ಆರ್ಥಿಕ ಸಾಮಾಜಿಕ ಅವ್ಯವಸ್ಥೆ ನಮ್ಮ ಸಂಸ್ಕೃತಿ ಪ್ರಗತಿಯ ವೃಕ್ಷವನ್ನು ನರುಚಲು ಗೊಳಿಸಿರುವ ಮಹಾರೋಗ. ಧರ್ಮದ ಹೆಸರಿನಲ್ಲಿ ಬರ್ಬರತೆ, ನಿಯಮ ನೀತಿಗಳ ಹೆಸರಿನಲ್ಲಿ ನಿರಂಕುಶ ದರ್ಪ ದಬ್ಬಾಳಿಕೆ, ಉದ್ಧಾರದ ಹೆಸರಿನಲ್ಲಿ ಅಧಃಪತನ, ಸಮಾನತೆಯ ಹೆಸರಿನಲ್ಲಿ ಅಸಮತೆ, ಸ್ವಾತಂತ್ರ್ಯದ ಹೆಸರಿನಲ್ಲಿ ಪಾರತಂತ್ರ್ಯ ನಮ್ಮ ಸುತ್ತಮುತ್ತ ವಿಜೃಂಭಿಸುತ್ತದೆ. ದರಿದ್ರರ ದುಡಿಮೆಯ ರಕ್ತದಿಂದ ಕೊಬ್ಬು ಬೆಳೆಸಿಕೊಂಡ ಶ್ರೀಮಂತ ಸದಾಕಾಲ ಅವರನ್ನು ಬಡತನ ಅಜ್ಞಾನಗಳ ರೂಪದಲ್ಲೇ ಕೊಳೆಸಲು ಪ್ರಯತ್ನಿಸುತ್ತಿದ್ದಾನೆ. ಒಂದು ಕಡೆ ಭೋಗ ವೈಭವಗಳ ವಿಕಾಟಾಟ್ಟಹಾಸ; ಮತ್ತೊಂದು ಕಡೆ ಉಪವಾಸ ವನವಾಸ ರೋಗರುಜಿಗಳ ಆರ್ತರವ. ಇದು ನಿಸರ್ಗದ ನಿಯಮದ ಪ್ರಭಾವವಲ್ಲ, ಮಾನವನ ಮೃಗ ಪ್ರಭುತ್ವದ ಪ್ರಭಾವ. ಎಲ್ಲೆಲ್ಲೂ ಒಳಿತನ್ನೇ ಕಾಣ ಬಯಸುವ ಆದರ್ಶವಾದಿಯಾದ ಸಮಾನತೆಯ ಪ್ರತಿಪಾದಕನಾದ ಲೇಖಕ ಈ ಡಂಭಾಚಾರ ಈ ಶೋಷಣೆ ಈ ಸೋಗಲಾಡಿತನ ಈ ವಂಚನೆ ಈ ಜತಿಮತ್ಸರ ಈ ಹುಳಿತು ನಾರುವ ಅಂತರಂಗ ಈ ದರ್ಪಗಳನ್ನು ಕಂಡು ಅಸ್ವಸ್ಥ ಮನಸ್ಕನಾಗಿ ರೊಚ್ಚಿಗೇಳುವುದು ಸಹಜ. ತನ್ನ ಬರವಣಿಗೆಯ ಮೂಲಕವಾದರೂ ಸಮಾಜ ಶರೀರದ ಈ ರೋಗಗಳನ್ನು ಖಂಡಿಸಿ ಅವುಗಳ ಅನಾಚಾರವನ್ನು ಬಯಲಿಗೆಳೆದು ನಿರ್ಲಕ್ಷ್ಯಕ್ಕೀಡಾದ ದಲಿತವರ್ಗದ ಉದ್ಧಾರಕ್ಕೆ ಶ್ರಮಿಸುವುದು ತನ್ನ ಧ್ಯೇಯವೆಂದು ಲೇಖಕ ಬಗೆದ. ಎಲ್ಲೆಲ್ಲೂ ಸೌಂದರ್ಯವನ್ನೇ ಸಂಸ್ಕೃತಿಯನ್ನೇ ಕೋಮಲತೆಯನ್ನೇ ಕಾಣುವ, ಸಮಸ್ಯೆ ಇದ್ದರೂ ಸರಳಗೊಳಿಸಿ ನಯವಾಗಿ ನವುರಾಗಿ ಚಿತ್ರಿಸುವ ಸಂಪ್ರದಾಯ ಅವನಿಗೆ ಸರಿದೋರಲಿಲ್ಲ. ಹೀಗೆ ತೀವ್ರತ ಪ್ರತಿಕ್ರಿಯಾಶೀಲವಾಗಿ ಲೋಕ ಸುಧಾರಣಾ ಮನೋಭಾವ ದಿಂದ ಸುಡುವ ಕೆಂಡದ ಕಾವಿನಿಂದ ಮೂಡಿದುದೇ ಪ್ರಗತಿಶೀಲ ಸಾಹಿತ್ಯ. ಈ ಬಗೆಯ ಉದ್ದೇಶದಿಂದ ಕನ್ನಡ ಸಣ್ಣಕತೆಗೆ ಹೊಸ ಪ್ರಾಣ ಹೊಸ ತ್ರಾಣ ಹೊಸ ಮುಖ ಹೊಸ ವೇಗ ಪ್ರಾಪ್ತವಾಯಿತು. ಈ ಪಂಥದ ಪ್ರಮುಖ ಲೇಖಕರಲ್ಲಿ ಕಟ್ಟೀಮನಿಯವರು ಒಬ್ಬರು. ಅವರ ಮನೋಧರ್ಮವೇ ಕ್ರಾಂತಿಕಾರಕವಾದುದು. ಅನ್ಯಾಯ ಅನಾಚಾರಗಳನ್ನು ಕಂಡು ಸಿಡಿದೇಳುವ ಸೌಮ್ಯರೂಪದ ಸಿಡಿಗುಂಡು. ಅವರ ಮೊದಲ ಕಥಾಸಂಕಲನದಲ್ಲಿಯೇ ಇದನ್ನು ಸ್ಪಷ್ಟವಾಗಿ ಸಾರಿದ್ದಾರೆ.

“ಒಳ್ಳೆಯ ವಸ್ತು ಒಳ್ಳೆಯ ಜನ ಕಂಡರೆ ಪ್ರೀತಿ ಗೌರವ ವಿಶ್ವಾಸ. ಸಣ್ಣತನ ಸಂಕುಚಿತ ಪ್ರವೃತ್ತಿ ಜತಿಮತ್ಸರ ಆಷಾಢಭೂತಿತನ ಆರ್ಥಿಕ, ಸಾಮಾಜಿಕ, ರಾಜಕೀಯ ವಿಷಮತೆ ಕಂಡರೆ ನನಗೆ ತಡೆಯಲಾರದೆ ದ್ವೇಷ…. ನನ್ನ ಸಾಹಿತ್ಯ ಅಮರವಾಗದಿದ್ದರೂ ಸರಿಯೇ, ನನ್ನ ಸಾಹಿತ್ಯ ಚಿರಂಜೀವಿಯಾಗದಿದ್ದರೂ ಸರಿಯೇ, ಬಾಳ ಹೋರಾಟದಲ್ಲಿ ಕಾದು ಸೋತು ಹೋಗಲಿರುವ ಬಡ ಬಾಂಧವರಿಗೆ ಅದು ಪ್ರಚೋದನೆ ಮಾಡಿದರೆ ಸಾಕು.

ಈ ಆದರ್ಶ ಈ ಆವೇಶ ಈ ಕಳಕಳಿ ಈ ಕ್ರಾಂತಿಪ್ರಿಯತೆ ಅವರ ಕತೆಗಳಲ್ಲಿ ಎದ್ದು, ಕಾಣುತ್ತದೆ. ಇದರಿಂದ ಗುಣ ದೋಷಗಳೆರಡೂ ಅವರ ಕತೆಗಳಿಗೆ ಲಬ್ಧವಾಗಿವೆ. ಸುಮಾರು ಮೂವತ್ತಕ್ಕಿಂತ ಹೆಚ್ಚು ಕತೆಗಳು ಈ ಮಾದರಿಯಲ್ಲಿ ರಚಿತವಾಗಿವೆ.

ಅವರ ಪ್ರಥಮ ಸಂಕಲನದ ಪ್ರಥಮ ಕತೆಯ ಹೆಸರು “ಕಾರವಾನ್”. ಹೆಸರೇ ತುಂಬಾ ಅರ್ಥಪೂರ್ಣ. ಓಡುವ ರೈಲು ಜೀವನಯಾನದ ಸಮರ್ಥ ಸಂಕೇತ. ಭೀಕರ ಬರದ ದವಡೆಗೆ ತುತ್ತಾದ ಗುಳೇಕಾರ ಕುಟುಂಬವೊಂದರ ಕರುಣಪೂರ್ಣ ಚಿತ್ರ; ಅನ್ನದಾರಿದ್ರ್ಯಕ್ಕೆ ಬಲಿಯಾಗಿ ಪ್ರೇಮ ವಾತ್ಸಲಗಳ ಸಮಾಧಿ ಮಾಡಿದ ತಂದೆ ತಾಯಿಯ ಬೀಭತ್ಸ ದೃಶ್ಯ. ಆ ತಾಯಿ ಹೇಳುವ ‘ನರಕಾಗಿರಕಾ ಯಾವುದೂ ಗೊತ್ತಿಲ್ಲ ಅಮ್ಮ! ಎಂಥ ನರಕವಾದರೂ ಸಂತೋಷದಿಂದ ಹೋದೇನು ನಾನು! ಆದರೆ ಈ ಕೆಟ್ಟ ಜಗತ್ತಿನಲ್ಲಿ ಈ ಐದು ಕುನ್ನಿಗಳನ್ನು ಈ ರೋಗದ ಹುಳುವನ್ನು ಕಟ್ಟಿಕೊಂಡು ಬರೀ ಹೊಟ್ಟೆಯಿಂದ ಮಾತ್ರ ಇರಲಾರೆ ನಾನು…ಎನ್ನುವ ಮಾತಿನಲ್ಲಿ ಅಖಂಡ ಮಾನವ ಕೋಟಿಯ ಬಡತನದ ಆಕ್ರಂದನವಿದೆ. ಹೊಟ್ಟೆಬಟ್ಟೆಯ ಬವಣೆಯಿಂದ ಹೆತ್ತ ಮಗುವನ್ನು ಕೊಲೆ ಮಾಡಲು ಪ್ರೇರೇಪಿಸುವ ಆ ಭೀಕರ ಸ್ಥಿತಿ ಕರುಳು ಹಿಂಡುತ್ತದೆ. ಅವಳು ಭಾರತ ಮಾತೆಯ ಪ್ರತೀಕವಾಗಿ ಕಾಣಿಸುತ್ತಾಳೆ, ಲೇಖಕರಿಗೆ! ಆದರೆ ಇಲ್ಲಿ ಉದ್ದೇಶ ತೀರ ಸ್ಪಷ್ಟವಾಗಿ ಸೂಚ್ಯಕ್ಕಿಂತ ವಾಚ್ಯವೇ ವಿಜೃಂಭಿಸಿ ಕತೆಯ ತೀವ್ರತೆ ಕಾವು ಅರ್ಥಶಕ್ತಿ ಸತ್ತು ಹೋಗಿದೆ.

ನಿಜವಾದ ಆತ್ಮೀಯ ಸ್ನೆಹಕ್ಕೆ ಜತಿಮತಗಳ ತೊಡಕಿಲ್ಲ; ಅದು ಪರಿಶುಭ್ರ, ಸತ್ವಶೀಲ, ಊರ್ಧ್ವಗಾಮಿ ಎಂಬುದರ ರಸ ಚಿತ್ರ ‘ಗೆಳೆಯರು’. ಮಣ್ಣಿನ ಮಕ್ಕಳಾಗಿ ಕೂತುಣ್ಣುವವರಿಗೆ ತಮ್ಮ ಬೆವರನ್ನು ಬಸಿದು ಅನ್ನ ಒದಗಿಸುತ್ತಿದ್ದ ತಿಪ್ಪ, ಆಲಿ ಬರದ ಮಾರಿಗೆ ಬಲಿಯಾಗಿ ಗುಳೇ ಬರಬೇಕಾಗಿ ಬಂದು ಅನುಭವಿಸಿದ ಸಂಕಟದ ದಾರುಣ ಚಿತ್ರಣವಿಲ್ಲಿದೆ. ಅನ್ನ ಕೊಡುವವನೇ ಬೇಡುವಂತಾದಾಗ?…. ಎಲ್ಲರಿಂದಲೂ ನಿಂದೆ, ತಿರಸ್ಕಾರ. ತಮ್ಮ ವೈಯಕ್ತಿಕ ಸ್ವಾರ್ಥಭೂತದ ತೃಪ್ತಿಗಾಗಿ ಮುಗ್ಧ ಜನತೆಯ ಹೃದಯದಲ್ಲಿ ಹಿಂದು ಮುಸ್ಲಿಂ ಎಂಬ ಪ್ರತ್ಯೇಕತೆಯ ಜತಿ ವಿಷವನ್ನು ತುಂಬುತ್ತಿದ್ದ ಪುಡಾರಿಗಳು. ಬಡವರಿಗೆ ಶ್ರಮಜೀವಿಗಳಿಗೆ ನಿಸ್ವಾರ್ಥಿಗಳಿಗೆ ಮತ ಭ್ರಾಂತಿಯಿಲ್ಲ. ಅವರದೆಲ್ಲ ಒಂದೇ ಮತ, ದುಡಿದುಣ್ಣುವ ಕಷ್ಟದಲ್ಲಿ ಕರಗುವ ಸಹಕರಿಸುವ ಮತ. ಈ ತತ್ವ ಇಲ್ಲಿ ಸುಂದರವಾಗಿ ಪ್ರತಿಪಾದಿತವಾಗಿದೆ. ತಿಪ್ಪ ಆಲಿಯರ ಸ್ನೇಹ ಇದರ ಶಕ್ತಿಯುತ ಸಂಕೇತ. ಇದನ್ನು ಚಿತ್ರಿಸುವಾಗ ಲೇಖಕನಿಗೆ ಅತೀವ ಉತ್ಕಟತೆ ಭಾವಸಾಂದ್ರತೆ ತುಂಬಿಕೊಂಡು ಬಂದಿದೆ;

‘ನಂದಿ ಹೋಗುವುದರಲ್ಲಿತ್ತು ದೀಪ. ಬತ್ತಿ ಹೋಗುವುದರಲ್ಲಿತ್ತು ಹೊಳೆ. ನಿಂತಿತ್ತು ಉಸಿರು, ಮುಚ್ಚಿತ್ತು ಕಣ್ಣು, ತೆರೆದಿತ್ತು ಬಾಯಿ. ಹಾರಿತ್ತು ಹಕ್ಕಿ. ಭಾಷೆ  ಕಾವ್ಯಮಯವಾಗಿದೆ.

ಕಷ್ಟದ ಕಡಲಲ್ಲಿ ಮುಳುಗುತ್ತಿರುವವರನ್ನು ಕನಿಕರಿಸಿ ಕೈಹಿಡಿದು ಮೇಲೆತ್ತುವವರು ತುಂಬ ವಿರಳ. ಅಪರೂಪವಾಗಿ ಒಮ್ಮೆ ಒಬ್ಬರು ಅಂಥವರ ಬಗ್ಗೆ ಕರುಣ ಸಹಾನುಭೂತಿಗಳ ಚಿಲುಮೆ ಚಿಮ್ಮಿಸಿ ಸಹಾಯವೆಸಗಲು ಮುಂದಾದರೆ ಛಿದ್ರಾನ್ವೇಷಣ ಬುದ್ದಿಯ ಕೊಳಕು ಮನಸ್ಸಿನ ನೂರಾರು ಹೊಲಸು ಬಾಯಿಗಳು ನಿಂದೆ ಕುಹಕ ಅಪಹಾಸ್ಯಗಳ ಹೇಸಿಗೆ ಯನ್ನುಗುಳಲು ತೀವ್ರ ವೇಗದಿಂದ ಧಾವಿಸುತ್ತವೆ – ಎಂಬುದನ್ನು ನಿರೂಪಿಸುವ ಕತೆ ಬರದ ದೇವಿ. ತಾವು ಸ್ಥಿತಿವಂತರಲ್ಲದಿದ್ದರೂ ದುಃಖ ಕಷ್ಟಗಳಿಗೆ ಮರುಗಿ ತನ್ನಂತಹ ಹೆಣ್ಣೊಬ್ಬಳಿಗೆ, ಈ ಮತ್ಸರ ತುಂಬಿದ ಜಗತ್ತಿನಲ್ಲಿ ಸಹಾಯ ಮಾಡಲು ಮುಂದಾದ ಪಾರ್ವತಿಯ ಸಹಾನುಭೂತಿಯುತವಾದ ಉದಾತ್ತ ಮೂರ್ತಿ ಕಣ್ಣಿಗೆ ಕಟ್ಟುವಂತೆ ನಿರ್ಮಿಸಲ್ಪಟ್ಟಿದೆ. ಹೆಂಡತಿಯ ಪರೋಪಕಾರ ಬುದ್ದಿಗೆ ತಲೆಬಾಗುವ ಶಿವಣ್ಣನ ಪಾತ್ರವೂ ವಿಶಿಷ್ಟವೇ. ಪುಟ್ಟಪುಟ್ಟ ವಾಕ್ಯಗಳ ಸಂಭಾಷಣೆಗಳು ಜೀವಕಳೆಯಿಂದ ತುಂಬಿ ಹೃದಯದ ಭಾವತರಂಗಗಳನ್ನು ಸಹೃದಯರಿಗೆ ಸ್ಪಷ್ಟವಾಗಿ ಕೇಳಿಸುವಲ್ಲಿ ಸಫಲವಾಗಿವೆ. ಕಲ್ಪಿಸಿರುವ ಸನ್ನಿವೇಶಗಳು ತುಂಬ ನೈಜವಾಗಿದ್ದು ಕಥಾವಸ್ತುವಿನ ಸಂವೇದನೆಯನ್ನು ಪರಿಣಾಮವನ್ನು ಸಾಂದ್ರಗೊಳಿಸುವಲ್ಲಿ ಯಶಸ್ವಿಯಾಗಿವೆ. ಹೆಚ್ಚು ನೇರವಾಗಿ ಕಾಣಿಸಿಕೊಳ್ಳದಿದ್ದರೂ ಕತೆಯ ಕೇಂದ್ರ ಬಿಂದುವಾದ ನಿಂಗಮ್ಮನ ಮಾತೃವಾತ್ಸಲ್ಯ, ಉಪಕಾರ ಕೃತಜ್ಞತೆ, ಅಪವಾದ ಭೀರುತನ ಉಜ್ವಲವಾಗಿ ಕಡೆಯಲ್ಪಟ್ಟಿವೆ. ಪ್ರಾಣಕ್ಕಿಂತ ಮಾನ ಹೆಚ್ಚು. ವೃಥಾಪವಾದ ಹೊತ್ತು ಜೀವಿಸುವುದಕ್ಕಿಂತ ಉಪವಾಸ ಲೇಸು. ತನ್ನಿಂದ ಮತ್ತೊಬ್ಬರ ಮರ್ಯಾದೆ ಮಲಿನವಾಗಬಾರದು ಎಂದು ಕತೆಯ ಕೊನೆಯಲ್ಲಿ ಹೇಳದೇ ಕೇಳದೆ ಮಾಯವಾಗಿ ಅರ್ಥಪೂರ್ಣ ಮುಕ್ತಾಯವನ್ನು ತಂದ ಅವಳ ಪಾತ್ರ ಮರೆಯಲಾಗದ್ದು. ಲೇಖಕರಿಗೆ ಅವಳು ಕೇವಲ ಒಬ್ಬ ನಾರಿಯಲ್ಲ, ‘ಬರದದೇವಿ’. ಕತೆಗೆ ಹೆಸರಿಡುವುದರಲ್ಲಿ ಕಟ್ಟೀಮನಿ ಕುಶಲರು.

‘ಹೊಸ ವರ್ಷದ ಹಳೇರಾತ್ರಿ’ – ಧ್ವನಿರಮ್ಯವಾದ ಸುಂದರ ಹೆಸರು. ಬಡತನ ಸಿರಿತನಗಳ’ ನಡುವೆ ಎದ್ದು ಕಾಣುವ ಅಗಾಧ ವ್ಯತ್ಯಾಸವನ್ನು ಕಣ್ಣಿಗೆ ಹೊಡೆಯುವಂತೆ ಚಿತ್ರಿಸುತ್ತದೆ ಈ ಕತೆ. ಒಂದು ಕಡೆ ಭೋಗ ವೈಭವಗಳ ತವರೂರಾದ ಶ್ರೀಮಂತರ ಮೂರಂತಸ್ತಿನ ಸುಂದರ ಸೌಧ, ಪಕ್ಕದಲ್ಲೆ ಕಷ್ಟ ದಾರಿದ್ರ್ಯಗಳ ದುರಂತ ದುರ್ಗವಾದ ಕೊಳಕು ಗುಡಿಸಲು. ಒಂದು ಕಡೆ ತಮ್ಮ ನಾಯಿಗೆ ಬೆಣ್ಣೆ ಬಿಸ್ಕತ್ತುಗಳನ್ನು ತಿನ್ನಿಸಿ ಚಿನ್ನಾಟವಾಡುವ ದೃಶ್ಯ; ಮತ್ತೊಂದೆಡೆ ತುತ್ತು ಕೂಳಿಲ್ಲದ ಹಸಿವಿನಿಂದ ಚೀರಿಡುತ್ತಿರುವ ಮೂಳೆ ಚಕ್ಕಳದ ಮಗು. ಹೊಸ ವರ್ಷವ ಹೊಸ ದಿನದ ಸಂಕೇತವಾಗಿ ಪಕ್ವಾನ್ನಗಳ ಪರಿಮಳದ ಹಬ್ಬ; ಹೊಸ ವರ್ಷವಾದರೂ ಹಳೆಯ ರಾತ್ರಿಯಂತೆಯೇ ಕಣ್ಣೀರು ಉಪವಾಸದ ದಿಬ್ಬ. ಈ ವಿಷಮತೆ, ಈ ಗೋಳು ಕರುಳು ಕತ್ತರಿಸುತ್ತದೆ. ಆದರೂ ಕತೆಯಲ್ಲಿ ಕಲಾವಂತಿಕೆಯಿಲ್ಲ. ಬಡತನದ ದಾರುಣತೆಯನ್ನು ಹೆಚ್ಚಿಸಲು ಅನಾವಶ್ಯಕವಾಗಿ ಶ್ರೀಮಂತರ ವೈಭವವನ್ನು ಎಳೆದಾಡಿ ಹಿಂಸಿಸಿದಂತೆ ಕಾಣುತ್ತದೆ. ಹೊರಗೆ ಕಾಣುವ ವಸ್ತು ನೇರವಾಗಿ ಯಾವ ರಸಪರಿವರ್ತನೆಯೂ ಇಲ್ಲದೆ ಕಥಾಲೋಕಕ್ಕೆ ಪ್ರವೇಶಿಸಿದಂತಿದೆಯಾದ್ದರಿಂದ ಸಫಲ ಕಲಾ ಪರಿಣಾಮವನ್ನು ಬೀರುವುದಿಲ್ಲ. ಕಲಾವಿದನ ನಿರ್ಲಿಪ್ತತೆಯೂ ಕಾಣದೆ ಪಕ್ಷಪಾತ ದೃಷ್ಟಿ ಎದ್ದು ತೋರುತ್ತದೆ.

ಭಾವುಕ ವ್ಯಕ್ತಿಯೊಬ್ಬನ ಪ್ರಣಯಾರಾಧನೆ ಮಿತ್ರನೊಬ್ಬನ ಸಮಯೋಚಿತ ಎಚ್ಚರಿಕೆ ಯಿಂದ ಸ್ವಾತಂತ್ರ ಪ್ರೇಮಾರಾಧನೆಗೆ ತಿರುಗಿ ಉಗ್ರವಾದ ಪ್ರತಿಕ್ರಿಯೆಯಲ್ಲಿ ಪರಿಸಮಾಪ್ತಿ ಯಾದ ಕತೆ ‘ಮೀಸಲು ಹೂ’. ಕತೆಯ ಅಂತ್ಯ ಸುಂದರವಾಗಿದೆಯಾದರೂ ಕಥಾ ಶರೀರದಲ್ಲಿ ರಕ್ತಮಾಂಸ ತುಂಬಿ ಬಂದಿಲ್ಲ. ‘ದೀಪಾವಳಿಯ ಕತ್ತಲೆ’ ಒಂದು ಮನೋಜ್ಞ ಕತೆ. ಹೆಸರಂತೂ ತುಂಬಾ ಮಾರ್ಮಿಕ, ಅರ್ಥಪೂರ್ಣ. ಅತಿ ಚಿಕ್ಕದಾದ ಪರಿಮಿತಿಯಲ್ಲಿ ಅಗಾಧ ಪರಿಣಾಮ ವನ್ನುಂಟು ಮಾಡುವ ಹೃದಯಾಕರ್ಷವಾದ ಸತ್ವಶಾಲೀ ಕತೆಯಿದು. ಕಂಡ ಸವಿಗನಸುಗಳೆಲ್ಲ ಗಾಳಿಗುಳ್ಳೆಗಳಾಗಿ ಭೀಕರ ಬಡತನದ ಸುಳಿಯಲ್ಲಿ ಸಿಕ್ಕು ಬಿದ್ದ ತರುಣ ದಂಪತಿಗಳ ಸುತ್ತಹೆಣೆದ ಕತೆ. ಆ ಬಡತನದ ಚಿತ್ರಗಳಂತೂ ಜೀವಂದುಂಬಿ ನಮ್ಮೆದುರು ನರ್ತಿಸುತ್ತವೆ.

“ರವಕೆಗಳೂ ಹರಿದು ದೋಸೆಯಂತಾಗಿವೆ. ತನ್ನ ಈ ಅವಸ್ಥೆ ನನಗೆ ತಿಳಿದರೆ ಎಲ್ಲಿ ವೇದನೆಯಾದೀತೋ ಎಂದು ಮತ್ತೆ ಮತ್ತೆ ಎಲ್ಲವನ್ನೂ ಹೊಲಿದುಕೊಳ್ಳುತ್ತಾಳೆ. ಆದರೆ ತಿಳಿಯದಿದ್ದೀತೆ ನನಗೆ? ಮೊನ್ನೆ ತೊಟ್ಟ ರವಿಕೆಯನ್ನೇ ತೆಗೆದು ಹೊಲಿಯುತ್ತ ಕೂತಿದ್ದಳು. ತಟ್ಟನೆ ನಾನು ಮನೆಗೆ ಬಂದು ಬಿಟ್ಟೆ. ಅವಳಿಗೆಷ್ಟು ನಾಚಿಕೆಯಾಯಿತು ಆಗ! ಅವಳಿಗೂ ಹೆಚ್ಚು ನಾಚಿಗೆ ನನಗಾಯಿತು! “ಚಂದ್ರಣ್ಣ ಎದ್ದು ನೋಡಿದ, ಶಾರದೆ ಒಲೆಯೆದುರು ಕುಳಿತಿದ್ದಾಳೆ, ಕೈಲಿ ಊದುಗೊಳವೆ ನರ್ತಿಸುತ್ತಿದೆ. ಬೆಂಕಿಯೆ ಇಲ್ಲ ಒಲೆಯಲ್ಲಿ!… ಎದ್ದು ಹತ್ತಿರಕ್ಕೆ ಹೋದ. ಅವಳ ಕಣ್ಣುಗಳಲ್ಲಿ ನೀರು ತುಂಬಿ ಬಂದಿದೆ! ಕೆನ್ನೆಗಳೆರಡೂ ತೊಯ್ದು ಹೋಗಿವೆ! “ಕಡಲೆ ಪುರಿಯೆ ಅವರ ಹೋಳಿಗೆ! ಪರಸ್ಪರರ ಎದೆಯ ಬೆಳಕೇ ಅವರ ದೀಪಾವಳಿ!”

ಪ್ರತಿ ಸಾಲುಗಳಲ್ಲೂ ಕರುಣೆ ಜಿನುಗುತ್ತಿದೆ. ಸುತ್ತಮುತ್ತಲಿನ ಶ್ರೀಮಂತರ ಡೌಲು ಬೆಳಕಿನ ವೈಭವವನ್ನು ಕಂಡಾಗ ತಮ್ಮ ಸ್ಥಿತಿ ಪರಮ ಶೋಚನೀಯವೆನ್ನಿಸಿದ ಅವರಿಗೆ, ಚಿಕ್ಕ ಲಾಲ್‌ಬಾಗಿನಲ್ಲಿ ತಮಗಿಂತ ಹೀನಾವಸ್ಥೆಯಲ್ಲಿ ತೊಳಲುತ್ತಿದ್ದ ಜನರನ್ನು ಕಂಡಾಗ ತಮ್ಮ ಸ್ಥಿತಿಯೇ ಮೇಲೆನ್ನಿಸುತ್ತದೆ. ಕಥಾನಾಯಕ ತನ್ನ ಕೈಯಲ್ಲಿದ್ದ ಕಡಲೆ ಪುರಿಯನ್ನು ಭಿಕಾರಿಯೊಬ್ಬನ ಬೊಗಸೆಗೆ ಸುರಿಯುತ್ತಾನೆ. ಬಡವರಿಗೆ ಬಡವರೇ ಆಧಾರ. ಒಂದು ಕಡೆ ಕಣ್ಣು ಕೋರೈಸುವ ಬೆಳಕು, ಮತ್ತೊಂದೆಡೆ ಕಣ್ಣು ಕಾಣದ ಕತ್ತಲು. ಒಬ್ಬರ ದೀಪಾವಳಿ ಮತ್ತೊಬ್ಬರ ಕಾರ್ಗತ್ತಲು, ಸಿರಿವಂತರ ಮನೆಯಲ್ಲಿ ದೀಪಾವಳಿ, ಮನದಲ್ಲಿ ಕತ್ತಲು; ಬಡವರ ಮನೆ ಕತ್ತಲು, ಮನ ಬೆಳಕು. ತುಂಬ ಸಾರ್ಥಕವಾದ ಕತೆಯಿದು.

‘ಮೋಹದ ರಾತ್ರಿ’ ತೀರ ಅಸಹಜವಾದ ಒಂದು ಕತೆ. ತನ್ನ ಸ್ನೇಹಿತನ ನಿಷ್ಠೆ ಪ್ರಾಮಾಣಿಕತೆ ಯನ್ನು ಪರೀಕ್ಷಿಸಲು ತನ್ನ ಹೆಂಡತಿಯೊಡನೆ ಬಿಟ್ಟು ಹೋಗಿ, ಆತ ಆಕೆಯ ಸೌಂದರ್ಯ ವೈಯ್ಯಾರಗಳಿಗೆ ಮಾರು ಹೋಗಿ ತಮ್ಮಿಬ್ಬರ ಸ್ನೇಹವನ್ನು ಮರೆತು ಅವಳನ್ನು ರಮಿಸಲು ಮುಂದಾದಾಗ ಅನಿರೀಕ್ಷಿತವಾಗಿ ಕಾಣಿಸಿಕೊಂಡು ಅಗಲಿದ್ದ ಅನಾಹುತವನ್ನು ತಡೆದು, ತಾನೂ ಮತ್ತು ತನ್ನ ಹೆಂಡತಿಯೂ ಬೇಕೆಂದೇ ನಾಟಕವಾಡಿದೆವೆಂದು ಹೇಳಿ ಅವನನ್ನು ಮನ್ನಿಸಿದ ಕತೆಯಿದು. ಈ ರೀತಿಯ ಸ್ನೇಹದ ಪರೀಕ್ಷೆಗೆ ಅಗತ್ಯವಾದ ಯಾವ ಸಮರ್ಥ ಹಿನ್ನೆಲೆಯೂ ಇಲ್ಲಿ ಕಾಣಿಸದು. ಘಟನೆಗಳೆಲ್ಲ ತೀರ ನಾಟಕೀಯ. ಸ್ನೇಹಿತನ ಹೆಂಡತಿಗೆ ಮಾರು ಹೋಗುವ ಮುಂಚೆ ಶಂಕರನ ಮನಸ್ಸಿನ ತಾಕಲಾಟವನ್ನು ಕೆಲಮಟ್ಟಿಗೆ ಚಿತ್ರಿಸಲಾಗಿದೆಯಾದರೂ ಅದು ಒಂದು ಮಾರ್ಗದ್ದು ಮಾತ್ರ. ಸ್ವಾಮಿ ಅತಿ ಉದಾರತೆಯನ್ನು ಪ್ರದರ್ಶಿಸುತ್ತಾನೆ. ಇಲ್ಲಿಯೂ ಬಡವ ಮತ್ತು ಬಲ್ಲಿದರ ಹೃದಯಗಳ ಅಂತರವನ್ನು ತೋರಿಸುವುದನ್ನು ಲೇಖಕರು ಮರೆತಿಲ್ಲ. ಭಾಷೆ ಮಾತ್ರ ವಸ್ತುವಿಗೆ ತಕ್ಕಂತೆ ಭಾವುಕತೆ ನವುರು ಕೋಮಲತೆ ಕಲ್ಪಕತೆಗಳಿಂದ ತುಂಬಿ ರೋಚಕವಾಗಿದೆ.

ಮನುಷ್ಯನ ದೇಹಕ್ಕೆ ಎಷ್ಟು ವಯಸ್ಸಾದರೂ ಮನಸ್ಸು ಮಾತ್ರ ಮಗುವಿನದೇ ಇರುತ್ತದೆ ಎಂಬ ಮನಶ್ಯಾಸ್ತ್ರದ ಸಿದ್ಧಾಂತವೊಂದರ ಮೇಲೆ ರಚಿತವಾದ ಕತೆ ‘ಮನಸಿನ ಮಂಜು’. ಮೋಸಗಾರರ ಮಾಂತ್ರಿಕವಾದ ಮಾತಿನ ಶಕ್ತಿಯಿಂದ ಸುಸಂಸ್ಕೃತರೂ ವಿದ್ಯಾವಂತರೂ ವಿಚಾರಶೀಲರೂ ಆದ ಜನವೂ ಹೇಗೆ ಮೋಸ ಹೋಗುತ್ತಾರೆಂಬುದನ್ನು ಇಲ್ಲಿ ಸ್ವಾರಸ್ಯವಾಗಿ ನಿರೂಪಿಸಲಾಗಿದೆ. ಸಹಾಯವೆಸಗಿದವರಿಗೇ ದ್ರೋಹ ಬಗೆಯುವ, ಉಂಡ ಮನೆಯ ಗಳು ಇಳಿಸುವ ಧೂರ್ತ ಶಿಖಾಮಣಿಗಳ ಪ್ರವೃತ್ತಿಯ ಸಹಜ ಚಿತ್ರಣ ಇಲ್ಲಿದೆ. ಕತೆ ತುಂಬ ವೇಗವಾಗಿ ಬೆಳೆಬೆಳೆಯುತ್ತಾ ಹೋಗಿ ಅಂತಿಮ ಗುರಿಯನ್ನು ಕುತೂಹಲಕರವಾಗಿ ತಲುಪುತ್ತದೆ. ‘ಸಿಗರೇಟಿನ’ ಪೊಟ್ಟಣದ ಕಡೆ ಅವನ ಕೈ ಬಾಗಿತು ‘ಅದು ಬರಿದಾಗಿತ್ತು!’- ಎಂಬ ಕೊನೆಯ ಸಾಲುಗಳು ತುಂಬ ಅರ್ಥವತ್ತಾಗಿವೆ.

ದಯೆಯೇ ಧರ್ಮದ ಮೂಲವೆಂದು ಸಾರಿದರು ಬಸವಣ್ಣನವರು. ಆದರೆ ಧರ್ಮ ಸಂರಕ್ಷಕರೆಂದು ಭಕ್ತಿ ಗೋಪುರಗಳೆಂದು ಕರೆದುಕೊಳ್ಳುವವರು ಧರ್ಮದ ಪ್ರಾಣವಾದ ದಯೆಯನ್ನೇ ಹೊರಗಟ್ಟಿ ನೀತಿ ನಿಯಮಗಳ ಶವ ಪೂಜೆಯಲ್ಲಿ ನಿರತವಾಗಿರುವ ದುರಂತಕರ  ಚಿತ್ರವನ್ನು ತುಂಬ ಪ್ರಭಾವಿಯಾಗಿ ಮೂಡಿಸಿರುವ ಕತೆ ‘ಸೆರೆಯಿಂದ ಹೊರಗೆ’. ಕರುಣೆಯ ಕಣ್ಣಾಗಿ ನೀತಿಯ ಬೆಳಕಾಗಿ ಸಹಾನುಭೂತಿಯ ಆಗರವಾಗಿ ಆದರ್ಶವಾಗಿ ಇರಬೇಕಾಗಿದ್ದ, ವಿದ್ಯಾರ್ಥಿನಿಲಯವೊಂದನ್ನು ಉಚಿತವಾಗಿ ನಡೆಸುತ್ತಿದ್ದ ಸರ್ವಾಧಿಕಾರಿಯಾದ ಸ್ವಾಮಿ ಯೊಬ್ಬರು ಹೊತ್ತು ಮೀರಿ ಬಂದ ಅಪರಾಧಕ್ಕಾಗಿ ದೀನ ಬಾಲಕನೊಬ್ಬನನ್ನು ನಿರ್ದಯವಾಗಿ ಥಳಿಸಿ ಪಾದರಕ್ಷೆಯ ಕಾಲಲ್ಲಿ ಅಪ್ಪಳಿಸಿದ ಅಸಹ್ಯಕರ ಘಟನೆಯ ಮನ ಕರಗುವ ನಿರೂಪಣೆಯಿದು. ಧರ್ಮವೃಕ್ಷ ಇಂಥವರಿಂದಾಗಿ ಟೊಳ್ಳು ಹಿಡಿದಿದೆ, ತಿರುಳು ಮಾಯ ವಾಗಿದೆ. ಇಂತಹ ಅನ್ಯಾಯ ಅಕೃತ್ಯಗಳನ್ನು ಜನತೆ ಖಂಡಿಸಬೇಕು, ಬಯಲಿಗೆಳೆಯಬೇಕು, ಶುದ್ದೀಕರಣಗೊಳಿಸಬೇಕು ಎನ್ನುವ ತೀವ್ರವಾದ ಕಳಕಳಿ ಕೆಚ್ಚು ಆಕ್ರೋಶ ಇಲ್ಲಿನ ರಾಜಣ್ಣನ ಪಾತ್ರದ ಮೂಲಕ ವ್ಯಕ್ತವಾಗುವಂತೆ ಲೇಖಕರು ಚಿತ್ರಿಸುತ್ತಾರೆ. ಅನಾಥರಿಗೆ ದುಃಖಿತರಿಗೆ ಮನೆಯಾಗಬೇಕಾಗಿದ್ದ ಧರ್ಮ ಆಷಾಢಭೂತಿಗಳ ಕೈಗೆ ಸಿಕ್ಕಿ ಹೇಗೆ ಸೆರೆಮನೆಯಾಗಿದೆ ಎಂಬುದನ್ನು ಸ್ವಾಭಾವಿಕವಾಗಿ ಶಕ್ತಿಯುತವಾಗಿ ಪ್ರತಿಪಾದಿಸುತ್ತದೆ ಈ ಕತೆ.

‘ಗಿರಿಜ ಕಂಡ ಸಿನಿಮಾ’ ನಮ್ಮ ಪ್ರಗತಿಶೀಲ ಕತೆಗಳ ಒಂದು ಅತ್ಯುತ್ತಮ ಪ್ರತಿನಿಧಿ. ತರುಣ ಬಡ ದಂಪತಿಗಳು ಕಂಡ ಜೀವನದ ವಿವಿಧ ಮುಖಗಳ ದರ್ಶನವೇ ಸಿನಿಮಾ. ತಾರುಣ್ಯದ ಹೊನ್ನ ಹೊಸ್ತಿಲಲ್ಲಿದ್ದ ಗಿರಿಜೆಗೆ ವಯಸ್ಸಿಗನುಗುಣವಾದ ಮೋಜಿನ ಬಯಕೆ. ಗಂಡ ಬಡ ಕೂಲಿಕಾರ, ತನ್ನಂಥವರ ಕಷ್ಟಕ್ಕಾಗಿ ಕರಗುವವ, ಮರುಗುವವ, ಮಡದಿಯೆಂದರೆ ಮಹಾ ಮೋಹ. ಬಡ ಜೀವನದ ಸುಳಿಸುತ್ತುಗಳು ಅವನಿಗರಿವಿದ್ದರೂ ಹೆಂಡತಿಯ ಬೇಡಿಕೆಯನ್ನು ನಿರಾಕರಿಸಲಾರ. ಅವಳ ಒಂದು ಕೋರಿಕೆಯನ್ನಾದರೂ ಈಡೇರಿಸಲು ಪಟ್ಟಣಕ್ಕೆ ಸಿನಿಮಾ ನೋಡಲು ಬರುತ್ತಾನೆ. ಉದ್ದಕ್ಕೂ ಸಿರಿತನ ಬಡತನಗಳ ಶಿಖರ ಕಂದರಗಳ ಅಂತರ ಕಣ್ಣಿಗೆ ಹೊಡೆಯುತ್ತದೆ. ಪಕ್ಕದ ಮನೆಯ ದೇವಮ್ಮನ ಮೆರೆಯುವ ಅಲಂಕಾರ, ರೈಲಿನಲ್ಲಿನ ವಿವಿಧ ತರಗತಿಯ ಆಸನಗಳು, ನೊಣದಂತೆ ಮುತ್ತಿದ್ದ ಜನ, ಮೇಲ್ದರ್ಜೆಯಲ್ಲಿ ಅಟ್ಟಹಾಸದಿಂದ ಮಂಡಿಸಿದ್ದ ಉಳ್ಳವರು – ಇಲ್ಲಿಂದಲೇ ಸುರುವಾಗುತ್ತದೆ ಜೀವನ ಸಿನಿಮಾ. ಚಿಕ್ಕಲಾಲ್‌ಬಾಗಿಗೆ ಅವರು ಹೋದಾಗ ಅಲ್ಲಿನ ಬಡತನದ ನೂರೆಂಟು ಮುಖಗಳ ಜೀವಂತ ಚಿತ್ರ ಗಿರಿಜೆಯ ಕಣ್ಣಿಗೆ ಬೀಳುತ್ತದೆ. ಮಾನ ಮಾರ್ಯದೆ ಮರೆತು ಮೈ ಮರೆತೊರಗಿದ ಮೂಳೆ ಹಂದರದ ತಾಯಿ, ಹರಕು ಹೊಲಸು ಬಟ್ಟೆಯಲ್ಲಿ ಬಿಸಿಲಿನಲ್ಲಿ ಬಿದ್ದಿದ್ದ ಮಕ್ಕಳು, ಕಳ್ಳೇಕಾಯಿ ಮಾರುವ ಕೋಲು ಕಾಯದ ಎಪ್ಪತ್ತರ ಮುದುಕ – ಒಂದೊಂದೂ ರಕ್ತ ಹಿಂಡುವ ದೃಶ್ಯ. ಸಿನಿಮಾಕ್ಕೆ ಹೋದರೆ ಟೆಕೆಟ್ಟಿಗೆ ಸೊನ್ನೆ. ಅಲ್ಲಿಯೂ ಕಾಳಸಂತೆ, ಅವರಿಗೆ ಸಾಮಿಲಾದ ಪೋಲೀಸರು. ಮನೆಗೆ ಹಿಂದಿರುಗೋಣವೆಂದರೆ ಯಾರೋ ಪುಣ್ಯವಂತರು ಹಣ ಹಾರಿಸಿದರು. ಕೊನೆಗೆ ರಾತ್ರಿ ಉಳಿಯಲು ಅವರು ಹೊರಟಿದ್ದು ಚಿಕ್ಕಲಾಲ್‌ಬಾಗಿಗೆ, ಬಾಳಿನ ಬಣ್ಣ ಬಣ್ಣದ ಚಿತ್ರ ಪ್ರದರ್ಶನ ಕೇಂದ್ರಕ್ಕೆ. ಇಲ್ಲಿ ಹಲವಾರು ಘಟನೆಗಳು ಚಲನಚಿತ್ರದ ಸುರುಳಿಯಂತೆ ಒಂದಕ್ಕೊಂದು ಸುಸಂಗತವಾಗಿ ಹೆಣೆದುಕೊಂಡು ಮನಸ್ಸಿನ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತವೆ. ಇವುಗಳ ಜೋಡಣೆಯಲ್ಲಿ ನೈಪುಣ್ಯವಿದೆ, ಕಲಾತ್ಮಕತೆಯಿದೆ. ಅಂತ್ಯದವರೆಗೂ ಕತೆ ನಮ್ಮ ಮನಸ್ಸನ್ನು ಆಕ್ರಮಿಸಿ ಆಳುತ್ತದೆ. ವಿಷಮತೆಯನ್ನು ಚಿತ್ರಿಸುವಾಗ ಕಟ್ಟೀಮನಿಯವರ ಲೇಖನಿಗೆ ಹೊಸ ಹುರುಪು ಹೊಸ ಶಕ್ತಿ ಮೊನಚು ಒಗಚು ಸಂಪ್ರಾಪ್ತವಾಗುತ್ತವೆ. ಆರಂಭದ ವಿವರಣೆಯನ್ನು ಮೊಟಕುಗೊಳಿಸಿದ್ದರೆ ಕತೆಯ ಪ್ರಖರತೆ ಪರಿಣಾಮ ಇನ್ನೂ ಹೆಚ್ಚುತ್ತಿತ್ತು.

ಪತ್ರಿಕಾ ಸಂಪಾದಕನೊಬ್ಬನ ಬಾಳ ಬವಣೆಯ ಹೃದಯ ವಿದ್ರಾವಕ ಚಿತ್ರ ‘ಉಪ ಸಂಪಾದಕನ ಕುರ್ಚಿ’. ಆರಂಭವೇ ಅತ್ಯಂತ ಕುತೂಹಲಕರವಾಗಿದೆ. ಹೆಜ್ಜೆ ಹೆಜ್ಜೆಗೂ ಎದೆ ಡವಗುಡುವ ಅಸಾಧಾರಣ ತೀವ್ರ ವೇಗದಲ್ಲಿ, ಕಣ್ಣಿಗೆ ಕಟ್ಟುವ ಮನ ಮುಟ್ಟುವ ವಿವರ ಗಳೊಡನೆ ಕಥಾ ಶರೀರ ಚೈತನ್ಯಶಾಲಿಯಾಗಿ ಬೆಳೆಯುತ್ತಾ ಹೋಗುತ್ತದೆ. ಗೆಳೆಯರ ಮನಃಪೂರ್ವಕ ದುಡಿಮೆಯ ಫಲವಾಗಿ ಹಣ ಸ್ಥಾನಮಾನಗಳನ್ನು ಗಳಿಸಿಕೊಂಡು ಬಂಡವಾಳಿಗನಾಗಿ ತಾನು ಹತ್ತಿ ಬಂದ ಏಣಿಯನ್ನೇ ಒದೆದು ಅವರನ್ನು ತನ್ನ ಧನದಾಹಕ್ಕೆ ಬಲಿ ತೆಗೆದುಕೊಂಡ ಈ ಕತೆ ರುದ್ರ ಭೀಕರವಾಗಿದೆ. ಹಣ ಕೂಡುತ್ತಾ ಹೋದಂತೆ ಹೃದಯ ಬರಡಾಗುತ್ತಾ, ಸ್ಥಾನ ಹೆಚ್ಚುತ್ತಾ ಹೋದಂತೆ ಸ್ನೇಹ ಕರುಣೆಗಳು ಬತ್ತುತ್ತಾ ಹೋಗುವ ಲೋಕದ ರೀತಿಯ ವಾಸ್ತವಿಕ ಪೃಥಕ್ಕರಣೆ ಸೊಗಸಾಗಿ ಮೂಡಿದೆ; ಸಂಪಾದಕನ ದಟ್ಟ ದಾರಿದ್ರ್ಯದ ಮತ್ತು ವೃತ್ತಿ ವಾತ್ಸಲ್ಯದ ಅನುಭವ ಪೂರ್ಣವಾದ ಅಭಿವ್ಯಕ್ತಿಯಿದೆ. ಅನ್ಯಾಯ ಅಧರ್ಮದ ಆಕ್ರಂದನ ಕತೆಯ ತುಂಬ ವ್ಯಾಪಿಸಿದೆ.

ಇರದುದನ್ನು ಹಂಬಲಿಸದೆ ಇರುವುದರಲ್ಲೇ ಪ್ರಾಮಾಣಿಕವಾಗಿ ಬದುಕುವ ನಿಷ್ಕಾಮ ಕರ್ಮದ ಜೀವ ಒಂದು; ಇಲ್ಲದುದಕ್ಕಾಗಿ ಬಾಯಿಬಿಟ್ಟು, ಅದು ದೊರಕಿದಾಗ ದೃಷ್ಟಿಗೆಟ್ಟು ನೆಲೆಬಿಟ್ಟು ಬಣ್ಣದ ಬೆಲುನಾಗಿ ತೇಲಿ, ಅದು ಸಹಜವಾಗಿಯೇ ಒಡೆದಾಗ ಧೃತಿಗೆಟ್ಟು, ಮತಿಗೆಟ್ಟು ನಿರಾಶೆಯ ಕಂದರದಲ್ಲಿ ಬಿದ್ದು ಪರಿತಪಿಸುವ ಜೀವ ಮತ್ತೊಂದು. ಇವುಗಳೆರಡರ ಅಪೂರ್ವವಾದ ಸಮರಸ ಹೆಣಿಕೆಯಿಂದ ಹುಟ್ಟಿಬಂದ ಪ್ರಭಾವಪೂರ್ಣ ಕತೆ ‘ಬಣ್ಣದ ಬುಗ್ಗೆ’. ಭೂಮಿಯ ಮೇಲಿನ ದಾರಿಯಲ್ಲೇ ನಡೆಯುವವನಿಗೆ ಅದರ ಏಕ ರೀತಿಗೆ ಕೆಲವೊಮ್ಮೆ ಬೇಸರವಾದರೂ ಅಪಾಯವಿಲ್ಲ; ಆದರೆ ಆಕಾಶದಲ್ಲಿ ವಿಹರಿಸ ಬಯಸುವವರು ಮೈಯೆಲ್ಲಾ ಎಚ್ಚರವಿರದಿದ್ದರೆ ಗಳಿಗೆಗಳಿಗೆಗೂ ಗಂಡ ತಪ್ಪಿದ್ದಲ್ಲ. ಇಲ್ಲಿಯ ನಾಯಕ ಅಂಥವನು. ದಟ್ಟದರಿದ್ರನಾಗಿದ್ದಾಗ ಮನೆ ಮನೆಯ ಮುಂದೆ ನಿಂತು ಕೂಗಿ ಯಾಚಿಸಿದರೂ ಓ ಎಂಬರಿಲ್ಲ; ನಡುವೆ ಸಾಗರದ ನೆರೆಯಂತೆ ಸಿರಿ ಬಂದಾಗ ಅವನ ಹೆಜ್ಜೆ ಹೆಜ್ಜೆಗೆ ಹೂವಿನ ರಾಶಿ, ಕಣ್ಣಿನ ಸನ್ನೆಗೆ ಕೈ ಮುಗಿದು ಕಾದು ನಿಂತ ಸಹಸ್ರಾರು ಜನ; ಅವಿವೇಕದಿಂದ ಅಧಿಕಾರ ಹಣ ಅಂತಸ್ತು ಕಳೆದುಕೊಂಡಾಗ ಮುಖದರ್ಶನ ಮಾಡಲೂ ಇಚ್ಛಿಸದ ಅದೇ ಜನ. ಭಾಗ್ಯ ಬಂದಾಗ ಬೀಗಿ ಮೆರೆದರೆ ಬೀದಿ ನಾಯಿಯ ಸ್ಥಿತಿಯೊದಗುವುದೆಂಬ ತತ್ವ ಇಲ್ಲಿ ಮನೋಜ್ಞವಾಗಿ ಪ್ರತಿಪಾದಿತವಾಗಿದೆ. ಇರುವುದನ್ನೇ ಅರಿವಿನಿಂದ ಹದವರಿತು ರೂಢಿಸಿ ಕೊಂಡರೆ ಏರಿಕೆಯಿಲ್ಲದಿದ್ದರೂ ಇಳಿಕೆಯಿಲ್ಲ. ಅತಿ ಸಂತೋಷವಿಲ್ಲದಿದ್ದರೂ ಅತಿ ದುಃಖದ ಪ್ರಪಾತಕ್ಕಿಳಿಯಬೇಕಾದ ಅಗತ್ಯವಿಲ್ಲ; ಅತಿಯಾಸೆಯೇ ದುಃಖ, ಪಾಲಿಗೆ ಬಂದದ್ದು ಪರಮಾನ್ನವೆಂಬ ಅಲ್ಪ ಸಂತೃಪ್ತಿಯೇ ಸುಖ ಎಂಬುದು ಕಡಲೇಕಾಯಿ ಮಾರುವ ಮುದುಕಿಯ ಏರಿಳಿತಗಳಿಲ್ಲದ ಬಾಳಿನ ಮೂಲಕ ಧ್ವನಿತವಾಗುತ್ತದೆ. ಈ ಎರಡು ಜೀವಗಳ ಬದುಕುಗಳ ಯಶಸ್ವೀ ಹೊಂದಿಕೆಯಲ್ಲೇ ಈ ಕತೆಯ ಸಫಲತೆ ಅಡಗಿದೆ. ಮುಖ ನೋಡಿ ಮಣೆ ಹಾಕುವ ಮನುಷ್ಯ ಸ್ವಭಾವದ ಚಿತ್ರಣವೂ ಇಲ್ಲಿ ಸ್ವಭಾವ ಸುಂದರವಾಗಿ ಅರಳಿ ಬಂದು ಕತೆಗೆ ಮೆರುಗನ್ನಿತ್ತಿದೆ. ಕತೆಗಾರರ ವಸ್ತು ಸಹಜವಾದ ತಂತ್ರ ಕೌಶಲ ಮೆಚ್ಚುವಂಥದ್ದಾಗಿದೆ.

“ಒಂಬತ್ತು ಕಾಸು” ಅತಿಭಾವುಕತೆಯ ಒಂದು ಅಸಹಜ ಕತೆ. ಒಂಬತ್ತು ಕಾಸಿನ ಕನ್ನಡಿ ತೆಗೆದುಕೊಡದ ಕಾರಣದಿಂದ ತಾನು ಪ್ರೇಮಿಸಿದ ನಲ್ಲನನ್ನು ತಿರಸ್ಕರಿಸಿ ಹೊರಟ ಹೆಣ್ಣಿನ ಕಾರಣದಿಂದಾಗಿ ಆತ ಕೊರಗಿ ಕೃಶವಾದ ಕತೆಯಿದು. ಇದರ ಬೇರು ಬೆಳವಣಿಗೆ ಮುಕ್ತಾಯ ಎಲ್ಲವೂ ಕೃತಕ.

ಆಡುವ ಮಾತಿಗೂ ಮಾಡುವ ಕಾರ್ಯಕ್ಕೂ, ಬಹಿರಂಗದ ಕೋರಿಕೆಗೂ ಅಂತರಂಗದ  ಅನಿಸಿಕೆಗೂ ಇರುವ ಅಗಾಧ ಅಂತರವನ್ನು ತೋರಿಸುವ ಕತೆ ‘ಜೀವನ ಕಲೆ’. ಕಲಾರೂಪವಾಗಿ ಮೂಡಿ ಬಂದ ಭಿಕ್ಷುಕನ ಚಿತ್ರವನ್ನು ದುಬಾರಿ ಬೆಲೆಕೊಟ್ಟು ಕೊಂಡ ವ್ಯಕ್ತಿ ಜೀವಂತ ಭಿಕ್ಷುಕ ಎದುರುನಿಂತಾಗ ಅಸಹ್ಯದಿಂದ ತಿರಸ್ಕರಿಸುವ ಕತೆಯಿದು. ನಮ್ಮ ಜೀವನದ ಟೊಳ್ಳುತನಕ್ಕೆ ಕನ್ನಡಿ ಹಿಡಿಯುವ ಲೇಖಕರ ಉದ್ದೇಶ ನೆರವೇರಿದೆಯಾದರೂ, ಆ ಉದ್ದೇಶ ಕಲಾತ್ಮಕವಾಗಿ ಹೊಮ್ಮದೆ ತೀರ ವಾಚ್ಯವಾಗಿ ಚಪ್ಪಟೆಯಾಗಿ ಕಾಣಿಸಿಕೊಳ್ಳುತ್ತದೆಯಾದ್ದರಿಂದ ತನ್ನ ಪರಿಣಾಮ ರಮಣೀಯತೆಯನ್ನು ಕಳೆದುಕೊಳ್ಳುತ್ತದೆ, ಪತ್ರಿಕಾ ವರದಿಯಾಗುತ್ತದೆ. ‘ಅವನು ಕೊನೆಯುಸಿರು ಹಾಕಿದ ಬಳಿಕ’ವೂ ಇಂಥದೆ ಕತೆ. ರಕ್ತಬಂಧುಗಳ ಸ್ವಾರ್ಥ ಕಲುಷಿತ ಪ್ರೇಮಕ್ಕಿಂತ ನಿಸ್ವಾರ್ಥ ಮೂಲವಾದ ಮಿತ್ರಸ್ನೇಹ ಅಮೂಲ್ಯವಾದುದೆಂಬುದನ್ನು ಇದು ಧ್ವನಿಸುತ್ತದೆ.

‘ಎರಡು ಗುಲಾಬಿ’ ಮತ್ತು ‘ಮದ್ಯ ಹಾಗೂ ಅಮೃತ’ ಕಲ್ಪಕತೆಯ ಬುನಾದಿಯ ಮೇಲೆ ನಿಂತ ಎರಡು ಸುಂದರ ರೂಪಕ ಕತೆಗಳು. ಗಾತ್ರದಲ್ಲಿ ತುಂಬ ಕಿರಿದಾದರೂ ವಚನ ಕಾವ್ಯದಂತೆ ಹಿರಿಯ ಕಲಾಪರಿಣಾಮವನ್ನುಂಟುಮಾಡುವ ಸಾರ್ಥಕ ಕತೆಗಳಿವು. ಕಲ್ಪನಾವಿಲಾಸ ಜೀವನತತ್ವಗಳೆರಡೂ ಭದ್ರವಾಗಿ ಒಂದನ್ನೊಂದು ಆಲಿಂಗಿಸಿದಾಗ ಎಂಥ ಅಪೂರ್ವ ಅರ್ಥಶಕ್ತಿ ಉದ್ಭವವಾಗುತ್ತದೆ ಎಂಬುದಕ್ಕೆ ಈ ಕತೆಗಳು ಸಾಕ್ಷಿ ನುಡಿಯುತ್ತವೆ.

ಹಳ್ಳಿಗರ ಸತ್ಯಸಂಧತೆಯನ್ನು, ಅವರ ಮಢ್ಯದ ದುರ್ಲಾಭ ಪಡೆಯುವ ಪುಢಾರಿಗಳ ಜೀವನಕ್ರಮವನ್ನು ತೆರೆದು ತೋರುವ ಕತೆ ‘ದೇವರಾಣೆ ಮಾಡಿ’, ಅರಿಯದವರನ್ನು ಅಡ್ಡದಾರಿ ಹಿಡಿಸುವ ಮಲಾಲಿಯಂಥವರು, ನೆಪ ಸಿಕ್ಕಿದರೆ ಸಾಕೆಂದು ಅವರನ್ನು ಸುಲಿದು ತಮ್ಮ ಬೊಕ್ಕಸ ತುಂಬಿಕೊಳ್ಳುವ ಕಾಮಣ್ಣನಂಥ ಪುಢಾರಿ ದಳ್ಳಾಳಿಗಳು – ನಮ್ಮ ಸಮಾಜದ ಕೊಳೆತ ಭಾಗದ ಒಂದು ದೃಶ್ಯ.

ಗಾಂಧೀಜಿಯ ಅನುಯಾಯಿಗಳೆಂದು, ಸತ್ಯಧರ್ಮದ ಗುತ್ತಿಗೆದಾರರು ತಾವೆಂದು ಡಂಗೂರ ಹೊಡೆದುಕೊಂಡು ಅಸತ್ಯ ಅನಾಚಾರಗಳ ಆಗರವಾಗಿರುವ ಮುಖಂಡರಿಗಿಂತ ಹಳ್ಳಿಯ ಅಜ್ಞಾತ ಮುಗ್ಧ ವ್ಯಕ್ತಿಯ ಮನದಲ್ಲಿ ಬಾಪುವಿನ ಸತ್ಯಪ್ರೀತಿ ಮನೆ ಮಾಡಿದೆ ಯೆಂಬುದನ್ನು ಲಕ್ಕನ ಪಾತ್ರದ ಮೂಲಕ ಲೇಖಕರು ಮನೋಜ್ಞವಾಗಿ ರೂಪಿಸಿದ್ದಾರೆ. ಸುಳ್ಳು ಹೇಳಿ ಶಿಕ್ಷೆಯಿಂದ ಪಾರಾಗಬೇಕಾಗಿದ್ದ ವ್ಯಕ್ತಿ ಗಾಂಧೀಜಿಯ ಚಿತ್ರ ನೋಡಿದೊಡನೆ ಸತ್ಯದ ಸಮಾಧಿ ಮಾಡಲು ಹಿಂಜರಿಯುವ ಚಿತ್ರ ಅತ್ಯಂತ ಪರಿಣಾಮಕಾರಿ. ನ್ಯಾಯಾಧೀಶರು ಹೇಳುವ “ಇದೊಂದು ಹಳ್ಳಿಗಮಾರ!….ಇಷ್ಟು ಸತ್ಯಸಂಧರಾಗಿಯೇ ಇನ್ನೂ ಹಿಂದುಳಿದಿ ರುವುದು ಈ ಹಳ್ಳಿಗರು” ಎಂಬ ಮಾತು ಎಷ್ಟೊಂದು ಸತ್ಯ. ಗ್ರಾಮ ಜೀವನದ ನೈಜನುಭವವಿರುವ ಲೇಖಕರಿಂದ ಮಾತ್ರ ಈ ಮಾತು ಬರೆಯುವುದು ಸಾಧ್ಯ.

‘ಅಪ್ಪ ತಂದ ಔಷಧಿ’ – ಟೈಫಾಯಿಡ್ ರೋಗಕ್ಕೆ ಈಡಾಗಿ ಅಪ್ಪನ ಅಜ್ಞಾನ ಮೂಲವಾದ ನಿರ್ಲಕ್ಷ್ಯದಿಂದ ಮತ್ತು ಬಡತನದ ಅನಿವಾರ್ಯತೆಯಿಂದ ಮರಣಕ್ಕೆ ಶರಣು ಹೋದ ಬಾಲಕನೊಬ್ಬನ ಕರುಣಾಜನಕ ಕತೆ. ಹಠ, ಅಜ್ಞಾನ, ಬಡತನಗಳಿಂದಾಗುವ ದುಷ್ಟ ಪರಿಣಾಮವನ್ನು ಮನಕರಗುವಂತೆ ಚಿತ್ರಿಸುತ್ತದೆ ಈ ಕತೆ. ಮೂತ್ರ ಕಟ್ಟಿ ಹೋಗಿ, ಅಪ್ಪ ಔಷಧಿ ತಂದಾನು ತಂದಾನು ಎಂದು ನಿರೀಕ್ಷಿಸಿ, ಆತ ಮದ್ದಿಗೆ ಬದಲು ಅಯ್ಯನವರ ಬೂದಿ ತಂದಾಗ ಬದುಕುವ ಆಸೆ ತೊರೆದು ಮಾಸ್ತರೆಡೆಗೆ ಬೀರುವ ಆರ್ತ ನೋಟದ ದೃಶ್ಯ ಕರುಳು ಕತ್ತರಿಸುವಂಥದು. ಶಿಷ್ಯವತ್ಸಲರಾದ ಶಿಕ್ಷಕರ ಪಾತ್ರ ತುಂಬ ಉನ್ನತಮಟ್ಟದ್ದು. ಬಡತನ ಅಜ್ಞಾನಗಳನ್ನು ಚಿತ್ರಿಸುವಾಗ ಕತೆಗಾರರ ಲೇಖನಿ ಕಣ್ಣೀರಿನಲ್ಲಿ ಅದ್ದಿ ಬರೆದಂತಹ ಪರಿಣಾಮವನ್ನುಂಟು ಮಾಡುತ್ತದೆ.

ಸ್ವಾಭಿಮಾನದ ಪ್ರತೀಕದಂತಿದ್ದ ತಂದೆ ಮಗಳು ಪುಂಡರ ಪ್ರತೀಕಾರದಿಂದಾಗಿ ದುರಂತಕ್ಕೀಡಾದ ರುದ್ರರಮ್ಯ ಕತೆ ‘ಹುಲಿಯಣ್ಣನ ಮಗಳು’. ಪ್ರಾಣಕ್ಕಿಂತಲೂ ಅಭಿಮಾನ ಅಂತಸ್ತುಗಳೇ ಮೇಲೆಂದು ಬಗೆಯುವ ಹಳ್ಳಿಗರ ಮನೋದಾರ್ಢ್ಯದ ಚಿತ್ರ ಸ್ವಾಭಾವಿಕವಾಗಿ ಅರಳಿ ಬಂದಿದೆ ಹುಲಿಯಣ್ಣನ ಪಾತ್ರದಲ್ಲಿ. ಆತ್ಮಸ್ಥೈರ್ಯ, ದಿಟ್ಟತನ, ಮನೆತನದ ಮಾನ, ತಂದೆಯ ಮೇಲಣ ಪ್ರೀತಿಗಳಿಂದ ಪುಷ್ಟಿಗೊಂಡು ನಿಂತ ಹೊನ್ನಿ, ಅದಕ್ಕೆ ಧಕ್ಕೆ ಬಂದಾಗ  ಹೃದಯದಲ್ಲಿ ಒಲವಿದ್ದರೂ ಬದಿಗೊತ್ತಿ ಕುಟುಂಬ ಗೌರವಕ್ಕಾಗಿ, ಮನೆಗೆ ಹೊತ್ತಿದ ಬೆಂಕಿಯಲ್ಲೇ ಬೂದಿಯಾಗುವ ದೃಶ್ಯ ಮೈ ನಡುಗಿಸುತ್ತದೆ, ಅಭಿಮಾನ ಮೂಡಿಸುತ್ತದೆ. ತಮ್ಮ ಆಸೆಗೆ ವಿಘ್ನ ಬಂದಾಗ ಸೇಡಿನ ಸರ್ಪವಾಗಿ ವಿನಾಶಕಾರಕ ಕೃತ್ಯದಲ್ಲಿ ತೊಡಗಿ ಮಾನವೀಯತೆಯನ್ನು ಮರೆಯುವ ಪುಂಡರ ಸ್ವಭಾವದ ವಿಶ್ಲೇಷಣೆಯೂ ಇಲ್ಲಿದೆ. ಮಾನವ ದಾನವನಾದಾಗ ಆಗುವ ಅನಾಹುತ ಪರಂಪರೆಯನ್ನು ಮೈನವಿರೇಳುವಂತೆ ಲೇಖಕರು ಚಿತ್ರಿಸಿದ್ದಾರೆ. ಬೀರ ಬಡವನೆಂಬ ಒಂದೇ ಕಾರಣಕ್ಕಾಗಿ ಅಪಮಾನಪಡಿಸುವ ಹುಲಿಯಣ್ಣನ ಪಾತ್ರದಲ್ಲಿ ಶ್ರೀಮಂತರ ದೃಷ್ಟಿಕೋನವನ್ನು ಬಿಂಬಿಸಿದ್ದಾರಾದರೂ ಇತರ ಕತೆಗಳಂತೆ ನೇರವಾಗಿ ಸಿರಿವಂತರನ್ನೂ ಅವರ ಆಚಾರ ವಿಚಾರಗಳನ್ನೂ ಟೀಕಿಸದಿರುವುದು ಇಲ್ಲಿಯ ಸ್ವಾಗತಾರ್ಹ ವಿಶೇಷವಾಗಿದೆ. ಕತೆಯ ಶೈಲಿಯಲ್ಲಿ ಗ್ರಾಮ್ಯ ಸಹಜವಾದ ಒರಟು ಸ್ಪಷ್ಟತೆ ಸತ್ಯ ತುಂಬಿ ಬಂದಿದೆ.

ಅತ್ಯಂತ ಕುತೂಹಲಕರವಾಗಿ ಕತೆ ಹೇಳಬಲ್ಲ ಕಲೆ ಕಟ್ಟೀಮನಿಯವರಿಗೆ ಸಾಧಿಸಿದೆ ಯೆಂಬುದಕ್ಕೆ ಅವರ ‘ಛಾಯೆ’ ಎಂಬ ಕತೆ ಸಾಕ್ಷಿ. ಕತೆ ಆರಂಭವಾದ ರೀತಿಗೂ ಮುಟ್ಟಿದ ಜಡಿಗೂ ಅರ್ಥಾತ್ ಸಂಬಂಧವಿಲ್ಲ. ಆದರೆ ಆದಿ ಅಂತ್ಯಕ್ಕೆ ಯಾರಾದರೂ ತಲೆದೂಗಲೇ ಬೇಕು. ಓದುಗ ಕಲ್ಪಿಸಿಕೊಳ್ಳುವ ಎಲ್ಲ ಊಹೆಗಳನ್ನೂ ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಅನಿರೀಕ್ಷಿತವಾದ ವಿಸ್ಮಯಕರವಾದ ರೀತಿಯಲ್ಲಿ ಕತೆ ಮುಕ್ತಾಯವಾಗಿ ಮಹತ್ತರವಾದ ಪರಿಣಾಮವನ್ನು ಬೀರುತ್ತದೆ. ಸ್ವಕಾರ್ಯ ಸಾಧನೆಗೆ ವಿವೇಚನಾರಹಿತರಾದ ಕಾಲುದೆಸೆಯ ನೋಟದ ಮುಗ್ಧರನ್ನು ಅಸಾಧಾರಣ ಚಾತುರ್ಯದಿಂದ ಬಳಸಿಕೊಳ್ಳುವ ಜೀವನದ ಮಾಯೆಗೆ ನಾವು ಬೆರಗಾಗುತ್ತೇವೆ. ಕೇವಲ ಮೇಲುನೋಟದಿಂದಲೇ ಮನುಷ್ಯರ ಗುಣ ನಡತೆಗಳನ್ನು ಅಳೆಯಬಾರದು, ಅಳೆಯಲು ಸಾಧ್ಯವಿಲ್ಲ ಎಂಬುದನ್ನು ಶ್ರುತಪಡಿಸುವ ಕತೆ ‘ಮದುವೆ ಗೊಂದು ಟಿಕೀಟು’. ಕುತೂಹಲ ಮತ್ತು ಕಥನ ಚಾತುರ್ಯಗಳೇ ಇಲ್ಲಿಯೂ ಸ್ಥಾಯಿ. ಗೆಳೆಯರ ಮದುವೆಗೆ ಹೋಗಲು ತೆಗೆದುಕೊಂಡ ಟಿಕೇಟು ತಮ್ಮ ಮದುವೆಗೂ ರಹದಾರಿಯಾದ ಸ್ವಾರಸ್ಯಕರ ವಸ್ತುವಿದು. ಮನಸ್ಸಿನ ಅಂತಾಃ ಸ್ತರವನ್ನು ಮುಟ್ಟುವ ಪ್ರಭಾವಿ ಕತೆಯೇನೂ ಅಲ್ಲ; ಲಘುವಾದ ಉದ್ದೇಶ, ಲಘುವಾದ ಫಲ.

‘ವಿನಾಕಾರಣ ಯಾರೂ ಕಳ್ಳತನ ಸುಳ್ಳು ದರೋಡೆ ಕೊಲೆ ಮೋಸ ಮುಂತಾದ ದುಷ್ಟತ್ಕಗಳಿಗೆ ತೊಡಗುವುದಿಲ್ಲ. ಸಂದರ್ಭ ಸನ್ನಿವೇಶಗಳ ಅನಿವಾರ್ಯ ಉತ್ಕಟತೆ ಅವರನ್ನು ಪ್ರಪಾತಕ್ಕೆ ದೂಡುತ್ತದೆ ಎಂಬುದನ್ನು ಸಿದ್ಧಾಂತಿಸುವ ಹೃದಯಸ್ಪರ್ಶಿ ಕತೆ ‘ಕೊಲೆಪಾತಕಿ’ – ಶ್ರೀಮಂತರು, ಅಧಿಕಾರ ಪ್ರಮತ್ತರು ತಮ್ಮ ಸ್ವಾರ್ಥಲಾಲಸೆಗಳಿಗೆ ಬಡವರನ್ನು ದೀನರನ್ನು ಅಡ್ಡದಾರಿಗೆಳೆದು ಏಳಲಾರದಂತಹ ಕತ್ತಲೆಯ ಕೂಪಕ್ಕೆ ತಳ್ಳುವ ಕಾರ್ಯ ನಮ್ಮ ಸಮಾಜದಲ್ಲಿ ಅಪರೂಪವೇನಲ್ಲ. ದಂಡಿನಲ್ಲಿ ಜಮೇದಾರನಾಗಿದ್ದ ಸುಲೇಮಾನ್ ಖಾನ್ ತನ್ನ ಮೇಲಧಿಕಾರಿಯ ಪತ್ನಿಯ ಪ್ರೇಮಪಾಶಕ್ಕೆ ಸಿಲುಕಿದ ಪರಿಣಾಮವಾಗಿ ಕೆಲಸದಿಂದ ಹಿಂಬಡ್ತಿ ಮಾಡಲ್ಪಟ್ಟು, ಆ ಕ್ರೋಧದಿಂದ ಕುರುಡನಾಗಿ ಅಧಿಕಾರಿಯನ್ನೇ ಕೊಲೆಮಾಡಿ ಸೆರೆಮನೆಗೆ ಬಂದ ಸ್ವಾರಸ್ಯಕರವಾದ ಕತೆಯಿದು. ಕೊಲೆಯ ಹಿನ್ನೆಲೆಯ ವಿವರ ವಿವರವೂ ಸಜೀವವಾಗಿ ಸತ್ವಭರಿತವಾಗಿ ಕಾರ್ಯಕಾರಣ ಸಂಬಂಧವಾಗಿ ಮೂಡಿ ನಿಂತಿವೆ. ವಿನೀತ ಭಾವದ ಕೋಮಲ ಹೃದಯದ ವ್ಯಕ್ತಿಯೊಬ್ಬ ಕ್ರೂರ ಕೊಲೆಗಾರನಾಗುವ ಮಾನಸಿಕ ಪರಿವರ್ತನೆಯ ಪ್ರತಿ ಹಂತವನ್ನೂ ತುಂಬು ಎಚ್ಚರಿಂದ ಸುಸ್ಪಷ್ಟವಾಗಿ ಕಡೆದಿದ್ದಾರೆ ಲೇಖಕರು. ಆದರೆ ಯಾವುದೊಂದು ಪಾತ್ರದ ಕಡೆಗೂ ಪಕ್ಷಪಾತ ತೋರದೆ ಎಲ್ಲರನ್ನೂ ಸುಸಂಪೂರ್ಣ ವಾಗಿ ರೂಪಿಸಿರುವುದರಲ್ಲಿ ಅವರ ಕಲೆಗಾರಿಕೆ ಎದ್ದು ಕಾಣುತ್ತದೆ. ಸನ್ನಿವೇಶಗಳು ಅತ್ಯಂತ ಸ್ವಾಭಾವಿಕವಾಗಿ ಸೃಜನಗೊಂಡಿವೆ. ಕರುಣೆ ಸಹಾನುಭೂತಿಗಳಿಂದ ಪ್ರೀತಿ ಸ್ನೇಹ ವರ್ಧಿ ಸುತ್ತವೆ, ದರ್ಪ ಅಹಂಕಾರ ಸೇಡುಗಳಿಂದ ಪ್ರತಿ ಸೇಡುಗಳು ಸ್ಫೋಟಗೊಳ್ಳುತ್ತವೆ. ಪ್ರೀತಿಯ ಬೆರಳಿಗೆ ಹೃದಯ ತಂತಿ ಮಿಡಿಯುತ್ತದೆ, ಕ್ರೋಧದ ಕೈಗೆ ಅದು ಸಿಡಿಯುತ್ತದೆ. ಈ ಸತ್ಯವೂ ತುಂಬ ಸೂಕ್ಷ್ಮವಾಗಿ ಇಲ್ಲಿ ಧ್ವನಿತವಾಗುತ್ತದೆ. ಸೆರೆಮನೆಯ ಕಾವಲುಗಾರರನ್ನು ಕಂಡು ಕೆರಳಿದ ಹುಲಿಯಾಗುತ್ತಿದ್ದ ಸುಲೇಮಾನ್ ಹೊಸಬನೊಬ್ಬನೊಡನೆ ವ್ಯವಹರಿಸುವ ರೀತಿ ಇದು: “ನೀನು ಬಯ್ದೆ ಅಂತ ನನಗೆ ಸಿಟ್ಟಿಲ್ಲ. ಇನ್ನೂ ನಾಲ್ಕು ಬಯ್ದುಬಿಡು. ಅದೇಕೆ, ನಾಲ್ಕು ಹೊಡೆದೂ ಬಿಡು. ಬಾಗಿಲು ತೆರೆಯಲೇನು? ಬಾಗಿಲು ತೆರೆದದ್ದಕ್ಕೆ ನನ್ನ ಕೆಲಸ ಹೋದರೂ ಚಿಂತೆಯಿಲ್ಲ” ಎನ್ನುತ್ತಾ ಬಾಗಿಲು ತೆರೆಯುವ ಹಾಗೆ ನಟಿಸಿದ. “ಬೇಡ ಭಾಯಿ, ತೆರೆಯಬೇಡ, ನನ್ನದು ತಪ್ಪಾಯ್ತು ಕ್ಷಮಿಸು!” ಎಂದ ಸುಲೇಮಾನ ಖಾನ. ಮಾನವ ಹೃದಯದ ಸೂಕ್ಷ್ಮ ಭಾವರಾಗಗಳನ್ನು ಲೇಖಕರು ಹೇಗೆ ಮನ ಮುಟ್ಟುವಂತೆ ಚಿತ್ರಿಸಬಲ್ಲರೆಂಬುದಕ್ಕೆ ಈ ಕತೆ ಸುಂದರ ನಿದರ್ಶನವಾಗಿದೆ.

‘ಪುನರ್ಜನ್ಮ’ ಒಂದು ರೂಪಕ ಕತೆ. ಸ್ವರ್ಣ ನಿಯಂತ್ರಣ ಆಜ್ಞೆಯಿಂದಾಗಿ ದೇಶದ ಸಾವಿರಾರು ಜನ ಅಕ್ಕಸಾಲಿಗರು ಕೆಲಸ ಕಳೆದುಕೊಂಡು ನಿರ್ಗತಿಕರಾಗಿ ತಿನ್ನಲು ಅನ್ನವಿಲ್ಲದೆ ಬಾಳು ಹೊರೆಯಲಾರದೆ ಆತ್ಮಹತ್ಯೆಯ ಮಾರ್ಗ ಹಿಡಿದುದನ್ನು ನಾವು ಕೇಳಿದ್ದೇವೆ, ಓದಿದ್ದೇವೆ. ಅಂತಹ ಒಂದು ಘಟನೆಯ ರೋಚಕ ನಿರೂಪಣೆ ಈ ಕತೆ. ಮಾನವ ಲೋಕದ ವಿಷಮತೆ ಅನ್ಯಾಯ ದಾರಿದ್ರ್ಯಗಳಾಗಲಿ, ನಮ್ಮ ಕಲ್ಪನೆಯ ನರಕ ಶಿಕ್ಷೆಗಳಾಗಲಿ ಬೇರೆಲ್ಲಿಯೂ ಇಲ್ಲ. ಇಲ್ಲದ ಕಲ್ಪನೆಗಳನ್ನು ನಂಬಿ ಬಾಳನ್ನು ವಂಚಿಸಿಕೊಂಡಿದ್ದೇವೆ, ದುಃಖದ ಬೀಡಾಗಿಸಿ ಕೊಂಡಿದ್ದೇವೆ. ಭೂಲೋಕವೇ ಬಹುದೊಡ್ಡ ನರಕ ಮುಂತಾದ ಭಾವನೆಗಳನ್ನು ಪ್ರತಿಬಿಂಬಿ ಸುವ ಕತೆಯಿದು. ಕಲ್ಪಕತೆಯ ಒಡಲಲ್ಲಿ ಜೀವನದ ದಾರುಣತೆಯ ಹೂರಣವನ್ನು ತುಂಬಿಕೊಂಡ ಮನಸೆಳೆಯುವ ತಾಂತ್ರಿಕ ವಿಜಯದ ಕತೆಯಿದು. ಲೇಖಕರ ಪ್ರಯೋಗ ಶೀಲತೆಗೆ ಒಂದು ಜೀವಂತ ಸಾಕ್ಷಿಯಿದು.

ಬದುಕು ದೊಡ್ಡದು. ಅದರ ನಿರ್ವಹಣೆಗೆ ನೇರದಾರಿಗಿಂತ ಅಡ್ಡದಾರಿ ಹಿಡಿಯುವವರೇ ಹೆಚ್ಚು ಮಂದಿ. ಹಾಗೆ ಸಮಾಜ ವಿರೋಧಿಗಳಾಗಿ ಅಡ್ಡದಾರಿ ಹಿಡಿದವರ ಅಪರಾಧವನ್ನು ಗುಡ್ಡದಂತಹ ನಿಯಮನೀತಿಗಳ ರಕ್ಷಕರೆಂದು ಹೇಳಿಕೊಳ್ಳುವ ಜನ ದುರುಪಯೋಗ ಪಡಿಸಿಕೊಂಡು ಸ್ವಂತ ಸುಖವನ್ನು ಸುಲಭವಾಗಿ ಸಾಧಿಸಿಕೊಳ್ಳುತ್ತಾರೆ. ಈ ವಿಚಾರದ ಹಂದರದ ಮೇಲೆ ನಿರ್ಮಿತವಾದ ಕತೆ ‘ತಾರನಾಳದ ಸಾವಿತ್ರಿ’. ಇದು ಸ್ವರೂಪದಲ್ಲಿ ‘ಛಾಯೆ’ಯನ್ನು ಹೋಲುತ್ತದೆ. ನಮ್ಮ ಜನದ ನೈತಿಕ ಅಧಃಪತನದತ್ತ ಮಾತ್ರವಲ್ಲದೆ, ಸರ್ಕಾರಿ ಅಧಿಕಾರಿಗಳ ಕರ್ತವ್ಯಭ್ರಷ್ಟತೆಯ ಕಡೆಗೂ ಕೈ ಮಾಡುತ್ತದೆ ಈ ಕತೆ. ಇಂಥ ಎಡೆಯಲ್ಲಿ ಸತ್ಯ ಪ್ರಾಮಾಣಿಕತೆ ಗಳ ಸಮಾಧಿಯಾಗುತ್ತದೆ; ಇದಕ್ಕೆ ಸಿಕ್ಕಿಬಿದ್ದ ಮುಗ್ಧ ಜನರ ಬಾಳೂ ಹಾಳಾಗುತ್ತದೆ. ಕತೆಗೆ ಅನಿರೀಕ್ಷಿತವಾದ ತಿರುವು ಕೊಡುವುದರಲ್ಲಿನ ಲೇಖಕರ ಚಾತುರ್ಯ ಇಲ್ಲಿ ಎದ್ದು ಮೆರೆಯುತ್ತದೆ. ಯಾವ ಸಾಮಾನ್ಯ ಸಂಗತಿಯಾದರೂ ಆಸಕ್ತಿ ಕೆರಳುವಂತೆ ಸ್ವಾರಸ್ಯವಾಗಿ ಸಲೀಲವಾಗಿ ಕತೆ ಹೇಳಬಲ್ಲ ಜಣತನ ಕಟ್ಟೀಮನಿಯವರಿಗೆ ಸಿದ್ದಿಸಿದೆ.

ಜೀವನವೊಂದು ಕುಸ್ತಿ; ಇಲ್ಲಿ ದೇಹ ಬಲಕ್ಕಿಂತ ಧನಬಲದ ಸ್ಥಾನಬಲದ ವ್ಯಕ್ತಿಗೆ ವಿಜಯ. ಇದು ತಪ್ಪೆಂದು ತಿಳಿದಿದ್ದರೂ ಅದರ ವಿರುದ್ಧ ದನಿಯೇರಿಸುವ ಧೈರ್ಯ ಶತ ಶತಮಾನಗಳಿಂದ ದಮನಕ್ಕೊಳಗಾಗಿ ಬಂದ ಸಾಮಾನ್ಯ ಜನತೆಗಿಲ್ಲ. ಹಣಬಲವಿದ್ದವನದೇ ಸತ್ಯ ನ್ಯಾಯ. ಸರ್ವರಂಗಗಳಲ್ಲಿಯೂ ನಡೆಯುತ್ತಿರುವ ಈ ಅನ್ಯಾಯದ ತಾಂಡವವನ್ನು ಕುಸ್ತಿಯ ವ್ಯಾಜದ ಮೂಲಕ ಲೇಖಕರು ಅರ್ಥವತ್ತಾಗಿ ಬಿಂಬಿಸಿದ್ದಾರೆ. ಆದರೆ ಇದು ಇನ್ನೂ ಮೈತುಂಬಿಕೊಂಡು ಬೆಳೆಯುವ ಸಾಧ್ಯತೆಯಿತ್ತು.

‘ಕುಂಭಕರ್ಣ’ ಒಂದು ರುಚಿಕಟ್ಟಾದ ವಸ್ತುಚಿತ್ರ. ನಾವು ಮಾಡಿದ ತಪ್ಪನ್ನು ಮರೆಮಾಚಿ ಸಮಾಜದೆದುರು ದೊಡ್ಡವರಾಗಲು, ನಿರಪರಾಧಿಗಳ ಮೇಲೆ ಅನ್ಯಾಯದ ಅಪವಾದ ಹೊರಿಸಿ ಅವರನ್ನು ಬಲಿಗೊಡುವ ಮನಕರಗಿಸುವ ದುರಂತ ಚಿತ್ರವಿದು. ಮೂರೂ ಹೊತ್ತೂ ನಿದ್ರೆಯಲ್ಲೇ ಮುಳುಗಿರುವ ಕುಂಭಕರ್ಣನ ಜಡಚಿತ್ತದಲ್ಲಿ ಬಿದ್ದ ಒಂದು ಕಲ್ಲು ತೀವ್ರೋತರಂಗಗಳನ್ನೇಳಿಸಿ ಭೀಕರ ಪ್ರತಿಕ್ರಿಯೆಗೆ ದಾರಿಮಾಡಿಕೊಡುವ ರೀತಿ ಸೊಗಸಾಗಿದೆ. ಆದರೆ ಕುಂಭಕರ್ಣನ ಪಾತ್ರನಿರ್ವಹಣೆಯಲ್ಲಿ ಸಹಜತೆಯ ಅಂಶ ಕಡಿಮೆ ಯಾಗಿದೆ. ಅಂತ್ಯವಂತೂ ತೀರ ಕೃತಕ.

ದೀನದಲಿತರ ಬಗ್ಗೆ ಬಡವರ ಬಗ್ಗೆ ಅಜ್ಞಾನಿಗಳ ಬಗ್ಗೆ ಮುಗ್ಧರ ಬಗ್ಗೆ ಲೇಖಕರಿಗಿರುವ ಅನ್ಯಾದೃಶವಾದ ಮರುಕ ಕರುಣೆ ಸಹಾನುಭೂತಿಗಳು; ಅವರ ಬಾಳನ್ನು ಹಸನುಗೊಳಿಸಬೇಕು, ಸುಧಾರಿಸಬೇಕು ಎಂಬ ಪ್ರಾಮಾಣಿಕ ಕಳಕಳಿ, ಅವರ ಈ ಅಧಃಪತನಕ್ಕೆ ಕಾರಣರಾದ ಶ್ರೀಮಂತರ ಬುದ್ದಿ, ಬಂಡವಾಳಿಗರ ಸ್ಥಾನ ಮಧುಮತ್ತರ ನಿರಂಕುಶ ದರ್ಪಶೀಲರ ಕರುಣಾವಿಹೀನರ ಬಗೆಗಿನ ಆಕ್ರೋಶ – ಈ ಎಲ್ಲ ಪ್ರಗತಿಶೀಲವೆಂದು ಕರೆಯಬಹುದಾದ ಕತೆಗಳ ಮೂಲದ್ರವ್ಯವಾಗಿದೆ. ನೂರಾರು ಬಗೆಯಲ್ಲಿ ನಡೆದಿರುವ ದರಿದ್ರರ ಅಜ್ಞಾನಿಗಳ ಶೋಷಣೆಯ ಜೀವಂತ ಮುಖಗಳನ್ನು ಲೇಖಕರು ಇಲ್ಲಿ ನಿರ್ದಾಕ್ಷಿಣ್ಯವಾಗಿ ನಿಷ್ಠುರಶೀಲ ದಿಂದ ತೆರೆದು ತೋರಿದ್ದಾರೆ. ವಸ್ತು ಯಾವುದೇ ಇರಲಿ, ಅದನ್ನು ರೋಚಕವಾದ ಕತೆಯನ್ನಾಗಿ ಮಾರ್ಪಡಿಸುವ ಕಲಾಕೌಶಲ ಇಲ್ಲಿ ಅಗಾಧ ಪ್ರಮಾಣದಲ್ಲಿ ಸುವ್ಯಕ್ತವಾಗುತ್ತದೆ. ಇದಕ್ಕನುಗುಣವಾದ, ಮೊನಚಾದ ಹರಿತವಾದ ಪಾರದರ್ಶಕವಾದ ಹೃದಯಭಾವಗಳನ್ನು ಯಥಾ ರೀತಿಯಲ್ಲಿ ಹೊರಕ್ಕೆಳೆದು ತೋರುವ ಶಕ್ತಿಸಮನ್ವಿತವಾದ, ಪರಿಣಾಮಕಾರಿಯಾದ ಶೈಲಿ ಕತೆಯ ಹಲವು ಅತಿರೇಕಗಳನ್ನು ಮರೆಯುವಂತೆ ಮಾಡುತ್ತದೆ. ಮೊದಮೊದಲಿನ ಕತೆಗಳಲ್ಲಿ ಸಂಯಮ ಕಡಿಮೆಯಾಗಿ ಆವೇಶ ಉದ್ವೇಗ ಅತಿಯಾಗಿ, ಕಥಾವಸ್ತುವಿನ ವಾಸ್ತವಿಕವಾದ ಸೂಕ್ಷ್ಮ ಪೃಥಕ್ಕರಣೆ ಹಿನ್ನೆಲೆಗೆ ಸರಿದು, ಪಕ್ಷಪಾತಯುತವೆನ್ನಬಹುದಾದ ಅನಾವಶ್ಯಕ ರೊಚ್ಚು ಟೀಕೆ ಅಸಹನೆ ಖಂಡನೆಗಳನ್ನೊಳಗೊಂಡ ಉದ್ದುದ್ದನೆಯ ಮಾತಿನ ಮಂಟಪವೇ ಮೆರೆದು ಕಲೆಗಾರಿಕೆ ಕೃಶವಾಗಿರುವುದುಂಟು. ಆದರೆ ಅನಂತರದ ಕತೆಗಳಲ್ಲಿ ಕಟ್ಟೀಮನಿಯವರು ಬಹುಬೇಗನೆ ಈ ದೌರ್ಬಲ್ಯ ದೋಷಗಳನ್ನು ಬಹುಮಟ್ಟಿಗೆ ನಿವಾರಿಸಿ ಕೊಂಡರು. ಅನುಭವವರ್ಧನೆ ಸಮತೂಕದ ವಿವೇಚನೆ ವಯಸ್ಸಿನ ಪ್ರಭಾವ ಇದಕ್ಕೆ ಕಾರಣವಾಗಿರಬೇಕು. ಇದರಿಂದ ಕೇವಲ ಸಾಮಾಜಿಕ ವಿಷಮತೆಯನ್ನು ಕುರಿತ ಅಕ್ರೋಶಯುತ ವಾದ ಕಥಾ ವೇಷದ ಭಾಷಣಕಲೆ ನಿಜವಾದ ಕಥನಕಲೆಯಾಗಿ ಪರಿವರ್ತಿತವಾಯಿತು. ಏಕಮುಖವಾದ ದೃಷ್ಟಿಕೋನ ಮಾಯವಾಗಿ ಸಾವಧಾನಶೀಲವಾದ ವಿಶ್ಲೇಷಣ ಮನೋಭಾವ ಬಲಿತ ಕಾರಣ ಕತೆಯ ಅಮೂಲ್ಯ ಪ್ರಗತಿಶೀಲ ಕತೆಗಳು ಕನ್ನಡಕ್ಕೆ ಕಾಣಿಕೆಯಾಗಿ ಬಂದವು. ‘ಬರದ ದೇವಿ’, ‘ದೀಪಾವಳಿಯ ಕತ್ತಲೆ’, ‘ಗಿರಿಜ ಕಂಡ ಸಿನಿಮಾ’, ‘ಬಣ್ಣದ ಬುಗ್ಗೆ’, ‘ಎರಡು ಗುಲಾಬಿ’, ‘ಕೊಲೆ ಪಾತಕಿ’, ‘ಕಾರವಾನ್’ ಮುಂತಾದುವು ಈ ದೃಷ್ಟಿಯಿಂದ ಗಮನಾರ್ಹವಾದ ಉತ್ತಮ ಕತೆಗಳಾಗಿವೆ. ಮೇಲಾಗಿ ಈ ಸಫಲ ವಿಫಲ ಕತೆಗಳೆಲ್ಲದರ ಆಂತರ್ಯದಲ್ಲೂ ಹರಳುಗೊಂಡಿರುವ ಮರೆಯಲಾಗದ ಪ್ರಶ್ನಿಸಲಾಗದ ಅನುಭವ ಪ್ರಾಮಾಣ್ಯದ ಸಮೃದ್ದಿ ಮೆಚ್ಚಲೇಬೇಕಾದ ಮತ್ತೊಂದು ಪ್ರಮುಖ ಅಂಶವಾಗಿದೆ.