ಘಟನೆ ಒಂದು: ೧೯೪೪ ರಲ್ಲಿ ಕುವೆಂಪು ‘ಶೂದ್ರ ತಪಸ್ವಿ’ ನಾಟಕವನ್ನು ಬರೆದಾಗ ಸಾಹಿತ್ಯದಲ್ಲಿ ದೊಡ್ಡ ವಾಗ್ವಾದವೊಂದು ಸೃಷ್ಟಿಯಾಯಿತು. ನಾಟಕವನ್ನು ಅನೇಕರು ವಿರೋಧಿಸಿ ಬರೆದರು, ಅಲ್ಲಗಳೆದರು. ವಿಮರ್ಶೆಯ ನೆಪದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರು ತಮ್ಮ ‘ಜೀವನ’ ಪತ್ರಿಕೆಯಲ್ಲಿ ಶೂದ್ರ ತಪಸ್ವಿಯನ್ನು ಟೀಕಿಸಿ ಬರೆದರು. ಅವರು ನಾಟಕವನ್ನು ಅಪ್ರಬುದ್ಧವೆಂದು ಕರೆದುದಲ್ಲದೆ, ಪುರಾಣಗಳನ್ನು ಮುರಿದು ಕಟ್ಟುವ ಕ್ರಮವನ್ನು ಅಲ್ಲಗಳೆದರು. ಹೊಸ ಧರ್ಮವನ್ನು ಹೇಳುವುದಕ್ಕೆ ಹೊಸ ಕಥೆಯನ್ನೇ ಹೇಳಬೇಕೇ ಹೊರತು ಹಳೆಯದನ್ನು ಮುರಿದು ಕಟ್ಟುದ ನೆಪದಲ್ಲಿ ಶಿಥಿಲಗೊಳಿಸಬಾರದೆಂದು ಬರೆದರು. ಶೂದ್ರ ತಪಸ್ವಿಯನ್ನು ಟೀಕಿಸಿದವರಲ್ಲಿ ಹೆಚ್ಚು ಜನರು ಬ್ರಾಹ್ಮಣರಾಗಿದ್ದುದು ಇಲ್ಲಿ ಗಮನಿಸಬೇಕಾದ ಅಂಶ. ಶೂದ್ರ ತಪಸ್ವಿಗೆ ಬಂದ ಎಲ್ಲಾ ಟೀಕೆಗಳನ್ನು ಅನುಲಕ್ಷಿಸಿ ಕುವೆಂಪು ಎರಡನೇ ಆವೃತ್ತಿಗೆ ‘ಮಾರ್ನುಡಿ’ ರೂಪದಲ್ಲಿ ಉತ್ತರಿಸಿದರು. ಕುವೆಂಪು ಇಲ್ಲಿ ತಮ್ಮ ನಾಟಕವನ್ನು ಸಮರ್ಥಿಸಿದರಷ್ಟೇ ಅಲ್ಲದೆ ನಾಟಕಕ್ಕೆ ಬಂದ ವಿಮರ್ಶೆಗಳೇ ಅಪ್ರಬುದ್ಧವೆಂದು ಬರೆದರು. ಅವರು ಮಾಸ್ತಿಯವರ ಆರೋಪಗಳಿಗೆ ಉತ್ತರಿಸುತ್ತ “….ಹಳೆಯ ಕಥೆಯನ್ನು ಹೊಸ ಸಾಹಿತಿ ತನ್ನ ಕೃತಿಗೆ ತನ್ನಿಷ್ಟದಂತೆ ಉಪಯೋಗಿಸಿಕೊಳ್ಳುವ ಪದ್ಧತಿಯು ಮಹಾಕವಿ ಸಂಪ್ರದಾಯ ಸಿದ್ಧವಾದುದು. ನಾನು ತಪ್ಪಿದರೂ ಕಾಳಿದಾಸ, ಭಾಸ, ಪಂಪ, ಕುಮಾರವ್ಯಾಸಾದಿಗಳೊಡನೆ ತಪ್ಪಿದ್ದೇನೆ. ಮಹಿಮರೊಡನೆ ತಪ್ಪಿದರೆ ಆ ತಪ್ಪು ನನಗೊಪ್ಪು” ಎಂದು ಕನ್ನಡ ಸಾಹಿತ್ಯದ ಪುರಾಣಾನುಸಂಧಾನಗಳ ವೈಶಿಷ್ಟ್ಯತೆಯ ಮೂಲಕ ತಮ್ಮ ನಾಟಕವನ್ನು ಸಮರ್ಥಿಸಿದರು. ಇಲ್ಲಿ ಶೂದ್ರತಪಸ್ವಿಗೆ ಬ್ರಾಹ್ಮಣ ಲೇಖಕರಿಂದ ದೊಡ್ಡ ಮಟ್ಟದ ವಿರೋಧ ಹುಟ್ಟಲು ನಾಟಕದಲ್ಲಿ ಬ್ರಾಹ್ಮಣತ್ವವನ್ನು ವಿಡಂಬಿಸಿ ಬರೆದಿದ್ದಾರೆ ಎಂಬ ಸಂಪ್ರದಾಯವಾದಿ ಹಾಗೂ ಸೀಮಿತ ದೃಷ್ಟಿಕೋನ ಕಾರಣವೇ ಆಗಿತ್ತು ಎಂಬುದನ್ನು ಗಮನಿಸಬೇಕು.

ಘಟನೆ ಎರಡು: ೧೯೭೨ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಅಂದಿನ ಕರ್ನಾಟಕ ಸಕಾರದ ಪೌರಾಡಳಿತ ಮಂತ್ರಿಯಾಗಿದ್ದ ಬಿ. ಬಸವಲಿಂಗಪ್ಪನವರು ಕನ್ನಡ ಸಾಹಿತ್ಯದಲ್ಲಿ ಬಹುಪಾಲು ಬೂಸ ಇದೆ ಎಂದು ಮಾತನಾಡಿದರು. ಅವರು ಕನ್ನಡ ಸಾಹಿತ್ಯದಲ್ಲಿ ಶೋಷಿತ ಲೋಕಗಳ ಗೈರು ಹಾಜರಿ ಇದೆ ಎಂಬ ದೃಷ್ಟಿಯಲ್ಲಿ ಈ ಮಾತನ್ನಾಡಿದ್ದರು. ಇದು ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ತೋರಿಸುವ ಮಾತೂ ಆಗಿತ್ತು. ಇಂದಿಗೂ ದಲಿತ ಸಾಹಿತ್ಯದ ಹುಟ್ಟಿನೊಂದಿಗೆ ಈ ಘಟನೆಯನ್ನು ಮಹತ್ವದ್ದೆಂದು ಭಾವಿಸಲಾಗುತ್ತದೆ. ಬಸವಲಿಂಗಪ್ಪನವರ ಮಾತುಗಳನ್ನು ಪತ್ರಿಕೆಗಳು ತಿರುಚಿ ಕನ್ನಡ ಸಾಹಿತ್ಯವೆಲ್ಲವು ಬೂಸ ಎಂದು ಹೇಳಿದಂತೆ ಬರೆದು ವಿವಾದವನ್ನು ಹುಟ್ಟುಹಾಕಿದವು. ಈ ಘಟನೆಯು ಸಾಹಿತ್ಯ ವಲಯದ ಸಾಂಪ್ರದಾಯಿಕ ಮನಸ್ಸುಗಳನ್ನು ಕೆರಳಿಸಿದ್ದಲ್ಲದೆ ಅವರ ವಿರುದ್ಧ ಸಾಹಿತ್ಯದಲ್ಲಿನ ಸಂಪ್ರದಾಯವಾದಿ ಗುಂಪು ಪ್ರತಿಭಟನೆಗಿಳಿಯಿತು. ಈ ಪ್ರತಿಭಟನೆ ತೀವ್ರವಾದಾಗ ಅನಿವಾರ್ಯವಾಗಿ ಬಸವಲಿಂಗಪ್ಪನವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯ್ತು. ಈ ಪ್ರಕರಣದಲ್ಲಿ ಎಲ್ಲವನ್ನು ವ್ಯವದಾನ ಹಾಗೂ ವಿವೇಕದಿಂದ ನೋಡಬೇಕಾದ ಸಾಹಿತಿಗಳೇ ಮೂಲಭೂತವಾದಿಗಳಂತೆ ವರ್ತಿಸಿದ್ದು ಗಮನಿಸಬೇಕಾದ ಸಂಗತಿ.

ಈ ಎರಡೂ ಘಟನೆಗಳಲ್ಲಿ ಸಂಪ್ರದಾಯವಾದಿ ಮನಸ್ಸುಗಳು ಹೊಸ ಕಾಲದ ಸಾಹಿತ್ಯಕ ಅನುಸಂಧಾನಗಳನ್ನು ವಿರೋಧಿಸಿದರೂ ಶ್ರೇಷ್ಠ ಸಾಹಿತ್ಯ ಚಿಂತನೆ ಹುಟ್ಟುವ ಸಂಘರ್ಷ ಸ್ವರೂಪಗಳನ್ನು ಸ್ಪಷ್ಟಗೊಳಿಸುತ್ತದೆ.

ಪ್ರಾಚೀನ ಕಾವ್ಯಗಳ ಆರಂಭದಲ್ಲಿ ಪೂರ್ವಸೂರಿಗಳ ಸ್ತುತಿ, ಕುಕವಿ ನಿಂದೆ ಹಾಗೂ ಸ್ವಕಾವ್ಯ ಸಮರ್ಥನೆಗಳನ್ನು ಮಾಡುವ ಸಂಪ್ರದಾಯವಿದೆ. ಇವು ತಮ್ಮ ಕಾಲಘಟ್ಟದ ಹೊಸ ಸಾಹಿತ್ಯ ಮೌಲ್ಯಗಳನ್ನು ಸಮರ್ಥಿಸಲು ಮಾಡುವ ಪ್ರಯತ್ನಗಳೇ ಆಗಿರುವಂತಹವು. ಪಂಪ ತನ್ನ ಕಾವ್ಯವನ್ನು “ಇದು ನಿಚ್ಚಂ ಪೊಸತು” ಎನ್ನುತ್ತಾನೆ. ರನ್ನ ತಾನು ಮಹಾಭಾರತದ ಕಥೆಯನ್ನು ಸಿಂಹಾವಲೋಕನ ಕ್ರಮದಿಂದ ಹೇಳಿದ್ದೇನೆ ಎನ್ನುವ ಮೂಲಕ ಸಾಹಿತ್ಯಕ್ಕೆ ವಿಶಿಷ್ಟ ಭಾಷಿಕ ಶಕ್ತಿಯೊಂದನ್ನು ಸಾಧಿಸಲು ಯತ್ನಿಸುತ್ತಾನೆ. ವಚನಕಾರರು ಸಾಹಿತ್ಯದ ಶಾಸ್ತ್ರೀಯತೆಯನ್ನೇ ತಿರಸ್ಕಾರ ಮಾಡಿ ಮುನ್ನಡೆಯುತ್ತಾರೆ. ಹರಿಹರ ನಾನು ‘ಸಾವ ಮನುಜರ ಬಗ್ಗೆ’ ಕಾವ್ಯ ಬರೆಯಲಾರೆ ಎನ್ನುತ್ತಾನೆ. ಇನ್ನು ಕುಮಾರವ್ಯಾಸನು ತನ್ನನ್ನು “ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ” ಎಂದು ಸಾರುತ್ತಾನೆ. ಇವೆಲ್ಲವೂ ತಮ್ಮ ಕಾಲದ ಸಾಂಪ್ರದಾಯಿಕ ಪರಂಪರೆಯನ್ನು ಮುಂದು ಬದಲಾದ ಕಾಲ ಹಾಗೂ ಪರಿಸರಗಳಿಗೆ ಅಗತ್ಯವಾದ ಹೊಸ ಮೌಲ್ಯಗಳನ್ನು ಪ್ರತಿಪಾದಿಸುವ ಧೋರಣೆಗಳೇ ಆಗಿವೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು.

೧೯ನೆಯ ಶತಮಾನದಲ್ಲಿ ಉಂಟಾದ ಪಾಶ್ಚಾತ್ಯ ಸಾಹಿತ್ಯ ಪ್ರಕಾರಗಳ ಪ್ರಭಾವವು ಸಾಹಿತ್ಯವನ್ನು ಹೊಸ ರೀತಿಯಲ್ಲಿ ನೋಡುವಂತೆ ಪ್ರೇರೇಪಿಸಿತು. ಅದುವರೆವಿಗೂ ಕಾವ್ಯ ಪ್ರಕಾರದಲ್ಲಿ ಮಾತ್ರವಿದ್ದ ಸಾಹಿತ್ಯವು ಈ ಕಾಲಘಟ್ಟದಲ್ಲಿ ಹಲವು ಪ್ರಕಾರಗಳಾಗಿ ವಿಭಜನೆಗೊಂಡಿತು. ಪಾಶ್ಚಾತ್ಯ ಸಾಹಿತ್ಯದಲ್ಲಿದ್ದ ಭಿನ್ನ ಪ್ರಕಾರಗಳನ್ನು ಇಲ್ಲಿ ದುಡಿಸಿಕೊಳ್ಳಲು ಆರಂಭಿಸಲಾಯಿತು. ಇದರಿಂದಾಗಿ ಸಾಹಿತ್ಯವನ್ನು ‘ಸೃಜನಶೀಲ’ ಹಾಗೂ ‘ಸೃಜನೇತರ’ ಎಂದು ವಿಭಾಗಿಸಿ ನೋಡುವ ಕಲ್ಪನೆಯೊಂದು ಚಾಲ್ತಿಗೆ ಬಂತು. ಕಾವ್ಯ, ಕತೆ, ಕಾದಂಬರಿ ಮುಂತಾದ ಪ್ರಕಾರಗಳನ್ನು ಸೃಜನಶೀಲವೆಂತಲೂ; ಇನ್ನುಳಿದ ವಿಮರ್ಶೆ, ಪ್ರಬಂಧ, ಆತ್ಮಕತೆ ಮುಂತಾದ ಪ್ರಕಾರಗಳನ್ನು ಸೃಜನೇತರವೆಂತಲೂ ವಿಭಾಗಿಸಿ ನೋಡುವ ಪರಂಪರೆ ರೂಢಿಗೆ ಬಂತು. ಇದೊಂದು ಸೀಮಿತ ದೃಷ್ಟಿಕೋನ. ಆಧುನಿಕ ಸಂದರ್ಭದಲ್ಲಿ ಸಾಹಿತ್ಯದ ವ್ಯಾಖ್ಯಾನಗಳು ಸೀಮಿತಾರ್ಥದಲ್ಲಿ ಬಳಸಲ್ಪಟ್ಟವು ಎಂಬುದಕ್ಕೆ ನಮ್ಮ ಸಾಹಿತ್ಯ ಚರಿತ್ರೆಗಳು ಒಳ್ಳೆಯ ಉದಾಹರಣೆಯಂತಿವೆ. ಇವುಗಳಲ್ಲಿ ಕೇವಲ ಕವಿಗಳನ್ನಷ್ಟೇ ಸಾಹಿತ್ಯದ ವ್ಯಾಪ್ತಿಯನ್ನಾಗಿಸಲಾಗಿದೆ. ಆ ಕಾಲಗಳ ಇನ್ನುಳಿದ ಅಭಿವ್ಯಕ್ತಿ ಮಾದರಿಗಳನ್ನು ಬಿಟ್ಟ ಕೊಡಲಾಗಿದೆ. ೧೨ನೇ ಶತಮಾನದ ವಚನಗಳನ್ನು ಸಾಹಿತ್ಯವೆಂದು ಕರೆಯಬೇಕಾದರೆ ೭೦ರ ದಶಕದ ದಲಿತ ಬಂಡಾಯ ಸಾಹಿತ್ಯ ಕಾಲದವರೆಗೂ ಕಾಯಬೇಕಾಯಿತು. ‘ಭಾರತೀಯ ಕಾವ್ಯ ಮೀಮಾಂಸೆ’ಯಂತಹ ಕೃತಿಗಳು ಸಾಹಿತ್ಯಕ್ಕೆ ಜನಪ್ರಿಯ ವ್ಯಾಖ್ಯಾನಗಳು ಹುಟ್ಟಲು ಪ್ರೇರೇಪಿಸಿದವು. ಇದರಿಂದಾಗಿ ‘ಹಿತವನ್ನು ಉಂಟು ಮಾಡುವುದೇ ಸಾಹಿತ್ಯ; ಎಲ್ಲರನ್ನೂ ಎಲ್ಲ ಕಾಲದಲ್ಲಿಯೂ ಸಂತೋಷ ಪಡಿಸುವುದು ಸಾಹಿತ್ಯ; ಅಕ್ಷರ ರೂಪದಲ್ಲಿರುವ ರಸಾನುಭವದ ಸುಂದರ ಅಭಿವ್ಯಕ್ತಿ ಸಾಹಿತ್ಯ, ಮುಂತಾದ ಜನಪ್ರಿಯ ವ್ಯಾಖ್ಯಾನಗಳು ಸಾಹಿತ್ಯದ ಸಾಧ್ಯತೆಗಳನ್ನೇ ಹಿನ್ನೆಲೆಗೆ ಸರಿಸಿದವು. ನವ್ಯ ಸಾಹಿತ್ಯದ ಕಾಲದಲ್ಲಿ ಲೇಖಕರು ಶುದ್ಧ ಸಾಹಿತ್ಯವೊಂದರ ಹುಡುಕಾಟದಲ್ಲಿ ತೊಡಗಿದರು. ಆ ಸಂದರ್ಭದಲ್ಲಿ ಹುಟ್ಟಿಕೊಂಡ ‘ಸಾಹಿತ್ಯೇತರ’, ‘ಅನ್ಯಜ್ಞಾನಶಿಸ್ತು’, ‘ಅಸಾಹಿತ್ಯಿಕ’ ಎಂಬ ಪರಿಭಾಷೆಗಳು ಸಾಹಿತ್ಯದ ವ್ಯಾಖ್ಯಾನವನ್ನು ಸಂಕೀರ್ಣಗೊಳಿಸಿದವು. ಗೋಪಾಲಕೃಷ್ಣ ಅಡಿಗರಂತಹವರು ‘ಕುವೆಂಪು ಕವಿಯಾದರೆ ನಾನು ಕವಿಯಲ್ಲ’ ಎಂಬಂತಹ ಮಾತುಗಳನ್ನು ಆಡುವುದರ ಮೂಲಕ ಸಾಹಿತ್ಯಕ್ಕೆ ಸೀಮಿತ ವ್ಯಾಖ್ಯೆಯನ್ನು ನೀಡಲು ಪ್ರಯತ್ನಿಸಿದರು.

೭೦ರ ದಶಕದ ನಂತರ ಶೋಷಿತ ಸಮುದಾಯಗಳು ಸಾಹಿತ್ಯ ರಚನೆಯಲ್ಲಿ ತೊಡಗಿದ ನಂತರದಲ್ಲಿ ಸಾಹಿತ್ಯದ ವ್ಯಾಖ್ಯಾನಗಳ ಸ್ವರೂಪ ಬದಲಾಗತೊಡಗಿತು. ಅಲ್ಲಿಯವರೆಗೂ ಇದ್ದ ಯಾವುದು ಸಾಹಿತ್ಯವಲ್ಲ ಎಂಬ ಪರಿಕಲ್ಪನೆಯ ಬದಲಿಗೆ ಯಾವುದೆಲ್ಲ ಸಾಹಿತ್ಯ ಎಂದು ಹುಡುಕಾಟ ಆರಂಭವಾಯಿತು. ಸಾಹಿತ್ಯವನ್ನು ಸಂಸ್ಕೃತಿ ಚಿಂತನೆಯ ಪಠ್ಯವನ್ನಾಗಿ ನೋಡುವ ಚಿಂತನೆ ಆರಂಭವಾಗುವುದರೊಂದಿಗೆ ಅದಕ್ಕೆ ರಾಜಕೀಯ-ಆರ್ಥಿಕ-ಸಾಮಾಜಿಕ ಆಯಾಮಗಳು ತೆರೆದುಕೊಂಡವು. ಇಂದು ಸಂಸ್ಕೃತಿ ಚಿಂತನೆಯ ಭಾಗವಾಗಿ ಭಾಷಿಕ ಅಭಿವ್ಯಕ್ತಿ ಪ್ರಕಾರಗಳೆಲ್ಲವನ್ನೂ ಸಾಹಿತ್ಯದ ವ್ಯಾಪ್ತಿಯಲ್ಲಿ ನೋಡಲಾಗುತ್ತಿದೆ. ಇಷ್ಟಾದರೂ ಸಾಹಿತ್ಯವನ್ನು ಸಾಂಪ್ರದಾಯಿಕ ಅರ್ಥದಲ್ಲೇ ನೋಡುವ ಕ್ರಮವೇನೂ ಬಿಟ್ಟು ಹೋಗಿಲ್ಲ. ಇಂದಿಗೂ ಕಾವ್ಯವೆಂದರೆ ರೂಪಕಗಳು, ಅಲಂಕಾರಗಳು, ನಿಗೂಡಾರ್ಥಗಳು ಎಂಬ ಸಾಂಪ್ರದಾಯಿಕ ಮನೋಕಲ್ಪನೆಯೊಂದು ಮಾಯವಾಗಿಲ್ಲ. ಈ ರೀತಿಯ ಸಾಂಪ್ರದಾಯಿಕ ಮನಸ್ಥಿತಿ ಸಾಹಿತ್ಯದ ಭಿನ್ನ ಸಾಧ್ಯತೆಗಳನ್ನು ಇಲ್ಲವಾಗಿಸಿಬಿಡುತ್ತದೆ. ಸಾಹಿತ್ಯ ಸಂದರ್ಭವನ್ನು ಕುರಿತು ಚರ್ಚಿಸುವಾಗ ಸಾಹಿತ್ಯದೊಳಗಿನ ಸಾಂಪ್ರದಾಯಿಕತೆಯನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ. ಯಾಕೆಂದರೆ ಈ ಸಾಂಪ್ರದಾಯಿಕತೆಯ ಮೂಲಭೂತವಾದಿ ಧಾರ್ಮಿಕರಂತೆ ಲೇಖಕರ ಅಭಿವ್ಯಕ್ತಿ ಮಾದರಿಗಳನ್ನು ನಿಯಂತ್ರಿಸುತ್ತಿರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಸಂಬಂಧಿಸಿದಂತೆ ಸಾಹಿತ್ಯದೊಳಗಡೆಯೇ ಅಂಕುಶಗಳು ನಿರ್ಮಾಣವಾಗಿರುವ ಬಗೆಯನ್ನು ಅರಿಯುವುದು ತುಂಬಾ ಮುಖ್ಯವಾದುದು.

ಸಾಹಿತಿಯ ಅಭಿವ್ಯಕ್ತಿ ಸ್ವಾತಂತ್ರ‍್ಯದ ಸಾಧ್ಯತೆಗಳು

ಸಾಹಿತ್ಯ ಕೃತಿಯೊಂದು ವಿವಾದಕ್ಕೆ ಒಳಗಾದಾಗ ಅಭಿವ್ಯಕ್ತಿ ಸ್ವಾತಂತ್ರ‍್ಯದ ಚರ್ಚೆ ಮುನ್ನೆಲೆಗೆ ಬರುತ್ತದೆ. ಹಾಗೆ ನೋಡಿದರೆ ನಮ್ಮ ಸಂವಿಧಾನ ಸಾಹಿತಿಗಳಿಗೆ ವಿಶೇಷವಾದ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನೇನು ನೀಡಿಲ್ಲ. ಸಂವಿಧಾನದ ೧೯(೧) ಎ ಅನುಚ್ಛೇದದಡಿಯಲ್ಲಿ ಬರುವ ಅಭಿವ್ಯಕ್ತಿ ಸ್ವಾತಂತ್ರ‍್ಯವು ಎಲ್ಲ ಪ್ರಜೆಗಳಿಗೂ ಸಮಾನವಾದದ್ದು. ನಮ್ಮ ಸಂವಿಧಾನ ಸಮಾನತೆಯ ತತ್ವದ ಆಧಾರದಲ್ಲಿ ರೂಪುಗೊಂಡಿರುವುದರಿಂದ ಇಲ್ಲಿ ಯಾರಿಗೂ ವಿಶೇಷ ಹಕ್ಕುಗಳನ್ನು ನೀಡಿಲ್ಲ. ಎಲ್ಲ ವ್ಯಕ್ತಿಗಳೂ ತಮ್ಮ ವಿಚಾರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವಾಗ ಕೆಲವು ನಿರ್ಬಂಧಗಳಿಗೆ ಒಳಪಡುತ್ತಾರೆ. ಆ ನಿರ್ಬಂಧಗಳಲ್ಲಿ ಸಾಮಾಜಿಕ ಆರೋಗ್ಯವನ್ನು ಕೆಡಿಸುವಂತೆ ಬರೆಯಬಾರದು ಎಂಬುದು ಮಹತ್ವವಾದುದು. ಇದಕ್ಕೆ ಯಾರ ವಿರೋಧವೂ ಇರಲಾರದು. ಅದರೆ ಎಲ್ಲಾ ಪ್ರಜೆಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯದ ಹಕ್ಕಿನಡಿಯಲ್ಲೇ ಸಾಹಿತಿಗಳೂ ಬರುವುದರಿಂದ ಸ್ಥಾಪಿತ ಶಕ್ತಿಗಳ ಮೌಲ್ಯಗಳನ್ನು ಪ್ರಶ್ನಿಸಿ ಬರೆದಾಗಲೆಲ್ಲ ತೊಂದರೆಗೆ ಸಿಲುಕ ಬೇಕಾಗುತ್ತದೆ.

ಸಾಹಿತ್ಯ ಕೃತಿಗಳು ಯಾವಾಗಲೂ ಸಾಮಾಜಿಕ ಸ್ವಾಸ್ಥ್ಯದ ನೆಪದಲ್ಲಿ ವಿವಾದಕ್ಕೊಳಗಾಗುತ್ತವೆ. ಸ್ಥಾಪಿತ ಶಕ್ತಿಗಳು ತಮ್ಮ ನಂಬಿಕೆಗಳಿಗೆ ಹಾಗೂ ಭಾವನೆಗಳಿಗೆ ಹಾನಿಯುಂಟಾಗಿದೆ. ಎಂಬ ಕೂಗನ್ನೆಬಿಸಿ ಕೃತಿಯ ವಿಚಾರಗಳನ್ನು ದಮನಿಸುತ್ತವೆ. ನಮ್ಮ ರಾಜಕೀಯ ವ್ಯವಸ್ಥೆಯೂ ಸ್ಥಾಪಿತ ಶಕ್ತಿಗಳ ಕೈಯಲ್ಲೆ ಇರುವುದರಿಂದ ವಿವಾದವೆಬ್ಬಿಸುವುದು ತುಂಬಾ ಸುಲಭವಾದದ್ದು. ದುರಂತವೆಂದರೆ ಎಲ್ಲ ಸಾಹಿತ್ಯ ಕೃತಿಗಳ ವಿವಾದಗಳಲ್ಲಿ ಸಾಮಾಜಿಕ ಸ್ವಾಸ್ಥ್ಯವೆಂಬ ಕಲ್ಪಿತವೇ ಮುಖ್ಯವಾಗಿ ಸಾಮಾಜಿಕ ನ್ಯಾಯದ ಪ್ರಶ್ನೆಗಳು ಹಿನ್ನೆಲೆಗೆ ಸಂದಿವೆ. ಇದು ಸಂವಿಧಾನದೊಳಗಿರುವ ತಪ್ಪಲ್ಲ. ಯಾಕೆಂದರೆ ಸಂವಿಧಾನದ ಎಲ್ಲ ಮೂಲಭೂತ ಹಕ್ಕುಗಳೂ ಸಾಮಾಜಿಕ ನ್ಯಾಯದ ಆಶಯದಡಿಯಲ್ಲೇ ರೂಪುಗೊಂಡಿರುವಂತಹವು. ಆದರೆ ಸಂವಿಧಾನವನ್ನು ಪ್ರತಿಷ್ಠಿತ ಶಕ್ತಿಗಳು ತಮ್ಮ ಮೂಗಿನ ನೇರಕ್ಕೆ ಬಳಸಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನಾಶ ಮಾಡಿವೆ. ಇದನ್ನು ಮನಗಂಡೇ ಡಾ. ಬಿ.ಆರ್. ಅಂಬೇಡ್ಕರ್‌ರವರು, “…ಈ ಸಂವಿಧಾನ ಸರಿಯಾಗಿ ಜಾರಿಯಾಗದಿದ್ದರೆ ಸಂವಿಧಾನವನ್ನು ದೂರಬೇಡಿ; ಸಂವಿಧಾನವನ್ನು ಜಾರಿಗೊಳಿಸುವ ದಗಾಕೋರರನ್ನು (ರ‍್ಯಾಸ್ಕಲ್‌) ದೂರಿ” ಎಂದಿದ್ದರು.

ಸಾಹಿತ್ಯ ಕೃತಿಗಳ ವಿವಾದಗಳಲ್ಲಿ ಪ್ರಮುಖವಾಗಿ ಮೂರು ಸಂಗತಿಗಳು ಚರ್ಚೆಗೆ ಬರುತ್ತವೆ. ಅವುಗಳೆಂದರೆ, ಒಂದನೆಯದು; ಸಾಹಿತಿಯ ಅಭಿವ್ಯಕ್ತಿ ಸ್ವಾತಂತ್ರ‍್ಯ. ಎರಡನೆಯದು; ಸಾಹಿತ್ಯ ಕೃತಿಯು ಪ್ರಕಟಿಸುವ ಸತ್ಯ, ಹಾಗೂ ಮೂರನೆಯದು; ಸಮುದಾಯದ ನಂಬಿಕೆಗಳು. ಈ ಮೂರು ಸಂಗತಿಗಳಲ್ಲಿ ಮೊದಲೆರಡು ಸಾಹಿತಿಗಳಿಗೆ ಸಂಬಂಧಿಸಿದವು. ಮೂರನೆಯದು ಸಮುದಾಯಗಳಿಗೆ ಸಂಬಂಧಿಸಿದ್ದು. ಭಾರತದಂತಹ ಜಾತಿ ಸಮಾಜದಲ್ಲಿ ಪ್ರತಿಯೊಂದು ಸಮುದಾಯವೂ ಕೆಲವು ಆದರ್ಶ, ನಂಬಿಕೆಗಳನ್ನು ಕಟ್ಟಿಕೊಂಡಿರುತ್ತದೆ. ತನ್ನ ನಂಬಿಕೆಗಳು ಶಿಥಿಲಗೊಳ್ಳುವುದನ್ನು ಸಮುದಾಯ ಸಹಿಸಲಾರದು. ಅದಕ್ಕೆ ತನ್ನ ನಂಬಿಕೆಗಳು ಪ್ರಶ್ನಾತೀತ ಹಾಗೂ ಎಂದಿಗೂ ಬದಲಾಗದವು ಎಂಬ ನಂಬಿಕೆ ಕಾರಣವಾಗಿರುತ್ತದೆ. ಸಾಹಿತಿ ಸಮುದಾಯಗಳ ಆದರ್ಶ, ನಂಬಿಕೆಗಳನ್ನು ಯಾಕೆ ಶಿಥಿಲಗೊಳಿಸಬೇಕು ಎಂಬ ಪ್ರಶ್ನೆ ಸಹಜವಾದದ್ದು. ಬದಲಾಗುವ ಕಾಲಮಾನಕ್ಕೆ ಅತ್ಯವಾದ ಮೌಲ್ಯಗಳನ್ನು ರೂಪಿಸಲು ಪ್ರಯತ್ನಿಸುವುದೇ ಸಾಹಿತ್ಯದ ಕಾರ್ಯ ಆಗಿರುತ್ತದೆ ಎಂಬ ಅಂಶ ತುಂಬಾ ಮುಖ್ಯವಾದದ್ದು. ಯಾವುದೋ ಕಾಲದಲ್ಲಿ ರೂಪುಗೊಂಡಿರುವ ಮೌಲ್ಯಗಳು ಎಲ್ಲ ಕಾಲಕ್ಕೂ ಸಲ್ಲುವುದಿಲ್ಲ ಎಂದು ಸಾಹಿತ್ಯ ನಂಬುತ್ತದೆ. ಹಾಗಾಗಿಯೇ ಕುವೆಂಪು “ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ” ಎಂದು ಹೇಳಲು ಸಾಧ್ಯವಾಗಿದ್ದು. ಕುವೆಂಪುರವರ ‘ಜಲಗಾರ’, ‘ಶೂದ್ರತಪಸ್ವಿ’, ‘ರಾಮಾಯಣದರ್ಶನಂ’ ಹೀಗೆ ಯಾವುದೇ ಕೃತಿಯನ್ನು ತೆಗೆದುಕೊಂಡರೂ ಅಲ್ಲೆಲ್ಲ ಹಳೆಯ ಮೌಲ್ಯಗಳ ವಿರುದ್ಧ ಒಂದು ಸಂಘರ್ಷವಿದೆ; ಪರಂಪರೆಯನ್ನು ಮುರಿದು ಕಟ್ಟುವ ಮನೋಧರ್ಮವಿದೆ.

ಸಾಹಿತಿಗಳು ಪ್ರಕಟಿಸುವ ಹೊಸ ಮೌಲ್ಯಗಳ ವಿರುದ್ಧ ಪ್ರತಿ ಕಾಲದಲ್ಲಿಯೂ ಸ್ಥಾಪಿತ ಶಕ್ತಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತವೆ. ಯಾಕೆಂದರೆ ಹೊಸ ಮೌಲ್ಯಗಳನ್ನು ಅನುಸರಿಸಲು ಹೋದರೆ ಅಥವಾ ಒಪ್ಪಿಕೊಂಡರೆ ಇದುವರೆಗೂ ಅನುಭವಿಸಿಕೊಂಡು ಬಂದ ಅನುಕೂಲಗಳು ಹಾಗೂ ಅಧಿಕಾರಗಳನ್ನು ಬಿಟ್ಟುಕೊಡಬೇಕಾಗುತ್ತದೆ ಎಂಬ ಆತಂಕ ನಿರಂತರವಾಗಿ ಮೇಲ್ಜಾತಿ ಸಮುದಾಯಗಳನ್ನು ಕಾಡುತ್ತಿರುತ್ತದೆ. ಅಂದರೆ ಸಾಮಾಜಿಕ ಹಾಗೂ ರಾಜಕೀಯಾಧಿಕಾರದ ಹಿಡಿತವೊಂದು ತಪ್ಪಿಹೋಗುವುದನ್ನು ಇವು ಸಹಿಸಲಾರವು. ಆದರೆ ಉತ್ತಮ ಸಾಹಿತ್ಯ ಕೃತಿಗಳು ಎಲ್ಲ ಕಾಲಘಟ್ಟಗಳಲ್ಲಿಯೂ ಸಾಮಾಜಿಕಜ ನ್ಯಾಯದ ಪ್ರಶ್ನೆಗಳನ್ನು ಎತ್ತುತ್ತಲೇ ಇರುತ್ತವೆ. ಸಮಾಜದಲ್ಲಿನ ಅನ್ಯಾಯಗಳ ವಿರುದ್ಧ ಮಾತನಾಡುತ್ತಾ ಶೋಷಣೆಗೊಳಗಾದ ಸಮುದಾಯಗಳ ಅಸ್ತಿತ್ವದ ಪ್ರಶ್ನೆಗಳನ್ನು ಮುಂದು ಮಾಡುತ್ತಿರುತ್ತವೆ. ಸಾಹಿತ್ಯ ಕೃತಿಯ ಈ ಕೆಲಸವನ್ನು ಸ್ಥಾಪಿತ ಶಕ್ತಿಗಳು ಸಹಿಸಲಾರದೆ ಹೇಗಾದರೂ ಸಾಹಿತ್ಯ ಪ್ರಕಟಿಸುವ ಹೊಸ ಮೌಲ್ಯಗಳನ್ನು ದಮನಿಸಲು ಪ್ರಯತ್ನಿಸುತ್ತವೆ. ಚಾರಿತ್ರಿಕವಾಗಿ ನೋಡಿದರೆ ಆಯಾ ಕಾಲ ಘಟ್ಟಗಳಲ್ಲಿ ಸ್ಥಾಪಿತ ಶಕ್ತಿಗಳು ತಮ್ಮ ಪ್ರಯತ್ನದಲ್ಲಿ ಯಶಸ್ವಿಯೂ ಆಗಿವೆ.

ಸಾಹಿತಿಗಳೆಲ್ಲರೂ ಹೊಸ ಮೌಲ್ಯಗಳನ್ನೇ ಪ್ರತಿಪಾದಿಸುತ್ತಾ ಸಾಮಾಜಿಕ ಅಸಮಾನತೆಗಳ ವಿರುದ್ಧ ಬರೆಯುತ್ತಾರೆ ಎಂದೇನಲ್ಲ. ಪ್ರತಿ ಕಾಲಘಟ್ಟದಲ್ಲಿಯೂ ಸ್ಥಾಪಿತ ಶಕ್ತಿಗಳ ನಂಬಿಕೆಗಳನ್ನು ವಿರೋಧಿಸಿ ಬರೆಯುವ ಲೇಖಕರಿರುವಂತೆ ಆ ನಂಬಿಕೆಗಳನ್ನೇ ನೆಚ್ಚಿ ಬರೆಯುವ ಲೇಖಕರೂ ಇರುತ್ತಾರೆ. ಈ ಎರಡೂ ರೀತಿ ಬರೆಯದೇ ಸಾಹಿತ್ಯವನ್ನು ತುಂಬಾ ರೊಮ್ಯಾಂಟಿಕ್ಕಾಗಿ ಪರಿಭಾವಿಸುವ ಲೇಖಕರೂ ಇರುತ್ತಾರೆ. ಈ ಬಗೆಯ ಸಾಹಿತ್ಯ ಚಿಂತನೆ ಮೇಲಿನ ಎರಡೂ ಮಾರ್ಗಗಳ ಬಗೆಗೆ ತಾಟಸ್ಥ್ಯ ನಿಲುವನ್ನು ತೋರಿಸುತ್ತದಾದರೂ ಆಳದಲ್ಲಿ ಸಂಪ್ರದಾಯವಾದಿ ಮೌಲ್ಯಗಳನ್ನೇ ಪ್ರತಿಪಾದಿಸುತ್ತಿರುತ್ತದೆ. ಇದು ಅತ್ಯಂತ ಅಪಾಯಕಾರಿ ಮಾರ್ಗ ಕೂಡ. ಯಾಕೆಂದರೆ ಸಾಹಿತಿಗಳಾದವರು ತಮಗೆ ಸಂತೋಷವಾಗಲೆಂದೊ ಅಥವಾ ತಮಗೆ ತಾವು ಬರೆದುಕೊಳ್ಳುತ್ತಿರುವುದಾಗಿಯೋ ಘೋಷಿಸುವುದು ಸುಳ್ಳು ಮತ್ತು ಸಾಹಿತ್ಯದ ಆಶಯಗಳಿಗೆ ಎಸಗುವ ದ್ರೋಹ. ಸಾಹಿತ್ಯ ಲೇಖಕರಿಂದ ಪ್ರಕಟಗೊಂಡ ಕ್ಷಣದಿಂದಲೇ ಸಾರ್ವಜನಿಕಗೊಳ್ಳುವಂತಹದ್ದು. ಹಾಗಾಗಿ ಉತ್ತಮ ಲೇಖಕರು ಯಾವಾಗಲೂ ಅಸಮಾನತೆಗಳ ವಿರುದ್ಧ ತಮ್ಮ ಬರಹಗಳ ಮೂಲಕ ಸಂಘರ್ಷ ನಡೆಸುತ್ತಿರುತ್ತಾರೆ.

ಲೇಖಕರಾದವರು ಸಾಹಿತ್ಯದ ಮೂಲಕ ಸಮಾಜದ ಇತರೆ ವ್ಯಕ್ತಿಗಳಿಗಿಂತಲೂ ಮಹತ್ವದ ಜವಾಬ್ದಾರಿಯನ್ನು ನಿಬಾಯಿಸುತ್ತಿರುತ್ತಾರೆ ಎಂಬುದು ಜನಪ್ರಿಯ ಸೃಜನಶೀಲರ ನಂಬಿಕೆ. ಇದು ಎಷ್ಟರ ಮಟ್ಟಿಗೆ ಸರಿ ಅಥವಾ ತಪ್ಪು ಎಂಬುದು ಬೇರೆಯದೆ ಚರ್ಚೆ. ಯಾಕೆಂದರೆ ಇದು ಆರೋಪಿತವೇ ಹೊರತು ವಾಸ್ತವವಲ್ಲ. ಆದ್ದರಿಂದ ಈ ಚರ್ಚೆಯನ್ನು ಮುಂದುವರೆಸದೆ ಸ್ವಾತಂತ್ರ‍್ಯೋತ್ತರ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ‍್ಯವು ಒಂದು ಪ್ರಜಾತಾಂತ್ರಿಕ ಮೌಲ್ಯವಾಗಿ ರೂಪುಗೊಂಡ ನಂತರ ಸಾಹಿತ್ಯ ವಲಯದಲ್ಲಿ ನಡೆದಿರಬಹುದಾದ ಚರ್ಚೆಗಳನ್ನು ಅವಲೋಕಿಸುವುದು ಉಚಿತವೆನಿಸುತ್ತದೆ.

೧೯೭೫ ರಲ್ಲಿ ಇಂದಿರಾಗಾಂಧಿಯವರ ಸರ್ಕಾರ ತುರ್ತು ಪರಿಸ್ಥಿತಿಯನ್ನು ಹೇರಿ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿತು. ಇದರ ವಿರುದ್ಧ ಸಮಾಜದ ಇತರೆ ವಲಯಗಳಿಂದ ಪ್ರತಿರೋಧ ಉಂಟಾದಂತೆ ಸಾಹಿತ್ಯ ವಲಯದಲ್ಲಿಯೂ ಪ್ರತಿರೋಧ ರೂಪುಗೊಂಡಿತು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಬರೆಯಲಾಗದ ಸ್ಥಿತಿ ಉಂಟಾದಾಗ ಸಾಹಿತಿಗಳ ವಲಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ‍್ಯದ ಚರ್ಚೆ ವ್ಯಾಪಕವಾಗಿ ನಡೆಯಿತು. ಇದೇ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ವಿರೋಧವೆಂದರೆ ಕೇವಲ ಅಭಿವ್ಯಕ್ತಿ ಸ್ವಾತಂತ್ರ‍್ಯದ ಚರ್ಚೆಯಲ್ಲ ಎಂಬ ವಾದಗಳೂ ಹುಟ್ಟಿಕೊಂಡವು. ಸಾಹಿತಿಯ ಸ್ವಾತಂತ್ರ‍್ಯವೆಂದರೆ ರೊಮ್ಯಾಂಟಿಕ್ಕಾಗಿ ವಿಜೃಂಬಿಸುವುದಲ್ಲ. ಬದಲಾಗಿ “….ತುರ್ತುಪರಿಸ್ಥಿತಿಯ ಹೇರಿಕೆ, ಕರಾಳತೆಗಳನ್ನು ದಿಟ್ಟತನದಿಂದ ವಿರೋಧಿಸಿ ಅತ್ಯಂತ ಸಮಕಾಲಿಕ ಅಗತ್ಯದ ಪೂರೈಕೆಗೆ ಒಂದು ಪೂರಕ ಶಕ್ತಿಯಾದ ಸಾಹಿತಿಗಳು, ಮುಂದೆ ಯಾವತ್ತೂ ಇಂಥ ಪರಿಸ್ಥಿತಿ ತಲೆ ಹಾಕದಂತೆ ಮತ್ತು ಪ್ರಜಾಪ್ರಭುತ್ವದ ಹೆಸರಿನಲ್ಲೆ ಪ್ರತಿಷ್ಟಿತರಿಗೆ ಮಾತ್ರ ಸ್ವಾತಂತ್ರ‍್ಯದ ಅನುಭವ ತರುವ ವ್ಯವಸ್ಥೆಯ ಸೂಕ್ಷ್ಮಗಳು ಕಾರ್ಯಪ್ರವೃತ್ತವಾಗದಂತೆ ಮಾಡಲು ಯಾವ ನೆಲೆ-ನಿಲುವುಗಳು ಮುಖ್ಯವೆಂದು ಚಿಂತಿಸಬೇಕು; ಅಂದರೆ ಒಂದು ನಾಡಿನ ಪ್ರಜ್ಞಾಪಾತಳಿಯ ಪ್ರತಿನಿಧಿಗಳೆಂದು ಭಾವಿಸಲ್ಪಟ್ಟಿರುವ ಸಾಹಿತಿಗಳು ತುರ್ತುಪರಿಸ್ಥಿತಿಯ – ಅಷ್ಟೆ ಅಲ್ಲ – ಇಡೀ ವ್ಯವಸ್ಥೆಯ ಕ್ರೌರ್ಯ ಮತ್ತು ಅದಕ್ಕೆ ಪೂರಕವಾದ ಸೂಕ್ಷ್ಮಗಳನ್ನು ಕುರಿತು ತೀವ್ರವಾಗಿ ಆಲೋಚಿಸಬೇಕು; ಪ್ರತಿಭಟಿಸಬೇಕು” (ಸಾಹಿತ್ಯ ಮತ್ತು ರಾಜಕಾರಣ, ಬರಗೂರು ರಾಮಚಂದ್ರಪ್ಪ) ಎಂಬ ನಿಲುವುಗಳು ರೂಪಿತವಾದವು. ಅಂದರೆ ಸಾಹಿತಿಗಳಾದವರು ಕೇವಲ ವೈಯಕ್ತಿಕ ನೆಲೆಯವರಾಗಿರದೆ ಸಾಮುದಾಯಿಕ ನೆಲೆಯಲ್ಲಿ ಆಲೋಚಿಸಬೇಕು ಹಾಗೂ ಬರೆಯಬೇಕು ಎಂಬ ಚಿಂತನೆಗಳು ರೂಪುಗೊಂಡವು. ಮೇಲಿನ ಮಾತುಗಳಲ್ಲಿ ಸಾಹಿತಿಯ ಅಭಿವ್ಯಕ್ತಿ ಸ್ವಾತಂತ್ರ‍್ಯದ ಸಾಧ್ಯತೆಯು ವ್ಯವಸ್ಥೆ ಉಂಟುಮಾಡುವ ಕ್ರೌರ್ಯಗಳನ್ನು ಪ್ರತಿರೋಧಿಸುವ ಶಕ್ತಿಯಾಗಿ ರೂಪಾಂತರವಾಗಬೇಕೆಂಬ ಆಶಯ ವ್ಯಕ್ತವಾಗುತ್ತದೆ. ಇಲ್ಲಿ ಸಾಹಿತಿಗಳು ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕಿರುವ ಸಾಧ್ಯತೆಗಳನ್ನು ಪ್ರತಿಷ್ಠಿತ ಶಕ್ತಿಗಳು ನಾಶ ಮಾಡದಂತೆ ಎಚ್ಚರ ವಹಿಸಬೇಕಾದ ಅಗತ್ಯ ಪ್ರತಿಪಾದಿತವಾಗುತ್ತಿರುವುದನ್ನು ಕಾಣಬಹುದಾಗಿದೆ.

ತುರ್ತು ಪರಿಸ್ಥಿತಿಯ ನಂತರ ೧೯೮೯ ರಲ್ಲಿ ಕನ್ನಡ ಪತ್ರಿಕೆಯೊಂದು ರೂಪಿಸಿದ ‘ನಿರಂಕುಶ ಅಭಿವ್ಯಕ್ತಿ ಸ್ವಾತಂತ್ರ‍್ಯ ಅಗತ್ಯವೆ?” ಎಂಬ ಶೀರ್ಷಿಕೆಯಲ್ಲಿನ ಪ್ರಶ್ನೆಗಳಿಗೆ ಜಿ.ಎಚ್.ನಾಯಕರು ಉತ್ತರಿಸುತ್ತಾ, “ನನ್ನ ಅಭಿಪ್ರಾಯದಂತೆ ನಮ್ಮ ಸಂವಿಧಾನವು ಮೊದಲನೆಯದಾಗಿ ಸೃಜನಶೀಲ ಲೇಖಕರ, ಕಲಾವಿದರ ಅಭಿವ್ಯಕ್ತಿಯ ಸ್ವರೂಪ ಮತ್ತು ಪ್ರಕ್ರಿಯೆಯ ವಿಶಿಷ್ಟತೆಯನ್ನು ತಕ್ಕ ತಿಳುವಳಿಕೆಯಿಂದ ಗುರುತಿಸಿ ಗೌರವಿಸಿಲ್ಲ. ಎರಡನೆಯದಾಗಿ ಜನತೆಯ ಸಂವೇದನಾಶೀಲತೆ ಜಡಗಟ್ಟದಂತೆ, ವಿಕೃತಗೊಳ್ಳದಂತೆ ಅದನ್ನು ಸೂಕ್ಷ್ಮವಾಗಿ ಜೀವಂತವಾಗಿ ಉಳಿಸಬಹುದಾದ ಸೃಜನಶೀಲ ಕೃತಿ ಕಲಾಕೃತಿಗಳ ಸಾಂಸ್ಕೃತಿಕ ಮತ್ತು ರಾಜಕೀಯ ಮಹತ್ವವನ್ನು ಅದು ಆಳವಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ” ಎಂದು ಹೇಳುತ್ತಾರೆ. ಅಂದರೆ ಇಲ್ಲಿಯೂ ಕೂಡ ಸಾಹಿತಿಗಳು ಸಾಮಾಜಿಕವಾಗಿ ಬಹುದೊಡ್ಡ ಜವಾಬ್ದಾರಿಯೊಂದನ್ನು ನಿಬಾಯಿಸುತ್ತಾರೆ ಎಂಬ ನಿಲುವು ವ್ಯಕ್ತವಾಗಿದೆ. ಹಾಗೆಯೇ ಸಾಹಿತಿಗಳಾದವರಿಗೆ ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕಿರುವ ನಿರ್ಬಂಧಗಳನ್ನು ಸಡಿಲಿಸಬೇಕಾದ ಅಗತ್ಯವಿದೆ ಎಂಬ ಪ್ರತಿಪಾದನೆಯಿದೆ. ಅವರು ಮುಂದುವರೆದು ಸಾಹಿತಿಯು ತನ್ನ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಅನುಭವಿಸುತ್ತಾ ಒಳಗಿನ ಆತ್ಮಸಾಕ್ಷಿಯ ಅಂಕುಶಕ್ಕೆ ಒಳಗಾಗಿ ಬರೆಯಬೇಕು ಎಂದು ಸೂಚಿಸುತ್ತಾರೆ. ಈ ಒಳಗಿನ ಆತ್ಮಸಾಕ್ಷಿಗೆ ಪಕ್ಕಾಗಿ ಬರೆಯುವ ಲೇಖಕ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವಂತೆ ಬರೆಯಲಾರ ಎಂಬ ತಿಳುವಳಿಕೆ ಇದಾಗಿದೆ.

ಇದಾದ ನಂತರ ೨೦೦೫ ರಲ್ಲಿ ನಡೆದ ‘ಆಳ್ವಾಸ ನುಡಿಸಿರಿ’ ಯಲ್ಲಿ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಸಂಬಂಧಿಸಿದಂತೆ ‘ಕನ್ನಡ ಮನಸ್ಸು: ಬೌದ್ಧಿಕ ಸ್ವಾತಂತ್ರ‍್ಯ’ ಎಂಬ ವಿಷಯವನ್ನು ಕೇಂದ್ರವಾಗಿರಿಸಿಕೊಂಡು ನಡೆದ ಚರ್ಚೆಯನ್ನು ಗಮನಿಸಬಹುದು. ಈ ಸಮ್ಮೇಳನದಲ್ಲಿ ಎಂ.ಎಂ.ಕಲುಬುರ್ಗಿ, ಕೆ.ಚನ್ನಪ್ಪಗೌಡ, ಎಚ್.ಎಸ್.ಶ್ರೀಮತಿ, ಮಲ್ಲೇಪುರಂ ಜಿ. ವೆಂಕಟೇಶ್, ಎನ್.ಎಸ್. ತಾರಾನಾಥ್ ಹಾಗೂ ಎಸ್.ಜಿ.ಸಿದ್ಧರಾಮಯ್ಯ ಮೊದಲಾದ ಬರಹಗಾರರು ಬೌದ್ಧಿಕ ಸ್ವಾತಂತ್ರ‍್ಯದ ಸ್ವರೂಪವನ್ನು ಕುರಿತು ಚಿಂತಿಸಿದ್ದಾರೆ. ಈ ಸಮ್ಮೇಳನದ ಅಧ್ಯಕ್ಷತೆಯನ್ನ ವಹಿಸಿದ್ದ ಎಸ್.ಎಲ್.ಭೈರಪ್ಪನವರನ್ನು ಹೊರತುಪಡಿಸಿ ಉಳಿದೆಲ್ಲರೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ವ್ಯಾಪ್ತಿಯೊಳಗಡೆಯೇ ಬೌದ್ಧಿಕ ಸ್ವಾತಂತ್ರ‍್ಯವನ್ನು ನಿರ್ವಚಿಸಬೇಕೆಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಸಾಹಿತ್ಯ ಅಭಿವ್ಯಕ್ತಿ ಸ್ವಾತಂತ್ರ‍್ಯವು ಕೇವಲ ವ್ಯಕ್ತಿಗತ ನೆಲೆಯದಷ್ಟೇ ಆಗಿರದೆ ಸಾಮುದಾಯಿಕ ನೆಲೆಯದಾಗಿರುತ್ತದೆ. ಸಾಹಿತಿಯು ತನ್ನ ಸಾಮೂದಾಯಿಕ ಜವಾಬ್ದಾರಿಗಳನ್ನು ಅರಿತು ವರ್ತಿಸಿದಾಗ ಮಾತ್ರವೇ ಅಭಿವ್ಯಕ್ತಿ ಸ್ವಾತಂತ್ರ‍್ಯ ಅರ್ಥಪೂರ್ಣವಾಗುತ್ತದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.

ಡಾ. ಎಂ.ಎಂ.ಕಲಬುರ್ಗಿಯವರು ಬರಹಗಾರರ ಬೌದ್ಧಿಕ ಸ್ವಾತಂತ್ರ‍್ಯದ ಕುರಿತು ಚರ್ಚೆ ಹೇಗಿರಬೇಕು ಎಂಬ ಬಗ್ಗೆ ತಮ್ಮ ಉದ್ಘಾಟನಾ ಭಾಷಣದಲ್ಲಿ ವಿವರಿಸುತ್ತಾರೆ. ಅವರು, “ಮನುಷ್ಯ ಮಾನವಿಕ ನೆಲೆಯಲ್ಲಿ ಹುಟ್ಟುತ್ತಾನೆ, ಸಾಮಾಜಿಕ ನೆಲೆಯಲ್ಲಿ ಬದುಕುತ್ತಾನೆ. ಇವುಗಳಲ್ಲಿ ಮಾನವಿಕ ಎಂಬುದು ಪ್ರಾಕೃತಿಕ ಸೃಷ್ಟಿ, ಸಾಮಾಜಿಕವೆಂಬುದು ಅದರಿಂದ ನಾವು ನಿರ್ಮಿಸಿಕೊಂಡ ಸಾಂಸ್ಕೃತಿಕ ರಚನೆ. ಅಂದರೆ, ಮಾನವೀಯ-ಅಮಾನವೀಯ ಗುಣಗಳ ಸಂಚಯವಾಗಿರುವ ಮಾನವಿಕವನ್ನು ಬೇರೆ ಬೇರೆ ಪರಿಸರಗಳು ತಮ್ಮ ಅಂದಂದಿನ ಜೀವನಕ್ಕೆ ತಕ್ಕಂತೆ ಮರು ರೂಪಿಸಿಕೊಳ್ಳುವಲ್ಲಿ ಸಮಷ್ಟಿ ಹಿತರೂಪದ ಬೇರೆ ಬೇರೆ ಸಾಮಾಜಿಕ ವ್ಯವಸ್ಥೆಗಳು ಅಸ್ತಿತ್ವಕ್ಕೆ ಬಂದಿರುತ್ತವೆ. ಈ ವ್ಯವಸ್ಥೆಗಳೇ ಸಾಮಾಜಿಕ ನ್ಯಾಯವೆನಿಸಿಕೊಳ್ಳುತ್ತಿದ್ದು ಇವುಗಳಿಗೆ ಅನ್ಯಾಯ ಸಂಭವಿಸುವಾಗ ಪ್ರತಿಭಟಿಸುವುದೇ ಬೌದ್ಧಿಕ ಸ್ವಾತಂತ್ರ‍್ಯವೆನಿಸಿಕೊಳ್ಳುತ್ತದೆ. ಈ ಬೌದ್ಧಿಕ ಸ್ವಾತಂತ್ರ‍್ಯವನ್ನು ಸಾಮಾಜಿಕ ನ್ಯಾಯಕ್ಕೆ ಕೇಡು ತಟ್ಟದಂತೆ ನಿರ್ಭೀತಿಯಿಂದ ಬಳಸಿಕೊಳ್ಳಬೇಕಾಗುತ್ತದೆ. ಆದುದರಿಂದ, ‘ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಅಂದರೆ ಸಾಮಾಜಿಕ ನ್ಯಾಯಕ್ಕೆ ಭಂಗ ಬರದಂತೆ ನನ್ನ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಬಳಸುತ್ತೇನೆ ಎಂಬ ಬಸವಣ್ಣನ ಮಾತು ಸೂಕ್ತವಾದುದು” ಎಂದು ಹೇಳುತ್ತಾರೆ. ಕಲಬುರ್ಗಿಯವರ ಈ ಮಾತುಗಳು ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವಂತಹವು. ಲೇಖಕರು ಸತ್ಯವನ್ನು ಹೇಳುವ ನೆಪದಲ್ಲಿ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಮರೆಯಬಾರದೆಂಬ ಎಚ್ಚರಿಕೆಯೂ ಈ ಮಾತುಗಳಲ್ಲಿದೆ. ಇದನ್ನು ನೋಮ್ ಚಾಮ್‌ಸ್ಕಿ  “ಸದ್ಯದ ಸ್ಥಿತಿಯಲ್ಲಿ ಏನಾದರೂ ಬದಲಾವಣೆ ತರಬಲ್ಲ ಶಕ್ತಿ ಇರುವ ಜನರಿಗೆ, ಮನುಷ್ಯರ ಬದುಕಿಗೆ ಸಂಬಂಧಿಸಿದ ವಾಸ್ತವಿಕ ಸತ್ಯಗಳನ್ನು ತಿಳಿಸುವ ನೈತಿಕ ಮಧ್ಯವರ್ತಿಯಾಗಿ ಕೆಲಸ ಮಾಡುವುದು ಬರಹಗಾರರ ಮತ್ತು ಬುದ್ಧಿಜೀವಿಗಳ ಜವಾಬ್ದಾರಿ” ಎನ್ನುತ್ತಾರೆ.

ಬರಹಗಾರರ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಕುರಿತು ಎಚ್.ಎಸ್.ಶ್ರೀಮತಿಯವರು “ಬೌದ್ಧಿಕ ಸ್ವಾತಂತ್ರ‍್ಯವೆನ್ನುವುದು ವ್ಯಕ್ತಿ ಸ್ವಾತಂತ್ರ‍್ಯದ ನೆಲೆಯ ಮಿತಿಯಲ್ಲಿ ಉಳಿಯುವುದಕ್ಕೆ ಅವಕಾಶವಿಲ್ಲ. ಬೌದ್ಧಿಕ ಸ್ವಾತಂತ್ರ‍್ಯವೆನ್ನುವುದು ಪ್ರತ್ಯೇಕ ಅಸ್ತಿತ್ವವುಳ್ಳ ಸಂಗತಿಯಾಗಿ ಉಳಿಯುವುದು ಸಾಧ್ಯವೇ ಇಲ್ಲ. ಇದು ನಿರಂತರವಾಗಿ ಸಾಮಾಜಿಕ ವಾಸ್ತವಗಳೊಂದಿಗೆ ಮುಖಾಮುಖಿಯಾಗುತ್ತಲೇ ಇರಬೇಕಾಗುತ್ತದೆ. ಅಲ್ಲದೆ, ಬೌದ್ಧಿಕತೆಯ ವ್ಯಕ್ತಿಗತ ನೆಲೆಯಿಂದಷ್ಟೇ ಆಗಿರದೆ ಸಮುದಾಯ ಪರವಾಗಿ ಕ್ರಿಯಾಶೀಲವಾಗುವುದಕ್ಕೂ ಸಿದ್ಧವಾಗಬೇಕಾಗುತ್ತದೆ” ಎಂದು ಅಭಿಪ್ರಾಯ ಪಡುತ್ತಾರೆ. ಇದು ಬರಹಗಾರರು ನಿರ್ವಹಿಸಬೇಕಾದ ಬೌದ್ಧಿಕ ಹೊಣೆಗಾರಿಕೆಯನ್ನು ವಿವರಿಸುವಂತಹುದು. ಬರಹಗಾರರು ಸಾಮಾಜಿಕ ವಾಸ್ತವಗಳೊಂದಿಗೆ ಸಂವಾದ, ಅನುಸಂಧಾನ ಹಾಗೂ ಸಂಘರ್ಷಗಳನ್ನು ನಿರಂತರವಾಗಿ ನಡೆಸುತ್ತಿರಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತದೆ. ಬರಹಗಾರರು ಭಾವಾವೇಶಕ್ಕೆ ಒಳಗಾಗಿ ಬರೆಯತೊಡಗಿ ವರ್ತಮಾನದ ವಾಸ್ತವಗಳನ್ನು ಮರೆಯುವಂತಾದರೆ ಅಂತಹ ಬರಹಗಾರರು ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಎಸಗುವ ದ್ರೋಹ ಹಾಗೂ ಬರಹಗಾರರು ಸತ್ಯ ಹೇಳುವ ನೆಪದಲ್ಲಿ ಸಮುದಾಯಗಳ ಮೇಲೆ ರಾಕ್ಷಸರಂತೆ ವರ್ತಿಸಬಾರದು ಎಂಬ ಚಿಂತನೆ ಈ ಸಮ್ಮೇಳನದಲ್ಲಿ ರೂಪುಗೊಂಡಿತು.

ಈ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಎಲ್. ಭೈರಪ್ಪನವರು ಮೇಲಿನ ಎರಡೂ ಅಭಿಪ್ರಾಯಗಳಿಗೆ ತದ್ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇವರು ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ‘ಸತ್ಯವನ್ನು ಅನ್ವೇಷಿಸಲಿಕ್ಕಾಗಿ ಹಾಗೂ ವ್ಯಕ್ತಪಡಿಸಲಿಕ್ಕಾಗಿ’ ಎಂದು ಸೀಮಿತಗೊಳಿಸುತ್ತಾರೆ. ಈ ಮೂಲಕ ಬರಹಗಾರರು ನಿರ್ವಹಿಸಬೇಕಾದ ಸಾಮಾಜಿಕ ಜವಾಬ್ದಾರಿಯನ್ನು ಅಲ್ಲಗಳೆಯುತ್ತಾರೆ. ಇವರ ಈ ಅಭಿಪ್ರಾಯಕ್ಕೂ ಹಾಗೂ ಅನಂತರ ಅವರು ಬರೆದ ‘ಆವರಣ’ ಕಾದಂಬರಿಗೂ ನೇರವಾದ ಸಂಬಂಧಿವೆ. ಆವರಣವು ಮುಸ್ಲಿಂ ಸಮುದಾಯದ ಮೇಲೆ ಆಕ್ರೋಷವುಂಟಾಗುವಂತೆ ರೂಪುಗೊಂಡಿರುವ ಪ್ರಚೋದನಕಾರಿ ಕೃತಿ. ಹಾಗೆಯೇ ಬರಹಗಾರನೊಬ್ಬ ನಿಭಾಯಿಸಬೇಕಾದ ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಭೈರಪ್ಪನವರು ತಮ್ಮ ಸಾಹಿತ್ಯ ಕೃತಿಯ ಉದ್ದಕ್ಕೂ ನಿರಾಕರಿಸುತ್ತಲೇ ಬಂದವರಾಗಿದ್ದಾರೆ. ಇವರು ಇ ಮೂಲಕವೇ ಉನ್ನತ ಜನವರ್ಗಗಳ ಪಾಲಿಗೆ ಜನಪ್ರಿಯರು; ಪ್ರಭುತ್ವದ ದಮನಕಾರಿ ಆಶಯಗಳನ್ನು ತಮ್ಮ ಕೃತಿಗಳಲ್ಲಿ ಪ್ರತಿಪಾದಿಸುವವರಾಗಿದ್ದಾರೆ.

ಯಾವುದೇ ಸಂದರ್ಭದಲ್ಲಿಯಾದರೂ ಪ್ರಭುತ್ವಗಳು ಒಡ್ಡುವ ನಿಯಂತ್ರಣಗಳಾಚೆಗೂ ಸಾಹಿತಿಗೆ ಅಭಿವ್ಯಕ್ತಿಯ ಸಾಧ್ಯತೆಗಳಿರುತ್ತವೆ. ಎಂತಹ ಪ್ರಕ್ಷುಬ್ದ ವಾತಾವರಣದಲ್ಲೂ ವಿಶಿಷ್ಟವಾದ ಅಭಿವ್ಯಕ್ತಿ ಮಾರ್ಗವನ್ನು ಲೇಖಕರು ಭಾಷೆಯ ಮೂಲಕ ರೂಪಿಸಿಕೊಳ್ಳುತ್ತಾರೆ. ಇದು ಕನ್ನಡ ಸಾಹಿತ್ಯದ ಆರಂಭದಿಂದಲೂ ಗುರುತಿಸಬಹುದಾದ ಅಂಶ. ಕವಿರಾಜಮಾರ್ಗಕಾರ ಸಂಸ್ಕೃತದ ಭಾಷಿಕ ಯಜಮಾನ್ಯದ ಎದುರಿಗೆ ಕನ್ನಡಕ್ಕೆ ವಿಶಿಷ್ಟತೆಯೊಂದನ್ನು ಪ್ರತಿಷ್ಟಾಪಿಸುವ ಕ್ರಮ ಹಾಗೂ ಪಂಪ ರಾಜಾಶ್ರಯದಲ್ಲಿ ಬದುಕಿದ್ದೂ ಪ್ರಭುತ್ವ ಉಂಟುಮಾಡುವ ಆತಂಕಗಳಿಗೆ ತನ್ನ ಕಾವ್ಯಗಳಲ್ಲಿ ಪ್ರತಿರೋಧವನ್ನು ತೋರಿರುವ ಅಭಿವ್ಯಕ್ತಿಯ ಮಾರ್ಗಗಳು ನಮ್ಮೆದುರಿಗಿವೆ. ಹಾಗಾಗಿ ಸ್ಥಾಪಿತ ಶಕ್ತಿಗಳು ಕವಿ-ಕಲಾವಿದರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುವ ಪ್ರತಿ ಸಂದರ್ಭದಲ್ಲೂ ಲೇಖಕ-ಕಲಾವಿದರು ವಿಚಲಿತರಾಗದೆ ತಾವು ಹೇಳ ಬೇಕಾದುದನ್ನು ಹೇಳಿಯೇ ತೀರುವ ವಿಶಿಷ್ಟ ಭಾಷಿಕ ಶಕ್ತಿಯೆಂಬ ಅಸ್ತ್ರ ಅವರ ಬೆಂಬಲಕ್ಕಿರುತ್ತದೆ.

ವಸಾಹತುಶಾಹಿ ಕಾಲಘಟ್ಟದ ವಿವಾದಿತ ಪಠ್ಯಗಳು

ವಸಾಹತುಶಾಹಿ ಆಳ್ವಿಕೆಯ ಸಂದರ್ಭದಲ್ಲಿ ಭಾರತೀಯರಿಗೆ ಯಾವುದೇ ಮೂಲಭೂತ ಹಕ್ಕುಗಳಿರಲಿಲ್ಲವಾದರೂ ಕೃತಿ ರಚಿಸುವ, ಪತ್ರಿಕೆ ಸಂಪಾದಿಸುವ ಸೀಮಿತವಾದ ಅವಕಾಶಗಳಿದ್ದವು. ಆದರೆ ವಸಾಹತುಶಾಹಿ ತನ್ನ ರಾಜಕೀಯ ಅಸ್ತಿತ್ವ ಹಾಗೂ ಕ್ರೈಸ್ತ ಧರ್ಮ ಪ್ರಸಾರಕ್ಕೆ ತಡೆಯೊಡ್ಡಬಹುದಾದ ವಿಚಾರಗಳಿರುವ ಕೃತಿ ಹಾಗೂ ಪತ್ರಿಕೆಗಳನ್ನು ನಿಷೇಧಿಸುತ್ತಿತ್ತು. ಭಾರತೀಯರಿಂದ ರಚನೆಯಾಗುವ ಕೃತಿಗಳನ್ನು ವಸಾಹತುಶಾಹಿ ಆಡಳಿತವು ಸದಾ ಅನುಮಾನಗಳಿಂದಲೇ ನೋಡುತ್ತಾ ಸರ್ವಾಧಿಕಾರಿ ಧೋರಣೆಯಿಂದ ವರ್ತಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಎರಡು ಕೃತಿಗಳು ನಿಷೇಧಕ್ಕೊಳಗಾದ ಪ್ರಸಂಗಗಳು ತುಂಬಾ ಮುಖ್ಯವಾದವು.

ಬಂಕಿಮಚಂದ್ರರ “ಆನಂದಮಠ” ಹಾಗೂ ಗಾಂಧೀಜಿಯವರ “ಹಿಂದ್ ಸ್ವರಾಜ್” ಕೃತಿಗಳಿಗೆ ಬ್ರಿಟಿಷ್ ಆಡಳಿತ ತಡೆಯೊಡ್ಡಿತ್ತು. ಈ ಎರಡೂ ಕೃತಿಗಳನ್ನು ನಿಷೇಧಿಸಲು ಬ್ರಿಟಿಷ್‌ಆಳ್ವಿಕೆಗೆ ಕಾರಣಗಳೂ ಇದ್ದವು. ಭಾರತದಲ್ಲಿ ಹೊಸ ರಾಷ್ಟ್ರೀಯ ಕಲ್ಪನೆಯ ಅಲೆಯೊಂದು ಮೂಡುತ್ತಿದ್ದ ಸಂದರ್ಭ ಅದು. “ಆನಂದಮಠ” ಹಾಗೂ “ಹಿಂದ್ ಸ್ವರಾಜ್‌”ಗಳೆರಡೂ ಮಂಡಿಸುವ ರಾಷ್ಟ್ರೀಯತೆಗಳು ಬೇರೆ ಬೇರೆ ತಾತ್ವಿಕ ಸ್ವರೂಪಗಳನ್ನು ಒಳಗೊಂಡಿದ್ದರೂ, ಇವು ವಸಾಹತು ಶಾಹಿಯ ವಿರುದ್ಧದ ಕೃತಿಗಳಾಗಿದ್ದವು. ಹೀಗಾಗಿ ಈ ಎರಡೂ ಕ್ರಿಶ್ಚಿಯನ್ ಧರ್ಮದ ವಿರುದ್ಧ ಅಪಪ್ರಚಾರ ಮಾಡುತ್ತಿವೆ ಎಂಬ ಪೂರ್ವಗ್ರಹದಿಂದಾಗಿ ನಿಷೇಧಕ್ಕೊಳಗಾದವು. ಇವು ನಿಷೇಧಗೊಳ್ಳಲು ಇದ್ದ ಇನ್ನೊಂದು ಪ್ರಮುಖ ಕಾರಣ ತಮ್ಮ ದೇಶ-ಭಾಷೆಗಳಲ್ಲಿ ರಚನೆಗೊಂಡಿದ್ದುದು. ಕೊನೆಗೆ ಈ ಎರಡೂ ಕೃತಿಗಳನ್ನು ಪರಿಶೀಲಿಸಲು ಒಂದು ಸಮಿತಿಯನ್ನು ನೇಮಿಸಿ ಆ ಸಮಿತಿಯು ಕೃತಿಗಳಲ್ಲಿ ಕ್ರೈಸ್ತ ಧರ್ಮದ ಬಗೆಗೆ ಹಾಗೂ ಬ್ರಿಟಿಷ್ ಆಳ್ವಿಕೆಯ ಬಗೆಗೆ ಯಾವುದೇ ರೀತಿಯ ಅವಹೇಳನಗಳಿಲ್ಲ ಎಂದು ವರದಿ ಕೊಟ್ಟ ನಂತರ ಮತ್ತೆ ಪ್ರಕಟಿಸಲು ಅನುಮತಿ ನೀಡಿತು. ಇದಲ್ಲದೆ ಬ್ರಿಟೀಷ್ ಆಳ್ವಿಕೆಯ ವಿರುದ್ಧ ಸ್ವಾತಂತ್ರ‍್ಯ ಚಳುವಳಿಯನ್ನು ಸಂಘಟಿಸುವಲ್ಲಿ ನಿಗೂಢವಾಗಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆಗಳೂ ಇದ್ದವು. ಇವೆಲ್ಲವನ್ನೂ ಗಮನಿಸಿದರೆ ವಸಾಹತುಶಾಹಿಯ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ‍್ಯ ದಮನದ ಸ್ವರೂಪದ ಅರಿವಾಗುತ್ತದೆ.

ಕರ್ನಾಟಕದಲ್ಲಿಯೂ ೧೯೧೨ರ ವೇಳೆಗೆ ಹನ್ನೆರಡನೆಯ ಶತಮಾನದ ವಚನ ಚಳವಳಿಗೆ ಸಂಬಂಧಿಸಿದಂತೆ ವಿವಾದಗಳು ಸೃಷ್ಟಿಯಾದವು. ೧೯೧೨ ರಲ್ಲಿ ಬಸವೇಶ್ವರ ಜೀವನ ಚರಿತ್ರೆಯ ನಾಟಕವನ್ನು ಉತ್ತರ ಕರ್ನಾಟಕದಲ್ಲಿ ಪ್ರದರ್ಶಿಸುತ್ತಿದ್ದಾಗ ಜೈನರು ಈ ನಾಟಕದ ವಿರುದ್ಧ ಆಕ್ಷೇಪವೆತ್ತಿದರು. ಆಗ ಜೈನರ ಧಾರ್ಮಿಕ ಭಾವನೆಗಳಿಗೆ ಈ ನಾಟಕವು ಹಾನಿಯುಂಟು ಮಾಡಿದೆ ಎಂದು ತಿಳಿದು ಸಮಾಜದಲ್ಲಿ ಅಶಾಂತಿ ಉಂಟಾಗಬಹುದೆಂದು ಬಾಂಬೇ ಸರ್ಕಾರವು ನಾಟಕ ಪ್ರದರ್ಶನವನ್ನು ರದ್ದುಗೊಳಿಸಿತು. ಇದಾದ ನಂತರ ೧೯೧೯ ರಲ್ಲಿ ‘ಶುಭೋದಯ’ ಕನ್ನಡ ಪತ್ರಿಕೆಯಲ್ಲಿ “ಅಲ್ಲಮ, ಬಸವನ ವೃತ್ತಾಂತವೇನು?” ಎಂಬ ಶೀರ್ಷಿಕೆಯಡಿಯಲ್ಲಿ ಆರ್. ಶ್ರೀನಿವಾಸಾಚಾರ್ಯ ಎಂಬುವವರಿಂದ ಬರೆಯಲಾದ ಲೇಖನವು ಲಿಂಗಾಯತರ ಧಾರ್ಮಿಕ ಭಾವನೆಗಳಿಗೆ ಹಾನಿಯುಂಟು ಮಾಡಿದೆ ಎಂದು ಆರೋಪಿಸಿ ಪತ್ರಿಕೆಯ ವಿರುದ್ಧ ಕಾನೂನು ಸಮರವನ್ನು ಸಾರಲಾಯಿತು. ಇದರ ನೇತೃತ್ವ ವಹಿಸಿದ ಶ್ರೀ ಸಿದ್ಧರಾಮಪ್ಪ ಪಾವಟೆಯವರು ತಮ್ಮ ಖಟ್ಲೆಯಲ್ಲಿ ಲೇಖನವು ಅಭಿವ್ಯಕ್ತಿ ಸ್ವಾತಂತ್ರ‍್ಯದ ಹೆಸರಿನಲ್ಲಿ ಲಿಂಗಾಯತರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದೆ ಎಂದು ವಾದಿಸಿದರು. ಈ ವಿವಾದದ ಸಂದರ್ಭವು ಲಿಂಗಾಯತರ ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿಯೂ ರೂಪು ತಳೆಯಿತು. ಇದರ ನಂತರದಲ್ಲಿ ಮಾಸ್ತಿಯವರ ‘ಚಿಕವೀರ ರಾಜೇಂದ್ರ” ಕಾದಂಬರಿಯು ಲಿಂಗಾಯತರ ವಿರುದ್ಧವಿದೆ ಎಂದು ಆರೋಪಿಸಿ ನಿಷೇಧಿಸವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.

ಕರ್ನಾಟಕದಲ್ಲಿ ಕಳೆದ ಶತಮಾನದುದ್ದಕ್ಕೂ ಸೃಷ್ಟಿಯಾದ ಸಾಹಿತ್ಯ ಕೃತಿಗಳ ವಿವಾದಗಳು ಬಹುಪಾಲು ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿದವು. ಹನ್ನೆರಡನೆಯ ಶತಮಾನದಲ್ಲಿ ಜಾತಿ ವಿನಾಶದ ಆಶಯದೊಂದಿಗೆ ಹುಟ್ಟಿದ ವಚನ ಚಳುವಳಿ ಎಲ್ಲ ಜಾತಿಯ ಜನವರ್ಗಗಳನ್ನು ಗಭೀಕರಿಸಿಕೊಂಡು ಹುಟ್ಟಿದ್ದು, ತದನಂತರದಲ್ಲಿ ಹದಿನೈದು-ಹದಿನಾರನೆಯ ಶತಮಾನಗಳಲ್ಲಿ ಒಂದು ಸಾಂಪ್ರದಾಯಿಕ ಜಾತಿಯಾಗಿ ಮಾರ್ಪಟ್ಟು, ಜಾತಿ ಅಸಮಾನತೆಯ ಏಣಿಶ್ರೇಣೀಕರಣ ವ್ಯವಸ್ಥೆಯೊಳಗೆ ಒಂದಾಯಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಜಾತಿ ಏಣಿಶ್ರೇಣೀಕರಣ ವ್ಯವಸ್ಥೆಯಲ್ಲಿ ತನ್ನ ಸ್ಥಾನವನ್ನು ಮೇಲಕ್ಕೇರಿಸಿಕೊಳ್ಳುವ ಪ್ರಯತ್ನ ಮಾಡಿತು. ಹೀಗೆ ಮಾಡುವಾಗ ಬಸವಣ್ಣನನ್ನು ಕೇಂದ್ರವಾಗಿಸಿಕೊಂಡು ಸಮುದಾಯವನ್ನು ಸಂಘಟಿಸುವ ಕಾರ್ಯವನ್ನು ಮಾಡುತ್ತಾ ಬರಲಾಯಿತು. ಇದು ಮುಂದೆ ಲಿಂಗಾಯತರೊಳಗಿನ ಒಳಪಂಗಡಗಳಲ್ಲೆ ಬಸವಣ್ಣ ತಮ್ಮವನೆಂದು ಸಾಬೀತುಗೊಳಿಸುವ ಹುಡುಕಾಟವಾಗಿ ಬದಲಾಯಿತು. ಇದರೊಂದಿಗೆ ಬ್ರಾಹ್ಮಣರೊಂದಿಗಿನ ಸಂಘರ್ಷವೂ ಮುಂದುವರೆದಿತ್ತು. ೧೮೭೧ ಮತ್ತು ೧೮೮೧ ರಲ್ಲಿ ಮೈಸೂರು ರಾಜ್ಯದ ಜನಗಣತಿಯ ಸಂದರ್ಭದಲ್ಲಿ ತಮ್ಮನ್ನು ಶೂದ್ರರ ಪಟ್ಟಿಗೆ ಸೇರಿಸಿದ್ದನು. ವಿರೋಧಿಸಿ ತಾವು ಶೂದ್ರರಲ್ಲವೆಂದೂ, ತಮ್ಮನ್ನು ಲಿಂಗಿ ಬ್ರಾಹ್ಮಣರೆಂದು ಕರೆಯಬೇಕೆಂದು ಕೋರ್ಟಿನ ಮೊರೆ ಹೋಗಿರುವುದನ್ನು ಕಾಣಬಹುದು. ಆದ್ದರಿಂದ ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿ ಹುಟ್ಟಿದ ವಿವಾದಗಳಲ್ಲಿ ಆ ಸಮುದಾಯದ ಚಾರಿತ್ರಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಸ್ಥಿತ್ಯಂತರಗಳಿರುವುದನ್ನು ಗಮನಿಸಬೇಕಾಗುತ್ತದೆ.

ಕರ್ನಾಟಕದ ಸಾಹಿತ್ಯಕ ವಿವಾದಗಳು ಲಿಂಗಾಯಿತ ಸಮುದಾಯವನ್ನೇ ಕೇಂದ್ರೀಕರಿಸಿ ಹುಟ್ಟಿರುವುದಕ್ಕೆ ಇನ್ನೊಂದು ಮಹತ್ವದ ಕಾರಣವೂ ಇದೆ. ವಚನ ಚಳುವಳಿ ಜಾತಿವಿನಾಶದ ಆಶಯದೊಂದಿಗೆ ಹುಟ್ಟಿದುದಾಗಿದ್ದರಿಂದ ಇಪ್ಪತ್ತನೆಯ ಶತಮಾನದ ಪ್ರಗತಿಪರ ವೈಚಾರಿಕರು ಅದನ್ನು ಕ್ಲೈಮ್ ಮಾಡತೊಡಗಿದರು. ಇದು ಜಾತಿ ಸಮಾಜದಲ್ಲಿ ಲಿಂಗಾಯತ ಸಮುದಾಯದ ಸಾಂಪ್ರದಾಯಿಕ ಮೇಲ್ಮುಖಿ ಚಲನೆಗೆ ತೊಡಕನ್ನುಂಟುಮಾಡಿದ ಅಂಶ. ೧೯ನೇ ಶತಮಾನದಿಂದಲೂ ಈ ಸಮುದಾಯ ತನ್ನ ಮೇಲ್ಮುಖಿ ಚಲನೆಯ ಜಾತಿ ರಾಜಕಾರಣದ ಹುನ್ನಾರಕ್ಕಾಗಿ ವಿವಾದಗಳನ್ನು ಸೃಷ್ಟಿಸುತ್ತಲೇ ಬರುತ್ತಿದೆ. ಇದು ಆ ಸಮುದಾಯ ತನ್ನ ಕ್ರಾಂತಿಕಾರಕ ಹಾಗೂ ಅದರ ಸಾಂಪ್ರದಾಯಿಕ  ಸಂರಚನೆಯ ಚರಿತ್ರೆಯ ಗೊಂದಲಗಳನ್ನು ಒಟ್ಟೊಟ್ಟಿಗೆ ಹೊತ್ತು ಸಾಗುತ್ತಿರುವುದು ವಿವಾದಗಳಿಗೆ ಮೂಲವಾಗಿದೆ.