ಒಂದು ಪ್ರವೇಶ

ಹಾನಿಕಾರಕ ಪುಸ್ತಕಗಳನ್ನು ಸಾರ್ವಜನಿಕವಾಗಿ ಸುಡಬೇಕೆಂದು ಸರಕಾರ ಸುಗ್ರೀವಾಜ್ಞೆ ಹೊರಡಿಸಿತು.
ಎಲ್ಲೆಲ್ಲೂ ಪುಸ್ತಕಗಳನ್ನು ಎತ್ತಿನ ಗಾಡಿಗಳಲ್ಲಿ ಹೇರಿ
ಸುಡುಕೊಂಡಕ್ಕೆ ಹೊಡೆದುಕೊಂಡು ಹೋಗುತ್ತಿದ್ದರು.
ಆಗ ಒಬ್ಬ ಬಹಿಷ್ಕೃತ ಸಾಹಿತಿ, ಶ್ರೇಷ್ಠರಲ್ಲೊಬ್ಬ,
ಸುಡಲಿರುವ ಪುಸ್ತಕಗಳ ಪಟ್ಟಿಯಲ್ಲಿ
ತನ್ನ ಕೃತಿಗಳ ಹೆಸರಿಲ್ಲದ್ದನ್ನು ನೋಡಿ ಹೌಹಾರಿದ.
ತಕ್ಷಣ ಕೋಪದ ಭರದಲ್ಲಿ ಮೇಜಿಗೆ ಧಾವಿಸಿ ಅಧಿಕಾರಿಗಳಿಗೆ ಪತ್ರ ಗೀಚಿದ:
ಸುಡಿ, ನನ್ನನ್ನು ಸುಡಿ! – ಲೇಖನಿ ಹಕ್ಕಿ ವೇಗದಲ್ಲಿ ಹಾರಿತ್ತು.
ನನ್ನನ್ನು ಸುಡಿ!
ನನಗೇನೂ ಪರವಾಗಿಲ್ಲ! ನನ್ನನ್ನು ಬಿಡಬೇಡಿ!
ನನ್ನ ಪುಸ್ತಕಗಳು ಯಾವಾಗಲೂ ಸತ್ಯವನ್ನೇ ಸಾರಿಲ್ಲವೇ?
ಈಗ ನಿಮ್ಮಿಂದ ನಾನು ಸುಳ್ಳನೆನಿಸಿಕೊಳ್ಳಬೇಕೇನು!
ಇದು ನನ್ನ ಆಜ್ಞೆ, ನನ್ನನ್ನು ಸುಡಿ!
– ಬ್ರೆಕ್ಟ್

ಜರ್ಮನಿಯ ಬರ್ಟೊಲ್ಟ್ ಬ್ರೆಕ್ಟ್ ೧೯೩೮ರಲ್ಲಿ ಬರೆದ ಕವಿತೆಯಿದು. ಇವನು ಅಂದಿನ ಜರ್ಮನಿಯಲ್ಲಿ ಹಿಟ್ಲರನ ದೆವ್ವ ದೃಷ್ಟಿಗೆ ಗುರಿಯಾಗಿದ್ದ. ನಾಜ್ಹೀ ವಿರೋಧಿ ಸಾಹಿತಿಗಳಲ್ಲಿ ಮುಖ್ಯನಾಗಿದ್ದವನು. ಹಿಟ್ಲರನ ಕಾಲದಲ್ಲಿ ಸರ್ಕಾರವನ್ನು ವಿರೋಧಿಸಿ ಬರೆಯುವ ಸಾಹಿತಿಗಳ ಕೃತಿಗಳನ್ನು ಬಹಿರಂಗವಾಗಿ ಸುಡುತ್ತಿದ್ದುದಲ್ಲದೆ ಅಂತಹ ಕೃತಿಗಳನ್ನು ಇಟ್ಟುಕೊಂಡಿರುವವರಿಗೆ ಘೋರ ಶಿಕ್ಷೆಯಾಗುತ್ತಿತ್ತು. ಹಿಟ್ಲರನ ಸರ್ವಾಧಿಕಾರಿ ಆಡಳಿತದಲ್ಲಿ ಸಾಹಿತಿಗಳ ಮೇಲೆ ತೀವ್ರ ನಿಗಾ ಇಡಲಾಗಿರುತ್ತಿತ್ತು. ಹೀಗಾಗಿ ಅವನ ಕಾಲದಲ್ಲಿ ಸರ್ಕಾರದ ವಿರುದ್ಧ ಬರೆಯುವ ಅವಕಾಶವೇ ಸಾಹಿತಿಗಳಿಗಿರಲಿಲ್ಲ. ಇಂತಹ ದಮನಕಾರಿ ಧೋರಣೆಯು ಜರ್ಮನಿಯದಷ್ಟೇ ಅಲ್ಲದೆ ಜಗತ್ತಿನ ಎಲ್ಲ ರಾಷ್ಟ್ರಗಳದೂ ಇದೇ ಕತೆಯಾಗಿದೆ.

ಯಾವುದೇ ದೇಶದಲ್ಲಾಗಲಿ ಅಧಿಕಾರಸ್ಥ ಶಕ್ತಿಗಳು ಪ್ರತಿಪಾದಿಸುವ ಮೌಲ್ಯಗಳ ವಿರುದ್ಧ ಬರೆಯುವ ಲೇಖಕರನ್ನು ಅವು ಸಹಿಸಲಾರವು. ಸಂವೇದನಾಶೀಲ ಲೇಖಕರೂ ಅಷ್ಟೆ! ಅಧಿಕಾರಸ್ಥ ಶಕ್ತಿಗಳು ಪ್ರತಿಪಾದಿಸುವ ಮೌಲ್ಯಗಳ ವಿರುದ್ಧ ಬರೆಯದೇ ಇರಲಾರರು. ಹೀಗೆ ಬರೆಯುವ ಕಾರಣಕ್ಕಾಗಿ ಘೋರಶಿಕ್ಷೆ, ಬಹಿಷ್ಕಾರದಂತಹ ಕಷ್ಟಗಳು ಲೇಖಕರಿಗೆ ಕಟ್ಟಿಟ್ಟದ್ದು. ಅಧಿಕಾರಸ್ಥ ಶಕ್ತಿಗಳು ಹಾಗೂ ಸಂವೇದನಾಶೀಲ ಲೇಖಕರ ನಡುವಿನ ಈ ರೀತಿಯ ಸಂಘರ್ಷಕ್ಕೆ ಮಹತ್ವದ ಕಾರಣಗಳಿವೆ. ಎಲ್ಲ ಸಮಾಜಗಳಲ್ಲೂ ಅಧಿಕಾರಸ್ಥ ಸಮುದಾಯಗಳು ತಮ್ಮ ಧರ್ಮ, ಸಂಸ್ಕೃತಿ ಹಾಗೂ ನಂಬಿಕೆಗಳನ್ನು ಶ್ರೇಷ್ಠ ಮತ್ತು ಸತ್ಯ ಎಂದು ನಂಬಿರುತ್ತವೆ. ಅಥವಾ ಸಮಾಜಕ್ಕೆ ಹೀಗೆ ನಂಬಿಸಲ್ಪಟ್ಟಿರುತ್ತದೆ. ಇದು ಸಮಾಜದ ಎಲ್ಲ ವರ್ಗಗಳನ್ನು ತನ್ನ ಹಿಡಿತದಲ್ಲಿಟ್ಟು ಕೊಳ್ಳುವ ಹಾಗೂ ಅಧಿಕಾರವನ್ನು ತನ್ನಲ್ಲೇ ನಿರಂತರವಾಗಿ ಉಳಿಸಿಕೊಳ್ಳುವ ತಂತ್ರವಾಗಿರುತ್ತದೆ ಎಂದು ಭಾವಿಸಿದಾಗ ಅಧಿಕಾರಸ್ಥ ಶಕ್ತಿಗಳ ಆತಂಕಿತ ರಾಜಕಾರಣ ಅರ್ಥವಾಗುತ್ತದೆ.

ಆದರೆ ಸಂವೇದನಾಶೀಲ ಲೇಖಕರು ಇಂತಹ ತಂತ್ರಗಾರಿಕೆಗೆ ತದ್ವಿರುದ್ಧ. ಅಧಿಕಾರಸ್ಥ ಶಕ್ತಿಗಳು ಜನವರ್ಗಗಳನ್ನು ವಂಚಿಸುವ ಹಾಗೂ ಶೋಷಿಸುವ ಪ್ರವೃತ್ತಿಯ ವಿರುದ್ಧ ಪ್ರತಿಭಟಿಸಿ ಬರೆಯುವವರು. ಸಮಾಜದೊಳಗಿನ ಅಸಮಾನತೆಯ ವಿರುದ್ಧ, ದೌರ್ಜನ್ಯಗಳ ವಿರುದ್ಧ ಹಾಗೂ ಹಿಂಸೆಯ ವಿರುದ್ಧ ಬರೆದು ಶಾಂತಿ ಮತ್ತು ಸಮಾನತೆಯಿಂದ ಕೂಡಿದ ಆದರ್ಶ ವ್ಯವಸ್ಥೆಯೊಂದನ್ನು ಕನಸುವವರು. ಇವರು ಎಲ್ಲ ಕಾಲದಲ್ಲಿಯೂ ಪ್ರಭುತ್ವ ಹಾಗೂ ಅಧಿಕಾರಸ್ಥ ಶಕ್ತಿಗಳು ಪ್ರತಿಪಾದಿಸುವ ದಮನಕಾರಿ ನೀತಿಗಳ ವಿರುದ್ಧ ತಮ್ಮ ಬರಹಗಳ ಮೂಲಕ ಪ್ರತಿಭಟಿಸಿ ಸಮಾಜದಲ್ಲಿ ಬದಲಾವಣೆ ತರಲು ಬಯಸುವವರಾಗಿರುತ್ತಾರೆ.

ವಿಪರ್ಯಾಸವೆಂದರೆ ಲೇಖಕರಿಂದ ತನ್ನ ವಿರುದ್ಧ ಪ್ರತಿಭಟನೆಗಳೆದ್ದಾಗಲೆಲ್ಲ ಅಧಿಕಾರಸ್ಥ ವ್ಯವಸ್ಥೆ ಅಭಿವ್ಯಕ್ತಿಯ ಮಾದರಿಗಳನ್ನು ಇಲ್ಲವಾಗಿಸುವ ಪ್ರಯತ್ನ ಮಾಡುತ್ತಿರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ‍್ಯದ ಅವಕಾಶವನ್ನು ನಿರ್ನಾಮ ಮಾಡಲು ಯತ್ನಿಸುತ್ತಿರುತ್ತದೆ. ಅನೇಕ ಜನವಿರೋಧಿ ಕಾನೂನುಗಳನ್ನು ಸಮಾಜದ ಮೇಲೆ ಹೇರುವುದರ ಮೂಲಕ ಸದಾ ಭಯದ ಸ್ಥಿತಿಯೊಂದನ್ನು ಕಾಯ್ದುಕೊಳ್ಳಲು ಹವಣಿಸುತ್ತಿರುತ್ತದೆ. ಅದು ಸರ್ವಾಧಿಕಾರಿ ವ್ಯವಸ್ಥೆಯಿರಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಿರಲಿ, ಅಧಿಕಾರಸ್ಥ ಶಕ್ತಿಗಳಿಗೆ ಇದ್ಯಾವುದೂ ತೊಡಕಾಗುವುದಿಲ್ಲ. ಆದರೆ ಇಂತಹ ಉಸಿರು ಕಟ್ಟಿಸುವ ಪರಿಸ್ಥಿತಿ ನಿರ್ಮಾಣವಾಯಿತೆಂದು ಲೇಖಕರು ತಮ್ಮ ಅಭಿವ್ಯಕ್ತಿಸುವ ಶಕ್ತಿಯನ್ನು ಕಳೆದುಕೊಳ್ಳುವುದಿಲ್ಲ. ಪ್ರತಿ ಕಾಲಘಟ್ಟಗಳಲ್ಲಿಯೂ ಅಭಿವ್ಯಕ್ತಿಯ ಹೊಸ ಸಾಧ್ಯತೆಗಳನ್ನು ಸಾಹಿತ್ಯದ ಮೂಲಕ ಹುಡುಕುತ್ತಿರುತ್ತಾರೆ. ಹೀಗೆ ಮಾಡುತ್ತ ಸಮಾಜವನ್ನು ಅಧಿಕಾರಶಾಹಿಯ ದಮನಕಾರಿ ಮೌಲ್ಯಗಳ ವಿರುದ್ಧ ಎಚ್ಚರಿಸುತ್ತಿರುತ್ತಾರೆ.

ಅಧಿಕಾರಸ್ಥ ಸಮುದಾಯಗಳ ಮೌಲ್ಯಗಳ ವಿರುದ್ಧದ ಸಾಹಿತ್ಯ ಬಂದಾಗಲೆಲ್ಲ ಅಭಿವ್ಯಕ್ತಿ ಸ್ವಾತಂತ್ರ‍್ಯವು ಯಾವ ರೀತಿ ಬಳಕೆಯಾಗಿದೆ, ಹೇಗೆಲ್ಲ ದಮನಿಸಲ್ಪಟ್ಟಿದೆ ಎಂಬುದನ್ನು ಸಂಕ್ಷಿಪ್ತವಾಗಿ ಪರಿಚಯಿಸುವುದು ಈ ಬರಹದ ಉದ್ದೇಶವಾಗಿದೆ.

ಅಭಿವ್ಯಕ್ತಿ ಸ್ವಾತಂತ್ರ‍್ಯಪ್ರಜಾತಾಂತ್ರಿಕ ಮೌಲ್ಯ

ಅಭಿವ್ಯಕ್ತಿ ಸ್ವಾತಂತ್ರ‍್ಯವು ಇಪ್ಪತ್ತನೆಯ ಶತಮಾನದ ಆಧುನಿಕ ಪರಿಕಲ್ಪನೆ. ಇಂಗ್ಲೆಂಡ್ ಫ್ರಾನ್ಸ್ ಹಾಗೂ ಅಮೇರಿಕಾಗಳಲ್ಲಿ ಹದಿನೆಂಟನೆಯ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆಗಳು ಅಸ್ತಿತ್ವಕ್ಕೆ ಬಂದಿದ್ದವು. ಅಲ್ಲದೇ ಈ ದೇಶಗಳಲ್ಲಿ ಪ್ರಜೆಗಳಿಗೆ ಕೆಲವು ಹಕ್ಕುಗಳು ನೀಡಲ್ಪಟ್ಟು ಆದರ್ಶವಾಗಿದ್ದವು. ಆದರೆ ಭಾರತದಲ್ಲಿ ಮೂಲಭೂತ ಹಕ್ಕುಗಳು ಸ್ವಾತಂತ್ರ‍್ಯೋತ್ತರ ಸಂದರ್ಭದಲ್ಲಿ ರೂಪುಗೊಂಡ ಮೌಲ್ಯಗಳಾಗಿವೆ. ಸ್ವಾತಂತ್ರ‍್ಯ ಬರುವವರೆಗೂ ವಸಾಹತುಶಾಹಿಯ ಹಿಡಿತದಲ್ಲಿದ್ದ ಭಾರತದಲ್ಲಿ ಇಲ್ಲಿನ ಪ್ರಜೆಗಳಿಗೆ ಯಾವುದೇ ಹಕ್ಕುಗಳು ಇರಲಿಲ್ಲವೆಂಬುದು ಸ್ಪಷ್ಟ. ಹೀಗಾಗಿ ಭಾರತೀಯರ ಪಾಲಿಗೆ ಅಭಿವ್ಯಕ್ತಿ ಸ್ವಾತಂತ್ರ‍್ಯವು ಸರಿಯಾಗಿ ದೊರಕಿದ್ದು ೧೯೫೦ ಜನವರಿ ೨೬ ರಂದು ಸಂವಿಧಾನ ಜಾರಿಯಾದ ಮೇಲೆಯೆ ಹಾಗೂ ಇದು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ನಂತರದ ಪರಿಕಲ್ಪನೆಯಾಗಿದೆ.

ಯಾವ ದೇಶದ ರಾಜಕೀಯ ವ್ಯವಸ್ಥೆ ತನ್ನ ಪ್ರಜೆಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಕನಿಷ್ಟ ಅವಕಾಶವನ್ನೂ ನೀಡಿರುವುದಿಲ್ಲವೋ, ಅಥವಾ ತನ್ನ ಪ್ರಜೆಗಳ ಅಭಿವ್ಯಕ್ತಿಯ ಹಕ್ಕನ್ನು ಹತ್ತಿಕ್ಕುತ್ತದೋ, ಆ ವ್ಯವಸ್ಥೆಯು ಪ್ರಜಾಪ್ರಭುತ್ವ ಎನಿಸಲಾರದು. ಬದಲಾಗಿ ಅದು ನಿರಂಕುಶ ಪ್ರಭುತ್ವವಾಗಿರುತ್ತದೆ. ಇಂತಹ ಪ್ರಭುತ್ವ ವ್ಯವಸ್ಥೆಗಳು ಸಮಾಜವನ್ನು ಅಮಾನವೀಯ ಮೌಢ್ಯ ಹಾಗೂ ಕಂದಾಚಾರಗಳಿಗೆ ತಳ್ಳುತ್ತಿರುತ್ತವೆ. ನಿರಂಕುಶ ವ್ಯವಸ್ಥೆಗಳಲ್ಲಿ ಜನ ಯಾವುದೇ ಹಕ್ಕುಗಳನ್ನು ಹೊಂದಿದವರಾಗಿರುವುದಿಲ್ಲ. ಇಂತಹ ಸರ್ಕಾರಗಳಲ್ಲಿ ಜನ ನಿರಂತರ ಆತಂಕದಲ್ಲಿ ಬದುಕುವ ಸ್ಥಿತಿಯಿರುತ್ತದೆ. ದುರಂತವೆಂದರೆ ಇಪ್ಪತ್ತೊಂದನೇ ಶತಮಾನದಲ್ಲಿಯೂ ಇಂತಹ ವ್ಯವಸ್ಥೆಗಳು ಜೀವಂತವಾಗಿವೆ. ಅನೇಕ ರಾಷ್ಟ್ರಗಳು ತಮ್ಮ ಧಾರ್ಮಿಕ ರೀತಿ-ನೀತಿಗಳನ್ನೆ ಕಾನೂನುಗಳಾಗಿಸಿಕೊಂಡಿವೆ. ಹಾಗಾಗಿ ನಿರಂತರವಾಗಿ ಶೋಷಿತ ಸ್ಥಿತಿಯೊಂದು ಅಸ್ತಿತ್ವದಲ್ಲಿರುವಂತೆ ಈ ದೇಶಗಳು ಇಂದಿಗೂ ನೋಡಿಕೊಳ್ಳುತ್ತಿವೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶಗಳು ಆಶಯಾತ್ಮಕವಾಗಿಯಾದರೂ ತನ್ನ ಪ್ರಜೆಗಳಿಗೆ ನಿರ್ದಿಷ್ಟವಾದ ಕೆಲವು ಹಕ್ಕುಗಳನ್ನು ನೀಡಿರುತ್ತವೆ. ಈ ವ್ಯವಸ್ಥೆಗಳಲ್ಲಿ ಆಶಯಾತ್ಮಕವಾಗಿ ಪ್ರಜೆಗಳೇ ಪ್ರಭುಗಳು ಎಂದು ತಿಳಿದಿರುವುದರಿಂದಾಗಿ ಇಲ್ಲಿ ವ್ಯಕ್ತಿ ಸ್ವಾತಂತ್ರ‍್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ‍್ಯಗಳಿಗೆ ಮಹತ್ವದ ಸ್ಥಾನವಿರುತ್ತದೆ.

ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಂಗೀಕರಿಸಿರುವುದರಿಂದ ಇಲ್ಲಿ ಪ್ರಜೆಗಳು ಸರ್ಕಾರವನ್ನಾಗಲಿ, ಯಾವುದೇ ಸಾರ್ವಜನಿಕ ಸಂಸ್ಥೆಯನ್ನಾಗಲಿ ಪ್ರಶ್ನಿಸುವ ಹಾಗೂ ವಿಮರ್ಶಿಸುವ ಹಕ್ಕನ್ನು ಹೊಂದಿದ್ದಾರೆ. ನಮ್ಮ ಸಂವಿಧಾನ ರೂಪುಗೊಳ್ಳುವಾಗ ಪ್ರಜೆಗಳ ಮೂಲಕ ರಾಜಕೀಯ ಪ್ರಭುತ್ವವನ್ನು ರೂಪಿಸುವ ಆಶಯವನ್ನು ಹೊಂದಿರುವುದರಿಂದ ಮತ್ತು ಸಮಾನತೆಯ ತತ್ವದ ಮೇಲೆ ರೂಪುಗೊಂಡಿರುವುದರಿಂದ ಪ್ರಜೆಗಳಿಗೆ ಅಗತ್ಯವಾದ ಕೆಲವು ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳಲ್ಲಿ ‘ವಾಕ್‌ಸ್ವಾತಂತ್ರ‍್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯ’ದ ಹಕ್ಕು ಹೆಚ್ಚು ಮಹತ್ವವಾದುದು. ಮತದಾನ ಹಾಗೂ ಅಭಿವ್ಯಕ್ತಿ ಸ್ವಾತಂತ್ರ‍್ಯದ ಹಕ್ಕುಗಳು ಇಂದಿಗೂ ಪ್ರಜಾಪ್ರಭುತ್ವದ ಆಧಾರಸ್ತಂಭಗಳಾಗಿವೆ.

ಅಭಿವ್ಯಕ್ತಿ ಸ್ವಾತಂತ್ರ‍್ಯದ ಪರಿಕಲ್ಪನೆಯನ್ನು ಎರಡು ಮುಖ್ಯ ಕಾಲಘಟ್ಟಗಳಲ್ಲಿಟ್ಟು ಚರ್ಚಿಸಬಹುದು. ಅವುಗಳಲ್ಲಿ ಒಂದನೆಯದು; ವಸಾಹತುಶಾಹಿ ಸಂದರ್ಭ. ಎರಡನೆಯದು; ಸ್ವಾತಂತ್ರ‍್ಯೋತ್ತರ ಸಂದರ್ಭ. ಸ್ವಾತಂತ್ರ‍್ಯಪೂರ್ವದಲ್ಲಿ ಇಲ್ಲಿನ ಪ್ರಜೆಗಳಿಗೆ ಯಾವುದೇ ಹಕ್ಕುಗಳಿರಲಿಲ್ಲವಾದರೂ, ಮೂಲಭೂತ ಹಕ್ಕುಗಳಿಗಾಗಿ ಅನೇಕ ಹೋರಾಟಗಳು ನಡೆದಿವೆ. ಅಲ್ಲದೆ ಈ ಸಂದರ್ಭದಲ್ಲಿ ಅನೇಕ ಕೃತಿಗಳು ವಿವಾದಕ್ಕೊಳಗಾಗಿವೆ. ಆದ್ದರಿಂದ ಈ ಕಾಲಘಟ್ಟದಲ್ಲಿ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಸಂಬಂಧಿಸಿದ ಚರ್ಚೆಯನ್ನು ಗಮನಿಸುವುದು ಮುಖ್ಯವಾದುದು. ವಸಾಹತುಶಾಹಿ ಆಳ್ವಿಕೆಗೂ ಮೊದಲಿನ ಕಾಲದಲ್ಲಿ ರಾಜಪ್ರಭುತ್ವಗಳು ಅಸ್ತಿತ್ವದಲ್ಲಿದ್ದುದರಿಂದ ಅಲ್ಲಿ ವ್ಯಕ್ತಿ ಸ್ವಾತಂತ್ರ‍್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ‍್ಯದ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಯಾಕೆಂದರೆ ಅಭಿವ್ಯಕ್ತಿ ಸ್ವಾತಂತ್ರ‍್ಯವೆಂಬುದು ಪ್ರಭುತ್ವದ ಮುಕ್ತ ವಿಮರ್ಶೆಗೆ ಸಂಬಂಧಿಸಿದ್ದು. ವಸಾಹತುಶಾಹಿ ಆಳ್ವಿಕೆಗೆ ಪೂರ್ವದಲ್ಲಿ ರಾಜನ ವಿರುದ್ಧ ನೇರವಾಗಿ ಮಾತನಾಡುವ ಅವಕಾಶಗಳು ಪ್ರಜೆಗಳಿಗಿರಲಿಲ್ಲ. ಆದ್ದರಿಂದ ಅಭಿವ್ಯಕ್ತಿ ಸ್ವಾತಂತ್ರ‍್ಯದ ಪರಿಕಲ್ಪನೆಯನ್ನು ಈ ಎರಡು ಕಾಲಘಟ್ಟಗಳಿಗೆ ಸೀಮಿತಗೊಳಿಸಿ ಚರ್ಚಿಸಲಾಗಿದೆ.

ವಸಾಹತುಶಾಹಿ ಸಂದರ್ಭ

ವಸಾಹತು ಕಾಲದ ರಾಜಕೀಯಾಡಳಿತದ ಮೂಲ ಉದ್ದೇಶವೇ ಭಾರತವನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿಟ್ಟುಕೊಳ್ಳುವುದಾಗಿತ್ತು. ಈ ಮೂಲಕ ದೇಶವನ್ನು ದೋಚುವುದು ವಸಾಹತುಶಾಹಿಯ ಮೂಲ ಉದ್ದೇಶವಾಗಿತ್ತು. ಹೀಗಾಗಿ ವಸಾಹತುಶಾಹಿಯು ತನಗೆ ಅನುಕೂಲವಾಗುವಂತಹ ನೀತಿಗಳನ್ನು ಮಾತ್ರ ರೂಪಿಸುತ್ತಿತ್ತು. ಈಸ್ಟ್ ಇಂಡಿಯಾ ಕಂಪನಿ ಆಡಳಿತದಿಂದ ಮುಕ್ತವಾಗಿ ನೇರವಾಗಿ ಬ್ರಿಟನ್ ರಾಣಿಯ ಆಡಳಿತಕ್ಕೆ ಒಳಗಾದ ಮೇಲೆ ಬ್ರಿಟೀಷ್ ಆಡಳಿತವು ಸ್ವಲ್ಪಮಟ್ಟಿಗೆ ಲಿಬರಲ್ ಆಗಿ ಪರಿವರ್ತನೆಯೇನೋ ಆಯಿತು. ಆದರೆ ಅದು ಯಾವ ಮಟ್ಟದ್ದೆಂದರೆ ಸತಿ ಸಹಗಮನ ಪದ್ಧತಿಯ ನಿಷೇಧ, ವಿಧವಾ ವಿವಾಹ, ಆಧುನಿಕ ಶಿಕ್ಷಣ ಪದ್ಧತಿಯಂತಹ ಮೇಲ್ಮಟ್ಟದ ಉದಾರಿತನವೇ ಹೊರತು ತನ್ನ ಆಡಳಿತವನ್ನು ವಿಮರ್ಶೆ ಮಾಡುವವರನ್ನು ಹತ್ತಿಕ್ಕುತ್ತಿತ್ತು.

೧೮೫೭ರ ಸ್ವಾತಂತ್ರ‍್ಯ ದಂಗೆಯ ನಂತರದಲ್ಲಿ ಸ್ವಾತಂತ್ರ‍್ಯ ಹೋರಾಟದ ಜೊತೆ ಜೊತೆಗೆ ಇಲ್ಲಿನ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿದವು. ಈ ಹೋರಾಟವು ವಸಾಹತುಶಾಹಿ ಆಡಳಿತದೊಂದಿಗೆ ಒಂದು ಹಂತದ ರಾಜಿ ಪ್ರಕ್ರಿಯೆಯೂ ಆಗಿತ್ತು. ಹಾಗೂ ಬ್ರಿಟೀಷ್ ಆಡಳಿತವನ್ನು ಪ್ರಜಾತಾಂತ್ರಿಕಗೊಳಿಸುವ ಆಶಯದ್ದೂ ಆಗಿತ್ತು. ಈ ಪ್ರಕ್ರಿಯೆಯ ಭಾಗವಾಗಿಯೇ ೧೮೮೫ ರಲ್ಲಿ ಹುಟ್ಟಿದ ರಾಷ್ಟ್ರೀಯ ಕಾಂಗ್ರೆಸ್ ತನ್ನ ಸ್ವಾತಂತ್ರ‍್ಯ ಹೋರಾಟದೊಂದಿಗೆ ಭಾರತೀಯರಿಗೆ ಮೂಲಭೂತ ಹಕ್ಕುಗಳಿಗಾಗಿ ಬ್ರಿಟೀಷ್ ಸರ್ಕಾರವನ್ನು ಒತ್ತಾಯಿಸಿತು. ಇಲ್ಲಿ ಬ್ರಿಟೀಷರು ಅನುಭವಿಸುತ್ತಿರುವ ಹಕ್ಕುಗಳು ಹಾಗೂ ಸೌಲಭ್ಯಗಳು ಭಾರತೀಯ ಪ್ರಜೆಗಳಿಗೂ ಸಿಗಬೇಕೆಂಬ ಹೋರಾಟವನ್ನು ನಿರಂತರವಾಗಿ ರಾಷ್ಟ್ರೀಯ ಕಾಂಗ್ರೆಸ್ ರೂಪಿಸುತ್ತಾ ಬಂತು. ೧೮೮೫ರಲ್ಲಿ ಆರಂಭವಾದ ಈ ಹೋರಾಟವು ೧೮೯೫ರಲ್ಲಿ ‘ಭಾರತ ಸಂವಿಧಾನ ಬಿಲ್‌’ನ ಮೂಲಕ ಕೆಲವು ಮೂಲಭೂತ ಹಕ್ಕುಗಳನ್ನು ರೂಪಿಸಿ ಅವುಗಳ ಅಗತ್ಯ ಮತ್ತು ಪ್ರಾಮುಖ್ಯತೆಯನ್ನು ಸರ್ಕಾರಕ್ಕೆ ಒತ್ತಿ ಹೇಳಿತು.

ಇದರ ನಡುವೆ ಆಧುನಿಕ ಶಿಕ್ಷಣದ ಫಲವಾಗಿ ವೈದಿಕೇತರ ಸಮುದಾಯಗಳು ಸರ್ಕಾರಿ ಸೇವೆಗಳಲ್ಲಿ ತಮ್ಮ ಪಾಲಿಗಾಗಿ ಹೋರಾಟ ನಡೆಸಲಾರಂಭಿಸಿದ್ದವು. ಬ್ರಿಟಿಷ್ ಆಡಳಿತದಲ್ಲಿನ ಸರ್ಕಾರಿ ಸೇವೆಗಳಲ್ಲಿ ಬ್ರಾಹ್ಮಣರೇ ಹೆಚ್ಚು ತುಂಬಿದ್ದುದರಿಂದಾಗಿ ವೈದಿಕೇತರ ಸಮುದಾಯಗಳಲ್ಲಿ ಈ ಹೋರಾಟ ಭುಗಿಲೆದ್ದಿತು. ಹಿಂದುಳಿದ ಸಮುದಾಯಗಳ ಈ ಹೋರಾಟವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿರೋಧಿಸಿತು. ಹಾಗೂ ಇದರ ಪ್ರಮುಖ ಹೋರಾಟವಿದದ್ದು ಸ್ವಾತಂತ್ರ‍್ಯ ಹೋರಾಟದಲ್ಲಿ. ಆದ್ದರಿಂದ ಸರ್ಕಾರಿ ಸೇವೆಗಾಗಿ ನಡೆಯುವ ಹೋರಾಟಗಳು ಸ್ವಾತಂತ್ರ‍್ಯದ ಕನಸನ್ನು ದಮನ ಮಾಡುತ್ತವೆ ಎಂದು ಅದು ನಂಬಿತ್ತು. ಆದರೆ ಚರಿತ್ರೆಯಲ್ಲಿನ ವೈದಿಕೇತರ ಹೋರಾಟಗಳ ಮಹತ್ವವನ್ನು ಇಂದು ನೋಡಬೇಕಾದ ರೀತಿ ಬೇರೆಯಾಗಬೇಕಿದೆ. ಈ ವಿಷಯದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ವೈದಿಕೇತರರ ಚಳುವಳಿಯನ್ನು ಸೀಮಿತ ದೃಷ್ಟಿಯಿಂದ ಕಾಣುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನೇ ಹತ್ತಿಕ್ಕಿದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೂಲಭೂತ ಹಕ್ಕುಗಳಿಗಾಗಿ ನಡೆಸಿದ ಹೋರಾಟ ಪರೋಕ್ಷವಾಗಿ ಸ್ವಾತಂತ್ರ‍್ಯಕ್ಕಾಗಿ ನಡೆಸಿದ ಹೋರಾಟವೇ ಆಗಿದೆ. ೧೯೧೭ ರಿಂದ ೧೯೧೯ರ ಅವಧಿಯಲ್ಲಿ ಅನೇಕ ನಿರ್ಣಯಗಳನ್ನು ಅಂಗೀಕರಿಸಿ ಭಾರತೀಯರಿಗೆ ನಾಗರಿಕ ಹಕ್ಕುಗಳು ಮತ್ತು ಬ್ರಿಟೀಷರೊಡನೆ ಸಮಾನ ಸ್ಥಾನ ಮಾನವನ್ನು ನೀಡಬೇಕೆಂದು ಆಗ್ರಹ ಪಡಿಸಿತು. ಆ ಸಂದರ್ಭದಲ್ಲಿ ವ್ಯಕ್ತಿ ಸ್ವಾತಂತ್ರ‍್ಯ, ಆತ್ಮಸಾಕ್ಷಿ ಸ್ವಾತಂತ್ರ‍್ಯ, ವಾಕ್‌ಸ್ವಾತಂತ್ರ‍್ಯ ಹಾಗೂ ಕಾನೂನಿನ ಮುಂದೆ ಸಮಾನತೆ ಮುಂತಾದ ಏಳು ಮೂಲಭೂತ ಹಕ್ಕುಗಳನ್ನು ರಾಷ್ಟ್ರೀಯ ಕಾಂಗ್ರೆಸ್ ಒತ್ತಿ ಹೇಳಿತು. ರಾಷ್ಟ್ರೀಯ ಕಾಂಗ್ರೆಸ್‌ನ ಈ ಹೋರಾಟಗಳು ಸ್ವಾತಂತ್ರ‍್ಯ ಬರುವವರೆಗೂ ಕೈಗೂಡಲಿಲ್ಲ. ವಸಾಹತುಶಾಹಿ ಆಡಳಿತವು ಇಬ್ಬಗೆಯ ಕಾನೂನುಗಳನ್ನು ಚಾಲ್ತಿಯಲ್ಲಿಟ್ಟು ಭಾರತೀಯರನ್ನು ಮೂಲಭೂತ ಹಕ್ಕುಗಳಿಂದ ವಂಚಿಸಿತ್ತು. ಹೀಗಾಗಿ ವಸಾಹತುಶಾಹಿ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ‍್ಯವು ದಮನಿಸಲ್ಪಟ್ಟಿತ್ತು. ಅಲ್ಲದೆ ಈ ಸಂದರ್ಭದಲ್ಲಿ ತನ್ನ ವಿರುದ್ಧ ಪ್ರಕಟವಾದ ಅನೇಕ ಕೃತಿಗಳನ್ನು ವಸಾಹತುಶಾಹಿಯು ನಿಷೇಧಿಸಿತ್ತು. ಆದ್ದರಿಂದ ಈ ಕಾಲಘಟ್ಟದ ಅಭಿವ್ಯಕ್ತಿ ಸ್ವಾತಂತ್ರ‍್ಯದ ಚರ್ಚೆ ಮಹತ್ವದ್ದಾದುದು.

ಸ್ವಾತಂತ್ರ‍್ಯೋತ್ತರ ಸಂದರ್ಭ

ನಿರಂಕುಶ ರಾಜಪ್ರಭುತ್ವ ಮತ್ತು ವಸಾಹತುಶಾಹಿ ಆಡಳಿತಗಳ ಅನುಭವಗಳಿದ್ದ ಭಾರತ ಸ್ವಾತಂತ್ರ‍್ಯಾನಂತರದಲ್ಲಿ ಈ ಎರಡೂ ರೀತಿಯ ಪ್ರಭುತ್ವದ ಮಾದರಿಗಳನ್ನು ನಿರಾಕರಿಸಿತು. ತನ್ನ ಎದುರಿಗಿದ್ದ ಇಂಗ್ಲೆಂಡ್, ಫ್ರಾನ್ಸ್‌ಹಾಗೂ ಅಮೇರಿಕಾಗಳ ಪ್ರಜಾಪ್ರಭುತ್ವೀಯ ವ್ಯವಸ್ಥೆಗಳನ್ನು ಅಧ್ಯಯನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಂಗೀಕರಿಸಿತು. ೧೬೬೮ರಷ್ಟು ಹಿಂದೆಯೇ ಇಂಗ್ಲೆಂಡಿನಲ್ಲಿ ‘ರಕ್ತರಹಿತ ಕ್ರಾಂತಿ’ಯ ಫಲವಗಿ; ೧೭೮೯ ರಲ್ಲಿ ಫ್ರೆಂಚ್‌ಕ್ರಾಂತಿಯ ಫಲವಾಗಿ ಇಂಗ್ಲೆಂಡ್ ಹಾಗೂ ಫ್ರಾನ್ಸ್‌ಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತ್ತು. ಭಾರತಕ್ಕೆ ಸ್ವಾತಂತ್ರ‍್ಯ ಬರುವ ವೇಳೆಗೆ ಅಮೇರಿಕಾದಲ್ಲಿ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆ ರೂಪು ತಳೆದಿತ್ತು. ಈ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಡಾ. ಬಿ.ಆರ್. ಅಂಬೇಡ್ಕರ್‌ರವರ ನೇತೃತ್ವದ್ಲಿ ಒಂದು ಪ್ರಜಾಪ್ರಭುತ್ವೀಯ ಸಂವಿಧಾನವನ್ನು ರೂಪಿಸಲಾಯಿತು.

ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ‍್ಯ ನಂತರದಲ್ಲಿ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಅಂಗೀಕರಿಸಿತು. ಈ ಮೂಲಭೂತ ಹಕ್ಕುಗಳು ಸಂವಿಧಾನದ ಮೂರನೇ ಭಾರತದಲ್ಲಿ ಬರುತ್ತವೆ. ಇವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಆಧಾರಸ್ತಂಭಗಳು. ಸಂವಿಧಾನವು ತಾನು ರೂಪಿಸಿದ ಮೂಲಭೂತ ಹಕ್ಕುಗಳಲ್ಲಿ ‘ವಾಕ್ ಸ್ವಾತಂತ್ರ‍್ಯ’ ಹಾಗೂ ‘ಅಭಿವ್ಯಕ್ತಿ ಸ್ವಾತಂತ್ರ‍್ಯದ’ ಹಕ್ಕನ್ನು ಅತ್ಯಂತ ಮಹತ್ವದ್ದೆಂದು ಹೇಳುತ್ತದೆ.

ಭಾರತ ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ತನ್ನ ೧೯ (೧) ಅನುಚ್ಛೇದದಲ್ಲಿ ವಿವರಿಸಿದೆ. “ಅಭಿವ್ಯಕ್ತಿ ಸ್ವಾತಂತ್ರ‍್ಯು ಒಂದು ಸಹಜ ಹಕ್ಕು. ಭಾರತೀಯ ಪ್ರಜೆಯೊಬ್ಬನು ತನ್ನ ಆಲೋಚನೆಗಳನ್ನು ಪ್ರಕಟಿಸುವ ಸ್ವಾತಂತ್ರ‍್ಯವಿದೆ. ವ್ಯಕ್ತಿ ತನಗನಿಸಿದ್ದನ್ನು ಬರಹದ ಮೂಲಕವಾಗಲಿ, ಮುದ್ರಣದ ಮೂಲಕವಾಗಲೀ, ಸಮಾಜದ ಹಿತ ರಕ್ಷಣೆಯ ಮಿತಿಯಲ್ಲಿ ಪ್ರಕಟಿಸುವ ಸ್ವಾತಂತ್ರ‍್ಯವನ್ನು ಹೊಂದಿರುತ್ತಾನೆ” ಎಂದು ಸಂವಿಧಾನ ವಿವರಿಸಿದೆ.

ಸಂವಿಧಾನದ ೧೯(೧) ಎ ಅನುಚ್ಛೇದದಲ್ಲಿ ಬರುವ ಅಭಿವ್ಯಕ್ತಿ ಸ್ವಾತಂತ್ರ‍್ಯವು ವ್ಯಕ್ತಿ,

೧. ತನ್ನ ಅಭಿಪ್ರಾಯಗಳನ್ನು ಪ್ರಕಟಿಸುವ

೨. ಇತರರ ಅಭಿಪ್ರಾಯಗಳನ್ನು ಪ್ರಕಟಿಸುವ

೩. ಇತರರಿಗೆ ಪ್ರಸಾರ ಮಾಡುವ

೪. ಸಾರ್ವಜನಿಕ ವಿಷಯಗಳನ್ನು ವಿಮರ್ಶಿಸುವ ಹಾಗೂ

೫. ಯಾವುದೇ ಮೂಲದಿಂದ ಮಾಹಿತಿ ಸಂಗ್ರಹಿಸುವ ಸ್ವಾತಂತ್ರ‍್ಯವನ್ನು  ಹೊಂದಿರುತ್ತಾನೆ.

ಸಂವಿಧಾನವು ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ‍್ಯವಿದೆ ಎಂದು ವಿವರಿಸುತ್ತಲೇ ಅಂದಕ್ಕೆ ಕೆಲವು ನಿರ್ಬಂಧಗಳನ್ನು ಹೇರುತ್ತದೆ. ಈ ನಿರ್ಬಂಧಗಳನ್ನು ಸಂವಿಧಾನ ೧೯(೨)ನೆಯ ಅನುಚ್ಛೇದದಲ್ಲಿ ವಿವರಿಸುತ್ತದೆ. ಇದು ವ್ಯಕ್ತಿಯು ತನ್ನ ಅಭಿವ್ಯಕ್ತಿ ಸ್ವಾತಂತ್ರ‍್ಯದ ಹಕ್ಕನ್ನು ರಾಷ್ಟ್ರದ ಸಾರ್ವಭೌಮತ್ವ ಮತ್ತು ಅಖಂಡತೆಗೆ ಧಕ್ಕೆ ಬಾರದಂತೆ, ರಾಷ್ಟ್ರದ ಭದ್ರತೆಗೆ ಕುಂದುಂಟಾಗದಂತೆ, ವಿದೇಶಿ ರಾಜ್ಯಗಳೊಡನೆ ಸ್ನೇಹಯುತ ಸಂಬಂಧ ಹದಗೆಡದಂತೆ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದಂತೆ, ಯಾವುದೇ ಸಮುದಾಯ ಹಾಗೂ ಸಂಸ್ಥೆಗಳಿಗೆ ಅಪಕೀರ್ತಿ ಅಥವಾ ಮಾನ ಹಾನಿಯಾಗದಂತೆ ಹಾಗೂ ಯಾವುದೇ ರೀತಿಯ ಅಪರಾಧಗಳಿಗೆ ಪ್ರೋತ್ಸಾಹ ಅಥವಾ ಪ್ರಚೋಧನೆ ಉಂಟು ಮಾಡದಂತೆ ಚಲಾಯಿಸಬೇಕೆಂದು ನಿರ್ದೇಶಿಸುತ್ತದೆ.

ಮೇಲಿನ ನಿಯಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯಕ್ತಿ ತನ್ನ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಚಲಾಯಿಸುವಾಗ ಅನೇಕ ರೀತಿಯ ತೊಡಕುಗಳು ಸಹಜವಾಗಿಯೇ ಎದುರಾಗುತ್ತವೆ. ಭಾರತೀಯ ಸಮಾಜವು ಜಾತಿಯಾಧಾರಿತ ಸಮಾಜವಾಗಿದೆ. ಅಲ್ಲದೆ ಅದು ಶೋಷಣೆಯಿಂದ ಕೂಡಿದ ಶ್ರೇಣೀಕೃತ ವ್ಯವಸ್ಥೆಯಾಗಿದೆ. ಹಾಗಾಗಿ ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ‍್ಯದ ಪ್ರಶ್ನೆ ಬಂದಾಗ ಯಾವುದೋ ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯದ ಪರವಾಗಿಯೋ ಅಥವಾ ವಿರೋಧವಾಗಿಯೋ ತನ್ನ ನಿಲುವುಗಳನ್ನು ತಳೆಯುವುದು ಅನಿವಾರ್ಯವಾಗುತ್ತದೆ. ಅಂತಹ ಸಂದರ್ಭದಲ್ಲಿ ಸಮುದಾಯವೊಂದು ತನ್ನ ನಂಬಿಕೆ ಆಚರಣೆ ಹಾಗೂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆಪಾದಿಸಿ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡುವ ಸಾಧ್ಯತೆಗಳೇ ಹೆಚ್ಚಿರುತ್ತವೆ. ಇದು ಸ್ವಾತಂತ್ರ‍್ಯಾ ನಂತರದ ಚರಿತ್ರೆಯಲ್ಲಿ ಸಾಬೀತಾಗಿದೆ ಕೂಡ. ಇಲ್ಲಿ ತನ್ನ ವಿರುದ್ಧದ ಅಭಿಪ್ರಾಯಗಳು ಸೃಷ್ಟಿಯಾದಾಗ ಶೋಷಕ ಸಮುದಾಯಗಳು ತೀವ್ರವಾಗಿ ಅದನ್ನು ದಮನಿಸಲು ಪ್ರಯತ್ನಿಸುತ್ತವೆ. ಹಾಗಾಗಿ ಆಧುನಿಕ ಪರಿಕಲ್ಪನೆಯಾಗಿರುವ ಈ ಅಭಿವ್ಯಕ್ತಿ ಸ್ವಾತಂತ್ರ‍್ಯದ ಹಕ್ಕಿಗೆ ತನ್ನದೇ ಇತಿಮಿತಿಗಳು ಸ್ವತಂತ್ರ ಭಾರತದಲ್ಲಿವೆ. ಸಾಮಾಜಿಕ ನ್ಯಾಯದ ಪ್ರಶ್ನೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುನ್ನೆಲೆಗೆ ಬರುವವರೆಗೂ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಮಹತ್ವ ಬರುವುದಿಲ್ಲ, ಬದಲಾಗಿ ಪ್ರಜಾಪ್ರಭುತ್ವವೆಂಬುದು ಭ್ರಮೆಯಾಗಿರುತ್ತದೆ.

ಧರ್ಮ ಮತ್ತು ಸತ್ಯದ ಅಭಿವ್ಯಕ್ತಿ

ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಮನ್ನಣೆ ನೀಡಿದರೂ ಇಂದಿಗೂ ಧಾರ್ಮಿಕ ಸಾಂಪ್ರದಾಯಕತೆ ಇದಕ್ಕೆ ಮೂಲ ತೊಡಕಾಗಿದೆ. ಧರ್ಮದ ಅಡಿಪಾಯವೇ ಶೋಷಣಾ ಮೂಲದ್ದಾಗಿರುವುದರಿಂದ ಇಲ್ಲಿ ಭಿನ್ನತೆಗಳಿಗೆ ಅವಕಾಶವಿರುವುದಿಲ್ಲ. ದರ್ಮವನ್ನು ಹುಟ್ಟು ಹಾಕಿರುವ ಪ್ರತಿಷ್ಠಿತ ಸಮುದಾಯದ ವಿರುದ್ಧ ಯಾರೂ ಮಾತನಾಡದಂತೆ ಇಲ್ಲಿ ನಿರ್ಬಂಧಗಳು ಏರ್ಪಟ್ಟಿವೆ. ಇದನ್ನು ಮೀರಿ ಮಾತನಾಡುವವರನ್ನು ಕ್ರೂರವಾಗಿ ಶಿಕ್ಷಿಸಲಾಗುತ್ತದೆ. ಭಾರತದಂತಹ ಜಾತಿ ಸಮಾಜಗಳಲ್ಲಿ ಸ್ವರ್ಗ-ನರಕಗಳ, ಪುನರ್‌ಜನ್ಮದಂತಹ ಕಲ್ಪನೆಗಳ ಮೂಲಕ ಶೋಷಿತರ ಅಭಿವ್ಯಕ್ತಿಯನ್ನು ದಮನಿಸಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ‍್ಯವು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಪರಿಕಲ್ಪನೆಯಾಗಿರುವುದರಿಂದ ಸಾಮಾಜಿಕ ನ್ಯಾಯವನ್ನು ದಮನಿಸುವ ಧರ್ಮ ಇದಕ್ಕೆ ಅಡ್ಡಗೋಡೆಯಾಗಿ ನಿಂತಿದೆ.

ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ‍್ಯಗಳು ಪರಸ್ಪರ ಪೂರಕವಾಗಿರುವಂತಹವು. ಆದರೆ ಚರಿತ್ರೆಯಲ್ಲಿ ಧರ್ಮ ವ್ಯಕ್ತಿ ಸ್ವಾತಂತ್ರ‍್ಯವನ್ನು ಹತ್ತಿಕ್ಕುತ್ತಾ ಬಂದಿರುವ ಉದಾಹರಣೆಗಳು ದಟ್ಟವಾಗಿವೆ. ನಮ್ಮ ಪುರಾಣಗಳಲ್ಲಿನ ಶಂಬೂಕ, ಏಕಲವ್ಯ ಹಾಗೂ ಕರ್ಣರ ಕಥನಗಳು ಇದಕ್ಕೆ ಒಳ್ಳೆಯ ನಿದರ್ಶನಗಳು. ವೈದಿಕ ಧರ್ಮ ಪ್ರತಿಪಾದಿಸುವ ಅಸಮಾನತೆಯನ್ನು ಧಿಕ್ಕರಿಸಿ ತಪಸ್ಸನ್ನಾಚರಿಸಲು ಹೋದ ಶೂದ್ರ ಶಂಬೂಕನನ್ನು ಕೊಲ್ಲಲಾಯಿತು. ಶಾಸ್ತ್ರಗಳಿಗೆ ವಿರುದ್ಧವಾಗಿ ವಿದ್ಯೆ ಕಲಿಯಲು ಹೋದ ಏಕಲವ್ಯ ಹಾಗೂ ಕರ್ಣರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳಲಾಗಿದೆ. ಇಲ್ಲೆಲ ಧರ್ಮವು ಶಾಸ್ತ್ರಗಳ ಮೂಲಕ ವ್ಯಕ್ತಿ ಸ್ವಾತಂತ್ರ‍್ಯವನ್ನು ಹತ್ತಿಕ್ಕಿ ಸಮಾಜವನ್ನು ಅಸಮಾನತೆಯಲ್ಲಿ ನರಳುವಂತೆ ಮಾಡಿರುವ ಚರಿತ್ರೆಯನ್ನು ನಮ್ಮ ಪುರಾಣಗಳು ಎತ್ತಿ ತೋರಿಸುತ್ತವೆ.

ಧರ್ಮವು ಮೇಲು-ಕೀಳು ಹಾಗೂ ಶ್ರೇಷ್ಠ-ಕನಿಷ್ಠವೆಂಬ ಶೋಷಿತ ಕಲ್ಪನೆಗಳಿಂದ ಹುಟ್ಟಿರುವಂತಹದ್ದು. ಪುರೋಹಿತಶಾಹಿ ಸಮುದಾಯವು ತನ್ನ ಆಚರಣೆ ಹಾಗೂ ನಂಬಿಕೆಗಳನ್ನು ಶ್ರೇಷ್ಠವೆಂದು ಪ್ರತಿಪಾದಿಸುತ್ತಾ ಅವನ್ನೇ ಸಮಾಜದ ಮೇಲೆ ಹೇರಲು ಹವಣಿಸುತ್ತಿರುತ್ತದೆ. ಇಂದು ಪ್ರತಿಪಾದಿತವಾಗುತ್ತಿರುವ ವಿಧತೆಯಲ್ಲಿ ಏಕತೆಯೆಂಬುದು ಒಂದು ಆಶಯಾತ್ಮಕ ಕಲ್ಪನೆಯೇ ಹೊರತು ವಾಸ್ತವವಲ್ಲ. ವಾಸ್ತವದಲ್ಲಿ ಧರ್ಮವು ವಿವಿಧತೆಗಳನ್ನು ನಾಶಮಾಡಿ ಏಕಘನಾಕೃತಿಯ ವ್ಯವಸ್ಥೆಯೊಂದನ್ನು ನಿರಂತರವಾಗಿ ಪ್ರತಿಪಾದಿಸುವ ರಾಜಕೀಯ ಹುನ್ನಾರ ಮಾಡುತ್ತಿರುತ್ತದೆ. ಅದು ಸಮಾಜವನ್ನು ಏಕಧರ್ಮ, ಏಕಸಂಸ್ಕೃತಿ ಹಾಗೂ ಏಕರಾಷ್ಟ್ರಗಳ ಮೂಲಕ ಕಲ್ಪಿಸುತ್ತಿರುತ್ತದೆ. ಸ್ವಾತಂತ್ರ‍್ಯ ಚಳುವಳಿಯ ಮೂಲಕ ಒಟ್ಟಾದ ಅಖಂಡ ಭಾರತದ ಕಲ್ಪನೆ ಇಂತಹ ಹುಸಿ ಪರಿಭಾಷೆಗಳಲ್ಲೆ ನಿಂತಿರುವಂತಹದ್ದು. ರಾಷ್ಟ್ರೀಯವಾದಿಗಳಿಂದ ಕಲ್ಪಿಸಲ್ಪಟ್ಟ ಭಾರತ ಹಿಂದೂಸ್ತಾನ ಹಾಗೂ ಹಿಂದೂ ಧರ್ಮಗಳನ್ನು ಕೇಂದ್ರೀಕರಿಸಿತ್ತು. ವೈದಿಕ ಧರ್ಮವನ್ನಷ್ಟೆ ಮುಂದುಮಾಡಿ ಏಕೀಕೃತ ಬೌದ್ಧಿಕ ರಚನೆಗಳ ಮೂಲಕ ಪ್ರತಿಪಾದಿಸಲ್ಪಟ್ಟ ನವಭಾರತದ ನಿರ್ಮಾಣದಲ್ಲಿ ಬುದ್ಧಭಾರತ, ಬಸವ ಭಾರತ ಹಾಗೂ ಬುಡಕಟ್ಟು ಭಾರತಗಳು ಮುಖ್ಯವಾಗದೇ ಹೋದವು. ಬದಲಾಗಿ ವೈದಿಕ ಸಮುದಾಯದ ಆಚರಣೆಗಳಿಗಷ್ಟೇ ಸೀಮಿತವಾದ ಹಿಂದೂ ಭಾರತದ ಕಲ್ಪನೆ ನಿರ್ಮಾಣವಾಯಿತು. ಈ ಸೀಮಿತ ಹಾಗೂ ಏಕೀಕೃತ ಭಾರತದ ಕಲ್ಪನೆಯೇ ಸಂವಿಧಾನದ ಅಡಿಪಾಯದಂತಿರುವ ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ‍್ಯಗಳಿಗೆ ಇಂದಿಗೂ ಬಹುದೊಡ್ಡ ತೊಡಕಾಗಿದೆ. ಆದ್ದರಿಂದ ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ‍್ಯದ ಪ್ರಶ್ನೆ ಬಂದಾಗಲೆಲ್ಲ ಧಾರ್ಮಿಕ ಭಾವನೆಗಳ ನೆಪವೊಡ್ಡಿ ದಮನಿಸಲಾಗುತ್ತದೆ.

ಮೂಲಭೂತವಾಗಿ ಅಭಿವ್ಯಕ್ತಿ ಸ್ವಾತಂತ್ರ‍್ಯವು ನಿರಂಕುಶ ಮಶಿತ್ವಕ್ಕೆ ಸಂಬಂಧಿಸಿದ್ದು ಎಂದು ಕುವೆಂಪು ಹೇಳುತ್ತಾರೆ. ಆದರೆ ಇಂದಿಗೂ ಧರ್ಮವೆಂಬುದು ನಮ್ಮ ಬೌದ್ಧಿಕ ಸ್ವಾತಂತ್ರ‍್ಯವನ್ನು ದಮನಿಸುತ್ತಾ ಸ್ವತಂತ್ರಮತಿಯನ್ನು ನಾಶ ಮಾಡುವ ರಾಜಕೀಯ ಹುನ್ನಾರಗಳು ನಡೆಯುತ್ತಲೇ ಇವೆ. ಸತ್ಯದ ಹೆಸರಲ್ಲಿ ಮೌಢ್ಯಗಳನ್ನು ಬಿತ್ತುತ್ತ, ಇದನ್ನು ವಿರೋಧಿಸುವವರನ್ನು ಶಿಕ್ಷೆಗೆ ಗುರಿಪಡಿಸುತ್ತಾ ಹೊಸ ಅನ್ವೇಷಣೆಗಳಿಗೆ ತೊಡಕಾಗಿ ನಿಂತಿದೆ. ಈ ಮೂಲಕ ಹೊಸ ಸತ್ಯಗಳು ಹುಟ್ಟದಂತೆ ಸಮಾಜದ ಮೇಲೆ ಪರೋಕ್ಷವಾಗಿ ನಿಯಂತ್ರಣ ಹೇರುತ್ತಾ ಬರುತ್ತದೆ. ಕ್ರೈಸ್ತ ಧರ್ಮ ಪ್ರತಿಪಾದಿಸುತ್ತಿದ್ದ ಭೂಮಿ ಕೇಂದ್ರ ಸಿದ್ಧಾಂತಕ್ಕೆ ವ್ಯತಿರಿಕ್ತವಾದ ಸತ್ಯವನ್ನು ಮಂಡಿಸಿದ ಗೆಲಿಲಿಯೋನನ್ನು ಧಾರ್ಮಿಕ ಮೂಲಭೂತವಾದಿಗಳು ತನ್ನ ಸಿದ್ಧಾಂತವನ್ನು ವಾಪಸ್ಸು ಪಡೆಯದಿದ್ದರೆ ಜೀವಂತವಾಗಿ ಸುಡುವುದಾಗಿ ಬೆದರಿಕೆ ಹಾಕಿದರು. ವೈಜ್ಞಾನಿಕವಾಗಿ ಹೊಸ ಸತ್ಯಗಳನ್ನು ಪ್ರತಿಪಾದಿಸಿದ ಎಷ್ಟೋ ಖಗೋಳ ವಿಜ್ಞಾನಿಗಳು, ಭೌತವಿಜ್ಞಾನಿಗಳು ಹಾಗೂ ತತ್ವಜ್ಞಾನಿಗಳನ್ನು ಈ ಹಿಂದೆ ಇಂತಹ ಘೋರ ಶಿಕ್ಷೆಗೆ ಗುರಿಪಡಿಸಲಾಗಿತ್ತು. ಹಾಗಾಗಿ ಧಾರ್ಮಿಕ ಮೂಲಭೂತವಾದಿಗಳ ಬೆದರಿಕೆಗೆ ಗೆಲಿಲಿಯೋ ತಲೆ ಬಾಗಲೇಬೇಕಾಯಿತು. ಇದೊಂದು ಜನಪ್ರಿಯವಾಗಿರುವ ಉದಾಹರಣೆಯಷ್ಟೆ. ಇಂತಹ ಲೆಕ್ಕವಿಲ್ಲದಷ್ಟು ಘಟನಾವಳಿಗಳು ಚರಿತ್ರೆಯಲ್ಲಿವೆ. ಧರ್ಮ ಮತ್ತು ಪ್ರಭುತ್ವಗಳೆರಡೂ ಒಟ್ಟಿಗೆ ಸಾಗುತ್ತವೆಯಾದ್ದರಿಂದ ಈ ಧಾರ್ಮಿಕ ಮೂಲಭೂತವಾದಿಗಳು ಪ್ರತಿಪಾದಿಸುವ ಸಿದ್ಧಾಂತಕ್ಕೆ ಮನ್ನಣೆ ಪ್ರಾಪ್ತಿಯಾಗಿರುತ್ತದೆ.

ಪ್ರಾಚೀನ ಸಂದರ್ಭದಲ್ಲಷ್ಟೇ ಅಲ್ಲದೆ ಪ್ರಜಾಪ್ರಭುತ್ವವನ್ನು ಒಳಗೊಂಡಿರುವ ಆಧುನಿಕ ಪ್ರಭುತ್ವಗಳೂ ಕೂಡ ಮೂಲಭೂತವಾದಿಗಳೊಂದಿಗೆ ಸಮಾಗಮಗೊಂಡು ಮುನ್ನಡೆಯುತ್ತಿರುವಂತಹವು. ವರ್ತಮಾನದಲ್ಲಿ ಮೂಲಭೂತವಾದವನ್ನು ಪ್ರಶ್ನಿಸುವವರನ್ನು ನಮ್ಮ ಸರಕಾರಗಳು ನಡೆಸಿಕೊಳ್ಳುತ್ತಿರುವ ರೀತಿ ಇದಕ್ಕೆ ಉತ್ತಮ ಉದಾಹರಣೆ. ಎರಡು ದಶಕಗಳ ಹಿಂದೆ ‘ದಿ ಸೆಟಾನಿಕ್ ವರ್ಸ್‌‌ಸ್’ ಕೃತಿಯ ಮೂಲಕ ಮುಸ್ಲಿಂ ಧರ್ಮದೊಳಗಿನ ಅಮಾನವೀಯ ನಂಬಿಕೆ ಹಾಗೂ ಆಚರಣೆಗಳ ವಿರುದ್ಧ ಬರೆದುದಕ್ಕಾಗಿ ಸಲ್ಮಾನ್‌ರಿಶ್ದಿ ದೇಶ ಬಿಟ್ಟು ಹೋಗಬೇಕಾಯಿತು. ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿದ್ದಾರೆಂಬ ಕೋಮುವಾದಿಗಳ ಕೂಗಿಗೆ ಹೆದರಿ ಎಂ.ಎಫ್.ಹುಸೇನರನ್ನು ದೇಶದೊಳಗೆ ಬಿಟ್ಟುಕೊಳ್ಳಲು ನಮ್ಮ ಪ್ರಭುತ್ವಗಳು ಇಂದಿಗೂ ಅವಕಾಶ ಮಾಡಿಕೊಟ್ಟಿಲ್ಲ.

ಇಷ್ಟೇ ಅಲ್ಲದೆ ಬಾಂಗ್ಲಾ ಮೂಲದ ಲೇಖಕಿ ತಸ್ಲಿಮಾ ನಸ್ರೀನ್‌ರನ್ನು ಮೂಲಭೂತ ವಾದಿಗಳಿಗೆ ಹೆದರಿ ಸರ್ಕಾರವೇ ಗೃಹ ಬಂಧನದಲ್ಲಿಟ್ಟು ಅಮಾನವೀಯವಾಗಿ ನಡೆಸಿ ಕೊಂಡಿದ್ದಲ್ಲದೇ, ಕೊನೆಗೆ ದೇಶ ಬಿಟ್ಟು ಹೋಗುವಂತೆ ಸೂಚಿಸಿತು. ಈ ಘಟನೆಗಳು ಪ್ರಜಾಪ್ರಭುತ್ವ ಸರ್ಕಾರಗಳೇ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ದಮನ ಮಾಡುತ್ತಿರುವುದನ್ನು ಸಾಬೀತುಗೊಳಿಸುತ್ತವೆ. ಹಾಗಾಗಿ ಧರ್ಮವೆಂಬುದು ಎಲ್ಲಾ ಕಾಲದಲ್ಲಿಯೂ ಪ್ರಭುತ್ವ ಹಾಗೂ ಸಮಾಜದ ಮೇಲೆ ತನ್ನ ಹಿಡಿತ ಹೊಂದಿ ತನ್ನ ಮೂಲಭೂತವಾದಿತ್ವವನ್ನೂ ಸಾಧಿಸುತ್ತಾ ಬಂದಿದೆ. ಆ ಮೂಲಕ ಸಮಾಜದಲ್ಲಿ ಏಳುವ ತನ್ನ ವಿರುದ್ಧದ ಸತ್ಯಗಳನ್ನು ದಮನಿಸುತ್ತಿರುತ್ತದೆ. ಧರ್ಮ ಮತ್ತು ಸತ್ಯದ ಅಭಿವ್ಯಕ್ತಿಯ ಪ್ರಶ್ನೆ ಬಂದಾಗ ಧರ್ಮವು ಸತ್ಯವನ್ನು ನಾಶಮಾಡಿ ತನ್ನ ಅಧಿಕಾರ ಸ್ಥಾಪಿಸುತ್ತದೆ.

ಸಾಹಿತ್ಯದಲ್ಲಿ ಸಾಂಪ್ರದಾಯಿಕತೆ

ಸಮಾಜದ ಬೇರೆಬೇರೆ ವಲಯಗಳಲ್ಲಿ ಸಾಂಪ್ರದಾಯಿಕ ಶಕ್ತಿಗಳಿರುವಂತೆ ಸಾಹಿತ್ಯಕ ವಲಯದಲ್ಲೂ ಸಾಂಪ್ರದಾಯಿಕ ಮನಸ್ಸೊಂದು ಎಲ್ಲಾ ಕಾಲದಲ್ಲಿಯೂ ಅಸ್ತಿತ್ವದಲ್ಲಿರುತ್ತದೆ. ಇಂಥ ಮನಸ್ಥಿತಿಗೆ ಪ್ರಮುಖವಾಗಿ ಎರಡು ರೀತಿಯ ಚಲನೆಗಳಿರುತ್ತವೆ. ಅವುಗಳಲ್ಲಿ ಒಂದನೆಯದು; ಸಾಂಪ್ರದಾಯಿಕ ಮೌಲ್ಯಗಳ ಪರಿಧಿಯಲ್ಲೇ ಕೃತಿ ರಚನೆ ಮಾಡುವುದು. ಎರಡನೆಯದು; ಸಮಾಜವನ್ನು ಆವರಿಸಿರುವ ಸಂಪ್ರದಾಯಗಳನ್ನು ಮುರಿದು ಹೊಸ ದೃಷ್ಟಿಯಿಂದ ಹುಟ್ಟಿದ ಕೃತಿಯನ್ನು ಸಾಂಪ್ರದಾಯಿಕ ಮೌಲ್ಯಗಳಿಂದಲೇ ಬೆಲೆ ಕಟ್ಟುವುದು. ಈ ಸಾಂಪ್ರದಾಯಿಕ ಮನಸ್ಸು ತನ್ನ ಆಳದಲ್ಲಿ ಸಾಮಾಜಿಕ ಪರಿವರ್ತನೆ ಹಾಗೂ ಬದಲಾವಣೆಯ ಕಡುವಿರೋಧಿಯಾಗಿರುತ್ತದೆ. ಇದನ್ನು ನೇರವಾಗಿ ವ್ಯಕ್ತಪಡಸಲಾರದೆ ಆರೋಪಿತ ಸಾಮಾಜಿಕ ನ್ಯಾಯದ ಅಪಕಲ್ಪನೆಯೊಂದನ್ನು ಸದಾ ಮಂಡಿಸುತ್ತಿರುತ್ತದೆ. ಚರಿತ್ರೆಯಲ್ಲಿ ಜಾತಿ ಸಮಾಜದಿಂದ ವಂಚಿತಗೊಂಡಿರುವ ಸಮುದಾಯಗಳ ನ್ಯಾಯದ ಪ್ರಶ್ನೆಗಳು ಸಾಹಿತ್ಯದಲ್ಲಿ ಮೂಡಿದ ಸಂದರ್ಭದಲ್ಲೆಲ್ಲ ಅದನ್ನು ಮರೆಮಾಡಲು ಸಾಂಪ್ರದಾಯಿಕ ಶಕ್ತಿಗಳು ಹೊಸ ವೇಷಗಳನ್ನು ತೊಟ್ಟಿವೆ. ಉದಾಹರಣೆಗೆ ಹಿಂದೂ ಧರ್ಮದಲ್ಲಿ ಜಾತಿಯ ಅಸಮಾನತೆಯಿದೆ ಎಂಬ ಪ್ರಶ್ನೆ ಉದ್ಭವವಾದಾಗಲೆಲ್ಲ ಇವು ಮುಸ್ಲಿಂರಿಂದ, ಕ್ರೈಸ್ತರಿಂದ ಹಿಂದೂ ಧರ್ಮ ನಲುಗುತ್ತಿದೆ ಎಂಬ ಕೂಗನ್ನು ದೊಡ್ಡದಾಗಿ ಎಬ್ಬಿಸುತ್ತವೆ; ಹಾಗೂ ಪುರಾಣಗಳಲ್ಲಿ ಶೋಷಣೆಯ ಪ್ರಶ್ನೆ ಎದುರಾದಾಗಲೆಲ್ಲ ಪರಂಪರೆಯ ರಕ್ಷಣೆಯ ಸೋಗನ್ನು ಹಾಕುತ್ತವೆ. ಈ ಸಾಂಪ್ರದಾಯಿಕ ಮನಸ್ಸು ಹೊಸ ಮೌಲ್ಯಗಳು ವಿರೋಧಿಸುತ್ತಲೇ ಶುದ್ಧಾಂಗ ಸಾಹಿತ್ಯದ ಕಲ್ಪನೆಯೊಂದನ್ನು ಮಂಡಿಸಿ ಮುಖ್ಯವಾದ ಪ್ರಶ್ನೆಗಳನ್ನು ಅಮಾನ್ಯಗೊಳಿಸಲು ಯತ್ನಿಸುತ್ತಿರುತ್ತದೆ. ಹಾಗೆ ನೋಡಿದರೆ ಇಂತಹ ಮನಸ್ಥಿತಿಗಳು ತಾತ್ಕಾಲಿಕವಾದ ಪರಿಣಾಮವನ್ನಷ್ಟೇ ಬೀರುವಂತಹವಾಗಿರುತ್ತವೆಯೇ ಹೊರತು ದೀರ್ಘಕಾಲೀನವಾಗಿ ಉಳಿಯಲಾರವು. ತುಂಬಾ ದೀರ್ಘ ಕಾಲದಲ್ಲಿ ಆಯಾ ಕಾಲಘಟ್ಟಗಳಲ್ಲಿ ಹೊಸ ಮೌಲ್ಯಗಳನ್ನು ಪ್ರತಿಪಾದಿಸಿದ ಸಾಹಿತಿ ಹಾಗೂ ಸಾಹಿತ್ಯ ಕೃತಿಗಳೇ ಉಳಿಯುವಂತಹವಾಗಿರುತ್ತವೆ.

ಪಂಪ ಹಾಗೂ ಅವನ ಕಾವ್ಯಗಳು ಇಂದಿಗೂ ಉಳಿದಿರುವಂತೆ ಅವನ ಕಾಲದ ಸಂಪ್ರದಾಯವಾದಿ ಮನಸ್ಥಿತಿಯ ಕೃತಿಗಳು ಉಳಿದು ಬಂದಿಲ್ಲ. ಹಾಗೆಯೇ ಅವು ಮುಖ್ಯವಾಗುವುದೂ ಇಲ್ಲ. ಆದರೆ ಪಂಪನ ಕಾವ್ಯಗಳ ಮೂಲಕ ಕನ್ನಡ ಸಾಹಿತ್ಯ ಇಂದಿಗೂ ಹೊಸ ಅನುಸಂಧಾನಗಳನ್ನು ನಡೆಸುತ್ತಲೇ ಬರುತ್ತಿದೆ. ಹಾಗಾಗಿ ಹೊಸ ಮೌಲ್ಯಗಳ ಪ್ರತಿಪಾದನೆಯ ಸಂದರ್ಭದಲ್ಲಿ ಎದುರಾಗುವ ಸಾಂಪ್ರದಾಯಿಕ ಮನಸ್ಥಿತಿಯ ಚಿಂತನೆಗಳನ್ನು ನಿರ್ಲಕ್ಷಿಸಿ ಮುನ್ನಡೆಯುವುದು ಎಲ್ಲ ಕಾಲಕ್ಕೂ ಅಗತ್ಯವಾದದ್ದು.

ಸಾಹಿತ್ಯ ವಲಯದೊಳಗಿನ ಸಾಂಪ್ರದಾಯಿಕ ಮನಸ್ಸುಗಳು ಹೊಸ ದೃಷ್ಟಿ ಹಾಗೂ ಧೋರಣೆಗಳನ್ನು ಹೊಂದಿರುವ ಸಾಹಿತ್ಯಕ ಚಿಂತನೆಗಳಿಗೆ ಹೇಗೆ ತೊಡಕಾಗುತ್ತವೆ ಎಂಬುದನ್ನು ಎರಡು ಘಟನೆಗಳ ಮೂಲಕ ಪರಿಶೀಲಿಸಬಹುದು. ಚರಿತ್ರೆ, ಪುರಾಣ, ಪರಂಪರೆಗಳನ್ನು ಹೊಸ ವಿಮರ್ಶಾ ಪ್ರಜ್ಞೆಯಿಂದ ನೋಡಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಚಿಂತನೆಗಳ ವಿರುದ್ಧ ರೂಪುಗೊಂಡ ಪ್ರತಿರೋಧಕ್ಕೆ ಈ ಎರಡು ಘಟನೆಗಳು ಉತ್ತಮ ಉದಾಹರಣೆಯಾಗಿವೆ.