ನಾವೇ, ಹೀಗೆ ಶಿವನೇ ಎಂದು ಕೈ ಹೊತ್ತು ಕೂತಿದ್ದರೆ ಅವರಪ್ಪ ಬಂದು ತನ್ನ ಮನಸ್ಸಿನ ನಿಜ ತೋರಿಸಿ ಹುಣ್ಣಿನ ಮೇಲೆ ಬರೆಯೆಳೆದ. ನಡೆಯಲಿಕ್ಕೆ ಬಂದವಳು ತೌರಿಗಿನ್ನೂ ಹೋಗಿರಲಿಲ್ಲವಲ್ಲ. ಅದೇ ನೆಪದಿಂದ ಗೌಡಬಂದ. ಮದುವೆಯ ಮೊದಲನೇ ವರ್ಷ ಅದು. ದೀಪಾವಳು ಹಬ್ಬಕ್ಕೆ ಮಗಳು ಅಳಿಯ ತಮ್ಮಲ್ಲಿಗೇ ಬರಬೇಕೆಂದು ಹೇಳಿದ. ಸರಗಂ ದೇಸಾಯಿ ಸರಳ ಮನುಷ್ಯ. “ಓಹೋ ಇಬ್ಬರೂ ಬರ್ತೀವಿ” ಅಂತ ಅಂದುಬಿಟ್ಟ. ಸಿಂಗಾರೆವ್ವನಿಗೆ ಅಸಮಾಧಾನವಿತ್ತಲ್ಲ “ಆಗೋದಿಲ್ಲ” ಅಂದಳು.

“ಆಗೋದಿಲ್ಲಂದರ ಬ್ಯಾಡ. ಬೇಕಾದರ ನೀವು ಒಬ್ಬರೇ ಹೋಗಿ ಬರ್ರಿ” ಎಂದು ಹೆಂಡತಿಗೆ ಹೇಳಿದ.

“ನಾನೂ ಹೋಗೋದಿಲ್ಲ”

“ಆಯಿತಲ್ಲ ಮಾವ, ನಾವಿಬ್ಬರೂ ಬರೋಣಿಲ್ಲ” ಎಂದು ಹೇಳಿ ದೇಸಾಯಿ ಹೊರಟು ಹೋದ. ಗೌಡ ಅಷ್ಟಕ್ಕೇ ಸುಮ್ಮನಾಗಿದ್ದರೆ ಪಾಡಿತ್ತು. ಕೈ ಹೊಸೆದು ಅಕ್ಕರತೆ ಅಭಿನಯಿಸುತ್ತ ಸುತ್ತ ಯಾರಿಲ್ಲದ್ದನ್ನು ಗಮನಿಸಿ,

“ನೋಡ ಸಿಂಗಾರೆವ್ವ, ನಿನ್ನ ಸಲುವಾಗಿ ನಾ ಎಷ್ಟ ತ್ರಾಸ ತಗೊಂಡೀನಿ. ಶಿರಟ್ಟಿ ಕೇಸಿನಾಗ ಮನ್ಯಾಗಿನ ಚಿನ್ನ ಸೈತ ಕರಗಿಹೋಯ್ತು” – ಅಂದ. ಸಿಂಗಾರೆವ್ವ ಸುಮ್ಮನೆ ಇದ್ದಳು.

“ಚಲೋ ಮನೀಗಿ ಬಂದಿ ಅಂತ ಕೊಟ್ಟ ಮನಿ ಮರೀಬ್ಯಾಡವಾ. ಅದನೂ ಅಷ್ಟು ಎತ್ತಿ ಹಿಡಿ.”

ಸಿಂಗಾರೆವ್ವ ಈಗಲೂ ಸುಮ್ಮನಿದ್ದಳು.

“ಅಡಚಣೆ ಭಾಳ ಐತಿ. ಈಗೊಂದ ಹತ್ತುಸಾವಿರ ರೂಪಾಯಿ ಸಾಗಸ್ತೀಯೇನು?” – ಅಂದ.

“ನನ್ನ ಹಂತ್ಯಾಕ ಎಲ್ಲೀ ರೊಕ್ಕ?” – ಅಂದಳು.

 “ಎಲ್ಲೀವಂದರ ಹೆಂಗವಾ, ನಿನ್ನ ಮದಿವೀ ಸಾಲಿದು. ಬೇಕಾದ್ರ ನಿನ್ನವೆರಡು ದಾಗೀನ (ಆಭರಣ) ಕೊಟ್ಟಿರು, ಆಮ್ಯಾಲ ನೋಡೋಣಂತ” – ಅಂದ.

– ಈ ಮಾತು ಹೇಳಿದನೋ ಇಲ್ಲವೋ ಸಿಂಗಾರೆವ್ವನಿಗೆ ಅದೆಲ್ಲಿಂದ ಬಂತೋ ಭಾರೀ ಸಿಟ್ಟು ಬಂದು –

“ಹೌಂದ ಹೌಂದ, ಜಗತ್ತಿನಾಗ ಯಾರೂ ಮಾಡಾಣಿಲ್ಲ. ನನ್ನ ಮದಿವೀ ಮಾಡಿ ಉಪಕಾರ ಮಾಡೀದೀ ನೋಡು. ಹೆಣದ ಜೋಡಿ ಮದಿವಿ ಮಾಡಿದಿ, ಅಲ್ಲೀ ಆಸ್ತಿಪಾಸ್ತಿ ಎಲ್ಲಾ ನುಂಗಿದಿ. ಈ ಗಂಡನೂ ಲಗೂ ಸಾಯ್ತಾನ, ಇದೂ ಆಸ್ತಿ ನಿನಗs ಆಗ್ತೈತಿ ಅಂತ ಮದಿವಿ ಮಾಡಿದಿ. ನಿನ್ನ ಆಸೆ ಇನ್ನೂ ಕೈಗೂಡವಲ್ದು, ಕೆಡಕನ್ನಿಸೇತ್ಯೋ ಏನೋ! ಅದಕ್ಕs ಈಗ ಈ ಆಟ ಹೂಡೀದೀ.”

ನಾನು ಹುಟ್ಟಿದಾಗಿನಿಂದ ಕಂಡಿದ್ದೇನೆ. ಅವಳೆಂದೂ, ಅದೂ ಈ ಥರ ಸಿಟ್ಟಿಗೆದ್ದವಳಲ್ಲ. ನಮ್ಮ ಸಿಂಗಾರೆವ್ವ ಬಹಳ ಮೃದು ಸ್ವಭಾವದ ಹೆಂಗಸು, ಹೂವಿನಂಥಾಕಿ. ಈದಿನ ಅದ್ಯಾವ ಭೂತ ಅವಳ ಮೈಯಲ್ಲಿ ಹೊಕ್ಕಿತೋ ಅಥವಾ ಹಿಂದಿನಿಂದ ತಡೆದಿಟ್ಟ ಸಿಟ್ಟು ಈಗ ಕಟ್ಟೆಯೊಡೆದು ಹೊರನುಗ್ಗಿತೋ! ಹಡೆದ ಅಪ್ಪನಿಗೆ ಹೀಗೆ ಹೇಳೋಣವೆಂದರೆ! ಗೌಡನ ಬಗ್ಗೆ ಮೊದಲೇ ನನಗೆ ಸಿಟ್ಟಿತ್ತು. ಈ ಮಾತು ಕೇಳಿ ಆನಂದವಾಗಬೇಕಿತ್ತು. ಆದರೆ ನನಗೇ ಗಾಬರಿಯಾಯಿತೆಂದರೆ! ಆಶ್ಚರ್ಯವೆಂದರೆ ಗೌಡನಿಗೆ ಸಿಟ್ಟು ಬರಲೇ ಇಲ್ಲ. ಮೊದಲೇ ಇದನ್ನೆಲ್ಲ ಲೆಕ್ಕ ಹಾಕಿದ್ದವನಂತೆ ತನ್ನ ವ್ಯಂಗ್ಯನಗೆ ನಗುತ್ತಾ “ಹಡೆದವ್ರಿಗೆ ಹಾಂಗೆಲ್ಲ ಅನಬಾರದವ, ಇದs ನಿನ್ನ ಖಾಯಂ ಮನಿ ಅಲ್ಲ” ಅಂದ.

“ಅಂದರ?”

“ಅದs ಹೇಳಿದ್ಯಲ್ಲ ಹಾಂಗ ನಿನ ಗಂಡ ಸತ್ತ ಮ್ಯಾಲ ನಿನಗೊಂದು ಆಧಾರ ಬೇಕೋ ಬ್ಯಾಡೋ?”

ಈಗ ಮಾತ್ರ ಸಿಂಗಾರೆವ್ವ ಭಗ್ಗೆಂದು ಉರಿಯತೊಡಗಿದಳು. ತುಟಿ ನಡುಗಿ ಕಣ್ಣು ಕೆಂಪಾಗಿದ್ದವು. ಧೋಪ್ಪನೆ ಕೆಳಗಡೆ ಕೂತು ಬಲಗೈಯಿಂದ ನೆಲ ಬಾರಿಸುತ್ತ “ಹಾ ಹಾ, ಇದs ನನ್ನ ಖಾಯಂ ಮನಿ. ತೌರುಮನಿ ಹಾಳಾಗಿ ಬಾಗಿಲಿಗೆ ಬೇಲಿ ಹಚ್ಚಲಿ. ನನ್ನನ್ನ ಬರೀ ಸಾಯೋ ಗಂಡರಗಿ ಮಾರಿ ಭಾಡಾ ತಿಂದೇನಂತಿಯೇನೋ! ಥೂ ನಿನಗೆ ಹೆಂಗ ತಂದಿ ಅಂತನ್ಲಿ. ನನ್ಗಂಡ ಸಾಯತಾನಂತ ಲೆಕ್ಕ ಹಾಕೀಯಲ್ಲ, ಉಳಿಸ್ಕೋತೀನಿ, ಗಂಡಮಗನ್ನ ಹಡದ ತೋರ‍್ಸಾಕ ನಿನ್ನ ಕರೆಸ್ತೀನಿ. ಆಗ ಬಂದೀಯಂತ. ಅಲ್ಲೀತನಕ ಈ ಕಡೆ ಕಾಲಿಡಬ್ಯಾಡ” – ಎಂದು ಹೇಳಿ ಅಲ್ಲಿ ನಿಲ್ಲಲಾರದೆ ಒಳಕ್ಕೆ ಹೋದಳು.

ಗೌಡ ತುಸುಹೊತ್ತು ಅಲ್ಲೇ ಕೂತ. ಬಹುಶಃ ಸಿಂಗಾರೆವ್ವನಿಂದ ಇಂಥಾ ಮಾತನ್ನವ ನಿರೀಕ್ಷಿಸಿರಲಿಲ್ಲ. ಅಥವಾ ಯಾರಿಂದಲೂ ನಿರೀಕ್ಷಿಸುವುದು ಸಾಧ್ಯವಿರಲಿಲ್ಲ. ನಾಚಿಕೆಯ ನೆರಳೇನೋ ಅವನ ಮುಖದಲ್ಲಿ ಸುಳಿದಾಡಿತು. ಬಹುಶಃ ತನ್ನ ಗುಟ್ಟು ಈ ರೀತಿ ಬಯಲಾದದ್ದಕ್ಕೆ ಇದ್ದೀತು. ಆದರೆ ಅದೂ ಬಹಳ ಹೊತ್ತು ಉಳಿಯಲಿಲ್ಲ. ಮತ್ತೆ ಅದೇ ವ್ಯಂಗ್ಯನಗೆ ಮುಖದಲ್ಲಿ ಮೂಡಿತು. ಹೊರಟು ಹೋದ. ನಾನು ಏನೊಂದೂ ಆಡಲಿಲ್ಲ.

ಸಿಂಗಾರೆವ್ವ ದೊರೆಸಾನಿಯಾದದ್ದರಿಂದ ಮನೆಬಿಟ್ಟು ಊರಲ್ಲಿ ಪ್ರವೇಶಿಸುವಂತಿರಲಿಲ್ಲ. ನನಗೆ ಅಂಥ ನಿರ್ಬಂಧಗಳಿರಲಿಲ್ಲವಾದ್ದರಿಂದ ಆಳುಗಳನ್ನು ಕರೆಯುವುದಕ್ಕೆ, ಹರಟೆ ಹೊಡೆಯುವುದಕ್ಕೆ ಊರಿನಲ್ಲಿ ಹೋಗುತ್ತಿದ್ದೆ. ಊರಿನಲ್ಲಿ ನನಗೆಷ್ಟೋ ಮಂದಿ ಗೆಳತಿಯರಿದ್ದರು. ಈ ಊರಿನ ಹೆಂಗಸರು ಬಹಳ ಒಳ್ಳೆಯವರು. ಮೈ ಮುರಿದು ಹೊಲಮನೆಗಳಲ್ಲಿ ದುಡಿಯುತ್ತಾರೆ. ಬಂದುದರಲ್ಲಿ ನೀರಂಬಲಿಯೋ ಗಂಜೀನುಚ್ಚೋ ಮಾಡಿ, ಗಂಡ – ಮಕ್ಕಳೊಂದಿಗೆ ಹಂಚಿಕೊಂಡು ಕುಡಿಯುತ್ತಾರೆ. ಯಾರ ಕಣ್ಣಲ್ಲಿಯೂ ಅತಪ್ತಿಯೆಂಬುದಿಲ್ಲ. ಏನೂ ಬಂದರೂ ಅದನ್ನು ಕುಮುದವ್ವನ ಪ್ರಸಾದವೆಂದು ಉಡಿಯೊಡ್ಡಲು ಅದರು ಸದಾ ಸಿದ್ದ. ಮತ್ತು ಕೃತಜ್ಞತೆಯಿಂದ ಅವಳನ್ನು ಹಾಡಿಹೋಗಲು ಪದಗಳು ಅವರ ನಾಲಗೆಯ ತುದಿಗಳಲ್ಲೇ ನಿಂತಿರುತ್ತವೆ. ಈ ಹೆಂಗಸರು ಏನನ್ನೂ ಮುಚ್ಚಿಕೊಂಬವರಲ್ಲ, ಹಾದರವನ್ನೂ, ಏನಿದ್ದರೂ ಎದುರಿಗೇ ಆಡಿಚುಕ್ತ ಮಾಡುವಂಥವರು.

ಸರಗಂ ದೇಸಾಯಿ ಒಬ್ಬಂಟಿಯಾಗಿದ್ದಾಗ ಅರಮನೆ ಅವರ ಆಸಕ್ತಿಯ ಕೇಂದ್ರವಾಗಿರಲಿಲ್ಲ. ನಾವು ಬಂದಿದಲ್ಲ, ಸುರುವಾಯ್ತು. ಬಂದು ಬಂದು ಸಿಂಗಾರೆವ್ವನಿಗೆ ನಮಸ್ಕಾರ ಮಾಡೋದೇನು, ಕಣ್ಣರಳಿಸಿ ನೋಡುತ್ತ ನಿಲ್ಲೋದೇನು, ಈಕೆ ಮಾತಾಡಿಸಿದರೆ ಹಿಗ್ಗೋದೇನು, ಅಯ್ಯಯ್ಯೋ ಈಕೆ ಕೇಳಿದ್ದರ ನಿಂತಲ್ಲೇ ಪ್ರಾಣಬಿಡೋರು! ಕುಟ್ಟುಬೀಸುವಾಗ ಅವರು ಸಿಂಗಾರೆವ್ವನ ಬಗ್ಗೆ ಹಾಡಿಕೊಳ್ಳೋದನ್ನ ನಾನೇ ಕೇಳಿದ್ದೇನೆ. ಇವಳು ಸ್ವಥಾ ದೇವೀ ಇದ್ದಹಾಗಿದ್ದಳಂತೆ. ಬಂಗಾರದ ಕೂದಲಿನವಳಂತೆ, – ಇವಳು ಒಮ್ಮೆ ನೋಡಿದರೆ ರೋಗ ಪರಿಹಾರವಾಗುತ್ತದಂತೆ, ಇವಳು ಅಂಗಾಲಿಟ್ಟಲ್ಲಿ ಕುಂಕುಮದ ಹುಡಿ ಬೀಳುತ್ತದಂತೆ, ಈಕೆ ಇದ್ದರೆ ಅರಮನೆಯಲ್ಲಿ ಕಂದೀಲಟ್ಟ ಹಾಗಂರೆ, ಇತ್ಯಾದಿ. ಅರಮನೆಯಲ್ಲಿ ಸಿಂಗಾರೆವ್ವ ಇರೋದು ತಮ್ಮ ಸೌಭಾಗ್ಯವೆಂಬಂತೆ ಹಾಡಿಕೊಂಬವರು. ಇಂಥಾ ತಾಯಿಗೆ ಎಂಥಾ ಗಂಡ ಗಂಟುಬಿಟ್ಟನಲ್ಲಾ ಎಂದು ಕೆಲವು ಮುದುಕಿಯರು ಹಳಹಳಿಸದೆಯೂ ಇರಲಿಲ್ಲ. ಏನೇ ಹೇಳು, ಬಹಳ ಸರಳ ಜನ. ಅಸೂಯೆ ಇಲ್ಲದವರು.

ಆದರೆ ಗಂಡಸರಿದ್ದಾರೆ ನೋಡು, ಹೊಟ್ಟೆಕಿಚ್ಚಿನವರು. ಒಬ್ಬೊಬ್ಬರೂ ಈ ಅರಮನೆಯಲ್ಲಿ ತನ್ನ ಪಾಲಿದೆ ಎಂದು ಒಳಗೊಳಗೇ ನಂಬಿದವರು. ಮತ್ತು ಅದೇನಾದರೂ ಹಾಳಾದರೆ ತಮ್ಮ ಪಾಲಿಗೆ ಅದರ ಎಷ್ಟು ಕಲ್ಲು, ಎಷ್ಟು ಮರ ಬರಬೇಕೆಂಬುದನ್ನು ಮನಸ್ಸಿನಲ್ಲೇ ಲೆಕ್ಕ ಹಾಕಿ ಮಂಡಿಗೆ ತಿಂಬವರು. ಇವರಲ್ಲಿ ಎಷ್ಟೋ ಮಂದಿ ದೇಸಗತಿಯಿಂದ ಸ್ಥಿತಿವಂತರಾದವರು. ಆದರೂ ಆ ಜನಕ್ಕೆ ಕೃತಜ್ಞತೆ ಬೇಡ, ತೃಪ್ತಿ ಕೂಡ ಇರಲಿಲ್ಲ. ಅವರೇನಾದರೂ ದೇಸಗತಿ ಬಗ್ಗೆ ಆಡಿದರೆ, ನೀನು ಖಂಡಿತ ತಿಳಿಯಬಹುದು; ಅವರ ಮನಸ್ಸಿನಲ್ಲಿರೋದು ಅದಲ್ಲ – ಅಂತ. ತಮ್ಮ ಮಾತುಗಳಿಂದ ಮೈಮರೆಸಿ, ನೀನು ಎಲ್ಲಿ ಮೈಮರೆಯುತ್ತಿಯೋ ಅಲ್ಲಿಂದಲೇ ಒಳಹೊಕ್ಕು ದೋಚುವವರು. ನಾನು ಹೀಗೆ ಹೇಳುವುದಕ್ಕೆ ಕಾರಣಗಳಿವೆ:

ದೇಸಾಯಿಗೆ ಬಯಲಾಟದ ಹುಚ್ಚಿತ್ತಲ್ಲ, ಹುಚ್ಚೇನು, ಬಯಲಾಟವಾಡುವುದೇ ಅವನ ಕಸಬಾಗಿತ್ತು. ಬಯಲಾಟಕ್ಕೆ ಅಲತಗಿಯಿಂದ ಚಿಮಣಾಳನ್ನು ಕರೆಸುತ್ತಿದ್ದರು. ಅವಳಿಗೆ ಬೇಕಾದಷ್ಟು ಹಣ ಸುರಿದು ಎಂಟೆಂಟು ದಿನ ಇಲ್ಲೇ ಇಟ್ಟುಕೊಳ್ಳುತ್ತಿದ್ದರು. ಇವರಾಡುವ ಬಯಲಾಟಗಳೋ, ಸಿಂಗಾರೆವ್ವನ ಮಲಗುವ ಕೋಣೆಯಿಂದ ನಾವೇ ನೋಡಿದ್ದೀವಲ್ಲ – ಚೆನ್ನಾಗಿರುತ್ತಿರಲಿಲ್ಲ. ಸರಗಂ ದೇಸಾಯಿ ರಾಜನಾಗಿರುತ್ತಿದ್ದ. ಅದೇನು ಪಾರ್ಟೋ, ಅದೇನು ಅಭಿನಯವೋ, ಇವ ಬಂದೊಡನೆ ಜನ ಬಾಯಿ ಮುಚ್ಚಿಕೊಂಡು ನಗುತ್ತಿದ್ದರು. ಸುಳ್ಯಾಕೆ ಹೇಳಲಿ, ಇವನ ಭಾಗ ಬಂದೊಡನೆ ಸಿಂಗಾರೆವ್ವ ಕಿಟಕಿ ಬಾಗಿಲು ಮುಚ್ಚಿ ಮಲಗಿಬಿಡುತ್ತಿದ್ದಳು. ಇದಲ್ಲ ನಾನು ಹೇಳಬೇಕೆಂಬುದದ್ದು. ಬಯಲಾಟದ ಹಿಂದುಮುಂದಿನ ನಾಕೈದು ದಿನ ಸರಿರಾತ್ರಿ ದೇಸಾಯಿಯನ್ನು ಹೊತ್ತುಕೊಂಡೇ ಮನೆಗೆ ಬರುತ್ತಿದ್ದರು. ಅವ ಬೇಹೋಶ್ ಆಗುವುದು ನಮಗೆ ಗೊತ್ತಿತ್ತಲ್ಲ. ದೈವ ಶಪಿಸುತ್ತ ಉಪಚರಿಸುತ್ತಿದ್ದೆವು. ಆದರೆ ಬಯಲಾಟದ ಹಿಂದುಮುಂದಿನ ದಿನಗಳಲ್ಲೇ ಯಾಕೆ ಹೀಗಾಗಬೇಕೆಂದು ನಮಗೆ ಹೊಳೆದಿರಲೇ ಇಲ್ಲ.

ಯಾಕೆಂದರೆ ಅಲ್ಲಿ ಚಿಮಣಾಳ ತೊಡೆ ನೋಡುತ್ತಿದ್ದ! ಆ ಕಾರ್ಯಕ್ರಮ ನಡೆಯುತ್ತಿದ್ದದ್ದು ಹೀಗೆ: ಚಿಮಣಾಳನ್ನು ಕರೆತಂದವನು ತಾಲೀಮು ಮುಗಿದ ಮೇಲೆ ಚಿಮಣಾಳ ರೂಪ, ಮೈಮಾಟವನ್ನು ವರ್ಣಿಸಿ, ದೇಸಾಯಿಯನ್ನು ರಮಿಸಿ ಒಂದು ಗುಡಿಸಲಿಗೆ ಕರೆದೊಯ್ಯುವುದಂತೆ, ಗುಡಿಸಲ ಹೊರಗೆ ದೇಸಾಯಿಯನ್ನು ಕೂರಿಸಿ ಒಂದು ಸಣ್ಣ ಕಿಂಡಿಯಿಂದ ಒಳಗೆ ನೋಡಲಿಕ್ಕೆ ಹೇಳುವುದು. ಒಳಗೆ ದೀಪದ ಬೆಳಕಿನಲ್ಲಿದ್ದ ಅವಳು ಮೆಲ್ಲನೆ ಸೀರೆ ಎತ್ತುವುದು, ಎತ್ತುತ್ತ ಹೋದಂತೆ ಇವ ಉದ್ರಿಕ್ತನಾಗಿ, ಮೈಮುಖ ಕೆಂಪಾಗಿ, ಅವಳು ಪೂರಾ ತೊಡೆ ತೋರಿಸುವಷ್ಟರಲ್ಲಿ ಈತ ಬೇಹೋಶ್ ಆಗಿ ಬೀಳುವುದು. ಆಮೇಲೆ ಹೊತ್ತುತಂದು ಮನೆಯಲ್ಲಿ ಚೆಲ್ಲುವುದು. ದೇಸಾಯಿ ಈ ಉದ್ರೇಕಕ್ಕಾಗಿ ಬೇಕಾದಷ್ಟು ಹಣ ಸುರಿಯುತ್ತಿದ್ದ. ಊರಿನ ಕೆಲವರು ಇದರ ಉಪಯೋಗವನ್ನು ಸರಿಯಾಗೇ ಮಾಡಿಕೊಳ್ಳುತ್ತಿದ್ದರು. ಕೆಲವರಂತೂ ಚಿಮಣಾ ಎಂದು ಹೇಳಿ ತಮ್ಮ ಹೆಂಡಂದಿರನ್ನು ಕರೆತಂದು ತೋರಿಸುತ್ತಿದ್ದರಂತೆ. ಹ್ಯಾಗೂ ದೇಸಾಯಿ ಮುಖದ ತನಕ ನೋಡುವುದಿಲ್ಲವಲ್ಲ, ಆತಂಕವೇನಿದೆ? ಯಾವಳ ಕತ್ತಿನಲ್ಲಾದರೂ ಅರಮನೆಯ ಆಭರಣ ಕಂಡಿತೆನ್ನು, ಅವಳು ದೇಸಾಯಿಗೆ ತೊಡೆ ತೋರಿದವಳೆಂದೇ ಜನ ಆಡಿಕೊಳ್ಳುತ್ತಿದ್ದರು. ಬರಬರುತ್ತ ಅಂಥ ಆಭರಣ ಧರಿಸುವುದನ್ನೇ ಜನ ನಾಚಿ ಬಿಟ್ಟರಂತೆ.

ಇಂಥಾದ್ದನ್ನ ಎಲ್ಲಿಯಾದರೂ ಕೇಳಿದ್ದಿಯೇನಪ್ಪ? ಕೇಳೋದೇನು ಬಂತು. ಮುಂದೆ ನಾನೇ ಕಣ್ಣಾರೆ ಕಂಡೆ. ಆದರೆ ನನಗೆ ಭಾರೀ ದೊಡ್ಡ ಆಘಾತವಾಗಿತ್ತು. ಜನ ಹೇಳುವುದೆಲ್ಲ ನನಗೆ ಖಾತ್ರಿಯಾಗಿತ್ತು. ಯಾಕೆಂದರೆ ಸಿಂಗಾರೆವ್ವನ ತೊಡೆ ನೋಡಿ ದೇಸಾಯಿ ಮೂರ್ಛೇ ಹೋದದ್ದಿತ್ತಲ್ಲ. ಇವ ಹೀಗಿದ್ದರ ಸಿಂಗಾರೆವ್ವ ವ್ರತ ಮಾಡಿದರೇನು ಬಂತು, ಹರಕೆ ಹೊತ್ತರೇನು ಬಂತು, ದಿಂಡುರುಳಿದರೇನು ಬಂತು? ಇದನ್ನು ಅವಳಿಗೆ ಹ್ಯಾಗೆ ಹೇಳಬೇಕೆಂಬುದೇ ನನಗೆ ದೊಡ್ಡ ಗೂಢವಾಯ್ತು. ಹೇಳಿದರೆ ಸುಖವಿಲ್ಲ ನಿಜ; ಹೇಳದಿದ್ದರೂ ಸುಖವಿಲ್ಲ. ಅವಳನ್ನು ಕಾಡಿಸಲಿಕ್ಕೆ ಅಪ್ಪ, ಗಂಡ, ಈ ಜನ ಸಾಲದೆಂದು ದೇವರು ಕೂಡ ಇವರ ಸಂಚಿನಲ್ಲಿ ಶಾಮೀಲಾಗಿದ್ದಾನೆನ್ನಿಸಿತು.  ಮನುಷ್ಯರ ದುಷ್ಟತನ ಹ್ಯಾಗೊ ಎದುರಿಸಬಹುದು. ದೇವರೇ ಎದುರು ಬಿದ್ದರೆ ಗತಿ ಯಾರು? ಈ ವಿಚಾರ ತಲೆ ಹೊಕ್ಕೊಡನೆ ನಿಂತ ನೆಲ ಕುಸಿದ ಹಾಗಾಯ್ತು; ಮುಗಿಲು ಹರಿದು ಮೈಮೇಲೆ ಬೀಳುವುದೊಂದೆ ಬಾಕಿ.“ಸಿಂಗಾರೆವ್ವಾ ಕೆಟ್ಟೆ ತಾಯಿ ಕೆಟ್ಟೆ” ಎಂದು ಎದೆಯ ಮೇಲೆ ಕೈಯಿಟ್ಟುಕೊಂಡು ಕುಸಿದುಬಿಟ್ಟೆ.

ಆ ದಿನ ಮಧ್ಯಾಹ್ನ ಊರೊಳಗಿನಿಂದ ಬಂದಾಗ ಅರಮನೆಯಲ್ಲಿ ಸಿಂಗಾರೆವ್ವ ಕಾಣಿಸಲಿಲ್ಲ. ಮಲಗೋ ಅಂತಸ್ತಿನಲ್ಲೂ ಇರಲಿಲ್ಲ.  ಅತ್ತೆಯ ಬಳಿ ನೋಡಿದೆ. ಅಡಿಗೆಮನೆ ನೋಡಿದೆ; ಬಚ್ಚಲು ಮನೆ ಕೂಡ ನೋಡಿದೆ; ಅಯ್ ಶಿವನೇ, ಮನೆ ಬಿಟ್ಟಿ ಪೌಳಿಯಾಚೆ ಹೆಜ್ಜೆಯಿಟ್ಟವಳ್ಳ. ಎಲ್ಲಿ ಇದ್ದಿದ್ದಾಳೆಂದು ದನ ಕೊಟ್ಟಿಗೆಯ ಕಡೆ ನಡೆದೆ. ಯಾಕೆಂದರೆ, ಕೆಂದಾಕಳು ಮೊನ್ನೆಯಷ್ಟೆ ಕರು ಹಾಕಿತ್ತು – ಬಾಣಂತಿ ದನಗಳ ಆರೈಕೆ ಮಡುವುದು ಅವಳಿಗೆ ತುಂಬ ಪ್ರಿಯವಾದ ಕೆಲಸವೆಂದು ನಾನು ಬಲ್ಲೆ. ನಾನು ಉಹಿಸಿದಂತೆಯೇ ಅಲ್ಲಿದ್ದಳು. ನಂಜಿಯ ಜೊತೆಗೆ ಅದೇನೋ ಗುಟ್ಟನ್ನು ಹಂಚಿಕೊಂಬವರಂತೆ ಇಳಿದನಿಯಲ್ಲಿ ಮಾತಾಡುತ್ತಿದ್ದಳು. ಜೀವ ತಡೆಯಲಿಲ್ಲ, ನಾನು ಮೆಲ್ಲಗೆ ಅವರ ಬಳಿಗೆ ಹೋಗಿ ಅವರಾಡುವುದೆಲ್ಲ ಕೇಳಿಸುವಷ್ಟು ಸಮೀಪ ನಿಂತೆ. ಮೇವಿನ ಕಟ್ಟೆಯ ಮರೆಯಲ್ಲಿ ನಿಂತುದರಿಂದ ನಾನು ಅವರ ಕಣ್ಣಿಗೆ ಬೀಳುತ್ತಿರಲಿಲ್ಲ. ಇಣಿಕಿ ನೋಡಿದೆ.

ಎಳೇ ಮಕ್ಕಳಂತೆ ಇಬ್ಬರೂ ಅಸಮಾನ ಆಸಕ್ತಿ ಮತ್ತು ಆನಂದದಿಂದ ಕಳೆಕಳೆಯಾಗಿದ್ದರು. ನಂಜಿ, ನಮ್ಮ ಹೆಣ್ಣಾಳು, ಚೊಚ್ಚಿಲು ಬಸರಿದ್ದದ್ದು ನನಗೆ ಗೊತ್ತಿತ್ತು. ಇಬ್ಬರೂ ಅದರ ಬಗ್ಗೆ ಮಾತಾಡುತ್ತಿದ್ದರು. ಈಗಷ್ಟೆ ಹೊಸ ಆಟಿಗೆಯನ್ನು ಹೊಂದಿದ ಯಜಮಾನಿಯಂತೆ ನಂಜಿ, ಅದು ತನಗಿಲ್ಲವಲ್ಲಾ ಎಂದು, ಅವಳ ಕೈಲಾದರೂ ಅದನ್ನು ನೋಡಿ ಆನಂದಿಸೋಣವೆಂದು, ಆಸೆಬುರುಕುತನದಿಂದ ನೋಡುವ ಬಡಕೂಸಿನಂತೆ ಸಿಂಗಾರೆವ್ವ – ಕಂಡರು. ನಂಜಿಯ ಮುಖದಲ್ಲಿ ತೃಪ್ತಿಯ ಬಣ್ಣ ಬಂದಿತ್ತು ಹೊಡೆ ಹಿರಿದ ಬೆಳೆಯಂತೆ ಮುಗುಳುನಗೆ ಮುಖದಲ್ಲಿ ತುಳುಕಾಡುತ್ತಿತ್ತು. ದೇವರ ಮನೆಯ ನಂದಾದೀಪದಂತೆ ಅವಳ ಕಣ್ಣು ಶಾಂತವಾಗಿ, ನಿಶ್ಚಿಂತವಾಗಿ ಬೆಳಗುತ್ತಿದ್ದವು. ಸಿಂಗಾರೆವ್ವನ ಕಣ್ಣು ಆಸೆಯಿಂದ ಝಳಪಿಸುತ್ತಿದ್ದವು. ಮತ್ತೆ ಮತ್ತೆ ಅವಳೊಳಗೆ ಬಿರುಗಾಳಿಯೆದ್ದು ಹೊಯ್ದಾಡಿ ತಂತಾನೇ ಸುಂಟರಗಾಳಿಯಂತೆ ಸುತ್ತುತ್ತಿತ್ತು. ಮತ್ತು ಅವಳ ಮುಖ ಕನ್ನಡಿಯಂತೆ ಅದನ್ನೆಲ್ಲ ಬಿಂಬಿಸುತ್ತಿತ್ತು. ಎಳೇ ಮಕ್ಕಳ ಹಾಗೆ ಏನೇನೋ ಕೇಳುತ್ತಿದ್ದಳು, ಹಾಗೆ ಕೇಳಿದಾಗ ಅವಳ ಉಸಿರಾಟ ಅಸಹಜವಾಗಿ ತೀವ್ರತೆಗೇರಿ ಕುಸಿಯುತ್ತಿತ್ತು. ದನಿಯ ಏರಿಳಿತ ಅಸಮಾನವಾಗಿತ್ತು. ಸಿಂಗಾರೆವ್ವ ಹೇಳಿದಳು;

“ನಂಜೀ, ಇನ್ನಮ್ಯಾಲ ಹೊಲಕ್ಕ ಹೋಗಬ್ಯಾಡ…”

“ನಮ್ಮತ್ತಿ ಬಿಡೋದಿಲ್ರೆವ್ವ.”

“ಬಿಡೋದಿಲ್ಲಂದರ? ಚೊಚ್ಚಿಲ ಬಸರಿ, ನಿಮ್ಮತ್ತಿಗಿ ತಿಳೀಬಾರದಾ? ಶೀನಿಂಗಿ ಬರಲಿ, ನಿಮ್ಮತ್ತಿಗಿ ಹೇಳಿಕಳಸ್ತೀನಿ; ಅಂದಾಂಗ ನಂಜೀ, ಒಳಗ ಹೆಂಗ ಅನಸತೈತೆ?”

ನಂಜಿಯೇನು ಹತ್ತು ಹೆತ್ತವಳೆ? ಅವಳಿಗೂ ಇದು ಹೊಸದೇ, ಬಾಯಿಬಿಟ್ಟು ಹೇಳಲಾರದ ಸುಖದಲ್ಲಿದ್ದವಳು, ಕಣ್ಣು ಮುಚ್ಚಿ ಮುಗುಳುನಕ್ಕು ಒಂದು ಕ್ಷಣ ತಲೆದೂಗಿದಳಷ್ಟೆ.

“ಹಂಗಲ್ಲs ಹೊಟ್ಟ್ಯಾಗ ಹೆಂಗ ಅನಸತೈತಿ?”

ನಂಜಿ ಈ ಮಾತಿಗೂ ಹಾಗೇ ನಕ್ಕು. “ನಂಗೋತ್ತಿಲ್ಲರೆವ್ವಾ” ಎಂದಳು. “ಏಳುವಾಗ, ಕೂಡುವಾಗ ಮೆಲ್ಲಗೆ ಕೂಡು. ಅವಸರ ಮಾಡಬ್ಯಾಡ. ನಿಚ್ಚಣಿಕೆ ಅಂತೂ ಹತ್ತ ಬ್ಯಾಡ. ಇದನ್ನೆಲ್ಲಾ ನಿಮ್ಮಗಿತ್ತಿ ಹೇಳಿ ಕಳಿಸ್ತೀನಿ. ನೀ ಏನ ಕಾಳಜೀ ಮಾಡಬ್ಯಾಡ. ನಿನ್ನ ಗಂಡ ಈಗ ನಿನ್ನ ಜಾಸ್ತಿ ಮಾಯೇ ಮಾಡತಾನೇನ?”

“ಹೋಗ್ರೆವ್ವಾ…”

“ಅಯ್ ಹೇಳಗs….ರಾತ್ರಿ ಬರ್ತಾನಿಲ್ಲ?

“ಬರತಾನ, ಮನ್ನಿ ರಾತ್ರಿ ನಾ ಮಲಗಿದ್ದೆ, ಅವ ಬಂದು ಮೆಲ್ಲಗ ಹೊಟ್ಟೀ ಮ್ಯಾಲ ಕೈಯಾಡಿಸಿ ಮುದ್ದ ಕೊಟ್ಟ…”

ಇಷ್ಟು ಹೇಳಬೇಕಾದರೆ ಆ ಹುಡುಗಿ ನಾಚಿ ನೀರಾಗಿ ಮುಖ ಮುಚ್ಚಿಕೊಂಡಳು. ಸಿಂಗಾರೆವ್ವನಿಗೋ ಅದೆಲ್ಲಾ ತನಗೇ ಆದಂತೆ ಮುಖ ಕೆಂಪೇರಿತ್ತು.

“ಆಯ್ ಶಿವನs, ಹೌಂದೇನ ನಂಜೀ?” – ಎನ್ನುತ್ತ ಮುಖದ ಮೇಲಿನ ಅವಳ ಕೈ ತೆಗೆದು ನಂಜಿಯ ಮುಖವನ್ನು ಕಣ್ಣಿನಿಂದ ಹೀರುವ ಹಾಗೆ ನೋಡಿ ಆನಂದಭರಿತಳಾದಳು. ತಕ್ಷಣ ಅದೇನೋ ತನ್ನ ಮನಸ್ಸು ಕೊರೆಯುತ್ತಿರುವಂತೆ, “ನಂಜೀ ಒಂದ ಮಾತ ಕೇಳಲೇನ?” – ಎಂದಳು.

“ಕೇಳ್ರವ್ವ…”

“ನೀ ಇಲ್ಲಂದರ…”

“ನಿಮಗ ಇಲ್ಲದೇನೇನ್ರಿ?…”

“ನಾನೂ ನಿನ್ನ ಹೊಟ್ಟಿಮ್ಯಾಲ ಒಮ್ಮಿ ಕೈಯಾಡಿಸಲೇನ?” – ಎಂದಳು. “ಹೂಂ” ಎನ್ನುತ್ತ ನಂಜಿ ಹೊಟ್ಟೆಯ ಮೇಲಿನ ಸೀರೆ ತೆಗೆದಳು. ಅವಳು ಇಷ್ಟು ಬೇಗ ಒಪ್ಪಿಕೊಂಡಾಳೆಂದು ಇವಳಿಗೆ ಅನ್ನಿಸಿರಲಿಲ್ಲವೆಂದು ತೋರುತ್ತದೆ. ಆದರೂ ಕೈಯಾಡಿಸುವ ಮುನ್ನ ಒಮ್ಮೆ ಹಿಂದೆ ಮುಂದೆ ನೋಡಿ, ಅಪರೂಪದ ಸೌಭಾಗ್ಯ ದೊರೆತದಕ್ಕೆ ಆನಂದಗೊಂಡು, ಮೆಲ್ಲಗೆ ಅಂದರೆ ಮೆಲ್ಲಗೆ ಕೈಯಿಟ್ಟಳು. ಆಕೆ ಪುಳಕಿತಳಾದದ್ದನ್ನು, ಅವಳ ಕಣ್ಣು ದೀಪದ ಹಾಗೆ ಹೊಳೆಯುತ್ತಿದ್ದುದನ್ನು ಅಷ್ಟು ದೂರದಿಂದಲೂ ನಾನು ನೋಡುತ್ತಿದ್ದೆ. ಆನಂದೋದ್ರೇಕದಲ್ಲಿ ಮಾತು ಸಮ ಹೊರಡುತ್ತಿರಲಿಲ್ಲ. ದನಿ ಕಂಪಿಸುತ್ತ ಕೇಳಿದಳು –

“ನಂಜೀ, ಒಳಗ ಅದು ಹೆಂಗ ಹತ್ತಂತೈತಿ?”

‘ಹೆಂಗೊ ಏನೋ, ನಂಗೊತ್ತಿಲ್ಲರೆವ್ವಾ.”

“ಗೊತ್ತಿಲ್ಲಂದರ ನಾ ಹೇಳಲಿ? – ಅಂಗೈಯಾಗ ಹಕ್ಕೀಮರಿ ಹಿಡಿದಾಂಗ ಅನಸತೈತಿ, ಅಲ್ಲಾ?”

ನಂಜಿ ಹೂ ಅಂದಳು. ಹಾಗೇ ಕೈಯಾಡಿಸುತ್ತ, ‘ನಂಜೀ ನಿನಗೆ ಏನೇನ ಬೇಕ ಹೇಳ, ಏನೇನ ಬಯಕಾಗ್ಯಾವು? ಏನ ತಿನಬೇಕನಸತೈತಿ? ನನ್ನ ಮುಂದ ಹೇಳs…” ಅವಳು “ಏನೂ ಬ್ಯಾಡ್ರಿ” ಎನ್ನುತ್ತಿದ್ದಳು. ಇವಳೇ ಒತ್ತಾಯ ಮಾಡಿ ಅವಳ ಬಾಯಿಂದ ಏನೇನೋ ಪಲ್ಯ, ಏನೇನೋ ರೊಟ್ಟಿ, ಚಟ್ನಿ ಹೊರಡಿಸಿ “ನೀನು ಮೆಲ್ಲಗ ಮನೀ ಕಡೆ ನಡಿ, ಈಗಿಂದೀಗ ತಯಾರ ಮಾಡಿ ಶೀನಿಂಗೀನ ಕಳಸ್ತೀನಿ” ಎಂದು ಹೇಳಿ ಅಡಿಗೆ ಮನೆಯತ್ತ ಓಡಿದಳು. ನಾನೂ ಎದ್ದೆ.

ಓಡಿಹೋದವಳು ಶೀನಿಂಗೀ ಶೀನಿಂಗೀ ಎನ್ನುತ್ತ ಮನೆ ತುಂಬ ಹುಡುಕುತ್ತಿದ್ದಳು. ನನ್ನ ಕಂಡೊಡನೆ ಕೈಹಿಡಿದುಕೊಂಡು ಅಡಿಗೆ ಮನೆಗೆ ಎಳೆದುಕೊಂಡೇ ಹೋದಳು. “ನಂಜಿಗಿ ಬಯಕಿ ಹತ್ಯಾವಂತ; ಲಗೂನ ಅಡಿಗಿ ಮಾಡೋಣ ಬಾ” ಎಂದು ಹೇಳಿ ತಾನೂ ಸಹಾಯಕ್ಕೆ ನಿಂತಳು. ಅಡಿಗೆ ಮುಗಿಯುವ ತನಕ ನಂಜಿಯ ಬಗ್ಗೆ ಏನೇನೋ ಹೇಳಿದಳು. ಹೊಟ್ಟೆಯ ಮೇಲೆ ಕೈಯಾಡಿಸಿದ್ದನ್ನೂ ಹೇಳಿ, ಆ ಹೊಟ್ಟೆ ಹ್ಯಾಗಿರುತ್ತದೆಂದು ವರ್ಣನೆ ಮಾಡಿದಳು. ಅಡಿಗೆ ಮುಗಿದಾಗ ಸಂಜೆಯಾಗಿ ದನಕರು ಮನೆಗೆ ಬರುತ್ತಿದ್ದವು. ತಾನೇ  ಕೈಯಾರೆ ಹೆಡಿಗೆ ತುಂಬಿ, ನನ್ನ ಮೇಲೆ ಹೊರಿಸಿ “ಹುಷಾರಾಗಿ ಉಣಿಸಿ ಬಾ” ಎಂದು ಬಾಗಿಲತನಕ ಬಂದು ಕಳಿಸಿದಳು.

ನಂಜಿಯ ಮನೆಗೆ ಹೋದೆ. ಮನೆ ಮುಂದೆ ಹೆಂಗಸರು ಸೇರಿದ್ದರು. ಯಾರೋ ಅವಳತ್ತೆ ಎಂದು ಕಾಣುತ್ತದೆ – ಅಳುತ್ತ ಯಾರನ್ನೋ ಶಪಿಸುತ್ತಿದ್ದಳು. ನಾನು ಬಂದುದನ್ನು ನೋಡಿದ ಒಬ್ಬ ಗರತಿ, ಬಂದವಳೇ ನನ್ನ ರಟ್ಟೀ ಹಿಡಿದು ಒಂದು ಸಂದಿಯಲ್ಲಿ ಕರೆದೊಯ್ದು.

“ಏನs ಶೀನಿಂಗಕ್ಕಾ, ಸಣ್ಣ ದೊರಿಸಾನಿ ಹಿಂಗ ಮಾಡಬೇಕೇನು?” ಎಂದಳು. ನನಗೇನೂ ಅರ್ಥವಾಗಲಿಲ್ಲ.

“ಏನು, ಏನು?” ಅಂದೆ

“ಮುದ್ದಿನದಾಗ ಸಣ್ಣ ದೊರಿಸಾನಿ ನಂಜೀನ ಕರದು ಹೊಟ್ಟಿಮ್ಯಾಲ ಕೈಯಾಡಿಸಿ ಕಳಿಸಿದಳಂತ. ನಂಜಿ ಮನೀಗಿ ಬಂದ ಹಲಿವುಳ್ದೈತಿ! ಪಾಪ, ಬಂಜೀ ಕೈ ಮುಟ್ಟಿದರ ಹೊಟ್ಟಿ ತಡದೀತs? ತಿಳೀಬಾರದ ದೊರಿಸಾನಿಗಿ? ನೀ ಆದರೂ ಬುದ್ಧಿ ಹೇಳಬಾರದ?”

– ಅಂದಳು. ಅಲ್ಲಿ ನಿಲ್ಲುವ ಮನಸ್ಸಾಗಲಿಲ್ಲ. ಹಾ ಹೂ ಎನ್ನದೆ, ಹೊತ್ತ ಹೆಡಿಗೆ ಇಳಿಸದೆ ಒಂದೇ ಹೆಜ್ಜೆಯಲ್ಲಿ ಮನೆಗೆ ಬಂದೆ. ಬಂದವಳೇ ಗಾಳಿ ತುಂಬಿದ ಕರುವಿನಂತೆ ಅಡಿಗೆಮನೆ ಹೊಕ್ಕು ಹೆಡಿಗೆ ಇಳಿಸಿ ಕಂಬಕ್ಕೊರಗಿ ಹಾಗೇ ಕುಕ್ಕರಿಸಿದೆ. ಸುರಿಯೋ ಬೆವರು, ಒತ್ತಿ ಬರುತ್ತಿದ್ದ ಏದುಸಿರು, ಢವಢವ ಎದೆ ಹೊಡೆದುಕೊಂಡು ಕಣ್ಣಿಗೇನೂ ಕಾಣಿಸಂತಾಗಿತ್ತು. ಅಷ್ಟೇ ಆತುರದಲ್ಲಿ ಸಿಂಗಾರೆವ್ವ ಬಂದಳು. ನಾ ಕೂತ ಭಂಗಿಯಿಂದಲೇ ಗಾಬರಿಯಾಗಿ

“ಶೀನಿಂಗಿ, ಯಾಕ? ಏನಾಯ್ತು?” ಅಂದಳು.

“ನಂಜಿ ಹಲಿವುಳ್ದಾಳ ಎವ್ವಾ.”

“ಏನಂದಿ?”

ನನ್ನ ಬಾಯೊಳಗೆ ಹುಳಬೀಳಲಿ, ಯಾರು ಎಂತಾ ಏನೂ ವಿಚಾರ ಮಾಡದೆ ಎಲ್ಲಾ ಹೇಳಿಬಿಟ್ಟೆ.

“ಖರೇನ ಎವ್ವಾ, ನೀ ಮದ್ದಿನದಾಗ ಆಕೀ ಹೊಟ್ಟೀಮ್ಯಾಲ ಕೈಯಾಡಿಸಿದೆಂತ. ಬಂಜೀ ಕೈ ಮುಟ್ಟಿ ಹಂಗಾಯ್ತಂತ ಎಲ್ಲರೂ ಆಡಿಕೋತಿದ್ದರು. ಓಡಿಬಂದೆ.”

ಸಿಂಗಾರೆವ್ವ ಕೇಳಿ, ಸುಂಟರಗಾಳಿಗೆ ಸಿಕ್ಕ ಎಳೇ ಬಿದಿರುಮಳೆಯಂತೆ ನಡುಗಿ, ಹೊಯ್ದಾಡಿ ನಿಂತಿರಲಾರದೆ ನಾ ಕೂತ ಕಂಬ ತಬ್ಬಿಕೊಂಡು ಹಾಗೇ ಕುಸಿದಳು. ಬಹಳ ಹೊತ್ತು ಮಾತಾಡಲಿಲ್ಲ. ಕೊನೆಗೆ ನಾ ಮಾಡಿದ್ದೇನೆಂದು ಅರಿವಿಗೆ ಬಂತು. ಸಿಂಗಾರೆವ್ವನ ಎದೆಯೊಳಗೆ ಭಾರೀ ಗಾಯವಾಗಿತ್ತು. “ಎವ್ವಾs” ಅಂದೆ. ಇಲ್ಲೀತನಕ ತಡೆಹಿಡಿದ ಅಳಾಪದ ಕಟ್ಟೆಯೊಡೆದು ಉಕ್ಕಿಬಂತು.

“ಶೀನಿಂಗೀ, ಶಿವ ನನ್ನ ಹಣ್ಯಾಗ ಇನ್ನs ಏನೇನ ಬರದ್ದಾನs” – ಎಂದು ಒದರಿ ಹೇಳುತ್ತ ಕಂಬಕ್ಕೆ ಹಣೆಹಣೆ ಗಿಟ್ಟಿಸತೊಡಗಿದಳು. ಎವ್ವಾ, ನನ್ನಾಣಿ ಹಿಂಗ ಮಾಡಬ್ಯಾಡೆಂದವಳೇ ಹೋಗಿ ಹಿಡಿದುಕೊಂಡು ಕಂಬದಿಂದ ದೂರ ಎಳೆದುತಂದೆ. ನನ್ನನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತಳು.

“ಮುತ್ತೈದೆ ಮೂರುಸಂಜಿ, ತುಂಬಿದ ಮನ್ಯಾಗ ಅಳಬಾರದೆವ್ವಾ” – ಅಂದೆ. ಹಾಗೇ ಕರೆದುಕೊಂಡು ಹೊರಗೆ ಬಂದೆ. ಪರಸ್ಪರ ಅಂಟಿಕೊಂಡೇ ಮನೆಯಂಗಳದ ತನಕ ಹೋದೆವು. ಬೆಳದಿಂಗಳಿತ್ತು. ಈಗ ಆಳೋದನ್ನ ನಿಲ್ಲಿಸಿ ನನ್ನ ಭುಜದ ಮೇಲೆ ತಲೆಯೂರಿ ಬರೀ ಕಣ್ಣಿರು ಸುರಿಸುತ್ತ ಕೂತಳು.

ಈ ದಿನ ಕಂಡು ಕೇಳಿದ ಸತ್ಯಗಳು ನಮ್ಮ ಕನಸುಗಳನ್ನು ಹುಡಿ ಮಾಡಿಬಿಟ್ಟಿದ್ದವು. ನಮ್ಮ ಎದೆಯೊಳಗೆ ಎಂಥಾ ದೊಡ್ಡ ಗಾಯವಾಗಿದ್ದಿತ್ತೆಂದರೆ, ಅದು ಈ ಜನ್ಮದಲ್ಲಿ ಮಾಯುವ ಹಾಗಿರಲಿಲ್ಲ. ಹಾಗೆನಿಸಿದೊಡನೆ ಥಟ್ಟಂತ ಕಣ್ಣೀರು ಬಂತು. ಸಿಂಗಾರೆವ್ವನ ಕಡೆ ನೋಡಿ ಹಾಗೇ ಕೈ ಚಾಚಿದೆ. ದುಃಖದ ಝಳದಲ್ಲಿ ಅವಳೆಷ್ಟು ಬಾಡಿ ಮೆತ್ತಗಾಗಿದ್ದಳೆಂದರೆ, ಕೈಮುಟ್ಟಿದ್ದೇ ತಡ ಮೆತ್ತಗೆ ಕೂಸಿನ ಹಾಗೆ ನನ್ನ ತೆಕ್ಕೆಗೆ ಬಂದು, ಎದೆಯಲ್ಲಿ ಮುಖ ಹುದುಗಿದಳು. ಅಳುವ ಗೆಳತಿಯನ್ನು ಸಾಂತ್ವನಗೊಳಿಸಬೇಕು; ನನ್ನಿಂದಾಗಲಿಲ್ಲ. ಬೆಳುದಿಂಗಳೇ ಆ ಕೆಲಸ ಮಾಡಲೆಂದು ಸುಮ್ಮನಾದೆ.

ಎಷ್ಟು ಹೊತ್ತು ಹೀಗೆ ಕೂತಿದ್ದೆವೋ. ಸಿಂಗಾರೆವ್ವನ ಕಣ್ಣೀರಿನಿಂದ ನನ್ನ ಕುಬಸ ಒದ್ದೆಯಾಗಿತ್ತು. ಬಿಕ್ಕು ನಿಂತಿದ್ದರೂ ನಿಟ್ಟುಸಿರಿನ ಬಿಸಿಯಿನ್ನೂ ಎದೆಗೆ ತಾಗುತ್ತಿತ್ತು. ಕರುಳು ಹಂಚಿಕೊಂಡವರ ಭಾವನೆಗಳು ಮಾತಿಲ್ಲದೇ ಪರಸ್ಪರ ತಿಳಿಯುತ್ತವಂತೆ. ಹಾಗೆ ನಮಗೂ ತಿಳಿದುಬಿಟ್ಟಿತು. ಶಿವನಿಗೆ ಕರುಳಿರಲಿಲ್ಲ. ಹಡೆದವನೊಬ್ಬ ವೈರಿ, ಮದುವೆಯಾದವ ಇನ್ನೊಬ್ಬ ವೈರಿ. ಮದುವೆಯಾಗಿ ಹೆಣ್ತನದ ಸುಖವಿಲ್ಲ. ಅದನ್ನು ಮರೆಯುವುದಕ್ಕೆ ಸಂತಾನ ಸುಖವಿಲ್ಲ ಬರಿಯುಡಿಯಲ್ಲಿ ಬಂದು, ಬರಿಯುಡಿಯಲ್ಲೇ ಮಣ್ಣುಗಾಣುವುದು. ನನ್ನ ಹೃದಯಕ್ಕೆ ಹೇಳುವ ಹಾಗೆ ಎದೆಗೊರಗಿಕೊಂಡೇ “ಶಿವ ನನ್ನs ಕೈ ಬಿಟ್ನ ಶೀನಿಂಗೀ!” ಎಂದಳು. ಈ ಮಾತು ಅವಳು ಹೇಳುವುದಷ್ಟೇ ತಡ, ತಮ್ಮಾ ನೀನು ನಂಬುತ್ತಿಯೋ ಇಲ್ಲವೋ ಪೌಳಿಯ ತೊಲೆಬಾಗಿಲು ದಡ್ಡನೆ ತೆರೆದುಕೊಂಡಿತು. ಇಬ್ಬರೂ ಆ ಕಡೆ ನೋಡುತ್ತೇವೆ. ಬಾಗಿಲ ಉದ್ದಗಲ ತುಂಬಿ ಜಂಗಮ ಮೂರ್ತಿಯೊಂದು ನಿಂತುಬಿಟ್ಟಿದೆ! ಕಾವಿಬಟ್ಟೆ, ಕರ್ರಗಿನ ಮೈ, ಗುಡಿಯೊಳಗಿನ ಶಿವಲಿಂಗವೇ ಕಾವಿಯುಟ್ಟಂತೆ. ಹೊಳೆಯೋ ಕಣ್ಣು ಉರಿಯೋ ಪಂಜಿನಂತೆ; ಒಂದು ಕೈಯಲ್ಲಿ ಕಂದೀಲಿದೆ, ಇನ್ನೊಂದರಲ್ಲಿ ಜೋಳಿಗೆಯಿದೆ! ಮೈ ಝಮ್ಮೆಂದು, ಸಳಸಳ ಪುಳಕವೆದ್ದು, ಬೆವರಿಳಿದು, ತೆರೆದ ಕಣ್ಣು ತೆರೆದಂತೆ, ಬರೆದ ಗೊಂಬೆಯ ಹಾಗೆ ಮಾತು ಮರೆತು ಕೂತೆವು. ಬಂದವನು ಸಿಡಿಲು ಗುಡುಗಿದ ಹಾಗೆ “ಉಂಟು, ಮಕ್ಕಳ ಫಲ ಉಂಟು! ನಿನಗ ಮಕ್ಕಳಾ ಕೊಡದಿದ್ದರ ಶಿವನ ಪಾದಾ ತಿರುವತೀನಿ!” ಎಂದು ಗುಡುಗಿ, ಹಾಗೇ ಮಾಯವಾದ!

* * *