“ಈ ವರನನ್ನು ಗೊತ್ತು ಮಾಡಿದವನೂ ಗೌಡನೇ. ನಿಶ್ಚಯಕಾರ್ಯದಲ್ಲಿ ಹೆಂಗಸರು ಭಾಗವಹಿಸಿದ್ದರಾದರೂ ಗೌಡನಿಗೆ ಎದುರಾಗಿ ಮಾತಾಡುವ ಧೈರ್ಯ ಯಾರಿಗೂ ಇರಲಿಲ್ಲ. ಈ ಸಲದ ಮದುವೆ ಅದ್ದೂರಿಯಿಂದಲೇ ಆಯಿತು. ಸಿಂಗಾರವ್ವನಿಗೆ ಮೈತುಂಬ ಆಭರಣ ಹಾಕಿದ್ದರೂ ವರನನ್ನು ನೋಡಿ ಹೆಂಗಸರ್ಯಾರಿಗೂ ನೆಮ್ಮದಿಯಾಗಲಿಲ್ಲ. ಗೌಡ ಇಲ್ಲಿಯೂ ಏನೋ ಹೊಂಚಿದ್ದಾನೆಂದು ಊರವರಿಲ್ಲ ಆಡಿಕೊಂಡರು. ಸಿಂಗಾರೆವ್ವನ ಬಗ್ಗೆ ಸಹಾನುಭೂತಿ ತೋರಿಸಿದರು. ಮದುವೆ ಆದಮೇಲೆ ಯೊರೇನು ಮಾಡಲಾದಿತು? ಅನೇಕರು ಆಡಿಕೊಂಡ ಹಾಗೆ ಒಂದೇ ಒಂದು ನೆಮ್ಮದಿಯೆಂದರೆ ‘ಈ ಸಲದ ವರ ಜೀವಂತ ಇದ್ದ.’

ಮದುವೆಯಾಗಿ ಒಂದು ತಿಂಗಳಾದ ಮೇಲೆ ಸಿಂಗಾರೆವ್ವ ‘ನಡೆಯಲಿಕ್ಕೆ’ ಗಂಡನ ಮನೆಗೆ ಬಂದಳು ಅವಳನ್ನು ಕಳಿಸಲಿಕ್ಕೆ ಬಂದವರಲ್ಲಿ ನಾನೂ ಇದ್ದೆ. ಕಳಿಸಿ ಉಳಿದವರೆಲ್ಲ ತಿರುಗಿ ಹೋಗುವಾಗ “ಸಿಂಗಾರೆವ್ವ ಒಬ್ಬಾಕಿನs ಆಗ್ತಾಳ, ತುಸ ದಿನ ನೀನೂ ಆಕೀ ಜೊತೆಗಿರು” ಎಂದು ಹೇಳಿ ನನ್ನನ್ನು ಇಲ್ಲೇ ಬಿಟ್ಟು ಹೋದರು. ಆಗ ಬಂದಿವಲ್ಲ, ಅದೇಕಡೆ, ಆಮೇಲೆ ನಾವು ನಂದಗಾವಿಗೆ ಹೋಗಲೇ ಇಲ್ಲ. ತೌರು ಮನೆ ಎಂಬ ಜೈಲಿನಿಂದ ಒಮ್ಮೆ ಹೊರಬಂದರೆ ಸಾಕೆಂದು ಸಿಂಗಾರೆವ್ವನಿಗೆ ಅನಿಸಿರಬೇಕು; ಅದಕ್ಕೇ ಆಮೇಲೆ ತೌರಿನಿಂದ ಯಾರು ಕರೆಯ ಬಂದರೂ ಹೋಗಲಿಲ್ಲ. ತಾಯಿಯನ್ನು ನೋಡಬೇಕೆನಿಸಿದಾಗ ಅವಳನ್ನು ಇಲ್ಲಿಗೇ ಕರೆಸುತ್ತಿದ್ದಳು.

ನಾವು ಅರಮನೆಯ ಬಗ್ಗೆ ಎಷ್ಟೆಲ್ಲ ಕನಸು ಕಂಡಿದ್ದೆವು. ಇಡೀ ಶಿವಾಪುರ ಊರಿನ ಅರ್ಧದಷ್ಟಿರುವ ಅರಮನೆ, ಮನೆತುಂಬಿ ತುಳುಕುವ ಶ್ರೀಮಂತಿಕೆ, ಕೈಗೊಂದಾಳು, ಕಾಲಿ ಗೊಂದಾಳು, ದೊರೆಸಾನಿಗೆ ಪಲ್ಲಕ್ಕಿ ಸೇವೆ – ಅಬ್ಬಾ ಸಡಗರವೇ ಎಂದು ಮದರೆ – ಇಲ್ಲೇನಿದೆ ? ಸಿಂಗಾರೆವ್ವನಿಗೆ ಮೈತುಂಬ ಆಭರಣ ಹಾಕಿದ್ದರಲ್ಲ, ಅವನ್ನು ಭದ್ರವಾಗಿ ಇಡುತ್ತೇವೆಂದು ಹೇಳಿ, ಕೈಯಲ್ಲಿಯ ಅವರೆಡು ಬಂಗಾರದ ಬಳೆ, ಅದೊಂದು ತಾಳಿ ಬಿಟ್ಟು ಉಳಿದುವೆಲ್ಲವನ್ನೂ ಕಸಿದುಕೊಂಡರು. ಆಮೇಲೆ ನಮಗೆ ಗೊತ್ತಾಯಿತು: ಅವನ್ನು ಊರಿನ ಪರುಮಶೆಟ್ಟಿಯಿಂದ ಕಡ ತಂದಿದ್ದರು ಎಂದು ! ಸಾಕೇನಪ್ಪ ದೇಸಗತಿಯ ಸಡಗರ ?

ಇನ್ನು ಅರಮನೆಯ ಸ್ಥಿತಿಗತಿಗಳೋ ಸ್ವಾಮಿ ಶಿವಲಿಂಗನೇ ಕಾಪಾಡಬೇಕು ! ನೀನೇ ನೋಡೀಯಲ್ಲ. ಅರಮನೆ ಎಷ್ಟು ದೊಡ್ಡದು ಅಂತ. ಇಂಥಾ ಅರಮನೆಗೆ ಸಾವಿರ ಜನ ಆದರೂ ಸಾಲದು. ಆದರೆ ಇಲ್ಲಿದ್ದವರು ಇಬ್ಬರು ಗಂಡಾಳು, ಇಬ್ಬರು ಹೆಣ್ಣಾಳು. ಗಂಡಾಳುಗಳು ಮುಂಜಾನೆ ನ್ಯಾರೆ ಮಾಡಿ ತೋಟಕ್ಕೆ ಹೋದರೆ ತಿರುಗಿ ಬರುವುದು ಸಂಜೇಯೇ. ಆದ್ದರಿಂದ ಅರಮನೆಯಲ್ಲಿ ಅವರ ಉಲಿವೇ ಇರುತ್ತಿರುಲಿಲ್ಲ. ಸಂಜೆ ಬಂದವರು ದನಗಳಿಗೆ ಮೇವು ಹಾಕಿ. ಊಟಮಾಡಿ, ಒಬ್ಬ ತೊಲೆಬಾಗಿಲ ಬಳಿ ಮಲಗಿದರೆ ಇನ್ನೊಬ್ಬ ಕೊಟ್ಟಿಗೆಯಲ್ಲಿ ಮಲಗುತ್ತಿದ್ದ. ಈ ಇಬ್ಬರೂ ಏಳುವುದ ಬೆಳಿಗ್ಗೆಯೇ. ಆ ಇಬ್ಬರೂ ಗಂಡಾಳುಗಳಿದ್ದರಲ್ಲ ಭಾರೀ ಧಿಮಾಕಿನವರು. ಒಂದು ಎಮ್ಮೆ ಹಿಂಡಿಕೊಡುತ್ತಿರಲಿಲ್ಲ, ಒಂದೆರಡು ಕೊಡನೀರು ತರುತ್ತಿರಲಿಲ್ಲ. ಆ ದೋಡ್ಡ ಅರಮನೆಯ ಕಸವನ್ನಾದರೂ ಗುಡಿಸುತ್ತಿದ್ದರೇ ಎಂದರೆ ಅದೂ ಇಲ್ಲ. ತೋಟದಲ್ಲಿ ಅದೇನು ಕೆಲಸ ಮಾಡುತ್ತಿದ್ದರೋ, ಭಾರೀ ದಣಿದವರ ಹಾಗಿ ಬಂದು ಬತ್ತೀ ಸೇದುತ್ತಾ ಕೂತುಬಿಡುತ್ತಿದ್ದರು. ಹಂಗಸರ ಬಗ್ಗೆ ಅವರಲ್ಲಿ ಸದಭಿಪ್ರಾಯ ಬೇಡ, ಅವರೂ ಮನುಷ್ಯರೆಂಬ ಭಾವನೆಯೂ ಇದ್ದಂತಿರಲಿಲ್ಲ. ತಾವುದಿಸಿದು ತರುವವರು, ನಾವು ಕುತುಕೊಂಡು ತಿನ್ನುವವರು – ಎಂಬಂಥ ಧೋರಣೆಯವರು. ಏನಾದರೊಂದು ಮಾತಾಡಬೇಕಾದಾಗಲೂ ಅನುಗ್ರಹಿಸುವವರ ಹಾಗೆ ಅವರ ಮಾತಿನ ಧಾಟಿ ಇರುತ್ತಿತು.

ಒಂದು ದಿನ ನೀರಿನ ಸೀತಿ ಹೊಟ್ಟೆನೋವೆಂದು ಬರಲಿಲ್ಲ. ದನಕರು ನೋಡಿಕೊಳ್ಳುತ್ತಿದ್ದ ನಿಂಗಪ್ಪನಿಗೆ ‘ಹೋಗಿ ಒಂದೆರಡು ಕೊಡನೀರು ತಗಂಬಾ’ ಎಂದರೆ ಅವನು ದುರುಗುಟ್ಟಿನನ್ನ ಕಡಿನೋಡಿ ಸುಮ್ಮನಾದ. ನನಗೆ ಅವಮಾನವಾಯಿತು. ಮತ್ತೊಮ್ಮೆ ಅದೇಮಾಗು ಹೇಳಿದೆ. “ ಈ ಹೆಂಗಸರಿಗೆ ಗಂಡಸರಂದರ ಕಿಮ್ಮತ್ತs ಇಲ್ಲಲಾ. ಹತ್ತಾಳಿನ ಕೆಲಸ ನಾ ಒಬ್ಬನs ನೋಡಿಕೋತೀನಿ, ಇವರಿಗೆ ಗೊತ್ತಾಗೋದs ಇಲ್ಲ” – ಎಂಬಿತ್ಯಾದಿ ಏನೇನೋ ಗೊಣಗಿ ಮಹಾ ನಟ್ಟು ಕಡಿದವರ ಹಾಗೆ ನನ್ನ ಮುಂದೆ ಹಾದು, ನನ್ನ ಕಡೆ ಕೂಡ ನೋಡದೆ ಹೋಗಿಬಿಟ್ಟ. ನನಗೆ ಸಿಟ್ಟು ತಡೆಯಲಾಗಲಿಲ್ಲ. ಹೋಗಿ ಸಿಂಗಾರೆವ್ವನಿಗೆ ಹೇಳಿದೆ. ಅವಳು ದೇಸಾಯಿಗೆ ಹೇಳಿದಳು. ದೇಸಾಯಿ ವಿಚಲಿತನಾಗಲೇ ಇಲ್ಲ. ಇದೆಲ್ಲ ಇಲ್ಲಿ ಮಾಮೂಲಿ ಎಂಬಂತೆ “ತರಿಸೋಣ, ತರಿಸೋಣ” ಎಂದು ಹೇಳಿ, ಅಲ್ಲಿದ್ದ ಕಾಳ್ಯಾನಿಗೆ ಹೇಳಿದ, ಅವನು ಹಾ ಹೂ ಎನ್ನದೆ ತನ್ನ ಪಾಡಿಗೆ ತಾನಿದ್ದುಬಿಟ್ಟ! ನನ್ನ ಚಡಪಡಿಕೆ ನೋಡಲಾರದೆ ಇನ್ನೊಬ್ಬ ಹೆಣ್ಣಾಳು ನಂಜಿ ಹೋಗಿ ನೀರು ತಂದಳು.

ಇನ್ನು ಹೆಣ್ಣಾಳುಗಳು: ಇವರು ಗಂಡಸರಿಗಿಂತ ಒಳ್ಳೆಯವರೇನೋ ನಿಜ. ಯಾಕೆಂದರೆ ಗೊಣಗಿಕೊಳ್ಳುತ್ತಿರಲಿಲ್ಲ. ಇಬ್ಬರಲ್ಲಿ ಒಬ್ಬಳು ಕಸಮುಸುರೆ ಮಾಡಿ ನೀರು ತಂದರೆ ಇನ್ನೊಬ್ಬಳು ಅಡಿಗೆ ನೋಡಿಕೊಳ್ಳುತ್ತಿದ್ದಳು. ಪ್ರತಿ ವಾರಕ್ಕೊಮ್ಮೆ ಈ ಕೆಲಸ ಅದಲುಬದಲು ಮಾಡಿಕೊಳ್ಳುತ್ತಿದ್ದರು. ಮುಂಜಾನೆ ಸಂಜೆಗಳಲ್ಲಿ ತಮ್ಮ ಕೆಲಸ ಮುಗಿಯಿತೆಂದರೆ ಹೇಳದೆ ಕೇಳದೆ ತಮ್ಮ ಮನೆಗಳಿಗೆ ಹೊರಟು ಬಿಡುತ್ತಿದ್ದರು. ಆದರೆ ಇವರೂ ಮೈಗಳ್ಳರೆ, ಒಮ್ಮೆ ಅಡಿಗೆ ಮನೆಗೆ ಹೋದೆ. ಸೀತಿ ಅಡಿಗೆ ಮಾಡುತ್ತಿದ್ದಳು. ಪಾಪ ಒಬ್ಬಳೇ ಇದ್ದಾಳಲ್ಲಾ,  ನಾನೂ ಸ್ವಲ್ಪ ನೆರವಾಗೋಣವೆಂದು ಸೌಟು ಹಿಡಿದು ಒಲೆಮೇಲಿನ ಪಾತ್ರೆಯಲ್ಲಿ ಹಾಕಿದ್ದೇ ತಡ, ಇಡೀ ಅಡಿಗೆಯ ಭಾರ ನನಗೇ ಬಿಟ್ಟು ಬುಟ್ಟಿಯೊಳಗೆ ಐದಾರು ರೊಟ್ಟಿ ಹಿಡಿದು, ಪಲ್ಯ ಹಾಕಿಕೊಂಡು ಮಡಿಚಿ ಉಡಿ ಕಟ್ಟಿಕೊಂಡು ತನ್ನ ಮನೆಗೆ ಹೋಗೇಬಿಟ್ಟಳು. ಅಂದು ಬುದ್ಧಿ ಕಲಿತವಳು ಆಮೇಲೆ ಉಸ್ತುವಾರಿ ಮಾತ್ರ ಮಾಡತೊಡಗಿದೆ. ಆದರೆ ದೇಸಾಯಿಗೂ ಹಿರಿಯ ದೊರೆಸಾನಿಗೂ ನಾನೇ ಊಟ ಬಡಿಸುತ್ತಿದ್ದೆ. ಆಮೇಲೆ ಸಿಂಗಾರೆವ್ವನ ಜೊತೆಯಲ್ಲೇ ಊಟ ಮಾಡುತ್ತಿದ್ದೆ.

ಅಂತೂ ಆಳು ಮತ್ತು ಅರಮನೆಯ ಸಂಬಂಧ ಹಿತಕರವಾಗಿಲ್ಲವೆಂದೆನಿಸಿತು. ಗೌಡರ ಮನೆಯಲ್ಲೇ ಹುಟ್ಟಿಬೆಳೆದವಳು. ನನಗೆ ಗೊತ್ತಿಲ್ಲವೇ? ನಂದಗಾಂವಿಯ ಗೌಡ ಎಂಥವನೇ ಇರಲಿ, ಅವನನ್ನು ಕಂಡರೆ ಆಳುಗಳು ಹೆದರಿ ನಡುಗುತ್ತಿದ್ದರು. ಹೆಣ್ಣಾಳುಗಳಂತೂ ಅವನ ಮುಖ ನೋಡಿದವರೇ ಅಲ್ಲ; ಇನ್ನು ಮುಖಕ್ಕೆ ಮುಖಕೊಟ್ಟು ಮಾತಾಡುವುದೆಲ್ಲಿಂದ ಬಂತು? ಅದೆಲ್ಲ ಇಟ್ಟುಕೊಳ್ಳುವವರ ಧಿಮಾಕನ್ನು ಅವಲಂಬಿಸಿರುತ್ತದೆಂದು ಕಾಣುತ್ತದೆ. ಅಂಥ ಧಿಮಾಕು, ಜೋರು ದೇಸಾಯಿಯಲ್ಲಿರಲಿಲ್ಲ.

ಇನ್ನು ನಮ್ಮ ಸರಗಂ ದೇಸಾಯಿ; ಒಟ್ಟು ವಾತಾವರಣದಲ್ಲಿ ಸರಿಹೊಂದದ ಮನುಷ್ಯನಾಗಿ ಕಾಣುತ್ತಿದ್ದ. ಆತ ಸೋತವನಂತೆ, ಆದರೆ ಮತ್ತೆ ಗೆಲ್ಲುವನೆಂಬ ಆತ್ಮವಿಶ್ವಾಸವಿಲ್ಲದೆ ಸದಾ ಹತಾಶ ಮನೋಭಾವನೆಯಲ್ಲೇ ಇರುತ್ತಿದ್ದ. ಆದರೆ ತಾನು ದೇಸಾಯಿಯೆಂಬ, ಈ ಅರಮನೆಯ ಯಜಮಾನನೆಂಬ, ಒಂದು ಕಾಲದ ವೈಭವಕ್ಕೆ ಮಾಲೀಕನೆಂಬ ಹೆಮ್ಮೆ ಒಳಗೊಳಗೇ ಇತ್ತು. ಸಾಧ್ಯವಿದ್ದಿದ್ದರೆ ಅದನ್ನು ಚಲಾಯಿಸಲು ಈಗಲೂ ಸಿದ್ಧನೇ. ಆದರೆ ಅದರ ಪ್ರಭಾವದಿಂದ ಏನನ್ನೂ ಸಾಧಿಸಲಿಕ್ಕೆ ಆಗುವುದಿಲ್ಲ ಎಂಬ ಕೊರಗು ಮಾತ್ರ ಆತನ ಮುಖದಲ್ಲಿ ಕಾಣುತ್ತಿತ್ತು. ಹೀಗಾಗಿ ಚಲಾವಣೆಯಿಲ್ಲದ ನಾಣ್ಯಗಳ ದೊಡ್ಡ ನಿಧಿಯ ಯಜಮಾನನಂತಿದ್ದ.

ಕಾಲಮೇಲೆ ಕಾಲು ಹಾಕಿ ಆತ ಕೂತಾಗ ದೇಸಗತಿಯ ಧಿಮಾಕೇನೋ ಆ ಭಂಗಿಯಲ್ಲಿರುತ್ತಿತ್ತು. ಆದರೆ ಅವನು ಹಾಗೂ ಕೂರುತ್ತಿರಲಿಲ್ಲ. ಮೊಳಕಾಲಿಗೆ ಎರಡು ಕೈ ಸುತ್ತುತ್ತಿದ್ದ. ಆದ್ದರಿಂದ ಮೈಗಳ್ಳರಂತೆ ಕಾಣುತ್ತಿದ್ದ. ಆಕಳಿಕೆಯಿಂದ ತುಂಬಿಕೊಂಡಿರುತ್ತಿದ್ದ ಸಣ್ಣ ಕಣ್ಣು, ಉದ್ದಕ್ಕೆ ಚಾಚಿ ಮೇಲ್ದುಟಿಯ ಮೇಲೆ ಬಿದ್ದ ಚೂಪು ಮೂಗು, ಸಣಕಲು ದಂಟಿನಂಥ ದೇಹ – ನಡೆಯುವಾಗಲೂ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದುದರಿಂದ – ಯಾವುದೇ ಗತ್ತು ಗಮ್ಮತ್ತುಗಳಿಗೆ ಅವಕಾಶವೇ ಇರುತ್ತಿರಲಿಲ್ಲ.

ಸಾಮಾನ್ಯವಾಗಿ ಗೌಡ, ದೇಸಾಯಿ, ಕುಲಕರ್ಣಿ ಮುಂತಾದವರು ಕಷ್ಟಪಟ್ಟಾದರೂ ಗಂಭೀರವಾಗಿ ಕಾಣುವಂತೆ ಶ್ರೀಮಂತ ಉಡುಪು ಧರಿಸುವುದು ವಾಡಿಕೆ. ಈತನ ಉಡುಪು ಸ್ವಚ್ಛವಾಗಿರುತ್ತಿದ್ದಾದರೂ ಅದರಲ್ಲಿ ದೇಸಗತಿಯ ಛಾಪಿರುತ್ತಿರಲಿಲ್ಲ. ಬೇಕಾದಷ್ಟು ನಿರ್ಲಕ್ಷತನ ಇತ್ತು. ಆದರೆ ರುಂಬಾಲನ್ನು ಮಾತ್ರ ಪಾರಿಜಾತದ ಕೃಷ್ಣನ ಹಾಗೆ ಒಪ್ಪವಾಗಿ ಸುತ್ತಿಕೊಳ್ಳುತ್ತಿದ್ದ. ಒಮ್ಮೊಮ್ಮೆ ಕೆಳಗಿನ ಅಸ್ತವ್ಯಸ್ತ ಧೋತ್ರ ಅಂಗಿಗೂ, ತಲೆಯ ಮೇಲಿನ ಭಾರೀ ಬೆಲೆಯ ಜರತಾರಿ ರುಂಬಾಲಿಗೂ ತಾಳೆಯಾಗುತ್ತಿರಲಿಲ್ಲ. ಆದರೆ ಆ ಬಗ್ಗೆ ಅವನೆಂದೂ ತಲೆ ಕೆಡಿಸಿಕೊಂಡವನೇ ಅಲ್ಲ. ಅವನು ನಿಲ್ಲುವ ನಿಲುವಿಗಾಗಲೀ, ಕೂರುವ ಭಂಗಿಗಾಗಲೀ ನಡೆಯುವ ರೀತಿಗಾಗಲೀ ಆ ಉಡುಪು ಸಮವಲ್ಲವೆಂದೇ ನನ್ನ ಅನಿಸಿಕೆಯಾಗಿತ್ತು.

ಆದರೆ ಹೇಳಿಕೊಳ್ಳುವಂಥ ಸ್ನೇಹಿತರೂ ಅವನಿಗಿರಲಿಲ್ಲ. ಎಷ್ಟೊಂದು ದಿನಗಳಿಂದ ನೋಡುತ್ತಿದ್ದೇನೆ, ಅರಮನೆಯ ಕಡೆಗೆ ಊರವರ ಸುಳಿವೇ ಇರುತ್ತಿರುಲಿಲ್ಲ. ಆಗಾಗ ತಲೆ ಹಾಕುವವನೆಂದರೆ ಪರಮಶೆಟ್ಟಿ ಒಬ್ಬನೇ. ಎತ್ತರವಾಗಿ, ಕರ್ರಗಿನ  ಆಕೃತಿಯ ಶೆಟ್ಟಿ ನೋಡಿದರೆ ಗೌರವ ಬರುವಂತೆ ಸುಲಭವಾಗಿ ಗಂಭೀರನಾಗಿರಬೇಕಿತ್ತು. ಬಂದವನು ಆ ಕಡೆ ಈ ಕಡೆ ನೋಡಿ, ಆಸುಪಾಸು ಯಾರೂ ಇಲ್ಲವೆಂದು ಖಾತ್ರಿಯಾದಾಗ ಮಾತ್ರ ದೇಸಾಯಿಯ ಕಿವಿಯಲ್ಲಿ ಏನೇನೋ ಪಿಸುಗುಟ್ಟುತ್ತಿದ್ದ. ಇವರಿಬ್ಬರೂ ಮಾತಾಡುವ ರೀತಿ ಕಂಡವರಿಗೆ ಇವರ ಮಧ್ಯದಲ್ಲೇನೋ ಕಳ್ಳ ವ್ಯವಹಾರವಿದೆಯೆಂದು ತಕ್ಷಣ ಗೊತ್ತಾಗುತ್ತಿತ್ತು. ಹೆಂಗಸರ ಮುಂದೆ ಮಾತ್ರ ಶೆಟ್ಟಿ ಮುಖಕ್ಕೆ ಬಿಗಿ ತಂದುಕೊಂಡು ಗಂಭೇರವಾಗಿರುವುದಕ್ಕೆ ಪ್ರಯತ್ನಿಸುತ್ತಿದ್ದ. ಹಾಗೂ ಹೆಂಗಸರು ತನ್ನ ಬಗ್ಗೆ ತುಂಬ ಗೌರವ ಭಾವನೆಯಿಂದಿರಬೇಕೆಂದು ಅವನ ಅಪೇಕ್ಷೆಯಾಗಿತ್ತು.

ಮುಂಜಾನೆ ಎದ್ದು ಸ್ನಾನ, ನ್ಯಾರೆ ಮಾಡಿ ತನ್ನ ರುಂಬಾಲು ಸುತ್ತಿಕೊಂಡು ಹೋಗಿ ದೇಸಾಯಿ ಆಲದ ಕಟ್ಟೆಯ ಮೇಲೆ ಬೀಡಿಸೇದುತ್ತ ಕೂರುತ್ತಿದ್ದ. ಹೆಂಗಸರು ನೀರಿಗೆ ಹೋಗುವುದಕ್ಕೂ ಜನ ಹೊಲಗಳಿಗೆ ಹೋಗುವುದಕ್ಕೂ ಅದೇ ಮುಖ್ಯ ರಸ್ತೆಯಾದ್ದರಿಂದ ಸದಾಕಾಲ ಜನಗಳ ಓಡಾಟದಿಂದ ತುಂಬಿರುತ್ತಿತ್ತು. ಆದರೆ ಯಾವ ಮಂದಿಗೂ ದೇಸಾಯಿ ಕೂತಪರಿವೆ ಎರುತ್ತಿರಲಿಲ್ಲ. ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು ಬುರುತ್ತಿದ್ದರು. ಅವರಲ್ಲಿ ಒಬ್ಬಿಬ್ಬರು, ಅದೂ ಮಾತಾಡುವ ಚಟದವರು ಮಾತ್ರ “ಏನ್ರಿ ಮಾರಾಜ್ರ, ಕುಂತ್ರಿ?” ಎಂದು ಹೇಳಿದರೆ ಅದೇ ಹೆಚ್ಚು. ಅವರೂ ಉತ್ತರಕ್ಕಾಗಿ ಕಾಯುತ್ತಿರುಲಿಲ್ಲ ದೇಸಾಯಿಗಿದು ಗೊತ್ತು. ಬರೀ ಮುಗುಳುನಗುತ್ತಿದ್ದನಷ್ಟೆ.

ದೇಸಾಯಿ ಮಧ್ಯಾಹ್ನ ಊಟಮಾಡಿ ಮಲಗಿದರೆ ಮತ್ತೆ ಏಳುವುದು ಇಳಿಹೊತ್ತಿಗೇನೇ. ಎದ್ದು ಊರಿನಲ್ಲಿ ಮಾಯವಾಗುತ್ತಿದ್ದ. ಆಮೇಲೆ ಬರುವುದು ಮಧ್ಯರಾತ್ರಿಗೇನೇ. ಕುಡಿದ ಅಮಲಿನಲ್ಲೇ. ಒಮ್ಮೊಮ್ಮೆಯಂತೂ ಅವನನ್ನು ಹೊತ್ತುಕೊಂಡೇ ಬರುತ್ತಿದ್ದರು. ಅಂದರೆ ರಾತ್ರಿ ಮಾತ್ರ ಕುಡಿಯುತ್ತಾನೆಂದಲ್ಲ, ಅಥವಾ ಮಧ್ಯರಾತ್ರಿಗೇ ಮನೆಗೆ ಬರುತ್ತಾನೆಂದೂ ಅಲ್ಲ. ಒಮ್ಮೊಮ್ಮೆ ಮನೆಯಲ್ಲೇ ಕುಡಿಯುತ್ತಿದ್ದ. ಬಯಲಾಟದ ಮಾತುಗಳನ್ನು ಒದರಿ ಒದರಿ ಪಕ್ಕದಲ್ಲಿ ಯಾರಿದ್ದರೆ ಅವರಿಗೆ  ಹೇಳುವುದು, ತಾರಕದಲ್ಲಿ ಹಾಡುವುದು, ಅಭಿನಯಿಸುವುದು ಸುರುವಾಗುತ್ತಿತ್ತು.

ಬಂದ ಹೊಸದರಲ್ಲಿ ಒಮ್ಮೆ, ನನಗಿನ್ನೂ ನೆನಪಿದೆ: ಕುಡಿದು ಮುಸ್ಸಂಜೆಯ ಹೊತ್ತಿಗೆ ಅರಮನೆಗೆ ಬಂದ. ಅರಮನೆಗೆ ಸಾವಿರ ಕಂಬಗಳು, ಇಕಾ ಕಾಣುತ್ತವಲ್ಲ. ಇಲ್ಲಿ ಎಷ್ಟು ಕಂದೀಲಿಟ್ಟರೂ ಈ ಕಂಬಗಳಿಂದಾಗಿ ಬೆಳಕು ಸಾಲುವುದೇ ಇಲ್ಲ. ರಾತ್ರಿ ನಾನು ಮತ್ತು  ಸಿಂಗಾರೆವ್ವ ದರ್ಬಾರಿಗೆ ಕಾಲಿಡುತ್ತಲೇ ಇರಲಿಲ್ಲ. ಧಡೂತಿ ಕಂಬಗಳು ದಪ್ಪ ನೆರಳು ಚೆಲ್ಲಿಕೊಂಡು ಭೂತಗಳ ಹಾಗೆ ನಿಂತಿರುತ್ತಿದ್ದವು. ನಿಂತು ಮಾತಾಡಿದರೆ ಮಾತಾಡುತ್ತಿರುವವರು ನಾವೋ ಅಥವಾ ಈ ಕಂಬಗಳೋ ಎಂದು ಅನುಮಾನ ಮೂಡಿ ಅಂಜಿಕೆಯಾಗುತ್ತಿತ್ತು. ದೇಸಾಯಿ ಕುಡಿದು ಮತ್ತನಾಗಿದ್ದನಲ್ಲ, ಈ ಕಂಬಗಳ ಜೊತೆ ಮಾತಾಡುತ್ತ, ಪ್ರಾಸ ಹೇಳುತ್ತ, ತಾರಕ ಒದರುತ್ತ ಒಬ್ಬನೇ ಅಲೆದಾಡುತ್ತಿದ್ದ. ದೇಸಾಯಿಯ ಮಾತಿನ ಪ್ರತಿಧ್ವನಿಯಾಗುತ್ತಿತ್ತು. ಆಗ ಈ ಕಂಬಗಳು ಅವನೊಂದಿಗೆ ಗಹಗಹಿಸಿ ನಗುತ್ತಿರುವಂತೆ ಇಲ್ಲವೇ ಗಂಭೀರವಾಗಿ ಅಳುತ್ತಿರುವಂತೆ ಭಾಸವಾಗುತ್ತಿತ್ತು. ದಟ್ಟವಾದ ಕಾಡಿದೆ ಅಂದುಕೋ, ಅಮವಾಸ್ತೆ ಕತ್ತಲೆ, ಒಂದೇ ಒಂದು ಹಾಳು ದೇವಾಲಯ, ಅದೆಷ್ಟು ಹಾಳಾಗಿದೆಯೆಂದರೆ ಈಗ ಉಳಿದಿರುವುದು ಬರೀ ಕಂಬಗಳು. ಆ ಕಂಬಗಳ ಮಧ್ಯೆ ಒಂದು ದೆವ್ವ ಕಿರುಚುತ್ತ ಓಡ್ಯಾಡಿದರೆ ಹ್ಯಾಗಿರುತ್ತೆ; ಹಾಗಿತ್ತು ಆ ದೃಶ್ಯ. ಆಳದಲ್ಲಿ ಆತನಿಗೇನೋ ಭಾರೀ ದುಃಖವಿದೆಯೆಂದು ನನಗಾಗಲೇ ಹೊಳೆಯಿತು. ನಮಗೆ ಕಾಣುವ ಈತನ ಪಾತಳಿ ಇವನಲ್ಲ. ಅವನ ಒಳಗಿನ ಈ ವೇದನೆ ಅವನಿಗೇ ಗೊತ್ತಾಗದ ರೀತಿಯಲ್ಲಿ ಅವನನ್ನು ಮೀರಿ ಹೊರಗೆ ಬರುತ್ತದೆಂದು ಅನ್ನಿಸಿತು.

ಆದರೆ ಹೆಂಗಸರನ್ನು ನೋಡಿದಾಗ ದೇಸಾಯಿಯ ಕಣ್ಣುಗಳು ಹೊಳೆಯುತ್ತಿದ್ದವು. ಲಂಪಟನ ಹಾಗೆ ಅವರನ್ನು ನೋಡುತ್ತಿದ್ದ. ನೋಡಿನೋಡಿ ಮುಖ ಕೆಂಜಗಾಗಿ ಆಕಳಿಕೆ ಬರುತ್ತಿತ್ತು. ಆಗ ಅವನ ಕಣ್ಣು ಎಣ್ಣೆಣ್ಣೆಯಾಗಿ ಒದ್ದೆಯಾಗುತ್ತಿದ್ದವು.

ಇಲ್ಲಿಗೆ ಬಂದಿವಲ್ಲ, ಸಿಂಗಾರೆವ್ವ ‘ಹೊಸಮನೆಗಿತ್ತಿ’ ತನವನ್ನು ಅನುಭವಿಸಲೇ ಇಲ್ಲ. ಮಾರನೇ ದಿನವೇ ಇಂಥ ಇಡೀ ದೊಡ್ಡ ಅರಮನೆಯ ಜವಾಬ್ದಾರಿಯನ್ನು ಹೊರಬೇಕಾಯಿತು. ಬಂದ ದಿನದಿಂದಲೇ ಹೊಸ ಸೊಸೆಗೆ ಮನೆತನದ ಹುವೇನವೇ ಕಾರುಭಾರ ಯಾರು ಕೊಡುತ್ತಾರೆ? ಆದರೆ ನಿಭಾಯಸಲಿಕ್ಕೆ ಮನೆಯಲ್ಲಿ ಬೇರೆ ಯಾರಾದರೂ ಇದ್ದರಲ್ಲವೇ? ಹಿರಿಯ ದೊರೆಸಾನಿ ಅದಂರೆ ಸಿಂಗಾರೆವ್ವನ ಅತ್ತೆ ಹಣ್ಣುಹಣ್ಣು ಮುದುಕಿ, ಹಾಸಿಗೆ ಹಿಡಿದಿದ್ದಳು. ಇತ್ತ ದೇಸಾಯಿ ಮನೆಕಡೆ ಎಂದೂ ಲಕ್ಷ್ಯ ಕೊಟ್ಟವನೇ ಅಲ್ಲ, ನನಗೆ ಆಶ್ವರ್ಯವಾದದ್ದು ಇಷ್ಟುದಿನ ಈ ಮನೆತನ ಹ್ಯಾಗೆ ತಡೆದಿದೆ ಎಂದು.

ನಮ್ಮ ಸಿಂಗಾರೆವ್ವ ಬಹಳ ಜಾಣೆ. ಎಷ್ಟೆಂದರೂ ಗೌಡನ ರಕ್ತ ನೋಡು. ಬಂದ ಒಂದು ತಿಂಗಳಲ್ಲೇ ಇದನ್ನೊಂದು ‘ಮನೆತನ’ ಅಂತ ಮಾಡಿದಳು. ನಾನೂ ನೆರವಾದೆ ಅಂತಿಟ್ಟುಕೋ. ನನ್ನಂಥವಳ ನೆರವು ಅಂಥಾ ದೊಡ್ಡ ಮನೆಯ ಯಾವ ಮೂಲೆಗಾದೀತು? ಅಂತೂ ಒಂದು ತಿಂಗಳಲ್ಲೇ ಖರೆಖರೆ ದೊರೆಸಾನಿಯಾಗಿ ಬಿಟ್ಟಳು.

ಇನ್ನವಳ ಅತ್ತೆ – ಅವಳದೂ ವಿಚಿತ್ರ ಸ್ವಭಾವವೇ. ಅವಳ ಸೇವೆಯನ್ನು ಖುದ್ದಾಗಿ ನಾನೇ ಮಾಡುತ್ತಿದ್ದೆ. ಸಿಂಗಾರೆವ್ವನೂ ಸಹಕರಿಸುತ್ತಿದ್ದಳು. ಹೆಸರು ನಾಗಮ್ಮ ಎಂದು. ವಯಸ್ಸು ಹತ್ತಿರ ಹತ್ತಿರ ನೂರಿದ್ದೀತು. ಒಂದೂ ಹಲ್ಲಿರಲಿಲ್ಲ. ಬೂದುಬಣ್ಣದ ಚಿಕ್ಕ ಚಿಕ್ಕ ಕಣ್ಣುಗಳು, ಬಿಳಿ ಮುಖದಲ್ಲಿ ಸುಕ್ಕಿನ ಗೆರೆಗಳು ಗೋಣಿಚೀಲದ ಹಾಗೆ ಹೆಣೆದುಕೊಂಡಿದ್ದವು. ಅವಳು ಹಾಸಿಗೆ ಬಿಟ್ಟು ಈಚೆ ಬರುವಂತಿರಲಿಲ್ಲ. ಊಟೋಪಚಾರಗಳೆಲ್ಲಾ ಹಾಸಿಗೆಯ ಮೇಲೇ ಆಗಬೇಕು. ಜಳಕ ಎಂದರೇ ಆ ಮುದುಕಿಗಾಗದು. ತಿಂಗಳಿಗೊಮ್ಮೆಯಾದರೂ ನಾನೇ ಜಳಕ ಮಾಡುಸುತ್ತೇನೆಂದರೂ “ಬ್ಯಾಡ ತಾಯಿ, ನಿನ್ನ ಕಾಲ ಬೀಳತೀನು” ಎಂದು ಹೇಳುತ್ತಿದ್ದಳು. ಎಷ್ಟು ದಿನಗಳಿಂದ ಹಾಗೆ ಇದ್ದಳೋ, ಸಮೀಪ ಹೋದರೆ ಮುಗ್ಗಲು ಜೋಳದ ಹಾಗೆ ನಾರುತ್ತಿದ್ದಳು. ಕಡ್ಡಿಯಂಥ ಕೈ, ಕಾಲು – ಒಂದು ಕಾಲಕ್ಕೆ ಮೈ ತುಂಬಿಕೊಂಡಿದ್ದಳೆಂದು ಹೇಳುವುದಕ್ಕೆ ಮೂಳೆಗಂಟಿದ್ದ ಅವಳ ಬಿಳಿ ಚರ್ಮ ಹೊಟ್ಟೆ ಮತ್ತು ಸೊಂಟದಲ್ಲಿ ಜೋತುಬಿದ್ದಿತ್ತು. ಆದರೆ ಯಾವಾಗಲೂ ಅಂದರೆ ಮಲಗಿದಾಗಲೂ ಮುದುಕಿಯ ಒಂದು ಕೈ ಸೊಂಟದ ಮೇಲಿರುತ್ತಿತ್ತು. ನಾನೇನಾದರೂ ಸಮೀಪ ಹೋದರೆ ಸಾಕು. ಸರ್ರನೆ ಕೋಲು ಹಿಡಿದುಕೊಂಡು “ಯಾರವರ?” ಎನ್ನುತ್ತಿದ್ದಳು. ನಾನು ನನ್ನ ಹೆಸರು, ಗುರ್ತು ಹೇಳಿದರೂ ಅವಳ ಬಳಿ ಕುಳಿತುಕೊಳ್ಳುವ ಹಾಗಿರಲಿಲ್ಲ. ಹಾಗೇನಾದರೂ ಕೂತರೆ ದೂಕಿ ದೂರ ಸರಿಸುತ್ತಿದ್ದಳು. ಆ ವಾಸನೆಯಿಂದಾಗಿ ನಾನೂ ಅವಳ ಸಮೀಪಕ್ಕೆ ಹೋಗುತ್ತಿರಲಿಲ್ಲವೆನ್ನು. ಆದರೆ ಅವಳ್ಯಾಕೆ ಈ ಥರ ಮನುಷ್ಯರನ್ನು ದೂರವಿಡುತ್ತಾಳೆಂದು ಬಹಳ ದಿನ ಗೊತ್ತಾಗಲೇ ಇಲ್ಲ. ಊಟಕ್ಕೆ ಹಾಕುವಾಗ ಅವಳನ್ನೆಬ್ಬಿಸುವ ಮೊದಲು ತಾನೇ ಕಷ್ಟಪಟ್ಟು ಎದ್ದು ಕೂರುತ್ತಿದ್ದಳು. ಮಲಮೂತ್ರ ಮಾಡಿಸುವಾಗ ಮಾತ್ರ ಅವಳು ನಿಸ್ಸಹಾಯಕಳಾಗುತ್ತಿದ್ದಳು. ಆದರೂ ಕೂಡ ಅವಳ ರಟ್ಟೆಯಲ್ಲೇ ಕೈಹಾಕಿ ಎಬ್ಬಿಸಬೇಕು, ಮಂಚದ ಕೆಳಗೇ ಕೂರಿಸಬೇಕು. ಆಗ ಸೊಂಟದ ಕಡೆಗೇನಾದರೂ ನಮ್ಮ ಕೈ ತಪ್ಪಿಹೋಯಿತ್ತೆನ್ನು, ಅದಿನ್ನೂ ಸೊಂಟ ಮುಟ್ಟುವ ಮೊದಲೇ ಅವಳಿಗೆ ಗೊತ್ತಾಗಿ ಮೊಳಕೈಯಿಂದ ಗುದ್ದುತ್ತಿದ್ದಳು. ನನಗೆ ಅದೇನೆಂದು ತಿಳಿಯುವ ಕುತೂಹಲ. ಸಿಂಗಾರೆವ್ವ “ಮುದುಕೇರೆಲ್ಲ ಹಾಂಗs ಇರತಾರ ಬಿಡು” ಎಂದು ನಿರ್ಲಕ್ಷಿಸಿದಳು.

ಬರಬರುತ್ತ ಆ ಮುದುಕಿಗೂ ನನಗೂ ಸಲುಗೆ ಬೆಳೆಯಿತು. ನಾನು ಅವಳ ಕೋಣೆಗೆ ಹೋದರೆ, ಈಗ ಮೊದಲಿನಂತೆ ಕೋಲು ತಗೊಂಡು “ಯಾರವರ?” ಎನ್ನುತ್ತಿರಲಿಲ್ಲ. “ಶೀನಿಂಗೇನ? ಬಾ ಬಾ” ಎನ್ನುತ್ತಿದ್ದಳು. ನಾನು ಹೋದಾಗೆಲ್ಲ ಆ ಮುದುಕಿ ತನ್ನ ಬೊಚ್ಚುಬಾಯಿ ಬಿಟ್ಟು ಕೇಳುತ್ತಿದ್ದುದು ಒಂದೇ ಪ್ರಶ್ನೆ: “ಸಿಂಗಾರಿ ಬಸರಾದ್ಲ?” ಅದಕ್ಕೇ ಸಿಂಗಾರೆವ್ವ ಅವಳ ಹತ್ತಿರ ಹೋಗುವುದನ್ನು ಕಡಿಮೆ ಮಾಡಿದ್ದಳು. ಅತ್ತೆಯೆಂಬ ಅಕ್ಕರ‍್ತಿಯಿಂದ ಹೋದರೆ, ಹೋದೊಡನೆ ಅವಳ ಹೊಟ್ಟೆಗೇ ಕೈ ಹಾಕಿ “ಬಸರಾದಿ?” ಎಂದು ಕೇಳುತ್ತಿದ್ದರೆ ಹ್ಯಾಗೆ ಹೋಗುವುದು? ಒಮ್ಮೆ ಇದೇ ಬಗ್ಗೆ ನನಗೂ ಅವಳಿಗೂ ಕೊಂಚ ಮಾತಾಯಿತು.

“ಬಸರ ಬಸರಂದರೇನು, ಶೀರೀ ನಿರಿಗಿ ಅಂತ ತಿಳಿಕೊಂಡ್ಯೇನು, ಬೇಕಾದಾಗ ಹಾಕಿಕೊಳ್ಳಾಕ, ಬ್ಯಾಡಾದಾಗ ಬಿಚ್ಚಾಕ? ತುಸ ದಿನ ತಡಿ” – ಅಂದೆ.

“ಇನ್ನs ಎಷ್ಟುದಿನ ಬೇಕ? ನನ್ನಂಥಾ ನನಗ ಈಗ ಬೇಕಾದರೂ ಗಂಡು ಸಿಗಲಿ, ಹಾ ಅನ್ನೂದರಾಗ ನಾಕ್ಹಡೀತೇನ. ಈಕಿಗೇನ ಧಾಡಿ?”

ಭಲೇ ಮುದುಕಿ ಅಂದುಕೊಂಡೆ, ನಗೆ ತಡೆಯುತ್ತಾ,

“ಹುಳುಕದಂಟಿನಂಥಾ ಮಗನ್ನ ಕೊಟ್ಟೀದಿ, ಅವನ್ನ ಕಟ್ಟಿಕೊಂಡು ದಿನಕ್ಕೊಂದು ಹಡ್ಯಾಕಾದೀತ?” ಅಂದೆ.

“ಏ, ಬಸರಾಗಾಗ ಒನಿಕೇ ಆಗಬೇಕಂತಿಲ್ಲಗs, ಉಚ್ಚಿ ದಾಟಿದರ ಸಾಕು. ಉಚ್ಚೀ ಹೊಯ್ತಾನೋ ಇಲ್ಲೋ? ಅದ್ಹೇಳು.”

ಈಗ ಮಾತ್ರ ನನಗೆ ನಗೆ ತಡೆಯಲಿಕ್ಕಾಗಲಿಲ್ಲ. ನಕ್ಕೆನಲ್ಲ, ಮುದುಕಿ ತಾನೂ ಹಾಸಿಗೆಯ ಮೇಲೆ ಕುಪ್ಪಳಿಸುತ್ತ ಬೊಚ್ಚಬಾಯಿ ತೆಗೆದು ನಾನು ನಗುವುದನ್ನೇ ಅಣಕಿಸತೊಡಗಿದಳು.

ಅವಳು ಒಮ್ಮೊಮ್ಮೆ ಖುಶಿ ಬಂದಾಗ ದನಿ ತೆಗೆದು ಹಾಡುತ್ತಿದ್ದಳು. ಆದರೆ ಆ ಹಾಡು ಕೇಳಿದಾಗ ನಮ್ಮಿಬ್ಬರಿಗೂ ಸಂತೋಷವಾಗುತ್ತಿರಲಿಲ್ಲ. ಅದು, ಎಲ್ಲೋ ದೂರದಲ್ಲಿ ಒಂದು ನೊಂದ ಹೆಣ್ಣುನಾಯಿ ಒದರಿ ಅಳುತ್ತಿದ್ದಂತೆ ಕೇಳಿಸುತ್ತಿತ್ತು. ಆ ಹಾಡು ಕೂಡ ಯಾವಾಗಲೂ ಒಂದೇ ನುಡಿ, –

ಚಿನ್ನದ ನಡಪಟ್ಟಿ ರನ್ನದ ನಡಪಟ್ಟಿ
ಚಿನ್ನರನ್ನದ ನಡಪಟ್ಟಿ ||ಸೋ||
ಚಿನ್ನರನ್ನದ ನಡಪಟ್ಟಿ ಕೊಡುವೇನ
ಮೊಮ್ಮಗನ ಹಡದ ಸೊಸೆಮುದ್ದಿಗೆ ||ಸೋ||

ನಮ್ಮ ಸಲಿಗೆ ಜಾಸ್ತಿಯಾದಂತೆ ನನಗೇನಾದರೂ ಅವಳು ಒರಟಾಗಿ ಮಾತಾಡಿದರೆ “ನಿನ್ನ ಸೊಂಟ ಹಿಡಿತೇನ್ನೋಡು” ಎಂದು ಹೇಳುತ್ತಿದ್ದೆ. ಅವಳು “ಬ್ಯಾಡ ತಾಯೀ, ಬ್ಯಾಡ” ಎಂದು ಕೋಲು ಅಡ್ಡಹಿಡಿದು ತಡೆಯುತ್ತಿದ್ದಳು.

ನಡೆಯಲಿಕ್ಕೆ ಬಂದ ಮೊದಲನೇ ದಿನ ಮುದುಕಿ ಸೊಸೆಯ ತಲೆಮೇಲೆ ಅಂತಃಕರಣ ಪೂರ್ವಕ ಕೈಯಿಟ್ಟು “ಲಗೂ ಗಂಡಮಗನ್ನ  ಹಡೀ ಮಗಳs” ಎಂದಿದ್ದಳು. ಆಗಾಗ ನನ್ನನ್ನು ಕರೆದು ಕಿವಿಯಲ್ಲಿ “ಈ ತಿಂಗಳು ಸಿಂಗಾರಿ ಮುಟ್ಟಾದಳ?” ಎಂದು ಕೇಳುತ್ತಿದ್ದಳು. ಮತ್ತು ಸೊಸೆಯೊಬ್ಬಳ ಮುಖ್ಯ ಕರ್ತವ್ಯವೆಂದರೆ ಅದೇ ಎಂದೂ ಹೇಳುತ್ತಿದ್ದಳು. ಒಂದು ಸಲ ಅವಳು ಬಸಿರಾಗಿ ಹಡೆದಳೋ ಆಮೇಲೆ ತೌರುಮನೆಯ ಆಸೆ ತಾನೇ ಮಾಯವಾಗಿ ಆಗ ಮಾತ್ರ ಈ ಮನೆಯನ್ನು ನಿಜವಾಗಿ ನಂಬುವಳೆಂದು ಅವಳ ಭಾವನೆಯಾಗಿತ್ತು.

ಒಮ್ಮೆ ನನ್ನನ್ನು ಕರೆದು ಹಾಸಿಗೆ ಮೇಲೆ ತನ್ನ ಬಳಿಯೆ ಕೂರಿಸಿಕೊಂಡಳು. ತಡಕಾಡಿ ನನ್ನ ಕೈ ಹಿಡಿದುಕೊಂಡು ಅದನ್ನೊಯ್ದು ಈವರೆಗೆ ನಾನು ಅವಳ ಯಾವ ಸೊಂಟವನ್ನು ಮುಟ್ಟಲಾಗಿರಲಿಲ್ಲವೋ ಆ ಸೊಂಟಕ್ಕೆ ಅಂಟಿಸಿಕೊಂಡಳು. ನಾನು ಕೈಯಾಡಿಸಿದೆ. ಏನೂ ಅರ್ಥವಾಗಲಿಲ್ಲ. “ಇಕಾ ನಡಪಟ್ಟಿ, ಕೈಗಿ ಹತ್ತಿತಲ್ಲ?” ಅಂದಳು. ಹೌದು, ಅವಳ ನಡುವಿನಲ್ಲಿ ನಡುಪಟ್ಟಿ ಇತ್ತು ನಿಜ. ಅವಳೇ ಅದರ ಸುತ್ತ ನನ್ನ ಕೈ ಆಡುವ ಹಾಗೆ ಮಾಡಿದಳು. ಆಮೇಲೆ ಇನ್ನೂ ನನ್ನ ಹತ್ತಿರಕ್ಕೆ ಸರಿದು ಕಿವಿಯಲ್ಲಿ ದೊಡ್ಡು ಗುಟ್ಟು ಹೇಳುವ ಹಾಗೆ, “ಚಿನ್ನದs ಅದು, ಹದಿನೆಂಟ ತೊಲಿ ಐತಿ. ತಿಳೀತಿಲ್ಲ?” ಎಂದಳು. ನನಗೇನೂ ತಿಳಿಯಲಿಲ್ಲ. ಅದ್ಯಾಕೆ ಈ ಮುದುಕಿ ಹೀಗೆ ಮಾಡುತ್ತಿದ್ದಾಳೆಂದೂ ಬಗೆಹರಿಯಲಿಲ್ಲ. ನಾನ ಗುಟ್ಟಾಗೇ “ಅದಕ್ಕ ನಾ ಏನ ಮಾಡಲಿ?” ಎಂದು ಕೇಳಿದೆ. ಈಗ ಮಾತ್ರ ಮುದುಕಿ ತನ್ನ ಬೊಚ್ಚಬಾಯನ್ನು ಅಗಲವಾಗಿ ತೆಗೆದು ಮುಸಿಮುಸಿ ನಕ್ಕಳು. ಮತ್ತೆ ಪಿಸುದನಿಯಲ್ಲಿ “ಸಿಂಗಾರಿಗಿ ಹೇಳು, ಲಗು ಗಂಡುಮಗನ್ನ ಹಡಿ ಅಂತ. ಆಕಿ ಹಡದರ ಆ ಚಿನ್ನದ ನಡಪಟ್ಟಿ ಆಕಿಗೇ ಕೊಡತೀನಿ” ಎಂದು ಹೇಳಿದಳು. ಈ ಮುದುಕಿ ಮೊಮ್ಮಗನನ್ನು ಕಾಣುವುದಕ್ಕಾಗೇ ಜೀವ ಹಿಡಿದ ಹಾಗೆ ಚಡಪಡಿಸುವುದನ್ನು ಕಂಡು ನನಗೆ ಮೋಜೆನಿಸಿತು.

ಈ ಮೋಜಿನ ಸಂಗತಿಯನ್ನ ಸಿಂಗಾರೆವ್ವನಿಗೆ ಹೇಳಬೇಕೆಂದು ಮನಸ್ಸಾಯಿತು. ಆದರೆ ಅವಳು ವಿರಾಮವಾಗಿ ಸಿಕ್ಕುವುದೇ ಅಪರೂಪ. ಹಗಲೆಲ್ಲ ಒಂದಿಲ್ಲೊಂದು ಕೆಲಸ ಅಂಟಿಸಿಕೊಳ್ಳುವುದು ಅವಳ ಜಾಯಮಾನವಾಗಿತ್ತು. ರಾತ್ರಿ ದೇಸಾಯಿ ತಡವಾಗಿ ಬಂದರೆ ಆಗಲೇ ಅವಕಾಶ ಸಿಗಬೇಕು. ರಾತ್ರಿಯಾಯಿತೆಂದರೆ ಸಾಮಾನ್ಯವಾಗಿ ಸಿಂಗಾರೆವ್ವ ಮಲಗುವ ಅಂತಸ್ತಿನ ಕೋಣೆಗೆ ನಾನು ಹೋಗುತ್ತಿರಲಿಲ್ಲ. ಇಂದು ಬಾಗಿಲಿಕ್ಕಿರಲಿಲ್ಲವಲ್ಲ, ಹೋದೆ. ಹೋದಾಗ ತಲೆಮೇಲೆ ಕೈಹೊತ್ತು ಮಲಗಿದ್ದಳು. ನನ್ನನ್ನು ಕಂಡವಳೇ ಎದ್ದುಕೂತು “ಬಾ ಶೀನಿಂಗೀ” ಎಂದಳು. ನನಗಿಷ್ಟೇ ಬೇಕಿತ್ತು. ಹಿರಿ ದೊರೆಸಾನಿಯ ನಡಪಟ್ಟಿಯ ಕಥೆ ಹೇಳಿ ನಗಾಡಿದೆ. ಸಿಂಗಾರೆವ್ವ ನಗಲಿಲ್ಲ. ಗಂಭೀರಳಾದಳು. ಹಣೆಯ ಮೇಲೆ ಚಿಂತೆಯ ಗೆರೆ ಮೂಡಿದವು. ಒಂದು ಬಾರಿ ನಿಟ್ಟಿಸಿರಿಟ್ಟು –

‘ಏನ ಹೇಳಲೇ ಶೀನಿಂಗೀ; ರಾತ್ರಿ ಕುಡೀತಾನ, ಬಂದ ಬೀಳತಾನ. ನಾ ಮಂಚದ ಮ್ಯಾಲ ಮಲಗಿದ್ದರ ಕೆಳಗ ಮಲಗತಾನ. ಹಾಂಗಂತ ನಾನs ಕೆಳಗೆ ಮಲಗಿ ನೋಡಿದೆ. ಅವ ಮಂಚದ ಮ್ಯಾಲ ಬಿದ್ದಕೊಂಡ. ಒಂದು ಸಲ ಆದರೂ ಈ ಕ್ವಾಣ್ಯಾಗ ನನ್ನ ಹೇಂತಿ ಇದ್ದಾಳ; ಆಕೀನ ಮಾತಾಡಸಬೇಕು ಅಂತ ಅಂದವನs ಅಲ್ಲ. ಬೆಳಗ್ಗೆದ್ದಾಗ ಒಮ್ಮೊಮ್ಮೆ ಬೆರಗಲೆ ಕಣ್ಣ ತಗದ “ನೀವೂ ಇದs ಕ್ವಾಣ್ಯಾಗ ಮಲಗಿದ್ರಿ?” ಅಂತ ಕೇಳತಾನ. ಹೇಂತೀನ ಮಾಡಿಕೊಂಡದ್ದಾದರೂ ನೆನಪೈತೋ ಇಲ್ಲೊ! ಬರೀ ಮಕ್ಕಳ ಮಕ್ಕಳಂದರ ಅವೇನ ಜಂತ್ಯಾಗಿಂದ ಉದರ ತಾವು? ಶಿವ ನನ್ನ ಹಣ್ಯಾಗ ಮಕ್ಕಳ್ನ ಬರದಿಲ್ಲ ಶೀನಿಂಗೀ” – ಎಂದು ಅಳತೊಡಗಿದಳು.

ಆತ ರಾತ್ರಿ ತಡಮಾಡಿ ಬರುವುದು ನನಗೆ ಗೊತ್ತಿತ್ತು. ಆದರೆ ಗಂಡಹೆಂಡತಿ ಸರಸವಾಗೇ ಇರಬೇಕೆಂದು ನನ್ನ ಕಲ್ಪನೆಯಾಗಿತ್ತು. ಇಕಾ ಇದನ್ನ ಕೇಳಿದರೆ ಹೀಗೆ! ದೇಸಾಯಿಯ ಬಿಳಚಿಕೊಂಡ ಮುಖ, ತೆಳ್ಳಗಿನ ಮೈ ಕಂಡು ನನಗೆ ನನ್ನ ಅನುಮಾನಗಳಿದ್ದವು. ನಾನು ಅಂಥಾ ಅನುಭವಿಕಳಲ್ಲವೆಂಬುದನ್ನು ಒಪ್ಪುತ್ತೇನೆ. ಆದರೆ ಹೆಂಗಸರಿಗೆ ಅದೆಲ್ಲಾ ತಿಳಿಯುತ್ತದೆ. ಮದುವೆಯಾದ ಹೊಸದರಲ್ಲಿ ಹೆಣ್ಣಿಗೆ ಒಂದು ಬಗೆಯ ಸುಖದ ಅಮಲು ಬರುತ್ತದೆ. ಮನಸ್ಸಿನ ತುಂಬಾ ಹಾಸಿಗೆಯ ಪರಿಮಳ ಇಡಗಿ ನರನರಗಳೆಲ್ಲ ಬಿಗಿಯುತ್ತದೆ. ಆಗ ಕೆಲಸ ಬೇಡಾಗಿ ಆಕಳಿಸೋಣ ಅನ್ನಿಸುತ್ತದೆ, ಹೀಗೇ ಇನ್ನೂ ಏನೇನೋ! ಆದರೆ ಇದ್ಯಾವುದನ್ನೂ ಸಿಂಗಾರೆವ್ವ ಅನುಭವಿಸಲೇ ಇಲ್ಲ. ಅಥವಾ ಇದನ್ನು ಮರೆಯುವುದಕ್ಕೇ ಇರಬೇಕು, ಸದಾ ಒಂದಿಲ್ಲೊಂದು ಕಾರುಭಾರು ಅಂಟಿಸಿಕೊಳ್ಳುತ್ತಿದ್ದಳು. ಆದರೆ ಬಾಯಿಬಿಟ್ಟು ಕೇಳೋದು ಹ್ಯಾಗೆ? ಸಿಂಗಾರೆವ್ವ ತಾನಾಗೇ ಬಾಯಿಬಿಡುವ ಪೈಕಿ ಅಲ್ಲ. ಅವಳಿನ್ನೂ ಅಳುತ್ತಿದ್ದುದರಿಂದ ಈಗ ಮಾತಾಡಬೇಕಾದವಳು ನಾನು. ಆದರೆ ಏನು ಮಾತಾಡಬೇಕೆಂಬುದೇ ಹೊಳೆಯದಾಯಿತು. “ಬೆಂಕೀ ಹಂತ್ಯಾಕಿನಿ ಬೆಣ್ಣಿ ಎಷ್ಟದಿನ ಕರಗದs ಇದ್ದೀತ ಬಿಡ ಎವ್ವಾ” ಅಂದೆ. ಆದರಿದು ಹುಸಿ ಸಮಾಧಾನದ ಮಾತೆಂದು ಇಬ್ಬರಿಗೂ ಗೊತ್ತಿತ್ತು. ಈಗೇನೂ ಹೇಳಬೇಕಲ್ಲ. ಆದ್ದರಿಂದ ಹೇಳಿದೆ –

“ಅವ ಬರಾಣಿಲ್ಲವೆಂದರ ಬ್ಯಾಡ, ನೀನೂ ಹಾಂಗs ಮಾಡಬೇಕೆನ? ನೀನs ತುಸು ಹಾದಿಗೆ ಬರಬೇಕವಾ” ಅಂದೆ. ಇದಕ್ಕೆ ಅವಳೇನೂ ಹೇಳಲಿಲ್ಲ. ಸುಮ್ಮನಾದಳು. ನಾನೂ ಸುಮ್ಮನೇ ಎದ್ದುಬಂದೆ.

ಆದರೆ ಆದಿನ ಬಹಳ ಹೊತ್ತಿನ ತನಕ ನನಗೆ ನಿದ್ದೆಯೇ ಬರಲಿಲ್ಲ. ದೇಸಾಯಿ ಆಗಲೇ ಬಂದಿದ್ದ. ನಾನು ಸಿಂಗಾರೆವ್ವನ ಬಗ್ಗೆಯೇ ಚಿಂತೆ ಮಾಡುತ್ತಿದ್ದೆ. ಗೌಡನ ಮಗಳಾಗಿ, ಚೆಲುವೆಯಾದ ಅವಳು ಸುಖದ ಹಕ್ಕುದಾರಳಾಗಿಯೇ ಹುಟ್ಟಿದ್ದಳು. ಅವಳನ್ನು ಯಾರೂ ಕಂಡರೂ ಈ ಕೂಸು ಸುಖವಾಗಿರಲೆಂದೇ ಹರಸುತ್ತಿದ್ದರು, ಹಾಂಗಿದ್ದಳು ಸಿಂಗಾರೆವ್ವ. ಇಲ್ಲಿ ನೋಡಿದರೆ ಏನಿದೆ? ಅಪ್ಪ ಅಂಥವ ಗಂಟುಬಿದ್ದ. ಗಂಡ ನೋಡಿದರೆ ಇಂಥವನು, ಅವಳ ಯಾವ ಕರ್ಮಕ್ಕೆ ಹಿಂಗಾಗಿದೆ? ಮಗ್ಗಲು ಬದಲಿಸಿ ಮತ್ತೆ ಮತ್ತೆ ಇದನ್ನೇ ಧ್ಯಾನಿಸಿದೆ. ಬಗೆಹರಿಯಲಿಲ್ಲ.

ಅಷ್ಟರಲ್ಲೀ ಸಿಂಗಾರೆವ್ವ ಧಡಧಡ ಜಿನೆಯಿಳಿದು “ಶೀನಿಂಗೀ” ಎಂದು ಕೂಗಿದಳು. ತಕ್ಷಣ “ಯಾಕೆವ್ವಾ” ಎಂದು ಎದ್ದೆ. “ಲಗು ಬಾ” ಎಂದವಳೇ ಮತ್ತೆ ಮೇಲೇರಿ ಹೋದಳು. ನಾನೂ ಓಡಿಹೋದೆ. ನೋಡಿದರೆ, ದೇಸಾಯಿ ಕೈಕಾಲು ಸೆಟೆಸಿ ಬೇಹೋಶ್ ಆಗಿ ಬಿದ್ದುಬಿಟ್ಟಿದ್ದ. ಇಬ್ಬರೂ ಜೋರಿನಿಂದ ಅಂಗಾಲು ತಿಕ್ಕತೊಡಗಿದೆವು. ಸಿಂಗಾರೆವ್ವ ಅತ್ತೆಯ ಬಳಿ ಓಡಿದಳು. ದೇಸಾಯಿಯ ಮುಖ ಕೆಂಪೇರಿ ಕೆಂಜಗವಾಗಿತ್ತು. ಮೈತುಂಬ ನೀರು ಸುರಿದ ಹಾಗೆ ಬೆವರಿಳಿಯುತ್ತಿತ್ತು. ನನಗೆ ಅಷ್ಟಿಷ್ಟು ಆಸೆ ಮೂಡಿದ್ದೂ ಈ ಬೆವರಿನಿಂದಲೇ. ಸಿಂಗಾರೆವ್ವ ಆತಂಕದಲ್ಲಿ ಎಬ್ಬಿಸಿದರೆ ಈ ಮುದುಕಿ “ಗಡಿಬಿಡಿ ಮಾಡಬ್ಯಾಡ, ಈಗ ಎಚ್ಚರಾಗತಾನ, ಹೋಗಿ ಮೂಗಿಗೆ ಉಳ್ಳಾಗಡ್ಡಿ ಹಿಂಡು ಹಿಡಿ” ಎಂದಳಂತೆ. ಬರುವಾಗ ಸಿಂಗಾರೆವ್ವ ಒಂದು ಉಳ್ಳಾಗಡ್ಡಿಯನ್ನು ತಂದಿದ್ದಳು. ಹಿಂಡಿ ಮೂಗಿಗೆ ಹಿಡಿದಳು. ನಾನು ಅವನ ಕಿರಿಬೆರಳು ಹಿಸುಕುತ್ತಿದ್ದೆ. ನಮ್ಮ ಪ್ರಯತ್ನ ಸಾವಿನೊಂದಿಗಿನ ಸೆಣಸಾಟದಂತಿತ್ತು. ಬಹಳ ಹೊತ್ತಿನ ನಂತರ ನಮ್ಮ ಪ್ರಯತ್ನ ಫಲಕಾರಿಯಾಯಿತು. ಮೆಲ್ಲಗೆ ದೇಸಾಯಿ ಎಚ್ಚರಗೊಂಡು ನರಳಿದ. ಸಿಂಗಾರೆವ್ವ ಈಗ ಹಗುರವಾಗಿ ಹಾಗೇ ಕಂಬಕ್ಕೊರಗಿದಳು.

ನಿನ್ನೆ ರಾತ್ರಿ ಏನು ನಡೆಯಿತೆಂದು ಸಿಂಗಾರೆವ್ವ ಮರುದಿನ ಹೇಳಿದಳು. ನಾನು ಹೇಳಿದೆನಲ್ಲ, – ನೀನs ತುಸು ಹಾದಿಗೆ ಬಾ ಅಂತ. ಸಿಂಗಾರೆವ್ವನಿಗೆ ಅದು ಹೌದೆನಿಸಿತ್ತು. ರಾತ್ರಿ ದೇಸಾಯಿ ಬಂದಾಗ ಅವಳು ನೆಲದ ಮೇಲೆ ಒರಗಿದ್ದಳು. ಬಂದವನು ಮಂಚದ ಮೇಲೆ ಮಲಗಿದ. ಬಹಳ ಹೊತ್ತಾದ ಮೇಲೆ ದೀಪ ಸಣ್ಣದಾಗಿಸಿ ಇವಳೂ ಮಂಚದ ಮೇಲೆ ಹೋದಳು. ಮೆಲ್ಲಗೆ ಅವನೆದೆಯ ಮೇಲೆ ಕೈಯಿಟ್ಟು ಒಂದೆರೆಡು ಬಾರಿ ಆಡಿಸಿದಳು. ದೇಸಾಯಿ ಗಬ್ಬಕ್ಕನೆ ಎದ್ದನಂತೆ. ಹೋಗಿ ದೀಪ ದೊಡ್ಡದು ಮಾಡಿ ಬಂದು ಬೆಳಕಿನಲ್ಲಿ ಅಂಗಾತಾಗಿ ಬಿದ್ದಿದ್ದ ಹೆಂಡತಿಯ ರೂಪರಾಶಿಯನ್ನು ಹರಿದು ತಿಂಬವರಂತೆ ನೋಡತೊಡಗಿದ. ಸಿಂಗಾರೆವ್ವ ಖುಶಿಯಾಗಿ, ನಾಚಿ, ನೋಡಲಾರದೆ ಎರಡೂ ಕೈಯಿಂದ ಮುಖ ಮುಚ್ಚಿಕೊಂಡಳು. ಈತ ಕಾಲಕಡೆಯಿಂದ ನಿಧಾನವಾಗಿ ಸೀರೆ ಎತ್ತುತ್ತ ಹೋದ. ಸೀರೆ ಮೇಲೆ ಸರಿದ ಹಾಗೆ ಸಿಂಗಾರೆವ್ವ ಅರಳುತ್ತ ಪುಳಕಗೊಂಡಳು. ಮೊಳಕಾಲಿನತನಕ ಬಂದಿರಬೇಕು, ಹಾಗೆ ಅವಳ ಹೊಟ್ಟೆಯ ಮೇಲೆ ಬಿದ್ದುಕೊಂಡ. ಸಿಂಗಾರೆವ್ವ ಈಗಲೂ ಕಣ್ಣು ತೆರೆಯಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಆತ ಹಾಗೆ ನೆಲಕ್ಕುರುಳಿದ. ಆಗ ಕಣ್ಣು ತೆರೆದು ನೋಡಿದರೆ ದೇಸಾಯಿ ಕೈಕಾಲು ಸೆಟಿಸಿ ಬೇಹೋಶ್ ಆಗಿ ಬಿದ್ದಿದ್ದನಂತೆ. ಇದು ಅವನಿಗೆ ಆಗಾಗ ಬರುವ ರೋಗವೆಂದೂ ಜೀವಕ್ಕೆ ಅಪಾಯವಿಲ್ಲವೆಂದೂ ಮುದುಕಿಯಿಂದ ತಿಳಿಯಿತು. ಬೇಕಾದಷ್ಟು ವೈದ್ಯ ಮಾಡಲಾಗಿದೆಯೆಂದೂ, ಪರಿಣಾಮ ಕಾಣದ್ದರಿಂದ ಹುಶಾರಾಗಿರಬೇಕೆಂದೂ ಹೇಳಿದಳು. ಸಿಂಗಾರೆವ್ವನ ಮುಖದಲ್ಲಿ ಅಂದು ಮೂಡಿದ ಚಿಂತೆಯ ಗೆರೆ ಕೊನೆಯ ತನಕ ಮರೆಯಾಗಲೇ ಇಲ್ಲ.

ಸಿಂಗಾರೆವ್ವ ಈಗ ಹೆಚ್ಚು ಹೆಚ್ಚು ಒಂಟಿಯಾದಳು. ಆಳುಗಳೊಂದಿಗೆ ಮನಸ್ಸಿಗೆ ಬಂದರೆ ಮಾತಾಡಿದಳು, ಇಲ್ಲದಿದ್ದರೆ ಇಲ್ಲ. ಕೆಲಸ ಕಾರ್ಯಗಳಲ್ಲಿ ಮೊದಲಿನ ಉತ್ಸಾಹ ಕಾಣಿಸುತ್ತಿರಲಿಲ್ಲ. ನನ್ನೊಂದಿಗೂ ಒಮ್ಮೊಮ್ಮೆ ಮಾತಾಡುತ್ತಿರಲಿಲ್ಲ. ಅತ್ತೆಯ ಹತ್ತಿರವೂ ಹೆಚ್ಚು ಸುಳಿಯುತ್ತಿರಲಿಲ್ಲ. ಯಾಕೆಂದರೆ ಮುದುಕಿ ಇವಳ ಮುಖ ಕಂಡರೆ ಸಾಕು ಬಸಿರಿನ ಬಗ್ಗೆಯೇ ಮಾತಾಡುತ್ತಿದ್ದಳು. ತನ್ನ ತಂದೆ ಮೋಸ ಮಾಡಿದ್ದನ್ನು ಸಿಂಗಾರೆವ್ವ ಒಂದೆರಡು ಬಾರಿ ಖಾರವಾಗಿ ನನ್ನ ಬಳಿ ತೋಡಿಕೊಂಡಳು. ತನ್ನ ತಾಯಿಯಾದರೂ ತಪ್ಪಿಸಬಹುದಿತ್ತಲ್ಲಾ ಎಂದೊಮ್ಮೆ ಕಣ್ಣೀರು ತಂದಳು. ಮರುಕ್ಷಣವೇ ತಂದೆಯ ಕ್ರೌರ್ಯದ ನೆನಪಾಗಿ, ತಾಯಿಯ ಅಸಹಾಯಕತೆಗೂ ಅತ್ತಳು. ತನ್ನ ದೈವವನ್ನಂತೂ ಕೂತಾಗೊಮ್ಮೆ, ನಿಂತಾಗೊಮ್ಮೆ, ಮಲಗುವಾಗೊಮ್ಮೆ, ಏಳುವಾಗೊಮ್ಮೆ ಹಳಿಯುತ್ತಿದ್ದಳು.

ಒಮ್ಮೆ ನನ್ನೊಂದಿಗೆ ಇಡೀ ಎರಡು ದಿನ ಮಾತಾಡಲಿಲ್ಲ. ನನ್ನ ಮೇಲೂ ಇವಳಿಗೆ ಕೋಪವೇನೋ ಅಂದುಕೊಂಡೆ. ನನ್ನೊಡನೆ ಮಾತಾಡುವುದರಿಂದ ಇವಳಿಗೆ ಹಿಂಸೆಯಾಗುತ್ತಿದ್ದರೆ ನಾನ್ಯಾಕೆ ಇಲ್ಲಿರಬೇಕು? ಆ ದಿನ ಮಧ್ಯಾಹ್ನವಾದರೂ ಇಬ್ಬರೂ ಊಟ ಮಾಡಲಿಲ್ಲ. ಪಡಸಾಲೆಯಲ್ಲಿ ಕೂತಿದ್ದಳು. ಮೆಲ್ಲಗೆ ಹೋಗಿ “ಊಟಾ ಮಾಡೇಳು” ಎಂದೆ. ನನ್ನ ಕಡೆಗೆ ಲಕ್ಷ್ಯ ಕೊಡಲೇ ಇಲ್ಲ. ನನಗೆ ತಡೆಯಲಾಗಲಿಲ್ಲ.

“ನಿನಗs ಬ್ಯಾಡಾದ ಮ್ಯಾಲ ನಾ ಯಾಕ ಇಲ್ಲಿರಲಿ? ನಂದಗಾಂವಿಗಿ ಹೋಗತೀನಿ” – ಅಂದೆ.

ತಕ್ಷಣ ನನ್ನ ಕಡೆಗೆ ತಿರುಗಿ “ನಿನಗೂ ಬ್ಯಾಡಾದ್ನೇನ ಶೀನಿಂಗೀ” ಎನ್ನುತ್ತ ಉಕ್ಕಿಬಂದ ಕಣ್ಣಿರು ತೋರಿಸದೆ ಒಳಕ್ಕೆ ಹೋದಳು. ಯಾಕಾದರೂ ಅಂದೆನೊ! ಯಾಕೆಂದರೆ, ಸಿಂಗಾರೆವ್ವ ಸಣ್ಣ ಮುಖಮಾಡಿ ಕೂರುವುದು ನನಗೆ ಸರಿಬರುತ್ತಿರಲಿಲ್ಲ. ಅದಕ್ಕೆ ನಾನು ಬೆನ್ನುಹತ್ತಿ ಹೋದೆ.

ಅಂತಸ್ತಿನ ಕೋಣೆಯಲ್ಲಿ ಅಳುತ್ತಿದ್ದಳು. ನನಗೂ ಅಳು ತಡೆಯಲಾಗಲಿಲ್ಲ. “ತಪ್ಪಾಯಿತು ಎವ್ವಾ” ಅಂದೆ. ತುಸು ಹೊತ್ತು ಇಬ್ಬರೂ ಮಾತಾಡಲಿಲ್ಲ. ಆಮೇಲೆ ಹೇಳಿದೆ. “ಇಲ್ಲೀತನಕ ನಿನ್ನ ಅಕ್ಕನ್ಹಾಂಗ ಇದ್ದೆ, ಈಗ ತಾಯೀ ಸಮ, ಹೇಳತೇನ ಕೇಳs ಎವ್ವಾ; ಮಕ್ಕಳಾಗೋದಿಲ್ಲಂತ ತಲೀಮ್ಯಾಲ ಕೈಹೊತ್ತು ಕೂತರ ಎದಕ್ಕ ಬಂತು? ಈ ಜಗತ್ತಿನಾಗ ದೇವರ ದಿಂಡರ ಇಲ್ಲಂದಿ? ಹರಿಕಿ ಹೊರು, ವರತ ಮಾಡು. ಈ ಊರಾಗಿನ ಕುಮುದವ್ವ ಎಂಥೆಂಥಾ ಬಂಜೇರಿಗಿ ಮಕ್ಕಳಾ ಕೊಟ್ಟಾಳಂತ, ನಿನಗs ಇಲ್ಲಂತಾಳು?” ಈ ಮಾತು ಕೇಳಿ ಅವಳ ಕಣ್ಣೊಳಗೆ ಭಗ್ಗನೆ ಬೆಳಕು ಹೊಳೆಯಿತು. ಮಂಚದ ಮೇಲಿದ್ದವಳು ನನ್ನ ಬಳಿ ಬಂದು

“ಶೀನಿಂಗೀ, ಖರೆಖರೆ ಮಕ್ಕಳ ಆದಾವೇನ?” ಅಂದಳು. ಮತ್ತೇನು ತಿಳಿಯಿತೋ, “ನನ್ನ ಗಂಡಗ ರೋಗ ಐತೆಲ್ಲ ಎವ್ವಾ” ಅಂದಳು.

“ದೇವರ ಸತ್ಯೆ ಮನಶೇರಿಗಿ ತಿಳಿದೀತೇನs ತಾಯಿ? ದೇವರ ಮುಂದ ನಾವೆಷ್ಟರವರಾ? ನೀ ಬಗ್ಗಿ ಬಂದರೆ ತಾಯಿ ಅದನ್ನೂ ಪರಿಹಾರ ಮಾಡತಾಳ. ನಿನ್ನ ಗಂಡನ ಸುದ್ದಿ ಕುಮುದವ್ವಗ ಗೊತ್ತಿಲ್ಲಂದಿ?”

ಈ ಮಾತು ಅವಳಿಗೆ ಪಟಾಯಿಸಿತು.

“ಹೌಂದs ಶೀನಿಂಗಿ, ದೇವೀನs ನಿನ್ನ ಬಾಯಿಂದ ಈ ಮಾತ ಆಡಿಸಿರಬಾರದ್ಯಾಕ?” – ಎಂದು ಎದ್ದಳು.

ಅಂದೇ ಕುಮುದವ್ವನಿಗೆ ಹರಕೆ ಹೊತ್ತಳು. ಮಕ್ಕಳಾದರೆ ತನ್ನ ಅತ್ತೆ ಕೊಡುವ ಚಿನ್ನದ ನಡುಪಟ್ಟಿಯನ್ನು ಅವಳಿಗೇ ಕೊಡುವುದಾಗಿ ಹೇಳಿದಳು. ಹರಕೆ ಹೊತ್ತದಿನ ಸೋಮವಾರ. ಅದು ಸಾವಳಗಿ ಶಿವನಿಂಗನ ವಾರ. ಅವನ ಹೆಸರಿನಲ್ಲಿ ಪ್ರತಿ ಸೋಮವಾರ ಉಪವಾಸ ವಿರುವುದಾಗಿ ಬೇಡಿಕೊಂಡಳು. ಮಗನಾದರೆ ಮೂರುವರ್ಷ ಎತ್ತಿಕೊಂಡು ಬಂದು ಶಿವನಿಂಗನಕೊಂಡ ಹಾಯುವುದಾಗಿಯೂ, ಸಿದ್ಧರಾಮ ಸ್ವಾಮಿಗಳಿಗೆ ಬೆಳ್ಳಿ ಚಡಿ ಮಾಡಿಸಿಕೊಡುವುದಾಗಿಯೂ ಹರಕೆ ಹೊತ್ತಳು. ಅದೇ ಕಾಲಕ್ಕೆ ಕಾಗೆಯೊಂದು ಕೂಗಿ ಶುಭಲಕ್ಷಣವಾಯಿತು. ಕೂಗಿ ನೆಂಟರನ್ನು ‘ಕರೆಯುವ ಹಾಗೆ ಬೇರೆ ಸೀಮೆಯ ಈ ನೆಂಟನನ್ನೂ ಕರೆತರಲೆಂದು ಹಾರೈಸಿದೆವು; ಕರೆತರುವೆನಂದು ನಂಬಿದೆವು.

* * *