ಈಗ ಹದಿನೈದು ದಿನಗಳ ಹಿಂದೆ ನಂದಗಾಂವಿಗೆ ಹೋಗಿದ್ದ ಗೌಡ ಶೀಗೀ ಹುಣ್ಣಿಮೆ ಇನ್ನೆರಡು ದಿನ ಇದೆ ಎನ್ನುವಾಗ ಮತ್ತೆ ಬಂದ. ಈ ಸಲವೂ ಒಬ್ಬ ಪೈಲವಾನನನ್ನು ಜೊತೆಗೆ ಕರೆತಂದಿದ್ದ. ಆತ ಮತ್ತೆ ಮತ್ತೆ ಬರುತ್ತಿರುವುದು ನಮಗ್ಯಾರಿಗೂ ಸರಿ ಬರಲಿಲ್ಲ. ಆದರೆ ಅಸಮಾಧಾನದ ದೃಷ್ಟಿಗಳಿಗೆ ಮೈ ಒಡ್ಡಿ ಅವನ ಮೈ ದಡ್ಡುಬಿದ್ದಿತ್ತು. ಈ ಸಲ ಮಾತ್ರ ಪಕ್ಕಾ ಹಂಚಿಕೆಯೊಂದಿಗೆ ಬಂದ ಹಾಗಿತ್ತು. ಯಾಕೆಂದರೆ ಬಂದ ದಿನ ಮಧ್ಯಾಹ್ನ ದೇಸಾಯಿ ಮಲಗಿದ್ದಾಗ ನಾವ್ಯಾರೂ ದರ್ಬಾರಿನ ಕಡೆ ಸುಳಿಯದಿದ್ದಾಗ ಕಾಗದ ಪತ್ರಗಳನ್ನು ಹುಷಾರಾಗಿ ಪರೀಕ್ಷಿಸಿದ್ದ. ಉದ್ದುದ್ದ ಕಾಗದಗಳನ್ನು ವಿಂಗಡಿಸಿ, ಪಿನ್ನು ಚುಚ್ಚಿ, ಸಿವುಡು ಕಟ್ಟಿ ಮಡಿಚಿ, ಎರಡು ಉದ್ದ ಪಾಕೀಟುಗಳಲ್ಲಿ ಹಾಕಿ, ಎರಡನ್ನೂ ಕೋಟಿನ ಕಿಸೆಯಲ್ಲಿ ಜತನವಾಗಿಟ್ಟುಕೊಂಡಿದ್ದ.

ನಾನು ಇದನ್ನೆಲ್ಲ ಸಿಂಗಾರೆವ್ವನಿಗೆ ಹೇಳಿದರೆ ಆಕೆ ಬೇರೆ ಖುಷಿಯಲ್ಲಿದ್ದಳು. ಈ ಊರಿಗೆ ಬಂದು ಇಷ್ಟು ದಿನಗಳಾದರೂ ಒಮ್ಮೆಯೂ ಆಕೆ ಮನೆಬಿಟ್ಟು ಹೊರಗೆ ಹೋಗಿರಲಿಲ್ಲ. ತೋಟದ ಕಡೆ ಹೋಗುವ ತನ್ನ ಆಸೆಯನ್ನು ದೇಸಾಯಿಗೆ ಹೇಳಿದಾಗ ‘ಹ್ಯಾಗೂ ಶೀಗೀ ಹುಣ್ಣಿಮೆ ಬಂತಲ್ಲ, ಆ ದಿನ ತೋಟಕ್ಕೆ ಹೋಗಿ ಬರಬಹುದೆಂದು, ಹೇಳಿದ್ದ. ಆ ದಿನ ಮತ್ತು ಗಳಿಗೆಯನ್ನು ಎದುಡು ನೋಡುತ್ತಿದ್ದ ಅವಳಿಗೆ ನಾನು ಹೇಳಿದ ವಿಷಯ ತಟ್ಟಲೇ ಇಲ್ಲ. ಅವಳಿಗೇ ಬೇಡಾದ ಮೇಲೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ? ಸುಮ್ಮನಾದೆ.

ಈ ಸಲದ ವಿಶೇಷವೆಂದರೆ ಗೌಡ ಸದಾ ದೇಸಾಯಿಗಂಟಿಕೊಂಡೇ ಇರುತ್ತಿದ್ದ. ಅವನು ಹೋಗುಬರುವಲ್ಲೆಲ್ಲ ಇವನೂ ಜೊತೆಗೇ ಇರುತ್ತಿದ್ದ. ತಾಲೀಮಿಗೂ ಹೋದ. ಕುಡಿಯೋದಕ್ಕೂ ಹೋದ. ಇವನ ಬಯಲಾಟವನ್ನು ನೋಡಿದ್ದಾಗಿ ಸುಳ್ಳು ಸುಳ್ಳೇ ಹೇಳಿ, ಅಟ್ಟದ ಮೇಲೆ ದೇಸಾಯಿ ಥೇಟ್ ರಾಜನ ಹಾಗೆ ಕಾಣಿಸುವುದಾಗಿ ಅದಕ್ಕೆ ಸೇರಿಸಿದ. ಇಷ್ಟಾದರೆ ದೇಸಾಯಿಯನ್ನು ಹಿಡಿಯುವವರ್ಯಾರು? ಊಟ ಬಿಟ್ಟು ಅಂದಿನ ಬಯಲಾಟದ ರಾಜನ ಮಾತುಗಳನ್ನು ರಾಗವಾಗಿ ಮತ್ತೆ ಮತ್ತೆ ಹೇಳಿದ. ಒಂದೆರಡು ತಾರಕ ಕೂಡ ನುಡಿದ. ಗೌಡನಂತೂ ಅಗತ್ಯಕ್ಕಿಂತ ಹೆಚ್ಚು ನಗುತ್ತಿದ್ದ.

ಆಹಾ, ಓಹೋ, ಭಲಾ, ಭೇಷ್ ಎನ್ನುತ್ತ, ಬೆರಗನ್ನು ನಟಿಸುತ್ತ ಗೌಡ ದೇಸಾಯಿಯನ್ನು ಉಬ್ಬಿಸಿದ. ತನ್ನನ್ನು ಹೊಗಳಲು ಈ ಗೌಡನ ಬಳಿ ಸರಿಯಾದ ಮಾತುಗಳಿಲ್ಲವೇನೋ ಎಂದು ದೇಸಾಯಿ ಕೊನೆಗೆ ತನ್ನನ್ನು ತಾನೇ ಹೊಗಳಿಕೊಳ್ಳಲಾರಂಭಿಸಿದ. ಅಥವಾ ತನ್ನನ್ನು ಹೊಗಳಬೇಕಾದ ರೀತಿಯನ್ನು ಗೌಡನಿಗೆ ಕಲಿಸತೊಡಗಿದ. ಬೆರಳು ತೋರಿದರೆ ಹಸ್ತನುಂಗುವ ಗೌಡನಿಗೆ ಇಷ್ಟು ಸುಳಿ ಸಿಕದಕದ್ದೇ ಸಾಕಾಗಿ, ದೇಸಾಯಿಯ ಮಾತುಗಳನ್ನೆಲ್ಲ ಅವನಿಗೇ ತಿರುಗಿಸಿ, ನಾ ಹೇಳ ಬೇಕೆಂದದ್ದೂ ಇದನ್ನೇ – ಎಂದೂ ಹೇಳಿದ. ಊಟಕ್ಕೆ ನೀಡುತ್ತಿದ್ದ ನನಗೂ ಅಡಿಗೆ ಮನೆಯಲ್ಲಿದ್ದ ಸಿಂಗಾರವ್ವನಿಗೂ ಇವನ ಮನಸ್ಸಿನಲ್ಲೇನೋ ಸಂಚಿದೆ ಎಂದು ಖಾತ್ರಿಯಾಗಿತ್ತು.

ರಾತ್ರಿ ದರ್ಬಾರದಲ್ಲಿದ್ದ ದೊಡ್ಡ ಕಂದೀಲನ್ನು ದಾಸಾಯಿ ತನ್ನ ಕೋಣೆಗೆ ಒಯ್ದದ್ದರಿಂದ ಅಲ್ಲಿ ಕತ್ತಲಿತ್ತು. ಉಂಡು ಮಲಗುವ ಮುನ್ನ ನಾನು ಹಣಿಕಿ ಹಾಕಿದಾಗ ಗೌಡನೊಬ್ಬನೇ ದರ್ಬಾರಿನಲ್ಲಿ ಬಹುಶಃ ಯಾವುದೋ ಚಿಂತೆಯಿಂದ ಅಡ್ಡಾಡುತ್ತಿದ್ದ. ನಾನು ಬಾಗಿಲಿನಲ್ಲಿ ನಿಂತದ್ದು ಕಾಣುತ್ತಿರಲಿಲ್ಲವಾದ್ದರಿಂದ ಅದ್ಯಾಕೆ ಹೀಗೆ ಅಡ್ಡಾಡುತ್ತಿದ್ದ. ನಾನು ಬಾಗಿಲಿನಲ್ಲಿ ನಿತದ್ದು ಕಾಣುತ್ತಿರಲಿಲ್ಲವಾದ್ದರಿಂದ ಅದ್ಯಾಕೆ ಹೀಗೆ ಅಡ್ಡಾಡುತ್ತಿದ್ದಾನೆಂದು ತುಸು ಹೊತ್ತು ನಿಂತೆ. ಒಳಗೆ ಪಡಸಾಲೆಯ ತನ್ನ ಕೋಣೆಯಲ್ಲಿ ದೇಸಾಯಿ ಕಂದೀಲಿನ ಮುಂದೆ ಕೂತು ಬಹಳ ಗಂಭೀರವಾಗಿ ಏನನ್ನೋ ಓದುತ್ತಿದ್ದ. ಮತ್ತು ಹಾಗವನು ಓದುವಾಗ ಅವನ ಮುಖದ ಮೇಲಿನ ಪ್ರತಿಕ್ರಿಯಗಳನ್ನು ತಿಳಿಯಲು ಗೌಡ ಆಗಾಗ ಬಂದು ಇಣಕಿ ನೋಡುತ್ತಿದ್ದ. ಮತ್ತೆ ಮೆಲ್ಲಗೆ ಕಳ್ಳನಂತೆ ಹೆಜ್ಜೆ ಇಡುತ್ತ ಹಿಂದೆ ಸರಿಯುತ್ತಿದ್ದ. ಈ ಆಟ ಅನಿರೀಕ್ಷಿತವಾದ್ದರಿಂದ ನಾನು ಬಾಗಿಲು ಬಿಟ್ಟು ಕಂಬದ ಮರೆಯಲಿ ನಿಲ್ಲುವುದಕ್ಕೆ ಹೋದೆ. ಅಲ್ಲಿ ನನ್ನ ಹಾಗೆ ಅಡಗಿ ಯಾರೋ ನಿಂತದ್ದು ಕುಣಿಸಿತು ! ಗೌಡನ ಪೈಲವಾನ ಪಟ್ಟಾಂಗಳದಲ್ಲಿ ಮಲಗಿದ್ದ. ಇವನ್ಯಾರಿ ದ್ದೀತು ? ಇವರ ಸಹವಾಸವೇ ಬೇಡವೆಂದು ನನ್ನ ಪಾಡಿಗೆ ನಾನು ಅಂತಸ್ತಿಗೇರಿದೆ. ಸಿಂಗಾರೆವ್ವನಿಗೆ ಹೇಳಬೇಕೆಂದರೆ ಅವಳಾಗಲೇ ಮಲಗಿದ್ದಳು. ನಿದ್ದೆ ಹತ್ತಿತ್ತೋ ಇಲ್ಲವೋ ತಿಳಿಯೋ ಕುತೂಹಲವೂ ಆಗಲಿಲ್ಲ. ಹೊದ್ದುಕೊಂಡು ಮಲಗಿಬಿಟ್ಟೆ.

ಮಾರನೆಯ ದಿನ ಮಧ್ಯಾಹ್ನದಿಂದಲೇ ನಾನು ಮತ್ತು ಸಿಂಗಾರೆವ್ವ ನಾಳಿನ ಶೀಗೀ ಹುಣ್ಣಿಮೆ ತಯಾರಿಗೆ ತೊಡಗಿದೆವು. ಮನೆಯಲ್ಲಿ ಹೆಣ್ಣಾಳು ಇರಲಿಲ್ಲ. ನಂಜಿ ಹೋದಮೇಲೆ ಇದ್ದವಳೊಬ್ಬಳೂ ಗರ್ಭಿಣಿಯಾಗಿ ಬಿಟ್ಟು ಹೋದದ್ದರಿಂದ ಅಡಿಗೆಯ ಭಾರ ಈ ಒಂದು ತಿಂಗಳಿನಿಂದ ನನ್ನ ಮೇಲೆ ಬಿದ್ದಿತ್ತು. ಆದರೆ ಹಬ್ಬದ ಅಡಿಗೆ ನನ್ನಬ್ಬೊಳಿಂದಲೇ ಅಸಾಧ್ಯವೆಂದು ಬೇರೊಬ್ಬ ಆಳನ್ನು ಕರೆತಂದಿದ್ದೆ. ಸಿಂಗಾರೆವ್ವ ದೇಖರೇಖಿಗೆ ನಿಂತಳು. ದರ್ಬಾರಿನಲ್ಲಿ ಗಂಡಸರ ಮಧ್ಯೆ ಏನು ನಡೆಯುತ್ತಿದೆಯೆಂದು ನಮಗೆ ತಿಳಿಯಲೂ ಇಲ್ಲ. ಆ ಕಡೆ ನಾವು ಕಣ್ಣು ಹಾಯಿಸಲೂ ಇಲ್ಲ. ಹೆಣ್ಣಾಳು ಹುರೆಕ್ಕಿ ಹೋಳಿಗೆಯ ತಯಾರಿಗೆ ಕೂತಳು. ನಾನು ಜೋಳದ ವಡೆಯ ಹಿಟ್ಟಿನಲ್ಲಿ ಕೈಹಾಕಿದೆ. ವಡೆ – ಹೋಳಿಗೆ ಕರಿಯುವ ಕೆಲಸ ಬೆಳ್ಳಂಬೆಳತನಕ ಆಗುವುದರಿಂದ ಮಧ್ಯಾಹ್ನ ತುಸು ಮಲಗೋಣವೆಂದು ನಾನು ಹೇಳಿದೆ. ಸಿಂಗಾರೆವ್ವ ಕೇಳಲಿಲ್ಲ. ಉಳಿದ್ಯಾವ ಹಬ್ಬಗಳಲ್ಲೂ ಸಿಂಗಾರೆವ್ವ ಈ ಪರಿ ಓಡಾಡಿದಿಲ್ಲ. ಆದರೆ ನಾಳೆ ಖುದ್ದಾಗಿ ತೋಟಕ್ಕೆ ಅದೂ ಪ್ರಥಮ ಬಾರಿ ಅರಮನೆ ಬಿಟ್ಟು ಹೊರಗೆ ಹೋಗುವುದಿತ್ತಲ್ಲ, ಅದಕ್ಕೇ ಅವಳ ತರಾತುರಿ ಮಿತಿಮೀರಿತ್ತು. ದೇಸಾಯಿ ಎಂದಿನಂತೆ ಬಯಲಾಟದ ತನ್ನ ಮಾತುಗಳನ್ನು ಬಾಯಿಪಾಠ ಮಾಡುತ್ತಿದ್ದ. ಚಿಮಣಾ ಸಿಕ್ಕದ್ದರಿಂದ ನಾಳೆ ಆಗಬೇಕಿದ್ದ ಅವನ ಬಯಲಾಟ ದೀಪಾವಳಿಯ ದಿನ ಆಗುವುದೆಂದು ನಿರ್ಧಾರವಾಗಿ ಅವನಿಗೆ ನಿರಾಶೆಯಾಗಿತ್ತು. ಅದಕ್ಕೂ ಈಗಿನಿಂದಲೇ ತಯಾರಿ ನಡೆಸಿದ್ದ. ಇನ್ನೊಬ್ಬರಿಗೆ ಕೇಳಿಸದಂತೆ ಏನೇನೋ ಮಾತಾಡಿಕೊಳ್ಳುತ್ತ ಒಂದೊಂದು ಕಂಬದ ಬಳಿಗೆ ಹೋಗಿ ಅದೇ ನಾಯಕಿ ಎಂಬಂತೆ ಹಸ್ತಾಭಿನಯ ಮಾಡುತ್ತಿದ್ದ. ಮಾತು ಮರೆತು ಒಮ್ಮೊಮ್ಮೆ ಅವನ ಉತ್ಸಾಹ ಮಿತಿಮೀರಿ ಮಾತು ಇನ್ನೊಬ್ಬರಿಗೆ ಕೇಳಿಸುವಂತೆ ಹೊರಬರುತ್ತಿತ್ತು. ಛೇ ಎಂದು ಕಂಬಕ್ಕೊಂದು ಗುದ್ದು ಕೊಟ್ಟು, ಕಣ್ಣು ಮುಚ್ಚಿ ಏಕಾಂತ ಸಾಧಿಸಿ ಆ ಮಾತನ್ನು ಮತ್ತೆ ಮೊದಲಿನಿಂದ ಸುರುಮಾಡುತ್ತಿದ್ದ.

ಎರಡೂ ಹಿಟ್ಟು ಕಲಸಿ ಕೊನಿಮಿಗಿಯಲ್ಲಿಟ್ಟು ಹದಕ್ಕೆ ನೆನೆಯಿಟ್ಟಾಗ ಸಾಯಂಕಾಲವಾಗಿತ್ತು. ಕೈತೊಳೆದುಕೊಂಡು ಹೊರಬಂದೆ. ದನಕರು ಬರುವ ಹೊತ್ತಾಯಿತು ಎಂದು ಹಿತ್ತಲ ಬಾಗಿಲು ತೆರೆದಿಟ್ಟು ಬಂದೆ. ಅಷ್ಟರಲ್ಲಿ ದೇಸಾಯಿ ತನ್ನ ಕೋಣೆಯ ಹಾಸಿಗೆಯನ್ನೆಲ್ಲ ಕೊಡುವುತ್ತಿದ್ದುದು ಕಾಣಿಸಿತು. ಏನಿರಬೇಕೆಂದು ಅಲ್ಲಿಗೆ ಹೋದೆ. ಒಳಗೆ ಗೌಡ, ಶೆಟ್ಟಿ ಇಬ್ಬರೂ ಇದ್ದರು. ನನ್ನನ್ನು ಕಂಡೋಡನೆ ರಗ್ಗನ್ನು ಝಾಡಿಸುತ್ತಿದ್ದ ದೇಸಾಯಿ –

“ಶೀನಿಂಗವ್ವಾ, ಗಾದೀಕೆಳಗೊಂದ ಕಾಗದಿತ್ತಲ್ಲ, ನೋಡಿಯೇನು? ಅಂದ.

“ಇಲ್ಲರೀ” ಅಂದೆ.

“ಒಂದು ಕವರಿತ್ತು ನೋಡು, ಇಲ್ಲಿಟ್ಟಿದ್ದೆ” ಎಂದು ಅದರ ಆಕಾರ ಅಳತೆಗಳನ್ನು ಕೈಯಿಂದ ತೋರಿಸಿದ.

“ನಾ ನೋಡೆ ಇಲ್ಲಿರಿ” ಅಂದೆ.

“ಮುಂಜಾನೇ ಹಾಸಿಗೀ ಯಾರು ತೆಗೆದರು?”

“ನಾನs ತೆಗೆದ. ಬರೀ ರಗ್ಗ ಮಡಿಚಿಟ್ಟೆ, ಅಷ್ಟ” –

“ಕಸಾ ಗುಡಿಸೋವಾಗೇನೂ ಕಾಣಲಿಲ್ಲ?”

“ಇಲ್ಲರಿ”

“ದೊರೆಸಾನಿ ತಗೊಂಡಾಳೇನು, ಕೇಳು.”

– ಎಂದು ಹೇಳಿ, ನಾನು ಹೊರಡುವುದಕ್ಕೂ ಕಾಯದೆ ತಾನೇ ಮೇಲೆ ಹತ್ತಿಹೋದ. ಅವನ ಕೋಣೆಯನ್ನು ಹಸನು ಮಾಡುತ್ತಿದ್ದವಳು ನಾನೇ. ಒಮ್ಮೊಮ್ಮೆ ಸಿಂಗಾರೆವ್ವನೂ ಅವನ ಕೋಣೆಗೆ ಹೋಗುವುದಿತ್ತು. ನಮ್ಮಿಬ್ಬರನ್ನುಳಿದು ಬೇರೆ ಯಾರೂ ಅಲ್ಲಿ ಪ್ರವೇಶಿಸುತ್ತಿರಲಿಲ್ಲ. ಅಲ್ಲದೆ ಅಲ್ಲಿ ಅಂಥ ಅಪರೂಪದ್ದೇನೂ ಇರಲಿಲ್ಲಿ ಕೂಡ. ಎಂಥಾ ಕಾಗದ, ಏನು ಕಥೆ ಎಂದು ಹೊಯ್ಕಾಗಿ ನಾನೂ ಅವನ ಬೆನ್ನ ಹಿಂದೆ ಅಂತಸ್ತಿಗೇರಿದೆ. ಸಿಂಗಾರೆವ್ವ ನನ್ನ ಹಾಗೆ ತನಗೇನೂ ಗೊತ್ತಿಲ್ಲವೆಂದಳು – ದೇಸಾಯಿ ಚಡಪಡಿಸತೊಡಗಿದ. ಅದ್ಯಾವುದೋ ಮಹತ್ವದ ಕಾಗದವೆಂದು ಅವನ ಚಡಪಡಿಕೆ ನೋಡಿಯೇ ಗೊತ್ತಾಯಿತು. ಸಿಂಗಾರೆವ್ವ ತಡೆಯದೆ “ಏನ ಕಾಗದ ಅದು?” ಎಂದಳು. ದೇಸಾಯಿಗದು ಕೇಳಿಸಲಿಲ್ಲವೋ, ಅಥವಾ ಉತ್ತರ ಕೊಡೋದಕ್ಕೆ ಮನಸ್ಸಿರಲಿಲ್ಲವೊ ತನ್ನ ಕಳವಳದಲ್ಲಿ ತಾನಿದ್ದ. ಅವಸರದಲ್ಲಿ ಏನೋ ಹೇಳುವವನಂತೆ ಕೂತು, ಏನೂ ಹೇಳದೆ ಎದ್ದು ನಿರಾಶೆಯಿಂದ ಕೆಳಕ್ಕೆ ಹೊರಟ್ಟಿದ್ದ. ಅಷ್ಟರಲ್ಲಿ ಗೌಡನೂ ‘ಸಿಕ್ಕಿತೇನ್ರಿ?’ ಎನ್ನುತ್ತ ಮೇಲೆ ಬಂದ. ಇಲ್ಲ ಎಂದು ಹೇಳಿ ಹೊರಡುವುದರಲ್ಲಿದ್ದಾಗ,

“ಯಾವುದು? ನಾ ಕೊಟ್ಟ ಕಾಗದೇನ್ರಿ?” ಎಂದು ಗೌಡ ಕೇಳಿದ.

“ಹೌಂದು, ಅದೂ ಅದರಾಗs ಇತ್ತು”

“ಅಂದರ ನಾ ಕೊಟ್ಟದ್ದಲ್ಲದ ಇನ್ನೊಂದಿತ್ತೇನ್ರಿ?”

“ಹೌಂದು, ನೀವು ತಗೊಂಡೀರೇನು?”

“ಇಲ್ಲ, ಹುಡುಕೋಣ ತಡೀರಿ”

– ಎಂದು ಗೌಡ ಹೇಳುತ್ತಿದ್ದಂತೆಯೇ ದೇಸಾಯಿ ಕೆಳಗಿಳಿದು ಹೋದ. ಗೌಡ ಇಳಿಯಲಿಲ್ಲ. ದೇಸಾಯಿಯ ಪ್ರಶ್ನೆಗಳನ್ನೇ ಇವೂ ಕೇಳಿದ. ಇಬ್ಬರೂ ನಮಗ್ಗೊತ್ತಿಲ್ಲ ಎಂದೆವು. ಅದೇನು ಕಾಗದ ಎಂದು ಸಿಂಗಾರೆವ್ವ ಇವನನ್ನೂ ಕೇಳಿದಳು. ಏನಿಲ್ಲ ಎಂದು ಹಾರಿಕೆಯ ಉತ್ತರಕೊಟ್ಟು ವಕ್ರವಾಗಿ ನನ್ನ ಕಡೆ ನೋಡುತ್ತ “ನಿನ್ನಿ ರಾತ್ರಿ ಮರ್ಯಾ ಏನಾದರೂ ಈ ಕಡೆ ಬಂದಿದ್ನೇನು?” ಎಂದು ಕೇಳಿದ. ಇದ್ದಿರಬೇಕೆನೋ ಅಂದುಕೊಂಡೆ. ಯಾಕೆಂದರೆ ನಿನ್ನೆ ರಾತ್ರಿ ದೇಸಾಯಿ ಆ ಕಾಗದ ಓದುತ್ತಿದ್ದಾಗ, ಗೌಡ ಹೊರಗೆ ಹೊಂಚಿದ್ದಾಗ, ಕಂಬದ ಮರೆಯಲ್ಲಿ ಯಾರೋ ನಿಂತದ್ದನ್ನು ನೋಡಿದ್ದೆ, ಮರ್ಯಾ ಇದ್ದರೂ ಇರಬಹುದೆನಿಸಿತು. ಹೇಳಿ ಯಾರದೋ ಪೀಡೆಯನ್ನು ಮತ್ಯಾಕೆ ಉಡಿಗೆ ಹಾಕಿಕೊಳ್ಳಲಿ? ನಂಗೊತ್ತಿಲ್ಲ ಅಂದೆ. ಗೌಡ ಕೆಳಗೆ ಹೋದ. ನಾವಿಬ್ಬರೂ ಏನಿದರ ಅರ್ಥ ಎಂಬಂತೆ ಪರಸ್ಪರ ಮುಖ ನೋಡಿಕೊಂಡೆವು. ಏನೂ ಬಗೆಹರಿಯಲಿಲ್ಲ. “ಗಂಡಸರ ವ್ಯವಹಾರs ಹಿಂಗ” ಎಂದು ಸಿಂಗಾರೆವ್ವ ಹೇಳಿ ಆ ಸಮಸ್ಯೆಗೆ ನಮ್ಮ ಪಾಲಿನ ಮುಕ್ತಾಯ ಕೊಟ್ಟಳು.

* * *