ಅಂತೂ ಸಂಕ್ಷಿಪ್ತವಾಗಿಯಾದರೂ ದಿನಕಾರ್ಯೆ ಮಾಡಿದೆವು. ಒಂದು ಬೇಟೆ ಕಡಿಯಲಿಲ್ಲ, ಒಬ್ಬರನ್ನೂ ಆಮಂತ್ರಿಸಲಿಲ್ಲ. ಒಂದು ಕೋಳಿ ಕೊಯ್ದು ಇದ್ದುದರಲ್ಲಿಯೇ ದಿನಕಾರ್ಯೆ ಮಾಡಿ ಮುಗಿಸಿದೆವೆಂದು ಅನ್ನಿಸಿಕೊಂಡೆವು. ಸಿಂಗಾರೆವ್ವ ಈ ಬಡತನದ ದಿನಕಾರ್ಯೆದಿಂದ ಕೆಡುಕೆನಿಸಿಕೊಂಡಳು. ಹಿರಿಯ ದೊರೆಸಾನಿಗೆ ಎಡೆ ಮಾಡುವಾಗ ಕಣ್ಣೀರು ಸುರಿಸಿದಳು. ಏನು ಮಾಡುವುದು? ಬೇರೆ ದಿಕ್ಕಿರಲಿಲ್ಲ. ಸಾಲದ್ದಕ್ಕೆ ಕಾಗೆ ಪಿಂಡ ಮುಟ್ಟಿರಲೇ ಇಲ್ಲ. ಸಿಂಗಾರೆವ್ವ ಎಷ್ಟೋ ಹರಕೆ ಹೇಳಿಕೊಂಡರೂ, ದೇಸಾಯಿಯ ಮನಸ್ಸಿನಲ್ಲಿ ಮರೆಪ್ಪ ದೊಡ್ಡ ಗಾಯ ಮಾಡಿದ್ದನೆಂದು ತೋರುತ್ತದೆ. ದಿನಕಾರ್ಯದಲ್ಲಿ ಆತ ಆಸಕ್ತಿ ವಹಿಸಲೂ ಇಲ್ಲ, ಹೆಚ್ಚಿಗೆ ಮಾತಾಡಲೂ ಇಲ್ಲ. ಊಟ ಮಾಡುವಾಗಲೂ ಮುಂದಿನ ಎಡೆಯ ಮೇಲೆ ಅವನ ಗಮನವಿದ್ದಂತಿರಲಿಲ್ಲ. ಗೌಡ, ಗೌಡ್ತಿ ಚೆನ್ನಾಗಿಯೇ ಉಂಡರು. ಉಣ್ಣುವಾಗ ಗೌಡ ದೇಸಾಯಿಯನ್ನು ಮಾತಿಗೆಳೆಯಲು ಬಹಳ ಖಟಪಟಿ ಮಾಡಿದ. ದೇಸಾಯಿ ಮಾತ್ರ ಕೇಳಿದ್ದಕ್ಕೆಲ್ಲ ಹಾಹೂ ಎಂದು ಉತ್ತರಿಸಿ ಶಾಸ್ತ್ರಕ್ಕೆ ಒಂದೆರಡು ತುತ್ತು ತಿಂದು ಎದ್ದ. ಕೊನೆಗೆ ನಾನು ಮತ್ತು ಸಿಂಗಾರೆವ್ವ ಊಟಕ್ಕೆ ಕೂತೆವು. ನಮ್ಮ ಜೊತೆ ಗೌಡ್ತಿ ಇರಲಿಲ್ಲವಾದ್ದರಿಂದ ಈಗಲಾದರೂ ತುಸು ಮಾತಾಡಿ ಮನಸ್ಸು ಹಗುರ ಮಾಡಿಕೊಳ್ಳೋಣವೆಂದು ತನ್ನ ತವಕ. ಆದರೆ ಹೊರಗೆ ಕಣ್ಣೀರು ಇರಲಿಲ್ಲವಾದರೂ  ಒಳಗೆ ಆಕೆ ಆಳುತ್ತಿದ್ದಳು. ಹಿಂಡಿದ ಮುಖ ಸಪ್ಪೆಯಾಗಿ ಯಾವ ಕ್ಷಣವೂ ಅವಳು ದನಿ ಮಾಡಿ ಅಳುವಂತಿದ್ದಳು. ನಾನು ಅವಳೆದುರಿನಲ್ಲೇ ಓಡಾಡಿ ನೀಡುತ್ತಿದ್ದರೂ ನನ್ನ ಕಡೆ ನೋಡುತ್ತಿರಲಿಲ್ಲ. ಅವಳಿಗೆ ಬಹುಶಃ ಮಾತಾಡುವ ಮನಸ್ಸಿಲ್ಲವೆಂದು ಊಟಕ್ಕೆ ನೀಡಿ, ನಾನೂ ನೀಡಿಕೊಂಡು ಕೂತೆ. ಬಗ್ಗೆ ಮೊದಲನೇ ತುತ್ತನ್ನು ಬಾಯಲ್ಲಿ ಹಾಕಿಕೊಳ್ಳುತ್ತಿದ್ದಂತೆ ಆಕೆಯ ಎರಡೂ ಕಣ್ಣಿಂದ ಎರಡು ಹನಿ ಕಣ್ಣೀರು ತಟ್ಟೆಯಲ್ಲೇ ಟಪ್ ಟಪ್ ಎಂದು ಬಿದ್ದು, ಎಡಗೈಯಿಂದ ಸೀರೆ ಸೆರಗು ತಗೊಂಡು ಮುಖ ಮುಚ್ಚಿಕೊಂಡು ಬಿಕ್ಕಿಬಿಕ್ಕಿ ಅಳತೊಡಗಿದಳು. ಸಮಾಧಾನ ಮಾಡುವುದಕ್ಕೆ ನನ್ನ ಬಳಿ ಶಬ್ದಗಳೇ ಇರಲಿಲ್ಲ. ಆದರೂ ಉಪಚಾರಕ್ಕಾಗಿ “ಉಣ್ಣೂ ಎಡೀ ಮುಂದ ಕುಂತು ಅಳಬಾರದೆವ್ವ” ಅಂದೆ. ಈ ಮಾತು ಅವಳಿಗೆ ಮುಟ್ಟಲೇ ಇಲ್ಲ. ಆ ಮೇಲೆ ನಾನು ಮಾತಾಡುವ ಗೋಜಿಗೆ ಹೋಗಲೇ ಇಲ್ಲ. ಸುಮ್ಮನೇ ಅವಳನ್ನೆ ನೋಡುತ್ತ ಕುಳಿತೆ. ಅತ್ತು ಅತ್ತು ಉಣ್ಣಲಾರದೆ ಮುಂದಿನ ಎಡೆ ಸರಿಸಿ ಕೈ ತೊಳೆದುಕೊಂಡು ಅಂತಸ್ತಿಗೆ ಹೋದಳು. ಆದರೆ ನನಗೆ ಹಸಿವಾಗಿತ್ತು. ಊಟ ಮಾಡಿ ನಿಧಾನವಾಗಿಯೇ ಕಸಮುಸುರೆ ತೊಳಿದಿಟ್ಟು ಮಲಗಲಿಕ್ಕೆ ಹೊರಟೆ.

ಹೋಗುವ ಮುನ್ನ ಒಂದು ಸಲ ದರಬಾರಿನಲ್ಲಿ ಹಣಿಕಿ ಹಾಕಿದೆ. ಅದು ಎಂದಿಗಿಂತ ಇಂದು ಭಿಕೋ ಎನ್ನುತ್ತಿತ್ತು. ಪಟಾಂಗಳದಲ್ಲಿ ಪ್ರಶಾಂತವಾದ ಬೆಳದಿಂಗಳಿದ್ದು ಅದರ ಮಂದ ಬೆಳಕು ಪಡಸಾಲೆಗೂ ಹರಡಿತ್ತು. ಕರ್ರಗಿನ ಕಂಭಗಳು ಗುಂಭ ಗಂಭೀರವಾಗಿ ಬೆಳ್ದಿಂಗಳಿಗೆ ಬೆರಗಾಗಿ, ಸ್ತಬ್ಧವಾಗಿರುವಂತೆ, ಇಲ್ಲವೆ ಇಲ್ಲಿ ಇನ್ನೇನಾದರೂ ನಡೆಯುತ್ತದೆಯೋ ನೋಡೋಣವೆಂದು ಹೊಂಚಿ ನಿಂತಂತೆ ಕಾಣಿಸುತ್ತಿದ್ದವು.

ಪಟಾಂಗಳವೆಲ್ಲ ಬಯಲು ಹೊಲಗಳಾಗಿ ಈ ಕಂಬಗಳೆಲ್ಲಾ ಹುಣಿಸೇಮರದ ಬೊಡ್ಡಿಗಳಾದರೆ… ಒಂದೊಂದು ಮರಕ್ಕೆ ಬಾವಲಿಯ ಹಾಗೆ ಎಷ್ಟೊಂದು ಭೂತಗಳು ನೇತು ಬಿದ್ದಿರುತ್ತವೆಯೋ! ಅಲ್ಲೇನಾದರೂ ನರಸಂಚಾರವಾದರೆ ಆಗಲೂ ಅವು ಸುಮ್ಮನೆ ನೇತಾಡುತ್ತಿವೆಯೆ? ಥರಥರದ ರೂಪ ಆಕಾರ ತಕ್ಕೊಂಡು ಆ ಮನುಷ್ಯನ ಸುತ್ತ ಸುಳಿಯಬಹುದು. ನಾವೆಂದೂ ಕೇಳರಿಯದ ಸಪ್ಪಳ ಮಾಡಬಹುದು. ಕಿರಚಬಹುದು. ಕೇಕೆ ಹಾಕಬಹುದು, ಹುಣಸೇಮರದ ಬೊಡ್ಡೆಗಳೇ ಸುತ್ತ ನಡೆದಾಡುವ ಹಾಗೆ ಮಾಡಬಹುದು.. ಅವ್ವಯ್ಯಾ, ಹಿಂಗ್ಯಾಕ ವಿಚಾರ ಮಾಡುತ್ತಿದ್ದೇನೆಂದು ಹೊಯ್ಕಾಯ್ತು. ಇದಿನ್ನು ಸಾಕೆಂದು ತಿರುಗುವುದರಲ್ಲಿದೆ. ಕಂಬಳ ಬಳಿಯೊಂದು ನೆರಳು ಸುಳಿದಂತಾಗಿ ಗಪ್ಪಂತ ನಿಂತೆ. ನೆತ್ತರು ನೆತ್ತಿಗೇರಿದಂತಾಗಿ ಒಮ್ಮೇಲೆ ಮೈ ತಣ್ಣಗಾಯ್ತು. ಆ ನೆರಳಿನ ಕೈಯಲ್ಲಿ ಕೋಲಿತ್ತು. ಕೋಲಲ್ಲ, ಬಂದೂಕಿತ್ತು. ಅರೆ ನಮ್ಮ ದೇಸಾಯಿ! ಬಂದೂಕು ಹಿಡಿದುಕೊಂಡು ಕಾವಲು ಮಾಡುತ್ತಿದ್ದಂತೆ – ಆ ಕಡೆಯಿಂದ ಈ ಕಡೆಗೆ ಅಲೆದಾಡುತ್ತಿದ್ದ. ಸದ್ಯ ಜೀವ ಹೋಗುವುದರೊಳಗೇ ದೇಸಾಯಿಯೆಂದು ಗೊತ್ತಾಯ್ತಲ್ಲ, ಅಂದುಕೊಂಡೆ. ಅದ್ಯಾಕೆ ಹೀಗೆ ಒಬ್ಬನೇ ಅಲೆದಾಡುತ್ತಿರಬಹುದೆಂದು ಬಗೆಹರಿಯಲಿಲ್ಲ. ಮರ್ಯಾನಿಗೋಸ್ಕರ ಕಾಯುತ್ತಿರಬಹುದೇ? ಹಾಗೆ ಕಾದದ್ದೇ ಆದರೆ ಅದು ಅಪಾಯಕಾರಿಯೆಂದು ಅನ್ನಿಸಿ, ಗಾಬರಿಯಾಯ್ತು. ಮರೆಪ್ಪ ಬಳಿ ಕದ್ದಿರಬಹುದೆಂದು ಹೇಳಿದವಳು ನಾನು ತಾನೆ? ಅವನು ಯಾವಾಗೆಂದರೆ ಆವಾಗ ಪ್ರತ್ಯಕ್ಷನಾಗಿ ಯಾವುದೆಂದರೆ ಆ ಅಪಾಯ ಮಾಡಲಿಕ್ಕೂ ಹೇಸಲಾರ. ಸ್ವಥಾ ತಂದೆ ಒದೆಯ ಬಂದತೇ ನನ್ನನ್ನು ಬಿಡಿಸಿಕೊಳ್ಳಲಾರದ ದೊರೆಸಾನಿ, ಇನ್ನು ಮರೆಪ್ಪ ಬಂದು ಒದ್ದರೆ ರಕ್ಷಣೆ ಕೊಡಬಲ್ಲಳೆ? ನಾನು ತಪ್ಪು ಮಾಡಿದೆನೆಂದು ಅನ್ನಿಸಿತು. ಆದರೆ ನನ್ನನ್ನು ಪಾರು ಮಾಡಿಕೊಳ್ಳಲು ಬೇರೆ ದಾರಿಗಳಿರಲಿಲ್ಲ. ಇನ್ನು ಮೇಲೆ ಇಲ್ಲಿರುವುದೇ ಬೇಡವೆಂದು ತೋರಿತು. ಆದರೆ ಹಾಗೆಂದು ನಂದಗಾವಿಂಗೆ ಹೋಗುವುದೂ ಸಾಧ್ಯವಿರಲಿಲ್ಲ. ಈ ಎಲ್ಲ ಚಿಂತೆಗಳಿಂದ ಮನಸ್ಸು ಗಾಸಿಯಾಗಿ ಅಂತಸ್ತಿಗೆ ಹೋದೆ.

ನಾನು ಹೋಗುವಷ್ಟರಲ್ಲಿ ಸಿಂಗಾರೆವ್ವ ಮತ್ತು ಗೌಡ್ತಿ ಮಲಗಿ ನಿದ್ರಿಸುತ್ತಿದ್ದರು. ದೀಪ ದೊಡ್ಡದು ಕೂಡ ಮಾಡದೆ ಇದ್ದ ಮಂದ ಬೆಳಕಿನಲ್ಲೇ ನನ್ನ ಹಾಸಿಗೆ ಹಾಸಿಕೊಂಡು ಮಲಗಿದೆ. ನಿದ್ದೆ ಬರಲೇ ಇಲ್ಲ. ದೇಸಾಯಿ ಬಂದೂಕ ಹಿಡಿದು ಅಲೆದಾಡುತ್ತಿರುವುದನ್ನು ಮಲಗಿದ್ದ ದೊರೆಸಾನಿಯನ್ನೆಬ್ಬಿಸಿ ಹೇಳೋಣವೆಂದುಕೊಂಡೆ. ಅಥವಾ ಈಗ ಆ ಕಂಬಗಳ ಮಧ್ಯೆ ಇದ್ದಕ್ಕಿದ್ದಂತೆ ಸಿಂಗಾರೆವ್ವ ಪ್ರತ್ಯಕ್ಷಳಾದಳೆನ್ನೋಣ. ದೇಸಾಯಿ ಏನು ಮಾಡಬಹುದು? ಛೀ, ಅವರಿಬ್ಬರೂ ಗಂಡ ಹೆಂಡಿರಂತೆ ಕಾಣುವುದೇ ಇಲ್ಲ. ಮಧ್ಯಾಹ್ನವೇ ಮುದುಕಿ ನನ್ನನ್ನು ನಿಲ್ಲಿಸಿ ಕೇಳಿತ್ತು “ಏನs ಶೀನಿಂಗೀ, ಬಂದಾಗನಿಂದ ನೋಡಿದೆ. ಸಿಂಗಾರೆವ್ವ ದೇಸಾಯಿ ಕೂಡಿ ಮಲಗಾಣಿಲೇನು?” “ನೀವು ಬಂದೀರಲ್ಲ, ಅದಕ್ಕ ಬಿಟ್ಟಾರೆ”ಂದು ಸುಳ್ಳು ಹೇಳಿದ್ದೆ. ಅಥವಾ ಆಗಳೆ ದೇಸಾಯಿಯನ್ನು ನೋಡುತ್ತ ದರ್ಬಾರ ಬಳಿ ನಿಂತಿದ್ದೆನಲ್ಲ, ಆಗೇನಾದರೂ ಹಿಂದಿನಿಂದ ಮರ್ಯಾ ಬಂದಿದ್ದರೆ… ಬಹುಶಃ ನನ್ನನ್ನು ಹೊಡೆಯುತ್ತಿದ್ದ, ಒದೆಯುತ್ತಿದ್ದ, ಕತ್ತು ಹಿಸುಕಿ ಕೊಲ್ಲುತ್ತಿದ್ದ. ಅಷ್ಟು ಹಿಂಸೆ ಕೊಟ್ಟಿದ್ದರೂ ನಾನು ಒದರುತ್ತಿರಲಿಲ್ಲ ಎಂದುಕೊಂಡೆ. ಅಥವಾ ಅದ್ಯಾಕೆ ಈ ದಿನ ಇಂಥ ವಿಚಾರಗಳು ತಲೆಯೊಳಗೆ ಸುತ್ತಾಡುತ್ತಿವೆ?! ಎನ್ನಿಸಿ ಆಶ್ವರ್ಯವಾಯಿತು.

ಅಷ್ಟರಲ್ಲಿ ರಾತ್ರಿಯ ಎದೆಗೆ ನಟ್ಟಂತೆ – ಧಡಂ ಎಂದು ಗುಂಡು ಹಾರಿದ ಭಾರೀ ಸದ್ದು ಕೇಳಿಸಿತು. ತಕ್ಷಣ ಎದ್ದು ಕೂತೆ. ಸಿಂಗಾರೆವ್ವನೂ ಗಾಬರಿಯಾಗಿ ಎದ್ದಳು. ಪರಸ್ಪರ ಮುಖ ನೋಡಿಕೊಂಡೆವು. ಯಾರಿಗೆ ಗುಂಡು ಹಾರಿಸಿದನೋ, ಮರ್ಯಾ ಬಂದಿದ್ದನೋ, ಅವನಿಗೆ ಗುಂಡು ತಾಗಿತೋ – ಎಂದು ಎದೆ ನಡುಗಿತು.

“ದೇಸಾಯರಾಗಲೇ ಬಂದೂಕ ಹಿಡಕೊಂಡು ದರ್ಬಾರದಾಗ ಅಡ್ಡಾಡತಿದ್ದರೆವ್ವಾ” ಅಂದೆ. ಇಬ್ಬರೂ ಅವಸರದಿಂದ ಕೆಳಗೋಡಿ ಬಂದೆವು.

ಬಂದು ನೋಡಿದರೆ ಪಟಾಂಗಳದ ಬೆಳದಿಂಗಳಲ್ಲಿ ದೇಸಾಯಿ ಬಂದೂಕು ಹಿಡಕೊಂಡು ಓಡಾಡುತ್ತಿದ್ದ. ತೇಗುಸಿರಿನಲ್ಲೇ ನಾನು “ಏನ್ರೆಪ್ಪ?” ಅಂದೆ. “ಅಕಾ ಹಾವು” ಅಂದವನೇ ಆ ದಿಕ್ಕಿಗೆ ಓಡಿಹೋಗಿ ಗುರಿಹಿಡಿದ. ಅಲ್ಲಿ ದೊಡ್ಡ ಸರ್ಪವೊಂದು ಹೆದರಿ ಬಚ್ಚಿಟ್ಟುಕೊಳ್ಳುವುದಕ್ಕೆ ಪೊಳ್ಳು ಸ್ಥಳ ಸಿಕ್ಕದೆ ಗೋಡೆಗುಂಟ ರಕ್ಷಣೆಗಾಗಿ ಹರಿದಾಡತೊಡಗಿತ್ತು. ದೇಸಾಯಿ ಓಡಿ ಹೋಗಿ ಅದರೆದುರು ನಿಂತೊಡನೆ ಸಿಂಗಾರೆವ್ವ ಗಾಬರಿಯಿಂದ ತಾನು ಓಡಿ “ಅಯ್ಯಯ್ಯೋ ದೂರ ಸರೀರಿ” ಎನ್ನುತ್ತ ದೇಸಾಯಿಯನ್ನು ತಬ್ಬಿಕೊಂಡು ಹಿಂದೆ ಸರಿಸಿದಳು. ದೇಸಾಯಿ “ತಡೀರಿ ತಡೀರಿ” ಎಂದು ಮತ್ತೆ ಮತ್ತೆ ಗುರಿ ಹಿಡಿಯುತ್ತಿದ್ದ. ಹಾವು ಮುಂದೆ ಹೋಗಲು ದಾರಿ ಕಾಣದೆ ಬೊಗಸೆಯಗಲದ ಹೆಡೆ ತೆಗೆದು ಎಡ, ಬಲ ಎರಡು ಸಾರಿ ಆಡಿಸಿತು. ಅದರ ಮೇಲೆ ಶುಭ್ರವಾದ ಬೆಳದಿಂಗಳು ಬಿದ್ದಿತ್ತಲ್ಲ. ಮಿಂಚಿನ ವಕ್ರಗೆರೆ ಚಂಚಲವಾಗಿ ಸಳಸಳ ಸಂಚರಿಸಿದಂತೆ ಕಾಣುತ್ತಿತ್ತು. ದೇಸಾಯಿ ಈ ಬಾರಿ ಅದರ ಹೆಡೆಗೇ ಗುರುಹಿಡಿದ. “ಅಯ್ಯೋ, ಬ್ಯಾಡ್ರಿ ಕೊಲ್ಲಬ್ಯಾಡಂತ ಹೆಡಿ ಆಡಿಸಾಕ ಹತ್ತೇತಿ!” ಎಂದು ಸಿಂಗಾರೆವ್ವ ಮತ್ತೆ ದೇಸಾಯಿಯ ರಟ್ಟೆ ಹಿಡಿದೆಳೆದಳು. ಎಳೆತಕ್ಕೆ ದೇಸಾಯಿ ಹಿಂಜೋಲಿ ಹೊಡೆದು ಹಿಂದೆ ಸರಿದ. ಹಾವಿಗೆ ಅಷ್ಟೇ ಸಾಕಾಗಿತ್ತು. ಗೋಡೆಯ ಸಂದಿಯಗುಂಟ ಹರಿದು ದೊಡ್ಡ ಕಲ್ಲಿನ ಕೆಳಗೆ ನುಸುಳಿ ಮರೆಯಾಯಿತು.

ಅಷ್ಟರಲ್ಲಿ ಗೌಡ ಗೌಡ್ತಿ ಎದ್ದು ಬಂದಿದ್ದರು. ಕಾಳ್ಯಾ ಬಂದಿದ್ದ. ಕಲ್ಲೆತ್ತಿ ಅದನ್ನು ಹೊಡೆದೇ ಬಿಡೋಣವೆಂದು ಕಾಳ್ಯಾ ಹೊರಟಿದ್ದ. “ಬ್ಯಾಡಪಾ ಬ್ಯಾಡ” ಎಂದು ಸಿಂಗಾರೆವ್ವ ಹೇಳುತ್ತಲೂ ಸುಮ್ಮನಾದ. ತೊಲೆಬಾಗಿಲು ಬಡಿಯುತ್ತ “ಮಾರಾಜರs ಮಾರಜರs” ಎಂದು ಊರೊಳಗಿನ ಒಂದಿಬ್ಬರು ಹೊರಗಿನಿಂದ ಕೂಗುತ್ತಿದ್ದರು. “ಏನಿಲ್ಲ ಹಾವು, ಬಂದಿತ್ತಷ್ಟೆ” ಎಂದು ಒಳಗಿನಿಂದಲೇ ಹೇಳಿ, ಬಾಗಿಲು ತೆರೆಯದೆಯೇ ಅವರನ್ನು ನಿವಾರಿಸಿದರು.

ಮಾರನೇ ದಿನ ಮುಂಜಾನೆ ನಾವಿನ್ನೂ ಸೂರ್ಯನ ಮುಖ ನೋಡಿರಲಿಲ್ಲ. ಗೌಡ ಜಳಕ ಮಾಡಿದ್ದ. ದೇಸಾಯಿ ಎದ್ದು ಆಕಳಿಸುತ್ತ ಇನ್ನೂ ಹಾಸಿಗೆಯಲ್ಲೇ ಕುಂತಿದ್ದ. ಗೌಡ್ತಿ ಅಡಿಗೆ ಮನೆಯಲ್ಲಿದ್ದಳು. ಸಿಂಗಾರೆವ್ವ ಇನ್ನೂ ಕೆಳಗಿಳಿದು ಬಂದಿರಲಿಲ್ಲ. ಮುಂಜಾನೆಯ ತಂಪುಗಾಳಿಯಲ್ಲಿ ಅಂದ್ಯಾಕೋ ತುಸು ಚಳಿಯಿದ್ದು ಮೈಗೆ ಹಿತವಾಗಿತ್ತು. ಅಂಗಳದಾಚೆಯ ಆಲದ ಮರದಲ್ಲಿ ಗುಬ್ಬಿಗಳು ಚಿಲಿಪಿಲಿಗುಟ್ಟುತ್ತಿದ್ದವು. ಸಗಣಿ ಬಳಿದು ತಿಪ್ಪಗೆ ಚೆಲ್ಲಿ ಬರಹೋಗಿದ್ದ ಕಾಳ್ಯಾ ಇನ್ನೂ ಬಂದಿರಲಿಲ್ಲ. ನಾನು ತೊಲೆಬಾಗಿಲು ಅಗಲವಾಗಿ ತೆರೆದು ದರ್ಬಾರು ಗುಡಿಸಬೇಕೆಂದು ಕಸಬರಿಗೆ ಹಿಡಿದುಕೊಂಡು ಬರುತ್ತಿದ್ದೆ. ಅಷ್ಟರಲ್ಲಿ ಹಳಬ ಬಂದ. ಕಟ್ಟೆಯ ಕೆಳಗೇ ನಿಂತು “ಹಳಬ ಬಂದಾನಂತ ಹೇಳವಾ” ಅಂದ. ಅಲ್ಲೇ ಕಸಬರಿಗೆ ಚೆಲ್ಲಿಹೋಗಿ ದೇಸಾಯಿಗೆ ಹೇಳಿದೆ. ಅವನು ಬನಿಯನ್ನು, ಧೋತ್ರದಲ್ಲೇ ಆಕಳಿಸುತ್ತ ಹೊರಬಂದು “ಯಾಕಲೇ?” ಅಂದರು.

“ಪೊಲೀಸರು ಬಂದಾರ, ಕರ್ಯಾಕ ಹತ್ಯಾರ್ರೀ ಮಾರಾಜ” ಅಂದ.

ದೇಸಾಯಿಗೆ ದಿಗಿಲಾಯ್ತು, ಹುಬ್ಬು ಗಂಟಿಕ್ಕಿ “ಪೊಲೀಸರಾ?” ಅಂದ.

“ಹೌಂದ್ರಿ ಮಾರಾಜ.”

“ಯಾಕ ಬಂದಾರ?”

“ಗೊತ್ತಿಲ್ಲರಿ ಮಾರಾಜ?”

“ನಮಗೇನ ಮಾಡಂದಿ?”

“ಕರ್ಯಾಕ ಹತ್ಯಾರೀ, ಮಾರಾಜ?”

“ಯಾರನ್ನ, ನಮ್ಮನ್ನ?”

“ಹೌಂದ್ರಿ, ಮಾರಾಜ.”

ದೇಸಾಯಿ ಇಡೀ ಮುಖವನ್ನು ಕಗ್ಗಂಟಿನಂತೆ ಬಿಗಿದು ಹಣಗಲದಿಂದ ಹುಬ್ಬೇರಿಸಿ ಹಿಂದಿರುಗುವಷ್ಟರಲ್ಲಿ ಒಳಗಿನಿಂದ ಗೌಡ ಬಂದವನೇ, ಹಳಬನನ್ನು ಕುರಿತು,

“ಬಂದಾರ ಹೌಂದಲ್ಲೋ? ಬಂದಿವಿ, ನೀ ಮುಂದ ನಡಿ” ಎಂದು ಹೇಳಿ ವನು ತೊಲೆಬಾಗಿಲು ದಾಟುವ ತನಕ ಒಡೆದು,

“ಬರ್ರಿ ದೇಸಾಯರ, ಹ್ಯಾಂಗೂ ಪೊಲೀಸರು ಬಂದಾರಲ್ಲಾ, ಇನ್ನೆಲ್ಲಿ ಆ ಮಗಾ ಅಡಗತಾನ ನೋಡೋಣು” ಎಂದು ಹಲ್ಲು ಕಡಿದು ಸಿಟ್ಟು ಪ್ರದರ್ಶಿಸಿದ. ದೇಸಾಯಿಗಿನ್ನೂ ಮಾತಿನ ಅರ್ಥವಾಗಿರಲಿಲ್ಲ.

“ಪೊಲೀಸರು, ಯಾಕ ಬಂದಾರಂದ್ರಿ?” ಅಂದ.

“ಅದs ನಾ ನಿನ್ನಿ ಹೋಗಿ ನಿಮ್ಮ ಪರವಾಗಿ ಕಂಪ್ಲೇಂಟ್ ಕೊಟ್ಟು ಬಂದಿದ್ದೆ, ಅದಕ್ಕ ಬಂದಾರ, ಬರ್ರಿ, ಹೋಗಿ ನಡೆದದ್ದೆಲ್ಲಾ ಹೇಳೋಣು”

‘ಮರ್ಯಾನ ವಿಚಾರ ಹೌಂದಲ್ಲೋ ನೀವು ಮಾತಾಡೋದು?”

“ಹೌಂದ್ರಿ”

ದೇಸಾಯಿಯ ಮುಖ ಒಮ್ಮೇಲೆ ಕಪ್ಪಿಟ್ಟಿತು.

“ನಮಗ ತಿಳಿಸದೆ ನೀವು ಪೊಲೀಸರಿಗಿ ಯಾಕ ಹೇಳಿದಿರಿ?”

“ನಿನ್ನಿ ಮಾತಾಡಿಕೊಂಡಿದ್ದಿವಲ್ಲ, ದಿನಕಾರ್ಯೆ ಮುಗೀಲಿ, ನೋಡೋಣಂತ ನೀವs ಹೇಳಿದ್ದಿರಿ.”

“ಹಾಂಗಂದ್ರ ಹೋಗಿ ಹೇಳೇ ಬಿಡೋದೇನ್ರಿ, ನಾವಿನ್ನ ಮರ್ಯಾನ ಜೋಡಿ ಮಾತಾಡಿ ವಿಚಾರ ಮಾಡೋಣಂತ ಇದ್ದಿವಿ”

“ಛೇ! ನೀವೊಬ್ಬರು, ಅವಗ ನಿಮ್ಮ ಅಂಜಿಕಿ ಇದ್ದಿದ್ದರ ನಿಮ್ಮ ಅರಮನ್ಯಾಗ ಹಿಂದ ಕದ್ಯಾಕಾಗತಿತ್ತೇನ್ರಿ? ಕಳ್ಳತನ ಮಾಡ್ಯಾನಂದ ಮ್ಯಾಲ ಅವಗೊಮ್ಮಿ ಬುದ್ಧಿ ಕಲಿಸಬೇಕಂತೀರೋ ಬ್ಯಾಂಡತಿರೋ? ನೀವು ಬಂದು ಚಾವಡ್ಯಾಗ ಸುಮ್ಮನ ಕುಂದರ್ರಿ. ಮುಂದಿಂದ ನಾ ಎಲ್ಲಾ ನೋಡಿಕೋತಿನಿ. ಆ ಪೋಜುದಾರ ನನ್ನ ದೋಸ್ತಿ, ನೀವೇನೂ ಕಾಳಜಿ ಮಾಡಬ್ಯಾಡ್ರಿ.”

ವಿಪರೀತ ಕಳವಳ, ಅವಮಾನಗಳೆಲ್ಲಾ ಒಟ್ಟಾಗಿ ಆದಂತೆ ದೇಸಾಯಿ ಸೊಟ್ಟ ಮುಖ ಮಾಡಿದ. ಅದೆಲ್ಲಾ ಕೋಪಕ್ಕೆ ತಿರುಗಿ, ಮರ್ಯಾನ ಮೇಲಿದ್ದ ಕೋಪವೂ ಈಗ ಗೌಡನ ಮೇಲೆ ತಿರುಗಿದವು. ತಮ್ಮ ಅರಮನೆಯ ವ್ಯವಹಾರದಲ್ಲಿ ಗೌಡ ಈ ರೀತಿ ತನ್ನ ಹೊಲಸು ಮೂಗು ಹಾಕುವುದು ಅವನ ಮನಸ್ಸಿಗೇ ಬರಲೇ ಇಲ್ಲ. ಉಕ್ಕಿ ಬರುತ್ತಿದ್ದ ಸಿಟ್ಟನ್ನು ನಿಯಂತ್ರಿಸಿಕೊಂಡು,

“ನೋಡ್ರಿ ಮಾವ, ಪೊಲೀಸು ಗೀಲೀಸು ಅಂದರೆ ನಮಗಾಗಿ ಬರೋಣಿಲ್ಲ. ಅದೇನ ಹೇಳಿಕೊಳ್ತಿರೋ ನೀವs ಹೇಳಿಕೊಳ್ರಿ.ಈ ಊರಾಗಂತೂ ಕಳುವಾಗೋದು ಶಕ್ಯs ಇಲ್ಲ. ಕಳುವಾದರೂ ಪೊಲೀಸರಿಗೂ ನಮಗೂ ಆಗಾಣಿಲ್ಲ, ಆಯ್ತು ಹೇಳೀರಲ್ಲ ಹೋಗ್ರಿ, ಕಳವಾದ ಬಳಿ ಸಿಕ್ಕಾವಂತ ಹೇಳಿ ಬರ್ರಿ.”

“ಅಲ್ಲರೀ ದೇಸಾಯರ…..”

“ಅಲ್ಲರೀ ಬ್ಯಾಡ, ಪಲ್ಲರೀ ಬ್ಯಾಡ, ಹೋಗಿ ನೀವಿಷ್ಟ ಹೇಳಿಬರ್ರಿ”

“ಇದರಾಗ ನನ್ನ ಹಿತ ಏನೈತ್ರಿ ದೇಸಾಯರ?”

“ನಮ್ಮ ಹಿತ ಅಂತೂ ಖಂಡಿತ ಇಲ್ಲ.”

– ಎಂದು ಸ್ಪಷ್ಟವಾಗಿ ಹೇಳಿ ಅರ್ಧ ಗೌಡನ ಅಧಿಕ ಪ್ರಸಂಗತನಕ್ಕೆ, ಅರ್ಧ ತನ್ನ ನಿಸ್ಸಹಾಯಕತೆಗೆ ಉಗುಳಿಕೊಂಡಂತೆ “ಛೇ!” ಅಂದ. ಅಂದು, ಹಿಂದೆ ಕೈಕಟ್ಟಿಕೊಂಡು ಅತ್ತಿತ್ತ ಅಡ್ಡಾಡತೊಡಗಿದ. ತನ್ನ ಮುಂಜಾಗರೂಕತೆಗಾಗಿ ದೇಸಾಯಿಯಿಂದ ಭೇಷ್ ಅನ್ನಿಸಿಕೊಳ್ಳಬೇಕೆಂದಿದ್ದನೋ, ಅಥವಾ ದೇಸಾಯಿ ತನ್ನ ಮಾತು ತೆಗೆದು ಹಾಕಲಾರನೆಂಬ ಆತ್ಮ ವಿಶ್ವಾಸಕ್ಕೆ ಘಾತವಾಯಿತೆಂದೋ ಏನೋ ಗೌಡನಿಗೆ ನಿರಾಸೆಯಾಗಿ ಮುಖ ಪೆಚ್ಚಾಯಿತು. ಅಲ್ಲೇ ಬಾಗಿಲ್ಲಿ ಇದನ್ನೆಲ್ಲ ಕೇಳುತ್ತ ನಿಂತಿದ್ದ ಗೌಡ್ತಿಯ ಕಡೆ ಮುಖ ಮಾಡಿ “ನೀನಾದರೂ ಬುದ್ದಿ ಹೇಳ” ಎಂಬಂತೆ ನೋಡಿದ. ಇದೇ ಸಮಯವೆಂದು ನಾನು ಅಂತಸ್ತಿಗೆ ಓಡಿಹೋದೆ.

ಅಲ್ಲಿ ಸಿಂಗಾರೆವ್ವ ಇರಲಿಲ್ಲ. ಜಳಕಕ್ಕೆ ಹೋಗಿರಬೇಕೆಂದುಕೊಂಡು ತಿರುಗಿ ಬರುತ್ತಿದ್ದೆ. ಸಿಂಗಾರೆವ್ವನೇ ಜಿನೆಯೇರಿ ಬರುತ್ತಿದ್ದಳು. ಮುಖ ಕಳೆಗುಂದಿತ್ತು. ಕಾಲಲ್ಲಿ ಶಕ್ತಿ ಕೂಡ ಇರಲಿಲ್ಲ. ತುದಿ ಮೆಟ್ಟಿಲ ಬಳಿ ನಿಂತು ನನ್ನ ಕೈಹಿಡಿದೇ ಒಳಕ್ಕೆ ಬಂದಳು. ಬಂದವಳೇ “ಶೀನಿಂಗೀ, ಮರ್ಯಾ ಕೊಟ್ಟಿಗ್ಯಾಗ ನಿಂತಿದ್ದ” ಎಂದಳು. ನನ್ನೆದೆ ಧಸಕ್ಕನೆ ಕುಸಿಯಿತು, ಇದಕ್ಕೆಲ್ಲ ನಾನೇ ಕಾರಣವೆಂದು ಅವನಿಗೆ ತಿಳಿಯುವುದು ತಡವಾಗಲಿಕ್ಕಿಲ್ಲ. ಒಮ್ಮೆ ತಿಳಿದರಾಯ್ತು. ಅವನ ಕೋಪಕ್ಕೆ ಗುರಿಯಾಗುವವರು ಇಬ್ಬರೇ, ನಾನು ಮತ್ತು ಗೌಡ, ಅವನು ಒಮ್ಮೆ ಕೋಪಗೊಂಡರೆ ಮನುಷ್ಯರಲ್ಲಿ ಇರುವುದೇ ಇಲ್ಲ. ಬಾಯೊಣಗಿ ಹೋಯ್ತು.

“ಏನಂದ ಎವ್ವಾ?” ಅಂದೆ.

“ನನ್ನ ಹಾಟ್ಯಾ ಮರೀಗಿ ನಿಂತ ಅವರಿಬ್ಬರು ಮಾತಾಡೋದನ್ನ ಕೇಳ್ತಾ ಇದ್ದ. ನಮ್ಮಪ್ಪ ಮತ್ತ ದೇಸಾಯಿ ಏನೇನ ಮಾತಾಡಿದರು?”

ಅದನ್ನೆಲ್ಲ ವಿವರವಾಗಿ ಹೇಳುವಷ್ಟು ಶಕ್ತಿ ನನ್ನಲ್ಲಿರಲಿಲ್ಲ.

“ಮರ್ಯಾನ ಹಿಡ್ಯಾಕ ಪೊಲೀಸರು ಬಂದಾರೆವ್ವ” ಅಂದೆ.

ಪೊಲೀಸರೆಂದೊಡನೆ ಇವಳ ಮುಖ ಇದ್ದದ್ದೂ ವಿವರ್ಣವಾಯಿತು.

“ಪೊಲೀಸರಾ!” ಎಂದು ತಂತಾನೇ ಅಂದುಕೊಂಡು ಕಣ್ಣು ಅಗಲಗೊಳಿಸಿ, ಎರಡೂ ಕೈ ಎದೆಯ ಮೇಲಿಟ್ಟುಕೊಂಡು ಹಾಗೇ ಹಾಸಿಗೆಯ ಮೇಲೆ ಕುಸಿದಳು. ಅವಳು ತುಟಿ ಒಣಗಿ ಕಂಪಿಸುತ್ತಿದ್ದವು. “ಶೀನಿಂಗೀ ದೇಸಾಯರ‍್ನ ಕರಿ” ಎಂದಳು.

ಕೆಳಗೋಡೀ ದೇಸಾಯರನ್ನು ಕರೆದೆ. ಗೌಡ ಇರಲಿಲ್ಲ. ಚಾವಡಿಗೆ ಪೊಲೀಸರಿದ್ದಲ್ಲಿಗೆ ಹೋಗಿದ್ದನೋ ಏನೋ. ದೇಸಾಯಿ ಕಂಡ ತಕ್ಷಣವೇ ಬಂದ. ಅವನ ಬೆನ್ನ ಹಿಂದೆ ನಾನೂ ಬಂದು ದೂರದಲ್ಲಿ ನಿಂತುಕೊಂಡೆ. ಸಿಂಗಾರೆವ್ವ ಓಡಿಹೋಗಿ ದೇಸಾಯರ ಎರಡೂ ಕೈ ಹಿಡಿದುಕೊಂಡು, ಹೆದರಿದ ಮಗು ಎತ್ತರದ ದನಿಯಲ್ಲಿ ಮಾತಾಡುವಂತೆ “ನೋಡ್ರಿ, ನೀವು ಇಂದ ಹೊರಗ ಹೋಗೂದು ಬ್ಯಾಡ. ಹೋದರ ನನ್ನಾಣಿ ಆಗೇತಿ ನೋಡ್ರಿ ಮತ್ತ. ಇಲ್ಲೇ ಮಲಗಿ ಬಿಡ್ರಿ. ಅಪ್ಪಿತಪ್ಪಿ ಹೋದರ ನನ್ನನ್ನ ಕೊಂದು ರಕ್ತಾ ಕುಡಧಾಂಗ ಅಗತೈತಿ ನೋಡ್ರಿ” ಎಂದು ಒಂದೇ ಉಸಿರಿನಲ್ಲಿ ಹೇಳಿಬಿಟ್ಟಳು. ದೇಸಾಯಿಗೆ ಹೋಯ್ಯಾಯ್ತು. ಹುಬ್ಬು ಗಂಟಿಕ್ಕಿ ಅವಳನ್ನೇ ನೋಡುತ್ತ “ಅದ್ಯಾಕ” ಎಂದು ಏನೋ ಹೇಳಬೇಕೆಂಬಷ್ಟರಲ್ಲಿ ಸಿಂಗಾರೆವ್ವ “ಈ ಸ್ತರೆ ನೀವು ನನ್ನ ಮಾತ ಕೇಳಾಕs ಬೇಕ್ರಿ, ಬೇಕೆಂದರ ಇಲ್ಲೇ ಶೆರೆ ತರಿಸಿ ಕುಡೀತಿ. ನಮ್ಮಪ್ಪ ಪೊಲೀಸರಿಗಿ ಹೇಳ್ಯಾನ. ಅವೇನು ಮಾಡಿಕೊಳ್ತಾನೊ ಮಾಡಿಕೊಳ್ಲಿ. ನೀವು ಮಾತ್ರ ಹೋಗಬ್ಯಾಡ್ರಿ” ಎಂದು ಅವನಿಗೆ ಮಾತೀನ ಅವಕಾಶ ಕೊಡದೆ ಹೇಳಿದಳು. ಇನ್ನಿವಳು ಏನು ಹೇಳಿದರೂ ಮಾತು ಕತ್ತರಿಸುತ್ತಾಳೆಂದು ಗೊತ್ತಾಗಿ ದೇಸಾಯಿ “ಆಯ್ತು” ಎಂದು ಹೇಳಿ ಅವಳನ್ನೇ ಆಶ್ಚ್ವರ್ಯದಿಂದ ನೋಡುತ್ತ ಕೂತ. ನಾನು ಅಡಿಗೆ ಮನೆಗೆ ಹೋದೆ.

ಜಗತ್ತಿನಲ್ಲಿ ನೀನು ಬೇಕಾದಂಥ ಥರಾವರಿ ಜನರನ್ನು ಕಾಣಬಹುದು. ಆದರೆ ಗೌಡನಂಥ ನಿರ್ಲಜ್ಜನನ್ನು ಕಾಣುವುದು ಸಾಧ್ಯವೇ ಇಲ್ಲ. ಅದಾಗಿ ಅರ್ಧ ಗಂಟೆಯಾಗಿರಬಹುದು. ನಾನು ರೊಟ್ಟಿ ಬಡಿಯುತ್ತಿದ್ದೆ. ನಿಂಗವ್ವ ಗೌಡ್ತಿ ಗಾಬರಿಯಲ್ಲಿ ಬಂದು ನನ್ನ ಕಿವಿಯಲ್ಲಿ “ಪೊಲೀಸರು ಇಲ್ಲಿಗೇ ಬಂದಾರಗ” ಎಂದು ಹೇಳಿದಳು. ನನ್ನ ಅಂಗಾಲಿನಿಂದ ನೆತ್ತಿಯ ತನಕ ಮೈ ಭಗ್ಗೆಂದು ಉರಿಯಿತು. ಗೌಡನ್ನ  ನೆನೆದು ಅವುಡುಗಚ್ಚಿದೆ. “ಮೊದಲು ಇಲ್ಲಿಂದ ಕಾಲ್ತಗಿ. ಅಲ್ಲಿ ಹೇಲು ತಿಂದದ್ದು ಸಾಲಗೆ ಇಲ್ಲಿಗೂ ಬಂದೇನೋ ಶನಿ?” ಎಂದು ಎದುರಿಗೆ ಗೌಡ ನಿಂತಿದ್ದಾನೆಂಬಂತೆ ಅಂದು ರಭಸದಿಂದ ರೊಟ್ಟಿ ಹಿಟ್ಟಿಗೆ ಹೊಡೆದೆ. ಒಲೆಯ ಮೇಲಿದ್ದ ರೊಟ್ಟಿಯೊಂದು ಹೊತ್ತಿ ಹೋಯ್ತು. ರೊಟ್ಟಿ ಬಡಿಯುವುದನ್ನು ಬಿಟ್ಟು ಕೈಕೂಡ ತೊಳೆಯದೆ ಎದ್ದು ಬಂದು ದರ್ಬಾರಿನಲ್ಲಿ ಹಣಿಕಿ ಹಾಕಿದೆ. ಒಬ್ಬ ಪೋಜುದಾರ, ಇಬ್ಬರು ಪೊಲೀಸರಿದ್ದರು. ಜೊತೆಗಿಬ್ಬರು ಊರಿನ ಹಿರಿಯರಿದ್ದರು. ಗೌಡ ಪೆಚ್ಚುಮೋರೆ ಹಾಕಿ ಕುಂತಿದ್ದ. ದೇಸಾಯಿ ನಿಂತ ನಿಲುವಿನಲ್ಲೇ ಹೇಳುತ್ತಿದ್ದ –

“ನೋಡ್ರಿ ನಮ್ಮ ಊರಾಗ ಎಂದೆಂದೂ ಕಳವಾಗಾಕ ಶಕ್ಯ ಇಲ್ಲ. ನಮ್ಮ ಮಾವನವರೇನೋ ನಿಮಗೆ ಬಂದ ಹೇಳಿರಬೇಕು. ಅವರಾಗಲೇ ಹೇಳಿದಾಂಗ ನಮಗಿನ್ನೂ ಬಳಿ ಸಿಕ್ಕಿಲ್ಲ ಖರೆ. ಅದರ ಅವು ಕಳುವಾಗ್ಯಾವಂತ ನಮಗ ಅನ್ನಿಸಿಲ್ಲ. ಇಂದಿಲ್ಲ ನಾಳಿ ಸಿಕ್ಕೇ ಸಿಗತಾವ.”

ಪೋಜುದಾರನಿಗೆ ದೇಸಾಯಿಯ ಮಾತು ಸರಿ ಬರಲಿಲ್ಲ.

“ಮರ್ಯಾ ಅಂಬಾವೆಲ್ಲಿದ್ದಾನ?”

“ನಮಗ್ಗೊತ್ತಿಲ್ಲ. ಅದರ ಬಳಿ ಕಳವಾಗಿಲ್ಲಂತ ನಾವs ಹೇಳತೀವಲ್ಲ”

“ಒಂದು ಸಲ ಅವನ್ನ ವಿಚಾರಿಸಬಹದಲ್ಲ?”

“ವಿಚಾರಿಸಬೇಕಾದವರು ನಾವು, ನೀವಲ್ಲ”

ಅಷ್ಟರಲ್ಲಿ, ಊರಿನ ಹಿರಿಯ ಮುದುಕ ಬಾಯಿ ಹಾಕಿದ.

“ಮಾರಾಜರು ಹೇಳೋದು ಬರೋಬರಿ ಐತ್ರಿ. ಕಳುವಾಗಿಲ್ಲಂತ ಅವರs ಹೇಳತಾರ. ನೀವ್ಯಾಗಿ ಮ್ಯಾಲಬಿದ್ದ ಕೇಸ ಹಾಕೋದಂದರ ತಪ್ಪಲ್ಲ?”

ತಕ್ಷಣ ಗೌಡ ಅವರ ಕಡೆ ಕೈಮಾಡಿ “ನಿಮಗ ತಿಳಿಯಾಣಿಲ್ಲ, ಸುಮ್ಮನಿರ್ರಿ” ಅಂದ.

“ಮಾವನವರs, ಎಷ್ಟ ಹೇಳಿದರೂ ನಿಮ್ಮ ಹಟ ಬಿಡವೊಲ್ಲಿರಿ. ಏನಾಗೇತಿ ನಿಮಗ? ಖರೆ ಹೇಳ್ತಿನಿ, ನಮ್ಮ ಅರಮನೆ ವ್ಯವಹಾರದಾಗ ಇನ್ನೊಬ್ಬರು ಕೈಹಾಕೋದನ್ನ ನಾವು ಸಹಿಸೋದಿಲ್ಲ.”

“ಬೀಗರಂದ ಮ್ಯಾಲ ಒಬ್ಬರಿಗೊಬ್ಬರು ಆಗದs ಇರಾಕ ಆದೇತೇನ್ರಿ, ದೇಸಾಯರ? ನಿಮ್ಮ ಮನ್ಯಾಗ ಕಳವಾದದ್ದೂ ಒಂದ, ನಮ್ಮ ಮನ್ಯಾಗ ಕಳವಾದದ್ದೂ ಒಂದ. ಒಬ್ಬ ಯಃಕಶ್ಚಿತ ಹೊಲೆಯಾ ಅರಮನ್ಯಾಗಿನ ಬಂಗಾರ ಬಳಿ ಕದಿಯೋದಂದರ ಸಾಮಾನ್ಯ ಮಾತೇನ್ರಿ? ನಾ ಮಾಡಿದ್ದಾದರೂ ಎದಕ್ಕ? ಸಿಂಗಾರೆವ್ವ ಹೇಳಿದಳಂತ..”

ದೇಸಾಯಿ ಈ ತನಕ ನಿಯಂತ್ರಿಸಿದ ಕೋಪವೆಲ್ಲ ಹೊರಗುಕ್ಕಿತು. ಎದೆಯ ನೆತ್ತರೆಲ್ಲ ತಲೆಗೇರಿ ಮುಖ ಕೆಂಪಗೆ ಕೆಂಜಗದಂತಾಯ್ತು. ತುಟಿ ಕಂಪಿಸಿದವು. ಉಸಿರಾಡಿಸುವುದೂ ಕಷ್ಟವಾಯ್ತೇನೋ, ಮೂಗಿನ ಹೊರಳೆಗಳನ್ನು ಅಗಲಗೊಳಿಸಿ “ಖಬರ್‌ದಾರ್!” ಅಂದ. “ಮಾವನವರ, ಅವರು ನಿಮ್ಮ ಮಗಳಾಗಿರಬಹುದು, ಅದರ ಅವರು ಈ ಅರಮನೆಯ ದೊರೆಸಾನಿ. ದೊರೆಸಾನಿಯವರ ಮಾತು ಇನ್ನೊಮ್ಮಿ ಈ ಮಂದ್ಯಾಗ ಎತ್ತಿದರ ನಾವು…ನಾವು ನಿಮಗ ಏನೇನೋ ಅಂದರ ಏನೇನೋ ಹೇಳಬೇಕಾಗತದ. ನಮ್ಮ ಅರಮನ್ಯಾಗ ಏನ ಆದರೂ ನೋಡಿಕೊಳ್ಳಾಕ ನಾವಿದ್ದೀವಿ. ನಮಗ್ಯಾರ ಸಹಾಯ ಬೇಕಿಲ್ಲ. ಈಗಲೂ ಹೇಳತೀನಿ ನಮ್ಮಲ್ಲಿ ಬಳಿ ಕಳವಾಗಿಲ್ಲ. ಕಳವಾಗ್ಯಾವ ಅನ್ನೋಣ, ಅದಕ್ಕಾಗಿ ನಮಗೆ ಕಾಳಜೀ ಇಲ್ಲ. ಇಪ್ಪತ್ತೆರಡು ಸಾವಿರ ಎಕರೆ ಜಮೀನ ದಾನಮಾಡಿದ ದಾನಶೂರ ಸಂಸ್ಥಾನ ನಮ್ಮದು. ಅವೆರಡು ಬಳಿಗಾಗಿ ಅಗ್ಗ ಆಗೋಣಂತೀರೇನು? ನನಗ ಜನ ಗೊತ್ತು, ಮರ್ಯಾನೂ ಗೊತ್ತು. ಅವನೂ ನಾನೂ ಮುಖಾಮುಖಿ ಮಾತಾಡಿಕೊಳ್ತೀವಿ. ದಯಮಾಡಿ ನೀವು ಅವರ‍್ನ ಮೊದಲಿಲ್ಲಿಂದ ಕಳಿಸಿ ಬರಬೇಕು” ಎಂದು ಹೇಳಿ ಅಲ್ಲಿ ನಿಲ್ಲದೆ ಒಳಗೆ ಹೋಗಲಿದ್ದ. ಅಷ್ಟರಲ್ಲಿ ಪೋಜದಾರ ಅಧಿಕಾರ ದರ್ಪದಿಂದ ಆದರೆ ಪರಿಣಾಮಕಾರಿಯಾಗಿ ಮಾತಾಡಿದ:

“ದೇಸಾಯರ, ನಿಮ್ಮ ಮನೀಗೆ ಬರೂ ಮೊದಲ ಅವ, ಎಷ್ಟ ಖೂನಿ ಮಾಡಿ ಪರಾರಿ ಆಗ್ಯನಂತ. ನಿಮಗೇನಾದರೂ ಗೊತ್ತದ ಏನು? ನಿಮ್ಮ ಮನ್ಯಾಗ ಬಳಿ ಕಳವಾಗದಿದ್ದರೆ ಬ್ಯಾಡ, ಆದರ ಬ್ಯಾರೆ ಕೇಸಿನಾಗ ಸಿಕ್ಕಾನ. ಅದಕ್ಕs ಅವ ನಮಗಬೇಕು. ಎಲ್ಲಿ ಅಡಗ್ಯಾನ ಹೇಳ್ರಿ”

ಈಗ ದೇಸಾಯಿ ತಣ್ಣಗಾದ. ಒಳಗಿನ ಗಾಬರಿಯನ್ನು ತೋಡಗೊಡದೆ “ನಮಗ್ಗೊತ್ತಿಲ್ಲ” ಎಂದು ಹೇಳಿ ಪೋಜುದಾರನ ಮುಖವನ್ನೇ ಮಳಮಳ ನೋಡಿದ. ಗೌಡನ ಮುಖವೀಗ ಕಳೆ ಏರಿತು. ಪೋಜುದಾರ ಮತ್ತೆ ಹೇಳಿದ –

“ಮತ್ತ ನಿಮಗಿದೂ ನೆನಪಿರಲಿ, ಒಂದಿಲ್ಲೊಂದು ದಿನ ಮರ್ಯಾ ನಮ್ಮ ಕೈಗಿ ಸಿಕ್ಕs ಸಿಗತಾನ. ನೀವು ಅವನ್ನ ಮನ್ಯಾಗಿಟ್ಟಕೊಂಡರ  ನಾಳಿ ನೀವೂ ಅವನ ಕೇಸಿನಾಗ ಸಿಗಬೀಳ್ತಿರಿ. ಗೌಡರ ಅಳಿಯಂದಿರು ಅಂತ ನಿಮಗ ಈ ಮಾತ ಹೇಳೇನಿ. ಮುಂದಿಂದು ನಿಮ್ಮ ಜವಾಬ್ದಾರಿ”

– ಎಂದು ಹೇಳಿ ಎದ್ದ, ದೇಸಾಯಿ ಪೆಚ್ಚಾದ.

ಮರ್ಯಾ ಅನೇಕ ಖೂನಿ ಮಾಡಿದ್ದು, ಬೇರೆ ಕೇಸುಗಳಲ್ಲೂ ಸಿಗಬಿದ್ದದ್ದು ಇವೆಲ್ಲ ದೇಸಾಯಿಗೆ ಗೊತ್ತಿರಲಿಲ್ಲ. ಇವೇ ಆಪಾದನೆಗಳನ್ನು ಗೌಡ ಹೇಳಿದ್ದನಾದರೂ ನಂಬಿರಲಿಲ್ಲ. ಈಗ ಪೊಲೀಸರೇ ಹೇಳಿದ್ದರಿಂದ ನಂಬಿದ.

ನಂಬಿದನೋ ಅಥವಾ ಪೊಲೀಸರಿಗೆ ಬೆದರಿದನೋ, ಅಂದೇ ಸಂಜೆ ಮರ್ಯಾ ಸಿಕ್ಕೊಡನೆ –

“ನೋಡೊ ಮರ್ಯಾ, ನಿನ್ನ ಮ್ಯಾಲ ಅವೇನೋ ಭಾಳ ಕೇಸದಾವಂತ. ನಿನ್ನಿಂದಾಗಿ ಪೊಲೀಸರ ಕಣ್ಣು ನಮ್ಮ ಅರಮನಿ ಮ್ಯಾಲೂ ಬಿದ್ದಾವ. ಅದೆಲ್ಲಾ ನಮಗೆ ಬರೋಬರಿ ಕಾಣ್ಸಾಕಿಲ್ಲ. ನೀ ಇನ್ನಮ್ಯಾಲ ನಮ್ಮ ಅರಮನ್ಯಾಗ ಇರಬ್ಯಾಡ”

– ಎಂದು ಹೇಳಿದ. ಮರ್ಯಾನಿಗೀ ಮಾತು ಅನಿರೀಕ್ಷಿತವಾಗಿತ್ತು. ಉಗುರು ಕಚ್ಚುತ್ತ ನನ್ನ ಕಡೆಗೊಮ್ಮೆ ದೇಸಾಯಿಯ ಕಡೆಗೊಮ್ಮೆ ನೋಡಿ ಹೋಗಿಬಿಟ್ಟ. ದೇಸಾಯಿ ಮರ್ಯಾನ ಬಗೆಗಿನ ಪ್ರೀತಿಯನ್ನು ಇಷ್ಟು ಬೇಗ ಕಳಕೊಂಡಾನೆಂದು ನನಗೆ ಅನ್ನಿಸಿರಲಿಲ್ಲ.

* * *