ಮಾರನೇ ದಿನ ತುಸು ಬೇಗನೆ ಹೋದೆವು. ಈ ಮೊದಲೇ ಶೀನಿಂಗವ್ವನಿಗೆ ಹರಕೆ ತಲುಪಿಸಿದ್ದಾಗಿತ್ತು. ನಿನ್ನೆಗಿಂತ ಈ ದಿನ ಹೆಚ್ಚು ಹುರುಪಿನಲ್ಲಿದ್ದಳು. ಹೋದ ತಕ್ಷಣವೇ ಕಥೆ ಸುರುಮಾಡಲಿಕ್ಕಾಗುವುದಿಲ್ಲವಲ್ಲ, ಆ ಈ ಮಾತಾಡುತ್ತ ನಾನು ಸರಗಂ ದೇಸಾಯಿಯನ್ನು ನೋಡಿದ್ದಾಗಿ ಹೇಳಿ ಅವನ ವರ್ಣನೆ ಮಾಡಿದೆ. ಅವಳೂ ಒಂದಷ್ಟು ವಿಷಯ ಹೇಳಿದಳು. ಕೊನೆಗೆ ಆತನ ಸ್ವಭಾವವನ್ನು ನಾನು ಭಾಗಶಃ ಸರಿಯಾಗಿ ತಿಳಿದಿದ್ದೇನೆಂದು ಒಪ್ಪಿಕೊಂಡಳು. ಇಲ್ಲಿ ವಾಚಕರ ಕ್ಷಮೆ ಕೋರಿ, ಅವಳ ಕಥೆ ತುಸು ನಿಲ್ಲಿಸಿ ಸಿಂಗಾರೆವ್ವನ ಎರಡನೇ ಗಂಡನಾದ ಅಪ್ಪಾಸಾಬ ದೇಸಾಯಿಯ ಉರ್ಫ್ ಸರಗಂ ದೇಸಾಯಿಯ ‘ಭಾಗಶಃ’ ಪರಿಚಯ ಮಾಡಿಕೊಡುತ್ತೇನೆ.

ಚಿಕ್ಕವನಿದ್ದಾಗ ನಾನು ಅವನನ್ನು ಕಂಡಿದ್ದೆ. ಒಂದೇ ಮಾತಿನಲ್ಲಿ ವರ್ಣಿಸಬೇಕೆಂದರೆ ಒಟ್ಟಾರೆ ವಾತಾವರಣದಲ್ಲಿ ಅವನೊಬ್ಬ ಮಿಸ್‌ಫಿಟ್ ಆಗಿದ್ದ. ಸಜ್ಜನನೇ. ಆದರೆ ಆತನಲ್ಲಿ ಹೇಳಿಕೊಳ್ಳುವಂಥ ದೋಷಗಳೂ ಇದ್ದವು. ಶೀನಿಂಗವ್ವ ಹೇಳುವ ಹಾಗೆ ಅವನು ಜನರನ್ನು ಅತಿಯಾಗಿ ನಂಬುತ್ತಿದ್ದ. ಮಿತಿಮೀರಿ ಧಾರಾಳಿಯಾಗಿದ್ದ. ಇವು ನನ್ನ ಪ್ರಕಾರ ದೋಷಗಳೇ ಅಲ್ಲ. ಆತನ ಶರೀರ ಸಣಕಲಾಗಿದ್ದರೂ, ಗಂಭೀರವಾಗಿರುತ್ತಿದ್ದ. ಆದರೆ ಬಯಲಾಟದ ರಿಹರ್ಸಲ್ ಮಾಡುವಾಗ ಮಾತ್ರ ಭಾರೀ ಹಾಸ್ಯಾಸ್ಪದವಾಗಿ ಕಾಣುತ್ತಿದ್ದ. ಆಗ ಮಾತ್ರ ಯಾವುದು ಲಘು ಯಾವುದು ಗಂಭೀರ ಎನ್ನುವುದನ್ನು ನಿರ್ಧರಿಸಲು ಅಸಮರ್ಥನಾಗುತ್ತಿದ್ದ. ಇಂಥ ಇನ್ನೂ ಎರಡು ಸಂದರ್ಭಗಳಿವೆ. ಅದನ್ನು ಮುಂದೆ ಶೀನಿಂಗವ್ವ ಹೇಳುತ್ತಾಳೆ.

ಅವನಿಗೆ ಬಯಲಾಟದ ಭಾರೀ ಖಯಾಲಿ ಇದ್ದಿತಲ್ಲ. ಹಾಡಬೇಕಾದಾಗ ಪ್ರತಿ ಆರಂಭವನ್ನು “ಸರಿಗಮ ಪದನಿಸ, ಸನಿದಪ ಮಗರಿಸ” ಎಂದು ಹೇಳಿ ಸುರುಮಾಡುತ್ತಿದ್ದ. ಅದಕ್ಕೇ ಅವನಿಗೆ ಈ ಹೆಸರು ಬಂದದ್ದು. ಅವನ ಹೆಸರಿದ್ದದ್ದು ಅಪ್ಪಾಸಾಹೇಬ ದೇಸಾಯಿ ಎಂದು. ಆದರೆ ಜನ ಸರಗಂ ದೇಸಾಯಿ ಎಂದೇ ಕರೆಯುತ್ತಿದ್ದರು. ಮತ್ತು ಹಾಗೆ ಹೇಳಿದಾಗ ಅವನಿಗೆ ಸಂತೋಷವೇ ಆಗುತ್ತಿತ್ತು. ಪಾಪ ಬಯಲಾಟದವರಿಗೆ ಸರಿಗಮಪದನಿ ಎಂದರೇನು ಗೊತ್ತು? ಸಾಮಾನ್ಯವಾಗಿ ಅವರು ಪದಗಳನ್ನು ಹಾಡುತ್ತಿರಲಿಲ್ಲ, ಒದರುತ್ತಿದ್ದರು. ಹಿಂದೊಮ್ಮೆ ಕಲಿಸಲಿಕ್ಕೆ ಬಂದ ಮಾಸ್ತರನು ಇವರ ದನಿಗಳಿಗೆ ಸರಿಗಮಪದನಿಯ ದೀಕ್ಷೆ ಕೊಡಹೋಗಿ, ಸೋತು, ಇವರು ಒದರಿದ್ದೇ ಸರಿ ಎಂಬಂತೆ – ಅವನೇನೋ ನುಡಿಸಿ, ಇವರೇನೋ ಹಾಡಿ – ಅಂತೂ ಆ ಸಲ ಬಯಲಾಟ ಮುಗಿಸಿದ್ದರು. ಅವನು ಹಾರ‍್ಮೋನಿಯಂ ನುಡಿಸುತ್ತಿದ್ದಾಗ, ಇವರು ಹಾಡುವಾಗ ಬೇಸೂರಂತೂ ಕಟ್ಟಿಟ್ಟದ್ದು ತಾನೆ? – ಪಾಪ, ಆಗವನ ಕರುಣಾಜನಕ ಮುಖ ನೋಡಬೇಕಿತ್ತು. ಆತ ಸಹಜವಾಗಿಯೇ ಬಯಲಾಟದ ಈ ನಟಭಯಂಕರರ ಬಗ್ಗೆ ತಾತ್ಸಾರ ಭಾವನೆಯಿಂದ ಇದ್ದ. ಈ ತಾತ್ಸಾರವನ್ನು ಸರಗಂ ದೇಸಾಯಿ ಗಮನಿಸಿ ತನ್ನ ಮನೆಗೆ ಅವನನ್ನು ಊಟಕ್ಕೆ ಕರೆದು ಸಂಗೀತ ವಿದ್ಯೆಯ ರಹಸ್ಯ ಹೇಳಿಕೊಡಬೇಕೆಂದು ಕೇಳಿದ್ದನಂತೆ. ಮಾಸ್ತರನು ಉಂಡ ಕೂಳಿನ ಋಣಕ್ಕೆ ಸರಿಗಮಪದನಿ ಎಂಬ ಸಪ್ತಾಕ್ಷರೀ ಮಂತ್ರವನ್ನು ಕಲಿಸಿದ. ಆಶ್ಚರ್ಯವೆಂದರೆ ಆ ಸರಿಗಮಪದನಿ ಎಂಬ ಮಂತ್ರ ಬಾತಿಗೆ ಬಂತಲ್ಲ, – ಇಡೀ ಸಂಗೀತ ವಿದ್ಯೆಯೇ ತನ್ನ ಕೈವಶವಾಯಿತೆಂದು ಸರಗಂ ತಿಳಿದುಬಿಟ್ಟ! ಯಾವುದೇ ಹಾಡಿನ ಆರಂಭದಲ್ಲಿ ಸರಿಗಮಪದನಿ ಸನಿದಪಮಗರಿಸ ಎಂದು ಹೇಳಿ ಸುರು ಮಾಡಿದರೆ ಅದು ಬೇಸೂರಾಗಲೀ, ತಪ್ಪುದಾಗಲೀ ಸಾಧ್ಯವೇ ಇಲ್ಲವೆಂದು ಆತ ನಿಜವಾಗಿ ನಂಬಿಬಿಟ್ಟಿದ್ದ. ಅಲ್ಲೇ ಆ ಮಂತ್ರ ಹೇಳಿ ಎಲ್ಲರನ್ನೂ ತಬ್ಬಿಬ್ಬಾಗಿಸುತ್ತಿದೇನೆಂದೂ, ಎಲ್ಲರೂ ತಪ್ಪಿದರೂ ತನ್ನ ಹಾಡು ತಪ್ಪುತ್ತಿಲ್ಲವೆಂದೂ ಅವನಿಗೆ ವಿಶ್ವಾಸ ಮೂಡಿತ್ತು. ಸರಗಂ ಸಾಬ ಹ್ಯಾಗೆ ಹಾಡುತ್ತಿದ್ದನೆಂಬ ಬಗ್ಗೆ ಮುಂದೆ ಹೇಳುತ್ತೇನೆ; ಈಗ ನೀವು ಇಷ್ಟು ತಿಳಿದರೆ ಸಾಕು; ಆತ ಸಂಗೀತ ವಿದ್ಯೆ ಅರಿಯದ ಆ ಹಳ್ಳಿ ಮುಕ್ಕರ ಬಗ್ಗೆ ಸಹಾನುಭೂತಿಪರನಾಗಿದ್ದ, ಇಂಥವರನ್ನು ಕಟ್ಟಿಕೊಂಡು ತನ್ನಂಥ ಕಲಾವಿದ ಬಯಲಾಟ ಮಾಡಬೇಕಿದೆಯಲ್ಲಾ ಎಂದು ತನ್ನ ಬಗ್ಗೆ ತಾನೇ ಮರುಗುತ್ತಿದ್ದ. ಬಂದ ಮಾಸ್ತರನು ಯಾರಿಲ್ಲದಾಗ ಇವನನ್ನು ಹುಟ್ಟು ಕಲಾವಿದನೆಂದು ಕರೆದಿದ್ದನಂತೆ. ಇನ್ನು ಕೇಳಬೇಕೇ?

ನನ್ನ ಅಣ್ಣ ಸರಗಂ ದೇಸಾಯಿಯ ಜೊತೆ ನಟನಾಗಿದ್ದುದರಿಂದ ಚಿಕ್ಕಂದಿನಲ್ಲಿ ಅವರ ರಿಹರ್ಸಲ್‌ಗಳನ್ನು ನೋಡುವುದಕ್ಕೆ ನಾನು ಹೋಗುತ್ತಿದ್ದೆ. ಬಯಲಾಟ ಯಾವುದೇ ಇರಲಿ, ಅದರ ಖರ್ಚು ವೆಚ್ಚಗಳನ್ನೆಲ್ಲ ದೇಸಾಯಿಯೇ ನೋಡಿಕೊಳ್ಳುತ್ತಿದ್ದುದರಿಂದ ಸ್ವಾಭಾವಿಕವಾಗಿ ನಾಯಕನ ಪಾತ್ರವನ್ನು ಅವನೇ ವಹಿಸುತ್ತಿದ್ದ. ಅವೆಲ್ಲ ಸಾಮಾನ್ಯವಾಗಿ ರಾಜನ ಪಾತ್ರಗಳು. ಉಳಿದವರು ತಂತಮ್ಮ ಉಡುಪುಗಳನ್ನು ಬಾಡಿಗೆಗೆ ತರುತ್ತಿದ್ದರೆ ದೇಸಾಯಿ ಮಾತ್ರ ಪ್ರತಿಯೊಂದು ರಾಜಪಾತ್ರಕ್ಕೆ ವಿಶಿಷ್ಟವಾದ ಉಡುಪುಗಳನ್ನು ಹೊಸದಾಗಿಯೇ ತಯಾರಿಸಿಕೊಳ್ಳುತ್ತಿದ್ದ. ಅವರ ಮನೆತನದ್ದೇ ಒಂದು ಬೆಳ್ಳಿಯ ಖಡ್ಗವಿತ್ತು. ಭಾರೀ ಹಣ ಖರ್ಚು ಮಾಡಿ ಭುಜ ಕಿರೀಟಗಳನ್ನು ತಾನೇ ಮಾಡಿಸಿಕೊಂಡಿದ್ದ. ಯಾಕೋ ಏನೋ ಕಿರೀಟವೊಂದನ್ನು ಮಾಡಿಸಿಕೊಂಡಿರಲಿಲ್ಲ.

ಆತ ರಾಜನ ಪಾತ್ರಗಳನ್ನೇ ಯಾಕೆ ಮಾಡುತ್ತಿದ್ದನೆಂದು ನನಗೆ ಈಗೀಗ ಅರ್ಥವಾಗುತ್ತಿದೆ. ನಮ್ಮೂರ ದೇಸಗತಿಯೆಂದರೆ ನಾಡಿನ ಆ ಭಾಗಕ್ಕೆಲ್ಲಾ ಒಂದು ಕಾಲಕ್ಕೆ ಪ್ರಸಿದ್ಧವಾದದ್ದು. ಮೈಸೂರು ಮಹಾರಾಜರು ನಮ್ಮ ಹಿಂದಿನ ದೇಸಾಯರನ್ನು ದಸರಾ ಕಾಲದಲ್ಲಿ ಆಹ್ವಾನಿಸಿ, ತಮ್ಮ ಆಸನದ ಮೇಲೆ ಕೂರಿಸಿಕೊಂಡಿದ್ದರೆಂದು ಹೆಂಗಸರು ಹೇಳುವುದನ್ನು ಕೇಳಿದ್ದೇನೆ. ಬಹುಶಃ ಇದರಲ್ಲಿ ಅತಿಶಯೋಕ್ತಿ ಇದ್ದೀತು. ಅಂತೂ ಒಂದು ಕಾಲಕ್ಕೆ ವೈಭವದಿಂದ ಮೆರೆದ ದೇಸಗತಿಯೆನ್ನುವುದರಲ್ಲಿ ಸಂದೇಹವೇ ಬೇಡ. ಬೇರೆ ದೇಸಗತಿಗಳಿಗೆ ಒಂದೆರಡು ಊರಿದ್ದಾವು. ನಮ್ಮೂರಿನ ದೇಸಗತಿಗೆ ಹದಿನಾಲ್ಕು ಊರು! ಈಗ ಸರಗಂ ದೇಸಾಯಿಯ ಪಾಲಿಗೆ ಎಷ್ಟೇ ಉಳಿದಿರಲಿ; ಆ ಹಳೆಯ ವೈಭವದಲ್ಲೇ ಇರಬೇಕೆಂಬ, ಅದರ ಪ್ರಭಾಮಂಡಲವನ್ನು ಮತ್ತೆ ತರಬೇಕೆಂಬ ಭಾರೀ ಆಸೆ ಆತನಿಗಿತ್ತು. ಆದರೆ ಜನ ಬದಲಾಗಿದ್ದರು. ಯಾರೂ ಮೊದಲಿನ ಹಾಗೆ ದೇಸಗತಿಗೆ ಹೆದರುತ್ತಿರಲಿಲ್ಲ. ಹೀಗಾಗಿ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುವುದು ದೇಸಾಯಿಗೆ ಕೊನೆಗೂ ಸಾಧ್ಯವಾಗಿರಲಿಲ್ಲ. ಆತ ಎಲ್ಲಿದ್ದರೂ ಪರಕೀಯನಾಗಿ, ಇವನು ಅಲ್ಲಿ ಕೂಡಿದವರ ಪೈಕಿ ಅಲ್ಲ ಎಂದು ಯಾರಿಗಾದರೂ ಅನ್ನಿಸುವಂತೆ ಇರುತ್ತಿದ್ದ. ಆದರೆ ಅವನ ದುರಾದೃಷ್ಟಕ್ಕೆ ತನ್ನ ದೊಡ್ಡ ಮನೆಯ ಒಟ್ಟಾರೆ ಚಿತ್ರದಲ್ಲೂ ಆತ ಹೊಂದುತ್ತಿರಲಿಲ್ಲ. ಯಾವನೋ ಒಬ್ಬ ನಾಟಕದ ಪಾತ್ರಧಾರಿ ದೇಸಾಯಿಯ ಉಡುಪಿನಲ್ಲಿದ್ದಂತೆ ಕಾಣಿಸುತ್ತಿತ್ತು. ಈ ಅರ್ಥದಲ್ಲಿ ಅವನು ಹುಟ್ಟು ನಟನೇ ಹೌದು. ಈ ಕೊರತೆ ದೇಸಾಯಿಯ ವ್ಯಕ್ತಿತ್ವದ ಆಳದಲ್ಲೆಲ್ಲೋ ಕೊರೆಯುತ್ತಿದ್ದಿತೆಂದು ತೋರುತ್ತದೆ. ಅದಕ್ಕೇ ಆತ ಬಯಲಾಟಗಳಲ್ಲಿ ರಾಜನಾಗಿ ಅದನ್ನು ಭರ್ತಿ ಮಾಡಿಕೊಳ್ಳುತ್ತಿದ್ದ. ಅವನು ಕುಡಿದಾಗ ಅರೆಹುಚ್ಚನಂತಿರುತ್ತಿದ್ದನಲ್ಲ, ಈ ಕಾರಣಕ್ಕೇ ಹಾಗಾಗಿರಬೇಕೆಂದು ನನಗೆ ಅನುಮಾನವಿದೆ. ಯಾಕೆಂದರೆ ಕುಡಿದಾಗ ಬಯಲಾಟದ ಮಾತುಗಳನ್ನು ನಿಜಜೀವನದಲ್ಲೂ, ನಿಜಜೀವನದ ಮಾತುಗಳನ್ನು ಬಯಲಾಟದಲ್ಲಿಯೂ ಆಡುತ್ತಿದ್ದ. ಎರಡರ ಧಾಟಿ ಒಂದೇ, ಅಂದರೆ ಅದೇ – ನಾಟಕದ ರಾಜರದು. ಆದ್ದರಿಂದ ಮುಂದೆ ನಮ್ಮ ಕಥೆಯಲ್ಲಿ ನಮ್ಮೀ ಕಥಾನಾಯಕ ರಾಜ ಠೀವಿಯಲ್ಲಿ ಗಹಗಹಿಸಿ ನಕ್ಕು ಗುಡುಗಿದರೆ ನಮ್ಮ ವಾಚಕರು ಅನ್ಯಥಾ ಭಾವಿಸಬಾರದೆಂದು ವಿನಂತಿಸಿಕೊಳ್ಳುತ್ತೇನೆ.

ಇನ್ನವನ  ಹಾಡುಗಾರಿಕೆ : ನಾನೇ ಸ್ವತಾ ಕೇಳಿದ್ದೇನೆ, ಕಂಡಿದ್ದೇನಲ್ಲ – ಹಾಡುವುದೆಂದರೆ ಅವನಿಗೆ ಬಾರೀ ವ್ಯಾಮೋಹ, ಸರಿಗಮಪದನಿಯ ಮಂತ್ರದಿಂದ ಅವನಿಗೆ ಸಂಗೀತ ವಿದ್ಯೆ ಕೈವಶವಾಗಿತ್ತೋ ಇಲ್ಲವೋ ನನಗೆ ತಿಳಿಯದು. ಅದು ಅವನಿಗೆ ಹುಚ್ಚನ್ನಂತೂ ಹಿಡಿಸಿದ್ದು ನಿಜ. ಉಳಿದವರು ಹಾಡುವುದಕ್ಕೆ ಅಷ್ಟಾಗಿ ಇಷ್ಟಪಡುತ್ತಿರಲಿಲ್ಲ. ಆದರೆ ಬಯಲಾಟವೆಂದ ಮೇಲೆ ಹಾಡಲೇಬೇಕಲ್ಲ, ಆದ್ದರಿಂದ ಬಾಯಿ ತೆರೆಯುತ್ತಿದ್ದರು. ಒಮ್ಮೆ ಬಾಯಿ ತೆರೆದರೆ ಅದು ಕೇಳುವವರ ದೈವವನ್ನು ಅವಲಂಬಿಸುವಂಥಾದ್ದು, ದೈವ ಚೆನ್ನಾಗಿದ್ದರೆ ಹಾಡು ಚೆನ್ನಾಗೇ ಬರಬಹುದು, ಅಂತೂ ಅದು ತಮ್ಮ ಕೈಯಲಿಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಮನಗಂಡಿದ್ದರು. ದೇಸಾಯಿಯ ಮಾತು ಹಾಗಲ್ಲ. ದೈವ ಇಲ್ಲಿಯೂ ಆತನಿಗೆ ಕೈಕೊಟ್ಟಿತ್ತು. ತೆಳ್ಳಗೆ ಬೆಳ್ಳಗೆ ಉದ್ದಕ್ಕೆ ಕೋಲಿನಂಥ ಶರೀರ ಅವನದು. ಗರುಡನಂಥ ಚೂಪು ಮೂಗು ಮೇಲ್ದುಟಿಯ ಮೇಲೋರಗಿತ್ತು. ನೀಟಾಗಿ ಕೊರೆದಂಥ ಹುಬ್ಬು, ಅಗಲವಾದ ಹಣೆ, ಈಗಷ್ಟೇ ಮೂಡಿದಂತಿದ್ದ ಒಂದೆರಡು ಹರಕು ಗಡ್ಡಮೀಸೆ. ಹುಲುಸಾಗಿ ಬರುತ್ತಿಲ್ಲವಾದ್ದರಿಂದ ಅವನ್ನು ಬೋಳಿಸುತ್ತಿದ್ದ. ಇವನು ಸ್ತ್ರೀ ಪಾತ್ರಕ್ಕೇ ಲಾಯಖ್ಕಾದವನೆಂದು ಯಾರು ನೋಡಿದರೂ ಹೇಳುತ್ತಿದ್ದರು. ಇಂಥ ಕೋಮಲ ದೇಹಕ್ಕೆ ಒರಟು ದನಿ. ಹೀಗಾಗಿ ಅವನು ಹಾಡಿದರೂ ಅವನೊಳಗಿಂದ ಇನ್ಯಾರೋ ಹಾಡಿದಂತೆ ಕೇಳಿಸುತ್ತಿತ್ತು.

ಆತನ ಹಾಡುಗಾರಿಕೆಯನ್ನು ನೀವೇ ಕೇಳಬೇಕು. ಸರಿಗಮಪದನಿ ಸನಿದಪಮಗರಿ ಎಂದು ಮಂತ್ರದ ಹಾಗೆ ಭಯಭಕ್ತಿಯಿಂದೊಮ್ಮೆ ಹೇಳಿ, ತಕ್ಷಣ ಹಾಡನ್ನು ತಾರಕದಲ್ಲಿ ಸುರು ಮಾಡುತ್ತಿದ್ದ. ತಾರಕದಲ್ಲೇ ಸುರುವಾದ ಹಾಡಿಗೆ ಇನ್ನೊಂಡು ತಾರಕ ಎಲ್ಲಿ ಸಿಕ್ಕೀತು? ಆದ್ದರಿಂದ ಕಂಠ ಮಧ್ಯೆ ಗದ್ಗದವಾಗಿ ವಿಚಿತ್ರ ಸಪ್ಪಳ ಮಾಡುತ್ತಿತ್ತು. ಕೆಲವೊಮ್ಮೆ ಕೇಳುವವರಲ್ಲಿ ಅವನ ಜೀವದ ಬಗ್ಗೆ ಭಯ ಉಂಟುಮಾಡುವಂಥ ಕಂಪನಗಳುಂಟಾಗುತ್ತಿದ್ದವು. ಆದರೂ ಗಟ್ಟಿ ಆಸಾಮಿ, ಹಿಡಿದ ಸ್ವರವನ್ನು, ಅಂದರೆ ಅದೇ ತಾರಕವನ್ನು ಬಿಡುತ್ತಿರಲಿಲ್ಲ. ಹ್ರಸ್ವ ದೀರ್ಘ ಸ್ವರಗಳನ್ನು ಎತ್ತೆತ್ತಿ ಅವು ಹಾದಿಗೆಡದಂತೆ ಕಂಪನಗಳಿಂದ ಬೆದರಿಸಿ, ಹಿಂದೆಮುಂದೆ ಮಾಡಿ, ತಿರುವಿ ತಿರುವಿ ಹಾಡುತ್ತಿದ್ದ. ಹಾಡುವಾಗಿನ ಭಂಗಿಯೂ ಅವನದೇ, ಜಿಗ್ಗಾಲು ಕೊಟ್ಟು, ಆಳ ಬಾವಿಯೊಳಗಿನ ಬಂಡೆಯನ್ನೆತ್ತುವಂತೆ ಸ್ವರಕ್ಕೆ ಕುಮ್ಮಕ್ಕು ಕೊಟ್ಟು ಅದು ನುಣಚಿಕೊಳ್ಳದಂತೆ ಹೊಂಚಿ ಹಿಡಿಯುವ ಹಾಗೆ ಹಸ್ತಾಭಿನಯ ಮಾಡುತ್ತಾ ಅದೊಂದು ಸುಖದ ನೆಲೆ ತಲುಪಿತೆಂದು ಖಾತ್ರಿಯಾದಾಗ ಐಷಾರಾಮಾಗಿ ಕಣ್ಣು ಮುಚ್ಚುತ್ತಿದ್ದ. ತನ್ನ ಹಾಡಿನ ಗುಂಗಿನಲ್ಲೇ ಇರುವ ಮಹಾ ಕಲಾವಿದನಂತೆ ತುಸು ಹೊತ್ತು ಹಾಗೆ ಕಣ್ಣು ಮುಚ್ಚುಕೊಂಡಿದ್ದು ಆಮೇಲೆ ನಿಧಾನವಾಗಿ ಕಣ್ಣು ತೆರೆಯುತ್ತಿದ್ದ. ‘ಹಾಡುಗಾರಿಕೆಯೆಂದರೆ ಇದು’ ಎಂದು ಹೇಳುವಂತೆ ಎಲ್ಲರ ಮುಖವನ್ನೊಮ್ಮೆ ಹೆಮ್ಮೆಯಿಂದ ದಿಟ್ಟಿಸುತ್ತಿದ್ದ. ಅವನು ಇಲ್ಲದೇ ಇದ್ದಾಗ ನಮ್ಮಣ್ಣ ಅವನಿಗೆ ತಾರಕಾಸುರ ಎಂದು ಹೇಳುತ್ತಿದ್ದ.

ನನಗೆ ಅನ್ನಿಸುವಂತೆ ದೇಸಗತಿಯ ಕೆಟ್ಟಗಳಿಗೆಯಲ್ಲಿ ಈ ದೇಸಾಯಿ ಹುಟ್ಟಿದ ಇವನಪ್ಪ ಮಹಾಲಂಪಟ, ಅವನ ಇಬ್ಬರು ತಂಗಿಯರು, ಅವರ ಗಂಡಂದಿರು ದೇಸಗತಿಯನ್ನು ಲೂಟಿ ಮಾಡಿ ಮೋಜು ಮಾಡಿದರು. ಕೈಗೆ ಬಂದಷ್ಟು ಹಣಕ್ಕೆ ಆಸ್ತಿ ಮಾರಿದರು. ದೊಡ್ಡ ದೇಸಾಯಿಯ ಕಚ್ಚೆ ಹುರುಕುತನ, ಅವನ ತಂಗಿಯರ ಹಡಬಿಟ್ಟಿತನ, ಅವರ ಗಂಡಂದಿರ ಬೇಜವಾಬ್ದಾರಿತನ.. ಎಲ್ಲೆಲ್ಲೋ ಹೋಗಿ, ಏನೇನೋ ರೋಗ ಅಂಟಿಸಿಕೊಂಡು ಬಂದು ಪ್ರತಿಯೊಬ್ಬರೂ ಒಂದೊಂದು ಥರ ನರಳಿ ಸತ್ತರು. ಪ್ರತಿಯೊಬ್ಬರ ಮನಸ್ಸುಗಳೂ ವಿಕೃತವಾಗಿದ್ದವು. ಇವರು ಸತ್ತಾಗ ಆಸ್ತಿಯ ಬಹುಪಾಲು ಹೋಗಿತ್ತಲ್ಲ, ಜೊತೆಗೇ ಸಾಲ ಬಂದಿತ್ತು; ಇವರ ರಕ್ತ ಹಂಚಿಕೊಂಡು, ಇವರ ಮಧ್ಯೆ ಹುಟ್ಟಿ ಬೆಳೆದವನು ದೇಸಾಯಿ. ಗುಣಗಳನ್ನಲ್ಲದಿದ್ದರೂ ಅವರ ರೋಗಗಳನ್ನಂತೂ ತನ್ನ ಜೊತೆಗೇ ತಂದಿದ. ಇದ್ದ ಬಿದ್ದ ಆಸ್ತಿಯನ್ನು ಮಾರಿ ಹಿಂದಿನವರ ಸಾಲ ತೀರಿಸಿ ಉಳಿದ ಅಷ್ಟಿಷ್ಟನ್ನು ಆಗೀಗ ಮಾರುತ್ತ ಬದುಕಿದ್ದ.

ದೇಸಾಯಿಯ ಔದಾರ್ಯದ ಬಗ್ಗೆ ಇಡೀ ಊರಿನಲ್ಲಿ ದುಸರಾ ಮಾತಿಲ್ಲ. ಇವನಿಗೆ ಬಯಲಾಟ ಕಲಿಸಿದ ಒಬ್ಬ ಮಾಸ್ತರ ಬಂದು “ಮಗಳ ಮದುವೆ ಮಾಡ್ಬೇಕು. ಮಾರಾಜ್ರ, ತಾವು ಕೈ ಹಚ್ಚಬೇಕು, ತಮ್ಮ ಹೆಸರ‍್ಹೇಳಿ ಮದವಿ ಮಾಡ್ತೀನಿ” – ಎಂದಾಗ ದೇಸಾಯಿ ತನ್ನ ಕತ್ತಿನಲ್ಲಿದ್ದ ಎರಡೆಳೆ ಚಿನ್ನದ ಸರವನ್ನು ಹಾಗೇ ಹರಿದು ಅವನ ಕೈಗಿತ್ತನೆಂದು ನಮ್ಮಣ್ಣ ಹೇಳಿದ್ದ. ಒಬ್ಬ ಹರಿಜನ ಹುಡುಗ, ನನ್ನ ಓರಗೆಯವನು, ಕಾಲೇಜು ಕಲಿಯುತ್ತಿದ್ದಾಗ ತುಂಬ ತೊಂದರೆಯಾಗಿ ಶಿಕ್ಷಣ ಮುಂದುವರಿಸದೆ ವಾಪಸ್ಸು ಬಂದ ವಿಷಯ ದೇಸಾಯಿಗೆ ಗೊತ್ತಾಗಿ ಅವನನ್ನು ಮನೆಗೆ ಕರೆಸಿ ಐನೂರು ರೂಪಾಯಿ ಕೊಟ್ಟದ್ದನು, ಆ ಹುಡುಗ ದೇಸಾಯಿಯ ಸಹಾಯದಿಂದಲೇ ಶಿಕ್ಷಣ ಮುಂದುವರಿಸಿದ್ದನ್ನು ಈಗಲೂ ಸ್ಮರಿಸಿಕೊಳ್ಳುತ್ತಾನೆ. ಆತನ ಔದಾರ್ಯವನ್ನು ಹೇಳುವ ಇಂಥ ನಾಕೆಂಟು ಘಟನೆಗಳನ್ನು ನಾನೇ ಕಂಡಿದ್ದೇನೆ. ಆದರೆ ಅವನ ಔದಾರ್ಯವನ್ನು ಜನ ಒಬ್ಬರೂ ಮೆಚ್ಚಿ ಹೊಗಳಿದ್ದನ್ನು ನಾ ಕಾಣೆ. ಬಹುಶಃ ಕ್ರೂರಿಯಾದ ಇವರಪ್ಪನ ಮೇಲಿನ ಸೇಡಿನಿಂದಲೋ ಅಥವಾ ಇವರ ಶ್ರೀಮಂತಿಕೆ ಸೋರಿಹೋದದ್ದರಿಂದಲೋ ನಮ್ಮೂರ ಜನ ಈ ದೇಸಾಯಿಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ದೇಸಗತಿಯ ಅಹಂಕಾರವನ್ನು ತೃಪ್ತಿಪಡಿಸಿಕೊಳ್ಳಲಿಕ್ಕಾಗಿ ಈತ ಧಾರಾಳಿಯಾಗಿದ್ದನೋ ಎಂದು ಅನೇಕರು ಸಂಶಯ ವ್ಯಕ್ತಪಡಿಸಿದ್ದುಂಟು. ಪಂಚಾಯ್ತಿ ಎಲೆಕ್ಷನ್ನಿಗೆ ದೇಸಾಯಿ ಹಳೆ ಜನರದೊಂದು ತಂಡ ಕಟ್ಟಿಕೊಂಡು ನಿಂತನಲ್ಲ, ನೀರನಂತೆ ಹಣ ಸುರಿದ. ಮನೆಮನೆಗೆ ಹೋಗಿ ಎಲ್ಲರನ್ನೂ ತನಗೇ ಓಟು ಬರೆಯುವಂತೆ ಕೇಳಿದ. ಊರುಗಾರಿಕೆಗೆ ಸಹಾಯ ಮಾಡಿದ್ದಿತ್ತು. ಧಾರಾಳಿಯಾಗಿ ಅವರಿವರ ಕುಟುಂಬಗಳನ್ನು ನಿಲ್ಲಿಸಿದ್ದಿತು. ಆದರೂ ಜನ ಪ್ರಚಂಡ ಬಹುಮತದಿಂದ ಅವನನ್ನೂ ಅವನ ತಂಡವನ್ನೂ ಸೋಲಿಸಿದರು. ಇದರಿಂದ ದೇಸಾಯಿಗೆ ಭಾರೀ ನಿರಾಶೆಯಾಗಿತ್ತು. ಅಥವಾ ಯಾರಿಗೆ ಆಗುವುದಿಲ್ಲ? ಹಾಗಂತ ಊರವರ ಮೇಲೆ ಕೋಪಗೊಂಡವನಲ್ಲ, ಸೇಡು ತೀರಿಸಿಕೊಳ್ಳಲು ಹೊಂಚಿದವನಲ್ಲ, ತನ್ನ ಪಾಡಿಗೆ ತಾನು ಅರಮನೆಯಾಯಿತು, ಆಗಾಗ ಬಯಲಾಟವಾಯಿತು, ನಿತ್ಯದ ಕುಡಿತವಾಯಿತು – ಇದ್ದ. ಮಾತಾಡಿಸಿದರೆ ನಗುನಗುತ್ತಲೇ ಮಾತಾಡುತ್ತಿದ್ದ. ಯಾವಾನಾದರೂ ಬಂದು ಹೊಗಳಿದರೆ ಆತನ ಮನಸ್ಸಿನಲ್ಲೇನೋ ಸಹಾಯ ಕೇಳುವುದಿದೆ, ಅದಕ್ಕೇ ಹೀಗೆ ಹಲ್ಲುಗಿಂಜುತ್ತಿದ್ದಾನೆಂದು ಅವನಿಗೆ ಗೊತ್ತಾಗುತ್ತಿತ್ತು. ಆದರೂ ಅವನಿಗೆ ಸಹಾಯ ಮಾಡುತ್ತಿದ್ದ. ಇನ್ನೇನು, ಅವನಿಗಿನ್ನೊಂದು ಭಯಂಕರ ರೋಗವಿತ್ತು. ಅದನ್ನು ಮುಂದೆ ಶೀನಿಂಗವ್ವ ವಿವರಿಸುತ್ತಾಳೆ.

ಇನ್ನು ಶೀನಿಂಗವ್ವ ಹೇಳುವ ಕಥೆ ಕೇಳಿರಿ:

* * *