“ದೇಸಾಯಿ ಗುಂಡು ಹೊಡೆದುಕೊಂಡು ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ದುರ್ಬಲರಿರುತ್ತಾರೆ ನೋಡು, ಅವರು ಹಟಮಾರಿಗಳಾದರೆ ಬಹುಬೇಗ ಮನಸ್ಸಿನ ಸ್ಥಿಮಿತ ಕಳಕೊಳ್ಳುತ್ತಾರೆ. ವೈರಿಯನ್ನು ಇರಿಯಬೇಕು. ಆದರೆ ತಾಕತ್ತಿರೋದಿಲ್ಲ, ಹಾಗೆಂದು ಸುಮ್ಮನೆ ಇರುವುದಿಲ್ಲ. ತಾವೇ ಇರಿದುಕೊಂಡಾದರೂ ಅದನ್ನು ನೋಡಬೇಕಾದ ಸಂಕಟಕ್ಕೆ ವೈರಿಯನ್ನು ಗುರಿಪಡಿಸುತ್ತಾರೆ. ಅಂಥವರಿಗೆ ಸಾವು ಕೂಡ ಔದಾರ್ಯ ಕಲಿಸುವುದಿಲ್ಲ. ದೇಸಾಯಿ ಅಂಥವ. ಪುಣ್ಯಾತ್ಮ, ತನ್ನ ಪಾಡಿನ ತಾನು ತಣ್ಣಗೆ ಸತ್ತನೆ? ತನ್ನ ಹಾಸಿಗೆಯ ಮೇಲೊಂದು ಕಾಗದ ಬರೆದಿಟ್ಟಿದ್ದ. ತರತೀನಿ ತಾಳು, ನೀನೇ ನೋಡೀಯಂತೆ.”

– ಎಂದು ಹೇಳಿ ಶೀನಿಂಗವ್ವ ಆ ಕಾಗದ ತರೋದಕ್ಕ ಒಳಗೆ ಹೋದಳು. ನಾನು, ಶಿರಸೈಲ ಇಬ್ಬರೇ ಕೂತೆವು.

“ರವಿಚಂದ್ರನ ಕಾಗದ ಬಂತೇನೋ?” ಅಂದೆ.

“ಇನ್ನs ಬಂಧಂಗಿಲ್ಲ” ಅಂದ.

– ಹೈಸ್ಕೂಲಿನ ವಿವರಗಳನ್ನು ಚರ್ಚಿಸುತ್ತ ಕೂತೆವು. ಅಷ್ಟರಲ್ಲಿ ಮುದುಕಿ ಬಂದು ದೇಸಾಯಿ ಬರೆದಿಟ್ಟಿದ್ದ ಕಾಗದಕೊಟ್ಟಳು. ಮಡಿಚಿ ಎಲ್ಲಿಟ್ಟಿದ್ದಳೋ ಸಾಕಷ್ಟು ಹಳೆಯದಾಗಿ ತನ್ನ ಮೂಲ ಬಣ್ಣ ಕಳೆದುಕೊಂಡಿತ್ತು. ಅದು ಹೀಗಿತ್ತು:

ಬೆಳಗಾಂ ಜಿಲ್ಲಾ, ಗೋಕಾಕ ತಾಲ್ಲೂಕು ಶಿವಾಪುರ ಗ್ರಾಮದ ದೊರೆಸಾನಿ ಚಿ||ಸೌ||ಸಿಂಗಾರಿಬಾಯಿವರಿಗೆ,

ನೀವು ಮುದದಿಂದ ಎನ್ನ ಮದುವೆಯಾಗಿ ಸದನಕ್ಕೆ ಬಂದಾಗ ನಮ್ಮ ಆನಂದಕ್ಕೆ ಕುಂದಿರಲಿಲ್ಲ. ನೀವು ಪತಿವ್ರತಾ ಶಿರೋಮಣಿಯೆಂದೂ ಸಾಧ್ವೀಮಣಿಯೆಂದೂ ನಾವು ಎಣಿಸಿದ್ದೆವು. ಆದರೆ ಗೋಮುಖವ್ಯಾಘ್ರದೋಪಾದಿಯಲ್ಲಿ ನೀವು ಹೊರಗೊಂದು ಒಳಗೊಂದು ಇದ್ದಿತಿ. ಹೊರಗೆ ಹಿಂದೂ ನಾರಿಯಾಗಿಯೂ ಒಳಗೆ ಹಾದರಗಿತ್ತಿಯೂ ಆಗಿದ್ದಿರಿ. ಸಿಂಗಾರಿಯಾಗಿ ಬಂದು ಬಂಗಾರದ ಅರಮನೆಯನ್ನು ಲೂಟಿ ಮಾಡುವುದೇ ನಿಮ್ಮ ಮಹದೋದ್ದೇಶವಾಗಿತ್ತೆಂದು ನಮಗೆ ಮನವರಿಕೆಯಾಗಿದೆ.

ತೌರಮನೆಯಲ್ಲಿ ಚಿಕ್ಕಂದಿನಲ್ಲಿಯೇ ನೀವು ಮತಿಹೀನ ಹೊಲೆಯನಾದ ಮರ್ಯಾನ ಜೊತೆಗೂಡಿ ಹಿತದಿಂದ ಅತಿ ವಿಲಾಸ ಮಾಡಿದ್ದಿತಿ. ಮದುವೆಯಾದ ಮೇಲಾದರೂ ನಿಮಗೆ ಸದ್ಭುದ್ಧಿ ಬರಲಿಲ್ಲ. ಆ ಮೂಢನು ಓಡ್ಯೋಡಿ ಇಲ್ಲಿಗೇ ಬರುವಂತೆ ಮೋಡಿಮಾಡಿ ಕೂಡಿಕೊಂಡಿರಿ. ನಮ್ಮ ಮಂದಿರದಲ್ಲೇ ಇದ್ದು ಕುಂದು ಬರುವ ರೀತಿಯಲ್ಲಿ ಮಂದಮತಿ ಹೊಲೆಯನೊಂದಿಗೆ ಕಂದರ್ಪನ ಕೇಳಿಯಲ್ಲಿ ಆನಂದ ಪಡುತ್ತಿದ್ದಿರಿ. ಈ ಹತಭಾಗ್ಯನಾದ ನನ್ನನ್ನು ವಂಚಿಸಿ ಸಂಚು ಮಾಡಿದಿರಿ. ಅದು ಕೊನೇತನಕ ನಮಗೆ ತಿಳಿಯದಿದ್ದದ್ದು ನಮ್ಮ ದೌರ್ಭಾಗ್ಯವಲ್ಲದೆ ಮತ್ತಿನ್ನೇನು? ಆದರೆ ಕೊನೇ ಹಂತದಲ್ಲಾದರೂ ಬಸಿರಾಗಿ ಸಿಕ್ಕುಬಿದ್ದಿರಿ. ಯಾರಿಗೆ ಬಸಿರಾದರೆಂದು ಕೇಳಿದರೆ, ಸೂಕ್ಷ್ಮಮತಿಗಳಾದ ನಮ್ಮ ಆಪೇಕ್ಷೆಯನ್ನು ಲಕ್ಷಗೊಟ್ಟು ಕೇಳದೆ ಉಪೇಕ್ಷೆ ಮಾಡಿದಿರಿ. ನಮ್ಮ ರಾಜವಾಡೆಯ ನಡುಭಾಗದಲ್ಲಿ ಕಡುತರವಾದ ಸಿಡಿಲಿನೋಪಾದಿಯಲ್ಲಿ ನೀವು ಘುಡು ಘುಡಿಸಿ ಅಡಿಗಡಿಗೆ ನಮ್ಮ ಎದೆ ಬಡಿದುಕೊಳ್ಳುವಂತೆ ಮಾಡಿದಿರಿ.

ನೀವು ಅಕ್ರಮಾವಿ ಬಸಿರಾಗಿ ನಮ್ಮ ಅರಮನೆಯ ಮುಖಕಮಲಕ್ಕೆ ಮಸಿ ಹಚ್ಚಿ ನಾವು ಹುಚ್ಚರಾಗಿ ಅಡ್ಡಾಡುವಂತೆ ಮಾಡಿದಿರಿ. ಶಿವಾಪುರದಲ್ಲಿ ನಮ್ಮ ಬಂಧುರತ್ವ ಕಳೆಗುಂದಿ ನಿಂದಾಸ್ಪದರಾಗುವಂತೆ ಮಾಡಿದಿರಿ. ಆದ್ದರಿಂದ ಶಿವಾಪುರದ ಪ್ರಜೆಗಳಿಗೆ ಎಮ್ಮ ಮಸಿ ಹತ್ತಿದ ಮುಖಾರವಿಂದವನ್ನು ತೋರಿಸುವುದಕ್ಕಿಂತ ಸಾಯುವುದೇ ಸಾವಿರ ಪಾಲು ಲೇಸೆಂದು ಅಂತಿಮವಾಗಿ ತೀರ್ಮಾನಿಸಿದೆವು.

ಈ ನಡುವೆ ಮರ್ಯಾ ಎಂಬ ಮತಿಹೀನ ಹೊಲೆಯನು ಕೊಲ್ಲಾಪುರ ಮಹಾರಾಜರ ಸೂಳೆಯನ್ನು ನಮಗೆ ತೋರಿಸುವುದಾಗಿ ಆಮಿಷ ತೋರಿಸಿದನು. ಮಹಾರಾಜರಾದವರು ಸರಿಕ ಮಹಾರಾಜರ ಸೂಳೆಯ ದರ್ಶನ ಮಾಡಿ ಮಹಾರಾಜರಂತೇ ಸಾಯುವುದು ಉಚಿತವಲ್ಲವೇ? ಹಾಯ್ ಧಿಕ್! ಅಲ್ಲಿಯೂ ನೀವು ನಮ್ಮನ್ನು ವಂಚಿಸಿದಿರಿ. ಮಹಾರಾಜರ ಸೂಳೆಯ ಸುಂದರವಾದ ಸರ್ವಾಂಗಗಳನ್ನು ಕಣ್ಣಿಂದ ನೋಡಿ ಆನಂದ ಹೊಂದಬೇಕೆಂದು ಗುಡಿಸಲಲ್ಲಿ ಹಣಿಕಿ ಹಾಕಿದರೆ ಸೂಳೆಯ ಬದಲು ನೀವೇ ಬೆತ್ತಲಾಗಿ ನಿಂತಿದ್ದಿರಿ! ಸಲ್ಲಲಿತ ವಲ್ಲಭೆಯಾದ ನೀವು ಉಲ್ಲಾಸದಿಂದ ಅಗ್ಗದ ನಲ್ಲೆಯಂತೆ ನಿಂತು ನಿಮ್ಮ ಸುಲಿದ ಮೈಯನ್ನು ತೋರಿಸುತ್ತಿದ್ದೀರಿ!! ಮತಿಗೇಡಿ ಹೊಲೆಯನ ಮೋಡಿ ಮಾತಿಗೆ ಮರುಳಾದ ನಾವು ಎಂಥಾ ಮೂರ್ಖರೆಂದು ಕರುಣೆ ಬಂದಿತೋ ಏನೋ ಎಂಬಂತೆ ನಿಮ್ಮ ಕಣ್ಣಲ್ಲಿ ಅಶ್ರುಧಾರೆ ಧಾರಾಕಾರ ಸುರಿಯುತ್ತಿತ್ತು. ನೋಡಿ ಸಂತೋಷ ನೀಗಿ ಸಂತಾಪಗೊಂಡೆವು. ಆದರೆ ನೀವು ಭಾವಿಸಿದಂತೆ ನಾವು ನಿನ್ನೆ ಬೇಹೋಶ್ ಆಗಲಿಲ್ಲ. ಆದವರ ಹಾಗೆ ಬಿದ್ದೆವು. ಬಯಲಾಟದ ಸರ್ವಶ್ರೇಷ್ಠ ನಟರೆಂದು ಸದಾಕಾಲ ಈ ನಾಡಿನ ತುಂಬ ಕೀರ್ತಿಯ ಜಯಭೇರಿ ಹೊಡೆದ ನಮಗೆ ಬೇಹೋಶ್ ಆದಂತೆ ಬೀಳುವುದು ಕಷ್ಟವಾಗಲಿಲ್ಲ. ಮತಿಗೇಡಿ ಮರ್ಯಾ ನಮ್ಮ ಅಭಿನಯವನ್ನು ನಂಬಿ ಅರಮನೆಗೆ ಹೊತ್ತು ತಂದನು. ಆದರೆ ದುಷ್ಟ ಹೊಲೆಯನ ಮಾತಿಗೆ ಮರುಳಾಗಿ ನಾವಾಗಲೇ ಅರಮನೆಯನ್ನು ಬರೆದುಕೊಟ್ಟಾಗಿತ್ತು. ಅಂತೂ ನೀವು ನಿಮ್ಮ ಸಂಚಿನಲ್ಲಿ ಯಶಸ್ವಿಯಾದಿರಿ. ಅರಮನೆ ನಿಮ್ಮದಾಯಿತು.

ಚಂದ್ರ ಬಿಸಿಯಾಗಬಹುದು, ಸೂರ್ಯ ತಂಪಾಗಬಹುದು, ಸಮುದ್ರ ಬತ್ತಬಹುದು ಆದರೆ ನಿಮ್ಮಂಥ ಹಾದರಗಿತ್ತಿಯಿಂದ ಜಗತ್ತಿಗೆ ಸುಖವಿಲ್ಲವೆಂದು ಭಾರತ ಸಂಜಾತರಿಗೆ ಸಾರಿ ಸಾರಿ ಕರಮುಗಿದು ನಾವು ಹೇಳುತ್ತೇವೆ, ಮತ್ತು ನೀವೇ ನಮ್ಮನ್ನು ಕೈಯಾರೆ ಕೊಂದಿರೆಂದು ಜಗನ್ನಿಯಾಮಕಳಾದ ಕುಮುದವ್ವ ತಾಯಿಯ ಮುಂದೆ ಜವಾಬುಕೊಡುತ್ತೇನೆ. ನಿಮ್ಮಲ್ಲಿ ಕೊಂಚವಾದರೂ ಮನುಷ್ಯತ್ವವಿದ್ದರೆ  ನಮ್ಮನ್ನು ನೀವೇ ಕೈಯಾರೆ ಕೊಂದೆವೆಂದು ಕೋರ್ಟಿನಲ್ಲಿ ಜವಾಬು ಹೇಳಿ ಜೈಲಿಗೆ ಹೋಗಬೇಕೆಂದು ನಮ್ಮ ಅಂತಿಮ ಆಸೆ.

ಇಂತೀ ವಿದ್ವಜ್ಜನ ವಿಧೇಯ,

ಸರಗಂ ದೇಸಾಯಿ.

ಪತ್ರ ಓದಿ ಮತ್ತೆ ಶೀನಿಂಗವ್ವನ ಕೈಗೇ ಕೊಟ್ಟೆ. ಅನ್ಯಾಯವೆಂದರೆ ಹೀಗೂ ಇರುವುದುಂಟೆ ಎಂಬಂತೆ ಮುದುಕಿ ಮಳಮಳ ನನ್ನ ಮುಖವನ್ನೇ ನೋಡುತ್ತಿದ್ದಳು. ಆದರೆ ನನ್ನ ದಿಗಿಲು ಬೇರೆ ಇತ್ತು. ಕೊನೇ ದಿನ ದೊರೆಸಾನಿಯೇ ಕೊಲ್ಲಾಪುರ ಮಹಾರಾಜನ ಸೊಳೆಯೆಂಬಂತೆ ಮೈ ತೋರಿದ್ದನ್ನು ಓದು ಘನವಾದ ಆಶ್ಚರ್ಯವಾಗಿತ್ತು. ದಂಗುಬಡಿದು ಕೂತಿದ್ದೆ. ಶಿರಸೈಲ ಮುದುಕಿಗೆ,

“ಮುಂದೇನಾಯ್ತು?” ಎಂದು ಕೇಳಿದೆ.

“ಆಯಿತಲ್ಲಪ್ಪ, ತಾಯಿ ಅಂದೇ ಹೋದ್ಲು” ಎಂದು ಹೇಳಿ ಮುದುಕಿ ಅಳತೊಡಗಿದಳು. ವಿವರವಾಗಿ ನಾವೇನೂ ಕೇಳಿದರೂ ಈಗಷ್ಟೇ ಇದೇ ಬಾಗಿಲಿನಿಂದ ಹೋದಳೆಂಬಂತೆ ತೊಲೆ ಬಾಗಿಲ ಕಡೆ ಕೈತೋರಿಸಿ, “ಹೋದ್ಲು ಹೊಂಟೋದ್ಲು. ತಿರಿಗಿ ಬರsಲಿಲ್ಲ!” ಎಂದು ಮತ್ತೆ ಮತ್ತೆ ಅದನ್ನೇ ಹೇಳುತ್ತ ಅಳತೊಡಗಿದಳು. ಅತ್ತು ಹಗುರಾಗಲೆಂದು ಸುಮ್ಮನಾದೆವು. ಆ ದಿನ ಮುದುಕಿ ಕಥೆ ಮೂಡಿಗೆ ಬರಲೇ ಇಲ್ಲ.

ಮಾರನೇ ದಿನ ಸರಿಹೋದಾಳೆಂದರೆ ಆಗಲೂ ಅಷ್ಟೆ. ಆ ಘಟನೆಯ ಬಗ್ಗೆ ಕೇಳಿದೊಡನೆ ಅಳುತ್ತಿದ್ದಳು. ಹೆಚ್ಚಾಗಿಯೇ ಸಂದಾಯವಾದ ಹರಕೆಯಿಂದ ಏನೂ ಉಪಯೋಗವಾಗಲಿಲ್ಲ. ಆ ಘಟನೆ ನೆನಪಾದರೆ ಕಣ್ಣಿಗೆ ಕಟ್ಟುತ್ತಿದ್ದಿತೆಂದು ತೋರುತ್ತದೆ; ಅದನ್ನು ನೆನೆದಾಗೆಲ್ಲ ಕಂಠ ಗದ್ಗದವಾಗಿ, ಮಾತು ನಿಂತು, ಕಣ್ಣೀರು ಬಳಬಳ ಸುರಿಯುತ್ತಿತ್ತು. ತುಂಡು ತುಂಡು ಮಾತುಗಳಲ್ಲೇ ಕಥೆಯ ವಿವರ ತಿಳಿದೆವೇ ಹೊರತು, ಮೊದಲು ಎಷ್ಟೊಂದು ಉತ್ಕೃಷ್ಟವಾಗಿ ಹೇಳಿದ್ದಳಲ್ಲ, ಹಾಗೆ ಹೇಳಲೇ ಇಲ್ಲ. ಅವಳ ತುಂಡು ವಾಕ್ಯಗಳಿಂದ ತಿಳಿದದಿಷ್ಟು:

ಹಾಸಿಗೆಯ ಮೇಲಿನ ಈ ಪತ್ರವನ್ನು ಸಿಂಗಾರೆವ್ವ ದೊರೆಸಾನಿ ಓದಿದಳು. ಓದಿ ಹಾಗೇ ಕಂಬಕ್ಕೊರಗಿ ಕೂತಳು. ಅಳಲಿಲ್ಲ, ಪತ್ರದಲ್ಲೇನಿದೆಯೆಂದು ಇವರ್ಯಾರಿಗೂ ಹೇಳಲಿಲ್ಲ. ಮಾತಾಡಿಸಿದರೆ ಮಾತಾಡಲಿಲ್ಲ. ಕಣ್ಣು ಪಿಳುಕಿಸಲಿಲ್ಲ. ಜೀವ ಹೋಯಿತೇನೋ ಎಂದು ಗಾಬರಿಯಾಗಿದ್ದರು. ಆದರೆ ಜೀವಂತವಾಗಿದ್ದಳು. ಅವಳನ್ನು ನೋಡಿ ಇವರೂ ಸ್ತಂಭೀಭೂತರಾದರು.

ಮುಂದೆ ಜನ ಬಂದರು. ಆದರೂ ಅವಳು ಅಲುಗಲಿಲ್ಲ. ಮಧ್ಯಾಹ್ನ ಪೊಲೀಸ್ ಪೋಜುದಾರರೂ ಬಂದರು. ಆಗ ಮಾತ್ರ ದಿಗ್ಗನೆ ಎದ್ದಳು. ಮುಖ ನಿರ್ಭಾವವಾಗಿತ್ತು. ಮಾತಿಲ್ಲದೆ ಸಭೆಯಲ್ಲೇ ನಡುಪಟ್ಟಿ ಬಿಚ್ಚಿ, ಶೀನಿಂಗವ್ವನ ಕೈಗೆ ಕೊಟ್ಟಳು. ಹಾಗೆಯೇ ಆ ಪತ್ರವನ್ನೂ ಕೂಡ ಗಂಭೀರವಾಗಿ ಪೋಜುದಾರರ ಮುಂದೆ ಹೋಗಿ ನಿಂತು ದೇಸಾಯಿಯನ್ನು ತಾನೇ ಕೊಂದುದಾಗಿ ಒಪ್ಪಿಕೊಂಡಳು. ಸುಳ್ಳು ಹೇಳುತ್ತಿದ್ದಾಳೆಂದು ಶೀನಿಂಗವ್ವ, ಮರೆಪ್ಪ ಕೂಗಾಡಿದರು. ಇವಳು ಕೇಳಲಿಲ್ಲ. ನಿರ್ಲಿಪ್ತವಾಗಿ ಮತ್ತೆ ಮತ್ತೆ ಅದೇ ಮಾತನ್ನು ಹೇಳಿದಳು. ಹೇಳಿ, ಪೊಲೀಸ್ ಪೋಜುದಾರರೊಂದಿಗೆ ಜೇಲಿಗೆ ಹೊರಟುನಿಂತಳು.

ಅರಮನೆಯ ತುಂಬ ಜನ ಕಿಕ್ಕಿರಿದಿದ್ದರು. ಬೆಳಿಗ್ಗೆ ಪತ್ರ ಓದಿದಾಗ ಅವಳ ಮುಖಭಾವ ಇತ್ತಲ್ಲ, ಅದನ್ನು ಕೊನೇತನಕ ಬದಲಿಸಲಿಲ್ಲ. ಜನರ ಎದುರಿನಲ್ಲಿ ಅಂಜಲಿಲ್ಲ, ಅಳುಕಲಿಲ್ಲ, ಹ್ಯಾಗಿದ್ದಾಳೋ ಹಾಗೆ ನೆಟ್ಟಗೆ ಸೆಟೆದುಕೊಂಡೇ ನಡೆದಳು. ಶೀನಿಂಗವ್ವ ಮತ್ತು ಮರೆಪ್ಪ ದಿಗೂಢರಾಗಿ ಕೈಕಾಲು ಬಿದ್ದು ಅವಳ ಮನಸ್ಸನ್ನು ಪರಿವರ್ತಿಸಲು ಕರುಣೆ ಬರುವ ಹಾಗೆ ಕಿರುಚಾಡುತ್ತಿದ್ದರು. ಮುಂದೆ ಮುಂದೆ ಹೋದ ಹಾಗೆ ಶೀನಿಂಗವ್ವ ಎದೆಎದೆ ಬಡಿದುಕೊಂಡು ಅತ್ತಳು. ದೊರೆಸಾನಿ ಇದ್ಯಾವುದನ್ನೂ ಗಮನಿಸಲೇ ಇಲ್ಲ. ತೊಲೆಬಾಗಿಲು ದಾಟಿ ಅರಮನೆ ಕಡೆಗೊಮ್ಮೆ ತಿರುಗಿದಳು. ಬಗ್ಗಿ ಹೊಸ್ತಿಲಿಗೆ ನಮಸ್ಕರಿಸಿದಳು. ಎರಡೂ ಕೈ ಮ್ಯಾಲೆತ್ತಿ ಮುಗಿದು, ಮುಗಿದ ಕೈ ತಲೆಯಮೇಲಿಟ್ಟುಕೊಂಡು ಅರಮನೆಗೆ ಅಲ್ಲಿಂದಲೇ ಶರಣೆಂದಳು. ಆಗ ಮಾತ್ರ ಕಣ್ಣಲ್ಲಿ ನೀರು ತುಂಬಿತ್ತಂತೆ. ಅಲ್ಲಿ ನಿಲ್ಲದೆ ಥಟ್ಟನೆ ಹೋಗಿ ಜೀಪು ಹತ್ತಿದಳಂತೆ.

“ಹೋದ್ಲಪ್ಪ ಮಗಾ ಹೊಂಟೋದ್ಲು!”

ಜೇಲಿನಲ್ಲಿದ್ದ ಅವಳನ್ನು ಬಿಡಿಸಿಕೊಂಡು ಬರುವುದು ಸಾಧ್ಯವಿತ್ತಂತೆ. ಮರೆಪ್ಪ ಅದಕ್ಕಾಗಿ ಯತ್ನ ಮಾಡಿದ್ದ. ಆದರೆ ಅರಮನೆಯಲ್ಲಿ ತಿರುಗಿ ಕಾಲಿಡಲು ಅವಳೇ ಒಪ್ಪಲಿಲ್ಲ. ಜೇಲಿನಲ್ಲೇ ಗಂಡುಮಗನನ್ನು ಹೆತ್ತು ಅಷ್ಟಕ್ಕಾಗಿಯೇ ಕಾಯುತ್ತಿದ್ದಳೋ ಎನ್ನುವಂತೆ ಹೆರಿಗೆಯಲ್ಲೇ ಸತ್ತಳು. ಆ ಗಂಡುಮಗನೇ ನಮ್ಮ ರವಿಚಂದ್ರ. ಅರಮನೆಯ ಈಗಿನ ವಾರಸುದಾರ.

ಮುಂದೆ ಮರೆಪ್ಪನ ವಿಚಾರವೇನಾಯಿತೆಂದು, ಅದನ್ನಾದರೂ ತುಸು ವಿವರವಾಗಿ ಹೇಳೆಂದು ಮುದುಕಿಯನ್ನು ಪೀಡಿಸಿದೆವು. ಸಿಂಗಾರೆವ್ವನ ಸಾವಿನಿಂದಲೇ ಕಥೆ ಮುಗಿಯಿತೆಂದು ಅವಳ ಅಭಿಪ್ರಾಯ. ನಾವು ಪೀಡಿಸಿದಾಗ ಮರೆಪ್ಪನ ವಿಚಾರವನ್ನೂ ಸಂಕ್ಷಿಪ್ತವಾಗೇ ಮುಗಿಸಿಬಿಟ್ಟಳು.

“ಆಕೆ ಸತ್ತ ಮೂರು ದಿನಕ್ಕೇ ಅವನೂ ಸತ್ತ. ಅಷ್ಟು ದಿನವೂ ಆತ ಉಣ್ಣಲಿಲ್ಲ, ತಿನ್ನಲಿಲ್ಲ, ಯಾರ ಜೊತೆ ಮಾತಾಡಲಿಲ್ಲ, ನೋಡಿದ್ದನ್ನೇ ನೋಡುತ್ತ, ಕೂತಲ್ಲೇ ಕೂರುತ್ತಿದ್ದ. ಆತ ಕೂತದ್ದು ಆಕಾ ಆ ಪತ್ರಿಗಿಡಕ್ಕೆ ಆಧಾರವಾಗಿ. ಹಗಲೂ ರಾತ್ರಿ ಅಲ್ಲಿಂದ ಅಲುಗಿರಲಿಲ್ಲ ಎಂದರೆ ಅವನೇನಾಗಿದ್ದ ಎಂದು ನೀನೇ ತಿಳಿದುಕೊ. ನನಗಾದರೆ ಉಡಿಯಲ್ಲಿ ಕೂಸಿತ್ತು. ಅಷ್ಟರಲ್ಲಿ “ಏ ಏ ಏ” ಎಂದು ಮರೆಪ್ಪ ಕೂಗಿದ್ದು ಕೇಳಿಸಿತು. ಬಹುಶಃ ನನ್ನನ್ನೇ ಕರೆದನೇನೋ ಅಂದುಕೊಂಡು ಹೊರಗೆ ಬಂದೆ. ಪಟಾಂಗಳದಲ್ಲಿ ಹೆಡೆತೆಗೆದ ಹಾವು ಮಿಂಚಿನ ಹಾಗೆ ಅತ್ತಿತ್ತ ಹರಿದಾಡುತ್ತಿತ್ತು. ಈತ ಅದರ ಬೆನ್ನುಹತ್ತಿ ಹಿಡಿಯುವುದಕ್ಕೆ ಹೋದನೆ! ಇವನನ್ನು ಕಂಡೊಡನೆ ಅದು ತೊಲೆಬಾಗಿಲ ಕಡೆ ಓಡತೊಡಗಿತು. ಇವ ಬಿಡಲಿಲ್ಲ, ಓಡಿ ಹೋಗಿ ಹಿಡಿದುಕೊಂಡೇ ಬಿಟ್ಟ. “ಮರೆಪ್ಪಾ ಮರೆಪ್ಪಾ ಎನೊ ಇದು?” ಎಂದು ನಾನು ಕೂಗಿ ದೂರ ಬಂದು ನಿಂತೆ, ಅವನಿಗೆ ನನ್ನ ಮಾತು ಕೇಳಲಿಲ್ಲ. “ಹಾವು ಕಡಿತೈತಿ ಬಿಟ್ಟಬಿಡೋ” ಎಂದು ಕೂಗಿದೆ. “ಸಿಂಗಾರೀ ಸಿಂಗಾರೀ” ಎಂದು ಅದನ್ನು ಕೈಗೆ ಸುತ್ತಿಕೊಂಡು ಆಟವಾಡತೊಡಗಿದ! ಹಾವು ಕೇಳಿತೇ? ಅವಕಾಶ ಸಿಕ್ಕೊಡನೆ ಎಲ್ಲೆಂದರಲ್ಲಿ ಕಚ್ಚಿ ಹರಿದು ಹೋಯಿತು. ಆಗಲೂ ನಾನು “ಮರೆಪ್ಪಾ ಮರೆಪ್ಪಾ!” ಎಂದು ಕಿರುಚುತ್ತಿದ್ದೆ. ಅವನಿಗೆ ಅರಿವಿದ್ದರಲ್ಲವೆ? ಅಲ್ಲೇ ಬೆಳ್ದಿಂಗಳಲ್ಲೇ ಬರುಗು ಕಾರುತ್ತ ಬಿದ್ದು ಸತ್ತ. ನನಗಿನ್ನೂ ನೆನಪಿದೆ. ಸಾಯುವ ಮುನ್ನ ಆತ ಇನ್ನೊಮ್ಮೆ “ಸಿಂಗಾರೀ!” ಅಂದ.

“ಪುಣ್ಯವಂತರೆಲ್ಲಾ ಸತ್ತರಪ್ಪಾ : ಇಕಾ ನೋಡು, ನಾನೊಬ್ಬಳು ಪಾಪಿ, ಇನ್ನೂ ಬದುಕಿದ್ದೇನೆ!”

– ಎಂದು ಹೇಳಿ ಶೀನಿಂಗವ್ವ ಕಥೆ ಮುಗಿಸಿದಳು. ಆಕೆ ಬದುಕಿದ್ದು ನನ್ನ ಪುಣ್ಯ ಎಂದುಕೊಂಡೆ.

ಮಾರನೇ ದಿನ ರವಿಚಂದ್ರನಿಂದ ನನಗೆ ಕಾಗದಬಂತು. ದೊಡ್ಡಮನಸ್ಸು ಮಾಡಿ ಅರಮನೆಯನ್ನು ಹೈಸ್ಕೂಲಿಗೆ ದಾನ ಮಾಡುವುದಾಗಿ ಬರೆದಿದ್ದ. ಕಥೆ ಕೇಳಿ ಖಿನ್ನನಾಗಿದ್ದವನು ರವಿಚಂದ್ರನ ಪತ್ರ ಓದಿ ಸಂತೋಷಗೊಂಡೆ. ಅರಮನೆಯ ಯಾವುದೇ ವಿವರಗಳನ್ನು ಬದಲಿಸದೆ ಹೈಸ್ಕೂಲಿಗಾಗಿ ಉಪಯೋಗಿಸುವಂತೆ ಬರೆದಿದ್ದ. ನಮ್ಮೂರ ಹಿರಿಯರನ್ನು ಕರೆದು, ರವಿಚಂದ್ರ ಹೇಳಿದ್ದ ಸೂಚನೆಗಳನ್ನು ಹೇಳಿ ಪತ್ರ ಅವರ ಕೈಗಿತ್ತೆ. ಅವರೆಲ್ಲ ಬಹಳ ಸಂತೋಷಪಟ್ಟರು. ಹೈಸ್ಕೂಲಿಗೆ ದೊರೆಸಾನಿಯ ಹೆಸರಿಡುವುದಾಗಿಯೂ ಹೇಳಿದರು. ಆ ದಿನ ಶೀನಿಂಗವ್ವನಿಗೆ ಆಯಾರು ಮಾಡಿ ಮಾರನೇ ದಿನ ಬೆಂಗಳೂರಿಗೆ ಹೊರಟೆ. ಬಸ್ಸಿನಲ್ಲಿ ಅಂದುಕೊಂಡೆ. ಈಗ ಸಿಂಗಾರೆವ್ವನ ಆತ್ಮಕ್ಕೆ ದಿವ್ಯಶಾಂತಿ ಸಿಕ್ಕುತ್ತದೆ. ಇನ್ನು ಮೇಲೆ ಅರಮನೆ ಎಲ್ಲ ವಯಸ್ಸಿನ ಮಕ್ಕಳ ನಗು, ಕೇಕೆ, ಚೇಷ್ಟೆಗಳಿಂದ ತುಂಬುತ್ತದೆ. ಕಂಬಕ್ಕೆ ಒಂದೇನು ಹತ್ತು ಮಕ್ಕಳು ಮುತ್ತಿ ಮಾತಾಡಿಸುತ್ತವೆ. ಅವೆಲ್ಲ ಮಕ್ಕಳನ್ನು ಸಿಂಗಾರೆವ್ವನ ಆತ್ಮ ಹರಸುತ್ತದೆ!

* * *