ಸಮರ್ಥ ಕಲಾವಿದ ಯಾವುದೇ ಒಂದು ಘೋಷಣೆಯ ಚಳುವಳಿಯ ಮನೋಭಾವದ ಸಂಕುಚಿತ ಪ್ರತಿಬಿಂಬವಲ್ಲ, ವಕೀಲನಲ್ಲ; ತನ್ನ ಕಲಾ ಕಕ್ಷ್ಯೆಯಲ್ಲಿ ಯಾವುದು ಬಂದರೂ ನಿರ್ಲಿಪ್ತನಾಗಿ ಸ್ವೀಕರಿಸಿ ತನ್ನ ಪ್ರತಿಬಾ ಸ್ಪರ್ಶದಿಂದ ಸರ್ವಸಮರ್ಥವಾದ ನೂತನ ರೂಪಧಾರಣೆ ಮಾಡಿಸಬಲ್ಲ – ಎಂಬುದನ್ನು ಸಾದರಪಡಿಸುತ್ತವೆ ಕಟ್ಟೀಮನಿಯವರ ಕೆಲವು ಕತೆಗಳು. ನಿಪುಣ ವೈಣಿಕನಿಗೆ ಕೆಲವೊಮ್ಮೆ ಕೆಲವು ಕಾರಣಗಳಿಂದಾಗಿ ಕೆಲವು ರಾಗಗಳ ಮೇಲೆ ಒಲವು ಹೆಚ್ಚಿದ್ದರೂ, ಪದೇ ಪದೇ ಅವುಗಳನ್ನೇ ನುಡಿಸಿದರೂ, ಉಳಿದ ರಾಗಗಳನ್ನೂ ಅಷ್ಟೇ ಸಮರ್ಥವಾಗಿ ಪರಿಣಾಮಕಾರಿಯಾಗಿ ನುಡಿಸಬಲ್ಲ. ಅಂತೆಯೇ ಸಾಮಾಜಿಕ, ಆರ್ಥಿಕ, ರಾಜಕೀಯ ವಿಷಮತೆಗಳ ವಿಷಫಲಗಳ ತೀವ್ರ ವಿಶ್ಲೇಷಣೆಯೇ ಕಟ್ಟೀಮನಿಯವರಿಗೆ ಹೆಚ್ಚು ಪ್ರಿಯವಾದುದಾದರೂ ಅವುಗಳ ಕೋಮಲವೂ ಸೂಕ್ಷ್ಮವೂ ಸುಂದರವೂ ಆಕರ್ಷಕವೂ ಆದ ಮಾನವೀಯ ಮುಖಗಳನ್ನು ಅನಾವರಣ ಮಾಡುವುದರಲ್ಲಿ ಅವರು ಅಲಕ್ಷ್ಯ ತೋರಿಲ್ಲವೆಂಬುದಕ್ಕೆ ಮುಂದೆ ಸಮೀಕ್ಷಿಸುವ ಕತೆಗಳು ಪ್ರಮಾಣ ನುಡಿಯುತ್ತವೆ.

ಅತ್ತೆ ಸೊಸೆಯರ ನಡುವಣ ಸಂಬಂಧದ ಒಂದು ರಮ್ಯೋಜ್ವಲ ಕತೆ ಪರಾಜಿತೆ. ಹಾಲಿನಂಥ ಸಂಸಾರದಲ್ಲಿ ಪ್ರೇಮಾಮೃತದ ಪುತ್ಥಳಿಯಾಗಿ ಬಂದಳು ರತ್ನ. ಅವಳ ಆಟ ಪಾಠ ಮಾತು ಕತೆ ಅಪ್ಯಾಯಾನ ಅತ್ತೆಗೆ. ಆದರೆ ಮುಂಗೋಪದಲ್ಲಿ ಅತ್ತೆಯಾಡಿದ ಮಾತೊಂದು ಸೊಸೆಯ ನಿರ್ಮಲ ನಿಸ್ತರಂಗ  ಮಾನಸ ಸರೋವರದಲ್ಲಿ ಕೋಪ ಸೇಡುಗಳ ತೆರೆಯೇಳಿಸಿತು. ಅತಿ ಪ್ರೀತಿ ಅವಿವೇಕಕ್ಕೆ ದಾರಿಯಾಯಿತು. ಪ್ರೇಮದ ಹೊಳೆ ಹರಿಯುತ್ತಿದ್ದ ಎರಡು ಹೃದಯಗಳ ನಡುವೆ ಅಸಮಾಧಾನದ ಸುಪ್ತಾಗ್ನಿತರಂಗಿಣಿ ಹೊಗೆಯಾಡಿತು. ಸ್ವಾಭಿಮಾನಿಯಾದ ಅತ್ತೆ ಸೊಸೆಯ ಹಂಗಿನಲ್ಲಿರಲು ಹೇಸಿ ಹಳ್ಳಿ ಮನೆಗೆ ನಡೆದಳು – ಬೇವು ಬೆಲ್ಲದ ಹಬ್ಬದ ದಿನ. ಈ ಸುಪ್ತವಾದ ಗೃಹಕಲಹವನ್ನರಿಯದ ಮಗ ದಿಙ್ಮೂಢನಾದ. ನಗುವ ನಂದನವಾಗಿದ್ದ ಮನೆ ಬಣಗುಡುವ ಬರಡು ನೆಲವಾಯಿತು. ಅತ್ತೆಯ ಕಾಯಿಲೆ ಸೊಸೆಯ ಹೃದಯ ಪರಿವರ್ತನೆಗೆ ಕಾರಣವಾಗಿ ಮತ್ತೆ ಮೂವರನ್ನೂ ಒಂದುಗೊಡಿಸಿತು. ಅತ್ತೆ ಸೊಸೆ ಮಗ ಮೂವರ ಪಾತ್ರಗಳೂ ಅತ್ಯಂತ ಸುಂದರವಾಗಿ ಸೃಜಿತವಾಗಿವೆ. ಅತ್ತೆಯ ಮಾತೃವಾತ್ಸಲ್ಯ, ನಿಷ್ಕಪಟವಾದ ವಿಶಾಲ ಹೃದಯ, ಪ್ರಾಣ ಹೋಗುವ ಸ್ಥಿತಿಯಲ್ಲಿದ್ದಾಗಲೂ ಸಹಾಯ ಬೇಡದ ಅತ್ಯುಜ್ವಲ ಸ್ವಾಭಿಮಾನ, ಸೊಸೆ ಕ್ಷಮೆ ಯಾಚಿಸಿದಾಗ ತತ್‌ಕ್ಷಣ ಮನಕರಗಿ ಹಿಂದಿನದೆಲ್ಲವನ್ನೂ ಮರೆಯುವ ದೊಡ್ಡತನ – ನಮ್ಮ ಹೃದಯದ ಮೇಲೆ ಅಪಾರ ಪರಿಣಾಮವನ್ನು ಬೀರುತ್ತವೆ. ಅತಿ ಭಾವುಕತೆಯಿಂದ ಸುಲಭವಾಗಿ ನಿಸ್ತೇಜವಾಗ ಬಹುದಾಗಿದ್ದ ಪಾತ್ರ, ಲೇಖಕರ ಎಚ್ಚರದ ಕಲಾಪ್ರಜ್ಞೆಯಿಂದಾಗಿ ತುಂಬ ನೈಜವಾಗಿ ಅರಳಿದೆ. ಕೋಮಲವಾದ ಸ್ವಾಭಿಮಾನಶೀಲದ ಹೃದಯಕ್ಕೆ ಅಕಸ್ಮಾತ್ ಪೆಟ್ಟು ಬಿದ್ದಾಗ ಎಂಥ ಪರಿಣಾಮವಾಗುತ್ತದೆಂಬುದಕ್ಕೆ ರತ್ನಳ ಪಾತ್ರ ಸಾಕ್ಷಿ. ಮಗನ ತಾಯಿಯ ಮೇಲಿನ ಪ್ರೇಮ, ಮಡದಿಯ ಮೇಲಿನ ಒಲವು ಉಚಿತಭಾಭಿವ್ಯಕ್ತಿಯನ್ನು ಪಡೆದಿವೆ. ಸೃಷ್ಟಿಸಿರುವ ಸನ್ನಿವೇಶ, ಆಡಿಸಿರುವ ಮಾತುಗಳು ತುಂಬಾ ಅರ್ಥವತ್ತಾಗಿವೆ. ಅಲ್ಲಲ್ಲಿ ಬರುವ ಹೋಲಿಕೆಗಳಂತೂ ಕಾವ್ಯಮಯವಾಗಿವೆ. ‘ಯೌವನದ ಮದೋನ್ಮತ್ತ ಜೀವನದಲ್ಲಿ ಗಂಡ ಜೊತೆಗಾರನಾಗಿದ್ದರೆ, ಮಧ್ಯೆ ಮಧ್ಯೆ ತಲೆ ಹಾಕುತ್ತಿದ್ದ ಬಾಲಜೀವನದಲ್ಲಿ ಚೆನ್ನ ಜೊತೆಗಾರನಾಗುತ್ತಿದ್ದ’; ‘ಬಿಸಿಲಗಾಲ ನಾಲ್ಕು ತಿಂಗಳು ಇದ್ದು ಮಾಯವಾಗುತ್ತದೆ. ಅನಂತರ ಮಳೆಗಾಲ ಬಂದೇ ತೀರಬೇಕಿಲ್ಲ?’ ‘ಯಾವಾಗಲೂ ಹೂಮಳೆಯಲ್ಲಿ ಆಡುತ್ತಿದ್ದವರಿಗೆ ಶಿಲಾವೃಷ್ಟಿ ಹೇಗೆ ಸಹ್ಯವಾದೀತು? ‘ಸಂಧ್ಯಾರಮಣಿಯ ಹಾಗೆ ಕಾಣಿಸಿದ ರತ್ನ ಒಮ್ಮೆಲೆ ಮಧ್ಯಾಹ್ನ ರಮಣೀ ಯಾಗಿ ಬಿಟ್ಟಳು’ ಇತ್ಯಾದಿ. ಅಂತ್ಯವಂತೂ ಅತೀವ ರಮಣೀಯವಾಗಿದೆ:

“ರತ್ನಾ” ಎಂದು ಕೂಗುತ್ತ ಮನೆಯೊಳಗಡೆ ಬಂದ ಸದಾಶಿವ, ದೇವರ ಮುಂದೆ ದೀಪವನ್ನು ಹಚ್ಚುತ್ತ ನಿಂತಿದ್ದ ತಾಯಿಯನ್ನು ಕಂಡು ‘ಅಮ್ಮಾ’ ಎಂದವನೆ ಅವರ ಅಡಿಗಳಿಗೆ ಬಿದ್ದ.

ಮಗನನ್ನು ಎತ್ತಿ ಎದೆಗವಚಿಕೊಂಡಳು ತಾಯಿ.

ಮೆಲ್ಲನೆ ಅವರ ದೃಷ್ಟಿ ಬಾಗಿಲ ಕಡೆ ಹೋಯಿತು.

ಪ್ರಫುಲ್ಲ ಮುಖದಿಂದ ರತ್ನಾ ಬಾಗಿಲಲ್ಲಿ ನಿಂತಿದ್ದಳು. ದೀಪದ ಕಿರಣಗಳ ಬೆಳಕಿನಲ್ಲಿ ಅವಳ ಕಣ್ಣ ಬೊಂಬೆಗಳು ಥಳಥಳಿಸುತ್ತಿದ್ದವು”.

ಸೊಗಸಾದ ನಿರೂಪಣೆ, ಹೃದ್ಯವಾದ ಸಂಭಾಷಣೆ, ಸ್ವಾಭಾವಿಕವಾದ ಸನ್ನಿವೇಶ ನಿರ್ಮಾಣ, ಜೀವಂತವಾದ ಪಾತ್ರ ಸೃಷ್ಟಿ, ಕಲಾತ್ಮಕವಾದ ಅಂತ್ಯ ಇವುಗಳಿಂದಾಗಿ ಇದು ಕಟ್ಟೀಮನಿಯವರ ಉತ್ಕೃಷ್ಟ ಸುಂದರ ಕತೆಗಳಲ್ಲೊಂದಾಗಿ ನಿಲ್ಲುತ್ತದೆ.

ಕಟ್ಟೀಮನಿಯವರ ಮತ್ತೊಂದು ಪ್ರಭಾವಶಾಲಿ ಕತೆ ‘ಗುಲಾಬಿ ಹೂ’, ಸುರಸ ಮೋಹಕ ಸಂವಿಧಾನದ ಈ ಕತೆ, ಹೃದಯದಾಳದ ಭಾವಗಳನ್ನು ಎಷ್ಟೊಂದು ಸೂಕ್ಷ್ಮವಾಗಿ ಹೆಕ್ಕಿ ಬಿಡಿಸಿ ಎಳೆಎಳೆಯಾಗಿ ಹೊರಗೆಳೆದು ನವುರಾಗಿ ಆಕರ್ಷಕವಾಗಿ ಮನದಲ್ಲಿ ನೆಲೆ ನಿಲ್ಲುವಂತೆ ಲೇಖಕರು ನಿರೂಪಿಸಬಲ್ಲರು ಎಂಬುದಕ್ಕೆ ಶಕ್ತಿಯುತವಾದ ನಿದರ್ಶನವಾಗಿದೆ. ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡು ಕಲ್ಪನೆಯ ರೆಕ್ಕೆಯಲ್ಲಿ ಯಾನ ಮಾಡುವ ಕೋಮಲ ಮನಸ್ಸಿಗೆ ಆಘಾತವಾದಾಗ ಆಗುವ ಪರಿಣಾಮ, ಸಾವಧಾನಶೀಲತೆಯಿಂದ ವಿವೇಚಿಸಿದಾಗ ಸರಳ ಶುದ್ಧ ಮನಸ್ಸಿನಲ್ಲಿ ಮೂಡುವ ಪಶ್ಚಾತ್ತಾಪ, ಅದರಿಂದ ಶಾಂತಿಯ ಆಗರವಾಗುವ ಬದುಕು – ಇವುಗಳನ್ನು ಕಲಾಪೂರ್ಣವಾಗಿ ಕುಂಚಿಸಿರುವ ಕತೆ ‘ಗುಲಾಬಿ ಹೂ’. ಗುಲಾಬಿ ಗಿಡದಲ್ಲಿ ಮುಳ್ಳುಂಟು, ಆದರೆ ಹೂವಿನ ಸೌಂದರ್ಯ ಪರಿಮಳ ಅದನ್ನು ಮರೆಸುತ್ತದೆ. ಕಿಟ್ಟಿ, ಕುಸುಮಾ, ರಾಮು ಮೂವರ ಸುತ್ತ ಕತೆ ಹಬ್ಬಿದೆ. ಮುಗ್ಧ ಹೃದಯದ ಕಿಟ್ಟಿ, ಮುಂಗೋಪದ ನಿರ್ಮಲ ಹೃದಯದ ಹರಯದ ಕುಸುಮ, ಬಾಳಿನ ನೋವು-ನಲಿವುಗಳ ನೈಜನುಭವವಿರುವ ಪ್ರೇಮಲ ಮನಸ್ಸಿನ ರಾಮ – ಮೂರೂ ವಿಶಿಷ್ಟ ರೀತಿಯಲ್ಲಿ ಕಡೆಯಲ್ಪಟ್ಟ ಪಾತ್ರಗಳು. ಅಸಹನೆಗೆ ಬಲಿಯಾಗಿ ತಬ್ಬಲಿಯ ಕೆನ್ನೆಗೆ ಹೊಡೆದ ಕುಸುಮಾ ಅನುಭವಿಸುವ ಮನೋಯಾತನೆ ಚಿತ್ರಣ ಸೊಗಸಾಗಿದೆ. ರಾಮುವಿನ ಮನೋಘರ್ಷಣೆಯನ್ನು ನೇರವಾಗಿ ಹೇಳದೆ ದಿನಚರಿಯ ಮೂಲಕ ಪ್ರಕಟಿಸಿರುವುದು ಸಮರ್ಪಕ ತಾಂತ್ರಿಕ ನೈಪುಣ್ಯವಾಗಿದೆ. ದಿನಚರಿಯಲ್ಲಿ ಬರೆದ ಮಾತುಗಳನ್ನು ನೇರವಾಗಿ ಕುಸುಮೆಗೆ ಆಡಿದ್ದರೆ ವಾತಾವರಣ ತಿಳಿಯಾಗುವುದರ ಬದಲು ಪ್ರಕೋಪಕ್ಕೆ ತಿರುಗುವ ಸಾಧ್ಯತೆಯಿತ್ತು; ತನಗೆ ತಾನೇ ಆಡಿಕೊಂಡಿದ್ದರೆ ಅದರ ಪರಿಣಾಮ ಕುಸುಮೆಯ ಮೇಲಾಗದೆ ಅವಳ ಹೃದಯ ಪರಿವರ್ತನೆಯಾಗಿ ಪಶ್ಚಾತ್ತಾಪ ಮೂಡುವುದು ಸಾಧ್ಯವಿರುತ್ತಿರಲಿಲ್ಲ. ಹೀಗೆ ಗಂಡ ಹೆಂಡಿರಲ್ಲಿ ನೇರ ಘರ್ಷಣೆ ನಡೆಯದೆಯೇ ಅತ್ಯಂತ ಸಹಜವಾದ ರೀತಿಯಲ್ಲಿ ಪ್ರಶಾಂತವಾಗಿ ನಯವಾಗಿ ಕತೆ ಸುಖಾಂತವಾಗುವುದಕ್ಕೆ ಈ ದಿನಚರಿಯ ತಂತ್ರನೈಪುಣ್ಯ ಸಹಕಾರಿಯಾಗಿದೆ. ಯಾವ ಹೂವಿಗಾಗಿ ಮಗುವನ್ನು ಹೊಡೆದಳೋ ಅದೇ ಮಗು ಆ ಹೂವನ್ನು “ತಂಗಿಗೆ ಮುಡಿಸುತ್ತೇನೆ ಅಮ್ಮಾ! ನನಗೊಬ್ಬಳು ತಂಗೀನ ಕೊಡೇ ನೀನು!” ಎಂದು ಹೇಳುವಾಗ, ಯಾವ ಹೃದಯದಲ್ಲಿ ತಾನೇ ಸ್ವಾರ್ಥ ಕಶ್ಮಲ ನಿಂತೀತು? ಯಾವ ಸ್ಥಳದಲ್ಲಿ ಯಾವ ಏಟು ಹಾಕಿ ಯಾವ ಧ್ವನಿ ಹೊರಡಿಸಬಹುದೆಂಬುದರ ನಿಪುಣ ಕಲ್ಪನೆಯಿಂದ ಮೂಡಿಬಂದ ಸತ್ವಭರಿತ ಕತೆಯಿದು.

ಭಾವನಾಲೋಕದಲ್ಲಿ ವಿಹರಿಸುತ್ತಿದ್ದ ಪ್ರಣಯಾರಾಧಕನೊಬ್ಬ ತನ್ನ ಕೈ ಹಿಡಿದ ರತಿ ರೂಪಿಯಾದ ಹೆಂಡತಿ ತನಗೆ ವಂಚನೆಗೈದು ರೂಪಸರ್ಪಿಣಿಯಾದಾಗ ನಿರಾಶೆಯ ಕಂದರದಲ್ಲಿ ಧುಮುಕಿ ವಿರಾಗಿಯಂತಿದ್ದು, ಆಕೆಯನ್ನೇ ಹೋಲುವ ವೇಶ್ಯೆಯೊಬ್ಬಳನ್ನು ಕಂಡಾಗ ಸುಪ್ತ ಕ್ರೋಧ ಕೆರಳಿ ಹುಚ್ಚಾಗಿ ಹರಿದು ಉಗ್ರ ರೀತಿಯಿಂದ ಅವಳ ಕೊಲೆಗೈದು ಸೆರೆಮನೆ ಸೇರಿದ ಕತೆ ‘ರೂಪದ್ವೇಷಿ’. ಮಾನಸಿಕವಾದ ಆಘಾತ ಸಮಯ ಸಿಕ್ಕಾಗ ಉಚ್ಛೃಂಖಲವಾಗಿ ಹರಿದು ಎಂತಹ ಅನರ್ಥಕಾರಿಯಾದ ಪ್ರತಿಕ್ರಿಯೆಯಲ್ಲಿ ಪರ್ಯವಸಾನ ಹೊಂದುವುದೆಂಬುದರ ಸುಂದರ ನಿರೂಪಣೆ ಈ ಕತೆ. ಕೊಲೆ ಮಾಡುವಾಗ ಇದ್ದ ಆತನ ಮನಸ್ಥಿತಿಯ ಸೂಕ್ಷ್ಮವಾದ ವಿಶ್ಲೇಷಣೆ ಇಲ್ಲಿದೆ. ವಿವರಗಳು ಸೂಕ್ತ ಪ್ರಮಾಣದಲ್ಲಿ ತುಂಬಿಕೊಂಡು ಬಂದಿವೆ. ಇಡೀ ಕತೆಯನ್ನು ಓದಿ ಮುಗಿಸುವಾಗ ಆತನ ವರ್ತನೆ ತೀರ ಸಹಜವೆನ್ನುವಂಥ ಸಶಕ್ತ ಹಿನ್ನೆಲೆಯ ಕಲ್ಪನೆಯೇ ಈ ಕತೆಯ ಯಶಸ್ಸಿನ ತಿರುಳಾಗಿದೆ. ಮೆಚ್ಚುವಂತಹ ಒಂದು ಮನೋವೈಜ್ಞಾನಿಕ ಕತೆಯಿದು. ಕುತೂಹಲಕ್ಕೂ ಇಲ್ಲಿ ಅಗ್ರ ಕಿರೀಟ ದೊಕಿದೆ.

ತನ್ನ ಮೊಲೆಯುಣಿಸಿ ತನ್ನ ಮಡಿಲಲ್ಲಿ ಆಡಿಸಿ ಬೆಳೆಸಿದ ತಬ್ಬಲಿ ಯುವಕ ತನ್ನ ಮಗಳೊಂದಿಗೆ ಪ್ರಣಯ ವ್ಯವಹಾರದಲ್ಲಿ ತೊಡಗಿದ್ದನ್ನು ಕಂಡ ಅಳಿಯ ಉಗ್ರನಾಗಿ ಕೊಲೆಗೈಯಲು ಬಂದಾಗ, ಅವನನ್ನುಳಿಸಲು ಅಳಿಯನ ಕೊಡಲಿಗೆ ತಾನೇ ಬಲಿಯಾದ ತ್ಯಾಗಮಯಿಯಾದ ತಾಯಿಯೊಬ್ಬಳ ಕರುಣಾಜನಕ ಕತೆ ‘ಎರಡನೆಯ ತಾಯಿ’. ಸಾಕಿದ ತಾಯಿಯ ಮಗಳೊಂದಿಗೆ ಸಂಬಂಧ ಬೆಳೆಸಿದ ಯುವಕನ ಮನೋಯಾತನೆಯ ನಿರೂಪಣೆ ಚೆನ್ನಾಗಿದೆ. ಹಡೆದ ಮಗನಿಗಿಂತ ಹೆಚ್ಚಾಗಿ ಸಾಕಿದವನನ್ನು ಆತ ತನಗೆ ಬಗೆದ ದ್ರೋಹವನ್ನೂ ಮರೆತು – ಉಳಿಸಲು ತನ್ನ ಪ್ರಾಣವನ್ನೇ ತೆತ್ತ ತಾಯಿಯ ಪಾತ್ರ ಉದಾತ್ತವಾಗಿದೆ. ಆದರೆ ಕತೆಯ ಅರ್ಧ ಭಾಗಕ್ಕೆ ಬಂದ ನಂತರ ನಿಜವಾದ ಕತೆ ಆರಂಭವಾಗುವುದರಿಂದ ಮೊದಲಿನ ಹಿನ್ನೆಲೆ ಅತಿ ದೀರ್ಘವಾಗಿ ಕಥನ ಕಟ್ಟಡದ ಶೈಥಿಲ್ಯಕ್ಕೆ ಕಾರಣವಾಗಿದೆ. ಯಾವೊಂದು ಪಾತ್ರವೂ ಹೆಚ್ಚು ತುಂಬಿಕೊಂಡು ಬಂದಂತಿಲ್ಲ. ಕಥಾ ನಾಯಕನ ಉದ್ಗಾರಗಳೇ ಅಧಿಕವಾಗಿ ತುಂಬಿ ಮಧ್ಯೆ ಮಧ್ಯೆ ನೀತಿತತ್ವ ಕಥಾಶರೀರ ಪ್ರಮಾಣಬದ್ಧವಾಗಿ ಬೆಳೆದು ಬರದೆ ಸೊರಗಿ ಹೋಗಿದೆ. ಅತ್ಯುತ್ತಮ ಕತೆಯಾಗಿಸಬಹುದಿದ್ದ ಅವಕಾಶವನ್ನು ಲೇಖಕರು ಕಳೆದು ಕೊಂಡಿದ್ದಾರೆಂದೇ ಹೇಳಬೇಕು.

‘ಹೂವಿನ ಹೂಡುಗಿ’ ಕಟ್ಟೀಮನಿಯವರ ಲೇಖನಿ ಸೃಜಿಸಿದ ಮತ್ತೊಂದು ಸುಂದರ ಕತೆ. ಪತಿ ದಿನಚರಿಯಲ್ಲಿ ಬರೆದಿದ್ದ ಪಂಕ್ತಿಯೊಂದು ಸತಿಯ ಮನಸ್ಸಿನಲ್ಲಿ ಅಸಹನೆ ಅಸಮಾಧಾನದ ಕಿಚ್ಚೆಬ್ಬಿಸಿ, ಸರಸ ರಸಿಕತೆಯ ತರುಣ ದಂಪತಿಗಳನ್ನು ದೂರವಾಗಿಸಿ, ನಂತರ ಅಸಾಧಾರಣವಾದ ರೀತಿಯಲ್ಲಿ ಪ್ರೀತಿ ಅನುಕಂಪಗಳನ್ನು ಮೂಡಿಸಿ ಮುಕ್ತಾಯ ವಾಗುವ ಕುತೂಹಲಕಾರಿಯಾದ ಕಲಾತ್ಮಕ ಕತೆಯಿದು. ಹೊಸ ಹರೆಯದ ಎರಡು ಜೋಡಿಗಳ ಅಕೃತ್ರಿಮ ಪ್ರೇಮ ಕಥಾನಕದ ಏಕಜೀವದ ಆಶ್ಚರ್ಯಕರ ಹೆಣಿಕೆ ಇಲ್ಲಿದೆ. ನಾಗರಿಕ ವಿದ್ಯಾವಂತ ಸುಸಂಸ್ಕೃತ ಜೋಡಿ ಒಂದು; ಮುಗ್ಧ ಅವಿದ್ಯಾವಂತ ಬಡತನದ ಜೋಡಿ ಮತ್ತೊಂದು. ಎರಡರ್ಥ ಬರುವ ವಾಕ್ಯವೃಂದವೊಂದನ್ನು ಪತಿಯ ದಿನಚರಿಯಲ್ಲಿ ಕಂಡಾಕ್ಷಣ ಆತನ ನಡತೆಯ ಬಗ್ಗೆ ಶಂಕಿಸಿ ಕಿನಿಸಿ ತೌರೂರಿಗೆ ಮರಳಿದ ಹೆಣ್ಣೊಬ್ಬಳು, ಗಂಡನಿಗೆ ಕೋಟು ಹೊಲಿಸಲೆಂದು ಆರು ಮೈಲಿ ದೂರದ ಪೇಟೆಗೆ ಸಂಪಿಗೆ ಹೂವನ್ನು ತಂದು ಹಗಲೆಲ್ಲ ಮುಖ ಮೈ ಒಣಗಿಕೊಂಡು ಕೂತು ಮಾರಿ ಹೋಗುತ್ತಿದ್ದ ಹಳ್ಳಿಯ ಹೆಣ್ಣೊಬ್ಬಳು. ಇವರ ವ್ಯಕ್ತಿತ್ವದ ರೂಪಣೆ ಅತ್ಯಂತ ಮನೋಜ್ಞವಾಗಿ  ನಿರ್ವಹಿತವಾಗಿದೆ. ಕ್ಷಣಕ್ಷಣಕ್ಕೂ ಕುತೂಹಲದ ಮೊನೆಯ ಮೇಲೆ ಓದುಗನನ್ನು ನಿಲ್ಲಿಸಿ ಪರಮಾಕರ್ಷಕವಾಗಿ ಸಾಗುವ ಕತೆ ತುಂಬ ಸಮರ್ಪಕವಾದ ತೃಪ್ತಿದಾಯಕವಾದ ಕರುಣ ಪೂರ್ಣವಾದ ಸಶಕ್ತವಾದ ಕೌಶಲಯುಕ್ತ ಮುಕ್ತಾಯವನ್ನು ಪಡೆದು ಚಿತ್ತಭಿತ್ತಿಯ ಮೇಲೆ ಮರೆಯಲಾಗದ ಮುದ್ರೆಯನ್ನೊತ್ತುತ್ತದೆ. ಬಡತನದಲ್ಲಿ ಮುಳುಗಿದ್ದರೂ, ಒಬ್ಬರು ಮತ್ತೊಬ್ಬರಿಗಾಗಿ ತೋರುವ ನಿರ್ಮಲ ಅಚಂಚಲ ಪ್ರೇಮ ಚಿರಸ್ಮರಣೀಯವಾದದ್ದು. ಕಡೆಗೆ ಹೂವಿನ ಹುಡುಗಿಯ ಗಂಡ ಹೂವು ಕೊಯ್ಯಲು ಮರವೇರಿ ಜರಿ ಬಿದ್ದು ಮಡಿದು ಹೂವಿನಂಥ ಹುಡುಗಿಯ ಬಾಳನ್ನು ಕತ್ತಲಾಗಿಸುವ ಸನ್ನಿವೇಶ ಕಣ್ಣಿನಲ್ಲಿ ನೀರು ತುಂಬುತ್ತದೆ. ಎಷ್ಟು ಪತ್ರ ಬರೆದರೂ ಬರದಿದ್ದ ಲಲಿತೆ, ‘ಶರೀರದಲ್ಲಿ ಸ್ವಾಸ್ಥ್ಯವಿಲ್ಲ, ಮನಸ್ಸಿನಲ್ಲಿ ಶಾಂತಿಯಿಲ್ಲ’ ಎಂದು ಬರೆದ ಕೂಡಲೇ ಧಾವಿಸಿ ಬಂದಿದ್ದು ಆಕೆಗೆ ಪತಿಯ ಮೇಲಿದ್ದ ಅಪಾರ ಪ್ರೇಮಕ್ಕೆ ಸಾಕ್ಷಿಯಾಗಿದೆ. ಪಾತ್ರಗಳ ಅಂತರಂಗದ ಜೀವನಾಡಿ ಹಿಡಿದು ಮಿಡಿಯಬಲ್ಲ ಲೇಖಕರ ಶಕ್ತಿಗೆ ಇಲ್ಲಿ ವಿಪುಲ ನಿದರ್ಶನ ದೊರೆಯುತ್ತದೆ. ದಿನಚರಿ ತಂತ್ರ, ಪತ್ರ ತಂತ್ರ, ನೇರ ಕಥನ ತಂತ್ರ – ಈ ಮೂರರ ವಿಸ್ಮಯಕರ ಮಿಲನದ ಸಂಯುಕ್ತ ಸಹಕಾರದಿಂದ ಕತೆಗೆ ಸಹಜತೆ, ಸಜೀವತೆ, ಸತ್ವ, ಕಲಾಸೌಂದರ್ಯ ಕೂಡಿ ಬಂದಿದೆ. ಇಲ್ಲಿಯ ಸರಸ ನವುರು ನಾಜೂಕು ವಿಶುದ್ಧ ಪ್ರೇಮದ ಚೈತನ್ಯದಾಯಕ ಪರಿಸರ ಆನಂದರ ಕತೆಗಳನ್ನು ನೆನಪಿಗೆ ತರುತ್ತವೆ.

ಬಹಿರಂಗಗೊಳಿಸದೆ, ಸುಪ್ತವಾಗಿ ಮನದ ನೆಲದಲ್ಲೇ ಪೋಷಿಸಿ ಬೆಳೆಸಿಕೊಂಡು ಬಂದ ಬಲಿತ ಬಯಕೆಯ ವೃಕ್ಷ ಅನಿರೀಕ್ಷಿತ ಆಘಾತಕ್ಕೆ ಸಿಕ್ಕಿ ಉರುಳಿ ಹೋದಾಗ ಉಂಟಾಗುವ ಮನೋವಿಭ್ರಾಂತಿಯ ಕರುಣ ರಮ್ಯ ಅಧ್ಯಾಯ ‘ಸತ್ಯವಾನ ಮರಳಲಿಲ್ಲ’. ಅತಿಯಾದ ಭಾವನಾವಶತೆಗೊಳಗಾದ ಸಾವಿತ್ರಿಯ ಪಾತ್ರ ಸೃಷ್ಟಿಯಲ್ಲಿ ಕತೆಗಾರರ ಅಪಾರ ಜಣ್ಣೆ ಸುವ್ಯಕ್ತವಾಗುತ್ತದೆ. ಮನಶ್ಯಾಸ್ತ್ರೀಯ ರೀತಿಯಲ್ಲಿ ಕಡೆಯಲ್ಪಟ್ಟ ಸತ್ವಪೂರ್ಣ ಸಂಕೀರ್ಣ ಪಾತ್ರವಿದು. ಮರಣಿಸಿದ ತನ್ನ ಸತ್ಯವಾನ ತನ್ನ ಗೆಳತಿಯ ಗರ್ಭದಲ್ಲಿ ಮಗುವಾಗಿ ಆವತರಿಸುವನೆಂದು ಕೇಳಿದಾಗ ಕ್ರಮ ಕ್ರಮೇಣ ಕರಗುತ್ತಿದ್ದ ಮನೋವಿಭ್ರಮೆ, ಆಕೆಗೆ ಗರ್ಭಪಾತವಾಯಿತೆಂದು ಕೇಳಿ ತನ್ನ ಮನದಿನಿಯ ಮತ್ತೆ ಎಂದೆಂದೂ ಯಾವ ರೂಪದಲ್ಲಿ ಮರಳಲಾರನೆಂಬ ಕಟು ಸಂಗತಿ ನಿಚ್ಚಳವಾಗಿ ಎದೆಯನ್ನಪ್ಪಳಿಸಿದಾಗ ಅತ್ಯುತ್ಕ್ರಮಣಾವಸ್ಥೆಗೇರಿ ಸ್ಫೋಟಗೊಂಡ ಸಂದರ್ಭಗಳು ತುಂಬ ಸ್ವಾರಸ್ಯವಾಗಿ ಸಮರ್ಥವಾಗಿ ನಿರ್ಮಿತವಾಗಿವೆ. ನೈಜವಾದ ಪ್ರೇಮ ಲೈಂಗಿಕ ಸಂಬಂಧವೊಂದನ್ನೇ ಬಯಸುವುದಿಲ್ಲ. ಅದು ಯಾವ ರೂಪದಲ್ಲಿ ಬಂದರೂ ಪೂಜರ್ಹ ಸ್ವಾಗತಾರ್ಹ ತೃಪ್ತಿದಾಯಕ ಎಂಬುದನ್ನು ಹೃದಯಂಗಮವಾಗಿ ಚಿತ್ರಿಸಲಾಗಿದೆ. ಅವಳ ಪ್ರೇಮ ಹಂತ ಹಂತವಾಗಿ ಬೆಳೆದ ರೀತಿ, ಅದಕ್ಕೆ ಬಂದ ದುಸ್ಥಿತಿ, ಅದಕ್ಕ ಪೂರಕವಾದ ಸ್ಮಶಾನದ ವರ್ಣನೆ – ಎಲ್ಲವೂ ಜೀವನಕಳೆಯಿಂದ ತುಂಬಿವೆ. ಗೆಳತಿ ಭಾಗೀರಥಿಯ ಪಾತ್ರವೂ ಮರೆಯುವಂಥದಲ್ಲ. ಅವಳ ಸೂಕ್ಷ್ಮವಾದ ಒಳನೋಟ, ವೈಜ್ಞಾನಿಕವಾದ ಸಮಯೋಚಿತ ವಿಚಾರ, ಚಿಕ್ಕಂದಿನ ಒಡನಾಡಿಯ ಬಗೆಗಿನ ನಿಷ್ಕಲ್ಮಷ ಸ್ನೇಹ ಸ್ಪಷ್ಟಾಭಿವ್ಯಕ್ತಿಯನ್ನು ಪಡೆದಿವೆ. ಅಲ್ಲಲ್ಲೆ ಸ್ವಲ್ಪ ಅಸಹಜತೆ ಇಣುಕಿ ಹಾಕಿದರೂ ಇದೊಂದು ಚಿತ್ತಾಕರ್ಷಕವಾದ ಕತೆಯೆಂಬುದರಲ್ಲಿ ಸಂಶಯವಿಲ್ಲ.

ತಮ್ಮ ಕತೆಗಳಲ್ಲೆಲ್ಲ ಅತ್ಯುತ್ತಮವೆಂದು ಲೇಖಕರು ತಾವೇ ಪರಿಗಣಿಸಿದ ಕತೆ ‘ನಾಯಕನ ಮಾನ’. ಊರಿಗೆಲ್ಲ ಧಣಿಯಾಗಿ ಮಾರ್ಗದರ್ಶಕನಾಗಿ ನ್ಯಾಯಾಧಿಪತಿಯಾಗಿದ್ದ ವ್ಯಕ್ತಿ, ಊರಿನವರಿಗೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅನಪೇಕ್ಷಿತನೂ ವಿರೋಧಿಯೂ ಆಗಿದ್ದ ಗಂಡನೊಬ್ಬನ – ಆತನ ಮುದಿ ತಾಯಿಗೆ ಮಾತು ಕೊಟ್ಟ ಪರಿಣಾಮವಾಗಿ ಪ್ರಾಣ ಉಳಿಸಲು, ತುಂಬಿದ ನ್ಯಾಯಾಲಯದಲ್ಲಿ, ತನ್ನ ಹೆಂಡತಿಯೊಡನೆ ಆತನಿದ್ದನೆಂದು ಸಾಕ್ಷಿ ನುಡಿದು ಮರ್ಯಾದೆ ಮುರಿದ ಬಾಳನ್ನು ಹೊರೆಯ ಹೇಸಿ ತನ್ನ ಬಂದೂಕದ ಗುಂಡಿಗೆ ತಾನೆ ಬಲಿಯಾದ – ಹೃದ್ರಮ್ಯ ಕರುಣ ಕತೆಯಿದು. ಕಥಾಕಾಯದ ಪ್ರತಿ ವಾಕ್ಯವೂ ಎಚ್ಚರದಿಂದ ಹೆಣೆದುದಾಗಿದೆಯೆಂಬ ಭಾವನೆಯನ್ನು ಮೂಡಿಸುವ ಸತ್ವಶಾಲಿಯಾದ ಬರವಣಿಗೆಯಿದು. ಇಲ್ಲಿಯ ನಾಯಕನ ಪಾತ್ರ ಅತ್ಯಂತ ಉದಾತ್ತವೂ ಆದರ್ಶಯುತವೂ ಸ್ವಾಭಿಮಾನದ ಶ್ರೀ ಸಂಕೇತವೂ ಸಹಜವೂ ಆಗಿ ನೆಲದಿಂದ ತನಗೆ ತಾನೇ ಮೂಡಿಬಂದಿದೆ. ಮಗನನ್ನು ಎಂತಾದರೂ ಉಳಿಸುವೆನೆಂದು ತಾಯಿಗೆ ಮಾತು ಕೊಟ್ಟ ನಾಯಕನಿಗೆ, ಆ ವ್ಯಕ್ತಿ ತಾನು ಕಂಡಾಗ ತನ್ನ ಮುದ್ದಿನ ಮಡದಿಯೊಡನೆಯೇ ಇದ್ದಿರಬಹುದೆಂಬ ಕಹಿಯಾದ ಕಟುಸತ್ಯ  ಬೆಳಕಿಗೆ ಬಂದಾಗ, ಗಹಗಹಿಸುತ್ತಿರುವ ಸಭಿಕರ ಮುಂದೆ ಆತ ತೋರಿದ ಸಂಯಮ, ತನ್ನ ಪ್ರಾಣ ಹೋದರೂ ಮಾನಹೋದರೂ ಕೊಟ್ಟನೂತಿಗೆ ತಪ್ಪಬಾರದೆಂಬ ಆತನ ಪ್ರಾಮಾಣಿಕ ಸತ್ಯ ಸಂಧತೆ, ಕೊಟ್ಟ ಮಾತು ಉಳಿದ ಮೇಲೆ ತನಗೆ ದ್ರೋಹಕವೆಸಗಿದ ಮಡದಿಯನ್ನು ಆಕೆಯ ಗೆಳೆಯನನ್ನೂ ಅವರ ಪ್ರೇಮಭಂಗವಾದಂತೆ ಒಂದು ಗೂಡಿಸಿದ ಆ ಅಸಾಧಾರಣ ಔದಾರ್ಯ, ನಂಬಿದವರಿಂದ ವಂಚಿತನಾಗಿ ಮಾನಕ್ಕೆರವಾಗಿ ಬದುಕಲಿಚ್ಛಿಸದ ಸ್ವಾಭಿಮಾನ ದಿಂದ ತನ್ನನ್ನು ತಾನೇ ಬಲಿಗೈದು ಕೊಂಡ ಆ ಆತ್ಮದಾರ್ಢ್ಯ – ಒಂದೊಂದೂ ರವ್ರೋವಾಗಿ ಮೂಡಣೆಗೊಂಡಿವೆ. ಪ್ರಾದೇಶಿಕವಾದ ಕಣ್ಣು ಕಟ್ಟುವಂಥ ಸಹಜ ಪರಿಸರ, ಅಕೃತಕವಾದ ಅತ್ಯವಶ್ಯವಾದ ಸನ್ನಿವೇಶಗಳು, ಗ್ರಾಮ್ಯಸಹಜವಾದ ನೇರವೂ ಪರಿಣಾಮ ಕಾರಿಯೂ ಆದ ಭಾಷೆ, ಜೀವಂತವಾದ ಪಾತ್ರ ಸೃಷ್ಟಿ – ಇವು ಇದನ್ನೊಂದು ಉತ್ತಮ ಕತೆಯನ್ನಾಗಿ ಮಾಡಿವೆ. ನಾಯಕನ ನಡವಳಿಕೆಯಲ್ಲಿ ಕೆಲವರಿಗೆ ಸ್ವಲ್ಪ ಅಸಹಜತೆ ಕಾಣುವುದೂ ಸ್ವಾಭಾವಿಕವೇ. ಕತೆಗಾರರ ಅಭಿಪ್ರಾಯವೇನೇ ಇರಲಿ, ಇದಕ್ಕಿಂತ ಉತ್ಕೃಷ್ಟವಾದ ಕಲಾಕೃತಿಗಳನ್ನು ಅವರು ನಿರ್ಮಿಸಿದ್ದಾರೆಂದು ಹೇಳಲೇಬೇಕಾಗುತ್ತದೆ.

ಎರಡು ಮುಗ್ಧ ಜೀವಿಗಳ ಸುತ್ತ ಹೆಣೆಯಲಾದ ಹೃದಯಾಕರ್ಷಕವಾದ ಕಂಬನಿಯ ಕತೆ ‘ಮುದ್ದು’. ಲೋಕದ ಕೊಂಕು ದುಃಖ ದಾರಿದ್ರ್ಯಗಳನ್ನರಿಯದ ಆಕೃತಿಮ ಪ್ರೇಮಲ ಮನಸ್ಸಿನ ಮುಗ್ಧ ಬಾಲಕ ವಸಂತ; ಮಾನುಷ ಪ್ರಪಂಚದ ನೀತಿ ನಿಯಮ ಹೃದಯ ವಿಹೀನತೆಯನ್ನರಿಯದ ನಿರ್ಮಲ ಪ್ರೇಮದ ಮೂರ್ತಿಯಾದ ಮೂಕಜೀವಿ ‘ಮುದ್ದು’. ಇವರಿಬ್ಬರ ನಡುವಣ ಸ್ನೇಹ ಬಂಧನವನ್ನು ಕರುಳು ಕತ್ತರಿಸುವಂತೆ ರೂಪಿಸಿರುವ ಕತೆಯಿದು. ನಿರುದ್ಯೋಗಿಯಾದ ರಂಗಣ್ಣ ಪಟ್ಟಣವಾಸದ ದುರ್ಭರ ಜೀವನವನ್ನು ನಡೆಸಲಾರದೆ ಹಳ್ಳಿಗೆ ಹಿಂದಿರುಗಿದ ಪರಿಣಾಮವಾಗಿ – ವಸಂತನ ಪ್ರತಿಭಟನೆ ಅಳು, ಗೋಗರೆತಗಳೆಲ್ಲ ವಿಫಲವಾಗಿ ಮುದ್ದು ಅನಾಥವಾಯಿತು. ಆದರೂ ತನ್ನನ್ನು ಸಾಕಿದ ಜೀವದ ಗೆಳೆಯ ಇದ್ದಾನೆಂದೇ ಭಾವಿಸಿ ಅದು ದಿನ ದಿನವೂ ಆತನ ಶಾಲೆಯ ಬಳಿಗೆ ಆತನು ಹೋಗುತ್ತಿದ್ದ ಸ್ಥಳಗಳಿಗೆ ನಿತ್ಯವೂ ಹೋಗಿ ನಿರೀಕ್ಷಿಸಿತು. ಎಲ್ಲಿಯೂ ಪರಿಚಿತ ಮುಖ ಕಾಣಿಸದಿದ್ದಾಗ ಅಸಹನೀಯ ದುಃಖದಿಂದ ಗೋಳಿಡುತ್ತಾ ಹಸಿವೆಯ ಪರಿವೆಯನ್ನೂ ಮರೆತು ಕಾದಿತು. ವಸಂತನಿದ್ದ ಮನೆಗೆ ಬೇರೆಯವರು ಬಾಡಿಗೆಗೆ ಬಂದಾಗ; ಆತ ಅದರ ಅಂತರಂಗದ ವೇದನೆಯನರಿದೆ ಏಟು ಕೊಟ್ಟಾಗ ಕಾಲು ಮುರಿಯಿತು. ಕ್ರಮ ಕ್ರಮೇಣ ಒಡನಾಡಿಯ ಕೊರಗಿನಿಂದ ಸೊರಗಿ, ಹುಡುಗರ ಕಲ್ಲಿನೇಟಿಗೆ ಗುರಿಯಾಗಿ, ಕೊನೆಗೆ ಪೊಲೀಸ್ ಇಲಾಖೆಯ ಗುಂಡಿನೇಟಿಗೆ ತುತ್ತಾಯಿತು. ಮಾತಾಡಲರಿಯದ ಮೂಕಜೀವಿಗಳ ಹೃದಯದ ಅಳೆಯಲಾಗದ ನಿಷ್ಕಲ್ಮಶ ಪ್ರೀತಿ ಸ್ನೇಹ ಕೃತಜ್ಞತಾ ಭಾವಗಳನ್ನು ತುಂಬ ಆರ್ದ್ರವಾಗಿ ಮನಸ್ಸು ಮಿಡಿಯುವಂತೆ ಚಿತ್ರಿಸಿರುವ ಆತ್ಮಸ್ಪರ್ಶಿಕತೆಯಿದು. ಮಗನ ಮೇಲಿನ ಪ್ರೀತಿಯಿದ್ದರೂ ಮುದ್ದು ಮೇಲೆ ಮಮತೆಯಿದ್ದರೂ ಅದನ್ನು ಸಾಕಲಾರದ ದಾರಿದ್ರ್ಯದ ಅನಿವಾರ್ಯತೆಯಿಂದ ಬಿಟ್ಟು ಹೋಗುವ ರಂಗಣ್ಣದಂಪತಿಗಳ ಕರುಣಪೂರ್ಣ ಚಿತ್ರ ಕಣ್ಣು ಕಟ್ಟುತ್ತದೆ. ಮುದ್ದುವಿನ ಪ್ರತಿದಿನದ ನಡವಳಿಕೆಯನ್ನು, ಮನದಲ್ಲಿ ತುಂಬಿದ ಮಹಾಶೋಕವನ್ನು ಲೇಖಕರು ಅನ್ಯಾದೃಶ್ಯವಾಗಿ ಅಭಿವ್ಯಕ್ತಿಸಿದ್ದಾರೆ. ಸುತ್ತಲೂ ಕೃತಘ್ನತೆಯ ಕತ್ತಲೇ ತುಂಬಿದ ಈ ಲೋಕ ದಲ್ಲಿ ಇಂತಹ ಅಮರ ಪ್ರೇಮದ ಬೆಳದಿಂಗಳು ಯಾರ ಮನವನ್ನು ತಾನೇ ಮೋಹಿಸದು?

ಗೆಳೆಯನ ಮೂರ್ಖ ಹಠದ ಫಲವಾಗಿ, ಚಿಕ್ಕಂದಿನಿಂದಲೂ ನಿರಂತರವಾಗಿ ನಿರ್ಮಲವಾಗಿ ತೀವ್ರವಾಗಿ ತಾನು ಪ್ರೀತಿಸುತ್ತಿದ್ದ ಆತನ ತಂಗಿ ಬೇರೊಬ್ಬರ ಕೈ ಹಿಡಿದಾಗ, ಉಂಟಾದ ಅಸಹನೀಯ ನಿರಾಶೆಯಿಂದ ಆಕೆಯ ಗಂಡನನ್ನೇ ಕೊಲೆ ಮಾಡಿ ಸೆರೆಮನೆಗೆ ನಡೆದ ಜಟ್ಟಿಯೊಬ್ಬನ ಮನೋಯಾತನೆಯ ದುರಂತ ಕತೆ ‘ಜಟ್ಟಿಯ ಪ್ರೀತಿ’. ಅಂತ್ಯದ ತೀವ್ರತರವಾದ ಉಗ್ರವಾದ ಪರಿಣಾಮಕ್ಕೆ ಕಾರಣವಾದ ಹಿನ್ನೆಲೆಯನ್ನು ಅತ್ಯಂತ ಎಚ್ಚರಿಕೆ ಯಿಂದ ವಿವರ ವಿವರವಾಗಿ ಯಾವ ಅಸಹಜತೆಯೂ ತಲೆಯಿಕ್ಕದಂತೆ ಸರ್ವ ಸಮರ್ಥವಾಗಿ ಸೃಷ್ಟಿಸಿರುವುದರಲ್ಲಿ ಲೇಖಕರು ತುಂಬ ಯಶಸ್ವಿಯಾಗಿದ್ದಾರೆ. ಸೋಮಣ್ಣ-ಹನುಮರ ಗಳಸ್ಯ-ಕಂಠಸ್ಯ ಗೆಳೆತನ, ಅವರ ಕುಟುಂಬದ ಎಲ್ಲ ಸದಸ್ಯರಿಗೂ ಸಿಂಗಾರಿಯನ್ನೊಳಗೊಂಡು – ಅವನ ಬಗ್ಗೆ ಇದ್ದಂತಹ ಆತ್ಮೀಯ ಪ್ರೀತಿ, ಎಳೆತನದಿಂದ ಉಜ್ವಲವಾಗಿ ಬೆಳೆಸಿಕೊಂಡು ಬಂದ ಅಭಿಮಾನ ಪುರಸ್ಸರವಾದ ಅಪಾರ ಪ್ರೀತಿ, ಹಗೆತನವಾದ ಬಗೆ, ಸಿಂಗಾರಿ ಹನುಮರ ಹೃದಯ ಪ್ರೇಮ ಅರ್ಧದಲ್ಲಿ ಹೋಮವಾದ ರೀತಿ, ಅದು ತಳೆದ ಭೀಕರ ಪ್ರತೀಕಾರ ಸ್ವರೂಪ – ಒಂದೊಂದೂ ಅರ್ಥವತ್ತಾಗಿ ಜೀವಂತವಾಗಿ ಮೂಡಿಬಂದಿವೆ. ಮದುವೆ ಯಾದರೂ ಸಿಂಗಾರಿ ತನ್ನನ್ನೇ ಪ್ರೀತಿಸುವಳೆಂದು ಭಾವಿಸಿ ಆಕೆಯ ಗಂಡನನ್ನು ಕೊಲೆಗೈದಾಗ, ಆಕೆ ಅತೀವ ಕ್ರೋಧ ತಿರಸ್ಕಾರಗಳಿಂದ ನಿರಾಕರಿಸಿದಾಗ, ಬಲವಂತ ಮಾಡದೆ ಸಂಪೂರ್ಣ ನಿರಾಶನಾಗಿ ಸ್ನೇಹಿತನನ್ನು ಉಳಿಸುವ ಸಲುವಾಗಿ ರಕ್ತರಂಜಿತ ಕೊಡಲಿಯನ್ನು ಹಿಡಿದು ಪೋಲೀಸ್ ಠಾಣೆಗೆ ತಾನೇ ನಡೆಯುವ ಹನುಮನ ಧೀರೋದಾತ್ತ ವ್ಯಕ್ತಿತ್ವ ತುಂಬ ಸ್ಫುಟವಾಗಿ ಶಕ್ತಿಯುತವಾಗಿ ಸಹಜವಾಗಿ ಕಡೆಯಲ್ಪಟ್ಟಿದೆ. ಧೈರ್ಯ ಸಾಹಸಗಳನ್ನು ಮೆಚ್ಚುವ ಸಿಂಗಾರಿ, ತನ್ನ ಕೈ ಹಿಡಿದ ಗಂಡನನ್ನು ಐದಾರು ಮಂದಿ ಮೋಸದಿಂದ ಮೇಲೆ ಬಿದ್ದು ಕತ್ತರಿಸಿದಾಗ ಆಡುವ ಮಾತು ಭಾರತ ನಾರಿಯ ಆಂತರಿಕ ಸತ್ವದ ನುಡಿಗಳಾಗಿವೆ. ಉತ್ಕಟವಾದ ಪ್ರೇಮಕ್ಕೆ ಪೆಟ್ಟು ಬಿದ್ದಾಗ ಎಂತಹ ರುದ್ರ ಭೀಕರ ಪರಿಣಾಮವಾಗಬಹುದೆಂಬುದನ್ನು ರೋಮಾಂಚಕಾರೀ ರೀತಿಯಲ್ಲಿ ಧ್ವನಿಸುವ ಸಾರವತ್ತಾದ ಕತೆಯಿದು.

ನೈಜವಾದ ಪ್ರೇಮ ಬಹಿರಂಗದ ಕಣ್ಣು ಕುಕ್ಕುವ ವೇಷಭೂಷಣಗಳಿಗೆ ಮಾರು ಹೋಗುವುದಿಲ್ಲ. ಬದಲು ಮುರುಟಿ ಹೋಗುತ್ತದೆ. ಅದು ಬಯಸುವುದು ಅಂತರಂಗದ ಶುದ್ಧವಾದ ಸದ್ಗುಣ ಸದಾಚಾರ ವಿವೇಕಗಳನ್ನು – ಎಂಬುದನ್ನು ಅತ್ಯಂತ ಆಕರ್ಷಣೀಯವಾಗಿ ಬಿಡಿಸಿ ತೋರಿಸುವ ಕತೆ ‘ಆಕರ್ಷಣೆ’. ಆದರ್ಶವಾದಿಯೂ ಸರಳಹೃದಯನೂ ಪ್ರತಿಭಾ ವಂತನೂ ಕೀಳು ಅಭಿಲಾಷೆಗಳಿಗೆ ಆಳಾಗದವನೂ ಆದ ತರುಣನೊಬ್ಬ ತರುಣಿಯೊಬ್ಬಳ ಪ್ರೇಮ ಸಂಪಾದನೆಗಾಗಿ ತನ್ನ ಆದರ್ಶವನ್ನು ಗಾಳಿಗೆ ತೂರಿ ಬಣ್ಣದ ಚಿಟ್ಟೆಯಾದಾಗ, ಆತನ ನೈಜ ಹೃದಯವನ್ನು ಪ್ರೇಮಿಸುತ್ತಿದ್ದ ಆಕೆ ಎಲ್ಲರಂತೆಯೇ ಅವನೂ ಕಾಗದದ ಹೂವಾದುದಕ್ಕೆ ಮರುಕಗೊಂಡು ನಿರ್ಲಕ್ಷ್ಯ ತೋರಿದಾಗ, ತನ್ನ ಅವಿವೇಕವನ್ನು ಹಳಿದು ಕೊಂಡು ಮತ್ತೆ ಮೊದಲಿನಂತೇ ಆಗಿ ಕಡೆಗೆ ಅವಳನ್ನೇ ಪಡೆದ ಅತ್ಯಂತ ರೋಚಕವಾದ ಕತೆಯಿದು. ದಿನಚರಿಯ ತಂತ್ರದಲ್ಲಿ ತನ್ನ ಸಂಪೂರ್ಣ ಸತ್ವವನ್ನು ಅಭಿವ್ಯಕ್ತಿಸಿಕೊಂಡಿರುವ ಈ ಕತೆ ತುಂಬಾ ಚೇತೋಹಾರಿಯಾಗಿ ಕುತೂಹಲಕರವಾಗಿ ಸರ್ವಾಂಗ ಸುಸಂಬದ್ಧವಾಗಿ ಸಾರವತ್ತಾಗಿ ಬೆಳೆ ಬೆಳೆದು ಉಚಿತವಾದ ಮುಕ್ತಾಯವನ್ನು ಮುಟ್ಟಿದೆ. ಆಧುನಿಕ ತರುಣ ಜನಾಂಗದ ಮನಸ್ಸಿನ ವಿವಿಧ ಪದರಗಳನ್ನು ಇಲ್ಲಿ ಕಲಾತ್ಮಕವಾಗಿ ಅರ್ಥಪೂರ್ಣವಾಗಿ ಬಿಡಿಸಿ ತೋರಿಸಲಾಗಿದೆ. ನಮ್ಮ ಜೀವನದಲ್ಲಿ ತಲೆಹಾಕಿರುವ ಕೃತ್ರಿಮತೆ ಬೇಜವಾಬ್ದಾರಿತನ ಆದರ್ಶ ವಿಮುಖತೆ ಅಲ್ಪಾಕರ್ಷಣೆ ತೇಲುತನ ಕರ್ತವ್ಯಭ್ರಷ್ಠತೆಗಳ ತಿಳಿಯಾದ ಸೂಕ್ಷ್ಮವಾದ ಪರೋಕ್ಷವಾದ ವಿಶ್ಲೇಷಣೆಯೂ ಇಲ್ಲಿದೆ. ಸನ್ನಿವೇಶಗಳೆಲ್ಲಾ ಕಥಾಹೃದಯದಲ್ಲಿ ಸಹಜವಾಗಿ ಅರಳಿ ಬಂದಿವೆ. ಭಾಷೆ ಮೋಹಕವಾಗಿದೆ, ಅರ್ಥವತ್ತಾಗಿದೆ. ಈ ವಸ್ತುವಿನ ಹೃದಯವನ್ನು ಅನಾವರಣಗೊಳಿಸಲು ಉಪಯೋಗಿಸಿರುವ ದಿನಚರಿಯ ತಂತ್ರ ಲೇಖಕರ ಕಲಾನೈಪುಣ್ಯಕ್ಕೆ ಒಂದು ಸಜೀವ ಸಾಕ್ಷಿಯಾಗಿದೆ.

ನಮ್ಮ ನಾಡಿನ ಹಲವು ಮಕ್ಕಳ ಶಾಪಗ್ರಸ್ತ ಬಾಳಿನ ಒಂದು ದುರ್ದೈವೀ ಅಧ್ಯಾಯ ‘ಬೂಟ್ ಪಾಲಿಶ್’. ಯೌವನದ ಕಾವಿಗೆ ಬಲಿಯಾಗಿ ಮದುವೆಗೆ ಮುಂಚೆಯೇ ಹಡೆದ ಮಗುವನ್ನು ಶ್ರೀಮಂತ ತರುಣಿಯೊಬ್ಬಳು ಸಮಾಜದ ಬಾಯ್ಗಡ್ಗಕ್ಕೆ ಹೆದರಿ ತ್ಯಜಿಸಿದಾಗ, ತನ್ನ ಯಾವ ತಪ್ಪೂ ಇಲ್ಲದೆ ತಾಯಿ ತಂದೆಯ ವಾತ್ಸಲ್ಯಾಮೃತದಿಂದ ವಂಚಿತನಾದ ಅನಾಥ ಬಾಲಕನೊಬ್ಬನ ಹೃದಯ ವಿದ್ರಾವಕವಾದ ಕತೆಯಿದು. ತಾನೇ ಹೇಳಿಕೊಳ್ಳುವ ಈ ಬೂಟ್ ಪಾಲಿಶ್ ಹುಡುಗನ ಬಾಳ ಕಥನ ಎಂಥ ಮನದಲ್ಲೂ ಮರುಕ ಕರುಣೆಗಳ ತೆರೆಯೇಳಿಸುತ್ತದೆ. ಆತ್ಮೀಯತೆ ಆರ್ದ್ರತೆ, ಸೂಕ್ಷ್ಮ ಭಾವನೆಗಳ ಕಂಪನ – ಪರಿಣಾಮಕಾರಿ ಯಾಗಿ ತುಂಬಿಕೊಂಡು ಕತೆಗೆ ಅನನ್ಯ ಶಕ್ತಿದಾನ ಮಾಡಿವೆ. ತಾಯ ಹೃದಯದ ತುಡಿತ, ತಾಯ ಕರುಣೆಯ ಕಣ್ ಬೆಳಕಿಗಾಗಿ ಕಾತರಿಸುವ ಮಗನ ಮನದ ತೀವ್ರ ಮಿಡಿತ, ಪ್ರಭಾವಪೂರ್ಣವಾಗಿ ನಿರೂಪಿತವಾಗಿದೆ. ಯಾವ ಪಾತ್ರದ ಬಗೆಗೂ ಪಕ್ಷಪಾತವನ್ನಾಗಲೀ ತಿರಸ್ಕಾರವನ್ನಾಗಲೀ ತೋರಿಸದೆ ಎಲ್ಲವೂ ಸಮಾನಾದರಕ್ಕೆ ಪಾತ್ರವಾಗುವಂತೆ ಚಿತ್ರಿಸಿರು ವುದರಲ್ಲಿ ಕಲೆಗಾರಿಕೆಯಿದೆ. ಅಷ್ಟೇನೂ ಸಾಂದ್ರವಾದ ಕಥಾಸಾರವಿರದ ಈ ಕತೆಯಲ್ಲಿ ಕಂಡು ಬರುವ ಅಸಾಧಾರಣವಾದ ಸಂಯಮ ಸಮತೂಕ ಯಾವ ಲೇಖಕನಿಗೂ ಮಹತ್ವವನ್ನು ತರತಕ್ಕಂಥವುಗಳು. ಬಳಸಿರುವ ಸ್ವಗತ ತಂತ್ರ ಕತೆಗೆ ಸಂಪೂರ್ಣ ಹೊಂದಿಕೆಯಾಗಿ ಓದುಗರ ಮನ ಮಿಡಿಯುವಲ್ಲಿ ಅತ್ಯಂತ ಯಶಸ್ವಿಯಾಗಿದೆ. ಪ್ರಯೋಗಿಸಿರುವ ಮಾತು ಭಾವನೆಯ ಭಾರದಿಂದ ಬಳುಕುತ್ತದೆ.

“ನಾನು, ನನ್ನಂಥ ಬೇರೆ ಪರದೇಶಿಗಳು…. ನಮ್ಮ ಬಾಳು ಬಲು ವಿಚಿತ್ರ ಬಾಳು…. ನಾಯಿಗಳ ಬಾಳುಬೇಕು ನಮ್ಮದು ಬೇಡ. ನಾಯಿ ಕುನ್ನಿಗಳು ತಮ್ಮ ತಂದೆತಾಯಿಗಳ ಜತೆಗಾದರೂ ಇರುತ್ತವೆ. ನಮಗೆ ಆ ಯೋಗವೂ ಇಲ್ಲ. ಯಾವ ಪಾಪಕ್ಕಾಗಿ ನಮಗೆ ಈ ಶಿಕ್ಷೆ? ನಾವು ಮಾಡಿದ ಪಾಪವಾದರೂ ಏನು? ನಾವು ಬದುಕುವುದಾದರೂ ಏತಕ್ಕಾಗಿ?” – ಎಂಬ ಅನಾಥ ಬಾಲಕನ ಆಕ್ರಂದನ ನಮ್ಮ ಹೃದಯದಲ್ಲಿ ಪ್ರತಿಧ್ವನಿಸುತ್ತದೆ. ಉತ್ಪ್ರೇಕ್ಷೆಯ ಲವಲೇಶವೂ ಇಲ್ಲದ ಅತ್ಯಂತ ವಾಸ್ತವಿಕವಾದ ಸತ್ವಶಾಲಿಯಾದ ಕತೆಯಿದು. ಕಟ್ಟೀಮನಿ ಯವರ ಕಥನ ಕೌಶಲದ ಅಮೃತ ಫಲಗಳಲ್ಲಿ ಇದು ಒಂದು.

‘ಶರಣ’ ನಿಸ್ವಾರ್ಥಿಯಾದ ಪರೋಪಕಾರಿಯಾದ ಭಕ್ತನೊಬ್ಬನ ಮನ ಸೆಳೆಯುವ ಮಾನವೀಯ ಚಿತ್ರ, ‘ಕೆನ್ನೆಯ ಮೇಲಿನ ಕಲೆ’. ಕೈಹಿಡಿದ ಮಡದಿಯಿಂದ ವಂಚಿತನಾಗಿ ಹೃದಯದ ಪ್ರೇಮಕಾಸಾರವನ್ನು ಬತ್ತಿಸಿಕೊಂಡ ಮಾಸ್ತರರೊಬ್ಬರ ಕರುಣಾತ್ಮಕ ವ್ಯಕ್ತಿ ಚಿತ್ರ, ‘ಜೋಳದ ಬೆಳೆಯ ನಡುವೆ’. ‘ನಿಂತು ಹೋದ ಬಯಲಾಟ’ ಹೆಸರಿಸಬೇಕಾದ ಪರಿಣಾಮಕಾರಿಯಾದ ಕಥೆಗಳು.

ಪ್ರಗತಿಶೀಲ ಪಂಥದವರೆಂದು ನಾವು ಹಣೆ ಚೀಟಿ ಕಟ್ಟಿದ ಲೇಖಕರು ಮನ ಕಲಕುವ ಸೊಗಸಾದ ಮಹತ್ವಪೂರ್ಣ ಮಾನವೀಯ ಚಿತ್ರಗಳನ್ನೂ ಅಷ್ಟೇ ಕಲಾತ್ಮಕವಾಗಿ ಸೃಜಿಸ ಬಲ್ಲರು ಎನ್ನುವುದಕ್ಕೆ ಮೇಲಿನ ಕೆಲವು ಸಾರ್ಥಕ ಕತೆಗಳು ಸ್ಪಷ್ಟ ನಿದರ್ಶನಗಳಾಗಿವೆ. ಒಬ್ಬ ಬರಹಗಾರನ ಎಲ್ಲ ಕೃತಿಗಳಲ್ಲೂ ಒಂದೇ ರೀತಿಯಾದ ಸುಸಂಪೂರ್ಣ ಕಲಾಭಿವ್ಯಕ್ತಿ ಯನ್ನೂ ಪರಿಣಾಮವನ್ನೂ ನಾವು ನಿರೀಕ್ಷಿಸುವಂತಿಲ್ಲವಾದರೂ ಕಟ್ಟೀಮನಿಯವರ ‘ಬೂಟ್ ಪಾಲಿಶ್’, ‘ಮುದ್ದು’, ‘ಸತ್ಯವಾನ ಮರಳಿಲಿಲ್ಲ’ ಮುಂತಾದ ಸಾಂಪ್ರದಾಯಿಕ ಕತೆಗಳು ಯಾವುದೇ ಸಾಹಿತ್ಯದ ಉತ್ತಮ ಕಲಾಕೃತಿಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲವು ಎಂಬುದು ನಿಸ್ಸಂಶಯ. ಈ ಮೂಲಕ ಶ್ರೀನಿವಾಸ ಸಂಪ್ರದಾಯವನ್ನು ಪ್ರಕೃತ ಲೇಖಕರೂ ಗಣನೀಯವಾಗಿ ಮುಂದುವರಿಸಿದ್ದಾರೆಂಬುದನ್ನು ಲಕ್ಷಿಸುವುದು ಅಗತ್ಯ.

ಕನ್ನಡ ಸಣ್ಣ ಕತೆಯ ತಂತ್ರ ವೈವಿಧ್ಯಕ್ಕೂ ಕಟ್ಟೀಮನಿಯವರ ಕಾಣಿಕೆ ಕಡಿಮೆ ಪ್ರಮಾಣದ್ದಲ್ಲ. ಅವರ ಹಲವು ಕತೆಗಳು, ಅವರ ಪ್ರಯೋಗಶೀಲತೆಗೆ ತಾಂತ್ರಿಕ ದೃಷ್ಟಿಗೆ ನಿದರ್ಶನವಾಗಿವೆ. ಅಷ್ಟೇ ಅಲ್ಲತಂತ್ರಕ್ಕೂ ವಸ್ತುವಿಗೂ ಅವಿಭಿನ್ನವಾದ ರಕ್ತಮಾಂಸ ಸಂಬಂಧ ವನ್ನು ಕಲ್ಪಿಸುವುದರಲ್ಲೂ ಅವರು ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ. ‘Imagination a an ability to name a cat’ ಎಂಬ ಉಕ್ತಿಯಂತೆ ಕತೆಗೆ ಹೆಸರಿಡುವುದರಲ್ಲೂ ಅವರು ಅಸಾಧಾರಣ ಚಾತುರ್ಯವನ್ನು ಕಲೆಗಾರಿಕೆಯನ್ನು ಮೆರೆದಿದ್ದಾರೆ. ಮೊದಲನೆಯ ಸಂಕಲನದ ಮೊದಲ ಹೆಸರೇ ‘ಕಾರವಾನ್’, ಎಂತಹ ಧ್ವನಿಪೂರ್ಣವಾದ ಆಕರ್ಷಕವಾದ ಹೆಸರು! ‘ಗಿರಿಜ ಕಂಡ ಸಿನಿಮಾ’, ‘ನಿಂತುಹೋದ ಬಯಲಾಟ’, ‘ಹೊಸ ವರ್ಷದ ಹಳೆಯ ರಾತ್ರಿ’, ‘ದೀಪಾವಳಿಯ ಕತ್ತಲೆ’, ‘ಬರದ ದೇವಿ’, ‘ರಕ್ತಧ್ವಜ’, ಸೆರೆಯಿಂದ ಹೊರಗೆ’, ‘ಬಣ್ಣದ ಬುಗ್ಗೆ’, ‘ಮದ್ಯ ಹಾಗೂ ಅಮೃತ’, ‘ಬೂಟ್ ಪಾಲಿಶ್’, ‘ಸುಂಟರಗಾಳಿ’, ‘ಜೋಳದ ಬೆಳೆಯ ನಡುವೆ’ ಇತ್ಯಾದಿ ಹೆಸರುಗಳು ಆ ಕತೆಯ ಹಿನ್ನೆಲೆಯಲ್ಲಿ ನೋಡುವಾಗ ಅತ್ಯುಚಿತ, ಅರ್ಥಪೂರ್ಣ ಎಂದು ಕಾಣದಿರದು. ಅವರ ಕೆಲವು ಕತೆಗಳ ಆದಿ ಅಂತ್ಯಗಳಂತೂ ಅಪಾರ ಕಲಾಕೌಶಲದಿಂದ ಕೂಡಿವೆ. ಪ್ರಾರಂಭದ ಪಂಕ್ತಿಯನ್ನು ಓದಿದ ಕೂಡಲೇ ತಮ್ಮ ಕಥಾ ಗರ್ಭಕ್ಕೆ ಓದುಗನನ್ನು ಸೆಳೆದೊಯ್ಯುವಂತಹ ಮಾಂತ್ರಿಕತೆ ಮನೆ ಮಾಡಿದೆ ಅಲ್ಲಿ.

“ನಿಂತಿತ್ತು, ಅಲ್ಲೇ ನಿಂತ ಹಾಗೆಯೇ :

– ಹರಿದು ಹೋಗುತ್ತಿರಲಿಲ್ಲ”.

‘ಹೊಸ ವರ್ಷದ ಹಳೇ ರಾತ್ರಿ’ಯ ಕುತೂಹಲಜನಕ ಆರಂಭವಿದು.

“ತನ್ನ ಎದೆಯ ಮೇಲೊರಗಿದ್ದ ಶಾರದೆಯ ಕೈಯನ್ನು ಮೆಲ್ಲನೆ ಎತ್ತಿ ಬದಿಗೆ ಸರಿಸಿ ಚಂದ್ರಣ್ಣ ಪಕ್ಕಕ್ಕೆ ತಿರುಗಿದ. ಹಾಳು ನಿದ್ರೆಯೇ ಬರಲೊಲ್ಲದು ಅಂದು! ದಿನವೂ ಕಾರ್ಖಾನೆಯಿಂದ ಬಂದೊಡನೆ ವೈರಿಯಂತೆ ದಾಳಿ ಮಾಡುತ್ತಿದ್ದ ಆ ರಾಕ್ಷಸಿ ಇಂದು ಅದೆಲ್ಲಿಗೆ ಓಡಿ ಹೋಗಿದ್ದಳೋ!

(ದೀಪಾವಳಿಯ ಕತ್ತಲೆ) ಅಂದು ಬೆಳಗಿನಲ್ಲಿ ವಸಂತನನ್ನು ಎಚ್ಚರಿಸಿದುದು ಮುದ್ದುವಿನ ಉದಯ ರಾಗ

‘ದೇವರಾಣೆ ಮಾಡಿ…..’

‘ದೇವರಾಣೆ ಮಾಡಿ…..’

‘ಸತ್ಯ ಹೇಳುತೀನಿ…..’

‘ಸತ್ತ ಹೇಳುತೀನಿ…..’

‘ಸತ್ತ ಅಲ್ಲೋ ಹುಂಬಾ! ಸತ್ಯ…..ಸತ್ಯ ಅಂದರೆ ಖರೆ….” (ದೇವರಾಣೆ ಮಾಡಿ)

– ಸುಳ್ಳು ಹೇಳುವ ಕಾರ್ಯಕ್ಕೆ ಪ್ರೇರೇಪಿಸುತ್ತಿರುವ ವಕೀಲರು ಕಕ್ಷಿಗೆ ಹೇಳುವ ಮಾತಿದು.

“ಬಸವಣ್ಣನ ಗುಡಿಯ ಮುಂದೆ ಕುಳಿತು ಬಿಸಿಲು ಕಾಯಿಸುತ್ತಿದ್ದ ಬಸವಂತಪ್ಪ ಕತ್ತು ಕೊಡಹಿದ, ಆರಿಹೋಗಿದ್ದ ಬೀಡಿಯ ತುಣುಕನ್ನು ಅಂಗಳಕ್ಕೆಸೆದ, ಒಂದು ಬಾರಿ ಖ್ಯಾಕರಿಸಿ ಕೆಮ್ಮೆ ಉಗುಳಿದ, ಮೂಗಿನ ಹತ್ತಿರ ಹಾರಾಡುತ್ತಿದ್ದ ನೊಣವನ್ನು ಹೊಡೆದು ಓಡಿಸಿದ….” (ಅಪ್ಪ ತಂದ ಔಷಧಿ)

ರಾಗವಾಗಿ ಗಿರಿಜ “ರೀ” ಅಂದರೆ ಸಾಕು, ಏನೋ ಬಂತು ಪೀಕಲಾಟ ಎಂದು ಗೊತ್ತು ಸಿದ್ಧರಾಮನಿಗೆ. ಮನಸ್ಸಿಲ್ಲದಿದ್ದರೂ ಅವಳ ಕಡೆ ಕಣ್ಣು ಹೊರಳಿಸುತ್ತಾನೆ.

“ಹಲೋ”

“…………”

“ಹಲ್ಲೋ ಹಲ್ಲೋ”

“…………”

ಹಲ್ಲೋ! ಓಯ್! ಯಲ್ಲೋ!!

“………….”

“ಏಳೋ ಮೇಲಕ್ಕೆ! ಕೂತುಕೊಂಡು ಬಿಟ್ಟಿದ್ದಾನೆ ಮನ್ಮಥನ ಹಾಗೆ” (ಉಪ ಸಂಪಾದಕನ ಕುರ್ಚಿ)

“ತೆಳ್ಳಗಿನ ಚಪಲ ಶರೀರ. ಮೇಕೆಯಂಥ ಗಡ್ಡ ಮೀಸೆ. ಬೆಕ್ಕಿನಂಥ ಕಣ್ಣು”.

“ಗೌರವರ್ಣ……” (ಶರಣ)

“ಕೃಷ್ಣ ಪಕ್ಷದ ಕಾಳ ರಾತ್ರಿ. ಆಕಾಶದಲ್ಲಿ ಮಿನುಗುತ್ತಿದ್ದ ನಕ್ಷತ್ರಗಳ ಮಂದ ಬೆಳಕಿನಲ್ಲಿ ದೀರ್ಘಾಕೃತಿಯ ಮಹಾಸರ್ಪಗಳಂತೆ ಹೊಳೆಯುತ್ತಿದ್ದ ರೈಲು ದಾರಿ. ಸುತ್ತಲೂ ಜಿಂಯ್ ಜೀರೋ ಎಂದು ಊಳಿಡುತ್ತಿದ್ದ ಇರುಳ ಕೀಟಗಳು…..” (ರೈಲು ದಾರಿಯ ರಕ್ಷಕ)

ಹೀಗೆ ಪ್ರತಿ ಕತೆಯೂ ಒಂದೊಂದು ರೀತಿಯಾಗಿ ಕುತೂಹಲಾಸಕ್ತಿಗೆ ಆಹ್ವಾನವಾಗಿ ಆರಂಭವಾಗುತ್ತದೆ. ಈ ಕಲೆ ಎಲ್ಲರಿಗೂ ಸಿದ್ದಿಸುವುದಿಲ್ಲ. ಪತ್ರ ತಂತ್ರ, ದಿನಚರಿ ತಂತ್ರ, ವರ್ಣನಾತಂತ್ರ, ವೃತ್ತಾಂತ ತಂತ್ರ, ರೂಪಕ ತಂತ್ರ, ಸ್ವಗತ ತಂತ್ರ, ಸಂಭಾಷಣಾ ತಂತ್ರ – ಹೀಗೆ ಹಲವು ಹತ್ತು ಬಗೆಯ ತಂತ್ರಗಳನ್ನು ಅವರು ಬಳಸಿಕೊಂಡಿದ್ದಾರೆ. ಆ ತಂತ್ರಗಳೆಲ್ಲವನ್ನೂ ಕತೆಯ ಅಚ್ಚುಕಟ್ಟುತನಕ್ಕೆ ಪರಿಣಾಮ ರಮಣೀಯತೆಗೆ ಅರ್ಥವ್ಯಕ್ತಿಗೆ ಕಲಾತ್ಮಕತೆಗೆ ತಕ್ಕಂತೆ ಕೌಶಲಪೂರ್ಣವಾಗಿ ಉಚಿತವರಿತು ಉಪಯೋಗಿಸಿಕೊಂಡಿ ರುವುದರಲ್ಲಿ ಅವರ ಹೆಚ್ಚುಗಾರಿಕೆಯಿದೆ. ಯಾವ ತಂತ್ರದ ಮೂಲೋದ್ದೇಶವೂ ಇದೇ ತಾನೆ?