ದೀಪಾವಳಿಗೆ ದೇಸಾಯಿ ಬಯಲಾಟವಿತ್ತಲ್ಲ, ಅದೇ ನಮಗೆ ಅಪಾಯದ ಸಮಯ. ಎರಡು ಬಾರಿ ಮರ್ಯಾ ಬಂದು ಸಿಂಗಾರೆವ್ವನ ಯೋಗಕ್ಷೇಮ ಕೇಳಿ ಈ ಬಯಲಾಟದಲ್ಲೇ ಶೆಟ್ಟಿ ದೇಸಾಯಿಯಿಂದ ಅರಮನೆ ಬರೆಸಿಕೊಳ್ಳುತ್ತಾನೆಂದು ಹೇಳಿದ್ದ. ಅವರ ಓಡಾಟ ನೋಡಿ ನಮಗೂ ಇದು ಖಾತ್ರಿಯಾಗಿತ್ತು. ಈಗ ದೇಸಾಯಿಯ ಕಿಸೆಯಲ್ಲಿ ಯಾವಾಗಲೂ ನೋಟಿನ ಕಂತೆಗಳಿರುತ್ತಿದ್ದವು. ಯಾವುದಕ್ಕೂ ಧಾರಳವಾಗಿ ಖರ್ಚು ಮಾಡುತ್ತಿದ್ದ. ಈಗೇನಾದರೂ ನಿರ್ಲಕ್ಷಿಸಿದರೆ ಸಿಂಗಾರೆವ್ವ ಬೀದಿಪಾಲಾಗುವುದು ಖಂಡಿತ. ಇದನ್ನೇ ಅವಳಿಗೆ ಸ್ಪಷ್ಟವಾಗಿ ಹೇಳಿ ಉಪಾಯ ಮಾಡುವಂತೆ ಪ್ರಚೋದನೆ ಮಾಡಿದೆ. ಅವಳು ಕೇಳಿ ಕೈಹೊತ್ತು ಕೂತಳು. ಕೂತರಾಯಿತೆ?” ಇಲ್ಲಾ ಗಂಡ ಬಯಲಾಟ ಮಾಡಧಂಗೆ ನಿಲ್ಲಿಸು, ಇಲ್ಲಾ ಅರಮನಿ ಮಾರೋದನ್ನಾದರೂ ನಿಲ್ಲಿಸು” ಎಂದು ಹೇಳಿದೆ. ಮಾತಾಡುವುದಾಗಿ ಹೇಳಿ ಆ ದಿನ ಮಧ್ಯಾಹ್ನ ದೇಸಾಯಿಯನ್ನು ಅಂತಸ್ತಿಗೆ ಕರೆಸಿದಳು.

ದೇಸಾಯಿ “ಈಗ ಆರಾಮಾಗೀರೆನು?” ಎನ್ನುತ್ತ ಹೋಗಿ ಗಡಂಚಿಯ ಮೇಲೆ ಕೂತ ಸಿಂಗಾರೆವ್ವ ವ್ಯಂಗ್ಯವಾಗಿ “ನಿಮ್ಮ ದಯದಿಂದ ಹಿಂಗಾದೀನಿ” ಎಂದಳು. ವ್ಯಂಗ್ಯ ಎಷ್ಟು ಸೂಕ್ಷ್ಮವಾದರೆ ದೇಸಾಯಿಗೆ ತಿಳಿಯೋದು ಕಷ್ಟ. ಆತನ ಬಗ್ಗೆ ಅವಳ ಮನಸ್ಸು ಕಹಿಯಾದದ್ದಕ್ಕೆ ಕಾರಣಗಳಿದ್ದವು. ಹೆಂಡತಿಯ ಜೀವ ಹೋಗಿ ಜೀವ ಬಂದರೂ ಗಂಡನ ಕರುಳು ಚುರ್ರೆನ್ನದಿದ್ದರೆ ಹ್ಯಾಗೆ? ಅವಳದ್ದನೇ ಪಟ್ಟಾಗಿ ಹಿಡಿಯಲಿಲ್ಲವೆನ್ನುವುದು ಒಂದೇ ಸಮಾಧಾನ. ಗಂಡ ಹೆಂಡತಿ ಬಹಳ ಹೊತ್ತಿನ ತನಕ ಮಾತಾಡಿದರು. ನಾನಾಗ ಅಲ್ಲಿರಲಿಲ್ಲ. ಏನೇನು ನಡೆಯಿತೆಂದು ಅವಳೇ ಆಮೇಲೆ ಹೇಲಿದಳು. ಅವರ ಸಂಭಾಷಣೆ ನಿನ್ನೆದುರು ಹೇಳಿದರೆ ಬರೀ ಸಿಂಗಾರೆವ್ವನ ಸ್ವಗತ ಕೇಳಿದ ಹಾಗಾಗುತ್ತದೆ ಅಷ್ಟೆ. ಯಾಕೆಂದರೆ ಅಷ್ಟು ಹೊತ್ತು ಮಾಡಾಡಿದವಳು ಸಿಂಗಾರೆವ್ವ ಒಬ್ಬಳೇ. ಕೇಳಿದ್ದಕ್ಕೆ ಹೇಳಿದ್ದಕ್ಕೆ ಹಾ….ಹಾ…. ಎಂಬ ಆಕಳಿಕೆ ಪ್ರತಿಕ್ರಿಯೆ ಬಿಟ್ಟು ಈ ಮಹಾನುಭಾವ ಏನು ಮಾತಾಡಲಿಲ್ಲ. ಸಿಂಗಾರೆವ್ವನ ಮಾತು ಆತ ಮತಿವಂತನಾಗಿದ್ದರೆ ಎದೆಯಲ್ಲಿ ನೆಡುವ ಹಾಗಿತ್ತು.

ಅವಳು ಹೇಳಿದ್ದು ದೀರ್ಘವಾಗಿ ಮೂರು ಮಾತುಗಳನ್ನ. ಒಂದು : ಅರಮನೆಯ ಮುನ್ನೂರು ವರ್ಷಗಳ ಗತವೈಭವದ ಬಗ್ಗೆ ಹೇಳಿ ಅದನ್ನು ಒಬ್ಬ ತಕ್ಕಡಿ ತೂಗುವ ಶೆಟ್ಟಿಯಲ್ಲಿ ಒತ್ತೆ ಇಡುವುದು ನಾಚಿಕೆ ಪಟ್ಟುಕೊಳ್ಳಬೇಕಾದ ಪ್ರಸಂಗವಲ್ಲವೆ? ಎರಡು: ಮಕ್ಕಳಿಂದ ಮುಂದುವರಿಯಬೇಕಾದ ವಂಶ ವಿಕಾರಕ್ಕೆ ಈಡಾಗಿ, ಅರಮನೆ ಅನಾಥವಾಗುವ ಪ್ರಸಂಗಕ್ಕೆ ವಿಷಾದವಾಗುವುದಿಲ್ಲವೆ? ಮೂರು: ಆಯಿತು. ನಿರ್ಭಿಡೆಯಿಂದ ಒಪ್ಪಿಕೊ, ಬಿಡು. ಗಂಡ – ಹೆಂಡತಿ ಅಂದಮೇಲೆ ಪರಸ್ಪರ ಪ್ರೀತಿ ವಿಶ್ವಾಸ ಇರದಿದ್ದರೂ ಚಿಂತೆಯಿಲ್ಲ; ಒಬ್ಬರ ಬಗ್ಗೆ ಇನ್ನೊಬ್ಬರ ಕರ್ತವ್ಯಗಳಿರುತ್ತವೆ – ಎಂಬುದನ್ನಾದರೂ ಒಪ್ಪಿಕೋಬೇಕು. ಕೊನೇಪಕ್ಷ ಸಾಯುವುದಕ್ಕಾದರೂ ಬಿಡಬಾರದಲ್ಲ? ಯಾರದೋ ತೊಡೆ ನೋಡಿ ಹಾದೀಹೆಣವಾಗೋದಕ್ಕಿಂತ ಮನೆಹೆಂಡತಿಯನ್ನೇ ನಿನ್ನ ವಿಲಾಸಿನಿಯನ್ನಾಗಿ ಮಾಡಿಕೊ. ನಿನಗಾಗಿ ನಿನ್ನ ನೆಮ್ಮದಿಗಾಗಿ ತೊಡೆ ತೋರಿಸಲು ನಾನು ಸಿದ್ಧ. ಅದರಲ್ಲಿ ತಪ್ಪೇನಿಲ್ಲ. ಅದರಿಂದ ನನಗೆ ನಾಚಿಕೆಯೂ ಆಗುವುದಿಲ್ಲ.

ಮೂರನೇ ಮಾತು ಹೇಳುವಾಗ ಬಹಳ ಅವಮಾನವಾಯಿತೆಂದು, ಅವಮಾನದಿಂದ ಕಣ್ಣೀರುಕ್ಕಿತೆಂದೂ ಹೇಳಿದಳು. ಈ ಮಾತು ಕೇಳಿ ದೇಸಾಯಿಯ ಮುಖ, ಬಹುಶಃ ಪಶ್ಚಾತ್ತಾಪದಿಂದ ಪೆಚ್ಚಾಯಿತೆಂದೂ, ಇನ್ನು ಮುಂದೆ ತಾಲೀಮು ಮುಗಿಸಿ ನೇರವಾಗಿ ಮನೆಗೇ ಬರುವುದಾಗಿ ಹೇಳಿ ಹೋದನಂತೆ.

ಆತ ದಾರಿಗೆ ಬಂದರೂ ಆಶ್ಚರ್ಯವಿಲ್ಲ ಎಂದುಕೊಂಡೆ. ನಮ್ಮ ಸಿಂಗಾರೆವ್ವ ಹಾಗಿದ್ದಳು: ಸುಳ್ಳಾಡಿದವಳಲ್ಲ. ಒಬ್ಬರಿಗೆ ಅಹಿತ ಬಯಸಿದವಳಲ್ಲ, ಒಳಗೊಂದಿಟ್ಟುಕೊಂಡು ಹೊರಗೊಂದು ಆಡಿ ಅಭಿನಯ ಮಾಡಿದವಳಲ್ಲ, ಅವಳೇನು ಮಾತಾಡಿದರೂ ಆ ಮಾತು ಹೃದಯದಿಂದ ಮೂಡಿ ಬಂದು, ಭಾವನೆಗಳಿಂದ ಆರ್ದ್ರವಾಗಿರುತ್ತಿತ್ತು. ಕೇಳಿದವರು ಎದರುತ್ತರ ಕೊಡುವುದಾಗಲಿ, ಅವಳ ಮಾತನ್ನು ನಿರಾಕರಿಸುವುದಾಗಲಿ, ಸಾಧ್ಯವೇ ಇರಲಿಲ್ಲ. ಅವಳ ಮಾತಿನ ತೀವ್ರ ಪ್ರಾಮಾಣಿಕತೆ ಮತ್ತು ಮುಗ್ಧತೆಗಳಲ್ಲಿ ಕರಗಿ ಹೋಗುತ್ತಿದ್ದರು. ಇಲ್ಲದಿದ್ದರೆ ನನ್ನಂಥವಳು ಯಾರನ್ನೋ ಕಟ್ಟಿಕೊಂಡು ಓಡಿ ಹೋಗುವ ಬದಲು ಸದಾ ಅವಳ ಕಾಲ ಬಳಿಗೆ ಯಾಕೆ ಬಿದ್ದಿರುತ್ತಿದ್ದೆ ಹೇಳು? ಅವನೊಬ್ಬ ಅಪ್ಪ, ಹುಟ್ಟು ಚಂಡಾಳ; ಸತ್ತವರ ಬಗ್ಗೆ ಕೆಟ್ಟ ಮಾತ್ಯಾಕೆ ಆಡಬೇಕು ಬಿಡು. ಮರ್ಯಾನಂಥ ಮರ್ಯಾ ಕೂಡ ದಾರಿಗೆ ಬಂದಿದ್ದನೆಂದರೆ! ಕಾಡಿಸಿ ನೋಡಿದ, ಪೀಡಿಸಿ ನೋಡಿದ. ಕೊನೆಗವಳು ತನ್ನಿಂದ ಸಾಯುತ್ತಾಳೆಂದಾಗ ನನಗಿಂತ ಅವನೇ ಹೆಚ್ಚು ಹೆದರಿದ. ಹಾಳಾದವನಿಗೆ ಗೌಡನ ಬಗ್ಗೆ ಮಾತ್ರ ಸೇಡಿತ್ತೇನೋ. ಆಳದಲ್ಲಿ ಸಿಂಗಾರೆವ್ವನನ್ನು ಪ್ರೀತಿಸುತ್ತಿದ್ದ. ಚಿಕ್ಕಂದಿನಲ್ಲಿ ನನಗದು ತಿಳಿಯುತ್ತಿರಲಿಲ್ಲ. ಅವಾಗಾದರೆ ಒಬ್ಬ ಹೊಲೆಯ ಮತ್ತು ಗೌಡಸಾನಿಗೆ ಎಷ್ಟು ದೂರದ ಸಂಬಂಧ – ಆ ಸಂಬಂಧವನ್ನು ಪ್ರೀತಿಯಂಥ ಶಬ್ದದಿಂದ ಹೇಳುವುದು ಅಸಾಧ್ಯವೆಂದೇ ನನಗನ್ನಿಸಿತ್ತು. ತಿಳಿದು ನೋಡಿದರೆ ಹಿಂದಿನದೆಲ್ಲ ನನಗೀಗೀಗ ಅರ್ಥವಾಗುತ್ತಿದ್ದೆ. ಸಿಂಗಾರೆವ್ವ ಭೇಟಿಯಾಗದೆ, ದೂರದಲ್ಲೇ ನಿಂತಾಗ ಈತ ಒದ್ದಾಡಿದ್ದು, ಅವಳು ವಿಧವೆಯಾಗಿದ್ದಾಗ ಇವಳು ಅಳುಮೋರೆ ಮಾಡಿದ್ದು, ಇಲ್ಲಿ ಆಕೆ ನಡೆದಾಡುತ್ತಿದ್ದರೆ ಕಣ್ಣಲ್ಲೇ ಜೊಲ್ಲು ಸುರಿಸುತ್ತಿದ್ದದ್ದು – ಪ್ರೀತಿ ಅಂದರೇನಂದಿ? ತ್ಯಾಗ ಮಾಡೋದು, ನೀ ಯಾರನ್ನ ಪ್ರೀತಿಸ್ತಿಯೊ ಅವರಿಗಾಗಿ ನಿನ್ನ ಹೇರು – ಪೇರುಗಳನ್ನು ಬಿಡುತ್ತ, ಸವೆಯುತ್ತ, ಕೊನೆಗೆ ಅವರಿಗಿಷ್ಟವಾದದ್ದೇ ಆಗೋದು, ಅಂದರೆ ಅವರೇ ಆಗೋದು. ಅದೇನಾದರೂ ಇದ್ದಿರಲಿ, ಅಂದ ಹಾಗೆ ನೀನೂ ಪ್ರೀತಿ ಮಾಡಿದ್ದೀಯಲ್ಲ? ನೀನು ಬೆಂಗಳೂರಿನವನು, ನಿನಗೆಲ್ಲಿಯ ಪ್ರೀತಿ? ಅದಿರಲಿ, ಏನೋ ಹೇಳ ಹೋಗಿ ಏನೇನೋ ಹೇಳಿದೆ. ನನಗೂ ವಯಸ್ಸಾಯಿತು, ನೋಡು. ಈವರೆಗಿನ ಮರ್ಯಾನ ನಡಾವಳಿ ನೀನೇ ಕೇಳಿದ್ದಿಯಲ್ಲ, ಪ್ರೀತಿ ಹೀಗೂ ಇರುತ್ತದೆ ಎನ್ನುವುದನ್ನು ನೀನು ಒಪ್ಪಲೇಬೇಕು.

ಆಯಿತಪ್ಪ, ಮೊದಮೊದಲು ದೇಸಾಯಿ ದಾರಿಗೆ ಬಂದ. ಈ ಸಲ ದೀಪಾವಳಿಗಿನ್ನೂ ನಾಕು ದಿನ ಇರುವಾಗಲೇ ಚಿಮಣಾ ಬಂದಳು. ದೇಸಾಯಿ ದುರ್ಬಲ ಮನಸ್ಸಿನವನಾದ್ದರಿಂದ ಎಷ್ಟೇ ಮಾತು ಕೊಟ್ಟಿದ್ದರೂ ನಮಗೆ ಭರವಸೆಯಿರಲಿಲ್ಲ. ಚಿಮಣಾ ಬಂದ ಮೊದಲನೆ ರಾತ್ರಿ ತಡವಾಗಿಯಾದರೂ ನಡೆದುಕೊಂಡೇ ಮನೆಗೆ ಬಂದ, ಕುಡಿದು ತೂರಾಡುತ್ತಿದ್ದನಷ್ಟೆ. ಅದು ಹೆಚ್ಚಲ್ಲ. ಆದರೆ ಚಿಮಣಾ ಆಟ ಮಾಡಿ, ತಿರುಗಿ ಹೋಗುವ ತನಕ ನಾವು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕಾಯಬೇಕಿತ್ತು. ಮೊದಲ ದಿನದ ಪರಿಣಾಮದಿಂದಲೇ ಸಿಂಗಾರೆವ್ವನಿಗೆ ಎಷ್ಟು ಆನಂದವಾಯಿತೆಂದರೆ – ದೇಸಾಯಿ ಎದ್ದಾಗಿನಿಂದ ಹಿಡಿದು ಆತ ತಾಲೀಮಿಗೆ ಹೋಗುವ ತನಕ ಅವನ ಇಂಚಿಂಚು ಕಾಳಜಿಯನ್ನೂ ಮಾಡತೊಡಗಿದಳು. ಸ್ನಾನ ಮಾಡುವಾಗ ಬೆನ್ನುಜ್ಜುವುದೇನು, ಓಡ್ಯಾಡಿ ಊಟಕ್ಕೆ ಹಾಕುವುದೇನು, ತಿಕ್ಕಿ ತೀಡಿ ಬಟ್ಟೆ ನೋಡಿಕೊಳ್ಳುವುದೇನು, ಶಿವನೇ, ಶಿವನೇ ನಮ್ಮ ಸಿಂಗಾರೆವ್ವ ಯಾವಾಗಲೋ ಹಾಗೆ. ಏನನ್ನು ಕೊಟ್ಟರು ದಂಡಿಯಾಗೆ, ಪುಷ್ಕಳವಾಗೇ ಕೊಡೋಳು. ಈಸಿಕೊಂಬವನಿಗೆ ಅತಿಯಾಗಿ ವಾಂತಿಯಾದರೂ ಕೇಳುವವಳಲ್ಲ. ಅವರೇನಾದರೂ ಸಾಕೆಂದರೆ ನಿರಾಶೆಯಿಂದ ಕೋಪಗೊಳ್ಳುವವಳು. ಮಾರನೇ ದಿನವೂ ದೇಸಾಯಿ ಹಾಗೇ ಬಂದ. ಗೆದ್ದೆನೆಂದೇ ಅಂದುಕೊಂಡು ಆತನಕ ಎಚ್ಚರವಾಗಿದ್ದು, ಅವ ಬಂದ ಮೇಲೆ ಕೈ ಹಿಡಿದು ಅಂತಸ್ತಿಗೇ ಕರೆದೊಯ್ದಳು. ನಾನು ಕೆಳಗೆ ಮಲಗಿದೆ.

ಮಾರನೆ ದಿನ ನಾಳೆ ದೀಪಾವಳಿ ಅಂದರೆ ಇಂದು ಬಲಿಪಾಡ್ಯಮಿ ಇತ್ತಲ್ಲ, ದೇಸಾಯಿಯ ರಂಗ ತಾಲೀಮಿತ್ತು. ಕ್ಷತ್ರಿಯರಿಗೆ ಅಂದೂ ಹಬ್ಬ. ತಾನೇ ಓಡ್ಯಾಡಿ ಮಡಿಯಾಗಿ ಅರಮನೆಯ ಹಳೆಯ ದೈವಗಳನ್ನೆಲ್ಲ ಪೂಜೆ ಮಾಡಿದಳು. ಪಟಾಂಗಳದ ಕಟ್ಟೆಯ ಹತ್ತಿರ, ಹಾವು ಬಂದರೆ ಬರಲೆಂದು ಇಳಿಹೊತ್ತಿನಲ್ಲಿ ಬಟ್ಟಲತುಂಬ ಹಾಲನ್ನೂ ಇಟ್ಟು ಬಂದಳು. ಅಲ್ಲದೆ ಆ ದಿನದ ಅವಳ ಹಂಚಿಕೆ ಬೇರೆ ಇತ್ತು. ತಲೆಬಾಚಿ ಪುಗ್ಗಾ ತೆಗೆದು, ಎಡಕ್ಕೆ ಬೈತಲೆ ತೆಗೆದು ಹೂ ಮುಡಿದಳು. ಭರ್ಜರಿ ಕೆಂಪುಶಾಲೆಯನ್ನು ಕಚ್ಚೆ ಹಾಕಿ ಉಟ್ಟಳು. ಕಾಲಿಗೆ ಕಾಲುಂದುಗೆ, ನಡುವಿಗೆ ನಡುಪಟ್ಟಿ, ಕೈಗೆ ಚಿನ್ನದ ಬಳೆ ಇಟ್ಟುಕೊಂಡಳು. ಅವಳ ಹುನ್ನಾರ ಗೊತ್ತಿತ್ತಲ್ಲ, ನಾನೇ ಎರಡು ಬಾರಿ ಅವಳ ಕೆನ್ನೆ ಚಿವುಟಿ, ಚಿವುಟಿದ ಬೆರಳನ್ನು ತುಟಿಗಿಟ್ಟುಕೊಂಡೆ. ಅವಳ ಇಂಥ ಸೊಬಗನ್ನು ನೋಡಿ ಎಷ್ಟೋ ದಿನಗಳಾಗಿದ್ದವು. ಗಿಣಿಯ ಹಾಗೆ ಮುದ್ದು ಮುದ್ದಾಗಿ ಅದಿದನ್ನಾಡುತ್ತ ಅರಮನೆಯ ತುಂಬ ಓಡಾಡಿದಳು.

ಸಂಜೆ ದೇಸಾಯಿ ತಾಲೀಮಿಗೆ ಹೋಗಲು ಸಿದ್ದನಾಗಿದ್ದಾಗ ಅಂತಸ್ತಿಗೆ ಬರ ಹೇಳಿದಳು. ತುಂಟತನದಿಂದ ನಾನು ಮೆಟ್ಟಿಲ ಮೇಲೆ ನಿಂತು ಅವಳ ಚಿನ್ನಾಟ ನೋಡುತ್ತಿದ್ದೆ. ಕನ್ನಡಿ ನೋಡಿಕೊಳ್ಳುತ್ತಿದ್ದವಳು, ಆತ ಬಂದೊಡನೆ ಅವನೆದುರಿಗೆ ಓಡಿಬಂದಳು. ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಂದಹಾಸ ಬೀರುತ್ತ,

“ಯಾಕ, ನಾ ಚಂದ ಕಾಣಸಾಣಿಲ್ಲೇನು?” ಅಂದಳು. “ಹ್ಞೂಂ” ಅಂದ.

“ಮತ್ತ ಹೇಳಲಿಲ್ಲ?”

“ಹೇಳಿದ್ನೆಲ್ಲ, ಭಾಳ ಚಂದ ಕಾಣ್ತೀರಿ ಅಂತ”

“ಈ ಸೀರಿ ನನಗ ಹೆಂಗ ಕಾಣಸ್ತೈತಿ?”

“ಓಹೋ, ನಿವುಳ ಕಾಣತೈತಿ.”

ಪ್ರೀತಿಯಿಂದ ಅವನ ಹೆಗಲಮೇಲೆ ಕೈ ಹಾಕಿ ಮುಖ ಇನ್ನೂ ಹತ್ತಿರ, ಅವನ ಮುಖಕ್ಕೆ ತಾಗುವಷ್ಟು ಹತ್ತಿರ ಒಯ್ದು,

“ರಾತ್ರಿ ಲಗು ಬರ್ರಿ – ಸೆರೆ ನಾನs ಕುಡಸ್ತೀನಿ. ಹೊರಗೆ ಕುಡೀಬ್ಯಾಡ್ರಿ, ಬರ್ತೀರಿ ಹೌಂದಲ್ಲ?” ಎಂದು ಓರೆನೋಟ ಬೀರಿ ತನ್ನ ಸುಂದರವಾದ ಕತ್ತನ್ನು ಚೆಂದಾಗಿ ನಲುಗುತ್ತ ಕೇಳಿದಳು. ದೇಸಾಯಿಯ ಕಣ್ಣು ಭಗ್ಗನೆ ಹೊತ್ತಿ, ಮುಖ ಕೆಂಜಗಾಯಿತು. “ಆಗಲಿ ಬರ್ತೀನಿ” ಎಂದು ಹೇಳಿ ತಿರುಗ ಅವಳನ್ನೇ ನೋಡುತ್ತ ಬಂದ. ಕಾಣಿಸದಿರಲೆಂದು ನಾನು ಕೆಳಗಿಳಿದು ಹೋದೆ.

ಆದರೆ ಯಾವುದನ್ನೂ ಪಡೆದು ಬಂದಿರಬೇಕಲ್ಲವೆ? ಆತ ಹುಟ್ಟಾ ದರಿದ್ರ. ಈಗ ಬೇಡಿದರೆ ಆ ಭಾಗ್ಯ ಎಲ್ಲಿಂದ ಬರಬೇಕು? ಮಧ್ಯರಾತ್ರಿಯಾಗಿದ್ದೀತು, ಮರೆಪ್ಪ ದೇಸಾಯಿಯನ್ನು ಹೊತ್ತುಕೊಂಡು ಬಂದ. ಈಗೆರಡು ದಿನಗಳಿಂದ ಅಂತಸ್ತಿನಲ್ಲೇ ಮಲಗುತ್ತಿದ್ದನಲ್ಲ. “ಮ್ಯಾಲs  ನಡಿ” ಅಂದೆ. ಹೋದೆವು. ಸಿಂಗಾರೆವ್ವ ಇನ್ನೂ ಎಚ್ಚರಿದ್ದಳು. ಜಿನೆಯ ಸಪ್ಪಳ ಕೇಳಿ ಎದ್ದು ಬಂದಳು. ಮರೆಪ್ಪ ಹೋಗಿ ಮಂಚದ ಮೇಲೆ ದೇಸಾಯಿಯನ್ನು ಮಲಗಿಸಿದ. ನಾನು ಓಡಿ ಹೋಗಿ ಅಡಿಗೆ ಮನೆಯಿಂದ ಉಳ್ಳಾಗಡ್ಡಿ ತಂದೆ. ನೋಡುತ್ತೇನೆ: ಸಿಂಗಾರೆವ್ವ ಒಲೆಬೆಂಕಿಯ ಹಾಗೆ ಧಗಧಗನೆ ಉರಿಯುತ್ತಿದ್ದಳು. ಎರಡು ಕೈ ಬಿಗಿದು ಹಲ್ಲು ಕಡಿಯುತ್ತ, ಸಾಧ್ಯವಾದರೆ ಕಣ್ಣಿನಿಂದಲೇ ಇರಿದು ಕೊಲ್ಲಬೇಕೆಂಬಂತೆ ಬೇಹೋಶ್ ಆಗಿ ಬಿದ್ದಿದ್ದ ದೇಸಾಯಿಯನ್ನು ನೋಡುತ್ತಿದ್ದಳು. ದೇಸಾಯಿಗೆ ಕೈಹಚ್ಚಲೇ ಇಲ್ಲ. ಮೂಗಿನಲ್ಲಿ ಉಳ್ಳಾಗಡ್ಡಿ ರಸ ಹಿಂಡಬೇಕೆಂದು ನಾನು ಹೋದೆ. ರಭಸದಿಂದ ಬಂದು ನನ್ನ ಕೈಯಿಂದ ಉಳ್ಳಾಗಡ್ಡಿ ಕಸಿದು ಕಿಡಕಿಯಿಂದ ಹೊರಕ್ಕೆಸೆದಳು. “ನನ್ನ ಹಾಟ್ಯಾ ಸಾಯಲಿ, ಸುಮ್ಮನಿರು” ಎಂದಳು. ಮರೆಪ್ಪ ಚಕಿತನಾಗಿ ಮಳಮಳ ನನ್ನ ಮುಖವನ್ನೇ ನೋಡಿದ. ಕೊನೆಗೆ ಸಿಂಗಾರೆವ್ವನ ಕಡೆ ನೋಡಿ ಏನು ಮಾಡುವುದಕ್ಕೂ ತೋಚದ ದೇಸಾಯಿಯ ಅಂಗಾಲು ತಿಕ್ಕತೊಡಗಿದ. ಸಿಂಗಾರೆವ್ವ ಅದಕ್ಕೂ ಸಿಡಿದು “ನೀ ಅವನ ಕಾಲ ತಿಕ್ಕೋ ಜರೂರಿಲ್ಲ” ಎಂದಳು. ಒಂದು ಕ್ಷಣ ನಿಲ್ಲಿಸಿ ಅವಳನ್ನೇ ನೋಡುತ್ತ ಮತ್ತೆ ತಿಕ್ಕ ತೊಡಗಿದ. “ಹೇಳಲಿಲ್ಲ ಬ್ಯಾಡಂತ?” ಎಂದು ಗುಡುಗಿದಳು. ಅವ ಬಿಟ್ಟು ಎದ್ದ. ನನಗೇನೂ ತೋಚಲೊಲ್ಲದು. ಮರ್ಯಾ ಬಂದದ್ದಕ್ಕೊ, ದೇಸಾಯಿ ಮತ್ತೆ ಬೇಹೋಶ್ ಆದದ್ದಕ್ಕೊ ಅಥವಾ ಆಸೆಯಿಂದ ಕಾದಿದ್ದಳಲ್ಲ, ನಿರಾಶೆಯಾದದ್ದಕ್ಕೋ – ಯಾಕೀ ಕೋಪವೆಂದೇ ನನಗೆ ತಿಳಿಯಲಿಲ್ಲ.

“ಮತ್ತ ಯಾಕೋ ಬಂದಿ?” ಎಂದಳು ಉರಿಯುತ್ತ

ಮರ್ಯಾ ಪೆಚ್ಚಾದ. ಮುಖ ಕೆಳಗೆ ಹಾಕಿ,

“ಗುಡಿಸಲದ ಹಂತ್ಯಾಕ ಬಿದ್ದಿದ್ದರು. ಶೆಟ್ಟಿ, ಚಿಮಣಾ ನಕ್ಯೋತ ಒಳಗಿದ್ದವರು ಬರಲೇ ಇಲ್ಲ. ದೇಸಾಯರ‍್ನ ಯಾರೂ ತಗೊಂಬರಾಕ ತಯ್ಯಾರಿರಲಿಲ್ಲ. ಅದಕ್ಕs ನಾ ಹೊತ್ತುಕೊಂಬಂದೆ, ಹೋಗತೀನಿ”

ಎಂದು ಆಕೆಯ ಕಡೆ ಕೂಡ ನೋಡದೆ ಹೊರಟ.

“ಏ ಹೊಲೆಯಾ, ತಡಿಯೋ”

ಎಂದಳು. ಅವಳ ದನಿ ವಿಕಾರವಾಗಿತ್ತು. ಮುಖ ದೇಸಾಯಿಯ ಮುಖದ ಹಾಗೆ ಕೆಂಜಗಾಗಿ, ಕಣ್ಣೊಳಗೆ ಯಾವುದೋ ಸ್ಪಷ್ಟ ನಿರ್ಧಾರಕ್ಕೆ ಬಂದ ನಿಲುವಿತ್ತು. ಅಷ್ಟು ನಿಷ್ಠುರಭಾವ ಅವಳ ಮುಖದಲ್ಲಿ ಮೂಡಿದ್ದನ್ನು ನಾನು ಬಹಳ ಸಲ ಕಂಡಿಲ್ಲ. ಮರೆಪ್ಪ ಹಿಂದಿರುಗಿ ನಿಂತ. ದೊರೆಸಾನಿ ಮಂಚದ ಬಳಿ ಹೋದಳು. ಬಿದ್ದಿದ್ದ ದೇಸಾಯಿಯನ್ನು ತಿರಸ್ಕಾರದಿಂದ ಸತ್ತ ನಾಯಿಯನ್ನು ಕಾಲಿನಿಂದ ದೂಕೋಹಾಗೆ, ಕೆಳಕ್ಕೆ ದೂಕಿದಳು. ಅವನು ಒಣಗಿದ ಬಟ್ಟೆಯ ಹಾಗೆ ಕೆಳಕ್ಕೆ ಬಿದ್ದ. ಅವನ ಕಿಸೆಯಲ್ಲಿದ್ದ ನೋಟಿನ ಸಿವುಡು ಅರ್ಧ ಹೊರಬಂದು ಬೀಳುವುದರಲ್ಲಿತ್ತು. ಆಘಾತ ಹೊಂದು ಕಣ್ಣಗಲ ಮಾಡಿದ್ದ ಮರ್ಯಾ ಯಾವ ಕ್ಷಣ ಏನು ಮಾಡುತ್ತಾಳೋ ಎಂಬಂತೆ ಗಾಬರಿಯಾಗಿ ನೋಡುತ್ತಿದ್ದ. ದೇಸಾಯಿಯನ್ನು ಕೊಂದೇ ಬಿಡುತ್ತಾಳೆಂದು ನಾನು ಅಂದುಕೊಂಡೆ.

ದೇಸಾಯಿ ಮಾಡಿದ್ದೂ ತಪ್ಪೇ. ಇಷ್ಟು ಅನುಕೂಲಕರ ಹೆಂಡತಿ ಯಾವಾಕಿ ಸಿಕ್ಕಾಳು? ಹೆಂಡತಿಯ ಆಸೆಗೆ ತುಸುವಾದರೂ ಗೌರವ ಕೊಡಬ್ಯಾಡವೆ? ಪರೀಕ್ಷೆ ಮಾಡುವುದೆಂದರೆ, ಅದಕ್ಕೊಂದು ಮಿತಿ ಬ್ಯಾಡವೆ? ಸಂತರನ್ನು ಅವರು ರೇಗುವ ತನಕ ಪರೀಕ್ಷೆ ಮಾಡಬಾರದಪ್ಪ. ರೇಗಿಸಿದರೆ ಶಾಪ ಹಾಕುತ್ತಾರೆ. ಸಿಂಗಾರೆವ್ವನನ್ನು ರೇಗಿಸಿದ್ದು ಆಗಿತ್ತು. ಈಗ ಶಾಪ ತಗೋಬೇಕಷ್ಟೆ.

ದೇಸಾಯಿ ಕೆಳಕ್ಕೆ ಬಿದ್ದನಲ್ಲ.

“ಶೀನಿಂಗೀ, ನೀ ಕೆಳಗ ನಡಿ. ಹೊಲೆಯಾ ಬಾರೋ”

ಎನ್ನುತ್ತ ಬಂದು ಅವನ ಕೈಹಿಡಿದು ದೀಪ ಆರಿಸಿದಳು.

* * *