ಸಮಕಾಲೀನ ಸಾಹಿತ್ಯ ಸಂದರ್ಭ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯ

ಸಾಹಿತ್ಯ ಕೃತಿಯೊಂದು ಪ್ರಕಟವಾದಾಗ ಅದಕ್ಕೆ ಸಮಾಜದ ಭಿನ್ನ ವಲಯಗಳಿಂದ ಉಂಟಾಗುವ ಪ್ರತಿಕ್ರಿಯೆಗಳು ಭಿನ್ನವಾಗಿರುತ್ತವೆ. ಕೃತಿಯನ್ನು ಮನ್ನಣೆ ಮಾಡುವ ಅಥವಾ ತಿರಸ್ಕರಿಸುವ ಮನೋಧರ್ಮ ಓದುಗ ವಲಯಗಳಿಂದ ಎಲ್ಲ ಕಾಲಘಟ್ಟಗಳಲ್ಲಿಯೂ ಪ್ರಕಟವಾಗುವಂಥದ್ದು. ಕೃತಿಯು ಮನ್ನಣೆಗೆ ಅಥವಾ ತಿರಸ್ಕಾರಕ್ಕೆ ಒಳಗಾಗುವ ಸಂದರ್ಭಗಳಲ್ಲಿ ಆ ಪ್ರತಿಕ್ರಿಯೆಗಳು ಎಲ್ಲಿಂದ ಹುಟ್ಟುತ್ತಿವೆ ಎಂದು ಗಮನಿಸುವುದು ಅತ್ಯಂತ ಮಹತ್ವವಾದದ್ದು. ಯಾಕೆಂದರೆ ಎಲ್ಲ ಕೃತಿಗಳಿಗೂ ಸಮಾಜದ ಎಲ್ಲ ಜನವರ್ಗಗಳು ಸಮಾನವಾಗಿ ಪ್ರತಿಕ್ರಿಯಿಸುವುದಿಲ್ಲ. ಕೃತಿಯು ತನ್ನ ಸಮುದಾಯಕ್ಕೆ ಸಂಬಂಧಿಸಿದೆ ಎಂದಾಗ ಮಾತ್ರ ತೀವ್ರವಾಗಿ ಸ್ಪಂದಿಸಲು ಮುಂದಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಕೃತಿ ತನ್ನ ಪರವಾಗಿದ್ದರೆ ಅದನ್ನು ಪುರಸ್ಕರಿಸುವ; ಹಾಗೂ ತನ್ನ ವಿರುದ್ಧವಿದ್ದಾಗ ತಿರಸ್ಕರಿಸುವ ಕಾರ್ಯ ಸಮುದಾಯಗಳಿಂದ ನಡೆಯುತ್ತದೆ. ಕೃತಿಯನ್ನು ಸಮುದಾಯಗಳು ತಿರಸ್ಕರಿಸಿದವು ಎಂದ ಮಾತ್ರಕ್ಕೆ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆಯಾಗುತ್ತದೆ ಎಂದಲ್ಲ. ಕೃತಿಯನ್ನು ಕುರಿತ ಹಿಂಸಾತ್ಮಕ ಪ್ರತಿಕ್ರಿಯೆಗಳು ಹುಟ್ಟಿದಾಗ ಮಾತ್ರವೇ ಲೇಖನ ಅಭಿವ್ಯಕ್ತಿ ಸ್ವಾತಂತ್ರ‍್ಯದ ಪ್ರಶ್ನೆ ಉದ್ಭವ ವಾಗುತ್ತದೆ. ಯಾಕೆಂದರೆ ಕೃತಿ ರಚಿಸುವ ಅಭಿವ್ಯಕ್ತಿ ಸ್ವಾತಂತ್ರ‍್ಯವು ಲೇಖಕರಿಗಿರುವಂತೆಯೇ ಕೃತಿಯನ್ನು ತನ್ನದೇ ಕಾರಣಗಳಿಗೆ ವಿರೋಧಿಸುವ ಅಥವಾ ತಿರಸ್ಕರಿಸುವ ಹಕ್ಕು ಕೂಡ ಸಮುದಾಯಗಳಿಗೆ ಸಂವಿಧಾನದತ್ತವಾದದ್ದೆ. ಕುವೆಂಪು ಇದಕ್ಕೆ ಉತ್ತಮ ಉದಾಹರಣೆ. ಕುವೆಂಪು ಕನ್ನಡದ ಶ್ರೇಷ್ಠ ಕವಿ ಎಂದು ಸಾಹಿತ್ಯ ಜಗತ್ತು ನಂಬುತ್ತದೆ. ಈ ಕಾರಣಕ್ಕಾಗಿ ಅವರನ್ನು ಒಕ್ಕಲಿಗ ಸಮುದಾಯದ ಎಲ್ಲರೂ ಒಪ್ಪಿಕೊಳ್ಳುತ್ತಾರೆ ಅಥವಾ ಒಪ್ಪಿಕೊಳ್ಳಬೇಕು ಎಂಬ ತೀರ್ಮಾನ ಸರಿಯಾದುದಲ್ಲ. ಇಂದಿಗೂ ಮಲೆನಾಡಿನ ಒಕ್ಕಲಿಗರಲ್ಲಿ ಕುವೆಂಪು ಬಗೆಗೆ ಪರ ವಿರೋಧಗಳೆರಡೂ ಇವೆ. ಕುವೆಂಪು ಬಗೆಗಿನ ಅಭಿಮಾನಕ್ಕೆ ತಮ್ಮ ಸಮುದಾಯದಿಂದ ಒಬ್ಬ ಶ್ರೇಷ್ಠ ಕವಿ ಹುಟ್ಟಿದನೆಂಬುದು ಕಾರಣವಾಗಿದ್ದರೆ, ಅವರನ್ನು ವಿರೋಧಿಸುವವರಿಗೆ ತಮ್ಮ ಸಮುದಾಯದ ಆಂತರಿಕ ಸಮಸ್ಯೆಗಳನ್ನೆಲ್ಲ ಬಹಿರಂಗಗೊಳಿಸಿದರಲ್ಲ ಎಂಬ ದುಗುಡವಾಗಿರುತ್ತದೆ. ಕುವೆಂಪುರವರನ್ನು ವಿರೋಧಿಸುತ್ತಾರೆ ಎಂದ ಮಾತ್ರಕ್ಕೆ ಮಲೆನಾಡಿನ ಒಕ್ಕಲಿಗರು ಅವರನ್ನು ಬರೆಯದಂತೆ ನಿರ್ಬಂಧಿಸುತ್ತಾರೆ ಎಂದಲ್ಲ. ಹಾಗಾಗಿ ಸಮುದಾಯಗಳು ಬೇರೆ ಬೇರೆ ಕಾರಣಗಳಿಗಾಗಿ ಕೃತಿಯನ್ನು ಹಾಗೂ ಕೃತಿಕಾರರನ್ನು ವಿರೋಧಿಸಬಹುದು.

ಅದು ಲೇಖಕರ ಅಭಿವ್ಯಕ್ತಿ ಸ್ವಾತಂತ್ರ‍್ಯದ ಮೇಲಿನ ದಾಳಿಯಲ್ಲ. ಅಭಿವ್ಯಕ್ತಿ ಸ್ವಾತಂತ್ರ‍್ಯದ ಪ್ರಶ್ನೆ ಉದ್ಭವಿಸುವುದೇ ಕೃತಿಯನ್ನು ಸುಡುವ ಅಥವಾ ಕೃತಿ ನಿಷೇಧಕ್ಕೊಳಗಾದಾಗ, ಶಿಕ್ಷಣ ಸಂಸ್ಥೆಗಳಿಂದ ಪಠ್ಯ ಹಿಂಪಡೆದಾಗ, ಲೇಖಕರ ಮೇಲೆ ಹಲ್ಲೆಗೆ ಮುಂದಾದಾಗ, ಲೇಖಕರನ್ನು ಶಿಕ್ಷೆಗೊಳಪಡಿಸಿದಾಗ – ಮುಂತಾದ ಸಂದರ್ಭಗಳಲ್ಲಿ ಕೃತಿಯ ಕಾರಣದಿಂದ ನಡೆಯುವ ಈ ರೀತಿಯ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ‍್ಯ ದಮನಕ್ಕೊಳಗಾಗುತ್ತಿರುತ್ತದೆ. ಇನ್ನೊಂದು ಮುಖ್ಯವಾದ ಅಂಶವೆಂದರೆ ಕೃತಿಗೆ ಸಂಬಂಧಿಸಿದ ಚರ್ಚೆಗಳು ಪ್ರಭುತ್ವಕ್ಕೆ ವರ್ಗಾವಣೆಯಾದಾಗ ಅದು ಹೇಗೆ ವರ್ತಿಸುತ್ತದೆ ಎಂಬುದು ನೇರವಾಗಿ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಸಂಬಂಧಿಸಿದ್ದಾಗುತ್ತದೆ.

ಪ್ರಭುತ್ವಗಳು ಬರಹಗಾರರನ್ನು ಪೋಷಿಸುತ್ತಾ ಬಂದಿರುವ ಪ್ರಕ್ರಿಯೆಯು ಪ್ರಾಚೀನ ಕಾಲದಿಂದಲೂ ಬೆಳೆದುಬಂದಿದೆ. ಸಾಹಿತಿಗಳಾದವರು ಸಂಸ್ಕೃತಿ ನಿರ್ಮಾಪಕರು ಎಂಬ ಕಾರಣಕ್ಕಾಗಿ ಪ್ರಭುತ್ವ ಇವರನ್ನು ಪೋಷಿಸುತ್ತದೆ. ಅಲ್ಲದೆ ಬರಹಗಾರರು ಜನಾಭಿಪ್ರಾಯ ರೂಪಿಸುವ ಬಹುದೊಡ್ಡ ಶಕ್ತಿ ಎಂಬ ಅಳುಕಿನಿಂದಲೂ ಪ್ರಭುತ್ವಗಳು ಇವರನ್ನು ಪುರಸ್ಕರಿಸುತ್ತವೆ. ಆಧುನಿಕ ಸಮಾಜಗಳಲ್ಲಿ ಇದಕ್ಕೆಂದೇ ಕೆಲವು ಸಂಸ್ಥೆಗಳನ್ನು ಹುಟ್ಟುಹಾಕಲಾಗಿರುತ್ತದೆ. ಉದಾಹರಣೆಗೆ ಕರ್ನಾಟಕದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ- ಹೀಗೆ ಮುಂತಾದ ಸಂಸ್ಥೆಗಳ ಮೂಲಕ ಸರ್ಕಾರ ಬರಹಗಾರರನ್ನು ಪುರಸ್ಕರಿಸುವ ಹಾಗೂ ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಪರಿಪಾಠ ಇದೆ. ಹೀಗೆ ಮಾಡಿದ ಮಾತ್ರಕ್ಕೆ ಅಧಿಕಾರಸ್ಥರು ಸಾಹಿತ್ಯ ಕೃತಿಗಳನ್ನು ಗಂಭೀರವಾಗಿ ಓದಿ, ಅವು ಪ್ರಕಟಿಸುವ ಸಾಮಾಜಿಕ ದರ್ಶನವನ್ನು ಪಡೆದು, ಅದನ್ನು ತಮ್ಮ ಆಳ್ವಿಕೆಯಲ್ಲಿ ಮಾರ್ಗದರ್ಶನವಾಗಿ ಸ್ವೀಕರಿಸುತ್ತಾರೆ ಎಂದೇನಲ್ಲ. ಇದು ಬರಹಗಾರರನ್ನು ಪುರಸ್ಕರಿಸುವ ಮೂಲಕ ತಾನು ಜನಪರವೆಂದು ತೋರ್ಪಡಿಸುವ ತಂತ್ರಗಾರಿಕೆ ಮಾತ್ರವಾಗಿರುತ್ತದೆ. ಉದಾಹರಣೆಗೆ ಪ್ರತಿವರ್ಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮೇಳನದ ಅಧ್ಯಕ್ಷರು ಸರ್ಕಾರಕ್ಕೆ ಹಲವು ಶಿಫಾರಸ್ಸುಗಳನ್ನು ಮಾಡುತ್ತಾರೆ. ಆದರೆ ಇದುವರೆವಿಗೂ ಆ ಯಾವ ಶಿಫಾರಸ್ಸುಗಳನ್ನೂ ಸರ್ಕಾರ ಮಾರ್ಗದರ್ಶನವಾಗಿ ಸ್ವೀಕರಿಸಿಲ್ಲವೆಂಬುದು ಸಾಹಿತಿ ಹಾಗೂ ಸಾಹಿತ್ಯವನ್ನು ಪ್ರಭುತ್ವ ಅಷ್ಟೇನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬುದು ಮನವರಿಕೆಯಾಗುತ್ತದೆ.

ಪ್ರಭುತ್ವಗಳ ಈ ಬಗೆಯ ವರ್ತನೆಗಳು ಪ್ರಕಟವಾಗಲು ಅವು ಯಾವಾಗಲೂ ಸಮಾಜದ ಪ್ರತಿಷ್ಠಿತ ಜನವರ್ಗಗಳ ಪರವಾಗಿರುವುದು ಕಾರಣವಾಗಿರುತ್ತದೆ. ಈ ಜನವರ್ಗಗಳು ರಾಜಕೀಯ ಶಕ್ತಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂಬ ಕಾರಣಕ್ಕಾಗಿ ಹಾಗೂ ಪ್ರಭುತ್ವವು ಯಾವಾಗಲೂ ಪ್ರತಿಷ್ಠಿತ ಜನವರ್ಗಗಳ ಕೈಯಲ್ಲೆ ಇರುವುದರಿಂದಾಗಿ ಅದು ಶೋಷಿತ ಜನವರ್ಗಗಳನ್ನು ದಮನಿಸುತ್ತಿರುತ್ತದೆ. ಸಂವೇದನಾಶೀಲ ಸಾಹಿತಿಗಳಾದವರು ಶೋಷಿತರ ಯಾತನಾಮಯ ಅನುಭವಗಳ ಪರವಾದ ನಿಲುವುಗಳನ್ನು ತಮ್ಮ ಕೃತಿಗಳಲ್ಲಿ ಮಂಡಿಸುತ್ತಿರುತ್ತಾರೆ. ಈ ನಿಲುವುಗಳು ಪ್ರಭುತ್ವದ ಹಿತಾಸಕ್ತಿಗಳಿಗೆ ವಿರುದ್ಧವಾದುವಾಗಿರುತ್ತವೆ. ಹೀಗಾಗಿ ಪ್ರಭುತ್ವದ ವಿರುದ್ಧ ಸದಾ ಸಂಘರ್ಷದ ನೆಲೆಯಲ್ಲಿರುವ ಬರಹಗಾರರ ಮೇಲೆ ಇದು ನಿಗಾ ಇಟ್ಟಿರುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಈ ಬಗೆಯ ಲೇಖಕರು ತಮ್ಮ ಬರಹ-ಭಾಷಣಗಳ ಮೂಲಕ ತನ್ನ ವಿರುದ್ಧ ಜನಾಭಿಪ್ರಾಯ ರೂಪಿಸಬಲ್ಲವರು ಎಂದು ನಂಬಿರುತ್ತದೆ. ಹೀಗಾಗಿ ಸಮಾಜದ ಅಧಿಕಾರಸ್ಥ ವರ್ಗಗಳ ಹಿತಾಸಕ್ತಿಗಳನ್ನು ಕೃತಿಯೊಂದು ಕಲಕುತ್ತದೆ ಅನ್ನಿಸಿದಾಗ ಹಾಗೂ ಪ್ರತಿಷ್ಠಿತ ಜನವರ್ಗಗಳು ಕೃತಿಯ ವಿರುದ್ಧ ಪ್ರತಿರೋಧ ತೋರಿದಗ ಕೃತಿ ಹಾಗೂ ಕೃತಿಕಾರರ ‘ವಿರುದ್ಧ ಕ್ರಮ ಜರುಗಿಸುವ ಕೆಲಸ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಸಮಕಾಲೀನ ಸಂದರ್ಭದಲ್ಲಿ ಬರಹಗಾರರಿಗಿರುವ ಅಭಿವ್ಯಕ್ತಿ ಸ್ವಾತಂತ್ರ‍್ಯದ ವ್ಯಾಪ್ತಿ ಹಾಗೂ ವಿವಾದಿತ ಕೃತಿಗಳ ತಾತ್ವಿಕತೆಯನ್ನು ಚರ್ಚಿಸಬಹುದು. ಕನ್ನಡದಲ್ಲಿ ತೊಂಬತ್ತರ ದಶಕದಲ್ಲಿ ವಿವಾದಕ್ಕೊಳಗಾದ ಕೃತಿಗಳ ದೊಡ್ಡ ಪಟ್ಟಿಯೇ ಇದೆ. ಪಿ.ವಿ.ನಾರಾಯಣರ “ಧರ್ಮಕಾರಣ”, ಎಚ್.ಎಸ್.ಶಿವಪ್ರಕಾಶರ “ಮಹಾಚೈತ್ರ”, ಎಂ.ಎಂ.ಕಲಬುರ್ಗಿಯವರ “ಮಾರ್ಗ-೧”, ಮಾತೆ ಮಹಾದೇವಿಯವರ “ವಚನದೀಪ್ತಿ”, ಪೋಲಂಕಿ ರಾಮಮೂರ್ತಿಯವರ “ಸೀತಾಯಣ” ಹಾಗೂ ಕೆ.ಎಸ್.ಭಗವಾನರ “ಶಂಕರಚಾರ್ಯ ಮತ್ತು ಪ್ರತಿಗಾಮಿತನ” – ಇವು ವಿವಾದಕ್ಕೊಳಗಾದ ಕೃತಿಳು. ಇವುಗಳ ಜೊತೆಗೆ ಇತ್ತೀಚೆಗೆ ಯು.ಆರ್. ಅನಂತಮೂರ್ತಿಯವರ “ಸಂಸ್ಕಾರ” ಕಾದಂಬರಿಯು ಮಂಗಳೂರು ವಿಶ್ವವಿದ್ಯಾಲಯ ಪಠ್ಯವನ್ನಾಗಿ ಒಳಗೊಂಡಾಗ ವಿವಾದವೆದ್ದು ವಾಪಸ್ಸು ಪಡೆಯಲಾಯಿತು. ಹಾಗೆಯೇ ಕುವೆಂಪು ವಿಶ್ವವಿದ್ಯಾಲಯದಲ್ಲಿ ಎ.ಕೆ.ರಾಮಾನುಜನ್ ಅವರ “ಮುನ್ನೂರು ರಾಮಾಯಣಗಳು” ವಿರುದ್ಧ ವಿವಾದವೆದ್ದಿತ್ತು. ಈ ಕೃತಿಗಳ ವಿವಾದಕ್ಕೆ ತೊಂಬತ್ತರ ದಶಕದ ರಾಜಕೀಯ ಹಾಗೂ ಸಾಮಾಜಿಕ ಪಲ್ಲಟಗಳು ಕಾರಣವಾಗಿರುವುದನ್ನು ನೋಡಬಹುದು. ಈ ಎಲ್ಲ ಕೃತಗಳಲ್ಲಿ ಪ್ರಮುಖವಾದ ಎರಡು ಕಾರಣಗಳಿವೆ ಒಂದು; ಇವುಗಳಲ್ಲಿ ಮೊದಲ ನಾಲ್ಕು ಕೃತಿಗಳು ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿ ವಿವಾದಕ್ಕೊಳಗಾದ ಕೃತಿಗಳು. ಎರಡು; ಕೊನೆಯ ಎರಡು ಕೃತಿಗಳು ಕೋಮುವಾದಿ ಸಾಂಸ್ಕೃತಿಕ ಚರಿತ್ರೆಯನ್ನು ವಿರೋಧಿಸುವಂತಹವು.

ತೊಂಬತ್ತರ ದಶಕದಿಂದೀಚೆಗೆ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ಹಾಗೂ ಕೋಮುವಾದಕ್ಕೆ ತೀವ್ರವಾದ ಸಂಬಂಧ ಏರ್ಪಟ್ಟಿರುವುದನ್ನು ಕಾಣುತ್ತೇವೆ. ಈ ಎರಡೂ ತಮ್ಮ ರಾಜಕೀಯ ನೆಲೆಯ ಬಲವರ್ಧನೆ ಹಾಗೂ ವಿಸ್ತರಣೆಗಾಗಿ ಪರಸ್ಪರ ಒಂದನ್ನೊಂದು ಅವಲಂಬಿಸಿವೆ. ತನ್ನ ಆಳದಲ್ಲಿ ಬಸವತತ್ವ ವಿರೋಧಿಯಾಗಿರುವ ಕೋಮುವಾದವು ಕರ್ನಾಟಕದಲ್ಲಿ ಬಸವಣ್ಣನನ್ನು ಧಾರ್ಮಿಕ ನಾಯಕನೆಂದು ನಂಬಿರುವ ಲಿಂಗಾಯತ ಸಮುದಾಯವನ್ನು ತನ್ನ ರಾಜಕೀಯ ವಿಸ್ತರಣೆಗಾಗಿ ಅವಲಂಬಿಸಿದೆ. ಕೋಮುವಾದಕ್ಕೆ ಈ ಅಗತ್ಯ ಇರುವಂತೆ ಲಿಂಗಾಯತ ಸಮುದಾಯಕ್ಕೂ ತೊಂಬತ್ತರ ದಶಕದಲ್ಲಿ ಕೋಮುವಾದದ ಅಗತ್ಯ ಏರ್ಪಟ್ಟಿದೆ. ವಸಾಹತುಶಾಹಿ ಕಾಲದಿಂದಲೂ ರಾಜಕೀಯವಾಗಿ ಅನೇಕ ಸ್ಥಿತ್ಯಂತರಗಳನ್ನು ಕಂಡ ಲಿಂಗಾಯತ ಸಮುದಾಯ ಸ್ವಾತಂತ್ರ‍್ಯ ನಂತರದ ಮೂರು ದಶಕಗಳಲ್ಲಿ ತನ್ನ ರಾಜಕೀಯ ಪಾಲನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅನಂತರದಲ್ಲಿ ಈ ಸಮುದಾಯದ ರಾಜಕೀಯ ನಾಯಕತ್ವ ಹಿನ್ನೆಲೆಗೆ ಸರಿಯಲು ಆರಂಭಿಸಿದಾಗ, ಅನಿವಾರ್ಯವಾಗಿ ಕೋಮುವಾದವನ್ನು ಆಶ್ರಯಿಸಿ ತನ್ನ ರಾಜಕೀಯ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿತು. ಪ್ರಸ್ತುತದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಲಿಂಗಾಯತ ಸಮುದಾಯವನ್ನು ತೀವ್ರವಾಗಿ ಅವಲಂಬಿಸಿರುವುದನ್ನು ಗಮನಿಸಿದರೆ ಇಂದು ರಾಜಕೀಯದಲ್ಲಿ ಪ್ರಬಲ ಐಡೆಂಟಿಟಿಯನ್ನು ಪಡೆದುಕೊಳ್ಳುವಲ್ಲಿ ಆ ಸಮುದಾಯ ಸಫಲವಾಗಿರುವುದು ಅರ್ಥವಾಗುತ್ತದೆ. ಈ ಸಮುದಾಯ ಕೋಮುವಾದದ ಜೊತೆ ಸಖ್ಯ ಬೆಳೆಸಲು ಕೆಲವು ಲಿಂಗಾಯತ ಮಠಗಳ ಪಾತ್ರ ಮಹತ್ವವಾದದ್ದು. ತನ್ನ ರಾಜಕೀಯ ನೆಲೆಯ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಾ ಇದೂ ಕೂಡ ಬಸವತತ್ವ ವಿರೋಧದಲ್ಲಿ ಮುಂದಾದದ್ದು ವಿಪರ್ಯಾಸ. ಈ ಸಮುದಾಯಕ್ಕೆ ಇಂದು ಬಸವಣ್ಣ ಸಾಂಕೇತಿಕ ನಾಯಕನಾಗಿ ಮಾತ್ರವೇ ಉಳಿದಿದ್ದಾನೆ. ವಾಸ್ತವದಲ್ಲಿ ಕೋಮುವಾದಿ ಐಡಿಯಾಲಜಿಯ ವ್ಯಕ್ತಿಗಳನ್ನೇ ಇಂದು ಈ ಸಮುದಾಯ ತನ್ನ ನಾಯಕರೆಂದು ಭಾವಿಸಿದೆ.

ಹೀಗೆ ತೊಂಬತ್ತರ ದಶಕದಲ್ಲಿ ಲಿಂಗಾಯತ ಸಮುದಾಯ ರಾಜಕೀಯವಾಗಿ ಬಿಕ್ಕಟ್ಟಿನಲ್ಲಿ ಹಾಯುತ್ತಿದ್ದದ್ದಕ್ಕೂ, ಕನ್ನಡದ ಹಲವು ಕೃತಿಗಳು ವಿವಾದಕ್ಕೊಳಗಾಗಿದ್ದಕ್ಕೂ ನೇರವಾದ ಸಂಬಂಧಗಳಿವೆ. ಮಾತೆ ಮಹಾದೇವಿಯವರ ‘ವಚನದೀಪ್ತಿ’ಯನ್ನು ಬಿಟ್ಟರೆ ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿದಂತೆ ವಿವಾದಕ್ಕೊಳಗಾದ ಇನ್ನುಳಿದ ಕೃತಿಗಳು ವಚನ ಚಳುವಳಿಯನ್ನು ಗಂಭೀರವಾಗಿ ಅನುಸಂಧಾನ ಮಾಡಿ ರೂಪುಗೊಂಡಂತಹವು. ಹಾಗೆಯೇ ಬದಲಾದ ಸಾಹಿತ್ಯ-ಸಂಸ್ಕೃತಿ ಚಿಂತನೆಗಳನ್ನು ಹಿಡಿದಿಡುವ ಕೃತಿಗಳು. ಎಪ್ಪತ್ತರ ದಶಕದಿಂದ ವಚನ ಚಳುವಳಿಯನ್ನು ಕೆಳಜಾತಿಗಳ ನೆಲೆಯಿಂದ ನೋಡುವ ಚಿಂತನೆಗಳನ್ನು ಕಟ್ಟಿಕೊಡುವ ಕೃತಿಗಳು ಹುಟ್ಟಿಕೊಂಡವು. ಇದೇ ಸಂದರ್ಭದಲ್ಲಿ ರಾಜಕೀಯವಾಗಿ ಬಿಕ್ಕಟ್ಟಿನಲ್ಲಿ ಹಾಯುತ್ತಿದ್ದ ಲಿಂಗಾಯತ ಸಮುದಾಯ ತನ್ನ ಕಲ್ಪಿತ ಧಾರ್ಮಿಕ ಆದರ್ಶ ಕುಸಿಯುವುದನ್ನು ಸಹಿಸದೆ ಇಂತಹ ಕೃತಿಗಳ ವಿರುದ್ಧ ಸಿಟ್ಟಿಗೆದ್ದು ಪ್ರತಿಕ್ರಿಯಿಸಿತು. ಹೀಗೆ ಸಿಟ್ಟಿನಿಂದ ಪ್ರತಿಕ್ರಿಯಿಸುತ್ತಲೇ ತನ್ನ ಕಲ್ಪಿತ ಧಾರ್ಮಿಕ ಆದರ್ಶವನ್ನು ಕಾಪಾಡಿಕೊಳ್ಳುವ; ತನ್ನ ರಾಜಕೀಯ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳುವ ಹಾಗೂ ಸಮುದಾಯದ ಒಳಪಂಗಡಗಳನ್ನು ಒಟ್ಟಿಗೆ ತರುವಲ್ಲಿ ಯಶಸ್ವಿಯಾಯಿತು. ಇನ್ನು ‘ಸೀತಾಯಣ’ ಮತ್ತು ‘ಶಂಕರಾಚಾರ್ಯ ಹಾಗೂ ಪ್ರತಿಗಾಮಿತನ’ ಕೃತಿಗಳು ವಿವಾದಕ್ಕೊಳಗಾಗಲು ಕರ್ನಾಟಕದಲ್ಲಿ ಕೋಮುವಾದ ತೀವ್ರವಾಗಿ ಬೆಳೆಯುತ್ತಿದ್ದ ಸಂದರ್ಭದೊಂದಿಗೆ ತಳಕು ಹಾಕಿಕೊಂಡಿವೆ. ಕೋಮುವಾದ ತನ್ನ ಬೆಳವಣಿಗೆಯನ್ನು ಇನ್ನಷ್ಟು ಪ್ರಬಲವಾಗಿ ಹಬ್ಬಲು ಈ ಕೃತಿಗಳ ವಿವಾದಗಳನ್ನು ಹುಟ್ಟು ಹಾಕಿದ್ದನ್ನು ಕಾಣಬಹುದು. ಹಾಗಾಗಿ ಯಾವುದೇ ಕೃತಿ ವಿವಾದಕ್ಕೊಳಗಾದಾಗ ಅವಕ್ಕಿರುವ ಸಾಹಿತ್ಯಕ, ಸಾಮಾಜಿಕ ಕಾರಣಗಳಿಗಿಂತ ಮೂಲಭೂತವಾದಿ ರಾಜಕೀಯ ಅಸ್ತಿತ್ವ ಕಾರಣವು ಪ್ರಬಲವಾಗಿರುತ್ತದೆ. ಇದು ಸಾಹಿತ್ಯ ಕೃತಿಗಳ ತಾತ್ವಿಕ ಮಹತ್ವಕ್ಕಿಂತಲೂ ತನ್ನ ಧಾರ್ಮಿಕ ನಂಬಿಕೆಗಳಿಗೆ ಹಾನಿಯಾಗಿದೆ ಎಂಬ ಕಲ್ಪಿತವನ್ನು ಸೃಷ್ಟಿಸಿ ತನ್ನ ರಾಜಕೀಯ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಲು ಕೃತಿಯ ಸುತ್ತ ವಿವಾದಗಳನ್ನು ಸೃಷ್ಟಿಸುತ್ತದೆ. ಕನ್ನಡದಲ್ಲಿ ತೊಂಬತ್ತರ ದಶಕದಿಂದ ವಿವಾದಕ್ಕೊಳಗಾದ ಕೃತಿಗಳು ಎದುರಿಸಬೇಕಾಗಿ ಬಂದ ವಿರೋಧಗಳನ್ನು ಈ ಹಿನ್ನೆಲೆಯಲ್ಲೆ ಗ್ರಹಿಸಬೇಕಾಗುತ್ತದೆ.

ವರ್ತಮಾನದ ಕನ್ನಡ ಸಾಹಿತ್ಯ ಸೃಜನಶೀಲತೆ, ವಿಮರ್ಶೆ, ಸಂಶೋಧನೆಗಳು ತಳ ಸಮುದಾಯಗಳ ನೆಲಮೂಲೀಯ ನೆಲೆಯಿಂದ ರೂಪುಗೊಳ್ಳುತ್ತಿರುವ; ಕನ್ನಡ ಸಾಹಿತ್ಯ ಕೋಮುವಾದ ಹಾಗೂ ಮೂಲಭೂತವಾದಗಳನ್ನು ತನ್ನ ಎದುರಾಳಿ ಶಕ್ತಿ ಎಂದು ಪರಿಭಾವಿಸಿರುವ; ಜಾತಿ ಮತ್ತು ಧಮ್ಗಳ ಅನನ್ಯತೆಯ ಪ್ರಶ್ನೆಗಳು ಸೂಕ್ಷ್ಮವಾಗಿ ಪರಿಶೀಲನೆಗೊಳಗಾಗುತ್ತಿರುವ ಈ ಸಂದರ್ಭದಲ್ಲಿ ವಿವಾದಕ್ಕೊಳಗಾದ ಎರಡು ಕೃತಿಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ‍್ಯದ ಸ್ವರೂಪ ಯಾವ ಬಗೆಯದ್ದು ಎಂದು ಅರಿಯಬಹುದು ಎನಿಸುತ್ತದೆ. ಇವು ಬಂಜಗೆರೆ ಜಯಪ್ರಕಾಶರ ‘ಆನುದೇವಾ ಹೊರಗಣವನು’ ಹಾಗೂ ಎಸ್.ಎಲ್.ಭೈರಪ್ಪನವರ ‘ಆವರಣ’. ಈ ಎರಡು ಕೃತಿಗಳು ಏಕಕಾಲದಲ್ಲಿ ಪ್ರಕಟಗೊಂಡವು. ಹಾಗೆಯೇ ಸಾಹಿತ್ಯ ವಲಯದಲ್ಲಿ ಹೆಚ್ಚು ವಾಗ್ವಾದಗಳಿಗೂ ಕಾರಣವಾದವು. ಈ ಕೃತಿಗಳಿಗೆ ಸಾಹಿತ್ಯ ವಲಯ, ಸಮುದಾಯಗಳು ಹಾಗೂ ರಾಜಕೀಯ ವಲಯಗಳು ಹೇಗೆ ಪ್ರತಿಕ್ರಿಯಿಸಿದವು ಎಂದು ತಿಳಿಯುವುದು ತುಂಬಾ ಮುಖ್ಯವಾದುದು. ‘ಆನುದೇವಾ ಹೊರಗಣವನು’ ಹಾಗೂ ‘ಆವರಣಗಳು’ ಒಳಗೊಂಡಿರುವ ತಾತ್ವಿಕತೆಯನ್ನು ಚರ್ಚಿಸುವುದು ಮಹತ್ವವಾದುದಾಗಿದೆ.

ಇಂದು ವಚನ ಚಳುವಳಿಯ ನಂತರ ರೂಪುಗೊಂಡ ಹರಿಹರನ ರಗಳೆಗಳು, ಬಸವ ಪುರಾಣಗಳು, ಶೂನ್ಯ ಸಂಪಾದನೆಗಳು ಮುಂತಾದ ವೀರಶೈವೀಕೃತ ಕೃತಿಗಳನ್ನು ಅನುಮಾನದಿಂದ ನೋಡುವ ಹಾಗೂ ಸಮಸ್ಯೀಕರಿಸುವ ಚಿಂತನಾಕ್ರಮಗಳು ಚಾಲ್ತಿಯಲ್ಲಿವೆ. ಹಾಗೆಯೇ ವಚನ ಚಳುವಳಿಯನ್ನು ಅರ್ಥೈಸುವ ರೀತಿಗಳೂ ಬದಲಾಗಿವೆ. ಅದರ ಸಾಹಿತ್ಯಕ ನೆಲೆಯನ್ನು ಬಿಟ್ಟುಕೊಟ್ಟು ಹನ್ನೆರಡನೆಯ ಶತಮಾನದ ಸಾಮಾಜಿಕ-ರಾಜಕೀಯ-ಆರ್ಥಿಕ ಸ್ಥಿತ್ಯಂತರಗಳ ಮೂಲಕ ವಚನ ಚಳುವಳಿಯನ್ನು ಅರ್ಥೈಸಲಾಗುತ್ತಿದೆ. ಅಂದರೆ ಒಂದು ಆದರ್ಶ ರಮ್ಯವಾದಿ ದೃಷ್ಟಿಕೋನದಿಂದ ವಚನ ಚಳುವಳಿಯನ್ನು ನೋಡುವ ಕ್ರಮಗಳು ಬಿದ್ದು ಹೋಗಿವೆ. ಅಲ್ಲದೆ ಇಂದು ಜಾತಿ ಅಸ್ಮಿತೆಯ ಹಾಗೂ ಕುಲ ಮೀಮಾಂಸೆಯ ಬಗೆಗಿನ ಚಿಂತನೆಗಳು ವಚನ ಚಳವಳಿಯು ಬೆಳೆಯುತ್ತಿವೆ. ಈ ಎಲ್ಲಾ ಪ್ರಭಾವಗಳಿಂದ ‘ಆನುದೇವಾ ಹೊರಗಣವನು’ ರೂಪುಗೊಂಡ ಕೃತಿ. ಇದು ಬಸವಣ್ಣನ ಜಾತಿ ಮೂಲವನ್ನು ಹುಡುಕುವ ಸಂಶೋಧನಾ ಕೃತಿ ಹಾಗೂ ಇದುವರೆವಿಗೂ ಇದ್ದ ಬಸವಣ್ಣನ ಬ್ರಾಹ್ಮಣ ಮೂಲವನ್ನು ನಿರಾಕರಿಸಿ, ಅವನ ಹುಟ್ಟು ದಲಿತ ಮೂಲದ್ದು ಎಂಬ ತಾತ್ವಿಕತೆಯನ್ನು ಒಳಗೊಂಡು ರೂಪುಗೊಂಡ ಕೃತಿಯಾಗಿದೆ. ಈ ಕಾರಣಕ್ಕಾಗಿ ಲಿಂಗಾಯತ ಸಮುದಾಯ ‘ಆನುದೇವಾ’ದ ವಿರುದ್ಧ ತೀವ್ರವಾದ ಪ್ರತಿಭಟನೆಗಳನ್ನು ರೂಪಿಸಿ ಕೃತಿಯ ಮುಟ್ಟುಗೋಲಿಗೆ ಸರ್ಕಾರವನ್ನು ಆಗ್ರಹಿಸಿತು. ‘ಆನುದೇವಾ’ ವಿರುದ್ಧದ ಪ್ರತಿಭಟನೆಗಳು ಪುಸ್ತಕ ಸುಡುವ ಹಾಗೂ ಲೇಖಕರ ಪ್ರತಿಕೃತಿ ದಹನ ಮಾಡುವಂತಹ ಹಿಂಸಾತ್ಮಕ ರೂಪ ಪಡೆದಿದ್ದಲ್ಲದೆ, ಲೇಖಕರ ಮೇಲೆ ಹಲ್ಲೆ ಮಾಡುವಂತಹ ಸ್ವರೂಪವನ್ನು ಪಡೆದುಕೊಂಡವು. ಅಲ್ಲದೇ ಕೃತಿಗೆ ಬಂದ ಸಾಹಿತ್ಯಕ ವಲಯದ ವಿಮರ್ಶೆಯೂ ಕೃತಿಗೆ ಪೂರಕವಾಗಿರಲಿಲ್ಲ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಸರ್ಕಾರ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡಿತು.

‘ಆನುದೇವಾ ಹೊರಗಣವನು’ ಬಸವಣ್ಣನ ಜಾತಿಮೂಲದ ಬಗ್ಗೆ ಹುಡುಕಾಟ ಮಾಡಿದ ಮೊದಲ  ಕೃತಿಯೇನಲ್ಲ. ಹತ್ತೊಂಬತ್ತನೆಯ ಶತಮಾನದಲ್ಲೆ ಈ ಹುಡುಕಾಟ ಪಾಶ್ಚಾತ್ಯರಿಂದಲೇ ಪ್ರಾರಂಭವಾಯಿತು. ಹಾಗೆಯೇ ಇದುವರೆಗಿನ ಅಧ್ಯಯನಗಳು ಬಸವಣ್ಣನ ಜಾತಿ ವಿಷಯದಲ್ಲಿ ಏಕಾಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ. ಆತನು ಆರಾಧ್ಯ ಬ್ರಾಹ್ಮಣ, ಶೈವ ಬ್ರಾಹ್ಮಣ, ಸ್ವಾರ್ಥ ಬ್ರಾಹ್ಮಣ, ಲಿಂಗಿ ಬ್ರಾಹ್ಮಣ- ಹೀಗೆ ವಿಭಿನ್ನ ನೆಲೆಗಳಲ್ಲಿ ಬಸವಣ್ಣನ ಹುಟ್ಟಿನ ಬಗೆಗಿರುವ ಬ್ರಾಹ್ಮಣ ಮೂಲವೂ ‘ಸತ್ಯ’ ಎಂದು ತಿಳಿಯಲು ಸಹಜವಾಗಿಯೇ ನಿರಾಕರಿಸುವಂಥದ್ದು. ಈ ಹಿನ್ನೆಲೆಯಲ್ಲಿ ಆನುದೇವಾ ವಚನ ಚಳುವಳಿಯ ಸಂದರ್ಭ ಹಾಗೂ ವಚನಗಳನ್ನು ಮರುಭೇಟಿ ಮಾಡುವ ಪ್ರಯತ್ನ ಹಾಗೂ ಆ ಮೂಲಕ ಬಸವಣ್ಣನ ಜಾತಿ ಮೂಲವನ್ನು ಹುಡುಕುಲು ಯತ್ನಿಸಿದ ಕೃತಿ. ಆದರೆ ಕೃತಿಯಲ್ಲಿ ಬಸವಣ್ಣನ ತಾಯಿ ಹಾಗೂ ಅಕ್ಕನನ್ನು ಕೀಳಾಗಿ ಚಿತ್ರಿಸಲಾಗಿದೆ ಎಂಬ ನೆಪವೊಡ್ಡಿ ಕೃತಿಯ ವಿರುದ್ಧ ಲಿಂಗಾಯತ ಸಮುದಾಯ ಪ್ರತಿಭಟನೆಗೆ ಇಳಿಯಿತು.

‘ಆನುದೇವಾ ಹೊರಗಣವನು’ ಕೃತಿಯ ವಿವಾದದ ಸಂದರ್ಭವೂ ಕೂಡ ಲಿಂಗಾಯತ ಸಮುದಾಯದ ರಾಜಕೀಯ ನಾಯಕತ್ವ ಬಿಕ್ಕಟ್ಟಿನಲ್ಲಿದ್ದ ಸಂದರ್ಭ. ಕೃತಿಯನ್ನು ವಿವಾದಕ್ಕೆ ಸಿಲುಕಿಸುವುದರ ಮೂಲಕ ಈ ಸಮುದಾಯದ ಒಳಪಂಗಡಗಳು ತಮ್ಮ ಒಳಜಗಳಗಳನ್ನು ಮರೆತು ಒಗ್ಗಟ್ಟಾಗಲು ಬಳಸಿಕೊಂಡವು. ಈ ಮೂಲಕ ಲಿಂಗಾಯತ ತನ್ನ ರಾಜಕೀಯ ಅಸ್ತಿತ್ವವನ್ನು ಬಲಪಡಿಸಿಕೊಳ್ಳುವ ಹಾಗೂ ಮುಖ್ಯವಾಹಿನಿ ರಾಜಕಾರಣದಲ್ಲಿ ತನ್ನನ್ನು ಪ್ರಬಲವಾಗಿ ಪ್ರತಿನಿಧಿಸಿಕೊಳ್ಳುವ ತಂತ್ರಗಾರಿಕೆಯನ್ನು ಪ್ರದರ್ಶಿಸಿತು. ಎಲ್ಲ ಸಂದರ್ಭಗಳಲ್ಲಿಯಂತೆ ಈ ವಿವಾದವೂ ಕೂಡ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ‍್ಯ ಪ್ರಶ್ನೆಯನ್ನು ಹಿನ್ನೆಲೆಗೆ ಸರಿಸಿತು. ಹಾಗೆಯೇ ಪ್ರಬಲ ಸಮುದಾಯದ ಧಾರ್ಮಿಕ ಭಾವನೆಗಳೇ ಮನ್ನಣೆಗೆ ಪಾತ್ರವಾದುವು. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರೊಬ್ಬರು ಕೊಟ್ಟ ಹೇಳಿಕೆ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವಂತಹದ್ದಾಗಿದೆ.

“ಮುಂಬರುವ ದಿನಗಳಲ್ಲಿ ಯಾವುದೇ ಧರ್ಮದ ಅಥವಾ ಸಿದ್ಧಾಂತದ ದಾರ್ಶನಿಕರಿಗೆ ಸಂಶೋಧನೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ‍್ಯದ ಹೆಸರಿನಲ್ಲಿ ಅವಹೇಳನ ಮಾಡಬಾರದು. ಈ ತಪ್ಪು ಮಾಡಿದ ಲೇಖಕ ಡಾ. ಬಂಜೆಗೆರೆ ಜಯಪ್ರಕಾಶರಿಗೆ ಸರ್ಕಾರ ಕಠಿಣ ಶಿಕ್ಷೆ ನೀಡುವುದರ ಮೂಲಕ ಮುಂದೆ ಇಂತಹ ತಪ್ಪುಗಳು ನಡೆಯದಂತೆ ನೋಡಿಕೊಳ್ಳಬೇಕು”.

‘ಆನುದೇವಾ’ದ ವಿರುದ್ಧ ರೂಪುಗೊಂಡ ಇಂತಹ ಪ್ರತಿಕ್ರಿಯೆಗಳಿಗೆ ಮನ್ನಣೆ ನೀಡಿದ ಸರ್ಕಾರ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡಿತು. ಹೀಗೆ ಮಾಡುವುದರ ಮೂಲಕ ಸಾಮಾಜಿಕ ನ್ಯಾಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ‍್ಯದ ವ್ಯಾಪ್ತಿಯನ್ನು ಸೀಮಿತಗೊಳಿಸಿ ಸರ್ಕಾರವೇ ಅಪ್ರಜಾಸತ್ತಾತ್ಮಕವಾಗಿ ನಡೆದುಕೊಂಡಿತು.

ಇನ್ನು ಇದೇ ಸಂದರ್ಭದಲ್ಲಿ ಪ್ರಕಟವಾದ ಎಸ್.ಎಲ್. ಭೈರಪ್ಪನವರ ‘ಆವರಣ’ ವರ್ತಮಾನದ ಹಿಂದುತ್ವ ಪ್ರಣೀತ ಚಳುವಳಿ ಹಾಗೂ ಸಂಶೋಧನಾ ಚಿಂತನೆಗಳನ್ನು ಒಳಗೊಂಡಿರುವ ಕೃತಿ. ಹಿಂದುತ್ವದ ಸಂಪ್ರದಾಯವಾದಿ ಮೌಲ್ಯಗಳು ಇಂದು ತೀವ್ರವಾಗಿ ಪ್ರಶ್ನೆಗೆ ಒಳಗಾಗುತ್ತಿರುವ ಹಾಗೂ ಕೋಮುವಾದಿ ರಾಜಕಾರಣ ಕುಸಿಯುತ್ತಿರುವ ಆತಂಕದಲ್ಲಿ ಭೈರಪ್ಪ ಈ ಕಾದಂಬರಿಯ ಮೂಲಕ ಮತ್ತೆ ಅದಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಇದು ಮಧ್ಯಕಾಲೀನ ಭಾರತದಲ್ಲಿ ಮುಸ್ಲಿಮರ ಆಶ್ರಮಣದಿಂದಾಗಿ ಹಿಂದೂ ಧರ್ಮಕ್ಕೊದಗಿದ ಗತಿ ಹಾಗೂ ವರ್ತಮಾನದಲ್ಲಿ ಜಾತ್ಯಾತೀತ ಶಕ್ತಿಗಳಿಂದ ಹಿಂದೂ ಧರ್ಮ ಅವನತಿಯತ್ತ ಸಾಗುತ್ತಿದೆ ಎಂಬ ಕಲ್ಪಿತ ತಾತ್ವಿಕ ಹಂದರವನ್ನು ಹೊಂದಿರುವ ಕೃತಿ. ಈ ಕೃತಿಗೆ ಸಮುದಾಯಗಳ ನೆಲೆಯಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಹುಟ್ಟಿದ ಪ್ರತಿಕ್ರಿಯೆಗಳು ತೀರಾ ಕಡಿಮೆ. ಆದರೆ ಸಾಹಿತ್ಯಕ ವಲಯದಲ್ಲಿ ತೀವ್ರ ವಾಗ್ವಾದಗಳು ಸೃಷ್ಟಿಯಾದವು.

ಆವರಣದ ವಸ್ತು ಏಕಮುಖ ಚಾರಿತ್ರಿಕ ಸಂಗತಿಗಳನ್ನು ಒಳಗೊಂಡು ರೂಪುಗೊಂಡಿರುವ ಕೃತಿ. ಅಲ್ಲದೆ ವರ್ತಮಾನದಲ್ಲಿ ಕೋಮುವಾದಿಗಳ ಮುಸ್ಲಿಮರ ಮೇಲಿನ ಹಿಂಸಾತ್ಮಕ ಚಟುವಟಿಕೆಗಳಿಗೆ ಮತ್ತಷ್ಟು ಕುಮ್ಮಕ್ಕು ನೀಡುವ ಕೃತಿ. ಅಲ್ಲದೆ ಕೋಮುವಾದಿಗಳ ಹಿಂಸಾತ್ಮಕ ಚಟುವಟಿಕೆಗಳಿಗೆ ಒಂದು ಆರೋಪಿತ ಸಾಮಾಜಿಕ ನ್ಯಾಯದ ಚೌಕಟ್ಟನ್ನು ಒದಗಿಸುವಂತಹ ಕೆಲಸವನ್ನೂ ಇದು ನಿಭಾಯಿಸಿತು. ಹೀಗಾಗಿ ಇದನ್ನು ಒಂದು ಉತ್ತಮ ಕಾದಂಬರಿ ಎಂದು ಹೊಗಳುವ ಹಾಗೂ ಇದು ಕಾದಂಬರಿ ರೂಪದಲ್ಲಿರುವ ಸಂಘ ಪರಿವಾರದವರ ಪಠ್ಯಪುಸ್ತಕ ಎಂದು ತಿರಸ್ಕರಿಸಿದ ಎರಡೂ ಪ್ರಕ್ರಿಯೆಗಳು ಓದುಗ ವಲಯದಿಂದ ರೂಪುಗೊಂಡವು.

ಈ ಎರಡೂ ಕೃತಿಗಳ ವಿವಾದದಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೊಂದಿದೆ. ಅದು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಆಶಯ ಹಾಗೂ ತನ್ನ ಭಾಷೆ, ಶೈಲಿ ಎಲ್ಲಿಯೂ ಪ್ರಚೋಧನಕಾರಿಯಾಗಿರದ ‘ಆನುದೇವಾ ಹೊರಗಣವನು’ ಕೃತಿಯನ್ನು ಸರ್ಕಾರ ನಿಷೇಧಿಸಿತು. ಆದರೆ ತನ್ನೆಲ್ಲ ಆಯಾಮಗಳಲ್ಲೂ ಸಮುದಾಯಗಳ ನಡುವೆ ಹಿಂಸೆಯನ್ನು ಪ್ರಚೋದಿಸುವಂತೆ ರೂಪುಗೊಂಡ ‘ಆವರಣ’ದ ಬಗೆಗೆ ಸರ್ಕಾರ ಮೌನವಹಿಸದೇ ಮೆಚ್ಚುಗೆ ವ್ಯಕ್ತಪಡಿಸಿತು. ಈ ಕಾದಂಬರಿಯ ವಿರುದ್ಧ ರೂಪುಗೊಂಡ ಪ್ರತಿಭಟನೆಗಳಿಗೆ ಕಿವಿಗೊಡಲಿಲ್ಲ. ಈ ಎರಡೂ ಕೃತಿಗಳ ವಿವಾದಗಳನ್ನು ಗಮನಿಸಿದಾಗ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ‍್ಯದ ಹಕ್ಕನ್ನು ಪ್ರಬಲ ಸಮುದಾಯಗಳು ನಿಯಂತ್ರಿಸುತ್ತಿವೆ ಎಂಬುದು ಅರ್ಥವಾಗುತ್ತದೆ. ಹಾಗೆಯೇ ಅಭಿವ್ಯಕ್ತಿ ಸ್ವಾತಂತ್ರ‍್ಯದ ಪರಿಕಲ್ಪನೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ರೂಪುಗೊಳ್ಳುವ ಸರ್ಕಾರಗಳು ಸಂಕುಚಿತ ಅರ್ಥದಲ್ಲಿ ಸ್ಥಾಪಿತ ಶಕ್ತಿಗಳಿಗೆ ಅನುಗುಣವಾಗಿ ರೂಪಿಸುತ್ತವೆ. ಹಾಗೂ ತಾನೇ ಅಭಿವ್ಯಕ್ತಿ ಸ್ವಾತಂತ್ರ‍್ಯದ ಹಕ್ಕನ್ನು ಹರಣ ಮಾಡುವ ಪ್ರವೃತ್ತಿಗಳಿಗೆ ರಕ್ಷಣೆಯನ್ನು ಸಹ ನೀಡುತ್ತದೆ. ಜೊತೆಗೆ ಸಂವಿಧಾನಬದ್ಧ ಹಕ್ಕುಗಳ ದಮನಕ್ಕೆ ಸರ್ಕಾರವೇ ಮುಂದಾಗುವ ದುರಂತ ತೀವ್ರವಾಗುತ್ತಿದೆ.

ಬದಲಾಗಬೇಕಾದ ಅಭಿವ್ಯಕ್ತಿ ಸ್ವಾತಂತ್ರ‍್ಯದ ಕಲ್ಪನೆ

ನಮ್ಮ ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ‍್ಯದ ಹಕ್ಕನ್ನೇನೂ ಎಲ್ಲ ಪ್ರಜೆಗಳಿಗೂ ಸಮಾನವಾಗಿ ನೀಡಿದೆ. ಆದರೆ ಅದರ ನಿಯಂತ್ರಣದ ಕೀಲಿಕೈಯನ್ನು ರಾಜಕೀಯ ಶಕ್ತಿಯ ಪರಿಧಿಯಲ್ಲೆ ಉಳಿಸಿದೆ. ಇಂದಿಗೂ ಅಭಿವ್ಯಕ್ತಿ ಸ್ವಾತಂತ್ರ‍್ಯವು ಸಮರ್ಥವಾಗಿ ಜಾರಿಯಾಗದಿರಲು ಇದು ಪ್ರಮುಖ ಕಾರಣ. ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ರ‍್ಯದ ವ್ಯಾಪ್ತಿಯನ್ನು ಕಿರಿದುಗೊಳಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತಹ, ಭಾವೈಕ್ಯತೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ರೂಪದ ನಿರ್ಬಂಧಗಳ ಮೂಲಕ ಸ್ವತಂತ್ರ ಭಾರತದಲ್ಲಿ ಪ್ರಬಲ ಸಮುದಾಯಗಳಿಗೆ ವರವಾಗಿ ಪರಿಣಮಿಸುವಂತಾಗಿರುವುದು ದುರಂತ. ಇದರಿಂದಾಗಿ ಶೋಷಿತ ಸಮುದಾಯಗಳಿಂದ ತಮ್ಮ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ನ್ಯಾಯಕ್ಕಾಗಿ ಹೋರಾಟಗಳು ರೂಪುಗೊಂಡಾಗಲೆಲ್ಲ ಪ್ರಬಲ ಸಮುದಾಯಗಳು ಅದನ್ನು ದಮನಿಸಲು ಇದು ಸುಲಭವಾದ ಅಸ್ತ್ರವಾಗಿ ಪರಿಣಮಿಸಿದೆ.

ಪ್ರತಿ ಕಾಲದಲ್ಲಿ ಸಾಹಿತ್ಯ ಕೃತಿಗಳು ವಿವಾದಕ್ಕೊಳಗಾದಾಗ ಸೃಜನಶೀಲ ಲೇಖಕರಿಗೆ ವಿಶೇಷವಾದ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಮಾನ್ಯ ಮಾಡಬೇಕೆಂಬ ಅಭಿಪ್ರಾಯಗಳು ಸಾಹಿತ್ಯ ವಲಯದಿಂದ ಮೂಡಿ ಬಂದಿವೆ. ಇದೂ ಕೂಡ ಅಪಾಯಕಾರಿಯಾದದ್ದೆ. ಯಾಕೆಂದರೆ ಅಭಿವ್ಯಕ್ತಿ ಸ್ವಾತಂತ್ರ‍್ಯದ ಹೆಸರಲ್ಲಿ ಲೇಖಕ ಸಮುದಾಯಗಳ ಜೊತೆಗೆ ರಾಕ್ಷಸನಂತೆ ವರ್ತಿಸುವ ಅಪಾಯವೂ ಇರುತ್ತದೆ. ಭೈರಪ್ಪನವರಂತಹ ಲೇಖಕರಿಗೆ ಇದರಿಂದ ಇನ್ನಷ್ಟು ಬಲ ಬಂದಂತೆ ಆಗುತ್ತದೆ. ಆದರೆ ಇದನ್ನು ಈಗಿರುವಂತೆಯೂ ಉಳಿಸುವಂತಿಲ್ಲ. ಈಗ ಇರುವಂತೆಯೇ ಉಳಿದರೆ ಸ್ಥಾಪಿತ ಶಕ್ತಿಗಳು ತಮ್ಮ ವಿರುದ್ಧದ ಎಲ್ಲ ಅಭಿಪ್ರಾಯಗಳನ್ನು ಅಮಾನ್ಯಗೊಳಿಸುತ್ತಲೇ ಇರುತ್ತವೆ.

ಸಾಹಿತ್ಯ ಕೃತಿಗಳು ವಿವಾದಕ್ಕೆ ಒಳಗಾದಾಗ ಅದನ್ನು ರಾಜಕೀಯ ಪ್ರಭುತ್ವ ಹಾಗೂ ನ್ಯಾಯಾಲಯಗಳ ತೀರ್ಪಿಗೆ ಒಪ್ಪಿಸಲಾಗುತ್ತದೆ. ಆದರೆ ರಾಜಕೀಯ ಪ್ರಭುತ್ವಗಳು ಕೃತಿಯ ವಿಚಾರಗಳ ಬಗ್ಗೆಯಾಗಲಿ, ಸಮುದಾಯಗಳ ಸಾಮಾಜಿಕ ನ್ಯಾಯದ ಬಗ್ಗೆಯಾಗಲಿ ತಲೆ ಕೆಡಿಸಿಕೊಳ್ಳದೆ ಬಲವಿದ್ದ ಕಡೆ ಬಾಗಿಬಿಡುತ್ತವೆ. ‘ಆನುದೇವಾ ಹೊರಗಣವನು’ ವಿಚಾರದಲ್ಲಿ ಆದದ್ದು ಇದೆ. ಹಾಗೆಯೇ ನಮ್ಮ ನ್ಯಾಯಾಲಯಗಳು ಕೃತಿಯು ಮಂಡಿಸುವ ಸಾಂಸ್ಕೃತಿಕ ಸೂಕ್ಷ್ಮಗಳನ್ನು ಅರಿಯದೆ ತೀರ್ಪು ಕೊಡುವುದು ಕೂಡ ಸರಿಯಾದ ಕ್ರಮವಲ್ಲ. ಹಾಗಾದರೆ ಅಭಿವ್ಯಕ್ತಿ ಸ್ವಾತಂತ್ರ‍್ಯ ಹೇಗಿರಬೇಕು ಎಂಬ ಪ್ರಶ್ನೆಗೆ ನ್ಯಾಯವಾದಿ, ಚಿಂತಕ ಸಿ.ಎಚ್.ಹನುಮಂತರಾಯರು ಹೇಳುವ ಮಾತುಗಳು ಸೂಕ್ತವೆನಿಸುತ್ತವೆ. ಅವರು “ವಕೀಲರಿಗೆ ಬಾರ್ ಕೌನ್ಸಿಲ್‌ಇದೆ; ಪತ್ರಕರ್ತರಿಗೆ ಪ್ರೆಸ್‌ಕೌನ್ಸಿಲ್ ಇದೆ ಇಲ್ಲಿ ಆಯಾ ಕ್ಷೇತ್ರದಲ್ಲಿ ಆಗುವ ತಪ್ಪು ಒಪ್ಪುಗಳ ಕುರಿತು ಕೌನ್ಸಿಲ್‌ಗೆ ಮನವಿ ಅರ್ಪಿಸಬಹುದು. ಹಾಗೆ ಸಾಹಿತ್ಯ ಕ್ಷೇತ್ರದ ವಿಚಾರಗಳ ವಿವಾದಗಳನ್ನು ಚರ್ಚಿಸಲು (ತಪ್ಪು-ಸರಿ ನಿರ್ಣಯಿಸಲು) ಲಿಟರರಿ ಕೌನ್ಸಿಲ್‌ಏಕೆ ರಚಿಸಿ ಕೊಳ್ಳಬಾರದು?” ಎನ್ನುತ್ತಾರೆ.

ಸಾಹಿತ್ಯಕ್ಕೆ ಸಂಬಂಧಿಸಿದಂತೆ ಇಂದು ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿಗಳಂತಹ ಸರ್ಕಾರೇತರ ಸಂಸ್ಥೆಗಳಿವೆ. ವಿವಾದಿತ ಕೃತಿಗಳಿಗೆ ಸಂಬಂಧಿಸಿದಂತೆ ಈ ಸಂಸ್ಥೆಗಳ ಮೂಲಕ ವ್ಯಾಪಕ ಅಧ್ಯಯನವನ್ನು ನಡೆಸಲು ಅನುವು ಮಾಡಿಕೊಟ್ಟು ಅನಂತರ ಕೃತಿಯ ಮುಟ್ಟುಗೋಲು ಇನ್ನಿತರ ವಿಚಾರಗಳ ಬಗೆಗೆ ಆಲೋಚಿಸುವುದು ಸರಿಯಾದ ಮಾರ್ಗವೆನಿಸುತ್ತದೆ. ಲೇಖಕರ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಸಂಬಂಧಿಸಿದಂತೆ ಉಂಟಾಗುವ ವಿವಾದಗಳಲ್ಲಿ ಈ ಸಂಸ್ಥೆಗಳು ಜವಾಬ್ದಾರಿಯುತವಾಗಿ ವರ್ತಿಸಬೇಕಾದ ಅಗತ್ಯವಿದೆ. ಹಾಗಾದಾಗಿ ಅಭಿವ್ಯಕ್ತಿ ಸ್ವಾತಂತ್ರ‍್ಯವು ಪ್ರಜಾಸತ್ತಾತ್ಮಕವಾಗಲು ಸಾಧ್ಯ. ಇಲ್ಲವಾದಲ್ಲಿ ಸಾಹಿತ್ಯ ಕೃತಿಗಳ ಮೂಲಕ ರೂಪುಗೊಳ್ಳುವ ಸಾಮಾಜಿಕ ನ್ಯಾಯದ ಮೌಲ್ಯಗಳು, ಹೊಸ ಬಗೆಯ ಸಾಂಸ್ಕೃತಿಕ ಚಿಂತನೆ ಹಾಗೂ ರಾಜಕೀಯ ತತ್ವಗಳು ದಮನಕ್ಕೊಳಗಾಗುತ್ತಲೇ ಇರುತ್ತವೆ.