“ಸಿಂಗಾರೆವ್ವನಿಗೆ ಆ ದಿನ ಬಂದ ಜ್ವರ ಎಂಟು ದಿನಗಳಾದರೂ ಇಳಿಯಲೇ ಇಲ್ಲ. ಅಷ್ಟೂ ದಿನ ಸಂಕಟಪಟ್ಟಳು. ಗಂಟಲಲ್ಲಿ ಗಂಜಿ ಕೂಡ ಇಳಿಯುತ್ತಿರಲಿಲ್ಲ. ಡಾಕ್ಟರ್ ಬಂದು ದಿನಾ ಇಂಜೆಕ್ಷನ್ ಚುಚ್ಚುತ್ತಿದ್ದ. ಎಂತೆಂಥದೋ ಗುಳಿಗೆ, ಪುಡಿ ಬಣ್ಣದ ಔಷಧಿ ಕೊಡುತ್ತಿದ್ದ. ಆದರೆ ಏನು ಕೊಟ್ಟರೂ ವಾಂತಿಯಾಗಿ ಹೊರಳಿ ಬರುತ್ತಿತ್ತು. ಮೊದಲಿನ ನಾಕೈದು ದಿನಗಳಂತೂ ನಮ್ಮ ಗುರುತು ಕೂಡ ಹಿಡಿಯುತ್ತಿರಲಿಲ್ಲ. ಏನೇನೋ ಕನವರಿಸುತ್ತಿದ್ದಳು. ನೋಡಬಂದ ದೇಸಾಯಿಗೆ ಒಮ್ಮೆ “ಹೊಲೆಯಾ, ಹೊಲೆಯಾ” ಎಂದು ಚೀರಿದಳು. ಇನ್ನೊಮ್ಮೆ “ನೀ ನನ್ನ ಹಡದ ತಂದೆಯೇನೋ? ವೈರಿ! ವೈರಿ!” ಎಂದು ಉಗುಳಿದಳು. ಮತ್ತೊಮ್ಮೆ ಇದ್ದಕ್ಕಿದ್ದಂತೆ ಎದ್ದು ಕೂತು “ಅಯ್ ಶೀನಿಂಗೀ, ನಮ್ಮ ಕಪಲಿ ಮತ್ತು ಕರಾ ಹಾಕೇತಲ್ಲಾ!” ಎಂದಳು. ಕನಸು ಕಂಡಿದ್ದಾಳೇನೋ ಎಂದು ನಾನು “ಹೌಂದೆವ್ವಾ” ಎಂದೆ. “ಮರ್ಯಾಗ ಒಂದೆರಡು ಉಂಟಿ ಕೊಟ್ಟ ಬಾರಗs” ಅಂದಳು. ಎಳೆತನದ ನೆನಪಾಗಿರಬೇಕು. ಇಲ್ಲಾ ಕನಸು ಕಂಡಳೆಂದು “ಕೊಡೋಣೆವ್ವ” ಅಂದರೆ “ನನ್ನ ಹಾಟ್ಯ ಮರ್ಯಾ, ಇಷ್ಟ ಉಂಡೀ ತಿಂದರೂ ಒಂದು ಬೋರಂಗೀ ಹಿಡದ ಕೊಡಲಿಲ್ಲ ನೋಡs” ಎಂದು ವಿಷಾದದಿಂದ ಹೇಳಿ ಹಾಗೇ ಕಣ್ಣೀರಿಡುತ್ತ ಮಲಗಿದಳು.

ಖಬರು ಬಂದಾಗ ಹುಚ್ಚಯ್ಯನ ಹೆಣವಿದ್ದ ಗಡಂಚಿಯನ್ನೇ ತದೇಕ ದೃಷಿಯಿಂದ ನೋಡುತ್ತ ಕಣ್ಣೀರು ಸುರಿಸುತ್ತಿದ್ದಳು. ಇದ್ದಕ್ಕಿದ್ದಂತೆ ಚೀರಿ “ಹೊಲೆಯಾ ನಿನ್ನ ಕೈಗಿ ಹಾವ ಹರೀಲಿ, ನಿನ್ನ ಬಾಯಿಗೆ ಇರಿವಿ ಮುತ್ತಲಿ” ಎಂದು ಲಟಿಕೆ ಮುರಿದು ಶಾಪ ಹಾಕುತ್ತಿದ್ದಳು. ಹಾಗೇ ಕೆಟ್ಟದಿನಿ ತೆಗೆದು ಅಳುತ್ತಿದ್ದಳು. ಐದನೇ ದಿನ ವಾಂತಿಯಾಗುವುದು ನಿಂತು ಎರಡು ಗುಟುಕು ಗಂಜೀ ಕುಡಿದಿದ್ದಳು. ಆರಾಮವಾಗಿ ನಿದ್ದೆ ಹೋಗಿದ್ದಳು. ಇಷ್ಟು ದಿನವೂ ಅವಳ ಅಕ್ಕಪಕ್ಕ ಬಿಟ್ಟು ಸರಿಯುತ್ತಿರಲಿಲ್ಲ, ನಾನು. ಈ ದಿನ ನಿದ್ದೆ ಮಾಡಿದಳಲ್ಲಾ ಎಂದು ಹೋದ ಜೀವ ಬಂದಷ್ಟು ಸಮಾಧಾನವಾಗಿತ್ತು. ಹಾಸಿಗೆಯಲ್ಲೇ ಒರಗಿ ನನ್ನ ಕಡೆ ನೋಡಿ,

“ಶೀನೀಂಗಿ, ನಾ ಸಾಯತೇನ, ನನ್ನ ಸಾಯಾಕ ಬಿಡs” ಎಂದಳು. ಆಗಂತೂ ಬಿಕ್ಕಿಬಿಕ್ಕಿ ಅತ್ತೆ. ಅವಳನ್ನು ಉಳಿಸಿಕೊಳ್ಳುವ ಭಾಗ್ಯ ಈ ಮನೆಗಿಲ್ಲವೆಂದುಕೊಂಡೆ ಅಥವಾ ಬದುಕುವುದಕ್ಕೆ ಏನುಳಿದಿತ್ತು?

ಈಗ ಸರಗಂ ದೇಸಾಯಿ ಅಂತಸ್ತಿನ ಕೋಣೆಯಲ್ಲಿ ಮಲಗುವುದನ್ನು ನಿಲ್ಲಿಸಿ ಕೆಳಗೆ ದೇವರ ಮನೆಯ ಪಕ್ಕದ ಕೋಣೆಯಲ್ಲಿ ಮಲಗುತ್ತಿದ್ದ. ಅಷ್ಟಾಗಿ ಹೆಂಡತಿಯೆಂಬ ಅಂತಃಕರಣವೂ ಅವನಲ್ಲಿ ಕಾಣಿಲಿಲ್ಲ. ದಿನಕ್ಕೊಮ್ಮೆ ಮೇಲೇರಿ ಬಂದರೆ ಬಂದ, ಇಲ್ಲದಿದ್ದರಿಲ್ಲ, ಡಾಕ್ಟರ್ ಬಂದಾಗ ಮಾತ್ರ ಅವರೊಂದಿಗೆ ಹಾಜರಾಗುತ್ತಿದ್ದ. ಮೇಲೆ ಬಂದರೆ ಸುಮ್ಮನೇ ಕೂರುತ್ತಿದ್ದ. ಒಂದು ಮಾತಾಡುತ್ತಿರಲಿಲ್ಲ. ಹ್ಯಾಗೆಂದು ವಿಚಾರಿಸುತ್ತಿರಲಿಲ್ಲ. ಹೆಂಡತಿಯನ್ನೂ ನೋಡಿ ಬರುವುದು ಗಂಡನ ಕರ್ತವ್ಯವೆಂಬಂತೆ, ಅದನ್ನೂ ಆತನ ತಾಯಿ ಹೇಳಿಕೊಟ್ಟದ್ದೋ ಏನೋ, ಬರುತ್ತಿದ್ದ. ಅವನ ಬಯಲಾಟದಲ್ಲಿ ಇಂಥ ದೃಶ್ಯಗಳು ಇರಲಿಲ್ಲವೇನೋ! ಇದ್ದಿದ್ದರೆ ಅಲ್ಲಿಯ ಮಾತುಗಳನ್ನೇ ಇಲ್ಲಿಯೂ ಹೇಳಿ ನಗಿಸುತ್ತಿದ್ದ. ಆತ ಬಂದಾಗ ಸಿಂಗಾರೆವ್ವ ಮಾತ್ರ ಕಣ್ಣು ತೆರೆಯುತ್ತಲೇ ಇರಲಿಲ್ಲ. ಆದರೆ ದೇಸಾಯಿ ಅಂತಸ್ತಿನ ಕೋಣೆಯಲ್ಲಿ ಮಲಗುವುದು ನನ್ನ ಪಾಲಿಗೆ ಅತ್ಯಗತ್ಯವಾಗಿತ್ತು.

ಮೊನ್ನೆ ಅಮವಾಸ್ಯೆಯ ದಿನ ನಡೆದ ಘಟನೆ ನನ್ನ ತಲೆ ಕೊರೆಯುತ್ತಿತ್ತು. ಸಿಂಗಾರೆವ್ವ ಬೇಖಬರಾಗಿ ಅದನ್ನು ಮರೆತ್ತಿದ್ದಳು. ಆಕೆಯ ಉಪಚಾರದಲ್ಲಿ ತೊಡಗಿದ್ದರೂ, ಅವಳ ಆರೋಗ್ಯದ ಚಿಂತೆ ಇಡೀ ಮನಸ್ಸನ್ನು ಆವರಿಸಿದ್ದರೂ, ಆ ನೆನಪು ಮಾತ್ರ ಆಗಾಗ ಇಣಿಕಿ ಹಾಕಿ ನನ್ನನ್ನು ಧೈರ್ಯಗೆಡಿಸುತ್ತಿತ್ತು. ನಾವು ಪಾರಾಗಿದ್ದೆವು. ನಿಜ, ಆದರೆ ಮಧ್ಯರಾತ್ರಿಯ ಸುಮಾರು ಒಂದೆರಡು ಬಾರಿ ಬಾಗಿಲ ಬಳಿಯ ಕತ್ತಲೆಯಲ್ಲಿ ಕರೀ ಆಕಾರವೊಂದು ನಿಂತು ಸಿಂಗಾರೆವ್ವನನ್ನೇ ದುರುಗುಟ್ಟಿ ನೋಡಿದ ಹಾಗೆ ಅನ್ನಿಸಿತ್ತು. ನಾನು “ಹಾ! ಯಾರದು?” ಎಂಬ ಗಾಬರಿಯಲ್ಲಿ ಕೂಗಿದಾಗ ಅದು ಹಾಗೇ ಕಣ್ಣೆದುರಿನಲ್ಲೇ ಕರಗಿಹೋಗಿತ್ತು. ಅದು ಹುಚ್ಚಯ್ಯನ ಭೂತವಿರಬಹುದೇ ಎಂದು ನೆನೆದು ಮೈ ಗಮ್ಮಂತ ಬೆವರಿತ್ತು.

ಮಾರನೇ ದಿನ ದೇಸಾಯರಿಗೆ, “ನೀವು ಮ್ಯಾಲೇ ಮಲಗೋದು ಒಳ್ಳೆಯದು” ಅಂದೆ, ಅದಕ್ಕೆ ದೇಸಾಯಿ “ಯಾಕs ಅಂಜತೀಯೇನು?” ಅಂದ.

“ಅದಕ್ಕಲ್ಲ, ಸಿಂಗಾರೆವ್ವ ನಿಮ್ಮನ್ನ ನೆನಸ್ತಾಳ” ಎಂದು ಸುಳ್ಳು ಹೇಳಿದೆ. ಭೂತದ ವಿಚಾರ ಮಾತ್ರ ಹೇಳಲಿಲ್ಲ. ಹೆಂಡತಿ ನೆನೆಸೋದು ಅವಳ ಒಳಕ್ಕೆ ಇಳಿಯಲೇ ಇಲ್ಲ. ನಾನು ಹೆದರಿದೆನೆಂದು ನನ್ನ ಪುಕ್ಕಲುತನಕ್ಕೆ ಖುಶಿಪಡುತ್ತ, ಪಾಪ ಹೆಂಗಸೆಂದು ಕರುಣೆಗೊಂಡು, ಆದರೆ ತಾನಿದ್ದಲ್ಲಿ ಯಾರೂ ಹೆದರುವ ಅಗತ್ಯವಿಲ್ಲವೆಂದು ಸಾರಿ ಸಾರಿ ಅಪ್ಪಣೆ ಮಾಡಿ ಪಕಪಕ ನಕ್ಕ! ಇನ್ನು ಹೇಳಿ ಪ್ರಯೋಜನವಿಲ್ಲ ಎಂದುಕೊಂಡೆ. ರಾತ್ರಿ ಆ ಬಾಗಿಲಲ್ಲಿ ಇನ್ನೊಂದು ಕಂದೀಲಿಟ್ಟು ಅಲ್ಲಿ ಕತ್ತಲಿಲ್ಲದ ಹಾಗೆ ಮಾಡಿ, ಸಾಧ್ಯವಾದಷ್ಟೂ ಆ ಕಡೆ ನೋಡದೆ, ಆದರೆ ಧ್ಯಾನವನ್ನೆಲ್ಲ ಆ ಕಡೆಗೇ ಇಟ್ಟುಕೊಂಡು, ದೇವರ ಹೆಸರು ತಗೊಂಡು ಕೂತೆ.

ಸಿಂಗಾರೆವ್ವನ ಆಜಾರಿಯ ದುಗುಡದ ಮಧ್ಯದಲ್ಲಿಯೂ ನನಗೆ ಆ ದಿನ ಮರ್ಯಾ ಸಿಕ್ಕಿದ್ದರ ಬಗ್ಗೆ ಆಶ್ವರ್ಯವಾಗುತ್ತಿತ್ತು. ಈ ಊರಿಗೆ ಅವನು ಯಾವಾಗ ಬಂದಿದ್ದ? ಏನು ಕೆಲಸ ಮಾಡಿ ಕೊಂಡಿದ್ದ? ಎಂದಿನಿಂದ ಇಂಥ ಅವಕಾಶಕ್ಕಾಗಿ ಹೊಂಚುತ್ತಿದ್ದ? ಬಂದವನು ಒಮ್ಮೆಯಾದರೂ ನಮ್ಮ ಕಣ್ಣಿಗ್ಯಾಕೆ ಬೀಳಲಿಲ್ಲ? ಮಂದಿಯಾದರೂ ಆತನ ಬಗ್ಗೆ ಯಾಕೆ ಮಾತಾಡಲಿಲ್ಲ? – ಎಂದೇನೇನೋ ಕೇಳಿಕೊಳ್ಳುತ್ತಿದ್ದೆ. ಯಾವಾಗಲೋ ಬಂದಿದ್ದಾನಾದೀತು. ಕೂಲಿನಾಲಿ ಮಾಡಿ ಕೊಂಡಾದ್ದಾನು, ಇವನ್ಯಾವ ಮಾರಾಯನೆಂದು ಮಂದಿ ಇವನ ಬಗ್ಗೆ ಮಾತಾಡಿಕೊಳ್ಳಬೇಕು? ಅಲ್ಲದೆ ಇವನೂ ಮ್ಯಾಲೆ ಬಿದ್ದು ಮಂದಿಯ ಗುರುತು ಮಾಡಿಕೊಳ್ಳುವ ಪೈಕಿ ಅಲ್ಲ. ಹ್ಯಾಗೆ ಬಂದನೋ, ಯಾವಾಗ ಬಂದನೋ, ಅಂತೂ ಅದೆಲ್ಲ ನಮ್ಮ ದುರ್ದೈವದ ಭಾಗವೆಂದು ಸುಮ್ಮನಾಗುತ್ತಿದ್ದೆ. ಇವನು ಇಲ್ಲಿ ಬಂದ ಸುದ್ದಿ ನಮ್ಮೂರ ಗೌಡನಿಗಾದರೂ ಗೊತ್ತಿದೆಯೋ ಇಲ್ಲವೋ, ಅಥವಾ ಗೊತ್ತಿರಲಿಕ್ಕಿಲ್ಲ; ಗೊತ್ತಿದ್ದರೆ ಮರ್ಯಾ ಸತ್ತಿದ್ದಾನೆಂದು ಯಾಕೆ ಹೇಳುತ್ತಿದ್ದ?

ಸಿಂಗಾರೆವ್ವ ಅಜಾರಿ ಬಿದ್ದ ಸುದ್ದಿ ಕೇಳಿ ನೋಡಿಕೊಂಡು ಹೋಗಲು ನಂದಗಾಂವಿಯಿಂದ ನಿಂಗವ್ವಗೌಡ್ತಿ ಮತ್ತು ಗೌಡ ಬಂದರು. ಮಗಳ ಅನಾರೋಗ್ಯದಿಂದ ಗೌಡನೀಗೇನೂ ಆತಂಕವಾಗಿರಲಿಲ್ಲ. ಬಂದವನು ಅದೇ ತನ್ನ ನರಿಮುಖದ ಮೀಸೆ ಕೆದರಿ, ವಕ್ರನಗೆ ನಗುತ್ತ ದೇಸಾಯಿ ಗಂಟಿಕೊಂಡು ತಾನಾಯ್ತು, ಕುಡಿತವಾಯ್ತು, ದೇಸಾಯಿಯ ಪ್ರಾಸ ತಾರಕಗಳಾಯ್ತು, ಖುಶಿಮೋಜಿನಿಂದ ಇದ್ದ. ಗೌಡ್ತಿ ಮಾತ್ರ ಮಗಳನ್ನು ನೋಡಿ ಬಹಳ ಚಡಪಡಿಸುತ್ತಿದಳು. ಹಣೆ ಹಣೆ ಗಿಟ್ಟಿಸಿಕೊಂಡು ಕಣ್ಣೀರಿಟ್ಟಳು. ತಾನೇ ಔಷಧಿ ಕುಡಿಸಿ, ಮಲಗಿಸಿ ಸೆರಗಿನಿಂದ ಗಾಳಿ ಬೀಸಿದಳು. ಮಗಳ ಬಾಯಲ್ಲಿ ಗಂಜಿ ಇಳಿಯುವತನಕ ಊಟ ಮಾಡಲಿಲ್ಲ. ಹೆತ್ತ ಕರುಳಿನ ವೇದನೆ ಶಿವನಿಗೆ ತಟ್ಟಿತೇನೋ, ಆ ದಿನ ಸಾಯಂಕಾಲ ಸಿಂಗಾರೆವ್ವ ಅರಿವಿಗೆ ಬಂದಳು. ತಾಯಿ ಬಂದದ್ದು ತಿಳಿದು ಅವಳನ್ನು ತಬ್ಬಿಕೊಂಡು ಗಳಗಳ ಅತ್ತಳು. “ನಿನ್ನ ಮೈಯಾಗ ಅರಾಮಿಲ್ಲ. ನೀ ಅಳಬಾರದು” ಎಂದು ಹೇಳಿದರೂ ಕೇಳಲಿಲ್ಲ. ತಾಯಿಯನ್ನು ನೋಡಿದ ಸಂತೋಷದ ಉದ್ರೇಕಕ್ಕಿಂತ ತಾನು ಬದುಕಿದ್ದೇ ತಪ್ಪೆಂಬ ಭಾವನೆ ಅವಳನ್ನು ಆವರಿಸಿತ್ತೆಂದು ನಾನು ಬಲ್ಲೆ. “ನಾವು ಕಂಟಕ ದಾಟಿ ಬಂದೀವಿ, ಮತ್ತ ಯಾಕ ಆಳ್ತಿಯವ್ವಾ” ಎಂದು ಎರಡರ್ಥ ಬರುವಂಥ ಮಾತಾಡಿ, ಅವಳ ಮನಸ್ಸಿನ ಮುಳ್ಳು ಕಳೆಯಲು ನೋಡಿದೆ. ಗೌಡ್ತಿ ಅದನ್ನೇ ಸಮರ್ಥಿಸಿ “ಶೀನಿಂಗಿ ಹೇಳೋದ ಬರೋಬರಿ ಐತಿ. ಹೆಂಗೂ ಸಾವ ಗೆದ್ದ ಬಂದೀ ಮಗಳ; ಮುತ್ತೋದ್ಯಾಗಿ ತುಂಬಿದ ಮನ್ಯಾಗ ಅಳಬಾರದು” ಎಂದು ಅವಳು ಹೇಳಿದಳು. ಅತ್ತು ಅತ್ತು ಎದೆ ಹಗುರಾದ ಮೇಲೆ ತೌರುಮನೆಯ ಎಲ್ಲರ ಕ್ಷೇಮ ವಿಚಾರಿಸಿಕೊಂಡಳು. ತಮ್ಮನ ಬಗ್ಗೆ, ಚಿಕ್ಕಮಂದಿರ ಬಗ್ಗೆ ಕೇಳಿ ಕೇಳಿ ತಿಳಿದಳು. ಒಂದೂ ಬಿಡದೆ ಮನೆಯ ಎಲ್ಲಾ ದನಗಳ ಬಗ್ಗೆ ಕೇಳಿ, ಕಪಲಿಯಕರು ಈಗ ದೊಡ್ಡದಾಗಿ ಗಬ್ಬವಾಗಿದೆ ಎಂದಾಗ ಹರ್ಷಗೊಂಡು ಮುಖ ಇಷ್ಟಗಲ ಮಾಡಿದಳು. ತಡೆಯಲಾರದೆ –

“ಕೇಳಿದೇನs ಶೀನಿಂಗೀ, ಕಪಲೀ ಕರಾ ಗಬ್ಬಾಗೇತಂತ. ಆಯ್ ನನ ಶಿವನ, ನಾ ನೋಡಬೇಕಾಗಿತ್ತಲs ಎವ್ವಾ!” ಎಂದು ಉದ್ಗಾರ  ತೆಗೆದಳು. ಸಿಂಗಾರೆವ್ವನ ಮೈಯಲ್ಲೀಗ ಏನೆಂದರೆ ಏನೂ ಉಳಿದಿರಲಿಲ್ಲ; ಮೂರು ಮೂಳೆ, ಅವೆರಡು ಕಣ್ಣು ಬಿಟ್ಟು. ಒಂದು ವಾರದಲ್ಲಿ ಹ್ಯಾಗಿದ್ದವಳು ಹ್ಯಾಗಾಗಿಬಿಟ್ಟಿದ್ದಳು! ಮಾರನೇ ದಿನದಿಂದ ಆರೋಗ್ಯ ಸುಧಾರಿಸತೊಡಗಿತಾದರೂ ಸೂಸುಗೆಮ್ಮು ಸುರುವಾಗಿತ್ತು. ಅಮವಾಸ್ಯೆಯ ಆ ಕರೀ ದಿನದ ನೆನಪು ಅವಳ ಮನಸ್ಸಿನಲ್ಲಿ ಸುಳಿಯದ ಹಾಗೆ ಎಚ್ಚರ ವಹಿಸಿದ್ದೆ. ತಪ್ಪಿಕೂಡ ಹುಚ್ಚಯ್ಯನ ಭೂತದ ಮಾತು ತೆಗೆದಿರಲಿಲ್ಲ. ಗೌಡ ಸುದೈವದಿಂದ ಇನ್ನೂ ಸಿಂಗಾರೆವ್ವನ ಕಣ್ಣಿಗೆ ಬಿದ್ದಿರಲಿಲ್ಲ. ನಿಮ್ಮಪ್ಪ ಬಂದಿದ್ದಾನೆ ಎಂದು ನಾನಾಗಲಿ, ಗೌಡ್ತಿಯಾಗಲಿ ಹೇಳಲೂ ಇಲ್ಲ. ಆ  ರಾತ್ರಿ ನಾನು ಕಾಸಿದ ನೀರು ತರಬೇಕೆಂದು ಅಡಿಗೆ ಮನೆಗೆ ಹೋದಾಗ ಗೌಡ್ತಿ, ಗೌಡನಿಗೆ ಊಟ ಬಡಿಸುತ್ತಿದ್ದಳು. ದೇಸಾಯಿ ಇನ್ನೂ ಬಂದಿರಲಿಲ್ಲ. ಗೌಡ “ನಾ ಹೇಳಿದ ಕೆಲಸ ಏನ ಮಾಡಿದಿ?” ಅಂದ.

“ಮಗಳಿನ್ನೂ ಬರೋಬರಿ ಖಬರಿನಾಗs ಬಂದಿಲ್ಲ, ಹೆಂಗ ಕೇಳಲಿ?” ಅಂದಳು ಗೌಡ್ತಿ.

ನನಗೆ ಸಂಶಯ ಬಂತು. ಕುತೂಹಲ ತಡೆಯದೆ ಅಲ್ಲೇ ಬಾಗಿಲ ಮರೆಯಲ್ಲಿ ಅವಿತುಕೊಂಡೆ.

“ಹೆಂಗೂ ನಿನ್ನ ಮಾತ ಕೇಳತಾಳ, ಅಡಚಣಿ ಆಗೆತಿ ಮಗಳs, ಸಾಲಗಾರರೆಲ್ಲಾ ಮನೀಗಿ ಬಂದ ಮುಗಿಬೀಳತಾರು, ಇದೊಂದ ಸಲ ಪಾರ ಮಾಡಂತ ಹೇಳು”

“ಇನ್ನೊಂದ ನಾಕ ದಿನ ಹೊಗಲೇಳು, ಕೇಳಿ ಇಸಗೊಂಬರ್ರೀನಿ”

“ಹಂಗಾದರ ಹಿಂಗ ಮಾಡು, ನಾ ನಂದಗಾಂವಿಗೆ ಹೋಗಿರ್ತೀನಿ. ನೀ ಇನ್ನೊಂದ ನಾಕ ದಿನ ನಿಂತ ಇಸಕೊಂಬಾ.”

ಅಷ್ಟರಲ್ಲಿ ನಾ ನಿಂತ ಬಾಗಿಲು ಗೋಡೆಗೆ ತಾಗಿ ಸದ್ದಾಯಿತು. ಅವರ ಮಾತೂ ನಿಂತು ಹೋಯಿತು.

ಆ ರಾತ್ರಿ ಮಲಗಿದಾಗ, ಹ್ಯಾಗೂ ಸಿಂಗಾರೆವ್ವನಿಗೆ ನಿದ್ದೆ ಹತ್ತಿತ್ತಲ್ಲ, ನಾನು ಬಿಡಲಿಲ್ಲ. ಗೌಡ್ತಿಯನ್ನು ಕೇಳಿಯೇಬಿಟ್ಟೆ. ಅವಳಿಗದೇ ಬೇಕಾಗಿತ್ತು. ಎದ್ದು ಕೂತು ಎದೆಯ ಮೇಲೆ ಕೈ ಇಟ್ಟುಕೊಂಡು

“ಏನ ಮಾಡಲೇ ಶೀನಿಂಗಿ? ಇಂತಾ ಗಂಡ ಗಂಟಬಿದ್ದೈತಿ! ಬೆಂಕೀ ಹಚ್ಚಿ ಸುಟ್ಟರೂ ಸುಡಲಾರದಷ್ಟು ಆಸ್ತಿ ಐತಿ, ಮತ್ತ ಮಗಳ ಕೈಯಾಗಿನ ಬಳೀ ಕೇಳಂತ ಗಂಟ ಬಿದ್ದೈತಿ!” ಎಂದು ಹೇಳಿದಳು.

“ಯಾವ ಬಳಿ?”

“ಅವs ಮದಿವ್ಯಾಗ ಸಿಂಗಾರೆವ್ವನ ಕೈಗಿ ಬಂಗಾರದ ಎರಡ ಕಡಗ ಹಾಕಿರಲಿಲ್ಲೇನs? ಹತ್ತತ್ತ ತೊಲೀವು?”

“ಹೂ. ಹೂ”

“ಅದರಾಗಿಂದ ಒಂದಾರ ಇಸಕೊಂಬರಬೇಕಂತ. ಅಲ್ಲs, ನೀನs, ಹೇಳಗs ಶಿವನ ಅಂತ ಮಗಳ ಕೈ ಹೊತ್ತ ಮಲಗ್ಯಾಳ, ಬಳೀ ಕೊಡಂತ ನಾ ಯಾವ ಬಾಯಲೆ ಕೇಳಲಿ?”

ಮುದುಕಿಯ ಸಂಕಟ ನನಗರಿವಾಯ್ತು. ಹಿಂದೆ ಸಿಂಗಾರೆವ್ವನಿಗೂ ಗೌಡನಿಗೂ ಆದ ಜಗಳವನ್ನು ಅದು ನಡೆದ ಹಾಗೇ ಹೇಳಿದೆ. ದತ್ತಕದ ಮಾತು ಬಂದೊಡನೆ ಮುದುಕಿ ಥಟ್ಟನೆ ನೆಲ ಬಾರಿಸಿ –

“ಅವ್ವಾ, ಅವ್ವಾ ಅವ್ವಾ! ಆ ಲಪೂಟ ಭಾಡ್ಯಾ ಹಿಂತಾದ ಹೊಂಚ್ಯಾನೇನ? ಆ ನನ್ನ ಸವತಿ ಗಂಗ ಮಗನ್ನ ಹಡದ್ದಾಳ ನೋಡೂ, ಅಂದಿನಿಂದ ನಾ ಅಂದರ ಅವನ ಕಾಲಾಗಿನ ಕಸ ಆಗಿದೇನ!” ಎಂದಾಡಿ ವೀರಾವೇಶದಿಂದ ಗೋಣು ಅಲುಗಿಸುತ್ತ “ನನ್ನ ಮಗಳ ಬಾಳ್ವೆ ಹಾಳು ಮಾಡಿ, ಇದನೆಲ್ಲಾ ತನ್ನ ಮಗ್ಗ ಮಾಡತಾನಂತs?… ಮಾಡಲಿ ಮಾಡಲಿ, ಶಿವಗ ಕಣ್ಣಿಲ್ಲೇನs ಶೀನಿಂಗಿ” ಎನ್ನುತ್ತ ಮುಖಕ್ಕೆ ಸೆರಗು ಹಾಕಿ, ಎಡಗೈ ನೆಲಕ್ಕೂರಿ ಬಲಗೈ ತಲೆಯ ಮೇಲೆ ಹೊತ್ತುಕೊಂಡು ಅಳತೊಡಗಿದಳು. ಅಷ್ಟರಲ್ಲಿ ಸಿಂಗಾರೆವ್ವನಿಗೆ ಎಚ್ಚರವಾಯ್ತು. ಕೆಮ್ಮುತ್ತಲೇ ಎದ್ದಳು. ಈಚೀಚೆ ನಮಗೆ ಗಾಬರಿ ಆಗುವ ಹಾಗೆ ಗೂರುತ್ತಿದ್ದಳು. ಅಸ್ತಮಾ ಸೇರಿರಬೇಕೆಂದು ಡಾಕ್ಟರು ಮದ್ದು ಕೊಟ್ಟದ್ದು ಏನೇನೂ ಉಪಯೋಗವಾಗಿರಲಿಲ್ಲ. ಎದ್ದು ಕೂತು ಏನೇನೋ ಕೇಳಬೇಕೆಂದವಳು ಕೆಮ್ಮು ಬಂದು ಕೇಳಲಾಗದೆ ಹಾಗೆ ಒರಗಿದಳು. ಇಬ್ಬರೂ ಎದ್ದು ಅವಳ ಬಳಿಗೆ ಹೋದೆವು. ಬರಬರುತ್ತ ಕೆಮ್ಮಿನ ಹುಕಿ ಇನ್ನೂ ಹೆಚ್ಚಾಗಿ ಹೊಟ್ಟೆಯೊಳಗಿನ ಕರುಳು ಬಾಯಿಗೆ ಬಂದಾವೆಂಬಂತೆ ಎದೆ ಹಿಡಿದುಕೊಂಡು ಕೆಮ್ಮಿದಳು. ಹೋಳಾಗಿ ಆ ಈ ಕಡೆ ಹೊರಳಿ ಮಗ್ಗುಲಾಗಿ ಕೆಮ್ಮಿದಳು. ಹ್ಯಾಗೋ ಸಾವರಿಸಿ ಔಷಧಿ ಕುಡಿಸಿದೆ. ಉಬ್ಬರ ತುಸು ಕಮ್ಮಿಯಾಯ್ತು. ಗೌಡ್ತಿ,

“ಈಗ ನೆನಪಾತ ನೋಡs ಶೀನಿಂಗೀ, ಸಕ್ಕರ್ಯಾಗ ಬೆರಸಿ ಇಣಚೀ ರಕ್ತ ಹಾಕಿದರ ಕೆಮ್ಮು ಗಪ್ಪನ ಕಡಿಮ್ಯಾಗತೈತಿ. ನಾಳಿ ಇಣಚಿ ತರಸು” ಎಂದಳು. ಆಗಲೆಂದೆ.

ಮಾರನೇ ದಿನ ದೇಸಾಯಿಗೆ ದೊರೆಸಾನೀ ಕೆಮ್ಮಿಗೋಸ್ಕರ ಇಣಚೀ ರಕ್ತಬೇಕೆಂದು ಹೇಳಿದೆ. ಅವನು ತನ್ನಿಬ್ಬರು ಆಳುಗಳಿಗೆ ಹೇಳಿದ. ಅವರೋ ಹಾ ಹೂ ಕೂಡ ಹೇಳದೆ ಹೋದರು. ಅವರ ಸೊಕ್ಕುತನ ನೋಡಿ ನನಗೆ ಸಿಟ್ಟು ಬಂದರೂ ದೇಸಾಯಿ ಯಥಾಪ್ರಕಾರ ಇದ್ದ. ಬೇರೆ ಯಾರಿಗಾದರೂ ಹೇಳುತ್ತೀರೋ ಎಂಬಂತೆ ಅವನ ಮುಖ ನೋಡಿದೆ. ಅವನು “ಸಂಜೀವಳಗ ತರತಾರ ನೀ ಹೋಗು” ಅಂದ.

ಮಧ್ಯಾಹ್ನ ಸಿಂಗಾರೆವ್ವನ ಕೆಮ್ಮು ಇನ್ನೂ ಜಾಸ್ತಿಯಾಯ್ತು. ಸಂಜೆಗೆ ಇಣಚಿ ರಕ್ತ ಸಿಗುತ್ತಲ್ಲ, ಕೊಟ್ಟರಾಯ್ತೆಂದು ಸುಮ್ಮನಿದ್ದೆ. ಸಂಜೆಯಾಗಿ ಕತ್ತಲೂ ಆಯ್ತು. ಆಳುಗಳು ಬಂದರು. ಕೇಳಿದರೆ “ಸಿಗಲಿಲ್ಲ” ಎಂದರು. ಹಾಗೆಂದು ದೇಸಾಯಿಗೆ ಹೇಳಿದರೆ “ನಾಳಿ ತರತಾರ ಬಿಡು” ಎಂದು ಹೇಳಿ ಆಳುಗಳಿಗೆ ಕಟ್ಟಪ್ಪಣೆ ಮಾಡುವಂತೆ “ನಾಳಿ ತಗೊಂಬರ‍್ಯೋ, ಮರೀಬ್ಯಾಡ್ರಿ” ಅಂದ. ಅವರು ಈ ಸಲವೂ ಹಾ ಹೂ ಎಂದು ಹೇಳಲಿಲ್ಲ.

ಹಾಗೇ ಅಡಿಗೆಮನೆಗೆ ಹೋಗಿ ಬರುತ್ತಿದ್ದೆ. ಕೊಟ್ಟಿಗೆಯಲ್ಲಿನ್ನೂ ದೀಪ ಹಚ್ಚಿರಲಿಲ್ಲ. ಆಳುಗಳಿಗೆ ಅದರ ದರಕಾರ ಇದ್ದರಲ್ಲವೆ? ದನ ಕಟ್ಟಿ, ತಂದ ಮೇವನ್ನೆಲ್ಲ ದಯಮಾಡಿ ಹಾಕಿ ಪಟ್ಟಾಡಲಿಕ್ಕೆ ಹೊರಟು ಹೋಗಿದ್ದರು. ಇನ್ನವರು ಹಾಜರಾಗುವುದು ಊಟಕ್ಕೇ. ಈ ನಡುವೆ ಅರಮನೆಯಲ್ಲಿ ಯಾರು ಸತ್ತರೂ ಹಣಿಕಿ ಹಾಕುವವರಲ್ಲ. ಇದು ಗೊತ್ತಾಗಿ ಅಲ್ಲಿದ್ದ ಕಂದೀಲು ತರಬೇಕೆಂದು ಕೈ ತಡಕುತ್ತ, ಕಾಲು ತಡವರಿಸುತ್ತ ಹೊರಟೆ. ಬಾಗಿಲು ಸರಿದ ಸದ್ದಾಯುತ. ಹುಚ್ಚಯ್ಯನ ಭೂತದ ನೆನಪಾಯ್ತು. ಧೈರ್ಯ ಸಾಲದೆ ಹಿಂದಿರುಗುತ್ತಿದ್ದೆ. ಹಿಂದಿನಿಂದ ಸರ್ರನೇ ಯಾರೋ ನನ್ನನ್ನೆಳೆದು ಬಾಯಿ ಮುಚ್ಚಿ ಬಿಗಿ ಹಿಡಿದರು. ಗಾಬರಿಯಾಗಿ ಮೂತ್ರ ಬಸಿದು ತೊಡೆ ಒದ್ದೆಯಾಯ್ತು. ಹಿಡಿದವನು “ಒದರಬ್ಯಾಡ, ನಾನು” ಅಂದ. ಅದು ಮರ್ಯಾನ ದನಿಯೆಂದು ಗುರುತಾಗಿ ತುಸ ಜೀವ ಬಂತು. “ಇಕಾ ಇಣಚಿ, ಸಿಂಗಾರೆವ್ವಗ ಕೊಡು” ಎಂದು ಹೇಳಿ ಮೆತ್ತಗಿನ ಎರಡು ಇಣಚಿಗಳನ್ನ ನನ್ನ ಕೈಗಿಟ್ಟ. ಪ್ರಾಣ ಹಾರಿ ಬಹಳ ಹೊತ್ತಾಗಿರಲಿಲ್ಲವೆಂದು ಕಾಣುತ್ತದೆ; ಅವುಗಳ ಮೈಯಿನ್ನೂ ಬಿಸಿಬಿಸಿಯಾಗಿತ್ತು. ಸೈ ಎಂದು ಹೊರಟೆ. ಮತ್ತೆ ನನ್ನ ರಟ್ಟೆ ಹಿಡಿದೆಳೆದು “ನಾ ಕೊಟ್ಟಿನಂತ ಹೇಳಬ್ಯಾಡ” ಎಂದ. ಬಿಟ್ಟರೆ ಸಾಕಾಗಿತ್ತು. ನಾನು ಆಗಲೆಂದು ಹೇಳಿದ್ದು ಅವನಿಗಿರಲಿ ನನಗೂ ಕೇಳಿಸಲಿಲ್ಲ. ಬಾಯಿ ಒಣಗಿತ್ತು. ಬಿಟ್ಟಿದ್ದೇ ತಡ ಒಂದೇ ಉಸುರಿನಲ್ಲಿ ಅಂತಸ್ತಿಗೆ ಹಾರಿಬಿಟ್ಟೆ.

ನಿಂಗವ್ವ ಗೌಡ್ತಿಗೇ ಇಣಚಿ ಕೊಟ್ಟೆ. ಅವಳೇ ರಕ್ತ ಹಿಂಡಿ ಸಕ್ಕರೆಯಲ್ಲಿ ಬೆರೆಸಿಕೊಟ್ಟಳು. ನನ್ನ ಎದೆಬಡಿತವಿನ್ನೂ ನಿಂತಿರಲಿಲ್ಲ. ಮರ್ಯಾ ಹಿಡಿದಲ್ಲೆಲ್ಲ ಮೈ ಕೈ ನೋಯುತ್ತಿತ್ತು. ಕದ್ದು ಲಟಿಕೆ ಮುರಿದು ಅವನು ಸಾಯಲೆಂದು ಶಾಪ ಹಾಕಿದೆ. ಅಮವಾಸ್ಯೆಯ ದಿನ ಹಾಗೆ ಮಾಡಿದ್ದನಲ್ಲ, ಅವನು ಸೇಡು ತೀರಿತೆಂದುಕೊಂಡಿದ್ದೆ. ಇಣಚಿ ಕೊಟ್ಟು ಉಪಕಾರ ಮಾಡಿದ್ದ ನಿಜ. ಆದರೆ ಅರಮನೆಯ ಬಳಕೆ ತಪ್ಪಿರಲಿಲ್ಲವೆಂದಾಯಿತು. ಇನ್ನೂ ಹೊಂಚುತ್ತಿದ್ದಿರಬೇಕೆ? ಇದನ್ನು ದೊರೆಸಾನಿಗೆ ಹ್ಯಾಗೆ ಹೇಳೋದು? ಆ ದುಷ್ಟನಿಂದ ಅವಳನ್ನು ಕಾಪಾಡಬೇಕು, ಹ್ಯಾಗೆಂದು ಹೊಳೆಯಲ್ಲೊಲ್ಲದು. ಆತ ಬರೋದು ಹಿತ್ತಲ ಬಾಗಿಲಿಂದ ಅಲ್ಲವೆ? ಅದನ್ನು ನಾನೇ ಸಂಜೆ ದನ ಬಂದೊಡನೆ ಕೀಲೀ ಜಡಿದು ಭದ್ರಪಡಿಸಬೇಕೆಂದುಕೊಂಡೆ, ಅವನು ಛಾವಣಿ ಹಾರಿ ಬರಬಲ್ಲನೆಂದು ಗೊತ್ತಿದ್ದೂ, ಹೋಗಲಿ, ಇಣಚಿ ಬೇಕೆಂದು ಅವನಿಗ್ಯಾರು ಹೇಳಿದ್ದು?

ಆಶ್ವರ್ಯವೆಂದರೆ ಮಾರನೇ ದಿನ ಸಿಂಗಾರೆವ್ವನ ಕೆಮ್ಮು ಕಮ್ಮಿಯಾಯ್ತು. ಮೂರು ನಾಲ್ಕು ದಿನಗಳಲ್ಲಿ ಎದ್ದು ನಡೆದಾಡುವಂತಾದಳು. ಯಾವ ಗಳಿಗೆ ಹುಚ್ಚಯ್ಯ ಇಲ್ಲವೆ ಮರ್ಯಾ ಪ್ರತ್ಯಕ್ಷವಾಗುತ್ತಾರೆಂದು ಗೊತ್ತಿರಲಿಲ್ಲವಲ್ಲ. ಅಂಥದೇನೂ ನಡೆಯಲಿಲ್ಲವಾದ್ದರಿಂದ ನಾನೂ ನೆಮ್ಮದಿಯಿಂದಿದ್ದೆ. ಕೊನೆಗೆ ಗೌಡ ನಿಂಗವ್ವ ಗೌಡ್ತಿಯನ್ನು ಕರೆದೊಯ್ಯಲು ಖುದ್ದಾಗಿ ಬಂದ. ಆಗ ಮುದುಕಿಯ ಚಡಪಡಿಕೆ ಹೇಳತೀರದು. ಮಗಳಿಗೆ ಹೇಳಲಾರಳು, ಗೌಡ ಬಿಡಲಾರ; ಅಡಕೊತ್ತಿನಲ್ಲಿ ಸಿಕ್ಕವಳಂತೆ ಒದ್ದಾಡಿದಳು. ಇಷ್ಟು ದಿನ ತಾಯಿಯನ್ನಿಟ್ಟುಕೊಂಡು ಎರೆಯದೇ ಹ್ಯಾಗೆ ಕಳಿಸೋದು? ಅವಳನ್ನು ಎರೆಯುವವರು ಅಲ್ಲಿ ಯಾರಿದ್ದಾರೆಂದು ಸಿಂಗಾರೆವ್ವ “ನಾಳಿ ನೀರ ಹಾಕ್ಕೊಂಡು ನಾಡಿದ್ದ ಹೋಗೆವ್ವಾ. ನಾಳಿ ಮೊಲದ ಮಾಂಸ ಮಾಡಸ್ತೀನಿ” ಎಂದಳು. ಮೊಲದ ಮಾಂಸವೆಂದರೆ ಆ ಮುದುಕಿಗೆ ಪ್ರಾಣ. ಆ ಸಂಜೆ ದೇಸಾಯಿಗೆ “ನಾಳಿ ಒಂದ ಮೊಲ ತರಿಸಿರಿ” ಎಂದು ಹೇಳಿಯೂ ಬಿಟ್ಟಳು. ಆದರೆ ದೇಸಾಯಿ ವಿಚಾರ ಅವಳಿಗ್ಯಾಕೋ ಮರೆತಂತಿತ್ತು. ಸಂಜೆ ಮಾತು ಬೆಳಿಗ್ಗಿಲ್ಲ, ಬೆಳಗಿನ ಮಾತು ಸಂಜಿಗಿಲ್ಲ, ಬಹುಶಃ ಇಣಚೀ ತಂದುಕೊಟ್ಟವನು ಅವನೇ ಎಂದು ನಂಬಿ ಹಾಗೆ ಕೇಳಿದ್ದಾಳು.

ಮಾರನೇ ಬೆಳಿಗ್ಗೆ ನಾನೇ ಇನ್ನೊಮ್ಮೆ ದೇಸಾಯಿಯ ಜಂಬಕ್ಕೆ ತಟ್ಟುವ ಹಾಗೆ ಹೇಳಿದೆ. “ಮಾರಾಜರ್ಹಾಂಗ ಇದ್ದೀರಿ, ಬ್ಯಾಟಿ ಆಡಿ ಒಂದು ಮೊಲ ತರಬಾರದೇನ?” ಅದವನ ಒಳಗಿಳಿದು ಖುಷಿಯ ಅಲೆಗಳನ್ನೆಬ್ಬಿಸಿತು. ಆದರೂ ಸರಿಯಾಗಿ ಹೇಳಿಸಿಕೊಳ್ಳಬೇಕೆಂದು “ಮಾರಾಜರ‍್ಹಾಂಗ ಅಲ್ಲಬೇ ಮಾರಾಜರs ಅನ್ನು” ಅಂದ. “ಅನ್ನಾಕೇನು ಮಾರಾಜರs ಅದೀರಿ. ಹುಲಿ ಬ್ಯಾಟಿ ಆಡಾವರಿಗೆ ಮೊಲ ಏನ ದೊಡ್ಡದ್ದು?” – ಹೀಗೆ ಹೇಳಿದ್ದೇ ತಡ ಅಯ್ಯಯ್ಯಯ್ಯೊ ಅವನ ಖುಶಿಯೇ – ತೊಡೆ ತಟ್ಟಿಕೊಂಡು ಪಕಪಕ ನಗೋದೇ? ಈತನಿಂದ ಎಷ್ಟು ಸುಲಭವಾಗಿ ಕೆಲಸ ತೆಗೆಯುವುದು ನನಗೆ ಈ ಮೊದಲೇ ಹೊಳೆಯಲಿಲ್ಲವಲ್ಲಾ ಎಂದುಕೊಂಡೆ. ದಂಟಿನಂಥ ದೇಹ ಬಳುಕಿಸಿ ಅವ ನಗೋದನ್ನ ನೋಡಿ ನಾನು ನಕ್ಕರೆ ಅವನು ಅಳ್ಳಳ್ಳೆ ತಟ್ಟಿಕೊಂಡು ನಕ್ಕ. “ಏ ಕಾಳ್ಯಾ ನಿಂಗ್ಯಾ ಬರ್ಯೊ ಇಲ್ಲಿ. ಕೇಳಿದಿರೇನ್ರೊ?” ಎಂದು ಕರೆದ. ಅವರ್ಯಾರೂ ಸಮೀಪ ಬರಲೂ ಇಲ್ಲ. ನಗಲೂ ಇಲ್ಲ. ಅಂತೂ ಬಂದೂಕು ಹಿಡಿದುಕೊಂಡು ಮಹಾರಾಜ ಹೊರಟ. ಬೇಟೆಗೆ ಹೋಗುವುದೆಂದರೆ ಆ ದಿನದ ಕೆಲಸಕ್ಕೆ ಸೂಟಿಯೆಂದು ಕಾಳ್ಯಾ, ನಿಂಗ್ಯಾ ಬೆನ್ನು ಹತ್ತಿದರು.

ಸಂಜೆ ನಿಜವಾಗಿ ಎರಡು ಮೊಲ ಹೊಡೆದು ತಂದರು! ಇನ್ನ ನಮ್ಮ ದೇಸಾಯರಿಗೆ ಪರಾಕು ಹೇಳಿ ಅವರ ತಾರಕ ಕೇಳಬೇಕಲ್ಲ ಎಂದು ಪಡಸಾಲೆಗೆ ಹೋದೆ. ದೇಸಾಯಿ ಕೈಕಾಲು ಅಗಲವಾಗಿ ಹರವಂಚಿ ಕುರ್ಚಿಯ ಮೇಲೆ ಬಟ್ಟೆ ಹೊದಿಸಿದ ಹಾಗೆ ಮೈ ಒಗೆದು ಕತ್ತು ಚೆಲ್ಲಿ ಬಾಯಿ ತೆರೆದುಕೊಂಡು ಬಿದ್ದಿದ್ದ. ಮುಖ ಬಿಳಿಚಿ ಮೂಗು ಕಿವಿಚಿಕೊಂಡಿತ್ತು. ದಿಗಿಲಾಗಿ “ದೇಸಾಯರs” ಅಂದೆ. ಕತ್ತೆತ್ತದೆ ಅಲ್ಲೇ ಕಣ್ಣು ತೆರೆದು “ಹಾ” ಅಂದ. “ಯಾಕ್ರೀ ಏನಾಯ್ತು?” ಅಂದೆ. ಮೆಲ್ಲಗೆ “ದಣಿವು” ಅಂದ. ಸುಕುಮಾರನಲ್ಲವೆ, ಆಗಿರಬಹುದೆಂದುಕೊಂಡೆ.

ಭರ್ಜರಿಯಾಗಿ ಮೊಲದ ಸಾರು, ಪಲ್ಯ ಮಾಡಿದ್ದೆ. ದೇಸಾಯಿ ಮಂಚಬಿಟ್ಟು ಕೆಳಗಿಳಿಯಲೇ ಇಲ್ಲ. ಅಲ್ಲೇ ಒಯ್ದು ಕೊಟ್ಟಿದ್ದಾಯ್ತು. ಗೌಡ ಮಾತ್ರ ಮತ್ತೆ ಮತ್ತೆ ನೀಡಿಸಿಕೊಂಡು ಉಂಡು “ಶೀನಿಂಗೀ ನಾಳಿ ಬೆಳಿಗ್ಗಿ ಒಂದ ರೊಟ್ಟಿಗಾಗೋವಷ್ಟು ಪಲ್ಯ, ಸಾರು ಇಡು” ಅಂದ.

ಬೆಳಿಗ್ಗೆ ಬಿಸಿ ರೊಟ್ಟಿ ಮಾಡಿದ್ದೆ. ಉಳಿದ ಪಲ್ಯ ಸಾರಿನೊಂದಿಗೆ ನ್ಯಾರೇ ಮಾಡಿಯೇ ಗೌಡ ಗೌಡ್ತಿ ಹೊರಟರು. ಬಳೆಯ ಬಗ್ಗೆ ಕೇಳಿದರೆ ಏನು ಹೇಳಬೇಕೆಂದು ಕೈಕೈ ಹೊಸೆಯುತ್ತಿದ್ದ ಗೌಡ್ತಿಗೆ “ಈಗ ಆ ಬಳಿ ಒತ್ತೇ ಇಟ್ಟಾರಂತ, ಆಮ್ಯಾಲ ಕೊಡತಾಳಂತ ಹೇಳು” ಎಂದೊಂದು ಉಪಾಯ ಹೇಳಿಕೊಟ್ಟಿದ್ದೆ. ಅವಳು ಹಾ ಎಂದು ಚಪ್ಪಾಳೆ ತಟ್ಟಿ “ಆ ಲಪೂಟಗ ಮೋಸ ಮಾಡಕ ಇದs ಮಾತ ಸೈ” ಎಂದು ಒಪ್ಪಿಕೊಂಡಿದ್ದಳು. ಅಂತೂ ಬಳೆಯ ಮಾತು ಸಿಂಗಾರೆವ್ವನ ತನಕ ಬರದ ಹಾಗೆ ನೋಡಿಕೊಂಡಿದ್ದೆ.

ತಂದೆತಾಯಿಗಳನ್ನು ಸಿಂಗಾರೆವ್ವ ತೊಲೆಬಾಗಿಲ ತನಕ ಕಳಿಸಿಬರಲು ಹೋದಳು. ದೇಸಾಯಿ ಈಗಲೂ ಕಾಲು ನೋವೆಂದು ಮಂಚ ಬಿಟ್ಟು ಇಳಿಯಲೇ ಇಲ್ಲ. ನಾನೂ ಹೊರಟ್ಟಿದ್ದೆ. ಅಷ್ಟರಲ್ಲಿ ಕೊಟ್ಟಿಗೆಯಲ್ಲಿ ಖನ್ ಎಂದು ಸದ್ದಾಯಿತು. ಹೋಗಿ ನೋಡಿದರೆ ದೂರದಲ್ಲಿ ಹೋಗುತ್ತಿದ್ದ ಗೌಡನನ್ನು ಕಿಡಕಿಯಿಂದ ಖೆಕ್ಕರಿಸಿ ಕೆಂಡಗಣ್ಣಿಂದ ನೋಡುತ್ತ ಮರೆಪ್ಪ ನಿಂತಿದ್ದ! ಮೂಲೆಯಲ್ಲಿದ್ದ ನೇಗಿಲ ಕುಳವನ್ನು ಸಿಟ್ಟು ತಡೆಯದೆ ಗೋಡೆಯ ಕಡೆಗೆಸೆದಿದ್ದ. ಅದು ಗೂಟಗಲ್ಲಿಗೆ ತಾಗಿ ಸಪ್ಪಳ ಮಾಡಿ ಅಲ್ಲೇ ಬಿದ್ದಿತ್ತು. ಸದ್ಯ ಪಕ್ಕದಲ್ಲೇ ಇದ್ದ ಎತ್ತಿಗೆ ತಾಕಿದ್ದರೆ ಅದಲ್ಲೇ ಗೊಟಕ್ಕೆನ್ನುತ್ತಿತ್ತು.

* * *