ನಿಂಗವ್ವ ಗೌಡ್ತಿ ತನ್ನ ಊರಿಗೆ ಹೋಗುವ ತನಕ ದೇಸಾಯಿ ಕೇಳಲೇ ಇಲ್ಲ. ತನ್ನ ಕೋಣೆ ಬಿಟ್ಟು ಹೊರಬರಲು ಇಲ್ಲ. ಗೌಡ್ತಿ ಮಾತ್ರ, ಇದ್ದಷ್ಟು ದಿನವೂ ಸಂಭ್ರಮದಲ್ಲೇ ಇದ್ದಳು. ಮಗಳಿಗೆ ಬೇಕು – ಬೇಕಾದ್ದನ್ನು ಮಾಡಿ, ನೀಡಿ ತೃಪ್ತಿಯಿಂದ ಹೋದಳು. ಆ ದಿನ ದೇಸಾಯಿ ಮಾತ್ರ ಊಟ ಮಾಡಲೇ ಇಲ್ಲ. ಇಳಿಹೊತ್ತಾದರೂ ಬರಲಿಲ್ಲವಾದ್ದರಿಂದ ಊಟಕ್ಕೆ ಕರೆಯೋಣವೆಂದು ಹೋದೆ. ಬಾಗಿಲಿಕ್ಕಿತ್ತು. ದೂಡಿದೆ. ಮಂಚದ ಮೇಲೆ ಎರಡು ಕೈಯೂರಿ, ತೆರೆದ ಕಣ್ಣು ತೆರೆದಂತೇ, ಪಿಳುಕಿಸದೇ, ಹಾಗೇ ಬಾಗಿಲ ಕಡೆ ನೋಡುತ್ತ ಕೂತಿದ್ದ. ಮುಖದ ಮೇಲೆ ಶವದ ಕಳೆಯಿತ್ತು. ಗಾಬರಿಯಾಗಿ ಕಿರಚಬೇಕೆನ್ನುವಷ್ಟರಲ್ಲಿ ಪುಣ್ಯಾತ್ಮ ಕೈತೆಗೆದು ತೊಡೆಯ ಮೇಲಿಟ್ಟುಕೊಂಡ. ಊಟಕ್ಕೆ ಬರ್ರಿ ಎಂದೆ. ನಿಟ್ಟುಸಿರುಗರೆದ, ಮಾತಾಡಲಿಲ್ಲ. ಪುನಃ ಕರೆದೆ. ಆಗಲೂ ಮಾತಾಡಲಿಲ್ಲ. ತಿರುಗಿ ಅಂತಸ್ತಿನ ಕಡೆಗೆ ನಡೆದಾಗ ದೊರೆಸಾನಿಯೇ ಎದುರಾದಳು. ದೇಸಾಯಿ ಊಟ ಮಾಡಿಲ್ಲವೆಂದು ಹೇಳಿದೆ. ಅವಳೂ ಸುಮ್ಮನಾದಳು. ಅವನ ಸ್ಥಿತಿ ಚಿಂತಾಜನಕವಾಹಿದೆಯೆಂದೂ, ನೀನು ಹೋಗಿ ಕರೆದರೆ ಸಮಾಧಾನಗೊಂಡು ಬಂದಾನೆಂದೂ ಹೇಳಿದೆ. ನಮಗ್ಯಾರಿಗೂ ಅವನ ಸಿಟ್ಟಿನ ಅಂದಾಜಾಗಿರಲಿಲ್ಲ. ಈ ಮೂರೂ ದಿನ ಒಂದು ನಮೂನಿ ಇದ್ದವನಾದ್ದರಿಂದ ಸಿಂಗಾರೆವ್ವನೂ ಕರುಣೆಗೊಂಡು ಬಂದಳು. ಬಾಗಿಲಲ್ಲಿ ನಿಂತು “ಊಟಕ್ಕೇಳ್ರಿ” ಎಂದಳು. ದೇಸಾಯಿ ಕೆಳಗೆ ಮಾಡಿದ್ದ ಮುಖವನ್ನು ಮ್ಯಾಲೆತ್ತಲೇ ಇಲ್ಲ. ಮತ್ತೊಮ್ಮೆ ಕರೆದಳು. ಮೆಲ್ಲಗೆ ಮುಖ ಎತ್ತಿ ಅವಳನ್ನು ತೀಕ್ಷ್ಣವಾಗಿ ನೋಡಿದ. ಸಿಂಗಾರೆವ್ವನ ಮುಖ ಕೂಡ ಪೆಚ್ಚಾಯಿತು. ರೋಗಿಷ್ಠನಂಥ ಶೀರುದನಿಯಲ್ಲಿ “ನೀವು ನನ್ನ ಮಾತಿಗೆ ಉತ್ತರ ಕೊಡಬೇಕು” ಅಂದ. ಅವನ ಪ್ರಶ್ನೆ ಏನೆಂದು ಗೊತ್ತಿತ್ತಲ್ಲ, ದೊರೆಸಾನಿ ತಿರುಗಿದಳು. “ಉತ್ತರ ಕೊಟ್ಟ ಹೋಗ್ರಿ ಅಂದೆ” ಎಂದು ಜೋರಾಗಿ ಕಿರುಚಿದ. ಸಿಂಗಾರೆವ್ವ ತಿರುಗಿ ಅವನನ್ನು ಎದುರಿಸಲೆಂದೇ ಪ್ರಶ್ನೆ ಏನೆಂಬಂತೆ ನಿಂತಳು. ದೇಸಾಯಿ ಉದ್ವೇಗದಲ್ಲಿದ್ದ ಅವನ ಎದೆಯ ರಕ್ತ ನೆತ್ತಿಗೇರುವಂತೆ ಕಂಡಿತು. ಹುಚ್ಚನಂತೆ,

“ಬಸರಾದದ್ದ ಖರೆ ಏನು?” ಅಂದ.

“ಹೌಂದು” ಎಂದಳು ಶಾಂತವಾಗೇ.

“ಯಾವ ಹೊಲ್ಯಾಗ ಬಸರಾದ್ರಿ?”

ಸಿಂಗಾರೆವ್ವ ಉಕ್ಕಿ ಬರುತ್ತಿದ್ದ ಸಿಟ್ಟನ್ನು ನಿಯಂತ್ರಿಸಿಕೊಳ್ಳುತ್ತ,

“ಈಗ ಅದೆಲ್ಲ ಯಾಕ, ಊಟಮಾಡ್ರಿ, ಮಾತಾಡೋಣು”

ಎಂದಳು. ಇವ ಕಿರಿಚಿದ

“ನಮ್ಮ ಅರಮನ್ಯಾಗ ಅದೆಲ್ಲ ನಡೆಯೋದಿಲ್ಲ, ಏನಂಬೋದು ಈಗ ತೀರ‍್ಮಾನ ಆಗಾಕs ಬೇಕು”

“ಏನ ತೀರ್ಮಾನ?”

“ಏನಂದರ… ಇದು ನಮ್ಮ ಅರಮನಿ ತೀರ್ಮಾನ”

ಎಂದು ಒದರಿ ಓಡಿಹೋಗಿ, ಹಿಂದೆ ಗೋಡೆಗೆ ನೇತುಹಾಕಿದ್ದ ಬಂದೂಕು ತಂದು ಸಿಂಗಾರೆವ್ವನಿಗೆ ಗುರಿ ಹಿಡಿದನೇ! ಎದುರಾ ಎದುರು ನೋಡುತ್ತ ನಾ ಹ್ಯಾಗೆ ಸುಮ್ಮನಿರಲಿ? ಇಬ್ಬರ ಮಧ್ಯೆ ಹೋಗಿ ಬಂದೂಕಿಗೆ ನಾನೇ ಗುರಿಯಾಗಿ “ಏನ್ರಿ ಎಪ್ಪ, ಗಂಡ ಹೆಂಡ್ತಿ ಹೀಂಗ ಜಗಳ ಆಡೋದ? ತುಸ ಸಮಾಧಾನ ಮಾಡಿಕೊಳ್ರಿ. ಅಮ್ಯಾಲ ವಿಚಾರ ಮಾಡೋಣು” ಎಂದು ಏನೇನೋ ಕರುಣೆ ಬರುವ ಹಾಗೆ ಕೈ ಮುಗಿದು ಹೇಳಿದೆ. ಈಗಲೂ ಸಿಂಗಾರೆವ್ವ ಸಿಟ್ಟನ್ನು ಹಿಡಿದಿಟ್ಟುಕೊಂಡೇ ಇದ್ದಳು. ದೇಸಾಯಿಯ ಕೈ ನಿಶ್ಯಕ್ತಿಯಿಂದಲೋ ಅಥವಾ ತೀವ್ರ ಕೋಪದಿಂದಲೋ ನಡುಗುತ್ತಿದ್ದವು. ಪರಸ್ಪರ ಮುಖ ನೋಡುತ್ತ ಒಂದು ಕ್ಷಣ ಇಬ್ಬರೂ ಸುಮ್ಮನಾದರು. ದೃಶ್ಯ ಮುಗಿಯಿತೇನೋ ಅಂದೆ. ಒಮ್ಮೆಲೆ ದೇಸಾಯಿ “ಥೂ ಹಾದರಗಿತ್ತೆ!” ಎಂದು ಸಿಂಗಾರೆವ್ವನ ಕಡೆ ಉಗುಳಿಬಿಟ್ಟ! ಈ ಶಬುದ ಅಂದನೋ ಇಲ್ಲವೋ ದೊರೆಸಾನಿಯ ಸಿಟ್ಟು ಕಟ್ಟೊಡೆದು ಕಣ್ಣು, ಮೂಗು ಅರಳಿಕೊಂಡವು. ದೇಹಾದ್ಯಂತ ಬಿದುರು ಮೆಳೆಯ ಹಾಗೆ ನಡುಗಿ “ತಗಿ ಶೀನಿಂಗೀ” ಎಂದು ನನ್ನನ್ನು ಪಕ್ಕಕ್ಕೆ ತಳ್ಳಿ “ಯಾರೋ ಹಾದರಗಿತ್ತಿ? ಗಂಡಿಗ್ಯಾ ಭ್ಯಾಡ್ಯಾ, ಮದಿವ್ಯಾಗಿ ಇಷ್ಟು ದಿನಾ ಆಯ್ತು, ಒಮ್ಮ್ಯಾದರೂ ನನ್ನ ಹೆಂಡ್ತಿ ಅಂಬೋ ಮಾಯೆ ಮಾಡಿದಿ? ಹೋಗಿ ಸೂಳೇರ ತೊಡಿ ನೋಡಿ ಬೇಹೋಶ್ ಆಗ್ತಿ, ಹಾಸಿಗ್ಯಾಗಿನ ಹೇಂತಿ ಮರಗತಾಳಂತ ಅಂದಿ? ಹಾದರಗಿತ್ತಿ ನಾ ಅಲ್ಲೋ….”

ಇನ್ನೇನು ಹೇಳಲಿದ್ದಳೋ ದೇಸಾಯಿ ಮತ್ತೆ “ಹಾದರಗಿತ್ತೇ” ಎಂದು ಚೀರಿದ. ಇವಳೂ ಅಷ್ಟೆ. ಮೈತುಂಬಿದ ಮಾರಿ ಸಿಡಿಯಾಡುವ ಹಾಗೆ ಹೋಗಿ, “ಸಿಟ್ಟಿಗೇಳಬ್ಯಾಡೊ, ಸತ್ತಗಿತ್ತೀ, ಸಿಟ್ಟ ತಡಕೊಳ್ಳೋ ತಾಕತ್ತೂ ನಿನಗಿಲ್ಲ, ನಿನ್ನಲ್ಲಿ ಇರೋದು ಅದೊಂದು ಶಿರ, ಅದೂ ಹರಿದರಗೊಟಕ್ಕಂತೀ” ಎಂದು ಹೇಳುತ್ತ, ಅವನ ಕೈ ಬಂದೂಕು ಸಮೇತ ತಳ್ಳಿದಳು. ಬಂದೂಕೊಂದು ಕಡೆ, ದೇಸಾಯಿ ಒಂದ ಕಡೆ ಬಿದ್ದು, ಬಿದ್ದಲ್ಲೇ ಗಡಗಡ ನಡುಗಿ, ಬೇಹೋಶ್ ಆದ. ಸಿಂಗಾರೆವ್ವ ಥೂ ಎಂದುಗುಳಿ ಹೊರಗೆ ಹೋದಳು. ನಾನು ಯಾರನ್ನು ನೋಡಲಿ, ಯಾರನ್ನು ಬಿಡಲಿ? ಸುದೈವದಿಂದ ಹೊರಗೆ ದರ್ಬಾರಿನ ಬಾಗಿಲಲ್ಲಿ ನಿಂತು ಮರೆಪ್ಪ ಇದನ್ನೆಲ್ಲ ಕೇಳುತ್ತಿದ್ದ. ಏನು ಮಾಡಬೇಕೆಂದು ತೋಚದೆ ನಾನು ಹೊರಬಂದಾಗ ಉಗುರು ಕಚ್ಚುತ್ತ, ಯಮದೈತ್ಯನಂತೆ ನಿಂತುಕೊಂಡಿದ್ದ. ಅಂತಸ್ತಿಗೆ ಹೋಗುವಂತೆ ಕೈಸನ್ನೆ ಮಾಡಿದೆ. ಹೋದ. ನಾನು ಅಡಿಗೆ ಮನೆಗೆ ಉಳ್ಳಾಗಡ್ಡಿ ತರಲಿಕ್ಕೆ ಓಡಿದೆ.

ಆಮೇಲೆ ಅಂತಸ್ತಿಗೆ ಹೋಗಿ ನೋಡಿದರೆ ಸಿಂಗಾರೆವ್ವನ ಸ್ಥಿತಿ ಇನ್ನೂ ಭಯಾನಕವಾಗಿತ್ತು. ಕಣ್ಣೀರು ಧಾರಾಕಾರವಾಗಿ ಇಳಿಯುತ್ತಿತ್ತು. ಕೂದಲು ಕೆದರಿ, ಕಣ್ಣು ಕೆಂಜಗಾಗಿ, ಹಲ್ಲು ಕಡಿಯುತ್ತಿದ್ದಳು. ಇದ್ದಕ್ಕಿದ್ದಂತೆ ತಲೆ ತಲೆ ಚಚ್ಚಿಕೊಳ್ಳುತ್ತಿದ್ದಳು. ತೂಕದಲ್ಲಿಟ್ಟ ಗಾಜಿನ ಗೊಂಬೆ ಎಲ್ಲಿ ಮುಟ್ಟಿದರೆ ಒಡೆಯುತ್ತದೊ ಎಂಬಂತೆ, ಮರೆಪ್ಪ ದೂರದಲ್ಲಿ ಕಾಳಜಿಯಿಂದ ನಿಂತಿದ್ದ. ಗಾಬರಿಯಾಗಿದ್ದ ಕೂಡ; ಯಾಕೆಂದರೆ “ನಿನ್ನ ಕೈ ಮುಗಿತೀನಿ, ಸಂಕಟ ಮಾಡಿಕೋಬ್ಯಾಡ” ಎಂದು ಕೈಕೈ ಮುಗಿದು ಹೇಳುತ್ತಿದ್ದಾಗ ಅವನ ದನಿ ನಡುಗುತ್ತಿತ್ತು. ನಾನು ಹೋದವಳೇ ಬಟ್ಟಲು ತುಂಬ ಶೆರೆ ಹಾಕಿ, “ಕುಡಿಯವ್ವ” ಎಂದೆ. ದೇವರ ದಯದಿಂದ ಕುಡಿದಳು. ಹಾಗೆ ಅಡ್ಡಾದಳು. ಮರೆಪ್ಪ ಗಾಬರಿ – ಗೊಂದಲಗಳಿಂದ ಸ್ತಂಭೀಭೂತನಾಗಿ ನಿಂತಿದ್ದ. ಕೆಳಗೆ ಅಂದರೆ ದೇಸಾಯನ್ನು ನೋಡಿಕೊಳ್ಳಲು ಹೇಳಿ ಕಳಿಸಿದೆ.

ತುಸು ಹೊತ್ತಾದ ಮೇಲೆ, ಸಿಂಗಾರೆವ್ವ ಉನ್ಮಾದಗೊಂಡವಳಂತೆ ಕೆಳಕ್ಕೆ ನಡೆದಳು. ನಾನು ಓಡಿಹೋಗಿ ಹಿಡಿದುಕೊಂಡು “ಎವ್ವಾ ಸಿಂಗಾರೆವ್ವ…. ಎಂದೆ. ನನ್ನ ಕೈ ಬಿಡಿಸಿಕೊಳ್ಳುತ್ತ,

“ಇಲ್ಲ ಅವನಿಗೆಲ್ಲಾ ಹೇಳಿಬಿಡ್ತೀನಿ, ನೀ ಎಂಥಾ ಲಜ್ಜೆಗೇಡಿ ಅಂತ ಹೇಳತೀನಿ. ನಾ ಯಾಕ ಹಾದರಗಿತ್ತಿ ಆದೆ, ಹೆಂಗ ಬಸರಾದೆ, ಹೆಂಗ ನೀನs ಹಾದರಾ ಮಾಡಕ ಹಚ್ಚಿದಿ; ನೀನು ಮತ್ತ ನಿನ್ನ ರೋಗ ಎರಡೂ ಸೇರಿ ಕುಂಟಲತನ ಮಾಡಿ, ಹಾದರಾ ಮಾಡಕ ನನ್ನ ಹೆಂಗ ದೂಕಿದಿರಿ – ಅಂತ ಹೇಳತೀನಿ. ಇದನ್ನ ಕೇಳಿ ಅವ ಬೇಹೋಶ್ ಆಗತಾನ. ಅದನ್ನೋಡಿ ನಾ ಸಂತೋಷಪಡ್ತೀನಿ. ಅವ ಗುಂಡ ಹಾರಿಸಲಿಕ್ಕೇನಾದರೂ ಬಂದನೋ, ಬಂದೂಕು ಕಸೀತೀನಿ. ಯಾಕಂದರ ಗುಂಡ ಹಾಕಿದರ ನಾ ಸಾಯ್ತಿನ್ನೋಡು. ಇಲ್ಲ, ನಾ ಸಾಯಾಣಿಲ್ಲ. ಹಂಗಿಸಿ ಹಂಗಿಸಿ ಅವ ದಿನಾ ಸಾಯೋಹಾಂಗ ಮಾಡತೀನಿ. ದಿನಾ ಸಾವಿರ ಬಾರಿ ಬೇಹೋಶ್ ಆಗೋಹಂಗ ಮಾಡಿ, ಮಾಡಿ ಕೊಲ್ಲತೀನಿ… ನೀನs ಕಂಡ್ಹಾಂಗ ನಾ ಹಾದರಗಿತ್ತಿ ಏನ ಶೀನಿಂಗೀ? ದೇವರು ಇಷ್ಟು ದೊಡ್ಡ ಶಿಕ್ಷಾ ನನಗ್ಯಾಕ ಕೊಡಬೇಕು?”

ಇರಿಯುವುದಕ್ಕೆ ಉಕ್ಕಿನ ಚೂರಿಯೇ ಬೇಕೇನಪ್ಪ? ಮಾತು ಸಾಲದೆ? ಗಂಡ ಹೆಂಡತಿ ಪರಸ್ಪರ ಇರಿದು ಗಾಯ ಮಾಡಿಕೊಂಡರು. ಈ ಗಾಯಗಳು ಕೊನೇ ತನಕ ಮಾಯಲೇ ಇಲ್ಲ. ದಿನ ಕಳೆದಂತೆ ಇದನ್ನೆಲ್ಲಾ ಮರೆತಾರು, ಹುಣ್ಣು ಹೋದಾವು ಎಂದರೆ – ಇಲ್ಲ, ಹೆಚ್ಚಾದುವು. ಗಂಡ – ಹೆಂಡತಿ ಒಂದೇ ಮನೆಯಲ್ಲಿದ್ದರೂ ಪರಸ್ಪರ ಮುಖ ನೋಡುತ್ತಿರಲಿಲ್ಲ.

ದೇಸಾಯಿಯ ವಿಷಯ ನನಗೆ ಗೊತ್ತಾದದ್ದು ಸ್ವಲ್ಪ. ಯಾಕೆಂದರೆ ಆತ ಮಾತಿನವಲ್ಲ. ಹಿಂದೆ ನೀನೇ ಕೇಳೀಯಲ್ಲ, ಆತ ಬಾಯಿ ತೆರೆದಾಗೆಲ್ಲಾ ಬಯಲಾಟದ ಮಾತುಗಳನ್ನೇ, ಅಂದರೆ ಹೆರವರ ಮಾತುಗಳನ್ನೇ ಹೇಳುತ್ತಿದ್ದ. ನಾನವನ ಕೋಣೆಗೆ ಊಟ ಒಯ್ಯುತ್ತಿದ್ದೆ. ಎಷ್ಟು ಒಯ್ದರೆ ಅಷ್ಟೇ ತಿನ್ನುತ್ತಿದ್ದ. ಮತ್ತೆ ಬೇಕೆಂಬುದಿಲ್ಲ. ಸಾಕೆಂಬುದಿಲ್ಲ. ಅವನಿಗೆ ಶೆಟ್ಟಿ, ಮರೆಪ್ಪ, ಮತ್ತು ನಿಂಗ ಈ ಮೂವರ ಮೇಲೂ ಸಂಶಯವಿತ್ತು. ಕೇಳಿ ಖಾತ್ರಿ ಮಾಡಿಕೊಳ್ಳಬೇಕೆಂದರೆ ಅಭಿಮಾನ ಅಡ್ಡಬರುತ್ತಿತ್ತು. ಅರಮನೆಯ ಇಂಥ ವಿಚಾರ ಸಾಮಾಜಿಕವಾಗುವುದು ಅವನಿಗೆ ಇಷ್ಟವಿರಲಿಲ್ಲ. ಮೂವರನ್ನೂ ಗಮನಿಸುತ್ತ ಹಿಂದೆ ಅವರು ಅರಮನೆಯಲ್ಲಿದ್ದಾಗ ಹ್ಯಾಗೆ ಹ್ಯಾಗೆ ನಡೆದುಕೊಂಡಿದ್ದರೆಂಬುದನ್ನು ಜ್ಞಾಪಿಸಿಕೊಳ್ಳುತ್ತ, ಆ ಮೂಲಕ ಅವರಲ್ಲಿಯ ದ್ರೋಹವನ್ನು ಪತ್ತೆ ಮಾಡಲಿಕ್ಕೆ ನೋಡುತ್ತಿದ್ದ. ಕೊನೆಗೊಮ್ಮೆ ಅವನಿಗ ಏನು ಹೊಳೆಯಿತೋ ಒಂದು ದಿನ ಮಧ್ಯಾಹ್ನವೇ ಬಂದೂಕು ಹಿಡಿದುಕೊಂಡು ಬಂದು ಕೊಟ್ಟಿಗೆಯಲ್ಲಿ ವೀರಾವೇಶದಿಂದ ಕೂತುಬಿಟ್ಟ. ದೊರೆಸಾನಿಯ ಜೊತೆ ಮತ್ತೆ ಲಟಾಪಟಿ ಸುರುವಾಗುವುದೇನೋ ಎಂದು ನಾನು ಹೆದರಿದ್ದೆ. ಮರೆಪ್ಪ ಮರೆಯಲ್ಲಿದ್ದುಕೊಂಡು ಅಂತಸ್ತಿನ ಬಾಗಿಲ ಕಾಯುತ್ತಿದ್ದ. ಬಹುಶಃ ನನ್ನ ಮೇಲೇನೂ ಸಿಟ್ಟಿರಲಾರದೆಂದು ನಂಬಿ, ಆದರೂ ಹೆದರುತ್ತಲೇ ಆ ಕಡೆ ಹೋದೆ. ಎಂದೂ ಆ ಕಡೆ ಕಾಲಿಡದವನು ಇಂದ್ಯಾಕೆ ಅಲ್ಲಿ ಕೂತಿದ್ದಾನೆಂದೂ ಆಶ್ಚರ್ಯವಾಯ್ತು. ದೇಸಾಯಿ ನನ್ನನ್ನು ನೋಡಿದನೇ ಹೊರತು, ಮುಖದ ಭಾವವನ್ನಾಗಲಿ, ಕೂತ ಭಂಗಿಯನ್ನಾಗಲಿ ಬದಲಿಸಲಿಲ್ಲ. ಮುಖ ಹೀರಿ, ಕಣ್ಣು ಒಳ ಸೇರಿದ್ದವು. ಮೊದಲೇ ಸಣಕಲು ಮೈ, ಒಂದು ಹೂಮಾಲೆ ಹಾಕಿದರೆ ಸಾಕು, ಈಗಷ್ಟೇ ಗೋರಿಯಿಂದೆದ್ದು ಬಂದ ತಾಜಾ ಹೆಣದಂತೆ ಕಾಣುತ್ತಿದ್ದ. ಮಾತಾಡಿಸಲಿಕ್ಕೆ ಧೈರ್ಯ ಸಾಲದೆ ತಿರುಗಿ ಬಂದೆ.

ಹೊತ್ತು ಮುಳುಗುತ್ತಿತ್ತು. ದನ ಮನೆಗೆ ಬಂದುವು. ಅವುಗಳ ಹಿಂದಿನಿಂದ ನಿಂಗ ಬಂದ. ಬಂದು ಕೊಟ್ಟಿಗೆಯಲ್ಲಿ ಮೇವು ಚಲ್ಲಲಿಕ್ಕೆ ಹೋದದ್ದೇ ತಡ, ದೇಸಾಯಿ ವೀರಾವೇಶದಿಂದ “ಬೋಳಿ ಮಗನ, ಉಂಡಮನೀ ಗಳಾ ಎಣಿಸಿದೇನೋ?” ಎಂದು ಒದರುತ್ತ ಬಂದೂಕಿನ ಗುರಿ ನಿಂಗನಿಗೆ ಹಿಡಿದ. ಹಿಂದು – ಮುಂದು ಗೊತ್ತಿಲ್ಲದ ನಿಂಗ ಮೇವು ಚಲ್ಲಿ “ಅಯ್ಯೋ ಎಪ್ಪಾ ಸತ್ತಿನ್ರೋ” ಎನ್ನುತ್ತ ಅಡಿಗೆಮನೆ ಮುಂದೆ ಹಾದು, ಪಡಸಾಲೆಯ ಕಡೆ ಓಡಿದ. ದೇಸಾಯಿ ಗುರಿ ಹಿಡಿದುಕೊಂಡೇ ಹಿಂದಿನಿಂದ ಓಡಿ ಬಂದ. ನಾನು ಹೊಯ್ಕಿನಿಂದ ಬೆನ್ನು ಹತ್ತಿದೆ. ನಿಂಗ ಪಡಸಾಲೆ ದಾಟಿ, “ಎವ್ವಾ, ಎಪ್ಪಾ” ಎನ್ನುತ್ತ ದರ್ಬಾರಿಗೆ ಹೋದ. ನೇರ ತೊಲೆ ಬಾಗಿಲ ಕಡೆ ಓಡಿದರೆ ಗುಂಡಿಗೆ ಗುರಿಯಾಗುತ್ತೇನೆಂದುಕೊಂಡನೋ ಏನೋ – ಕಂಬದ ಮರೆಯಲ್ಲಿ ನಿಂತ. ದೇಸಾಯಿ ಅಲ್ಲಿಗೂ ನುಗ್ಗಿದ. ಅವನು ಕಂಬದ ಮರೆಯಿಂದ ಇನ್ನೊಂದು ಕಂಬದ ಮರೆಗೆ ನೆಗೆಯುತ್ತ ಹಾರಾಡುತ್ತಿದ್ದರೆ, ದೇಸಾಯಿ ಹೊಂಚಿ ನಡೆವ ಬೇಟೆಗಾರನಂತೆ ಗುರಿ ಹಿಡಿದು ನಡೆದ. ದರ್ಬಾರಿನ ಕೊನೆ ಬಂತೆಂಬಾಗ ನಿಂಗ ಚಂಗನೆ ಕೆಳಗೆ ನೆಗೆದು, ಒಂದೇ ಏಟಿಗೆ ತೊಲೆ ಬಾಗಿಲ ಕಡೆ ಓಡಿದ. ಅವನಿನ್ನೂ ಹೊಸ್ತಿಲು ದಾಟಿರಲಿಲ್ಲ. ದೇಸಾಯಿ ಢಂ ಎಂದು ಗುಂಡು ಹಾರಿಸಿಯೇ ಬಿಟ್ಟ! ನಿಂಗನಿಗೆ ಸಪ್ಪಳ ತಾಗಿತ್ತಷ್ಟೆ. ಗುಂಡು ತಾಗಲೂ ಇಲ್ಲ, ತಾಗುವುದು ಸಾಧ್ಯವೂ ಇರಲಿಲ್ಲ. ಯಾಕೆಂದರೆ ತೊಲೆ ಬಾಗಿಲೆಲ್ಲೋ, ಗುಂಡು ಬಿದ್ದದ್ದೆಲ್ಲೋ, ಆದರೆ ಸಪ್ಪಳ ಕೇಳಿ, ನೆಗೆದು ಕಿರುಚಿಕೊಂಡು ಓಡಿದನಲ್ಲಾ – ದೇಸಾಯಿ ಹಿಂದಿನಿಂದ ಓಡಿ ಹೋಗಿ, ತೊಲೆ ಬಾಗಿಲಿಕ್ಕಿ, ಅಗಳಿ ಹಾಕಿ, ಭದ್ರಪಡಿಸಿ ಬಂದ. ನಿಂಗನಿಗೆ ಗುಂಡು ತಾಗಿತೆಂದು ಭ್ರಮಿಸಿದನೋ, ಅಥವಾ ಹೊರಗಿನ ಜನ ಬರದಿರಲೆಂದುಕೊಂಡನೋ, ಬರುವಾಗ ಅವನ ಮುಖದಲ್ಲಿ ಬೇಟೆಯಾಡಿದ ಆಯಾಸ ಮತ್ತು ಸಮಧಾನ ಇದ್ದವು. ನಮಗೆ ಆಮೇಲೆ ತಿಳಿಯಿತು. ದೇಸಾಯಿಗೆ ನಿಂಗನ ಮೇಲೆ ಸಂಶಯವಿತ್ತೆಂದು.

ಆದರೆ ಸಿಂಗಾರೆವ್ವನದೇ ನಮಗೆ ಹೆಚ್ಚು ಕಾಳಜಿಯಾಗಿತ್ತು. ಎಷ್ಟೆಂದರೂ ಅವಳದು ತುಂಬಿದ ಆತ್ಮ. ಭಾವಪೂರ್ಣ ಮನಸ್ಸಿನವಳು. ಅವಳ ಮುಖದ ಮೇಲೆ ಒಂದು ಮಂದಹಾಸವಾದರೂ ಮೂಡುವಂತೆ ಮಾಡಬೇಕೆಂದು ನಾನು ಖಟಪಟಿ ಮಾಡುತ್ತಿದ್ದೆ, ಒಮ್ಮೆ ಅವಳು ಮತ್ತು ನಾನು ಪಟಾಂಗಳದ ಕಟ್ಟೆಯ ಮೇಲೆ ಕೂತಿದ್ದೆವು. ಬೆಳದಿಂಗಳು ಅವಳ ಮನಸ್ಸಿಗೆ ತಂಪೆರೆದು ಶಾಂತಗೊಳಿಸಿದೆಯೆಂದೂ ಭಾವಿಸಿದ್ದೆ. ಅರಮನೆ ಮತ್ತು ಊರು ಕೂಡ ಸ್ತಬ್ಧವಾಗಿತ್ತು. ನನ್ನ ಭುಜಕ್ಕೊರಗಿ ಕೂತಿದ್ದಳು. ನಾನು ಸುಮ್ಮನಿರಲಾರದೆ ಒಂದು ಸಣ್ಣ ಚೇಷ್ಟೇ ಮಾಡೋಣವೆಂದು “ಬಿಡs ಗೆಳತಿ, ನಿನ್ನ ಗೆಳಿತಾನಾ ತಿಳದೈತಿ ಬಿಡು. ಬಸರಾದದ್ದ ನನಗೆ ಹೇಳೇ ಇರಲಿಲ್ಲ” ಎಂದೆ.

“ಏನಂತ ಹೇಳ್ಲೇ ತಾಯಿ. ಈ ಮದಿವ್ಯಾದಾಗs ನಾ ರಂಡಿಮುಂಡಿ (ವಿಧವೆ) ಆಗಿದ್ದೆ. ರಂಡಿಮುಂಡಿ ಬಸರಾದರ ಜನ ಏನಂದುಕೊಂಡಾರು?”

ಎಂದು ಹೇಳಿ ನನ್ನ ತೊಡೆಯ ಮೇಲೆ ತಲೆಯೂರಿ ಅಳತೊಡಗಿದ್ದಳು. ಯಾಕಾದರೂ ಮಾತಾಡಿದೇನೋ ಎನ್ನಿಸಿತು. ಏನು ಮಾತಾಡಿದರೂ ಅದನ್ನು ಬಸರಿಗೆ ಅನ್ವಯಿಸುತ್ತ ಹೋದರೆ ಮಾತಾಡುವುದು ಹ್ಯಾಗೆ?

ಇಷ್ಟಾದರೂ ಅವಳು ಆಗಾಗ ದೇಸಾಯರು ಬಂದರ? ಉಂಡರ? ಇಂದೇನಂದರು? ನನ್ನ ಮೇಲಿನ ಹಳೇ ಸಿಟ್ಟಿನ್ನೂ ಹಾಗೆ ಇದೆಯೇ? – ಮುಂತಾಗಿ ಕೇಳುತ್ತಿದ್ದಳು. ಆ ದಿನ ತಾನವನಿಗೆ ಘಾಸಿ ಮಾಡುವ ಮಾತುಗಳನ್ನು ಆಡಬಾರದಿತ್ತೆಂದು ಹೇಳುತ್ತಿದ್ದಳು. ದೇಸಾಯಿ ಮುಖ ಪೆಚ್ಚು ಮಾಡಿಕೊಂಡು ಅವಳ ಮುಂದೊಮ್ಮೆ ಅಡ್ಡಾಡಿದರೂ ಸಾಕಿತ್ತು. ತಬ್ಬಿಕೊಂಡು ಕ್ಷಮಿಸಲು ಸಿದ್ಧವಾಗಿದ್ದಳು. ನಾನು ಇದೇ ಸಮಯವೆಂದು ದೇಸಾಯಿ, ನಿಂಗನಿಗೆ ಗುಂಡು ಹಾಕಲು ಓಡಾಡಿದ್ದನ್ನು ಹೇಳಿದೆ. ಸದ್ಯ, ಸಣ್ಣದೊಂದು ಮಂದಹಾಸ ಅವಳ ಮುಖದ ಮೇಲಾಡಿತು. “ಈಗಿದ್ದಾರೇನು, ನೋಡು ಅವರನ್ನ ನಾನs ಸಮಾಧಾನ ಮಾಡತೀನಿ” ಎಂದಳು. ನನಗೆ ತುಸು ಹೊಯ್ಕಾಯಿತು. ಸಂಶಯದಲ್ಲಿ ಪಡಸಾಲೆಗೆ ಹೋಗಿ ಅವನ ಕೋಣೆಯಲ್ಲಿ ಹಣಿಕಿ ಹಾಕಿದೆ. ಒಳಗೆ ಕತ್ತಲಿತ್ತು, ಮಂಚದ ಮೇಲೆ ಬಿದ್ದುಕೊಂಡಿದ್ದ. “ದೊರೆಸಾನಿ ನಿಮ್ಮ ಕೂಡ ಮಾತಾಡಬೇಕಂತ, ಕರೀತಾರ” ಅಂದೆ.

“ನೀನೂ ಬ್ಯಾಡಾ, ನಿಮ್ಮ ದೊರೆಸಾನಿಯೂ ಬ್ಯಾಡಾ” ಎಂದು ಹೇಳಿ ಬಾಗಿಲು ಹಾಕಿಕೊಂಡ. ಬಂದು ನಡೆದದ್ದನ್ನೆಲ್ಲ ಹೇಳಿದೆ. ದೊರೆಸಾನಿಗಿದು ತಮಾಷೆಯಾಗಿ ಕಂಡಿತು. ಮುಗುಳು ನಕ್ಕಳು.

ಈ ಮಧ್ಯೆ ಹೊರಗಡೆ ಏನೇನೋ ವ್ಯವಹಾರಗಳು ಕುದುರುತ್ತಿದ್ದವು. ಕೊಲ್ಲಾಪುರದಿಂದ ತಮಾಶಾದ ನಾಚವಾಲಿಯನ್ನು ಕರೆತರುವುದಾಗಿ ಶೆಟ್ಟಿ, ದೇಸಾಯಿಗೆ ಭರವಸೆ ಕೊಟ್ಟಿದ್ದನಂತೆ. ಮರೆಪ್ಪನೂ ಅರಮನೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಏನೇನೋ ಹಂಚಿಕೆ ಹಾಕುತ್ತಿದ್ದ. ಮೊದಮೊದಲು ದೊರೆಸಾನಿಗೆ ಇದನ್ನೆಲ್ಲ ಹೇಳುತ್ತಿದ್ದ. ಆದರೆ ಬರಬರುತ್ತಾ ಅವಳಿಗೆ ಅದರಲ್ಲಿ ಆಸಕ್ತಿಯೇ ಉಳಿಯಲಿಲ್ಲವಾದ್ದರಿಂದ  ಹೇಳುವುದನ್ನೇ ಬಿಟ್ಟುಬಿಟ್ಟಿದ್ದ. ನನಗೆ ಆ ವ್ಯವಹಾರದ ತುದಿ ಇಲ್ಲವೆ ಬುಡ ತಿಳಿದಿರುತ್ತಿತ್ತು ಅಷ್ಟೆ. ಕೊಲ್ಲಾಪುರದ ಮಹಾರಾಜರ ಸೂಳೆ ಒಬ್ಬಳು ಇರುವಳೆಂದೂ, ಅವಳನ್ನು ಕರೆತರುವುದಾಗಿಯೂ ಮರೆಪ್ಪ ಹೇಳಿದ್ದನಂತೆ. ದೇಸಾಯಿ ಸ್ಪಷ್ಟವಾಗಿ ಹೇಳಿದ್ದನಂತೆ: “ನಾನು ಮಹಾರಾಜ, ಸುಖಪಡುವುದಕ್ಕಾಗೇ ಹುಟ್ಟಿದವನು, ನಾನು ಸುಖಪಡುತ್ತಲೇ ಸಾಯುತ್ತೇನೆ” ಎಂದು. ಆದರೆ ದೇಸಾಯಿಗೆ ಮರೆಪ್ಪನ ಆಮಿಷವೇ ದೊಡ್ಡದಾಗಿ ಕಂಡಿತ್ತು. ಯಾಕೆಂದರೆ ಎಷ್ಟೆಂದರೂ ಇವನ ಹುಡುಗಿ ಕೊಲ್ಲಾಪುರ ಮಹಾರಾಜರ ಸೂಳೆ, ಸಣ್ಣಪುಟ್ಟ ಜಮೀನುದಾರರಿಗೆಲ್ಲ ತೊಡೆ ತೋರಿಸುತ್ತಾಳೆಯೇ?

ಇಂಥ ನಂಬಬಾರದ ಸಂಗತಿಗಳನ್ನ ಮರೆಪ್ಪ ಹ್ಯಾಗೆ ನಂಬಿಸಿದ್ದನೋ, ದೇಸಾಯಿ ಹ್ಯಾಗೆ ನಂಬಿದ್ದನೋ! ಈ ವ್ಯವಹಾರ ಶೆಟ್ಟಿಗೆ ತಿಳಿಯದ ಹಾಗೆ ನಡೆದಿತ್ತು. ಆ ಕಡೆ ಶೆಟ್ಟಿ, ಈ ಕಡೆ ಮರೆಪ್ಪ ಅರಮನೆಯನ್ನು ತಮ್ಮದಾಗಿಸಿಕೊಳ್ಳುವ ಕಾಗದಗಳ ಮೇಲೆ ದೇಸಾಯಿಯ ಸಹಿ ಹಾಕಿಸಿಕೊಳ್ಳಲು ಸ್ಪರ್ಧಿಸುತ್ತಿದ್ದರು. ಇಂಥದನ್ನು ನಂಬಲಿಕ್ಕಾದೀತೇನಪ್ಪ? ಅರಮನೆ ಎಂದರೆ ಪೇಟೆಯೊಳಗಿನ ತರಕಾರಿಯೇ? ಅಂತೂ ಅವರು ಹ್ಯಾಗೋ ತಂತಮ್ಮ ವ್ಯವಹಾರಗಳನ್ನು ನಿಭಾಯಿಸುತ್ತಿದ್ದರು. ದೇಸಾಯಿಯೂ ಹಾಗಿದ್ದ ಅಂತಿಟ್ಟುಕೊ.

ದೇಸಾಯಿಯ ಇಂಥ ನಡತೆಯಿಂದ ದೊರೆಸಾನಿ ಬಹಳ ನೊಂದುಕೊಂಡಳು. ದೊರೆಸಾನಿಯಾಗಿ ಇಷ್ಟು ದಿನ ಈ ಮನೆಯಲ್ಲಿ ಸವೆದಿಲ್ಲವೆ? ಹೆಂಡತಿಯಾಗಿ ಗಂಡನಿಂದ ಕುಟಿಲೋಪಾಯ ಮಾಡಿ ಅರಮನೆ ಪಡೆಯಬೇಕೆ?

“ನೀನs ಹೇಳ ಶೀನಿಂಗೀ, ನಾ ಇಲ್ಲಿ ಸಾಯ್ತಾ ಇದ್ದೀನಿ. ಅವ ಅಲ್ಲಿ ಹುಡಿಗೇರ ತೊಡಿ ನೋಡಾಕ ಹಾತೋರಿತಾನ! ನಾ ಏನೇನೋ ಮಾತಾಡಿದೆ ಅಂತಿಟಕ. ಅದರ ಅವ ಏನ ಕಮ್ಮಿ? ಆ ಶಬುದ ನನಗನ್ನಭೌದೇನ? ಹೋಗಲೇ, ನಾ ಹಾದರಗಿತ್ತಿ ಅಂತನ್ನು, ಅವ ಹುಡುಗೇರ ತೊಡಿ ನೋಡತಾನಲ್ಲ, ಅವರಿಂದಾದರೂ ಮಕ್ಕಳ್ನ ಪಡೆದು ಈ ಅರಮನಿ ಮತ್ತ ನಿಲ್ಲಿಸ್ತಾನೇನ? ಈ ಅರಮನಿಗೀ ಮಕ್ಕಳು ಬ್ಯಾಡೇನ? ಮೊದಲು ಇಲ್ಲಿ ಬಂದಾಗ ಅರಮನಿ ನೋಡಿದೆ. ಅರಮನಿ ತುಂಬ ಕಂಬಗಳು. ಕಂಬಕ್ಕೊಂದು ಮಕ್ಕಳ್ನ ಹಡೀಬೇಕಲ್ಲ!… ಅವಯ್ಯ, ನಾ ಇನ್ನೂ ಎಷ್ಟು ಕೆಲಸ ಮಾಡಬೇಕಲ್ಲ – ಅಂತಂದುಕೊಂಡು ಹುಟ್ಟಿ ಬರೋ ಮಕ್ಕಳಿಗಾಗಿ ಅರಮನಿ ಹಸನ ಮಾಡಬೇಕಂತ ಗುಡಸಾಕ ಶುರು ಮಾಡಿದೆ.

ಅದರ ದೇಸಾಯರ್ನ ನೋಡಿದ ಮ್ಯಾಲ ಅನ್ನಿಸ್ತು: ಈ ಅರಮನ್ಯಾಗ ಇನ್ನೇನೂ ಹುಟ್ಟೋದs ಇಲ್ಲ ಅಂತ. ಹುಟ್ಟಿದರ ಪತ್ರೀಬನ ಹುಟ್ಟಬೇಕಷ್ಟ. ದರ್ಬಾರದಾಗ ಅದಾವಲ್ಲ, ಅವು ಕಂಬಗಳಲ್ಲ, ಪತ್ರೀಗಿಡ! ಒಂದೊಂದು ಕಂಬ ಒಂದೊಂದು ಪತ್ರೀಗಿಡಾನs!” ಎಂದು ಹೇಳುತ್ತ ಬಿಕ್ಕಿಬಿಕ್ಕಿ ಅತ್ತಳು. ಏನೆಂದು ಸಮಾಧಾನ ಮಾಡುವುದಕ್ಕೋ ನನಗೆ ತೋಚಲಿಲ್ಲ. ಮತ್ತೆ ಉದ್ವೇಗಗೊಂಡು ಬಲಗೈ ತೋರಬೆರಳು ತೋರುತ್ತ,

“ನೋಡ್ತಾ ಇರು, ಈ ಅರಮನಿ ಪುಣ್ಯೆ, ದೇಸಾಯಿ ಷಂಡತನ, ನನ್ನ ಹಾದರ ಎಲ್ಲಾ ಮುಗ್ಯಾಕ ಬಂದಾವಗs! ದೀಪ ಆರೋವಾಗ ದೊಡ್ಡದಾಗತೈತಲ್ಲಾ, ಹಾಂಗ ಇವರೆಲ್ಲಾ ದೊಡ್ಡದಾಗಿ ಉರ್ಯಾಕ ಹತ್ಯಾರ. ಇನ್ನೆನ ಎಲ್ಲಾ ಮುಗೀತೈತಿ! ನೋಡ್ತಾ ಇರು. ಮುಗೀತೈತಿ” ಎಂದು ಎರಡೂ ಕೈ ಮ್ಯಾಲೆತ್ತಿ ರೆಕ್ಕೆಯ ಹಾಗೆ ಆಡಿಸುತ್ತ ಕಣ್ಣೀರು ಸುರಿಸಿದಳು. ಕೊನೆಯ ಮಾತುಗಳನ್ನವಳು ಶಾಂತವಾಗೇ ಹೇಳಿದ್ದಳು. ಆದರೆ ಒಳಗಿನ ನೋವಿನ ಒತ್ತಡದಿಂದ ಅವಳಿಗೇ ಗೊತ್ತಾಗದ ಹಾಗೆ, ಅವು ಶಾಪದಂತೆ ಬಿರುಸಾಗಿ ಬಂದವು.

ದೇಸಾಯಿ ಹ್ಯಾಗಾದರೂ ತನ್ನ ಸುಖದಲ್ಲಿ ತಾನಿರಲಿ, ಸಿಂಗಾರೆವ್ವನ ತಂಟೆಗೆ ಬರದಿದ್ದರೆ ಸಾಕೆಂದಿದ್ದೆ. ಇಬ್ಬರೂ ದೂರವಾದದ್ದರ ಬಗ್ಗೆ ದೊರೆಸಾನಿಗೆ ದುಃಖವಾಗಿತ್ತು. ಮೊದಲೇನು ಅವರು ಸಮೀಪದಲ್ಲಿ, ಗಂಡಹೆಂಡಿರ ಹಾಗೆ ಇದ್ದರೆಂದಲ್ಲ, ಆದರೆ ಈಗಿನ ದೂರ ಅವಳಿಗೆ ಚುಚ್ಚುತ್ತಿತ್ತು. ಆ ದಿನ ಮರೆಪ್ಪ ವ್ಯವಹಾರದ ಕೆಲಸವೆಂದು ಗೋಕಾವಿಗೆ ವಕೀಲರಲ್ಲಿಗೆ ಹೋಗಿದ್ದ. ರಾತ್ರಿ ಸಿಂಗಾರೆವ್ವನಿಗೆ ಅಂತಸ್ತಿಗೆ ಊಟ ತಗೊಂಡು ಹೋಗಿದ್ದೆ. “ದೇಸಾಯಿ ಉಂಡರ?” ಎಂದಳು. “ಹ್ಞೂ ಎವ್ವ” ಅಂದೆ. ಮೆಲ್ಲಗೆದ್ದು ಅಲ್ಲೇ ಮಂಚದ ಮೇಲೆ ಕೂತಳು. ಈಗಂತೂ ತುಂಬ ದುರ್ಬಲಳಾಗಿದ್ದಳು. ಬರೀ ಹೊಟ್ಟೆಯೇ ಕಾಣುತ್ತಿತ್ತು. ಒಂದೆರಡು ತುತ್ತು ತಿಂದು ಸಾಕೆಂದಳು. ಬಸರಿ ಎಂದರೆ ಎರಡು ಜೀವಕ್ಕೆ ಸಮ, ಚೆನ್ನಾಗಿ ತಿನ್ನಬೇಕೆಂದು ಹೇಳಿ ತುತ್ತು ಮಾಡಿ ಇನ್ನಷ್ಟು ತಿನ್ನಿಸಿದೆ. ಕೈತೊಳೆದು ಎಲಡಿಕೆ ಹಾಕಿಕೊಂಡಳು. ಬಿಚ್ಚಿದ ಕೂದಲನ್ನು ಕೂಡಿಸಿ ಗಂಟು ಕಟ್ಟಿದೆ. “ಒಬ್ಬಾಕೀನs ಆಗ್ತಿ, ಮಲಗಾಕ ಮ್ಯಾಲs ಬರಲೇನವ್ವಾ?” ಅಂದೆ. ಹ್ಞೂಂ ಎಂದಳು. ಊಟ ಮಾಡಿರಬೇಕೆಂದು ಅಡಿಗೆ ಮನೆಗೆ ಹೋದೆ.

ನನ್ನ ಊಟ, ಕಸಮುಸರೆ ಮುಗಿಯುವುದಕ್ಕೆ ಸಮಯ ಹಿಡಿಯಿತು. ಮುಗಿಸಿ ನೀರಿನ ತಂಬಿಗೆ ತಗೊಂಡು ಅಂತಸ್ತಿಗೆ ಬರುತ್ತಿದ್ದೆ. ಆಗಲೇ ದೇಸಾಯಿ ತುದಿಬಾಗಿಲಲ್ಲಿ ನಿಂತು, ಮೇಲೇರಿ ಹೋಗಲೋ ಬೇಡವೋ ಎಂಬಂತೆ ನಿಂತಿದ್ದ. ನಾನಲ್ಲೇ ನಿಂತೆ. ಮತ್ತೆನು ನಿರ್ಧರಿಸಿದನೋ ಮೇಲೇರಿ ಹೋದ. ಗಂಡ ಹೆಂಡತಿ ನಾನಿಲ್ಲದೆ ರಾಜಿಯಾಗುವುದಾದರೆ ಒಳ್ಳೆಯದೇ, ಆಗಲಿ ಎಂದುಕೊಂಡೆ. ಆದರೆ ಮನುಷ್ಯನ ಮನಸ್ಸು ಯಾವ ಹೊತ್ತು ಹ್ಯಾಗಿರುತ್ತದೆಂದು ಹ್ಯಾಗ ಹೇಳಲಾದೀತು? ನಾನು ಮೆಟ್ಟಿಲು ಹತ್ತಿ ಬಾಗಿಲ ಬಳಿ ಅವರಿಗೆ ಕಾಣಿಸದಂತೆ, ಆದರೆ ಒಳಗೆ ನಡೆಯುವುದು ನನಗೆ ಕಾಣುವಂತೆ ನಿಂತೆ.

ಸಿಂಗಾರೆವ್ವ ಕಣ್ಣು ತೆರೆದುಕೊಂಡೇ ಮಲಗಿದ್ದಳು. ದೇಸಾಯಿಯನ್ನು ನೋಡಿ ಅವಳ ಮುಖದಲ್ಲಿ ಸಮಾಧಾನದ ಮಂದಹಾಸ ಮೂಡಿತು. ಕಷ್ಟಪಟ್ಟು ಎದ್ದು ಕೂತಳು. ದೇಸಾಯಿ ಈ ಕಡೆ ತಿರುಗಿದ.

“ನಿಮಗಾಗಿ ನಾ ಇಲ್ಲಿ ಸಾಯಾಕಹತ್ತೇನಿ. ಈಗ ಬಂದಿರೇನು? ಇಲ್ಲಿ ಬರ್ರಿ” ಅಂದಳು. ದೇಸಾಯಿ ಹಾಗೆಯೇ ಸೆಟಗೊಂಡು ನಿಂತಿದ್ದ.

“ಇನ್ನs ನನ್ನ ಮ್ಯಾಲಿನ ಸಿಟ್ಟು ಹೋಗಿಲ್ಲೇನು? ಮಾರಾಯರ, ತಪ್ಪಾಯಿತು, ಕಾಲ ಹಿಡೀಲೇನು? ಕಾಲ ಹಿಡಿಸಿಕೊಳ್ಳೋಕಾದರೂ ನೀವs ಬರಬೇಕು. ನನಗೆ ಏಳಾಕ ಆಗವೊಲ್ದು”

ಈಗ ದೇಸಾಯಿ ಮೆಲ್ಲಗೆ ಒಂದೊಂದೆ ಅಡಿಯಿಟ್ಟು ಅವಳ ಸಮೀಪ ಹೋದ. ಮಂಚದ ಮೇಲೆ ಕೈಬಡಿದು ಅಲ್ಲಿ ಕೂರಲು ಸೂಚಿಸಿದಳು. ದೇಸಾಯಿ ತಟ್ಟನೆ ಕೆಳಕ್ಕೆ, ಅವಳ ಕಾಲ ಬಳಿ ಕೂತ. ಸಿಂಗಾರೆವ್ವನಿಗೆ ಸಂಕೋಚವಾಯಿತಾದರೂ, ಕೆಳಗೆದ್ದು ಕೂರಲು ಸಾಧ್ಯವಾಗಲಿಲ್ಲ. ದೇಸಾಯಿ ಕೋಪದಲ್ಲಿ ಹೇಳಿದ.

“ನಮಗ ನಿಮ್ಮ ಬಸಿರು ಮನಸ್ಸಿಗಿ ಬರಲಿಲ್ಲ” ಸಿಂಗಾರೆವ್ವ ಅಸಮಾಧಾನಗೊಳ್ಳಲಿಲ್ಲ. ಮೆಲ್ಲಗೆ ದೇಸಾಯಿಯ ನೆತ್ತಿಯ ಮೇಲೆ ಎಡಗೈಯಿಟ್ಟು, ಬಲಗೈಯಿಂದ ಅವನ ಗದ್ದ ಹಿಡಿದು, ಮೇಲೆತ್ತಿ, ಅದೇ ಮಂದಹಾಸದಿಂದ ಅವನ ಮುಖ ನೋಡಿದಳು.

“ಆಯ್ತು, ಮಾರಾಯರ, ಈ ಅರಮನೀಗಿ ಮಕ್ಕಳs ಬ್ಯಾಡೇನು? ನಿಮ್ಮ ತಾಯಿ ಸಾಯೋ ಮುನ್ನ ನಡುಪಟ್ಟಿಕೊಟ್ಟು, ಮಕ್ಕಳ್ನ ಹಡೀಮಗಳs ಅಂತ ಆಶೀರ್ವಾದ ಮಾಡಿದಳು. ಅದೂ ಹುಸಿಯಾಗಬೇಕೇನು? ನೀವಂತೂ ಬಯಲಾಟ ಮಾಡಿಕೊಂಡ ಅಡ್ಡಾಡತೀರಿ. ನಿಮ್ಮ ಆಳಿಕಿ ಆದ ಮ್ಯಾಲ ಅರಮನೀಗಿ ಯಾರೂ ಹಕ್ಕುದಾರ ಬ್ಯಾಡೇನು? ನನ್ನ ಮದಿವ್ಯಾದಿರಿ. ನಾನೂ ನಿಮ್ಮ ಬಳಗ ಸೇರಿಕೊಂಡೆ. ನನ್ನ ಬಿಟ್ಟು ನಿಮಗೆ ಅದಾರಾದ್ರೂ ಯಾರು?” ತುಂಟ ಮಗನಿಗೆ ತಾಯಿ ಬುದ್ಧಿ ಹೇಳುವಂತಿದ್ದ ಈ ಮಾತುಗಳಿಂದ ನನಗೆ ಮನರಂಜನೆ ಸಿಗುತ್ತಿತ್ತು. ಅರ್ಥವಿಲ್ಲದ ಅಭಿಮಾನವನ್ನು ಬದಿಗಿರಿಸಿ ಇರೋ ಸತ್ಯವನ್ನ ಎದುರಿಸೋಣ ಎನ್ನುವುದು ಅವಳ ಮಾತಿನ ಆಶಯವಾಗಿತ್ತು. ದೇಸಾಯಿ ಆ ಮಾತಿನ ಹಿಂದಿನ ಅಂತಃಕರಣ ತಟ್ಟಿತೇನೋ, ಮುಖ ಕೆಳಗೆ ಹಾಕಿದ. ಮೆಲ್ಲಗೆ “ಯಾರಿಂದಾಯ್ತು?” ಎಂದ.

“ಯಾರಿಂದಲೋ… ಕೇಳಿ ಏನ ಮಾಡ್ತೀರಿ? ನಿಮ್ಮಿಂದs ಅಂತ ತಿಳಕೊಂಡ ಬಿಡ್ರಲ್ಲ” ಎಂದು ಹೇಳಿ ಮತ್ತೆ ಎಡಗೈ ಅವನ ತಲೆಯ ಮೇಲೆ ಆಡಿಸಿದಳು. ಅವನು ಹಾಗೆಯೇ ಅವಳ ತೊಡೆಯ ಮೇಲೋರಗಿದ. ಸಿಂಗಾರೆವ್ವ ಕಣ್ಣೊಳಗೆ ಮುಂಬರುವ ಮಗನ ಲೀಲೆಗಳ ಕನಸು ಕಾಣುತ್ತ ಕೂತಳು. ದೇಸಾಯಿ ತುಸು ಬಿರುಸು ದನಿಯಲ್ಲಿ,

“ನೀವು ಈ ಅರಮನ್ಯಾಗ ಇರಬೇಕಾದರ ಈ ಬಸರ ತಗಸಬೇಕು” ಎಂದ. ಸಿಂಗಾರೆವ್ವ,

“ಅಷ್ಟು ಯಾಕ ಅಭಿಮಾನ ಹಿಡೀತೀರಿ? ಬ್ಯಾರೆ ಸೀಮೀ ದೇವರು ಮೂಡ್ಯಾನ. ಬರೋದಕ್ಕ ತಯ್ಯಾರಾಗ್ಯಾನ. ಅವನಿಗೆ ಇಂಥ ಅಭಿಮಾನ ಇಲ್ಲs ಇಲ್ಲ. ಬರತಾನ, ಅರಮನಿ ಕಂಬ ಹಿಡ್ಕೊಂಡು ಆಡತಾನ, ನಗ್ತಾನ, ಹಾಡ್ತಾನ, ಕ್ಯಾಕಿ ಹಾಕತಾನ, ಕಂಬಗಳೆಲ್ಲ ಅವನ ಜೋಡೀ ಮಾತಾಡ್ತಾವ…”

ಹೀಗೆ ಮೈಮರೆತು ಏನೇನೋ ಹೇಳುತ್ತಿದ್ದರೆ, ಆ ಚಂಡಾಲ –

“ಹಾದರಕೂಸ ನಮ್ಮ ಅರಮನ್ಯಾಗ ಆಡೋದಕ್ಕ ನಾವು ಬಿಡೋದಿಲ್ಲ” ಎಂದು ಚೀರಿ ಎತ್ತಿನ ಹಾಗೆ ತಲೆಯಿಂದ ಸಿಂಗಾರೆವ್ವನ ಗರ್ಭಕ್ಕೆ ಗುಮ್ಮಿಬಿಟ್ಟ! ತಾಯಿ ಹಾ ಎಂದು ಹೊಟ್ಟೆ ಹಿಡಿದುಕೊಂಡು ಹಿಂದೆ ಬಿದ್ದಳು. “ಅಯ್ಯೊ ಎವ್ವಾ” ಎಂದವಳೇ ನಾನು ತಟ್ಟನೆ ಓಡಿಹೋಗಿ ದೇಸಾಯಿಯ ಕತ್ತು ಹಿಡಿದು ಹಿಂದೆ ತಳ್ಳಿಬಿಟ್ಟೆ. ಅಷ್ಟು ದೂರ ಹೋಗಿ ಬಿದ್ದ. “ಮನಶೇರೇನ್ರಿ ನೀವು?” ಎಂದು ಹೇಳಿ ಸಿಂಗಾರೆವ್ವನನ್ನು ಉಪಚರಿಸತೊಡಗಿದೆ. ದೇಸಾಯಿ ಎದ್ದು ಸರ್ರನೆ ಕೆಳಗಿಳಿದು ಹೋದ. ಗರ್ಭಕ್ಕೆ ಪೆಟ್ಟುತಾಗಿ ಕಳೆ ಹತ್ತಿತ್ತು. ಕಣ್ಣು ಮುಚ್ಚಿ, ತುಟಿ ಕಚ್ಚಿ, ಒಳನೋವನ್ನು ಸಹಿಸಲಾರದೆ ಒದ್ದಾಡುತ್ತಿದ್ದಳು. ಎವ್ವಾ ಎವ್ವಾ ಎನ್ನುತ್ತ ಏನೂ ಮಾಡಲಾಗದೆ ಕಾಪಾಡೋ ಶಿವಲಿಂಗಾ ಎಂದು ಬೇಡಿಕೊಂಡೆ. ದೇವರಿಗೆ ನನ್ನ ಮೊರೆ ಕೇಳಿಸಿತು. ತುಸು ಹೊತ್ತಾದ ಬಳಿಕ ಸಮಾಧಾನ ಹೊಂದಿ, ಮೆಲ್ಲಗೆ ಪಂಜು ಹೊತ್ತಿಸಿದ ಹಾಗೆ ಕಣ್ಣು ತೆರೆದಳು.

ನೀನೇ ಕೇಳಿದ್ದೀಯಲ್ಲಪ್ಪ ಸಿಂಗಾರೆವ್ವನ ಮಾತು. ಅವು ಆಡಬಾರದ ಮಾತುಗಳ? ಆದರೆ ಆ ಚಂಡಾಲ ದನ ಇರಿದ ಹಾಗೆ ತಾಯಿಯ ಗರ್ಭಕ್ಕೆ ಇರಿಯುವದ? ಆ ದಿನ ಮೊದಲಾಗಿ ದೇಸಾಯಿ ಮತ್ತು ಒಳ್ಳೆಯತನಗಳಲ್ಲಿಯ ನನ್ನ ನಂಬಿಕೆಯೇ ಹಾರಿ ಹೋಯಿತು. ಎಂದಿದ್ದರೂ ಇವನು ಗರ್ಭಕ್ಕೆ ಕಂಟಕನಾಗುವವನೇ ಎಂಬುದು ಅವಳಿಗೆ ಖಾತ್ರಿಯಾಗಿ ಹೋಯಿತು. ಆಯಾಸವಾದ್ದರಿಂದ ಆ ದಿನವೇನೋ ಸುಮ್ಮನಿದ್ದಳು. ಆಮೇಲೆ ಉರಿಯತೊಡಗಿದಳಪ್ಪ! ಈಗ ಬರೀ ಸಿಂಗಾರೆವ್ವ ಅಲ್ಲ, ಬಸರಿಯಾದ ತಾಯಿ ಸಿಟ್ಟಿಗೆದ್ದಿದ್ದಳು. ಅವಳ ಹೆಸರೆತ್ತಿದರೆ ಸಾಕು ಉರಿದುರಿದು ಬೀಳುತ್ತಿದ್ದಳು. ದೇಸಾಯಿ ಎಂದರೆ ಮೊದಲಿನ ಹಾಗೆ, ಅವರು – ಇವರು ಹೋಗಲಿ, ಅವನು – ಇವನು ಎಂದೂ ಮಾತಾಡುತ್ತಿರಲಿಲ್ಲ. ತಿರಸ್ಕಾರದಿಂದ ಅವನೊಂದು ಕ್ರಿಮಿ ಎಂಬಂತೆ ಅದು, ಇದು ಎನ್ನುತ್ತಿದ್ದಳು.

ಅಯ್ಯೋ, ಆ ಇಡೀ ದಿನ ಅವಳ ಕೋಪವನ್ನು ಉಪಶಮನ ಮಾಡುವುದು ಕಷ್ಟವಾಯಿತು. ಮಧ್ಯಾಹ್ನ ಊಟ ಮಾಡಿ ಅಂತಸ್ತಿಗೇರಿ ಬರುತ್ತಿರಬೇಕಾದರೆ ದೇಸಾಯಿಯ ಕೋಣೆ ಕಡೆ ಮುಖ ಮಾಡಿ ಪಡಸಾಲೆಯಲ್ಲಿ ಕೂತಳು. ನೆಲಕ್ಕೆ ಕೈ ಕೈ ಬಾರಿಸಿ, ಶಪಿಸತೊಡಗಿದಳು:

“ನನ್ನ ಗರ್ಭಕ್ಕೆ ಘಾತ ಮಾಡಾಕ ಬಂದ್ಯೇನೋ ನಾಯೆ? ಥೂ ಗಂಡಿಗ್ಯಾ ಭಾಡ್ಯಾ! ನಿನ್ನ ಮೈಯಾಗ ರಕ್ತ ಇಲ್ಲೋ, ವಿಷ ತುಂಬೇತಿ. ಆ ವಿಷಾನೂ ಬೆಚ್ಚಗಿಲ್ಲ. ನಿನಗ ದೇವರು ಬಡಕೊಳ್ಳೋ ಎದಿ ಕೊಟ್ಟಿಲ್ಲ. ನೀ ಮನಶ್ಯಾ ಆಗಿದ್ದರ ತಿಳೀತಿತ್ತೋ. ನಾ ಎಂಥಾಕಿ ಅಂತ ಹಾಳ ಮೂಳ ಜಂಗಮರೆಲ್ಲಾ ಅರಮನಿ ಮ್ಯಾಲ ಬೂದಿ ಹಾರಿಸಿದರು. ಅವರ ಮಾತ ಮೀರಿ ನಿನ್ನ ಸುಡಗಾಡ ಅರಮನ್ಯಾಗ ಮಕ್ಕಳ್ನ ಹುಟ್ಟಿಸಬೇಕಂತ ಹಟತೊಟ್ಟೆ. ಯಾಕಂದರ ನನ್ನ ಮೈಯಾಗ ಬೇಕಾದಷ್ಟು ಹುಟ್ಟಿಸೋ ಶಕ್ತಿ ಐತಿ. ನೀನ ಗಂಡಸಾಗಿದ್ದರ ಹಾ ಅನ್ನೂದರಾಗ ಈ ಅರಮನಿ ತುಂಬ ಮಕ್ಕಳ ಹಡೀತಿದ್ದೆ. ಆ ಮಕ್ಕಳೆಲ್ಲ ಅರಮನಿ ತುಂಬ ಗಲಗಲ ಗದ್ದಲ ಮಾಡಿಕೊಂಡ ಆಡತಿದ್ದರ, ಆಗ ನಿನ್ನ ಅರಮನಿ ಚಂದ ನೋಡಬೇಕಿತ್ತು. ಒಂದು, ಎರಡು ಹಡೆಯೋದಕ್ಕ ಹುಟ್ಟಿದವಳಲ್ಲೋ ನಾನು. ಸಾವಿರ ಮಕ್ಕಳ ತಾಯಿ! ನಿನ್ನ ಅರಮನಿ ಮಾನದ ಸಲುವಾಗಿ ಬಂಜಿ ಆಗಬೇಕೆನೋ ನಾನು? ಇನ್ನೊಮ್ಮಿ ನನ್ನ ಹಂತ್ಯಾಕ ಬಂದರ ಅರಮನಿಗೆ ಬೆಂಕಿ ಹಚ್ಚಿ, ಆ ಬೆಂಕ್ಯಾಗ ನಿನ್ನ ಹುರಿದ ತಿಂತೀನಿ; ಹುಷಾರ್!”

ಅವಳನ್ನು ಸಮಾಧಾನ ಮಾಡಿ ಮೇಲೆ ಕರೆದೊಯ್ಯುವದೇ ದೊಡ್ಡ ಸಮಸ್ಯೆಯಾಯಿತು. ರಟ್ಟೆಯಲ್ಲಿ ಕೈ ಹಾಕಿ “ಏಳ ತಾಯಿ, ಮನಸಿಗಿ ತ್ರಾಸ ಮಾಡ್ಕೋಬ್ಯಾಡ” ಎಂದು ಮೆಲ್ಲಗೆ ಎಬ್ಬಿಸಿದೆ. ಅಂತಸ್ತಿನ ಮೆಟ್ಟಲೇರುತ್ತ “ನನಗಾಗಲೇ ಒಳಗ ಬೆಂಕಿ ಹತ್ತೇತಿ. ಸುಡಾಕ್ಹತ್ತೀನಿ ಕಾಣಬಾರದ?” ಎಂದಳು, “ಒಳಗಿನ ಕೂಸಿಗಾಗಿಯಾದರೂ ಸಮಾಧಾನ ಮಾಡಿಕೋ ಎವ್ವಾ” ಅಂದೆ.

ದೇಸಾಯಿಯನ್ನು ಆಮೇಲೆ ಅವಳು ಕ್ಷಮಿಸಲೇ ಇಲ್ಲ. ಅವನ ಕೋಪತಾಪಗಳು ಹೀಗಿದ್ದಾವೆಂದು, ಗರ್ಭ ಇರಿಯುವ ಮಟ್ಟಕ್ಕೂ ಆತ ಹೋಗಬಲ್ಲನೆಂದು ನನಗೆ ಅನ್ನಿಸಿರಲೇ ಇಲ್ಲ. ಈಗ ನಾವು ದೇಸಾಯಿಯನ್ನು ಕಾಯುತ್ತಿದ್ದೆವು. ಅವನು ಬಂದೂಕು ಹಿಡಿದರೆ, ಅಂತಸ್ತಿನ ಕಡೆ ನೋಡಿದರೆ ತಕ್ಷಣ ಹುಷಾರಾಗುತ್ತಿದ್ದೆವು. ಆತ ತಲೆಯಿಂದ ಇರಿದು ಮಾಡಿದ ನೋವಿಗಿಂತ ಅವನ ಮಾತುಗಳು ಸಿಂಗಾರೆವ್ವನನ್ನು ಹೆಚ್ಚು ನೋಯಿಸಿದ್ದವು. ಅದನ್ನು ಮರೆಯುವುದಕ್ಕಾಗಿ ಕುಡಿಯುತ್ತಿದ್ದಳು. ಕುಡಿದಾಗ ಉನ್ಮಾದಗೊಂಡು ಏನೇನೋ ಮಾತನಾಡುತ್ತಿದ್ದಳು. ಹಲ್ಲು ಕಡಿಯುತ್ತಿದ್ದಳು. ಈ ಅರಮನೆ ತನಗೆ ಸೆರೆಮನೆಯಾಗಿದೆ ಎನ್ನುತ್ತಿದ್ದಳು. ದಿಗ್ಗನೆ ಎದ್ದು ಕಿಟಕಿಯಿಂದ ಹುಣಿಸೇಮೆಳೆ ನೋಡುತ್ತಿದ್ದಳು. ತಕ್ಷಣ ಅವಳ ಮುಖದಲ್ಲಿ ಕರಾಳ ಭಾವನೆಗಳೇಳುತ್ತಿದ್ದವು. ಮತ್ತು ಆ ಭಾವನೆಗಳು ಕ್ಷಣಕ್ಷಣಕ್ಕೆ ಬದಲಾಗುತ್ತಿದ್ದವು. ಅವಳ ನಡತೆ ನೋಡಿ ನನಗೆ ಗಾಬರಿಯಾಗುತ್ತಿತ್ತು. ಬರಬರುತ್ತ ಅದು ಹುಚ್ಚಿಗೆ ತಿರುಗುತ್ತಿದೆಯೆಂದು ಖಾತ್ರಿಯಾಗತೊಡಗಿತು.

ಒಮ್ಮೆ ಸಂಜೆ ಇಡೀ ಅರಮನೆಯ ವ್ಯವಸ್ಥೆಯನ್ನೆಲ್ಲ ತಿರುಗುಮರುಗು ಮಾಡುವೆನೆಂದು ಇದ್ದಬಿದ್ದ ಸಾಮಾನುಗಳನ್ನೆಲ್ಲ ಎಸೆದಾಡಿಬಿಟ್ಟಳು. ಹಲ್ಲಿನಿಂದ ದಿಂಬನ್ನು ಹರಿದು ಬಿಸಾಕಿದಳು. ನಾನು ಸಮಾಧಾನ ಮಾಡಹೋದರೆ ತಕ್ಷಣ ನನ್ನ ಕೈಹಿಡಿದು “ಶೀನಿಮಗೀ ಕೇಳಿದೆಯೇನ?” ಎನ್ನುತ್ತ ಆ ಕಿಟಕಿಗೆ ಕರೆದೊಯ್ದಳು.

“ಏನೆವ್ವ”? ಅಂದೆ,

“ಹುಣಿಸೀ ಮೆಳ್ಯಾಗ ಕೋಗಿಲ ಕೂಗಾಕ ಹತ್ತೇತಿ.”

“ಇಲ್ಲಲ್ಲ, ನನಗ್ಯಾವುದೂ ಕೇಳವಲ್ದು”

“ಲಕ್ಷಗೊಟ್ಟ ಕೇಳಿ ನೋಡಗs”

– ಕೇಳಿದೆ, ಕೋಗಿಲ ದನಿ ಕೇಳಿಸಲೂ ಇಲ್ಲ, ಅದು ಅಂಥ ಕಾಲವೂ ಆಗಿರಲಿಲ್ಲ. ಕೇಳಿಸಲಿಲ್ಲ ಎಂದರೆ ಅವಳು ಕೇಳುತ್ತಲೂ ಇರಲಿಲ್ಲ. ಆದ್ದರಿಂದ ‘ಹೌಂದೆವ್ವ’ ಎಂದೆ. ಅವಳನ್ನು ಹಾಗೆಯೇ ಕಿಡಕಿಯಲ್ಲಿ ಬಿಟ್ಟು ಹಾಸಿಗೆ ಸರಿಪಡಿಸಿದೆ. ಚಲ್ಲಾಪಿಲ್ಲಿಯಾದ ಸಾಮಾನುಗಳನ್ನು ಜೋಡಿಸಿಟ್ಟು, ಅವಳನ್ನು ರಮಿಸಿ ಕರೆದೊಯ್ದು ಹಾಸಿಗೆ ಮೇಲೆ ಮಲಗಿಸಿದೆ. ಮಲಗಿಸಿ ಬರುವಾಗ ನನ್ನ ಸೆರಗು ಹಿಡಿದು “ಶೀನಿಂಗೀ, ನನ್ನ ಬಿಟ್ಟು ಎಲ್ಲಿಗೂ ಹೋಗಬ್ಯಾಡs” ಎಂದಳು. “ಆಗಲವ್ವ” ಎಂದೆ.

ಅಂದಿನಿಂದ ಅವಳು ಅರೆ ಎಚ್ಚರ, ಅರೆ ಮರೆವಿನಲ್ಲೇ ಇರುತ್ತಿದ್ದಳು. ವೈದ್ಯರಿಗೆ ತೋರಿಸಲಿಕ್ಕೂ ಸಾಧ್ಯವಾಗಲಿಲ್ಲ. ಅವಳಿಗೆ ಹುಚ್ಚು ಹತ್ತದಿರಲಿ ಎಂದು ಸುತ್ತಲಿನ ದೇವರಿಗೆ ಹರಕೆ ಹೊತ್ತೆ. ಭೂತಭಾದೆಯಾಗದಿರಲೆಂದು ಮೆಣಸಿನಕಾಯಿ ಇಳಿಸಿದೆ. ಮರೆಪ್ಪನಿಂದ ಮೆಳೆಯ ಹುಣಸೇ ಬರಲು ತರಿಸಿ ಬೆನ್ನ ಮೇಲಿಂದ ಇಳಿಸಿದೆ.

ಮಾರನೇ ದಿನ ಮರೆಪ್ಪ ಪಡಸಾಲೆಯಲ್ಲಿ ಅವಳೆದುರಿಗೆ ಏನೇನೋ ನಿರಾಶೆಯ ಮಾತುಗಳನ್ನಾಡುತ್ತಿದ್ದ. ನಾನು ದೂರದಲ್ಲಿದ್ದುದರಿಂದ ನನಗವು ಸ್ಪಷ್ಟವಾಗಿ ಕೇಳಿಸಲಿಲ್ಲ. ಅವನ ಮಾತಿನ ಉದ್ವೇಗದಿಂದ ಅದು ಬಹಳ ಜರೂರೀ ಕೆಲಸವೆಂದು ನನಗೆ ತೋರಿತು. ದೊರೆಸಾನಿ ಕೋಪದಿಂದ ಕುದಿಯುತ್ತಿರುವುದು ಅಷ್ಟು ದೂರದಿಂದಲೂ ನನಗೆ ಕಾಣಿಸುತ್ತಿತ್ತು. ಮತ್ತು ನನಗೆ ಆತಂಕವಾಯಿತು. ಮೊದಲೇ ಅರೆಹುಚ್ಚಿಯಂತಿರುವ ಅವಳನ್ನು ಇಷ್ಟು ಉದ್ವೇಗಗೊಳಿಸುವುದು ನನಗಿಷ್ಟವಿರಲಿಲ್ಲ. ಆದರೆ ಕಾರ್ಯ ಮಿಂಚಿಹೋಗಿತ್ತು. ಅಷ್ಟರಲ್ಲೇ ದೊರೆಸಾನಿ ಕಣ್ಣುಕಿಸಿದು ಬಲ ಅಂಗೈಯಿಂದ ಅರಮನೆಯ ನೆಲ ಬಡಿಯುತ್ತ ನಿರ್ಧಾರದ ಮಾತುಗಳನ್ನಾಡುತ್ತಿದ್ದಳು. ಅದನ್ನು ಕೇಳಿ ಚಕಿತನಾಗಿದ್ದ ಮರೆಪ್ಪ ಆಕೆಯ ಮುಖವನ್ನೇ ನೋಡುತ್ತಿದ್ದ.

ಅಂದು ರಾತ್ರಿ ಇಡಿ ಬಾಟ್ಲಿ ಸೆರೆ ಕುಡಿದಳು. ಕುಡಿದ ಮೇಲೂ ಉದ್ವೇಗದಲ್ಲಿದ್ದಳು. ಚಿತ್ತಸ್ವಾಸ್ಥ್ಯ ಕಳೆದುಕೊಂಡು ಆಕಡೆ ಈ ಕಡೆ ಅಡ್ಡಾಡುತ್ತಿದ್ದಳು. ಒಳಗೊಳಗೇ ಏನೇನೋ ಮಾತಾಡಿಕೊಂಡಂತೆ, ತನ್ನನ್ನೇ ಪ್ರಶ್ನಿಸಿಕೊಂಡಂತೆ, ಅದಕ್ಕೆ ತಾನು ಮಾಡುತ್ತಿರುವುದೇ ಸರಿಯೆಂಬಂತೆ ಸಮರ್ಥನೆಯ ಉತ್ತರ ಕೊಟ್ಟಕೊಂಡಂತೆ ಮಾಡುತ್ತಿದ್ದಳು. ಹುಬ್ಬು ಗಂಟು ಹಾಕುತ್ತಿದ್ದಳು. ಯವುದೋ ಜರೂರಾದ ಚಿಂತೆ ಅವಳನ್ನು ಕಾಡುತ್ತಿದೆಯೆಂದುಕೊಂಡೆ. ಆದರೆ ತುಟಿಯಿಂದ ಚಕಾರವನ್ನೂ ಹೊರಬಿಡಲಿಲ್ಲ. ನನ್ನ ಮುಂದೆ ಆಡಿಕೊಳ್ಳಬಾರದ ಚಿಂತೆ ಯಾವುದಿದ್ದೀತು? ಮಾತಾಡಿಸಬೇಕೆಂದ ನನ್ನ ಯತ್ನಗಳೆಲ್ಲ ವಿಫಲವಾದವು. ಜೀವಕ್ಕೇನೂ ಅಪಾಯ ಮಾಡಿಕೊಳ್ಳಲಾರಳು ಎಂದು ಅನ್ನಿಸಿ “ಮಲಗಾಕ ಹೋಗ್ತೀನವ್ವ” ಅಂದೆ. ಈಗ ಮಾತ್ರ “ಹೂಂ ಹೂಂ ಹೋಗು” ಎಂದಳು. “ಸೈ” ಎಂದು ಬಂದೆ. ಮಲಗಿಕೊಂಡೆ.

ಆ ದಿನ ತುಂಬ ದಣಿದಿದ್ದರಿಂದ ನನಗೆ ಬೇಗನೇ ನಿದ್ದೆ ಹತ್ತಿತ್ತು. ಮಧ್ಯರಾತ್ರಿ ಹಿತ್ತಲ ಬಾಗಿಲ ಸಪ್ಪಳವಾಗಿ ಎಚ್ಚರವಾಯಿತು. ಯಾಕಿದ್ದಿತೆಂದು ಎದ್ದುಹೋದೆ. ಹೊರಗಿನಿಂದ ಮರೆಪ್ಪ ದೊರೆಸಾನಿಯನ್ನು ಕರೆತರುತ್ತಿದ್ದ! ಅವಳನ್ನು ಒಳಗೆ ಕಳಿಸಿ ಮತ್ತೆ ಹೊರಗೆ ಹೋದ. ದೊರೆಸಾನಿ ಹೆದರಿದ್ದಳು. ಅವಸರದಲ್ಲಿ ಬರುತ್ತಿದ್ದಳಲ್ಲ, ನಾನು ಮಾತಾಡಿಸಬೇಕೆಂದೆ. ಆಕೆ ಹೊರಗಿನಿಂದ ಬಂದದ್ದೇ ಆಘಾತವಾಗಿ ಇದರಲ್ಲೇನೋ ರಹಸ್ಯವಿದೆಯೆಂದೂ ನಾಳೆ ಹೊರಗೆ ಬಂದೇ ಬರುತ್ತದೆಂದೂ ಸುಮ್ಮನಾದೆ.

ದಿಗಿಲಿನಿಂದಾಗಿ ಆಮೇಲೆ ನನಗೆ ನಿದ್ದೆ ಬರಲೇ ಇಲ್ಲ. ಎಷ್ಟು ಸಲ ಮಗ್ಗಲು ಬದಲಿಸಿ ವಿಚಾರ ಮಾಡಿದರೂ, ನಾನು ತಿಳಿದಂತೆ ಈತನಕ ಆಕೆ ನನ್ನಿಂದ ಏನನ್ನೂ ಬಚ್ಚಿಟ್ಟವಳಲ್ಲ. ಇಂದ್ಯಾಕೆ ಹೀಗೆಂದು ಬಗೆಹರಿಯಲಿಲ್ಲ. ಮುಂದೆ ತುಸು ಸಮಯದಲ್ಲೇ ಮರೆಪ್ಪ ದೇಸಾಯಿಯನ್ನು ಹೊತ್ತುಕೊಂಡು ಬಂದು ಅವನ ಕೋಣೆಯಲ್ಲಿ ಮಲಗಿಸಿ ಹೋದ. ಇದೇನೋ ದಿನನಿತ್ಯದ ಘಟನೆಯಾದರೂ ದೊರೆಸಾನಿ ಮೊದಲು ಬಂದದ್ದು. ಆಮೇಲೆ ದೇಸಾಯಿಯನ್ನು ತಂದದ್ದು ನನಗೆ ಅರ್ಥವಾಗದಾಯಿತು. ಹ್ಯಾಗೂ ನಾಳೆ ಹೇಳೇ ಹೇಳುತ್ತಾಳೆ ಎಂದು ಸಮಾಧಾನ ಮಾಡಿಕೊಳ್ಳಲಿಕ್ಕೆ ನೋಡಿದೆ. ಯಾವಾಗ ನಿದ್ದೆ ಹತ್ತಿತ್ತೋ ಗೊತ್ತಾಗಲಿಲ್ಲ.

ಬೆಳಿಗ್ಗೆ ಬೆಳ್ಳಿಚಿಕ್ಕೆ ಮೂಡಿದ್ದಿತು. ತಂಗಾಳಿ ತೀಡಿ ಎಚ್ಚರವಾಯಿತು. ದರ್ಬಾರಿನಲ್ಲಿ ದೊರೆಸಾನಿಯ ದನಿ ಕೇಳಿಸಿ ಎದ್ದು ಹೋದೆ. ನೋಡಿದರೆ ದೊರೆಸಾನಿ ಒಬ್ಬಳೇ ಕಂದೀಲು ಹಿಡಿದುಕೊಂಡು ಅತ್ತಿತ್ತ ಅಡ್ಡಾಡುತ್ತ ತಂತಾನೆ ಮಾತಾಡಿಕೊಳ್ಳುತ್ತಿದ್ದಳು:

“ಈ ಅರಮನಿ ಹಿರೇರಿಗೆಲ್ಲ ನಾ ಹಾದರಗಿತ್ತಿ ಅಲ್ಲ ಅಂತ ತಿಳಿದಿರಲಿ. ನಿಮ್ಮ ವಂಶದ ಕುಡಿ, ಹಾ ಹಾ ಮಹಾರಾ, ಅವನ ಷಂಡತನದಿಂದ ಹಿಂಗೆಲ್ಲ ನಡೀತು ಅಂತ ತಿಳಿದಿರಲಿ. ಈ ಅರಮನ್ಯಾಗ ಯಾರಾದ್ರೂ ದೇವರಿದ್ರ, ಹಿರೇರ ಆತ್ಮ ಇದ್ರ ಅವರಿಗಿ ನಾನು ಯಾರಂತ ಗೊತ್ತೈತಿ. ನಾ ಹಾದರ ಮಾಡಿದ್ರ ಈ ಅರಮನಿ ಕಂಬದಾಗ ಮಕ್ಕಳ ಅರಳಿಸಲಿಕ್ಕೆ ಅಂತ ತಿಳಿದಿರಲಿ…”

– ಹೀಗೆ ಏನೇನೋ, ಹೊರಗಿನ್ನೂ ದಟ್ಟವಾದ ಕತ್ತಲಿತ್ತು. ಬೆರಗುಗೊಂಡ ಕಂಬಗಳು ಅವಳ ಮಾತಿಗೆ ಹೆದರಿ ಸ್ತಬ್ಧವಾಗಿರುವಂತೆ ಗುಂಭವಾಗಿ ನಿಂತಿದ್ದವು. ಕಂದೀಲು ಹಿಡಿದುಕೊಂಡು ಆಕೆ ಅತ್ತಿತ್ತು ಅಡ್ಡಾಡುವಾಗ ಕಂಬಳ ನೆರಳುಗಳು ಸಾಲಾಗಿ ಆಕೆ ನಡೆವ ವಿರುದ್ದ ದಿಕ್ಕಿನತ್ತ ಸರಿಯುತ್ತಿದ್ದವು. ಆಕೆ ಹಾಗೆ ನಡೆದರೆ ಹೀಗೆ, ಹೀಗೆ ನಡೆದರೆ ಹಾಗೆ ಅರಮನೆಯ ಕಂಬಗಳೆಲ್ಲ ತಮ್ಮ ನಿತ್ಯದ ಸ್ಥಳ ಬದಲಿಸಿ ಒಂದರ ಸ್ಥಳಕ್ಕೆ ಇನ್ನೊಂದು, ಅದರ ಸ್ಥಳಕ್ಕೆ ಮತ್ತೊಂದು – ಹೀಗೆ ನೆಗೆದು ನೆಗೆದು ಆಟ ಆಡುತ್ತಿರುವಂತೆ ಕಾಣಿಸಿತು. ದೊರೆಸಾನಿ ಚಲಿಸುವುದು ಜೋರಾದಾಗ ಇವುಗಳ ಚಲನೆಯೂ ಅಷ್ಟೇ ಅವಸರದ್ದಾಗಿ ಒಂದು ಕ್ಷಣ ಅವೆಲ್ಲ ಅವಳ ಸುತ್ತ ಕುಣಿದಾಡುತ್ತಿರುವಂತೆ ಕಂಡಿತು. ಮರುಕ್ಷಣ ಕಂಬಗಳು ಹುಣಿಸೇಮರದ ಬೊಡ್ಡೆಗಳಾಗಿ ಆಕಡೆ ಈಕಡೆ ತಿಳಿಯಾಡುತ್ತ ಕುಣಿಯತೊಡಗಿದವು. ನಾನು ನಿಂತದ್ದು ಪತ್ರೀ ಬನದಲ್ಲಿಯೇ ಎಂದೂ ಅನ್ನಿಸಿತು! ದೊರೆಸಾನಿಯ ಕಂದೀಲು ಬೆಟ್ಟದ ಮೇಲೆ ಓಡಾಡುವ ಸೂರ್ಯನಂತೆ – ಆ ಸೂರ್ಯನ ಬೆಳಕು ಬೊಡ್ಡಿಬೊಡ್ಡಿಗಳಲ್ಲಿ ತೂರಿ ಕಿರಣಗಳ ಭಲ್ಲೆಗಳಿಂದ ನನ್ನನ್ನು ಇರಿಯುತ್ತಿರುವಂತೆ ಅನ್ನಿಸಿತು. ಅಷ್ಟರಲ್ಲಿ ‘ಢಂ’ ಎಂದು ಗುಂಡಿನ ಭಯಂಕ ಸಪ್ಪಳ ಕೇಳಿಸಿತು!

* * *