ಶಿವಾಪುರದ ಬಳಿ ನಾನು ಬಸ್ಸಿನಿಂದಿಳಿದಾಗ ಮಟಮಟಾ ಮಧ್ಯಾಹ್ನವಾಗಿತ್ತು. ಸುತ್ತ ಯಾರೂ ಇರಲಿಲ್ಲ. ಅವು ಬೇಸಿಗೆಯ ದಿನಗಳಾದ್ದರಿಂದ ಊರವರ್ಯಾರೂ ಹೊಲಗಳ ಕಡೆಗೆ ಸುಳಿಯುವುದೂ ಇಲ್ಲ. ಇಕ್ಕೆಡೆಗಳಲ್ಲಿ ದಟ್ಟವಾಗಿ ಬೆಳೆದ ಕಳ್ಳಿ, ಅದರ ಮಧ್ಯೆ ಇಕ್ಕಟ್ಟಾದ ದಾರಿ, ಸುಡುಸುಡುವ ಬಿಸಿಲು, ಒಂದಾದರೂ ಹಕ್ಕಿಯ ಉಲುವಿಲ್ಲ. ಊರು ದೂರವಿಲ್ಲದಿದ್ದರೂ ಒಟ್ಟಾರೆ ಬೋರಾಯಿತು. ಮಲೆನಾಡಿನ ನಿಸರ್ಗ ಒಂದು ಥರವಾದರೆ, ಬಯಲಸೀಮೆಯ ನಿಸರ್ಗ ಇನ್ನೊಂದು ಥರ. ಥರಾವರಿ ಸಮೃದ್ಧ ಹಸಿರಿನಿಂದ ಮೈಮನಸ್ಸುಗಳಿಗೆ ತಂಪೆರೆದು ಧನ್ಯವಾಗಿರುವ ರೀತಿ ಮಲೆನಾಡಿನದು. ಅಲ್ಲಿ ಬರುವ ಹಿಂಸಪ್ರಾಣಿಗಳು ಕೂಡ ಆ ಸೌಂದರ್ಯದ ಚಿತ್ತಾರಗಳಾಗಿ, ಅವುಗಳ ಕ್ರೌರ್ಯ ಸುಂದರ ಅನುಭವವಾಗುತ್ತದೆ. ಬಯಲಸೀಮೆ ಹಾಗಲ್ಲ. ಎತ್ತ ನೋಡಿದರತ್ತ ಬೆತ್ತಲಾಗಿ ಬಿದ್ದ ಬೋಳುಬಂಡೆಗಳು, ಒಣಗಿ ತಲೆ ಕೆದರಿಕೊಂಡ ಗಿಡಮರಗಳು, ಬಿಸಿಲಿಗೆ ಸುಟ್ಟು ಕರಕಾದ ಎರೆನೆಲ, ಇವುಗಳ ಮಧ್ಯೆ ಎಲ್ಲಾದರೂ ಹಸಿರು ಕಣ್ಣಿಗೆ ಬಿದ್ದರೂ ಸಾಕು, ಕಣ್ಣಿಗೆ ಹಿಂಸೆಯಾಗುತ್ತದೆ. ತನ್ನ ಬೋಳುತನ, ಬಂಜೆತನ, ನಿಷ್ಕ್ರಿಯತೆಗಳಿಂದ ಇಲ್ಲಿಯ ನಿಸರ್ಗ ಪಂಚೇಂದ್ರಿಯಗಳನ್ನು ಇರಿಯುತ್ತದೆ. ಇರಿದು ಇರಿದು ತನ್ನ ಹಾಜರಿಯನ್ನು ಮನಸ್ಸಿನ ಮೇಲೆ ಹೇರುತ್ತದೆ. ಮತ್ತು ಮನುಷ್ಯನನ್ನು ತನ್ನ ಹಾಗೇ ಕ್ರೂರಿಯನ್ನಾಗಿ ಮಾಡುತ್ತದೆ. ಇಲ್ಲಿ ಆಗುವಷ್ಟು ಕೊಲೆ ಖೂನಿ ಹಾದರಗಳು ಬೇರೆ ಕಡೆ ಆಗದೇ ಇರುವುದಕ್ಕೆ ಇದೇ ಕಾರಣವಾಗಿರಬಹುದು. ಇಂಥ ಧಗಧಗಿಸುವ ಬಿಸಿಲಿನಲ್ಲಿ ಎಂಥಾ ಸಮಚಿತ್ತನ ಪಿತ್ಥವೂ ನೆತ್ತಿಗೇರಿ ಆತ ಅಘಟಿತ ಘಟನೆಗಳನ್ನು ಮಾಡುವಂತೆ ಪ್ರೇರೇಪಿಸುವುದು ಸಾಧ್ಯ.

ಇಲ್ಲಿ ಅನೇಕ ದಿನ ಘಟನೆಗಳು ಜರುಗುವುದೇ ಇಲ್ಲ. ದಟ್ಟ ಬಿಸಿಲು, ದಟ್ಟ ಕತ್ತಲೆಗಳನ್ನುಳಿದು. ನಿಸರ್ಗದ ಇಂಥ ನಿಷ್ಕ್ರಿಯತೆಯಿಂದ ಮನುಷ್ಯನಿಗೆ ಬೋರ್ ಬೋರಾಗಿ ಕೊನೆಗೆ ಇನ್ನೇನು ‘ದೇವರು ನಮ್ಮನ್ನು ಕಾಪಾಡಲಿಲ್ಲ’ ಎನ್ನುವಾಗ ಮಳೆಗಾಲ ಬರುತ್ತದೆ. ಆಗ ಇಲ್ಲಿಯ ಜನರ ಕಣ್ಣಿಗೆ ತುಸು ಜೀವಕಳೆ, ತುಸು ಬೆಳಕು ಇಳಿಯುತ್ತದೆ. ಮಳೆ ಕೂಡ ಇವರೊಂದಿಗೆ ಒಳ್ಳೆಯ ಅತಿಥಿಯಂತೆ ವ್ಯವಹರಿಸುವುದಿಲ್ಲ. ಮಳೆಗಾಲದ ಮೋಡಗಳು ಕ್ಷಯರೋಗಿಯಂತೆ ಬಿಳಿಚಿಕೊಂಡಿರುವುದನ್ನು ನೋಡಿದರೆ ಇಲ್ಲಿ ಜನ ಹ್ಯಾಗಾದರೂ ಬದುಕಿದ್ದಾರೆಂದು ಆಶ್ಚರ್ಯವಾಗುತ್ತದೆ. ಅವರ ಹೋರಾಟವನ್ನು ಅಭಿನಂದಿಸಬೇಕೆನಿಸುತ್ತದೆ.

ಅದಕ್ಕೇ ಇರಬೇಕು. ಮಳೆ, ಮಕ್ಕಳು ಮತ್ತು ಹೆಣ್ಣು ಇಲ್ಲಿಯ ಜನರ ಸೂಕ್ಷ್ಮವಾದ ಮರ್ಮಸ್ಥಾನಗಳು, ಇವರೆಲ್ಲ ಆಸೆ, ನಿರಾಸೆ ಭಾವನೆಗಳ ಉಗಮ ಈ ಮರ್ಮಸ್ಥಾನಗಳಿಂದಲೇ. ನಿಜ ಹೇಳಬೇಕೆಂದರೆ ಇಲ್ಲಿಯ ದೇವರುಗಳು ಕೂಡ ಹುಟ್ಟಿದ್ದು ಈ ಮರ್ಮಸ್ಥಾನಗಳಿಗೆ, ಈಯೆಲ್ಲ ದೇವರುಗಳು ಮಳೆಯ ಮೇಲೆ ಹತೋಟಿ ಹೊಂದಿ, ಮಳೆ ಬರಿಸುವ, ಮಕ್ಕಳ ಫಲಪುತ್ರ ಸಂತಾನ ಸೌಭಾಗ್ಯ ನೀಡುವ ಸಮೃದ್ಧಿ ದೇವತೆಗಳು. ಮಳೆ ಬರಿಸುವ ಕಪ್ಪೆ ಅವರ ದೇವರು, ಶಿಶ್ನರೂಪದ ಜೋಕುಮಾರಸ್ವಾಮಿ ಅವರ ದೇವರು. ಯೋನಿರೂಪದ ಕರಗ ಅವರ ದೇವರು…

ಹೀಗೆ ವಿಚಾರ ಮಾಡುತ್ತಿದ್ದಾಗ ಊರು ಬಂತು. ಸೀದಾ ಅಣ್ಣನ ಮನೆಗೆ ಹೋದೆ. ಅವನೀಗ ಹೊಸಮನೆ ಕಟ್ಟಿಸಿಕೊಂಡು ಅಲ್ಲೇ ವಾಸಿಸುತ್ತಿದ್ದ. ಹಳೆಯ ಮನೆಯನ್ನು ದನದ ಕೊಟ್ಟಿಗೆಯನ್ನಾಗಿಸಿಕೊಂಡಿದ್ದ. ನಾವು ಹುಟ್ಟಿ ಬೆಳೆದದ್ದು ಈ ಹಳೆ ಮನೆಯಲ್ಲಿಯೇ. ಹ್ಯಾಗೂ ಅಲ್ಲಿ ಒಂದು ಕೋಣೆ ಖಾಲಿಯಿದ್ದುದರಿಂದ ಹಸನು ಮಾಡಿಸಿ ಅಲ್ಲಿಯೇ ನನ್ನ ವಾಸದ ವ್ಯವಸ್ಥೆ ಮಾಡಿಕೊಂಡೆ. ಅಷ್ಟರಲ್ಲಿ ಹಳೇಗೆಳೆಯರು, ಪರಿಚಿತರು ಬಂದರು. ಬಂದವರೊಡನೆ ಶೀನಿಂಗವ್ವನ ಬಗ್ಗೆ ವಿಚಾರಿಸಿಕೊಂಡೆ. ಅವಳಿಗಿನ್ನೂ ಅರಳುಮರಳಾಗಿಲ್ಲವೆಂದು ತಿಳಿಯಿತು.

ಮಾರನೇ ದಿನ ಶೀನಿಂಗವ್ವನನ್ನು ನೋಡಲು ಓಂಪ್ರಥಮದಲ್ಲಿ ನನ್ನ ಮಿತ್ರ ಶಿರಸೈಲನೊಂದಿಗೆ ಅರಮನೆಗೆ ಹೋದೆ. ಇದೇ ಮೊದಲನೇ ಬಾರಿ ಇದ್ದುದ್ದರಿಂದ ಪೂರ್ವದ ಭಯದಲ್ಲೋ, ಇಲ್ಲವೆ ಅರಮನೆ ನೋಡುವ ಸಡಗರದಲ್ಲೋ ನನ್ನ ಎದೆ ಹಾರುತ್ತಿತ್ತು. ಪೌಳಿ ದಾಟಿ ಒಳಗೆ ಹೊರಡುವಷ್ಟರಲ್ಲಿ ಶೀನಿಂಗವ್ವನೇ ಹೊರಬಂದಳು. ತುಂಬು ಹಣ್ಣುಹಣ್ಣಾದ ಮುದುಕಿ. ಕಡ್ಡಿ ಮುರಿದು ಅಂಟಿಸಿದ ಹಾಗೆ ಅವಳ ಮುಖದಲ್ಲಿ ಗೆರೆ ಮೂಡಿದ್ದವು. ಅಡ್ಡತಿಡ್ಡ ಗೆರೆಯ ಬಿಳಿ ಮುಖದಲ್ಲಿ ಬಹಳ ಚಂಚಲವಾದ ಎರಡು ನೀಲಿ ಕಣ್ಣು ನೀರಾಡಿ ಹೊಳೆಯುತ್ತಿದ್ದವು. ತುಸು ಗಿಡ್ಡಮೂಗು, ತೆಳುವಾದ ತುಟಿ, ಗದ್ದ ತುಂಟುತನದಿಂದ ತುಸು ಮುಂದೆ ಬಂದಿದ್ದು ಅವಳ ವಯಸ್ಸಾದ ಮುಖಕ್ಕೆ ಅದೂ ಒಂದು ಬಗೆಯ ಶೋಭೆ ತಂದಿತ್ತು. ನೋಡಿದರೆ ಒಂದು ಕಾಲಕ್ಕೆ ಖಂಡಿತ ಕುರೂಪಿಯಾಗಿರಲಿಲ್ಲವೆಂದು ಹೇಳಬಹುದಾದ ಆದರೆ ತುಂಬ ಅನುಭವವುಂಡವಳಾದ್ದರಿಂದ ಗೌರವಭಾವನೆ ಉಕ್ಕುವಂತೆ ಮಾಡುವ ವ್ಯಕ್ತಿತ್ವ ಅವಳದೆಂದು ಗೊತ್ತಾಗುತ್ತಿತ್ತು. ಬಂದವಳೇ ಅಸ್ಪಷ್ಟವಾಗಿ ಕಂಡ ನಮ್ಮನ್ನು ಹುಬ್ಬಿಗೆ ಕೈ ಹಚ್ಚಿಕೊಂಡು ನೋಡುತ್ತ “ಯಾರಪಾ ನೀವು?” ಎಂದಳು. ಶಿರಸೈಲ ನನ್ನ ಸಹಾಯಕ್ಕೆ ಬಂದ. ನನ್ನ ತಂದೆಯ ಹೆಸರು ಹೇಳಿ ಅವನ ಮಗ ಬಂದಿರುವುದಾಗಿ ಹೇಳಿದ. ಮುದುಕಿ ನಮ್ಮಪ್ಪನ ಸದ್ಗುಣ ನೆನೆದು ಕಣ್ಣಿರು ಸುರಿಸಿದಳು. “ಅಂಥವರು ಈಗೆಲ್ಲಿದ್ದಾರಪ್ಪಾ!” ಎಂದು ಅತ್ತಳು. ನನ್ನ ತಾಯಿಯನ್ನು ಜ್ಞಾಪಿಸಿಕೊಂಡು ಇನ್ನೊಮ್ಮೆ ಅತ್ತಳು. ನಮ್ಮನ್ನು ಕಾಪಾಡುವಾಗ ನನ್ನ ತಾಯಿ ಸೀತೆ ಸಾವಂತ್ರಿಯ ಹಾಗೆ ‘ಕಣ್ಣೀರಿನಲ್ಲಿ ಕಲ್ಲು ಕುದಿಸಿ ಮುಳ್ಳು ಬೇಯಿಸಿ ತಿಂದದ್ದನ್ನು’ ಭಾವಪೂರಿತವಾಗಿ ನೆನೆದು ಮತ್ತಷ್ಟು ಅತ್ತಳು. ನನಗೆ ಏನು ಮಾಡುವುದಕ್ಕೂ ತೋಚಲಿಲ್ಲ. ಸಮಾಧಾನ ಮಾಡುವ ಗೋಜಿಗೂ ಹೋಗಲಿಲ್ಲ. ಯಾಕೆಂದರೆ ಅವಳು ಸಮಾಧಾನ ಹೊಂದ್ಯಾಳೆಂದು ನನಗೆ ವಿಶ್ವಾಸವಿರಲಿಲ್ಲ. ನನಗೆ ಚಿಂತೆಯಾದದ್ದು ಈ ಮುದುಕಿಯಿಂದ   ಹ್ಯಾಗೆ ಈ ಮನೆತನದ ಕಥೆ ಹೊರಡಿಸೋದು – ಎಂದು. ಅವಳು ಇನ್ನೂ ಏನೇನೋ ಆ ಕಾಲ ನೆನೆದು ಆಳುತ್ತಿದ್ದಾಗ ಶಿರಸೈಲನಿಗೆ ಸಣ್ಣದನಿಯಲ್ಲಿ ನನ್ನ ಆತಂಕ ಹೇಳಿದೆ. ಅವನೂ ಅಷ್ಟೇ ಸಣ್ಣ ದನಿಯಲ್ಲಿ “ಎಣ್ಣಿ (ಸೆರೆ) ಇಳಿದರ ತಾನs ದಾರಿಗೆ ಬರ‍್ತಾಳ ಬಿಡು” ಅಂದ. ಅಷ್ಟರಲ್ಲಿ ಮುದುಕಿಗೆ ಎದುರಿಗಿನ ನಮ್ಮ ಅರಿವು ಮೂಡಿ.

“ಬೆಳಗಾವ್ಯಾಗ ಸಾಲೀಬರೀತಿ, ನೀನs ಅಲ್ಲಾ ಮಗನs?” – ಎಂದಳು. ನಾನು “ಹೌಂದಬೇ” ಎಂದೆ. ಶಿರಸೈಲನಿಗಿದು ಸರಿಬರಲಿಲ್ಲ.

“ಸಾಲೀ ಎಲ್ಲ ಬರದ ಮುಗಿಸಿ ಈಗ ದೊಡ್ಡ ಸಾಹೇಬ ಆಗ್ಯಾನಬೇ.”

– ಅಂದ. ಸುದೈವದಿಂದ ಮುದುಕಿಯ ಕಿವಿ ಹರಿತವಾಗಿದ್ದವು. ಕೇಳಿದವಳೇ ಎದೆಯ ಮೇಲೆ ಎರಡೂ ಕೈ ಊರಿಕೊಂಡು “ಅವ್ ಅವ್ ಅವ್ ನನ ಶಿವನs” ಎಂದು ಹೊಯ್ಕನು ಭವಿಸಿ “ಬಾ ಇಲ್ಲಿ ನೋಡೋಣು” ಎಂದು ಎರಡೂ ಕೈಯಲ್ಲಿ ನನ್ನ ಮುಖ ಹಿಡಿದು ತನ್ನ ಕಣ್ಣಿನ ಸಮೀಪಕ್ಕೊಯ್ದು ನೋಡಿದಳು. ತಕ್ಕಣ ನನ್ನ ಮುಖ ಬಿಟ್ಟು ಬೆಳಗಾವಿಯಲ್ಲಿದ್ದ ರವಿಚಂದ್ರನನ್ನು ನೆನೆದು ಕಟ್ಟೆಯ ಮೇಲೆ ಕುಸಿದು ಕೂತಳು. ಇದನ್ನೆಲ್ಲ ನೋಡಲು ನಾವು ನಿಲ್ಲಲಿಲ್ಲ. ಅರಮನೆಯ ಒಳಗೆ ಹೊಕ್ಕೆವು. ಎದುರಿಗಿನ ಭವ್ಯ ಕಟ್ಟಡ ನೋಡಿ ದಂಗಾಗಿ ನಿಂತುಬಿಟ್ಟೆ. ನಮ್ಮ ಬಡ ಊರಿನಲ್ಲಿ ಇಂಥ ಅದ್ಭುತವಾದೊಂದು ‘ಅರಮನೆ’ ಇದ್ದು ನಾನು ಈತನ ನೋಡಿಲ್ಲದ್ದಕ್ಕೆ ಹಳಹಳಿಸಿದೆ. ಇದರ ಬಗ್ಗೆ ಇರುವ ನಮ್ಮೂರು ಗರತಿಯರ ಹಾಡು ಕೇಳಿದ್ದೆ, ಕೇಳಿ ಕಲ್ಪಿಸಿಕೊಂಡಿದ್ದೆ. ಆದರೆ ಈ ಅರಮನೆ ನನ್ನ ಕಲ್ಪನೆ ಮೀರಿತ್ತು. ಸಾಲು ಸಾಲು ಕಂಬಗಳ ದೊಡ್ಡ ಒಡ್ಡೋಲಗ ಶಾಲೆ, ಪ್ರತಿಕಂಬದ ಸೂಕ್ಷ್ಮ ಕೆತ್ತನೆ ಕೆಲಸ. ಗೋಡೆಗಳ ಮೇಲೆ ಬರೆದ ಹಳೇ ಚಿತ್ರಗಳು, ಮೇಲೆ ನೋಡಿದರೆ ಮತ್ತೆ ಮರಗೆಲಸದ ಸೂಕ್ಷ್ಮ ವಿನ್ಯಾಸಗಳು… ನಿಜ ಹೇಳುತ್ತೇನೆ. ನಾನು ನಮ್ಮೂರಲ್ಲಿದ್ದುದನ್ನೇ ಮರೆತುಬಿಟ್ಟೆ. ಒಡ್ಡೋಲಗ ಸಾಲೆಗಿದ್ದ ಒಂದೇ ಒಂದು ದೊಡ್ಡ ಬಾಗಿಲು ದಾಟಿ ಒಳಕ್ಕೆ ಹೋದರೆ ಪಡಸಾಲೆ. ಅದಕ್ಕಂಟಿ ದೇವರ ಕೋಣೆಯಿದೆ. ಅದರಾಚೆ ಒಂದು ಸಣ್ಣಕೋಣೆ, ಬೆಳಕು ಸಾಲದ ಇಂಥ ಮೂರು ಕೋಣೆ ದಾಟಿದರೆ ತುಸು ಬೆಳಕಿನ ಇನ್ನೊಂದು ಕೋಣೆ, ಅಲ್ಲಿಂದ ಮೇಲಿನ ಅಂತಸ್ತಿಗೆ ಹೋಗುವ ಮೆಟ್ಟಿಲುಗಳಿವೆ. ಹೀಗೆ ಹತ್ತು ಬಾಗಿಲು ದಾಟಿ ಮೆಟ್ಟಲೇರಿ ಮೇಲೆ ಹೋದೆ.

ಒಳಗೆ ಕತ್ತಲಿತ್ತ. ನನಗಿಂತ ಮುಂಚೆಯೇ ನುಗ್ಗಿದ ಶಿರಶೈಲ ಕಿಟಕಿಯ ಬಾಗಿಲು ತೆಗೆದ. ಈ ಕಿಟಕಿಗಳು ಸಾಮಾನ್ಯವಾದವುಗಳಲ್ಲ, ರಾತ್ರಿ ಸಮಯದಲ್ಲಿ ದೂರದ ಎಷ್ಟೋ ರೈತರಿಗೆ ಮಂದಬೆಳಕಿನ ಈ ಕಿಟಕಿಗಳೇ ಹಾದಿ ತೋರಿಸುವ ನಕ್ಷತ್ರಗಳು! ಇದನ್ನು ಹಾಗೆ ಗುರುತಿಸಿ ನಾನೆಷ್ಟೋ ಬಾರಿ ಊರು ಸೇರಿದ್ದೇನೆ. ಈಗ ಮಾತ್ರ ಆ ಕಿಟಕಿಯಿಂದ ಬರುವ ಬೆಳಕು ಒಳಗಿಗೆ ಸಾಲುತ್ತಿರಲಿಲ್ಲ. ಎರಡೇ ಕಿಟಕಿಯಿದ್ದ ಈ ವಿಶಾಲ ಕೋಣೆಯ ಮಧ್ಯೆ ಒಂದು ದೊಡ್ಡ ಮಂಚವಿತ್ತು. ಅದರ ಮೇಲೊಂದು ಮಾಸಿದ ಕುತನೀಗಾದಿಯಿತ್ತು. ಅದರ ಪಕ್ಕದಲ್ಲೊಂದು ಕಪಾಟಿದ್ದು ಅದಕ್ಕೆ ದೊಡ್ಡದೊಂದು ನಿಲುವುಗನ್ನಡಿ ಅಂಟಿಸಲಾಗಿತ್ತು. ಕನ್ನಡಿ ಮುಂದೆ ಕೂತು ಸಿಂಗರಿಸಿಕೊಳ್ಳಲು ಅನುಕೂಲವಾಗುವಂತೆ ಅದರೆದುರೊಂದು ಗಡಂಚಿಯಿತ್ತು. ಇಲ್ಲಿಯೂ ಜಂತಿಜಂತಿಯ ಮೇಲೆ ಕೆತ್ತನೆ ಕೆಲಸವಿದ್ದು ಸೂಕ್ಷ್ಮವಾಗಿ ನೋಡಿದರೆ ಹೆಣ್ಣುಗಂಡು ನಾನಾ ಭಂಗಿಗಳಲ್ಲಿ ಭೋಗಿಸುವ ವಿನ್ಯಾಸಗಳಿದ್ದದ್ದು ಗೊತ್ತಾಗುತ್ತಿತ್ತು. ನಾನು ಅವುಗಳನ್ನೇ ತೀಕ್ಷ್ಣವಾಗಿ ನೋಡುತ್ತಿದ್ದಾಗ ಶಿರಸೈಲ ಬಾಯ್ಗೆ ಕೈಯಿಟ್ಟುಕೊಂಡು ಒಳಗೊಳಗೇ ನಗುತ್ತಿದ್ದ. ಅವನನ್ನೆಳೆದುಕೊಂಡು ಇನ್ನೊಂದನ್ನು ನೋಡತೊಡಗಿದೆವು. ಅದರಲ್ಲಿ ಹೆಣ್ಣೊಬ್ಬಳು ನಾಯಿಯ ಜೊತೆ ಭೋಗಿಸುತ್ತಿದ್ದಳು. ಈಗ ಮಾತ್ರ ನನ್ನ ಮಿತ್ರನ ನಗೆ ಖೊಖ್ ಎಂದುಕ್ಕಿ ಹೊರಸೂಸಿಬಿಟ್ಟಿತು. ಆಶ್ವರ್ಯವೆಂದರೆ ಅಷ್ಟು ದೊಡ್ಡ ಕೋಣೆಗೆ ಎರಡೇ ಕಿಟಕಿಯಿದ್ದದ್ದು. ಊರಕಡೆಗಿನ ಎರಡು ಗೋಡೆಗಳಲ್ಲೂ ಕಿಟಕಿಗಳಿರಲಿಲ್ಲ. ದಕ್ಷಿಣದ ಕಿಟಿಕಿಯಲ್ಲಿ ನೋಡಿದರೆ ಹೊಲೆಯರ ಗುಡಿಸಲುಗಳಿಂದ ಆವೃತವಾದ ಬಯಲಿದೆ. ನಮ್ಮೂರಿನ ಕಲಾವಿದರು ಬಯಲಾಟ ಮಾಡುವುದು ಇಲ್ಲಿಯೇ. ಅಂಥ ಬಯಲಾಟಗಳನ್ನು ಈ ಕಿಟಕಿಯಿಂದಲೇ ನೋಡಬಹುದಿತ್ತು. ಬೇಕಾದರೆ ಮಂಚದ ಮೇಲೆಯೇ ಒರಗಿಕೊಂಡು ಕೂಡ ನೋಡಬಹುದಿತ್ತು. ದೊರೆಸಾನಿಯರು ಬಯಲಾಟಗಳನ್ನು ಇಲ್ಲಿಂದಲೇ ನೋಡುತ್ತಿದ್ದರೆಂದು ಊಹಿಸಿಕೊಂಡು ಇನ್ನೊಂದು ಕಿಡಿಕಿಗೆ ಹೋದೆ. ಅದು ಪಶ್ಚಿಮ ದಿಕ್ಕಿನದು. ನೋಡಿದರೆ ಬಯಲು ಹೊಲಗಳಗುಂಟ ಒಂದು ಕಾಲುದಾರಿ ಸುಳಿದು ತುಸು ದೂರದ ಹುಣಸೇಮೆಳೆಗೆ ಸೇರುತ್ತದೆ. ಅಲ್ಲಿಯೇ ಕುಮುದವ್ವನ ಗುಡಿಯಿರೋದು. ಅದರ ಬಗ್ಗೆ ನಿಮಗಾಗಲೇ ಹೇಳಿದ್ದೇನೆ.

ಅಂತಸ್ತಿನ ಕೋಣೆಯನ್ನು ಇನ್ನಷ್ಟು ವಿವರವಾಗಿ ನೋಡಿ ನಾನು ಮತ್ತ ಶಿರಸೈಲ ಕೆಳಗಿಳಿದು ಬಂದೆವು. ನಾವು ಒಳಕ್ಕೆ ಹೋಗುವ ಮುನ್ನ ಕುಸಿದು ಕೂತ ಶೀನಿಂಗವ್ವ ಎದ್ದು ಬಂದು ಎದುರಾದಳು. ಈ ಸಲ ಅವಳು ಅಳುತ್ತಿರಲಿಲ್ಲ. ಸುಮ್ಮನೆ ಬೆನ್ನು ಹತ್ತಿದಳು. ಹೊರಕ್ಕೆ ಬಂದಾಗ ಮನೆಯ ಕಟ್ಟೆಯೊಡೆದು ಒಂದು ಪತ್ರೀಗಿಡ ಬೆಳೆದದ್ದನ್ನು ಶಿರಸೈಲ ತೋರಿಸಿದ. ನನಗದು ಗೊತ್ತಿತ್ತು. ಶೀನಿಂಗವ್ವನ ಕಡೆ ನೋಡಿದೆ. ನಾನು ನಿರೀಕ್ಷಿದ್ದಂತೆಯೇ ಮುದುಕಿ “ಕತೀ ಆಗಿ ಹೋದ್ನೋ ಮಗನs” ಎನ್ನುತ್ತ ಮತ್ತೆ ಅಳತೊಡಗಿದಳು. ಅರಮನೆ ನೋಡಿ ನನ್ನ ಮನಸ್ಸಿಗೂ ನೋವಾಗಿತ್ತು. ಅವಳನ್ನು ಸಮಾಧಾನ ಮಾಡುವಷ್ಟು ನೆಮ್ಮದಿ ನನಗಿರಲಿಲ್ಲ. ಸಾಯಂಕಾಲ ಬಂದರಾಯ್ತೆಂದು ಮನೆಗೆ ಹೋದೆವು.

ಮಧ್ಯಾಹ್ನ ಉಂಡು ಅಡ್ಡಾದಾಗಲೂ ಸಲಕ್ಕೊಮ್ಮೆ ಅಳುವ ಈ ಮುದುಕಿಯಿಂದ ಕಥೆ ಹ್ಯಾಗೆ ಹೊರಡಿಸೋದು – ಎಂಬ ಚಿಂತೆಯೇ ನನ್ನನ್ನು ಕಾಡಿಸುತ್ತಿತ್ತು. “ಐದ ರೂಪಾಯಿ ಕೊಡು, ಅಮ್ಯಾಲ ಅದರ ಗಮ್ಮತ್ತ ನೋಡು” ಎಂದು ನನ್ನ ಮಿತ್ರನೇನೋ ಸಮಾಧಾನ ಮಾಡಿದ್ದ. ನನಗೆ ನಂಬಿಕೆಯಿರಲಿಲ್ಲ. ಆತನಿಗೆ ಐದು ರೂಪಾಯಿ ಕೊಟ್ಟು ಅದೇನು ಮಾಡುತ್ತಾನೋ ಮಾಡಿಕೊಳ್ಳಲಿ ಎಂದು ಸುಮ್ಮನಾಗಿದ್ದೆ.

ಸಂಜೆ ಆರು ಗಂಟೆಯ ಸುಮಾರಿಗೆ ಅರಮನೆಗೆ ಹೋದೆ. ಮೊದಲೇ ಹೇಳಿದ್ದಂತೆ ಶಿರಸೈಲ ಅಲ್ಲಿದ್ದವನು ನನ್ನನ್ನು ನೋಡಿ ಓಡಿಬಂದ. ಅವಳಿಗೆ ಸಲ್ಲುವ ಹರಕೆ ಸಂದಾಯವಾಗಿದೆಯೆಂದೂ ಇನ್ನು ಕಾಳಜಿ ಮಾಡಬೇಡವೆಂದೂ ಹೇಳಿದ. (ಹರಕೆ ಅಂದರೆ ಒಂದು ಬಾಟ್ಲಿ ಸೆರೆ, ಒಂದು ಕಟ್ಟುಬೀಡಿ ಹಾಗೂ ಒಂದು ಹುರಿದ ಮೀನು. ಈ ಜಂಗಮರ ಹುಡುಗ ಇದನ್ನೆಲ್ಲ ಹ್ಯಾಗೆ ವ್ಯವಸ್ಥೆ ಮಾಡಿದ್ದನೋ!) ಆಶ್ಚರ್ಯವೆಂದರೆ ಮುದುಕಿ ಮನೆಯಿಂದ ಹೊರ ಬಂದಾಗ ಭರ್ಜರಿ ಮೂಡಿನದಲ್ಲಿದ್ದಳು. ನಗುತ್ತ “ಬಾ ಎಪ್ಪಾ” ಎಂದಳು. ಕಾಣಿಸದಿದ್ದ ಅವಳ ಕಣ್ಣುಗಳು ಹೊಳೆಯುತ್ತಿದ್ದವು. ಮುಖದ ಸುಕ್ಕಿನ ಗೆರೆಗಳೀಗ ಪಕ್ವ ಹಣ್ಣಿನ ಮೇಲೆ ಮೂಡುವ ಗೆರೆಗಳಂತಿದ್ದವು. ನಾನು ಅಲ್ಲೇ ಪಕ್ಕದ ಪ್ರತಿಕಟ್ಟೆಯ ಮೇಲೆ ಕೂತೆ. ಮುದುಕಿ ತುಸು ದೂರದಲ್ಲಿ ಕೂತಳು. ಶಿರಸೈಲ ಕಟ್ಟೆ ಸಮೀಪದ ಕಂಬಕ್ಕೊರಗಿ, ಮೊಳಕಾಲ ಸುತ್ತ ಕೈ ಹೆಣೆದು ಮುಂದೇನೋ ಭಾರೀ ಸಂಭಾಷಣೆ ಆಗಲಿದೆಯೆಂದೂ, ಆ ಮೂಲಕ ತನ್ನ ಮಿತ್ರನಾದ ನನ್ನ ಪಾಂಡಿತ್ಯವನ್ನು ಮೆಚ್ಚಬೇಕೆಂದೂ ಕೂತ. ಆ ಈ ಮಾತುಗಳಾಗಿ ಹಿಂದೆ ನಾ ಕಂಡ ಘಟನೆಗಳನ್ನು ಹೇಳಿದೆ. ಮುದುಕಿಗೂ ಅವು ನೆನಪಿದ್ದವು. ಹೋ ಎಂದು ನನ್ನ ಕಡೆ ಮಾಡಿ, ನಕ್ಕಳು. ನನ್ನ ಮಿತ್ರನ ಹರಕೆ ಸರಿಯಾಗಿ ಕೆಲಸ ಮಾಡಿತ್ತು. ಮುಂಜಾನೆ ಸಲಕ್ಕೊಮ್ಮೆ ಅಳುತ್ತಿದ್ದ ಮುದುಕಿ ಇದೇನೋ ಎಂದು ನನಗೆ ಹೊಯ್ಕಾಯ್ತು. ನಾ ಒಂದು ಹೇಳಿದರೆ ಅವಳು ಎರಡು ಘಟನೆಗಳನ್ನು ಸರಿಯಾಗಿ ಹೇಳಿ ನನ್ನನ್ನು ನಗಿಸಿದಳು. ನನಗಾದ ಸಂತೋಷಕ್ಕೆ ಎಣೆಯೇ ಇರಲಿಲ್ಲ. ಯಾಕೆಂದರೆ ಆ ಮುದುಕಿಯ ನೆನಪು ನಿಚ್ಚಳವಾಗಿತ್ತು. ಘಟನೆಯನ್ನು ಅದು ನಿನ್ನೆಯೇ ನಡೆಯಿತೆಂಬಂತೆ, ಆ ನಿನ್ನ ಇನ್ನೊಮ್ಮೆ ಪ್ರತ್ಯಕ್ಷವಾಗಿ ಈಗ ಕಣ್ಣೆದುರು ಕಟ್ಟುವಂತೆ ಹೇಳುತ್ತಿದ್ದಳು. ಅವಳ ಮಾತುಗಳಿಂದ ನನಗೆ ಪೂರ್ತಿ ಧೈರ್ಯ ಮತ್ತು ವಿಶ್ವಾಸ ಮೂಡಿದ ಮೇಲೆ ಕೇಳಿದೆ –

“ಆಯೀ ಈ ಊರಿಗಿ ನೀ ಎಂದ ಬಂದಿ?”

ಮುದುಕಿ ನೆಲದಿಂದ ಎತ್ತರ ಸೂಚಿಸಲು ಕೈಮಾಡಿ,

“ಇಷ್ಟಿದ್ದೆ” ಎಂದು ಹೇಳಿ “ನಾವಿಬ್ಬರೂ ಮುಟ್ಟಾಗಿ ಎರಡು ವರ್ಷ ಆಗಿದ್ದವು” ಎಂದಳು

“ನಾವಿಬ್ಬರೂ ಅಂದರ?”

“ನಾನು ಮತ್ತು ಸಿಂಗಾರೆವ್ವ”

“ಮುಟ್ಟಾಗಿ ಎರಡ ವರ್ಷಕ್ಕs ಮದಿವಿ?” ಆ ಭಾಗದಲ್ಲಿ ಎಳೇ ಕೂಸುಗಳಿಗೆ ಮದುವೆ ಮಾಡುವ ವಿಚಾರ ನನಗೆ ಗೊತ್ತಿತ್ತು. ಆದರೆ ಅದರಿಂದ ಕಥೆ ಮುಂದುವರಿಯುವ ಸಾಧ್ಯತೆಯಿದೆಯೆಂದು ಅನ್ನಿಸಿ ಕೇಳಿದ್ದೆನಷ್ಟೆ.

“ಮುಟ್ಟಾದ ಎರಡು ವರ್ಷಕ್ಕs ಮದಿವೆಂದರೆ…? ಸರಗಂ ದೇಸಾಯಿ ಆಕೀ ಎರಡ್ನೇ ಗಂಡ!”

– ಎರಡನೇ ಗಂಡ! ನನಗಿದು ಗೊತ್ತಿರಲಿಲ್ಲ. ಹಾಗೆಂದು ಆಡಿಯೂ ಬಿಟ್ಟೆ.

“ನಮ್ಮ ಸಿಂಗಾರೆವ್ವನ ಅಪ್ಪ ಭಾಳ ಕೊಳಕ ಇದ್ದ. ಕೊಳಕ ಅಂದರೆ ಅಂತಿಂತಾ ಕೊಳಕಂತ ಅಂದೀ ಮತ್ತ. ಅಸಮಾನ ಕೊಳಕ. ಮಕ್ಕಳ್ನ ಮಾರಿಕೊಳ್ಳೋವಂಥ ಕೊಳಕ…”

– ಎಂದು ಶೀನಿಂಗವ್ವ ಹೇಳತೊಡಗಿದಳು. ಸಿಂಗಾರೆವ್ವನ ತಂದೆಯ ಬಗ್ಗೆ ಅವಳಿಗೆ ಒಳ್ಳೆಯ ಭಾವನೆ ಇರಲಿಲ್ಲವೆಂದೂ ಗೊತ್ತಾಯಿತು. ಅಲ್ಲದೆ ಆ ವಿಷಯವನ್ನಾಕೆ ಸಂಕಟದಿಂದ ಹೇಳತೊಡಗಿದಳು. ಒಟ್ಟಾರೆ ದುರಂತಕ್ಕೆ ಆತನ ಕೊಳಕುತನವೇ ಕಾರಣವೆಂದು ಅವಳ ಅಭಿಪ್ರಾಯವಾಗಿದ್ದಂತೆ ಕಂಡಿತ್ತು. ಇಲ್ಲಿಗೆ ಪ್ರಸ್ತಾವನೆ ನಿಲ್ಲಿಸಿ ಇನ್ನು ಮುಂದೆ ಅವಳು ಹೇಳಿದ್ದನ್ನೇ ಗ್ರಾಂಥಿಕ ಭಾಷೆಯಲ್ಲಿ ನಿರೂಪಿಸುತ್ತೇನೆ.  ಯಾಕೆಂದರೆ ಆಕೆಯೂ ಈ ಘಟನಾವಳಿಯಲ್ಲಿಯ ಒಂದು ಪ್ರಮುಖ ಪಾತ್ರ. ಮಾತ್ರವಲ್ಲ ಎಲ್ಲರ ಸಾವಿಗೆ ಸಾಕ್ಷಿಯಾಗಿ ಸಾಯದೆ ಇನ್ನೂ ಬದುಕಿದ್ದವಳು. ಹೇಳ ಹೇಳುತ್ತ ಭಾವುಕಳಾಗಿ ಅಂದವರ್ಯಾರು ಅನ್ನಿಸಿಕೊಂಡವರ್ಯಾರೆಂದು ತಿಳಿಸದೆ ಬರೀ ಸಂಭಾಷಣೆಯ ಮೂಲಕವೇ ಒಮ್ಮೊಮ್ಮೆ ಕಥೆ ಹೇಳುತ್ತಿದ್ದಳು. ಪ್ರತ್ಯಕ್ಷ ಎದುರು ಕೂತಲ್ಲದೆ ಅದು ತಿಳಿಯುವುದಿಲ್ಲವಾದ್ದರಿಂದ ಭಾಷೆಯಲ್ಲಿ ತುಸು ಒಪ್ಪಂದ ಮಾಡಿಕೊಂಡಿದ್ದೇನೆ. ಅಗತ್ಯ ಮತ್ತು ಅನಿವಾರ್ಯವೆನ್ನಿಸಿದಾಗ ಅವಳ ಮಾತುಗಳನ್ನೇ ಉದ್ಧರಿಸುತ್ತ, ಕಥೆಯ ಭಾವಪ್ರಪಂಚವನ್ನು ಪರೋಕ್ಷವಾಗಿ ನಾನೂ ಅನುಭವಿಸಿದ್ದನಾದ್ದರಿಂದ ಅಲ್ಲಲ್ಲಿ ನಮ್ಮ ಅಂದಿನ ಪ್ರತಿಕ್ರಿಯೆಗಳನ್ನೂ ಬೆರೆಸುತ್ತ ಸಾವಳಗಿ ಶಿವಲಿಂಗೇಶ್ವರ ಮಠದ ಸಿದ್ಧರಾಮಸ್ವಾಮಿಗಳು, ಭೂಸನೂರು ಮಠದ ಸಂಗಯ್ಯ ಸ್ವಾಮಿಗಳು ಹಾಗೂ ಘೋಡಗೇರಿಯ ಕಂಬಾರ ಬಸವಣ್ಣೆಪ್ಪ – ಇವರ ಹೆಸರುಗೊಂಡು ಸಾಧ್ಯವಾದಷ್ಟು ಪ್ರಾಮಾಣಿಕತೆಯಿಂದ ಕಥೆ ಹೇಳುತ್ತೇನೆ, ಕೇಳಿರಿ:

ಕಥೆ ನಂದಗಾವಿಯಿಂದ ಸುರುವಾದೀತೆಂದು ನನಗೂ ಅನ್ನಿಸಿರಲಿಲ್ಲ. ಅದಿನ್ನೂ ಒಳ್ಳೆಯದೇ ಆಯಿತೆಂದು ಮುಂದೆ ನಿನಗೂ ಗೊತ್ತಾಗುತ್ತದೆ. ಶೀನಿಂಗವ್ವ ಹೇಳತೊಡಗಿದಳು:

* * *