ಆ ದಿನ ಇಷ್ಟೊಂದು ಅನಿರೀಕ್ಷಿತಗಳು ಘಟಿಸಿದ್ದವಲ್ಲ, ಎಷ್ಟೆಂದರೆ ನಾನು ಮತ್ತು ಸಿಂಗಾರೆವ್ವ ಮಾತಾಡಿಕೊಳ್ಳುವುದು ಜರೂರಾಗಿತ್ತು. ಮಲಗಿದಾಗ ಮಾತಾಡಿಕೊಳ್ಳೋಣವೆಂದರೆ ನಮ್ಮ ನಡುವೆ ನಿಂಗವ್ವ ಗೌಡ್ತಿಯಿದ್ದಳು. ಆಕೆಗೆ ತಿಳಿಯಬಾರದ ಸಂಗತಿಗಳೆಷ್ಟೋ ನಮ್ಮ ಒಳಗಿದ್ದವು. ಕೆಳಗೆ ಗೌಡ ಮತ್ತು ದೇಸಾಯಿ ಮಲಗಿದ್ದುದರಿಂದ ಅಲ್ಲಿಗೆ ಹೋಗುವಂತಿರಲಿಲ್ಲ. ಕೊನೆಗೆ ಬೈಲಕಡೆ ಹೋಗುವ ನೆಪ ಮಾಡಿಕೊಂಡು ಹೊರಟು ನಿಂತರೆ ನಿಂಗವ್ವ ಗೌಡ್ತಿ ತಾನೂ ಬರುತ್ತೇನೆಂದು ಹೇಳಿದಳು. ಆಯ್ತು ಉಪಾಯವಿಲ್ಲವೆಂದು ಮಲಗಿದೆವು.

ದೇಸಾಯಿ ಶೆಟ್ಟಿಗೆ ಕೊಡುತ್ತೇನೆಂದದ್ದು ಅಖಂಡವಾದ ಮೂವತ್ತೆಕರೆ ತೋಟ. ಅದರಲ್ಲಿಯ ಬಾವಿ, ಮನೆ, ಗಿಡ, ಮರ ಲೆಕ್ಕಹಾಕಿದರೆ ಯಾರಾದರೂ ಮೂರ್ನಾಲ್ಕು ಲಕ್ಷದ ಬೆಲೆಯನ್ನು ದುಸರಾ ಮಾತಿಲ್ಲದೆ ಕೊಡಬೇಕು, ಅಂಥ ತೋಟ ಅದು. ಆದರೆ ಅಷ್ಟನ್ನು ಕೊಟ್ಟು ಕೊಳ್ಳಬಲ್ಲ ಶ್ರೀಮಂತ ಆ ಊರಿನಲ್ಲಿರಲಿಲ್ಲ. ಇದ್ದವನ್ನೊಬ್ಬ ಆ ಶೆಟ್ಟಿ, ಆತನ ಶ್ರೀಮಂತಿಕೆ ಕೂಡ ದೇಸಗತಿಯಿಂದಲೇ ಕೊಬ್ಬಿದ್ದು. ಅವನಿಗೆ ಈ ಬಾಬತ್ತಿನಲ್ಲಿ ಎದುರಾಳಿಗಳೇ ಇಲ್ಲದ್ದರಿಂದ ಆತ ಕೇಳಿದೇ ಕೊನೆಯ ಬೆಲೆಯಾಗುತ್ತಿತ್ತು. ಹಾಗೆಂದು ತೋಟ ಮಾರದಿರುವುದೂ ಸಾಧ್ಯವಿರಲಿಲ್ಲ. ಯಾಕೆಂದರೆ ಅಷ್ಟು ಸಾಲವಂತೂ ಆಗಿತ್ತಲ್ಲ. ಆ ಸಾಲ ತೀರಿಸುವ ದಾರಿಗಳೂ ಇರಲಿಲ್ಲ. ಮನಸ್ಸು ಮಾಡಿದ್ದರೆ ಈಗಿರುವ ಹೊಲಗಳಲ್ಲಿ ಚೆನ್ನಾಗಿ ದುಡಿದರೆ, ದುಡಿಸಿದರೆ ಒಂದೆರಡು ಬೆಳೆಗಳಲ್ಲೇ ದೇಸಾಯಿ ಶ್ರೀಮಂತನಾಗಬಹುದಿತ್ತು… ಇತ್ಯಾದಿ…

ನಮ್ಮ ಮಾತು ಕೇಳ ಕೇಳತ್ತ ನಿಂಗವ್ವ ಗೌಡ್ತಿಗೆ ನಮ್ಮ ಅಸಹಾಯಕತೆ ಸಹನವಾಗಲಿಲ್ಲವೆಂದು ತೋರುತ್ತದೆ. ಎದ್ದು ಕೂತವಳೇ “ಹಿಂಗ ಅವ ಹೊಲಾ ಮಾರಿಕೊಂಡ ಹೋಗಲಿ, ನೀ ನೋಡತಾ ಇರು. ನಾಳಿ ನಿನ್ನ ಕೈಗಿ ಸರವಿಜೋಳಿಗೆ ಕೊಡತಾನಷ್ಟ ತಿಳಕೋ” ಎಂದು ಹೇಳಿ, ಕೊಡುವ ಎಚ್ಚರ ಕೊಟ್ಟಾಯಿತೆಂದು ಮಲಗಿದಳು. ಆ ಮೇಲೆ ನಾವೇನೂ ಮಾತಾಡಲಿಲ್ಲ. ಆದರೆ ನಿದ್ದೆಯೂ ಹತ್ತಲಿಲ್ಲ. ನನ್ನ ಪಾಡಿಗೆ ನಾನು ವಿಚಾರ ಮಾಡುತ್ತ ಬಿದ್ದಿಕೊಂಡೆ.

ಮರೆಪ್ಪನನ್ನು ಹೊರಗೆ ಹಾಕಲು ಇದರಂಥ ಒಳ್ಳೇ ಅವಕಾಶ ಇನ್ನು ಮೇಲೆ ಸಿಕ್ಕಲಾರದು. ಆತ ಗೌಡನ ಭಯದಲ್ಲಿ ಮರೆಯಾಗಿದ್ದ ನಿಜ. ಆದರೆ ಇದರಲ್ಲಿ ಹೊಯ್ಕಿನ ಸಂಗತಿಗಳಿದ್ದವು. ಆತ ಭಯಗೊಂಡದ್ದು ಗೌಡನಿಗಲ್ಲ, ದೇಸಾಯಿಗೆ; ದೇಸಾಯಿಯ ಕಣ್ಣಿನಲ್ಲಿ ತಾನು ಖೂನಿಯಾಗುತ್ತೇನಲ್ಲಾ ಎಂಬುದಕ್ಕೆ. ಆದರೆ ಎಷ್ಟು ದಿನ ಹೀಗೆ ಮರೆಯಾದಾನು? ಇಂದೇ ಗೌಡ ನಂದಗಾಂವಿಗೆ ಹೋದರೆ ನಾಳೆಯೇ ಅವನು ಹಾಜರಾಗುವುದೂ ಅಷ್ಟೇ ಖಾತ್ರಿಯಿತ್ತು. ಸಜ್ಜನನಾದ ದೇಸಾಯಿಯ ಕೋಪವನ್ನು ರಿಪೇರಿ ಮಾಡುವುದು ಅವನಿಗೆ ಸುಲಭದ ಕೆಲಸ. ದೇಸಾಯರ ಆಸ್ತಿ ಬೇಕಾಬಿಟ್ಟಿಯಾಗಿ ಹೋಗುವುದು ಅವನಿಗೂ ಇಷ್ಟವಿರಲಿಲ್ಲವೆಂದು ತೋರುತ್ತದೆ, ತೋಟ ಮಾರಾಟದ ಕಾಗದ ಕದ್ದಿದ್ದ. ಹಿಂದೆ ರಿಜಿಸ್ಟ್ರಿ ಮಾಡೋದಕ್ಕೆ ದೇಸಾಯಿ ಗೋಕಾವಿಗೆ ಹೊಂಟಾಗೆಲ್ಲ ಕುಡಿಸಿ ತಪ್ಪಿಸಿದ್ದ. ತೋಟ ಉಳಿಯುವ ಹಾಗೆ ಮಾಡುವುದಕ್ಕೆ ಈಗಿದ್ದ ಆಸೆ ಮತ್ತು ಉಪಾಯವೆಂದರೆ ಅವನೊಬ್ಬನೇ ಎಂದು ಅನ್ನಿಸಿತು. ನಾನು ಹೀಗೆ ವಿಚಾರ ಮಾಡುತ್ತಿದ್ದಾಗ ಸಿಂಗಾರೆವ್ವ ಎದ್ದು ಹೋಗಿ ಕಿಡಿಕಿಯ ಬಳಿ ನಿಂತಳು. ಬಹುಶಃ ಅಲ್ಲಿಗೇ ಬರಲಿ ಎಂದು ಸೂಚಿಸಲು ಹೀಗೆ ಮಾಡಿದಳೇನೋ ಅಂದುಕೊಂಡು ನಾನೂ ಎದ್ದು ಹೋದೆ. ಹೊರಗೆ ಬೆಳದಿಂಗಳು ಭರ್ಜರಿಯಾಗಿತ್ತು. ಹೊಲ ಬಂಡೆಗಳು ಬೆಳ್ಳಿ ನೀರಲ್ಲಿ ಅದ್ದಿ ತೆಗೆದಂತಿದ್ದವು. ಬಿಳೀ ಹಾಳೆಯ ಮೇಲೆ ಮಕ್ಕಳು ಕಪ್ಪು ಮಸಿ ಚೆಲ್ಲಿದ ಹಾಗೆ ಹುಣಿಸೇ ಮೆಳೆಯಿತ್ತು. ಅದರ ತುದಿಯಂಚಿನಲ್ಲಿ ಬೆಳ್ಳಿಯ ವಕ್ರಗೆರೆ ಮೂಡಿ, ಆಗೀಗ ಗಾಳಿ ಬೀಸಿದಾಗ ಅದು ಮೆಲ್ಲಗೆ ಅಲುಗಿ ಅದರ ಬೆನ್ನು ಹುರಿ ಬಿಗಿದಂತೆ ಕಾಣುತ್ತಿತ್ತು. ಈ ಆಟ ನೋಡುತ್ತ ನಿಂತಾಗ ಸಿಂಗಾರೆವ್ವ ನನ್ನ ಕಿವಿಯಲ್ಲಿ “ಮರ್ಯಾ ಎಲ್ಲಿ ಅದಾನ?” ಎಂದಳು. “ಗೊತ್ತಿಲ್ಲೆವ್ವ” ಎಂದು ಪಿಸುದನಿಯಲ್ಲೇ ಹೇಳಿದೆ. ಮುಂದುವರಿಸಿ “ಅವ ಇಂದ ನನ್ನ ಕಣ್ಣಿಗಿ ಬಿದ್ದs ಇಲ್ಲ” ಅಂದೆ. ಸಿಂಗಾರೆವ್ವ ಮಾತಾಡಲಿಲ್ಲ. ಮೆಳೆ ನೋಡುತ್ತ ನಿಂತಳು. ರೆಪ್ಪೆ ಭಾರವಾದುದರಿಂದ ನಾನು ಹೋಗಿ ಮಲಗಿಕೊಂಡೆ.

ಸಾಮಾನ್ಯವಾಗಿ ಬೆಳ್ಳಿ ಮೂಡೋ ಹೊತ್ತಿನಲ್ಲಿ ನನಗೆ ಎಚ್ಚರವಾಗುವುದೇ ಇಲ್ಲ. ಇಂದ್ಯಾಕೋ ಎಚ್ಚರವಾಯ್ತು. ಅವರಿಬ್ಬರೂ ಗಾಢ ನಿದ್ದೆಯಲ್ಲಿದ್ದರು. ನನಗೆ ಮತ್ತೆ ನಿದ್ದೆ ಬರಲಿಲ್ಲವಾದ್ದರಿಂದ ಹೊರಳಾಡುತ್ತ ಬಿದ್ದಿರುವುದಕ್ಕಿಂತ ಒಲೆಯನ್ನಾದರೂ ಹೊತ್ತಿಸೋಣವೆಂದು ಕೆಳಗಿಳಿದು ಬಂದೆ. ಹೊರಗಿನ್ನೂ ಬೆಳದಿಂಗಳಿದ್ದುದರಿಂದ ಪಡಸಾಲೆಯಲ್ಲಿ ದೀಪದ ಅಗತ್ಯವಿರಲಿಲ್ಲ. ಅದನ್ನು ದಾಟಿ ಅಡಿಗೆ ಮನೆಗೆ ಹೋಗುತ್ತಿದ್ದೆ. ಕಂಬವೊಂದು ನಡೆದಾಡಿದ ಹಾಗೆ, ನಡೆದು ಹಿರಿಯ ದೊರೆಸಾನಿಯ ಕೋಣೆಯ ಬಳಿ ನಿಂತುಕೊಂಡ ಹಾಗೆ ಅನ್ನಿಸಿತು. ಜೀವ ಜಲ್ಲೆಂದು ಮೈ ಝುಮ್ಮೆಂದು ಬೆವರಿಳಿಯಿತು. ಸತ್ತ ದೊರೆಸಾನಿ ಭೂತವಾಗಿರಬಹುದೇ ಅಂದುಕೊಂಡೆ. ಅತ್ತ ಅಂತಸ್ತಿನ ಬಾಗಿಲೂ ದೂರವಿತ್ತು. ಓಡಿಹೋದೇನೆಂದರೆ, ಅಷ್ಟರಲ್ಲಿ ಅದು ಕೈಮಾಡಿ ನನ್ನನ್ನು ಹಿಡಿದುಕೊಂಡರೆ, ಪಕ್ಕದ ಕಂಬದಲ್ಲೇ ಪ್ರತ್ಯಕ್ಷವಾದರೆ!… ಅಷ್ಟರಲ್ಲಿ ಅದು ಕೈಮಾಡಿ ನನ್ನನ್ನು ಕರೆದಂತೆನ್ನಿಸಿ ಕಿರಿಚಬೇಕೆಂದ, ದನಿ ಬರಲಿಲ್ಲ. ಅಷ್ಟರಲ್ಲಿ ಗುರುತು ಸಿಕ್ಕಂತಾಯ್ತು. ಮರೆಪ್ಪ ಮೆಲ್ಲಗೇ ಬಂದ. ದೀಪ ದೊಡ್ಡದಾಗಿಸಿದಾಗಲೇ ಅವನ ಕೈಯಲ್ಲಿ ಲಾಂಟೀನಿದೆಯೆಂದು ನನಗೆ ಗೊತ್ತಾದದ್ದು. ಮಾರಾಯ ಹಲ್ಲು ತೋರಿಸಿ ನಕ್ಕು ಮೆಲ್ಲಗೆ “ಯಾಕ ಹೆದರಿದಿ” ಅಂದ. “ಥೂ ಮೂಳಾ” ಎಂದು ಸಾವರಿಸಿಕೊಂಡು “ಎಲ್ಲಿ ಹಾಳಾಗಿ ಹೋಗಿದ್ದಿ?” ಅಂದೆ ಅಷ್ಟೇ ಮೆಲ್ಲಗೆ.

“ಮೆಲ್ಲಗ ಹೋಗು, ದೇಸಾಯರೊಬ್ಬರ‍್ನ ಎಬ್ಬಿಸಿ ಕರಕೊಂಬಾ” ಎಂದು ಕಿವಿಯಲ್ಲಿ ಪಿಸುಗುಟ್ಟಿದ.

“ಅಧೆಂಗಾದೀತು? ಇಂಥಾ ಕತ್ತಲ್ಯಾಗ ನಾ ಅಲ್ಲಿ ಹೋದರ ದೇಸಾಯರೇನಂದಾರು? ಗೌಡ್ರ ಅಲ್ಲೇ ಮಲಗ್ಯಾರ” ಅಂದೆ. “ಅವನವ್ವನ” ಎಂದು ಬೈದು ತುಸು ಚಿಂತೆ ಮಾಡಿದ.

“ಹಂಗಾರ ನಾ ಇಲ್ಲೇ ಕೊಟ್ಟಿಗ್ಯಾಗ ಇರತೀನಿ, ದೇಸಾಯರು ಎಚ್ಚರಾಗೂತ್ಲೂ ಇಲ್ಲಿಗಿ ಕರಕೊಂಬಾ, ಯಾರಾ, ಎಂತಾ, ಏನೂ ಹೇಳಬ್ಯಾಡ” ಎಂದು ಹೇಳಿ ಕೊಟ್ಟಿಗೆ ಹೊಕ್ಕ. ನಾನೂ ಬೆನ್ನು ಹತ್ತಿ ಹೋಗಿ,

“ಗೌಡರಾಗಲೇ ನಿಂದೆಲ್ಲಾ ಹೇಳ್ಯಾರ. ಈಗ ನೀ ಭೇಟ್ಯಾದರ ಸಾಕು, ಹೊರಗ ಹಾಕತಾರ ನೋಡಿಕೊ”

– ಎಂದೆ. ಅವನ ಮುಖ ಬಾಡಿತು. ಹಾಗೇ ಗೋಡೆಗಂಟಿ. ಕುಂತ. ಕಿಡಿಕಿಯಿಂದ ಹೊರಗೆ ನೋಡುತ್ತ ಉಗುರು ಕಚ್ಚಿಕೊಳ್ಳತೊಡಗಿದ. ಅವನ ಮುಖ ನೋಡಬೇಕೆಂದು ನಾನು, ಅವನು ತಿರುಗಲೇ ಇಲ್ಲ. ನಾನು ಬರುತ್ತಿದ್ದೆ, ಅವನು ತಿರುಗದೆಯೇ ಹೇಳಿದ:

“ದೇಸಾಯರೇನಂದರು?”

“ಬರಲಿ, ಹೊರಗ ಹಾಕತೇನ ಮಗನ್ನ ಅಂತಿದ್ದರು”

ಈಗ ಸರ್ರನೆ ತಿರುಗಿದ. ಕೆದರಿದ ತಲೆಯ, ಕುರುಚಲು ಗಡ್ಡದ, ಆತನ ಭಯಂಕರ ಕರಿಮುಖದಲ್ಲಿ ಕಣ್ಣುಗಳು ಮಾತ್ರ ಬೆಳ್ಳಗೆ ವಿಕಾರವಾಗಿ ತೆರೆದುಕೊಂಡಿದ್ದವು. ಉಕ್ಕಿ ಬರುತ್ತಿದ್ದ ಭಾವಾವೇಶವನ್ನು ತುಟಿಗಳಿಂದ ತಡೆ ಹಿಡಿದಂತೆ ಗಟ್ಟಿಯಾಗಿ ಬಾಯಿ ಮುಚ್ಚಿಕೊಂಡಿದ್ದ. ಮೂಗು ಆಗಾಗ ಹಿರಿದು ಕಿರಿದಾಗುತ್ತಿತ್ತು. ಬಹಳ ಹೊತ್ತು ನನ್ನನ್ನು ಇರಿಯುವ ಹಾಗೆ ನೋಡಿ, ವಿಲಕ್ಷಣವಾದ ಆದರೂ ಸಣ್ಣ ದನಿಯಲ್ಲಿ “ಅವನವ್ವನ” ಎಂದು ಒದರಿದ. ಸಾಮಾನ್ಯವಾಗಿ ಅವನ ಮುಖದಲ್ಲಿರುತ್ತಿದ್ದ ಬಿಗಿ ಮತ್ತು ಅವಸರದ ಬದಲು ಈಗ ತಿರಸ್ಕಾರ ಮತ್ತು ಸೋಲಿನ ಭಾವಗಳಿದ್ದವು. ಅತ್ತಿತ್ತ ಒಂದೆರಡು ಹೆಜ್ಜೆ ಹಾಕಿದ. ಕಂದೀಲನ್ನು ಕೈಲಿ ಹಿಡಿದುಕೊಂಡೇ ಒಂದು ಮೂಲೆಗೆ ಹೋದ. ಅದನ್ನೆತ್ತಿ ಹಿಡಿದು ರಭಸದಿಂದ ಊದಿ ಆರಿಸಿದ. ಹೊರಗಿನ ಬೆಳದಿಂಗಳು ಕಿಡಕಿಯಿಂದ ಒಳಗೆ ಬಿದ್ದಿತ್ತು. ಸೌಮ್ಯವಾದ ಚಂದ್ರನ ಕಿರಣಗಳು ಆ ಹುಚ್ಚನ ಒಂದು ಭುಜದ ಮೇಲೆ ಬಿದ್ದಿದ್ದವಷ್ಟೆ. ಆತನ ಉಳಿದ ದೇಹ ಕತ್ತಲೊಂದಿಗೆ ಬೆರೆತು ಹೋಗಿತ್ತು. ದನ ಮೆಲುಕಾಡಿಸುವ, ಅವುಗಳ ಕೊರಳ ಗೆಜ್ಜೆಯ ಸಪ್ಪಳ ಬಿಟ್ಟು ಮಿಕ್ಕೆಲ್ಲ ಸ್ತಬ್ಧವಾಗಿತ್ತು.

ಮರೆಪ್ಪ ಕೋಪದ ಉತ್ಕರ್ಷಾವಸ್ಥೇಯಲ್ಲಿ ಒಮ್ಮೆ ನೆಲ ಒದ್ದು “ನಿನ್ನವ್ವನ ಗೌಡಾ” ಎಂದು ಹೇಳುತ್ತ ಉಕ್ಕುತ್ತಿದ್ದ ಮಾತನ್ನೇ ಹಲ್ಲಿನಿಂದ ಕಚ್ಚಿಕೊಂಡ. ನಾನು ಉಸಿರು ಬಿಗಿ ಹಿಡಿದುಕೊಂಡು ಅವನನ್ನೇ ನೋಡುತ್ತಿದ್ದೆ. ಉಕ್ಕಿನ ಹಾಗೆ ದನಿ ಗಟ್ಟಿಮಾಡಿಕೊಂಡು “ನೋಡಿಕೋತೀನಿ” ಎಂದ, ಏನೋ ನಿರ್ಧರಿಸಿದಂತೆ. ಅಷ್ಟರಲ್ಲಿ ಹೊರಗೆ ಕಾಲ ಸಪ್ಪಳವಾಯ್ತು. ನಿಂತು ನೋಡಿದೆವು. ದೇಸಾಯಿ ಹೊರಗೆ ಕಾಲ್ಮಡಿದು ಒಳಗೆ ಬರುತ್ತಿದ್ದ. ನಾನು ಬಾಗಿಲ ಬಳಿ ಮುದುಡಿಕೊಂಡೆ. ಮರ್ಯಾ ಗಾಳಿಯಂತೆ ನುಗ್ಗಿದವನೇ ಹೋಗಿ “ಸರಕಾರ್” ಎಂದು ದೇಸಾಯಿಯ ಕಾಲು ಹಿಡಿದ. ದೇಸಾಯಿಗಿದು ಅನಿರೀಕ್ಷಿತವೆನ್ನಿಸಿ ಒಂದು ಹೆಜ್ಜೆ ಸರಿದು ಗಾಬರಿಯಲ್ಲೇ “ಯಾರು” ಅಂದ. “ನಾನು ನಿಮ್ಮ ಹೊಲ್ಯಾ, ಮರ್ಯಾರೀ ಸರ್ಕಾರ್” ಎಂದು ಮತ್ತೆ ಮುಂದೆ ಬಂದು ಕಾಲು ಹಿಡಿದುಕೊಂಡ. ಬಾಗಿಲ ಮರೆಯಿಂದಲೇ ನಾನಿದನ್ನೆಲ್ಲ ನೋಡುತ್ತಿದ್ದೆ. ಇಬ್ಬರೂ ಪೂರ್ತಿ ಬೆಳದಿಂಗಳಲ್ಲಿ ಇದ್ದುದರಿಂದ ನನಗೆ ಎಲ್ಲವೂ ಕಾಣಿಸುತ್ತಿತ್ತು.

“ನಿಮ್ಮ ಸೇವಾ ಬಿಟ್ಟ ಹೊಂಟೇನ್ರಿ ಸರಕಾರ್. ಕಡೀ ಸೇವಾ ಒಪ್ಪಸಬೇಕಂತ ಬಂದೀನಿ.

“ಏನ ಹಂಗದಂರ?”

“ತಗೊಳ್ರಿ ಸರಕಾರ್”

– ಎಂದು ಸೊಂಟದಲ್ಲಿ ಬಚ್ಚಿಟ್ಟುದನ್ನು ತೆಗೆದು ಮುಂದೆ ಹಿಡಿದ. ದೇಸಾಯಿ ಇನ್ನೂ ಪೂರ್ತಿ ತಿಳಿವಿಗೆ ಬಂದಿರಲಿಲ್ಲ. ಹಣಗಲದಲ್ಲೇ ನಿಂತಿದ್ದವನು, ಯಾಂತ್ರಿಕವಾಗಿ ಕೈಚಾಚಿ ತಗೊಂಡು “ಏನಿದು?” ಎಂದ.

“ಸಾವಿರ ರೂಪಾಯಿ ಅದಾವ್ರಿ, ತಾಯಿಯವರ ದಿನಕಾರ್ಯೆ ಮಾಡ್ರಿ,. ನಾ ಬರತೀನ್ರಿ ಸರ‍್ಕಾರ್”

– ಎಂದು ಹೇಳಿ ಎದ್ದ. ದೇಸಾಯಿ ತಕ್ಷಣ ಅವರ ರಟ್ಟೆಗೆ ಕೈಹಾಕಿ “ಎಲ್ಲಿ ಹೋಗ್ತಿ ಬಾರೋ ಇಲ್ಲಿ” ಎಂದು ಹೇಳಿ ಕರೆದುಕೊಂಡು ಆ ಕಡೆಗೇ ಬಂದ. ಇಬ್ಬರೂ ಇಲ್ಲಿಗೇ ಬರುತ್ತಿದ್ದುದರಿಂದ ನಾನು ಪಾರಾಗಿ ಅಂತಸ್ತಿನ ಕೋಣೆಗೆ ಹೋದೆ. ಈಗ ಕಂಡದ್ದನ್ನೆಲ್ಲ ಸಿಂಗಾರೆವ್ವನಿಗೆ ಹೇಳಿಬಿಡಬೇಕೆಂದು ನನ್ನ ತವಕ. ಆದರೆ ಅವಳು ರಾತ್ರಿ ಯಾವಾಗ ಮಲಗಿದ್ದಳೋ ಈಗ ಗಾಢ ನಿದ್ದೆಯಲ್ಲಿದ್ದಳು. ಎದ್ದ ಮೇಲೆ ಹೇಳಿದರಾಯ್ತೆಂದು ಕೆಳಕ್ಕೆ ಬಂದೆ. ಕೊಟ್ಟಿಗೆಯಲ್ಲಿನ್ನೂ ದೇಸಾಯಿ ಮತ್ತು ಮರೆಪ್ಪನ ದನಿ ಕೇಳಿಸುತ್ತಿತ್ತು. ಆ ಕಡೆ ಮುಖ ಹಾಕದೆ ನೇರವಾಗಿ ಅಡಿಗೆ ಮನೆಗೆ ಹೋಗಿ ಒಲೆ ಹೊತ್ತಿಸಿದೆ.

ಬೆಳಗು ಮುಂಜಾನೆ ನನಗೆ ಬಿಡುವಾಗುವುದೇ ಅಪರೂಪ. ಒಮ್ಮೆ ಅಡಿಗೆ ಮನೆ ಹೊಕ್ಕರಾಯ್ತು ಹೊರಗೆ ಬರಬೇಕೆಂದರೆ ಹೊತ್ತು ನೆತ್ತಿಗೇರಿರುತ್ತದೆ. ಮೂರಾಳು ಮಾಡೋ ಕೆಲಸ ಒಬ್ಬಳೇ ಮಾಡಿದರೆ ಇನ್ನೆನಾದೀತು? ನೀರು ಕಾಸಬೇಕು, ಎಲ್ಲರ ಜಳಕವಾಗುತ್ತಿದ್ದಂತೆ ರೊಟ್ಟಿ ಪಲ್ಯ ತಯಾರಾಗಬೇಕು. ಅಷ್ಟರಲ್ಲೇ ಮೊಸರು ಕಡೆದು ಬೆಣ್ಣೆ, ಮಜ್ಜಿಗೆ ಸಿದ್ಧವಾಗಿರಬೇಕು. ಎಲ್ಲರೂ ನ್ಯಾರೇ ಮಾಡೋದಕ್ಕಾದರೂ ಜೊತೆಯಾಗಿ ಬರುತ್ತಾರೆಯೇ? ಒಬ್ಬೊಬ್ಬರದು ಒಂದೊಂದು ಹೊತ್ತು. ಇನ್ನು ಅಳುಗಳಿಗೆ ನ್ಯಾರೇ ನೀಡಿ ಅವರು ಸಕಾಲದಲ್ಲಿ ತೋಟಕ್ಕೆ ಹೋಗುವ ಹಾಗೆ ಮಾಡಬೇಕು. ದೊರೆಸಾನಿ ಒಮ್ಮೊಮ್ಮೆ ನೆರವಿಗೆ ಬಂದರೆ ಬಂದಳು, ಇಲ್ಲದಿದ್ದರೆ ಇಲ್ಲ. ಇಷ್ಟೆಲ್ಲಾ ಮುಗಿದು ನನ್ನ ಮತ್ತು ಸಿಂಗಾರೆವ್ವನ ಜಳಕ, ಊಟವಾಗುವ ಹೊತ್ತಿಗೆ ಕಣ್ಣೀರು ಕಪಾಳಿಗಿಳಿದಿರುತ್ತದೆ.

ಈ ದಿನ ಗೌಡ ಮತ್ತು ದೇಸಾಯಿಯ ಜಳಕ, ನ್ಯಾರೇ ಆಗಿ ಆಳುಗಳಿಗೆ ಬಡಿಸುತ್ತಿದ್ದೆ. ಸಿಂಗಾರೆವ್ವನ ಜೊತೆ ಮಾತಾಡಲು ಸಾಧ್ಯವಾಗಲೇ ಇಲ್ಲ. ಅಷ್ಟರಲ್ಲಿ ನಿಂಗವ್ವ ಗೌಡ್ತಿ ದೌಡಾಯಿಸಿ ಬಂದವಳು, ಬಂದ ಏದುಸಿರಿನಲ್ಲೇ – “ಶೀನಿಂಗೀ, ಸಿಂಗಾರೆವ್ವ ಕರೀತಾಳ, ಬಾರಗ” ಎಂದಳು. ಅವಳು ಹೇಳಿದ ರೀತಿಯಿಂದ ಏನೋ ಅನಾಹುತವಾಗಿದೆಯೆಂದೇ ಗಾಬರಿಯಾಯ್ತು. ಏನಾಯಿತೆಂದು ಕೇಳುವಷ್ಟರಲ್ಲಿ ಮುದುಕಿ ತಿರುಗಿ ಓಡುತ್ತಿದ್ದಳು. ನಾನೂ ದೌಡಾಯಿಸಿ ದಡಬಡ ಜಿನೆಯೇರಿ ಹೋದೆ. ನಾನು ಹೋಗುವುದಷ್ಟೇ ತಡ ಸಿಂಗಾರೆವ್ವ “ಶೀನಿಂಗಿ, ಹಾಸಿಗೆ ಕೆಳಗ ಬಳಿ ಇಟ್ಟಿದ್ನೆಲ್ಲ, ತಗೊಂಡೀಯೇನ?” ಎಂದಳು. ನನ್ನೆದೆ ಧಸಕ್ ಎಂದಿತು. ಅವಸರದಲ್ಲಿ “ಇಲ್ಲೆವ್ವಾ, ಮನ್ನಿ ನಿಮ್ಮ ಕೈಯಾಗ ಕೊಟ್ಟಿದ್ನೆಲ್ಲ” ಎಂದೆ.

“ಹೌಂದಗ, ನೀ ಕೊಟ್ಟ ಮ್ಯಾಲ ಇಲ್ಲೇ ಇಟ್ಟಿದ್ದೆ,”

– ಎಂದಳು, ಮತ್ತೆ ಗಾದಿ, ಹಾಸಿಗೆಯನ್ನು ಕೆದರುತ್ತ, ನಾನು ಕೊಟ್ಟೊಡನೆ ಆ ಬಳೆ ಇಟ್ಟದ್ದು ಅಲ್ಲಿಯೇ. ನನಗೆ ತಿಳಿದ ಮಟ್ಟಿಗೆ ದೇಸಾಯಿಗದನ್ನು ಕೊಡಲೂ ಇಲ್ಲ. ಒಮ್ಮೆ ಕಳಚಿದ ಬಳಿಕ ಸಿಂಗಾರೆವ್ವ ಪುನಃ ಅವನ್ನು ಧರಿಸಲೂ ಇಲ್ಲ. ಗೌಡ, ಇಲ್ಲವೆ ನಿಂಗವ್ವ ಗೌಡ್ತಿ ಹಾರಿಸಿರಬಹುದೇ ಅಂದುಕೊಂಡೆ. ಆದರೆ ಅವರಿಗಿಂತ ನನ್ನ ಪರಿಸ್ಥಿತಿ ನಾಜೂಕಿನದಾಗಿತ್ತು. ನಾನು ಎಷ್ಟೆಂದರೂ ಮನೆ ಆಳು. ಸಾಮನ್ಯವಾಗಿ ದೊಡ್ಡವರ ಮನೆಗಳಲ್ಲಿ ಏನು ಅನುಮಾನ ಬಂದರೂ ಅದಕ್ಕೆ ಮೊದಲು ಗುರಿಯಾಗುವವರು ಆಳುಗಳೇ. ಅವರ ಮನಸ್ಸಿನಲ್ಲಿ ಹಾಗಿತ್ತೆಂದು ಹೇಳಲಾರೆ. ಆದರೆ ಅವರಿಗೆ ಸದ್ಯ ನನ್ನ ಮೇಲೆ ಸಂಶಯವಿದೆಯೆಂದು ಅನ್ನಿಸಿ “ಸಾವಳಿಗಿ ಶಿವನಿಂಗಸಾಣೆ  ಎವ್ವಾ, ನಾ ತಗೊಂಡಿಲ್ಲ. ನನ್ನ ಬಾಯಿಂದ ಸುಳ್ಳ ಬಂದಿದ್ದರ ನನ್ನ ನಾಲಿಗಿ ಕಳಚಿ ಬೀಳಲಿ” ಎಂದು ಸ್ವಾಮಿಯ ಮಠದ ಕಡೆ ಮುಖ ಮಾಡಿ ಕೈಮುಗಿದೆ. ಸ್ವಾಮಿಗೆ ನನ್ನ ಪ್ರಾರ್ಥನೆ ಮುಟ್ಟಲಿಲ್ಲ. ಯಾವಾಗಲೋ ಗೌಡ ಬಂದು ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದವನು ಎಡಗಣ್ಣು ಚಿಕ್ಕದು ಮಾಡಿ, ಸೊಂಡಿ ಕಚ್ಚಿ ನನ್ನ ಕಡೆಗೆ ನೋಡುತ್ತಿದ್ದ. ಗೌಡ್ತಿಯೂ ಬಾಯಿ ತೆರೆದು ನನ್ನನ್ನೇ ನೋಡುತ್ತಿದ್ದಳು. ಸಿಂಗಾರೆವ್ವನಾದರೂ ಮಾತಾಡಿ ಅವರ ಮನಸ್ಸಿನ ಸಂಶಯ ದೂರ ಮಾಡ್ಯಾಳೆಂದರೆ ಅವಳು ಮತ್ತೆ ಹಾಸಿಗೆಯನ್ನೇ ಕೆದರಿ ಕೆದರಿ ನೋಡುತ್ತಿದ್ದಳು.

ನನ್ನ ಆಣೆಗಳಿಂದ ಅವರ ಮೇಲೆ ಯಾವ ಪರಿಣಾಮವೂ ಆಗಲಿಲ್ಲ. ಬದಲು ಅವರ ದೃಷ್ಟಿಯಲ್ಲಿ ಈ ತನಕ ಅಳ್ಳಕಾಗಿದ್ದ ಸಂದೇಹ ಬರಬರುತ್ತ ಗಟ್ಟಿಯಾಗುತ್ತಿರುವಂತೆ ಅನ್ನಿಸಿತು. “ನನ್ನಾಣೆ, ಕುಮುದವ್ವನ ಆಣೆ, ನಾ ತಗೊಂಡಿಲ್ಲೆವ್ವಾ” ಎಂದು ಹೇಳಿ ಪಕ್ಕನೆ ಕೆಳಕುಳಿತು ನೆಲಸವರಿ ಧೂಳನ್ನು ಹಣೆಗಂಟಿಸಿಕೊಂಡೆ. ಈಗಲೂ ಅವರ ಚೇರಾಪಟ್ಟಿಯಲ್ಲೇನೂ ಹೆಚ್ಚು ಕಮ್ಮಿಯಾಗಲಿಲ್ಲ. ನಿಜ ಹೇಳಬೇಕೆಂದರೆ ಇಂಥ ಅಗ್ಗದ ಕೆಲಸ ನನ್ನಿಂದ ಸಾಧ್ಯವೇ ಇಲ್ಲ. ಆದರೆ ಹ್ಯಾಗೆ ಹೇಳುವುದು? ನನ್ನ ಸಾಜೋಗತನವನ್ನು ಹ್ಯಾಗೆ ಸಾಬೀತು ಮಾಡುವುದು? ಗೌಡ ಗೌಡ್ತಿ ಮಾತ್ರ ಕಳ್ಳತನ ಮುಚ್ಚೋದಕ್ಕೆ ಇಂಥ ಅಭಿನಯ ಮಾಡುತ್ತಿದ್ದೇನೆಂಬಂತೆ ನನ್ನ ಕಡೆಗೆ ನೋಡುತ್ತಿದ್ದರು. ಅವರ ದೃಷ್ಟಿ ಎದುರಿಸಲಾರದೆ ನಾನು ಹುಡುಕುವ ನೆಪ ಮಾಡಿಕೊಂಡು ಸಿಂಗಾರೆವ್ವ ಹಾಸಿಗೆ ಕೆದರುವಲ್ಲಿಗೆ ಹೋದೆ. ಮೊದಲೇ ಕೆದರಿದ್ದ ಹಾಸಿಗೆಯನ್ನು ಇನ್ನಷ್ಟು ಕೆದರತೊಡಗಿದೆ. ಆದರೂ ಅವರ ದೃಷ್ಟಿ ನನ್ನ ಬೆನ್ನು ಹತ್ತಿದ್ದರಲ್ಲಿ ಸಂದೇಹವಿರಲಿಲ್ಲ. ಅವರ ಕಣ್ಣು ನನ್ನ ಬೆನ್ನಿನಲ್ಲಿ ನಾಟಿದಂತೆ ಭಾಸವಾಗುತ್ತಿತ್ತು. ಕಣ್ಣೇನು ಕಾಲೇ ನಾಟಿತು. ಗೌಡ ಬಂದವನೇ ಝಾಡಿಸಿ ನನ್ನ ಬೆನ್ನಿಗೊಂಡು “ಖರೇ ಹೇಳ ಭೋಸಡೆ, ಬಳಿ ತಗೊಂಡಿಯೋ ಇಲ್ಲೋ?” ಎಂದ. ಅಪಮಾನ ಮತ್ತು ಕೋಪಗಳಿಂದ ನನ್ನ ಎದೆಯ ನೆತ್ತರೆಲ್ಲ ನೆತ್ತಿಗೇರುವಂತೆನಿಸಿತು. ನಡುಕ ಹುಟ್ಟಿ ದೇಹಾದ್ಯಂತ ಬೆವರಿತು. ಒದೆ ಬಿದ್ದವಳು ಎದ್ದು ಕೂರಲಿಕ್ಕೂ ಶಕ್ತಿ ಸಾಲದೆ ನೀನಾದರೂ ಉಳಿಸೆಂಬಂತೆ ದೊರೆಸಾನಿಯ ಕಡೆ ನೋಡಿದೆ. ಮತ್ತೆ ಗೌಡ ಅಡ್ಡ ಬಂದು, “ಬಾಯ್ಬಿಡತೀಯೋ, ಪೊಲೀಸರನ್ನ ಕರೀ ಅಂತೀಯೊ” ಎಂದು ಮೈಮ್ಯಾಲೇ ಬಂದ. ಸಿಂಗಾರೆವ್ವ ಬಾಯಿ ಹಾಕಿದಳು:

“ಎವ್ವಾ ದೇಸಾಯರು ಕೆಳಗಿದ್ದಾರೇನು ಕರಿ, ಅವರ‍್ನೂ ಕೇಳೋಣ” ಅಂದಳು. ತಕ್ಷಣ ನನಗೆ ಹೊಳೆಯಿತು. “ಹಾ” ಎಂದು ನೆಲ ಬಾರಿಸಿ “ಎವ್ವಾ” ಅಂದೆ. ಎಲ್ಲರೂ ನನ್ನ ಕಡೆ ನೋಡಿದರು.

“ಎವ್ವಾ, ಮರ್ಯಾ ಇಂದ ಬೆಳಿಗ್ಗೆ ದೇಸಾಯರಿಗೆ ಸಾವಿರ ರೂಪಾಯಿ ಕೊಟ್ಟಾನ. ಅವ ತಗೊಂಡಾನೇನ್ಕೆಳ್ರಿ”

ಮೂವರು ಪರಸ್ಪರ ಮುಖಗಳನ್ನು ಮಳಮಳ ನೋಡಿ ಬರೆದ ಗೊಂಬೆಗಳ ಹಾಗೆ ನಿಶ್ವಲರಾದರು. ಅದು ತುಸು ಹೊತ್ತಷ್ಟೆ. ಗೌಡ ನಾ ಕೂತಲ್ಲಿಗೇ ಬಂದು ಅವಸರದಲ್ಲಿ ನನ್ನ ಮುಂದೇ ಕೂತು “ಖರೇನ?” ಅಂದ.

“ಹೌಂದರಿ, ಅವ ಕೊಟ್ಟದ್ದ ನಾ ಕಣ್ಣಾರ ಕಂಡೀನಿ”

“ಆ ಬೋಳೀಮಗ ಯಾವಾಗ ಬಂದಿದ್ದ?”

“ಇಂದ ಬೆಳಿಗ್ಗಿರಿ”

“ಎಷ್ಟು ಕೊಟ್ಟ?”

“ಸಾವಿರ ರೂಪಾಯಿ”

“ದೇಸಾಯಿರೇನಾದರೂ ಅವನ ಕೈಯಾಗ ಬಳಿ ಕೊಟ್ಟಿದ್ದರೇನ?”

“ಇಲ್ಲರಿ.”

“ಶೀನಿಂಗಿ. ಏನೇನ ನಡೀತ ಎಲ್ಲಾ ಬರೋಬರಿ ಹೇಳ. ಒಂದ ಮಾತ ಎಪರಾ ತಪರಾ ಆದರ ಜೇಲಿಗೆ ಹೋಗ್ತಿ, ಹುಷಾರ್.”

ನಾನು ಆ ದಿನ ನಡೆದದ್ದನ್ನೆಲ್ಲ (ಆದರೆ ಮೊದಲಿನ ಭಾಗವನ್ನು ಬಿಟ್ಟು ಬರೀ ಹಣ ಕೊಟ್ಟ ಭಾಗವಷ್ಟನ್ನೂ) ವಿವರವಾಗಿ ಹೇಳಿದೆ. ಹೇಳುತ್ತ ಹೋದಂತೆ ಗೌಡನ ಮುಖ ವಿಕಾರವಾಗಿ ಬಿಳುಪೇರಿತು. ಬಾಯಿ ತೆರೆದುಕೊಂಡೇ ನಿಂತಿದ್ದ ಗೌಡ್ತಿಗೆ ನನ್ನ ಮಾತಿನಲ್ಲಿನ್ನೂ ನಂಬಿಕೆ ಬಂದಿರಲಿಲ್ಲ. ಗೌಡ ಎದ್ದವನೇ ಬಿಟ್ಟ ಬಾಣದ ಹಾಗೆ ಹೋಗಿಬಿಟ್ಟ.

ನಾನು ಆ ದಿನ ನಡೆದದ್ದನ್ನೆಲ್ಲ (ಆದರೆ ಮೊದಲಿನ ಭಾಗವನ್ನು ಬಿಟ್ಟು ಬರೀ ಹಣ ಕೊಟ್ಟ ಭಾಗವಷ್ಟನ್ನೂ) ವಿವರವಾಗಿ ಹೇಳಿದೆ. ಹೇಳುತ್ತ ಹೋದಂತೆ ಗೌಡನ ಮುಖ ವಿಕಾರವಾಗಿ ಬಿಳುಪೇರಿತು. ಬಾಯಿ ತೆರೆದುಕೊಂಡೇ ನಿಂತಿದ್ದ ಗೌಡ್ತಿಗೆ ನನ್ನ ಮಾತಿನಲ್ಲಿನ್ನೂ ನಂಬಿಕೆ ಮಬದಿರಲಿಲ್ಲ. ಗೌಡ ಎದ್ದವನೇ ಬಿಟ್ಟ ಬಾಣದ ಹಾಗೆ ಹೋಗಿಬಿಟ್ಟ.

ಅವನು ಅತ್ತ ಹೋಗುತ್ತಲೂ ಇತ್ತ ಸಿಂಗಾರೆವ್ವ “ಇದನ್ನ ನನಗ್ಯಾಕ ಮೊದಲ ಹೇಳಲಿಲ್ಲಗ?” ಎಂದಳು.

“ಹೇಳಾಕ ಬಂದಿದ್ದಿನೆವ್ವ. ನೀ ಮಲಗಿದ್ದಿ. ಆ ಮ್ಯಾಲೆ ಹೇಳಿದರಾಯ್ತಂತ ಹೋದೆ. ಕೆಲಸದಾಗ ಮ್ಯಾಲ ಬರಾಕ ಆಗಲಿಲ್ಲ. ನೀನೂ ಆ ಕಡೆ ಬರಲಿಲ್ಲ. ಉಂಡಮ್ಯಾಲ ಹೇಳಿದರಾಯ್ತಂತ ಸುಮ್ಮನಾದೆ.”

ಸಿಂಗಾರೆವ್ವ ಹಾಗೇ ಕೆದರೆದ ಹಾಸಿಗೆಯಲ್ಲೇ ಕುಸಿದಳು. ಮಾಡಿದ ತಪ್ಪಿನ ಅರಿವಾಗಿ ನನಗೂ ಈಗ ಚಿಂತೆಯಾಯಿತು. ಆದರೇನು ಮಾಡಲಿ ? ಅವರಿಬ್ಬರ ದೃಷ್ಟಿಗಳು ಇರಿಯುವಾಗ ನನ್ನ ನೆರವಿಗೆ ಯಾಕೆ ಬರಲಿಲ್ಲ ? ಆಣೆಯ ಮೇಲಾಣೆ ಮಾಡಿದಾಗಲೂ, ಹೋಗಲಿ, ಗೌಡ ಒದ್ದಾಗಲೂ ಸುಮ್ಮನಿದ್ದಳಲ್ಲ? ನನ್ನ ಗೋಳು ಅವಳಿಗೆ ಅರ್ಥವಾಗುವುದೇ ಇಲ್ಲ. ಒದೆ ತಿಂದ ಅವಮಾನದ ನೋವು ಇನ್ನೂ ಬೆನ್ನಿಗಿದ್ದರೂ ನಾನು ಮಾಡಿದ್ದು ತಪ್ಪೆಂದೇ ತೋರಿತು. ಆಯ್ತು, ಗೌಡ ಗೌಡ್ತಿಗೆ ಸಂಶಯ ಬಂತು ಎನ್ನೋಣ, ಅವರೇನು ಯಜಮಾನರಲ್ಲವಲ್ಲ. ಸಿಂಗಾರೆವ್ವ ನಬದಿದ್ದರಾಯ್ತು. ಅಥವಾ ಅವಳು ನಂಬಿದ್ದರೂ ಆ ಮೇಲೆ ಮರ್ಯಾ ಸಾವಿರ ರೂಪಾಯಿ ಕಟ್ಟದ್ದನ್ನು ಹೇಲಿದ್ದರಾಗುತ್ತಿತು. ಆದರೆ ಅಲ್ಲಿಯವರೆಗೆ ನನ್ನ ಗತಿ? ಅದಿರಲಿ, ಇದೆಲ್ಲ ಆ ಮೇಲಿನ ತರ್ಕ ತಾನೆ? ಮಾತು ಯಾವಾಗಲೋ ಮಿಂಚಿಹೋಗಿತ್ತು.

ಸಿಂಗಾರೆವ್ವ ಮಾತ್ರ ಉಮ್ಮಳದಿಂದ ಕಂಗೆಟ್ಟಿದ್ದಳು. ಅವಳ ತುಟಿಗಳು ಅಸ್ಥಿರವಾಗಿ ನಡುಗುತ್ತದ್ದವು. ಕಣ್ಣೀರು ಕೆನ್ನೆಗಳನ್ನು ಒದ್ದೆಯಾಗಿಸಿತ್ತು ಅದ್ಯಾವುದರ ಕಡಗೂ ಲಕ್ಷ್ಯ ಕೊಡದೆ ಗೌಡ್ತಿ, “ಅಲ್ಲ, ಶೀನಿಂಗೀ, ಹೊಲೆಯಾ ಇಲ್ಲೀತನಕ ಬಂದ ಕದೀತಾನಂದರ ಇದು ನಂಬೋ ಮಾತೇನ?” ಎಂದಳು. ಬಹುಶಃ ಮುದುಕಿ ಇನ್ನೂ ನನ್ನ ಮಾತ ನಂಬಿರಲಿಲ್ಲ. ನಂಗದಿದ್ದರೆ ಬೇಡ. ಬೇಕಾದರೆ ನಾನೇ ಕದ್ದವಳೆಂದು ತಿಳಿಯಲಿ, ಏನಂತೆ. ಇದರಿಂದ ದೊಡ್ಡ ರಾದ್ಧಾಂತ ವಾಗದಿದ್ದರೆ ಸಾಕಿತ್ತು. ಯಾಕೆಂದರೆ ಈ ರಾದ್ಧಾಂತಗಳ ತುದಿಯಲ್ಲೇ ನಮ್ಮ ಗುಟ್ಟುಗಳಿದ್ದವು. ಸಿಂಗಾರೆವ್ವನ ಅಳುಮುಖ ನೋಡಿ ನನ್ನ ಅಪಮಾನ ಕೂಡ ಮರೆಯಾಗಿ ಹೋಗಿತ್ತು. ನನಗೀಗ ಮಾತಾಡುವುದ ಮೇಕಿರಲಿಲ್ಲ ಮಾತಾಡುವುದೇ ಆದರೆ ಸಿಂಗಾರೆವ್ವನ ಜೊತೆ ಮಾತಾಡುವುದಿತ್ತು. ಆದರೆ ಮುದುಕಿ ಬಿಡಲೊಲ್ಲಳು. “ಮರ್ಯಾಗ ಇಲ್ಲೀತನಕ ಬರೋವಷ್ಟು ಧೈರ್ಯ ಬಂತೆನ ? ಎನ್ನುತ್ತ ನನಗೇ ಗಂಟುಬಿದ್ದಳು. ಅಷ್ಟರಲ್ಲಿ ಕೆಳಗೆ ಗೌಡನ ಎತ್ತರ ದನಿ ಕೇಳಿಸಿತು. ಅದೇ ನೆಪ ಮುಂದೆ ಮಾಡಿ ಕೆಳಕ್ಕೆ ಬಂದೆ.

ಕೆಳಗೆ ದರ್ಬಾರಿನಲ್ಲಿ ಗೌಡ ಹಾರಾಡುತ್ತಿದ್ದ. ದೇಸಾಯಿ ಕಂಬಕ್ಕೊರಗಿ, ಅದೇ ಮರದಲ್ಲಿ ಕೊರೆದ ಗೊಂಬೆಯ ಹಾಗೆ ಕೂತಿದ್ದ. ನಾನಲ್ಲಿಗೆ ತಲುಪುವುದರೊಳಗೆ ಮರೆಪ್ಪನಿಂದ ಹಣ ಪಡೆದದ್ದನ್ನು ದೇಸಾಯಿ ಒಪ್ಪಿಕೊಂಡಿದ್ದ. ಈ ಸಂಗತಿ ನನ್ನಿಂದ ತಿಳಿಯಿತೆಂದು ಗೌಡ ಹೇಳಿದ್ದನೋ ಇಲ್ಲವೋ, ಹೀಳಿದ್ದರೆ ದೇಸಾಯಿ ನನ್ನ ಬಗ್ಗೆ ಏನಂದುಕೊಳ್ಳುವನೋ ಎಂದು ಚಿಂತೆಯಾಯಿತು. ಏನನ್ನು ಮಾಡುವುದೂ ಈಗ ಸಾಧ್ಯವಿರಲಿಲ್ಲವಲ್ಲ. ಎಲ್ಲ ಕೈ ಮೀರಿತ್ತು.

ಮರ್ಯಾನಂಥವನನ್ನು ನಂಬಿದರೆ ದೇಸಗತಿಯ ಘನತೆಗೆ ಹ್ಯಾಗೆ ಕುಂದು ಬರುತ್ತದೆ, ಹ್ಯಾಗೆ ವ್ಯಕ್ತಿಯ ಮಾನ ಮುಕ್ಕಾಗುತ್ತದೆ, ಈ ಸುದ್ದಿ ಶೆಟ್ಟಿಯಂಥವರಿಗೆ ತಿಳಿದರೆ ಊರಿನ ಸಮಾಜದಲ್ಲಿ ದೇಸಾಯಿ ಹ್ಯಾಗೆ ಹಗುರಾಗುತ್ತಾರೆ – ಎಂಬುದರ ಬಗ್ಗೆ ಗೌಡ ಭಾಷಣ ಮಾಡುತ್ತಿದ್ದ. ದೇಸಾಯಿಗೆ ಅವಮಾನ ಮತ್ತು ಆಘಾತವಾದದ್ದು ಸ್ಪಷ್ಟವಿತ್ತು. ಅವಮಾನ ಯಾಕೆಂದರೆ ಹಣವಿಲ್ಲದೆ ಒಬ್ಬ ಹೊಲೆಯನಿಂದ ಹಣ ಪಡೆದದ್ದು ತನ್ನ ಬೀಗರಿಗೆ ತಿಳುಯುವಂತಾಯಿತಲ್ಲಾ ಎಂದು. ಆಘಾತ ಯಾಕೆಂದರೆ ಆ ಹೊಲೆಯ ತನ್ನ ಮನೆಯ ಬಂಗಾರವನ್ನೇ ಕದ್ದು ತನಗೇ ಹಣ ಕೊಟ್ಟು ಉದಾರಿಯಾಗುವಂಥ ಧೂರ್ತನಿದ್ದಾನಲ್ಲಾ ಎಂದು. ಅವನ ಮುಖ ಒಣಗಿದ ಹಣ್ಣಿನಂತಾಗಿತ್ತು. ಗೌಡನ ಮಾತು ಕೇಳುತ್ತಿದ್ದನೇ ಹೊರತು ಮುಖ ನೋಡುತಿರಲಿಲ್ಲ. ಗೌಡ ಮರಪ್ಪನ ಬಗ್ಗೆ ಹೇಳುವುದನ್ನೆಲ್ಲಾ ಹೇಳಿ, ಮಾತು ನಿಲ್ಲಿಸಿ, ಆ ಹೊಲೆಯನ ವಿಶ್ವಾಸ ಘಾತಕತನ ಮತ್ತು ಧೂರ್ತತನಗಳನ್ನು ಸರಿಯಾಗಿ ದೇಸಾಯಿಯ ಮನಸ್ಸಿನ ಮೇಲೆ ಬಿಂಬಿಸುತ್ತಿದ್ದೇನೋ ಇಲ್ಲವೋ ಎಂದು ಪರೀಕ್ಷಿಸಿ ಮುಖ ನೋಡಿ, ಹೌದೆಂದು ಖಾತ್ರಿಯಾದ ಮೇಲೆ ಮೆಲ್ಲಗೆ ಬಂದು ದೇಸಾಯಿಯ ಪಕ್ಕದಲ್ಲಿ ಕೂತು. ತನಗೂ ಈ ಬಗ್ಗೆ ಬಹಳ ಕಾಳಜಿಯಿದೆಯೆಂದೂ ಈ ಚಿಂತೆಯಲ್ಲಿ ತಾನು ಕಂಗಾಲಾಗಿದ್ದೇನೆಂದೂ ಸೂಚಿಸುವಂತೆ ಅವನ ಮುಖ ಹಾಗೂ ಕೂತ ಭಂಗಿಯಿತ್ತು. ಆಗಾಗ ಓರೆನೋಟ ಬೀರಿ ದೇಸಾಯಿ ತಾನು ಬಯಸಿದಂತೆ ಯೋಚನೆ ಮಾಡುತ್ತಿದ್ದಾನೋ ಇಲ್ಲವೋ ಎಂದು ಕದ್ದು ನೋಡುತ್ತಿದ್ದ. ತುಸು ಹೊತ್ತು ಹೀಗೆ ಕಳೆಯಿತು. ನಾನು ತಿರುಗಿ ಹೊಡಬೇಕೆನ್ನುವಷ್ಟರಲ್ಲಿ ಗೌಡ ಗಂಭೀರದನಿಯಲ್ಲಿ ಕೇಳಿದ:

“ಈಗ ಏನು ಮಾಡೂಣಂತೀರಿ ದೇಸಾಯರ?”

ದೇಸಾಯಿ ತಬ್ಬಿಬ್ಬಾದ. ಏನು ಮಾಡಬೇಕೆಂದು ಅವನೇನಾದರೂ ಯೋಚನೆ ಮಾಡಿದ್ದರಲ್ಲವೆ ? ಅವನೂ ಅದನ್ನೇ ಕೇಳಿದ : “ಏನ ಮಾಡೂಣಂತೀರಿ?”

“ಏನಂದರ ಪೋಲೀಸ್ ಕಂಪ್ಲೇಂಟ್ ಕೊಡರಿ. ಮನ್ಯಾಗಿನ ದಾಗೀನ ಕಳವಾಗ್ಯಾವ. ಮರ್ಯಾನ ಮ್ಯಾಲ ಸಂಶೇ ಐತಿ ಅಂತ ಬರಕೊಡ್ರಿ. ಮುದಿಂದ ನಾ ನೋಡಿಕೋತ್ತೀನಿ.”

ದೇಸಾಯಿ ಎಳೆ ಮಕ್ಕಳ ಹಾಗೆ ಬೆದರಿದ ಕಣ್ಣು ತೆರೆದ ಗೌಡನತ್ತ ನೋಡಿ ಏನೋ ಹೇಳಹೋಗಿ ಮತ್ತೆ ತುಟಿ ಮುಚ್ಚಿದ. ಮತ್ತೆ ತಡೆಯಲಾರದೆ ದೈನ್ಯ ಸ್ವರದಲ್ಲಿ, –

“ಪೋಲೀಸ ಕೇಸಂದರ ನಾಳಿ ನಮ್ಮ ತಲೀಗೂ ಬಂದರ ಬಂತs. ಯಾಕವಸರ ? ಮರ್ಯಾ ಬರಲಿ ವಿಚಾರ ಮಾಡೂಣಲ್ಲರಿ”

– ಹೇಳಿದ. ಗೌಡನಿಗಿದು ಸರಿಬರಲಿಲ್ಲ. ನೊದವರಂತೆ ಮುಖ ಮಾಡಿ ಹೇಳಿದ :

“ಏನ್ರೀ ದೇಸಾಯರ, ಚಾಕರಿ ಮನಶ್ಯಾ ಹೊಲೆಯ, ದೇಸಗತಿ ಹೆಣ್ಣಮಕ್ಕಳು ಮಲಗೋವಲ್ಲಿಗೆ ಹೋಗಿ ಬಂಗಾರ ಕದೀತಾನಂದರ ಇದು ಸಾಮಾನ್ಯ ಮಾತೇನ್ರಿ? ನೀವು ಇಷ್ಟು ಸಲಿಗೀ ಕೊಡತೀರಂತs  ಅವ ಅಷ್ಟು ಕೊಬ್ಬಿ ಹೋಗ್ಯನ. ಈ ಪರಿ ದೇಸಗತಿ ನಾ ಎಲ್ಲಿ ಕಂಡಿರಲ್ಲರೆಪ.”

“ಇಂದ ಪೋಲೀಸರು ಬರೋದು, ಮನ್ಯಾಗ ಹುಡಿಕ್ಯಾಡೋದು ಚಂದ ಕಾಣಾಣಿಲ್ಲರಿ. ದಿನಕಾರ್ಯೆ ಮುಗೀಲಿ, ನಾಳಿ ನೋಡೂಣಂತ.”

“ಹಿಂಗ ನೀವು ಎದಕ್ಕೆಲ್ಲಾ ನೋಡುಣು ಅಂತಂದರ ಹೆಂಗರಿ?”

“ಮರ್ಯಾನs ತಗೊಂಡಿದ್ದಾನನ್ನೂದು ಇನ್ನs ಖಾತ್ರಿಯಿಲ್ಲ. ಅವ ಬರಲಿ, ಮಾತಾಡಿ ನೋಡೋಣು. ಖಾತ್ರಿಯಾದ ಮ್ಯಾಲ ಐತೇ ಐತಲ್ಲ, ಪೋಲೀಸ್ ಸ್ಟೇಷನ್ನು.”

“ಇನ್ನು ಹೆಂಗಾಗಬೇಕರಿ ಖಾತ್ರಿ ನಿಮಗ? ಖಾತ್ರಿ ಆಗಿಲ್ಲ ಅಂತಿಟ್ಟಕೊಳ್ರಿ. ಪೋಲೀಸರು ಬಂದರೆ ತಾನsಖರೆ ಹೊರಬೀಳತೈತಿ. ದೇಶಯರ ಮನ್ಯಾಗ ಕಳುವಾತೋದಂದರೇನ್ರಿ….?”

– ಎಂದು ಗೌಡ ವೀರಾವೇಶದಿಂದ ಇಡೀ ದೇಸಗತಿಯ ಮಾನವ ಹೊಣೆ ತನ್ನದೇ ಎಂಬಂತೆ ಇನ್ನೂ ಏನೋ ಹೇಳಹೊರಟಿದ್ದ. ಅಷ್ಟರಲ್ಲಿ ಪರಮಶೆಟ್ಟಿ ಹಾಗೂ ಊರಿನ ಮೂವರು ಪಂಚರು ತೊಲೆ ಬಾಗಿಲಲ್ಲಿ ಕಾಣಿಸಿಕೊಂಡರು. ಗೌಡ ಎದ್ದು ಅಂತಸ್ತಿಗೆ ಹೋದ.

ಬಂದವರು ದೇಸಾಯಿಗೆ ನಮಸ್ಕರಿಸಿ ಕೂತರು. ದೇಸಾಯಿಯ ಮನಸ್ಸು ನೊಂದಿತ್ತಾದ್ದರಿಂದ ಬಂದವರಿಗೆ ಮಾತಿನ ಪೀಠಿಕೆ ಹಾಕುವುದಕ್ಕೂ ಅವಕಾಶ ಕೊಡದೆ ನಿರ್ಭಾವದಿಂದ “ಏನಾಗಬೇಕಾಗಿತ್ತು?” ಎಂದ. ಏನೇನಾಡಿ ಏನೇನೋ ಅಭಿನಯಿಸಬೇಕೆಂದು ಬಂದವರಿಗೆ ನಿರಾಸೆಯಾಯ್ತು. ಶೆಟ್ಟಿ ಸುಮ್ಮನೆ ದೇಸಾಯರ ದೃಷ್ಟಿ ನಿವಾರಿಸಿ ದೂರದ ಕಂಬದ ಬಳಿಯಿದ್ದ ನನ್ನ ಕಡೆ ನೋಡುತ್ತ ಕುಳಿತಿದ್ದ. ಅವರಲ್ಲೇ ಹಿರಿಯನಾದ ಮುದುಕ – “ಇರತಾವಲ್ಲರಿ ಊರಗಾರಿಕಿ ಕೆಲಸ. ತಮ್ಮನ್ನ ಬಿಟ್ಟ ನಾವೇನ ಮಾಡಾಕಾದೀತು?” ಅಂದ.

“ಆಯ್ತಲ್ಲ. ನಮ್ಮಿಂದೇನಾಗಬೇಕಿತ್ತು, ಅದ್ಹೇಳ್ರಿ” – ಎಂದು ದೇಸಾಯಿ ಅವನ ಮಾತನ್ನು ಅಲ್ಲಿಯೇ ಕತ್ತರಿಸಿದ.

“ಹುಚ್ಚಯ್ಯಸ್ವಾಮೀ ಸಮಾಧಿ ಕಟ್ಟಿಸಬೇಕಂತ ಊರವರೆಲ್ಲಾ ಠರಾವ ಮಾಡೀವ್ರಿ. ಮಾರಾಜರಂಥಾ ತಾವಿದ್ದೀರಿ. ತಮ್ಮನ್ನ ಬಿಟ್ಟು ನಾವೇನ ಮಾಡಾಕಾದೀತು?”

“ಸಮಾಧಿ ಕಟ್ಟಿಸಬೇಕಂತ ಠರಾವು ಮಾಡೋವಾಗ ಮಾರಾಜರ ನೆನಪ ಆಗಲಿಲ್ಲ. ಈಗ ನೆನಪಾಗೇದಂದರ ಅದರಾಗೇನೋ ಇರಬೇಕು. ಏನ ಬೇಕಾಗಿತ್ತು?”

– ದೇಸಾಯಿಯ ವ್ಯಂಗ್ಯ ಕೇಳಿ ಮುದುಕನ ಮುಖ ಸಪ್ಪಗಾಯ್ತು ತಪ್ಪಿನ ಅರಿವಿನಿಂದ ಅಕ್ಕಪಕ್ಕದವರ ಮುಖ ನೋಡಿದ, ಅವರು ನಿವಾರಿಸಿ ಬೇರೆ ಕಡೆ ನೋಡಿದರು. ಮುದುಕನೇ ಮತ್ತೆ ಧೈರ್ಯ ಸಂಪಾದಿಸಿಕೊಡು, “ಮಾರಾಜರು ಅಷ್ಟೋ ಇಷ್ಟೋ ಚಂದಾ ಕೊಟ್ಟು ಬೋನಿಗಿ ಮಾಡಿದರ ಮುಂದಿಂದ ನೋಡಾಕಾದೀತು.”

ಕೃತಕ ವಿನಯದ ಮುದುಕನ ಈ ಮಾತು ಅವನ ವಯಸ್ಸಾದ ಮುಖ ಮತ್ತು ಆಕೃತಿಗೆ ಎಷ್ಟೋ ಹೊಂದುತ್ತಿರಲಿಲ್ಲ. ಆದರೇನು ಮಾಡುವುದು? ಎಷ್ಟೆಷ್ಟು ದೇಸಾಯನ್ನು ಖುಶಿ ಮಾಡಿದರೆ ಅಷ್ಟಷ್ಟು ಗಿಟ್ಟುವುದೆಂಬುದನ್ನು ಅವರು ಹಿಂದಿನಿಂದ ಮನಗಂಡಿದ್ದರು. ಹೊರಗೆಷ್ಟೇ ನಾಟಕವಾಡಿದರೂ ಒಳಗೆ ಅವರು ನಗುತ್ತಿದ್ದರೆಂದು ಅವರ ಕಣ್ಣು ಮುಖ ನೋಡಿದರೇ ತಿಳಿಯುತ್ತಿತ್ತು. ಆದರೆ ದೇಸಾಯಿಯ ವ್ಯಂಗ್ಯದಿಂದ ಕೂಡ ಅವರು ಏನನ್ನೂ ಕಲಿಯಲಿಲ್ಲ. ದೇಸಾಯಿಯ ಹತ್ತಿರ ಹಣವಿಲ್ಲವೆಂದು ಶೆಟ್ಟಿಗೆ ಗೊತ್ತಿತ್ತು. ಅದಕ್ಕೇ ಅವನೇ ಮುಂದಾಗಿ,

“ಬೇಕಾದರ ಮರಾಜರ ಇಷ್ಟಂತ ಅಪ್ಪಣೆ ಕೊಡಿಸಿದರ ಅಷ್ಟು ಬರಕೊಂಡಿರ್ತೀವಿ. ಅಮ್ಯಾಲ ಅನುಕೂಲಾದಾಗ ಕೊಟ್ಟೀರಂತ” – ಎಂದು ಹೇಳಿದ. ದೇಸಾಯಿಗಿದು ದೀಡಿ ಮಾತನಿಸಿತು. ದೇಸಗತಿಯನ್ನು ಹಗುರವಾಗಿ ಕಂಡದ್ದರ ಮಾತೆನ್ನಿಸಿತು. ಈ ತನಕದ ಆತನ ಜಾಳು ನೋಟ ಈಗ ನಿರ್ದಿಷ್ಟಗೊಂಡು ಹರಿತವಾಯಿತು. ಶೆಟ್ಟಿಯನ್ನು ಆ ನೋಟಕ್ಕೆ ಬೇಟೆಯ ಪ್ರಾಣಿಯೆಂಬಂತೆ ಗುರಿಮಾಡಿ, “ಶೆಟ್ಟಿ ಎಷ್ಟ ಕೊಟ್ಟಾನ” ಎಂದು ಕೇಳಿದ.

“ಅವನೂ ಕೊಡಬೇಕಲ್ಲರಿ.”

– ಶೆಟ್ಟಿ ಸುಮ್ಮನಿರಲಾರದೆ “ಮಾರಾಜರೆಷ್ಟ ಹೇಳಿದರ ಅಷ್ಟ ಕೊಡೊಣ್ರಿ” ಅಂದ. ಈ ಮಾತಿನ ಅರ್ಥ ಬೇರೆ ದಾರಿ ಹಿಡಿಯಿತು. ಶೆಟ್ಟಿ ಹೇಳಿದ್ದು ನಾನು ಎಷ್ಟು ಕೊಡಬೇಕೆಂದು ಮಾರಾಜರು ಅಪ್ಪಣೆ ಕೊಡಿಸುತ್ತಾರೋ ಅಷ್ಟನ್ನು ಕೊಡುತ್ತೇನೆ ಎನ್ನುವ ಅರ್ಥದಲ್ಲಿ, ದೇಸಾಯಿಗಿದು ಸವಾಲೆಸೆದಂತೆನಿಸಿತು. ನಾನು ಕೊಟ್ಟಷ್ಟೇ ಶೆಟ್ಟಿ ಕೊಡುತ್ತಾನೆನ್ನಿಸಿ ತನ್ನನ್ನು ಸಮಾನವಾಗಿ ಗಣಿಸಿದನಲ್ಲಾ ಎಂದು ಉರಿಯ ತೊಡಗಿದ.

“ಅಂದರ ನಾವು ಕೊಟ್ಟಷ್ಟs ಕೊಡ್ತೀರಂಧಾಂಗಯ್ತು.”

– ಈ ಮಾತಿನ ಹಿಂದಿನ ನೋವು ಗೊತ್ತಾಗದೆ ಶೆಟ್ಟಿ “ಹೂ ಕೊಡೂಣ್ರಿ” ಅಂದ. ದೇಸಾಯಿ ಕಿಸೆಯಿಂದ ಮರ್ಯಾ ಕೊಟ್ಟಿದ್ದ ಅಷ್ಟು ಹಣ ತೆಗೆದು “ತೆಗೊ ಸಾವಿರ” ಎಂದು ಹೇಳಿ ಪಂಚನ ಕೈಗೆ ನೋಟಿನ ಕಂತೆಯಿಟ್ಟ! ಸಾವಿರವೆನ್ನುತ್ತಲೂ ಶೆಟ್ಟಿ ತಬ್ಬಿಬ್ಬಾಗಿ ದೇಸಾಯಿಯನ್ನೇ ನೋಡಿದ. ದೇಸಾಯಿ ಗೆದ್ದವನಂತೆ ಹೆಮ್ಮೆಯ ತೃಪ್ತಿಯಿಂದ ಮುಗುಳು ನಕ್ಕನಷ್ಟೆ. ಪಂಚರಿಗೆ ಅನಿರೀಕ್ಷಿತ ಆನಂದವಾಗಿ ಭಾವಪರವಶರಾಗಿ ಹೊಳಪುಳ್ಳ ಮಾತುಗಳಿಂದ ದೇಸಾಯಿಯನ್ನು ಹೊಗಳಿದರು. ಶೆಟ್ಟಿ ಕಂಗಾಲಾಗಿ ಕೂತ. ಅವನಿಗಿಂತ ನಾನು ಕಂಗಾಲಾಗಿದ್ದೆ. ಇನ್ನೆಲ್ಲಿಯ ದಿನಕಾರ್ಯೆ?

* * *