ಮಾರನೇ ದಿನ ಶೀನಿಂಗವ್ವನಿಗೆ ಭಾರೀ ಖುಶಿಯಾಗುವ ಹಾಗೆ ಮಾಡಿದ್ದೆ. ಮಧ್ಯಾಹ್ನ ನನ್ನ ಹಳೇ ದೋಸ್ತಿ ಕಿಳ್ಳಿಕ್ಯಾತರ ಕಟಬ್ಯಾನಿಂದ ಮೀನು ತರಿಸಿ ಶೀನಿಂಗವ್ವನಿಗೆ ಕಳಿಸಿದ್ದೆ. ಮನೆಯಿಂದ ರೊಟ್ಟಿ ಕಳಿಸಿ ಶಿರಸೈಲನಿಂದ ಡಬಲ್ ಹರಕೆ ಸಂದಾಯವಾಗುವ ಹಾಗೆ ಮಾಡಿದ್ದೆ. ಸಾಯಂಕಾಲ ನಾಲ್ಕು ನಾಲ್ಕೂವರೆಗೆ ಅರಮನೆಗೆ ಹೋದೆವು. ಅಷ್ಟರಲ್ಲಿ ಶಿರಸೈಲ ಹೋಗಿ ಮಲಗಿದವಳನ್ನು ಎಬ್ಬಿಸಿದ್ದ. ಶೀನಿಂಗವ್ವ ಬಂದು ಕೂತಳು. ‘ಚಾ ಮಾಡತೇನ ತಮ್ಮಾ’ ಎಂದಳು. ಅಂತೂ ಮುದುಕಿ ಅಡ್ಡಿಯಿಲ್ಲ ಎಂದುಕೊಂಡು “ನೀ ಎದ್ದ ಹೋಗೋದ ಬ್ಯಾಡಬೇ, ಇಲ್ಲೇ ತರಿಸೋಣ ತಡಿ” ಎಂದು ಶಿರಸೈಲನ ಕಡೆ ನೋಡಿದೆ. ಅವಳ ಕಥೆ ನಡೆಯುವ ಆಗಿನ ಶಿವಾಪುರದಲ್ಲಿ  ಚಹದ ಅಂಗಡಿ ಇರಲಿಲ್ಲ. ಆದರೆ ಈಗ “ದಿ ಕುಮುದವ್ವ ಪ್ರಸನ್ನ ಶಿವಾಪುರ ಟೀ ಕ್ಲಬ್” ಎಂಬುದೊಂದಿದೆ. ಶಿರಸೈಲ “ನಾ ಬರೋತನಕ ಕಥಿ ಹಚ್ಚಬ್ಯಾಡ” ಎನ್ನುತ್ತ ಚಹಾ ಹೇಳಿ ಬರಲು ಟೀ ಕ್ಲಬ್ಬಿಗೆ ಹೋದ. ನಿದ್ದೆಯ ಮಬ್ಬಿನ್ನೂ ಮುದುಕಿಯನ್ನು ಬಿಟ್ಟಿರಲಿಲ್ಲ. ಕಥೆಯ ಮೂಡಿಗೂ ಬಂದಿರಲಿಲ್ಲ. ಅವಸರವೇನೆಂದು ನಾನು ಸುಮ್ಮನಿದ್ದೆ. ಆದರೆ ಆ ಮುದುಕಿ ಮಾತಿನವಳು. ಮಾತಿಲ್ಲದೆ ಇಬ್ಬರು ಟಕಮಕ ಕೂತದ್ದನ್ನ ಸಹಿಸುತ್ತಿರಲಿಲ್ಲ. ನನ್ನ ವಿಚಾರ ಕೇಳತೊಡಗಿದಳು. ನನ್ನ ತಂದೆ, ಅಣ್ಣಂದಿರ ವಿಚಾರ ಅವಳಿಗೆ ಸ್ವಲ್ಪ ಗೊತ್ತಿತ್ತು. ನಾನು ಊರು ಬಿಟ್ಟಾದ ಮೇಲಿನ ಕಥೆ ಕೇಳಿದಳು. ಅವಳು ಕೇಳಿದ್ದನ್ನೆಲ್ಲ ವಿವರಿಸುತ್ತ ನನ್ನ ಸುಖದುಃಖ ತೋಡಿಕೊಂಡೆ. ಅವಳು ನಂಬಲೇ ಇಲ್ಲ. ನಾನು ಸಾವಿರದ ಸರದಾರನೆಂದು ಒಂದು ಮಾತಿಗೆ ಸಾವಿರ ರೂಪಾಯಿ ತೆಗೆದುಕೊಳ್ಳುತ್ತೇನೆ ಎಂದೂ ಶಿರಸೈಲ ಹೇಳಿದ್ದ. ಆ ಮುದುಕಿ ಅದನ್ನು ಅಕ್ಷರಶಃ ನಂಬಿದ್ದಳು. ಹಾಗಲ್ಲ ಎಂದರೆ ಅವಳು “ನನಗ ಸಾಲ ಕೊಡಬ್ಯಾಡಪ್ಪ, ನಿನಗ ಬರ‍್ತಿದ್ದರ ಬರಲಿ. ಇನ್ನಷ್ಟ ಬರಲೇಳು” ಎಂದು ಹೇಳಿ ತುಸು ಧ್ಯಾನಿಸಿದಳು. ಆಮೇಲೆ ಮೆಲ್ಲಗೆ ನನ್ನ ಕಡೆ ಕತ್ತು ಒಲೆದು “ನಿನ್ನ ಮಾತಿಗಿ ಸಾವಿರಾದರೆ, ನಮ್ಮ ರವಿಚಂದ್ರನ ಮಾತಿಗೆಷ್ಟು?” ಅಂದಳು. ಆಧುನಿಕ ನಗರ ಜೀವನದ ಬಗೆಗಿನ ಕನಸುಗಳು ಅವಳ ಹಣದ ಮೌಲ್ಯವನ್ನೇ ಏರುಪೇರು ಮಾಡಿದ್ದವು. ರವಿಚಂದ್ರ ನಗರದಲ್ಲಿ ಏನು ಮಾಡುತ್ತಿದ್ದಾನೆಂದು ಅವಳಿಗೆ ತಿಳಿಯದು. ನಗರದಲ್ಲಿದ್ದಾನೆಂದ ಮೇಲೆ ಗಳಿಸುತ್ತಿದ್ದಾನೆಂಬುದೊಂದೇ ಅವಳ ತರ್ಕ. ನನಗೆ ತೋಚಿದ ರೀತಿಯಲ್ಲಿ ಅವಳ ಕನಸುಗಳನ್ನು ತಿದ್ದಲು ಯತ್ನಿಸಿದೆ. ತನ್ನ ಅಭಿಪ್ರಾಯ ಬದಲಿಸಿಕೊಳ್ಳಲು ಮುದುಕಿ ಸಿದ್ದಳಿರಲಿಲ್ಲ. ಇಂಥ ಅಭಿಪ್ರಾಯ ನಮ್ಮೂರಿನ ಅನೇಕರಲ್ಲಿದೆ. ನಗರದ ಜನ ಏನು ಮಾಡಿದರೂ ದುಡ್ಡು ಸಿಗುತ್ತದೆಂದೂ ತಾವಿಲ್ಲಿ ಬೆವರು ಸುರಿಸಿದರೂ ಒಂದು ಕಾಸೂ ಹುಟ್ಟುವುದಿಲ್ಲವೆಂದೂ ಅವನ ನಂಬಿಕೆಯಾಗಿತ್ತು. ಮತ್ತು ಇದೇ ಕಾರಣಕ್ಕಾಗಿ ಬದುಕಿನ ಸರಳ ಸಂತೋಷಕ್ಕೂ ಎರವಾಗಿದ್ದರು. ನಾನು ಹೀಗೆ ಯೋಚಿಸುತ್ತಿರುವಲ್ಲಿ ಶಿರಸೈಲ ಚಹ ತಗಂಬಂದ. ಮೂವರೂ ಕುಡಿದೆವು. ಮುದುಕಿ ಹರುಪಾದಳು. “ನಿನ್ನೆ ಎಲ್ಲಿ ಬಿಟ್ಟಿದ್ದೆ?” ಎಂದಳು.

“ಮೊಲದ ಪಲ್ಯ ಸಾರು ಮಾಡಿ, ಗೌಡ – ಗೌಡ್ತಿಗೆ ಬಡಿಸಿದಿಯಲ್ಲ. ಅವರುಂಡು ನಂದ ಗಾಂವಿಗೆ ಹೋದರು. ಮರ್ಯಾ ನೇಗಿಲ ಕುಳ ಒಗೆದ.”

“ಇನ್ನ ಮ್ಯಾಲ ಅವಗ ಮರ್ಯಾ ಅನ್ನಬ್ಯಾಡಪ್ಪ, ಮರೆಪ್ಪಾ ಅನ್ನು.”

– ಎನ್ನುತ್ತ ಕಥೆ ಸುರು ಮಾಡಿದಳು;

“ಸರಗಂ ದೇಸಾಯಿ ಮೊಲ ತಂದಿದ್ದನಲ್ಲ, ಅದು ಅವನೇ ಹೊಡೆದಿದ್ದರಬೇಕು ಇಲ್ಲಾ ಅವನ ಜೊತೆಗಿನ ಕಾಳ್ಯಾ, ನಿಂಗ್ಯಾ ಹೊಡೆದದ್ದಿರಬೇಕೆಂದು ನಾವು ಅಂದುಕೊಂಡಿದ್ದೆವು. ಆದರೆ ಅದು ಸುಳ್ಳಾಗಿತ್ತು. ಸಂಜೀತನಕ ಬಂದೂಕು ಹೊತ್ತು ತಿರುಗಿ ತಿರುಗಿ ದಣಿವಾಗಿ ಮೊಲವಿಲ್ಲದೆ ತಿರುಗಿ ಬರುತ್ತಿದ್ದಾಗ ಮರೆಪ್ಪ ಬಂದು “ತಗೊಳ್ತಿ ಸರಕಾರ” ಎಂದು ಕೊಟ್ಟಿದ್ದನಂತೆ. ಆಮೇಲೆ ಈ ವಿಷಯ ಕಾಳ್ಯಾನಿಂದ ತಿಳಿಯಿತು. ನಮಗೆ ಆಮೇಲೆ ತಿಳಿದದ್ದೇ ಒಳ್ಳೆಯಾಯ್ತು. ಹಾಗೇನಾದರೂ ಅದು ಮೊದಲೇ ತಿಳಿದಿದ್ದರೆ ಸಿಂಗಾರೆವ್ವ ಹೊರಗೆಸೆದು ಬಿಡುತ್ತಿದ್ದಳು.

ಅದಲ್ಲ ಮುಖ್ಯ. ಇಲ್ಲಿ ಕೇಳು – ಅದೇ ನೆಪದಿಂದ ಮರೆಪ್ಪ ದೇಸಾಯಿಯ ಬಲಗೈ ಬಂಟನಾಗಿಬಿಟ್ಟ. ಬಿತ್ತನೆಯಲ್ಲಿ ತೊಡಗಿದ್ದರಿಂದ ಬಯಲಾಟದ ಗೆಣೆಕಾರರ್ಯಾರೂ ದೇಸಾಯಿಗೆ ಸಿಗುತ್ತಿರಲಿಲ್ಲ. ಅವನು ಹೊಲ ತೋಟಗಳಲ್ಲಿ ಅಷ್ಟು ಆಸಕ್ತಿಯವನೂ ಅಲ್ಲ. ದೇಸಗತಿ ಜಮೀನಿನ ಗತಿ ದೇವರೇ ಬಲ್ಲ, ಆಳುಗಳು ತಮಗೆ ತಿಳಿದಂತೆ, ತಿಳಿದಷ್ಟು ಬೀಜ ಬಿತ್ತಿ ಗೊಬ್ಬರ ಹಾಕಿದ್ದರು. ದೇಸಗತಿಯ ಬಣಿವೆ ಹಿರಿದರೆಷ್ಟು, ಬಿಟ್ಟರೆಷ್ಟು – ಅವರಿಗೆ ಬರುವ ಚಾಕರಿ ತಪ್ಪಿದ್ದಲ್ಲವಲ್ಲ – ಹಾಗಿದ್ದರು. ಈಗ ಅರಮನೆಗೆ ಬರುತ್ತಿದ್ದವನು ಪರಮಶೆಟ್ಟಿ ಒಬ್ಬನೇ. ಅವನು ಸಾಲ ವಸೂಲಿಗೆ ಬರುತ್ತಿದ್ದ. ದೇಸಾಯಿ ಏನೇನೋ ಹೇಳಿ ಕಳಿಸುತ್ತಿದ್ದ. ಹೀಗಾಗಿ ಪಾಪ, ದೇಸಾಯಿ ಒಬ್ಬಂಟಿಯಾಗಿದ್ದ. ಅವನ ಪ್ರಾಸ ನುಡಿಸವರಿಲ್ಲ. ತಾರಕ ಕೇಳವರಿಲ್ಲ, ಈಚೀಚೆ ಬೇಹೋಶ್ ಕೂಡ ಆಗಿರಲಿಲ್ಲ.

ಮರೆಪ್ಪ ಸಿಕ್ಕ ನೋಡು, ಅವನೋ ಎಳೆ ಸಿಕ್ಕರೆ ಹಚಡ ನುಂಗುವ ಪೈಕಿ. ದೇಸಾಯಿ ಎದುರಿಗಿದ್ದರೆ ಬಾಗಿದವನು ತಲೆ ಎತ್ತುತ್ತಿರಲೇ ಇಲ್ಲ. ಯಾವುದಾದರೂ ಕೆಲಸಕ್ಕೆ ಕಳಿಸಿದರೆ ಅದನ್ನು ಮಾಡಿಕೊಂಡೇ ಬರುತ್ತಿದ್ದ. ಮಾತ್ರವಲ್ಲ, ಕೆಲಸಕ್ಕೆ ಹೋಗುವಾಗೊಮ್ಮೆ ಮಾಡಿಕೊಂಡು ಬಂದ ಮೇಲೊಮ್ಮೆ ಬಯಲಾಟದ ಚಾರರಂತೆ ಬಲಗೈ ತನ್ನ ಹಣೆಗೂ ಮೊಳಕಾಲಿಗೂ ತಾಗಿಸಿ ಕುರ್ಣಿಸಾತ ಮಾಡುತ್ತಿದ್ದ. ಸಾಲದಕ್ಕೆ ಮಾತಿಗೊಮ್ಮೆ ಸರಕಾರ ಎನ್ನುತ್ತಿದ್ದ. ಇದು ನಮ್ಮ ದೇಸಾಯಿಗೆ ಹುಚ್ಚು ಹಿಡಿಸಿತು. ಅವನಿಂದ ಸರಕಾರ ಎನ್ನಿಸಿಕೊಳ್ಳುವುದಕ್ಕಾಗಿಯೇ ಅನೇಕ ಬಾರಿ ಏನೇನೋ ಹರಟುತ್ತಿದ್ದ. ಅವನ ವಿನಯದಿಂದ ದೇಸಾಯಿ ಎಷ್ಟು ಪ್ರಸನ್ನನಾದನೆಂದರೆ ಆ ವಿನಯವೇ ಚಟವಾಗಿ ಒಂದೇ ವಾರದಲ್ಲಿ ಅವನಿಗೆ ಎರಡು ಬಡ್ತಿ ಕೊಟ್ಟ. ಮೊದ ಮೊದಲು ದೇಸಾಯಿಯ ಆಳಾಗಿದ್ದವನು ವಾರದಂತ್ಯಕ್ಕೆ ಅವನು ಬಂದೂಕು ಹಿಡಿದು ಸದಾ ಕಾಲಿಗಂಟಿರುವ ಬಂಡನಾಗಿಬಿಟ್ಟ. ದೇಸಾಯಿ ಏನು ಹೇಳಿದರೂ ಮೆಚ್ಚುತ್ತಿದ್ದ. ಅವನ ತಾರಕ ಪ್ರಾಸಗಳಿಗೆ ಬೆಕ್ಕಸಬೆರಗಾಗುತ್ತಿದ್ದ. ಇಂಥ ದೊಡ್ಡ ಮನುಷ್ಯ ಜಗತ್ತಿನಲ್ಲೇ ಇಲ್ಲವೆಂಬಂತೆ ನಟಿಸುತ್ತಿದ್ದ. ದೇಸಾಯಿ ಈ ನಟನೆಯನ್ನು ನಂಬುತ್ತಿದ್ದ.

ಒಮ್ಮೆ ದರ್ಬಾರಿನಾಚೆ ನಿಂತಿದ್ದವನು ದೇಸಾಯಿ ಮೇಲಕ್ಕೇ ಕರೆದು ಕುರ್ಚಿಯ ಬಳಿಯಲ್ಲೇ ಕೂರಿಸಿಕೊಂಡ. ಮರೆಪ್ಪ ಕಿಲಾಡಿ, ಇಷ್ಟು ಅವಕಾಶ ದೇಸಾಯಿಯ ಕಾಲು ತಿಕ್ಕತೊಡಗಿದ. ಅಂದಿನಿಂದ ಆಳುಗಳು ಕೆಲಸ ಮಾಡದಿದ್ದರೆ ಅವರೆಲ್ಲರ ಕೆಲಸ ಇವನೊಬ್ಬನೇ ಮಾಡುತ್ತಿದ್ದ. ಮತ್ತು ತಾನು ಮಾಡಿದ್ದು ಹ್ಯಾಗೋ ದೇಸಾಯಿಯ ಗಮನಕ್ಕೆ ಬರುವ ಹಾಗೆ ಮಾಡುತ್ತಿದ್ದ. ಹೊಲೆಯನಿಗೆ ದರ್ಬಾರಿನಲ್ಲಿ ಕಾಲಿಡುವುದಕ್ಕೆ ಅವಕಾಶ ಕೊಡುವುದು ಸಲ್ಲದೆಂದು ಪರಮಶೆಟ್ಟಿ ಹೇಳಿದ. ದೇಸಾಯಿ ಕೇಳಲಿಲ್ಲ “ಇವನು ನನ್ನ ಬಂಟ” ಎಂದು ಜಂಬದಿಂದ ಹೇಳಿ ನಕ್ಕ. ಒಬ್ಬ ಹೊಲೆಯನಿಗೆ ಅಷ್ಟು ಸಲಿಗೆ ತೋರುವುದು ಹೆಚ್ಚೆ. ಅದರೇನು ಮಾಡುವುದು? ಅವನ ಸೇವೆಯಿಂದ ಇವನು ಧನ್ಯನಾಗಿದ್ದ. ತನ್ನ ಔದಾರ್ಯದಿಂದ ಅವನನ್ನೂ ಧನ್ಯಗೊಳಿಸಬೇಕೆಂದು ಮೇಲೆ ಕರೆದಿದ್ದ. “ಸಂತೋಷವಾಯ್ತೊ?” ಎಂದು ನಕ್ಕು ಕೇಳಿದ. ಅದಕ್ಕೆ ಮರೆಪ್ಪ “ಕಾಲಿದ್ದಲ್ಲಿ ಕಾಲ್ಮರಿ, ನೀವಿದ್ದಲ್ಲಿ ನಾನು” ಎಂದುಬಿಟ್ಟ. ಈ ಮಾತಿನಿಂದ ದೇಸಾಯಿ ಎಷ್ಟು ಧನ್ಯವಾದನೆಂದರೆ ಆಗಾಗ ಈ ಮಾತನ್ನು ಬೇರೆ ಆಳುಗಳಿಗೆ, ಬರುಹೋಗುವವರಿಗೆ ಹೇಳಿ ಹೇಳಿ ಆನಂದಪಟ್ಟ. ಆ ದಿನ ರಾತ್ರಿ ಕುಡಿದಾಗ ಮರೆಪ್ಪನ ತೊಡೆಯ ಮೇಲೊರಗಿ “ಮರ್ಯಾ, ನೀನs ನನ್ನ ರಾಣಿ ಆಗಿ ಹುಟ್ಟಬೇಕಾಗಿತ್ತೋ!” ಎಂದು ಕಣ್ಣೀರಿಟ್ಟ.

ದೊಡ್ಡವನಾದ ಮೇಲೆ ಮರೆಪ್ಪನನ್ನು ನಾನು ಸರಿಯಾಗಿ ನೋಡಿದ್ದು ಈಗಲೇ. ಅವನಲ್ಲಿ ಒರಟಾದ, ಯಾರೂ ಎದುರಿಸಲಾಗದ ಶಕ್ತಿ ತುಂಬಿದೆ ಎಂದು ನೋಡಿದ ಯಾರಿಗೂ ಅನಿಸುತ್ತಿತ್ತು. ವಯಸ್ಸಿಗೆ ಮೀರಿ ಬೆಳೆದ ಅವನ ಮೈಕಟ್ಟು ಒಂದೇ ಅಖಂಡ ಕಲ್ಲಿನಲ್ಲಿ ಒಡ್ಡೊಡ್ಡಾಗಿ ಕೆತ್ತಿದ ಮೂರ್ತಿಯಂತಿತ್ತು. ಮುಖದಲ್ಲಿ ಮಾತ್ರ ಗೆದ್ದ ಅಥವಾ ಕೊನೆಗೆ ತಾನೇ ಗೆಲ್ಲುವೆನೆಂಬ ವಿಶ್ವಾಸದ ಕಳೆಯಿರುತ್ತಿತ್ತು. ಅದು ತನ್ನ ತೋಳಬಲದಲ್ಲಿಯ ನಂಬಿಕೆಯಿಂದ ಹುಟ್ಟಿದ್ದಾಗಿರಬಹುದು. ಮರೆಪ್ಪ ಒಬ್ಬ ದರಿದ್ರ ಹೊಲೆಯನಂತೆ, ತಾಯಿಯನ್ನು ಕೊಂದ ಪಾಪಿಯಂತೆ ಕಾಣುತ್ತಲೇ ಇರಲಿಲ್ಲ. ಬದಲು ನಿರ್ಗತಿಕನಾದ ದೊಡ್ಡ ಮನುಷ್ಯನಂತೆ, ಸದಾ ಬಾರೀ ವ್ಯಥೆಯಿಂದ ಕೂಡಿದ, ಆದರೆ ತನ್ನ ಸಹಾಯಕ್ಕೆ ಯಾರನ್ನೂ ಅವಲಂಬಿಸಿದವನ ಹಾಗೆ ಕಾಣುತ್ತಿದ್ದ. ಅವನ ಕಣ್ಣೋ ಉಕ್ಕಿನವು. ಅವುಗಳಿಂದ ಹೊರಡುವ ನೋಟ ಗುರಿಯಾದವರ ಒಳಹೊಕ್ಕು ಪಾರಾಗಿ ಬರುತ್ತಿದ್ದವು. ಇವನ ಎದುರಿಗೆ ನಿಂತಿದ್ದರೆ ದೇಸಾಯಿ ಸಣ್ಣ ಬಾಲಕನಂತೆ ಕಾಣುತ್ತಿದ್ದ. ಆಗಲೇ ಅವನು ಅರಮನೆಯನ್ನು ಇದು ತನ್ನದೇ ಎಂಬಂತೆ ನೋಡುತ್ತಿದ್ದ.

ಇದನ್ನೆಲ್ಲಾ ನಾವು ಗಮನಿಸುತ್ತಿದ್ದೆವು. ಒಂದು ಸಣ್ಣ ಸಮಾಧಾನವೆಂದರೆ ಮರೆಪ್ಪ ಅಂತಸ್ತಿನ ಕೋಣೆಗೆ ನುಗ್ಗಿರಲಿಲ್ಲ. ಬಹುಶಃ ಸಜ್ಜನನಾದನೆಂದೂ ತಾನು ಮಾಡಿದ್ದರ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾನೆಂದೂ ನಾನು ಹೇಳಿದೆ. ಸಿಂಗಾರೆವ್ವ ನಂಬಲಿಲ್ಲ. ದೇಸಾಯಿ ಇಷ್ಟು ಹತ್ತಿರದವನಾದರೆ ಮುಂದೊಂದು ದಿನ ಅಪಾಯ ತಪ್ಪಿದ್ದಲ್ಲ ಎಂದು ಅವಳ ತರ್ಕ. ಆದರೆ ನಾವು ಅವನಿಗೆ ಹೆದರಬೇಕಾದ ಅಗತ್ಯವಿಲ್ಲವೆಂದೇ ಕಂಡಿತು. ಹುಚ್ಚಯ್ಯನನ್ನು ಕೊಂದವರೆಂಬ ಬೆದರಿಕೆಯನ್ನು ಅವನು ಹಾಕುವ ಪೈಕಿ ಅಲ್ಲ. ಹಾಗೆ ಹೇಳಿದ ಎನ್ನೋಣ, ಅವನ ಹತ್ತಿರ ಸಾಕ್ಷ್ಯಾಧಾರ ಏನಿದೆ? ಇದನ್ನೇ ಹೇಳಿ ಅವಳಿಗೆ ಧೈರ್ಯ ತುಂಬಲು ನೋಡಿದೆ. ನಾನೋ ಆ ದುರ್ಘಟನೆಯನ್ನು ಬರೀ ಸಾಕ್ಷಿಕಳಾಗಿ ನೋಡಿದಳು. ಅವಳಾದರೆ ಪ್ರತ್ಯಕ್ಷ ಅನುಭವಿಸಿದವಳು. ಹ್ಯಾಗೆ ನಂಬುತ್ತಾಳೆ? ದೇಸಾಯಿಗೆ ಮರೆಪ್ಪನಿಂದ ದೂರ ಇರಲು, ಅದು ಸಾಧ್ಯವಾಗದಿದ್ದರೆ ಅರಮನೆಯಿಂದಾದರೂ ಅವನನ್ನು ದೂರವಿಡಲು ತಾಕೀತು ಮಾಡುವುದಾಗಿ ನಿರ್ಧರಿಸಿದಳು. ಆದರೆ ಸರಗಂ ದೇಸಾಯಿ ಸಿಂಗಾರೆವ್ವನಿಗೆ ಸಿಕ್ಕಾಗಲೆಲ್ಲ ಕುಡಿದಿರುತ್ತಿದ್ದ ಮತ್ತು ಕುಡಿದಾಗಾಡುವ ಆ ಭಾಷೆಯನ್ನು ಸಿಂಗಾರೆವ್ವ ಇನ್ನೂ ಕಲಿತಿರಲಿಲ್ಲ. ಆಗ ಅವನೊಂದಿಗೆ ಮಾತಾಡಬೇಕೆಂದರೆ ಬಯಲಾಟದ ಬಣ್ಣ ಹಚ್ಚಿಕೊಳ್ಳಬೇಕು. ಮತ್ತು ಆ ಪರಿಭಾಷೆಯಲ್ಲೇ ಮಾತಾಡಬೇಕು. ಉದಾಹರಣೆಗೆ ಅಲ್ಲಿ ಗಂಡ ಹೆಂಡತಿ ಹೊಲ ಮನೆ ಮುಂತಾದ ಶಬ್ದಗಳೇ ಇರಲಿಲ್ಲ. ಏನಿದ್ದರೂ ರಾಜ, ರಾಣಿ, ಮಂತ್ರಿ, ಪ್ರಧಾನಿ, ರಾಜ್ಯ, ಅರಮನೆ… ನಗು ಬಂದಾಗ ಹಹ್ಹಾ ಎನ್ನುವುದು. ಆಳು ಬಂದಾಗ ತಾರಕ ನುಡಿಯುವುದು ಇತ್ಯಾದಿ. ಅದೂ ಒಮ್ಮೆ ಹುಸಿಹೋಗಿ ಗೋಳುಪಡಬೇಕಾದ ಪ್ರಸಂಗವೊದಗಿತು; ಸಿಂಗಾರೆವ್ವ ಅಜಾರಿ ಬಿದ್ದಾಗಿನಿಂದ ದೇಸಾಯಿ ಕೆಳಗೇ ಮಲಗುತ್ತಿದ್ದನಲ್ಲ. ಗುಣವಾದ ಮೇಲೂ ಅಂತಸ್ತಿಗೆ ಏರಿ ಬರಲೇ ಇಲ್ಲ. ಅವನಿಗದರ ಅಗತ್ಯ ಕಾಣಲಿಲ್ಲ. ಸಿಂಗಾರೆವ್ವನಿಗೆ ಅವನ ಕೊರತೆ ಕಾಣಲಿಲ್ಲ. ನಾನೇ ಅವಳ ಜೊತೆ ಮಲಗುತ್ತಿದ್ದೆ. ಸಂಜೆಯಿನ್ನೂ ಆಗಿರಲಿಲ್ಲ. ಹೋಗಿ ದೇಸಾಯಿಯನ್ನು ಕರೆದು ಬಾ ಎಂದು ನನ್ನನ್ನಟಿದಳು.

ನಾನು ಮೇಲೆ ಬಂದಾಗ ಸಿಂಗಾರೆವ್ವ ಕಿಡಕಿಯಿಂದ ಹೊರಗೆ ನೋಡುತ್ತಿದ್ದಳು. ಆ ಕಿಡಕಿಯಲ್ಲಿ ಮುಖ ಇಟ್ಟು ಹೊರಗೆ ನೋಡುವುದೆಂದರೆ ನಮಗಿಬ್ಬರಿಗೂ ಬಹಳ ಆನಂದ. ಅಥವಾ ನಮಗೊಂದು ಹೊರಗಿದೆಯೆಂದು ಅರಿವಾಗುತ್ತಿದ್ದದ್ದು ಈ ಸಣ್ಣ ಕಿಡಕಿಯಿಂದಲೇ. ಅದರಲ್ಲಿ ಕಾಣಿಸುವುದೇನು ಹೆಚ್ಚಿಗಿರಲಿಲ್ಲ. ಅರಮನೆಯ ಹಿತ್ತಲಿಗೆ ಅಂಟಿದ ಅವೆರಡು ಹೊಲೆಯರ ಗುಡಿಸಲುಗಳು ಅದರಾಚೆಯ ಹೊಲಗಳು. ಅವುಗಳ ತುದಿಯಿಂದ ಇನ್ನೊಂದು ಗುಡಿಸಲು, ಅದಕ್ಕಂಟಿ ಹುಚ್ಚಯ್ಯನ ಸಮಾಧಿ, ಕುಮುದವ್ವನ ಹುಣಸೇ ಮಳೆ ಇದ್ದವು. ಕುಮುದವ್ವನ ಆ ಹುಣಸೇ ಮಳೆ ಮಾತ್ರ ಯಾವಾಗ ನೋಡಿದರೂ ನಮಗೆ ಚಂದ ಕಾಣುತ್ತಿತ್ತು. ಅದೇ ನಮ್ಮ ಪಾಲಿಗೆ ಕ್ಷಿತಿಜವಾಗಿತ್ತು. ಅಲ್ಲಿಗೆ ಹೆಂಗಸರು ಹೋಗಬಾರದೆಂದು ಗೊತ್ತಿದ್ದರೂ ಒಮ್ಮೆ ಹ್ಯಾಗೋ ಮಾಡಿ ಹೋಗಿಯೇ ಬರಬೇಕೆಂದು, ಹುಣಸೇ ಮಳೆಯ ತುಂಬ ಓಡಾಡಿ ಆಟ ಆಡಿ ಬರಬೇಕೆಂದು ಮಾತಾಡಿಕೊಳ್ಳುತ್ತಿದ್ದೆವು. ಅಲ್ಲಿದ್ದ ಕುಮುದವ್ವನ ಗುಡಿ ಮತ್ತು ಮೂರ್ತಿಯ ವಿಚಾರವೂ ನಮಗೆ ಗೊತ್ತಿತ್ತು. ಕುಮುದವ್ವನ ಮೂರ್ತಿಯ ಬಗ್ಗೆ ಕೇಳು ನನಗೆಷ್ಟು ಗಾಬರಿಯಾಗಿದ್ದತೆಂದರೆ – ಒಂದು ದಿನ ನಾನು ಮೂರ್ತಿಯ ಮುಂದೆ ನಿಂತ ಹಾಗೆ, ಕುಮುದವ್ವನ ಸ್ಥಳದಲ್ಲಿ ಸಿಂಗಾರೆವ್ವ ಅದೇ ಭಂಗಿಯಲ್ಲಿ ಕೂತಿದ್ದಾಗ ಯಾವನೋ ಒಬ್ಬ ಹುಚ್ಚಯ್ಯನಂಥ ಪೂಜಾರಿ ಪೂಜೆ ಮಾಡಿದ ಹಾಗೆ, ಅವನೇ ಬರ ಬರುತ್ತ ಮರೆಪ್ಪ ಆದ ಹಾಗೆ, ಕನಸಾಗಿತ್ತು. ಹಾಗೆಂದು ಹೇಳಿದಾಗ ಸಿಂಗಾರೆವ್ವ “ಥೂ ಹಡಸು” ಎಂದು ಚಿವುಟಿದ್ದಳು.

ನಾನು ಸಿಂಗಾರೆವ್ವನ ಹಿಂದೆ ನಿಂತು ಕಿಟಕಿಯಲ್ಲಿ ನೋಡತೊಡಗಿದೆ. ಹೊಲ ಮೊಳಕೆಯೊಡೆದಿದ್ದವು. ಮೋಡ ಕವಿದಂತೆ ಕುಮುದವ್ವನ ಹುಣಸೇಮಳೆಯ ಅಂತರಾಳ ಮುಸುಕಾಗಿ ಗವಿಯಾದಂತೆ ಕಾಣುತ್ತಿತ್ತು. ಸೂರ್ಯ ಮೋಡಗಳ ಹೊರಬಂದು ಬಿಸಿಲು ಚೆಲ್ಲಿದಾಗ ಎಲ್ಲ ಪ್ರಕಾಶಮಾನವಾಗಿ ಬೆಳಗುತ್ತ ಇಡೀ ಮಳೆ ಚಿನ್ನದ ನಗೆ ನಕ್ಕಂತೆ, ಗಾಳಿಗೆ ತೇಲಾಡುತ್ತಿದ್ದ ಹುಣಸೇಗಿಡಗಳ ಎಲೆಗಳ ಮೇಲೆ ಬೆಳ್ಳಿ ಬಂಗಾರದ ಮುತ್ತು ತೂರಾಡಿದಂತೆ, ಮುಂಚಿನ ಹುಳುಗಳನ್ನು ಕೇರಿದಂತೆ ಕಾಣುತ್ತಿತ್ತು. ಇದೊಂದು ಅರೆಗಳಿಗೆ ಮಾತ್ರ ಮತ್ತೆ ಮೆಳೆ ಕಳ್ಳತನದಿಂದ ಸೆಳೆಯುತ್ತಿತ್ತು. ಇದ್ದಕ್ಕಿದ್ದಂತೆ ಉಳಿದ ಎಲ್ಲ ಕಡೆ ನೆರಳು, ಮೆಳೆಯ ಮೇಲೆ ಮಾತ್ರ ಬಿಸಿಲು ಬಿದ್ದು ಮಳೆಯೂ ಬೀಳತೊಡಗಿತು. ಮೆಳೆಯ ಬುಡದಲ್ಲಿ ಬಿಸಿಲಿನ ಕೋಲುಗಳು ಕೋಲಾಟ ನಡೆಸಿದ್ದರೆ ಮ್ಯಾಲೆ ಬಿಸಿಲಲ್ಲಿ ಹೊಳೆಯುವ ಹನಿ ಚಿನ್ನದ ಮಳೆ ಸುರಿವ ಹಾಗೆ ಕಂಡಿತು. ಇಬ್ಬರೂ “ಅಯ್ ಶಿವನs!” ಎಂದೆವು. ಆಗಲೇ ನಾನು ಬಂದದ್ದು ಅವಳಿಗೆ ಗೊತ್ತಾದದ್ದು, ತಿರುಗಿದೊಡನೆ ಒಮ್ಮೆ ಅವಳ ಮುಖ ಕಂದಿ ಬಾಡಿತು. ದೇಸಾಯಿ ಯಾವಾಗಲೋ ಬಂದು ಕಂಬದಲ್ಲಿಯ ಗೊಂಬೆಗಳನ್ನು ನೋಡುತ್ತ ಆಕಳಿಸುತ್ತಿದ್ದ.

ಹೇಳಿ ಕಳಿಸದ್ದು ಅವಳೇ ಆದರೂ ಅವನು ಬಂದದ್ದಕ್ಕೆ ಸಂತೋಷಪಡಲಿಲ್ಲ. ಎಳೇ ಕೂಸಿನ ಕೈಯೊಳಗಿನ ಕನ್ನಡಿ ಕಸಿದಾಗ ಆ ಕೂಸಿರುತ್ತದಲ್ಲ, ಆ ಥರ ಮುಖ ಮಾಡಿದಳು. ಕಣ್ಣು ಕಳೆ ಕಳೆದುಕೊಂಡಿದ್ದವು. ದೇಸಾಯಿ “ಏನ ಕರಿಸಿದ್ದು?” ಅಂದ. ಸಿಂಗಾರೆವ್ವ ಮಾತಾಡಲೇ ಬೇಕಿತ್ತಲ್ಲ ಮಾತಾಡಿದಳು;

“ಇಷ್ಟ ದಿನ ಬಯಲಾಟ ಮಾಡಿದೀರಿ. ಸಿಂಹಾಸನದಾಗ ರಾಜನ ಜೋಡಿ ನಾಯಿ ಕೂತದ್ದನ್ನ ನೋಡಿರೇನು?”

“ಇಲ್ಲ” ಎಂದಂದು ಯಾಕೆ ಹೀಗೆ ಹೇಳುತ್ತಿದ್ದಾಳೆಂದು ತಿಳಿಯದೆ ತಬ್ಬಿಬ್ಬಾಗಿ ಮತ್ತೆ ತಾನೆ “ಏನಂದ್ರಿ?” “ಏನಂದ್ರಿ?” ಎಂದ.

“ಆ ಹೊಲ್ಯಾಗಿಷ್ಟ ಅದರ ಕೊಟ್ಟರ ನೋಡಿದ ನಾಕ ಮಂದಿ ಏನಂದಾರು?”

“ಏನಂತಾರ? ನಿಮಗ್ಗೊತ್ತಿಲ್ಲ. ಭಾಳ ಛಲೋ ಮನುಶ ಅವ”

“ಚಲೋ ಮನಶ್ಯಾ ಇದ್ದರ, ಅವನ್ನs ಇಟ್ಟಗೊಂಡಿರ್ರಿ, ನಾ ಹೋಗತೀನಿ”

– ಅಂದಳು. ಸಿಂಗಾರೆವ್ವನ ಆಳದ ನಿರಾಸೆ ನನ್ನಲ್ಲಿ ಕಣ್ಣೀರು ಬರಿಸಿತು. ದೇಸಾಯಿ ಏನೂ ಹೇಳಲಿಲ್ಲ. ಎದ್ದು ಆಕಳಿಸಿ ಸರಸರ ಮೆಟ್ಟಿಲಿಳಿದು ಹೋದ. ಅವನು ಹೋದ ಮೇಲೆ ನಮಗೆ ಗೊತ್ತಾಯ್ತು: ಮರೆಪ್ಪ ಮರೆಯಲ್ಲಿ ನಿಂತಿದ್ದ ಎಂದು. “ಚಂಡಾಲ ದೈವ” ಎಂದು ಎರಡು ಸಲ ಹಣೆ ಹಣೆ ಬಡಿದುಕೊಂಡು ಸುಮ್ಮನಾದಳು.

ಆ ರಾತ್ರಿ ಇಬ್ಬರೂ ಊಟ ಮಾಡಲಿಲ್ಲ. ಸಿಂಗಾರೆವ್ವ ದಿಂಬಿನಲ್ಲಿ ನಿಟ್ಟುಸಿರು ತುಂಬುತ್ತ ಮಲಗಿದ್ದಳು. ನಾನೂ ದೀಪ ಆರಿಸಬೇಕೆಂದು ಈ ಕಡೆ ಬಂದರೆ ಬಾಗಿಲಲ್ಲಿ ಮರೆಪ್ಪ ಉಗುರು ಕಚ್ಚುತ್ತ ನಿಂತಿದ್ದ. “ಎವ್ವಾ” ಅಂದೆ. ನನ್ನ ದನಿಯ ಅನಿರೀಕ್ಷಿತ ಏರಿಳಿತ ಕೇಳಿ, ನನ್ನ ಕಡೆ ಹೊರಳಿ ಎದುರು ನಿಂತ ದೈತ್ಯನನ್ನು ನೋಡಿದಳು. ತಕ್ಷಣ ಎದ್ದು ನಿಂತು ಥರಥರ ನಡುಗ ತೊಡಗಿದಳು. ದನಿಮಾಡಿ ಅಳುವುದಕ್ಕೂ ಅವಳಿಗೆ ಧೈರ್ಯವಿರಲಿಲ್ಲ. ಆತ ರೆಪ್ಪೆಗಳನ್ನ ಇಕ್ಕಟ್ಟಾಗಿಸಿ ದೃಷ್ಟಿಯನ್ನ ಚೂಪಾಗಿಸಿ ಇರಿಯುವ ಹಾಗೆ ಅವಳನ್ನೇ ದುರುಗುಟ್ಟಿ ನೋಡಿದ. ತುಟಿ ಬಿಗಿ ಹಿಡಿದು ಮೂಗನ್ನು ಅರಳಿಸುತ್ತ ಹಾಗೆ ಬಾಗಿಲು ಮುಂದೆ ಮಾಡಿದ. ಸಿಂಗಾರೆವ್ವ “ಕೆಳಗ ದೇಸಾಯಿ ಇದ್ದಾನ ಕೂಗತೀನಿ” ಎಂದಳು ಸಣ್ಣ ದನಿಯಲ್ಲೇ. ಅವನು ಹೆದರಲೇ ಇಲ್ಲ. ತನ್ನ ಒರಟು ತುಟಿಗಳಲ್ಲಿ ತಾತ್ಸಾರಭರಿತ ನಗೆ ತೂರುತ್ತ, ದೃಢವಾದ ಹೆಜ್ಜೆಯಿಡುತ್ತ ಮುಂದೆ ಮಾತಿನಿಂದ ಜುಗುಪ್ಸೆಗೊಂಡವರಂತೆ ಬಾಯ ಕೊನೆಯನ್ನೊಮ್ಮೆ ಅಸಹ್ಯವಾಗಿ ಗೀಸಿ ನನ್ನ ಕಡೆ ಹಾರಿ ಉಗುಳಿ ಸಿಂಗಾರೆವ್ವನ ಕಡೆ ನಡೆದ. ಮೆಲ್ಲಗೆ ಹೋದವನೆ, ಆ ಚಂಡಾಲ – ಅವನ ಕೈಗೆ ಹಾವು ಹರಿಯಲಿ – ಜೋರಿನಿಂದ ಅವಳ ಕೆನ್ನೆಗೆ ಫಳೀರೆಂದು ಏಟು ಹಾಕಿದ. ಸಿಂಗಾರೆವ್ವ ತತ್ತರಿಸಿ ಹಾಸಿಗೆಯ ಮೇಲುರುಳಿ ವಿಲಿವಿಲಿ ಒದ್ದಾಡಿದಳು. ನಾನು “ಅಯ್ಯೋ!” ಎಂದು ಒದರುವಷ್ಟರಲ್ಲಿ ಯಾರೋ ಮೆಟ್ಟಲೇರಿ ಬರುತ್ತಿರುವ ಸಪ್ಪಳಾಯಿತು. ಬಂದು ಧಡಾರನೆ ಬಾಗಿಲು ತೆರೆದವನು ದೇಸಾಯಿ. ಕಂದೀಲು ಹಿಡಿದುಕೊಂಡು “ಏನು ಏನು” ಎನ್ನುತ್ತ ಒಳ ಬಂದ. ಎದುರು ನೋಡಿದರೆ ಮಂಚದ ಬಳಿ ಥರಥರ ನಡುಗುತ್ತ ಅಸ್ತವ್ಯಸ್ತಳಾಗಿ ನಿಂತಿದ್ದ ರಾಣಿಯನ್ನು ನೋಡಿ, ನೋಡನೋಡುತ್ತ ಮುಖ ಕೆಂಜಗಾಗಿಸಿ ಬೇಹೋಶ್ ಆಗಿ ಬಿದ್ದ. ಆ ಗಾಬರಿಯಲ್ಲೂ ನಾನು ಓಡಿಹೋಗಿ ಬೀಳುತ್ತಿದ್ದ ಕಂದೀಲು ಹಿಡಿದುಕೊಂಡೆ. ಅದ್ಯಾವ ಪರಿಯಲ್ಲಿ ಮಾಯವಾಗಿದ್ದನೋ, ಮರೆಪ್ಪ ಅಲ್ಲಿರಲೇ ಇಲ್ಲ!

* * *