ದೇಸಗತಿಯ ಮನೆಯ ಸಾವೆಂದರೆ ಎಲ್ಲೆಲ್ಲಿಂದ ಎಷ್ಟೊಂದು ಜನ ಬರಬೇಕು, ಆದರೆ ಹೆಣದ ಅಂತ್ಯದರ್ಶನಕ್ಕೆ ಕೂಡ ಊರಿನ ಜನ ಹೆಚ್ಚಾಗಿ ಬರಲಿಲ್ಲ. ಸುಡುವ ವ್ಯವಸ್ಥೆಗೂ ಓಡಾಡಲಿಕ್ಕೆ ಜನ ಇರಲಿಲ್ಲ. ಅಂದರೆ, ಮರೆಪ್ಪನೇ ಓಡಾಡಿ ಸುಡುವ ವ್ಯವಸ್ಥೆ ಮಾಡಿದ. ಈ ಮನೆತನದ ಬಗ್ಗೆ ಊರವರಿಗೆ ಅದೇನು ವೈರವೋ ಸೇಡೋ ಏನೇನೂ ಆಗಿಲ್ಲವೆಂಬಂತೆ ನಿರ್ಲಿಪ್ತರಾಗಿದ್ದರು. ಹೆಣಕ್ಕಾಗದಿದ್ದರೂ ಬೆಂಕಿಗಾದರೂ ನಂದಗಾಂವಿಯಿಂದ ಗೌಡ, ಗೌಡ್ತಿ ಬಂದರು. ಅವರು ಬರುವಷ್ಟರಲ್ಲಿ ಹೆಣವನ್ನು ಸುಡುಗಾಡಕ್ಕೆ ಸಾಗಿಸಲಾಗಿತ್ತು. ಹೀಗಾಗಿ ಅವರು ನೇರವಾಗಿ ಅಲ್ಲಿಗೇ ಬಂದರು. ಅಂತೂ ಹೆಣ ಸುಟ್ಟದ್ದಾಯ್ತು. ಹಿರಿಯ ದೊರೆಸಾನಿ ಸತ್ತಾಗ ದಾನ ಮಾಡದಿದ್ದರೆ ಹೇಗೇ? ಆದರೆ ಅದಕ್ಕೂ ದೇಸಾಯಿಯ ಹತ್ತಿರ ಹಣ ಇರಲಿಲ್ಲ. ಅದನ್ನೂ ಪರಮ ಶೆಟ್ಟಿಯಿಂದಲೇ ತಂದಾಯ್ತು.

ಅರಮನೆಯಲ್ಲಿ ಮುದುಕಿ ಓಡಾಡುತ್ತಿರಲಿಲ್ಲವಾದರೂ ಆಗಾಗ ಹಸಿವು ನೀರಡಿಕೆಗೆ ನಮ್ಮನ್ನು ಕರೆಯುವುದಿತ್ತು. ಹಗಲು ರಾತ್ರಿ ಯಾವಾಗೆಂದರೆ ಆವಾಗ ನಡುಪಟ್ಟಿಯ ಹಾಡನ್ನು ಹೇಳುವುದಿತ್ತು. ಸಾಯುವ ಮುನ್ನಾದಿನ ಅವಳು ನಡುಪಟ್ಟಿ ಕೊಟ್ಟ ದೃಶ್ಯವಂತೂ ನನ್ನ ಕಣ್ಣಿನಲ್ಲಿ ಇನ್ನೂ ಹಾಗೇ ಇದೆ. ಇದ್ದಾಗ ಅವಳಿದ್ದಾಳೆಂದು ಅನ್ನಿಸದಿದ್ದರೂ ಸತ್ತಮೇಲೆ ಮಾತ್ರ ಅವಳಿಲ್ಲದ್ದು ಹೆಜ್ಜೆಹೆಜ್ಜೆಗೆ ನಮ್ಮ ಅನುಭವಕ್ಕೆ ಬರುತ್ತಿತ್ತು. ಅವಳ ಕೋಣೆಯ ಕಡೆಗೆ ಕಣ್ಣು ಹರಿದಾಗೆಲ್ಲ ಖೇದವಾಗುತ್ತಿತ್ತು. ಹೆಣಕ್ಕೆ ಬಂದ ಗೌಡ್ತಿ ದಿನಕಾರ್ಯ ಮುಗಿಯುವ ತನಕ ಇಲ್ಲೇ ಇರಲೆಂದು ಬಿಟ್ಟು ಗೌಡ ನಂದಗಾಂವಿಗೆ ಹೋಗಿದ್ದ. ನಿಂಗವ್ವ ಗೌಡ್ತಿ ಮಗಳಿಗೆ ಸಮಾಧಾನ ಹೇಳುತ್ತಿದ್ದಳು. ಅವಳಿಗೆ ಒಳಗಿನ ವ್ಯವಹಾರಗಳ ಅರಿವಿರಲಿಲ್ಲ. ನಿರಾಸೆ ಮತ್ತು ದುಃಖದಿಂದ ಸಿಂಗಾರೆವ್ವ ಕಂಗಾಲಾಗಿದ್ದಳು. ಯಾವ ಬಸರಿನ ನೆಪದಲ್ಲಿ ಸಾಯುವ ತನಕ ಜತನವಾಗಿಟ್ಟ ನಡುಪಟ್ಟಿ ಕೊಟ್ಟಿದ್ದಳೋ ಆ ಬಸುರು ಅವಳು ಸತ್ತ ದಿನವೇ ಇಳಿದಿತ್ತು. ಹಿರಿಯ ದೊರೆಸಾನಿ ಸಾಯದೆ ಬಸಿರು ಇಳಿದಿದ್ದರೆ, ಅಥವಾ ಅವಳು ನಡುಪಟ್ಟಿ ಕೊಡದೆ ಸತ್ತಿದ್ದರೆ ಈ ಪರಿ ದುಃಖವಾಗುತ್ತಿರಲಿಲ್ಲ. ಅವಳ ಆಶೀರ್ವಾದವನ್ನೂ ಮೀರಿ ದೈವ ಸಿಂಗಾರೆವ್ವನನ್ನು ವಂಚಿಸಿತ್ತು. ಆ ದೈವವನ್ನು ನೆನೆದು ಇವಳು ಅಳುತ್ತಿದ್ದಳು. ಇದು ನನಗೆ ಮಾತ್ರ ಗೊತ್ತಿತ್ತು. ಆದರೆ ಸಮಾಧಾನದ ಮಾತುಗಳನ್ನಲ್ಲದೆ ನಾನೇನು ಕೊಡುವುದು ಸಾಧ್ಯವಿತ್ತು?

ಎಷ್ಟೇ ಸಣ್ಣ ಪ್ರಮಾಣದಲ್ಲೇ ಮಾಡಲಿ, ದಿನಕಾರ್ಯಕ್ಕೆ ಸಾವಿರ ರೂಪಾಯಿಗಳ ಅಗತ್ಯವಿತ್ತು. ದೇಸಾಯಿಯಂತೂ ಸದಾಶಿವ. ಹಣ ಎಂದೊಡನೆ ಪರಮಶೆಟ್ಟಿಯ ಮನೆಯ ಕಡೆಗೆ ಮುಖ ಮಾಡುತ್ತಿದ್ದ. ಆದರೆ ಶೆಟ್ಟಿ ಈ ಸಲ ಖಂಡಿತ ಹಣ ಕೊಡುವುದಿಲ್ಲವೆಂದು ಪಟ್ಟುಹಿಡಿದ. ಯಾವ ಭರವಸೆ ನಂಬಿ ಹಣ ಕೊಡಬೇಕು? ಹಾಗಂತ ದಿನಕಾರ್ಯ ನಿಲ್ಲಿಸಲಿಕ್ಕಾಗುವುದಿಲ್ಲವಲ್ಲ. ದೇಸಾಯಿ ಸಮಾಧಾನ ಹೇಳಿ ನೋಡಿದ. ಇದೊಂದು ದಿನಕಾರ್ಯ ಮುಗಿದೊಡನೆ ಗೋಕಾವಿಗೆ ಹೋಗಿ ಕಾಗದ ಪತ್ರದ ಹೊಸ ಪೂರೈಸೋಣವೆಂದ ದೇಸಾಯಿ, ಈ ದಿನಕಾರ್ಯ ಮುಗಿದರೆ ನೀವೆಲ್ಲಿ ನನ್ನ ಕೈಗೆ ಸಿಗುತ್ತೀರಿ? ಎಂದು ಶೆಟ್ಟಿ –

“ತಿಳದ ನೋಡ್ರಿ ದೇಸಾಯರ, ಒಂದಲ್ಲ ಎರಡಲ್ಲ ದೀಡಲಕ್ಷ ರೂಪಾಯಂದರ ಸಣ್ಣ ಮಾತೇನು? ಅದರಾಗಿಂದ ಒಂದs ಒಂದು ಕೆಂಪಾನ ಪೈಸಾ ಕೊಡಲಿಲ್ಲ. ಮತ್ತೂ ರೊಕ್ಕ ಕೇಳಿದರ ಯಾವ ಖಾತ್ರೀಲೇ ಕೊಡ್ಲಿ? ನಾಳಿ ಅಂದರ ನಾಳಿ ಅರಮನಿ ಬರಕೊಡ್ತೀನಿ ಅಂದಿರಿ. ನೀವs ನೋಡಿದಾಂಗ ಇಂಥಾ ನಾಳಿ ಎಷ್ಟಾದವು? ಮನ್ಯಾಗ ಹೆಣಾ ಬಿದ್ದಾಗ ಹಾರ್ಯಾಡಬಾರದಂತ ಮೊನ್ನಿ ಕೊಟ್ನಿ. ಇನ್ನs ಕೋಡೋದಂದರ ನನಗೇನು ಆಧಾರ ಬ್ಯಾಡೇನ್ರಿ? ಹೋಗಲಿ, ಇಷ್ಟದಿನ ಗೆಣಮೃತರಾಗಿ ಇದ್ದಿವಿ. ನಿಮಗ ಬಂದ ಸಂಕಟ ನನ್ನ ಸಂಕಟ ಒಂದs ಅನ್ನೋಣ. ಏನಾದರೂ ಚಿನ್ನ ಇದ್ದರ ಒತ್ತೆ ಇಡರಿ, ಹಣ ಎಣಸ್ತೀನಿ”.

ಅದೊಂದು ನಡಪಟ್ಟಿ ಮತ್ತು ಸಿಂಗಾರೆವ್ವನ ಅವೆರಡು ಬಳೆ ಬಿಟ್ಟರೆ ಚಿನ್ನ ಎಲ್ಲಿತ್ತು? ಇದ್ದುದೆಲ್ಲ ಆಗಲೇ ಶೆಟ್ಟಿಯ ಹೆಂಡತಿ ಮಕ್ಕಳ ಕೊರಳನ್ನಲಂಕರಿಸಿತ್ತು. ನಡುಪಟ್ಟಿಯ ವಿಚಾರ ಇವರ್ಯಾರಿಗೂ, ದೇಸಾಯಿಗೂ ತಿಳಿದಿರಲಿಲ್ಲವಾದ್ದರಿಂದ ಅಥವಾ ಮರೆತದ್ದರಿಂದ ಬಚಾವಾಗಿತ್ತು. ಇನ್ನುಳಿದದ್ದು ಬಳೆ. ಮನೆಯಲ್ಲಿ ಏನು ತೊಂದರೆ ಬಂದರೂ ಸಿಂಗಾರೆವ್ವನ ಕೈಬಳೆಗೇ ಕೈ ಹಾಕಬೇಕು. ಇಂಥಾ ದೊಡ್ಡ ಅರಮನೆ ಅಷ್ಟೊಂದು ದೇಸಗತಿ ಜಮೀನಿದ್ದೂ ಇಂಥ ಗತಿ ಬಂದಿತ್ತೆಂದರೆ ನಂಬಲಿಕ್ಕಾದೀತ? ಆದರೆ ಪರಿಸ್ಥಿತಿ ಹಾಗಿತ್ತಪ್ಪ, ಪರಮಶೆಟ್ಟಿ ಹಾಗೆ ಹೇಳಿದೊಡನೆ ದೇಸಾಯಿ ಅಂತಸ್ತಿನ ಕೋಣೆಗೆ ಹೊರಟ. ನಾನು ಹಿಂದಿನಿಂದ ಹೋದೆ.

ಸಿಂಗಾರೆವ್ವ ಈ ದಿನವಷ್ಟೆ, ಅದೂ ಸ್ವಲ್ಪ ಗೆಲುವಾಗಿದ್ದಳು. ತಾಯಿಯ ಪಕ್ಕದಲ್ಲಿ ಕೂತು ಅದೇನೋ ಹೇಳಿತ್ತಿದ್ದಳು. ದೇಸಾಯಿಯನ್ನು ನೋಡಿದೊಡನೆ ಸುಮ್ಮನಾದಳು. ದೇಸಾಯಿ ಕಂಬದ ಬಳಿ ನಿಂತ. ಗಂಡ ಹೆಂಡತಿಯ ಖಾಸಗೀ ಮಾತಿನಲ್ಲಿ ತಾನ್ಯಾಕಿರಬೇಕೆಂದು ಗೌಡ್ತಿ ಎದ್ದು ಬಂದಳು. ಹೊರಗೆ ಬಾಗಿಲ ಮರೆಯಲ್ಲಿ ನಾನು ನಿಂತಿರುವುದನ್ನು ನೋಡಿ, ನಿಲ್ಲಬಹುದೇನೋ ಎನ್ನಿಸಿ ತಾನೂ ನನ್ನೊಂದಿಗೆ ನಿಂತಳು. ಈಗ ದೇಸಾಯಿ ಹೋಗಿ ಗಡಂಚಿಯ ಮೇಲೆ ಕೂತ. ಶೆಟ್ಟಿಯ ಮಾತಿನಿಂದ ಅವನ ಮುಖ ಕಳೆಗೆಟ್ಟಿತು. ಒಳಗೊಳಗೇ ಪಶ್ವಾತ್ತಾಪಪಡುತ್ತಿದ್ದ. ಮತ್ತು ಅದನ್ನು ಇನ್ನೊಬ್ಬರು ನೋಡುವುದನ್ನು ಇಷ್ಟಪಡುತ್ತಿರಲಿಲ್ಲ. ತುಟಿ, ಒಣಗಿ, ಮುಖ ಹೀರಿದವನಾಗಿ ನೋಡಿದವರಿಗೆ ಅಯ್ಯೋ ಪಾಪ ಎನ್ನಿಸುವಂತಿದ್ದ. ಸಿಂಗಾರೆವ್ವ ಇವನನ್ನೇ ಖೇದದಿಂದ ನೋಡುತ್ತಿದ್ದಳು. ಅವಳು ತನ್ನನ್ನು ನೋಡುತ್ತಿದ್ದುದು ಗಮನಕ್ಕೆ ಬಂದೊಡನೆ ಎದ್ದು ಬಂದು ಕಿಡಕಿಯ ಬಳಿ ನಿಂತ. ಹೊರಗೆ ಹುಣಿಸೇಮಳೆ ನೋಡುತ್ತಿದ್ದಾನೆಂದು ಹೇಳಲಾರೆ. ಹೇಳಿದ –

“ದೊರೆಸಾನೀ, ಬಳಿ ಅದಾವಲ್ಲ, ಒಂದೆರಡು ದಿನ ಕೊಟ್ಟಿರಿ” ಈ ಮಾತು ಕೇಳಿದೊಡನೆ ದೊರೆಸಾನಿಯ ಕಣ್ಣೊಳಗೆ ಸಂಶಯ, ಭಯ ಎರಡೂ ಮೂಡಿದೆವು. ಅಗಲವಾಗಿ ಕಣ್ಣು ತೆರೆದು ದೇಸಾಯಿಯನ್ನು ನೋಡುತ್ತ,

“ಯಾವ ಬಳಿ?” ಅಂದಳು. ದೇಸಾಯಿ ನಿಂತ ಭಂಗಿ, ಮತ್ತು ಅದೇ ತಣ್ಣಗಿನ ದನಿ ಬದಲಿಸದೆ,

“ಚಿನ್ನದ ಬಳಿ, ನಿಮ್ಮ ಕೈಯಾಗದಾವಲ್ಲ ಅವು” ಅಂದ. ಅವಳ ಸಂಶಯ ನಿಜವಾಗಿ, ಭಯ ಮಾತ್ರ ಅವಳ ಮುಖದಲ್ಲಿತ್ತು.

“ಮದೀವೀ ಗುರುತಿಗಿ ಅವೆರಡಾದರೂ ನನ್ನ ಕೈಯಾಗಿರಲಿ ಅಂದರ, ಅದಕ್ಕೂ ಗಂಟ ಬಿದ್ದಿರೇನ?”

“ಒಂದೆರಡ ದಿನ ಕೊಟ್ಟಿರಿ. ಅಮ್ಯಾಲ ಬಿಡಿಸಿಕೊಂಡ ಬಂದ ಕೊಡೋಣ”

“ಬರತಾವಂತೇನು?”

“ಅವ್ವನ ದಿನಕಾರ್ಯ ಮಾಡಂತೀರೋ ಬ್ಯಾಡಂತಿರೋ?”

ಕೊನೆಯ ಶಬ್ದ ಕೇಳಿದಾಗ ನಿರಾಸೆ ಮತ್ತು ದುಃಖದಿಂದ ಅವನ ದನಿ ನಡುಗಿದ್ದನ್ನು ಗಮನಿಸಿದೆ. ಅವಳ ಉತ್ತರಕ್ಕೂ ಕಾಯದೆ ಹಾಗೇ ಕೆಳಕ್ಕೆ ನಡೆದ. ನಾವಿಬ್ಬರೂ ಇಲ್ಲಿ ನಿಂತಿದ್ದೆವಲ್ಲ. ನಮ್ಮನ್ನು ನೋಡಿದರೂ ನೋಡದವನಂತೆ ದಾಟಿ ಹೋದ. ನಾವಿಲ್ಲಿ ನಿಂತಿದ್ದಕ್ಕೆ, ಅವರ ಮಾತು ಕದ್ದು ಕೇಳಿದ್ದಕ್ಕೆ ಕೆಡುಕೆನಿಸಿತು. ಯಾಕೆಂದರೆ ದೇಸಾಯಿಗೆ ಇದರಿಂದ ಅಸಮಾಧಾನವಾಗುವುದು ಸಹಜವಾಗಿತ್ತು.

ನಾವು ಒಳಗೆ ಹೋದಾಗ ಸಿಂಗಾರೆವ್ವನ ಕಣ್ಣಂಚಿನಲ್ಲಿ ನೀರು ತುಂಬಿತ್ತು. ನಮ್ಮನ್ನು ನೋಡಿದ ಮೇಲೂ ಅವಳ ಮುಖಚರ್ಯೆ ಬದಲಾಗಲಿಲ್ಲ. ಕಣ್ಣು ತೆರೆದಿದ್ದಳಾದರೂ ಏನನ್ನಾದರೂ ನೋಡುತ್ತಿದ್ದಾಳೆಂದು ಅನ್ನಿಸಲಿಲ್ಲ. ಹಿಂದುರುಗಿ ನನ್ನ ಅಂತರಂಗವನ್ನೇ ನೋಡಿ ಕೊಳ್ಳುತ್ತಿದ್ದಳೋ ಏನೋ, ತುಸು ಹೊತ್ತು ಹೀಗೆ ಕೂತಿದ್ದು ಮೆಲ್ಲಗೆ ತನ್ನ ಕೈಬಳೆ ಕಳಚ ತೊಡಗಿದಳು. ಮುದುಕಿ ಮಳಮಳ ನನ್ನ ಮುಖವನ್ನು ಒಮ್ಮೆ, ಮಗಳ ಮುಖವನ್ನೊಮ್ಮೆ ನೋಡುತ್ತಿದ್ದಳು. ನಾನು ಏನೂ ಹೇಳಲಿಲ್ಲವಾದ್ದರಿಂದ ಮುಂದಾಗಿ ಬಂದು ಮಗಳ ಕೈ ಹಿಡಿದು “ಹುಚ್ಚೀ ಹಾಂಗ ಮಾಡಬ್ಯಾಡ. ಹೆಂಗೂ ಬಿಟ್ಟ ಹೋಗ್ಯಾನಲ್ಲ, ಹೋಗಲಿ ಸುಮ್ಮನಿರು” ಎಂದಳು. ಸ್ವಲ್ಪ ಹೊತ್ತು ಹಾಗೇ ಇದ್ದು ಮತ್ತೇನು ತಿಳಿಯಿತೋ ದೊರೆಸಾನಿ ಕೈಬಳೆ ಕಳಚಿದಳು. ಅತ್ತೆಯ ದಿನಕಾರ್ಯದ ಮಾತು ಅವಳ ಅಂತಃಕರಣ ಕಲಕಿತ್ತು. ಅವಳ ಕಣ್ಣಲ್ಲಿ ನೀರಾಡಿದ್ದು ಗಂಡನ ಮಾತಿನಿಂದಾದ ಬೇಸರಕ್ಕಲ್ಲ. ಅತ್ತೆಯ ದಿನಕಾರ್ಯದ ನಿರ್ಗತಿಕತನಕ್ಕೆ ಎಂದು ನನಗೆ ಅನ್ನಿಸಿತು. ಮೆಲ್ಲಗೆ ನನ್ನ ಕೈಯಲ್ಲಿ ಬಳೆಯಿಟ್ಟು “ಕೆಳಗ ಕುಂತಾನೇನೋ ಹೋಗಿ ಕೊಟ್ಟ ಬಾ” ಎಂದಳು. ನಾನು ಮಾತಾಡಲಿಲ್ಲ. ಗೌಡ್ತಿ ಒಳಗೊಳಗೇ ಹಳಹಳಿಸುತ್ತಿದ್ದಳು. ನಾನು ಬಳೆ ತಗೊಂಡು ಹೊರಟೆ.

ಆದರೆ ಕೆಳಗಿಳಿದು ಬಂದಾಗ ದೇಸಾಯಿ ಇರಲಿಲ್ಲ. ತಿರುಗಿ ಹೋಗಿ ಬಳೆಗಳನ್ನು ಸಿಂಗಾರೆವ್ವನಿಗೇ ಕೊಟ್ಟೆ. ಅವಳು ಪುನಃ ಕೈಗೆ ಏರಿಸಲೇ ಇಲ್ಲ. ಅಲ್ಲೇ ಹಾಸಿಗೆಯ ಕೆಳಗೆ ಇಟ್ಟುಕೊಂಡಳು. ಈಗ ಗೌಡ್ತಿಗೆ ಹಾಯೆನಿಸಿ ದನಿ ಬಂತು.

“ಅಲ್ಲs ಮಗಳ, ಇರೋವ ಅವೆರಡ ಬಳಿ, ಅವನ್ನೂ ಕೊಟ್ಟೇನ ಮಾಡ್ತಿ?” ದೊರೆಸಾನಿ ಮಾತಾಡಲಿಲ್ಲ. ಮುದುಕಿ ತಂತಾನೇ ಗೊಣಗುಟ್ಟತೊಡಗಿದಳು.

“ನಿನ್ನನ್ನ ಹಡದಾಂವ ಬರಲಿ ತಡಿ. ಕರುಳಂದ ಮ್ಯಾಲ ಹೊತ್ತಿಗಾಗದಿದ್ದರ ಹೆಂಗ ಹೇಳು… ಆದರ ಅವ ಚಂಡಾಲ ಭಾಡ್ಯಾ. ಯಾಕ ಕೊಟ್ಟಾನ ಹೇಳು. ಬೇಕಂದರ ಬಳೀ ಕೊಡು, ಭೇಶ್ ಮಗಳ ಭೇಶ್ ಅಂತಾನ. ಬಳೀ ಏನು, ಅರಮನಿ ಕೊಟ್ಟರ ಬ್ಯಾಡಂತಾನೇನು? ಏನ ಮಾಡಿ ಈ ಅರಮನಿ ನುಂಗಿ ನೀರ ಕುಡೀಲಿ ಅಂತ ಕುಂತಾನ. ಆದರೂ ಭಾಳ ದಿನದಿಂದ ನಿನ್ನ ಬಳೀ ಮ್ಯಾಲ ಕಣ್ಣಿಟ್ಟಾನಂದ ಮ್ಯಾಲ ಈಗ ಬೇಕಂದರ ರೊಕ್ಕಾ ಕೊಟ್ಟಾದರೂ ಬಳೀ ತಗೊಂತಾನೋ ಏನೋವಾ” ಇತ್ಯಾದಿ.

ಮಾರನೇ ದಿನ ಹೇಳಿ ಕಳಿಸಿದ ಹಾಗೆ ದಿನಕಾರ್ಯಕ್ಕೆ ಗೌಡ ಬಂದ. ಮನೆಯಲ್ಲಿ ಯಾವ ವ್ಯವಸ್ಥೆಯೂ ಆಗಿರಲಿಲ್ಲ. ದೇಸಾಯಿಗೆ ನಾನು ಇನ್ನೊಮ್ಮೆ ಬಳೆ ಕೊಡಹೋಗಿದ್ದೆ. ಆಗ ನಿರಾಕರಿಸಿದವನು ಒಟ್ಟಾರೆ ನಿರಾಸಕ್ತನಾಗಿ ಇದ್ದುಬಿಟ್ಟ. ಗೌಡ ಬಂದವನು “ಏನs ಇದು? ದಿನಕಾರ್ಯೆ ಬಂದೈತಿ, ಎಲ್ಲಾರೂ ಹಿಂಗ ನಿಷ್ಕಾಳಜಿಯಿಂದ ಅದಾರು!” ಅಂದ. ಮುದುಕಿ ಇಲ್ಲಿಯ ಪರಿಸ್ಥಿತಿಯನ್ನೆಲ್ಲ ವಿವರಿಸಿದಳೆಂದು ತೋರುತ್ತದೆ. ಗೌಡ ತಾನೇ ಪರಮಶೆಟ್ಟಿಯನ್ನು ನೋಡುವುದಾಗಿ ಹೇಳಿ ಹೋದ. ಅವನ ಕಣ್ಣೊಳಗೆ ಸಂಚಿನ ಮಿಂಚುಗಳು ಹರಿದಾಡುತ್ತಿದ್ದುದನ್ನು ಅಷ್ಟು ದೂರದಿಂದಲೂ ನಾನು ಗಮನಿಸಿದೆ.

ಹೋದವನು ಅಷ್ಟೇ ರಭಸದಿಂದ ಬಂದ. ಮುಖ ಬಾಡಿತ್ತು. ನಡಿಗೆಯಲ್ಲಿ ನಿರುತ್ಸಾಹವಿತ್ತು. ಕಾಲು ತಡವರಿಸುತ್ತಿದ್ದವು. ತಲೆಯ ಮೇಲಿನ ಕೆಂಪು ರುಂಬಾಲನ್ನು ಬಗಲಲ್ಲಿ ಹಿಡಿದುಕೊಂಡಿದ್ದ. ಅವಸರದಲ್ಲಿ ಬರುವಾಗ ಸಡಿಲಾದ ಧೋತ್ರ ಬಲಗಾಲಲ್ಲಿ ಎರಡು ಬಾಡಿ ಸಿಕ್ಕಿಕೊಂಡಿತು. ಕೈಯಲ್ಲಿ ಅದರ ಚುಂಗು ಹಿಡಿದುಕೊಂಡು ದಡಬಡ ಜಿನೆ ಏರಿದ. ನಾನೂ ಬೆನ್ನು ಹತ್ತಿಹೋದೆ. ಗೌಡ್ತಿ ಮಲಗಿದ್ದಳು. ಪಕ್ಕದಲ್ಲಿ ಸಿಂಗಾರೆವ್ವ ಕೂತಿದ್ದಳು. ಗೌಡನ್ನ ಕಂಡು ಇಬ್ಬರೂ ಎದ್ದರು. ಗೌಡ ಹೇಳಬಾರದ ಕಳವಳದಿಂದ ಗಡಂಚಿಯ ಮೇಲೆ ಕೂತು “ಸಿಂಗಾರೆವ್ವ” ಅಂದ. ಮಗಳು ಸುಮ್ಮನೇ ಇದ್ದಳು.

“ನಿಮ್ಮ ಮನ್ಯಾಗೊಬ್ಬ ಆಳ ಇದ್ದಾನಲ್ಲಾ, ಅವ ಮರ್ಯಾ ಅಲ್ಲ?”

ತಕ್ಷಣ ನನಗೆ ಗೌಡ ಯಾಕೆ ಓಡಿಬಂದ ಎಂದು, ಅವನ ಮನಸ್ಸಿನಲ್ಲಿ ಯಾಕೆ ಈ ಪರಿ ಆತಂಕವಾಗಿದೆಯೆಂದು ಹೊಳೆಯಿತು. ಸಿಂಗಾರೆವ್ವನಿಗಿನ್ನೂ ಅವನ ಒಳಗುದಿ ತಿಳಿದಿರಲಿಲ್ಲ. ಸಹಜವಾಗಿಯೇ “ಹೌಂದು” ಎಂದಳು.

“ಎಂದ ಬಂದಾನಿಲ್ಲಿಗೆ?”

“ಬಂದಾಗಲೇ ಆರೆಂಟ ತಿಂಗಳ ಮ್ಯಾಲಾಯ್ತು.”

“ಅಂತೂ ನನ್ನ ವೈರೀಗಿ ಅನ್ನಾಹಾಕಿ ಬೆಳಸಾಕ ಹತ್ತೀದಿ ಅನ್ನು!”

– ಎಂದು ಇರಿಯುವ ಕಣ್ಣುಗಳಿಂದ ಮಗಳ ಕಡೆ ನೋಡಿದ. ಆದ ಅನಾಹುತ ಏನೆಂದು ಸಿಂಗಾರೆವ್ವನಿಗೆ ಈಗ ಹೊಳೆಯಿತು. ಮಾತಾಡಬೇಕೆಂದು ಅವಳು ಬಾಯಿ ತೆರೆಯುವಷ್ಟರಲ್ಲಿ ನಾನು ಸುಮ್ಮನಿರಲಿಲ್ಲ.

“ಅವನ್ನ ಕರಕೊಂಬಂದವರು ನಾವಲ್ಲ. ದೇಸಾಯರ ಗೆಳಿತಾನ ಮಾಡಿಕೊಂಡ ಹೆಂಗೋ ಅರಮನಿ ಹೊಕ್ಕಾನ. ಅವನ್ನ ಹೊರಗ್ಹಾಕ್ರಿ – ಅಂತ ಹೇಳಿ ಹೇಳಿ ಸಾಕಾಗಿ ಹೋಯ್ತು ನಮಗ. ದೇಸಾಯರು ನಮ್ಮ ಮಾತಿಗಿ ಲಕ್ಷ ಕೊಡsವಲ್ಲರು. ನಿಮ್ಮ ಮಗನ್ನ ಕೆಡಸ್ತಾನಂತ ಹಿರೀ ದೊರಿಸಾನಿಗೂ ಆಕಿ ಬದಿಕಿದ್ದಾಗ ಹೇಳಿದೀವಿ. ಅವರ ಮಾತಿಗೂ ಕಿವಿ ಕೊಡಲಿಲ್ಲ. ಅವ ಏನ ಮಾಯೇ ಮಾಡಿದಾನೋ ಅವನ ಬಿಟ್ಟ ಇರಾಕ ಆಗೋದs ಇಲ್ಲ ಅಂತಾರ. ಹೆಂಗೂ ಕೇಳಿಕೇಳಿದಾಗೆಲ್ಲ ಕುಡ್ಯಾಕ ಕೊಡತಾನ. ಮಾತಿಗೊಮ್ಮೆ ಸರಕಾರಂತ್ಹೇಳಿ ಸಲಾಮ ಹೊಡೀತಾನ. ಅವನ್ನ ಬಿಟ್ಟ ದೇಸಾಯರು ಹೆಂಗ ಇದ್ದಾರ ಹೇಳ್ರಿ? ನೀವಾದರೂ ದೇಸಾಯರಿಗೆ ಬುದ್ದೀ ಹೇಳಿ ಹೊರಗ್ಹಾಕ್ರಿ.”

ಎಂದೆ. ಗೌಡ ನನ್ನ ಮಾತು ನಂಬಿದ. ಮಗಳ ಬಗೆಗಿನ ಅವನ ಮುಖದ ತಿರಸ್ಕಾರ ಮಾಯವಾಯ್ತು. ಹುಬ್ಬು ಗಂಟುಹಾಕಿ ಹಣೆಯ ಮೇಲೆ ಚಿಂತೆಯ ಗೆರ ಮೂಡಿಸಿಕೊಂಡ. ನಾನೇ ಮತ್ತೆ ಮುಂದುವರಿಸಿದೆ.

“ಅವ ನೋಡಿದರ ಹೊಲೆಯ, ನಡುಮನೀತನಕ ಅವನ್ನ ಅಡ್ಡಾಡಾಕ ಬಿಡೋದೇನು; ಕುಡಿದಾಗ ಅವನ ಕೈಲೆ ಕಾಲ ತಿಕ್ಕಿಸಿಕೊಳ್ಳೋದೇನು! ಒಮ್ಮಿ ಇದನ್ನೆಲ್ಲ ನೋಡಿ ಪರಮಶೆಟ್ಟರು “ಇದಲ್ಲರೀ ದೇಸಾಯರs” ಅಂತ ಬುದ್ದೀ ಹೇಳಿದರು. ಇವರೇನ ಕೇಳಲಿಲ್ಲ. ನೀವು ಬಂದಾಗ ಹೇಳೂಣಂತ ಸುಮ್ಮನಿದ್ದಿವಿ. ನಾವಂತೂ ಇವ ನಮ್ಮೂರಿನವ ಅಂತ ಸುದ್ದಾ ದೇಸಾಯಿಗೆ ಹೇಳಿಲ್ಲ.”

ಗೌಡ ಏನೂ ಹೇಳದಾದ. ನಮ್ಮ ಮೂವರಲ್ಲಿ ಯಾರೊಬ್ಬರ ಕಡೆಗೂ ನೋಡಲಿಲ್ಲ. ಹೂ ಹೂ ಎಂದು ಒಂದೆರಡು ಬಾರಿ ಹೂಂಕರಿಸಿದ ಅಷ್ಟೆ. ಎದ್ದು ನಿಂತು ಬಗಲಲ್ಲಿಂದ ರುಂಬಾಲು ಬಿಡಿಸಿ ಬಕ್ಕತಲೆಗೆ ಸುತ್ತಿಕೊಳ್ಳುತ್ತ,

“ನೋಡು ಈಗಿಂದೀಗ ಮರ್ಯಾನ್ನ ಹೊರಗ ಹಾಕಿದರ ನಾವು ದಿನಕಾರ್ಯೇಕ ಇರತೀವು. ಇಲ್ಲದಿದ್ದರೆ ನಾವು ನಮ್ಮೂರಿಗಿ ಹೋಗತೀವಂತ ದೇಸಾಯರಿಗಿ ಹೇಳವಾ.”

– ಎಂದು ಹೇಳಿ ದಡಬಡ ಜಿನಿಯಿಳಿದು ಮಾಯವಾದ. ಈವರೆಗಿನ ಮಾತುಗಳಿಂದ ಹೌಹಾರಿದ್ದ ನಿಂಗವ್ವಗೌಡ್ತಿ ಎರಡೂ ಕೈ ಎದೆಯ ಮ್ಯಾಲಿಟ್ಟುಕೊಂಡು “ಅಯ್ ನನ ಶಿವನ! ನನ್ನ ಹಾಟ್ಯಾ ಮರ್ಯಾ ಇಲ್ಲಿ ಬಂದಾನು? ಸತ್ತಾನಂತಿದ್ದರಲ್ಲ. ನನ್ನ ಕಣ್ಣಿಗೂ ಬಿದ್ದಿಲ್ಲಲ್ಲs  ಶೀನಿಂಗೀ!” ಎಂದಳು. ನಾನು ಸಿಂಗಾರೆವ್ವನ ಮುಖ ನೋಡುತ್ತಿದ್ದೆ. ಅವಳ ಕಣ್ಣುಗಳಲ್ಲಾಗಲೇ ಹಳೇ ಬೆಂಕಿ ಹತ್ತಿಕೊಂಡಿತ್ತು. ಒಳಗೊಳಗೇ ತೃಪ್ತಿಯ ನಗೆ ನಗುತ್ತಿದ್ದಳೆಂದು ತೋರುತ್ತದೆ; ತುಟಿಯಂಚಿನಲ್ಲಿ ಅದು ಸ್ಪಷ್ಟವಾಗಿ ಕಾಣುತ್ತಿತ್ತು. ನಗಲಿ ಬಿಡಲಿ ಅವಳ ಮುಖದ ಸೊಗಸು ಮಾಸಿತ್ತು. ದಡ್ಡ ದೊರೆಸಾನಿ ಎಂದುಕೊಂಡೆ. ಮುದುಕಿ ನನ್ನತ್ತ ನೋಡಿ ಏನೂ ತಿಳಿಯದೆ ಮತ್ತೆ ಮಗಳ ಮುಖವನ್ನೇ ನೋಡತೊಡಗಿದಳು. ದೊರೆಸಾನಿ ನಮ್ಮಿಬ್ಬರ ದೃಷ್ಟಿಗಳನ್ನ ನಿವಾರಿಸಿ ಕಿಡಕಿಗೆ ಹೋಗಿ ಹುಣೀಸೆಮೆಳೆ ನೋಡುತ್ತ ನಿಂತಳು.

ರಾತ್ರಿ ಗೌಡ ಮತ್ತು ದೇಸಾಯಿ ಇಬ್ಬರೂ ಜೊತೆಯಲ್ಲೇ ಮನೆಗೆ ಬಂದರು. ಪಡಸಾಲೆಯಲ್ಲಿ ದೀಪದ ಅಕ್ಕಪಕ್ಕ ಕೂತರು. ಒಬ್ಬರ ಮುಖದಲ್ಲೂ ಗೆಲುವಿರಲಿಲ್ಲ. ದೇಸಾಯಿ ಕುಡಿದಿದ್ದನೆಂದು ಅವನ ತೇಲುಗಣ್ಣಿನಿಂದಲೇ ತಿಳಿಯುತ್ತಿತ್ತು. ಗೌಡನ ಮುಖದಲ್ಲಿ ಭಯ ಇತ್ತು. ಏನೋ ಭಯಂಕರವಾದುದನ್ನು ಕಂಡವರಂತೆ ಕಣ್ಣುಗಳನ್ನು ಅಗಲವಾಗಿ ತೆಗೆದು ಮಾತಾಡುತ್ತಿದ್ದ. ನಾನು ಊಟಕ್ಕೆ ಕರೆಯ ಹೋದವಳು ಕಂಬದ ಮರೆಯಲ್ಲಿ ನಿಂತು ಅವರ ಮಾತು ಕೇಳಿಸಿಕೊಂಡೆ. ಗೌಡ ಪ್ರತಿಯೊಂದು ಮಾತನ್ನೂ ಬಹಳ ಅವಸರದಿಂದ, ಇದು ಅಗ್ಗದೀ ಜರೂರೆಂಬಂತೆ ಮಾತಾಡುತ್ತಿದ್ದ. ಮಾತಿಗೊಮ್ಮೆ ಮರ್ಯಾ ಎನ್ನುತ್ತಿದ್ದ. ಮತ್ತು ಮರ್ಯಾ ಎಂದಾಗೊಮ್ಮೆ ಕಳ್ಳ ಸೂಳೀಮಗ, ಬೋಳೀಮಗ, ಹಾದರಗಿತ್ತೀ ಮಗ ಎಂದು ಬೈಗಳ ಸೇರಿಸುತ್ತಿದ್ದ.

“ಖರೆ ಹೇಳತೇನ್ರಿ ದೇಸಾಯರs. ಮರ್ಯಾ ಭಾಳ ಖೊಟ್ಟಿ ಸೂಳೀಮಗ. ಆ ಬೋಳೀಮಗ ಸಣ್ಣಂದಿರತ ನನ್ನ ಮನ್ಯಾಗs ಇದ್ದ.  ನನ್ನ ಅನ್ನ ತಿಂದಕೊಂಡ ಬಿದ್ದಿದ್ದ. ಸ್ವಂತ ಅವ್ವನ್ನ ಖೂನೀ ಮಾಡಿ ಫರಾರಿ ಆದ, ಅಂದರ ಇದರ ಮ್ಯಾಲ ನೀವs ತಿಳಕೊಳ್ರಿ. ನಾ ಇದನ್ನ ಹೇಳತಿರಲಿಲ್ಲ. ಅದರ ನೀವು ಕಾಣಾ ಕಾಣಾ ಹಾಳಾಗೋವಾಗ ನಾ ಬಾಯಿ ಮುಚ್ಚಿಕೊಂಡ ಕುಂದರಾಕಾದೀತ? ಅವನ ಮ್ಯಾಲ ಪೊಲೀಸ್ ವಾರಂಟ್ ಐತಿ. ಆಮ್ಯಾಲ ಆ ಸೂಳೀಮಗನ ತಾಪತ್ರಯ ನಿಮಗಂಟೀತ ಮತ್ತ. ಮೊದಲವನ ಹೊರಗ್ಹಾಕ್ರಿ.”

“ಅವ ನಿಮ್ಮ ಊರಾವಂತ ದೊರೆಸಾನಿಯವರು, ಶೀನಿಂಗವ್ವ ಯಾಕ ಹೇಳಲಿಲ್ಲ?”

“ಅವ ಫರಾರಿ ಆದಮ್ಯಾಲ ಸತ್ತಹೋದನಂತ ಎಲ್ಲಾರೂ ನಂಬ್ಯಾರರೀ, ಹಿಂಗಾಗಿ ಅವರಿಗಿ ಅವನ ಗುರುತs ಹತ್ತಿಲ್ಲ. ಗುರುತಾದರ ಅವರೂ ಅಂಜಿ ನಡಗತಾರ. ಹೇಳಬ್ಯಾಡ್ರಿ ಮತ್ತ. ಬೇಕಾದರ ಅವನ್ನ ಹೊರಗ ಹಾಕಿ ಅಮ್ಯಾಲ ಹೇಳ್ರಿ.”

ಇಣಿಕಿ ನೋಡಿದೆ: ಮಾವನ ಮಾತಿಗೆ ದೇಸಾಯಿ ಹಾ ಹೂ ಎನ್ನುತ್ತಿದ್ದವನು ಆಳದಲ್ಲಿ ಬಹಳ ಖೇದಗೊಂಡಿದ್ದಂತೆ ಕಂಡಿತು. ಗೌಡ ಮರೆಪ್ಪನ ದುಷ್ಟತನದ ಬಗ್ಗೆ ಇನ್ನಷ್ಟು ಅವಸರದಿಂದ ಮಾತಾಡಿದ. ನಾನು ಕಾಣಿಸಿಕೊಂಡು ಊಟಕ್ಕೆ ಕರೆದೆ. ದೇಸಾಯಿ ನನ್ನ ಕಡೆ ಸಂಶಯದ ನೋಟವೊಂದನ್ನು ಬೀರಿ,

“ಶೀನಿಂಗವ್ವಾ, ನಮ್ಮ ಮನ್ಯಾಗ ಮರ್ಯಾ ಇದ್ದಾನಲ್ಲಾ, ಅವ ನಿಮ್ಮೂರಾವಂತ ನಿಮಗೆ ಗೊತ್ತೈತೋ ಇಲ್ಲೋ?”

“ಇಲ್ಲರಿ, ನಮ್ಮ ಊರಾಗಿದ್ದ ಮರ್ಯಾ ಇವ ಆಗಿರಾಕಿಲ್ಲರಿ” ಎಂದೊಂದು ಸುಳ್ಳು ಬಿಟ್ಟೆ. ದೇಸಾಯಿ ಏನೋ ತೀರ್ಮಾನ ತೆಗೆದುಕೊಂಡವರಂತೆ ಕತ್ತು ಹಾಕುತ್ತ “ಬರಲಿ ಬೋಳೀಮಗ. ಹೊರಗ ಹಾಕಬೇಕಂದರ ಹರ್ಯಾಗಿಂದ ನಾಪತ್ತೆ ಆಗ್ಯಾನಲ್ಲರಿ. ನಿಮ್ಮನ್ನ  ನೋಡಿ ಎಲ್ಲಾ ಗೊತ್ತಾದೀತಂತ ಓಡಿಹೋದ್ನೋ ಏನೋ. ಹೋದರ ಚೆಲೋನ ಆತು. ನೀವು ಹೋದ ಮ್ಯಾಲ ಬಂದರ ಸೂಳೀಮಗನ್ನ ಕಾಲ್ಮರೀಲೆ ಹೊಡೆದ ಹೊರಗ ಹಾಕತೀನಿ” ಎಂದು ಗುಡುಗಿದ. ಗೌಡನಿಗೆ ಆನಂದವಾಗಿ ಮುಖದಲ್ಲಿದ್ದ ಭಯ ಮಾಯವಾಯ್ತು. ಹೆಮ್ಮೆಯಿಂದ ಅಳಿಯನ ಕಡೆ ನೋಡುತ್ತ “ಶೀನಿಂಗವ್ವಾ, ತಾಟ ಮಾಡು ನಡಿ” ಎಂದು ನನಗೆ ಹೇಳಿದ, ನಾನು ಹೋದೆ.

ಅಡಿಗೆಮನೆಯಲ್ಲಿ ಸಿಂಗಾರೆವ್ವ ಮತ್ತು ನಿಂಗವ್ವಗೌಡ್ತಿ ಇದ್ದರು. ಎಡೆ ಮಾಡುತ್ತ ಗೌಡ ದೇಸಾಯರ ನಡುವೆ ನಡೆದ ಮಾತುಕತೆಗಳನ್ನೆಲ್ಲ  ಹೇಳಿದೆ. ಅಷ್ಟರಲ್ಲಿ ಹೊರಗಡೆ ಬಾಯಿ ಕೇಳಿಸಿತು. ಮೂವರು ಹೊರಗೆ ಬಂದು ಮರೆಯಲ್ಲಿ ನಿಂತೆವು. ಪರಮಶೆಟ್ಟಿ ಬಂದಿದ್ದ. ದೇಸಾಯಿ ಬಾಯಿ ಮಾಡಿ ಮಾತಾಡುತ್ತಿದ್ದ.

“ನಾನು ಸರಗಂ ದೇಸಾಯಿ, ದುಡ್ಡಿಗಾಗಿ ಸುಳ್ಳು ಹೇಳ್ತಿನೇನೋ ಶೆಟ್ಟಿ? ಇಲ್ಲೀತನಕಾ ಎಂದಾದರೂ ಸುಳ್ಳ ಹೇಳಿದೀನ?”

ಪರಮಶೆಟ್ಟಿ ಕೂತಲ್ಲೇ ಗೌಡನ ಕಡೆಗೊಮ್ಮೆ, ದೇಸಾಯಿಯ ಕಡೆಗೊಮ್ಮೆ ತಿರುಗಿ ಮಾತಿನ ಅವಕಾಶಕ್ಕಾಗಿ ಕಾಯುತ್ತಿದ್ದವನು, ದೇಸಾಯಿ ಮಾತು ಮುಗಿಸುವುದೇ ತಡ ಗೌಡನ ಕಡೆ ತಿರುಗಿ,

“ನೀವs ಹೇಳ್ರಿ ಗೌಡ್ರ, ಕೊಡೋ ಹಣ ಕೊಡ್ರಿ ಅಂದರೆ ಈ ಪರಿ ಸಿಟ್ಟು ಮಾಡಬೇಕೇನ್ರಿ?” ಎಂದ.

ಇಂಥ ಸಾಲದ ಮಾತು ಮಾವನ ಮುಂದೆ ಬರುವುದು ದೇಸಾಯಿಗಿಷ್ಟವಿದ್ದಂತಿರಲಿಲ್ಲ. ಆದರೆ ಅವನನ್ನೂ ಮೀರಿ ಬಂದಾಗಿತ್ತು. ಅವನ ದೇಸಗತಿ ಹಮ್ಮಿಗೆ ನೋವಾದದ್ದೇ ಇದಕ್ಕೆ ಕಾರಣವಾಗಿತ್ತು. ಮತ್ತೆ ಈಗಲೂ ಅದನ್ನು ಎತ್ತಿ ಕಾಪಾಡುವಂತೆ ಅವನ ಮಾತಿನ ಧಾಟಿಯಿತ್ತು. ಹೇಳಿದ:

“ಏ ಶೆಟ್ಟೀ, ಹೆಚ್ಚ ಮಾತಾಡಬ್ಯಾಡ. ಕೊಡೋ ಹಣದ ಬಾಬತ್ತಿನಾಗ ನಾ ನಿನಗೇನ ಹೇಳಿದೆ? ತೋಟ ಬರಕೊಡ್ತಿನಂತ ಹೇಳಲಿಲ್ಲ?”

“ಹೇಳದಿರಿ, ಅದನ್ನಾದರೂ ಬರಕೊಟ್ಟೀರೇನು? ಗೋಕಾವಿಗಿ ಇಂದು ಹೋಗೋಣ, ನಾಳಿ ಹೋಗೂಣಂತ ಬತೀ ದಿನಾ ನೂಕಿದಿರೇ ಹೊರತು ಇಲ್ಲೀತನಕಾ ಬರಕೊಡ್ಲಿಲ್ಲ. ನೀವs ಹೇಳ್ರಿ ಗೌಡ್ರ, ತ್ರಾಸ ಯಾರಿಗಿ ಬರಾಣಿಲ್ಲ? ದೇಸಾಯರ ಮನೀ ದಿನಕಾರ್ಯೆ ಬ್ಯಾರೇ ಅಲ್ಲ, ನನ್ನ ಮನೀದ ಬ್ಯಾರೇ ಅಲ್ಲ. ಆಯ್ತು ಕೊಡತೀನಿ ಹಳೀ ಸಾಲಕ್ಕ ಏನಾರ ಒಂದು ಆಧಾರ ಮಾಡಿಕೊಡ್ರಿ ಅಂದೆ, ತಪ್ಪ?”

ಗೌಡ ಮೆಲ್ಲಗೆ ಕೇಳಿದ –

“ಆಧಾರಂದರ?”

“ಹೇಳಿದೆನಲ್ಲ, ಸ್ಟಾಂಪ್ ಕಾಗದದ ಮ್ಯಾಲ ಈಗ ಅರಮನಿ ಬರಕೊಡ್ರಿ, ಮುಂದ ರಿಜಿಸ್ಟ್ರಿ ಮಾಡಸೂಣಂತ”

ಪರಮಶೆಟ್ಟಿ ಕೇಳಿದವರಲ್ಲಿ ದಯ ಬರುವ ಹಾಗೆ ದನಿ ಮಾಡಿ, ಮುಖ ಮಾಡಿ ಮಾತಾಡುತ್ತಿದ್ದ. ಗೌಡನಿಗೆ ವಿಷಯಗಳೆಲ್ಲ ತಿಳಿದುಬಿಟ್ಟವು. ಅವನ ತುಟಿ ವಕ್ರವಾಗಿ ಅದರಲ್ಲಿ ನಗೆಯೋ, ವ್ಯಂಗವೋ, ವಿಚಿತ್ರ ಆಸೆಯೋ – ಏನೆಂದು ಅರ್ಥವಾಗದ ಭಾವವೊಂದು ಮೂಡಿ ಮೂಡಿ ಮುಳುಗುತ್ತಿತ್ತು. ಕತ್ತು ಹಾಕುತ್ತ,

“ಅಂದರ ದೇಸಾಯರು ಹಣ ವಾಪಸ್ಸ ಕೊಟ್ಟಾರಂತ ನಿಮಗ ನಂಬಿಕಿ ಇಲ್ಲ ಅಂದಂಗಾಯ್ತು”

ಈ ಮಾತು ಕೇಳಿ ದೇಸಾಯಿ ಹುರುಪಾದ. “ಅದ ಹೇಳ್ರಿ, ಅದನ್ನ ಹೇಳ್ರಿ” ಎಂದು ತಾನು ನೊಂದ ಸ್ಥಳವನ್ನು ಸರಿಯಾಗಿ ಗುರುತಿಸಿದ್ದಕ್ಕೆ ಮೆಚ್ಚುಗೆಯ ನೋಟವನ್ನು ಮಾವನ ಕಡೆಗೆ ಬೀರಿದ. ಪರಮಶೆಟ್ಟಿ ಈಗ ಶಾಂತನಾಗಿ, ಗೌಡನಿಗೆ ಇನ್ನಷ್ಟು ಹತ್ತಿರ ಸುರಿದು,

ಹೌಂದರಿ, ನಂಬಿಕಿಲ್ಲದs ದೀಡಲಕ್ಷ ಕೊಟ್ಟಿನೇನು?”

“ಎಲ್ಲಾ ಗೊತ್ತಿದ್ದೂ ನೀವs ಹಿಂಗ ಮಾಡತೀರಂದರ ನಮಗೂ ಹೊಯ್ಯಾಗತೈತ್ರೆಪ. ಬಾರಾ ಊರಿನ ದೇಸಾಯರು, ಇಂಥಾ ಅರಮನಿ, ಇಷ್ಟ ಆಸ್ತಿ ಐತಿ. ನಿಮ್ಮ ದೀಡಲಕ್ಷಂದರ ಅವರಿಗಿ ದೀಡ ಲಕ್ಷ ಹುಣಸೀಪಕ್ಕ ಇದ್ದಾಂಗ ಅಲ್ವೇನ್ರೀ? ಏನೋ ದಿನಕಾರ್ಯೆ ಬಂದೈತಂತ ಕೇಳ್ತಾರ ಕೊಡ್ರಿ. ಆಮ್ಯಾಲ ನೋಡೋಣು.”

“ಆಗೋದಿಲ್ಲರಿ”

ದೇಸಾಯಿಯ ಮುಖದ ಮೇಲೊಂದು ನಿಸ್ಸಹಾಯಕ ಕ್ರೌರ್ಯ ಮೂಡಿತು. ಒಳಗೆ ಅಸಾಧ್ಯ ಸೋಲನ್ನನುಭವಿಸುತ್ತಿದ್ದ. ಅಲ್ಲಿ ನಿಲ್ಲಬಾರದೆಂದು ಒಮ್ಮೆ ಎದ್ದು ನಿಂತ ಮತ್ತೆ ಕೂತ, ಎರಡು ಬಾರಿ ಎದೆ ಬಡಿದುಕೊಂಡು,

“ಈ ದೇಸಾಯಿ ಮ್ಯಾಲ ನಂಬಿಕ್ಕಿಲ್ಲಂತ ಹೇಳೋ ಶೆಟ್ಟಿ” ಅಂದ.

ಶೆಟ್ಟಿ ಅಷ್ಟೇ ತಣ್ಣಗಿನ ದನಿಯಲ್ಲಿ “ನಂಬಿಕಿ ಹೆಂಗಿಡಬೇಕ, ನೀವs ಹೇಳ್ರಿ. ಗೋಕಾವಿಗೆ ಹೋಗೂಣ ಅಂದಾಗೊಮ್ಮಿ ಕುಡದಿರತೀತಿ. ಇದ್ಯಾವ ಸೀಮೀ ವ್ಯವಹಾರ ಗೌಡರ?”

“ಹೌಂದೋ, ಈ ಸಲ ಹೋಗೋಣು. ಇದೊಂದ ದಿನಕಾರ್ಯೆ ಮುಗೀಲಿ.”

ಇಷ್ಟು ಕೇಳಿದ್ದೇ ಸಿಂಗಾರೆವ್ವ ಸರ್ರನೇ ಒಳಗೆ ಹೋದಳು.

ಗೌಡ ಬಂದು ಊಟಕ್ಕೆ ಕೂತ. ದೇಸಾಯಿ ಬರಲೇ ಇಲ್ಲ. ನಾನು ಮತ್ತೆ ಕರೆಯಬಂದೆ. ಕಂಬಳಿ ಹೊದ್ದುಕೊಂಡು ಮಲಗಿಬಿಟ್ಟಿದ್ದ. ಹೋಗಿ ಸಿಂಗಾರೆವ್ವನಿಗೆ ಹೇಳಿದೆ. ಅವಳು ಸೀದಾ ದೇಸಾಯಿ ಮಲಗಿದ್ದಲಿಗೆ ಬಂದು ಕಂಬಳಿ ತೆಗೆದು “ಊಟಕ್ಕೇಳ್ರಿ” ಎಂದಳು. ದೇಸಾಯಿ ಎದ್ದು ಕೂತ. ಹೆಂಡತಿಯ ಕಡೆ ನೋಡಲೇ ಇಲ್ಲ. “ಹಸಿವಿಲ್ಲ” ಅಂದ. ಅವನ ಮುಖ ಅವಮಾನದಿಂದ ಕರಾಳವಾಗಿತ್ತು. ಎದ್ದು ಬರುತ್ತಾನೆಂದು ತುಸು ಹೊತ್ತು ಕಾದಳು. ಆ ಲಕ್ಷಣ ಕಾಣಲಿಲ್ಲ. ಹೋಗಿ ಕೈ ಹಿಡಿದು “ಏಳ್ರೀ, ಊಟಾ ಮಾಡೇಳ್ರಿ” ಎಂದಳು. ಸುಮ್ಮನೆ ಬಂದ.

* * *