ಅದರ ಮಾರನೇ ದಿನ ಅಂದರೆ ಶೀಗೀ ಹುಣ್ಣಿಮೆಯ ದಿನ ಬೆಳಿಗ್ಗೆಯೇ ಗೌಡ ನಂದದಾಂವಿಗೆ ಹೋದ. ಹಬ್ಬದ ದಿನವೆಂದರೂ ಕೇಳಲಿಲ್ಲ. ನಿಂಗ ತೋಟಕ್ಕೆ ಹೋಗಿ ಚರಗ ಚೆಲ್ಲಿ ಬಂದಿದ್ದ. ಆ ದಿನ ದೇಸಾಯಿ ತೋಟಕ್ಕೆ ಬರುವುದಿಲ್ಲವೆಂದು ಹೇಳಿದ್ದರಿಂದ ಮನೆಯಲ್ಲೇ ಅವನಿಗೆ ಊಟಕ್ಕೆ ನೀಡಿ, ನಾವು ಹೆಡಿಗೆ ತುಂಬಿಕೊಂಡು ತೋಟಕ್ಕೆ ಹೋಗಲು ಸಿದ್ದರಾದೆವು. ಸಿಂಗಾರೆವ್ವ ತಲೆ ಬಾಚಿಕೊಂಡು ಚಂದ್ರಕಾಳಿ ಸೀರೆ ಉಟ್ಟಳು. ಕೈಬಳೆ ಮತ್ತು ತನ್ನ ಅತ್ತೆಯ ನಡುಪಟ್ಟಿಯನ್ನೂ ಧರಿಸಿ ಮ್ಯಾಲೊಂದು ಬುರುಕಿ ಹಾಕಿಕೊಂಡಳು. ನನಗೂ ತನ್ನದೊಂದು ಇಳಕಲ್ ಸೀರೆಕೊಟ್ಟಳು. ಕೊಲ್ಲಾರಿ ಬಿಗಿದು ನಿಂಗ ಚಕ್ಕಡಿ ಹೂಡಿದ. ಗಾಡಿ ಹತ್ತಿದೆವು.

ಸಿಂಗಾರೆವ್ವನಿಗೆ ಏನೊಂದು ಖುಷಿ, ಎಷ್ಟೊಂದು ಉಮೇದಿ! ಊರು ದಾಟಿದೊಡನೆ ಮತ್ತು ಅಂತಸ್ತಿನ ಕಿಡಕಿಯಿಂದ ಕಾಣೋ ವಿವರಗಳನ್ನೆಲ್ಲ ನನಗೆ ತೋರಿಸತೊಡಗಿದಳು. ನಾನು ಕಂಡರಿಯದ ಸ್ಥಳವೇನಲ್ಲ ಅದು. ಆದರೆ ಆಕೆ ಕಣ್ಣರಳಿಸಿಕೊಂಡು ಅದನ್ನೋಡs ಇದನ್ನೋಡs ಎಂದು ಕೈಮಾಡಿ ತೋರಿಸುತ್ತಿರುವಾಗ ನಾನು ಅದಾವುದನ್ನೂ ನೋಡದೆ ಅವಳನ್ನೇ ನೋಡುತ್ತಿದ್ದೆ. ದೊರೆಸಾನಿಯ ಉದ್ಗಾರಗಳಿಂದ ನಿಂಗನೂ ಸಡಗರಗೊಂಡ.

ನಮ್ಮ ತೋಟ ಇನ್ನೂ ಚೆನ್ನಾಗಿ ಬೆಳಿದಿತ್ತು. ಭರ್ತಿ ಬೆಳೆಯ ಹೊಲಗದ್ದೆಗಳ ಹಸಿರು ಫಳಫಳ ಹೊಳೆಯುತ್ತಿತ್ತು. ಕಣ್ಣು ಹರಿದಲ್ಲೆಲ್ಲ ನೆಲದ ಉಲ್ಲಾಸ ಹಸಿರಾಗಿ ಉಕ್ಕಿದಂತೆ ಕಾಣುತ್ತಿತ್ತು. ಒಂದೊಂದು ಬೆಳೆ ಒಂದೊಂದು ಥರ ಹಸಿರಾಗಿತ್ತು. ನಿಚ್ಚಳವಾದ ಬಿಸಿಲು ಹಸಿರಿನ ಗರಿಗಳ ಅಂಚಿಗೆ ಬಂಗಾರದ ಗಿಲೀಟಿನ ಗೆರೆ ಕೊರೆದಂತೆ ಅಂಟಿಕೊಂಡಿತ್ತು. ಗಾಳಿ ಬೀಸಿದಾಗ ಈ ಗೆರೆಗಳು ಹೊಯ್ದಾಡಿ, ತಳಕಾಡಿ, ಕಣ್ಣಿಗೆ ಥರಾವರಿ ನಕ್ಷೆಗಳ ಇಂದ್ರಜಾಲವನ್ನೇ ಹರಡುತ್ತಿದ್ದವು. ಕೊಬ್ಬಿದ ಬೆಳೆಗಳಿಗೆ, ಅವುಗಳ ಹುಡಿಗೆ ತಾಗಿದ ತಂಗಾಳಿ ಅಲೆಅಲೆಯಾಗಿ ಬೀಸಿ ಸುಖೋನ್ಮಾದದ ಸುವಾಸನೆ ಬೀರಿ ಮೈಮನಸ್ಸಿಗೆ ಹಿತಕಾರಿಯಾಗಿತ್ತು. ಈ ಊರಿನಲ್ಲಿ ತರತರದ ಹಕ್ಕಿಗಳಿದ್ದದ್ದು ನಮಗೆ ಗೊತ್ತಾದದ್ದೇ ಈಗ. ನಾವು ಕಂಡರಿಯದ, ಹೆಸರು ಕೇಳರಿಯದ ಅನೇಕ ಹಕ್ಕಿಗಳು ನಾನಾ ನಮೂನೆಯ ದನಿ ಮಾಡಿ ಕೂಗುತ್ತಿದ್ದವು.

ಆಳುಗಳ ಊಟವಾದ ಮೇಲೆ ನಾವು ಕೂತೆವು. ಸಿಂಗಾರೆವ್ವ, ಬುರುಕಿ ತೆಗೆದಳು. ಎಂಥಾ ಚೆಲುವೆ ನಮ್ಮ ಸಿಂಗಾರೆವ್ವ! ದಿನಾ ನೋಡುತ್ತಿದ್ದೆನಲ್ಲ ಅವಳಿಂಥಾ ಚೆಲುವೆ ಎಂದು ನನಗೆ ಅನ್ನಿಸಿರಲಿಲ್ಲ. ಅಥವಾ ಅರಮನೆಯ ಹೊರಗೆ ಇಂಥ ಹಸಿರಿನಲ್ಲಿ ಅವಳನ್ನು ನೋಡಿರಲಿಲ್ಲ, ಈಗ ನೋಡಿ ಅಶ್ಚರ್ಯವಾಗಿ ಅಬ್ಬಾ! ಎನಿಸಿತು. ಚಂದ್ರಕಾಳಿ ಸೀರೆಗೂ ಅವಳ ಕೆಂಪು ಮೈಗೂ ಪಸಂದಾಗಿ ಹೊಂದಾಣಿಕೆಯಾಗಿತ್ತು. ಬಿಸಿಲಿಗಾಗಲೇ ಅವಳ ಕೆನ್ನೆ ಕೆಂಪಾಗಿ ಹಣೆ, ಮೂಗಿನಲ್ಲಿ ತಿಳಿ ಬೆವರು ಮೂಡಿತ್ತು. “ದೇವಿ ಕಂಡ್ಹಾಂಗ ಕಾಣ್ತೀಯವ್ವ” ಎಂದೆ. ಅದರಿಂದ ಅವಳಿಗೂ ಸಂತೋಷವಾಗಿ ಹುಸಿಕೋಪ ತೋರಿದಳು.

ಅಷ್ಟರಲ್ಲಿ ದೊರೆಸಾನಿ ಬಂದಾಳೆಂದು ಗೊತ್ತಾಗಿ ಅಕ್ಕಪಕ್ಕದ ಕೆಲವು ಹೆಂಗಸರು ಮಕ್ಕಳನ್ನು ಹೊಲಗಳಲ್ಲೇ ಬಿಟ್ಟು ನೋಡ ಬಂದರು. ಸಿಂಗಾರೆವ್ವ ಮತ್ತೆ ಬುರುಕಿ ಹಾಕಿಕೊಂಡಳು. ಬಂದವರಿಗೂ ವಡೆ, ಹೊಳಿಗೆ ಹಂಚಿದೆವು. ಜನರ ಉಲಿವು ಕಮ್ಮಿಯಾದ ಮೇಲೆ ತಿರುಗಾಡಿ ತೋಟ ನೋಡಿಕೊಂಡು ಬರಲು ಹೊರಟೆವು. ನಮ್ಮ ಹಿಂದೆ ಹಿಂದೆ ಕೇಳಿದ್ದಕ್ಕೆಲ್ಲ ಉತ್ತರಕೊಡುತ್ತ ನಿಂಗನೂ ಬೆನ್ನು ಹತ್ತಿದ.

ಗದ್ದೆ ದಾಟಿದೊಡನೆ ಬಾವಿಯ ಹೊಲ ಸಿಕ್ಕಿತು. ಅದಾಗಿ ಸೇಂಗಾಬೆಳೆ ಹೊಕ್ಕೆವು. ಅದನ್ನೂ ದಾಟಿ ಜೋಳದ ಬೆಳೆ. ಆಮೇಲೆ ಹಳ್ಳದ ದಂಡೆಯ ಕಬ್ಬಿನ ಗದ್ದೆ ಸಿಕ್ಕಿತು. ಸಿಂಗಾರೆವ್ವ ಕಬ್ಬು ಬೇಕೆಂದೊಡನೆ ನಿಂಗ ಹೋಗಿ ಪಸಂದಾದ ಒಂದು ಕಬ್ಬು ಮುರಿದುಕೊಟ್ಟ. ಅದರರ್ಧ ನನಗೂ ಕೊಟ್ಟಳು. ಇಬ್ಬರೂ ತಿನ್ನುತ್ತ ಹಳ್ಳದ ನೀರಿಗಿಳಿದೆವು. ನೀರು ನೆಲಕ್ಕೆ ಅಂಟಿಕೊಂಡೇ ಹರಿಯುತ್ತಿದ್ದುದರಿಂದ ಹಳ್ಳದ ತಳದ ಸ್ವಚ್ಛವಾದ ಉಸುಕು ಬಿಸಿಲಿನಲ್ಲಿ ಹೊಳೆ ಹೊಳೆದು ಕಾಣುತ್ತಿತ್ತು. ಕಿರಿಬೆರಳಗಾತ್ರದ ಸಾವಿರಾರು ಮೀನುಗಳು ಇಷ್ಟಿಷ್ಟೇ ನೆಗೆಯುತ್ತ ಚೆಂದಾಗಿ ಈಜುತ್ತಿದ್ದವು. ನಾವು ಕಾಲಿಟ್ಟರೆ ಕಾಲಿಗೇ ಮುತ್ತಿ ಇದೇನೋ ಹೊಸಬಗೆಯ ವಸ್ತುವೆಂಬಂತೆ ಬೆರಗಿನಿಂದ ನೋಡುತ್ತ ಕೊಂಚ ಕೊಂಚ ಕುಕ್ಕಿ, ಅಪಾಯವಿಲ್ಲವೆಂದು ಖಾತ್ರಿಯಾದೊಡನೆ ಕಾಲ ಬಳಸಿ ಚೆಲ್ಲಾಟವಾಡುತ್ತಿದ್ದವು. ಮುಂದೆ ಹೆಜ್ಜೆ ಇಟ್ಟರೆ ಅಲ್ಲಿಗೂ ನುಗ್ಗುತ್ತಿದ್ದವು. ಸರಿ, ಇಷ್ಟಾದರೆ ಕೇಳಬೇಕೆ? ಸಿಂಗಾರೆವ್ವ ಮೀನುಗಳ ಜೊತೆ ಚೆಲ್ಲಾಟಕ್ಕಿಳಿದು ಪ್ರವಾಹದ ಗುಂಟ ಕುಣಿದಾಡಿದಂತೆ ಹೆಜ್ಜೆ ಇಡುತ್ತ ನಡೆದಳು.

“ಭಾಳ ದೂರ ಬಂದಿವಿ. ಇನ್ನ ತಿರುಗಿ ಹೋಗೂಣೆವ್ವ” ಅಂದೆ.

“ಇನ್ನೇನ ಸಂಜಿ ಆಯ್ತಲ್ಲ, ಹೆಂಗೂ ಆಡತಾ ಆಡತಾ ಊರ ಸನೇಕs ಬಂದಿವಿ. ನಿಂಗಾ ನೀ ಹೋಗಿ ಹೆಡಿಗಿ ಬಿಟ್ಟು ಗಾಡ್ಯಾಗಿಟ್ಟುಕೊಂಡ ನಡಿ, ನಾವು ಹಿಂಗs ನಡಕೋತ ಮನೀಗಿ ಬರ್ತೀವಿ” ಎಂದಳು. ನಿಂಗ ಆಗಲೆಂದು ಕತ್ತು ಹಾಕಿ ಹೋದ.

ಈಗಂತೂ ಇದ್ದದ್ದೂ ಸ್ವಚ್ಛಂದವಾದಳು. ಹಳ್ಳದ ನೀರಿನಲ್ಲೇ ಮುಂದೆ ಮುಂದೆ ನಡೆಯುತ್ತಿದ್ದವಳು ಗಕ್ಕನೆ ನಿಂತು “ಅಯ್ ಶೀನಿಂಗೀ, ಅಕಾ ಹುಣಸೀ ಮೆಳಿ!” ಎಂದು ಹೇಳಿ ಮೆಳೆಯಿಂದ ಸೆಳೆಯಲ್ಪಟ್ಟವಳ ಹಾಗೆ ಆ ಕಡೆ ಓಡಿದಳು. ಹೊತ್ತು ಮುಣುಗಲಿದ್ದು ಎಲ್ಲರೂ ಊರಿಗೆ ಹೋಗಿದ್ದರಿಂದ ಅವಸರದಲ್ಲೇ ಮೆಳೆ ನೋಡಿ ಬರಬೇಕೆಂದು ನಾನೂ ಓಡಿದೆ.

ಎಂಥಾ ಮೆಳೆ ಅದು! ಒಂದೊಂದೂ ಗುಡ್ಡದಂಥಾ ಮರ, ಒಂದಕ್ಕಿಂತ ಒಂದು ಎತ್ತರವಾಗಿ ಬೆಳೆದಿವೆ. ಹರಬಯಲಾಗಿ ಕೆಲವು ಬೆಳೆದಿದ್ದರೆ, ಇನ್ನು ಕೆಲವು ಒಂದಕ್ಕೊಂದಂಟಿ ಗೋಡೆ ಕಟ್ಟಿ ಸದ್ದಿಲ್ಲದೆ ನಿಂತಿವೆ. ಅಥವಾ ತಾ ಹೊಂಚಿದ್ದು ಬೇಟೆಗೆ ಗೊತ್ತಾಗದಿರಲಿ ಎಂದು ಬಲೆಹಾಕಿ ಬೇಟೆಗಾರ ನಿಶ್ಯಬ್ದವಾಗಿ ಕಾದಿರುತ್ತಾನಲ್ಲ ಹಾಗಿದ್ದವು. ಬಹುಶಃ ಹಕ್ಕಿಗಳೂ ಈ ಮೆಳೆಯೊಳಕ್ಕೆ ಬರಲು ಹೆದರುತ್ತವೆ ಏನೋ, ಅವುಗಳ ಉಲಿವೇ ಇರಲಿಲ್ಲ! ಈ ತನಕ ಬೆರಗಿನ ಪುಳಕಗಳಿಂದ ಗಾಬರಿಗೊಂಡಂತೆ ನೋಡುತ್ತಿದ್ದ ದೊರೆಸಾನಿ “ಶೀನಿಂಗೀ ಅಲ್ಲಿ ನೋಡಗs!” ಎಂದು ಮೇಲೆ ತೋರಿಸಿದಳು. ಸೂರ್ಯನ ಸಂಜೆ ಕಿರಣಗಳು ಮರಗಳ ತುದಿ ಎಲೆಗಳ ಮೇಲೆ ಬಿದ್ದು, ಅವೆಲ್ಲ ಬಿಡಿಬಿಡಯಾಗಿ ಬೆಲೆಯುಳ್ಳ ರತ್ನಗಳ ಹಾಗೆ ಕಾಣುತ್ತಿದ್ದವು. ನಾನು ಅದನ್ನೇ ನೋಡುತ್ತಿದ್ದರೆ “ಶೀನಿಂಗೀ ಇಲ್ಲಿ ನೋಡಗs!” ಎಂದು ಹೇಳಿ ಆನಂದದ ಉನ್ಮಾದದಲ್ಲಿ ನಗತೊಡಗಿದಳು. ಅಲ್ಲಿ ನೋಡಿದರೆ ಇನ್ನೊಂದು ಬಗೆಯ ಬಣ್ಣದ ನಕ್ಷತ್ರಗಳ ಜಾಲ ಥಳಥಳ ಹೊಳೆಯುತ್ತಿತ್ತು. ಬಾಲ್ಯದ ನೆನೆಪು ಮರುಕಳಿಸಿತೇನೋ ಒಂದೊಂದು ಮರವನ್ನು ಕೈಯಿಂದ ಮುಟ್ಟಿ ಮುಟ್ಟಿ ಓಡಾಡತೊಡಗಿದಳು. ಹಾಗೇ ಮುಟ್ಟುತ್ತ ಆಳಕ್ಕೆ ಹೋಗಿ ‘ಶೀನಿಂಗೀ’ ಎಂದಳಲ್ಲ, ಅದು ಪ್ರತಿಧ್ವನಿಸಿತು. ಅದರಿಂದಂತೂ ಎಷ್ಟು ಉನ್ಮಾದಗೊಂಡಳೆಂದರೆ ತನ್ನ ಬುರುಕಿ ಹರಿದು ಹಾಕಿ “ಅಯ್ ಶಿವನ ಏನ ಚಂದ ಐತೇ ಈ ಮೆಳೀ!” ಎಂದು ನಗುತ್ತ ಕಳ್ಳೆಮಳ್ಳೆ ಆಡತೊಡಗಿದಳು. ನನಗೆ ಸಂತೋಷವಾಗಿತ್ತಾದರೂ, ಆಗಲೇ ಹೊತ್ತು ಮುಣಿಗಿ ಚಂದ್ರಾಮನ ಎಳೆ ಬೆಳಕು ಮೂಡಿದ್ದರಿಂದ ಬೇಗನೆ ಮನೆಗೆ ಹೋಗಬೇಕೆಂದು ನನ್ನ ತವಕ. ಅವಳ ಉತ್ಸಾಹದ ಚಿಲುಮೆ ಕ್ಷಣಕ್ಷಣಕ್ಕೆ ಹೆಚ್ಚುತ್ತ ಮೆಳೆ ಆಳ ಆಳಕ್ಕೆ ಹೋಗುತ್ತಿದ್ದಳು. ಎಷ್ಟು ಹೇಳಿದರೂ ಕೇಳದೇ ಅಡ್ಡಾಡುತ್ತ ಮೆಳೆಯಂಚಿನ ಗುಡಿಸಲನ್ನೂ ಹೊಕ್ಕಳು. ಈಗಲಾದರೂ ಕೈಗೆ ಸಿಗತಾಳಲ್ಲಾ ಎಂದು, ಒತ್ತಾಯದಿಂದಲಾದರೂ ಕರೆತರಬೇಕೆಂದು ನಾನೂ ಓಡಿ ಗುಡಿಸಲು ಹೊಕ್ಕೆ. ಆಗ ನಮ್ಮಿಬ್ಬರಿಗೂ ನಮ್ಮ ತಪ್ಪಿನ ಅರಿವಾಯಿತು. ಅದು ಹುಚ್ಚಯ್ಯನ ಸಮಾಧಿಯ ಗುಡಿಸಲು! ಎರಡಾಳೆತ್ತರ ಗಚ್ಚಿನ ಗೋಡೆ ಕಟ್ಟಿಸಿ, ಮೇಲೆ ಕಟ್ಟಿಸಲಾಗದೆ ಹುಲ್ಲು ಹೊಚ್ಚಿ ಮರೆ ಮಾಡಿದ್ದರು. ಬಾಗಿಲಿತ್ತು. ನಡುವೆ ಸಮಾಧಿ ಇದ್ದು, ಅದರ ಮುಂದೊಂದು ಉರಿಯುವ ಪಣತಿ ಇತ್ತು. ಮಣ್ಣಿನ ಒಂದು ಬಿಂದಿಗೆ, ಅದರ ಮ್ಯಾಲೊಂದು ಚಟಿಗೆ ಕೂಡ ಇದ್ದುದರಿಂದ ಯಾರೋ ವಾಸಿಸುತ್ತಿದ್ದ ಹಾಗಿತ್ತು. ತಕ್ಷಣ ಕೈಕೈ ಹಿಡಿದು ಹೊರಬರುತ್ತಿದ್ದೆವು. ಎದುರಿಗೆ ಕುಡಿದು ತೂರಾಡುತ್ತಿದ್ದ ಮರ್ಯಾ ಬಂದ. ಸಿಕ್ಕುಬಿದ್ದವೆಂದುಕೊಂಡೆವು. ನಮ್ಮ ರಕ್ಷಣೆಗಿನ್ಯಾರು ಬರುತ್ತಾರೆ? ಬಂದರೆ ದೇವರು ಬರಬೇಕಷ್ಟೆ. ಆದರೆ ಸಿಂಗಾರೆವ್ವ ಹುಟ್ಟಿದಾಗಿನಿಂದ ಆಕೆಯ ಬಗ್ಗೆ ಕಣ್ಣು, ಕಿವಿ ಮುಚ್ಚಿಕೊಂಡ ದೇವರು ಈ ತನಕ ತೆರೆದಿರಲಿಲ್ಲ. ವಿಕಾರವಾಗಿ ಕಣ್ಣಗಲಿಸಿ “ಬಾರs ನನ್ನ ಅರಗಿಣಿಯೆ, ಪತ್ತೆದಾರ‍್ಕಿ ಮಾಡಾಕ ಬಂದಿ? ಬಾ” ಎಂದು ಮುಂದೆ ಬಂದ. ನಾನು ಅಡ್ಡ ಬಂದು “ಏಯ್, ಯಾಕೋ ಮೂಳ ಅಡ್ಡಗಟ್ಟತಿ – ಇನ್ನs ಬುದ್ದೀ ಬಂದಿಲ್ಲ ನಿನಗ? ಬಿಡುದಾರಿ” ಅಂದೆ. ನನ್ನ ಮಾತನ್ನು ನಿರ್ಲಕ್ಷಿಸಿ ಎಡಗೈಯಿಂದ ಅಮಾತ ನನ್ನನ್ನು ದೂಕಿ ಹಾ ಎಂದು ಹಾರಿ ಹಿಂದೆ ಸರಿಯುತ್ತಿದ್ದ ದೊರೆಸಾನಿಯನ್ನು ಹಿಡಿದುಕೊಂಡ; ಅಷ್ಟು ದೂರದ ಗೋಡೆಗೆ ನನ್ನ ತಲೆ ಹಾಕಿ, ‘ಅಯ್ಯೋ ಎವ್ವಾ’ ಎಂದು ಬಿದ್ದೆ. ಅವರ ಗುದಮುರಿಗೆ ಸಾಗಿತ್ತು. ಹುಲಿ ಹುಲ್ಲೆಯ ಮರಿಯನ್ನು ಮುರಿಯುವಂತೆ ಒಂದೇ ಕೈಯಿಂದ ಮುರಿದು ತುರುಬು ಹಿಡಿದು, ಜಗ್ಗಿ, ಬಲಗೈ ಚಟಿಗೆಯಲ್ಲಿದ್ದ ಸಿಂದಿಯನ್ನು ರಪರಪ ಅವಳ ಮುಖಕ್ಕೆ ಗೊಜ್ಜಿದ. ಕಿರುಚಲಾರದೆ, ಕಣ್ಣುಮುಚ್ಚಿ ಅವ ಹಿಡಿದ ರಭಸಕ್ಕೆ ಮೇಲೆ ಮಾಡಿದ್ದ ಅವಳ ಒದ್ದೆಮುಖವನ್ನು ಹಸಿದ ನಾಯಿ ನೆಕ್ಕುವ ಹಾಗೆ ಚರಚರ ನೆಕ್ಕತೊಡಗಿದ. ಸಿಂಗಾರೆವ್ವ ಆs ಎಂದು ವೇದನೆ ಅನುಭವಿಸುತ್ತಿದ್ದಾಗ “ಕಂಡಿರಾ ಗೌಡರs” ಎಂದು ಹೇಳುತ್ತ ತೆಕ್ಕೆಯಲ್ಲಿದ್ದ ಅವಳನ್ನು ಚೆಲ್ಲಿದ. ಸಮಾಧಿಯ ಹತ್ತಿರ ಬಂದು ಅಲ್ಲಿದ್ದ ಹಿಲಾಲೊಂದನ್ನು ದೀಪಕ್ಕೆ ಹೊತ್ತಿಸಿಕೊಂಡು ಮತ್ತೆ ಅವಳ ಹತ್ತಿರ ಬಂದ. ಬಿದ್ದಿದ್ದ ಅವಳನ್ನು ಹಿಡಿದುಕೊಂಡು “ನಿಮ್ಮಪ್ಪನ್ನ ತೋರಿಸಲಿ” ಎನ್ನುತ್ತ ಮೂಲೆಕಡೆ ನಡೆದ. ದೊರೆಸಾನಿ ಜೋರಿನಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದಳು. ಹೆ… ಹೇ… ಹೇ…. ಎಂದ, ದೊಡ್ಡದನಿ ತೆಗೆದು ನಗುತ್ತ ಅವಳನ್ನು ಬಿಟ್ಟು ಮೂಲೆಗೆ ಹಿಲಾಲು ಹಿಡಿದು ತೋರಿಸಿದ. ಅಯ್ಯೋ ಎವ್ವ! ಗೌಡ ಮತ್ತು ಅವನ ಪೈಲ್ವಾನನ ಹೆಣ ನೆತ್ತರಲ್ಲಿ ತೊಯ್ದು ಬಿದ್ದಿದ್ದವು! ಗುರುತು ಸಿಕ್ಕೊಡನೆ ದೊರೆಸಾನಿ ಸಮಾಧಿಯಲ್ಲಿದ್ದ ಹುಚ್ಚಯ್ಯನೂ ಭಯಗೊಂಡು ಎದ್ದೋಡುವ ಹಾಗೆ ಕಿಟಾರನೆ ಕಿರಿಚಿ, ಚಂಗನೆ ಹಾರಿ, ಅವನ ಕೈಯ ಹಿಲಾಲು ಕಸಿದುಕೊಂಡು, ಅವನ ಎದೆಗೆ ಜೋರಿನಿಂದ ಚುಚ್ಚಿದಳು. ಅವ ಜೋಲಿ ತಪ್ಪಿ ಬಿದ್ದೊಡನೆ ಹುಚ್ಚು ಹತ್ತಿದವರಂತೆ ಮತ್ತೆ ಕಿರುಚುತ್ತ ಹೊರಗೋಡಿದಳು. ನಾನು ಓಡಿದೆ. ಹೊರಕ್ಕೆ ಬಂದವಳೆ ಗುಡಿಸಲ ಬಾಗಿಲು ಹಾಕಿ, ಹೊರಚಿಲಕ ಹಾಕಿಕೊಂಡಳು. ತಕ್ಷಣ ಹಿಲಾಲಿನಿಂದ ಗುಡಿಸಲಿಗೆ ಸಿಕ್ಕ ಸಿಕ್ಕಲ್ಲಿ ಸುತ್ತಲು ಓಡ್ಯಾಡಿ ಬೆಂಕಿ ಹಚ್ಚಿ ಅಲ್ಲೇ ಹಿಲಾಲು ಚೆಲ್ಲಿ “ಬಾರಗs” ಎಂದು ಊರು ಕಡೆ ಓಡಿದಳು. ನಾನೂ ಬೆನ್ನು ಹತ್ತಿದೆ.”

– ಎಂದು ಹೇಳಿ ಶೀನಿಂಗವ್ವ ತನ್ನಕತೆ ನಿಲ್ಲಿಸಿದಳು. ರೋಮಾಂಚನಗೊಂಡು ಕೇಳುತ್ತಿದ್ದ ನಾನು ಅದ್ಯಾಕೆ ಜತೆ ನಿಲ್ಲಿಸಿದಳೋ ಎಂದುಕೊಂಡೆ. ಉಸಿರು ತಗೊಳ್ಳುತ್ತ ತಡೆ ಎಂಬಂತೆ ಕೈಮಾಡಿದಳು. ಮತ್ತೆದ್ದು ಮುದುಕಿ ಒಳಗೆ ಹೋದಳು. ಇಬ್ಬರೂ ಹೆಂಗಸರನ್ನು ಮೆಚ್ಚಿ ಎಂಥಾ ಗಂಡೆದೆ ಇವರದು ಎಂದುಕೊಂಡು ಶಿರಸೈಲನ ಕಡೆ ನೋಡಿದೆ. ಯಾಕೆಂದರೆ ಚಿಕ್ಕಂದಿನಲ್ಲಿ ಹುಚ್ಚಯ್ಯನ ಸಮಾಧಿಯಿದ್ದ ಗುಡಿಸಲಿಗೆ ಬೆಂಕಿ ಬಿದ್ದದ್ದನು ನಾವು ನೋಡಿದ್ದೆವು. ಒಳಗೆ ಹೆಣಗಳಿದ್ದದ್ದೂ ಗೊತ್ತಿತ್ತು. ಆದರೆ ಗೌಡನ ಹೆಣವೂ ಅಲ್ಲಿದ್ದದ್ದು ನನಗೆ ಈತನಕ ತಿಳಿದಿರಲಿಲ್ಲ. ಆ ಬೆಂಕಿ ಈಗಲೂ ನನ್ನ ಕಣ್ಣ ಮುಂದೆ ಕಟ್ಟಿದಂತಿದೆ. ಆಗ ರಾತ್ರಿ ಉಂಡು ಮಲಗುವ ಹೊತ್ತಿನ್ನೂ ಆಗಿರಲಿಲ್ಲ. ನಾನು ದೇಸಾಯಿಯ ಬಯಲಾಟದ ತಾಲೀಮು ನೋಡುತ್ತಿದ್ದೆ. ನಮ್ಮಣ್ಣ ಪೆಟ್ಟಿಗೆ (ಹಾರ್ಮೊನಿಯಂ) ಬಾರಿಸುತ್ತಿದ್ದ. ಚಿಮಣಾಳ ಬದಲು ಮಲಕಪ್ಪಗೋಳ ನಾಗ್ಯಾನೇ ಚಿಮಣಾ ಆಗಿ ಮಾತಾಡುತ್ತಿದ್ದ. ದೇಸಾಯಿ ವೀರಾವೇಶದಿಂದ ಸುದೀರ್ಘವಾದ ಮಾತನ್ನೂ ಏನೂ ತಪ್ಪಿಲ್ಲದೆ ಹೇಳಿ – ಹೇಳುತ್ತೇನೆ ಕೇಳೆಂದು ತಾರಕ ನುಡಿಯಲ್ಲಿದ್ದ. ಅಷ್ಟರಲ್ಲಿ ದೇಸಾಯರ ಆಳು ನಿಂಗ್ಯಾ ಓಡಿ ಬಂದು “ಹುಚ್ಚಯ್ಯನ ಸಮಾಧಿಗೆ ಬೆಂಕಿ ಹತ್ತೇತ್ರಿ!” ಅಂದ. ಅವನ ಮಾತಿನ್ನೂ ಅವನ ಬಾಯಲ್ಲೇ ಇರುವಾಗಲೇ ನಾವೆಲ್ಲ ಠಣ್ಣನೆ ಹಾರಿ ಊರಿನಂಚಿಗೆ ಓಡಿದೆವು. ಅಲ್ಲಿ ಆಗಲೇ ಹೆಂಗಸರು ಗಂಡಸರು ಕೂಡಿದ್ದರು. ಕೆಲವು ಮಂದಿ ಗಂಡಸರು ಬೆಳದಿಂಗಳಿತ್ತಲ್ಲ. ಬೆಂಕಿ ಬಿದ್ದ ಗುಡಿಸಲ ಕಡೆಗೇ ಓಡಿಹೋದರು. ನನ್ನ ಸರೀಕರಲ್ಲಿ ಕೂಡ ಕೆಲವರು ಅವರೊಂದಿಗೆ ಓಡಿದರು. ಆದರೆ ನನಗೆ ಧೈರ್ಯವಾಗಲಿಲ್ಲ. ಅಲ್ಲೇ ನಿಂತೆ.

ನನ್ನೊಂದಿಗೆ ನಿಂತವರಲ್ಲಿ ಹೆಂಗಸರು ಮಕ್ಕಳೇ ಹೆಚ್ಚು. ಅವರೆಲ್ಲ ಪ್ಯಾಟಿ ಈರಭದ್ರ ಹೇಳಿದ ಕಥೆಯೊಂದನ್ನು ಆಗಲೇ ಆಡಿಕೊಳ್ಳುತ್ತಿದ್ದರು. ಅವನ ಹುಣಿಸೆಯ ಮೆಳೆಯ ಪಕ್ಕದಲ್ಲೇ ಇದೆಯಾದ್ದರಿಂದ ಆತ ಸುಳ್ಳು ಹೇಳಿದ್ದರೂ, ಅದೀಗ ಸತ್ಯವಾಗುತ್ತಿತ್ತು. ಆತ ಇನ್ನೇನು ಊರಕಡೆ ಹೊರಡಬೇಕೆಂದಾಗ ಹುಚ್ಚಯ್ಯನ ಗುಡಿಸಲಲ್ಲಿ ಹೆಣ್ಣು ದೆವ್ವಗಳು ಕಿರಿಚ್ಯಾಡಿ ಜಗಳ ಆಡತೊಡಗಿದವಂತೆ ಇವನು ಹೆದರಿ ಓಡಕಿತ್ತು. ಒಂದೇ ಉಸಿರಿನಲ್ಲಿ ಊರು ಮುಟ್ಟಿ ಇನ್ನು ಅಪಾಯವಿಲ್ಲವೆಂದಾಗ ತಿರುಗಿ ನೋಡಿದರೆ – ಗುಡಿಸಲಾಗಲೇ ಹತ್ತಿ ಉರಿಯತೊಡಗಿತ್ತಂತೆ. ನಾವು ನಿಂತ ಗುಂಪಿನಲ್ಲೇ ಇನ್ನೂ ಇದ್ದ ಅಬಾಯಿ ಹೇಳಿದ್ದು – ಅವಳು ಸೊಸೆಯ ಜೊತೆ ಬಯಲಕಡೆ ಕೂತಾಗ ಎರಡು ಹೆಣ್ಣು ಕೊಳ್ಳೀ ದೆವ್ವಗಳು ಜಗಳಾಡಿ ಆ ಕೊಳ್ಳಿ ಗುಡಿಸಲ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿತಂತೆ. ಅವು ಚೀರಿ ಜಿಗಿಯುತ್ತ ಊರಕಡೆ ಬಂದು ಹೊಲಗೇರಿಯಲ್ಲಿ ಮಟಾಮಾಯವಾದಂತೆ. ಇವೆರಡೂ ಹೆಣ್ಣುದೆವ್ವಗಳು ಯಾರೆಂದು ವಾಚಕರಿಗಾಗಲೇ ಗೊತ್ತಾಗಿದೆಯೆಂದು ಭಾವಿಸುತ್ತೇನೆ.

ಬೆಂಕಿ ಮಾತ್ರ ಹುಣಸೆ ಮರದಷ್ಟೇ ಎತ್ತರ ಹಬ್ಬಿ ದಟ್ಟವಾದ ಹೊಗೆ ಇಡೀ ಮೆಳೆಯನ್ನು ಮೋಡದ ಹಾಗೆ ಆವರಿಸಿ ನೆಲ – ಮುಗಿಲುಗಳನ್ನು ಏಕ ಮಾಡಿತ್ತು. ಬೆಂಕಿಯ ಬೆಳಕಿನಲ್ಲಿ ಮೆಳೆಯ ಆ ಭಾಗದ ಮರಗಳೆಲ್ಲ ಕಾಣಿಸಿ ನಮ್ಮಲ್ಲೇ ನಿಂತ ಕೆಲವರಿಗೆ ಹೆದರಿದ ಭೂತಗಳು ಮರ ಆಡರಿದ್ದೂ ಕಂಡಿತು. ಜ್ವಾಲೆಗಳು ಹೊಗೆ ಮೀರಿ ನೆಗೆದು ನಾ ಮುಂದೆ ತಾ ಮುಂದೆಂದು ಆಕಾಶ ನೆಕ್ಕುವುದಕ್ಕೆ ತವಕಿಸುತ್ತಿದ್ದವು. ಆಗ ಉರಿಯುವ ಬೆಂಕಿಯ ಛಿಳಿಚಿಟಿಲೆಂಬ ಸಪ್ಪಳ ಕೂಡ ಅಷ್ಟು ದೂರದ ನನಗೆ ಕೇಳಿಸಿದಂತೆ ನೆನಪು. ಅಕ್ಕಪಕ್ಕ ನೀರಿರಲಿಲ್ಲವಾದ್ದರಿಂದ ಬೆಂಕಿ ಆರಿಸುವ ಗೋಜಿಗೆ ಯಾರೂ ಹೋಗಲಿಲ್ಲ. ಅದೆಷ್ಟು ಹೊತ್ತು ಉರಿಯಿತೋ ಅಷ್ಟು ಹೊತ್ತೂ ನಾನು ಗುಂಪಿನಲ್ಲೇ ನಿಂತಿದ್ದೆ. ಅದು ಪೂರ್ತಿ ಬೂದಿಯಾದ ಮೇಲೆ ಗುಡಿಸಲಿಗೆ ಹೋದವರು ಗುಂಪುಗುಂಪಾಗಿ ಮಾತಾಡಿಕೊಂಡು ಬರುತ್ತಿದ್ದರು. ಏನಾದರೂ ಹೊಸ ವಿಷಯ ತಿಳಿದೀತೆಂದು ನಾನು ಹೋಗಿ ಪ್ರತಿಗುಂಪಿನಲ್ಲೂ ಸೇರಿಕೊಳ್ಳುತ್ತಿದ್ದೆ. ಆದರೆ ಅವರ್ಯಾರಿಗೂ ಬೆಂಕಿ ಹ್ಯಾಗೆ ಹತ್ತಿತೆಂಬ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ. ಪ್ಯಾಟಿ ಈರಭದ್ರನ ಕಥೆಯನ್ನೇ ಇನ್ನಷ್ಟು ಬೆಳಸಿ ಬೆಳಸಿ ಈರಭದ್ರನ ಬದಲು ಅಲ್ಲಿ ತಾವು ಇದ್ದ ಹಾಗೆ ಹೇಳಿಕೊಳ್ಳುತ್ತಿದ್ದರು. ಮನೆಗೆ ಹೋದಾಗ ನಮ್ಮಣ್ಣ ಬಂದಿದ್ದ. ಅವನೂ ಗುಡಿಸಲಿಗೆ ಹೋಗಿದ್ದನಾದ್ದರಿಂದ ಊಟ ಬಿಟ್ಟು ಅವನ ಮಾತನ್ನೂ ಕಿವಿಗೊಟ್ಟು ಆಲಿಸಿದೆ. ಅವನೂ ಅದೇ ಕಥೆ ಹೇಳಿದ. ಅದು ಮುಗಿದ ಮೇಲೆ ನಮ್ಮವ್ವ “ನೋಡಿದಿಲ್ಲ? ಕೆಲಸ ಬಿಟ್ಟ ಬರೀ ಮೆಳೀ ಕಡೇನs ಅಡ್ಡಾಡ್ತಿ. ಹೆಣ್ಣ ದೆವ್ವ ಜಗಳಾಡಿ ಗುಡಿಸಲಕ ಬೆಂಕಿ ಹಚ್ಚಿದುವಂತ. ಇನ್ನಾದರೂ ಅಂಜಿಕೊಂಡು ತಾಯಿ – ತಂದೀ ಮಾತ ಕೇಳಿಕೊಂಡಿರು” ಎಂದು ಹೇಳಿ ನನ್ನ ಬೆನ್ನಿಗೊಂದು ಏಟೂ ಬಿದ್ದಳು.

ಆ ದಿನ ಬಹಳ ಹೊತ್ತು ಊರಿನ ಯಾರಿಗೂ ನಿದ್ದೆ ಹತ್ತಿದ ಹಾಗೆ ಕಾಣೆ. ಊಹೆಗಳಲ್ಲಿ ಕನಸು ಹಳವಂಡಗಳಲ್ಲಿ ಆ ಬೆಂಕಿಯ ಚಿತ್ರವನ್ನೂ, ಅದರ ಭಯಂಕರತೆಯನ್ನೂ ಪುನಃ ಚಿತ್ರಿಸಿಕೊಳ್ಳುತ್ತ ಮಲಗಿದರು.

ಮುಂಜಾನೆ ನಾವು ಸಾಲೆಯಲ್ಲಿದ್ದೆವು. ಒಂದ ಮಾಡುವ ವಿಶ್ರಾಂತಿ ಸಿಕ್ಕಾಗ ಹೊರಬಂದಿವಲ್ಲ. ಬೆಂಕಿಯಲ್ಲಿ ಹೆಣಗಳಿದ್ದ ವಿಚಾರ ಗೊತ್ತಾಯಿತು. ತಕ್ಷಣ ಮೆಳೆ ಕಡೆ ಓಡಿದೆವು.

ಅಗೋ ಶೀನಿಂಗವ್ವ ಬಂದಳು. ನಮ್ಮ ಊರವರ್ಯಾರಿಗೂ ಕಥೆಯ ಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ ಬರಲೇಇಲ್ಲ. ಬರೀ ಪ್ರತಿಕ್ರಿಯೆ ತೋರುವುದೆಷ್ಟೋ ಅಷ್ಟೆ. ಅಂಥವನ್ನು ನೀವೂ ಊಹಿಸಬಹುದು. ಈಗ ಶೀನಿಂಗವ್ವನ ಕಥೆ ಕೇಳೋಣ.

“ಗುಡಿಸಲಿಗಿ ಬೆಂಕಿ ಹಚ್ಚಿ ಓಡಿ ಬಂದ್ರಿ” ಮುಂದೇನೆಂದು ಅವಳು ಕೇಳುವ ಮೊದಲೇ ಕಥೆ ಎತ್ತಿಕೊಟ್ಟೆ.

“ಹಾs ಒಂದs ಹಾರಿಕ್ಕಾಗ ಒಂದs ಉಸರಿನ್ಯಾಗ, ಅರಮನೀಗಿ ಓಡಿ ಬಂದಿವಿ.” ಎಂದು ಹೇಳಿ “ಮುಂದಿನ ಕತಿ ನಾಳಿ ಮಾಡೂಣಲ್ಲ ತಮ್ಮ” ಎಂದಳು. ನನಗೆ ನಿರಾಶೆಯಾಗಿ ಎದ್ದು ಬರುವ ಮನಸ್ಸಿಲ್ಲದೆ “ಬಂದೇನ ಮಾಡಿದಿರಿ” ಎಂದೆ.

“ಬಂದಿವಿ. ಓಡಿ ಹೋಗಿ ಅಂತಸ್ತೇರಿ ಕಿಡಿಕ್ಯಾಗ ನೋಡ್ತಾ ನಿಂತಿವಿ. ಧಗಧಗ ಬೆಂಕಿ ಆಕಾಶ – ಪಾತಾಳಕ್ಕ ಏಕಾಗಿ ಉರ್ಯಾಕ ಹತ್ತಿತ್ತು! ಭಾಳ ಹೊತ್ತ ನಮಗೆ ನೋಡಾಕ ಆಗಲಿಲ್ಲ. ಸಿಂಗಾರೆವ್ವ ಹೋಗಿ ಹಾಸಿಗ್ಯಾಗ ಬಿದ್ದುಕೊಂಡ್ಲು. ಆಕೀ ಮೈ ಕಾದ ತಗಡಾಗಿತ್ತು. ಗಡಗಡ ನಡಗತಿದ್ದಳು “ಜೋರಾ ಬಂದಾವಲ್ಲೆs ಎವ್ವ” ಅಂದೆ. “ದೇಸಾಯಿ ಕ್ವಾಣ್ಯಾಗ ಸೆರೇದ ಕಾಯಿ ಐತಿ. ಹೋಗಿ ತಗೊಂಬಾ” ಅಂದಳು. ತಗಂಬಂದೆ. ಗಟಗಟ ಒಂದ ಗುಟಿಕಿಗಿ ಇಡೀ ಅರ್ಧ ಕಾಯಿ ಮುಗಿಸಿ ಬಕ್ಕ ಬರಲ ಬಿದ್ದು ಬಿಟ್ಲು…”

“ಮುಂದ?”

“ಮುಂದೇನು, ಮುಂಜಾನೆ ಪೊಲೀಸರು ಬಂದರು.”

“ಹಂಗಲ್ಲಬೇ ಪೊಲೀಸರು ಬಂದೇನು ಮಾಡಿದ್ರು?”

“ಅದೇನೋ ನಂಗೊತ್ತಿಲ್ಲಪ್ಪ” ಅಂದಳು. ಮುದುಕಿಯ ಮೂಡು ಕೆಟ್ಟಿತ್ತು. ಮುಂದಿನ ಕತೆ ಇನ್ನವಳು ಹೇಳಲಾರಳು ಅಂದುಕೊಂಡೆ. ಕೊನೆಯದಾಗಿ “ಪೊಲೀಸರು ಅರಮನೀಗಿ ಬರಲಿಲ್ಲೇನು?” ಎಂದೆ.

“ಇಲ್ಲ, ಯಾಕ ಬರತಾರ, ಏನ ಆಧಾರಿತ್ತು??”

“ಊರಾಗಾದರೂ ಏನ ಮಾಡಿದರು?”

“ನಂಗೊತ್ತಿಲ್ಲಪ್ಪ” ಅಂದಳು. ನನಗೂ ಹೆಚ್ಚು ನೆನಪಿಲ್ಲ.

ಅಲ್ಲಿ ಹೆಣಗಳಿದ್ದದ್ದು ಗೊತ್ತಾಗುತ್ತಲೂ ನಮ್ಮೂರ ಗೌಡ ಓಡಿ ಹೋಗಿ ಗೋಕಾವಿಯಿಂದ ಪೊಲೀಸ್ ಪೋಜುದಾರರನ್ನು ಕರೆದುಕೊಂಡೇ ಬಂದ. ಹೆಣ ಬೆಂದಿರುವುದರಿಂದ ಗುರುತು ಸಿಕ್ಕುವುದಂತೂ ಸಾಧ್ಯವೇ ಇರಲಿಲ್ಲ. ಬಂದ ಪೋಜುದಾರ ಎರಡು ದಿನ ಇದ್ದು ಏನೇನೋ ಬರೆದುಕೊಂಡು ಹೋದ. ಆದರೆ ತಪ್ಪಿ ಕೂಡ ಗೌಡ ಮತ್ತು ಮರೆಪ್ಪನ ವಿಚಾರ ನಮ್ಮ ತಲೆಗೆ ಸುಳಿಯಲೇ ಇಲ್ಲ.

“ಬೆಳಿಗ್ಗೆ ಎಚ್ಚರವಾದಾಗ ಆಗಲೇ ಸೂರ್ಯ ಹುಟ್ಟಿದ್ದ. ಸಿಂಗಾರೆವ್ವನಿಗೆ ಇನ್ನೂ ಎಚ್ಚರವಾಗಿರಲಿಲ್ಲ. ನಿನ್ನ ಓಡಾಡಿದ್ದೆವಲ್ಲ ತೊಡೆ ತುಂಬ ನೋಯುತ್ತಿದ್ದವು. ಹಾಗೇ ಹೋಗಿ ಸಿಂಗಾರೆವ್ವನ ಮೈಮುಟ್ಟಿ ನೋಡಿದೆ. ಜ್ವರ ಇರಲಿಲ್ಲ. ಆಮೇಲೆ ಎಬ್ಬಿಸಿದರಾಯ್ತೆಂದು ಕೆಳಕ್ಕೆ  ಹೋದೆ. ಜಳಕ – ಜಪಾತಿ ಮುಗಿಯುವಷ್ಟರಲ್ಲಿ ನಾಕು ತಾಸು ಹೊತ್ತೇರಿತ್ತು. ಹೋಗಿ ದನ ಬಿಟ್ಟು ಸಿಂಗಾರೆವ್ವನನ್ನು ಎಬ್ಬಿಸಲಿಕ್ಕೆ ಅಂತಸ್ತಿಗೆ ಹೋದೆ. ಎದ್ದು ಎರಡೂ ಕೈ ಹಿಂದೆ ಊರಿ ಬಿಮ್ಮನೆ ಕೂತಿದ್ದಳು. ನಶೆ ಇನ್ನೂ ಇಳಿದಿರಲಿಲ್ಲವೇನೊ, ಕಣ್ಣು ಗುಲಗಂಜಿಯಾಗಿದ್ದವು. ತುರುಬು ಬಿಚ್ಚಿ ಕೆದರಿದ ಕೂದಲು ಹೆಗಲ ಮೇಲೆ ಬಿದ್ದಿದ್ದವು. ನಿರ್ಭಾವದಿಂದ ಮುಖ ಬಾಡಿ ಹೆಣದ ಕೆಳಗಿಳಿದಿತ್ತು. ನೆಟ್ಟ ನೋಟದಿಂದ ಕಿಡಕಿಯ ಕಡೆ ನೋಡುತ್ತಿದ್ದಳಾದರೂ ನಿಜವಾಗಿ ಅದನ್ನೇ ನೋಡುತ್ತಿದ್ದಾಳೆಂದು ಅನ್ನಿಸಲಿಲ್ಲ. ಪಕ್ಕಕ್ಕೆ ಹೋಗಿ ಸಮಾಧಾನ ಮಾಡುವ ದನಿಯಲ್ಲಿ “ಎವ್ವಾ, ಚಿಂತೀ ಮಾಡಬ್ಯಾಡ, ಪಾರಾದಿವಿ ಬಿಡು” ಎಂದು ಅವಳ ಕಿವಿಯಲ್ಲಿ ಹೇಳಿದೆ. ಈಗಷ್ಟೆ ಅರಿವಿಗೆ ಬಂದಂತೆ “ಹಾಂ??” ಎಂದಳು. ಕೈಯೂರಿ ಏಳಹೋಗಿ ತೊಡೆ ನಡುಗಿ “ಅಯ್ ಶಿವನs! ನಿಲ್ಲಾಕ ಆಗವಲ್ಲದಲ್ಲs” ಎಂದು ಮತ್ತೆ ಅಲ್ಲೇ ಕುಸಿದಳು. ನನಗೇ ಹೀಗಾಗಿರುವಾಗ ಎಂದೂ ಹೊರಕ್ಕೆ ಬಾರದ ಅವಳ ಕಾಲೆಷ್ಟು ತುಂಬಿರಬೇಕು. “ಬಿಸಿ ಬಿಸಿ ನೀರ ಹನಿಸಿಕೊಂಡರ ಮೈ ಹಗರ ಆಗತೈತಿ. ಹಾಂಗ ಒಂದ ರೊಟ್ಟಿ ತಿಂದ ಬಂದೀಯಂತ ಬಾ ಎವ್ವಾ” ಅಂದೆ. ಹ್ಞೂಂ ಎಂದು ನರಳಿದಂತೆ ಹೇಳಿ ಮೆಲ್ಲಗೆ ಎದ್ದಳು. ಆಗಲೂ ನಿಲ್ಲಲಾಗುತ್ತಿರಲಿಲ್ಲ. ನನ್ನ ಹೆಗಲ ಮೇಲೆ ಕೈ ಊರಿದಳು. ಮೆಲ್ಲಗೆ ಕೆಳಗಿಳಿದೆವು.

ಬಿಸಿನೀರಿನಲ್ಲಿ ಜಳಕ ಮಾಡಿಸಿದೆ. ಮೈ ತುಸು ಹಗುರವಾಯಿತೆಂದು ಹೇಳಿದಳು. ನಾನೇ ನಿಂತು ಮೈ ಒರೆಸಿದೆ. ಸೀರೆ ಬದಲಿಸಿ ಅಡಿಗೆ ಮನೆಗೆ ಕರೆದೊಯ್ದೆ. ಬುಟ್ಟಿಯೊಳಗಿನ ನಾಲ್ಕು ರೊಟ್ಟಿ ಹಿರಿದು ಮ್ಯಾಲೆ ಪಲ್ಯ ಹಚ್ಚಿ ಕೈಗೆ ಕೊಟ್ಟೆ. ನಾಲ್ಕೂ ರೊಟ್ಟಿಗಳನ್ನು ಏಕ ಕಾಲಕ್ಕೆ ಕತ್ತರಿಸುತ್ತ ಮಾತಿಲ್ಲದೆ ತಿಂದಳು. ಮೆಲ್ಲಗೆ ಎಬ್ಬಿಸಿಕೊಂಡು ಅಂತಸ್ತಿನ ಕಡೆ ತರುತ್ತಿದ್ದೆ. ಅಷ್ಟರಲ್ಲಿ ದೇಸಾಯಿ ಬಂದವನು ದೊರೆಸಾನಿಯ ಸ್ಥಿತಿ ನೋಡಿ “ಏನಿದು?” ಅಂದ.

“ನಿನ್ನಿ ತೋಟದಾಗ ಅಡ್ಡಾಡಿದರು. ತೊಡಿ ತುಂಬ್ಯಾವರಿ” ಅಂದೆ.

“ಅದಕ್ಕs, ತೋಟಕ್ಕ ಹೋಗಬ್ಯಾಡ್ರೀ ಅಂದೆ. ಶೀನಿಂಗವ್ವ, ತೊಡೀಗಿ ಸ್ವಲ್ಪ ಸೆರೆ ಸವರು. ತಗೊಂಡರ ಒಂದ ಗುಟಕ ಕುಡಿಸಿ ಮಲಗಿಸು. ಬರೋಬರಿ ಆಗತಾರ” ಅಂದ.

ಹೂಂನ್ರಿ ಅಂದೆ. ಹೋದ. ಸಿಂಗಾರೆವ್ವ ಅವನ ಕಡೆ ನೋಡಲೇ ಇಲ್ಲ. ಅಷ್ಟರಲ್ಲಿ ನಿಂಗ್ಯಾ ಓಡಿ ಬಂದು. “ಊರಾಗೇನೇನ ಆಗೇತೆಂದಿರಿ?” ಎಂದ. ಮತ್ತೆ ತಾನೇ “ಹುಚ್ಚಯ್ಯನ ಗುಡಿಸಲಕ ಬೆಂಕಿ ಹತ್ತಿದ್ದ ನೋಡಿದಿರೇನ?” ಅಂದ. ನಾನು “ಹೌಂದು ನೋಡಿದೀವಿ. ಆ ಕಡೆ ಮಂದಿ ಓಡತಿದ್ರು” ಅಂದೆ.

“ಬೆಂಕಿ ಹತ್ತಿತ್ತಲ್ಲ. ಹರಿವತ್ತ ನೋಡಿದರ ಮೂರ ಹೆಣ ಬೆಂದ ಬಿದ್ದಾವ!”

ಈಗ ಸಿಂಗಾರೆವ್ವ ಹೊಯ್ಕಿನಿಂದ ಕಣ್ಣರಳಿಸಿ ನಿಂಗ್ಯಾನ ಕಡೆ ನೋಡಿದಳು. ಈ ತನಕ ನಿರ್ಭಾವವಾಗಿದ್ದ ಮುಖ ಈಗ ಆತಂಕದಿಂದ ಭಾವಪೂರ್ಣವಾಯಿತು. ಒಳಗೊಳಗೆ ಉದ್ವೇಗಗೊಂಡಿದ್ದಳೆಂದೂ ತೋರಿತು. ಮಾತಾಡಿದರೆಲ್ಲಿ ಒಳಗಿನದು ಹೊರಗುಕ್ಕುತ್ತದೋ ಎಂಬಂತೆ ಬಾಯಿಗೆ ಕೈ ಒಯ್ದುಳು. ನಾನು ಆಶ್ಚರ್ಯ ನಟಿಸುತ್ತ “ಯಾರ ಹೆಣ ಅಂತವು?” ಅಂದೆ. ನಿಂಗ್ಯಾ ನಿನ್ನ ಆಜ್ಞಾನಕ್ಕೆ ಒಮ್ಮೆ ಕೈಯಿಂದ ಹಣೆ ಹಣೆ ಹೊಡೆದುಕೊಂಡು,

“ಎಲ್ಲಾ ಬೆಂದ ಹೋಗಿ ಬರೀ ಎಲುವ ಉಳದಾವಬೆ. ಹೆಣ ಅಂತ ಗುರುತ ಹಿಡ್ಯಾಕಾಗಾಣಿಲ್ಲ. ಎಲ್ಲೋ ಒಂದು ಕಾಲ ಅರ್ಧಮರ್ಧ ಉಳದೈತಿ. ಅದನ್ನೋಡಿ ಇವು ಮನಶೇರ ಹೆಣ ಅಂತ ಅನ್ನಬೇಕಷ್ಟ. ಎಷ್ಟ ಹೆಣ ಅಂತ ಹೆಂಗ ಹೇಳೂದಾ? ಪೊಲೀಸರು ಬಂದಾರ – ನೋಡಬೇಕಷ್ಟ” ಎಂದು ಹೇಳಿ ಹೋದ. ಅಷ್ಟರಲ್ಲಿ ನಾನು ಹೋಗಿ ದೊರೆಸಾನಿಯನ್ನು ಮಲಗಿಸಿ ಕೆಳಗಿಳಿದು ಬಂದು ಊಟ ಮಾಡಿದೆ. ಬರುವಾಗ ಇನ್ನೊಂದು ಕಾಯಿ ಸೆರೆ ತಂದೆ.

ದೊರೆಸಾನಿ ಹಾಗೆಯೇ ಒರಗಿದ್ದಳು. ಎಡಗೈ ತಲೆಯ ಮೇಲಿತ್ತು. ಬಲಗೈ ಶವದ ಕೈಯಂತೆ ಅಡ್ಡವಾಗಿ ಈಕಡೆ ಬಿದ್ದಿತ್ತು. ಕಾಲು ಅಗಲವಾಗಿ ಸೆಟೆದಂತಿದ್ದವು. ಗಾಬರಿಯಾಗಿ ಹೋಗಿ ಮುಖ ನೋಡಿದೆ. ಕಣ್ಣು ತೆರೆದಿದ್ದವು. ಕಣ್ಣೀರು ಧಾರಾಕಾರವಾಗಿ ಕಿವಿಯ ಗುಂಟ ಕೆಳಗಿಳಿಯುತ್ತಿದ್ದವು. ಬಾಟ್ಲಿಯ ಸೆರೆ ಬಟ್ಟಲಿಗೆ ಹಾಕಿಕೊಂಡು ಕಾಲಿಗೆ ಉಜ್ಜತೊಡಗಿದೆ. ಎಷ್ಟು ಹೊತ್ತಾದರೂ ಅವಳಿಗೆ ನಿದ್ದೆ ಬರಲಿಲ್ಲ. ಉಜ್ಜುವುದನ್ನು ನಾನೂ ನಿಲ್ಲಿಸಲಿಲ್ಲ.

ಬಹುಶಃ ನಿನ್ನ ನಡೆದದ್ದನ್ನು ಧ್ಯಾನಿಸಿ ಅಳುತ್ತಿದ್ದಳೆಂದು ನನ್ನ ಭಾವನೆ. ನನಗೇನು ಸಮಾಧಾನವಿತ್ತೇ? ಕಣ್ಣೆದುರಿಗೆ ಏನು ಕಂಡರೂ  ಅದು ನಿನ್ನೆಯ ಹೆಣವಾಗಿ, ಹೆಣ ಬೆಂಕಿಯಾಗಿ ಪರಿವರ್ತನೆ ಹೊಂದುತ್ತಿತ್ತು. ಅದು ಕಂಡೊಡನೆ ಕಿರುಚಬೇಕೆನಿಸುತ್ತಿತ್ತು. ಯಾವ ದನಿ ಕಿವಿಗೆ ಬಿದ್ದರೂ ಯಾರೋ ಕಿರುಚಿದ ಹಾಗೆ ಕೇಳಿಸುತ್ತಿತ್ತು. ಇದು ಹೀಗೆ ಮುಂದುವರಿದರೆ ನನಗೆ ಹುಚ್ಚು ಹತ್ತುವ ದಿನ ದೂರವಿಲ್ಲ ಎಂದುಕೊಂಡೆ. ನನಗೇ ಹೀಗಾಗಿದ್ದರೆ ದೊರೆಸಾನಿಗೆ ಏನಾಗಿರಬೇಡ! ಗೌಡನೇನೋ ನೀಚ ನಿಜ. ಆದರೆ ಹಡೆದ ತಂದೆ ಗೌದೋ. ಅವನ ಜೀವದ ಜೊತೆ ತಾಯಿಯ ಜೀವವೂ ಅಂಟಿಕೊಂಡಿದೆಯೋ? ಮರ್ಯಾನ ಸೇಡಿಗೆ ಮಾತ್ರ ಗೌಡನೇ ಪೂರ್ತಿ ಹೊಣೆಗಾರ. ಅದರಲ್ಲಿ ದೊರೆಸಾನಿಯದೇನು ತಪ್ಪಿದೆ? ಅಡಾಡುತ್ತ ಬಂದು ಮರ್ಯಾನನ್ನು ಎದುರು ಹಾಕಿಕೊಂಡು ಮಣ್ಣು ಮುಕ್ಕಿದನೇ! ಶಿವನೇ, ಮಗಳು ತಂದೆಯ ಹೆಣಕ್ಕೆ ಈ ಪರಿ ಬೆಂಕಿಯಿಡಬೇಕಾಯಿತೇ! ಹೇಳಿಕೊಂಡಾದರೂ ಸಮಾಧಾನಪಡೋಣವೇ? ಬಾಯಿ ಮಾಡಿ ಅಳೋಣವೆ? ಯಾರ ಮುಂದೆ ಹೇಳೋಣ – ಅಳೋಣ?

ದೊರೆಸಾನಿ ಮೈ ಹಗುರಾಗಿ, ಇಲ್ಲವೆ ಬಿದ್ದುಕೊಂಡಿರಲಿಕ್ಕೆ ಬೇಸರವಾಗಿ ಎದ್ದಳು. ದಿಂಬು ತಗೊಂಡು ಗೋಡೆಗಾನಿಸಿ ಕೂತಳು. “ಬಾಟ್ಲಿ ತಾ” ಎಂದಂತೆ ಕೂ ಮಾಡಿದಳು. “ಬ್ಯಾಡೆವ್ವ” ಅಂದೆ. ಕೀ ಹಾಗೇ ಬಾಟ್ಲಿ ಕಡೆ ಹಿಡಿದಿದ್ದರಿಂದ ಕೊಟ್ಟೆ. ಕುಡಿದು ಕೆಳಗಿಟ್ಟು ಖಿನ್ನಳಾಗಿ ಹೇಳಿದಳು.

“ಶೀನಿಂಗೀ, ನಾ ಇನ್ನ ಸಾಯತೇನಗs ಬದಕೂವಂತ ಆಸೆ ಏನೇನೂ ಉಳಿದಿಲ್ಲ!”

ಅವಳ ಮಾತು ಕೇಳಿ ಅಳು ಒತ್ತರಿಸಿ ಬಂತೊ, ಅಥವಾ ನಿನ್ನೆಯ ಘಟನೆಯಾದಾಗಿನಿಂದ ಹಿಡಿದಿಟ್ಟ ದುಮ್ಮಾನ ದುಃಖವಾಗಿ ಉಕ್ಕಿತೊ – ಕಣ್ಣೀರಿಡುತ್ತ “ಏನಾಡ್ತಿ ಬಿಡs ಯವ್ವ” ಅಂದೆ. “ಕಂಟಕಾನೆಲ್ಲ ದಾಟಿ ಬಂದೀವಿ. ವೈರಿ ಗೌಡನೂ ಸತ್ತ. ಶನಿ ಮರ್ಯಾನೂ ಸತ್ತ. ಹಿಂದಿಂದ್ದೆಲ್ಲಾ ಕನಸಂತ ತಿಳಿ. ಮುಂದ ಚಲೋ ದಿನಾ ಬಂದೇ ಬರ‍್ತಾವು”. ನನ್ನ ಮಾತಿನಿಂದ ಯಾವ ಪರಿಣಾಮವೂ ಅವಳ ಮುಖದ ಮೇಲಾಗಲಿಲ್ಲ. ಈವರೆಗಿನ ನಿರಾಶೆಗಳು ತುಳಿದು ತುಳಿದು ಅವಳ ಮನಸ್ಸನ್ನು ಎಷ್ಟು ಒಣಗಿಸಿದ್ದವು ಎಂದರೆ ಈಗ ಸ್ವಯಂ ಶಿವನೇ ಬಂದು ಚಲೋದಿನದ ಭರವಸೆ ಕೊಟ್ಟಿದ್ದರೂ ಅದು ಆರ್ದ್ರವಾಗುತ್ತಿರಲಿಲ್ಲ. ಗೊತ್ತಿದ್ದೂ ಹೀಗೆ ಹೇಳುತ್ತೇನೆಂಬುದಕ್ಕೋ, ನನಗಿನ್ನೂ ಅನುಭವ ಸಾಲದೆಂಬುದಕ್ಕೋ ವ್ಯಂಗ್ಯವಾಗಿ ನಕ್ಕಳು. ಕಣ್ಣುಗಳು ಖಾಲಿ ಖಾಲಿ ಆಗಿದ್ದವು. ಎಲ್ಲ ಗುಟ್ಟುಗಳನ್ನು ತಿಳಿದು ಅರ್ಥ ಕಾಣದೆ ಹತಾಶಳಾದವಳಂತೆ ಹೇಳಿದಳು –

“ವೈರಿಗಳಿಬ್ಬರೂ ಸತ್ತರೂ ವಿಧಿ ನನ್ನ ಬೆನ್ನ ಬಿಡೋದಿಲ್ಲಗs. ಇಲ್ಲಾ ಅವರ‍್ನ ದೆವ್ವ ಮಾಡಿ ಕಾಡಸಾಕ ಹಚ್ಚತೈತಿ. ಇಲ್ಲಾ ಬ್ಯಾರೆ ವೈರೀನ್ನ ಹುಟ್ಟಿಸಿರತೈತಿ. ಈ ಅರಮನ್ಯಾಗ ಇದ್ದ ಇದ್ದ ನಾ ಆಗಲೇ ದೆವ್ವ ಆಗೀನಿ. ಕಾಣಾಸಾಣಿಲ್ಲೇನs?”

ನನ್ನ ಅಳು ನಿಂತಿರಲಿಲ್ಲ. ಅವಳ ದನಿ ಕೂಡ ಎಂದಿನ ಹಾಗಿರಲಿಲ್ಲ. ಅದರಲ್ಲೇನೋ ಒಂದು ಗಡಸುತನ, ಒಂದು ಧೈರ್ಯ, ‘ಇಷ್ಟs ಹೌಂದಲ್ಲೊ’ ಎಂಬ ತಿರಸ್ಕಾರಗಳಿದ್ದವು. ಈಗಷ್ಟೆ ದೆವ್ವಿನ ಮಾತಾಡಿದಳಲ್ಲ, ಮಾತಾಡುವಾಗ ತನ್ನ ಖಾಲಿ ಕಣ್ಣುಗಳನ್ನು ಅಗಲವಾಗಿ ತೆರೆದು ನನ್ನ ಕಡೆ ನೋಡಿದಳಲ್ಲ. ಹುಣಿಸೆ ಮೆಳೆಯ ಭೂತವೇನಾದರೂ ಮೈಯಲ್ಲಿ ಹೊಕ್ಕಿದೆಯೇ ಎಂದು ಅಂದುಕೊಂಡೆ. “ಬಿಡ ತಾಯಿ, ಏನ ಮಾತಾಡ್ತಿ, ಅರಾಮ ಒಂದು ಜಂಪ ನಿದ್ದಿ ಮಾಡು” ಅಂದೆ.

“ನನಗಿನ್ನೆಲ್ಲಿ ನಿದ್ದಿ ಬಂದೀತ ತಾಯಿ…”

– ಎಂದು ಇನ್ನೇನೊ ಹೇಳಲಿದ್ದಳು. ಅವಳ ಮನಸ್ಸನ್ನು ಬೇರೆ ಕಡೆಗೆ ತಿರುಗಿಸಲು “ಅದೇನವ್ವ ಇನ್ನ ಕುಂಕುಮ ಹಚ್ಚಿಲ್ಲ” ಅಂದೆ.

“ಅದೊಂದು ದಂಡ. ತೋರಿಕಿಗಾದರೂ ಹಚ್ಚಿಕೋಬೇಕಲ್ಲ. ಕರಡಿಗಿ ತಾ” ಅಂದಳು. ಮೆಲ್ಲಗೆದ್ದು ಕನ್ನಡಿಯ ಬಳಿಗೆ ಹೋಗುತ್ತ ಹೇಳಿದಳು,

“ನನ್ನ ಬೆನ್ನ ಹತ್ತಿ ಬಂದಿ, ನೀ ಏನ ಸುಖ ಸುರಕೊಂಡೇ ನನ್ನ ತಾಯಿ! ಎಂಥಾ ಅನಾಥ ಮನೀಗಿ ಬಂದಿವಿಬ್ಬರೂ! ಶೀನಿಂಗಿ, ಈಸಲ ನೀ ಮದಿವ್ಯಾಗು, ಇಲ್ಲೇ ಯಾವನ್ನಾದರೂ ಕಟ್ಟುಮಸ್ತು ಗಂಡನ್ನೋಡಿ ಕಟ್ಟತೀನಿ. ಗಂಡ ಹೆಂಡ್ತಿ ಇಬ್ಬರೂ ಅರಮನ್ಯಾಗs ಇರ್ರಿ. ವರ್ಷ ತುಂಬೂದರಾಗ ನೀ ಮಗನ್ನ ಹಡಿ! ನಾ ನಿನ್ನ ಮಗನ್ನ ದತ್ತಕ ತಗೋತೀನಿ! ನಿನ್ನ ಋಣಭಾರ ಇನ್ಹೆಂಗ ತೀರಿಸಲೆ ತಾಯಿ?”

– ಎನ್ನುತ್ತ ಕನ್ನಡಿಯಲ್ಲಿ ನೋಡಿಕೊಂಡು, ಕುಂಕುಮ ಹಚ್ಚಿಕೊಳ್ಳುತ್ತಿರುವಂತೆ ಹಾವು ತುಳಿದವರಂತೆ “ಶೀನಿಂಗಿ!” ಎಂದು ಕಿಟಾರನೆ ಕಿರಿಚಿ ಕರಡಿಗೆ ಎಸೆದಳು. ಕನ್ನಡಿಯಲ್ಲಿ ಏನು ಕಂಡಿತೊ ಎಂದು ನಾನು ಓಡಿಹೋಗಿ ಅವಳು ನೋಡುತ್ತಿದ್ದತ್ತ ನೋಡಿದೆ. ಗಡಂಚಿಯ ಹಿಂಭಾಗದಲ್ಲಿ ಮರ್ಯಾ ಹುದುಗಿದ್ದವನು ಹೊರಗೆದ್ದು ಬಂದು ಕೂತ! ಮರ್ಯಾನ ಭೂತವೇನೊ ಎಂದ ಒಮ್ಮೆ ಅಂದುಕೊಂಡೆ. ಸಿಂಗಾರೆವ್ವ ವಿಕಾರವಾಗಿ ಕಣ್ಣರಳಿಸಿ, ಬಾಯ್ತೆಗೆದು ಅವನನ್ನು ಹಾಗೇ ನೋಡುತ್ತ ಥರಥರ ನಡುಗುತ್ತ ನಿಂತಿದ್ದಳು. ಮರ್ಯಾ ನಮ್ಮನ್ನೇ ನೋಡುತ್ತ –

“ಗದ್ದಲ ಮಾಡಬ್ಯಾಡ್ರಿ, ಊರಾಗ ಪೊಲೀಸರು ಬಂದಾರ. ನನ್ನ ಏನಾರೂ ಹಿಡಿದುಕೊಟ್ರ ನನ್ನ ಜೋಡಿ ನೀವೂ ಜೇಲಿಗೆ ಬರಬೇಕಾಗೈತಿ. ಸುಮ್ಮನ ನನ್ನ ಅಡಗಿಸರಿ.”

“ಜೇಲಿಗಿ ನೀ ಹೋಗು – ಗೌಡನ್ನ ಕೊಂದವ ನೀನು. ನಾವ್ಯಾಕೊ ಹೋಗಬೇಕು ಭಾಡ್ಯಾ? ಹೊರಬಿಳ್ತಿಯೊ, ದೇಸಾಯರನ್ನ ಕರಿ ಅಂದ್ಯೊ?”

“ಸಿಂಗಾರೀ, ನಿನ್ನ ಬುರುಕಿ ಇನ್ನs ಮೆಳ್ಯಾಗs ಬಿದ್ದೈತಿ. ಹುಷಾರ್!”

* * *