“ನಂದಗಾವಿಗೆ ಪಂಡರೀಗೌಡನ ಒಡೆತನ. ಗೌಡ ದಪ್ಪ ಹೊಟ್ಟಿಯ ಅಷ್ಟೇನೂ ಎತ್ತರವಲ್ಲದ ಆಸಾಮಿ. ಪುಟ್ಟ ಕಾಲುಗಳು, ಬೊಜ್ಜು ತುಂಬಿಕೊಂಡು ಬೆವರು ಸುರಿಸುವ ಕೈ, ಕೊರೆದಂತಿರುವ ಮೀಸೆ; ಅವನ ಚಿಕ್ಕ ಚಂಚಲ ಕಣ್ಣು ಬಹಳ ಹೊತ್ತು ಒಂದು ವಸ್ತುವಿನ ಮೇಲೆ ಕೂರುತ್ತಲೇ ಇರಲಿಲ್ಲ. ಅವನು ಯಾವಾಗಲೂ ವಿಚಾರ ಮಾಡುತ್ತಿದ್ದುದ್ದು ಒಂದೇ: ಯಾರ ಬಳಿ ತುಪ್ಪ ಇದೆ; ಮತ್ತು ಆ ತುಪ್ಪದಲ್ಲಿ ತನ್ನ ರೊಟ್ಟಿ ಹ್ಯಾಗೆ ಜಾರಿ ಬೀಳಬೇಕು? ಹಾಗೆ ಜಾರಿ ಬೀಳದಿದ್ದರೆ ಆ ತುಪ್ಪವನ್ನು ಹ್ಯಾಗೆ ಅಪಹರಿಸಬೇಕು? – ಅದೊಮ್ಮೆ ಗೊತ್ತಾದರಾಯ್ತು, ಕಾರ್ಯೋನ್ಮುಖನಾಗುತ್ತಿದ್ದ, ಅವನೊಮ್ಮೆ ಕಾರ್ಯೋನ್ಮುಖನಾದರಾಯ್ತು, ಖಂಡಿತ ಅದರಲ್ಲಿ ಯಶಸ್ಸು ಗಳಿಸುತ್ತಿದ್ದ. ಅದಕ್ಕೇ ಅವನು ತನ್ನ ಅದೃಷ್ಟದಲ್ಲಿ ಭಾರೀ ನಂಬಿಕೆಯಿಟ್ಟಿದ್ದ. ತನಗೆ ಹೃದಯ ಕೂಡ ಇದೆಯೆಂದು ತೋರಿಸುವುದಕ್ಕೆ ಬೇರೆಯವರೊಂದಿಗೆ ಮುದುಕಿಯರ ಥರ ಹರಟುತ್ತಿದ್ದ. ಬೇರೆಯವರು ತಮ್ಮ ಮನಸ್ಸಿನೊಳಗಿರೋದನ್ನ ನಿಸ್ಸಂಕೋಚವಾಗಿ ಹೇಳುವಂತೆ ಮಾಡುತ್ತಿದ್ದ. ಆದರೆ ಸ್ವಂತದ ವಿಚಾರವೊಂದನ್ನೂ ಹೊರಗೆಡವುತ್ತಿರಲಿಲ್ಲ. ಹೊಂಚುತ್ತ ಅವರು ಹೇಳಿದನ್ನೆಲ್ಲ ಆಸಕ್ತಿಯಿಂದ ಕೇಳುತ್ತ ಕೂರುತ್ತಿದ್ದ. ಇಷ್ಟೆಲ್ಲಾ ಸದ್ಗುಣಗಳಿದ್ದಾಗ್ಯೂ ಮಾತಾಡುವವರಿಗೆ ಮಾತಿನ ಅಂತ್ಯದಲ್ಲಿ ಅವನೊಂದಿಗೆ ಮಾತಾಡಿದ್ದಕ್ಕೆ ಪಶ್ಚಾತ್ತಾಪವಾಗುತ್ತಿತ್ತು. ಅದಕ್ಕೇ ಜನ ಅವನನ್ನು ಹಚ್ಚಿಕೊಳ್ಳುತ್ತಿರಲಿಲ್ಲ. ಇವನೂ ಜನರನ್ನು ಪ್ರೀತಿಸಿದವನಲ್ಲ; ಆದರೆ ಅಧಿಕಾರವಿತ್ತಲ್ಲ, ಜನ ಹೆದರುತ್ತಿದ್ದರು; ಕುತಂತ್ರಿಯಾದ ಬೇಟೆಗಾರನಿಗೆ ಪ್ರಾಣಿಗಳು ಹೆದರುವ ಹಾಗೆ. ಇಷ್ಟು ತಿಳಿಯಪ್ಪ; ನರಮನುಷ್ಯನಿಗೆ ಹಣಬೇಕು, ಆಸ್ತಿಬೇಕು ಮತ್ತು ಅದಕ್ಕಾಗಿ ಎಂಥ ಹೀನ ಕೆಲಸ ಮಾಡಿದರೂ ಕೊಂದರೂ ತಪ್ಪಿಲ್ಲ ಎನ್ನುವುದು ಆತ ಒಳಗೊಳಗೇ ನಂಬಿದ ಸಿದ್ಧಾಂತವಾಗಿತ್ತು. ಗೌಡನಾದ್ದರಿಂದ ಊರಿನ ಹೆಚ್ಚಿನ ಜಮೀನು ಆತನದೇ. ಆದರೂ ಮನುಷ್ಯ ತೃಪ್ತಿ ಹೊಂದಿದವನೇ ಅಲ್ಲ. ಇಷ್ಟೆಲ್ಲಾ ಗಳಿಸಿದ್ದನಲ್ಲ, ಹೋಗಲಿ ಮಕ್ಕಳಾದರೂ ಇದ್ದವೇ ಎಂದರೇ ಅವೂ ಇರಲಿಲ್ಲ. ಹಾಗಂತ ಪ್ರಯತ್ನ ಬಿಡುವ ಪೈಕಿ ಅಲ್ಲ, ಒಂದರ ಮೇಲೊಂದರಂತೆ ನಾಲ್ಕು ಮದುವೆಯಾಗಿದ್ದ. ಕೊನೆಗೆ ಇಳಿವಯಸ್ಸಿನಲ್ಲಿ ಎರಡನೆಯ ನಿಂಗವ್ವಗೌಡ್ತಿಗೆ ಸಿಂಗಾರೆವ್ವ ಹುಟ್ಟಿದಳು. ಎರಡನೆಯ ಹೆಂಡತಿಯೇನೋ ಬಚಾವಾದಳು. ಉಳಿದ ಮೂವರಿಗೆ ಮಾತ್ರ ನರಕಯಾತನೆ ತಪ್ಪಲಿಲ್ಲ. ಮಕ್ಕಳನ್ನು ಹೆರಲಿಲ್ಲವಾದ್ದರಿಂದ ಅವರು ತನ್ನ ಕರ್ತವ್ಯ ನೆರವೇರಿಸಲಿಲ್ಲವೆಂದೇ ಅವನ ಅಭಿಪ್ರಾಯ. ಬರಬರುತ್ತ ಅವರು ಮೋಸ ಮಾಡಿದರೆಂದೇ ನಂಬಿ ಬಾರುಕೋಲಿನಿಂದ ಬಾರಿಸುತ್ತಿದ್ದ.

ನಾಲ್ಕೂ ಜನ ತಾಯಂದಿರ ಕಣ್ಮಣಿಯಾಗಿಯೇ ಸಿಂಗಾರೆವ್ವ ಬೆಳೆದಳು. ನಾನು ಮತ್ತು ಸಿಂಗಾರೆವ್ವ ಇಬ್ಬರೂ ತುಸು ಹೆಚ್ಚುಕಮ್ಮಿ ಓರಗೆಯವರೇ, ನಾನೂ ಅವರ ಮನೆಯಲ್ಲೇ ಬೆಳೆದವಳು. ನನ್ನ ತಾಯಿ ಗೌಡರ ಮನೆಯ ಹೆಣ್ಣಾಗಿದ್ದಳು. ಆಕೆ ನನ್ನನ್ನು ಹೆತ್ತ ಆರು  ತಿಂಗಳಲ್ಲೇ ಅಪ್ಪ ತೀರಿಕೊಂಡನಂತೆ. ಹುಟ್ಟಿದ ಒಂದು ವರ್ಷದಲ್ಲೇ ಅಪ್ಪನ್ನ ತಿಂದವಳೆಂದು ನಮ್ಮವ್ವನಿಗೆ ನನ್ನಮೇಲೆ ಭಾರೀ ಸಿಟ್ಟಿತ್ತಂತೆ. ಮುಂದೆ ಬಹಳ ದಿನ ಉಳಿಯಲಿಲ್ಲ. ಆಕೆ ಸತ್ತೊಡನೆ ಗೌಡನ ಮನೆಯೇ ನನಗೆ ಆಶ್ರಯ ಸ್ಥಾನವಾಯಿತು.

ಒಬ್ಬಳೇ ಮಗಳಾದ್ದರಿಂದ ಸಿಂಗಾರೆವ್ವನನ್ನು ಬಹಳ ಅಚ್ಚೆಯಿಂದ ಬೆಳೆಸಿದರು. ಅದೇ ವಯಸ್ಸಿನವಳಾದರೂ ನಾನು ಕೆಲಸ ಮಾಡಬೇಕಾಗುತ್ತಿತ್ತು. ನನಗೆ ಸಿಗುತ್ತಿದ್ದುದು ತಂಗಳನ್ನ, ರೊಟ್ಟಿಮಾತ್ರ. ಅವಳ ತಾಯಂದಿರಿಂದ ಆಗಾಗ ಏಟುಗಳನ್ನೂ ತಿನ್ನಬೇಕಾಗುತ್ತಿತ್ತು. ಆದರೆ ಸಿಂಗಾರೆವ್ವನ ಗೆಳೆತನದ ಮುಂದೆ ನನಗೆ ಅದೆಲ್ಲ ಹಗುರವಾಗೇ ಕಾಣುತ್ತಿತ್ತು. ಅಪರೂಪದ ತಿಂಡಿಗಳನ್ನು ಆಕೆ ತಾಯಂದಿರ ಕಣ್ಣು ತಪ್ಪಿಸಿ ನನಗೂ ಕೊಡುತ್ತಿದ್ದಳು. ಆಸುಪಾಸು ಅವರಿಲ್ಲದಿದ್ದರೆ ಕೆಲಸಕ್ಕೂ ನೆರವಾಗುತ್ತಿದ್ದಳು. ಆಕೆ ಗೌಡನ ಮಗಳಾದ್ದರಿಂದ ಮನೆಬಿಟ್ಟು ಹೊರಗೆ ಹೋಗುವಂತಿರಲಿಲ್ಲ. ನಾನು ಮಾತ್ರ ಊರತುಂಬ ಅಡ್ಡಾಡುತ್ತಿದ್ದೆ. ಹೊಲಕ್ಕೂ ಹೋಗುತ್ತಿದ್ದೆ. ಜನರನ್ನು ನೋಡುತ್ತಿದ್ದೆ. ಮಾತಾಡುತ್ತಿದ್ದೆ, ಎಷ್ಟೇಷ್ಟೋ ಕಥೆ ಕೇಳಿಕೊಂಡು ಬಂದು ಅವನ್ನೆಲ್ಲ ಸಿಂಗಾರೆವ್ವನಿಗೆ ಹೇಳಿ ಖುಷಿಪಡಿಸುತ್ತಿದ್ದೆ. ಅವಳು ಒಮ್ಮೊಮ್ಮೆ ಹಟಮಾಡಿ ನಾನೂ ಅವಳ ಹಾಸಿಕೆಯಲ್ಲಿ ಮಲಗುವಂತೆ ಮಾಡುತ್ತಿದ್ದಳು. ಇದನ್ನು ನೋಡಿ ಗೌಡನೊಮ್ಮೆ ನನ್ನ ಬೆನ್ನು ಬಾರಿಸಿದ ಮೇಲೆ ನಾನು ಅವಳ ಜೊತೆ ಮಲಗುವುದನ್ನು ನಿಲ್ಲಿಸಬೇಕಾಯಿತು.

ಅವಳ ತಂದೆ ಎಷ್ಟು ಒರಟನೋ ಸಿಂಗಾರೆವ್ವ ಅಷ್ಟು ಮೃದು. ಅವಳ ಮನಸ್ಸು ಹೂವಿನ ಹಾಗೆ, ಯಾರೊಬ್ಬರು ಮುಖ ಕೆಳಗೆ ಹಾಕಿದರೂ ಮುದುಡುವಾಕಿ. ಇನ್ನು ಕಣ್ಣೀರು ಕಂಡರಂತೂ ಚಡಪಡಿಸುತ್ತಿದ್ದಳು. ನೀನು ಸಿಂಗಾರೆವ್ವನನ್ನು ನೋಡಿಲ್ಲ, ಅಲ್ಲ? ಥೇಟ್ ರತಿದೇವಿಯ ಹಾಂಗಿದ್ದಳು. ಕೊರೆದಿಟ್ಟಂಥ ಹುಬ್ಬು, ನೀಳವಾದ ಮೂಗು, ತೆಳುವಾದ ಇಷ್ಟಿಷ್ಟೆ ತುಟಿ, ಆ ಗದ್ದ ಕೂಡ ಎಷ್ಟು ಚೆಂದಾಗಿತ್ತು! ಸದಾಕಾಲ ಹೊಚ್ಚಹೊಸ ಚೆಲವು ಅವಳ ಮುಖದಲ್ಲಿ ಚಿಮ್ಮುತ್ತಿತ್ತು. ಆ ಬಟ್ಟಲಗಣ್ಣುಗಳೋ ಮುಗ್ಧವಾಗಿ ನೀಲಿಮಣಿ ಇಲ್ಲವೆ ವಜ್ರದ ಹಾಗೆ ಹೊಳೆಯುತ್ತಿದ್ದವು. ಅತ್ಯಂತ ಆಕರ್ಷಕವಾದ ಮೋಹಕವಾದ ರೂಪಲಾವಣ್ಯಗಳಿದ್ದವು ಆಕೆಗೆ. ಆಕೆ ನಕ್ಕರೆ ಅವಳನ್ನೇ ನೋಡಬೇಕೆನಿಸುತ್ತಿತ್ತು. ಅಂಥ ಮಾದಕ ನಗೆ.

ಯಾವಾಗಲೂ ಏನಾದರೂ ಮಾಡುವುದು, ಆಡುವುದು, ಹಾಡುವುದು, ನಗುವುದು, ಇಲ್ಲಾ ಕೀಟಲೆ ಮಾಡುವುದು ಅವಳ ಸ್ವಭಾವ. ಎದುರಿಗೆ ಏನು ಕಂಡರೂ ಹಿಗ್ಗುತ್ತಿದ್ದಳು. ಕೋಗಿಲೆಯ ದನಿ ಕೇಳುವುದೆಂದರೆ ಅವಳಿಗಿನ್ನೂ ಹಿಗ್ಗು, ಸುಗ್ಗಿ ಮುಗಿಯುತ್ತಿದ್ದಂತೆ ಅದು ಪಕ್ಕದ ತೋಟದಲ್ಲಿ ಕೂಗುತ್ತಿದ್ದಿತಲ್ಲ, ಅದನ್ನು ತಾನು ಮೊದಲು ಕೇಳಬೇಕೆಂದು ಅವಳಾಸೆ, ಹಾಗೇನಾದರೂ ಅದು ತನಗೇ ಮೊದಲು ಕೇಳಿದರೆ ಅವಳಿಗೆ ಆನಂದವಾಗುತ್ತಿತ್ತು. ಕುಣಿದಾಡಿ ಅದನ್ನು ಮತ್ತೆ ಮತ್ತೆ ನನ್ನ ಮುಂದೆ ಹೇಳುತ್ತಿದ್ದಳು. ಅವಳ ಹತ್ತಿರ ಎಷ್ಟು ಹೊತ್ತಿದ್ದರೂ, ಅವಳು ಕೀಟಲೆ ಮಾಡಿದರೂ ಅವಳ ಸಹವಾಸ ಸಾಕೆನಿಸುತ್ತಿರಲಿಲ್ಲ. ಯಾಕೆಂದರೆ ಅವಳ ಹೃದಯ ಅಷ್ಟು ಪರಿಶುದ್ಧವಾದುದು. ಈಗ ಕೀಟಲೆ ಮಾಡಿ ನನ್ನನ್ನು ಅಳಿಸಿದರೆ ಮರುಕ್ಷಣದಲ್ಲೇ ನನ್ನನ್ನು ನಗಿಸಿ ನಾನೇ ಅವಳನ್ನು ಮಾತಾಡಿಸುವ ಹಾಗೆ ಮಾಡುತ್ತಿದ್ದಳು. ನನಗೆ ಸ್ವಲ್ಪ ಬಿಡುವು ಸಿಕ್ಕರೂ ಸಾಕು ಅವಳೊಂದಿಗೆ ಆಟಕ್ಕೆ ನಿಲ್ಲುತ್ತಿದ್ದೆ. ಆ ಆಟಗಳಾದರೋ ಬರೀ ಗಂಡ – ಹೆಂಡತಿಯರ ಆಟ; ಪ್ರತಿ ಆಟದಲ್ಲೂ ನಾನು ಗಂಡ, ಅವಳು ಹೆಂಡತಿ. ಆದರೆ ಅವರಪ್ಪನ ಹಾಗೆ ನಾನು ಹೆಂಡತಿಯನ್ನು ಹೊಡೆದು ಹೆದರಿಸುವಂತಿರಲಿಲ್ಲ; ಆಕೆ ಹೇಳಿದ ಹಾಗೆ ಕೇಳಬೇಕಿತ್ತಷ್ಟೆ. ಆಶ್ಚರ್ಯವೆಂದರೆ ಆ ಆಟದಲ್ಲಿ ಅವಳು ಗೌಡ್ತಿಯಾಗುತ್ತಿದ್ದಳಲ್ಲ. ಅವಳ ಮನೆತುಂಬ ಮಕ್ಕಳು. ಸದಾ ಒಂದು ಅಳುವ ಕೂಸನ್ನು ಬಗಲಲ್ಲಿ ಹಿಡಿದುಕೊಂಡೋ, ಅದನ್ನು ಮಲಗಿಸುತ್ತಲೋ, ಅದಕ್ಕೆ ಮೊಲೆಯೂಡಿಸುತ್ತಲೋ ಇರುತ್ತಿದ್ದಳು. ನಾನು ಗಂಡ ತೋಟದಿಂದ ಬಂದರೆ ಬೇರೆ ಮಾತೇ ಇಲ್ಲ. ಸಂಪಿಗೆ (ಅವಳ ಹಿರಿಯ ಮಗಳು) ಹಾಗೆ ಮಾಡಿದಳು, ಶಿವಲಿಂಗ (ಮಗ) ಹೀಗೆ ಮಾಡಿದ – ಇದೇ ಗೋಳು. ಮಕ್ಕಳ ತಕರಾರು ಮುಗಿಯುವ ಮುನ್ನವೇ ನನ್ನನ್ನು ಯಾರಾದರೂ ಗೌಡ್ತಿಯರು “ಶೀನಿಂಗೀ” ಎಂದು ಕರೆಯುತ್ತಿದ್ದರು. ನಾನು ಓಡಲೇಬೇಕಾಗುತ್ತಿತ್ತು. ಆಗ ಅವಳ ಮುಖದಲ್ಲಿ ಮೂಡುವ ನಿರಾಸೆಯನ್ನು ನೋಡಲಾಗುತ್ತಿರಲಿಲ್ಲ. ಒಂದು ದಿನ ಅವಳ ಕೂಸಿಗೆ ಜ್ವರ ಬಂದಾಗಲೇ ಗೌಡ್ತಿಯ ಕರೆ ಕೇಳಿಸಿ ಓಡಿಹೋದೆ. ಸಿಂಗಾರೆವ್ವ ಕಣ್ಣೀರಿಟ್ಟು ಅಳೋದೆ? ಅಂಥಾ ಮಿದು ಮನಸ್ಸಿನವಳು.

ಮರ್ಯಾ ಸಣ್ಣವನಿದ್ದಾಗ ನಮ್ಮಲ್ಲೇ ಚಾಕರಿಗಿದ್ದ. ಅವನಿಗೆ ನಾವಾಗ ‘ಮರ್ಯಾ ಮರ್ಯಾ’ ಎಂದೇ ಕರೆಯುತ್ತಿದ್ದೆವು. ಅವನು ಹೊಲೇರ ಪೈಕಿ. ಅದ್ಯಾಕೋ ಏನೋ, ಅಂತೂ ಗೌಡನಿಗೆ ಆ ಹುಡುಗನ್ನ ಕಂಡರೆ ಆಗುತ್ತಿರಲಿಲ್ಲ. ಆ ಹುಡುಗ ತನ್ನ ಸರಿಕನೆಂಬಂತೆ ವೈರ ಸಾಧಿಸುತ್ತಿದ್ದ. ಗೌಡನೊಬ್ಬ ಚಾಕರಿ ಆಳಿನ ಬಗ್ಗೆ, ಅದೂ ಬಾಲಕನ ಮೇಲೆ ಈ ರೀತಿ ಸೇಡು ತೀರಿಸಿಕೊಳ್ಳುವುದು ನಮಗೆ ಮೋಜಾಗಿ ಕಾಣಿಸುತ್ತಿತ್ತು. ವಿನಾಕಾರಣ ಗೌಡ ಮರ್ಯಾನನ್ನು ಒದೆಯುತ್ತಿದ್ದ. ಹೊಡೆಯುತ್ತಿದ್ದ, ಬೈಗಳಂತೂ ಸೈಯೇ. ಗೌಡ ಆ ಹುಡುಗನನ್ನು ಹೊಗಳುವುದಕ್ಕೆ ಎಷ್ಟೊಂದು ಕಾರಣಗಳಿದ್ದವು. ಹತ್ತಾಳಿನ ಕೆಲಸ ಒಬ್ಬನೇ ಮಾಡುತ್ತಿದ್ದ. ಮಾಡೋ ಕೆಲಸ ಇನ್ನೊಬ್ಬರು ಹೆಸರಿಡದ ಹಾಗೆ ಮಾಡುತ್ತಿದ್ದ. ಸಾಲದ್ದಕ್ಕೆ ಮಾಡಬೇಕಾದ ಕೆಲಸಗಳನ್ನು ತಾನೇ ಮುಂದಾಗಿ ಕಂಡು ಹೇಳಿಸಿಕೊಳ್ಳದೇ ಮಾಡುತ್ತಿದ್ದ. ಇಂಥಾ ನಿಯತ್ತಿನ ಚಾಕರ ಈಗಿರಲಿ, ಆಗಿನ ಕಾಲದಲ್ಲೂ ಸಿಗುತ್ತಿರಲಿಲ್ಲ. ಮರ್ಯಾ ಗೌಡನಿಂದ ಏಟು ತಿನ್ನುವ ದೃಶ್ಯವೂ ನಿಂತು ನೋಡುವ ಹಾಗಿರುತ್ತಿತ್ತು. ಗೌಡ ಕೋಲು, ಬಾರುಕೋಲು, ಕಾಲ್ಮರಿ – ಕೈಗೆ ಏನು ಸಿಕ್ಕರೆ ಅದರಿಂದ ಹೊಡೆಯುತ್ತಿದ್ದಲ್ಲ; ಮರ್ಯಾ ಅಲುಗುತ್ತಿರಲಿಲ್ಲ. ತನ್ನ ಮುಖದ ಚೇರಾಪಟ್ಟಿ ಬದಲಿಸುತ್ತಿರಲಿಲ್ಲ. ಉಕ್ಕಿನ ದೊಡ್ಡ ಗೊಂಬೆಯ ಹಾಗೆ, ಹ್ಯಾಗಿರುತ್ತಿದ್ದನೋ ಹಾಗೇ ನಿಂತಿರುತ್ತಿದ್ದ. ಆಗಾಗ ಆತನ ನೀಲಿಕಣ್ಣುಗಳು ಮಾತ್ರ ಗುರಿ ಹಿಡಿದು ಹೊಳೆಯುವ ಚೂರಿಯಂತಿರುತ್ತಿದ್ದವು. ಉಗುರು ಕಚ್ಚುತ್ತ ದುರುಗುಟ್ಟಿ ನೋಡುತ್ತಿದ್ದ. ಅದನ್ನು ನೋಡಿ ಗೌಡ ಇನ್ನಷ್ಟು ರೇಗುತ್ತಿದ್ದ. ರೇಗಿ ಇನ್ನಷ್ಟು ಹೊಡೆಯುತ್ತಿದ್ದ. ಇವನು ಮಾತ್ರ ಒಂದೇ ಭಂಗಿಯಲ್ಲಿ ನಿಂತಿರುತ್ತಿದ್ದ. ಗೌಡನೇ ಹೊಡೆದು ಒದ್ದು ಸುಸ್ತಾದಾಗ ಮರ್ಯಾನ ಅವ್ವನನ್ನು ಬೈಯುತ್ತ ಮರೆಯಾಗುತ್ತಿದ್ದ. ಈತ ಏನೇನೂ ಆಗದವರಂತೆ ತನ್ನ ಕೆಲಸ  ತಾನು ಮುಂದುವರಿಸುತ್ತಿದ್ದ.

ಒಂದು ದಿನ ಸಿಂಗಾರೆವ್ವ ಮತ್ತು ನಾನು ಕೊಟ್ಟಿಗೆಯಲ್ಲಿದ್ದೆವು. ಯಾಕೆಂದರೆ ನಮ್ಮ ಪ್ರೀತಿಯ ಕೆಂದಾಕಳು ಕಪಲಿ ಕರು ಹಾಕಿತ್ತು. ಅದನ್ನು ಕಂಡಂತೂ ಸಿಂಗಾರೆವ್ವನಿಗೆ ಹಿಗ್ಗಾದದ್ದು ಅಷ್ಟಿಷ್ಟಲ್ಲ. ಆ ಕರುವನ್ನು ಎಷ್ಟು ತಬ್ಬಿಕೊಂಡರೂ ತೃಪ್ತಿಯಿರಲಿಲ್ಲ. ಆಗಲೇ ಅದಕ್ಕೆ ‘ತುಳಸಿ’ ಎಂದು ಹೆಸರು ಕೂಡ ಇಟ್ಟಿದ್ದಳು. ಅದು ಮೊಲೆ ಕುಡಿಯುವಾಗಂತೂ ಅದನ್ನು ಬಿಟ್ಟು ಬೇರೆ ಕಡೆ ಹೋಗುತ್ತಲೇ ಇರಲಿಲ್ಲ. ಅದು ತಾಯಿಯ ಕೆಚ್ಚಲು ಗುದ್ದಿಗುದ್ದಿ ಮೊಲೆ ಕುಡಿಯುವಾಗ ಬಿಟ್ಟ ಕಣ್ಣಿನಿಂದ ಅದನ್ನೇ ನೋಡುತ್ತ ಕೂತಿದ್ದರೆ ಕೂತೇ, ನಿಂತಿದ್ದರೆ ನಿಂತೇಬಿಡುತ್ತಿದ್ದಳು. ಆಗ ಕಪಲಿಯೇನಾದರೂ ಬಾಲ ಅಲುಗಿಸಿದರೆ, ಒದ್ದರೆ ಇವಳಿಗೆ ಭಾರಿ ಸಿಟ್ಟು. “ಥೂ ಹಾಂಗ ಮಾಡಬಾರದು” ಎಂದು ಗದರಿಸಿ ಹತ್ತು ಹಡೆದ ತಾಯೊಬ್ಬಳು ಚೊಚ್ಚಿಲ ಬಾಣಂತಿಗೆ ಬುದ್ಧಿ ಹೇಳುವಂತೆ ಹೇಳುತ್ತಿದ್ದಳು. ಒಂದು ಮಧ್ಯಾಹ್ನವಂತೂ ಮಲಗಿದ್ದ ಆ ಕರುವನ್ನು ತನ್ನ ತೊಡೆಯ ಮೇಲೆ ಮಲಗುವಂತೆ ಹಾಕಿಕೊಳ್ಳ ಹೋಗಿ ಬಿದ್ದು ಅದರ ಕೆಳಗೆ ಸಿಕ್ಕು ಒದ್ದಾಡಿದ್ದಳು.

ಒಂದು ದಿನ ಬೆಳಿಗ್ಗೆ ಎದ್ದವಳೇ ಸಿಂಗಾರೆವ್ವ ಕೊಟ್ಟಿಗೆಗೆ ಬಂದಿದ್ದಳು. ಅವಳೊಂದಿಗೆ ನಾನೂ. ಮಲಗಿದ್ದ ಕರುವನ್ನು ಕಪಿಲೆ ನೆಕ್ಕುತ್ತಿತ್ತು. ಸಿಂಗಾರೆವ್ವ ಅಲ್ಲೆ ಕೂತು ಅದನ್ನೇ ಕಣ್ಣುತುಂಬ ನೋಡುತ್ತಿದ್ದಳು. ಮರ್ಯಾ ಸಗಣಿ ಬಳಿಯುತ್ತಿದ್ದ.

“ನಿನ್ನಿ ಏನಾಯ್ತಿಂದಿ! ಕಪಲಿ ಮೇಯಾಕ ಹೋಗಿತ್ತಲ್ಲ, ಮಧ್ಯಾಹ್ನ ಹಸಿವಾಗಿ ತುಳಸಿ ಅಂಬಾ ಅಂತ ಒದರಾಕ ಹತ್ತಿತ್ತು! ಅಂಬಾ ಅದಂರ ಏನು ಹೇಳು? ಅವ್ವಾ ಅವ್ವಾ ‘ಅಂಧಾಂಗ”

– ಎಂದು ಸಿಂಗಾರೆವ್ವ ನಿನ್ನಿನ ಘಟನೆಯನ್ನು ಹೇಳುತ್ತಿದ್ದಳು. ಇಲ್ಲಿ ತುಳಸಿ ಅಂಬಾ ಎಂದು ಒದರಿದರೆ ಅಲ್ಲಿ ಅಡವಿಯಲ್ಲಿದ್ದ ಕಪಲಿಯ ಮೊಲೆ ಹಾಲು ತೊಟ್ಟಿಕ್ಕಿತಂತೆ! ಅದಕ್ಕೆ ಕಪಲಿ “ಅಯ್ ನನ್ನ ಶಿವನ! ನನ್ನ ಕಂದ ಹಸಿದೈತಲ್ಲ!” ಎಂದು ಓಡಿ ಬಂದಿತಂತೆ!

ಹೀಗೆ ಏನೇನೋ ಮುದ್ದುಮುದ್ದಾಗಿ ಹೇಳುತ್ತಿದ್ದಳು. ಮರ್ಯಾ ಕೂಡ ಇವಳ ಮಾತು ಕೇಳಿಸಿಕೊಳ್ಳುತ್ತಿದ್ದ. ಅಷ್ಟರಲ್ಲಿ ಗೌಡ ಯಾಕೋಏನೋ ಹೊರಗಿನಿಂದ ಬಿರುಗಾಳಿಯಂತೆ ಬಂದವನು “ಸೂಳಿ ಮಗನs!” ಎನ್ನುತ್ತ ಕೊಟ್ಟಿಗೆಯಲ್ಲಿಯ ಗೂಟಿಗಲ್ಲೊಂದನ್ನು ಎತ್ತಿ ಮರ್ಯಾನ ಮೇಲೆ ಹೇರುವುದಕ್ಕೆ ಸಿದ್ಧನಾದ! ಹಾಹಾ ಎನ್ನುವುದರೊಳಗೆ ಎನಾಗುತ್ತಿತ್ತೊ – ಕೂತಿದ್ದ ಸಿಂಗಾರೆವ್ವ ಚೆಂಗನೇ ನೆಗೆದು “ಎಪ್ಪಾs” ಎಂದವಳೇ ಮರ್ಯಾನನ್ನು ತಬ್ಬಿಕೊಂಡಳು. ಗೌಡ “ಸಿಂಗಾರೀ ಈ ಕಡೆ ಬಾ” ಅಂದ. ಅವಳು ಕೇಳಲಿಲ್ಲ. ಅಗಲವಾಗಿ ಕಣ್ಣು  ತೆರೆದು “ಬರಾಣಿಲ್ಲ ಬರಾಣಿಲ್ಲ” ಎನ್ನುತ್ತ ಗಡಗಡ ನಡುಗುತ್ತಿದ್ದಳು. ಗೌಡ ಕಲ್ಲನ್ನು ಬೇರೆ ಕಡೆ ಎಸೆದು ಸಿಂಗಾರೆವ್ವನನ್ನು ದರದರ ಎಳೆದುಕೊಂಡು ಹೋದ. “ಈ ಬೋಳಿಮಗ ಇಂದ ರೊಟ್ಟೀ ಹಾಕಬ್ಯಾಡ್ರೀ” ಎಂದು ಅಡಿಗೆ ಮನೆ ಕಡೆ ಮುಖಮಾಡಿ ಒದರಿ ಮಾಯವಾದ.

ಇದರಿಂದ ನನಗೇನೂ ಆಘಾತವಾಗಲಿಲ್ಲ. ಯಾಕೆಂದರೆ ಮರ್ಯಾನನ್ನು ಗೌಡ ಹೊಡೆದದ್ದನ್ನು ಅನೇಕ ಸಲ ನಾನು ಕಂಡಿದ್ದೆ. ಆದರೆ ಸಿಂಗಾರೆವ್ವ ಇದೇ ಮೊದಲ ಸಲ ನೋಡಿದ್ದಳು. ಯಾಕೆಂದರೆ ಗೌಡ ಈತನಕ ಅವನನ್ನು ಥಳಿಸಿದ್ದು ತೋಟದಲ್ಲಿ, ಮನೆಯಲ್ಲಲ್ಲ, ಇದಾಯ್ತಲ್ಲ, ಅಂದಿನಿಂದ ಕರುವಿನ ಜೊತೆಗೆ ಮರ್ಯಾ ಕೂಡ ಅವಳ ಕರುಣೆಯ ಕಂದನಾದ. ಗೌಡ ಎಷ್ಟೆಷ್ಟು ಕೋಪಗೊಂಡರೆ ಅಷ್ಟಷ್ಟು ಮರ್ಯಾನ ಬಗ್ಗೆ ಇವಳ ಅನುಕಂಪ ಹೆಚ್ಚುತ್ತಿತ್ತು. ಮರ್ಯಾನಿಗೆ “ರೊಟ್ಟಿ ಹಾಕಬ್ಯಾಡ್ರೆ”ಂದು ಗೌಡ ಹೇಳಿದ್ದನಲ್ಲ. ಆ ದಿನ ಸಿಂಗಾರೆವ್ವ ಎರಡು ರೊಟ್ಟಿ ಕದ್ದು ಲಂಗದಲ್ಲಿ ಮುಚ್ಚಿಟ್ಟುಕೊಂಡು ಬಂದು ಮರ್ಯಾನ ಹರಿವಾಣದಲ್ಲಿ ಹಾಕಿಹೋದಳು. ಅಂದಿನಿಂದ ನಾವಿಬ್ಬರೂ ರೊಟ್ಟಿ ಕದಿಯುತ್ತಿದ್ದೆವು. ಮರ್ಯಾನ ಹರಿವಾಣದಲ್ಲಿ ಚೆಲ್ಲಿ ಬರುತ್ತಿದ್ದೆವು. ಬರಬರುತ್ತ ಸೇಂಗಾ, ಬೆಲ್ಲ, ಉಂಡಿಗಳನ್ನೂ ಕದ್ದುಕದ್ದು ಚೆಲ್ಲಿ ಬರುತ್ತಿದ್ದೆವು. ಮತ್ತು ಬೈಲಕಡೆ ಹೋದಾಗ ಅಕ್ಕಪಕ್ಕ ಕೂತು ನಮ್ಮ ಕಳ್ಳತನದ ಸಾಹಸದ ಬಗ್ಗೆ ಪಿಸಿಪಿಸಿ ಮಾತಾಡಿ ಖುಸಿಪಡುತ್ತಿದ್ದೆವು. ಆಮೇಲಾ ಮೇಲಂತೂ ಸಿಂಗಾರೆವ್ವ ತನಗಿತ್ತ ತಿಂಡಿಯ ಭಾಗವನ್ನು ನನಗೆ ಕೊಡುವ ಬದಲು ಮರ್ಯಾನ ಹರಿವಾಣಕ್ಕೇ ಹಾಕುತ್ತ ಬಂದಳು. ಆದರೆ ಅವ ಕಟುಕ. ಒಮ್ಮೆಯೋ ನಮ್ಮ ಕಡೆ ಒಂದು ಕೃತಜ್ಞತೆಯ ನೋಟವನ್ನೂ ಬೀರಲಿಲ್ಲ. ಅವನು ಗಂಟುಹಾಕಿದ ಹುಬ್ಬುಗಳನ್ನು ಒಮ್ಮೆ ಮಾತ್ರ ಸಡಿಲು ಮಾಡಿದರೂ ನಾವು ಅವನೊಂದಿಗೆ ಆಟ ಆಡಲು ತಯಾರಿದ್ದೆವು. ಯಾಕೆಂದರೆ ಮರ್ಯಾ ನಮ್ಮ ಓರಗೆಯವನೇ, ಬಹಳವಾದರೆ ನಮಗಿಂತ ಒಂದೆರೆಡು ವರ್ಷ ದೊಡ್ಡವನಿದ್ದಾನು. ಅವನಿಗೆ ಗೆಳೆಯರ್ಯಾರೂ ಇರಲಿಲ್ಲ. ಹ್ಯಾಗಿದ್ದಾರು? ಇವನೋ ಮಾತಿನವಲ್ಲ, ಸಲಿಗೆಯವನಲ್ಲ, ನಕ್ಕವನಲ್ಲ, ಸಾಲದ್ದಕ್ಕೆ ರೂಪವಂತನಲ್ಲ, ಅಸಹ್ಯವಾಗಿದ್ದನೆಂದೇ ಹೇಳಬೇಕು. ಎರೀ ಮಣ್ಣಿನಂಥ ಕರೀಮುಖ, ಹುಲ್ಲಿನಂಥ ಹುಬ್ಬು, ಮುಗಿಲು ನೋಡುವ ಸಣ್ಣಮೂಗು, ದಪ್ಪ ತುಟಿಗಳಲ್ಲಿ ಅವನ ಅಸಮಾನ ಹಲ್ಲು ಬಹಳ ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಗದ್ದವೂ ಸಣ್ಣದು. ಕಣ್ಣಷ್ಟೇ ಚೆನ್ನಾಗಿದ್ದವು. ನೀಲಿಬಣ್ಣದ ಹೊಳೆಯುವ ಆ ಕಣ್ಣನ್ನಾದರೂ ನೋಡೋಣವೆಂದರೆ ಅಲ್ಲಿಯೂ ಮಾರಾಯ ಹಿರಿದ ಅಲಗನ್ನಿಟ್ಟಿರುತ್ತಿದ್ದ. ಆದರೆ ಕಹಕಿಯಲ್ಲ, ಒಂದನ್ನು ಮುಚ್ಚಿ ಒಂದನ್ನು ತೋರುವವನಲ್ಲ. ಮನಸ್ಸಿನಲ್ಲಿ ಏನಿರುತ್ತಿತ್ತೋ ಅದನ್ನೇ ಮುಖ ತೋರಿಸುತ್ತಿತ್ತು. ಅದಕ್ಕೇ ಅವನ ಬಗ್ಗೆ ಗೌರವಭಾವನೆ ಬರುತ್ತಿತ್ತು. ನಮ್ಮ ಓರಗೆಯವನೇ ಎಂದು ಹೇಳಿದೆನಲ್ಲ, ಮೈ ಪೈಲ್ವಾನನಂತೆ ದಷ್ಟಪುಷ್ಟವಾಗಿತ್ತು. ಆರಾರು ರೊಟ್ಟಿಗಳನ್ನು ಒಮ್ಮೆಯೇ ಕತ್ತರಿಸಿ ತಿನ್ನುತ್ತಿ. ಎಷ್ಟು ನೀಡಿದರೂ ಸಾಕೆನ್ನುತ್ತಿರಲಿಲ್ಲ. ‘ಮತ್ತು ನೀಡಿದ್ದನ್ನು ಹಾಗೆ ಹೀಗನ್ನದೆ, ನೀಡುವವರ ಕಡೆ ಒಮ್ಮೆಯೂ ನೋಡದೆ ತಿನ್ನುತ್ತಿದ್ದ. ಅವನಿಗೆ ಇನ್ನಷ್ಟು ಏನಾದರೂ ಬೇಕಾದರೆ ಬೇಡುತ್ತಿರಲಿಲ್ಲ. ನಾವೇ ತಂದರೆ ತರಲಿ ಎಂದು ಸುಮ್ಮನೆ ಎಡೆಯಲ್ಲಿ ಬಲಗೈಯೂರಿ ಕೂರುತ್ತಿದ್ದ. ನಾವು ತಂದರೆ ಸೈ, ತರದಿದ್ದರೆ ಕೈ ತೊಳೆದುಕೊಂಡೆದ್ದುಬಿಡುತ್ತಿದ್ದ. ಆತ ಮಾತಾಡುತ್ತಿದ್ದುದ್ದು ಬಹಳ ಕಮ್ಮಿ. ಮಾತಾಡಿದರೆ ಉಕ್ಕು ಬಾರಿಸಿದಂಥ ದನಿಯಲ್ಲಿ ಹಾ ಹೂ ಅನ್ನುತ್ತಿದ್ದ, ಅಷ್ಟೆ. ನಮ್ಮನ್ನಂತೂ ಇವರು ತನ್ನ ಸಮಾನರಲ್ಲವೆಂಬಂತೆ ತಿರಸ್ಕರಿಸಿಬಿಟ್ಟಿದ್ದ. ಇಷ್ಟು ದಿನ ಊಟಕ್ಕೆ ಹಾಕಿದ್ದೆನಲ್ಲ, ನನ್ನ ಕಡೆ ಒಮ್ಮೆಯೂ ಭಾವಪೂರಿತ ದೃಷ್ಟಿ ಬೀರಿದವನಲ್ಲ, ನಾನಿರಲಿ, ಸಿಂಗಾರೆವ್ವ ಎಷ್ಟು ಮಾತಾಡಿಸಿದರೂ ಮಾತಾಡುತ್ತಿರಲಿಲ್ಲ. ಬರೀ ಅವಳ ಕಡೆಗೆ ನೋಡುತ್ತಿದ್ದ, ಅಷ್ಟೆ. ಅವನ ಮೈ ಹ್ಯಾಗೆ ತರುಣವಾಗಿರಲಿ, ಮನಸ್ಸಿನಲ್ಲಿ ಅವನಿಗಾಗಲೇ ವಯಸ್ಸಾಗಿತ್ತು. ಆ ವಯಸ್ಸಿನಲ್ಲೇ ಗೌಡನಂಥವನನ್ನು ಎದುರು ಹಾಕಿಕೊಳ್ಳುವುದೆಂದರೆ ಹುಡುಗಾಟವೇ?

ಅದ್ಯಾಕೆ ಗೌಡನಿಗೂ ಅವನಿಗೂ ವೈರವಿತ್ತೋ ಕಾಣೆ. ನಾವು ಸಣ್ಣವರು, ನಮಗೆ ಇವೆಲ್ಲ ಅಷ್ಟಾಗಿ ತಿಳಿಯುತ್ತಿರಲಿಲ್ಲ. ಮರ್ಯಾನ ಅಪ್ಪ  ತೀರಿಕೊಂಡ ಮೇಲೆ ಗೌಡ ಅವನ ತಾಯಿಯನ್ನು ಇಟ್ಟಿಕೊಂಡಿದ್ದನಂತೆ. ಇದು ಮರ್ಯಾನಿಗೆ ಸರಿಬರದೆ ತಾಯಿಗೆ ತಾಕೀತು ಮಾಡಿದ್ದನಂತೆ. ಇನ್ನು ಕೆಲವರು ಆಡಿಕೊಳ್ಳುವ ಪ್ರಕಾರ ಮರ್ಯಾನ ತಂದೆ ಹೋದ ಮೇಲೆ ಅವನ ಜಮೀನನನ್ನು ಗೌಡ ಎತ್ತಿ ಹಾಕಿದ್ದನಂತೆ. ಇದು ಖರೆಯಿದ್ದೀತು. ಯಾಕೆಂದರೆ ಒಮ್ಮೆ ಹೊಲದಲ್ಲಿ ಅವರಿಬ್ಬರೂ ಜಗಳವಾಡುತ್ತಿದ್ದಾಗ ಮರ್ಯಾ ಆ ಹೊಲವನ್ನು ಅಂಗೈಯಿಂದ ಬಡಿಬಡಿದು “ಇದು ನಂದೆ”ಂದು ಹೇಳಿದ್ದನ್ನು ಸ್ವಥಾ ಕೇಳಿದ್ದೇನೆ, ಕಂಡಿದ್ದೇನೆ, ಅಲ್ಲದೆ ಗೌಡ ದೇವರಾಣೆ ಕೊಳಕ.

ಒಮ್ಮೆ ದೀಪಾವಳಿ ಹಬ್ಬದ ಸುತ್ತಾ ಇದ್ದೀತು. ನಮ್ಮ ತೋಟದ ಮಗಿ ಮಾವಿನ ಗಿಡಕ್ಕೆ ಕಾಯಾಗಿದ್ದವು. ದೀಪಾವಳಿಯಲ್ಲೆಂಥ ಮಾವಿನಕಾಯಿ ಎಂದು ಅನ್ನಬೇಡ. ಆ ಮಾವಿನಗಿಡ ವರ್ಷದಲ್ಲಿ ಎರಡು ಸಲ ಕಾಯಿ ಬಿಡೋದು. ದೀಪಾವಳಿಯ ಸುಮಾರಿಗೆ ಹತ್ತೆಂಟು ಕಾಯಿ ಬಿಡುತ್ತಿತ್ತು. ಆಗ ಊರಿನ ಎಲ್ಲ ಎಳೆಯರ ಬಾಯಲ್ಲಿ ನೀರು ಬರುತ್ತಿತ್ತು. ಆ ಕಾಲದಲ್ಲಿ ಮಾವಿನ ಕಾಯಾದರೆ ಯಾರಿಗೆ ಆಸೆಯಾಗುವುದಿಲ್ಲ? ಸುದ್ದಿ ಗೊತ್ತಾಗಿ ನಾನು ಸಿಂಗಾರೆವ್ವನಿಗೆ ಹೇಳಿದೆ. ಈ ತನಕ ಸಿಂಗಾರೆವ್ವ ಬಾಯಿಬಿಟ್ಟು ಮರ್ಯಾನಲ್ಲಿ ಏನನ್ನೂ ಕೇಳಿದವಳಲ್ಲ. ಅಲ್ಲದೆ ನಾವು ಕೊಡುತ್ತಿದ್ದ ರೊಟ್ಟಿ, ತಿಂಡಿಗಳಿಂದಾಗಿ ಆತ ನಮ್ಮ ಬಗ್ಗೆ ಮಾತಾಡಿ ತೋರದಿದ್ದರೂ, ತುಂಬ ಸ್ನೇಹದಿಂದ ಇದ್ದಾನೆಂದೇ ನಮ್ಮ ತರ್ಕವಾಗಿತ್ತು. ಸಿಂಗಾರೆವ್ವ ‘ಮರ್ಯಾ ಮಾವಿನಕಾಯಿ ತಗೊಂಬಾರೊ” ಎಂದಳು. ಯಥಾ ಪ್ರಕಾರ  ಅವನು ಹಾ ಹೂ ಅನ್ನಲಿಲ್ಲ. ತೋಟಕ್ಕೆ ಹೋದ.

ಸಂಜೆ ಯಾವಾಗಾದೀತೆಂದು, ಮರ್ಯಾ ಯಾವಾಗ ಮಾವಿನಕಾಯಿ ತಂದಾನೆಂದು, ನಾವು ತಿಂದೇವೆಂದು ತುದಿಗಾಲಲ್ಲಿ ನಿಂತು ಕಾಯುತ್ತಿದ್ದೆವು. ಹೊತ್ತು ಮುಳುಗಿದ ಮೇಲೆ ಮರ್ಯಾ ಬಂದ. ನಾವೆಣಿಸಿದ್ದಂತೆ ತನ್ನ ಧೋತರದ ಉಡಿಯಲ್ಲಿ ಮಾವಿನಕಾಯಿ ತಂದಿದ್ದ. ಇವೆಲ್ಲ ಕದ್ದು ಮಾಡುವ ವ್ಯವಹಾರಗಳು. ನಾನು ಬೇಕಾದರೆ ಮರೆಪ್ಪನ ಜೊತೆ ಮಾತಾಡಬಹುದಿತ್ತು. ಸಿಂಗಾರೆವ್ವನಿಗದು ಸಾಧ್ಯವಿರಲಿಲ್ಲ. ಇನ್ನೂ ದೀಪ ಹಚ್ಚಿರಲಿಲ್ಲ. ನಾವಿಬ್ಬರೂ ಕೊಟ್ಟಿಗೆಗೆ ಹೋದೆವು. ಆಗಷ್ಟೇ ದನ ಕಟ್ಟಿ ಕೂತಿದ್ದ. ಬಹುಶಃ ನಮ್ಮ ದಾರೀ ಕಾಯುತ್ತ. ಇಂಥ ಸಂದರ್ಭದಲ್ಲಿ ಯಾರಾದರೂ ಕಂಡಾರೆಂದು ಒಬ್ಬರು ಬಾಗಿಲಲ್ಲಿ ನಿಂತು ಇನ್ನೊಬ್ಬರು ಹರಿವಾಣದ ತನಕ ಹೋಗುವುದು ನಮ್ಮ ರೂಢಿ. ಸಿಂಗಾರೆವ್ವ ಬಾಗಿಲಲ್ಲಿ ನಿಂತಳು. ನಾನು ಅವನ ಬಳಿ ಹೋಗಿ “ಮಾವಿನಕಾಯಿ ತಂದ್ಯಾ?” ಎಂದು ಕೇಳಿದೆ. “ಆಕೀನs ಕಳಸು” ಅಂದ. ನಾನು ತಿರುಗಿ ಹೋಗಿ “ನಿನ್ನ ಕೈಯಾಗs ಕೊಡತಾನಂತ. ಲಗು ಹೋಗಿ ಈಸಿಕೊಂಬಾ” ಅಂದೆ. ಸಿಂಗಾರೆವ್ವ ಓಡಿಹೋದಳು. ಕಿಟಕಿಯ ಹತ್ತಿರವೇ ನಿಂತಿದ್ದರಿಂದ ಮಂದ ಬೆಳಕಿನಲ್ಲಿ ನನಗೂ ಅವ ಕಾಣಿಸುತ್ತಿದ್ದ. ಸಿಂಗಾರೆವ್ವನ ಉಡಿಯಲ್ಲಿ ಮಾವಿನಕಾಯಿ ಹಾಕಿದ. ಅವಳು ತಿರುಗುವಷ್ಟರಲ್ಲಿ ಗಪ್ಪನೆ ತಬ್ಬಿಕೊಂಡು ಲಟಲಟನೆ ಅವಳ ಕೆನ್ನೆಗೆ ಮುದ್ದುಕೊಟ್ಟ! ಏನು ಎತ್ತ ತಿಳಿಯುವಷ್ಟರಲ್ಲಿ ಸಿಂಗಾರೆವ್ವ “ಎವ್ವಾ” ಎಂದು ಕಿರಿಚಿ ಓಡಿಬಂದಳು. ಇಬ್ಬರೂ ಪಡಸಾಲೆಗೆ ಒಂದೇ ಧಾವತಿಯಲ್ಲಿ ಓಡಿಬಂದೆವು.

“ಅಲ್ಲಿ ಆಗಲೇ ದೀಪ ಹಚ್ಚಿದ್ದರು. ಕಂಬಕ್ಕೊರಗಿ ನಿಂತಳು. ನಾನೂ ಅವಳ ಪಕ್ಕದಲ್ಲೇ ನಿಂತೆ. ಏದುಸಿರು ಬಿಡುತ್ತ ಹಾಗೆ ನನ್ನ ಭುಜಕ್ಕೆ ಒರಗಿದಳು. ಹುಡುಗಿ ಬೆಂಕಿಯ ಝಳ ತಾಗಿದ ಎಳೆ ಬಾಳೆಯೆಲೆಯಂತೆ ಮೆತ್ತಗಾಗಿದ್ದಳು. ತೊಡೆ ಥರಥರ ನಡುತ್ತಿದ್ದವು. ಮೂಗು, ಹಣೆಯ ಮೇಲೆ ಬೆವರು ಮೂಡಿತ್ತು. ಕಿವಿ ಸುಡುತ್ತಿದ್ದವು. ಕೆನ್ನೆಯ ಮೇಲೆ ಮರ್ಯಾನ ಬಾಯೆಂಜಲಿತ್ತು. ಒರೆಸಿದೆ. ಅವನ ಹಲ್ಲು ಮೂಡಿದ್ದವು. ಸುದೈವದಿಂದ ಅವಳು ಚೀರಿದ್ದು ಯಾರಿಗೂ ಕೇಳಿಸಿರಲಿಲ್ಲ. ಸಾವರಿಸಿಕೊಂಡಾದ ಮೇಲೆ “ಯಾರ ಮುಂದ ಹೇಳಬ್ಯಾಡ” ಎಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿ ತನ್ನ ತಾಯಿಯ ಕೋಣೆಗೆ ಹೋದಳು.

ಎಂಟುದಿನ ಕಳೆದರೂ ನಾವಿಬ್ಬರೂ ನಗಾಡಲಿಲ್ಲ. ಬಹಳ ಗಂಭೀರವಾಗಿದ್ದೆವು. ಆಮೇಲೆ ನಾವು ಮತ್ತೊಮ್ಮೆ ಕೊಟ್ಟಿಗೆಯ ಕಡೆ ಸುಳಿಯಿಲ್ಲ. ಮರ್ಯಾನ ಸುದ್ದಿ ನಾವಂತೂ ಆಡುತ್ತಿರಲಿಲ್ಲ. ಇನ್ಯಾರಾದರೂ ಪ್ರಾಸಂಗಿಕವಾಗಿ ಎತ್ತಿದ್ದರೂ ಸಾಕು. ಸಿಂಗಾರೆವ್ವ ಕರಡಿ ಕಂಡ ಮಕ್ಕಳಂತೆ ಹೆದರುತ್ತಿದ್ದಳು. ನಾನಂತೂ ಅವನೊಬ್ಬ ನೀಚನೆಂದು ನಿರ್ಧರಿಸಿ, ನನಗೆ ಗೊತ್ತಿದ್ದ ಎಲ್ಲಾ ಬೈಗುಳಗಳಿಂದ ಅವನ ಕುಲದ ಎಲ್ಲರನ್ನೂ ಬೈದುಬಿಟ್ಟಿದ್ದೆ. ಒಂದೆರಡು ಸಲ ಆತ ನನ್ನ ಮಾತಾಡಿಸಿ ಸಿಂಗಾರೆವ್ವನನ್ನು ಕರೆತರುವಂತೆ ಹೇಳಿದ. ಹಾ ಹೂ ಎನ್ನದೆ ನಿರ್ಲಕ್ಷಿಸಿ ಸುಮ್ಮನಾಗಿದ್ದೆ. ಕರೆತರದಿದ್ದರೆ ಸೀಳಿ ಹೊಳೆಗಾಣಿಸುವುದಾಗಿ ಒಮ್ಮೆ ಬೆದರಿಕೆ ಹಾಕಿದ. ಆಗಲೂ ನಾನು ಸೊಪ್ಪುಹಾಕಲಿಲ್ಲ. ಇನ್ನೊಮ್ಮೆ ತಾನು ಉಪವಾಸವಿರುವುದಾಗಿಯೂ ಸಿಂಗಾರೆವ್ವ ರೊಟ್ಟಿ ಕೊಟ್ಟರೆ ತಿನ್ನುವುದಾಗಿಯೂ ಹೇಳಿದ. ಈ ಸಲ ಅವ ಹಣ್ಣಾದ ಹಾಗಿತ್ತು. ಕಣ್ಣಿನಲ್ಲಿ ಪಶ್ಚಾತ್ತಾಪ ಮೂಡಿತ್ತು. ಹೋಗಿ ಸಿಂಗಾರೆವ್ವನ ಕಿವಿಯಲ್ಲಿ ಹೇಳಿದೆ.

ಆ ದಿನ ಇಬ್ಬರಿಗೂ ರೊಟ್ಟಿ ಕದಿಯಲಾಗಲಿಲ್ಲ. ಕೊನೆಗೆ ಊಟ ಮಾಡುವಾಗ ಸಿಂಗ್ಯಾರೆವ್ವ ಹ್ಯಾಗೋ ತನ್ನ ತಟ್ಟೆಯೊಳಗಿನ ಎರಡು ರೊಟ್ಟಿಗಳನ್ನೇ ಕದ್ದುಕೊಟ್ಟಳು. ನಾನು ಕೊಟ್ಟಿಗೆಗೆ ತಗೊಂಡು ಹೋದಾಗ ಮರ್ಯಾ ನಮ್ಮ ದಾರಿಯನ್ನೇ ಕಾಯುತ್ತಿದ್ದ. ನನ್ನೊಬ್ಬಳನ್ನೇ ನೋಡಿ ಅವನಿಗೆ ಅಸಮಾಧಾನವಾಯ್ತು. ನಾನು ರೊಟ್ಟಿ ಕೊಡಹೋದರೆ “ಅವಳ್ಯಾಕ ಬರಲಿಲ್ಲ?” ಎಂದು ಕಣ್ಣು ಮೂಗು ಕಿಸಿದ. ಅವನ ಮುಖಕ್ಕೆ ಎರಡೂ ರೊಟ್ಟಿ ಎಸೆದು ಓಡಿಬಂದೆ. ಆ ದಿನ ಸಿಂಗಾರೆವ್ವ ಊಟ ಮಾಡಲೇ ಇಲ್ಲ. ಆದ್ದರಿಂದ ನಾನೂ ಮಾಡಲಿಲ್ಲ.

* * *