ಆ ದಿನ ನಾವು ಕಣ್ಣಿಗೆ ಕಣ್ಣು ಹಚ್ಚಲಿಲ್ಲ. ದೇಸಾಯಿ ಬಂದಾಗ ಮರೆಪ್ಪ ಇರಲಿಲ್ಲವಾದರೂ ತಪ್ಪಿ ಕಣ್ಣಿಗೆ ಬಿದ್ದಿದ್ದರೆ ಏನು ಗತಿಯೆಂದು ಚಿಂತೆಯಾಗಿತ್ತು. ಅದರಿಂದ ಮರೆಪ್ಪನ ಚಾಕರಿ ಹೋಗುವುದಾದರೆ ಒಳ್ಳೆಯದೇ. ಆದರೆ ಸಿಂಗಾರೆವ್ವನಿಗೇನು ದಿಕ್ಕು? ಅವಳ ಎಡಗನ್ನೆಯ ಮೇಲೆ ಆಗ ದುರುಳನ ಐದೂ ಬೆರಳು ಹಾಗೆ ಹಚ್ಚಗೆ ಮೂಡಿದ್ದವು. ಮುಖ ಊದಿಕೊಂಡು ಅವಮಾನದ ಕರಾಳ ಭಾವನೆಗಳಿಂದ ವಿವರ್ಣವಾಗಿತ್ತು. “ನನ್ನ ಬಾಳ್ವೆ ಹಾಳ ಮಾಡಿದ; ನನಗೆ ವಿಷ ತಂದುಕೊಂಡs ಶೀನಿಂಗೀ” ಎಂದು ಗೋಳಾಡಿ ಅತ್ತಳು. ನನಗೂ ಮುಖ ತೋರಿಸದೆ ನನ್ನ ತೊಡೆಯಲ್ಲಿ ಮುಖ ಹುದುಗಿ ಉರುಳಾಡಿ ಅಳಾಪ ಮಾಡಿದಳು.

ಒಂದೇ ಒಂದು ಸಣ್ಣ ಆಸೆಯೆಂದರೆ ನಮ್ಮ ಕಣ್ಣಿಗೇ ಬೀಳದ ಮರೆಪ್ಪ ದೇಸಾಯಿಗೆ ಕಂಡಿರಲಿಕ್ಕಿಲ್ಲ ಎಂಬುದು. ಒಂದು ವೇಳೆ ಹಾಗೇ ಆಗಿ, ದೇಸಾಯಿ ಮರೆಪ್ಪನನ್ನು ಕಂಡಿರಲಿಲ್ಲವೆಂದೇ ಅನ್ನೋಣ – ‘ತಾನು ಬಂದಾಗ ಸಿಂಗಾರೆವ್ವ ಅಸ್ತವ್ಯಸ್ತ ಯಾಕಿದ್ದಳು? ಕೂಗಾಡಿದ್ದು ಯಾಕೆ?’ – ಇಂಥ ಪ್ರಶ್ನೆಗಳನ್ನಾದರೂ ಕೇಳುವುದು ಸ್ವಾಭಾವಿಕವಲ್ಲವೇ? ಅದಕ್ಕೇ ಸಿಂಗಾರೆವ್ವನನ್ನು ಅವಳ ಪಾಡಿಗೆ ಅಳುವುದಕ್ಕೆ ಬಿಟ್ಟು ನಾನು ನೆಪಗಳನ್ನು ಹುಡುಕತೊಡಗಿದ್ದೆ. ಇದೆಲ್ಲ ಸುಸೂತ್ರ ದಾಟಿ ಹೋದರೂ ಮರೆಪ್ಪನ ಬಗ್ಗೆ ನಾವು ಗಂಭೀರವಾಗಿ ಚಿಂತೆ ಮಾಡಲೇಬೇಕಿತ್ತು. ಹೊಲೆಯನೊಬ್ಬ ಯಾವಾಗೆಂದರೆ ಆವಾಗ ದೊರೆಸಾನಿ ಮಲಗುವಲ್ಲಿ ನುಗ್ಗೋದಂದರೇನು? ಈ ದಿನ ಸಂಜೆ ದೇಸಾಯಿಯ ಮುಂದೆ ಸಿಂಗಾರೆವ್ವ ಆತನ ಬಗ್ಗೆ ಕಟುವಾಗಿ ಮಾತಾಡಿದ್ದಳು ನಿಜ. ಕೇಳಿಸಿಕೊಂಡರೆ ಕೇಳಿಸಿಕೊಂಡಿರಲಿ. ಯಾವ ಕೊಮರಾಯನೆಂದು ಇವನಿಗೆ ಅಂಜಬೇಕು? ಹತ್ತಿದವನೆ? ಹೊಂದಿದವನೆ? ನಮ್ಮ ಮನೆ, ನಮ್ಮ ಮಾತು, ನಮ್ಮ ಮನೆವಾಳ್ತೆ ನಾವಾಡಬಾರದೆ? ಮಾಡಿಕೊಂಡ ಗಂಡನ ಹಾಗೆ ಮಧ್ಯೆ ನುಗ್ಗಿ ಜೋರು ಮಾಡಿದರೆ? ತಾ ಯಾರು, ಸಿಂಗಾರೆವ್ವ ಯಾರೆಂದು ಹಿಂದುಮುಂದಿನ ಅರಿವು ಬೇಡವೇ? – ನಾನು ಹೀಗೆ ಹಲವು ಹದಿನೆಂಟು ಪರಿ ಚಿಂತೆ ಮಾಡುತ್ತಿದ್ದಾಗ ಕೆಳಗಡೆ ಹಿರಿಯ ದೊರೆಸಾನಿ ಹಾಡಿಕೊಳ್ಳುತ್ತಿದ್ದಳು.

ಆದರೆ ಮುಂಜಾನೆ ದೇಸಾಯಿ ನಮ್ಮನ್ನೇನೂ ಕೇಳಲಿಲ್ಲ. ಕೇಳಿದ್ದರೆ ಸಿಂಗಾರೆವ್ವನ ಸೀರೆಯಲ್ಲಿ ಚೇಳು ಹೊಕ್ಕಿತ್ತೆಂದೂ, ಎಷ್ಟು ಜಾಡಿಸಿದರೂ ಹೋಗಲಿಲ್ಲವಾದ್ದರಿಂದ ಕೂಗಾಡುವಾಗ ಸೀರೆ ಸೆರಗು ಜಾರಿತ್ತೆಂದೂ ಹೇಳುವುದು. ನಂಬಿದರೆ ನಂಬಲಿ, ನಂಬದಿದ್ದರೆ ಬಂದದ್ದನ್ನು ಎದುರಿಸುವುದು – ಎಂದು ಇಬ್ಬರೂ ಮಾತಾಡಿಕೊಂಡಿದ್ದೆವು. ಈ ರಂಪಾಟ ಊಹಿಸಿಯೇ ಸಿಂಗಾರೆವ್ವ ಮುಂಜಾನೆ ಕೆಳಗಿಳಿದು ಬರಲೇ ಇಲ್ಲ. ಕರೆ ಬರಲಿಲ್ಲವಲ್ಲ. ನೋಡಿಕೊಂಡು ಬರಬೇಕೆಂದು ನಾನೇ ಕೆಳಗಿಳಿದು ಬಂದೆ. ದೇಸಾಯಿ ಅನೇಕಟ್ಟೆ ಮೇಲೆ ಕೂತಿದ್ದ. ಮರೆಪ್ಪ ಅಲ್ಲೇ ಹಗ್ಗ ಹೊಸೆಯುತ್ತಿದ್ದ. ಇಬ್ಬರೂ ಏನೇನೋ ಮಾತಾಡುತ್ತಿದ್ದರು. ಇಬ್ಬರ ಮುಖದಲ್ಲಿ ದುಗುಡವಾಗಲಿ, ನಿನ್ನೆಯ ನೆನಪಿನ ಗುರುತಾಗಲಿ ಇರಲಿಲ್ಲ. ನೆವ ಮಾಡಿಕೊಂಡು ಸಮೀಪ ಹೋಗಿ ಕಂಬದ ಮರೆಯಲ್ಲಿ ನಿಂತೆ, ಮರೆಪ್ಪ ಹೇಳಿದ:

“ಸರಕಾರ, ಹೊಲದಾಗ ಕಳೆ ಭರ್ತಿ ಬೆಳದ ಬಿಟ್ಟೈತಿ. ಆಳ ಹಚ್ಚಿ ಲಗೂನs ತಗಸಬೇಕ್ರಿ. ಹದ ಮೀರಿತಂದರ ಆಮ್ಯಾಲ ಏನ ಮಾಡಕೂ ಆಗಾಣಿಲ್ಲ.”

– ಈ ಮಾತು ಕೇಳಿ ದೇಸಾಯಿ ಮರೆಪ್ಪನ ನಿಷ್ಠೆಯನ್ನು ಮೆಚ್ಚಿಕೊಂಡು,

“ನೋಡು, ಆ ಸೂಳೀ ಮಕ್ಕಳು, ಕಾಳ್ಯಾ ನಿಂಗ್ಯಾಗ ಒಂದೀಟಾದರೂ ಕಾಳಜಿ ಐತೇನ್ನೋಡು, ಹಂ? ಮೈಗಳ್ಳರು.”

“ಕೆಲಸದಾಗ ಅವರಿಗೂ ಹೇಳಾಕ ಆಗಿಲ್ಲೋ ಏನೊ, ಅಂತೂ ಅಗ್ಗದೀ ಜರೂರ ಕಳೆ ತಗಸಾಕ ಬೇಕ್ರಿ.”

“ಆಯ್ತು, ನೀನs ಮುಂದ ನಿಂತ ಆಳ ಹಚ್ಚಿ ತಗಸು. ಮಜೂರಿ ಎಷ್ಟಾಗತೈತಿ ನೋಡಿ ಕೊಡೊಣಂತ.”

– ನನ್ನ ಮನಸ್ಸು ಹಗುರವಾಯ್ತು. ನಿನ್ನೆ ದೇಸಾಯಿ ಮರೆಪ್ಪನನ್ನು ಕಂಡಿರಲಿಲ್ಲ ಎನ್ನುವುದು ಖಾತ್ರಿಯಾಯ್ತು. ಇನ್ನುಳಿದ ಪ್ರಶ್ನೆ – ತಾನು ಬಂದಾಗ ಯಾಕೆ ಸಿಂಗಾರೆವ್ವನ ಸೆರಗು ಜಾರಿತ್ತು ಎನ್ನುವುದು. ಚೇಳಿನ ನೆಪ ಹೇಳಿದರಾಯ್ತೆಂದು ತಿರುಗಿದೆ. ಅಷ್ಟರಲ್ಲಿ ದೇಸಾಯಿ ನನ್ನ ಕಡೆ ತಿರುಗಿ ನೋಡಿದ. ತಕ್ಷಣ ತಪ್ಪು ಮಾಡಿದವನಂತೆ ಮುಖ ಆ ಕಡೆ ಮಾಡಿ ನಾನು ದಾಟಿ ಬರುವವರೆಗೂ ಹಾಗೇ ಇದ್ದ. ಯಾಕೆಂದು ಬಹಳ ಹೊತ್ತು ನನಗೆ ಅರ್ಥವಾಗಲಿಲ್ಲ. ಬಹುಶಃ ನಿನ್ನೆ ರಾತ್ರಿ ನನ್ನೆದುರಿನಲ್ಲೇ ಆ ರೀತಿ ಬೇಹೋಶ್ ಆಗಿ ಬಿದ್ದಿದ್ದನಲ್ಲ. ಅದಕ್ಕೆ ನಾಚಿಕೆಪಟ್ಟುಕೊಂಡಿರಬಹುದೆ? ಹಾಗಿದ್ದರೆ ದೇವರು ನಮ್ಮನ್ನು ಕಾಪಾಡಿದನೆಂದೇ ಅಂದುಕೊಂಡು ಅಂತಸ್ತಿನ ಕೋಣೆಗೆ ಹೋದೆ.

ಈ ಬಾರಿಯೇನೋ ಕಂಟಕದಿಂದ ಪಾರಾಗಿದ್ದೆವು. ಅದರೆ ಮತ್ತೆ ಹೀಗೆ ಆಗಬಾರದಲ್ಲ. ಈಗ ಹುಚ್ಚಯ್ಯನ ಭೂತದ ಭಯ ಇರಲಿಲ್ಲ. ಹೊಲೆಯನ ಈ ಹೊಸ ಭಯ ಅಂಟಿಕೊಂಡಿತು. ಇಬ್ಬರೂ ಹುಷಾರಾದೆವು. ಹಾಗೇ ಹೆಚ್ಚು ಭೀತರಾದೆವು. ಸಿಂಗಾರೆವ್ವ ಹಗಲು ಹೊತ್ತಿನಲ್ಲಿ ಕೂಡ ನಾನಿಲ್ಲದೆ ಅರಮನೆಯಲ್ಲಿ ಅಡ್ಡಾಡುತ್ತಿರಲಿಲ್ಲ. ರಾತ್ರಿ ಮಲಗುವಾಗ ಅಂತಸ್ತಿನ ಬಾಗಿಲಿಕ್ಕೀ ಕೀಲೀ ಜಡಿಯುತ್ತಿದ್ದೆವು. ಲಾಟೀನನ್ನು ಬೆಳತನಕ ಉರಿಸುತ್ತಿದ್ದೆವು. ಯಾರಾದರೂ ಅಂದರೆ ಅಪ್ಪಿತಪ್ಪಿ ದೇಸಾಯಿ ಬಂದು ಬಾಗಿಲು ಬಡಿದರೂ “ಯಾರವರಾ?” ಎಂದು ಜೋರಾಗಿ ಕೂಗುತ್ತಿದ್ದೆವು. ಸಿಂಗಾರೆವ್ವ ಬೈಲ ಕಡೆ ಹೋಗುವಾಗಲೂ – ಅದಲ್ಲೇ ಹಿತ್ತಲಲ್ಲಿಗೆ ನನ್ನನ್ನು ಜೊತೆಯಲ್ಲೇ ಕರೆದೊಯ್ಯುತ್ತಿದ್ದಳು. ರಾತ್ರಿಯಂತೂ ಆ ಕಡೆ ಸುಳಿಯುತ್ತಲೇ ಇರಲಿಲ್ಲ. ಕನಸು ಮನಸ್ಸಿನಲ್ಲಿ ಕೂಡ ಅವನ ಭಯ ಆವರಿಸಿಬಿಟ್ಟಿತ್ತು. ಅವನಿದ್ದಾನೆಂದರೆ ಸಿಂಗಾರೆವ್ವ ಕೆಳಗಿಳಿದು ಬರುತ್ತಲೇ ಇರಲಿಲ್ಲ. ಈ ಕಾರಣಕ್ಕಾಗಿ ಅವಳಿಗೆ ಒಮ್ಮೊಮ್ಮೆ ಮಧ್ಯಾಹ್ನದ ಊಟವನ್ನೂ ಅಂತಸ್ತಿನ ಕೊಣೆಗೇ ಒಯ್ಯುತ್ತಿದ್ದೆ. ತಾನು ಹೊರಬಂದೊಡನೆ ಬಾಗಿಲಿಕ್ಕಿಕೊಂಡವಳು ನಾನು ಮತ್ತೆ ಹೋಗಿ ಬಾಗಿಲು ಬಡಿದು ಕೂಗಿದಾಗಲೇ ಬಾಗಿಲು ತೆಗೆಯುತ್ತಿದ್ದಳು. ಆಗಾಗ ದೇಸಾಯಿಗೆ ಮರೆಪ್ಪನ ಬಗ್ಗೆ, ಮರೆಪ್ಪ ಕದ್ದು ಕೇಳುತ್ತಿದ್ದಾನೆಂದು, ದೇಸಾಯಿ ನಂಬುವುದಿಲ್ಲವೆಂದು ಸಂಶಯವಿದ್ದರೂ ಚಾಡಿ ಹೇಳತೊಡಗಿದ್ದೆವು. ಹಿರಿಯ ದೊರೆಸಾನಿಗೆ ನಿಮ್ಮ ಮಗ ಹೊಲೆಯನ ಸಹವಾಸದಲ್ಲಿ ಕೆಡುತ್ತಿದ್ದಾನೆಂದೂ, ಈ ಬಗ್ಗೆ ಜನ ಆಡಿಕೊಳ್ಳುತ್ತಿದ್ದಾರೆಂದೂ ಒಬ್ಬರಾದ ಮೇಲೆ ಒಬ್ಬರಂತೆ ಇಬ್ಬರೂ ಹೇಳಿ ಬಂದೆವು. ಈಗೀಗ ಮರೆಪ್ಪನ ಉಲಿವೂ ಕಮ್ಮಿಯಾದ್ದರಿಂದ ಅವನೂ ಹಿಂದೆ ಸರಿದನೆಂದೇ ನಮ್ಮ ಕಲ್ಪನೆಯಾಗಿತ್ತು. ಆದರೆ ಅವನು ಬೇರೆ ಸಂಚಿನಲ್ಲಿದ್ದ.

ಅರಮನೆಗೆ ಬರುತ್ತಿದ್ದವನು ಪರಮಶೆಟ್ಟಿ ಮಾತ್ರ ಎಂದು ಹಿಂದೆ ಹೇಳಿದ್ದೆನಲ್ಲ – ಆ ಶೆಟ್ಟಿ ಇನ್ನೊಬ್ಬ ಚಂಡಾಲ. ಬಂದಾಗೊಮ್ಮೆ ದೇಸಾಯಿಯ ಕಿವಿಯಲ್ಲೇ ಮಾತಾಡುತ್ತಿದ್ದ. ಅದಕ್ಕೇ ಅವನ ಬಗ್ಗೆ, ಅವರಿಬ್ಬರ ಮಧ್ಯೆ ಇದ್ದಿರಬಹುದಾದ ವ್ಯವಹಾರದ ಬಗ್ಗೆ ಸಹಜವಾಗಿಯೇ ನನ್ನ ಆಸಕ್ತಿ ಕೆರಳಿತು. ದೇಸಾಯಿಯನ್ನು ರಮಿಸಿ ಇವನ ಆಸ್ತಿಯನ್ನು ಕೊಳ್ಳೆ ಹೊಡೆಯಲು ಹೊಂಚುತ್ತಿರಬಹುದೇ ಎಂದು ನನ್ನ ಅನುಮಾನ. ಅವ ಎಂಥವನು? ಅವನಿಗೂ ದೇಸಾಯಿಗೂ ವ್ಯವಹಾರವೇನು? ಮುಂತಾಗಿ ಊರಿನ ಅವರಿವರನ್ನು ಗುಟ್ಟಾಗಿ ಕೇಳಿದೆ. ಕೇಳಿದರೆ ನನ್ನ ಅನುಮಾನವೇ ನಿಜವಾಗಿತ್ತು!

ದೇಸಾಯಿ ಮೈಗಳ್ಳನಾದ್ದರಿಂದ ಹೊಲಮನೆಗಳಲ್ಲಿ ಆಸಕ್ತಿಯಿರಲಿಲ್ಲ. ಹೀಗಾಗಿ ಅಂಥ ದೊಡ್ಡ ಆಸ್ತಿಯಿಂದ ವರ್ಷಂಪ್ರತಿ ಬರುತ್ತಿದ್ದುದು ಮನೆಯವರ ಮತ್ತು ಆಳುಕಾಳಿನ ಊಟಕ್ಕೆ ಸಾಕಿತ್ತು. ಬಹಳವಾದರೆ ಉಪ್ಪೆಣ್ಣೆಯೂ ಅದರಲ್ಲೇ ಸಾಗುತ್ತಿತ್ತು. ಆದರೆ ದೇಸಾಯಿಯ ಕುಡಿತದ ಚಟಕ್ಕೆ ಬಯಲಾಟದ ಖಯಾಲಿಗೆ ಬೇಖರಾಗುವ ಸುಖಕ್ಕೆ ಹಣ ಬೇಕಾಗುತ್ತಿತ್ತು. ಆ ಹಣ ಒದಗಿಸುವವನು ಪರಮಶೆಟ್ಟಿ. ದೇಸಾಯಿಯ ಮದುವೆಗೂ ಅವನೇ ಸಾಲ ಕೊಟ್ಟಿದ್ದ. ದೇಸಾಯಿ ಹತ್ತು ಕೇಳಿದರೆ ನೂರು ಕೊಟ್ಟು, ಮತ್ತೆ ಆ ನೂರೂ ಅವನಿಗೇ ಸೇರಿ ಸಾಲ ಮಾತ್ರ ಬೆಳೆಯುವ ಹಾಗೆ ಮಾಡಿದ್ದ. ಅವನೇ ದೇಸಾಯಿಯ ಮನೆಗೆ ಸೆರೆ ಕಳಿಸುತ್ತಿದ್ದ. ಬಯಲಾಟದ ತಾಲೀಮು ಮಾಡುವುದಕ್ಕೆ ತನ್ನ ಅಂಗಡಿಯ ಹಿಂಭಾಗದ ಕೋಣೆ ಬಿಟ್ಟುಕೊಟ್ಟು ತಾನೊಬ್ಬ ಭಾರೀ ಕಲಾಪ್ರೇಮಿಯಂತೆ ದೇಸಾಯಿಯ ಮುಂದೆ ವಿಜೃಂಭಿಸಿದ. ತಾನೇ ಹೋಗಿ ಚಿಮಣಾಳನ್ನು ಕರೆತರುತ್ತಿದ್ದ. ಅವಳ ತೊಡೆ ತೋರಿಸಿ, ದೇಸಾಯಿಯನ್ನು ಬೇಹೋಶ್ ಮಾಡಿ, ಕೊಟ್ಟ ಹಣವನ್ನು ಕಸಿಯುತ್ತಿದ್ದ. ಇದೆಲ್ಲ ಎಷ್ಟೇ ಗುಪ್ತವಾಗಿ ನಡೆದರೂ ಜನಕ್ಕೆ ಗೊತ್ತಾಗಿ ಆಡಿಕೊಳ್ಳುತ್ತಿದ್ದರು. ದೇಸಾಯಿಗೂ ಹೇಳಿದ್ದಾರು. ಆದರೆ ಇವನು ಕೇಳಬೇಕಲ್ಲ, ಈಗ ಹಳೇ ಸಾಲ, ಮದುವೆಯ ಸಾಲ ಮತ್ತು ಇತ್ತೀಚಿನ ಸಾಲಗಳೆಲ್ಲ ಸೇರಿ ಎಂದೂ ತೀರಿಸಬಾರದಷ್ಟು ಅಂದರೆ ಒಟ್ಟು ಒಂದೂವರೆ ಲಕ್ಷ ಬರಾಬರಿ ಮಾಡಿಟ್ಟಿದ್ದ. ಉತ್ಪನ್ನವೇ ಇಲ್ಲದ ದೇಸಾಯಿ ಈ ಸಾಲ ಹ್ಯಾಗೆ ತೀರಿಸುತ್ತಾನೆ? ಆಗಾಗ ಮನೆಯಲ್ಲಿಯ ಬಂಗಾರ ಕದ್ದು ಕೊಟ್ಟರೂ ಅದೆಲ್ಲ ಬರಿ ಬಡ್ಡಿಗಾಗಿತ್ತು. ನಿವ್ವಳ ಅಸಲು ಹಾಗೇ ಇತ್ತು. ಆದ್ದರಿಂದ ಕೊಟ್ಟ ಸಾಲದಲ್ಲಿ ಊರ ಮುಂದಿನ ತೋಟ ಮತ್ತು ಅರಮನೆಯನ್ನು ಖರೀದಿಗೆ ಬರೆಸಿಕೊಳ್ಳಬೇಕೆಂದು ಶೆಟ್ಟಿಯ ಉಪಾಯ. ಈ ಹಿಂದೆ ಗುಡ್ಡದ ಬಳಿಯ ಎರಡು ತೋಟಗಳನ್ನು ಹಾಗೆ ಬರೆಸಿಕೊಂಡಿದ್ದ. ದೇಸಾಯಿಯೂ ಅದಕ್ಕೊಪ್ಪಿದ್ದ. ಗೋಕಾವಿಗೆ ಯಾವಾಗ ಹೋಗೋಣವೆಂದು ಅವರಿಬ್ಬರೂ ತಾಳೆ ಹಾಕುತ್ತಿದ್ದರು.

ದೇಸಾಯೀ ಮನೆಯಲ್ಲಿ ಮೊದಲು ಇಡೀ ಒಂದು ಪೆಟ್ಟಿಗೆಯ ತುಂಬ ಬಂಗಾರ ಇತ್ತಂತೆ. ಅದೆಲ್ಲ ದೇಸಾಯಿಯ ಈ ಚಟುವಟಿಕೆಗಳಿಗಾಗಿಯೇ ಕಳೆದುಹೋಯಿತು. ಈಗ ನಾನು ಕಂಡಂತೆ ಉಳಿದಿರೋದು ಸಿಂಗಾರೆವ್ವನಿಗೆ ಸೇರಿದ, ಅವಳ ಮದುವೆ ಕಾಲಕ್ಕೆ ಹಾಕಿ ಉಳಿದ ಅವೆರಡು ಬಳೆ, ಹಿರಿಯ ದೊರೆಸಾನಿಯ ಅದೊಂದು ನಡುಪಟ್ಟಿ – ಇಷ್ಟೆ. ಈ ಸುದ್ದಿ ಗೊತ್ತಾದೊಡನೆ ಸಿಂಗಾರೆವ್ವನಿಗೆ “ನಿನ್ನದಾಗೀನ ಹುಷಾರೆವ್ವ” ಎಂದು ಹೇಳಿದೆ.

ಮರೆಪ್ಪ ಶೆಟ್ಟಿಯ ಉಪಾಯಗಳನ್ನು ಆಳದಲ್ಲೇ ಗ್ರಹಿಸಿದ್ದ. ಶೆಟ್ಟಿಯ ಮನೆಯಿಂದ ಸೆರೆ ತರುವುದಕ್ಕೆ ಈಗೀಗ ಮರೆಪ್ಪನೇ ಹೋಗುತ್ತಿದ್ದುದರಿಂದ, ಕುಡಿದಾಗ ದೇಸಾಯಿ ಬಾಯಿ ಬಿಟ್ಟುದರಿಂದ ಅವರ ವ್ಯವಹಾರದ ತುದಿಬುಡ ಇವನಿಗೂ ಅರ್ಥವಾಗಿಬಿಟ್ಟಿತ್ತು. ಅವರು ಗೋಕಾವಿಗೆ ಹೋಗಬೇಕೆಂದ ದಿನವೇ ಇವನು ಮುಂಜಾನೆ ದೇಸಾಯಿಗೆ ಕಂಠಮಟ ಕುಡಿಸಿ ಬಿಡುತ್ತಿದ್ದ. ಕುಡಿದಾಗ ದೇಸಾಯಿ ಸಹಜವಾಗಿಯೇ ತಾರಕ ಹಾಡುತ್ತ ಹಾರಾಡುತ್ತಿದ್ದ. ಸರಿ, ಪ್ರಯಾಣವನ್ನು ಮುಂದಕ್ಕೆ ಹಾಕುತ್ತಿದ್ದರು. ಮರೆಪ್ಪನ ಉಪಾಯ ಕೊನೆಯತನಕ ಶೆಟ್ಟಿಗಾಗಲಿ, ದೇಸಾಯಿಗಾಗಲಿ ತಿಳಿಯಲೇ ಇಲ್ಲ. ದೇಸಾಯಿ ಬೇಕೆಂದೇ ತಪ್ಪಿಸಿಕೊಳ್ಳುತ್ತಿದ್ದಾನೆಂದು ಶೆಟ್ಟಿಯ ತಿಳುವಳಿಕೆಯಾಗಿತ್ತು. ಆದರೆ ಬಾಯಿಮಾಡಿ ಗದ್ದಲ ಮಾಡುವ ಹಂತಕ್ಕೂ ಈ ವ್ಯವಹಾರ ಮುಟ್ಟಿರಲಿಲ್ಲ. ಸಮಯ ಬಂದಾಗ ನೋಡಿಕೊಳ್ಳೋಣವೆಂದು, ಅಂಥ ಸಮಯಕ್ಕೆ ಕಾಯುತ್ತ ಕೂತಿದ್ದ. ಇದೆಲ್ಲದರ ಪರಿಣಾಮವೆಂದರೆ ಮರೆಪ್ಪ ದೇಸಾಯಿಗೆ ಅವನ ಪ್ರಾಣವೆಂಬಷ್ಟು ಹತ್ತಿರದವನಾಗಿದ್ದ.

ಇದನ್ನೆಲ್ಲ ನಾವು ಗಮನಿಸುತ್ತಿದ್ದೆವು ಮತ್ತು ನಿರುಪಾಯರಾಗಿದ್ದೆವು. ಇದರಿಂದ ಮರೆಪ್ಪ ದೇಸಗತಿಗೆ ಉಪಕಾರ ಮಾಡುತ್ತಿದ್ದಾನೆಂದು ಅನ್ನಿಸಿದರೂ ಅವನು ಅರಮನೆಯಲ್ಲೇ ಖಾಯಂ ಆಗಿ ವಾಸಿಸುವುದೂ ಖಾತ್ರಿಯಾಯ್ತು. ಅದು ನಮಗೆ ಬೇಡದ ಸಂಗತಿ. ಆದಷ್ಟು ಬೇಗನೇ, ಅಂದರೆ ಇನ್ನೊಂದು ಅನಾಹುತವಾಗದಂತೆ, ಜಾಗ್ರತೆಯಾಗಿ ಅವನನ್ನು ಹೊರದೂಡುವುದು ನಮಗೆ ಜರೂರಿತ್ತು. ನಮ್ಮನ್ನ ನಾವೇ ಪಂಜರದಲ್ಲಿಟ್ಟುಕೊಂಡಿದ್ದೆವಾದ್ದರಿಂದ ಕೂತುಕೊಂಡು ಅವನನ್ನು ಹೊರಹಾಕುವ ಉಪಾಯಗಳನ್ನೆ ಯೋಚಿಸುತ್ತಿದ್ದೆವು. ಏನೂ ಹೊಳೆಯದೇ ಇದ್ದಾಗ ಒಮ್ಮೆ ಸಿಂಗಾರೆವ್ವ ಹೇಳಿದಳು:

“ಇದೇನs ನನ್ನ ದುರ್ಗತಿ! ಒಂದ ಅತ್ತಿಗಿ ಅಂಜಲಿಲ್ಲ. ಒಂದ ಗಂಡಗ ಅಂಜಲಿಲ್ಲ. ಈ ಎಂಜಲಾ ತಿನ್ನೋ ಹೊಲ್ಯಾಗ ಅಂಜಿಕೊಂಡ ಕೂರಬೇಕಾಯ್ತಲ್ಲ! ಏನ ಕರ್ಮ ಇದ್ದೀತ. ಹೇಳು.”

“ಮುಳ್ಳ ತಗ್ಯಾಕ ನನಗೇನೂ ಹೊಳೀವಲ್ದೆವ್ವ, ಏನ ಮಾಡೂಣು?”

– ಅಂದೆ, ನನ್ನ ಮಾತಿನ ಕಡೆ ಅವಳ ಲಕ್ಷ್ಯವಿರಲಿಲ್ಲ. ಏನೋ ಹೊಂಚುತ್ತಿದ್ದಳು. ಅದು ಸರಿಹೋಗದೆಂದು ಮನಸ್ಸಿನಲ್ಲೇ ಅಂದುಕೊಂಡು ನಿರಾಸೆಯಾಗಿ ಮತ್ತೆ ಮರೆಪ್ಪನ ಮೇಲಿನ ಕೋಪದಿಂದ ಕುದಿಯುತ್ತಿದ್ದಳು.

“ಅವನಂತೂ ನನ್ನ ಹಾಟ್ಯಾ, ಎಲ್ಲಾ ಬಿಟ್ಟು ನಿಂತಾನೆವ್ವ… ಅವಗ ಮಾನ ಮರ್ಯಾದೀನೂ ಅಷ್ಟ, ಲಜ್ಜಿ ನಾಚಿಕೀನೂ ಅಷ್ಟ – ಗುದ್ದಾಡತೀಯಾ? ನಮ್ಮ ಮೋತಿಗೆ ಹೇಲ ಹಚ್ಚಾಕೂ ಹೇಸವನಲ್ಲ.”

ಇದ್ದಕ್ಕಿದ್ದಂತೆ ಸಿಂಗಾರೆವ್ವನ ನನ್ನ ಮುಖವನ್ನೊಮ್ಮೆ ತೀಕ್ಷ್ಣವಾಗಿ, ಪರೀಕ್ಷೆ ಮಾಡುವವಳಂತೆ ನೋಡಿದಳು. ಏನೋ ಹೇಳುತ್ತಾಳೇನೋ ಎಂದು ಕಾದೆ. ಹೇಳಲಿಲ್ಲ. ಮತ್ತೆ ನಾನೇ ಹೇಳಿದೆ:

“ಎವ್ವಾ, ಆ ನನ್ನ ಹಾಟ್ಯಾ ಹೊಲ್ಯಾಗ ಬೇಕಾದರ ಒಂದೈನೂರ ರೂಪಾಯಿ ಕೊಟ್ಟ, ನೀ ಬ್ಯಾರ ಕಡೆ ಹೋಗು, ಈ ಕಡೆ ಬರಬ್ಯಾಡಂದರ ಹೆಂಗ?” – ಈ ಮಾತು ಹೇಳುವಾಗಿನ ನನ್ನ ತರ್ಕವಿಷ್ಟೆ: ಆದದ್ದಂತೂ ಆಗಿ ಹೋಗಿದೆಯಲ್ಲ, ಆದದ್ದನ್ನು ಮರೆತು, ಮತ್ತೆ ಮೊದಲಿನಂತೆ ಆತ ನನ್ನ ಪಾಡಿಗೆ ತಾನು ಬೇರೆಲ್ಲಿಗೋ ಹೋಗಿ ಇರೋದಾದರೆ ಒಳ್ಳೆಯದಲ್ಲವೆ? ಆದರೆ ಹಾಗವನು ಬೇರೆ ಕಡೆ ಹೋಗಿ ಇದ್ದಾನೆಂಬುದರಲ್ಲಿ ಅವಳಿಗೆ ನಂಬಿಕೆ ಬರಲಿಲ್ಲ.

“ನರಮಾಂಸ ತಿಂದ ಹುಲೀನs ಅವನು. ಕುರಿ ಕೋಳಿ ಮಾಂಸ ತಿಂದಾನಂದಿ?” – ಎಂದಳು, ಅದೂ ನಿಜವೇ. ಸಿಂಗಾರೆವ್ವ ಕಣ್ಣಿಗೆ ಬಿದ್ದಾಗೆಲ್ಲ ಅವನ ಕಣ್ಣು ಫಳಫಳ ಹೊಳೆದು ಕರಿ ಕೆನ್ನೆಗಳಲ್ಲಿ ನೆತ್ತರುಕ್ಕಿ ಮುಖ ಕಾದ ಉಕ್ಕಿನಂತೆ ಕಳೆಯೇರುತ್ತಿತ್ತು. ರೊಕ್ಕ ರೂಪಾಯಿ ಅವನ ಪಾಲಿಗೆ ಕ್ಷುಲ್ಲಕ ಆಮಿಷವಾಗಿ ಕಾಣಲೂಬಹುದು. “ನೀ ಹೇಳಿದ್ದು ಖರೆ ಎವ್ವಾ” ಅಂದೆ. ಈ ಮಾತಿನತ್ತ ಅವಳ ಗಮನವಿರಲಿಲ್ಲ. ತನ್ನ ವಿಚಾರದ ಗುಂಗಿನಲ್ಲೇ ಇದ್ದವಳು, ನಿರಾಸೆಯಾಗಿ ಹಲ್ಲುಕಚ್ಚಿ ಯಾವುದೋ ತೀರ್ಮಾನಕ್ಕೆ ಬಂದವಳಂತೆ –

“ಏ ಶೀನಿಂಗೀ” ಎಂದು ಸರ್ರನೇ ದೂರದ ನನ್ನ ರೆಟ್ಟೆ ಹಿಡಿದು ಬಳಿಗೆ ಸೆಳೆದುಕೊಂಡು ಕಿವಿಯಲ್ಲಿ ಹೇಳಿದಳು.

“ಏ ಶೀನೀಂಗೀ, ಮರ್ಯಾಗ ವಿಷ ಹಾಕಿದರ ಹೆಂಗ?”

ಸಿಂಗಾರೆವ್ವ ಹೀಗೆ ವಿಚಾರ ಮಾಡಿದ್ದಕ್ಕೆ ನನಗೆ ಆಶ್ವರ್ಯವಾಯಿತಾದರೂ ನಾವೂ ತಲೆಯ ಮೇಲಿನ ಸೆರಗು ತೆಗೆದೇ ತಯಾರಾಗದಿದ್ದರೆ ಆತ ನಮ್ಮನ್ನು ಮುಗಿಸುವುದೂ ಅಷ್ಟೇ ಖಾತ್ರಿಯಾಗಿತ್ತು. ಆದರೆ ಅದೂ ಅಪಾಯದ ಕೆಲಸವೆಂದು ನನಗೆ ಗೊತ್ತು.

“ಅಲ್ಲರೀ ಎವ್ವಾ, ನಾಳಿ ಪೋಲಿಸ ಪೋಜುದಾರ ಬರೋಣ, ಅವರು ಏನೇನೋ ಕೇಳೋಣ: ಮರ್ಯಾ ಹೆಂಗ ಸತ್ತ? ವಿಷ ತಗೊಂಡ ಸತ್ತ. ತಾನs ತಗೊಂಡನೊ, ಬ್ಯಾರೇದವರು ಹಾಕಿದರೊ? ಬ್ಯಾರೇದವರು ಅಂದರ, ಯಾರ ಮನ್ಯಾಗ ಇದ್ದ? ದೇಸಾಯಿ ಮನ್ಯಾಗ ಇದ್ದ. ದೇಸಾಯರ ಮನ್ಯಾಗಂದರ ವಿಷ ಯಾರ ಹಾಕಿದ್ದಾರು? ತಗೊಳ್ಳವ, ಇದೆಲ್ಲ ಎಲ್ಲಿ ಹುಚ್ಚಯ್ಯನ ಹೆಣದ ತನಕ ಮುಟ್ಟಿತೋ ಅಂತೀನಿ.”

ಆದರೆ ಇದ್ಯಾವುದರಿಂದಲೂ ಸಿಂಗಾರೆವ್ವ ತನ್ನ ನಿರ್ಧಾರದಿಂದ ಹಿಂದೆ ಬರಲಿಲ್ಲ. ಮನಸ್ಸು ಮಾಡಿದರೆ ಆತ ಯಾವ ಕ್ಷಣದಲ್ಲೂ ನಮ್ಮನ್ನು ಬಹಿರಂಗಪಡಿಸಬಲ್ಲ, ಬಹಿರಂಗಪಡಿಸುವುದೆಂದರೆ ನಾವು ಸಾಯುವುದೆಂದೇ ಅರ್ಥ. ಆದರೆ ಈಗ ನಾವಿರುವ ಸ್ಥಿತಿ ಸಾವಿಗಿಂತ ಉತ್ತಮವಾದದ್ದೇನಲ್ಲ. ನಿತ್ಯ ಸಾಯುವುದಕ್ಕಿಂತ ಒಂದೇ ದಿನ ಸಾಯುವುದೂ ಲೇಸೇ. ಆದರೆ ಆತ ಚಿತ್ರಹಿಂಸೆ ಮಾಡಿ ದಿನಾ ಕೊಲೆ ಮಾಡುವ ಮನಸ್ಸು ಮಾಡಿದ್ದಾನೋ ಏನೋ? ಆದರಿಂದ ತಪ್ಪಿಸಿಕೊಳ್ಳುವುದಕ್ಕೆ ಇರೋದಾರಿ ಒಂದೇ: ಅವನನ್ನೇ ಕೊಲ್ಲುವುದು. ವಿಷದಲ್ಲಿ ನಾನಾ ನಮೂನೆಗಳಿವೆ. ಹಾಕಿದೊಡನೆ ಸಾಯಿಸುವ ವಿಷ ಒಂದಾದರೆ, ಇಂದು ವಿಷ ಹಾಕಿದರೆ ಇನ್ನು ಆರು ತಿಂಗಳಿಗೆ ಆ ವ್ಯಕ್ತಿ ಸವೆದು ಸವೆದು ಸಾಯುವಂಥ ವಿಷಗಳೂ ಇವೆ. ಈ ಆರು ತಿಂಗಳ ವಿಷ ಹಾಕಿದರೆ ಯಾರಿಗೂ ಸಂಶಯ ಬರುವುದಿಲ್ಲ. ಈ ಬಗ್ಗೆ ಮತ್ತೆ ಮತ್ತೆ ವಿಚಾರ ಮಾಡಿ ಇದೇ ಸೈ ಎಂದು ತೀರ್ಮಾನಕ್ಕೆ ಬಂದೆವು.

ಕಷ್ಟಪಟ್ಟು ವಿಷವನ್ನು ದೊರಕಿಸಿದ್ದಾಯಿತ್ತು. ಅದೊಮ್ಮೆ ಕೈ ಸೇರಿದೊಡನೆ ನನ್ನಲ್ಲಿ ತಳಮಳ ಸುರುವಾಯಿತು. ಮರೆಪ್ಪ ಸಜ್ಜನನಲ್ಲ ನಿಜ, ನಮ್ಮ ಮನಸ್ಸುಗಳಲ್ಲಿ ಮರೆಯಲಾರದ ಗಾಯಗಳನ್ನೂ ಮಾಡಿದ್ದ ಮತ್ತು ಅವನೇ ಬಂದು ನಾಲಗೆಯಿಂದ ನೆಕ್ಕಿದರೂ ಅವು ಮಾಯುವ ಸ್ಥಿತಿಯಲ್ಲಿರಲಿಲ್ಲ. ಹೆಚ್ಚೇನು, ನಮ್ಮ ದಯಮಾಯೆಗೆ ಅರ್ಹನಾಗುವ ಯಾವ ಲಕ್ಷಣಗಳೂ ಅವನಲ್ಲಿರಲಿಲ್ಲ. ಆದರೂ ಅವನಿಗೆ ಸಾವಿನ ಶಿಕ್ಷೆ ಕೊಡುವುದಕ್ಕೆ ನನಗ್ಯಾಕೋ ಮನಸ್ಸಾಗಲೊಲ್ಲದು. ಅವನನ್ನು ಕದ್ದು ಕಂಡು ಇದೆಲ್ಲವನ್ನೂ ತಿಳಿಸಿ, ಬೇರೆ ಕಡೆಗೆಲ್ಲಾದರೂ ಓಡಿಹೋಗುವಂತೆ ಹೇಳಬೇಕೆಂದೂ ಒಮ್ಮೊಮ್ಮೆ ಅನಿಸುತ್ತಿತ್ತು. ಆದರೆ ಇದರಿಂದಾಗುವ ಪ್ರಯೋಜನ ಕಮ್ಮಿ. ಅವನು ಓಡಿಹೋಗುವುದಕ್ಕೆ ನಿರಾಕರಿಸಿ ನಮ್ಮನ್ನು ಇನ್ನೂ ಹೆಚ್ಚಾಗಿ ಹಿಂಸಿಸಬಹುದು. ನಮ್ಮ ವಿಷ ನಮಗೇ ತಿನ್ನಿಸಬಹುದು. ನಮ್ಮ ಹಂಚಿಕೆ ಅವನಿಗೆ ತಿಳಿಯಲೂಬಾರದು. ಅವನು ಈ ಮನೆಯಲ್ಲಿ ಇರಲೂಬಾರದು – ಇದು ಹ್ಯಾಗೆ ಸಾಧ್ಯವಾದೀತೆಂದು ನಾನು ಲೆಕ್ಕ ಹಾಕುತ್ತಿದ್ದೆ. ಆದರೆ ನನ್ನ ಲೆಕ್ಕ ತಪ್ಪಿ ಕೂಡ ಸಿಂಗಾರೆವ್ವನಿಗೆ ತಿಳಿಯದ ಹಾಗೆ ಕಾಳಜಿಯಿಂದಿದ್ದೆ. ಸಿಂಗಾರೆವ್ವ ಮಾತ್ರ ನಿರುಮ್ಮಳವಾಗಿದ್ದಳು. ವಿಷ ತಂದಾಗ ಅದನ್ನಿಸಿದುಕೊಂಡು ಕಣ್ಣಾರೆ ನೋಡಿದಳು. ಹಾಕುವ ವಿಧಾನ ಕೇಳಿದಳು. ಅದರಿಂದಾಗುವ ಪರಿಣಾಮಗಳನ್ನು ವಿವರವಾಗಿಯೇ ಕೇಳಿದಳು. ನಾನು ಭಯಂಕರವಾಗಿಯೇ ಒಗ್ಗರಣೆ ಕೊಟ್ಟು ಹೆಚ್ಚು ಮಾಡಿ ಹೇಳಿದೆ. ಬೇಕಾದರೆ ಕೇಳಿ, ವಿಷ ಹಾಕುವ ವಿಚಾರ ಅವಳಾಗೇ ಕೈಬಿಟ್ಟರೂ ಬಿಡಲಿ ಎಂದು. ಆದರೆ ವಿಷ ತಿಂದು ಸಾಯುವವನ ಚಿತ್ರ ವರ್ಣಿಸುತ್ತ ಹೋದಂತೆ ಅವಳ ಮುಖ ಕಳೆಯೇರುತ್ತ ಹೋಯಿತು. ಅವಳ ಕಣ್ಣಲ್ಲಾಗಲೇ ಮರೆಪ್ಪ ಸಣಕಲಾಗಿ, ಬರೀ ಎಲುಬಿನ ಹಂದರವಾಗಿ, ನಿಸ್ಸಹಾಯಕವಾಗಿ ಅವರಿವರಿಗೆ ಅಂಗಲಾಚುತ್ತ ಸಾಯುತ್ತಿದ್ದ. ಆ ಕಲ್ಪನೆಯ ಚಿತ್ರದಲ್ಲಿ ಮರೆಪ್ಪ ಇವಳ ಕಾಲಿಗೂ ಬಿದ್ದನೆಂದು ತೋರುತ್ತದೆ. ಅವಳ ಸೇಡಿನ್ನೂ ಹೋಗಿರಲಿಲ್ಲ. “ಹೊಲೆಯಾ ಹೊಲೆಯಾ” ಎಂದು ಬಾರಿ ಬಿಟ್ಟೇ ಅಂದಳು. ಆಗ ಅವಳ ಕಣ್ಣಲ್ಲಿ ಹೊಳೆಯುತ್ತಿದ್ದ ಕ್ರೂರ ತೃಪ್ತಿ ಮತ್ತು ಸೇಡು ಮಾತ್ರ ನನಗೂ ಅಸಹ್ಯ ಹುಟ್ಟಿಸಿತು.

ವಿಷ ಹಾಕಬೇಕೆಂದ ದಿನ ಬೆಳಿಗ್ಗೆ ಎಚ್ಚರವಾದಾಗಿನಿಂದಲೇ ನನ್ನ ಹೊಟ್ಟೆಯಲ್ಲಿ ಸಂಕಟವಾಗ ತೊಡಗಿತು. ಕೆಲಸ ಕಾರ್ಯಗಳಲ್ಲಿ ಎಷ್ಟೂ ಉತ್ಸಾಹವಿರಲಿಲ್ಲ. ಒಮ್ಮೊಮ್ಮೆ ನೋಡುವುದಕ್ಕೂ ಕೂಡ ಸಿಕ್ಕದ ಮರೆಪ್ಪ ಆ ದಿನ ಎರಡು ಸಲ ಕಾಣಿಸಿಕೊಂಡ. ಎರಡನೇ ಸಲ ಆತನನ್ನು ಕಂಡಾಗಲಂತೂ ನನಗೆ ನಡುಕ ಬಂತು. ಸಿಂಗಾರೆವ್ವನಿಗೆ ಇದ್ಯಾವುದರ ಕಡೆ ಗಮನವಿರಲಿಲ್ಲ. ಹುಣಸೇಮಳೆಯನ್ನೇ ತದೇಕ ದೃಷ್ಟಿಯಿಂದ ಅನೇಕ ಬಾರಿ ನೋಡಿದಳು. ಅಲ್ಲಿಗೆ ಹೋಗಿ ಬರಬೇಕೆಂಬ ತನ್ನ ಹಳೇ ಆಸೆಯನ್ನು ಇನ್ನೊಮ್ಮೆ ಹೇಳಿದಳು. ಮಧ್ಯಾಹ್ನ  ಅವಳೊಂದು ಹಾಡನ್ನು ಗುಣುಗಿದಳೆಂದೂ ನನ್ನ ಭಾವನೆ. ಮರೆಪ್ಪನ ಕಂಟಕದಿಂದ ಆಗಲೇ ಪಾರಾದ ಹಾಗೆ ಅವಳು ಸಡಗರದಿಂದ ಇದ್ದಳು. ಸಾಯಂಕಾಲವಾಗುತ್ತಲೂ ನಾನೇ ಅಡಿಗೆ ಮಾಡಬೇಕೆಂದೂ, ಈ ದಿನ ಅಗತ್ಯವಿಲ್ಲವೆಂದು ಹೇಳಿ ಹೆಣ್ಣಾಳನ್ನು ಅವಳೇ ಮನೆಗೆ ಕಳಿಸಿಳು. ಆಯ್ತು, ಒಲೆ ಹೊತ್ತಿಸಿ, ಅಡಿಗೆಗಿಟ್ಟು, ತಲೆಮೇಲೆ ಕೈ ಹೊತ್ತು ಒಲೆಯ ಜೊತೆ ನಾನೂ ಉರಿಯುತ್ತ ಕೂತೆ. ನಮಗೆಲ್ಲ ಬೇರ ಪಲ್ಯ ಮಾಡಿಕೊಳ್ಳುವುದೆಂದೂ ಮರೆಪ್ಪನಿಗೆ ಹುಳಿ ಪಲ್ಲೆ ಮಾಡಿ, ಅದರಲ್ಲೇ ವಿಷ ಬೆರೆಸುವುದೆಂದೂ ಮೊದಲೇ ಮಾತಾಡಿಕೊಂಡಿದ್ದೆವು. ನಮ್ಮ ಅಡಿಗೆ ಮುಗಿದಾದ ಮೇಲೆ ಅದನ್ನೆಲ್ಲ ಪ್ರತ್ಯೇಕ ತೆಗೆದಿಟ್ಟು, ಇನ್ನೊಂದು ಗಡಿಗೆ ಇಟ್ಟು, ಬೇಳೆ ಬೇಯಿಸಲು ಹಾಕಿದೆ. ಸಿಂಗಾರೆವ್ವ ಬಂದು ವಿಷದ ಪುಡಿಕೆ ಕೊಟ್ಟಳು. ಈಗ ಹಾಕಲೇಬೇಕು. ಏನೋ ಹೊಳೆಯಿತು. ತಕ್ಷಣ ಪುಡಿಕೆ ಬಿಚ್ಚಿ ವಿಷವನ್ನೆಲ್ಲ ಒಲೆಯಲ್ಲಿ ಹಾಕಿ, ಆ ಕಾಗದವನ್ನು ಮಾತ್ರ ಪಾತ್ರೆಯ ಬಾಯ ಮೇಲೆ ಹಿಡಿದು ಜಾಡಿಸಿದೆ. ಇದೆಲ್ಲ ಅಲ್ಲೇ ಇದ್ದ ಸಿಂಗಾರೆವ್ವನಿಗೆ ಗೊತ್ತಾಗದಂತೆ ನೋಡನೋಡುವಷ್ಟರಲ್ಲಿ ನಡೆದುಹೋಗಿತ್ತು. ಸದ್ಯ ಅವಳು ಮಾತ್ರ ಎಷ್ಟೂ ಸಂಶಯ ತೆಗೆದುಕೊಳ್ಳಲಿಲ್ಲ. ಮೈ ತುಂಬ ಗಮ್ಮಂತ ಬೆವರು ಬಂತು. ಮರೆಪ್ಪ ಬಚಾವಾಗಿದ್ದ.

ಆ ದಿನ ಮರೆಪ್ಪ ದೇಸಾಯಿಯೊಂದಿಗೆ ತಡವಾಗಿ ಮನೆಗೆ ಬಂದ. ದೇಸಾಯಿ ಕುಡಿದುದರಿಂದ ಎಷ್ಟು ಸೇರಿತೋ ಅಷ್ಟನ್ನು ಹೊಟ್ಟೆಗೆ ಸೇರಿಸಿ ಹಾಗೇ ಮಂಚದ ಮೇಲೆ ಅಡ್ಡಾದ. ಮರೆಪ್ಪ ಊಟಕ್ಕೆ ಕೂತ. ನನಗ್ಯಾವ ಆತಂಕವಿರಲಿಲ್ಲ. ಈಗ ಬರೀ ನಾಟಕ ಮಾಡಬೇಕಿತ್ತಷ್ಟೇ. ನಾನದನ್ನು ಸರಿಯಾಗಿ ನಿಭಾಯಿಸುತ್ತಿದ್ದೆ. ಅವನ ಪರಿಯಾಣದೊಳಗೆ ರೊಟ್ಟಿ ಹಾಕಿ ಮೇಲೆ ಹುಳಿಪಲ್ಲೆ ಹಾಕಿದೆ. ಇನ್ನೇನು ಮರೆಪ್ಪ ಎಡೆಗೆ ಕೈ ಹಾಕಬೇಕಿ, ಎಲ್ಲಿದ್ದಳೋ ಮಾರಾಯ್ತಿ ಸಿಂಗಾರೆವ್ವ, ಬಂದವಳೇ ಜೋರಿನಿಂದ ಅವನ ಮುಂದಿನ ಎಡೆಯನ್ನು ಒದ್ದಳು. ಅದು ಅಷ್ಟು ದೂರ ಹೋಗಿ ಬಿತ್ತು. ನನಗೂ ಹೊಯ್ಕಾಯ್ತು. ಮರೆಪ್ಪ ತಬ್ಬಿಬ್ಬಾಗಿ ನನ್ನನ್ನೂ ಅವಳನ್ನೂ ನೋಡುತ್ತಿರುವಂತೆ ಸಿಂಗಾರೆವ್ವ ತಟ್ಟೆಯಲ್ಲಿ ನಮಗಾಗಿ ಇಟ್ಟಿದ್ದ ಅಡಿಗೆ ಬಡಿಸಿ ತಂದು ಮುಂದಿಟ್ಟಳು. ಮರೆಪ್ಪ ಉಂಡನೋ ಇಲ್ಲವೋ, ಇನ್ನೇನಾದರೂ ಇನ್ನಷ್ಟು ಬೇಕಾದರೇನು ಮಾಡುವನೋ – ಎಂದು ಯಾವುದನ್ನೂ ಯೋಚಿಸದೆ ನನ್ನ ರೆಟ್ಟೆಗೆ ಕೈ ಹಾಕಿ ಗಟ್ಟಿಯಾಗಿ ಹಿಡಿದು ಹಾಗೆ ಎಳೆದುಕೊಂಡು ಅಂತಸ್ತಿಗೆ ಕೋಣೆಗೆ ನಡೆದಳು.

ಭದ್ರವಾಗಿ ಬಾಗಿಲಿಕ್ಕಿದಳು. ಉರಿಯುತ್ತಿದ್ದ ದೀಪ ಕಳೆದಳು. ಕಿಡಕಿಯ ಹತ್ತಿರ ನನ್ನನ್ನು ಸೆಳೆಸು ತಬ್ಬಿಕೊಂಡು ಕಿವಿಯಲ್ಲಿ “ಶೀನಿಂಗೀ” ಎಂದಳು.

“ಯಾಕೆವ್ವ?”

“ಹುಣವಿ ಎರಡ ದಿನ ಮುಂದಿರ‍್ತ ಅಲ್ಲೇನs ನಾ ಹೊರಗಾಗೋದು?”

“ಹೌಂದು”

“ಹುಣ್ಣಿವ್ಯಾಗಿ ಹತ್ತ ದಿನ ಆಯ್ತು, ನಾ ಇನ್ನs ಹೊರಗಾಗಿಲ್ಲ.”

“ಅಂದರ?”

“ಇಷ್ಟೂ ತಿಳಿಯಾಣಿಲ್ಲೇನ ಹಡಸು?” ಎನ್ನುತ್ತ ನನಗೊಂದು ಸಣ್ಣ ಏಟು ಹಾಕಿ ಮತ್ತೆ ಹತ್ತಿರ ಸೆಳೆದುಕೊಂಡು ಕಿವಿಯಲ್ಲಿ “ನಾ ಬಸರಾಗಿರಬೇಕೇನಗs?” ಎಂದಳು. ನನಗಾದ ಸಂತೋಷ ಹೇಳತೀರದು. ಮರ್ಯಾ ಬಚಾವಾದದ್ದಕ್ಕೊ, ಅವಳು ಗರ್ಭಿಣಿಯಾದದ್ದರ ಸಂತೋಷಕ್ಕೋ ಎಡೆ ಒದ್ದಿದ್ದಳಲ್ಲ ಅದರ ಕಾರಣ ತಿಳಿದು ಖುಷಿಯೋ – ಮುಂಜಾನೆಯಿಂದ ಅನುಭವಿಸಿದ ಆತಂಕ ಹಗುರಾದದ್ದಕ್ಕೋ – ನನ್ನ ಕಣ್ಣಲ್ಲಿ ಫಳಕ್ಕನೆ ನೀರು ಚಿಮ್ಮಿ ಹಾಗೇ ಅವಳನ್ನು ತಬ್ಬಿಕೊಂಡು “ಅಯ್ ನನ್ನ ತಾಯೀ, ನಿನ್ನ ಆಸೆ ಈಡೇರಲಿ” ಎಂದವಳೇ ಮಕ್ಕಳಿಗೆ ಕೊಡುವಂತೆ ಲಟಲಟ ಮುದ್ದುಕೊಟ್ಟೆ. ಎಂದೂ ಪ್ರೀತಿ ಕಾಣದ ಅನಾಥ ಕೂಸಿನಂತೆ ಅವಳು ಸುಮ್ಮನೇ ನಿಂತು ಮುದ್ದುಕೊಡಿಸಿಕೊಂಡಳು. ಆಮೇಲೆ ತಡಕಿ ನನ್ನ ಕೈ ಹಿಡಿದುಕೊಂಡು ಸುಮ್ಮನೆ ಒಂದು ನಿಮಿಷ ಗೋಡೆಗಾತು ನಿಂತಳು. ನಾನೂ ಅವಳ ಹಾಗೆ ನಿಂತೆ. ಪರಸ್ಪರ ಮುಖ ಕಾಣಿಸುತ್ತಿರಲಿಲ್ಲ. ಅವಳ ಮುಖ ಕೆಂಪಾಗಿರುವುದನ್ನು, ಕಣ್ಣು ಹೊಳೆಯುವುದನ್ನು, ತುಟಿಗಳು ಅದುರುವುದನ್ನು ಕಲ್ಪಿಸಿಕೊಂಡೆ. ಅವಳ ಮುಖ ನೋಡಬೇಕೆಂಬ ಹುಚ್ಚು ಆಸೆ ನನ್ನಲ್ಲಿ ಕುದಿಯುತ್ತಿತ್ತು. ನನ್ನ ಕೈಯಿನ್ನೂ ಅವಳ ಕೈಯಲ್ಲೇ ಇತ್ತು. ಅದನ್ನು ತೆಗೆದುಕೊಂಡು ತನ್ನ ಹೊಟ್ಟೆಯ ಮೇಲೆ ಮೆಲ್ಲಗೆ ಇಟ್ಟುಕೊಂಡು, ನನ್ನ ಕೈಯಿಂದಲೇ ಸವರಿಕೊಳ್ಳುತ್ತ “ಹೌಂದ?” ಎಂದಳು. ಒಂದು ತಿಂಗಳಲ್ಲೇನು ಹೊಟ್ಟೆ ಉಬ್ಬೀತು? ಆದರೆ ಅವಳ ಖುಶಿಗೆ ನಾನ್ಯಾಕ ಅಡ್ಡಬರಲಿ, ಮೆಲ್ಲಗೆ ಕೈಯಾಡಿಸುತ್ತ “ಹೌಂದೆವ್ವಾ” ಅಂದೆ. ಬಸುರು ಎಂದರೆ ಹಗುರವಾದ ಮಾತೆ? ಯಾರಿಂದಾದದ್ದೂ ಎಂಬ ಮಾತು ಮುಂದೆ ಬಂದೇ ಬರುತ್ತದೆ. ದೇಸಾಯಿಗೆ ಸಂಶಯ ಬರದೇ ಇರುತ್ತದೆಯೇ? ಆದರೆ ಅದ್ಯಾವುದೂ ಆಗ ಇಬ್ಬರ ತಲೆಯಲ್ಲೂ ಹೋಗಲಿಲ್ಲ.

“ಅದ್ಯಾಕೋ ನಮ್ಮತ್ತಿ ನಡಪಟ್ಟಿ ಹಾಡs ಹಾಡವೊಲ್ದಲ್ಲ – ಬಾ, ನೋಡಿಕೊಂಡ ಊಟಾ ಮಾಡಿ ಬರೋಣು” ಎಂದಳು. ಕೆಳಗಿಳಿದೆವು.

ಮರ್ಯಾ ಉಂಡು ಹೋಗಿದ್ದ. ನಾವೂ ಅವಸರದಲ್ಲಿ ಊಟಾ ಮಾಡಿ ಹಿರಿಯ ದೊರೆಸಾನಿಯ ಕೋಣೆಗೆ ಹೋದೆವು. ಅವಳು ನಿದ್ದೆಯಲ್ಲಿದ್ದಳು. ಎಬ್ಬಿಸುವುದ್ಯಾಕೆಂದು ತಿರುಗಿ ಬಂದೆವು.

ಸಾಮಾನ್ಯವಾಗಿ ಅವಳು ಅಷ್ಟು ಬೇಗ ನಿದ್ದೆ ಮಾಡಿದವಳೇ ಅಲ್ಲ. ಈ ಮಧ್ಯೆ ಊಟಾ ಕಡಿಮೆ ಮಾಡಿದ್ದಳು. ಎರಡೂಟ ಮತ್ತು ಬೈಲಕಡೆ ಮಾಡಿಸುವುದನ್ನು ಬಿಟ್ಟರೆ ನಾವ್ಯಾರೂ ಅವಳ ಕಡೆ ಗಮನ ಕೊಟ್ಟಿರಲೇ ಇಲ್ಲ. ನಮ್ಮದೇ ನಮಗೆ ಹಾಸ್ಯುಂಡು ಬೀಸಿ ಒಗೆವಷ್ಟಿದ್ದಾಗ ಅವಳ ಹರಟೆ ಕೇಳುವುದಕ್ಕೆ ಸಮಯವೆಲ್ಲಿತ್ತು? ಊರಿನಲ್ಲೂ ಅವಳ ಬಗ್ಗೆ ಕರಗುವಂಥವರಿರಲಿಲ್ಲ. ಇಷ್ಟು ದಿನ ಅವಳು ಹಾಸಿಗೆ ಹಿಡಿದು ಬಿದ್ದಿದ್ದಳಲ್ಲ, ಊರಿನ ಅವಳ ಓರಗೆಯ ಒಬ್ಬಳಾದರೂ ಬಂದು ಮಾತಾಡಿಸಿರಲಿಲ್ಲ. ಹೆಣ್ಣಾಳುಗಳಂತೂ ಅವಳ ಕೋಣೆಯ ಕಡೆಗೆ ಮುಖ ಮಾಡಿದವರಲ್ಲ. ಪ್ರಾಯದ ಕಾಲದಲ್ಲಿ ಭಾರೀ ಜಿಪುಣಿಯಂತೆ, ಸಾಯುತ್ತೇನೆಂದರೂ ಯಾರಿಗೂ ಒಂದು ಹನಿ ನೀರು ಹಾಕಿದವಳಲ್ಲವಂತೆ. ಹೀಗಿದ್ದರೆ ಯಾರು ಬರುತ್ತಾರೆ? ಅವಳ ಬಗ್ಗೆ ಹೆಂಗಸರು ಆಡಿಕೊಳ್ಳುವುದಿತ್ತು. “ಅಯ್ಯೋ ಹಿರಿ ದೊರೆಸಾನಿ ಎಂಜಲು ಸಿಡಿದೀದಂತ ಎಂಜಲ ಕೈಯಿಂದ ಕಾಗೀ ಸೈತ ಹೊಡೀತಿರಲಿಲ್ಲ” – ಎಂದು. ಮಧ್ಯೆ ಮಧ್ಯೆ ಮುದುಕಿ ನಮ್ಮನ್ನು ಬಾಯಿಮಾಡಿ ಕರೆಯುವುದಿತ್ತು. ನಾವು ಕೇಳಿದರೂ ಕೇಳಿಸದವರಂತೆ ಇದ್ದುಬಿಡುತ್ತಿದ್ದೆವು. ನಮ್ಮ ಕಾರಾಭಾರ್ಯಾವುದೂ ಮುದುಕಿಗೆ ತಿಳಿಯುತ್ತಿರಲಿಲ್ಲವಾದ್ದರಿಂದ ಅವಳ ಬಗ್ಗೆ ನಿಷ್ಕಾಳಜಿಯಿಂದಲೇ ಇದ್ದೆವು.

ರಾತ್ರಿ ಗಾಢನಿದ್ದೆಯಲ್ಲಿದ್ದಾಗ ಸಿಂಗಾರೆವ್ವ ನನ್ನನ್ನೆಬ್ಬಿಸಿ “ಶೀನಿಂಗೀ, ನನಗೊಂದ ಕೆಟ್ಟಕನಸ ಬಿದ್ದಿತ್ತಲ್ಲ” ಎಂದಳು. ನಿದ್ದೆಯಿನ್ನೂ ನನ್ನ ಕಣ್ಣಿಗಂಟಿಕೊಂಡೇ ಇತ್ತು. ಹಾಗೆ ಹೊರಳಿ “ನಾಳಿ ಹೇಳಿಯಂತೆ ಮಲಕ್ಕೊ ಎವ್ವಾ” ಅಂದೆ. ಅವಳು ಬಿಡಲಿಲ್ಲ. “ಎದ್ದ ಕೊರಗs” ಎಂದು ಹೇಳಿ ರಟ್ಟೆಯಲ್ಲಿ ಕೈಹಾಕಿ ಎಬ್ಬಿಸಿ, ನನ್ನ ಪಕ್ಕದಲ್ಲೇ ಕೂತು,

“ಶೀನಿಂಗೀ ಅರಮನ್ಯಾಗ ಕಾಗಿ ಆಡತಿತ್ತು” ಎಂದಳು. ಅದನ್ನು ಕೇಳಿದೊಡನೆ ಥಟ್ಟನೆ ನನ್ನ ನಿದ್ದೆ ಹಾರಿಹೋಯಿತು.

“ಏನಂದಿ??” ಅಂದೆ.

“ಅರಮನ್ಯಾಗ ಕಾಗಿ ಆಡತಿತ್ತು! ನಮ್ಮತ್ತಿ ಓಡ್ಯಾಡಿ ಕೋಲುಚಾಚಿ ಹೋಡೀತಿದ್ದಳು. ಅದು ಆಕೀ ಕೋಲಿಗಿ ಸಿಗsಲಿಲ್ಲ. ಕಡೀಕಂದರ ನಮ್ಮತ್ತಿ ನಡಪಟ್ಟಿ ಹಾಡಹಾಡಾಕ ಸುರು ಮಾಡಿದ್ದು. ಕಾಗಿ ಹೋಗಿ ಆಕಿ ಬಾಯಿ ಕುಕ್ಕುತ್ತಿತ್ತು! ಅದನ್ನೋಡ್ತ ಎನಗ ಎಚ್ಚರಾಯ್ತು.”

ಇದಂತೂ ಸ್ಪಷ್ಟವಾಗಿ ಅನಿಷ್ಟ ಸೂಚಕ ಕನಸೇ ಸೈ. ನಾನು ಆ ಕನಸನ್ನೇ ಕಲ್ಪಿಸಿಕೊಳ್ಳುತ್ತ ಭಯಗೊಳ್ಳುತ್ತಿದ್ದೆ. ಸಿಂಗಾರೆವ್ವ

“ಶೀನಿಂಗಿ, ನಮ್ಮತ್ತಿ ಕರಧಾಂಗಾಯ್ತಲ್ಲ? ಬಾ” ಎಂದು ಎದ್ದಳು. ಮರೆಪ್ಪನ ಹೆದರಿಕೆ ನಮ್ಮ ಮನಸ್ಸಿನಲ್ಲಿ ಸುಳಿಯಲೇ ಇಲ್ಲ. ಎದ್ದು ಕಂದೀಲು ತಗೊಂಡು ಮುಂದಾದೆ.

ನಾವು ಬಂದುದು ಮುದುಕಿಗೆ ಕಾಲಸಪ್ಪಳದಿಂದಲೆ ಗೊತ್ತಾಯ್ತು. “ಯಾರು, ಶೀನಿಂಗೀ?” ಎಂದಳು. “ಹೌದ ನಾನs ಸಿಂಗಾರೆವ್ವ ಬಂದಾಳ’ ಎಂದೆ. ಸಿಂಗಾರೆವ್ವ ಹತ್ತಿರ ಹೋಗಿ ಏಳುವುದಕ್ಕೆ ಪ್ರಯತ್ನ ಮಾಡುತ್ತಿದ್ದ ಅವಳನ್ನು ಕೂರಿಸಿದಳು. ಹತ್ತಿರ ಕೂತವಳು ತನ್ನ ಸೊಸೆಯೇ ಎಂದು ಗೊತ್ತಾಗಿ ಮುದುಕಿಗೆ ಸಂತೋಷವಾಯ್ತು. ಅಕ್ಕರೆಯಿಂದ ಅವಳ ಮೈತುಂಬ ಕೈಯಾಡಿಸಿದಳು. ಆಶೀರ್ವಾದ ಮಾಡುವಂತೆ ನಾಕು ಐದು ಬಾರಿ ತಲೆ ಸವರಿದಳು. ಸಿಂಗಾರೆವ್ವನ ಹೊಟ್ಟೆ ಹಿಸುಕುವುದನ್ನು ಮರೆಯಲಿಲ್ಲ. “ಈ ಸಲ ನಿನ್ನ ಸೊಸೀ ಹೊಟ್ಟಿ ನಿಂತೈತಿ” ಎಂದು ಹೇಳುವವಳಿದ್ದೆ. ಅಷ್ಟರಲ್ಲಿ ಮುದುಕಿಯೇ ಸುರುಮಾಡಿದಳು.

“ಆಗಳೆ ಯಾರೋ ಐದ ಮಂದಿ ಹೆಂಗಸರು ಬಂದಾಗಿತ್ತು. ಅವರ್ಯಾರು?”

ನಾವು ಪರಸ್ಪರ ಮುಖ ನೋಡಿಕೊಂಡೆವು.

“ರಾತ್ರಿ ಯಾಳೆ ಯಾರ ಬರತಾರವ್ವ? ಎನ್ನೂ ಕತ್ತಲೈತಿ” ಅಂದೆ.

“ಯಾರೋ ನಿಮ್ಮ ಗೆಳೆತೇರೇನೋ ಅಂದುಕೊಂಡೆ. ಇನ್ನೂ ಕತ್ತಲೈತಿ?”

“ಹೌಂದು, ಕನಸಗಿನಸ ಕಂಡಿಯೋ ಏನೋ! ಎಂಥವರಿದ್ದರು?”

“ಥೇಟ ನಮ್ಮ ಸಿಂಗಾರೆವ್ವನ ಹಂತವರs. ಹೊಸಾ ಪೀತಾಂಬರ ಉಟ್ಟಿದ್ದರು. ಮೈತುಂಬ ದಾಗೀನ ಝಗಮಗ ಹೊಳೀತಿದ್ದವು. ಕುಮುದವ್ವನ ಗುಡೀಗಿ ಹೋಗೋಣ ಬಾ, ಅಂತಿದ್ದರು”

ಈ ಮಾತು ಕೇಳಿ ಸಿಂಗಾರೆವ್ವ ಮಳಮಳ ನನ್ನ ಮುಖ ನೋಡಿದಳು. ಆ ಮುದುಕಿ ಎಚ್ಚರದಲ್ಲಿದ್ದಾಳೋ, ಇನ್ನೂ ಕನಸು ಕಾಣುತ್ತಿದ್ದಾಳೋ – ನನಗೆ ಬೇಗ ಬಗೆಹರಿಯಲಿಲ್ಲ.

“ಕನಸ ಕಂಡೀದಿ ಅಷ್ಟs. ಆರಾಮ ಮಲಗು” ಅಂದೆ.

“ಕನಸ ಅಂತೀಯಾ?” ಅಂತಂದು ತನ್ನ ಸೊಸೆಯ ಕಡೆ ತಿರುಗಿ,

“ಸಿಂಗಾರೆವ್ವ, ನಾ ಸಾಯತೇನೋ ಏನೋ” ಎಂದಳು. ಕನಸು ಬೇರೆ ಕಂಡಿದ್ದಳಲ್ಲ. ಈ ಮಾತು ಕೇಳಿದೊಡನೆ ಸಿಂಗಾರೆವ್ವ ಥಟ್ಟನೆ ಕಣ್ಣೀರು ತಂದಳು.

“ಏನ ಅಂತೀಬೇ ಎವ್ವಾ, ಏನೇನೋ ಹೇಳಿ ಹೆದರಿಸ್ತಿ, ಆಗಲೇ ನಿನ್ನ ಸೊಸಿ ಅಳಾಕ ಹತ್ಯಾಳ” ಎಂದೆ.

“ಅಳಬ್ಯಾಡ ನನ್ನ ಕಂದಾ, ತುಂಬಿದ ಮನ್ಯಾಗ ನೀ ಅಳಬಾರದು” ಎಂದು ಹೇಳಿ ತಡಕಾಡಿ ಸೊಸೆಯ ಕಣ್ಣೀರೊರಿಸಿದಳು. ಸಿಂಗಾರೆವ್ವ “ಎವ್ವಾ” ಎನ್ನುತ್ತ ಅತ್ತೆಯನ್ನು ತಬ್ಬಿ ಅಳತೊಡಗಿದಳು. ಮಲಗುವ ಮಕ್ಕಳನ್ನು ತಟ್ಟುವ ಹಾಗೆ ಮುದುಕಿ ಸೊಸೆಯ ತಲೆ ತಟ್ಟುತ್ತ,

“ಚಿಂತೀ ಮಾಡಬ್ಯಾಡ ಕಂದಾ, ನಾ ಬಿಡು, ಹೆಚ್ಚ ಪುಣ್ಯಾ ಮಾಡಲಿಲ್ಲ. ಈ ಅರಮನ್ಯಾಗ ಹಿಂದ ಹಿರೇರಿದ್ದರಲ್ಲ. ಅವರೆಲ್ಲಾ ಪುಣ್ಯವಂತರು. ಅವರ ಪುಣ್ಯ ನಿನ್ನ ನೆತ್ತಿಗಿ ನಿಲ್ಲತೈತಿ. ನಾ ಏನ ಹೇಳಿದೆ ಅಂತ ಅಮ್ಯಾಲ ನಿನಗs ತಿಳೀತೈತಿ. ಮಲಕೋ ಹೋಗು. ಶೀನಿಂಗೀ, ಕರಕೊಂಡ ಹೋಗs”

– ಎಂದಳು. ಸಿಂಗಾರೆವ್ವ ಅಳುತ್ತಲೇ ಇದ್ದಳು.

“ನಾ ಸಾಯೋದಿಲ್ಲ ಹೋಗ ಮಗಳs. ನಾ ಅಂದರ ಹಗರ ಹೆಂಗಸಂತ ತಿಳೀಬ್ಯಾಡ; ನಿನ್ನ ಮಗನ್ನ ನೋಡೇ ಸಾಯ್ತಿನಿ.”

– ಎನ್ನುತ್ತ ಮುದುಕಿ ತಲೆ ತಟ್ಟುತ್ತಲೇ ಇದ್ದಳು. ತುಸು ಹೊತ್ತು ಹಾಗೇ ಕಾಲ ಕಳೆದೆವು. ಸಿಂಗಾರೆವ್ವನಿಗೆ ತುಸು ಸಮಾಧಾನವಾಗಿತ್ತು. ಹೋಗಿ ಮಲಗಿರೆಂದು ಮುದುಕಿ ಮತ್ತೆ ಮತ್ತೆ ಹೇಳಿದಳು. ಉಪಾಯವಿಲ್ಲದೆ ಇಬ್ಬರೂ ಎದ್ದೆವು. ನನಗೆ ತಡೆಯಲಿಕ್ಕಾಗಲಿಲ್ಲ. ಅವಳ ಕಿವಿಯಲ್ಲಿ.

“ಈ ತಿಂಗಳು ನಿನ್ನ ಸೊಸಿ ಮುಟ್ಟ ನಿಂತೈತಿ.”

– ಎಂದೆ. ಹೀಗೆನ್ನುವುದೇ ತಡ. ಮುದುಕಿ “ಹಾ” ಎಂದು ಆನಂದದಲ್ಲಿ ಹೌಹಾರಿ “ಸಿಂಗಾರೆವ್ವ” ಎಂದು ಕರೆದು ಸುತ್ತಿನ ದಿಕ್ಕುಗಳಿಗೆಲ್ಲ ಕೈ ಮುಗಿದಳು. ಸೊಸೆ ಬಂದೊಡನೆ ಅಡರಾಸಿ ತಬ್ಬಿಕೊಂಡು “ನನ್ನ ಕಂದಾ ನನ್ನ ಕಂದಾ” ಎಂದು ಹೇಳುತ್ತ ಕಣ್ಣೀರಿನ ದೊಡ್ಡ ದೊಡ್ಡ ಹನಿಗಳನ್ನು ಸುರಿಸುತ್ತ “ಏ ಶೀನಿಂಗಿ, ಮೊದಲs ಯಾಕಗs ಹೇಳಲಿಲ್ಲ?” ಎಂದು ಕೋಪಿಸಿಕೊಂಡು ಮನೆತನದ ಗುರುಹಿರಿಯರನ್ನೆಲ್ಲಾ ಸ್ಮರಿಸಿದಳು. ಎಳೇಮಕ್ಕಳ ಹಾಗೆ ಹಾಸಿಗೆಯಲ್ಲೇ ಕುಣಿದು ಕುಪ್ಪಳಿಸಿದಳು. ಸೊಸೆಯ ಸೊಂಟ ತಬ್ಬಿಕೊಂಡು ಸೀರೆ ಕೆಳಗಿಳಿಸಿ ಅದರ ಸುತ್ತ ವಿಚಿತ್ರವಾಗಿ ಕೈಯಾಡಿಸತೊಡಗಿದಳು. ಅವಳು ಅಷ್ಟರಮಟ್ಟಿಗೆ ಸೀರೆ ಕೆಳಗಿಳಿಸಿದ್ದಕ್ಕೆ ಸಿಂಗಾರೆವ್ವನಿಗೆ ನಾಚಿಕೆ ಬಂದು ಸೀರೆ ಎತ್ತಿಕೊಳ್ಳುತ್ತಿದ್ದಳು. ಇವಳು “ತಡಿ ತಡಿಯೇ” ಎಂದು ಹಾಗೇ ನಿಲ್ಲಿಸಿ ತನ್ನ ಸೊಂಟದ ಚಿನ್ನದ ನಡುಪಟ್ಟಿ ಬಿಚ್ಚಿ ತಡಕಾಡಿ ಸಿಂಗಾರೆವ್ವನ ಸೊಂಟಕ್ಕೆ ಹಾಕಿದಳು. “ಬ್ಯಾಡಬ್ಯಾಡತ್ತೆವ್ವ” ಎಂದು ಸಿಂಗಾರೆವ್ವ ಎಷ್ಟು ಹೇಳಿದರೂ ಕೇಳಲಿಲ್ಲ. ಹಾಕಿದ ಮೇಲೆ ಅವಳ ಕುರುಡು ಕಣ್ಣಿನಲ್ಲೂ ಬೆಳಕಾಡಿತು. ಹಾಗೇ ಸೊಸೆಯ ಸೊಂಟ ಹಿಡಿದುಕೊಂಡು.

“ನಿನ್ನ ಅಂದಚಂದ ನೋಡಕ ನನಗೆ ಕಣ್ಣಿಲ್ಲs ಮಗಳs. ನನ್ನ ಕಾಲ ಬೀಳು ಆಶೀರ್ವಾದ ಮಾಡತೇನ” ಎಂದು ಪಾದ ಚಾಚಿದಳು. ಸಿಂಗಾರೆವ್ವ ಭಯಭಕ್ತಿಯಿಂದ ಎರಗಿದೊಡನೆ ಅವಳ ತಲೆಯ ಮೇಲೆ ಎರಡೂ ಕೈಯೂರಿ “ಆಶುಳ್ಳಕ್ಕಾಗಿ, ಹತ್ತ ಮಕ್ಕಳ ತಾಯಾಗs ಮಗಳ” ಎಂದು ಹರಸಿದಳು. ಇಬ್ಬರ ಕಣ್ಣಲ್ಲೇನು, ಈ ದೃಶ್ಯ ನೋಡಿ ನನ್ನ ಕಣ್ಣಲ್ಲೂ ನೀರಾಡಿತು.

“ಹಿರೇರ ಪುಣ್ಯ ನಿನಗೈತಿ ಕಂದಾ, ಕಾಳಜಿ ಮಾಡಬ್ಯಾಡ. ನಾಳಿ ಮಾತಾಡೋಣಂತ. ಹೋಗಿ ಮಲಕ್ಕೋ. ಏ ಶೀನಿಂಗಿ, ಸಿಂಗಾರೆವ್ವನ್ನ ಹೂವಿನಾಂಗ ನೋಡಿಕೋಬೇಕ ನೋಡು. ಈಗ ಬೇಕಾದರ ನೋಡು. ಕುಮುದವ್ವನ ಗುಡೀಗಿ ಹೋಗಾಕ ನಾ ತಯ್ಯಾರ” ಎಂದು ಮುದುಕಿ ಹೇಳಿದೊಡನೆ ನಾನು ಬಾಯಿ ಹಾಕಿ,

“ಏನ ಆಯಿ, ಥೇಟ ಸಾಯುವರ‍್ಹಾಂಗ ಮಾಡತಿ. ಮಲಗಂದರ ಸಿಂಗಾರೆವ್ವ ಹೆಂಗಮಲಗ್ಯಾಳು?” ಎಂದೆ. ಮುದುಕಿಯ ಮುಖ ಕಳೆಗೊಂಡಿತು.

“ನನ್ನ ಹಾಟ್ಯಾನ ಮಗಳs ನಾ ಸಾಯತೇನೇನs? ಮೊಮ್ಮಗನ ಉಚ್ಚೀ ಕುಡದ ಸಾಯತೇನ! ಮೊನ್ನಿ ಆ ಜಂಗಮ ಹುಚ್ಚಯ್ಯ ಕನಸಿನಾಗ ಬಂದಿದ್ದ. ‘ಯಾಕ ಬಂದ್ಯೋ ಜಂಗಮಾ?’ ಅಂದೆ. ಅವ ‘ನಿನ್ನ ಪೂಜೀ ಮಾಡಾಕ ಬಂದೇನಬೇ’ ಅಂದ! ಅಂದವನ ನನ ನೆತ್ತೀ ಮ್ಯಾಲ ಬಲಗಾಲ ಇಡಾಕ ಬಂದಾ! ನಾ ಕೇಳತೀನ? ಕೋಲ ತಗೊಂಡ, – ನನ್ನ ಹಾಟ ನೆಕ್ಕೋ ಭಾಡ್ಯಾ, ನನ್ನ ಪೂಜೀ ಮಾಡತೀಯೇನೋ? ನಿಂದs ಮಾಡತೀನಿ ತಡಿ, ಅಂತಂದು ಕೋಲಿನಿಂದ ಹಿಂಗ ಚುಚ್ಚಿದೆ.”

– ಎಂದು ಹೇಳಿ, “ಹೋಗ್ರಿನ್ನ, ಮಲಗ್ಹೋಗ್ರಿ, ಮಲಗ್ಹೋಗ್ರಿ” ಎಂದು ನಮಗೂ ಕೋಲು ಬಾಚಿ ಚುಚ್ಚತೊಡಗಿದಳು. ನಾವು ತಪ್ಪಿಸಿಕೊಂಡು ಹೊರಬಂದೆವು. ಅರಮನೆಯ ಕಂಬಗಳೆಲ್ಲ ನಮ್ಮನ್ನೇ ದುರುಗುಟ್ಟಿ ನೋಡುತ್ತಿರುವಂತೆ ಕಂಡವು. ಅಡಿಗೆ ಮನೆಯ ಕಡೆ ಕತ್ತಲೆಗೆ ಉಸಿರುಗಟ್ಟಿತ್ತು. ನಮ್ಮ ಕಂದೀಲಿನ ಬೆಳಕಿಗೆ ಅದು ಮಿಸುಕಾಡಲೇ ಇಲ್ಲ. ಇನ್ನೂ ಬಸರಿನ ಬಗ್ಗೆ ಮೂಡುವ ಸಂಶಯಗಳನ್ನು ನಾವು ಎದುರಿಸಬೇಕಾಗಿತ್ತು. ಹೋಗಿ ಅದೇ ಮಾತಾಡುತ್ತ ಮಲಗಿದೆವು.

ಇಬ್ಬರಿಗೂ ಪೂರ್ತಿ ಬೆಳಗಾದ ಮೇಲೆಯೇ ಎಚ್ಚರವಾಯ್ತು. ಹಿರಿಯ ದೊರೆಸಾನಿಗೆ ಬೈಲಕಡೆ ಮಾಡಿಸುವ ಸಮಯವಾಯ್ತಲ್ಲಾ ಎಂದು ಅವಳ ಕೋಣೆಗೆ ಹೋದೆ. ಮುದುಕಿ ಯಾವಾಗಲೋ ಹರಾ ಅಂದಿದ್ದಳು. ಅವಳಿಗೆ ಹೀಗೆ ಸ್ನಾನ ಮಾಡಿಸಬೇಕಾಗಿ ಬಂದದ್ದಕ್ಕೆ ನನಗೆ ಬಹಳ ದುಃಖವಾಗಿತ್ತು. ಸಿಂಗಾರೆವ್ವನ ದುಃಖ ಹೇಳತೀರದು. “ನಿನ್ನ ಜೋಡಿ ನಿನ್ನ ಹಾಡೂ ಮಣ್ಣಗೂಡಿತs ಅತ್ತೀ” ಎಂದು ಅಳುತ್ತಿದ್ದಳು. ಅದರ ಕಾರಣ ನನಗೆ ಆಮೇಲೆ ತಿಳಿಯಿತು. ಸಿಂಗಾರೆವ್ವ ಅಂದೇ ಹೊರಗಾಗಿದ್ದಳು.

* * *