ಆಧುನಿಕ ಕನ್ನಡ ಸಾಹಿತ್ಯದ ಆರಂಭೋತ್ಸವದಲ್ಲಿ ಪೌರೋಹಿತ್ಯವನ್ನು ವಹಿಸಿದ ಕೀರ್ತಿ ಬಹುಮಟ್ಟಿಗೆ ಭಾವಗೀತೆ ಮತ್ತು ಸಣ್ಣಕತೆಗಳದೆಂದೇ ಹೇಳಬೇಕು. ಕಾಲಮಾನದಲ್ಲಿ ಮಾತ್ರವಲ್ಲ, ಸತ್ವದಲ್ಲೂ ಸ್ವರೂಪದಲ್ಲೂ ಅವುಗಳಲ್ಲಿ ಕೆಲಮಟ್ಟಿನ ಸಾಮ್ಯವುಂಟು. ಭಾವಸಾಂದ್ರತೆಯಲ್ಲಿ ಅರ್ಥವ್ಯಾಪ್ತಿಯಲ್ಲಿ ಧ್ವನಿ ಪ್ರಾಚುರ್ಯದಲ್ಲಿ ಭಾಷಾ ಪ್ರಯೋಗದಲ್ಲಿ ಹಿತವೂ ಮಿತವೂ ಚೂಪೂ ಆದ ಮಾತುಗಾರಿಕೆಯಲ್ಲಿ ಸಂಕೇತ ಪ್ರತಿಮೆಗಳ ಬಳಕೆಯಲ್ಲಿ ವಸ್ತುವಿಗನುಗುಣವಾದ ಸಂಕ್ಷಿಪ್ತತೆಯಲ್ಲಿ ಇವು ಒಂದನ್ನೊಂದು ಹೋಲುತ್ತವೆ. ಅಲ್ಪದಲ್ಲಿ ಕಲ್ಪವನ್ನು ಕೆತ್ತುವ, ಅತಿ ಕ್ಷಿಪ್ರದಲ್ಲಿ ಅತ್ಯದ್ಭುತ ಪರಿಣಾಮವನ್ನು ಮೂಡಿಸುವ ಕಲಾ ಕೌಶಲದ ಈ ಸಣ್ಣ ಕಥಾ ಪ್ರಕಾರ ಕನ್ನಡದಲ್ಲಿ ತುಂಬ ಸಮಾಧಾನವನ್ನೂ ಹೆಮ್ಮೆಯನ್ನೂ ತರುವಂಥದಾಗಿದೆ. ನಮ್ಮ ಪ್ರಸಿದ್ಧ ಲೇಖಕರಲ್ಲಿ ಬಹುಮಂದಿ ಆರಂಭದಲ್ಲಿ ಕತೆಗಾರ ರಾಗಿಯೇ ಸಾಹಿತ್ಯಲೋಕವನ್ನು ಪ್ರವೇಶಿಸಿದ್ದು ಒಂದು ವಿಶಿಷ್ಟವಾದ ಸಂಗತಿಯಾಗಿದೆ. ಆದರೆ ಶ್ರೀನಿವಾಸರಂತೆ ಯಾರೂ ಸಣ್ಣಕತೆಯನ್ನು ತಮ್ಮ ಅಭಿವ್ಯಕ್ತಿಯ ಅತ್ಯಂತ ಪ್ರಮುಖ ಹಾಗೂ ಪ್ರಬಲ ಮಾಧ್ಯಮವನ್ನಾಗಿ ಮಾಡಿಕೊಳ್ಳಲಿಲ್ಲ. ಸಣ್ಣಕತೆಯ ಮೆಟ್ಟಿಲಿನಿಂದ ಕಾದಂಬರಿ, ನಾಟಕ ಹಾಗೂ ಕಾವ್ಯ ಕ್ಷೇತ್ರಗಳಿಗೆ ಅವರು ಜಿಗಿದರು. ಶ್ರೀನಿವಾಸರೂ ಇದಕ್ಕೆ ಹೊರತಾಗಲಿಲ್ಲವಾದರೂ ಅವರು ರಚಿಸಿದ ಯಾವ ಪ್ರಕಾರದಲ್ಲೂ ಹುಟ್ಟು ಕತೆಗಾರ ಶ್ರೀನಿವಾಸರನ್ನು ಸ್ಪಷ್ಟವಾಗಿ ಗುರುತಿಸಬಹುದು. ಕಳೆದ ದಶಕದಲ್ಲಿ ಬೆಳಕಿಗೆ ಬಂದ ಯುವ ಪೀಳಿಗೆ ಈ ಪ್ರಕಾರವನ್ನು ಮತ್ತಷ್ಟು ಜೀವಂತವಾಗಿ ವಿಶಿಷ್ಟವಾಗಿ ಮುಂದುವರಿಸಿಕೊಂಡು ಬಂದಿದೆ.

ಜೀವನ ದರ್ಶನದಲ್ಲಿ ನಿರೂಪಣಾ ವಿಧಾನದಲ್ಲಿ ತಂತ್ರ ವೈವಿಧ್ಯದಲ್ಲಿ ಮತ್ತು ಭಾಷೆಯ ಬಳಕೆಯಲ್ಲಿ ಮೂರು ಸ್ವಷ್ಟವಾದ ಮಜಲುಗಳನ್ನು ಕನ್ನಡದ ಸಣ್ಣ ಕಥಾ ಪ್ರಕಾರದಲ್ಲಿ ಗುರುತಿಸಬಹುದಾಗಿದೆ. ಸರಳವೂ ಸಹಜವೂ ಸುಂದರವೂ ನೇರವೂ ಮಾನವೀಯವೂ ಆದ ಶ್ರೀನಿವಾಸರ “ಸಾಂಪ್ರದಾಯಿಕ” ಮಾರ್ಗ; ಮಾರ್ಕ್ಸ್ ಲೆನಿನ್ನರ ಸಾಮ್ಯವಾದದ ಪ್ರಭಾವದಿಂದ ಮತ್ತು ಸಮಕಾಲೀನ ಸಮಾಜದ ಆರ್ಥಿಕ ರಾಜಕೀಯ ಅವ್ಯವಸ್ಥೆಯ ದಾರುಣತೆಯ ಪ್ರಚೋದನೆಯಿಂದಾವಿರ‍್ಭಿವಿಸಿದ ಆವೇಶಪೂರ್ಣವೂ ಸುಧಾರಣಾತ್ಮಕವೂ ಸಮಸ್ಯಾ ಪ್ರಧಾನವೂ ಸಂವಾದಶೋಭಿತವೂ ಪ್ರತಿಕ್ರಿಯಾಶೀಲವೂ ಆತಿಶಯೋಕ್ತಿ ರಂಜಿತವೂ-ಆದ ಪ್ರಚಾರ ಮಾರ್ಗ; ಪಾತ್ರ ಪ್ರಧಾನವೂ ಮನೋವೈಜ್ಞಾನಿಕವೂ ಪ್ರತೀಕಾತ್ಮಕವೂ ಸಂಕೀರ್ಣವೂ ಪ್ರಯೋಗಶೀಲವೂ ವೈಚಾರಿಕವೂ ಪ್ರಜ್ಞಾಪೂರ್ವಕವೂ ಆದ ‘ನವ್ಯ ಮಾರ್ಗ’. ಮೊದಲನೆಯ ಮಾರ್ಗದಲ್ಲಿ ಶ್ರೀನಿವಾಸ, ಆನಂದ, ಆನಂದಕಂದ, ಕುವೆಂಪು, ಶ್ರೀಪತಿ, ಅಶ್ವತ್ಥ, ಗೋಪಾಲ ಕೃಷ್ಣರಾಯ ಮುಂತಾದವರೂ, ಎರಡನೆಯ ಮಾರ್ಗದಲ್ಲಿ ಅ.ನ.ಕೃ., ತ.ರಾ.ಸು., ನಿರಂಜನ, ಕಟ್ಟೀಮನಿ, ಚದುರಂಗ, ಅನಂತನಾರಾಯಣ ಮುಂತಾದವರೂ, ಮೂರನೆಯ ಮಾರ್ಗದಲ್ಲಿ ಯು.ಆರ್. ಅನಂತಮೂರ್ತಿ, ರಾಮಚಂದ್ರ ಶರ್ಮ, ಶಾಂತಿನಾಥದೇಸಾಯಿ, ಲಂಕೇಶ, ಸದಾಶಿವ ಮುಂತಾದವರೂ ಹೆಸರಿಸತಕ್ಕ ಸಾಧನೆಯನ್ನು ಮಾಡಿದವರಾಗಿದ್ದಾರೆ. ಎರಡನೆಯ ಪಂಥದ ಕೆಲವರು ಮೂರು ಮಾರ್ಗ ಗಳಲ್ಲೂ ಕಥಾರಚನೆ ಮಾಡಿರುವುದುಂಟು.

ಪ್ರಗತಿಶೀಲ ಪಂಥದ ಅಗ್ರಗಣ್ಯ ಕತೆಗಾರರಲ್ಲಿ ಕಟ್ಟೀಮನಿಯವರು ಒಬ್ಬರು. ೧೯೪೫ರಲ್ಲಿ ಪ್ರಥಮ ಬಾರಿಗೆ ಪ್ರಕಟವಾದ ‘ಕಾರ್‌ವಾನ್’ ಸಂಕಲನದಿಂದ ಹಿಡಿದು ೧೯೬೬ರಲ್ಲಿ ಪ್ರಕಟವಾದ ‘ಸೈನಿಕನ ಹೆಂಡತಿ’ ಸಂಕಲನದವರೆಗೆ ಒಂಬತ್ತು ಕಥಾ ಸಂಗ್ರಹಗಳನ್ನು ಕಟ್ಟೀಮನಿಯವರು ಬೆಳಕಿಗೆ ತಂದಿದ್ದಾರೆ. ಇವುಗಳಲ್ಲಿ ಎಂಟು-ಕಾರವಾನ್, ಗುಲಾಬಿ ಹೂ, ಆಗಸ್ಟ್ ಒಂಬತ್ತು, ಸೆರೆಯಿಂದ ಹೊರಗೆ, ಜೋಳದ ಬೆಳೆಯ ನಡುವೆ, ಸುಂಟರಗಾಳಿ, ಹುಲಿಯಣ್ಣನ ಮಗಳು ಮತ್ತು ಸೈನಿಕನ ಹೆಂಡತಿ – ಮೂಲಕಥಾ ಸಂಗ್ರಹಗಳು; ಮತ್ತೊಂದು – ಜೀವನ ಕಲೆ – ಅವರ ಪ್ರಾತಿನಿಧಿಕ ಕತೆಗಳ ಸಂಕಲನ. ಇವೆಲ್ಲವುಗಳಿಂದ ಸುಮಾರು ಅರವತ್ತೈದು ಕತೆಗಳು ಕಟ್ಟೀಮನಿಯವರ ಸಮೃದ್ಧ ಲೇಖನಿಯಿಂದ ಹರಿದು ಬಂದಿವೆ. ಈ ಸಂಖ್ಯಾ ಬಾಹುಳ್ಯ ಯಾವ ಲೇಖಕನಿಗಾದರೂ ಗೌರವ ತರುವ ಸಂಗತಿಯೇ.

ಕಟ್ಟೀಮನಿಯವರ ಈ ಎಲ್ಲಾ ಕತೆಗಳ ಮೂಲದ್ರವ್ಯ ಸಾಂದ್ರವಾದ ವೈವಿಧ್ಯಮುಖಿಯಾದ ಅದ್ಭುತ ಜೀವನಾನುಭವ, ತೀಕ್ಷ್ಣವಾದ ಅಂತಃಕರಣಪೂರ್ವಕವಾದ ಒಳನೋಟ; ಕೊಳೆತ ಸಂಪ್ರದಾಯಕ್ಕೆ ಸಲಾಮು ಹಾಕದ ಹಳತನ್ನು ತ್ಯಜಿಸಿ ಹೊಸತನ್ನು ಸೃಜಿಸುವ ಅವ್ಯವಸ್ಥೆಯನ್ನು ಅಳಿಸುವ ಆವೇಶಪೂರ್ಣವಾದ ಆದರೆ ಪ್ರಾಮಾಣಿಕವಾದ ಸುಧಾರಣೆಯ ಧೀರಮನೋಭಾವ; ತೀವ್ರವಾದ ಸಮಕಾಲೀನ ಪ್ರಜ್ಞೆ. ಇದಕ್ಕನುಗುಣವಾಗಿ ಮತ್ತು ವಿಮರ್ಶೆಯ ಸೌಕರ್ಯಕ್ಕಾಗಿ ಅವರ ಕತೆಗಳನ್ನು ದೇಶ ಪ್ರೇಮದ ಕತೆಗಳು, ಪ್ರಗತಿಶೀಲ ಕತೆಗಳು ಮತ್ತು ಮಾನವೀಯ ಕತೆಗಳು ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು. ಆದರೆ ಇವು ಒಂದಕ್ಕೊಂದು ಸ್ವಲ್ಪವೂ ಸಂಬಂಧವೇ ಇಲ್ಲದ ತೀರ ಬೇರೆಯಾದ ಖಚಿತವಾದ ವಿಭಾಗಗಳೆಂದು ಭಾವಿಸುವಂತಿಲ್ಲವೆಂಬುದನ್ನು ಮರೆಯಬಾರದು.

ಗಾಂಧಿಸೂರ್ಯನ ತೇಜಃಪುಂಜ ನೇತೃತ್ವದಲ್ಲಿ ಮುನ್ನಡಿಯಿರಿಸಿದ ಸ್ವಾತಂತ್ರ್ಯ ಚಳುವಳಿಯ ಚೈತನ್ಯವಾಹಿನಿ ಶತ ಶತಮಾನಗಳಿಂದ ಜಡ ದಾಸ್ಯದಲ್ಲಿ ಮೈಮರೆತು ಮಲಗಿದ್ದ ಭಾರತೀಯರ ಹೃದಯದಲ್ಲಿ ಅದ್ಭುತವೂ ಅಪೂರ್ವವೂ ಆದ ದೇಶಪ್ರೇಮದ ಮಹಾಬೆಳಕನ್ನು ಮೂಡಿಸಿತು. ದೇಶದ ಉದ್ದಗಲವೂ ಮೈಮುರಿದು ಕಣ್ತೆರೆದು ಕಾತರಿಸಿ ನಿಂತಿತು. ಸ್ಫರ್ಶಮಣಿಯ ಸಂಪರ್ಕದಿಂದ ಕೀಳು ಲೋಹವೂ ಹೊನ್ನಾಗುವಂತೆ ಬಡವ ಬಲ್ಲಿದರು ಅಜ್ಞಾನಿ ಸುಜ್ಞಾನಿಗಳು ಯುವಕ – ಮುದುಕರು, ಕಾರ್ಮಿಕ – ಕಲಾವಿದರು. ಹೆಣ್ಣು-ಗಂಡುಗಳು ತರತಮ ಭಾವವನ್ನು ಮರೆತು ಕ್ಷುದ್ರ ಸ್ವಾರ್ಥವನ್ನು ಬದಿಗೊತ್ತಿ ದೇಶ ವಿಮೋಚನಾ ದೀಕ್ಷಾ ಬದ್ಧರಾದರು. ಆ ಗಳಿಗೆಯಲ್ಲಿ ಕಣ ಕಡಲಾಯಿತು, ಕಿಡಿ ಸಿಡಿಲಾಯಿತು, ಕಡ್ಡಿ ಗುಡ್ಡವಾಯಿತು. ಅವರು ಮೆರೆದ ತ್ಯಾಗ ಸಹನೆ ಶೌರ್ಯ ಸತತ ಸ್ಫೂರ್ತಿಯ ಸೆಲೆಯಾಗಿ ಜನಮನದಲ್ಲಿ ನೆಲೆಯಾಗಿ ನಿಂತಿತು. ಕವಿ ಕಲಾವಿದರಿಗೆ ಬತ್ತದ ಮೂಲವಾಯಿತು. ಲೇಖಕ ಕಟ್ಟೀಮನಿಯವರು ಸ್ವತಃ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರು. ಅದರ ಸಿಹಿ ಕಹಿಗಳನ್ನು ಕಂಡುಂಡವರು, ಅನುಭವದ ಸಂಪತ್ತನ್ನು ಸಂವರ್ಧಿಸಿಕೊಂಡವರು. ಆ ಚಳುವಳಿ ಯಲ್ಲಿ ಪ್ರಾಣಾರ್ಪಣೆ ಮಾಡಿದ ಪುಣ್ಮಾತ್ಮರ ಸ್ಮರಣೆ ಹಿಂದಿನವರಿಗೆ ಕೀರ್ತಿ, ಮುಂದಿನವರಿಗೆ ಸ್ಫೂರ್ತಿ. ‘ಎಂತಲೇ ಆ ವೀರ ಜೀವನಗಳನ್ನು ಸಾಹಿತ್ಯದಲ್ಲಾದರೂ ಸಾಧ್ಯವಾದಷ್ಟು ಮಟ್ಟಿಗೆ ಶಾಶ್ವತಗೊಳಿಸಲು’ ಲೇಖಕರು ಮಾಡಿದ ಸ್ತುತ್ಯ ಪ್ರಯತ್ನವೇ ಅವರ ದೇಶ ಪ್ರೇಮದ ಕತೆಗಳ ಗೊಂಚಲು.

೧೯೪೭ರಲ್ಲಿ ಪ್ರಕಟವಾದ ‘ಆಗಸ್ಟ್ ಒಂಬತ್ತು’ ಸಂಕಲನದ ಏಳು ಕತೆಗಳೂ ೧೯೪೨ರ ಆಗಸ್ಟ್ ಚಳುವಳಿಯ ರೋಮಾಂಚಕಾರಿ ಹಿನ್ನೆಲೆಯನ್ನು ಪಡೆದಂಥವುಗಳು. ಆದರೂ ಇವು ಒಂದೊಂದೂ ಸ್ವತಂತ್ರ ಪರಿಣಾಮವನ್ನುಳ್ಳ ವಿಶಿಷ್ಟ ಚಿತ್ರಗಳು. ಜೀವಂತಿಕೆ, ಉತ್ಕಟತೆ, ಸಚಿತ್ರತೆ, ಉತ್ಸಾಹ ಮತ್ತು ಕಾವು ಇವುಗಳ ಜೀವಾಳ.

ಪತಿ ಸ್ವಾತಂತ್ರ್ಯ ಸಮರಾಂಗಣಕ್ಕೆ ತೆರಳಿ ಕಾರಾಗಾರದಲ್ಲಿ ಬಂಧಿತನಾಗಿದ್ದ ವೇಳೆ ವಿರಹ ವೇದನೆ, ಏಕಾಕಿತನ, ಕಿತ್ತು ತಿನ್ನುವ ದಾರಿದ್ರ್ಯ, ಅಸಹಾಯಕತೆ, ಕಾಮುಕರ ಕೂರ್ನೋಟಗಳಿಗೆ ನೊಂದು ಬೆಂದು ಬವಣೆಪಟ್ಟರೂ ತನ್ನ ಶೀಲವನ್ನು ಬಲಿಗೊಡದೆ, ಪತಿಯ ಪವಿತ್ರ ದೇಶ ಪ್ರೇಮದ ಹಾಗೂ ತನ್ನ ಕರುಳಿನ ಕುಡಿಯ ಎಳೆ ಹೃದಯದಲ್ಲೂ ಹೊತ್ತಿ ಉರಿಯುತ್ತಿದ್ದ ಸ್ವಾಭಿಮಾನ ಸ್ವಾತಂತ್ರ್ಯಾಕಾಂಕ್ಷೆಗಳ ಪ್ರಭಾವದಿಂದ ಶುದ್ಧ ಭಾರತನಾರಿಯಾಗಿಯೇ ಉಳಿದ ಸಾಧ್ವಿಯೊಬ್ಬಳ ಕರುಳು ಮಿಡಿಯುವ ಕತೆ ‘ಆಗಸ್ಟ್ ಒಂಬತ್ತು’, ‘ಚಿಟಲ್ ಚಿಟಲ್ ಎಂದು ಸಿಡಿಯುವ ತಲೆ, ಉರಿಯುವ ಕಣ್ಣುಗಳು, ಬಿಸಿ ಬಿಸಿ ಉಸಿರು, ಮಳೆಗಾಲದ ರಾತ್ರಿಯಾದರೂ ಸಹಿಸಲಾಗದಂಥ ಸೆಕೆ’ ಮುಂತಾಗಿ ಕತೆಯ ಆರಂಭ;

ಬೀಳಲಿ ಮೈ ನೆತ್ತರು ಕಾರಿ
ಹೋದರೆ ಹೋಗಲಿ ತಲೆ ಹಾರಿ
ತಾಯ್ನಾಡಿನ ಮೇಲ್ಮೈಗೆ ಹೋರಿ
ಸ್ವಾತಂತ್ರ್ಯದ ಸ್ವರ್ಗಕ್ಕೆ ಏರಿ

ಎಂಬ ಅಂತ್ಯ ತುಂಬ ಸಾಂಕೇತಿಕವಾಗಿ ಸಮುಚಿತವಾಗಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಆದಿಯ ವರ್ಣನೆ ಕಥಾನಾಯಕಿಯ ಹೃದಯದ ಸಂಘರ್ಷಕ್ಕೆ ಸಾಕ್ಷಿಯಾದರೆ ಅಂತ್ಯ ಮಿಕ್ಕೆಲ್ಲ ಸಾಮಾನ್ಯ ಭಾವನೆಗಳನ್ನೂ ಮೆಟ್ಟಿನಿಂತು ವಿಜೃಂಭಿಸಿದ ತೀವ್ರವಾದ ತಾಯ್ನಾಡ ಪ್ರೇಮವನ್ನು ಸಶಕ್ತವಾಗಿ ಅಭಿವ್ಯಕ್ತಿಸುತ್ತದೆ. ಜಯಳು ಅನುಭವಿಸುವ ಬಡತನ ನಾಡಿನ ಕೋಟಿ ಕೋಟಿ ಜನರ ಸಂಕಷ್ಟದ ಸಹಜ ಸಂಕೇತವಾಗಿದೆ. ಶೀಲ-ಅಶ್ಲೀಲ, ಆದರ್ಶ-ವಾಸ್ತವತೆಗಳ ನಡುವೆ ಅವಳ ಮನಸ್ಸಿನಲ್ಲಿ ನಡೆಯುವ ಹೋರಾಟದ ಅಭಿವ್ಯಕ್ತಿ ಶಕ್ತಿಯುತ ವಾಗಿದೆ. ನಿರಾಶೆಯ ಕತ್ತಲು ಕವಿಯುವಾಗ ಮಗ ಚಂದ್ರಶೇಖರನ “ವಂದೇ ಮಾತರಂ” ಎಂಬ ಕನವರಿಕೆ ಆಸೆಯ ಪ್ರೀತಿಯ ಬೆಳದಿಂಗಳನ್ನು ತುಂಬುತ್ತದೆ. ಜಯಾ ಕ್ಷಣ ಕ್ಷಣವೂ ಇಣುಕಿ ಹಾಕುವ ಮನೋ ದೌರ್ಬಲ್ಯವನ್ನು ಕೊನೆಗೂ ಜಯಿಸುತ್ತಾಳೆ. ಅವಳ ಹೆಸರು ಎಷ್ಟು ಸಾರ್ಥಕವಾಗಿದೆ! ಕತೆಯ ಮೊದಲಿನಿಂದ ಕೊನೆಯವರೆಗೂ ವೇಗ ಆವೇಗ ಕಾವು ತುಂಬಿ ನಿಶ್ಚಿತ ಗುರಿಯನ್ನು ಸಮರ್ಪಕವಾಗಿ ಮುಟ್ಟುತ್ತದೆ. ಆದರೂ ಮಧ್ಯೆ ಮಧ್ಯೆ ಪ್ರಗತಿಶೀಲ ಧೋರಣೆಯ ಘೋಷಣೆ ಮೊಳಗುತ್ತಲೇ ಇದೆ. ದೀನ ದಲಿತರ ಬಗ್ಗೆ ನಿಸ್ಸಹಾಯಕರ ಬಗ್ಗೆ ಲೇಖಕರಿಗಿರುವ ಪ್ರಾಮಾಣಿಕವಾದ ತೀವ್ರ ಕಳಕಳಿಯೇ ಇದರ ಮೂಲ.

ಉತ್ತರ ಭಾರತದಲ್ಲಿ ನಡೆದ ಸಹಜ ಘಟನೆಯೊಂದರ ಆಧಾರದ ಮೇಲೆ ರಚಿತವಾದ ರುದ್ರ ರಮ್ಯ ಕತೆ “ರಕ್ತಧ್ವಜ”. ಅತ್ಯಂತ ಚಿಕ್ಕ ಪರಿಮಿತಿಯಲ್ಲಿ ಅದ್ಭುತ ಅನುಭವವೊಂದನ್ನು ತಂದುಕೊಡುವ ಮೈನವಿರೇಳಿಸುವ ಸತ್ವಶಾಲಿ ಕತೆಯಿದು. ಹತ್ತು ವರ್ಷದ ಹಸುಳೆಯೊಬ್ಬ ಕೋರ್ಟಿನ ಗೋಪುರದ ಮೇಲೆ ತ್ರಿವರ್ಣ ಧ್ವಜರೋಹಣ ಮಾಡಲು ಹೋಗಿ ನಿರ್ಭೀತಿ ಯಿಂದ ಪೋಲಿಸರ ಗುಂಡಿಗೆ ಗುಂಡಿಗೆಯೊಡ್ಡಿದ ವೀರ ವೃತ್ತಾಂತ ಇದರ ವಸ್ತು. ಕತೆಯ ಸಾಲು ಸಾಲಿನಲ್ಲೂ ಸ್ವದೇಶಾಭಿಮಾನ ಸ್ವಾತಂತ್ರ್ಯಪ್ರೇಮ ಸಾಹಸ ಛಲ ಕಲಿತನ ಆಶ್ಚರ್ಯಕರ ರೀತಿಯಲ್ಲಿ ಹರಳುಗೊಂಡು ಉಜ್ವಲ ಪರಿಣಾಮವನ್ನುಂಟುಮಾಡುತ್ತವೆ. ಕತೆ ಅನಾವಶ್ಯಕ ವಾಗಿ ಅತ್ತಿತ್ತ ಹರಿಯದೆ ಏಕಮುಖವಾಗಿರುವುದು, ಯಾವ “ಇಸಂ”ನ ಘೋಷಣೆಯೂ ತಲೆ ಹಾಕದಿರುವುದು, ರಸ ಪೋಷಕವಾದ ಉಚಿತ ಸಮರ್ಥ ಮಾತುಗಳನ್ನು ಬಳಸಿರುವುದು ಇದರ ಅಪೂರ್ವ ಯಶಸ್ಸಿಗೆ ಕಾರಣವಾಗಿದೆ. ಬಾಲವೀರ ಕಿಸನ್ನನ ಅಪ್ರತಿಮ ಧೈರ್ಯ, ಉತ್ಸಾಹ, ನಿಷ್ಠೆಯ ನುಡಿಗಳ ಚಿತ್ರಣ ಮರೆಯಲಾರದಂಥದು. ಕಿಸನ್ನನ ವೃದ್ಧ ತಂದೆಯ ಪಿತೃವಾತ್ಸಲ್ಯ ಮತ್ತು ನಾಡಪ್ರೇಮಗಳ ನಡುವಣ ಮನ ಸೆಳೆಯುವ ಘರ್ಷಣೆ ಕೆಲವೇ ಮಾತುಗಳಲ್ಲಿ ತುಂಬ ಸಾರ್ಥಕವಾಗಿ ಪ್ರತಿಬಿಂಬಿತವಾಗಿದೆ. “ಮುಗಿಲಿನಿಂದ ಉರುಳುವ ಚಿಕ್ಕೆಯಂತೆ ಗೋಪುರದಿಂದ ಕೆಳಕ್ಕುರುಳಿತು ಆ ಎಳೆ ಶರೀರ. ಧ್ವಜ ಮಾತ್ರ ಡೌಲಿನಿಂದ ಗೋಪುರದ ಮೇಲೆ ಹಾರಾಡುತ್ತಿತ್ತು ಆ ಬಾಲವೀರನ ಬಿಸಿ ರಕ್ತದ ಕುಂಕುಮವನ್ನು ಧರಿಸಿ ಕೊಂಡು – ಎಂಬಂತಹ ವರ್ಣನೆಗಳು ಕತೆಗೆ ಅಪಾರ ಧ್ವನಿಯನ್ನು ಶಕ್ತಿಯನ್ನು ತುಂಬಿಕೊಟ್ಟಿವೆ.

ಬೆಳಗಾಂ ಜಿಲ್ಲೆಯ ಕ್ರಾಂತಿ ವೀರನೊಬ್ಬನ ಕತೆ ‘ಹುತಾತ್ಮ’. ಬ್ರಿಟಿಷರ ನರಕ ಸದೃಶವಾದ ಸೆರೆಮನೆಗಳಲ್ಲಿ ಕೊಳೆತು ನಾಯಿ ಕಾಗೆಗಳೂ ತಿನ್ನಲಾರದ ತಿನ್ನಬಾರದ ಅನಾರೋಗ್ಯಕರ ಆಹಾರವನ್ನು ತಿಂದು ರೋಗಗ್ರಸ್ತನಾಗಿ ಹಾಸಿಗೆ ಹಿಡಿದು ಹೆತ್ತತಾಯಿಯನ್ನು ಕಳೆದುಕೊಂಡು ಆಸ್ತಿಪಾಸ್ತಿಯನ್ನು ನೀಗಿಕೊಂಡು ತಿನ್ನಲು ಅನ್ನವಿಲ್ಲದೆ ಕುಡಿಯಲು ನೀರಿಲ್ಲದೆ ಕಂಗೆಟ್ಟು ಬಗೆಗೆಟ್ಟು ನಿಸ್ಸಹಾಯಕನಾಗಿ ಭಾರತ ಮಾತೆಯ ಸ್ಮರಣೆಯಲ್ಲಿಯೇ ಸಾವನ್ನಪ್ಪಿದ ಕ್ರಾಂತಿ ಪುರುಷನೊಬ್ಬನ ಹೃದಯ ವಿದ್ರಾವಕವಾದ ಕತೆಯಿದು. ಮರಣ ಶಯ್ಯೆಯಲ್ಲಿ ಮಲಗಿರುವ ಬಡ ಮಗನ ಉದ್ಗಾರಗಳಿಂದಲೇ ಇಡೀ ಕಥಾವಸ್ತು ಸುರುಳಿ ಬಿಚ್ಚಿಕೊಂಡು ಅರಳಿ ನಿಲ್ಲುತ್ತದೆ. ನಿಷ್ಕಾಮ ಪ್ರೇಮದಿಂದ ತನು ಮನ ಧನಗಳನ್ನು ತೃಣವಾಗೆಣಿಸಿ ಸ್ವಾತಂತ್ರ್ಯ ಚಳುವಳಿಯ ಅಗ್ನಿಕುಂಡದಲ್ಲಿ ಧುಮುಕಿದವರು ಸಹಸ್ರಾರು ಮಂದಿ. ಅವರ ತ್ಯಾಗ ಬಲಿದಾನ ಶ್ರದ್ಧೆ ಸಾಹಸಗಳಿಂದ ದೊರಕಿದ ಅಧಿಕಾರದ ದುರುಪಯೋಗ ಮಾಡಿಕೊಂಡು ಶ್ರೀಮಂತಿಕೆಯ ಶಿಖರದಲ್ಲಿ ವಿಹರಿಸುತ್ತ ರಾಷ್ಟ್ರಪ್ರೇಮದ ಉಪದೇಶ ಮಾಡುತ್ತಿರುವವರು ಹಲವಾರು ಮಂದಿ. ಈ ಕೃತಜ್ಞತೆಯನ್ನು ವಿಷಮತೆಯನ್ನು ಕಂಡು ಕೆರಳಿ ರೊಚ್ಚಿಗೆದ್ದ ಕಟ್ಟೀಮನಿಯವರ ಆಕ್ರೋಶ ವೇದನೆಗಳ ವಾಗ್ರೂಪ ಈ ಕತೆ. ಆದಿಯಿಂದ ಅಂತ್ಯದವರೆಗೂ ಕರುಳು ಹಿಂಡುವ ಕರುಣ ರಸ ಹರಿಯುತ್ತಿದೆ. ಕಥಾನಾಯಕನ ಅಚಂಚಲವಾದ ರಾಷ್ಟ್ರನಿಷ್ಠೆ, ಸ್ವಾತಂತ್ರ್ಯ ಪ್ರೇಮ, ಬಾಪೂ ಭಕ್ತಿ ಅನನ್ಯ ಅಭಿವ್ಯಕ್ತಿಯನ್ನು ಪಡೆದುಕೊಂಡಿವೆ.

“…ಓ ಹೋಗ್ತಾ ಇದೆ ನನ್ನ ಜೀವ. ಭಾರತದ ಗಾಳಿಯಲ್ಲಿ ಬೆರೆಯುತ್ತಾ ಇದೆ ನನ್ನ ಪ್ರಾಣ, ಅಷ್ಟೆ ನನಗೆ ಸಂತೋಷ, ಅಷ್ಟೆ ನನಗೆ ಸಮಾಧಾನ. ಬರುತ್ತೇನೆ ಪ್ರಿಯ ಭಾರತ! ನನ್ನ ಮಮತೆಯ ಭಾರತ! ಜೈಹಿಂದ್!” ಎಂಬ ನಾಯಕನ ಕೊನೆಯ ಮಾತುಗಳು ಬಹುಕಾಲದವರೆಗೆ ನಮ್ಮ ಕಿವಿಯಲ್ಲಿ ಮೊರೆಯುತ್ತವೆ. ಆ ಆವೇಶ ಆ ತೀವ್ರತೆ ಆ ಕಳಕಳಿ ಆ ಯಾತನೆ ಮನಸ್ಸನ್ನು ಕಲಕುತ್ತವೆ.

ನಾಡಿನಲ್ಲಿ ನವಕ್ರಾಂತಿ ಎಬ್ಬಿಸಿದ ಚಳುವಳಿಯಲ್ಲಿ ಧುಮುಕಿದ ಪರಿಣಾಮವಾಗಿ ಕಾರಾಗೃಹ ದಲ್ಲಿ ಬಂಧಿತವಾಗಿದ್ದು, ನಮ್ಮ ನೆಲದಲ್ಲೇ ನಾವು ಪರಕೀಯರೆಂಬಂತೆ ತುಚ್ಛವಾಗಿ ನಡೆಸಿ ಕೊಳ್ಳುತ್ತಿದ್ದ ಬ್ರಿಟಿಷರ ದಬ್ಬಾಳಿಕೆಗೆ ಉಗ್ರವಾಗಿ ಸಿಡಿದೆದ್ದು, ನಮ್ಮವರ ನರಸತ್ತತನಕ್ಕೆ ಹೇಸಿ ಅಸಹನೆಯಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿ ಸಿಡಿಲ ಮರಿಯಾಗಿ ಮೆರೆದ ಹಳ್ಳಿಯ ಹುಡುಗನೊಬ್ಬನ ಕತೆ ‘ಜನವರಿ ಇಪ್ಪತ್ತಾರು’. ಅವನ ಬಾಪೂನಿಷ್ಠೆ ದೇಶನಿಷ್ಠೆ ಮುಚ್ಚು ಮರೆಯಿಲ್ಲದ ನಿಷ್ಕಾಪಟ್ಯ, ಹೊಲ್ಲದುದನ್ನು ಕಂಡು ಶ್ರೀಘ್ರವಾಗಿ ಕೆರಳುವ ನಿಸರ್ಗ ಸಹಜವಾದ ದುಡುಕುತನ ಋಜುತ್ವ, ಎಂಥ ನೋವನ್ನೂ ತಾಳಬಲ್ಲ ವಜ್ರೋಪಮ ಸ್ಥೈರ್ಯ ಕಟ್ಟೀಮನಿಯವರ ಲೇಖನಿಯಲ್ಲಿ ಘನೀಭೂತವಾದ ಆಕೃತಿಯನ್ನು ಪಡೆದಿವೆ. ದೇಶ ಸೇವಕರು ಕೂಡಲ್ಪಟ್ಟಿದ್ದ ಜೈಲುಗಳಲ್ಲಿನ ದುಸ್ಥಿತಿ, ಅಧಿಕಾರಿಗಳ ಅಮಾನುಷ ಕ್ರಾರ್ಯ- ಮುಂತಾದವುಗಳ ಸಹಜ ಚಿತ್ರಣವಿದೆಯಿಲ್ಲಿ. ಆದರೆ ಈ ಎಲ್ಲ ವಿವರಗಳ ಹಿಂದೆ ಲೇಖಕರ ಆಕ್ರೋಶದ ದನಿಯೇ ಮತ್ತೆ ಮತ್ತೆ ಕೇಳಿಸಿದಂತಾಗುವುದಿಂದ ಈ ಮಾತುಗಳಲ್ಲಿ ಹೆಚ್ಚು ವಿಶಿಷ್ಟತೆಯಾಗಲೀ ವೈವಿಧ್ಯವಾಗಲೀ ಮೈದೋರದೆ ಪರಿಣಾಮ ಸಪ್ಪೆಯಾಗುತ್ತದೆ. ಲೇಖಕರ ಅಂತರಂಗದಲ್ಲೇ ಕುದಿಯುತ್ತಿರುವ ಕಾವು ಈ ಕತೆಯನ್ನು ಆವರಿಸಿದೆಯಾದರೂ ಕಲ್ಪನೆಯ ಕಲೆಯ ಸ್ಪರ್ಶ ಇಲ್ಲಿಲ್ಲವೆಂಬುದನ್ನು ಹೇಳಲೇಬೇಕಾಗುತ್ತದೆ.

ಕಟ್ಟೀಮನಿಯವರ ಸಮರ್ಥ ಲೇಖನಿಯಲ್ಲಿ ಮೂಡಿಬಂದ ಅತ್ಯಂತ ಹೃದಯ ಸ್ಫರ್ಶಿಯೂ ಕಲಾತ್ಮಕವೂ ಸತ್ವಪೂರ್ಣವೂ ಆದ ಕತೆಗಳಲ್ಲಿ ‘ಬಲಿ’ ಒಂದು. ತಂತ್ರ, ನಿರೂಪಣೆ, ಸಂವಾದ ಸನ್ನಿವೇಶ, ಪಾತ್ರ ಚಿತ್ರಣ ಒಂದಕ್ಕೊಂದು ಪೂರಕವಾಗಿ ಸಾಮರಸ್ಯವಾಗಿ ಬೆರೆತು ಅಪೂರ್ವವಾದ ಪರಿಣಾಮವನ್ನುಂಟುಮಾಡುವುದರಲ್ಲಿ ಸಂಪೂರ್ಣ ಯಶಸ್ವಿ ಯಾಗಿವೆ. ಓದಿಗೆ ತಿಲಾಂಜಲಿಯಿತ್ತು. ಅಕ್ಕರೆಯ ತಂದೆ ತಾಯಿಗಳ ಮಮತೆಯ ಬಂಧನವನ್ನು ಬದಿಗೊತ್ತಿ ಬಾಪೂ ಕರೆಗೆ ಓಗೊಟ್ಟು ‘ಕ್ವಿಟ್ ಇಂಡಿಯಾ’ ಚಳುವಳಿಯಲ್ಲಿ ಭಾಗವಹಿಸಿ ಸಹೋದ್ಯೋಗಿಗಳಿಗೆ ಸ್ಫೂರ್ತಿಯ ಕೇಂದ್ರವಾಗಿ ಆದರ್ಶದ ಅಣ್ಣನಾಗಿ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಮನಸ್ಥೈರ್ಯವನ್ನು ಕಳೆದುಕೊಳ್ಳದೆ ಧೀರಪುರುಷನಾಗಿ ಮೆರೆದು   ಪೋಲೀಸರ ಅತ್ಯಾಚಾರಕ್ಕೆ ಈಡಾಗಿ ಅಸು ತೆತ್ತ ಬಾಲ ಅಭಿಮನ್ಯುವಿನೊಬ್ಬನ ದುರಂತ ಕತೆಯಿದು. ಭೂಗತರಾಗಿ, ಎಕ್ಸೈಜ್ ಹಾಳೆಗಳಿಂದಲೇ ಕ್ರಾಂತಿಕಾರಕವಾದ ‘ರಣಭೇರಿ’ ಪತ್ರಿಕೆಯನ್ನು ಕ್ಷಣಗಂಡವನ್ನೆದುರಿಸುತ್ತಾ ಹೊರತರುವ ಸಂದರ್ಭ ಲೇಖಕರ ಸಹಾಜನು ಭವದ ಸ್ವಾಭಾವಿಕ ಚಿತ್ರಣವಾಗಿದ್ದರೆ, ತನ್ನನ್ನೇ ಏಕಮಾತ್ರ ಆಧಾರವೆಂದು ದೇವರೆಂದು ನಂಬಿದ್ದ ಪ್ರೀತಿಯ ತಂದೆ – ಮಗನ ಭೇಟಿಯ ಸನ್ನಿವೇಶದ ಸೂಕ್ಷ್ಮವಾದ ಮನೋ ವೈಜ್ಞಾನಿಕವಾದ ರಸಾದ್ರಭಾವದ ಬರವಣಿಗೆ, ಚಾತುರ್ಯ ಅವರ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಮೂಡಿ ಬಂದಿರುವ ಶಂಕರನ ಧೀರೋದಾತ್ತವೂ ಆದರ್ಶವೂ ಆದ ವ್ಯಕ್ತಿತ್ವ ಓದುಗರ ಮನದಲ್ಲಿ ಬಹುಕಾಲ ಅಚ್ಚೊತ್ತಿ ನಿಲ್ಲುತ್ತದೆ. ಪೋಲೀಸರು ನಡೆಸುವ ಹತ್ಯಾಕಾಂಡ ಹೃದಯವನ್ನು ಲಾವಾರಸವಾಗಿಸುವಷ್ಟು ನೈಜವಾಗಿ ಜ್ವಲಂತವಾಗಿ ಚಿತ್ರಿತ ವಾಗಿದೆ. ದಿನಚರಿಯ ತಂತ್ರ ಹಂತ ಹಂತವಾಗಿ ಏರೇರಿಕೆಯ ಕ್ರಮದಲ್ಲಿ ಕುತೂಹಲವನ್ನು ಕೆರಳಿಸುತ್ತಾ ಹೋಗಿ ಪರಾಕಾಷ್ಠೆಯನ್ನು ಮುಟ್ಟುತ್ತದೆ; ಭಾಷೆ ಕಾವ್ಯಾತ್ಮಕವಾಗುತ್ತದೆ.

ರಾಷ್ಟ್ರದಲ್ಲಿ ಬೀಸಿದ ಸ್ವಾತಂತ್ರ್ಯೇಚ್ಛೆಯ ಬಿರುಗಾಳಿ ಭಾರತದ ಹಳ್ಳಿ ಹಳ್ಳಿಯನ್ನೂ ವ್ಯಾಪಿಸಿ ಅಜ್ಞಾನ, ಮಢ್ಯ, ಅನಕ್ಷರತೆ ದಾರಿದ್ರ್ಯಗಳಲ್ಲಿ ಮುಳುಗಿದ ಅತಿ ಸಾಮಾನ್ಯ ಜನಮನವನ್ನೂ ಪ್ರವೇಶಿಸಿದಾಗ ಇಲಿಗಳು ಹುಲಿಯಾದರು, ದುರ್ಬಲ ನಾರಿ ಸಬಲ ಶಕ್ತಿಯಾದಳು. ಬಡಕಲು ಶರೀರ ಧೀರ ಹಿಮಾಚಲವಾಯಿತು. ಅಂತಹ ಒಂದು ಚಿತ್ರ ‘ಅಜ್ಞಾತವಾಸಿ’. ಸಾದ್ವಿ ನಾಗಮ್ಮನ ಪಾತ್ರ ತುಂಬ ಜೀವಂತವೂ ಅಭಿಮಾನಾಸ್ಪದವೂ ಆಗಿದೆ. ಪೋಲೀಸರು ನರ ರಾಕ್ಷಸರಾಗಿ ಅವಳ ಮೇಲೆ ಅತ್ಯಾಚಾರ ನಡೆಸಿದಾಗಲೂ ಪಶುವಿಗಿಂತಲೂ ಕೀಳಾಗಿ ನಡೆಸಿಕೊಂಡಾಗಲೂ ಆಕೆ ಪ್ರದರ್ಶಿಸಿದ ಚಿತ್ತಸ್ಥೈರ್ಯ ಅಸದೃಶ್ಯ ವಾದುದು. ತನ್ನ ಗಂಡನನ್ನು ಅವರು ಅವಾಚ್ಯ ಬೈಗುಳಿಂದ ಉದ್ದೇಶಿಸಿದಾಗ ಕೊರಗಿ ಕೃಶವಾಗಿ ನಿಸ್ಸತ್ವಳಾಗಿ ಸತ್ತವಳಂತೆ ಬಿದ್ದಿದ್ದವಳು ಇದ್ದಕ್ಕಿದ್ದಂತೆ ಕೆರಳಿದ ಸಿಂಹಿಣಿಯಾಗಿ ಬುಸುಗುಡುತ್ತಾಳೆ :

“ಯಾರಿಗೆ ಭಂಡ ಅಂತಿಯೋ ಷಂಡಾ! ಹೆಂಗಸರ ಮೇಲೆ ಕೈಯೆತ್ತುವ ನಿಮ್ಮಂಥ ಹೇಡಿಗಳಂಥವನಲ್ಲ ನನ್ನ ಗಂಡ! ಥೂ! ನಿಮ್ಮ ಮುಖಕ್ಕೆ ಬೆಂಕಿ ಹಾಕಲಿ!”

ಅವಳು ಅನುಭವಿಸುವ ಯಾತನೆಯ ಚಿತ್ರ ಅತ್ಯಂತ ದಾರುಣವಾಗಿದೆ. ತಮಗೊದಗಿದ ಅಸಹನೀಯ ಸಂಕಟದಲ್ಲೂ ಆಕೆ ಪತಿಗಾಗಿ ಮರುಗುತ್ತಾಳೆ; ಅವನನುಭವಿಸುತ್ತಿರಬಹುದಾದ ಕಷ್ಟಗಳನ್ನು ಕಲ್ಪಿಸಿಕೊಂಡು ತಲ್ಲಣಿಸುತ್ತಾಳೆ.

ನಿಶ್ಯಕ್ತಿಯಿಂದ ಶರೀರ ಬೆಂಡಾಗಿದ್ದರೂ ತನ್ನಿನಿಯನಿಗಿಲ್ಲದ ರೊಟ್ಟಿ ತುಂಡನ್ನು ತಿನ್ನಲು ಅವಳಿಗೆ ಮನಸ್ಸಾಗದು. ಅವನ ದರ್ಶನಕ್ಕಾಗಿ ಅವನ ಕ್ಷೇಮ ಕಾತರಳಾಗಿ ಜೀವ ಹಿಡಿದಿರುತ್ತಾಳೆ. ಅದು ಕೈಗೂಡಿದಾಗ ಅವನ ಜೀವಸಂರಕ್ಷಣೆ ಮಾಡಿಕೊಳ್ಳಬೇಕೆಂದು ಆರ್ತಳಾಗಿ ಬೇಡಿ ಪರಮ ಸಂತೃಪ್ತಿಯಿಂದ ಅವನ ತೊಡೆಯ ಮೇಲೆ ತಲೆಯಿಟ್ಟು ಅಸುನೀಗುತ್ತಾಳೆ. ತುಂಬ ಉದಾತ್ತವಾದ ದರ್ಶನವಿದು. ‘ಅಜ್ಞಾತವಾಸಿ’ಯ ವ್ಯಕ್ತಿ ಚಿತ್ರವೂ ಅಷ್ಟೇ ಸೊಗಸಾಗಿದೆ. ಈ ದಂಪತಿಗಳ ಪರಸ್ಪರ ಅನುರಾಗ, ಅದರ ಹಿನ್ನೆಲೆಯಾದ ದೇಶ ಪ್ರೇಮ ಅತ್ಯಂತ ಸಜೀವವಾಗಿ ಮೈತಳೆದು ನಿಂತಿವೆ ಈ ಕತೆಯಲ್ಲಿ.

‘ಮೂವರು ಸೈನಿಕರು’ ಉಜ್ವಲ ಸ್ವಾತಂತ್ರ್ಯಾರಾಧನೆಯ ಮತ್ತೊಂದು ರೋಚಕ ಅಧ್ಯಾಯ. ಇದು ಒಂದು ವಾಸ್ತವ ಸನ್ನಿವೇಶವನ್ನು ಕುರಿತಾದ ಕತೆ; ಮಹದೇವ ಮೈಲಾರ ಮತ್ತು ಸಂಗಡಿಗರು ತಮ್ಮ ಪ್ರಾಣವನ್ನು ತೃಣವಾಗೆಣಿಸಿ ರೈತರ ಕಂದಾಯವನ್ನು ವಸೂಲು ಮಾಡಿ ಕೂಡಿಟ್ಟಿದ್ದ ಖಜನೆಯನ್ನು ಆಕ್ರಮಿಸಿಕೊಳ್ಳಲು ಹೋಗಿ ಪೋಲೀಸರ ಗುಂಡಿಗೆ ದೇಹ ತೆತ್ತ ಸಾಹಸದ ಕತೆ; ಮೃತ್ಯುವಿನ ದವಡೆಯಲ್ಲೂ ಅಹಿಂಸೆಯನ್ನು ಪಾಲಿಸಿದ ರೋಮಾಂಚಕ ಸಂಗತಿ. ಮಾತು ಕಡಿಮೆ, ಆದರೂ ಮೊನಚು, ಹೃತ್ಸ್ಪರ್ಶಿ. ಆ ಧೈರ್ಯ ಆ ಸಾಹಸವನ್ನು ಕಂಡು ಎಂಥವನಿಗಾದರೂ ಮೈ ಉಬ್ಬುತ್ತದೆ. ಪರಿಸರದ ಚಿತ್ರಣ ಮತ್ತಷ್ಟು ವಿವರವಾಗಿ ಸತ್ವಯುತವಾಗಿ ಇದ್ದಿದ್ದರೆ ಇದು ಮತ್ತಷ್ಟು ಕಲಾತ್ಮಕವಾದ ಕತೆಯಾಗುತ್ತಿತ್ತು. ಲೇಖಕರ ಅನವಶ್ಯ ಅವಸರ ಕೆಲವೊಮ್ಮೆ ಹೀಗೆ ಕಲೆಗಾರಿಕೆಗೆ ಎರವಾಗುತ್ತದೆ.

‘ಸುಂಟರಗಾಳಿ’ ಮತ್ತು ‘ಗೂಢಾಚಾರಿಣಿ’ ಗೋವಾ ವಿಮೋಚನೆಯ ಸಮರಕ್ಕೆ ಸಂಬಂಧಿಸಿದ ಕತೆಗಳು. ಯುವಕನೊಬ್ಬನ ದೇಶಪ್ರೇಮ ಸಾಹಸ ಮನೋಭಾವ ಪರಾನುಕಂಪ ಗಳಿಗೆ ಮಾರುಹೋಗಿ ತಂದೆ ತಾಯಿಗಳ ಪ್ರತಿಭಟನೆಯನ್ನೂ ಲೆಕ್ಕಿಸದೆ ಮದುವೆಯಾಗಿ, ಕುಟುಂಬದ ಬಗೆಗಿನ ಅವನ ಅನಾಸಕ್ತಿಯಿಂದಾಗಿ ಬೇಸರ ಜುಗುಪ್ಸೆಗಳಿಗೊಳಗಾದ ಹೆಣ್ಣೊಬ್ಬಳ ಮನದಲ್ಲೆದ್ದ ಘರ್ಷಣೆಯ ಸುಂದರ ಕಥನ ‘ಸುಂಟರಗಾಳಿ’. ಆದರ್ಶ-ವಾಸ್ತವ, ಸುಖ-ಸಂತೋಷ, ಕ್ಷಣಿಕ ದೌರ್ಬಲ್ಯ-ಸುಸ್ಥಿರ ನಿಷ್ಠೆಗಳ ನಡುವೆ ನಡೆಯುವ ಅವಳ ಮಾನಸಿಕ ತುಮುಲದ ಚಿತ್ರಣ ತುಂಬ ಅರ್ಥಪೂರ್ಣವಾಗಿ ಮೂಡಿದೆ. ಮಧ್ಯೆ ಮಿಂಚಿನಂತೆ ಮೂಡಿ ಮರೆಯಾಗುವ ಡಾ. ಅರವಿಂದನ ಪಾತ್ರ ಪರಿಣಾಮಕಾರಿ. ಗೋಪಿನಾಥನ ಭಾವ ಚಿತ್ರದ ಕಟ್ಟು ಮುರಿದು, ಗಾಯ ಒಡೆಯಿತು. ಭಾವ ಹೃದಯಸ್ಥವಾಯಿತು. ಗಾಜು ತಾಕಿ ಬೆರಳಲ್ಲಿ ಮೂಡುವ ರಕ್ತ ತುಂಬ ಸಾಂಕೇತಿಕ. ಕತೆಯ ಕೊನೆಯಲ್ಲಿ ಮಾತ್ರವೇ ಗೋಪಿನಾಥ ಕಾಣಿಸಿಕೊಂಡರೂ ಅವನ ವ್ಯಕ್ತಿತ್ವ ಪ್ರಭಾವ ಇಡೀ ಕತೆಯನ್ನು ಬೆಳಕು ಮಾಡಿದೆ. ಅವನ ಮನದಲ್ಲೇ ಅವನ ವ್ಯಕ್ತಿತ್ವದ ವಿಜಯ ಅಡಗಿದೆ. ಅವನ ಮಾತು, “ನೀನೇ? ಯಾವಾಗ ಬಂದೆ ರಮಾ?” ಅವಳ ಉತ್ತರ, “ಇದೆ ಈಗ” – ಈ ಮಾತುಗಳು ಎಷ್ಟು ಧ್ವನಿಪೂರ್ಣವೆಂಬುದು ಇಡೀ ಕತೆ ಓದಿದಾಗ ಮಾತ್ರ ತಿಳಿಯುತ್ತದೆ. ಅಷ್ಟು ವರ್ಷ ಬಾಳುವೆ ಮಾಡಿದರೂ ಅವನನ್ನು ಸರಿಯಾಗಿ ಅರಿತದ್ದು ಕಂಡದ್ದು ಆಗ ಮಾತ್ರ. ಕತೆಯ ಹೆಸರು, ಸನ್ನಿವೇಶಗಳು ಒಂದಕ್ಕೊಂದು ಬೆಸೆದುಕೊಂಡು ಬೆಳೆ ಬೆಳೆದು ಸಾರ್ಥಕವೂ ಸಮರ್ಪಕವೂ ಆದ ಮುಕ್ತಾಯವನ್ನು ಪಡೆಯುತ್ತವೆ. ಹೆಜ್ಜೆ ಹೆಜ್ಜೆಗೆ ಸಂಶಯ ಕುತೂಹಲ ಗಳನ್ನು ಅಸದೃಶ ರೀತಿಯಲ್ಲಿ ಕೆರಳಿಸುತ್ತಾ ಹೋಗಿ ಅನಿರೀಕ್ಷಿತವಾದ ಮುಕ್ತಾಯವನ್ನು ಪಡೆಯುವ ‘ಗೂಢಚಾರಿಣಿ’ ಮತ್ತೊಂದು ಹೆಸರಿಸಬೇಕಾದ ಕತೆ.

ಪಾಕಿಸ್ತಾನೀ ಆಕ್ರಮಣದ ಹಿನ್ನೆಲೆಯಲ್ಲಿ ರಚಿತವಾದ ಕತೆಗಳು ‘ಹಾಜಿಪೀರ್ ಕಣಿವೆಯ ಮಾರ್ಗದಲ್ಲಿ’ ಮತ್ತು ‘ರೈಲುದಾರಿಯ ರಕ್ಷಕ’. ನೀತಿ ನಿಯಮಗಳ ಕತ್ತು ಮುರಿದ ಪಾಕಿಸ್ತಾನ ಅನಿರೀಕ್ಷಿತವಾಗಿ ಭಾರತದ ಮೇಲೆ ಅಪವಿತ್ರ ದಾಳಿ ನಡೆಸಿದಾಗ ದೇಶದ ಇಡೀ ಜನತೆ ಏಕದೇಹಿಯಾಗಿ ನಿಂತು ಸವಾಲನ್ನು ಸಮರ್ಥವಾಗಿ ಎದುರಿಸಿತು. ಹಳ್ಳಿಯ ಮಕ್ಕಳೂ ಹಿಂದುಳಿಯಲಿಲ್ಲ ಈ ನಾಡ ಸೇವೆಗೆ. ಸಾಮಾನ್ಯ ಜವಾನ ರಕ್ತವನ್ನು ಹೆಪ್ಪುಗಟ್ಟಿಸುವ ಕಗ್ಗತ್ತಲಲ್ಲಿ ಕಲ್ಲು, ಮುಳ್ಳು, ಮರಗಳಿಂದ ತುಂಬಿದ ದಟ್ಟಡವಿಯ ಕಣಿವೆಯಲ್ಲಿ ತನ್ನ ದಳದ ನಾಯಕನ ಆಜ್ಞೆಗೆ ವಿರುದ್ಧವಾಗಿ ನಡೆದು ಏಕಾಂಗಿಯಾಗಿ ಹತ್ತಾರು ಜನ ಪಾಕಿಸ್ತಾನೀ ಸೈನಿಕರನ್ನು ತನ್ನ ಬಂದೂಕಕ್ಕೆ ಬಲಿಗೊಟ್ಟು ವೀರಾವೇಶದಿಂದ ಕಾದಿ ಮಡಿದ ಮೈಜುಮ್ಮೆ ನಿಸುವ ಅಪ್ರತಿಮ ಸಾಹಸದ ಕತೆ ‘ಹಾಜಿಪೀರ್ ಕಣಿವೆ ಮಾರ್ಗದಲ್ಲಿ’. ಪರಿಸರದ ಚಿತ್ರಣ ಕೈಲಿ ಮುಟ್ಟುವಷ್ಟು ಜೀವಂತವಾಗಿದೆ, ಹತ್ತಿರವಾಗಿದೆ. ಏರೇರಿಕೆಯ  ಶೌರ್ಯದ ವರ್ಣನೆಯಲ್ಲಿ ಲೇಖಕರ ಲೇಖನಿ ತಲ್ಲೀನತೆಯ ಉತ್ಕಟತೆಗೆ ತೀವ್ರತೆಗೆ ಮುಟ್ಟುತ್ತದೆ. ದೇಶಪ್ರೇಮದ ಕತೆಗೆ ಸಮಾನಾಂತರವಾಗಿ ಹರಿಯುವ ಪ್ರಣಯ ಕಥೆ ಮತ್ತಷ್ಟು ಉಜ್ವಲವಾಗಿದೆ. ಮೂಲ ಕತೆಗೆ ಮತ್ತಷ್ಟು ರಕ್ತಮಾಂಸವನ್ನು ತುಂಬಿ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುತ್ತದೆ. ಈ ತಂತ್ರ ನೈಪುಣ್ಯ ತನಗೆ ತಾನೇ ತುಂಬ ಸಹಜವಾಗಿ ಅರಳಿ ನಿಂತಿದೆ. ನಿಜವಾದ ನಾಡ ಪ್ರೇಮಕ್ಕೆ ಜತಿಮತಗಳ ಸೋಂಕಿಲ್ಲ; ನೀತಿ ನಿಷ್ಠೆ ಶ್ರದ್ಧೆಗಳಿಗೆ ರಕ್ತಸಂಬಂಧದ ಸಂಕಲೆಯಿಲ್ಲ ಎಂಬುದನ್ನು ಶ್ರುತಪಡಿಸುವ ಕತೆ “ರೈಲುದಾರಿಯ ರಕ್ಷಕ”. ರೈಲ್ವೆ ಲೈನ್‌ಮನ್ ಮುಸ್ಲಿಮ ನೊಬ್ಬನ ದೇಶಪ್ರೇಮ ನಿಷ್ಕಳಂಕ ನಿಷ್ಠೆ ಕಾರ್ಯತತ್ಪರತೆಗಳ ಹೃದಯಾಕರ್ಷಕ ಪ್ರತಿಮೆಯಿದು. ಸೈನಿಕರನ್ನು ತುಂಬಿಕೊಂಡು ಬರುತ್ತಿದ್ದ ರೈಲುಗಳನ್ನುರುಳಿಸಲು ಪಾಕಿಸ್ತಾನದಿಂದ ಪ್ರಚೋದಿತನಾಗಿ ಬಂದ ತಮ್ಮನನ್ನೇ ನಿರ್ದಾಕ್ಷಿಣ್ಯವಾಗಿ ಚೂರಿಯಿಂದ ಇರಿದು, ಅಗಲಿದ್ದ ಭೀಕರ ದುರಂತವನ್ನು ತಪ್ಪಿಸಿದ ರೋಮಾಂಚಕಾರಿಯಾದ ವಸ್ತುವಿನ ಮನಕರಗುವ ನಿರೂಪಣೆ ಇಲ್ಲಿದೆ. ಕರ್ತವ್ಯ ಮತ್ತು ಕರುಳ ಬಾಂಧವ್ಯಗಳ ಕತ್ತರಿಯಲಗಿನಲ್ಲಿ ಸಿಕ್ಕಿದ ಅನ್ವರನ ವ್ಯಕ್ತಿತ್ವದ ರೂಪಣೆ ಅಭಿಮಾನಾಸ್ಪದವೂ ಆದರ್ಶವೂ ಆಗಿದೆ. ಜೊತೆಗೆ ಆರಂಭದ ಕತ್ತಲೆಯ ವರ್ಣನೆ ಅತ್ಯಂತ ಶಕ್ತವಾಗಿದ್ದು ಕತೆಗೆ ತೀವ್ರ ಪರಿಣಾಮದ ಉಚಿತ ಹಿನ್ನೆಲೆಯನ್ನೊದಗಿಸಿದೆ.

ಈ ಕತೆಗಳೆಲ್ಲ ಏಕರೀತಿಯಾಗಿ ಉನ್ನತ ದರ್ಜೆಯ ಕತೆಗಳೆಂದು ಹೇಳುವುದು ಸಾಧ್ಯವಾಗದು. ಇವುಗಳಲ್ಲಿ ಪ್ರತ್ಯೇಕವಾಗಿ ಒಡೆದು ಕಾಣುವ ವೈವಿಧ್ಯವೂ ಅಷ್ಟಾಗಿ ಇಲ್ಲ; ಸ್ಥಾಯಿಯಾದ ಒಂದೇ ಮೂಲಭಾವದ ಹಂದರದ ಮೇಲೆ ಹಬ್ಬಿರುವ ವಿವಿಧ ಕತೆಗಳಲ್ಲಿ ಕಣ್ಣಿಗೆ ಹೊಡೆಯುವ ವಿಶಿಷ್ಟತೆಯನ್ನು ಮೂಡಿಸುವುದು ಸುಲಭಸಾಧ್ಯವೂ ಅಲ್ಲ. ಕೆಲವೊಮ್ಮೆ ಅವವೇ ವರ್ಣನೆಗಳೂ ಉದ್ಗಾರಗಳೂ ತಲೆಯಿಕ್ಕುವುದರಿಂದ ಒಟ್ಟಂದದ ಪರಿಣಾಮ ತೀವ್ರತೆ ಕುಗ್ಗುವುದೂ ಸಹಜ. ಇಷ್ಟು ಪರಿಮಿತಿಯಲ್ಲೂ ಓದುಗರ ಆಸಕ್ತಿ ಕೆರಳುವಂತೆ ಆವೇಶ ಅನುರಣಿಸುವಂತೆ ಸವೇಗವಾಗಿ ಜ್ವಲಂತವಾಗಿ ತಲ್ಲೀನತೆಯಿಂದ ಕತೆ ಹೇಳು ವುದರಲ್ಲೇ ಕಟ್ಟೀಮನಿಯವರ ಲೇಖನಿಯ ಹೆಚ್ಚುಗಾರಿಕೆ ಇದೆ; ಉತ್ಸಾಹ ಸಾಹಸ ರೊಚ್ಚು ಕೆಚ್ಚು ಕಲಿತನ ಸ್ವಾತಂತ್ರ್ಯಪ್ರೇಮಗಳ ಸುಡುರಕ್ತ ವಾಚಕರ ಧಮನಿ ಧಮನಿಗಳಲ್ಲೂ ಹರಿಯುವಷ್ಟು ತೀಕ್ಷ್ಣವಾಗಿ ಚಿತ್ರಿಸುವುದರಲ್ಲೇ ಅದರ ಸಾರ್ಥಕತೆಯಿದೆ. ಈ ಗುಣಗಳ ಜೊತೆ ಕಲಾತ್ಮಕತೆಯೂ ಸೇರಿದಾಗ ಕತೆ ಚಿರಮಲ್ಯದ್ದಾಗುತ್ತದೆ. ಈ ದೃಷ್ಟಿಯಿಂದ ‘ರಕ್ತಧ್ವಜ’, ‘ಬಲಿ’, ‘ಹಾಜಿಪೀರ್ ಕಣಿವೆಯ ಮಾರ್ಗದಲ್ಲಿ’ ಅತ್ಯಂತ ಯಶಸ್ವಿಯಾದ ರಾಷ್ಟ್ರಪ್ರೇಮದ ಕತೆಗಳು.