ಮಾರನೇ ದಿನ ಹುಚ್ಚಯ್ಯನ ಹೆಣಕ್ಕೆ ಮರೆವಣಿಗೆ ಮಾಡಿ ಮಣ್ಣು ಮಾಡಿದರು…..

ಇಲ್ಲಿ ಓದುಗರ ಕ್ಷಮೆ ಕೋರಿ ಮೆರವಣಿಗೆಯ ಬಗ್ಗೆ ಒಂದೆರಡು ಮಾತು ಸೇರಿಸುತ್ತೇನೆ; ಹುಚ್ಚಯ್ಯ ಸತ್ತಿದ್ದನ್ನೂ ಅವನ ಹೆಣಕ್ಕೆ ಮೆರವಣಿಗೆ ಮಾಡಿ ಸಮಾಧಿ ಮಾಡಿದ್ದನ್ನೂ ನಾನು ಕಣ್ಣಾರೆ ಕಂಡಿದ್ದೆ. ಆದರೆ ಹುಚ್ಚಯ್ಯ ಅರಮನೆಯಲ್ಲಿ ಇಂಥ ವಿಚಿತ್ರ ರೀತಿಯಲ್ಲಿ ಸತ್ತ ವಿಚಾರ ಆಗ ನಮಗ್ಯಾರಿಗೂ ತಿಳಿಯದು. ದೊಡ್ಡವರಿಗೂ ತಿಳಿದಿರಲಿಲ್ಲವೆಂದು ನನ್ನ ನಂಬಿಕೆ. ಅದು ಜುಲೈ ತಿಂಗಳ ಕಾಲವಿರಬೇಕು. ಇನ್ನೂ ಮಳೆಯಾಗಿರಲಿಲ್ಲ. ಆದ್ದರಿಂದ ಬಿತ್ತನೆಯಾಗಿರಲಿಲ್ಲ. ನಮ್ಮ ಭಾಗದಲ್ಲಿ ಆ ತಿಂಗಳೂ ಮಳೆಯಾಗಲಿಲ್ಲವೆಂದರೆ ಅದು ಬರಗಾಲದ ವರ್ಷವೆಂದೇ ಲೆಕ್ಕ. ಇಂಥ ನಿಸರ್ಗದ ಕ್ರೌರ್ಯವನ್ನು ನಾನು ಅನಂತರದ ದಿನಗಳಲ್ಲೂ ಕಾಣಲಿಲ್ಲ. ಸೂರ್ಯ ಹುಟ್ಟುತ್ತಲೇ ಉರಿಯುತ್ತಿದ್ದ. ಉರಿಯುತ್ತಲೇ ಏರಿಳಿದು ಮುಳುಗುತ್ತಿದ್ದ. ಇಡೀ ಹಗಲು ಕೆಂಡಗಣ್ಣಿನಿಂದ ನಮ್ಮನ್ನು ಹುರುಪಳಿಸುತ್ತಿದ್ದ. ಮುಂಜಾನೆ ಸಂಜೆಗಳಲ್ಲಿ ಕೂಡ ಸ್ವಚ್ಛವಾದ ಬಿಸಿಲು, ಆ ಬಿಸಿಲಿಗೆ ಕಾವುಗಳಿರುತ್ತಿದ್ದವು. ಬೆಳಗಿನ ಹಾಸಿಗೆಯಲ್ಲೇ ನಾವು ಬೆವರುತ್ತಿದ್ದೆವೆಂದರೆ ನೀವು ಊಹಿಸಬಹುದು.

ಒಂದಿಷ್ಟು ತಂಗಾಳಿಯಾದರೂ ಬೀಸೀತೆಂದರೆ ನಮ್ಮೂರಿನ ಮೇಲೆ ಅದೂ ಸಿಟ್ಟಾಗಿತ್ತು. ಅಷ್ಟಿಷ್ಟು ಗಿಡಮರ ಕಂಟಿಗಳಿದ್ದವು. ಆದರೆ ಬಿಸಿಲಿಗೆ ಅವುಗಳ ಎಲೆ ಹೊತ್ತಿ ಕರಕಾಗಿ ಉದುರಿ ಹೋಗಿ ನಮ್ಮೂರಿಗೆ ಚೈತ್ರಬಂದ ಜ್ಞಾಪಕವನ್ನೇ ಅಳಿಸಿಹಾಕಿದ್ದವು. ನಾವಾಗ ದನ ಕಾಯುತ್ತಿದ್ದುದರಿಂದ ಖುದ್ದಾಗಿ ನೋಡಿದ್ದೇನೆ, – ದನಕರುಗಳು ಮಧ್ಯಾಹ್ನದ ಬಿಸಿಲುಕುದುರೆಗಳನ್ನೇ ನೋಡುತ್ತ, ಬಾಯ್ದೆರೆದು ನೀರಿನ ಕನಸು ಕಾಣುತ್ತ ಓಡುತ್ತಿದ್ದವು. ಒಂದಾದರೂ ಕಾಗೆ ಗುಬ್ಬಿಗಳಂಥ ಸರ್ವೆ ಸಾಮಾನ್ಯ ಹಕ್ಕಿ ಆಗ ನಮ್ಮೂರ ಸೀಮೆಯಲ್ಲಿದ್ದಂತೆ ನನಗೆ ನೆನಪಿಲ್ಲ. ಹೊಲಗಳೋ ಕಾಲಿಟ್ಟರೆ ಸುಡುವ ಬಾಣಲೆಯಾಗಿದ್ದವು. ಮರಡಿಯ ಬಂಡೆಗಲ್ಲುಗಳು ಕೂಡ ಒತ್ತಿ ಬರುತ್ತಿದ್ದ ಬಿಕ್ಕಳಿಕೆಯನ್ನು ಮೊಳಕಾಲಲ್ಲಿ ತಲೆ ಹುದುಗಿ ತಡೆದುಕೊಳ್ಳುತ್ತಿರುವಂತೆ ಕೂತಿದ್ದವು. ಆಗಿನ ನಮ್ಮೂರ ನಿಸರ್ಗದ ಬಣ್ಣಗಳೆಂದರೆ ಇವೆರಡೇ – ಆಕಾಶದ ನೀಲಿಬಣ್ಣ, ನೆಲದ ಬೂದುಬಣ್ಣ, ಇವು ಕೂಡ ಕಣ್ಣಿಗೆ ಕ್ರೂರವಾಗಿದ್ದವು. ಧೂಳೆದ್ದರೆ ಇವರೆಡರ ಅಂತರ ಇಲ್ಲವಾಗಿ ಒಂದಾಗುತ್ತಿದ್ದುವು. ಧೂಳು ಕರಗಿದಾಗ ಇವುಗಳ ಮಧ್ಯದ ಕ್ಷಿತಿಜ ಬರೀ ಒಂದು ಸಣ್ಣ ಬಿಳಿಗೆರೆಯಾಗಿ ಕಾಣುತ್ತಿತ್ತು. ಆದರೆ ಅದರಿಂದ ನಮ್ಮಲ್ಲಿ ಯಾವ ಆಶೆಗಳೂ ಮೂಡುತ್ತಿರಲಿಲ್ಲ.

ಜನ ಹುಬ್ಬುಗೈ ಹಚ್ಚಿಕೊಂಡು ಬರೀ ಆಕಾಶದ ಕಡೆ ನೋಡುತ್ತಿದ್ದರು; ಅಥವಾ ಜನ ಜೀವವನ್ನು ಕಣ್ಣಿನಲ್ಲೇ ಹಿಡಿದ್ದರು. ಮತ್ತು ಆ ಕಣ್ಣುಗಳನ್ನು ಬಾನಿನಲ್ಲಿ ನಟ್ಟಿದ್ದರು. ಸಣ್ಣದೊಂದು ತಂಗಾಳಿ ಬೀಸಿದರೂ ಹಾ ಎಂದು ಹಾರೈಸಲು ಜನ ಸಿದ್ಧರಿದ್ದರು. ಮಳೆ ಬೇಡ, ಒಂದು ಮೋಡ ಕಂಡರೂ ಕುಣಿದಾಡಲು ಸಿದ್ಧರಿದ್ದರು. ಆದರೆ ಒಂದಾದರೂ ಮೋಡ ಕಾಣಿಸುತ್ತಿರಲಿಲ್ಲ. ಬರೀ ಬಾಯಾರಿದ ಬಿಸಿಲ್ಗುದುರೆಗಳೇ ಊರ ಸುತ್ತ ಓಡಾಡುತ್ತಿದ್ದವು.

ಇನ್ನೂ ರಾತ್ರಿಗಳೋ ಬರೀ ಹಳವಂಡಗಳಿಂದ, ನಿಟ್ಟುಸಿರುಗಳಿಂದ, ಕನಸು ಕಲ್ಪನೆಗಳಿಂದ ಭಯದ ಕಥೆಗಳಿಂದ ತುಂಬಿಕೊಂಡು ಇಡೀ ಊರು ಕುದಿಯುತ್ತಿರುವ ಅನುಭವವಾಗುತ್ತಿತ್ತು. ಕತ್ತಲೆಯಂತೂ ಬದುಕಿದ್ದವರನ್ನು ಉಸಿರುಗಟ್ಟಿಸಿ ಸಾಯಿಸುವ ದಟ್ಟ ಕರಿಹೊಗೆಯಂತೆ ಆವರಿಸುತ್ತಿತ್ತು. ಇನ್ನವರ ಕನಸುಗಳೋ; ಅರಮನೆಯ ನೆತ್ತಿಯ ಮೇಲೆ ಹುಚ್ಚಯ್ಯ ಸಮಾಧಿ ಕೂತಿದ್ದನೆಂದೂ ಅವನ ಮೇಲೆ ಹಲ್ಲಿಗಳು ಹರಿದಾಡುತ್ತಿದ್ದವೆಂದೂ ಒಬ್ಬ ಗರತಿಗೆ ಕನಸಾಗಿತ್ತು! ಭಾರೀ ಮಳೆಬಿದ್ದು ಅರಮನೆಯ ನಡುಗಂಬ ಸರಿದು ಬಿದ್ದ ಹಾಗೆ ಇನ್ನೊಬ್ಬ ಗರತಿಗೆ ಕನಸಾಗಿತ್ತು! ಆಕಾಶವನ್ನೇ ದಿಟ್ಟಿಸುತ್ತ ಜನ ಮಲಗುತ್ತಿದ್ದರಲ್ಲ, ಏನೇನೋ ದೃಶ್ಯಗಳು ಕಾಣಿಸುತ್ತಿದ್ದವು. ಆಕಾಶದಲ್ಲಿ ನಾಲ್ಕು ಜನ ಹೆಣ ಹೊತ್ತೊಯ್ಯುತ್ತಿದ್ದರೆ ಹಿಂದಿನಿಂದ ಹೆಂಗಸೊಬ್ಬಳು ಎದೆ ಎದೆ ಬಡಿದುಕೊಂಡು ಅಳುತ್ತ ಬೆನ್ನು ಹತ್ತುತ್ತಿದ್ದಳಂತೆ. ಉತ್ತರದಿಂದ ದಕ್ಷಿಣಕ್ಕೆ ಹೋಗುವ ಈ ಹೆಣದ ಮೆರವಣಿಗೆ ಮಧ್ಯರಾತ್ರಿ ಅನೇಕ ದಿನಗಳ ತನಕ ಜನಕ್ಕೆ ಕಾಣಿಸುತ್ತಿತ್ತಂತೆ. ನಾವು ಹುಡುಗರು ನಿದ್ರಿಸುತ್ತಿದ್ದೆವಾದ್ದರಿಂದ ನಮಗೆ ಕಂಡಿರಲಿಲ್ಲ. ಆದರೆ ಆ ಬಗೆಗಿನ ಭಯಂಕರ ಮಾತುಕತೆಗಳನ್ನು ಕೇಳಿ, ಹೆದರಿ ರಾತ್ರಿಯಾಯಿತೆಂದರೆ ಮನೆ ಸೇರಿಬಿಡುತ್ತಿದ್ದೆವು. ಆಮೇಲೆ ಯಾವ ಕಾರಣಕ್ಕೂ ಹೊರಗೆ ಕಾಲಿಡಲು ನಿರಾಕರಿಸುತ್ತಿದ್ದೆವು.

ಮಳೆ ಬರಿಸುವ ಯಾವ ಆಚರಣೆಯನ್ನೂ ಜನ ಬಿಟ್ಟಿರಲಿಲ್ಲ. ಯಾವ ದೇವರನ್ನೂ ಮರೆತಿರಲಿಲ್ಲ. ಕಪ್ಪೆಕೊಂದು, ಶಿವನನ್ನು ಬಯ್ಯುತ್ತ ಆಕಾಶದ ಕಡೆ ಎರಚಿದ್ದರು; ಶಿವ ಮಳೆ ಕರುಣಿಸಿರಲಿಲ್ಲ. ಸೆಗಣೀ ಗುಂಪಿಯಿಟ್ಟು ಕರ್ರವ್ವನ ಹೆಸರಿನಲ್ಲಿ ಕಾದು ಮೂರನೇ ದಿನ  ಕೆದರಿ ನೋಡಿದ್ದರು; ಕರ್ರೆವ್ವ ಹುಳ ಬೀಳಿಸಲಿಲ್ಲವಾದ್ದರಿಂದ ಮಳೆ ಬರಲಿಲ್ಲ. ಅವಮಾನವಾಗಿ ಮಳೆ ತರಲೆಂದು ಬಂಡೆವ್ವನ ಮೂರ್ತಿಗೆ ಸೆಗಣಿ ಬಳಿದು ಬೆನ್ನು ಮೇಲಾಗಿ ಚೆಲ್ಲಿದ್ದರು; ಅವಳೂ ಮಳೆ ತರಲಿಲ್ಲ. ಪೂಜಾರಿಯ ಕಾರಣಿಕದಂತೆ ಕುಮುದವ್ವ ಕುದುರೆ ಏರಿ ಪಶ್ವಿಮದ ಆಕಾಶದಲ್ಲಿ ಕಾಣೆಯಾಗಿದ್ದವಳು ಇನ್ನೂ ತಿರುಗಿ ಬಂದಿರಲಿಲ್ಲ.

ಇಂಥ ಸಮಯದಲ್ಲಿ ನಮ್ಮೂರಿಗೆ ಅಗತ್ಯವಾಗಿ ಬೇಕಿದ್ದವನು ಹುಚ್ಚಯ್ಯ. ಮಳೆ ತಂದರೆ ಅವನೇ ತರಬಲ್ಲನೆಂದು, ಬಾರದ ಮಳೆಯನ್ನು ಅಟ್ಟಿಸಿಕೊಂಡಾದರೂ ತರಬಲ್ಲನೆಂದು ಜನರ ನಂಬಿಕೆ. ಆದರೆ ಹುಣ್ಣಿಮೆಯ ಮಾರನೇ ದಿನ ಕಾಣೆಯಾಗಿದ್ದವನು ಈತನಕ ಅವನ ಪತ್ತೆಯಿರಲಿಲ್ಲ. ಅವನೆಲ್ಲೋ ಮಳೆ ತರಲಿಕ್ಕೇ ಹೋಗಿರಬಹುದೆಂದು ಬಹಳ ಜನ ನಂಬಿದ್ದರು. ಸುದೈವದಿಂದ ಇನ್ನೂ ಯಾರೂ ಸತ್ತಿರಲಿಲ್ಲ. ಹೊಲಮನೆ ಕೆಲಸವಿರಲಿಲ್ಲವಲ್ಲ, ಜನ ಗೋಕಾವಿಗೆ, ಬೆಳಗಾವಿಗೆ ಹೋಗಿ ಅಷ್ಟಿಷ್ಟು ದಿನಬಳಕೆಯ ಬಾಳ್ವೆ ಸಾಮಾನುಗಳನ್ನು ಕದ್ದು ತರುತ್ತಿದ್ದರು. ಬೇರೆ ಹಳ್ಳಿಗಳಿಂದ ಮೇವು ಕನಿಕೆ ಕೂಡ ಕದ್ದು ತರುತ್ತಿದ್ದರು. ಸಾಧ್ಯವಿರಲಿಲ್ಲವಾದ್ದರಿಂದ ಕೆರೆಬಾವಿಗಳನ್ನು ಕದ್ದು ತಂದಿರಲಿಲ್ಲ. ನೀರಿನ ತೊಂದರೆ ಏನೆಂದು ದನಕಾಯುವ ನಮಗೇ ಗೊತ್ತು. ದನಗಳಿಗೆ ನೀರು ಕುಡಿಸಲು ಎರಡು ಮೈಲಿ ದೂರದ ಮಕ್ಕಳ ಗೇರಿಯ ಕೆರೆಗೆ ಹೋಗುತ್ತಿದ್ದೆವು.

ಅಮವಾಸ್ಯೆಯ ಮರುದಿನ ನಾವು ಊರಬಳಿಯ ಹೊಲಗಳಲ್ಲಿ ದನ ಬಿಟ್ಟುಕೊಂಡು ಕೂತಿದ್ದೆವು. ಅಷ್ಟರಲ್ಲಿ ಹುಚ್ಚಯ್ಯ ಕುಮುದವ್ವನ ಗುಡಿಯಲ್ಲಿ ಕೂತವನು ಹಾಗೇ ಸತ್ತಿದ್ದಾನೆಂದು ಸುದ್ದಿ ಬಂತು! ಸುದ್ದಿಯ ಹಿಂದಿನಿಂದಲೇ ಗಂಡಸರು ಗುಂಪುಗುಂಪಾಗಿ ಕುಮುದವ್ವನ ಗುಡಿಯ ಕಡೆ ನಡೆದರು. ನಾವೂ ಅವಸರದಲ್ಲಿ ನಮ್ಮ ನಮ್ಮ ದನಗಳನ್ನು ಓಡಿಸಿಕೊಂಡು ಮನೆಹೋಗಿಸಿ, ಗುಡಿಯತ್ತ ಓಡಿದೆವು. ಜನ ಆಗಲೇ ಗುಂಪುಗುಂಪಾಗಿ ಮಾತಾಡುತ್ತಿದ್ದರು ತುಸು ಹೊತ್ತಿನಲ್ಲೇ ಊರಿನ ಪ್ರತಿಯೊಬ್ಬ ಗಂಡಸು ಮತ್ತು ಹುಡುಗ ಗುಡಿಯಲ್ಲಿದ್ದರು! ಮಳೆ ತರಲಿಕ್ಕೆ ಹೋದ ಹುಚ್ಚಯ್ಯ ತಪಸಿಗೆ ಕೂತ ಭಂಗಿಯಲ್ಲೇ ಶಿವಲೋಕ ಸೇರಿದ್ದ. ಆತ ಎಂದಿನಿಂದ ಕೂತಿದ್ದ, ಯಾವಾಗ ಸತ್ತ ಇತ್ಯಾದಿ ಪ್ರಶ್ನೆಗಳು ಯಾರಿಗೂ ಹೊಳೆಯಲೇ ಇಲ್ಲ. ಯಾಕೆಂದರೆ ಹುಚ್ಚಯ್ಯ ಇಕಾ ಇಲ್ಲಿದ್ದಾನೆ ಎಂದರೆ ಅಲ್ಲಿರುತ್ತಿದ್ದ. ಅಕಾ ಅಲ್ಲಿದ್ದಾನೆಂದರೆ ಮಾಯವಾಗಿರುತ್ತಿದ್ದ. ಅಂಥವನ ನೆಲೆ ಪಾಮರರಿಗೆ ತಿಳಿಯೋದು ಹ್ಯಾಗೆ! ನೀವು ನಂಬುತ್ತೀರೋ ಬಿಡುತ್ತೀರೋ ಜನಕ್ಕೆ ಅವನ ಬಗೆಗಿನ ಭಕ್ತಿ ಇಮ್ಮಡಿಯಾಯ್ತು. ಪಕ್ಕದ ಹಳ್ಳಿಗಳಿಗೂ ಸುದ್ದಿ ಮುಟ್ಟುವುದು ತಡವಾಗಲಿಲ್ಲ. ತಂಡೋಪತಂಡವಾಗಿ ಭಕ್ತರು ಭಜನೆ ಮಾಡುತ್ತಲೇ ಬಂದರು. ಹೇಳಿಕಳಿಸದೆಯೇ ಊರೂರಿನ ಬಾಜಾಬಜಂತ್ರಿಯವರು ಬಂದರು. ನೋಡ ನೋಡುತ್ತಿರುವಂತೆ ಶಬ್ದವರಿಯದೆ ಉಸಿರುಗಟ್ಟಿದ ಊರಿನಲ್ಲಿ ದೊಡ್ಡ ಉತ್ಸವವೇ ಬಂದಿಳಿದಿತ್ತು. ಗುಡಿಯಲ್ಲಿ ಹೀಗಿದ್ದರೆ ಊರಿನಂಚಿಗೆ ಹೆಂಗಸರೆಲ್ಲ ಸೇರಿ ಕೈಕೈ ಮುಗಿಯುತ್ತಲೋ, ಹುಚ್ಚಯ್ಯನ ನಾಮಸ್ಮರಣೆ ಮಾಡುತ್ತಲೋ ಕಥೆ ಕಟ್ಟುತ್ತಲೋ ಕೇಳುತ್ತಲೋ ಗುಡಿಯತ್ತಲೇ ನೋಡುತ್ತ ನಿಂತಿದ್ದರು. ಇಡೀ ಊರಲ್ಲಿ ಒಂದಾದರೂ ನರಪಿಳ್ಳೆ ಇದ್ದ ಬಗ್ಗೆ ನನಗೆ ಅನುಮಾನ.

ಇನ್ನೂ ಯಾರೂ ಊಟ ಮಾಡಿರಲಿಲ್ಲವಾದ್ದರಿಂದ, ಆ ಮುನ್ನ ಹೆಣ ಮಣ್ಣು ಮಾಡಬೇಕಾದ್ದರಿಂದ ಬೇಗನೆ ವಿಮಾನಕಟ್ಟಿ ಸಿಂಗರಿಸಿದರು. ಹೆಣಕ್ಕೂ ಸಿಂಗಾರ ಮಾಡಿ ಅದರೊಳಗಿಟ್ಟು ಹೊತ್ತರು. ಬಾಜಾಬಜಂತ್ರಿಯವರು ಜಿದ್ದಿನಿಂದ ಬಾರಿಸತೊಡಗಿದರು. ಭಕ್ತರು ಹುಚ್ಚಯ್ಯ ಮಾರಾಜರಿಗೆ ಜಯಕಾರ ಕೂಗಿದರು. ಭಜನೆಯವರು ಒದರಿ ಒದರಿ ಹಾಡಿದರು. ಮೆರವಣಿಗೆ ಊರಿನತ್ತ ನಡೆಯಿತು. ಈ ಬಗೆಯ ಚೀರುದನಿಯನ್ನು ಮೂರು ತಿಂಗಳಿಂದ ಮರೆತದ್ದರಿಂದಲೋ, ಮಳೆಯಿಲ್ಲದ ಉಮ್ಮಳವೋ – ಅಂತೂ ನಾವು ಹುಡುಗರು ಭಾರೀ ಖುಶಿಯಲ್ಲೇ ಇದ್ದೆವು. ಮೆರವಣಿಗೆ ಊರು ತಲುಪಿದಾಗ ಹೆಂಗಸರು ಬಿಕ್ಕಿಬಿಕ್ಕಿ ಅಳುತ್ತಿದ್ದರು. ಕೆಲವರು ತಮ್ಮ ಹತ್ತಿರದ ನಂಟನನ್ನು ಕಳಕೊಂಡಂತೆ ಎದೆ ಎದೆ ಬಡಿದುಕೊಂಡು ಅತ್ತರು. ಆಗ ಮಾತ್ರ ನಾವೂ ಅತ್ತ ಹಾಗೆ ನನಗೆ ನೆನಪು. ಮನೆಮನೆಗೂ ಹೆಣ ನಿಲ್ಲಿಸಿ ನೀರು ನೀಡಿ ಕಾಯಿ ಒಡೆಸಿದರು. ಹೆಜ್ಜೆಹೆಜ್ಜೆಗೆ ಸುತ್ತಲಿನ ಹಳ್ಳಿಕನ ಬಂದು ಮೆರವಣಿಗೆ ಸೇರುತ್ತಲೇ, ಭಕ್ತಿ ಮಾಡುತ್ತಲೇ ಇದ್ದರು. ಹೆಚ್ಚೇನು, ಸ್ವಥಾ ದೇವರೇ ಸತ್ತಂತೆ ಜನ ದುಃಖವನ್ನು ಆಚರಿಸಿದರು.

ಮೆರವಣಿಗೆ ಅರ್ಧ ಊರಿನಲ್ಲಿ ಹಾದು ಅರಮನೆಯ ಕಟ್ಟೆಯ ಮುಂದೆ ಬಂದಿರಬೇಕು, ಒಂದು ಪವಾಡ ಘಟಿಸಿಬಿಟ್ಟಿತು. ಜನರ ಹುಚ್ಚೆದ್ದ ಕೂಗು ಆಕಾಶದಲ್ಲಿ ಹುದುಗಿದ್ದ ಮಳೆರಾಯನಿಗೆ ಮುಟ್ಟಿತೋ, ಹುಚ್ಚಯ್ಯ ಕೈಲಾಸಕ್ಕೆ ಹೋಗಿ ಮಳೆ ಕಳಿಸಿದನೋ – ಹಾ ಹಾ ಎನ್ನುವುದರೊಳಗೆ ಆಕಾಶದ ತುಂಬ ಕರಿಮೋಡ ಆವರಿಸಿ ಗುಡುಗತೊಡಿದವು. ನಮ್ಮ ಆಕಾಶದ ಗುಣ ನಮಗೆ ಗೊತ್ತಿಲ್ಲವೆ? ಆಗಷ್ಟೆ ನೋಡಿದಾಗ ಸಾರಿಸಿದ ನೆಲದಂತೆ ಹಸನಾಗಿದ್ದ ಬಾನಿನಲ್ಲಿ ಈಪರಿ ಅನಿರೀಕ್ಷಿತ ಮೋಡಗಳು ಬಂದು ಸೇರುವುದೆಂದರೇನು, ಮ್ಯಾಲೆತ್ತಿದ ಮುಖವನ್ನು ನಾವಿನ್ನೂ ಕೆಳಗೆ ಮಾಡಿರಲಿಲ್ಲ. ಧೋ ಧೋ ಧೋ ಎಂದು ಮಳೆ ಸುರಿಯತೊಡಗಿತು! ಜನ ಎಷ್ಟು ಹಿಗ್ಗಿದರೆಂದರೆ ಮುಗಿಲು ಹರಿದುಬಿದ್ದಂತೆ ಅಡಿಕೆ ಗಾತ್ರದ ಹನಿಮಳೆ ಜಡಿಯುತ್ತಿದ್ದರೆ ಅದಕ್ಕೆ ಮೈಯೊಡ್ಡಿ ಕುಣಿದಾಡಿದರು. ಒಬ್ಬರೂ ಮರೆಗೆ ಅವಿತುಕೊಳ್ಳಲೇ ಇಲ್ಲ. ಇದು ಹುಚ್ಚಯ್ಯನ ಕೊನೆಯ ಪವಾಡವೆಂದೂ ಅವನ ದಯದಿಂದಲೇ ಮಳೆಯಾಯಿತೆಂದೂ ಜನ ಕೂಗಿಕೂಗಿ ಮಾತಾಡುತ್ತ ಹುಚ್ಚಯ್ಯನಿಗೆ ಜಯಕಾರಗಳನ್ನು ಒದರತೊಡಗಿದರು. ಆ ಭಕ್ತಿ, ಆ ಆವೇಶ, ಆ ಹುಚ್ಚು – ಎಲ್ಲ ವಯಸ್ಸಿನವರು ಒಂದೇ ವಯಸ್ಸಿನವರಾಗಿ ಕುಣಿದರು, ಹಾಡಿದರು, ಹಾರಿದರು, ಕುಪ್ಪಳಿಸಿದರು. ಈಗ ವಾದ್ಯ, ಭಜನೆಗಳೆಲ್ಲ ಹಾರಿಹೋಗಿ, ಎಲ್ಲರೂ ಹೆಣ್ಣು ಗಂಡೆನ್ನದೆ ನೆತ್ತಿಯ ಮೇಲೆ ಮುಗಿದ ಕೈಗಳನ್ನು ಹೊತ್ತು –

ಹುಚ್ಚಯ್ಯ ಹುಚ್ಚಯ್ಯಾ
ನಮ್ಮಪ್ಪಾ ಹುಚ್ಚಯ್ಯಾ
ನನ್ನಯ್ಯಾ ಹುಚ್ಚಯ್ಯಾ

– ಎಂದು ಹಾಡುತ್ತಾ ಕುಣಿಯತೊಡಗಿದರು. ಆ ದಿನ ಹುಚ್ಚಯ್ಯ ಕುಮುದವ್ವನಿಗಿಂತ ಹೆಚ್ಚಿನ ದೇವರಾಗಿಬಿಟ್ಟ.

ಮರೆಪ್ಪ ಇಡೀ ಜನರ ಕಣ್ಣೊಳಗೆ ಸರಿಯಾಗೇ ಮಣ್ಣೆರಚಿದ್ದನೆಂದು ನನಗೆ ಈಗ ಅನಿಸುತ್ತದೆ. ಸಮಾಧಿ ಸ್ಥಿತಿಯಲ್ಲಿ ಹುಚ್ಚಯ್ಯನನ್ನು ಕೂರಿಸಿ ಸುದ್ದಿ ಹಬ್ಬಿಸಿದವನು ಅವನು ತಾನೆ? ಮಳೆ ಕಾಣದ ಜನಕ್ಕೆ ಅದೇ ಸಾಕಾಯಿತು. ಹುಚ್ಚಯ್ಯ ಹ್ಯಾಗೆ ಸತ್ತನೆಂಬ ನಿಜಸಂಗತಿ ಜನಕ್ಕೆ ಗೊತ್ತಾಗಿದ್ದರೆ ಹೆಣಕ್ಕೆ ಈ ರೀತಿ ಮೆರವಣಿಗೆ ಮಾಡುತ್ತಿದ್ದರೋ? ಗೊತ್ತಿಲ್ಲ, ಅಥವಾ ಹುಚ್ಚಯ್ಯನ ಬಗ್ಗೆ ಮೊದಲೇ ಭಕ್ತಿ ಇತ್ತಲ್ಲ, ಅರಮನೆಗೇ ಬೆಂಕಿ ಹಚ್ಚುತ್ತಿದ್ದರೋ? ದೊರೆಸಾನಿ, ಸರಗಂ ದೇಸಾಯಿ ಗತಿ ಏನಾಗುತ್ತಿತ್ತು? ಇವೆಲ್ಲ ಈಗಿನ ಊಹೆಗಳಷ್ಟೆ. ಆಗಿನ ನಿಜವೇ ಬೇರೆ ಅದೇ ಅನಿರೀಕ್ಷಿತ ಜಡಿಮಳೆ.

ಮೋಡಗಳು ಹ್ಯಾಗೆ ಹ್ಯಾಗೆ ಗುಡುಗಿದರೆ ಹಾಗೆ ಹಾಗೆ ನೆಲ ಸಂಕೋಚಗೊಂಡು ಭೀರುವಾಗಿ ನಿಂತಿತ್ತು. ಎಲ್ಲೆಲ್ಲಿ ಮಳೆ ಬಿದ್ದರೆ ಅಲ್ಲಲ್ಲಿಯ ಮಣ್ಣಿನಿಕ್ಕಟ್ಟುಗಳು ಸಡಲಿ ತೆರೆದು ಸುರಿವ ನೀರನ್ನು ಸ್ವಾಗತಿಸಿದ್ದವು. ಮಾರನೇ ದಿನ ನೋಡಿದರೆ ಹೊಲಗಳೇನು, ಮರಡಿಗಳೂ ಆಕಾರಗೆಟ್ಟು ಅಲ್ಲಲ್ಲಿ ಹಳ್ಳಬಿದ್ದಿದ್ದವು. ಏರಿನಿಂದ ನೀರಿಳಿದು ಹಳ್ಳ ಸೇರುವಲ್ಲಿ ಉಸುಕಿನ ದಿನ್ನೆಗಳೆದ್ದಿದ್ದವು. ಅಂಥ ಮಳೆಯನ್ನು ನಾನು ಇದುವರೆಗೂ ಕಂಡಿಲ್ಲ. ಅರಮನೆಯ ಮುಂದಿನ ದೊಡ್ಡಾಲದ ಮರದ ನಟ್ಟನಡುವಿನ ಟೊಂಗೆಯೇ ಮುರಿದು ಬಿದ್ದಿತೆಂದರೆ – ಹಾಳೆ ಹ್ಯಾಗಿತ್ತೆಂದು ನೀವೇ ಊಹಿಸಿಕೊಳ್ಳಿರಿ. ಅಂತೂ ಮಳೆ ಬಿತ್ತಲ್ಲ. ಒಂದು ಗಳಿಗೆ ತಡವಾದರೂ ಎಲ್ಲಿ ಹಂಗಾಮದ ಹದ ಹಾರಿ ಹೋಗುವುದೋ ಎಂದು ರೈತರು ಬಿತ್ತನೆಯ ಕಾರ್ಯದಲ್ಲಿ ತೊಡಗಿದರು. ಅರಮನೆ ಮಾತ್ರ ಮಳೆಯ ಆಘಾತದಲ್ಲಿ ತತ್ತರಿಸುತ್ತಿತ್ತು. ಇನ್ನು ಕೇಳಿರಿ:

* * *