ಕೆಲವರಿರುತ್ತಾರೆ; ನೀವು ಬೆರಳು ಮಾಡಿ ತೋರುವಂಥ ಯಾವ ಕರ್ಮ ಯಾವ ಪಾಪ, ಯಾವ ಕೆಟ್ಟಕೆಲಸವನ್ನೂ ಮಾಡಿರುವುದಿಲ್ಲ. ಇನ್ನೊಬ್ಬರ ಮನಸ್ಸನ್ನು ಕೂಡ ನೋಯಿಸಿರುವುದಿಲ್ಲ. ಆದರೆ ಜೀವನದುದ್ದಕ್ಕೂ ಚಂಡಾಲರು ಅನುಭವಿಸುವಂಥ ಯಾತನೆ, ನೋವನ್ನು ಅನುಭವಿಸುತ್ತಾರೆ. ಅವರು ಚಿನ್ನ ಹಿಡಿದರೆ ಮಣ್ಣಾಗುತ್ತದೆ. ಅನ್ನವೆಂದದ್ದು ವಿಷವಾಗುತ್ತದೆ. ಅವರು ಕಾಲಿಟ್ಟಲ್ಲಿ ನಿಂತ ನೀರು ಇಂಗುತ್ತದೆ. ಬೆಳೆದ ಹಸಿರು ಒಣಗುತ್ತದೆ. ಮಕ್ಕಳು, ದನಕರು ಸಾಯುತ್ತವೆ. ನೀನು ಬಂದು, ಅವರ ಅಂತಃಕರಣ ಕಂಡು ‘ದೇವರು ಒಳ್ಳೇದು ಮಾಡಲಿ’ ಅಂತ ಮನಸಾರೆ ಹರಸಿದೆ ಅಂತಿಟ್ಟುಕೊ. ಆದರೆ ಪರಿಣಾಮ ಮಾತ್ರ ಅದಕ್ಕೆ ವಿರುದ್ಧವಾಗೇ ಆಗಿರುತ್ತದೆ. ಹಿಂಗ್ಯಾಕೆಂಬುದಕ್ಕೆ ಕಾರಣ ಕಡೀತನಕ ಗೊತ್ತಾಗೋದೇ ಇಲ್ಲ. ಯಾವುದಕ್ಕೂ ಒಂದು ತರ್ಕ ಇರಬೇಕಲ್ಲ. ಅದಿಲ್ಲಿ ಇರೋದೆ ಇಲ್ಲ. ನಮ್ಮ ದೊರೆಸಾನಿ ಅಂಥವಳು.

ಏನಪ್ಪಾ, ಗೌಡನಿಗೆ ಮಗಳಾಗಿ ಹುಟ್ಟಿದ್ದು ತಪ್ಪೆ? ಹೆಣ್ಣಾಗಿ ಹುಟ್ಟಿ ಹಾಳುಸುರಿವ ಅರಮನೆಗೆ ಆಡುವ ಮಕ್ಕಳನ್ನು ಕೊಡಬೇಕೆಂದದ್ದು ತಪ್ಪೆ? ಅದಕ್ಕಾಗಿ ಪೂಜಾ ವ್ರತ ಮಾಡಿದ್ದು ತಪ್ಪೆ? ಅದೇನೋ ಕತೆ ಹೇಳುತ್ತಾರಲ್ಲ, ರಾಜಕುಮಾರಿಗೆ ರಾಕ್ಷಸರು ಗಂಟು ಬಿದ್ದರು ಅಂತ.  ಹಾಗೆ ಗೌಡ, ದೇಸಾಯಿ, ಮರ್ಯಾ – ಒಬ್ಬರಾದ ಮೇಲೋಬ್ಬರು ಕಡೆಕಡೆಗೆ ಮೂವರೂ ಕೂಡಿ ಗಂಟು ಬೀಳುವುದೆಂದರೇನು? ಆದರೆ ರಾಜಕುಮಾರೀನ ಬಿಡಿಸೋದಕ್ಕೊಬ್ಬ ರಾಜ ಕುಮಾರನಾದರೂ ಇದ್ದ. ಇಲ್ಲಿ ಅವನೂ ಇಲ್ಲ. ಚಿಕ್ಕಂದಿನಿಂದ ನಾನೇ ಕಂಡಿದ್ದೀನಲ್ಲ. ಒಂದು ಪಾಪ ಮಾಡಿದವಳಲ್ಲ. ಆದರೆ ಅವಳಂಥ ಯಮಯಾತನೆ ಪಟ್ಟವರೇ ಇಲ್ಲ. ಅಥವಾ ಅವಳು ಮಾಡಿದ ಒಂದೇ ಒಂದು ಪಾಪವೆಂದರೆ: ಅವಳು ಗೌಡನಿಗೆ ಹುಟ್ಟಿದ್ದೇ.

ಆಯಿತು, ಹೋದೆಯಾ ಶನಿ ಅಂದರೆ ಬಂದೆ ಗವಾಕ್ಷಿಲಿ ಅಂದ ಹಾಗೆ, ಮರ್ಯಾ ಬಂದು ಮನೆ ಸೇರಿ ವಕ್ಕರಿಸಿದನಲ್ಲ. ಬೆಂಕಿಯಿಂದ ಹ್ಯಾಗೆ ಪಾರಾದನೆಂದು ನಮಗೆ ತಿಳಿಯದು, ಆಸರೆ ಕೊಡಲೇಬೇಕಾಯಿತು, ಕೊಟ್ಟೆವು, ಹಿರಿಯ ದೊರೆಸಾನಿ ಇದ್ದ ಕೋಣೆಯನ್ನು ಹಗಲು – ರಾತ್ರಿ ಬಿದ್ದಿರುತ್ತಿದ್ದ. ಆದರೆ ಆ ದಿನ ಮರ್ಯಾನನ್ನು ನೋಡಿ ದೊರೆಸಾನಿ ಕಿರಿಚಿದಳಲ್ಲ. ಅಂದೇ, ಆಗಲೇ ಚಳಿಜ್ವರ ಬಂದು ಗಡಗಡ ನಡುಗತೊಡಗಿದಳು. ಇದ್ದ ರಗ್ಗನ್ನೆಲ್ಲ ಹೊದಿಸಿದರೂ ಚಳಿ ಕಡಿಮೆಯಾಗಲಿಲ್ಲ. ಕಷಾಯ ಮಾಡಿ ತಂದು ಕುಡಿಸಿದೆ. ಡಾಕ್ಟರಿಗೆ ಹೇಳಿ ಕಳಿಸೋಣವೆಂದರೆ ದೇಸಾಯಿ ಬಂದಿರಲಿಲ್ಲ. ನಿಂಗನನ್ನು ಕಳಿಸಿದೆ, ಡಾಕ್ಟರ್ ಊರಲಿಲ್ಲವೆಂದು ಹೇಳಿದ. ಬಹಳ ಹೊತ್ತಾದ ಮೇಲೆ ಪೂರ್ತಿ ಹೊದ್ದುಕೊಂಡು ಸುಮ್ಮನಾದಳು.

ರಾತ್ರಿ ಎಲ್ಲಾ ಜನ ಮಲಗಿದ್ದರು. ಆಗ ನಿಟ್ಟುಸಿರು ಬಿಟ್ಟು ಮುಖದ ಮೇಲಿನ ಹೊದಿಕೆ ತಕ್ಕೊಂಡಳು. ಆದರೆ ಜ್ವರ ಇತ್ತು. ಇನ್ನೇನು ಬಿಡುತ್ತದೆ ಎಂದುಕೊಂಡೆ. “ಒಂದ ಗುಟಕ ಗಂಜೀ ಮಾಡಿಕೊಡಲೇನs ಎವ್ವಾ” ಅಂದೆ. ಕೈಸನ್ನೆಯಿಂದಲೇ ಬೇಡವೆಂದಳು. ಇನ್ನು ನಾ ಹ್ಯಾಗೆ ಊಟ ಮಾಡಲಿ? ಸುಮ್ಮನಿದ್ದಳಲ್ಲ, ನಿದ್ದೆ ಮಾಡುತ್ತಿದ್ದಳೆಂದುಕೊಂಡೆ. ಮಧ್ಯರಾತ್ರಿ ತೂರಾಡುತ್ತಾ ಕೀರಲು ದನಿಯಲ್ಲಿ ದೇಸಾಯಿ ಬಂದ. ಹೋಗಿ ಜ್ವರ ಬಂದ ವಿಷಯ ಹೇಳಿದೆ. “ನಾಳಿ ಡಾಕ್ಟರಗ ತೋರಿಸೋಣ” ಎಂದು ಹೇಳಿ ಸೀದಾ ಮಲಗಲಿಕ್ಕ ಹೋದ.

ಮುಂದೆ ನಾಕು ದಿನಗಳಾದರೂ ಜ್ವರ ಇಳಿಯಲಿಲ್ಲ. ಹುಚ್ಚಯ್ಯ ಸತ್ತಾಗ ಬಂದಿತ್ತಲ್ಲ, ಅದೇ ಜ್ವರವೆಂದುಕೊಂಡರೂ ಈ ಸಲ ಮನಸ್ಸಿನ ಸ್ತಿಮಿತ ತೀರ ಹದಗೆಟ್ಟಿತ್ತು. ಬರುವ ಜ್ವರಕ್ಕೆ ಕೂಡ ಒಂದು ನಿಯಮವೆಂಬುದಿರಲಿಲ್ಲ. ಯಾವಾಗಲೋ ಬಂದು ಯಾವಾಗಲೋ ಇಳಿಯುತ್ತಿತ್ತು. ಜ್ವರ ಬಿಟ್ಟಾಗಲಾದರೂ ಸಮ ಇರುತ್ತಿದ್ದಳೇ? ಒಮ್ಮೊಮ್ಮೆ ಕೂತಲ್ಲೇ ಕಾಲು ಬಡಿಯುತ್ತ ಓಡಿದ ಹಾಗೆ ಮಾಡುತ್ತಿದ್ದಳು. ಮತ್ತೊಮ್ಮೆ ಗಡಂಚಿಯನ್ನೇ ತದೇಕ ದೃಷ್ಟಿಯಿಂದ ನೋಡ ನೋಡುತ್ತ ಕಿರಿಚಿ, ತಲೆತಲೆ ಚಚ್ಚಿಕೊಂಡು ಮೂರ್ಛೆ ಹೋದಳು. ಅದು ಹುಚ್ಚಿರಬೇಕು, ಇಲ್ಲವೆ ಹುಣಸೀಮೆಳೆಯ ಭೂತಭಾದೆ ಇರಬೇಕೆಂದು ಮೆಣಸಿನಕಾಯಿ ನಿವಾಳಿಸಿದೆ. ಅಂಗಾಲಿಗೆ ಬೂದಿ ತಿಕ್ಕಿದೆ. ಬಹಳ ಹೊತ್ತಾದ ಮೇಲೆ ಮೂರ್ಛೆ ತಿಳಿದೆದ್ದಳು. ಮಾತಾಡಲಿಕ್ಕೆ ಉಸಿರೇ ಇರಲಿಲ್ಲ. ಕೈಸನ್ನೆ ಮಾಡಿ ನೀರು ಕೇಳಿದಳು. ಸಣ್ಣ ದನಿಯಲ್ಲಿ “ದೇಸಾಯಿ ಬಂದರೇನs” ಎಂದಳು. “ಇನ್ನ ಬಂದಿಲ್ಲೆವ್ವಾ” ಅಂದೆ. ಖಿನ್ನಳಾಗಿ ಮುಖ ಆ ಕಡೆ ತಿರುಗಿಸಿದಳು.

ಇಷ್ಟಾದರೂ ದೇಸಾಯಿಯ ಕರುಳಿಗೆ ಇವಳ ಯಾತನೆ ಮುಟ್ಟಿಯೇ ಇರಲಿಲ್ಲ. ತನಗೇನೂ ಆಗಿಲ್ಲವೆಂಬಂತೆ ಏಳೋ ಹೊತ್ತಿಗೆದ್ದು, ತಿನ್ನೋ ಹೊತ್ತಿಗೆ ತಿಂದು, ಬರೋ ಹೊತ್ತಿಗೆ ಬಂದು ಮಲಗುತ್ತಿದ್ದ. ಈ ಸಲ ಹುಚ್ಚಿನ ಭಯವಿದೆಯಾದ್ದರಿಂದ ನಿರ್ಲಕ್ಷಿಸಬಾರದೆಂದು ತಾಕೀತು ಮಾಡಿದ್ದೆ. ‘ಆಗಲೇ ಸಾಯುವಂತಾಗಿದ್ದಾಳೆ, ಮತ್ತೆ ಮತ್ತೆ ನಿಮ್ಮನ್ನೇ ಜ್ಞಾಪಿಸಿಕೊಳ್ಳುತ್ತಾಳೆ, ನನಗಿಂತ ನಿಮ್ಮ ಸಾಮೀಪ್ಯದ ಅಗತ್ಯವೇ ಹೆಚ್ಚಾಗಿದೆ” ಎಂದು ಹೇಳಿ. “ತುಸು ಎಚ್ಚರ ತಪ್ಪಿದರೂ ಅವಳ ಜೀವಕ್ಕೆ ಗಂಡಾಂತರವಿದೆ” ಎಂದು ನಿಷ್ಠುರವಾಗಿಯೇ ಹೇಳಿದೆ “ಊರಾಗ ಡಾಕ್ಟರ ಇಲ್ಲs” ಎಂದು ಗುಣುಗುಣು ಮಾಡಿ ಅನುಗ್ರಹಿಸುವಂತೆ ಅಂತಸ್ತೇರಿ ಬಂದ, ದೊರೆಸಾನಿ ಮಲಗಿದ್ದಳು. ತುಸು ಹೊತ್ತು ಕರ್ತವ್ಯವೆಂಬಂತೆ ಕೂತಿದ್ದು, ತಾಲೀಮಿಗೆ ಸಮಯವಾಯ್ತೆಂದು ಹೊರಟು ಹೋದ. ನನಗೆ ಅವನ ಮೇಲೆ ಸಿಟ್ಟೂ ಕೂಡಬಂತು. ಯಾಕೆಂದರೆ ಹಗಲು ಹೊತ್ತು ಹ್ಯಾಗೋ ಸಾಗೀತು. ರಾತ್ರಿ ಹೊತ್ತು ಅವಳನ್ನು ಹಿಡಿಯುವುದೇ ಕಷ್ಟ. ನಾನು ಅವಳಿಗಿಂತ ಕಸುವಿನವಳಾದರೂ ಈ ಜ್ವರದಲ್ಲಿ ಮಾರಾಯ್ತಿಗೆ ಅದೆಲ್ಲಿಂದ ಕಸುವು ಬರುತ್ತಿತ್ತೊ, ಏನೇನೋ ಮಾತಾಡುತ್ತಾ ಗಾಳಿ ತುಂಬಿದ ಕರುವಿನ ಹಾಗೆ, ಎಲ್ಲೆಂದರಲ್ಲಿ ನುಗ್ಗುತ್ತಿದ್ದಳಲ್ಲ, ನನಗೆ ಅವಳನ್ನು ಹಿಡಿದು ನಿಭಾಯಿಸುವುದು ಭಾರಿ ಶ್ರಮದ ಕೆಲಸವಾಗುತ್ತಿತ್ತು. ನರಪೇತಲ ದೇಸಾಯಿಗಿದು ಅಸಾಧ್ಯ. ನಿಜ,. ಆದರೂ ಗಂಡೆಸೆಂಬುವನೊಬ್ಬ ಪಕ್ಕದಲ್ಲಿದ್ದರೆ ಎಷ್ಟೋ ಧೈರ್ಯವಿರುತ್ತದೆ.

ನಾಕನೆಯ ರಾತ್ರಿ ನನಗೆ ಪರೀಕ್ಷೆಯ ಕಾಲ, ಯಾವುದೋ ಪಿಶಾಚಿ ಬೆನ್ನು ಹತ್ತಿದವರಂತೆ ಅಂತಸ್ತಿನ ಕೋಣೆಯ ತುಂಬ ಆ ಕಡೆ ಈ ಕಡೆ ಕಿರುಚುತ್ತಾ ಓಡಾಡಿದಳು. ನಾನು ಹಿಡಿದುಕೊಳ್ಳಲು ಹೋದದ್ದೇ ತಪ್ಪಾಯಿತೇನೋ, ಚಂಗನೆ ಅಂತಸ್ತಿನಿಂದ ಹಾರಿ ಹಿತ್ತಲ ಕಡೆಗೆ ಓಡಿದಳು. ಸುದೈವವೆನ್ನಬೇಕು ಹಿತ್ತಲ ಬಾಗಿಲು ಬೇಗನೇ ತೆರೆಯಲಿಲ್ಲವಾದ್ದರಿಂದ ಸಿಕ್ಕಳು. ಸಿಕ್ಕವಳು ಸುಮ್ಮನಿದ್ದಳೆ, ಬಿಡಿಸಿಕೊಳ್ಳಲು ಹೋರಾಡತೊಡಗಿದಳು. ನನ್ನನ್ನು ಹಿಂದಿ ಮೂಳೆಗಳನ್ನೆಲ್ಲ ಮುರಿದು ಮುದ್ದಿ ಮಾಡುವಳೇನೋ ಅಂದುಕೊಂಡೆ. ಹೋರಾಡಿ ಸೆಣಸುತ್ತ ಕೊನೆಗೆ, ಹಾಗೇ ನನ್ನ ತೆಕ್ಕೆಯಲ್ಲಿ ಕುಸಿದಳು. ಇನ್ನಿವಳನ್ನು ಎತ್ತಿಕೊಂಡು ಮೇಲೆ ಅಂತಸ್ತಿಗೊಯ್ಯುವುದು ಹ್ಯಾಗೆಂದು ಚಿಂತೆಯಾಯಿತು. ಸದ್ಯ ಮರ್ಯಾ ಹೊರ ಬಂದು ನೋಡುತ್ತಿದ್ದವನು ನನ್ನ ಸಹಾಯಕ್ಕೆ ಬಂದ. ಎತ್ತಿಕೊಂಡು ಅಂತಸ್ತಿನ ಹಾಸಿಗೆಗೆ ತಂದು ಮಲಗಿಸಿದ. ಒರಗಿದಳೋ ಇಲ್ಲವೊ, ತಕ್ಷಣ ಮುಖ ಬಿಳಿಚಿ, ಕೈಕಾಲು ಸೆಟಸಿ, ತೇಲುಗಣ್ಣು, ಮೇಲುಗಣ್ಣಾಗಿ, ಜೀವ ಹೋಗಿ  ಮೈ ತಣ್ಣಗಾಯಿತು! “ಎವ್ವಾ, ಎವ್ವಾ ಸಿಂಗಾರೆವ್ವಾ” ಎಂದು ಕಿರಿಚಿ ಕರೆಯುತ್ತ ರಭಸದಿಂದ ಅಂಗಾಲು ತಿಕ್ಕತೊಡಗಿದೆ. ಮರ್ಯಾ ಜೋರಿನಿಂದ ಕಿವಿ ಊದತೊಡಗಿದ. ಆದರೂ ಹ್ಞಾ ಇಲ್ಲ, ಹೂ ಇಲ್ಲ! ನಾನು, ನನ್ನ ದನಿ ಕೇಳಿ ಯಾರಾದರೂ ಬರಲೆಂದು, ಸಾಧ್ಯವಾದರೆ ದೇವರೇ ಬರಲೆಂದು ಚೀರಾಡುತ್ತಲೇ ಇದ್ದೆ. ಮರ್ಯಾ ಇನ್ನೂ ಜೋರಾಗಿ ಕಿವಿ ಊದಿದ. ಸಾವಿನೊಂದಿಗೆ ಗುದ್ದಾಡುವುದು ಸಾಮಾನ್ಯವೆ? ನನ್ನ ಕಿರಿಚಾಟ ಶಿವನಿಗೆ ಕೇಳಿಸಿ ತುಸು ಹೊತ್ತಿನಲ್ಲಿ ‘ಹಾ’ ಎಂದು ಹೊರಳಿದಳು. ಅವಳಿಗೆ ಜೀವ ಬಂತಲ್ಲ, ನನಗೂ ಬಂತು, ಮರ್ಯಾ ಗಾಬರಿಯಾಗಿದ್ದ ಉಸಿರಾಡಿಸಲಿಕ್ಕೂ ಧೈರ್ಯ ಸಾಲದಾಗಿತ್ತೇನೋ, ಒಂದು ಕ್ಷಣ ಕಣ್ಣು ಮುಚ್ಚಿ “ಎಪ್ಪಾ ಶಿವನಿಂಗ” ಂದು ದೇವರನ್ನು ನೆನೆದ. ಮುಖ ಬೆವರಿನಿಂದ ಒದ್ದೆಯಾಗಿತ್ತು. ಮೆಲ್ಲಗೆ ಅವಳನ್ನು ಒರಗಿಸಿ, ಗಾಳಿ ಬೀಸೆಂದು ನನಗೆ ಕದ್ದು ಹೇಳಿ, ಮತ್ತೆ ಅವಳಲ್ಲಿ ಕಣ್ಣು ತೆರೆದು ನೋಡುತ್ತಾಳೊ ಎಂದು ಹೋಗಿ ಮೆಟ್ಟಿಲ ಮೇಲೆ ಮರೆಯಾಗಿ ಕೂತ.

ತುಸು ಹೊತ್ತಾದ ಮೇಲೆ ಅಲ್ಲಿಂದಲೇ ಕೈಮಾಡಿ ನನ್ನನು ಕರೆದ. ಅವಳನ್ನು ಬಿಟ್ಟು ಹೋಗುವ ಮನಸ್ಸಿರಲಿಲ್ಲ. ಕೈಸನ್ನೆ ಮಾಡಿ ಆಗಲೆಂದೆ. ಅವನು ಕೇಳಲಿಲ್ಲ. ಮತ್ತೆ ಕರೆದ. ನಾನು ಹೋಗಿ ಸಿಟ್ಟಿನಿಂದ “ನಿನ್ನಿಂದನs ಆಕಿಗಿ ಹಿಂಗ ಆದದ್ದು” ಎಂದು ತಕರಾರಿನ ದನಿಯಲ್ಲಿ ಹೇಳಿದೆ. ನನ್ನ ಮಾತು ಕೇಳಿ ಅವ ಖಿನ್ನನಾದ. ಸಾಧ್ಯವಾದಷ್ಟು ನನ್ನ ಕಿವಿಯ ಬಳಿ ತನ್ನ ಬಾಯಿ ತಂದು “ಒಂದು ಮದ್ದೈತಿ, ತರಲೇನು?” ಅಂದ. ದೊರೆಸಾನಿಯ ಬಗೆಗಿನ ಪ್ರಾಮಾಣಿಕ ಕಳಕಳಿಯಿಂದಲೇ ಹೀಗೆ ಹೇಳಿದ್ದಾನೆಂದುಕೊಂಡು, ಬೇರೆ ದಾರಿಯೂ ಇರಲಿಲ್ಲವಲ್ಲ – ಅದಕ್ಕೆ “ತಗಂಬಾ” ಅಂದೆ. ಮಾಯವಾದ.

ಅಂಥ ಕತ್ತಲೆಯಲ್ಲಿ ಎಲ್ಲಿ ಹೋಗಿದ್ದನೊ, ಎರಡು ತಾಸಿನ ನಂತರ ತಿರುಗಿ ಬಂದ. ಎಂಥದೋ ಒಂದು ಸೊಪ್ಪನ್ನು ಖುದ್ದಾಗಿ ಅರೆದ. ದೊರೆಸಾನಿಗೆ ಇನ್ನೂ ಅರಿವು ಬಂದಿರಲಿಲ್ಲ. ಜ್ವರ ಮಾತ್ರ ಹಾಗೇ ಇದ್ದು ಮೈ ಕಾದ ಹಂಚಾಗಿತ್ತು. ಹಣೆ ಅಂಗೈ, ಅಂಗಾಲಿಗೆ ಹಚ್ಚಲು ಹೇಳಿ ಮತ್ತೆ ಅಡಗಿ ನಿಂತ. ಮದ್ದನ್ನುಜ್ಜಿದೆ.

ಬೆಳಗಿನ ತಂಗಾಳಿ ಮೈಗೆ ತೀಡಿತು. ನಾವಿಬ್ಬರೂ ಕಣ್ಣಿಗೆ ಕಣ್ಣು ಹಚ್ಚಿರಲಿಲ್ಲ. ಮತ್ತೆ ಮೈಮುಟ್ಟಿ ನೋಡಿದೆ. ಆಶ್ಚರ್ಯವೆಂದರೆ ಜ್ವರ ಇರಲಿಲ್ಲ. ಬೆವರಿದ್ದಳು. ಮರ್ಯಾ ಇದ್ದಲ್ಲಿಗೆ ಹೋಗಿ “ಅರಾಮ ಆಗ್ಯಾಳ ಇನ್ನೇನ ಕಾಳಜಿ ಇಲ್ಲ” ಎಂದು ನೆಮ್ಮದಿಯಿಂದ ಅವನ ಮದ್ದಿನ ಬಗೆಗಿನ ಮೆಚ್ಚುಗೆಯಿಂದ ಹೇಳಿದೆ. ಅತ್ತು ಅತ್ತು ಅವನ ಮುಖ ವಿಕಾರವಾಗಿತ್ತು. ಈ ಬಗೆಯ ಪಶ್ಚಾತ್ತಾಪದ ಭಾವವನ್ನ ಆತನಲ್ಲಿ ನಾನು ಹಿಂದೆಂದೂ ಕಂಡಿರಲಿಲ್ಲ. ತಾನು ಹಿಂದೆ ಮಾಡಿದ್ದ ಎಲ್ಲ ಅನ್ಯಾಯಗಳನ್ನು ಪಶ್ಚಾತ್ತಾಪದಿಂದ ತೊಳೆದುಕೊಂಡ ಹಾಗೆ ಕಂಡ. “ನಾ ಹೋಗತೀನಿ. ಇನ್ನೆಂದೂ ಆಕಿಗಿ ತ್ರಾಸ ಕೊಡಾಣಿಲ್ಲ” ಎಂದು ಹೇಳಿ ಎದ್ದು ನಿಂತ. ನನಗೆ ದಿಗಿಲಾಗಿ ಅವನ ಮುಖವನ್ನೇ ನೋಡುತ್ತ ನಿಂತೆ. ನನ್ನ ಕಡೆಗೂ ತಪ್ಪು ಮಾಡಿದವನಂತೆ ಒಮ್ಮೆ ನೋಡಿ “ಬರೋಬರಿ ನೋಡಿಕೊ” ಎಂದು ಹೇಳಿ ಕೆಳಗಿಳಿದು ಹೋದ. ಮರ್ಯಾ ಈ ಪರಿ ಮೆತ್ತಗಾಗುವುದೆಂದರೆ ಆಶ್ಚರ್ಯ ಮತ್ತು ನೆಮ್ಮದಿಯ ಸಂಗತಿಯೇ ಸೈ. ಅವನಲ್ಲಿ ಸೇಡಿತ್ತೆಂದು ನನ್ನ ಮುಂಚಿನ ಭಾವನೆಯಾಗಿತ್ತು. ಯಾಕೆಂದರೆ ಅವನನ್ನು ಜೀವಂತ ಸುಡುವ ಯತ್ನ ಮಾಡಿದ್ದೆವು. ಬಹುಶಃ ಸಿಂಗಾರೆವ್ವನ ಕರುಣಾಜನಕ ಸ್ಥಿತಿ ನೋಡಿಯೋ, ಇಲ್ಲ ಅವಳು ಸತ್ತೆ ಹೋಗುತ್ತಾಳೆ ಎಂಬ ಭಯದಿಂದಲೋ – ಅಂತೂ ಮನುಷ್ಯರೊಳಗೆ ಬಂದಿದ್ದ. ಇನ್ನವನ ಕಾಟದಿಂದ ದೊರೆಸಾನಿ ಮುಕ್ತಳಾದಳೆಂದೇ ನಂಬಿದೆ. ಎಷ್ಟು ದಿನ ಹೀಗಿದ್ದಾನು ಎಂದೂ ಸಂಶಯ ಬಂತು. ಆದರೆ ಮರ್ಯಾನಂಥವರ ಕಣ್ಣಿರು ಸುಳ್ಳು ಹೇಳಲಾರವು.

ನಾವು ಗೆದ್ದಿದ್ದೆವು. ಆ ಮುಂಜಾನೆಯಿಂದ ದೊರೆಸಾನಿ ಹುಷಾರಾದಳು. ಮೆಲ್ಲಗೆ ಎದ್ದು ಕೂತು ತುಸು ಕಷಾಯ ಕುಡಿದಳು. ಮಧ್ಯಾಹ್ನ ಗಂಜಿ ಕುಡಿದಳು. ಜ್ವರಬಿಟ್ಟಿತ್ತು. ಚಿತ್ತ ಕೂಡ ಸ್ವಸ್ಥವಾಗಿತ್ತು. ನನಗೆ ಸಿಟ್ಟು ಬಂದದ್ದು ಯಾವಾಗೆಂದರೆ ರಾತ್ರಿ ಅವಳ ಜೀವ ಹೋದುದನ್ನು ಹೇಳಿದರೂ ದೇಸಾಯಿ “ಹೌಂದ? ಅರೆ ಅರೆ!” ಎಂದಂದು ನಿರ್ಲಿಪ್ತನಾಗಿ ಉಳಿದಾಗ. “ಈಗ ಹೆಂಗದಾರ?” ಅಂದ. “ಅರಾಮದಾರ, ಹೋಗಿ ವಿಚಾರಿಸಿ ಬರ್ರಿ” ಅಂದೆ. ಮೇಲೇರಿ ಹೋದ – ಮತ್ತು ಹೋದವನು ಹಾಗೇ ಕೆಳಗಿಳಿದು ಬಂದ!

ಮುಂದಿನ ನಾಕೆಂಟು ದಿನಗಳಲ್ಲಿ ಸಿಂಗಾರೆವ್ವ ನೋಡುವ ಹಾಗಾದಳು. ಇಷ್ಟು ದಿನ ಉಟ್ಟ ಸೀರೆ ಬದಲಿಸಿರಲಿಲ್ಲ, ಕೂದಲು ಬಾಚಿರಲಿಲ್ಲ, ಕಣ್ಣು ಒಳಸೇರಿ, ಮುಖಬಾಡಿ, ಇನ್ನೂ ಅಕರಾಳ ವಿಕರಾಳವಾಗೇ ಕಾಣುತ್ತಿದ್ದಳು. ಆದರೆ ಚೆನ್ನಾಗಿ ಮಾತಾಡುತ್ತಿದ್ದಳು. ಅವಳಿಗೆ ಸಮಾಧಾನವಾಗಲೆಂದು ಮರ್ಯಾ ತನ್ನ ತಾನೇ ಹೊರಟು ಹೋದದ್ದನ್ನ, ಜೀವ ಹೋದಾಗ ಅವನು ಊದಿ ಜಿವ ತೆಗೆದದ್ದನ್ನ, ಅತ್ತದ್ದನ್ನ, ಕೊನೆಗೆ ಮದ್ದು ತಂದು ಅರೆದು ಕೊಟ್ಟದ್ದನ್ನೂ ಹೇಳಿದೆ. ಅವಳು ಯಾವ ಭಾವವನ್ನು ವ್ಯಕ್ತಪಡಿಸಲಿಲ್ಲವಾದರೂ ಸಧ್ಯ ಅವನ ಹೆಸರು ಹೇಳಿದೊಡನೆ ಗಾಬರಿಯಾಗಲಿಲ್ಲವಲ್ಲ, ಅಷ್ಟೇ ಸಾಕೆಂದುಕೊಂಡೆ. ದೀಪಾವಳಿ ಹಬ್ಬದ ಸುಮಾರಿಗೆ, ಮೊದಲಿನಷ್ಟೆಂದು ಹೇಳಲಾರೆ, ಅಂತೂ ಮೈತುಂಬಿಕೊಂಡು ಚುರುಕಾದಳು. ಆದರೆ ನಮಗಿನ್ನೊಂದು ಜರೂರು ಚಿಂತೆ ಶುರುವಾಯಿತು.

* * *