ಲಿ ದೀರ್ಘಾಕೃತಿಯ ಮಹಾಸರ್ಪಗಳಂತೆ ಹೊಳೆ ಯುತ್ತಿದ್ದ ರೈಲು ದಾರಿ’, ‘ಅವಳ ಕಣ್ಣಾರಗಳಲ್ಲಿ ರವಿಕಿರಣಗಳು ಪ್ರವೇಶಿಸಿದಾಗ ಚಕಚಕನೆ ಮಿಂಚು ಹೊಳೆದಂತಾಯಿತು. ಅವಳ ನೀಳವಾದ ಕೂದಲುಗಳು ಭುಜಗಳ ಮೇಲಿಳಿದು ಉಯ್ಯಾಲೆಯಾಡುತ್ತಿರುವಾಗ ಸಾವಿರಾರು ಸರ್ಪಗಳು ಏಕಕಾಲಕ್ಕೆ ಜೀಕವಾಡುವ ಹಾಗೆ ತೋರುತ್ತಿತ್ತು. ಎಲ್ಲಿ ನೋಡಿದರೂ ನೀರವತೆಯ ನಂದನವನ. ಸಂಧ್ಯಾರಮಣಿಯ ಕೆನ್ನೆಗಳ ಬಣ್ಣ ಬಣ್ಣದ ಬೆಡಗಿನ ಹಾಗೆ ಎಲ್ಲೆಲ್ಲೂ ರಂಗರತಿಯ ಸ್ವೇಚ್ಛಾವಿಹಾರ. ಶಾಂತಿದೇವಿಯ ಕೋಮಲ ಕಿರುಬೆರಳುಗಳಿಂದ ಮಿಡಿದು ಹೊರಡುವ ವೀಣಾ ನಿನಾದದ ಮಂಜುಲರವ ಮೆಲು ಮೆಲನೆ ತೇಲಿ ಬರುತ್ತಿದೆ. ಎಲ್ಲಿಂದಲೊ ಯಾವುದೋ ಅಜ್ಞಾತ ದೆಸೆಯಿಂದ ನಂದಗೋಪಾನ ಕೊಳಲಿನ ಇನಿದನಿ ಕೇಳಿಸಿದೆ ಹಾಗೆ’, ‘ಒಂದು ಗಿಡದ ಕಪ್ಪು ಆಕೃತಿಯ ಮೇಲುಗಡೆ ಸುದೂರದಲ್ಲಿ ನಸುಬಿಳಿಯ ಮೋಡದ ಮರಿಯೊಂದು ಮೋಹಕವಾಗಿ ತಲೆಯೆತ್ತಿ ನಿಂತಿತ್ತು. ಅದರ ಮೇಲೆ ಸಣ್ಣಗಿನ ಚಂದ್ರಬಿಂಬ’. ‘ತಾಯಿ ಮಡಿಲಿನಲ್ಲಿ ಸುಖವಾದಿ ನಿದ್ರೆ ಹೋದ ಎಳೆ ಮಗುವಿನ ಹಾಗೆ ಆ ಗುಲಾಬಿ ಹೂ ಅರೆತೆರೆದ ಹಾಗೆ ನಸುಬಾಗಿ ಗಿಡದ ಮೇಲೊರಗಿತ್ತು’. ‘ಅತ್ತೂ ಅತ್ತೂ ಕಿಟ್ಟುವಿನ ಕಣ್ಣುಗಳೆರಡೂ ಸಾಯಂಕಾಲದ ಮುಗಿಲಿನಂತಾಗಿದ್ದವು’. ‘ಗಿಡವನ್ನೆಳೆದರೆ ಹೂ ಕೈಗೆ ಬರುವಂತೆ ಅವಳ ಮುಖ ಅವನ ಮುಖದ ಬಳಿ ಬಂತು’. ಹೀಗೆ ಹಾಳತವಾದ ಚಿಕ್ಕ ಚಿಕ್ಕ ವರ್ಣನೆಗಳು ಅವರ ಕಥಾಭಿತ್ತಿಯಲ್ಲಿ ಮಿಂಚುತ್ತವೆ. ಆದರೂ ಸಂಖ್ಯೆಯಲ್ಲಿ ಇವು ಕಡಿಮೆಯೆಂದೇ ಹೇಳಬೇಕು.

ಕಟ್ಟೀಮನಿಯವರಿಗೆ ವಿಶಿಷ್ಟವಾದ ಒಂದು ಶೈಲಿಯಿದೆ. ಇತರರ ಬರಹಗಳೊಂದಿಗೆ ಇಟ್ಟಾಗ ಇದು ಬಸವರಾಜರದೇ ಎಂದು ತಟ್ಟನೆ ಗುರುತಿಸುವಷ್ಟು ಅವರ ವ್ಯಕ್ತಿತ್ವ ನಿಚ್ಚಳವಾಗಿ ಮೂಡಿ ಬಂದಿರುತ್ತದೆ.  ‘Style is the man’ ಎಂಬ ಉಕ್ತಿಗೆ ಸುಂದರ ನಿದರ್ಶನ ಅವರ ಶೈಲಿ. ಲೋಕದ ಕೊಂಕು ಡೊಂಕುಗಳನ್ನು ದರ್ಪ ದಬ್ಬಾಳಿಕೆಗಳನ್ನು ಅಸಮತೆ ಆಷಾಢ ಭೂತಿತನಗಳನ್ನು ಕಂಡಾಗ, ಚಿತ್ರಿಸುವ ಅವರ ಶೈಲಿಗೆ ನೂರಾನೆಯ ಬಲ ಬರುತ್ತದೆ. ಅವೇಶಪೂರ್ಣವಾದ ಸುಧಾರಣಾತ್ಮಕವಾದ ಪ್ರತಿಭಟನಾತ್ಮಕವಾದ ಅವರ ವ್ಯಕ್ತಿತ್ವ ಇಂಥ ಸಂದರ್ಭದಲ್ಲಿ ಕೆರಳಿದ ತಾಯಿಹುಲಿಯಾಗುತ್ತದೆ. ಆಡುವ ಮಾತು ಕೆಂಡದುಂಡೆಗಳಾಗುತ್ತವೆ. ಪ್ರಗತಿಶೀಲ ಕತೆಗಳ ಉದ್ದಕ್ಕೂ ಆರ್ಭಟಿಸುವ ಆ ಶಕ್ತಿಯುತವಾದ ಗಂಡು ಶೈಲಿಯನ್ನು ಓದುವಾಗ ಎಂಥವರ ಮನದಲ್ಲೂ ಬೆಂಕಿಯ ಹೊಳೆ ಹರಿಯದಿರದು. ಸ್ವಾತಂತ್ರ್ಯಪ್ರೇಮದ ಉಜ್ವಲ ಅಧ್ಯಾಯಗಳನ್ನು ಅಧ್ಯಯನಿಸುವಾಗ ವೀರಾವೇಶದ ರಾಷ್ಟ್ರಪ್ರೇಮದ ಕುದಿರಕ್ತಧಮನಿ ಧಮನಿಗಳಲ್ಲಿ ಅತ್ಯಂತ ವೇಗವಾಗಿ ಧುಮುಕಿ ಹರಿಯತೊಡಗುತ್ತದೆ. ಇದೇ ಬರವಣಿಗೆ ಕಷ್ಟಕಾರ್ಪಣ್ಯಗಳನ್ನು, ಮನದ ಮೂಲೆಯ ಕೋಮಲ ಸೂಕ್ಷ್ಮ ಭಾವಗಳನ್ನು ಪ್ರೇಮ ಕರುಣೆಗಳನ್ನು ಚಿತ್ರಿಸುವಾಗ ಅವಶ್ಯಕವಾಗಿ ಮೃದುವಾಗುತ್ತದೆ, ಸುಸೂಕ್ಷ್ಮವಾಗುತ್ತದೆ, ಚಿತ್ರವತ್ತಾಗುತ್ತದೆ, ಕಾವ್ಯಮಯವಾಗುತ್ತದೆ. ಅವರ ಶೈಲಿಗೆ ಕತ್ತಿಯ ಹರಿತ, ಭರ್ಜಿಯ ಮೊನಚು, ಸೂಜಿಯ ಚೂಪು, ಕೆಂಡದ ಕಾವು, ಶೂಲದ ಶಕ್ತಿ, ತೋಳನ ಕ್ರೌರ್ಯ, ಮಿಂಚಿನ ಹೊಳಪು, ಯೋಧನ ಆವೇಶ, ವಾಜಿಯ ವೇಗ, ವಜ್ರದ ಕಾಠಿಣ್ಯ, ಕೆಲಮಟ್ಟಿಗೆ ಹೂವಿನ ಕೋಮಲತೆ. “ಕಟ್ಟೀಮನಿಯವರು ಕಾತರದ ಎದೆ ‘ಡವ ಡವ’ ಎನ್ನುವುದನ್ನು ಕೇಳಿಸಬಲ್ಲರು, ಮೋಹದ ಶಕ್ತಿ ಇಳಿಜರಿನಲ್ಲಿ ಪ್ರವಾಹ ನುಗ್ಗಿದಂತೆ ನುಗ್ಗುವುದನ್ನು ಕಾಣಿಸಬಲ್ಲರು, ನಿರಾಸೆಯ ನಿಟ್ಟುಸಿರಿನ ಕಾವು ಮುಖಕ್ಕೆ ತಾಗುವಂತೆ ಮಾಡಬಲ್ಲರು, ಉತ್ಸಾಹದ ಎಳೆಯ ರಕ್ತ ನಮ್ಮ ಧಮನಿಗಳಲ್ಲಿ ಚಿಮ್ಮುವಂತೆ ಮಾಡಬಲ್ಲರು” ಎಂಬ ಶ್ರೀ ಎಲ್.ಎಸ್. ಶೇಷಗಿರಿರಾಯರ ವಿಮರ್ಶೋಕ್ತಿ ನೂರಕ್ಕೆ ನೂರರಷ್ಟು ಸತ್ಯ.

ಕಟ್ಟೀಮನಿಯವರ ಕತೆಗಳ ವಸ್ತುವೈವಿಧ್ಯ ಬೆರಗುಗೊಳಿಸುವಂಥದು. ಜೀವನದ ಆಳವಾದ ಆರ್ದ್ರವಾದ ವ್ಯಾಪಕವಾದ ನೈಜನುಭವದಿಂದ ಮೂಡಿಬಂದ ಈ ಕತೆಗಳ ವಸ್ತು ನಾವು ಕೈಯಲ್ಲಿ ಮುಟ್ಟುವಷ್ಟು ಹತ್ತಿರವಾದದ್ದು, ಸಹಜವಾದದ್ದು. ರಾಷ್ಟ್ರಪ್ರೇಮ, ರಾಜಕೀಯ, ಸಾಮಾಜಿಕ ಆರ್ಥಿಕ ಅವ್ಯವಸ್ಥೆ, ಸ್ವಾರ್ಥಿ ದ್ರೋಹಿಗಳ ದಬ್ಬಾಳಿಕೆ, ಶ್ರೀಮಂತರ ಹೃದಯ ವಿಹೀನತೆ, ಡಾಂಭಿಕತನ, ಬಡತನದ ಬಾಳು, ಮುಗ್ಧ ಹೃದಯಗಳ ನಿಶ್ಚಲ ನಂಬಿಕೆ, ಕೌಟುಂಬಿಕ ಸ್ನೇಹ ಪ್ರೇಮ, ಸರಸ ವಿರಸಗಳು, ಸ್ವಾಭಿಮಾನ, ಔದಾರ್ಯ, ತ್ಯಾಗ, ತತ್ವ, ಗ್ರಾಮಜೀವನ, ಕಲ್ಪನೆ – ಹೀಗೆ ಅವರ ಕಥಾಬ್ರಹ್ಮನಿಗೆ ನೂರೆಂಟು ಮುಖಗಳು.

ಕಟ್ಟೀಮನಿಯವರ ಪಾತ್ರ ನಿರ್ಮಾಣ ಶಕ್ತಿಯಂತೂ ಅತ್ಯದ್ಭುತವಾದುದು. ಎಂತೆಂತಹ ವೈವಿಧ್ಯಮಯವಾದ ಕಲಾಪೂರ್ಣವಾದ ಪಾತ್ರಶಿಲ್ಪಗಳು ಅವರ ಕಲಾಶಾಲೆಯಲ್ಲಿ! ಸ್ವಾಭಿಮಾನಿಯೂ ಪ್ರಾಮಾಣಿಕನೂ ಆದ ಅಣ್ಣಾ ನಾಯಕ, ಹಳ್ಳಿಗನಾದರೂ ಗಾಂಧೀಜಿಯ ಸತ್ಯ ಪ್ರೇಮವನ್ನು ಅರಿತಿದ್ದ ಮುಗ್ಧ ಲಕ್ಕ, ಪರಶೋಷಣೆಯಿಂದಲೇ ಉದರಂಭರಣ ಮಾಡುತ್ತಿದ್ದ ಪುಡಾರಿ ಶಾಮಣ್ಣ, ಕುಟುಂಬವನ್ನು ನಿರ್ಲಕ್ಷಿಸಿದರೂ ಪರಸೇವೆಯೇ ಪರಮಾತ್ಮನ ಸೇವೆಯೆಂದು ನಂಬಿದ್ದ ಗೋಪಿನಾಥ್, ಕಾರ್ಮಿಕರ ನಾಯಕ ಸಿದ್ಧರಾಮ, ಬರದ ದವಡೆಗೆ ತುತ್ತಾದ ಅಮರ ಮಿತ್ರರಾದ ತಿಪ್ಪ – ಆಲಿ, ತಾಯಿ ತಂದೆಗಳಿಂದ ವಂಚಿತನಾದ ಬೂಟ್‌ಪಾಲಿಷ್ ಹುಡುಗ, ಪ್ರೀತಿಗಾಗಿ ಕೊಲೆ ಮಾಡಿ ತಾನೇ ಬಲಿಯಾದ ಹನುಮ, ಬಡವರಿಗಾಗಿ ರಕ್ತ ಸುರಿಸುವ ಮಾಸ್ಟರ್ ಸಿದ್ಧಲಿಂಗಪ್ಪ, ಕರುಣೆ ಕನಿಕರಗಳ ಮೂರ್ತಿಗಳಾದ ‘ಬರದ ದೇವಿ’ಯುವ ದಂಪತಿಗಳು, ಡಾಂಭಿಕತನದ ಕಲಾರಾಧಕರಾದ ರಾಯರು, ಆದರ್ಶ ವಿದ್ಯಾರ್ಥಿ ರಾಮಚಂದ್ರ, ಅಜ್ಞಾನಿ ಬಸವಂತಪ್ಪ, ನಿಸ್ವಾರ್ಥ ಶರಣ, ಧರ್ಮಾಧಿಕಾರಿ ಸ್ವಾಮಿ, ಪತ್ರಿಕೆ ಬೆಳೆಸಲು ಪ್ರಾಣತೆತ್ತ ಉಪ ಸಂಪಾದಕ, ಸ್ವಾತಂತ್ರ್ಯ ಪ್ರೇಮದ ಮೂರ್ತಿಗಳಾದ ಮಲ್ಲೇಶಿ ಶಂಕರ ಕಿಸನ್ ಮಹದೇವ, ಗುಪ್ತ ಪ್ರೇಮದ ಸಾವಿತ್ರಿ, ದಾರಿದ್ರ್ಯವನ್ನು ಸಹಿಸಲಾರದೆ ಮಕ್ಕಳನ್ನೇ ಬಲಿಗೊಟ್ಟ ತಾಯಿ, ನಿರ್ಮಲ ಪ್ರೇಮದ ಅತ್ತೆ-ಸೊಸೆ. ಗಂಡುಬೀರಿಯಾದರೂ ಸತೀತ್ವ ತೊರೆಯದ ಕೆಂಪಿ, ಸ್ವಾಭಿಮಾನದ ಮೂರ್ತಿಯಾದ ಹುಲಿಯಣ್ಣನ ಮಗಳು, ಮೂಕ ಪ್ರೇಮದ ಮೂರ್ತಿಯಾದ ‘ಮುದ್ದು’. ಒಂದೊಂದೂ ವೈಶಿಷ್ಟ್ಯಪೂರ್ಣವಾದ, ನೆಲದಿಂದ ಮೂಡಿಬಂದ ಸಹಜ ಜೀವಂತ ಪಾತ್ರಗಳು. ತಮ್ಮದೇ ಆದ ಬಣ್ಣ ಬೆಡಗು ಭಾವ ಸೊಗಸು ಶಕ್ತಿ ನೆಲೆ ಬೆಲೆ ಆಕೃತಿ ಆಚಾರ ವಿಚಾರ ಅವಕ್ಕುಂಟು. ಎಂತಲೇ ಇದು ಕಲಾವಿದನೊಬ್ಬನ ಅಸಾಮಾನ್ಯ ಸಾಧನೆ.

ಇದುವರೆಗೆ ಕಟ್ಟೀಮನಿಯವರ ಸಣ್ಣ ಕತೆಗಳ ಸ್ವರೂಪ ಸತ್ವಸಾಧನೆ ಸ್ಥಾನಗಳನ್ನು ಯಥಾಶಕ್ತಿಯಾಗಿ ವಿವೇಚಿಸಿದ್ದೇನೆ. ಅವರ ಪ್ರಾತಿನಿಧಿಕವಾದ ಕೆಲವು ಕತೆಗಳನ್ನು ಮಾತ್ರವೇ ತೆಗೆದುಕೊಂಡು ಮತ್ತಷ್ಟು ವಿವರಪೂರ್ಣವಾಗಿ ಹಲವು ದೃಷ್ಟಿಕೋನಗಳಿಂದ ತೌಲನಿಕವಾಗಿ ಎಳೆ ಎಳೆಯಾಗಿ ನಿದರ್ಶನಪೂರ್ವಕವಾಗಿ ವಿಮರ್ಶಿಸುವುದು ಸಾಧ್ಯವಿತ್ತು, ಅದು ಸಾಧುವೂ ಆಗಬಹುದಿತ್ತೇನೊ. ಆದರೆ ಸಣ್ಣ ಕಥಾಕ್ಷೇತ್ರದಲ್ಲಿ ಗಾತ್ರ ಮತ್ತು ಗುಣಗಳೆರಡರ ದೃಷ್ಟಿಯಿಂದಲೂ ಅವರು ಗೈದಿರುವ ಸಮಗ್ರವಾದ ಸಾಧನೆ ಏನು ಎಂಬುದನ್ನು ಕಂಡು ಕೊಳ್ಳಲು ಅವರ ಇಡೀ ಸಫಲ-ವಿಫಲ ಕತೆಗಳನ್ನು ಬಿಡಿ ಬಿಡಿಯಾಗಿ ಸ್ಥೂಲವಾಗಿಯಾದರೂ ಪರಿಶೀಲಿಸುವುದು ಸಾಧುವೆಂದು ನನಗನ್ನಿಸಿದ್ದರಿಂದ ಹೀಗೆ ಮಾಡಿದ್ದೇನೆ. ಅವರ ಕತೆಗಳನ್ನು ಸಮಗ್ರವಾಗಿ ಅವಲೋಕಿಸುವಾಗ ಅವುಗಳ ವಸ್ತು ವೈವಿಧ್ಯ, ತಂತ್ರ ವೈವಿಧ್ಯ, ಪಾತ್ರ ವೈವಿಧ್ಯ, ಶೈಲಿ ವೈವಿಧ್ಯ, ದೃಷ್ಟಿ ವೈವಿಧ್ಯ, ವಿಚಾರ ವೈವಿಧ್ಯ ಯಾರ ಗಮನವನ್ನಾದರೂ ಸೆಳೆಯದೆ ಇರವು. ಕೆಲವು ಕತೆಗಳ ಮುಕ್ತಾಯ ಸಪ್ಪೆ, ಕೆಲವು ಕೃತಕ, ಕೆಲವು ಆದರ್ಶದ ಅತಿರೇಕ, ಕೆಲವರಲ್ಲಿ ಭಾಷೆಯ ಬಿಗಿ ಸಾಲದು, ಕೆಲವರಲ್ಲಿ ಅನಾವಶ್ಯಕ ರೊಚ್ಚು, ಕೆಲವರಲ್ಲಿ ಪಕ್ಷಪಾತತನ, ಕೆಲವು ಅವಾಸ್ತವ, ಕೆಲವು ಮಾತಿನ ಮಳೆ, ಕೆಲವು ಆಕ್ರೋಶದ ಬಿರುಗಾಳಿ- ಹೀಗೆ ದೋಷಗಳನ್ನು ಪಟ್ಟಿ ಮಾಡುವುದು ಸುಲಭ. ಆದರೆ ಇವೆಲ್ಲವನ್ನೂ ನುಂಗಿ ಮರೆಸಬಲ್ಲ ವ್ಯಾಪಕತೆ, ವಿಶಿಷ್ಠತೆ ಅನುಭವ ಪ್ರಾಮಾಣ್ಯ, ನಿರೂಪಣ ನೈಪುಣ್ಯ, ಪ್ರಯೋಗಶೀಲತೆ, ಕಲೆಗಾರಿಕೆ ಅವರ ಕತೆಗಳಲ್ಲಿ ಸಮೃದ್ಧವಾಗಿದೆಯೆಂಬುದನ್ನು ಮರೆಯುವಂತಿಲ್ಲ. ‘ರಕ್ತಧ್ವಜ’, ‘ಬಲಿ’, ‘ಸತ್ಯವಾನ ಮರಳಿಲಿಲ್ಲ’, ‘ಗಿರಿಜ ಕಂಡ ಸಿನಿಮಾ’, ‘ಬರದ ದೇವಿ’, ‘ದೀಪಾವಳಿಯ ಕತ್ತಲೆ’, ‘ಕಾರವಾನ, ‘ಬೂಟ್‌ಪಾಲಿಶ್’, ‘ಕೊಲೆಪಾತಕಿ’, ‘ಪರಾಜಿತ’, ‘ಗುಲಾಬಿ ಹೂ’, ‘ಬಣ್ಣದ ಬುಗ್ಗೆ’, ‘ಹೂವಿನ ಹುಡುಗಿ’, ‘ನಾಯಕನ ಮಾನ’, ‘ಜೋಳದ ಬೆಳೆಯ ನಡುವೆ’ ಮುಂತಾದ ಹತ್ತಾರು ಸಾರ್ಥಕ ಕತೆಗಳು ಯಾವ ಸಾಹಿತ್ಯದ ಶ್ರೇಷ್ಠ ಕತೆಗಳೊಡನಾದರೂ ಸರಿತೂಗಬಲ್ಲವಾಗಿವೆ. ಕನ್ನಡ ಕಥಾಲೋಕದ ಪರಿಧಿಯನ್ನು ವಿಸ್ತರಿಸಿದ ಉತ್ತರಿಸಿದ ಕೆಲವೇ ಪ್ರತಿಭಾವಂತ ಹೆಸರುಗಳ ಸಾಲಿನಲ್ಲಿ ಶ್ರೀ ಬಸವರಾಜಕಟ್ಟೀಮನಿಯವರದು ನಿಸ್ಸಂದೇಹ ವಾಗಿಯೂ ಒಂದು ವಿಶಿಷ್ಟೋಜ್ವಲ ಹೆಸರು.