ಈ ಮಧ್ಯೆ ಗೌಡ ಶಿರಟ್ಟಿಯ ಗೌಡನಿಗೆ ಅಜಾರಿಯೆಂದು ನೋಡಲಿಕ್ಕೆ ಹೋದ. ಊರಿನಲ್ಲಿ ಗೌಡನಿಲ್ಲ ಎಂದರೆ ನಮಗೂ ಹೆಂಗಸರಿಗೂ ಬಹಳ ಸಂತೋಷವಾಗುತ್ತಿತ್ತು. ಅವ ಮನೆಯಲ್ಲಿದ್ದಾನೆಂದರೆ ನಮಗ್ಯಾಕೋ ಕಟ್ಟಿಹಾಕಿಸಿಕೊಂಡ ಅನುಭವವಾಗುತ್ತಿತ್ತು. ದನಿ ಎತ್ತಿ ಮಾತಾಡುವ ಹಾಗಿಲ್ಲ, ಒಳಹೊರಗೆ ಸುಳಿದಾಡುವಂತಿಲ್ಲ. ಅಷ್ಟು ದೂರದ ಪಡಸಾಲೆಯಲ್ಲಿ ಅವ ಕೂತಿದ್ದರೂ ಅಡಿಗೆ ಮನೆಯಲ್ಲಿಯ ಹೆಂಗಸರು ಪಿಸುಗುಟ್ಟಿಕೊಂಡೇ ಮಾತಾಡಬೇಕು. ಆತ ಮನೆಯಲ್ಲಿದ್ದಾಗೆಲ್ಲ ದನಿ ಕೇಳಿಸುತ್ತಿದ್ದುದು ಆತನೊಬ್ಬನದೇ. ಬಹಳವಾದರೆ ಸಿಂಗಾರೆವ್ವನ ದನಿ ಅಷ್ಟಿಷ್ಟು ಕೇಳಿಸಬೇಕು. ಅವನೇನಾದರೂ ಸುಮ್ಮನೆ ಕೂತನೆನ್ನೋಣ, ಅಥವಾ ಮಲಗಿದನೆನ್ನೋಣ. ಆಗಂತೂ ತಾಸು ಗಟ್ಟಲೆ ಇಡೀ ಮನೆ ಮನುಷ್ಯರ ದನಿಯ ಸುಳಿವೇ ಇಲ್ಲದೆ ಬಣಗುಡುತ್ತಿತ್ತು. ಒಮ್ಮೊಮ್ಮೆ ಹಾಡುಹಗಲಲ್ಲೇ ಹೆದರಿಕೆಯಾಗುತ್ತಿತ್ತು. ಗೌಡ ಈಗ ಶಿರಟ್ಟಿಗೆ ಹೋಗಿದ್ದನಲ್ಲ, ನಾವು ಸಂತೋಷವಾಗಿರಬೇಕು. ಆದರೆ ನಮ್ಮಿಬ್ಬರ ಮುನ್ನಿನ ಖುಶಿ ಮಾತ್ರ ಹಿಂದಿರುಗಲೇ ಇಲ್ಲ.

ಸಿಂಗಾರೆವ್ವ ಆಗ ಐದನೇ ಇಯತ್ತೆ ಓದುತ್ತಿದ್ದಳು. ದಿನ ಮುಂಜಾನೆ ಅವಳನ್ನು ಸಾಲೆಯ ತನಕ ಕಳಿಸಿ, ದನ ಕಾಡಿಗೆ ಹೊಡೆಯೋ ಸಮಯಕ್ಕೆ ಮತ್ತೆ ಸಾಲೆಗೆ ಹೋಗಿ ಕರೆತರುತ್ತಿದ್ದೆ. ನಾವಿಬ್ಬರೂ ಸಾಲೆಗೆ ಹೊಂಟಾಗೆಲ್ಲ ಮರ್ಯಾ ಕೊಟ್ಟಿಗೆ ಬಾಗಿಲಲ್ಲಿ ಸಿಂಗಾರೆವ್ವನನ್ನು ನೋಡುತ್ತ ನಿಂತಿರುತ್ತಿದ್ದ. ಅದು ಗೊತ್ತಾಗಿ ಸಿಂಗಾರೆವ್ವ ಜೋರಿನಿಂದ ನಡೆಯುತ್ತಿದ್ದಳು. ಗೌಡ ಊರಿನಲ್ಲಿ ಇರಲಿಲ್ಲವಲ್ಲ. ಆದ್ದರಿಂದ ಮರ್ಯಾನ ಬಗ್ಗೆ ಹೆದರಿಕೆ ಇನ್ನೂ ಜಾಸ್ತಿಯಾಗಿತ್ತು. ಸಿಂಗಾರೆವ್ವನಿಗೆ ಇನ್ನೂ ಹೆಚ್ಚು, ಯಾಕೆಂದರೆ ಆತ ಏನೂ ಮಾಡಬಲ್ಲವನಾಗಿದ್ದ. ಆದರೆ ನಾವು ಹೆದರುವಂಥದೇನೂ ನಡೆಯಲಿಲ್ಲ. ಅಷ್ಟರಲ್ಲಿ ಗೌಡ ಅವಸರದಿಂದ ಬಂದ.

ಊರಿಗೆ ಹೋದ ಗೌಡ ಸಾಮಾನ್ಯವಾಗಿ ದಣಿದು ಬರುವುದು ರೂಢಿ. ಆದರೆ ಈ ಸಲ ಬಹಳ ತರಾತುರಿಯಲ್ಲಿದ್ದ. ಮತ್ತು “ಎಲ್ಲಾರು ಇಂದs ಸವದತ್ತಿ ಎಲ್ಲಮ್ಮನ ಗುಡ್ಡಕ ಹೋಗಬೇಕು. ಲಗು ತಯಾರಾಗ್ರಿ” ಎಂದೂ ಹೇಳಿದ. ಆಳನ್ನು ಕರೆದು ಗಾಡಿಗೆ ಕೊಲ್ಲಾರಿ ಬಿಗಿಯಲು ಹೇಳಿದ. ಸಿಂಗಾರೆವ್ವನನ್ನು ಕರೆದು ತೊಡೆಯ ಮೇಲೆ ಕುಳ್ಳರಿಸಿಕೊಂಡು ಅಚ್ಚೆ ಮಾಡಿದ. “ನೀನೂ ಗುಡ್ಡಕ್ಕೆ ಬರಬೇಕವಾ” ಎಂದ. ಸಿಂಗಾರೆವ್ವ “ಶೀನಿಂಗೀನ ಕರತರಲಾ ಅಪ್ಪ?” ಎಂದು ಕೇಳಿದಳು. “ಓಹೋ ಆಕೀನೂ ಬರಲಿ” ಎಂದು ಗೌಡ ದೊಡ್ಡಮನಸ್ಸು ತೋರಿಸಿದ. ಆಗಂತೂ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಇಬ್ಬರೂ ಹಿತ್ತಲಿಗೋಡಿ ಕೈಕೈ ತಟ್ಟಿ ಕುಣಿದಾಡಿದೆವು. ಎಷ್ಟು ಬೇಗ ಹೊರಟೇವೋ ಎಂದು ನಾವು ಆತುರರಾದದ್ದು ನಿಜ. ಆದರೆ ನಮ್ಮ ಆತುರವನ್ನೂ ಮೀರಿ ಗಾಡಿ ತಯಾರಿಸಿದ್ದರು. ಗೌಡ ತನ್ನ ಜೋಡುನಳಿಗೆಯ ಬಂದೂಕನ್ನು ಗಾಡಿಯಲ್ಲಿ ಹಾಕಿದ. ಹೆಂಗಸರಿಗೆ ಇದು ಸರಿಬರಲಿಲ್ಲ. ದೇವರು ದಿಂಡರೆಂದರೂ ಯಾವುದಕ್ಕೂ ಒಂದು ತಯಾರಿ ಬೇಡವೇ? ಬೇಡವೆಂದೇ ಗೌಡ ಹೇಳಿದ. “ಒಂದಿತ್ತು, ಒಂದಿಲ್ಲ, ಮೊದಲು ಗಾಡಿ ಹತ್ತರಿ” ಎಂದು ಹೇಳಿದ. ಗೌಡನಿಗೆ ಎದುರಾಡುವ ಶಕ್ತಿ ಯಾರಿಗಿತ್ತು? ಮನಸ್ಸಿನಲ್ಲಿಯೇ ಅದು ಇದು ಹೇಳಿಕೊಳ್ಳುತ್ತ ಗಾಡಿ ಹತ್ತಿದರು. ಗೌಡ ಮೊದಲೇ ಹೇಳಿದ್ದಿರಬೇಕು. ಮಠದ ಜಂಗಮ ಅಜ್ಜಯ್ಯನೂ ಗಾಡಿ ಹತ್ತಿದ. ಗಾಡಿ ಹೊರಟಾಗ ಮಟಮಟ ಮಧ್ಯಾಹ್ನವಾಗಿತ್ತು.

ಗೌಡ ಗಾಡಿಯ ಮುಂದೆ ಮುಂದೆ ನಡೆದದ್ದರಿಂದ ಒಳಗಿದ್ದ ಹೆಂಗಸರ ವಟವಟ ನಡದೇ ಇತ್ತು. ಅದೇನೆಂದು ತಿಳಿಯುವ ಗೋಜಿಗೆ ನಾವು ಹೋಗಲೇ ಇಲ್ಲ. ಅಜ್ಜಯ್ಯ ಆಗಾಗ ಬಾಯಿ ಹಾಕುತ್ತಿದ್ದ. ನಮಗೋ ರೆಕ್ಕೆ ಮೂಡಿದ್ದವು. ಹೊಸ ಸೀಮೆ, ಹೊಸ ನೆಲ,  ಹೊಸ ಗುಡ್ಡಬೆಟ್ಟಗಳನ್ನು ಕಣ್ಣರಳಿಸಿಕೊಂಡು ನೋಡುತ್ತ ಹತ್ತಿದ ಊರುಗಳ ಹೆಸರು ಕೇಳುತ್ತ ಖುಚಿ ಖುಷಿಯಾಗಿದ್ದೆವು. ಗುಡ್ಡಬೆಟ್ಟಗಳನ್ನು ಇದೇ ಮೊದಲ ಬಾರಿಯೆಂಬಂತೆ, ದಾರಿಗೆ ಯಾರೆದುರಾದರೂ ಮನುಷ್ಯರನ್ನೇ ಕಾಣದವರಂತೆ ಕುತೂಹಲದಿಂದ ನೋಡುತ್ತಿದ್ದೆವು.

ಹೊತ್ತು ಮುಳುಗುವ ಮುನ್ನ ದಾರಿಯಲ್ಲಿ ಸಿಕ್ಕ ಹಳ್ಳದಲ್ಲಿ ಊಟ ಮಾಡಿ ಮತ್ತೆ ಅವಸರದಿಂದ ಗಾಡಿ ಬಿಟ್ಟರು. ಕತ್ತಲಾದ ಮೇಲೆ ಬಹಳ ಹೊತ್ತು ಎಚ್ಚರಿರಲಾಗಲಿಲ್ಲ. ತನ್ನ ತಾಯಿಯ ತೊಡೆಯ ಮೇಲೆ ಸಿಂಗಾರೆವ್ವ ನಿದ್ದೆ ಹೋದಳು. ನಾನೂ ಕೂತಲ್ಲೇ ಕಣ್ಣು ಮುಚ್ಚಿದೆ.

ಆಮೇಲೆ ನನಗೆ ಎಚ್ಚರವಾದದ್ದು ಬಡಿದು ಎಬ್ಬಿಸಿದಾಗಲೇ, ಸಿಂಗಾರೆವ್ವನಿಗಿನ್ನೂ ಎಚ್ಚರವಾಗಿರಲಿಲ್ಲ. ಅವರವ್ವ ಅವಳನ್ನು ಅರೆನಿದ್ದೆಯಲ್ಲೇ ಎಳೆದುಕೊಂಡು ನಡೆದಳು. ಒಂದು ಮನೆಯನ್ನು ಹೊಕ್ಕೆವು. ಚಿಮಣಿ ದೀಪದಲ್ಲಿ ಕೂಡ ಅದೊಂದು ದೊಡ್ಡ ಮನೆಯೆಂದು ತಿಳಿಯುತ್ತಿತ್ತು. ಅಲ್ಲಿದ್ದ ಐದಾರು ಮಂದಿ ನಮ್ಮ ದಾರಿಯನ್ನೇ ಕಾಯುತ್ತಿದ್ದವರಂತೆ, ನಮ್ಮ ವ್ಯವಸ್ಥೆಯನ್ನೆಲ್ಲ ಮೊದಲೇ ಲೆಕ್ಕಹಾಕಿದ್ದಂತೆ ಕಂಡರು. ದೊಡ್ಡ ಪಡಸಾಲೆಯಲ್ಲಿ ನಮ್ಮನ್ನೆಲ್ಲ ಇಳಿಸಿ, ಜಳಕ ಮಾಡಬೇಕೆಂದು ಬಚ್ಚಲುಮನೆ ತೋರಿಸಿದರು. ಇಂಥ ರಾತ್ರಿಯಲ್ಲೇಕೆ ಜಳಕ ಎಂದು ನನಗರ್ಥವಾಗಲಿಲ್ಲ. ನಾವಿಳಿದು ಅರೆಘಳಿಗೆ ಕೂಡ ಆಗಿರಲಿಲ್ಲ. ಸಿಂಗಾರೆವ್ವನ ತಾಯಿ ಅಳುವುದೂ, ಉಳಿದವರು ಅವಳ ದುಃಖದಲ್ಲಿ ಪಾಲ್ಗೊಳ್ಳುವುದೂ ಕೇಳಿಸಿತು. ನಿಂಗವ್ವ ಗೌಡ್ತಿ ಸಿಂಗಾರೆವ್ವನನ್ನು ತಬ್ಬಿಕೊಂಡು “ಮಗಳs ಮಗಳs!” ಎಂದು ಅಳುತ್ತಿರುವುದನ್ನು ಕೇಳಿ ಸಿಂಗಾರೆವ್ವನಿಗೇನಾಯಿತೆಂದು ನನಗೆ ಹೆದರಿಕೆಯಾಯಿತು. ಸಿಂಗಾರೆವ್ವ ಈಗ ಪೂರ್ತಿ ಎಚ್ಚರವಾಗಿದ್ದಳು, ಇದೇನೆಂದು ಗೆಳತಿಯನ್ನು ಕೇಳುವಂತಿರಲಿಲ್ಲ. ಹೆಂಗಸರ ಶಾಪ, ಬೈಗಳ, ಅಸಮಾಧಾನದ ಮಾತುಗಳಿಂದ ನನಗೆ ತಿಳಿಯಿತು; ನಾವು ಎಲ್ಲವ್ವನ ಗುಡ್ಡಕ್ಕೆ ಬಂದಿರಲಿಲ್ಲ, ಶಿರಟ್ಟಿಗೆ ಸಿಂಗಾರೆವ್ವನ ಮದುವೆಗೆ ಬಂದಿದ್ದೆವು! – ಎಂದು.

ಇರುವ ಒಬ್ಬಳೇ ಮಗಳ ಮದುವೆಯನ್ನು ಎಂಥಾ ಅದ್ದೂರಿಯಿಂದ ಮಾಡಬೇಕು; ಅದು ಬಿಟ್ಟು ಕಳ್ಳತನದಲ್ಲಿ ಮಾಡುವುದೆಂದದೇನು? ಸ್ವಂತ ಮಗಳ ಮದುವೆ ದಿಬ್ಬಣವನ್ನೂ ಕಳ್ಳತನದಲ್ಲಿ ಹೊರಡಿಸಬೇಕೇ? ಅದೂ ಅಕ್ಕಪಕ್ಕದ ಅವ್ವಕ್ಕಗಳಿಲ್ಲ, ಊರವರಿಲ್ಲ, ಕೇರಿಯವರಿಲ್ಲ; ಒಂದು ಬಾರಿಸುವರಿಲ್ಲ ಊದುರವರಿಲ್ಲ – ಹೋಗಲಿ ಎಲ್ಲವ್ವನ ಗುಡ್ಡಕ್ಕೆಂದು ಕರೆತಂದು, ಮಧ್ಯೆ ದಾರಿ ತಪ್ಪಿಸಿ ಶಿರಟ್ಟಿಗೆ ಕರೆತಂದು ಸ್ವಂತ ಹೆಂಡತಿಗೇ, ಸ್ವಂತ ಮಗಳಿಗೇ ಈ ರೀತಿ ಮೋಸ ಮಾಡುವುದೇ? ಗೌಡನ ಮಗಳ ಮದುವೆಯೆಂದರೆ ಊರಿಗೂರೇ ಸಡಗರ ಮಾಡಬೇಕು. ಇಲ್ಲಿ ನೋಡಿದರೆ ಊರವರೇನು ಬಂತು? ಇದ್ದ ಮನೆಯವರೂ ಸಂತೋಷವಾಗಿರಲಿಲ್ಲವೆಂದರೆ ಅದೆಂಥ ಮದುವೆ? ಇದನ್ನೇ ಆಡಿಕೊಂಡು ಹೆಂಗಸರು ಹಾಡಿಕೊಂಡು ಅಳುತ್ತಿದ್ದರು. ಅವಳ ತಾಯಿ ಅಳುತ್ತಿದ್ದುದರಿಂದ ಸಿಂಗಾರೆವ್ವನೂ ಅಳುತ್ತಿದ್ದಳು. ಇದರಲ್ಲೇನೋ ಮೋಸ ಇರಬೇಕೆಂದು ಅವರೆಲ್ಲ ಆಡಿಕೊಂಡರು. ಆಡಿಕೊಂಡರಷ್ಟೆ; ಗೌಡನೆದುರಿಗೆ ಹೇಳಬೇಕಲ್ಲ? ಯಾರು ಹೇಳಲಿಲ್ಲ. ಯಾಕೆಂದರೆ ಅಷ್ಟರಲ್ಲಿ ಅಲ್ಲೇ ಎಲ್ಲಿಯೋ ಹೋಗಿದ್ದ ಗೌಡ ಸುಂಟರಗಾಳಿಯಂತೆ ಒಳಬಂದು “ಯಾರಾದ್ರೂ ತುಟಿಪಿಟಕ್ಕಂದರ ಚರ್ಮ ಸುಲದ ತೂಗ ಹಾಕತೀನಿ!” ಎಂದು ಹೇಳಿ, ನಿಜವಾಗಿ ಸುಲಿಯುವನೋ ಎಂಬಂತೇ ಅಲ್ಲೇ ತೂಗುಹಾಕಿದ್ದ ಒಂದು ಕತ್ತಿ ತಗೊಂಡು ಜಳಪಿಸಿ “ಹುಷಾರ್!” ಎಂದು ಗರ್ಜನೆ ಮಾಡಿದ.

ಎಲ್ಲರ ನಿಟ್ಟುಸಿರು ಹಾರಿಹೋದವು. ಕಣ್ಣಿರು ಇದ್ದಲ್ಲೇ ಇಂಗಿದವು. ಸಿಂಗಾರೆವ್ವನ ತಾಯಿ ಕುಸಿದವಳು ಮೇಲೇಳಲು ಒಪ್ಪಲೇ ಇಲ್ಲ. ಆ ಮನೆಯ ಒಬ್ಬಿಬ್ಬರು ಹೆಂಗಸರೂ ನೆರವಿಗೆ ಬಂದರು. ಆಗಲೇ ಬೆಳ್ಳಂಬೆಳಕಾಗಿತ್ತು. ಹಾಹಾ ಅನ್ನುವುದರೊಳಗೆ ಸಿಂಗಾರೆವ್ವನಿಗೆ ಜಳಕ ಕೂಡ ಮಾಡಿಸದೆ ಸೀರೆ ಉಡಿಸಿದರು. ಅವಸರದಲ್ಲಿ ತಲೆ ಬಾಚಿ ಮೈತುಂಬ ಆಭರಣ ತೊಡಿಸಿದರು, ಕೈತುಂಬ ಬಳೆ ಇಡಿಸಿದರು. ಸಿಂಗಾರೆವ್ವ ಆಗ ಎಷ್ಟು ಚಂದ ಕಾಣುತ್ತಿದ್ದಳೆಂದರೆ ಸಿಂಗರಿಸುತ್ತಿದ್ದ ಆ ಹೆಂಗಸರೂ ಕಣ್ಣಿರು ಸುರಿಸಿದರು. ಪುಣ್ಯಾತ್ಮ ಅದಕ್ಕಾದರೂ ಅವಕಾಶ ಕೊಟ್ಟನೇ? – ಓಡ್ಯೋಡಿ ಬಂದು ಸಿಂಗರಿಸುತ್ತಿದ್ದವರ ಕೈಯಲ್ಲಿಂದ ಕೂಸನ್ನು ಕಸಿದುಕೊಂಡು ಹೋಗೇ ಬಿಟ್ಟ! ಅಮಂಗಳ ಆಡಬಾರದು, ಆದರೂ ಹೇಳುತ್ತೇನೆ – ಅವನು ಸಿಂಗಾರೆವ್ವನನ್ನು ಎತ್ತಿಕೊಂಡು ಹೋದೊಡನೆ ಸುಡುಗಾಡಕ್ಕೆ ಒಯ್ಯುವ ಹೆಣದ ಹಿಂದೆ ಧಾವಿಸುವಂತೆ ಹೆಂಗಸರು ಬೆನ್ನುಹತ್ತಿ ಹೋದರು. ನಾನೂ ಓಡಿಹೋದೆ.

ಅಲ್ಲಿ ನೋಡಿದರೆ, ಒಂದು ಬಾಜಾಬಜಂತ್ರಿಯೇ, ಒಂದು ಹಾಡೇ, ಒಂದು ಬೀಗರೇ, ಒಂದು ಧಾರೆಯೇ, ಏನಿದೆ? ಒಬ್ಬ ಪೋಟೋ ಹಿಡಿಯೋನು, ಅವನ ಯಂತ್ರ, ಅದರೆದುರಿಗೆ ಹಿಂಡುಹಿಂಡು ಜನ, ಅವರ ಮಧ್ಯೆ ಬಾಸಿಂಗ ಕಟ್ಟಿಕೊಂಡ ವರ, ಅವನ ಎಡಗಡೆ ಸಿಂಗಾರೆವ್ವನನ್ನು ಕೂರಿಸಿದ್ದರು. ಗೌಡ ತನ್ನ ಕೈಯನ್ನು ವರನ ಕೈಗೆ ಆಧಾರವಾಗಿ ಕೊಟ್ಟು ಸಿಂಗಾರೆವ್ವನ ಕೈ ಹಿಡಿಯುವಂತೆ ಮಾಡಿದ್ದ. ಅವಸರದಲ್ಲಿ ಎರಡು ಫೋಟೋ ಹಿಡಿದರು. ಆಯ್ತಲ್ಲ, ಮದುವೆ ಮುಗಿಯಿತು!

“ನೀ ನಂಬುತೀಯೇನಪ್ಪ, ಮದಿವಿ ಖರೆ ಖರೇನs ಮುಗೀತು!”

– ಈ ಮಾತು ಹೇಳುತ್ತ, ನನ್ನನ್ನೇ ನೋಡುತ್ತ ಶೀನಿಂಗವ್ವ ಗೋಡೆಗೊರಗಿದಳು. ನಾನು ಬೆಕ್ಕಸ ಬೆರಗಾಗಿದ್ದೆ. ಕಂಡು ಕೇಳರಿಯದ ಇಂಥ ಮದುವೆಯಿಂದ ಯಾರಿಗೆ ಹೊಯ್ಕಾಗುವುದಿಲ್ಲ? ಏನು, ಎತ್ತ ಹ್ಯಾಗೆಂದು ಕಣ್ಣರಳಿಸಿ ಕೇಳುತ್ತಿದ್ದಂತೆ ನನ್ನ ಪ್ರಶ್ನೆಗಳನ್ನೆಲ್ಲ ಮಧ್ಯದಲ್ಲೇ ಕತ್ತರಿಸಿ ಹೇಳಿದಳು:

“ಇಷ್ಟಕ್ಕs ಕಣ್ಣ ಕಿಸಿದರ ಹೆಂಗಪಾ? ಇಲ್ಲಿ ಕೇಳು, ಮಗಳ ಮದಿವೀ ಹೆಣದ ಜೋಡಿ ಮಾಡಿದ್ದ!”

ಈ ಮಾತಿನಿಂದ ನನಗೆ ಆಘಾತವಾಗಿದ್ದಿತೆಂದು ಮುದಕಿಗೂ ಗೊತ್ತಿತ್ತು. ತುಂಟತನದಿಂದ ತುಸು ನಕ್ಕಳು ಕೂಡ. ನನಗೆ ಆಘಾತ ಮಾಡುವುದಕ್ಕಾಗಿಯೇ ಹೀಗೆ ಹೇಳಿರಬಹುದೇ ಎಂದೂ ಅನ್ನಿಸಿತು. ಅವಳೋ ಇಂಥ ಅಘಟಿತಗಳನ್ನು ಅನುಭವಿಸಿ ಹಣ್ಣಾದವಳು. ನಾನೋ ಸಾಹಿತ್ಯದ ಕೃತಿಗಳಲ್ಲಿ ಕೂಡ ಇಂಥ ಘಟನೆಗಳನ್ನು ಓದಿದವನಲ್ಲ. ತುಸು ಹೊತ್ತು ನನ್ನ ಮುಖಭಾವಗಳನ್ನು ನೋಡಿ ಮನಸ್ಸಿನಲ್ಲೇ ತುಸು ಆಟ ಆಡಿ, ಮುದುಕಿ ಮತ್ತೆ ಕಥೆ ಮುಂದುವರಿಸಿದರಳು;

“ಮದುವೆಯಾದ ಕೂಡಲೇ ಅವಸರದಲ್ಲಿ ಊಟದ ಶಾಸ್ತ್ರ ಮುಗಿಸಿ ನಮ್ಮನ್ನು ಮತ್ತೆ ಗಾಡಿಯೊಳಗೆ ತಳ್ಳು ಎತ್ತಿನ ಕೊರಳು ಕಟ್ಟಿದರು. ಯಾರ ಮುಖದಲ್ಲೂ ಗೆಲುವಿರಲಿಲ್ಲ. ಗೌಡ್ತಿ ಸುಮ್ಮನೆ ಕಣ್ಣೀರು ಸುರಿಸುತ್ತಿದ್ದಳು. ಸಿಂಗಾರೆವ್ವ ತನ್ನ ತಾಯಿಯನ್ನೊಮ್ಮೆ, ನನ್ನನ್ನೊಮ್ಮೆ ನೋಡುತ್ತ ಖಿನ್ನಳಾಗಿ ಕೂತಿದ್ದಳು. ಮದುವೆಯ ಉಡುಪಿನಲ್ಲೇ ಅವಳನ್ನು ಗಾಡಿಗೇರಿಸಲಾಗಿತ್ತು. ಮೈತುಂಬ ಆಭರಣಗಳಿದ್ದವು. ಅಂಥ ಉಸಿರು ಕಟ್ಟುವ ವಾತಾವರಣದಲ್ಲೂ ಅವಳ ಚೆಲುವನ್ನು ನಾನು ಗಮನಿಸದಿರಲು ಸಾಧ್ಯವಾಗಲಿಲ್ಲ. ಅವಳು ಹೆಣದ ಜೊತೆಗೆ ಮದುವೆಯಾದದ್ದು ನಮಗಿನ್ನೂ ಗೊತ್ತಾಗಿರಲಿಲ್ಲ. ವರ ಬಿಳಿಚಿಕೊಂಡಿದ್ದ, ಮುಚ್ಚಿ ಹೇಳುವುದೇನು ಬಂತು; ಹೆಣದ ಹಾಗೇ ಇದ್ದ. ಮೈಯಲ್ಲಿ ಹುಷಾರಿರಲಿಲ್ಲವಲ್ಲ, ಅದಕ್ಕೇ ಹಾಗಿದ್ದಿದ್ದಾನು. ಮುಂದೆ ಇದೆಲ್ಲ ಒಂದಿಲ್ಲೊಂದು ದಿನ ಸರಿಹೋಗುವಂಥಾದ್ದು. ಮದುವೆ ಅವಸರದಲ್ಲಾಯಿತು. ಬಂಧು – ಬಳಗ ಕೂಡಲಿಲ್ಲ, ಅದ್ದೂರಿಯಾಗಿರಲಿಲ್ಲ ಎನ್ನುವುದನ್ನು ಬಿಟ್ಟರೆ ಉಳಿದಂತೆ ನನಗೆ ಆನಂದವೇ ಆಗಿತ್ತು; ಆನಂದವೇನು, ಅಸೂಯೆ ಕೂಡ. ಆ ಹುಡುಗ ಗೌಡನ ಒಬ್ಬನೇ ಮಗ. ಎಷ್ಟೊಂದು ಆಸ್ತಿ, ಎಂಥ ದೊಡ್ಡಮನೆ, ಎಷ್ಟು ಆಭರಣ ಹಾಕಿದ್ದರು!… ಇತ್ಯಾದಿ. ಆದರೆ ಮುಂದೆ ಗಾಡಿಯನ್ನು ತುಸು ಮುಂದೆ ಕಳಿಸಿ ಗೌಡ ತಿರುಗಿ ಶಿರಟ್ಟಿಗೇ ಹೋದ. ಆಗ ಎಲ್ಲರಿಗೆ ಉಸಿರು ಬಂತು. ಅಜ್ಜಯ್ಯ ಮೆಲ್ಲಗೆ ಬಾಯಿಬಿಟ್ಟ. ಮದುವೆಯ ಪೌರೋಹಿತ್ಯ ಆತನದೇ ತಾನೆ? ಅವನಿಗೆಲ್ಲ ಗೊತ್ತಾಯಿತು. ನಡೆದಿದ್ದನ್ನೆಲ್ಲ  ಒಂದೂ ಬಿಡದೆ ಹೇಳಿದ. ಅದನ್ನು ಕೇಳಿ ಹೆಂಗಸರು ಹೆಣದ ಮುಂದೆ ಅತ್ತಂತೆ ಸಿಂಗಾರೆವ್ವನನ್ನು ತಬ್ಬಿಕೊಂಡು ಅತ್ತರು. ಅಳುತ್ತಲೇ ಊರು ಸೇರಿದೆವು. ಅದು ನಡೆದದ್ದು ಹೀಗೆ:

ಶಿರಟ್ಟಿಯ ಗೌಡ ಸತ್ತಿದ್ದ. ಅವನಿಗೆ ಒಬ್ಬನೇ ಮಗ, ವಯಸ್ಸಿನ್ನೂ ಹದಿನೆಂಟಾಗಿರಲಿಲ್ಲ. ಕ್ಷಯರೋಗಕ್ಕೆ ತುತ್ತಾದ. ನಾಡಿನ ಎಲ್ಲಾ ಮದ್ದುಮಸಿ ಮಾಡಿದ್ದಾಯ್ತು. ಅದೇನು ಗುಣವಾಗಲಿಲ್ಲ. ಆ ಹುಡುಗ ನಮ್ಮ ಗೌಡನ ತಂಗಿಯ ಮಗ. ಅಂದರೆ ಗೌಡನಿಗೆ ಸೋದರಳಿಯನಾಗಬೇಕು. ಅಣ್ಣ – ತಂಗಿ ಸೇರಿ ಅದೇನೇನು ಹೊಂಚಿದರೋ, ಅಥವಾ ಅದ್ಯಾವ ಪರಿಯಲ್ಲಿ ಗೌಡ ತನ್ನ ತಂಗಿಯನ್ನು ಒಪ್ಪಿಸಿದನೋ, ಆ ಸಾಯಲಿರುವ ಹುಡುಗನಿಗೇ ತನ್ನ ಮಗಳನ್ನು ಮದುವೆ ಮಾಡಿಕೊಡುವುದೆಂದು ತೀರ್ಮಾನಿಸಿ ಗೌಡ ಊರಿಗೆ ಬಂದ. ಗುಡ್ಡದೆಲ್ಲಮ್ಮನ ಹೆಸರಲ್ಲಿ ನಿಬ್ಬಣ ಹೊರಟ. ನಮ್ಮ ಸವಾರಿ ಶಿರಟ್ಟಿಗೆ ತಲುಪುವಷ್ಟರಲ್ಲಿ ವರ ಸತ್ತುಹೋಗಿದ್ದ. ಗೌಡ ಮುಂದಾಗಿ ಇದನ್ನೆಲ್ಲಾ ತಿಳಿದೇ ಶಿರಟ್ಟಿಯಲ್ಲಿ ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟಿರಲು ತನ್ನವರನ್ನು ನಿಯಮಿಸಿ ಬೆಳಗಾವಿಯಿಂದ ಪೋಟೋ ಹಿಡಿಯೋರನ್ನೂ ಕರೆಸಿದ್ದ. ಮುಂದೆ ಮದುವೆ ನಡೆದು ಹೋಯ್ತಲ್ಲ. ವರ ಸತ್ತದ್ದನ್ನು ನಾವು ಈ ಕಡೆಗೆ ಬಂದ ಮೇಲೆ ಸಾರಲಾಯಿತು. ಗೌಡನ ತಂಗಿಗೆ ಕೂಡ ಮಗ ಸತ್ತದ್ದನ್ನು ಮದುವೆಯ ನಂತರವೇ ಹೇಳಿದರಂತೆ! ಗೌಡ ಹೀಗ್ಯಾಕೆ ಮಾಡಿದ ಗೊತ್ತ? ಹ್ಯಾಗೂ ಹುಡುಗ ಸಾಯುತ್ತಾನೆ. (ಸತ್ತೇ ಹೋಗಿದ್ದನಲ್ಲ!) ಅವ ಸತ್ತರೆ ಅವನ ಆಸ್ತಿಯೆಲ್ಲ ಅವನ ಹೆಂಡತಿಗೆ ಅರ್ಥಾತ್ ತನ್ನ ಮಗಳಿಗೆ ಸೇರಬೇಕು! ಮನುಷ್ಯನಲ್ಲಿ ಇಂಥಾ ಆಮಿಷ ಹಾಕುವ ದೇವರು ಸಣ್ಣವ ಹ್ಯಾಗಾದಾನು? ನೀನೂ ಎಷ್ಟೋ ಆಸೆ ಬುರುಕರನ್ನು ನೋಡಿರಬೇಕು, ಇಂಥವರನ್ನು ಕಂಡಿದ್ದೀಯೇನಪ್ಪ? ಅದೂ ಎಂಥಾ ಆಸೆ, ಕರುಳಿನ ಕುಡಿ ಕೂಡ ಕಾಣಿಸುವುದಿಲ್ಲವೆಂದರೆ?

ದೇವರು ಯಾವಾಗಲೂ ಕಣ್ಣು ಮುಚ್ಚಿಕೊಂಡಿರುತ್ತಾನೆನ್ನುವುದೂ ತಪ್ಪೇ! ಶಿರಟ್ಟಿಯ ಗೌಡನಿಗೆ ಬೇರೆ ಹೆಂಡತಿಯರೂ ಇದ್ದರು. ಅದು ಅನ್ಯಾಯದ ಮದುವೆಯೆಂದು ಕೋರ್ಟಿನಲ್ಲಿ ನ್ಯಾಯ ಹೂಡಿದರು. ಕೇಸು ಮುಂಬೈ ತನಕ ಹೋಯಿತು. ನಿಕಾಲಿಯಾಗುವುದಕ್ಕೆ ಐದಾರು ವರ್ಷಗಳೇ ಹಿಡಿದವು. ಕೊನೆಗೂ ನಮ್ಮ ಗೌಡನೇ ಕೇಸಿನಲ್ಲಿ ಗೆದ್ದ ಅಂತಿಟ್ಟುಕೋ, ಪೋಟೋದಲ್ಲಿದ್ದ ಮದುವೆಯನ್ನೇ ಜಜ್ಜಿ ಸಾಹೇಬರು ಖರೇ ಮದುವೆಯೆಂದಿದ್ದರು! ಆಸ್ತಿಯೇನೋ ಬಂತು. ಆದರೆ ಅದರ ದುಪ್ಪಟ್ಟು ತಿಪ್ಪಟ್ಟು ಖರ್ಚು ಮಾಡಬೇಕಾಯ್ತು. ಮನೆಯಲ್ಲಿದ್ದ ಚಿನ್ನ ಬೆಳ್ಳಿಯೆಲ್ಲವೂ ಕರಗಿಹೋಯ್ತು. ಸಾಲದ್ದಕ್ಕೆ ಊರಿನ ಹೊಲ ಮನೆಗಳನ್ನೂ ಅಡವಿಡಬೇಕಾಯಿತು.

ಹೆಣಕ್ಕೆ ಮಗಳನ್ನು ಕೊಟ್ಟ ಗೌಡನಿಗೆ ಊರೆಲ್ಲ ಛೀ ಥೂ ಹಾಕಿದರು. ಆದರೆ ಗೌಡನ ಎದುರಿನಲ್ಲಿ ಯಾರೂ ಉಗುಳಲಿಲ್ಲವಲ್ಲ. ಎದುರಿಗೇ ಉಗುಳಿದ್ದರೆನ್ನೋಣ. ಗೌಡನ ಸ್ವಭಾವ ಗೊತ್ತೇ ಇದೆ. ಆತನಿಗೆ ನಾಚಿಕೆಯೆಂಬುದೇ ಇರಲಿಲ್ಲ. ಸಾಲದ್ದಕ್ಕೆ ಅಧಿಕಾರವಿತ್ತು. ದರ್ಪ ಇತ್ತು. ಅಥವಾ ಇದ್ದದ್ದಕ್ಕಿಂತ ಹೆಚ್ಚಾಗಿಯೇ ದರ್ಪ ಉಪಯೋಗಿಸಿ ಸದ್ದಡಗಿಸಬಲ್ಲವನಾಗಿದ್ದ. ಗೌಡನ್ನ ಕಂಡಾಗಂತೂ ನನ್ನ ಮೈಯೆಲ್ಲ, ಉರಿದುರಿದು ಬೀಳುತ್ತಿತ್ತು. ಇಡೀ ಜಗತ್ತಿನಲ್ಲಿ ಅವನಂಥ ಚಂಡಾಲ ಇರೋದು ಸಾಧ್ಯವಿಲ್ಲವೆಂದೇ ನನ್ನ ತೀರ್ಮಾನವಾಗಿತ್ತು. ಮತ್ತು ಅವ ಎಂದು ಸತ್ತಾನೋ ಎಂದು ತಪಿಸುತ್ತ, ಅವ ಸತ್ತ ದಿನ ಹಾಲು ಕುಡಿಯಬೇಕೆಂದೂ ನಿಶ್ಚಯಿಸಿಕೊಂಡಿದ್ದೆ.

ಈ ಮಧ್ಯೆ ನಾನು ಮತ್ತು ಸಿಂಗಾರೆವ್ವ ಇಬ್ಬರೂ ಮೈನೆರೆದು ಹೆಂಗಸರಾಗಿದ್ದೆವು. ಮದುವೆಯಾಗಿ ಬಂದಮೇಲಂತೂ ಸಿಂಗಾರೆವ್ವ ಯಾರೊಂದಿಗೂ, ನನ್ನೊಂದಿಗೂ ಮುಖಕೊಟ್ಟು ಮಾತಾಡುತ್ತಿರಲಿಲ್ಲ. ಸಾಲೆ ಬಿಟ್ಟಿದ್ದಳು. ಸದಾ ತನ್ನಮ್ಮನ ಕತ್ತಲು ಕೋಣೆಯಲ್ಲೇ ಕೂತಿರುತ್ತಿದ್ದಳು. ಮೈನೆರೆದ ಹುಡುಗಿಯರು ಹುಡುಗಾಟ ಬಿಡುವುದು ಸರ್ವೇಸಾಮಾನ್ಯವಾದರೂ ಸಿಂಗಾರೆವ್ವನ ವಿಷಯ ಹಾಗಿರಲಿಲ್ಲ. ಮದುವೆಯ ಮೊದಲೇ ಅವಳು ವಿಧವೆಯಾಗಿದ್ದಳು. ಹಾಗಂತ ಯಾರನ್ನೂ ದೂರುವ ಪೈಕಿ ಅಲ್ಲ ಅವಳು. ಇದೆಲ್ಲ ಪೂರ್ವಜನ್ಮದ ಫಲ ಎಂದು, ಅನುಭವಿಸಿಯೇ ತೀರಬೇಕು ಎಂಬುದು ಅವಳ ಒಟ್ಟು ಧೋರಣೆಯಾಗಿತ್ತು. ಯಾರೇನು ತಪ್ಪಿಸಲಾಗುತ್ತಿತ್ತು? ಅಪ್ಪ ಎಂಬವನೋ ಮಾಡಬಾರದ್ದನ್ನು ಮಾಡಿ, ಮಾಡಿದ್ದನ್ನು ದಕ್ಕಿಸಿಕೊಳ್ಳುವುದಕ್ಕಾಗಿ ಕೋರ್ಟು ಕಚೇರಿ ಅಲೆದಾಡುತ್ತಿದ್ದ. ಹೆಂಗಸರೋ ಬಾಯಿಮಾತ್ರ ಇದ್ದ ಅಬಲೆಯರು. ತಾವು ಬಲ್ಲ ಬೈಗುಳಗಳಲ್ಲಿ ಗೌಡನ್ನ ಕದ್ದು ಶಪಿಸಬಲ್ಲವರು. ಎಷ್ಟು ದಿನ ಅಂತ ಅವರಾದರೂ ಶಪಿಸುತ್ತಾರೆ? ಮೈಗೆ ಒಗ್ಗಿದ ಮೇಲೆ ಅವರೂ ಸುಮ್ಮನಾದರು. ಊರ ಹೆಂಗಸರು, ಗೌಡನಿಲ್ಲದಾಗ ಬಂದು ಸತ್ತವರ ಬಂಧುಗಳನ್ನು ಸಮಾಧಾನ ಮಾಡುವ ಹಾಗೆ ಮಾತಾಡಿಕೊಂಡು ಹೋಗುತ್ತಿದ್ದರು.

ನನಗೊಂದೇ ಸಮಾಧಾನವೆಂದರೆ ಗೌಡನನ್ನು ಮರೆಪ್ಪ ಇನ್ನಷ್ಟು ತೀವ್ರವಾಗಿ ದ್ವೇಷಿಸುತ್ತಿದ್ದ. ತನ್ನ ಗಡುಸಾದ ದನಿಯಿಂದ ಅಸಹ್ಯ ಬೈಗುಳಗಳನ್ನು, ಒಂದೊಂದು ಬೈಗಳನ್ನು ಹಲ್ಲಿನಿಂದ ಕಚ್ಚಿಕಚ್ಚಿ ಉಗುಳಿದಂತೆ ಬೈಯುತ್ತಿದ್ದ. ಕೋಪಿಸಿಕೊಂಡಾಗ ಇವನೆಲ್ಲಿ ಗೌಡನನ್ನು ಕೊಂದು ಹಾಕುತ್ತಾನೋ ಎಂಬಂಥ ಆವೇಶ ಅವನ ಮುಖದಲ್ಲಿ ವ್ಯಕ್ತವಾಗುತ್ತಿತ್ತು. ಸಿಂಗಾರೆವ್ವನನ್ನು ನೋಡುವುದಕ್ಕಾಗಿ ಅವನೆಷ್ಟೋ ಪ್ರಯತ್ನ ಪಟ್ಟ. ಆಕೆ ಹಿಂದೆ ಬಯಸುತ್ತಿದ್ದ ಅಪರೂಪದ ಪದಾರ್ಥಗಳನ್ನು ತಂದು ಆಕೆಗೆ ಕೊಡೆಂದು ನನ್ನ ಕೈಗೆ ಕೊಟ್ಟ. ನನಗೆ ಸಿಂಗಾರೆವ್ವನ ಸ್ವಭಾವ ಗೊತ್ತು. ಅವಳ್ಯಾವುದನ್ನೂ ಮುಟ್ಟಲಿಲ್ಲ. ದೀಪ ಮುಟ್ಟಿ ಆಣೆ ಮಾಡಿ “ನಾ ಆಕಿಗೇನೂ ಮಾಡಾಣಿಲ್ಲ, ಆಕೀನೊಮ್ಮಿ ಕೊಟ್ಟಿಗೀ ಹಂತ್ಯಾಕ ಕರಕೊಂಬಾ” ಎಂದು ಅನೇಕ ಸಲ ಅಂಗಲಾಚಿದ. ಅಂದು ರಾತ್ರಿ ನಾನು ಮತ್ತು ಸಿಂಗಾರೆವ್ವ ಅಕ್ಕಪಕ್ಕ ಬೈಲುಕಡೆ ಕೂತಿದ್ದೆವು. ಹೆಂಗಸರ್ಯಾರೂ ಬಳಿ ಇರಲಿಲ್ಲವಾದ್ದರಿಂದ ಮರೆಪ್ಪ ಅಂಗಲಾಚಿದ್ದನ್ನು ಹೇಳಿದೆ. ಆಕೆಗೇನು ನೆನಪಾಯಿತೋ. ಬೈಲಕಡೆ ಕೂತವಳು ಹಾಗೇ ಮುಖ ಮುಚ್ಚಿಕೊಂಡು “ನನ್ನ ನಶೀಬ ಏನಾತs ಶೀನಿಂಗೀ” ಎಂದು ಸಣ್ಣ ದನಿ ತೆಗೆದು ಅತ್ತೇಬಿಟ್ಟಳು. ಕರುಳು ಕತ್ತರಿಸಿದಂತಾಗಿ ನಾನೂ ದನಿ ತೆಗೆದು ಅತ್ತೆ.

ಮನೆಗೆ ವಾಪಾಸ್ ಬಂದಾಗ ತೊಲೆಬಾಗಿಲ ಬಳಿ, ಚಪ್ಪಲಿ ಕಳೆಯುವಲ್ಲಿ ಮರೆಪ್ಪ ನಿಂತಿದ್ದ. ಇಬ್ಬರು ನೋಡಿದೆವು. ಸಿಂಗಾರೆವ್ವ ಏನೇನೂ ತೋರದೆ ಒಳಗೆ ಹೋದಳು. ಅವನು ಉತ್ತರಕ್ಕಾಗಿ ಕಾಯುತ್ತಿದ್ದನೆಂದು ನನಗೆ ಗೊತ್ತು. ಹೋಗಿ ಚರಿಗೆ ತೊಳಿದಿಟ್ಟು, ಕೈಕಾಲಮೇಲೆ ನೀರು ಚೆಲ್ಲಿಕೊಂಡು ಕೊಟ್ಟಿಗೆಗೆ ಬಂದೆ.

ದೀಪದ ಮುಂದೆ ಮರೆಪ್ಪ ಮೊಳಕಾಲಲ್ಲಿ ತಲೆ ಹುದುಗಿ ಕುಂತಿದ್ದ. “ಮರ್ಯಾ” ಎಂದೆ. ಮುಖ ಎತ್ತಿ ನೋಡಿದ. ನೋಡಿದರೆ ಕಣ್ಣು ಅತ್ತು ಕೆಂಪಾಗಿದ್ದವು. ಈ ಹುಡುಗನ ಮುಂದೆ ಗೌಡ ಲುಚ್ಚಾ ಎನ್ನಿಸಿತು. ಅವನ ಮುಖಭಾವ ನೋಡಿ ಅವನ ಬಗ್ಗೆ ಗೌರವ ಭಾವನೆ ಮೂಡಿತು. ಸುಮ್ಮನೆ ತಿರುಗಿ ಬಂದೆ.

ಈ ಸ್ಥಿತಿ ನಾಕೈದು ವರ್ಷ ಹೀಗೆ ಇತ್ತು. ಈ ಮಧ್ಯೆ ಸಿಂಗಾರೆವ್ವನಂತೂ ನನ್ನ ಸಹವಾಸ ಬಿಟ್ಟುಬಿಟ್ಟಿದ್ದಳು. ಇನ್ನು ಇದ್ದವಳು ಮರ್ಯಾ ಒಬ್ಬ. ಸಿಂಗಾರೆವ್ವನ ಬಗ್ಗೆ ಮಾತಾಡುವ ನೆಪಮಾಡಿಕೊಂಡು ಕದ್ದು ಕದ್ದು ಕೊಟ್ಟಿಗೆಗೆ ಹೋಗುತ್ತಿದ್ದೆ. ಒಂದು ದಿನ ಮರ್ಯಾನಿಗೆ ಹೇಳಲೇಬೇಕಾದ ವಿಷಯವಿತ್ತು. ಶಿರಟ್ಟಿಯ ಆಸ್ತಿ ಗೌಡನಂತಾಗಿತ್ತು. ಇತ್ತ ಗೌಡ್ತಿ ಮಗಳ ಏಕಾಂಗಿತನ ಸಹಿಸದೆ ಇನ್ನೊಂದು ಮದುವೆ ಮಾಡುವಂತೆ ಗೌಡನಿಗೆ ಹೇಳಿ ಅತ್ತಿದ್ದಳು, ಅದನ್ನು ಕೇಳಿ ನನ್ನ ಗೆಳತಿಗೂ ಅತ್ತಿದ್ದಳು. ಮರ್ಯಾ ಯಾವಾಗ ಬಂದಾನೋ ಯಾವಾಗ ಇದನ್ನೆಲ್ಲಾ ಹೇಳೇನೋ ಎಂದು ತವಕಿಸುತ್ತಿದ್ದೆ. ಕೊನೆಗೊಮ್ಮೆ ಮರ್ಯಾ ತೋಟದಿಂದ ಬಂದ.

ಕೊಟ್ಟಿಗೆಯಲ್ಲಿ ಎತ್ತುಕಟ್ಟಿ ಮೇವು ಕೊರೆದು ಹಾಕಿದ್ದ. ನಾನು ಹೋದೆ. ದೀಪ ಹಚ್ಚುವುದಕ್ಕೆ ಕಡ್ಡೀಪೆಟ್ಟಿಗೆ ತೆಗೆದು ಕೊರೆಯಬೇಕೆಂದಿದ್ದ. ನಾನು ಅವನ ಪಕ್ಕಕ್ಕೇ ಹಾರಿ ಅವನ ಕಿವಿಯ ಬಳಿ ಬಾಯಿ ತಂದು ನಡೆದುದನ್ನೆಲ್ಲ ಹೇಳಿದೆ. ಹೇಳುತ್ತ ಹೋದಂತೆ ಈತ, ಆ ದಿನ ಸಿಂಗಾರೆವ್ವನನ್ನು ಹಿಡಿದು ಕೆನ್ನೆ ಕಚ್ಚಿದ ಹಾಗೆ ನನಗೂ ಮಾಡಿದರೇನು ಗತಿ ಎಂದುಕೊಂಡೆ. ಮೈ ಝುಂ ಎಂದಿತು. ನನ್ನ ಎದೆ ಅವನ ಬೆನ್ನಿಗೆ ತಾಗುತ್ತಿತ್ತು. ಅವನ ಬೆನ್ನಿಗೇನಾದರೂ ಬುದ್ಧಿ ಇದ್ದಿದ್ದರೆ ನನ್ನ ಎದೆ ಹ್ಯಾಗೆ ಹಾರಿಹಾರಿ ಅದನ್ನಿರಿಯುತ್ತಿತ್ತು ಎಂದು ತಿಳಿಯಬಹುದಾಗಿತ್ತು. ಹಾಗೇನಾದರೂ ಅವನು ಕೆನ್ನೆ ಕಚ್ಚಿದರೆ… ಕಚ್ಚಲೆಂದೇ ಅಂದುಕೊಂಡೆ. ಅಯ್ಯೋ ಇವನ್ಯಾಕೆ ಕಚ್ಚುತ್ತಿಲ್ಲ ಎಂದೂ ಅನ್ನಿಸಿತು. ನನ್ನ ಬಿಸಿ ಉಸಿರಾಟ ನನಗೇ ಕೇಳಿಸುತ್ತಿತ್ತು. ಮುಂದೆ ಬಂದು ಅವನ ಕೈ ಹಿಡಿದುಕೊಂಡೆ. ಹಸೀ ಮರದ ಹಾಗೆ ತಂಪಾಗಿತ್ತು. ಆತನಿಗೂ ಗೊತ್ತಾಗಿ ಹೋಯಿತೋ ಏನೋ, ಕಡ್ಡಿಗೀರಿ ನನ್ನ ಮುಖಕ್ಕೆ ಅದರ ಉರಿ ಹಿಡಿದ. ಅವನ ಕಣ್ಣಲ್ಲಿ ಎರಡು ಕೊಳ್ಳಿ ಕಂಡವು. ನನ್ನ ಉಸಿರಿಂದ ಅದು ಆರಿತೋ, ಅಥವಾ ಊದಿ ಆರಿಸಿದನೋ ಅಂತೂ ಕಡ್ಡಿ ಆರಿತು. ಹಾಗೇ ಅವನ ಕೈ ಹಿಡಿದುಕೊಂಡು ನನ್ನ ಎದೆಗೆ ಒತ್ತಿಕೊಂಡೆ. ಅವನು “ಥೂ ಹಾದರಗಿತ್ತೇ” ಎಂದು ಹೇಳಿ, ನನ್ನನ್ನ ದೂಕಿ ಇನ್ನೊಂದು ಕಡ್ಡಿ ಕೊರೆದು ದೀಪ ಹಚ್ಚಿದ. ಅಲ್ಲಿ ನಿಲ್ಲದೆ ನಾನು ಓಡಿ ಓಡಿ ಬಂದೆ.

ಬಂದ ಮೇಲೆ ನನಗೆ ನಾಚಿಕೆಯಾಯಿತು. ಒಬ್ಬರ ಬಾಯಿಂದ ಹಾದರಗಿತ್ತೆ ಎಂದು ಅನ್ನಿಸಿಕೊಳ್ಳುವುದು ನನಗೆ ಅಗ್ಗದೀ ಆಗದ ಮಾತು. ಆದರೆ ಅದೇನು ಒತ್ತಡವೋ ಆ ಗಳಿಗೆಯಲ್ಲಿ ಹಾಗಾಗಿದ್ದೆ. ಆದರೆ ನಡೆದದ್ದನ್ನು ಬೈಲಕಡೆ ಹೋದಾಗ, ಸಿಂಗಾರೆವ್ವ ಒಂಟಿಯಾಗಿ ಸಿಕ್ಕಿದ್ದಾಗಲೂ ಹೇಳಲಿಲ್ಲ. ಅಥವಾ ಅವಳೆದುರಿದ್ದಾಗಿ ಈ ಘಟನೆ ನೆನಪಾದರೆ ಮನಸ್ಸು ಹುಳ್ಳಗಾಗುತ್ತಿತ್ತು. ಒಂದು ಧೈರ್ಯವೆಂದರೆ ಮರೆಪ್ಪ ಇದನ್ನು ಬೇರೆಯವರ ಮುಂದೆ ಆಡಿಕೊಂಬನಲ್ಲ ಎಂಬುದೇ.

ಸಿಂಗಾರೆವ್ವನ ಮರುಮದುವೆಯ ಬಗ್ಗೆ ಮನೆಯಲ್ಲಿ ವಾದವಿವಾದ ಎದ್ದಿತ್ತು. ಕೋರ್ಟಿನಲ್ಲಿ ಕೇಸು ಗೆಲ್ಲುವುದಕ್ಕಾಗಿ ತನ್ನ ಆಸ್ತಿ ಕರಗಿದ್ದೋ, ಸಿಂಗಾರೆವ್ವನ ಬಗೆಗಿನ ಕರುಣೆಯೋ ಕಾರಣವಾಗಿ ಗೌಡ ಕರಗಿದ್ದ. ಒಂದು ದಿನ ಇದ್ದಕ್ಕಿದ್ದಂತೆ ಮನೆಯಲ್ಲಿ ಶಿವಾಪುರ ದೇಸಾಯರ ವರ್ಣನೆ ಮಾಡಿದ. ಒಬ್ಬನೇ ಹುಡುಗನೆಂದೂ, ಅತ್ತೆಯೊಬ್ಬಳನ್ನು ಬಿಟ್ಟು ಮನೆಯಲ್ಲಿ ಇನ್ಯಾರು ಇಲ್ಲವೆಂದೂ, ಅಂಥಾ ದೊಡ್ಡ ಅರಮನೆಗೆ ಸಿಂಗಾರೆವ್ವನೇ ದೊರೆಸಾನಿಯೆಂದೂ ಬಾಯಿತುಂಬಾ ಹೇಳಿದ. ಗೌಡ್ತಿ ಈ ಮಾತು ಕೇಳಿ “ಈ ಸಲ ಆದರೂ ವರ ಮದಿವ್ಯಾಗೂ ಮುನ್ನ ಸತ್ತಿರೋದಿಲ್ಲ, ಹೌಂದಲ್ಲೊ?” ಎಂದು ಕೇಳಿದಳು. ಅದು ಅವಳ ಸಂಕಟದ ಮಾತು. ಅಮಂಗಲ ಆಡಬೇಡವೆಂದೂ ಹುಡುಗ ಚೆನ್ನಾಗಿದ್ದಾನೆಂದೂ ಗೌಡನೇ ಹೇಳಬೇಕಾಯಿತು. ಅದರ ಮಾರನೇ ದಿನವೇ ಮರ್ಯಾ ತನ್ನ ತಾಯಿಯನ್ನು ಕೊಂದು ಪರಾರಿಯಾದ.

ಈ ತನಕ ನಾನು ಸ್ವಾಭಾವಿಕವಾಗಿ ಸತ್ತವರ ಹೆಣ ಕಂಡವಳೇ ಹೊರತು ಖೂನಿಯಾದ ಹೆಣಗಳನ್ನಲ್ಲ. ಎಷ್ಟು ಭಯಾನಕವಾಗಿತ್ತಪ್ಪ ಅದು! ನೆನೆದರೀಗಲೂ ಕಣ್ಣಿಗೆ ಕಟ್ಟುತ್ತದೆ. ಯಾರಂತ ನೆನಪಿಲ್ಲ, ಆ ದಿನ ಊರೊಳಕ್ಕೆ ಹೋಗಿದ್ದೆ. ತಿರುಗಿ ಬರುತ್ತಿರುವಾಗ ಗದ್ದಲ ಕೇಳಿಸಿತು, ಮರ್ಯಾ ತನ್ನ ತಾಯಿಯನ್ನು ಕೊಂದನಲ್ಲ – ಕೊಂದು ಓಡಿಹೋದನೆ? ಪುಣ್ಯಾತ್ಮ ಹೆಣ ಹೊತ್ತುಕೊಂಡು ಊರೊಳಕ್ಕೇ ಬಂದನೇ! ಚಾವಡಿತನಕ ಹೆಗಲಮೇಲೆ ಅವಳ ಹೆಣ ಹೊತ್ತುಕೊಂಡು ಬಂದದ್ದನ್ನು ಸೂಥಾ ನಾನೇ ಕಣ್ಣಾರೆ ಕಂಡಿದ್ದೇನೆ. ರಸ್ತೆ ತುಂಬ ಜನ ಸೇರಿದ್ದರು. ಅವನ ಮೈತುಂಬ ನೆತ್ತರು ಸೋರ್ಯಾಡುತ್ತಿತ್ತು. ಕಣ್ಣು ಕೆಂಪಗೆ ಮಾಡಿಕೊಂಡು ರೌದ್ರಾವೇಶ ತಾಳಿದ್ದ. “ಆ ಗೌಡ ಸೂಳೀಮಗ ಎಲ್ಲಿದ್ದರೂ ಬಿಡಾಣಿಲ್ಲ” ಎಂದು ಮರ್ಯಾ ಗುಡುಗಿ ಹೆಣವನ್ನು ಚಾವಡಿಯಲ್ಲಿ ಚೆಲ್ಲಿ ಗೌಡನ ಮನೇ ಕಡೆ ಓಡಿದ. ಓಡಿದಾಗ ಇನ್ನೇನು ಗೌಡ ಸತ್ತನೆಂದೇ ತಿಳಿದು ಗಡಗಡ ತೊಡೆ ನಡುಗಿ ನಡೆಯಲಾರದವಳಾಗಿದ್ದೆ. ಅಷ್ಟು ಜನ ಸೇರಿದ್ದರಲ್ಲ, ಒಬ್ಬರೂ ಮರ್ಯಾನನ್ನೂ ಹಿಡಿಯಲಾಗಲಿಲ್ಲ. ಅವನು ಗೌಡನ ಮನೇ ಕಡೆ ಓಡಿದಾಗ ದೂರದಿಂದ ಎಲ್ಲರೂ ಅವನ ಬೆನ್ನು ಹತ್ತಿದರೇ ವಿನಾ ಒಂದೂ ಮಾತಾಡಲಿಲ್ಲ. ಜನ ಅಷ್ಟು ಗಾಬರಿಯಾಗಿದ್ದರು. ಅವನ ತಾಯಿಗಾಗಿ ಹೆಂಗಸರು ಮಕ್ಕಳು ಕಣ್ಣೀರು ಸುರಿಸಿದರೇ ಹೊರತು ದನಿಮಾಡಿ ಅಳುವ ಧೈರ್ಯ ಮಾಡಲಿಲ್ಲ. ಒಬ್ಬಿಬ್ಬರು ಕಿರಿಚಿದರಷ್ಟೆ. ಆದರೆ ಮರ್ಯಾನ ಚೂರೀ ದೃಷ್ಟಿ ಈ ಕಡೆ ತಿರುಗಿದೊಡನೆ ಹೆಣ್ಣು ನಾಯಿಗಳ ಹಾಗೆ ಒಂದೆರಡು ಬಾರಿ ಕುಂಯ್‌ಗುಟ್ಟಿ ಸುಮ್ಮನಾದರಷ್ಟೆ. ಜನ ಆತನ ಹಿಂದೆ ಓಡಿದರಲ್ಲ, ನನಗೆ ಸಾಧ್ಯವಾಗಲಿಲ್ಲ. ಪಕ್ಕದ ಮನೆಯ ಕಟ್ಟೆಯ ಮೇಲೆ ಕುಸಿದುಬಿಟ್ಟೆ. ಸಾವರಿಸಿಕೊಂಡು ವಾಡೆಗೆ ಬಂದಾಗ ಮರ್ಯಾ ಆಗಲೇ ಪರಾರಿಯಾಗಿದ್ದ.

ವಾಡೆಗೆ ಹೋದರೆ ತೊಲೆಬಾಗಿಲು ಭದ್ರಮಾಡಿ ಒಳಗಿನಿಂದ ಅಗಳಿ ಜಡಿದು ಬಿಟ್ಟಿದ್ದರು. ಹೀಗಾಗಿ ಅದು ತೆಗೆಯುವ ತನಕ ನಾನು ಹೊರಗೇ ಕಾಯಬೇಕಾಯಿತು. ಅಲ್ಲೂ ಜನ ಸೇರಿದ್ದರು. ತಂತಮ್ಮಲ್ಲಿ ಪಿಸುಗುಡುತ್ತಿದ್ದರೇ ಹೊರತು ದನಿ ಮಾಡಿ ಯಾರೂ ಮಾತಾಡುತ್ತಿರಲಿಲ್ಲ. ಹಿಂಡನಗಲಿದ ಕರುವಿನಂತೆ, ಯಾರಾದರೂ ನನ್ನನ್ನು ನನ್ನ ಬಳಗ ಸೇರಿಸುವಿರಾ, ಎಂಬಂತೆ – ಅವರಿವರ ಮುಖಗಳನ್ನು ಪಿಳಿಪಿಳಿ ನೋಡುತ್ತ ಅಳಲಾರರೆ ಅಳುತ್ತ ನಿಂತೆ, ನನ್ನ ಬಬ್ಬೆ ಯಾರೂ ಕಾಳಜಿ ತೋರಿಸಲಿಲ್ಲ. ಅಳೋಣವೆನಿಸುತ್ತಿತ್ತು ದನಿಮಾಡಿ. ಆದರೆ ಅಲ್ಲಿದ್ದ ಮೌನ ಅದಕ್ಕೆ ಅನುಕೂಲವಾಗಿರಲಿಲ್ಲ. ಬಹಳ ಹೊತ್ತಾದ ಮೇಲೆ ಕುಲಕರ್ಣಿ ಬಂದ. ಮರ್ಯಾ ಪರಾರಿಯಾಗಿದ್ದಾನೆಂದೂ ಬಾಗಿಲು ತೆರೆಯಬೇಕೆಂದೂ ಆತ ವಾಡೆಯ ತೊಲೆ ಬಾಗಿಲಲ್ಲಿ ನಿಂತು ಅನೇಕ ಬಾರಿ ಕೂಗಿದ. ತೆರೆಯಿತು. ಕುಲಕರ್ಣಿಯ ಜೊತೆಗೇ ನಾನು ಒಳಗೆ ನುಗ್ಗಿದೆ.

ಒಳಗೆ ನೋಡಿದರೆ ಗೌಡನ ಮನೆಯವರೆಲ್ಲ ಎಷ್ಟು ಗಾಬರಿಯಾಗಿದ್ದರು ಶಿವನೆ! ಹೆಂಗಸರೆಲ್ಲ ನಡುಮನೆಯ ಒಂದು ಮೂಲೆಯಲ್ಲಿ ಕೂಡುಬಿದ್ದಿದ್ದರು. ಅವರ ನಡುವೆ ಸಿಂಗಾರೆವ್ವ ಇದ್ದಳು. ನಾನು ಅವರಲ್ಲಿ ಇಲ್ಲದ್ದನ್ನಾಗಲೀ, ಈಗ ಬಂದು ಸೇರಿಕೊಂಡಿದ್ದನ್ನಾಗಲೀ ಯಾರೂ ಗಮನಿಸಲೇ ಇಲ್ಲ. ಯಾವಾಗ ಮರ್ಯಾ ನುಗ್ಗಿ ಗೌಡನ ಖೂನಿ ಮಾಡುತ್ತಾನೋ ಎಂದು ಅವರೆಲ್ಲ ತಂತಮ್ಮ ಜೀವಗಳನ್ನು ಅಂಗೈಯಲ್ಲಿ ಇಟ್ಟುಕೊಂಡು, ಒದರಲಾರದೆ, ಅಳಲಾರದೆ ಗಪ್‌ಚಿಪ್ ಕೂತಿದ್ದರು. ಗೌಡನನ್ನು ದೇವರ ಕೋಣೆಯಲ್ಲಿ ಅಡಗಿಸಿ ಕೀಲಿ ಹಾಕಿದ್ದರು. ಕುಲಕರ್ಣಿ ಬಂದದ್ದರಿಂದ ಕೀಲಿ ತೆಗೆಸಿ ಗೌಡ ಹೊರಬಂದ. ಆಗಲೂ ಆತ ಜೋರಿನಿಂದ ಮಾತಾಡಲಿಲ್ಲ. ಕುಲಕರ್ಣಿಯ ಜೊತೆಗೆ ಹೊರಗೆ ಹೋದ. ಹೋಗುವಾಗ ಈ ಸಲ ಗೌಡ ತನ್ನ ಬಂದೂಕನ್ನೂ ಜೊತೆಗೊಯ್ದ.

ಖೂನಿ ಹ್ಯಾಗಾಯ್ತೆಂದು. ಗೌಡ ಹಾಗೆ ಪಾರಾದನೆಂದು ನನಗೆ ಆಮೇಲೆ ತಿಳಿಯಿತು. ಗೌಡ ಮರೆಪ್ಪನ ತಾಯಿಯನ್ನು ಇಟ್ಟುಕೊಂಡಿದ್ದ ನಿಜ. ಅದು ಮರ್ಯಾನಿಗೆ ಗೊತ್ತಾಗಿ, ಇಂಥ ಸಲುಗೆ ಸಲ್ಲದೆಂದು ಅನೇಕ ಬಾರಿ ತಾಯಿಗೆ ತಾಕೀತು ಮಾಡಿದ್ದ. ಆ ಬಗ್ಗೆ ಅವಳಿಂದ ಆಣೆ ಪ್ರಮಾಣ ಮಾಡಿಸಿಕೊಂಡಿದ್ದ. ಸಾಲದ್ದಕ್ಕೆ ಗೌಡ ಮರ್ಯಾನ ಹೊಲವನ್ನು ಅಕ್ರಮವಾಗಿ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದ. ಇದೇ ನೆಪ ಮಾಡಿಕೊಂಡು ಗೌಡ ಮರ್ಯಾನನ್ನು ಹೊರಗಟ್ಟಬಹುದಿತ್ತು. ಆದರೆ ಅವನಿಗೆ ಮರ್ಯಾನ ತಾಯಿಯೂ ಬೇಕಿದ್ದಳು. ಜೊತೆಗೆ ಮರ್ಯಾ ಹುಂಬ ಬೇರೆ. ಅವನನ್ನು ಉಪಾಯದಿಂದ ನಿವಾರಿಸಬೇಕಿತ್ತು. ಅದಕ್ಕಾಗಿ ಗೌಡ ಕಾಯುತ್ತಿದ್ದ. ಆದರೆ ಅದು ಆದ್ದದ್ದೇ ಬೇರೆ.

ಆ ದಿನ ಅವರಿಬ್ಬರೂ ಜೋಳದ ಹೊಲದಲ್ಲಿ ಆಸುಪಾಸು ಯಾರಿಲ್ಲವೆಂದು ಖಾತ್ರಿ ಮಾಡಿಕೊಂಡು ಸೇರಿದರು. ಏನು ಮಾಡುವುದು, ಅವಳ ದಿನ ಮುಗಿದು ಬಂದಿದ್ದವು. ಮರ್ಯಾ ಇದನ್ನು ಕಂಡ. ಚೂಪುಗೊಡಲಿ ಹಿಡಿದು ಆವೇಶದಿಂದ ಅವರಿದ್ದಲ್ಲಿಗೇ ನುಗ್ಗಿದ. ಗರಿಯ ಸಪ್ಪಳಕ್ಕೆ ಗೌಡ ಎಚ್ಚರಗೊಂಡು ಸತ್ತೇನೋ ಬದುಕಿದೆನೋ ಎಂದು ವಾರೆಯಾಗಿ ಬೀಳಲಿದ್ದ ಏಟಿನಿಂದ ಪಾರಾದ. ಅಂಗಾತ ಬಿದ್ದಿದ್ದ ಇವನ ತಾಯಿ ಎದ್ದೇಳುವಷ್ಟರಲ್ಲಿ ಅವಳ ಹೊಟ್ಟೆಗೇ ಏಟು ಬಿತ್ತು. ಗೌಡ ಸತ್ತು ಕೆಟ್ಟು ಓಡಿಬಂದ. ತಾಯಿ ಹಾ ಎಂದು ಹಾಗೇ ಕೆಡೆದಳು. ಮರ್ಯಾ ಓಡ್ಯೋಡಿ ಗೌಡನ್ನ ಹುಡುಕಿದ. ಆಮೇಲೆ ನೋಡಿಕೊಂಡರಾಯ್ತೆಂದು ಬಂದು ಹೆಣವನ್ನು ಹೆಗಲಮೇಲೆ ಹೊತ್ತುಕೊಂಡು ಚಾವಡಿಗೆ ಬಂದ. ಮುಂದಿನದು ನಿನಗೆ ಗೊತ್ತೇ ಇದೆ.

ನಾನೆಷ್ಟೋ ಖೂನಿ ನೋಡಿದ್ದೇನೆ, ಹೆಣ ನೋಡಿದ್ದೇನೆ, ಇದರಂಥಾದ್ದನ್ನು ನೋಡಲೇ ಇಲ್ಲ ಬಿಡು. ಹೆಣದ ಕರುಳು ಹೊರಬಂದು ಹೊಟ್ಟೆಗಂಟಿ ನೇತಾಡುತ್ತಿತ್ತು. ನನಗೆ ಎಂಟೆಂಟು ದಿನ ಊಟ ಮಾಡಲಾಗಲಿಲ್ಲ. ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಮಲಗಿದರಾಯ್ತು, ಆ ಹೆಣವೇ ಎದುರು ಬಂದು ತಬ್ಬಿಕೊಳ್ಳಲು ಹಾತೊರೆದ ಹಾಗಿರುತ್ತಿತ್ತು. ರಾತ್ರಿ ಬೈಲಕಡೆ ಹೋಗೋದನ್ನು ನಿಲ್ಲಿಸಿದೆ. ಒಂದ ಮಾಡಹೋದಾಗಂತೂ ಹೇಳುವುದೇ ಬೇಡ, ಇನ್ನೇನು ಹಿಂದಿನಿಂದ ಬಂದು ತಬ್ಬಿಕೊಳ್ಳುತ್ತಾಳೆಂದು ಪ್ರತಿ ಗಳಿಗೆಯೂ ಅನ್ನಿಸುತ್ತಿತ್ತು. ನಾಕೆಂಟು ಬಾರಿ ಆ ಹೆಣ ಕನಸಿನಲ್ಲೂ ಬಂದು ಹೆದರಿಸಿತ್ತು. ಆದಾಗಲೇ ದೆವ್ವವಾಗಿ ಊರ ತುಂಬ ಅಳುತ್ತ ಅಲೆಯುವುದು ನನಗೆ ಗೊತ್ತಾಗಿತ್ತು. ಅಮಾವಾಸ್ಯೆಯ ರಾತ್ರಿ ಅದು ನಮ್ಮ ಮನೆಯ ತೊಲೆ ಬಾಗಿಲಲ್ಲಿ ನಿಂತು “ಗೌಡಾ ಗೌಡಾss!” ಎಂದು ನರಳಿದ್ದನ್ನು ನಾನೇ ಕಿವಿಯಾರೆ ಕೇಳಿದ್ದೇನೆ.

ಇಡೀ ತಿಂಗಳು ಊರ ಬಾಯೊಳಗೆಲ್ಲ ಮರ್ಯಾನ ಮಾತೇ ಮಾತು. ಆತ ತಾಯಿಯ ಖೂನಿ ಮಾಡಿದ್ದು ಅನೇಕರಿಗೆ ಸರಿಬಂದಿರಲಿಲ್ಲ. ನನಗೂ, ತಾಯಿ ತಪ್ಪು ಮಾಡಿದಳೆಂದೇ ಇಟ್ಟುಕೊಳ್ಳೋಣ. ಆದರೂ ಮಗನಾದವನು ಒಂಬತ್ತು ತಿಂಗಳು ಹೊತ್ತು ಹೆತ್ತ ತಾಯಿಯನ್ನು ಖೂನಿ ಮಾಡುವುದು ದೇವರು ಒಪ್ಪದ ಮಾತು. ಅದರೇನು ಅವ ಎಲ್ಲರ ಕಣ್ಣಲ್ಲಿ ಧೀರನಾಗಿ ಬಿಟ್ಟಿದ್ದ. ಇಡೀ ಊರಿನಲ್ಲಿ ಒಬ್ಬನಾದರೂ ಅವನೆದುರು ನಿಲ್ಲುವಂಥ ಧೈರ್ಯ ತೋರಿರಲಿಲ್ಲ. ಹೋಗಲಿ, ಹಾಡಾಹಗಲಲ್ಲಿ ಇಡೀ ವಾಡೆ ತೊಲೆಬಾಗಿಲು ಮುಚ್ಚಿಕೊಳ್ಳುವ ಹಾಗೆ ಮಾಡಿದ್ದನಲ್ಲ, ಅದೇನು ಸಣ್ಣಮಾತೆ? ಗೌಡನಂಥ ಗೌಡ ಗಡಗಡ ನಡುಗಿ ಹೆಣ್ಣುನಾಯಿಯ ಹಾಗೆ ಅವಿತುಕೊಂಡಿದ್ದನೆಂದರೆ! ಮರ್ಯಾ ಯಾವಾಗ ಪ್ರತ್ಯಕ್ಷನಾಗಿ ತನ್ನನ್ನು ಮುಗಿಸುತ್ತಾನೆಂದು ಗೌಡನಿಗೆ ಖಾತ್ರಿಯಿರಲಿಲ್ಲ. ಆಮೇಲೆ ಕೂಡ ಗೌಡ ಶಿರಹಟ್ಟಿಯ ಅರೇಳು ಪೈಲವಾನರನ್ನು ಕರೆಸಿ ಅವರ ಮಧ್ಯದಲ್ಲಿದ್ದುಕೊಂಡೇ ಹೊರಗೆ ಅಡ್ಡಾಡುತ್ತಿದ್ದ. ಬಂದೂಕಿಲ್ಲದೆ ಬೈಲಕಡೆ ಹೋಗುತ್ತಿರಲಿಲ್ಲ. ಅಂತೀನಿ! ಇದರ ಮೇಲೆ ಅವ ಎಷ್ಟು ಹೆದರಿದ್ದ ಅಂತ ಅಂದಾಜು ಮಾಡಿಕೊ! ಆದರೆ ಗೌಡನ ಸ್ವಭಾವ ಗೊತ್ತೇ ಇದೆ; ಅವ ನರಿಯಂಥವನು. ಹ್ಯಾಗೋ ಪತ್ತೆ ಮಾಡಿ ಪೊಲೀಸರಿಂದ ಮರ್ಯಾನನ್ನು ಹಿಡಿಸಿಯೇ ಬಿಟ್ಟ. ಕೇಸೂ ಆಯಿತು. ಸುದೈವದಿಂದ ಮರ್ಯಾನಿಗಿನ್ನೂ ಹದಿನೆಂಟು ವರ್ಷ ತುಂಬಿರಲಿಲ್ಲ. ಜಜ್ಜ ಸಾಹೇಬ ಅದೇ ಆಧಾರದ ಮೇಲೆ ಕೇಸು ಖುಲಾಸೆ ಮಾಡಿಬಿಟ್ಟ. ಆಮೇಲೆ ಮರೆಪ್ಪ ಮಾತ್ರ ಊರಿಗೆ ಹಿಂದಿರುಲೇ ಇಲ್ಲ. ಗೌಡ ಪೈಲವಾನರಿಂದ ಕೊಲ್ಲಿಸಿದ್ದನೆಂದೂ ಕೆಲವರು ಹೇಳಿದರು. ಖರೆಯೆಷ್ಟೋ ಸುಳ್ಳೆಷ್ಟೋ ಎಂದು ಸುಮ್ಮನಾದೆವು. ಮರೆಪ್ಪ ಮರೆಯಾದನೆಂದು ಖಾತ್ರಿಯಾದಾಗ ಅಪ್ಪಾಸಾಬ ದೇಸಾಯರ ಜೊತೆ ಸಿಂಗಾರೆವ್ವನ ಮದುವೆಯಾಯಿತು.”

– ಎಂದು ಹೇಳಿ ಕಥೆಯ ಒಂದು ಭಾಗ ಮುಗಿಯಿತೆಂಬಂತೆ ಶೀನಿಂಗವ್ವ ತನ್ನ ನಿರೂಪಣೆಗೆ ವಿಶ್ರಾಂತಿ ಕೊಟ್ಟಳು. ನನಗೆ ಈ ಮದುವೆಯ ಬಗ್ಗೆಯೂ ಅನುಮಾನಗಳಿದ್ದವು. ಅಪ್ಪಾಸಾಬ ದೇಸಾಯಿ ನಾನು ಕಂಡಂತೆ ರೋಗಿಷ್ಟ. ಬ್ಲಡ್‌ಪ್ರೆಷರ್ ಮತ್ತು ಮೂರ್ಛೆರೋಗ ಇತ್ತು. ಸಿಂಗಾರೆವ್ವ ಮಹಾಚೆಲುವೆ. ಮೇಲಾಗಿ ಗೌಡನ ಒಬ್ಬಳೇ ಮಗಳು. ಹೀಗಿದ್ದೂ ಅವಳು ಇಂಥವನನ್ನು ಮದುವೆಯಾಗಲು ಒಪ್ಪಿದಳೇ? – ಎಂದು ಕೇಳಿದೆ.

“ಮಾಡ್ಕೋತೀನಿ, ಬಿಡತೀನಿ ಅಂತ ಹೇಳಾಕೆ ಹೆಂಗಸರಿಗೆ ಅಧಿಕಾರ ಎಲ್ಲೀದಪ್ಪ? ಅಷ್ಟಾಗಿ ಗಂಡಸರು ಇವರ ಮನಸಿನಾಗ ಏನೈತಿ ಅಂತ ಕೇಳಿದರಲ್ಲೇನ ಹೇಳೋದು? ಸಿಂಗಾರೆವ್ವನ ಸೊಭಾವನೂ ಹಂಗs ಅಂತಿಟ್ಟಕ. ಮೊದಲನೇ ಮದಿವ್ಯಾಗs ಬಾಯಿ ಕಳಕೊಂಡಿದ್ದಳು. ಹೆಚ್ಚು ಮಾತಾಡತಿರಲಿಲ್ಲ. ಹಾ ಅಂದರ ಹಾ; ಹೂ ಅಂದರ ಹೂ. ಎಷ್ಟು ಬೇಕೋ ಅಷ್ಟ.”

“ಅಲ್ಲಬೇ, ಗೌಡಗಾದರೂ ದೇಸಾಯಿ ರೋಗಿಷ್ಟನ್ನೋದ ತಿಳೀಬಾರದ? ತಿಳಿದೂ ಮಗಳ್ನ ಇಂಥವನ ಕೊರಳಿಗೆ ಕಟ್ಟೋದಂದರ…?

– ಎಂದು ನನ್ನ ಸಂಶಯ ತೋಡಿಕೊಂಡೆ. ಮುದುಕಿ ಸುಸ್ತಾಗಿದ್ದಳು. “ನಾಳೆ ಬಾ, ಎಲ್ಲಾ ಹೇಳತೀನಿ” ಅಂದಳು. ಆಗಲೇ ಊರ ಜನ ಉಂಟು ಮಲಗುತ್ತಿದ್ದರು. ನಾನು ಮತ್ತು ಶಿರಸೈಲ ಮನೇಕಡೆ ಬಂದೆವು.  

* * *