ಆ ದಿನ ಇನ್ನೇನೂ ನಡೆಯಲಾರದೆಂದಿದ್ದೆವು. ಗೌಡ, ಗೌಡ್ತಿ ನಂದಗಾಂವಿಗೆ ಹೋಗಿದ್ದರು. ಪೊಲೀಸರು ನಿರಾಶರಾಗಿ ತಿರುಗಿ ಹೋಗಿದ್ದರು. ಊರಲ್ಲಿ ಜನ ಏನೇನು ಮಾತಾಡಿಕೊಳ್ಳುತ್ತಿದ್ದರೆಂದು ನಮಗೆ ತಿಳಿಯದು. ಅರಮನೆಯಲ್ಲಿ ಕಳುವಾದದ್ದು, ಅದಕ್ಕಾಗಿ ಪೊಲೀಸರು ಬಂದದ್ದು – ಇವೆಲ್ಲ ಊರವರ ದೃಷ್ಟಿಯಲ್ಲಿ ಅರಮನೆಯನ್ನು ಹಾಸ್ಯಾಸ್ಪದಗೊಳಿಸುವ ಪ್ರಸಂಗಗಳಾಗಿದ್ದವು. ಮತ್ತು ಇದೇ ಕಾರಣಕ್ಕಾಗಿ ದೇಸಾಯಿಗೆ ಅಸಮಾಧಾನವಾಗಿತ್ತು. ಗೌಡ ತರಾತುರಿಯಿಂದ ಊರಿಗೆ ಹೊರಟು ನಿಂತಾಗಲೂ ದೇಸಾಯಿ ಬೇಡವೆಂದಿರಲಿಲ್ಲ. ಮಾತಾಡಿರಲಿಲ್ಲ ಕೂಡ. ಆದರೆ ಇಷ್ಟಕ್ಕೇ ಗೌಡ ಸುಮ್ಮನಾದಾನೆಂದು ನನಗನ್ನಿಸಿರಲಿಲ್ಲ. ಅವನ ವೈರಿ ಇರುವ ಸ್ಥಳ ಗೊತ್ತಾಗಿಬಿಟ್ಟಿದ್ದರಿಂದ, ಮತ್ತು ಅವನನ್ನು ಹಿಡಿಸಲೆಂದೇ ಪೊಲೀಸರನ್ನು ಕರೆಸಿದ್ದರಿಂದ ಈ ಸುದ್ದಿ ಮರೆಪ್ಪನಿಗೆ ತಿಳಿಯದೇ ಹೋಗುವುದು ಸಾಧ್ಯವಿರಲಿಲ್ಲ. ಹಾಗೇನಾದರೂ ತಿಳಿದಲ್ಲಿ ಅವನು ಸುಮ್ಮನಿರುವ ಪೈಕಿ ಅಲ್ಲ. ಗೌಡನಿಗೆ ವಕ್ರ ಉಪಾಯಗಳ ಧೈರ್ಯ ಇದ್ದರೆ ಮರೆಪ್ಪನಿಗೆ ನೇರವಾಗಿ ಗೌಡನನ್ನು ಎದುರಿಸುವ ಧೈರ್ಯವಿತ್ತು. ಗೌಡ ಮರೆಪ್ಪನಿಗೇನಾದರೂ ಒಬ್ಬಂಟಿಯಾಗಿ ಸಿಕ್ಕನೋ, ಅವನ ಕಥೆ ಮುಗಿದ ಹಾಗೇ ಲೆಕ್ಕ. ಗೌಡನಿಗಿದು ಚೆನ್ನಾಗಿ ತಿಳಿದಿತ್ತೆಂದು ನನ್ನ ಭಾವನೆ. ಅದಕ್ಕೇ ದೇಸಾಯಿ ಎಷ್ಟೇ ನಿಷ್ಟುರವಾಗಿ ಮಾತಾಡಿದ್ದರೂ ಮತ್ತೆ ಮತ್ತೆ ಹಟ ಹಿಡಿದು ಮರೆಪ್ಪನನ್ನು ಪೊಲೀಸರಿಂದ ಹಿಡಿಸುವ ಉಪಾಯ ಮಾಡುತ್ತಿದ್ದ. ಆದರೆ ಗೌಡ ಅರಮನೆಯಿಂದ ಕಾಲ್ದೆಗೆದು ಹೋದನಲ್ಲ, ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಪೀಡೆಯ ಹಾಗೆ ಬಂದು ಒಕ್ಕರಿಸಿದ್ದ. ತನ್ನ ಮನೆ, ಹೆರವರ ಮನೆಯೆಂದು ನೋಡದೆ ಅಧಿಕಾರ ಚಲಾಯಿಸುತ್ತಿದ್ದನಲ್ಲ, ಈಗ ಮರೆಪ್ಪನನ್ನು ಅವನಾಗೇ ಎದುರು ಹಾಕಿಕೊಂಡಾಗಿತ್ತು. ಹಳೆಯದನ್ನೆಲ್ಲ ಮರೆದು ಏನೂ ನಡೆದಿಲ್ಲವೆಂಬಂತೆ ಇದ್ದಿದ್ದರೆ ಅವನಿಗೇನೂ ತೊಂದರೆಯಾಗುತ್ತಿರಲಿಲ್ಲವೆಂದು ನನ್ನ ಅಭಿಪ್ರಾಯ.

ಅದನು ಹೋದ ದಿನವೇ ಮರೆಪ್ಪ ಅರಮನೆಯಲ್ಲಿ ಪ್ರತ್ಯಕ್ಷನಾದ. ಉಂಡು ಮಲಗುವ ಹೊತ್ತಾಗಿತ್ತು. ದೇಸಾಯಿ ಇಡೀ ದಿನ ಬೇಸರದಲ್ಲಿದ್ದವನು ಹೊರಗೂ ಹೋಗಿರಲಿಲ್ಲ. ಒಬ್ಬಂಟಿಯಾಗಿ ಕುಡಿದು ಬೆಳ್ದಿಂಗಳಲ್ಲಿ ಕಟ್ಟೆಯ ಮೇಲೆ ಕುಂತಿದ್ದ. ನಮ್ಮ ಮನಸ್ಸುಗಳೂ ಹಗುರವಾಗಿದ್ದವು. ಊಟವಾದ ನಂತರ ತುಂಬಿದ ತಂಬಿಗೆ ತಗೊಂಡು ಗಂಡನ ಹಾಸಿಗೆಯ ಬಳಿಯಿಡಲು ಸಿಂಗಾರೆವ್ವ ಹೋದಳು. ಆಗಲೇ ಅವಸರದಲ್ಲಿ ಮರೆಪ್ಪ ಅವಳಿಗೆ ಭೇಟಿಯಾದನೆಂದು ಕಾಣುತ್ತದೆ. ನಾನು ಕಸಮುಸುರೆ ಮಾಡಲು ಅಡಿಗೆ ಮನೆಯಲ್ಲೇ ನಿಂತೆ. ಅದನ್ನೆಲ್ಲ ಮುಗಿಸಿ, ತಡಮಾಡಿ ಅಂತಸ್ತಿಗೆ ಹೋದೆ. ಬಾಗಿಲ ಮರೆಯಲ್ಲಿ ಯಾರೋ ನಿಂತಿದ್ದರು. ಯಾರೋ ಯಾರು? ಮರ್ಯಾ ನಿಂತಿದ್ದ. ಅಯ್ಯೋ! ಎಂದು ಗಾಬರಿಗೊಂಡು ಎದೆಯ ಮೇಲೆ ಕೈಯೂರಿ ಹಾಗೇ ನಿಂತುಕೊಂಡೆ. ಉಸಿರು ಗಕ್ಕನೆ ಹಾರಿಹೋದಂತಾಗಿ ಮೈಯೆಲ್ಲ ತಣ್ಣಗಾಯ್ತು. ತೊಡೆ ನಡುಗಿ ಕಾಲಲ್ಲಿ ಶಕ್ತಿಯಿಲ್ಲದೆ ಜೋಲಿ ತಪ್ಪಿ ಕುಸಿಯುತ್ತಿದ್ದೆ. ಅಷ್ಟರಲ್ಲಿ ನನ್ನ ರೆಟ್ಟೆ ಹಿಡದು, ಆಧಾರಕೊಟ್ಟು ತನ್ನ ಕರೀ ಮಸಡಿಯಲ್ಲಿ ಬಿಳೀ ಹಲ್ಲು ತೆರೆದು ತೋರಿಸುತ್ತ ನಕ್ಕ “ಅಂಜಿದಿ?” ಅಂದ. ಹಾ ಹೂ ಎನ್ನುವುದಕ್ಕೂ ನನಗೆ ಸಾಧ್ಯವಾಗಲಿಲ್ಲ.

“ಸಿಂಗಾರೀನ ಕರಕೊಂಬಾ ಹೋಗು” ಅಂದ. ನನ್ನ ಬಾಯೊಣಗಿತ್ತು.

“ದೇಸಾಯರ ಜೋಡಿ ಕುಂತಾಳ” ಅಂದೆ. 

“ಕರಕೊಂಬರ್ತೀಯೋ ಇಲ್ಲೋ?” ಎಂದು ಹೆದರಿಸಲಿಕ್ಕೆ ನೋಡಿದ.

“ಆಗಾಣಿಲ್ಲ” ಎಂದು ತುಸು ಧೈರ್ಯದಿಂದಲೇ ಹೇಳಿದೆ. “ಥೂ” ಎಂದು ನನ್ನ ಮುಖದ ಮೇಲೆ ಉಗುಳಿದ. ಅವನ ಹೊಲಸು ನಾರುವ ಉಗುಳು ನನ್ನ ಮುಖದ ಮೇಲೆ ಸಿಡಿದು ಹೇಸಿಕೆ, ಅವಮಾನಗಳಿಂದ ಕುದಿಯುತ್ತ ಸೆರಗಿನಿಂದು ಒರೆಸಿಕೊಳ್ಳುತ್ತಿದ್ದೆ. ಹಾಳಾದವನು ಹಾಗೇ ಹೊರಗೆ ಹೋದ.

ಆಗ ನನಗೆ ಉಸಿರು ಬಂತು. ಗಮ್ಮಂತ ಬೆವೆತು, ಮೈತುಂಬ ನೀರಿಳಿದಿತ್ತು. ಹಾಗೇ ಕೂತು ಸೀರೆ ಸೆರಗಿಂದ ಮತ್ತೆ ಮುಖ ಒರೆಸಿಕೊಂಡೆ. ಬಾಯಾರಿಕೆಯಾಯ್ತು. ನೀರು ತಂದಿರಲಿಲ್ಲ. ಅಡಿಗೆ ಮನೆಗೇ ಹೋಗಬೇಕಿತ್ತು. ಎದ್ದು ಹೋಗುವುದಕ್ಕೆ ಶಕ್ತಿ ಸಾಲದೆಂದೆಣಿಸಿ, ಸೀರೆ ಸೆರಗಿನಿಂದ ಗಾಳಿ ಬೀಸಿಕೊಳ್ಳುತ್ತ – ಯಾಕೆ ಬಂದಿದ್ದಾನು – ಎಂದು ವಿಚಾರಮಾಡುತ್ತ ಕೂತೆ, ಬಗೆ ಹರಿಯಲಿಲ್ಲ ಎದ್ದು ಕೆಳಗೆ ಹೋದೆ. ಪಡಸಾಲೆಯಲ್ಲಿ ಯಾರೂ ಇರಲಿಲ್ಲ. ದರಬಾರಿಗೆ ಹೋದೆ.

ಪಟಾಂಗಳದ ಕಟ್ಟೆಯ ಮೇಲೆ ಬೆಳದಿಂಗಳಲ್ಲಿ ಗಂಡ ಹೆಂಡತಿ ಕೂತಿದ್ದರು. ಮರ್ಯಾ ಕಂಬದ ಮರೆಯಲ್ಲಿ ನಿಂತು ಅವರನ್ನೇ ನೋಡುತ್ತಿದ್ದ. ಅವರು ಆ ರೀತಿ ಅಕ್ಕಪಕ್ಕ ಕೂತದ್ದನ್ನು ನಾನು ಕೂಡ ಬಹಳ ಸಲ ನೋಡಿರಲಿಲ್ಲ. ಪರಸ್ಪರ ನೋಡುತ್ತ, ಮಾತಾಡುತ್ತ ಕೂತಿದ್ದರು. ದೇಸಾಯಿ ಅವಳ ಮುಂಗೈ ಹಿಡಿದುಕೊಂಡು ಆಸೆಬುರುಕುತನದಿಂದ ನೋಡುತ್ತಿದ್ದ. ಮರ್ಯಾ ಕೈಬಳೆಯೇನಾದರೂ ಕೊಟ್ಟನೇ ಎಂದು ಸಂಶಯ ಬಂತು. ಅವನ ಕಡೆ ನೋಡಿದೆ. ಅವನಿಗೆ ಆ ದೃಶ್ಯ ಸರಿಬಂದಿರಲಿಲ್ಲ. ಕಂಬಕ್ಕೆ ಬೆನ್ನು ತಿರುಗಿಸಿ ನಿಂತು ಉಗುರು ಕಚ್ಚಿಕೊಳ್ಳತೊಡಗಿದ್ದ. ಕಚ್ಚಿಕೊಂಡ ಉಗುರನ್ನು ರಭಸದಿಂದ ಉಗುಳುತ್ತಿದ್ದ. ಮತ್ತೆ ಕಚ್ಚುತ್ತಿದ್ದ. ನಿರೀಕ್ಷಿಸಿದ್ದಂತೆ ನನ್ನ ಬಗ್ಗೆ ಅವನಿನ್ನೂ ಕೋಪ ವ್ಯಕ್ತಪಡಿಸಿರಲಿಲ್ಲವಲ್ಲ. ನನಗೆ ತುಸು ನೆಮ್ಮದಿಯಾಗಿತ್ತು. ತುಂಟತನದಿಂದ ಅವನ ಆಟ ನೋಡುತ್ತಿದ್ದೆ. ಅದೂ ಅವನಿಗೆ ಸರಿಬರಲಿಲ್ಲ. ಹತ್ತಿರ ಬರುವಂತ ಕೈಸನ್ನೇ ಮಾಡಿ ಕರೆದ, ಹೋದೆ. ನನ್ನ ಕಿವಿಯಲ್ಲಿ “ಇನ್ನೇನ ಬೇಹೋಶ್ ಆಗಿ ಬೀಳತಾನ, ಮೂಗಿನಾಗ ಹಿಂಡಾಕ ಉಳ್ಳಾಗಡ್ಡಿ ತಾ ಹೋಗು” – ಎಂದು ಹೇಳಿ ಕಿಸಕ್ಕನೆ ಹಲ್ಲುಕಿಸಿದು ನಕ್ಕು ಹೊರಟು ಹೋದ. ಹೋಗಿ ಹಿತ್ತಲ ಕಡೆಯ ಕತ್ತಲಲ್ಲಿ ಗಪ್ಪುಗಾರಾದ. ಹೊಟ್ಟೆ ಕಿಚ್ಚಿನವರು; ಗಂಡ ಹೆಂಡತಿ ಕೂಡಿ ಕೂತರೆ ಈ ದೊಣೆನಾಯ್ಕನಿಗ್ಯಾಕೆ ಸಿಟ್ಟು ಬರಬೇಕೋ! ಅವರು ಅಲ್ಲೇ ಕೂತಿರಲೆಂದು ನನ್ನ ಪಾಡಿಗೆ ನಾನು ಅಂತಸ್ತಿಗೆ ಬಂದೆ.

ಬಹಳ ಹೊತ್ತಾದ ನಂತರ ಸಿಂಗಾರೆವ್ವ ಬಂದಳು. ಅವಳ ಮುಖದಲ್ಲಿ ನೆಮ್ಮದಿಯ ಸೋಮಾರಿತನ ಇತ್ತು. ನನಗಿನ್ನೂ ನಿದ್ದೆ ಬಂದಿರಲಿಲ್ಲ. ಅಷ್ಟು ಹೊತ್ತು ಆಕೆಯ ಕೈಬಳೆಯ ಬಗ್ಗೆ ಯೋಚಿಸುತ್ತಿದ್ದೆ. ಈಗ ನೋಡಿದರೆ ಆಕೆಯ ಕೈಯಲ್ಲಿ ಬಳೆ ಇದ್ದವು! ನಾನು ಎಚ್ಚರವಿದ್ದದ್ದು ಅವಳಿಗೂ ಗೊತ್ತಿತ್ತು; ಆದರೂ ಒಂದೂ ಮಾತಾಡಲಿಲ್ಲ. ಸುಮ್ಮನೆ ಮಲಗಿಬಿಟ್ಟಳು. ನನಗೆ ಅಸಮಾಧಾನವಾಯ್ತು: ಈ ಬಳೆಗಳಿಂದಾಗಿ ಹೆಚ್ಚು ಯಾತನೆ ಪಟ್ಟವಳು ನಾನು. ಗೌಡನಿಂದ ಒದೆತ ತಿಂದಿದ್ದೆ. ಮರೆಪ್ಪನನ್ನು ಹ್ಯಾಗೆ ಎದುರಿಸುವುದೆಂದು ಹಗಲು ರಾತ್ರಿ ಚಿಂತೆ ಮಾಡಿದ್ದೆ. ಇದ್ಯಾವುದೂ ಅವಳ ಕರುಳಿಗೆ ತಟ್ಟಿರಲಿಲ್ಲವೆಂದಾಯಿತಲ್ಲ. ಈಗ ಅವು ಸಿಕ್ಕ ಬಗ್ಗೆ ಮೊದಲು ನನಗೆ ಹೇಳಬೇಕಾದ್ದು ಅವಳ ಜವಾಬ್ದಾರಿ ಎಂದೇ ಅಂದುಕೊಂಡೆ. ಗೆಳತಿ ಈಗ ಹೇಳುತ್ತಾಳೆ, ಆಗ ಹೇಳುತ್ತಾಳೆ – ಎಂದು ನಿರೀಕ್ಷೆಯಲ್ಲಿ ತುಸು ಹೊತ್ತು ಕಾದೆ. ಹೇಳಲೇ ಇಲ್ಲ. ಇನ್ನೂ ತಡೆಯದೆ ನಾನೇ “ಬಳಿ ಸಿಕ್ಕಾವಲ್ಲ, ಎವ್ವ ಯಾವಾಗ ಸಿಕ್ಕವು?” ಅಂದೆ.

“ಆಗಳೆ ಸಿಕ್ಕವು, ಇಲ್ಲೆ ಹಾಸಿಗ್ಯಾಗ ಇದ್ದವು.”

ನಾನು ಈ ಮಾತನ್ನು ನಂಬಲಿಲ್ಲ. ಅಷ್ಟರಲ್ಲಿ ಮತ್ತೇನು ತಿಳಿಯಿತೋ ಮತ್ತೆ ತಾನೇ ಹೇಳಿದಳು:

“ಮರ್ಯಾ ಬಂದು ತಂದು ಕೊಟ್ಟು ಹೋದ.”

ಇಷ್ಟು ಹೇಳಿ, ಏನೇನೂ ಆಗದವರಂತೆ ತನ್ನ ಪಾಡಿಗೆ ತಾನು ಸುಮ್ಮನಾದಳು.

“ನಾನs ಧಡ್ಡಿ, ಇಂಥವರನ್ನ ನಂಬತೀನಲ್ಲಾ! ಸದ್ಯ ಉಳ್ಳಾಗಡ್ಡಿ ಒಯ್ಯಬೇಕಾಗಲಿಲ್ಲ. ಈಗ ಶಿವಲಿಂಗಸ್ವಾಮಿ ಏನ ಮಾಡಬೇಕಂದರ – ನನ್ನ ತಪ್ಪ ಹೊಟ್ಟ್ಯಾಗ ಹಾಕೊಬೇಕಷ್ಟs !” ಎಂದು ಮನಸ್ಸಿನಲ್ಲೇ ಅಂದು ಕೊಂಡು ಸಾವಳಗಿ ಶಿವನಿಂಗನನ್ನು ನೆನೆದು ಮಗ್ಗಲು ಬದಲಿಸಿದೆ.

ಬಳೆ ಸಿಕ್ಕಿದ್ದರಿಂದ ಮರ್ಯಾ ನಿರ್ದೋಷಿಯಾಗಿದ್ದ. ಆತ ಸಾವಿರ ರೂಪಾಯಿ ತಂದದ್ದು ಹ್ಯಾಗೆಂದು ನಮಗೆ ಆ ಮೇಲೆ ತಿಳಿಯಿತು. ಇಲ್ಲಿಯ ಬಳೆ ಕದ್ದು ಪರಮಶೆಟ್ಟಿಯಲ್ಲಿ ಒತ್ತೆ ಇಟ್ಟು ಸಾವಿರ ರೂಪಾಯಿ ತಂದಿದ್ದ. ಆ ಮೇಲೆ ಗೌಡನಿಂದಾಗಿ ರಾದ್ಧಾಂತವಾಗುತ್ತಲೂ ಶೆಟ್ಟಿಯ ಕೈಕಾಲು ಹಿಡಿದು ವಾಪಸ್ ತಂದಿದ್ದ.

ಇನ್ನು ಅರಮನೆಯ ಕಥೆ ಹ್ಯಾಗೆ ತಿರುಗುತ್ತದೆ ನೋಡು :

ಶೆಟ್ಟಿ ದೇಸಾಯಿಗೆ ಒಂದೂವರ ಲಕ್ಷ ರೂಪಾಯಿ ಸಾಲ ಕೊಟ್ಟಿದ್ದನಲ್ಲ, ಅದಕ್ಕೆ ಪ್ರತಿಯಾಗಿ ಮುಂದಿನ ವಾರ ಎರಡು ತೋಟ ಬರೆದುಕೊಡುವುದಾಗಿ ದೇಸಾಯಿ ಹೇಳಿದ್ದ. ಆದರೆ ಶೆಟ್ಟಿಗೆ ತೋಟ ಬೇಕಿರಲಿಲ್ಲ. ಅವನ ಕಣ್ಣು ಅರಮನೆ ಮೇಲಿತ್ತು. ಬರೀ ಅರಮನೆಗೆ ಉಪಹೋಗಿಸಿದ ಮರ ಮಾರಿದರೆ ಹತ್ತೆಂಟು ಲಕ್ಷ ಬೆಲೆ ಬರುತ್ತಿತ್ತು. ದೇಸಾಯಿಗಾದರೋ ಅರಮನೆಯ ಬಗ್ಗೆ ಭರೀ ಹೆಮ್ಮೆ ಮತ್ತು ಅಭಿಮಾನ. ಅವನು ಅದನ್ನು ಮಾರಲು ಸುಭವಾಗಿ ಒಪ್ಪಲಾರ.

ಇಷ್ಟಾಯಿತಲ್ಲ. ಇನ್ನು ನಮ್ಮ ಗೌಡನೇನು ಕಮ್ಮಿ ? ಶೆಟ್ಟಿಗೆ ಬರೀ ಅರಮನೆ ಸಾಕಾದರೆ ಗೌಡನಿಗೆ ದೇಸಾಯಿಯ ತೋಟ, ಅರಮನೆ ಎರಡರ ಮೇಲೂ ಕಣ್ಣು. ದಾಸಾಯಿ ಬಹಳ ದಿನ ಬದುಕುವಕುಳವಲ್ಲವೆಂದು ಮಗಳನ್ನು ಕೊಡುವಾಗಲೇ ಅವನಿಗೆ ಖಾತ್ರಿಯಾಗಿತ್ತು ಅವನ ನಿರೀಕ್ಷ ಮೀರಿ ಅಳಿಯ ಬದುಕಿದ್ದ. ಆದ್ದರಿಂದಲೇ ಮಾವ ಚಡಪಡಿಸುತ್ತಿದ್ದ. ಉಪಾಯ ಮಾಡಿ ಕೈಯಾರೆ ಕೊಲ್ಲುವುದಕ್ಕೂ ಹೇಸದವನು; ಅದ್ಯಾಕೋ ದಯಮಾಡಿ ಅಳಿಯನಿಗೆ ಜೀವದಾನ ಮಾಡಿದ್ದ. ಇಳಿವಯಸ್ಸಿನಲ್ಲಿ ಗಂಡು ಮಗ ಹುಟ್ಟಿದಾಗಿನಿಂದಂತೂ ಅವನ ಆಸೆಗೆ ಹೊಸ ರೆಕ್ಕೆ ಮೂಡಿದ್ದವು. ಒಂದೆರೆಡು ಬಾರಿ ಚೇಷ್ಟೆಗೆಂಬಂತೆ ದತ್ತಕದ ಮಾತಾಡಿ, ಸಿಂಗಾರೆವ್ವನ ಪ್ರತಿಕ್ರಿಯೆ ತಿಳಿಯಲು ನೋಡಿ ನಿರಾಸೆಗೊಂಡಿದ್ದ. ಮೊನ್ನೆ ಬಂದಾಗ ಅರಮನೆಯ ಸ್ಥೂಲ ಸೂಕ್ಷ್ಮಾ ಅವನಿಗೆ ತಿಳಿದುಬಿಟ್ಟಿತ್ತು. ಪರಮಶೆಟ್ಟಿಯ ಉಪಾಯವನ್ನೇ ಇವನೂ ಅನುಸರಿಸಬಹುದಿತ್ತು. ಶೆಟ್ಟಿ ಮಾತ್ರ ಆ ಉಪಾಯವನ್ನು ಬಿಟ್ಟುಕೊಡದೆ ಸಾಲದ ಬಾಬ್ತು ಮಾತ್ರ ತಿಳಿಸಿದ್ದ. ಹೀಗೆ ಬೇರೆ ದಾರಿಯಿಂದ ಸಾಧ್ಯವಾದರೆ ಶೆಟ್ಟಿಯ ಸಾಲವನ್ನು ಮುಳುಗಿಸಿ ಇಡೀ ಅರಮನೆ, ಆಸ್ತಿ ಸಮೇತ ನನಗೆ ಹ್ಯಾಗಾದೀತೆಂದು ಅವನು ಲೆಕ್ಕ ಹಾಕುತ್ತಿದ್ದ.

ಏನೇನೂ ಘಟಿಸದೆ ಒಂದು ತಿಂಗಳುರುಳಿತು.

ಈಗ ಶೆಟ್ಟಿ ಮೆಲ್ಲಗೆ ಅರಮನೆಗೆ ಬರತೊಡಗಿದ. ಬಂದವನು ಹಳೇ ಸಾಲ ಕೇಳಲಿಲ್ಲ, ಬರುವ ಸೀಗೀ ಹುಣ್ಣಿಮೆಗೆ ಹೊಸ ಬಯಲಾಟ ಮಾಡಬೇಕೆಂದು ದೇಸಾಯಿಯ ಕಿವಿಯಲ್ಲಿ ಊದಿದ. ಅವನು ಉಬ್ಬಿದ. ಆಯ್ತು, ತಾಲೀಮು ಸುರು ಮಾಡಿದರೆ! ಬಯಲಾಟ ಬೇಡವೆಂದು ಸಿಂಗಾರೆವ್ವ ಹೇಳಿದ್ದು ದೇಸಾಯಿಯ ಕಿವಿಗೆ ತಲುಪಲೂ ಇಲ್ಲ, ಅವಳು ಕಳಕಳಿಯಿಂದ ಕೈಮುಗಿದದ್ದು ಕಾಣಲೂ ಇಲ್ಲ. ಇವರು ತಾಲೀಮು ಸುರುಮಾಡಿದರು ನೋಡು. ಹ್ಯಾಗೆ ಗೊತ್ತಾಯಿತೊ ಗೌಡನ ಸವಾರಿ ಶಿವಾಪುರಕ್ಕೆ ಆಗಮಿಸಿತು. ಈ ಸಲ ಒಬ್ಬನೇ ಬಂದಿರಲಿಲ್ಲ. ಜೊತೆಗೊಬ್ಬ ಪೈಲವಾನನನ್ನೂ ಕರೆತಂದಿದ್ದ.

ಮಾರನೇ ದಿನ ಗೌಡ ಮಗಳೊಂದಿಗೆ ಮಾತಾಡಲು ಅಂತಸ್ತಿಗೇರಿ ಬಂದ. ಬಂದು ಕೃತಕವಾಗಿ ನಗುತ್ತ,

“ಬಳಿ ಸಿಕ್ಕುವಂತಲ್ಲ, ಎಲ್ಲಿಟ್ಟ ಮರೆತಿದ್ದಿವಾ?” – ಅಂದ.

“ಅಲ್ಲೇ ಟ್ರಂಕಿನಾಗ ಇಟ್ಟ ಮರೆತಿದ್ದೆ” – ಎಂದು ಹೇಳಿ ಸಿಂಗಾರೆವ್ವ ಕೆಳಗೆ ನಡೆದಳು.

“ಹಾಂಗ ಹೋಗಬ್ಯಾಡ ಬಾರವಾ, ಅಗ್ಗದೀ ಜರೂರು ನಿನ್ನ ಜೋಡೀ ಮಾತಾಡೂದೈತಿ.”

“ಹೆಣ್ಣು ಮಕ್ಕಳ ಜೋಡೀ ಏನು ಮಾತಪ?”

– ಎಂದು ಅಲ್ಲೇ ಕಿಟಕಿಯ ಬಳಿ ನಿಂತಳು. ನಾನು ಬಾಗಿಲಲ್ಲಿದ್ದೆ. ಗೌಡ ಹೋಗಿ ಗಡಂಚಿಯ ಮೇಲೆ ಕೂತ.

ನರಿ ಮತ್ತು ಗೌಡನಲ್ಲಿರುವಂಥ ಹೋಲಿಕೆಯನ್ನು ನಾನು ಇನ್ಯಾವ ಜೋಡಿಯಲ್ಲೂ ಕಂಡಿಲ್ಲ. ಉಣ್ಣುವಾಗ, ನಡೆಯುವಾಗ ಆ ಹೋಲಿಕೆ ಅಷ್ಟಾಗಿ ಕಾಣುತ್ತಿರಲಿಲ್ಲ. ಆದರೆ ಅವನು ಬಾಯಿ ಮುಚ್ಚಿಕೊಂಡು ಒಳಗಡೆ ಏನೋ ಹೊಂಚಿ ಬೇರೆಯವರನ್ನು ನೋಡುತ್ತಿದ್ದನಲ್ಲ; ಆಗ ಸ್ಪಷ್ಟವಾಗಿ ಅವನು ಎಲ್ಲ ರೀತಿಯಲ್ಲೂ ನರಿಯನ್ನೇ ಹೋಲುತ್ತಿದ್ದ. ಹೇಳಿದ –

“ಈಗ ಏನೇನ ನಡದೈತಿ ಗೊತ್ತೈತೇನು? ಬಯಲಾಟ ಮಾಡಿಸಿ ಅರಮನಿ ಬರೆಸಿಕೋಬೇಕಂತ ಶೆಟ್ಟಿ ಹೊಂಚ್ಯಾನ. ಅರಮನಿ ಆಸ್ತಿ  ಕೈಬಿಟ್ಟು ಹೋದರೆ ನಾಳಿ ನಿಮ್ಮ ಗತಿಯೇನಂತ ಕೇಳ್ತಿನ್ನಾನು”

ನಮಗೆ ದಿಗಿಲಾಯಿತು. ಶೆಟ್ಟಿ ಮತ್ತು ದೇಸಾಯಿ ಗುಟ್ಟಾಗಿ ಮಾತಾಡುವುದನ್ನು ನಾವು ನೋಡಿದ್ದೆವು. ದೇಸಾಯಿಯನ್ನು ನಿಯಂತ್ರಿಸುವುದು ಆಗದ ಕೆಲಸ, ಸಿಂಗಾರೆವ್ವನ ಮುಖದಲ್ಲಿಯ ಅಸಹಾಯಕತೆಯನ್ನು ನಾನು ಗುರುತಿಸಬಲ್ಲೆ.

“ನನಗೇನ ಮಾಡಂದೆಪ?” – ಅಂದಳು. ತುಸು ಮತ್ತು ಗೌಡ ಮಾತಾಡಲಿಲ್ಲ. ಏನೋ ಲೆಕ್ಕ ಹಾಕಿದ.

ಸಿಂಗಾರೆವ್ವನ ಮುಖದಲ್ಲಿಯ ನಿರ್ಲಪ್ತತೆಯನ್ನು ಗುರುತಿಸಿದನೆಂದು ತೋರುತ್ತದೆ. ಬಹಳ ಹೊತ್ತು ಯೋಚಿಸುತ್ತಾ ಕೂತ. ಅವನ ಮನಸ್ಸಿನಲ್ಲೇನೋ ಸಂಚಿದೆಯೆಂದು ಅವನ ಮುಖ ನೋಡಿಯೇ ನಾನು ಕಂಡುಕೊಂಡೆ. ನಾವು ಹಾಗೇ ನಿಂತೇ ಇದ್ದವು. ಕೊನೆಗೆ ಗೌಡ ಎದ್ದು ನಿಂತ.

“ದತ್ತಕದ ಮಾತೇನಾದರೂ ದೇಸಾಯರ ಮುಂದ ತಗದಿದ್ದೇನು?” ಅಂದ. ಸಿಂಗಾರೆವ್ವ ಥಟ್ಟನೆ ಮುಖ ತಿರುಗಿಸಿ ಕಿಟಕಿಯಲ್ಲಿ ನೋಡತೊಡಗಿದಳು. ಹಾಗೆ ನಿಂತುಕೊಂಡೇ ಗೌಡ ಇನ್ನೂ ನಿಂತಿದ್ದನ್ನು ಗಮನಿಸಿ “ಇಲ್ಲಪ್ಪ” ಅಂದಳು.

“ಹಂಗಂದರ ಹೆಂಗವಾ? ಇಷ್ಟ ಆಸ್ತಿಯೆಲ್ಲ ಶೆಟ್ಟಿಗೆ ಪುಕ್ಕಟ ಹೋದರ ಮುಂದೇನ ಮಾಡ್ತಿ?”

“ದೈವದಾಗ ಇದ್ದದ್ದ ಯಾರ ತಪ್ಪಸಲಿಕ್ಕಾದೀತಪ?”

– ಎಂದು ಅನ್ಯಮನಸ್ಕಳಾಗಿ ಹೇಳಿ, ಹಾಗೇ ಹುಣಿಸೇ ಮೆಳೆಯ ಕಡೆ ನೋಡುತ್ತ ನಿಂತಳು. ಗೌಡ ಸುಮ್ಮನೆ ಹೋದ. ಅವನು ಹೋದದ್ದರ ಕಡೆಗೂ ಅವಳ ಗಮನವಿರಲಿಲ್ಲ. ನನಗೆ ಆತಂಕವಾಗಿತ್ತು. ಮೆಲ್ಲಗೆ ಅವಳ ಬಳಿ ಹೋಗಿ “ಎವ್ವ” ಅಂದೆ. ಈಗಷ್ಟೆ ಎಚ್ಚರಾದವಳ ಹಾಗೆ “ಆ?” ಅಂದು, ಹಿಂದಿರುಗದೆ “ಶೀನಿಂಗೀ ಆ ಹುಣಿಸೀ ಮೆಳೀಗೊಮ್ಮಿ ಹೋಗಿ ಬರೋಣೇನ” ಎಂದಳು. ನನ್ನ ಚಿಂತೆ ಬೇರೆ ಇತ್ತಲ್ಲ.

“ನಿಮ್ಮಪ್ಪ ಏನೋ ಹೇಳಿದರಲ್ಲ.”

– ಅಂದೆ. ಇಷ್ಟು ಕೇಳಿದ್ದೇ, ಸಿಂಗಾರೆವ್ವ ವೀರಾವೇಶದಿಂದ ನನ್ನ ಕಡೆಗೆ ತಿರುಗಿ,

“ನನಗ ಏನ ಮಾಡಂದಿಗ ಹಡಸು? ದಿನಾ ಬೆಳಗಾದರ ನೀನs ನೋಡ್ತಿ. ಆ ನನ್ನ ಹಾಟ್ಯಾ ದೇಸಾಯಿ, ಬಯಲಾಟಕ ಹೋಗಬ್ಯಾಡೋ ಭಾಡ್ಯಾ, ಹೆಂಗಸರ ತೊಡಿ ನೋಡಿ ಸತ್ತಗಿತ್ತೀ ಅಂದೆ. ನನ್ನ ಮಾತ ಸೆಂಟಕ ಸಮ ಮಾಡಿ ಹೋದ. ರಾತ್ರಿ ಸುಖ ಇಲ್ಲ, ಬ್ಯಾಡ. ನನ್ನ ಹೇಂತಿಗಿ ಸುಳ ಇಲ್ಲಲಾ ಅಂತ ಒಮ್ಯಾದರೂ ಹಳಹಳಿಸಿದ್ನ? ನಾ ಅರಮನ್ಯಾಗ ಆ ಕಡೆ ಈ ಕಡೆ ಸುಳಿದಾಡಬೇಕಂತ, ಈ ಭ್ಯಾಡ್ಯಾ ಕೆಂಜಗಧಾಂಗ ಮಾರೀ ಮಾಡಿ ನೋಡತಾನಂತ. ಈ ಸುಖಾ ಸುರಕೊಳ್ಳಾಗ ಮದಿವ್ಯಾದಿನ? ಹಾಂಗಿದ್ದರ ಹೆಂಗಸ ಯಾಕ ಬೇಕಿತ್ತು? ಒಂದ ಗೊಂಬೀ ತಂದಿದ್ದರ ಆಗತಿರಲಿಲ್ಲ? ಚಿಮಣಾಗೋಳ ಇರಲಿಲ್ಲ? ಆ ಅಪ್ಪಂಬೂ ನನ್ನ ಹಾಟ್ಯಾಗ ಒಂಚೂರಾದರೂ ಕರಳದಾವೇನ? ಅರಮನಿ ನುಂಗಾಕ ಅವ ಹಾರ್ಯಾಡ್ತಾನ. ಯಾವ ಸುಖಕ್ಕಂತ ನಾನಿಲ್ಲಿರಬೇಕ ಅದನ್ಹೇಳು? ಅದೊಂದ ನಡಪಟ್ಟಿ; ಯಾರಿಗಾದರ ದಾನ ಮಾಡಿ ಹೊಳಿ ಭಾಂವೀ ಹಾರಿ ಸಾಯತೇನಷ್ಟ” – ಎಂದು ಹೇಳಿ ತಿರುಗಿ ಕಿಡಕಿಯಲ್ಲಿ ಮುಖ ಮಾಡಿ ಬಿಕ್ಕಿಬಿಕ್ಕಿ ಅಳತೊಡಗಿದಳು. ನನ್ನ ಕರುಳು ಚುರ್ರೆಂದವು. ಏನು ಹೇಳಲಿಕ್ಕೂ ನಾಲಗೆ ಏಳಲಿಲ್ಲ. ಸುಮ್ಮನೆ ನಾನು ಕಿಡಕಿಯಲ್ಲಿ ನೋಡಿದೆ: ತಿಳಿ ಹಸಿರು ಬೆಳೆಗಳ ಮಧ್ಯೆ ಕರಿಹಸಿರಿನ ಹುಣಿಸಿಯ ಮೆಳೆ ಮೈಮೆರೆತು ನಿಂತಹಾಗಿತ್ತು”

ನಮ್ಮ ಕಥಾನಾಯಕಿ, ನಮ್ಮೂರಿನ ಆ ಹುಣಿಸೆಯ ಮೆಳೆಯಿಂದ ತುಂಬ ಆಕರ್ಷಿತಳಾಗಿರುವುದರಿಂದ ಓದುಗರಿಗೆ ಅದರ ಪರಿಚಯ ಮಾಡಿಕೊಡಲೇಬೇಕೆಂದು ಅನ್ನಿಸುತ್ತಿದೆ. ಶೀನಿಂಗವ್ವನ ಕಥೆಗೆ ತುಸು ವಿರಾಮ ಹಾಕಿ ನೀವೀಗ ಅರಮನೆ ಬಿಟ್ಟು ಹೊರಬರಬೇಕು. ಉಸಿರುಗಟ್ಟಿಸುವ ಆ ಅರಮನೆಯ ವಾತಾವರಣದಿಂದ ನಿಮಗೂ ಕೊಂಚ ವಿಶ್ರಾಂತಿ ಸಿಕ್ಕ ಹಾಗೂ ಆಯ್ತು. ಹುಣಿಸೆಯ ಮೆಳೆಯನ್ನು ಕಂಡ ಹಾಗೂ ಆಯ್ತು. ಆದರಿಷ್ಟಂತೂ ನಿಜ, ಅದು ನೋಡಬೇಕಾದ ಸ್ಥಳವೇ. ಪ್ರವಾಸೀ ಕೇಂದ್ರವಲ್ಲ, ದೇವರ ದಯದಿಂದ ಅದರ ಮೇಲೆ ಸರ್ಕಾರದ ಕಣ್ಣು ಬೀಳುವುದೂ ಬೇಡ. ನಮ್ಮ ಕಥಾನಾಯಕಿ ಮತ್ತೆ ಮತ್ತೆ ಆ ಕಡೆ ನೋಡುತ್ತಿರುವುದರಿಂದ, ನನ್ನ ಎಳೆತನದ ಅನುಭವಗಳಲ್ಲಿ ಅದರ ಪಾತ್ರ ಬಹುಮುಖ್ಯವಾಗಿರುವುದರಿಂದ ತೋರಿಸುತ್ತೇನೆ.

ನಮ್ಮೂರಿನ ಪಶ್ಚಿಮಕ್ಕೆ ಸುಮಾರು ಆರು ಫರ್ಲಾಂಗಿನ ಅಂತರದಲ್ಲಿ ಕುಮುದವ್ವನ ಗುಡಿಯಿದೆಯೆಂದು ಹೇಳಿದ್ದೆನಲ್ಲ. ಆ ಗುಡಿಯಿರೋದು ಈ ಮೆಳೆಯ ಈಚೆ ಬದಿಯೊಳಗೆ. ಈ ಮೆಳೆಯಲ್ಲಿ ದಟ್ಟವಾಗಿ ಬೆಳೆದ ಭಾರೀ ಗಾತ್ರದ ಹುಣಿಸೆಯ ಮರಗಳಿವೆ. ಒಟ್ಟು ಸಾವಿರದೆಂಟು ಮರಗಳಿವೆಯೆಂದು ಹೇಳುತ್ತಾರೆ. ಚಿಕ್ಕಂದಿನಲ್ಲಿ ನಾವು ಇವುಗಳನ್ನು ಎಣಿಸುವ ಸಾಹಸ ಮಾಡಿದ್ದೆವು. ಎಷ್ಟು ಎಣಿಸಿದರೂ ಸಾವಿರದೆಂಟಂತೂ ಆಗುವುದೇ ಇಲ್ಲ. ಹೀಗೆ ಲೆಕ್ಕ ತಪ್ಪುವುದಿದೆಯಲ್ಲಾ, ಇದನ್ನೂ ನಾವು ಕುಮುದವ್ವನ ಮಹಿಮೆಯೆಂದೇ ಭಾವಿಸುತ್ತಿದ್ದೆವು. ಎಣಿಸುವುದಕ್ಕೆ ಹಣಗಲವಾಗುವ ಹಾಗೇ ಅವೂ ಬೆಳಿದಿವೆ. ಕೆಲವು ಮರಗಳು ಕೂಡಿಯೇ ಬೆಳೆದಿರುವುದರಿಂದ ಅವನ್ನು ಎರಡಾಗಿ ಎಣಿಸಬೇಕೋ, ಒಂದಾಗಿ ಎಣಿಸಬೇಕೋ ತಿಳಿಯುವುದಿಲ್ಲ.

ನೀವು ನಮ್ಮೂರಿಗೆ ಬಂದರೆ ಆ ಮೆಳೆ ನಿಮ್ಮನ್ನು ಆಕರ್ಷಿಸದೇ ಇರುವುದು ಸಾಧ್ಯವೇ ಇಲ್ಲ. ಯಾಕೆಂದರೆ ಸುತ್ತು ಬೋಳು ಬೋಳಾದ ಬಯಲಿನಲ್ಲಿ ಹಸಿರೆಂಬೋದು ಒಟ್ಟಾಗಿ ಕಾಣೋದು ಅಲ್ಲಿಯೇ. ಹಾಗೆ ಆಕರ್ಷಿತರಾಗಿ ಸಾಯಂಕಾಲ ಅಲ್ಲಿಗೆ ಬರುತ್ತೀರಿ ಎನ್ನೋಣ. ಒಮ್ಮೆ ಆ ಮೆಳೆಯನ್ನು ಪ್ರವೇಶಿಸಿದಿರೋ ನಿಮ್ಮ ಆಯಾಸ ದಣಿವುಗಳು ಪರಿಹಾರವಾಗಿ ಅಲ್ಲಿಯ ವಿಚಿತ್ರ ಗುಂಭಶಾಂತಿ ನಿಮ್ಮ ಸಹಜ ಇಂದ್ರಿಯಗಳನ್ನು ಮುಚ್ಚಿ, ತನ್ನ ಸೌಂದರ್ಯವನ್ನು ಆಸ್ವಾದಿಸುವಂಥ ಹೊಸ ಇಂದ್ರಿಯಗಳನ್ನು ಸೃಷ್ಟಿಸುತ್ತದೆ. ನೀವು ನಿಂತಲ್ಲಿ ಬಿಸಿಲಿಲ್ಲ. ಆದರೆ ಮರಗಳ ತುದಿಯಲ್ಲಿ ಬಿಸಿಲು ಬಂಗಾರ ಬಣ್ಣದ ಕ್ಷಿತಿಜಗಳನ್ನು ಕೊರೆಯುತ್ತದೆ. ಈ ಹೊಸ ಕ್ಷಿತಜ, ಗಾಳಿಗೆ ಮರ ಅಲುಗಾಡುತ್ತವಲ್ಲ ಆದ್ದರಿಂದ, ಮರದಿಂದ ಮರಕ್ಕೆ ನೆಗೆಯತೊಡಗುತ್ತದೆ. ಕಣ್ಣರಳಿಸಿ ನಿಂತ ನೀವು ಹೊರಗಿನೊಂದಿಗಿನ ಸಂಬಂಧ ಕಡಿದುಕೊಂಡು ಈಗ ಪೂರ್ತಿ ಮೆಳೆಯ ವಶರಾಗುತ್ತೀರಿ. ಯಾಕೆಂದರೆ ಈ ತನಕ ನೀವು ಕುಣಿಯುವ ಕ್ಷಿತಿಜ ಕಂಡವರಲ್ಲ, ನೀವು ಮೈಮರೆತದ್ದು ಗೊತ್ತಾದೊಡನೆ ಆ ಕ್ಷಿತಿಜ ನಿಮ್ಮೊಂದಿಗೆ ಆಟ ಆಡತೊಡಗುತ್ತದೆ. ಈ ಮರದ ತುದಿಯಲ್ಲಿ ಮಾಯವಾಗಿ, ಅಕೋ ಆ ಮರದ ತುದಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಲಿಂದಿಲ್ಲಿಗೆ, ಇಲ್ಲಿಂದ ಇನ್ನೆಲ್ಲಿಗೋ! ನೀವು ಆ ಕ್ಷಿತಿಜದ ಬೆನ್ನು ಹತ್ತಿ, ಎತ್ತ ಕಂಡರೆ ಅತ್ತ ತಿರುಗುತ್ತ, ಎಲ್ಲಿಂದೆಲ್ಲಿಗೋ ಮರದ ಬೊಡ್ಡೆಗಳನ್ನು ನಿರ್ಲಕ್ಷಿಸಿ ಸುತ್ತುತ್ತೀರಿ, ನಿಮಗೇ ಗೊತ್ತಿಲ್ಲದೆ. ಆಕಾಶ ಮತ್ತು ಮೆಳೆ ಎರಡೂ ಹೊಂಚಿ ಮಾಡುತ್ತಿರುವ ಮಾಟವಿದು. ಆಕಾಶದ ನೀಲಿ ನಿಧಾನವಾಗಿ ಕೆಂಪಾಗುತ್ತದೆ. ಈಗ ನಿಮ್ಮ ಕ್ಷಿತಿಜ ಕುಂಕುಮದ ಹುಡಿಯಾಗಿ ಹಾರತೊಡಗುತ್ತದೆ. ಬರಬರುತ್ತ ಕುಂಕುಮದ ಮೇಲೆ ಕಪ್ಪು ನೆರಳು ಕಾಣಿಸುತ್ತದೆ. ನೆರಳು ಗಟ್ಟಿಯಾಗಿ ಹೆಪ್ಪುಗಟ್ಟಿದ ರಕ್ತದಂತಾಗುತ್ತದೆ. ಈಗಲಾದರೂ ನಿಮಗೆ ಹೊರಹೋಗುವ ಬುದ್ಧಿ ಬಂದರೆ ಒಳ್ಳೆಯದು. ಹೊತ್ತು ಮುಳುಗಿದ್ದು ನಿಮಗೆ ಗೊತ್ತೇ ಆಗುವುದಿಲ್ಲ. ಸುತ್ತ ಕಾದ ಬಯಲ ಮಣ್ಣಿಗೆ ತಂಗಾಳಿ ತೀಡಿ ಬಂದು ಹಾಯಾದ ಮಣ್ಣಿನ ವಾಸನೆ ನಿಮ್ಮ ಮೂಗು ತುಂಬುತ್ತದೆ. ನಿಮಗೆ ಆಶ್ವರ್ಯ! ಅರೆ ಅರೆ, ಮರಗಳಿವೆ, ಹಕ್ಕಿಗಳಿಲ್ಲ! ಗಾಳಿಯಿದೆ, ಸದ್ದಿಲ್ಲ! ನಿಮ್ಮ ಕಣ್ಣಿಗೆಲ್ಲ ಅಸ್ಪಷ್ಟವಾಗಿ ಕಾಣುತ್ತಿದೆ. ಮೇಲೆ ನೋಡುತ್ತೀರಿ, ಒಂದೆರಡು ನಕ್ಷತ್ರ ಮಿನುಗುತ್ತಿವೆ. ಅವು ಹುಣಸೇ ಮರಕ್ಕೆ ಬಿಟ್ಟ ನಕ್ಷತ್ರಗಳೋ, ಇಲ್ಲಾ ದೂರದ ಆಕಾಶದಲ್ಲಿರುವ ನಕ್ಷತ್ರಗಳೋ ಎಂದು ಭ್ರಮೆಯಾಗುತ್ತದೆ. ಅಂದರೆ ನೀವು ಪೂರ್ತಿ ಸಿಕ್ಕುಬಿದ್ದಿರಿ ಎಂದರ್ಥ. ಈಗಲೇ ಹೇಳಿಬಿಡುತ್ತೇನೆ, ನೀವಿನ್ನು ಹೊರಬರುವುದು ಸಾಧ್ಯವಿಲ್ಲ. ಹೊರಬರುವುದಕ್ಕೆ ನೀವು ತಡಕಾಡಿದಷ್ಟೂ ಮೆಳೆಯ ಆಳಕ್ಕೆ ಹೋಗುತ್ತಿರುವುದು ನಿಮಗೆ ಆ ಮೇಲೆ ತಿಳಿಯುತ್ತದೆ. ಈಗ ಪೂರ್ತಿ ಕತ್ತಲಾವರಿಸಿ ನೀವು ತಡಕಾಡಿದಲ್ಲೆಲ್ಲಾ ಮರಗಳೇ ಮುಂದೆ ಬಂದು ಕೈಗೆ ಸಿಕ್ಕುತ್ತವೆ. ಹಕ್ಕಿಗಳಿಲ್ಲ ಎಂದಿದ್ದಿರಲ್ಲ, ಈಗ ಕೇಳಿರಿ: ಹಕ್ಕಿಗಳ ವಿಚಿತ್ರನಾದ, ನೀವೆಂದೂ ಕೇಳಿರದ ಕಿರುಚಾಟ ಕೇಳಿಸುತ್ತದೆ. ಮರದಿಂದ ಮರಕ್ಕೆ ಯಾವುದೋ ಧಡೂತಿ ಪ್ರಾಣಿ ನೇತಾಡುತ್ತಿದೆಯೆಂದು, ಯಾರೋ ನಿಮ್ಮ ಹಿಂದೆಯೇ ನಿಂತಿದ್ದು ತಬ್ಬಿಕೊಂಡು ಹಿಸುಕಲು ಕಾತರರಾಗಿದ್ದಾರೆಂದು, ಮುಂದುಗಡೆ ಒಂದು ಹೆಜ್ಜೆಯಿಟ್ಟರೆ ಭಯಂಕರಾ ಕೃತಿಯೊಂದು ನಿಮ್ಮನ್ನು ನುಂಗಲು ಕಾದಿದೆಯೆಂದು ಅನ್ನಿಸತೊಡಗುತ್ತದೆ. ನಿಮಗೆ ಗೊತ್ತಿಲ್ಲದ ಸಾವಿರಾರು ಅಸ್ತಿತ್ವಗಳು ನಿಮ್ಮ ಸುತ್ತ ಹೊಂಚುತ್ತ ಓಡಾಡಿದ ಸರಸರ ಸದ್ದಾಗುತ್ತದೆ. ಇದಕ್ಕೆಲ್ಲ ಹೆದರಿ ಹೊಡೆವ ಎದೆಯ ಬಡಿತ ಕೇಳುತ್ತ ತಬ್ಬಿಬ್ಬಾಗಿ ನೀವು ನಿಂತರೆ ಹೋ ಎಂದು ಯಾರೋ ಚಪ್ಪಾಳೆ ತಟ್ಟಿ ನಕ್ಕದ್ದು ಕೇಳಿಸುತ್ತದೆ. ನಿಮ್ಮ ಎದೆ ಬಡಿತದಂತೆ ಅವುಗಳ ಕುಚೇಷ್ಟೆಯೂ ಜಾಸ್ತಿಯಾಗುತ್ತದೆ. ಇದ್ದಕ್ಕಿದ್ದಂತೆ ಮೈ ತಣ್ಣಗಾಗಿ ನೀವು ಯಾವುದೋ ನೀರಿನ ಮಡುವಿನಲ್ಲಿದ್ದಂತೆ, ಮಡುವಿನ ತಿರುಗಣಿಯಲ್ಲಿದ್ದಂತೆ, ಕೂಗದೆ, ಕೂಗದಿರಲಾರದೆ, ಈಸದೇ, ಈಸದಿರಲಾರದೆ, ಸತ್ತದ್ದು ಯಾರಿಗಾದರೂ ತಿಳಿದಿರಲೆಂದೋ, ಅಥವಾ ಯಾವುದಾದರೂ ಶಕ್ತಿಯಿದ್ದರೆ ಬದುಕಿಸಲೆಂದೋ ಅಂತೂ ಕಿಟಾರನೆ ಕಿರುಚುತ್ತೀರಿ. ಕಿರಿಚಿ ಮೂರ್ಛೆ ಬೀಳುತ್ತೀರಿ – ಖೇಲ್ ಕಲಾಸ್! ನೀವಿನ್ನು ದೈವಾಧೀನ, ನಿಮ್ಮ ನಶೀಬಿದ್ದರೆ ಬೆಳಿಗ್ಗೆ ನಿಮ್ಮ ನಮ್ಮ ಭೇಟಿ; ಇಲ್ಲದಿದ್ದರೆ ನಿಮ್ಮ ಆತ್ಮಕ್ಕೆ ಶಾಂತಿ ಕೋರುತ್ತೇನೆ.

ವಾಚಕ ಮಹಾಶಯರು ಮನ್ನಿಸಬೇಕು. ಈ ಮೆಳೆಯ ಒಳಹೊಕ್ಕು ನೀವು ನಿಮ್ಮ ಜೀವಕ್ಕೆ ಅಪಾಯ ತಂದುಕೊಳ್ಳಲೆಂದು ನನ್ನಾಸೆಯಲ್ಲ, ನಮ್ಮ ಕಥಾನಾಯಕಿ ಎಂಥಾ ಮೆಳೆಯ ಕನಸು ಕಾಣುತ್ತಿದ್ದಳು ಎಂದು ಹೇಳುವುದಕ್ಕೆ ಈ ಅನುಭವ ಹೇಳಿದೆ. ಈ ಭಾಗದ ದೆವ್ವ, ಭೂತ ಪಿಶಾಚಿಗಳೆಲ್ಲ ಈ ಮೆಳೆಯಲ್ಲೇ ವಾಸಿಸುತ್ತವೆ. ಈ ಭಾಗದ ಯಾವನೇ ಮಾಂತ್ರಿಕನಿರಲಿ, ದೆವ್ವ ಬಿಡಿಸಬೇಕಾದರೆ ಇಲ್ಲಿಯ ಹುಣಿಸೇ ಬರಲು ಬೇಕೆಬೇಕು. ಕೆಲವೊಮ್ಮೆ ಶಿವಾಪುರದ ಹುಣಿಸೇಮಳೆಯ ಹೆಸರು ಕೇಳಿಯೇ ಕೆಲವು ದೆವ್ವಗಳು ಹಿಡಿದವರನ್ನು ಬಿಟ್ಟದ್ದುಂಟು. ಅಮವಾಸ್ಯೆಯ ರಾತ್ರಿ ಊರಲ್ಲೇ ನಿಂತು ಈ ಕಡೆ ನೋಡಿದರೆ ಸಾಕು, ಕೊಳ್ಳಿದೆವ್ವಗಳ ಓಡಾಟ ಕಾಣಿಸುತ್ತದೆ. ಒಮ್ಮೆ ಅವುಗಳನ್ನು ನಾನೂ ನೋಡಿದ ಹಾಗೆ ನೆನಪಿದೆ. ಹೀಗಿದ್ದೂ ನಮ್ಮ ಕಥಾನಾಯಕಿಗೆ ಈ ಮೆಳೆ ಚೆಂದಾಗಿ ಕಂಡದ್ದು ಆಶ್ವರ್ಯಕರ. ಅಥವಾ ಒಬ್ಬೊಬ್ಬರಿಗೆ ಒಂದೊಂದು ಥರ ಕಾಣುವುದಿದೆಯಲ್ಲ, ಅದೂ ಕುಮುದವ್ವನ ಮಹಿಮೆಯೇ ಇರಬೇಕು.

* * *