ಈ ಮಧ್ಯೆ ಊರುಗಾರಿಕೆಯ ಸಣ್ಣ ಕೆಲಸವೊಂದನ್ನು ನಾನು ಒಪ್ಪಿಕೊಳ್ಳಲೇಬೇಕಾದ್ದರಿಂದ ಮಾರನೇ ದಿನ ಶೀನಿಂಗವ್ವನ ಕತೆ ಕೇಳಲಾಗಲಿಲ್ಲ. ಊರ ಹಿರಿಯರೊಂದಿಗೆ ಬೆಳಗಾವಿಗೆ ಹೋದೆ. ರವಿಚಂದ್ರ, ಈ ಅರಮನೆಯ ಯಜಮಾನ ಬೆಳಗಾವಿಗೆ ಬಂದಿದ್ದ. ಆದರೆ ಶಿವಾಪುರಕ್ಕೆ ಬರಲು ನಿರಾಕರಿಸಿದ್ದ. ಯಾಕೆಂದು ನನಗೆ ತಿಳಿಯದು. ಈ ಅರಮನೆ ಕೊಳ್ಳುವುದಕ್ಕೆ ಇಬ್ಬರು ಮೂವರು ಗಿರಾಕಿಗಳು ಲಕ್ಷಾಂತರ ಹಣದ ಚೀಲ ಹಿಡಿದುಕೊಂಡು ರವಿಚಂದ್ರನ ಹಿಂದೆ – ಮುಂದೆ ಓಡಾಡುತ್ತಿದ್ದರು. ನಮ್ಮ ಊರಿನವರಿಗೆ ಒಂದಾಸೆ. ಹೈಸ್ಕೂಲು ಮಾಡಿದ್ದರು. ಕಟ್ಟಡವಿಲ್ಲದೆ ಪ್ರಾಥಮಿಕ ಶಾಲೆಯಲ್ಲೇ ಅವಕಾಶ ಮಾಡಿಕೊಂಡು ಕಷ್ಟಪಟ್ಟು ಹ್ಯಾಗೋ ನಡೆಸುತ್ತಿದ್ದರು. ಕಟ್ಟಡ ಕಟ್ಟುವುದಕ್ಕೆ ಹಣ ಇಲ್ಲ, ಸರ್ಕಾರದ ಮಂಜೂರಿ ಎಂದಾಗುವುದೊ. ಆದ್ದರಿಂದ ಹೈಸ್ಕೂಲಿಗಾಗಿ ಹಾಲಿ ಖಾಲಿಯಿರುವ ಅರಮನೆಯನ್ನೇ ಯಾಕೆ ಕೇಳಬಾರದು ಎಂದು ಅವರ ಆಸೆ. ಈ ಆಸೆಯನ್ನು ನಾನು ಹಂಚಿಕೊಂಡದ್ದರ ಕಾರಣವೆಂದರೆ – ನಾನು ಕಲಿಯುವಾಗ ಹೈಸ್ಕೂಲು ಶಿಕ್ಷಣದ ಅವಕಾಶ ನನ್ನ ಹಳ್ಳಿಯಲ್ಲಿರಲಿಲ್ಲ. ಮುಂದಿನ ಮಕ್ಕಳೂ ನನ್ನಂತೆ ಪರದಾಡುವಂತಾಗದಿರಲಿ ಎಂಬುದು ನನ್ನ ಆಸೆ. ಹೈಸ್ಕೂಲ್ ಕಟ್ಟಡಕ್ಕಾಗಿ ಅರಮನೆ ಕೇಳುವುದಕ್ಕಾಗಿ ಹೊರಟಿದ್ದವರು ನನ್ನನ್ನೂ ಜೊತೆಗೆ ಕರೆದೊಯ್ದರು. ನನ್ನ ಮಾತನ್ನವನು ಒಪ್ಪಿದರೂ ಒಪ್ಪಬಹುದೆಂಬುದು ಅವರ ಒಳಆಸೆ. ನಾನು ಬೆಳಗಾವಿಗೆ ಬರುವುದರಿಂದ ಊರಿಗೆ ಸಹಾಯವಾಗುವಂತಿದ್ದರೆ ಸರಿಯೆ. ಅಷ್ಟಕ್ಕೂ ರವಿಚಂದ್ರ ಲಕ್ಷಾಂತರದ ಆಮಿಷ ಮೀತಿ ಇಂಥ ಅಪರೂಪದ ಕಟ್ಟಡವನ್ನು ಊರವರಿಗೆ ಬಿಟ್ಟುಕೊಟ್ಟಾನೆಂಬುದರಲ್ಲಿ ನನಗೆ ನಂಬಿಕೆಯಿರಲಿಲ್ಲ. ಕೊನೇಪಕ್ಷ ಈ ಅರಮನೆಯ ಕೊನೆಯ ದೊರೆಯನ್ನಾದರೂ ನೋಡಿದಂತಾದೀತೆಂದು ಹೋದೆ.

ಆತ ಭರ್ಜರಿ ಹೋಟಲೊಂದರಲ್ಲಿ ಇಳಿದುಕೊಂಡಿದ್ದ. ನಾವು ಹೋದಾಗ ಒಬ್ಬ ಮಾರವಾಡಿಯ ಜೊತೆ ಮಾತಾಡುತ್ತಿದ್ದ. ಊರಿನ ಒಬ್ಬಿಬ್ಬರ ವಿನಾ ಉಳಿದವರ ಪರಿಚಯವೇ ಅವನಿಗಿರಲಿಲ್ಲ. ನಮಗೆಲ್ಲ ಹಿರಿಯರಾದವರು, ಅವನಿಗೂ ಗೊತ್ತಿದ್ದವರು ಒಬ್ಬೊಬ್ಬರನ್ನೇ ಪರಿಚಯಿಸಿದರು. ಕೇಳುತ್ತ ದೇಸಗತಿಯ ಗತ್ತಿನಲ್ಲೇ ಕತ್ತುಹಾಕಿ ವಂದಿಸುತ್ತಿದ್ದ. ನನ್ನ ಹೆಸರು ಕೇಳಿದೊಡನೆ, ಸುದೈವದಿಂದ ನನ್ನ ಹೆಸರನ್ನು ಹಿಂದೆ ಕೇಳಿದ್ದನಂತೆ, ಎದ್ದು ಬಂದು ಕೂ ಕುಲುಕಿದ. ಆಮೇಲೆ ಮೇಲಿಂದ ಮೇಲೆ ಮಾತಿನ ಮಧ್ಯೆ ಒಮ್ಮೊಮ್ಮೆ ಮಾರ್ವಾಡಿಯ ಮಾತನ್ನೂ ನಿರ್ಲಕ್ಷಿಸಿ ನನ್ನ ಕಡೆ ನೋಡುತ್ತಿದ್ದ. ಮಾರ್ವಾಡಿ ಎದ್ದು ಹೋಗುವ ತನಕ ನಾವ್ಯಾರೂ ಮಾತಾಡಲೇ ಇಲ್ಲ.

ದಟ್ಟ ಹುಬ್ಬಿನ ಕೆಳಗೆ ಹೊಳಪುಳ್ಳ ನೀಲಿ ಕಣ್ಣಿನ ಹುಡುಗ ನೋಡುವುದಕ್ಕೆ ಬಹಳ ಚೆಂದಾಗಿದ್ದ. ತುಂಬುಗೆನ್ನೆ, ಸಮಕರಿದು ಬಣ್ಣದ, ದೇಸಗತಿಯ ಕೊನೆಯ ಕುಡಿಯಾದ, ಶೀನಿಂಗವ್ವನಿಗೆ ತುಂಬ ಪ್ರಿಯನಾದ ಆ ಯುವಕನನ್ನು ನೋಡಿ ನನಗೆ ಸಂಭ್ರಮವೇ ಆಯಿತೆನ್ನಬೇಕು. ಮಾರ್ವಾಡಿ ಹೋದ ಮೇಲೆ ನಾವಿಬ್ಬರೂ ಬಹಳ ಹೊತ್ತು ಅದು ಇದು ಮಾತಾಡಿದೆವು. ನನ್ನ ಪರಿಚಯದಿಂದ ಅವನು ಬಹಳ ಸಂತೋಷಪಟ್ಟಂತೆನಿಸಿತು. ಮಾತಿಗೊಮ್ಮೆ ಸರ್ ಎನ್ನುತ್ತಿದ್ದ. ವಯಸ್ಸಿಗೆ ಸಹಜವಾದ ಅಸಡ್ಡೆಯನ್ನು ಕಾಳಜಿಯಿಂದ ನಿಯಂತ್ರಿಸಿದ್ದ. ನಾನು ಶೀನಿಂಗವ್ವನಿಂದ ಅರಮನೆಯ ಕತೆಯನ್ನು ಕೇಳುತ್ತಿರುವದನ್ನೂ ಹೇಳಿದೆ. ಕೊನೆಗೆ ಅರಮನೆಯನ್ನು ಹೈಸ್ಕೂಲಾಗಿ ಪರಿವರ್ತಿಸಲು ಊರವರಿಗೆ ದಾನ ಮಾಡಬೇಕೆಂದು, ಇದರಿಂದ ಸಿಂಗಾರೆವ್ವನ ಆತ್ಮಕ್ಕೆ ನಿಜವಾದ ಶಾಂತಿ ಸಿಕ್ಕುವುದೆಂದು ಹೇಳಿದೆ. ಹೈಸ್ಕೂಲಿಗೆ ಅವರ ಹೆಸರನ್ನೇ ಇಡುವುದಾಗಿ ನಮ್ಮ ಊರವರು ಸೇರಿಸಿದರು. ಯಾವುದಕ್ಕೂ ವಿಚಾರಮಾಡಿ ತಿಳಿಸುವುದಾಗಿ ಹೇಳಿದ. ಸರಿ ಎಂದು ಬಂದೆವು. ಇದನ್ನೆಲ್ಲ ಶೀನಿಂಗವ್ವನಿಗೆ ಹೇಳಿದೆ. ಮುದುಕಿ ಆನಂದಭರಿತಳಾದಳು. ಮತ್ತೆ ಮತ್ತೆ ರವಿಚಂದ್ರನ ಬಗ್ಗೆ ಕೇಳಿದಳು. ರವಿಚಂದ್ರನ ಬಗೆಗಿನ ನನ್ನ ಜ್ಞಾನಕ್ಕೆ ಒಂದು ಮಿತಿಯಿದೆಯೆಂದು ಯಾವಾಗ ಅನ್ನಿಸಿತೊ, ಆವಾಗ ಸುಮ್ಮನಾಗಿ ಕಥೆಗೆ ಇಳಿದಳು.

“ಆಕಾ, ಆ ಪತ್ರೀಗಿಡ ಐತೆಲ್ಲ ಆದಾಗಲೇ ಹುಟ್ಟಿದ್ದು”

– ಎಂದು ಹೇಳಿ, ನಾವು ಕೂತ ಕಟ್ಟೆಯೊಡೆದು ಬೆಳೆದ ಪತ್ರೀಗಿಡ ತೋರಿಸಿ ಶೀನಿಂಗವ್ವ ಕಥೆ ಸುರುಮಾಡಿದಳು.

“ಸಿಂಗಾರೆವ್ವ ಸುಖಪಟ್ಟುದೂ ಈ ಮುರ್ನಾಕು ತಿಂಗಳ ಅವಧಿಯಲ್ಲೆ. ದೇಸಾಯಿಯ ಮೇಲಿನ ಸೇಡಿನಿಂದಲೋ, ಈ ತನಕ ಸಿಕ್ಕದ ಅಪರೂಪದ ಸುಖ ಅಳತೆಮೀರಿ ಸಿಕ್ಕಿದ್ದಕ್ಕೋ – ಸಿಂಗಾರೆವ್ವ ಆನಂದದಿಂದ ಉನ್ಮತ್ತಳಾಗಿದ್ದಳು. ಹುಚ್ಚು ತಲೆಗೇರಿದವರು ತಮ್ಮ ಬಟ್ಟೆಗಳನ್ನೆಲ್ಲಾ ಕಳಚುವಂತೆ ಸಂಕೋಚಗಳನ್ನೆಲ್ಲಾ ಸುಲಿದು ಸುಖದ ನಿಧಿಯನ್ನು ಧಾರಾಳವಾಗಿ ಸೂರಾಡಿ ಬಿಟ್ಟಳು. ಈಗವಳು ಮೊದಲಿನ, ಸದಾ ಒಂದಲ್ಲೊಂದು ಆತಂಕದಲ್ಲಿದ್ದ ಅಳುಮೋರೆಯ ದೊರೆಸಾನಿಯಾಗಿರಲಿಲ್ಲ. ಸೆರೆ ಇಲ್ಲವೆ ಸುಖದ ಅಮಲಿನಲ್ಲಿ ಸದಾ ತೇಲುವ ಸಿಂಗಾರಿಯಾಗಿದ್ದಳು.

ದಿನಾ ಶಿಂಗಾರವಾಗುತ್ತಿದ್ದಳು. ತಲೆ ಬಾಚಿ ಎಡಕ್ಕೆ ಬೈತಲೆ ತೆಗೆದು, ತೀಡಿತೀಡಿ ಮಡಿಸೀರೆ ಕಚ್ಚೆ ಹಾಕಿ ಉಟ್ಟು , ಐಷಾರಾಮಾಗಿ ಅರ್ಧಕಾಯಿ ಸೆರೆ ಕುಡಿದು, ಎಲಡಿಕೆ ಹಾಕಿ, ರಂಗುರಂಗಾಗಿ ಆಕಾಶದ ದೇವತೆ ಹಾರಿ ಕೆಳಗಿಳಿದು ಬಂದ ಹಾಗೆ, – ಅವಯ್ಯ – ನಮ್ಮ ದೊರೆಸಾನಿ ಅಂತಸ್ತಿನಿಂದಿಳಿದು ಸುಖದಲ್ಲಿ ತೇಲುತ್ತ ಬರುತ್ತಿದ್ದಳು. ಮೊದಲೇ ನೋಡಿದವರು ಆಶ್ಚರ್ಯಗೊಳ್ಳುವಂಥ ಸುಂದರಿ. ಭರ್ತಿ ಯೌವ್ವನದ ಸುಖವುಂಡ ಮೇಲೆ ಕೇಳಬೇಕೆ? ಅವಳ ಈಗಿನ ಸೌಂದರ್ಯದ ಕಳೆ ಅದ್ಭುತವಾಗಿತ್ತು. ಒಂದು ಮಾತಿನಲ್ಲಿ ಹೇಳಲೇನಪ್ಪ? – ನೀನು ಘೋಡಗೇರಿಯ ಹೊಳಿ ಓಣಿ ಕಾಮಣ್ಣನ ರತಿಯ ಗೊಂಬೆ ನೋಡಿದ್ದೀಯಾ? – ಹಾಂಗಿದ್ದಳು. ಅದೇ ಚೆಲವು, ಅದೇ ತೃಪ್ತಿ, ಅದರ ಹಾಗೇ ಇವಳ ಮುಖದಲ್ಲೂ ಸುಖ ತುಳುಕುತ್ತಿತ್ತು. ದೇಸಾಯಿಗೆ ದ್ರೋಹ ಮಾಡಿದ್ದೇನೆಂದು ಒಳಗೊಳಗೇ ಆಳದಲ್ಲಿ ಅನ್ನಿಸಿತ್ತು. ಆದರೆ ಹೊರಗೆ ದ್ರೋಹವೆಂದು ಅನ್ನಿಸಲೊಲ್ಲದು. ಈ ಬಗ್ಗೆ ವಿಚಾರ ಮಾಡುವುದೂ ಅವಳಿಗೆ ಸಾಧ್ಯವಿರಲಿಲ್ಲ. ಹೋಗಲಿ ಅದು ದ್ರೋಹವೇ ಎನ್ನುವುದಾದರೆ ಎಷ್ಟೊಂದು ಸುಖಕರವಾಗಿದೆಯಲ್ಲಾ! – ಎಂದು ಹೇಳುತ್ತಿದ್ದಳು.

ಆದರೆ ಒಮ್ಮೊಮ್ಮೆ ಜಾಸ್ತಿ ಕುಡಿದಾಗ ಅವಳ ನೋವು ಒಳಗಿನ ಮಾತಾಗಿ ಹೊರಬರುತ್ತಿತ್ತು. “ಶೀನಿಂಗೀ, ಯಾರೋ ನನ್ನ ಚೂರಿಯಿಂದ ಚುಚ್ಚಿದಾಂಗ ಆಗತೈತಿ. ನನ್ನ ನೋಡಬ್ಯಾಡಂತ ದೇಸಾಯಿಗಿ ಹೇಳು. ಅವ ಎದರ ಬಂದರ ನನಗ ಭಾಳ ತ್ರಾಸ ಆಗತೈತಿ, ಇದಕ್ಕೆಲ್ಲಾ ಅವನೇ ಹೊಣೆಗಾರ. ಒಮ್ಮೊಮ್ಮಿ ಅವನ್ನ ಕೊಲ್ಲಬೇಕಂತ ಅನಸತೈತಿ. ಅವ ಹೊರಗೇನ ಮಾಡತಾನೋ ನನಗೆ ಬೇಕಿಲ್ಲ. ಬೇಕಾದರ ಸೂಳೇರ ತೊಡಿ ನೋಡಲಿ, ಸಾಕಾದರ ಸಾಯಲಿ. ನಾವೀಗ ಗಂಡ ಹೆಂಡತಿ ಅಲ್ಲs ಅಲ್ಲ. ಚೆದರಿ ಚೆಲ್ಲಾ ಪಿಲ್ಲಿ ಆಗಿ ಅವ ಯಾರೋ, ನಾ ಯಾರೋ ಆಗೇವಿ. ನನ್ನ ಮನಸ್ಸ ನೋಯಿಸಿ ಅದ್ಯಾವ ಸುಖ ಪಡಿತಾನೋ ಪಡೀಲಿ. ಅದರ ಅವ ನನ್ನ ಎದರ ಬರೋದ ಬ್ಯಾಡ” ಎನ್ನುತ್ತಿದ್ದಳು. ಇದೆಲ್ಲ ಮರೆಪ್ಪ ಬರೋತನಕ. ಅವನೊಮ್ಮೆ ಎದುರು ಬಂದರೆ ಸಾಕು, ಇವಳ ಮೈಕಾವೇರಿ, ಕೆನ್ನೆ ಕೆಂಪಗಾಗುತ್ತಿದ್ದವು. ಮೈಯ ಹದವಾದ ಬಿಸಿಯನ್ನು ಅನುಭವಿಸುತ್ತ ತೇಲುಗಣ್ಣು ಮೇಲುಗಣ್ಣಾಗಿ “ನನ್ನ ಮರ್ಯಾ” ಎನ್ನುತ್ತಿದ್ದಳು. “ನನ್ನ ಮರ್ಯಾ ನೋಡೋದಕ್ಕೆ ಹೆಂಗಿದ್ದಾನಂದಿ. ಬೆರಗುಗೊಳಿಸೋ ಗಂಡಸು. ಉಕ್ಕಿನ ಮೈಯವನು. ಅವನ ಆತ್ಮ ಎಷ್ಟು ಹಸು ಐತೆಂದಿ! ಅವ ಹತ್ತಿರ ಇದ್ದರೆ ಅರಮನೆಯ ಯಾವ ದೆವ್ವ ಭೂತಗಳೂ ಇನ್ನ ಬಳಿ ಸುಳಿಯುವುದಿಲ್ಲ” ಎನ್ನುತ್ತಿದ್ದಳು.

ಈ ಮಾತುಗಳನ್ನವಳು ಸುಮ್ಮಸುಮ್ಮನೇ ಹೇಳಿರಲಿಲ್ಲ. ಆ ರೀತಿ ಸಿದ್ಧವಾಗಿದ್ದಳು. ಇದನ್ನೆಲ್ಲ ದೇಸಾಯಿಗೆ ಹೇಳಿ ಅವನನ್ನು ಗಾಬರಿಗೊಳಿಸುವುದಾಗಲಿ, ಅವನನ್ನು ಹೊಟ್ಟೆಕಿಚ್ಚಿನಿಂದ ಉರಿಸುವುದಾಗಲಿ ನನ್ನ ಉದ್ದೇಶವಲ್ಲ. ನನ್ನಿಂದ ಅದು ಆಗದ ಕೆಲಸ. ಆದರೆ ಆತ ತೊಡೆ ನೋಡುವ ಸುಖದಲ್ಲಿ ಹೆಂಡತಿಯ ಬಗ್ಗೆ ಇಷ್ಟು ನಿರ್ಲಕ್ಷತನ ತೋರಿಸುವುದು ಯಾರ ಕೋಪವನ್ನಾದರೂ ಕೆರಳಿಸುವಂಥದು. ತನಗೊಬ್ಬ ಹೆಂಡತಿ ಇದ್ದಾಳೆ. ತಾನು ಸತ್ತರೂ ಅವಳ ಬದುಕಿನ ಬಗ್ಗೆ ತನಗೂ ಜವಾಬ್ದಾರಿಯಿದೆಯೆಂದು ಹೊಳೆಯಲಾರದೆ? ಅರಮನೆ ಮಾರುವ ವಿಷಯದಲ್ಲಿ ಹೆಂಡತಿಯೆಂಬಾಕೆಯನ್ನು ಒಂದು ಮಾತು ಕೇಳಿದನೆ? ಅರಮನೆ ಮಾರಿದರೆ ಅವಳ ಗತಿಯೇನು? ತನ್ನ ಆಸ್ತಿಯೆಲ್ಲ ತನ್ನೊಬ್ಬನ ಸುಖಕ್ಕಾಗೇ ಇದೆ ಎಂದರೆ ಹೇಗೆ? ಸೂಳೆಯರ ಹಾಗೆ ತೊಡೆ ತೋರಿಸುತ್ತೇನೆ ಎಂಬಂಥ ಮಾತು ಯಾವ ಗೃಹಿಣಿಗೆ ಅವಮಾನಕರವಲ್ಲ? ಹೋಗಲಿ, ಮಾರನೇ ದಿನ ದಾರಿಗೆ ಬಂದನ? ಸಿಂಗಾರೆವ್ವನಿಂದ ಕದ್ದು ಕದ್ದು ಹೊರಚಾಳಿಗೆ ಹೋಗತೊಡಗಿದ. ತನ್ನ ಬಾಹ್ಯ ವಿಕಾರ ಸುಖಗಳಲ್ಲಿ ಅವ ಎಷ್ಟು ತನ್ಮಯನಾಗಿದ್ದನೆಂದರೆ ತನ್ನ ದೊರೆಸಾನಿಯನ್ನು ಕಳೆದುಕೊಂಡದ್ದು ಅವನಿಗೆ ತಿಳಿದುಬಂದಿರಲೇ ಇಲ್ಲ.

ನೀನು ಮರೆಪ್ಪನನ್ನು ನೋಡಿಲ್ಲ, ಅಲ್ಲ? ಹೋಗಲಿ ಈ ತನಕ ಅವನ ಕಥಿ ಕೇಳಿದ್ದೀಯಲ್ಲ. ಆತನಿಗೊಂದು ಆತ್ಮ ಇದೆಯೆಂದು ನಿನಗೆಂದಾದರೂ ಅನ್ನಿಸಿತ್ತ? ಅವನಲ್ಲಿ ಅದು ಹುಟ್ಟುಕೊಳ್ಳುವ ಹಾಗೆ ಮಾಡಿದಳು. ಹೊಳೆಯಲ್ಲಿಯ ಕಲ್ಲು ಸವೆದು ಸವೆದು ಲಿಂಗವಾಗುತ್ತದಲ್ಲಾ, ಹಾಗೆ ತನ್ನ ಪ್ರೇಮದ ಅಮೃತಧಾರೆಯನ್ನು ಅವನ ಮೇಲೆ ಸುರಿದೂ ಸುರಿದೂ ಅವನು ಲಿಂಗವಾಗುವ ಹಾಗೆ, ಆತ್ಮವಾಗುವ ಹಾಗೆ ಮಾಡಿದ್ದಳು. ಆ ಪ್ರವಾಹದಲ್ಲಿ ಅವ ತೇಲಿ ಮುಳುಗಿ, ತೇಲಿ ಮುಳುಗಿ ಧನ್ಯವಾಗಿದ್ದ. ಆ ಪ್ರವಾಹಕ್ಕೆ ತನ್ನನ್ನು ಪೂರ್ತಿಯಾಗಿ ಅರ್ಪಿಸಿಕೊಂಡಿದ್ದ.

ಅವಳು ಕಾಲಿನಿಂದ ಹೇಳಿದ್ದನ್ನು ನೆತ್ತಿಯಲ್ಲಿ ಹೊತ್ತು ಮಾಡುತ್ತಿದ್ದ. ಸದಾ ಅವಳ ಆಜ್ಞೆಗಾಗಿ ಕಾಯುತ್ತಿದ್ದ. ಅವಳ ಯಾವುದೇ ಆಸೆಯಿರಲಿ, ಬಾಯಿಂದ ಹೊರಬರುವ ಮೊದಲೇ ಈಡೇರಿಸುತ್ತಿದ್ದ. ಮೊದಲಿನ ಹಾಗೆ ಯಾವಾಗೆಂದರೆ ಆವಾಗ ಅಂತಸ್ತಿಗೆ ನುಗ್ಗುತ್ತಿರಲಿಲ್ಲ. ಸಿಂಗಾರೆವ್ವನ ಮಾನಕ್ಕಾಗಿ ಅತ್ಯಂತ ಕಾಳಜಿಯಿಂದಿರುತ್ತಿದ್ದ. ದೇಸಾಯಿ ಮತ್ತೆ ಅವನನ್ನು ಆಳಾಗಿ ನೇಮಿಸಿಕೊಂಡಿದ್ದ. ಅವನ ಬಗ್ಗೆ ಊರವರ್ಯಾರಿಗೂ ಅನುಮಾನಗಳಿರಲಿಲ್ಲ. ಗೌಡನನ್ನು ನಾನೇ ಕೊಂದವನೆಂದು ಸ್ವಯಂ ಮರೆಪ್ಪನೇ ಬಂದು ಹೇಳಿದ್ದರೂ ಜನ ಏನು, ದೇಸಾಯಿಯೂ ನಂಬುತ್ತಿರಲಿಲ್ಲ.

ಮುಂದೆ ಸಿಂಗಾರೆವ್ವ ಬಸಿರಾಗುವತನಕ ಮಹತ್ವದ ಘಟನೆಗಳೇನೂ ನಡೆಯಲಿಲ್ಲ. ಹೊರಗಿನ ವ್ಯವಹಾರ ನನಗೆ ಅಷ್ಟೇನು ತಿಳಿಯದು. ಅದನ್ನು ಮರೆಪ್ಪ ನೋಡಿಕೊಳ್ಳುತ್ತಿದ್ದ. ಆಗಾಗ ಬಂದು ದೊರೆಸಾನಿಗೆ ವರದಿ ಒಪ್ಪಿಸುತ್ತಿದ್ದ. ಅವರು ಮಾತಾಡುವಾಗ ನಾನು ಕೇಳಿದ್ದೆಷ್ಟೋ ಅಷ್ಟೆ. ಆದರೆ ಒಳಗೆ ಮಾತ್ರ ಮರೆಪ್ಪ ಬದಲಾಗಿದ್ದ, ದೊರೆಸಾನಿ ಬದಲಾಗಿದ್ದಳು. ದೇಸಾಯಿ ಮಾತ್ರ ಹಾಗೇ ಇದ್ದ. ಅವನ ದಿನಚರಿಯಲ್ಲಾಗಲೀ ಸ್ವಭಾವದಲ್ಲಾಗಲೀ, ಯಾವ ಪರಿವರ್ತನೆಗಳೂ ಆಗಿರಲಿಲ್ಲ. ಅಥವಾ ತನ್ನ ಹೊರಗೆ ಏನೋ ಬದಲಾಗಿದೆಯೆಂಬುದನ್ನು ತಿಳಿಯುವಷ್ಟು ಸೂಕ್ಷ್ಮ ಬುದ್ಧಿಯೂ ಅವನಿಗಿರಲಿಲ್ಲ. ದೊರೆಸಾನಿ ದೇಸಾಯಿಯ ಉಸಾಬರಿಯನ್ನೇ ಬಿಟ್ಟುಬಿಟ್ಟಿದ್ದಳು. ದೇಸಾಯಿ ಮಾತ್ರ ಒಳ್ಳೇದೇ ಆಯಿತೆಂಬಂತೆ ದೂರದಲ್ಲೆ ಇದ್ದ. ಅದಕ್ಕೇ ಒಮ್ಮೊಮ್ಮೆ ಅವನಿಗಾದ ಶಿಕ್ಷೆ ಸರಿಯೆನಿಸುತ್ತಿತ್ತು.

ನನ್ನ ಪ್ರಕಾರ ಅವನೊಬ್ಬ ಮನುಷ್ಯನೇ ಅಲ್ಲ. ಮಾನವ ಸಹಜವಾದ ಯಾವುದೇ ಭಾವನೆಯನ್ನೂ ಅವನು ಈ ತನಕ ತೋರಿರಲಿಲ್ಲ. ಜೊತೆಯವರನ್ನು ಹೋಗಲಿ, ದೊರೆಸಾನಿಯನ್ನು ಕಂಡಾಗ ಕೂಡ ಅವನ ಹೃದಯ ಬೆಚ್ಚಗಾಗುತ್ತಿರಲಿಲ್ಲ. ಹೆತ್ತ ತಾಯಿ ಸತ್ತಾಗಲೂ ಏನೇನೂ ಅಲ್ಲದ ನಾವು ಅತ್ತರೆ, ಆತ ನಿರ್ಲಿಪ್ತ ಪ್ರೇಕ್ಷಕನಾಗಿ ನೋಡಿದ. ಹಬ್ಬದ ಮುನ್ನಾದಿನ ದೊರೆಸಾನಿ ಪರಿಪರಿಯಾಗಿ ಹೇಳಿದ್ದನ್ನು ಕೇಳಿಯೂ ತನ್ನ ಚಾಳಿ ಬಿಡಲಿಲ್ಲ. ಅದೇ ಅವನ ದುರಂತವೆಂದು ನನ್ನ ಭಾವನೆ, ಮನುಷ್ಯನಾಗಿ ಹುಟ್ಟಿಯೂ ಮನುಷ್ಯ ಹೃದಯವಿಲ್ಲದಿರುವುದುದಿದೆಯಲ್ಲ, ಅದು ದುರಂತವಲ್ಲದೆ ಇನ್ನೇನು? ಅವನಲ್ಲಿ ದೇಸಗತಿಯ ಬಗೆಗೆ ಅಭಿಮಾನವಿದ್ದದ್ದು ನಿಜ. ಮರೆಪ್ಪ ‘ಸರ್ಕಾರ’ ಎಂದಾಗ ಹಿಗ್ಗುತ್ತಿದ್ದ. ಅರಮನೆಗೆ ಪೊಲೀಸರು ಬಂದಾಗ ಚಡಪಡಿಸಿದ್ದ. ಸಭೆಯಲ್ಲಿ ಗೌಡ ದೊರೆಸಾನಿಯ ಹೆಸರು ತಂದಾಗ ‘ಖಬರ್‌ದಾರ್’ ಎಂದಿದ್ದ. ಅಭಿಮಾನಕ್ಕೆ ಅರ್ಥ ಬರುವುದು ಸಂಬಂಧಗಳಲ್ಲಿ ಅಲ್ಲವೆ? ಅಲ್ಲದಿದ್ದರೆ ಅಂಥ ಅಭಿಮಾನ ಇದ್ದರೆಷ್ಟು ಬಿಟ್ಟರೆಷ್ಟು? ನನ್ನ ಕೇಳಿದರೆ, ಅರಮನೆಯೆಂದರೆ ಹೆಚ್ಚು ಬೆಲೆ ಬಾಳುವ ವಸ್ತು, ಮತ್ತು ಅದು ನನ್ನ ಕೈಲಿದೆ – ಎಂಬುದೇ ಅವನ ಅಭಿಮಾನವಾಗಿತ್ತು.

ದೀಪಾವಳಿಯ ಬಯಲಾಟಕ್ಕೆ ಚಿಮಣಾ ಬಂದಿದ್ದಳಲ್ಲ, ಆಟ ಚೆನ್ನಾಗಿ ಆಗಲಿಲ್ಲ. ಆಮೇಲೂ ಅವಳು ಹೆಚ್ಚು ದಿನ ನಿಲ್ಲಲಿಲ್ಲ. ಯಾಕೆಂದರೆ ಅವಳ ಕರಿಯ ದೇಹವನ್ನು ನೋಡಲು ದೇಸಾಯಿ ಇಷ್ಟಪಡಲಿಲ್ಲವಂತೆ. ಮಾಡಿದ ಖರ್ಚಿಲ್ಲ ನೀರಲ್ಲಿ ಹುಣಸೇ ಹಣ್ಣು ತೊಳೆದಂತಾಯಿತಲ್ಲಾ ಎಂದು ಶೆಟ್ಟಿ ಕೈ ಕೈ ಹೊಸೆದುಕೊಂಡನಂತೆ. ಈ ಸಲ ಕೊಲ್ಲಾಪುರದ ತಮಶಾ ಹುಡುಗಿಯನ್ನು ತರುವುದಾಗಿ ಹೇಳಿ ದೇಸಾಯಿಗೆ ಹೊಸ ಆಸೆ ಹಚ್ಚಿದ್ದನಂತೆ. ಮರೆಪ್ಪನೂ ಮೊದಲಿನಂತೆ ದೇಸಾಯಿಗೆ ವಿಶ್ವಾಸಿಗನಾಗಿದ್ದ. ಸಿಂಗಾರೆವ್ವ ಮಾತ್ರ ಒಳಗೊಳಗೇ ಚುಚ್ಚಿ ಚುಚಿ ಹಿಂಸೆ ಮಾಡಿಕೊಳ್ಳುತ್ತಿದ್ದಳು. ಅದ್ಯಾರಿಗೂ ಕಾಣುತ್ತಿರಲಿಲ್ಲ. ತಂದೆ ಸತ್ತದ್ದನ್ನು ಸ್ಮರಿಸಲಿಲ್ಲ. ತಾಯಿಯನ್ನು ನೆನೆಯಲಿಲ್ಲ. ತೀರ ಕ್ವಚಿತ್ತಾಗಿ ಆ ಒಳಗಿನ ನೋವನ್ನು ಮಾತ್ರ ನನ್ನ ಮುಂದೆ ಆಡಿಕೊಳ್ಳುತ್ತಿದ್ದಳು.

ಮುಂದೊಂದು ದಿನ ನಂದಗಾಂವಿಯಿಂದ ಅವಳ ತಾಯಿ ಬಂದಳು. ಗೌಡ ಮಾಯವಾದದ್ದನ್ನೂ ಸವತೆಯರಿಂದ ಅಲ್ಲಿ ತನಗಾಗುತ್ತಿರುವ ಅವ್ಯವಸ್ಥೆಯನ್ನು ಮುದುಕಿ ಬಣ್ಣಿಸಿ ಕಣ್ಣೀರು ಕರೆದಳು. ಸಿಂಗಾರೆವ್ವ ಏನೂ ಹೇಳಲಿಲ್ಲ. ಆ ದಿನ ಇಳಿಹೊತ್ತಾಗಿತ್ತು. ನಾವು ಮೂವರೂ ಪಟಾಂಗಳದಲ್ಲಿದ್ದೆವು. ದರ್ಬಾರಿನಂಚಿನ ಮೆಟ್ಟಲಿನ ಮೇಲೆ ನಾನು ಮತ್ತು ಮುದುಕಿ ಕೂತಿದ್ದೆವು. ಆಕ ಆ ಕಟ್ಟೆಯ ಮೇಲೆ ಬಿಸಿಲು ಕಾಯಿಸುತ್ತ ಸಿಂಗಾರೆವ್ವ ಕೂತಿದ್ದಳು. ಆ ದಿನ ಅವಳು ನೀರು ಹಾಕಿಕೊಂಡಿದ್ದರಿಂದ ಮಾರುದ್ದ ಕೂದಲನ್ನು ಬೆನ್ನಿಗಿಳಿಬಿಟ್ಟು ಎಳೆಬಿಸಿಲಿನಲ್ಲಿ ಒಣಗಿಸುತ್ತಿದ್ದಳು. ಮುದುಕಿಯಿನ್ನೂ ತನ್ನ ದುಃಖ ತೋಡಿಕೊಳ್ಳುತ್ತಲೇ ಇದ್ದಳು. ಮಾತಾಡುತ್ತಿದ್ದಳು, ಬಿಕ್ಕುತ್ತಿದ್ದಳು, ಕಣ್ಣೀರು ಸುರಿಸುತ್ತಿದ್ದಳು. ಒಮ್ಮೊಮ್ಮೆ ಯಾವುದು ಬಿಕ್ಕು, ಯಾವುದು ಮಾತೆಂದು ತಿಳಿಯುತ್ತಲೇ ಇರಲಿಲ್ಲ. ಯಥಾಪ್ರಕಾರ ನಾನು ಸಹಾನುಭೂತಿ ಸೂಚಿಸುತ್ತಿದ್ದೆ. ಗೌಡ ಮಾಯವಾದದ್ದರ ಬಗ್ಗೆ ಅಷ್ಟಾಗಿ ಅವಳಿಗೆ ದುಃಖವೇನಿರಲಿಲ್ಲ. ಆದರೆ ತನ್ನ ‘ಕಲ್ಲು ಕುದಿಸಿ ಮುಳ್ಳು ಬೇಯಿಸಿ’ ತಿನ್ನಬೇಕಾದ ಸ್ಥಿತಿಯ ಬಗ್ಗೆ ಮರುಕವುಂಟಾಗುವ ಹಾಗೆ ಬಣ್ಣಿಸುತ್ತಿದ್ದಳು. ಈ ಸ್ಥಿತಿಗೆ ಗೌಡನೇ ಕಾರಣನೆಂದು ಸಿಟ್ಟೂ ಅವಳಲ್ಲಿತ್ತು. ಅದಕ್ಕೇ ಗೌಡನೆಂದೊಡನೆ ಅಳು ಬಿಟ್ಟು ಸಿಟ್ಟಿಗೇಳುತ್ತಿದ್ದಳು. ಸಿಂಗಾರೆವ್ವ ಮಾತ್ರ ಈಗಲೂ ಸುಮ್ಮನಿದ್ದಳು. ಇನ್ನೇನು ಮಾಡಲು ಸಾಧ್ಯ? ಗೌಡ ಹ್ಯಾಗೆ ಸತ್ತನೆಂದು ನಮಗೆ ಗೊತ್ತಿಲ್ಲವೆ? ಆದರೆ ಆಡಲಾರೆವು, ಅನುಭವಿಸಲಾರೆವು. ಮುದುಕಿ ಹೇಳುತ್ತಿದ್ದಳು:

“ಆ ನನ್ನ ಹಾಟ್ಯಾ ಗೌಡ ಸತ್ತಿರಬೇಕಂತೀನ್ನಾನು. ಎಲ್ಲೆಲ್ಲಿ ಹೋಗಿ ಏನೇನ ಕಾರಭಾರ ಮಾಡಿದ್ದನೋ! ಮಂದಿ ಎಷ್ಟಂತ ತಾಳಿಕೊಂಡಾರು? ಶಿರಟ್ಟೈವರs ಇವನ್ನ ಖೂನಿ ಮಾಡದರಂತ ಹೇಳತಿದ್ದರು. ಎಷ್ಟ ಖರೇನೋ ಎಷ್ಟ ಸುಳ್ಳೋ! ಸನ್ಯಾಸಿ ಆಗಿ ಕಾಶಿ ಕಡೆ ಹೋದನಂತ ನಮ್ಮೂರ ಜಂಗಮ ಹೇಳತಿದ್ದ. ಅವ ಎಂದಾದರೂ ಸನ್ಯಾಸಿ ಆದಾನೇನ? ಖೂನಿಯಾಗಿದ್ದರ ಪೊಲೀಸರ್ಯಾಕ ಸುಮ್ಮನ ಅದಾರು? ಒಂದೂ ಹೊಯ್ಕ ತಿಳಿಯೋದs ಇಲ್ಲ…”

– ಎಂದು ಹೇಳಹೇಳುತ್ತ ಮುದುಕಿ ಥಟ್ಟನೆ ಎದ್ದು ಸಿಂಗಾರೆವ್ವನ ಬಳಿಗೆ ಧಾವಿಸುತ್ತ “ಅಯ್ ನನ ಕಂದಾ, ಬಸರಗಿಸರ ಆಗಿಯೇನು?” ಎಂದು ಹೋಗಿ ಅವಳ ಎದುರಿಗೆ ಕಣ್ಣರಳಿಸಿಕೊಂಡು ನಿಂತಳು. ಸಿಂಗಾರೆವ್ವ ನಾಚಿ, ಕತ್ತು ಹಾಕಿ ‘ಹೂಂ’ ಎಂದಳು. ನನಗೂ ಇದು ಗೊತ್ತಿರಲಿಲ್ಲ. ಆನಂದ, ಆಶ್ವರ್ಯಗಳಿಂದ ಸಿಂಗಾರೆವ್ವನನ್ನೇ ನೋಡುತ್ತಿದ್ದೆ. ಹೌದೆನ್ನಿಸಿತು. ಕೆಂಪು ಕೆನ್ನೆ ಕಳೆಕಳೆಯಾಗಿ ಅರಳಿದ ಗುಲಾಬಿಗಳಾಗಿದ್ದವು. ತುಳುಕುವ ತೃಪ್ತಿಗಳಿಂದ ಕಣ್ಣು ಫಳಫಳ ಹೊಳೆಯುತ್ತಿದ್ದವು. ದುಂಡಗಿನ ಮುಖ ಮತ್ತಷ್ಟು ತುಂಬಿಕೊಂಡು, ತುಂಬಿದಲ್ಲೆಲ್ಲ ಚಿವುಟಿದರೆ ನೆತ್ತರು ತುಂಬಿಕೊಂಡಿತ್ತು. ಆ ಸೀರೆ, ಆ ಎಳೆಬಿಸಿಲು, ಆ ಹೊಳೆಯುವ ಕೂದಲು – ಅಯ್ ಶಿವನ – ನನ ಗೆಳತಿ ಗರ್ಭೀಣಿಯಾದ ದೇವತೆಯಂತೆ ಕಾಣುತ್ತಿದ್ದಳು. ನಾನು ಎದ್ದು ಅವರ ಬಳಿ ಹೋದೆ.

ಮುದುಕಿಗೆ ಸಂತೋಷವೆಂಬ ಹುಚ್ಚು ಹತ್ತಿತ್ತು. “ಅಯ್ ನನ್ನ ಗೌರಿ, ನನ್ನ ಭಾಗ್ಯವಂತಿ, ಈಸ ಬಸರಾದೇನ? ನನಗ ಮೊದಲs ಯಾಕ ಹೇಳಲಿಲ್ಲ? ನನ್ನ ಕಂದಾ, ನನ್ನ ಲಕ್ಷ್ಮ, ನನ್ನ ಸಿಂಗಾರಿ” – ಎನ್ನುತ್ತ ಮಾತಿಗೊಮ್ಮೆ ಕೈಗಳಿಂದ ಸಿಂಗಾರೆವ್ವನ ಎರಡೂ ಕೆನ್ನೆ ಮುಟ್ಟಿ ಮುಟ್ಟಿ ಲಟಿಕೆ ಮುರಿಯುತ್ತಿದ್ದಳು. ಸಿಂಗಾರೆವ್ವ ಸುಮ್ಮನೆ ತಾಯಿ ಹ್ಯಾಗೆ ಹೇಳಿದರೆ ಹಾಗೆ ಮುಖ ಮಾಡುತ್ತ ನಾಚಿಕೆಯ ಮಂದಹಾಸ ಬೀರುತ್ತ ತೇಲುಗಣ್ಣಾಗಿ ತಾಯಿಯ ಆನಂದವನ್ನು ಅನುಭವಿಸುತ್ತಿದ್ದಳು. ಮುದುಕಿ ಥಟ್ಟನೆ ಮಗಳ ಮುಂದೆ ಕೂತು ಕಣ್ಣು ಮಿಟುಕಿಸದೆ ಮಗಳನ್ನೇ ನೋಡುತ್ತ, ಆನಂದದಿಂದ, ಕಣ್ಣೀರು ಸುರಿಸುತ್ತಿದ್ದಳು. ಮುದುಕಿ ಹುಚ್ಚಾದದ್ದು ಹೆಚ್ಚಲ್ಲ ಎನ್ನಿಸಿತು. ಅವಕಾಶ ಸಿಕ್ಕಿದ್ದರೆ ಈಗ ನಾನೂ ಹಾಗೇ ಮಾಡುತ್ತಿದ್ದೆ, ಅಥವಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಸಿಂಗಾರಿಗೆ ಲಟಲಟ ಮುದ್ದು ಕೊಡುತ್ತಿದ್ದೆ.

ಈ ಮುದುಕಿಯನ್ನು ತಡೆಯದಿದ್ದರೆ ಅವಳು ನಿಜವಾಗಿಯೂ ಹುಚ್ಚಿಯಾಗುತ್ತಾಳೆ ಎನ್ನಿಸಿತು. ಅಷ್ಟರಲ್ಲಿ ಅವಳ ಎತ್ತರದ ದನಿಯ ಉದ್ಗಾರ ಕೇಳಿ ಮಲಗಿದ್ದ ದೇಸಾಯಿ ಆಕಳಿಸುತ್ತ, ಹೊರಬಂದ. ಮುದುಕಿ ಅವನನ್ನು ನೋಡಿದ್ದೇ – ಅಲ್ಲಿಗೇ ಓಡಿ ಹೋಗಿ “ಏನ್ರೀ ಅಳಿಯದೇವರ, ಸಿಂಗಾರೆವ್ವ ಬಸಿರಾದ ಸುದ್ದಿ ನೀವಾದ್ರೂ ನಮಗ ತಿಳಿಸಬಾರದ? ತಿಳಿಸಿದ್ರ ನಮಗೂ ಆನಂದ ಆಗ್ತಿರಲಿಲ್ಲೇನು? ಗೌಡ ಹೋದರೇನ ಆಯ್ತು? ಇನ್ನೂ ನಾನು ಅವಳ ತಾಯಿ ಜೀವಂತ ಇದ್ದೀನಿ. ಮಗಳಿಗಿ ಮಾಡೋ ಮರ್ಯಾದಿ ಮಾಡೇ ಮಾಡ್ತೀನಿ”

ದೇಸಾಯಿ ಆಶ್ಚರ್ಯ ಮತ್ತು ಆಘಾತ ಹೊಂದಿದವನಾಗಿ “ಬಸರ?” ಎಂದು ಕೇಳಿದ. ಇಲ್ಲಿಯ ತನಕ ಆನಂದದ ಉನ್ಮಾದದಲ್ಲಿದ್ದ ನಾನು ಆಗ ಮನುಷ್ಯರೊಳಗೆ ಬಂದೆ. ಆಗುವ ಅಪಾಯ ಆಗಿ ಹೋಗಿತ್ತು. ದೇಸಾಯಿ ಮುದುಕಿಯ ಮುಖವನ್ನೇ ನೋಡುತ್ತ, ಕಣ್ಣಗಲಿಸಿ ಮತ್ತೆ ಮತ್ತೆ “ಬಸರ? ಬಸರ?” ಎಂದು ಹೇಳಹೇಳುತ್ತ ಮುಖ ಕೆಂಪಗಾಗಿಸಿ, ಬೇಹೋಶ್ ಆಗಿ ದೊಪ್ಪನೆ ಕೆಳಗೆ ಬಿದ್ದ. ಸಿಂಗಾರೆವ್ವ ಏನೇನ ಆಗಿಲ್ಲವೆಂಬಂತೆ ನಡೆದು ಅಂತಸ್ತಿಗೆ ಹೋದಳು.

* * *