ಶೀನಿಂಗವ್ವ ತನ್ನ ಪೂಜೆಯ ಕಥೆ ಮುಂದುವರಿಸಿದಳು. ಮಧ್ಯೆ ಅವಳು ಹೇಳುವುದಕ್ಕೆ ಇಷ್ಟಪಡದ ಸಂಗತಿಗಳಿದ್ದವು. ಯಾಕೆಂದರೆ ಪೂಜೆ ಸುರುವಾಗಿ ನಾಕೆಂಟು ಮಾತು ಮುಗಿದಿರಲಿಲ್ಲ. ಅಷ್ಟರಲ್ಲೇ ಸರಗಂ ದೇಸಾಯಿಯ ಪ್ರವೇಶವಾಗಿಬಿಟ್ಟಿತ್ತು. ನಾನು ಕೆದಕಿ ಕೆದಕಿ ಕೇಳಿದರೆ ಮುದುಕಿ ಮತ್ತೆ ಮತ್ತೆ ಬಚ್ಚಿಡತೊಡಗಿದಳು. ಶಿರಸೈಲ ನನ್ನ ಸಹಾಯಕ್ಕೆ ಬಂದ. “ಏನೂ ಮುಚ್ಚಿಡಬ್ಯಾಡವೇ, ಅವರೇನು ಬ್ಯಾರೇದವರಾ? ನಮ್ಮ ಊರವರs ಅಲ್ಲೇನು? ಅವರಿಗೆಲ್ಲ ಗೊತ್ತಾಗತೈತಿ, ನೀ ಸುಮ್ಮನ ಹೇಳಿಕೊಂಡ ಹೋಗು” – ಎಂದ. ಬೇರೆ ಯಾರದೋ ಕಥೆಯಾದರೆ ನಡೆದೀತು, ಇದು ತನ್ನ ಆಪ್ತ ಗೆಳತಿಯ ವಿಚಾರ, ಕಥೆಯಲ್ಲಿ ಇವಳೂ ಭಾಗವಹಿಸಿದ್ದವಳು, ಸಂಕೋಚವಿರುವುದು ಸ್ವಾಭಾವಿಕ. ದೊರೆಸಾನಿಯ ಅವಮಾನದ ಬಗ್ಗೆ ಕೇಳುವುದು ನನ್ನ ಉದ್ದೇಶವಾಗಿರಲಿಲ್ಲ. ಈಗ ನಾಕೈದು ದಿನಗಳಿಂದ ಕಥೆ ಕೇಳುತ್ತಿದ್ದೆನಲ್ಲ, ಮುದುಕಿಗೂ ನನಗೂ ಒಂದು ಬಗೆಯ ಸದರ ಬೆಳೆದಿತ್ತು. ನನ್ನ ಮುಖ ನೋಡಿದಳು. ಕಿಡಿಗೇಡಿತನ ಕಾಣಲಿಲ್ಲವೆಂದು ತೋರುತ್ತದೆ. ಆದರೂ ಅನುಮಾನದಿಂದಲೇ ಕಥೆ ಸುರುಮಾಡಿ, ತುಸು ಮುಂದೆ ಸಾಗುವಷ್ಟರಲ್ಲಿ ಮೈಚಳಿ ಬಿಟ್ಟು ಹೇಳತೊಡಗಿದಳು.

“ದೇಸಾಯಿ ಹ್ಯಾಗೂ ಬಯಲಾಟವೆಂದು ಪಕ್ಕದ ಹಳ್ಳಿಗೆ ಹೋಗಿದ್ದ. ಹಿರಿಯ ದೊರೆಸಾನಿ ಹಾಸಿಗೆ ಬಿಟ್ಟು ಏಳುವವಳಲ್ಲ. ಇನ್ನು ಆಳುಗಳೋ, ಒಂದೊಂದು ದಿಕ್ಕಿನಲ್ಲಿ ಮಲಗುವಂಥವರು. ಪೂಜೆ ಮಾಡೋದಕ್ಕೆ, ಹಿರಿಯರ ಮಾತು ಮೀರಿದ್ದೆವೆಂಬುದನ್ನು ಬಿಟ್ಟರೆ ಬೇರೆ ಯಾವ ಆತಂಕಗಳೂ ಇರಲಿಲ್ಲ, ಸಿಂಗಾರೆವ್ವ ಮನಸ್ಸು ಕಲ್ಲಮಾಡಿ ಮಕ್ಕಳನ್ನು ಶಿವನ ಕೈಯಿಂದ ಕಸಿದಿಕೊಂಡಾದರೂ ಬರಬೇಕೆಂದು ನಿರ್ಧರಿಸಿಬಿಟ್ಟಿದ್ದಳು. ಅದೇ ಅವಳ ಕೆಟ್ಟ ನಿರ್ಧಾರವಾಯಿತು.

ನಾನು ಓಡಾಡಿ ಪೂಜೆಯ ಸಾಮಾನು ಸರಂಜಾಮು ಕೂಡಿಸತೊಡಗಿದೆ. ಸಿಂಗಾರೆವ್ವ ಅತ್ತೆಗೆ ಮತ್ತು ಆಳುಗಳಿಗೆ ಊಟ ಹಾಕಿ ನನ್ನ ನೆರವಿಗೆ ಬಂದಳು. ನಿಂಬೆ ಹಣ್ಣು, ತೆಂಗಿನಕಾಯಿ, ಕರಿಯದಾರ, ಬೇವಿನಸೊಪ್ಪು, ಮಗುವಿನ ಹೇಲು, ಐದು ಕೂದಲು – ಇವನ್ನೆಲ್ಲ ಓಡಾಡಿ ಹ್ಯಾಗೆ ಸಂಗ್ರಹಿಸಿದೆನೆಂದೇ ತಿಳಿಯದು. ಇನ್ನೆರಡು ಕೋಳಿ ಬೇಕಿದ್ದವು. ಹಿತ್ತಲ ಬಾಗಿಲಿನಿಂದ ಹೊಲಗೇರಿಗೆ ಓಡಿಹೋಗಿ ಅವನ್ನೂ ತಂದೆ. ಕೊಟ್ಟಿಗೆಯಲ್ಲಿ ಮಲಗುವ ಆಳನ್ನು ಪುಸಲಾಯಿಸಿ ದನಕರು ನಾನೇ ನೋಡಿಕೊಳ್ಳುವುದಾಗಿ ಹೇಳಿ ಅವನನ್ನ ಅವನ ಮನೆಗೆ ಕಳಿಸಿದ್ದಾಯಿತು.

ಯಾರಿಗೂ ಪತ್ತೆಯಾಗದಿರಲೆಂದು, ದೇಸಾಯಿ ಇಲ್ಲವಲ್ಲ ಎಂದು ಸಿಂಗಾರೆವ್ವ ಮಲಗುವ ಅಂತಸ್ತಿನಲ್ಲೇ ಪೂಜೆ ಮಾಡುವುದೆಂದು ಗೊತ್ತು ಮಾಡಿಕೊಂಡಿದ್ದೆವು. ನಾನು ಕರಿ ಆಕಳ ಸಗಣಿಯಿಂದ ನೆಲ ಸಾರಿಸುವಾಗ ಸಿಂಗಾರೆವ್ವ ಇನ್ನೊಮ್ಮೆ ಜಳಕ ಮಾಡಿ ಒದ್ದೆಯಲ್ಲೇ ಬಂದಳು. ಊರೆಲ್ಲ ಮಲಗಿ ಸ್ತಬ್ಧವಾಗಿತ್ತು. ಅರಮನೆಯಲ್ಲಂತೂ ಕೆಳಗೆ ಕೊಟ್ಟಿಗೆಯಲ್ಲಿಯ ದನ ಬಾಲ ಜಾಡಿಸಿಕೊಂಡರೂ ಅದರ ಸದ್ದು ನಮಗೆ ಕೇಳಿಸುತ್ತಿತ್ತು. ಸಿಂಗಾರೆವ್ವ ಸೀರೆ ಕಳಚಿ ಮಡಿಯುಟ್ಟಳು. ಹುಚ್ಚಯ್ಯ ಇನ್ನೂ ಬರಲಿಲ್ಲವಲ್ಲ. ನೋಡೋಣವೆಂದು ತಿರುಗುವಷ್ಟರಲ್ಲಿ ಕರಿ ಆಕಾರವೊಂದು ಬಾಗಿಲಬಳಿ ಮರೆಯಾದಂತೆನಿಸಿತು. ಗಾಬರಿಯಾಗಿ ಯಾರೋ ಬಂದಿದ್ದಾರೆಂದು ದೊರೆಸಾನಿಗೆ ಸನ್ನೆ ಮಾಡಿ ಕಂದೀಲು ಹಿಡಿದುಕೊಂಡು ಬಂದೆ. ಹುಚ್ಚಯ್ಯ ನಿಂತಿದ್ದ. ಸಿಂಗಾರೆವ್ವ ಒದ್ದೆ ಕಳಚಿದ್ದನ್ನೂ ಮುಡಿಯುಟ್ಟಿದ್ದನ್ನೂ ಕದ್ದು ನೋಡಿದನೆಂದು ಅನ್ನಿಸಿತು. ಅಪಾಯವುಂಟಾಗದಂತೆ ನಾನೇ ಹುಷಾರಾಗಿರಬೇಕೆಂದುಕೊಂಡೆ.

ಮಾತಿಲ್ಲದೆ ಒಳಗೆ ಬಂದ. ಮೈ ತುಂಬ ಬೂದಿ ಬಳಿದುಕೊಂಡು ಬಗಲಿಗೊಂದು ಜೋಳಿಗೆ ತೂಗುಬಿಟ್ಟಿದ್ದ. ಜೋಳಿಗೆಯಿಂದೊಂದು ಮೂಳೆಯನ್ನೂ ತಲೆ ಬುರುಡೆಯನ್ನೂ ತೆಗೆದ. ನನ್ನ ಎದೆ ಗಡಗಡ ನಡುಗಿತು. ಕೊಡದಲ್ಲಿ ಕರಿಹೋರಿಯ ಸೆಗಣಿ ಹಾಕಿಸಿ ಗಂಜಳ ಮಾಡುವಂತೆ ನನಗೆ ಹೇಳಿದ. ಆಮೇಲೆ ಅವನೇ ಅದರಲ್ಲಿ ಮಗುವಿನ ಹೇಲನ್ನೂ ಕೂದಲನ್ನೂ ಬೆರೆಸಿ ಕೈ ಒರೆಸಿಕೊಂಡ. ಅರಿಷಿಣ ಕುಂಕುಮಗಳಿಂದ ಕುಂಬಳಕಾಯಿಯ ಮೇಲೆ ಏನೇನೋ ಗೆರೆ ಬರೆದು ಮಲ್ಲಿಗೆ ಹೂ ಅಂಟಿಸಿ, ಮಂತ್ರ ಗೊಣಗಲಿಕ್ಕೆ ಸುರುಮಾಡಿದ. ಕುಂಕುಮದಲ್ಲದ್ದಿದ್ದ ಅಕ್ಕಿಯಿಂದ ನೆಲದ ಮೇಲೇನೋ ನಕ್ಷೆ ಬರೆದ. ಕೋಳಿ ಕುಯ್ದು ನಕ್ಷೆಯ ಸುತ್ತ ನೆತ್ತರು ಸಿಂಪಡಿಸಿ ಸೀಮೆಕಟ್ಟಿದ. ಈಗ ಆತನ ದನಿ ಬಿರುಸಾಯಿತು. ಬರಲೊಲ್ಲದ ದೇವರುಗಳನ್ನ ಮಂತ್ರಗಳಿಂದ ಬಂಧಿಸಿ ಎಳೆದು ತರುವಂತೆ ಮಂತ್ರ ಹೇಳತೊಡಗಿದ. ಆಗಾಗ ಅವುಗಳನ್ನು ಹೆದರಿಸಿ ಅಪ್ಪಣೆ ಕೊಡುವಂತೆ ಹಾಂ ಹೂಂ ಎಂದು ಹೂಂಕರಿಸುತ್ತಿದ್ದ, ಅಂಕೆಗೆ ಬಾರದ ಪುಂಡು ದನಗಳಂತೆ ದೇವರು ಕಾಡಿಸುತ್ತಿದ್ದವೇನೋ, ಕಣ್ಣು ಕೆಕ್ಕರಿಸಿ, ಕೆಂಡ ಕಾರುತ್ತ ವಿಕಾರವಾಗಿ ಅವುಗಳನ್ನು ನೋಡುತ್ತ ನಕ್ಷೆಯ ಸ್ಥಳಕ್ಕೆ ಬರುವಂತೆ ಸೂಚಿಸುತ್ತಿದ್ದ. ಬಲಗೈಯಲ್ಲಿ ಮೂಳೆ ಹಿಡಿದು, ಮಂತ್ರಗಳನ್ನು ಸಣ್ಣದಾಗಿ ಹೇಳುತ್ತ ಹೊಂಚಿ, ಅವು ಸಿಕ್ಕೊಡನೆ ಅವು ಕೂತಿರಬೇಕಾದ ಸ್ಥಳವನ್ನು ಮೂಳೆ ಬಡಿದು ನಿರ್ದೇಶಿಸುತ್ತ, ಅವು ಬಂದವೆಂದಾಗ ಮೂಳೆ ಜಡಿದು ಬಂಧಿಸುವಂತೆ ಮಂತ್ರ ಗೊಣಗಿದ.

ಆಮೇಲೆ ಕುಂಬಳಕಾಯಿಯನ್ನು ಅಡ್ಡಡ್ಡ ಸರಿ ಅರ್ಧ ಹೋಳು ಮಾಡಿ ದೊರೆಸಾನಿಯ ಗರ್ಭದ ಮುಂದೆ ಹಿಡಿದು ಅದರ ಮೇಲೊಂದು ಸೆಗಣಿಯ ಗುಂಡಿಟ್ಟ. ಅದನ್ನು ನಕ್ಷೆಯೊಳಗಿಟ್ಟು ಅದರ ಮ್ಯಾಲೆ ಬುರುಡೆಯಿಟ್ಟು ಕೈಯೊಳಗಿನ ಮೂಳೆ ಊರಿದ. ಹಾಗೆ ಮೂಳೆ ಊರಿದನೋ ಇಲ್ಲವೋ ಭಗ್ಗನೆ ಬೆಂಕಿ ಹೊತ್ತಿತ್ತು. ಅದನ್ನು ಕಂಡೊಡನೆಯೇ ಅದೇನು ಮಾಯವೋ, ಮಾಟವೋ ಅರಿವು  ಹಾರಿ ಇಬ್ಬರೂ ಪರವಶರಾದೆವು. ನಾನು ಬರೆದ ಚಿತ್ರವಾದೆ, ಅವಳು ಮಾಟದ ಗೊಂಬೆಯಾದಳು, ದೊರೆಸಾನಿಗೂ ಹುಚ್ಚಯ್ಯನಿಗೂ ಅಂತರಂಗದಲ್ಲೇ ಮಾತುಕತೆ ನಡೆಯುತ್ತಿತ್ತೋ ಏನೋ, ಯಾರು ಹೇಳುತ್ತಿರಲಿಲ್ಲ, ಯಾರೂ ಕೇಳುತ್ತಿರಲಿಲ್ಲ, ಹುಚ್ಚಯ್ಯ ರಭಸದಿಂದ ಮಂತ್ರ ವಟಗುಟುತ್ತ ಕೊಡದಲ್ಲಿಯ ಗಂಜಳವನ್ನು ಅವಳ ಮೈತುಂಬ ಎರೆದ. ಹುಚ್ಚಯ್ಯ ಸಿಂಗಾರೆವ್ವನನ್ನು ಹಾರಿಸಿಕೊಂಡು ಹೋಗುವೆನೆಂದೋ, ಏನು ಸಪ್ಪಳಾಯಿತೆಂದೋ, ಕೆಡುಕಿನ ಅರಿವು ಬಂದುದರಿಂದಲೋ – ಯಾಕೋ ಏನೋ ಎಂತೋ, ಅಂತೂ ಒದರಿ “ಅವ್ವಾ!” ಅಂದೆ. ಹಾಗೆ ಕೂಗಿದ್ದರಿಂದಲೇ ನನಗೆ ಸರಿಯಾಗಿ ಅರಿವು ಮೂಡಿದ್ದು. ಕೇಳಿದರೆ ಯಾರೋ ತೊಲೆಬಾಗಿಲು ಬಡಿಯುತ್ತಿದ್ದರು.

ಮೂವರೂ ಸ್ತಬ್ಧರಾಗಿ ಕೇಳಿದೆವು, “ಬಾಗಿಲಾ ತಗೀಲೇ ಬೋಳೀಮಗನs” ಎಂದು ದೇಸಾಯಿ ಕೂಗುತ್ತಿದ್ದ. “ಘಾತ ಆಯ್ತುs ಎವ್ವಾ,” ಅಂದೆ. ಒಂದು ಕ್ಷಣಕೂಡ ಹಿಂದು ಮುಂದಿನ ವಿಚಾರ ಮಾಡಲಿಲ್ಲ. ಗಬಕ್ಕನೆ ಹೋಗಿ ಅಂತಸ್ತಿನ ಬಾಗಲು ಬಂದು ಮಾಡಿ ಅಗಳಿ ಹಾಕಿಕೊಂಡು ಒಂದೇ ಉಸಿರಿನಲ್ಲಿ ಮೆಟ್ಟಿಲು ಹತ್ತಿ ಮೇಲೆ ಬಂದೆ. ಹುಚ್ಚಯ್ಯ ಗಡಗಡ ನಡುಗುತ್ತ ಮರೆಯಿದ್ದಲ್ಲಿ ತೂರಿ ಅಡಗಿಕೊಳ್ಳಲಿಕ್ಕೆ ನೋಡುತ್ತಿದ್ದ. ಸಿಂಗಾರೆವ್ವ ಬೇರೆ ಬೇರೆ ಉಟ್ಟುಕೊಂಡಳು. ನಾನು ಅಲ್ಲಿದ್ದುದನ್ನೆಲ್ಲ ಗುಂಪಿ ಮಾಡಿ ಬುಟ್ಟೀ ತುಂಬಿ, ಸಾರಿಸಿದ್ದೂ ಗೊತ್ತಾಗದ ಹಾಗೆ ಮೇಲೊಂದು ಜಮಖಾನ ಹಾಸಿದೆ. ಹುಚ್ಚಯ್ಯ ನಮ್ಮೊಂದಿಗೆ ಇದ್ದದ್ದು ಈಗಿನ ಮುಖ್ಯ ಅಡಚಣೆಯಾಯ್ತು. ದನದ ಕೊಟ್ಟಿಗೆಯ ಕಡೆಯಿಂದ ಹಿತ್ತಲ ಬಾಗಿಲಕಡೆ ಓಡಿಸಬಹುದೆಂದು ಹೊಂಚಿ, ಅವನ ಕೈ ಹಿಡಿದು ಮೆಲ್ಲಗೆ ಕರೆದುಕೊಂಡು ನಡೆದೆ. ಎರಡು ಮೆಟ್ಟಿಲಿಳಿದಿದ್ದೆವೋ ಇಲ್ಲವೋ – ದೇಸಾಯಿ ಅಂತಸ್ತಿನ ಬಾಗಿಲು ಬಡಿಯತೊಡಗಿದ. ಮತ್ತೆ ಮೇಲೇರಿ ಒಂದೇ ಉಸಿರಿನಲ್ಲಿ ಒಳಹೊಕ್ಕು, ನನಗದೇನು ಹೊಳೆಯಿತೋ ಗಡಂಚಿಯ ಮೇಲಿನ ಗಾದೆ ಸುರುಳಿ ಬಿಚ್ಚಿ ಅದರಲ್ಲಿ ಅವನನ್ನು ಚೆಲ್ಲಿ ಮತ್ತೆ ಸುತ್ತಿಬಿಟ್ಟೆ. ಕಾಲಿನ ತುದಿ ಕಾಣಿಸುತ್ತಿದ್ದವು. ಮ್ಯಾಲೊಂದು ಬಟ್ಟೆ ಎಸೆದೆ. ಬಾಗಿಲು ಬಡಿತ ಕೇಳಿಸುತ್ತಲೇ ಇತ್ತು. ಮಂಚದ ಮೇಲೆ ಸಿಂಗಾರೆವ್ವನನ್ನು ದೂಕಿ ಅವಳು ಬಿದ್ದೊಡನೆ ಚಾದರ ಹೊದಿಸಿ, ಕಂದೀಲು ತಗೊಂಡು ಬಾಗಿಲು ತೆಗೆಯಲು ಹೋದೆ.

“ಏನ ಹಿಂಗ, ಸತ್ತವರ್ಹಾಂಗ ಮಲಗೋದ?” ಎಂದು ಹೇಳುತ್ತ ದೇಸಾಯಿ ಬಂದೂಕಿನೊಂದಿಗೆ ಒಳನುಗ್ಗಿದ. ಅವನು ಲಗುಲಗು ಬೆಳಕು ತೋರಿಸೆಂದು ಅವಸರ ಮಾಡುತ್ತಿದ್ದ. ನಾನು ಸಾಧ್ಯವಾದಷ್ಟೂ ನಿಧಾನವಾಗಿ, ನಿದ್ದೆಯಲ್ಲಿದ್ದವಳಂತೆ ಮುಖ ಮಾಡಿಕೊಂಡು ಕಂದೀಲು ತೆಗೆದುಕೊಂಡು ಏರುತ್ತಿದ್ದೆ. ಕೊನೆಗೆ ತಾನೇ ಕಂದೀಲು ಕಸಿದುಕೊಂಡು ನುಗ್ಗಿದ. ದೇವರು ಕಾಪಾಡಿದನೆಂದುಕೊಂಡೆ. ಏನೂ ಗುರುತಿರಲಿಲ್ಲ. ಸಿಂಗಾರೆವ್ವ ಎದ್ದು ಕೂತಳು. ದೇಸಾಯಿ ಎಲ್ಲಾ ಕಡೆ ನೋಡಿದ. ಅವನಿಗೆ ಸಂಶಯ ಬಂದದ್ದು ಸ್ಪಷ್ಟವಿತ್ತು. ಮುಚ್ಚಿದ ಕಿಡಿಕಿ ಬಾಗಿಲುಗಳನ್ನು ಬಂದೂಕಿನಿಂದ ತಿವಿದು ತೆಗೆದ. ಎಲ್ಲವೂ ದಿನಾ ಇದ್ದ ಹಾಗೇ ಇದ್ದುದಕ್ಕೆ ತೃಪ್ತಿಯಾಯಿತೇನೋ, ಮುಖದ ಮೇಲೆ ಈಗ ಅದೇ ಅವನ ಹಳೇ ನಾಟಕದ ನಗೆ ತಂದು, ಹ ಹ್ಹ ಹ್ಹಾ ಎಂದೊಮ್ಮೆ ನಕ್ಕ. ಮತ್ತೇನು ಹೊಳೆಯಿತೋ, ಮುಖ ಕಿವಿಚಿ ಗಂಟಲ ನರ ಉಬ್ಬಿಸಿ ಕಣ್ಣುಗಳನ್ನು ವಿಕಾರವಾಗಿ ಅಗಲಿಸಿ “ಅದೆ ಅರೆ ಮರೆಯಾದೆಯಾ ಕುಲ ವೈರಿ?…” ಎಂದು ನಾಟಕೀಯವಾಗಿ ಹೇಳಿ, ವೀರಾವೇಶದಿಂದ ಬಂದೂಕನ್ನು ಗಟ್ಟಿಯಾಗಿ ತಬ್ಬಿಕೊಂಡು ಅಗಾ ಅಗಾ ಬೇಟೆ ಸಿಕ್ಕಿತೆಂಬಂತೆ ಗುರಿ ಹಿಡಿದು ಕಿಟಕಿಯ ತನಕ ಹೋಗಿ ಅದರ ಅಳಿಗೆಯನ್ನು ಹೊರ ತೂರಿ ಢಂ ಢಂ ಎಂದು ಎರಡು ಸಲ ಗುಂಡು ಹಾರಿಸಿದ. ಹುಚ್ಚಯ್ಯನ ಕಾಲು ಕೊಡಲಿಯೇಟು ಬಿದ್ದ ಮರದ ಟೊಂಗೆಯ ಹಾಗೆ ಅಲುಗಿದ್ದನ್ನು ಕಂಡೆ. ದೇಸಾಯಿಗೆ ಗೊತ್ತಾದೀತೆಂದು ಜೀವ ಬಾಯಿಗೆ ಬಂದಿತ್ತು. ಅಷ್ಟರಲ್ಲಿ ದೇಸಾಯಿ ತಿರುಗಿದ್ದ. ಅವನ ಮುಖದಲ್ಲೀಗ ವೈರಿಯನ್ನು ಸಂಹರಿಸಿದ ತೃಪ್ತಿ ಇತ್ತು. ಕಣ್ಣು ತೃಪ್ತವಾಗಿದ್ದವು. ಹ ಹ್ಹ ಹ್ಹಾ ಎಂದು ನಗುತ್ತ “ಶೀನಿಂಗೀ ಬಾಗಲಾ ಹಾಕಿಕೊ” ಎಂದು ಹೇಳಿ ದಡದಡ ಇಳಿದುಹೋದ.

ಓಡಿ ಹೋಗಿ ತೊಲೆಬಾಗಿಲ ಅಗಳಿ ಜಡಿದು ಬಂದೆ. ಇಬ್ಬರಿಗೂ ಈಗ ಉಸಿರು ಬಂತು. ಬಿಸಿ ಬೆವರಳಿದು ಮೈ ಒದ್ದೆಯಾಗಿತ್ತು. “ಶಿವನs ಮಾದೇವನs” ಎಂದು ಗೆಳತಿಯ ಪಕ್ಕದಲ್ಲಿ ಕೂತೆ. ಭಾವಗರ್ಭೀತ ಮೌನ ಆವರಿಸಿತ್ತು. ಅಥವಾ ನಮ್ಮ ಉಸಿರಾಟ ಮಾತ್ರ ಕೇಳಿಸುತ್ತಿತ್ತು. ಈತನಕದ ಕಸಿವಿಸಿ ಹಗುರಾಗಿ ಇಬ್ಬರ ಮುಖದಲ್ಲೂ ನಿರುಮ್ಮಳಿಕೆ ಮೂಡಿತು. ಹಾಯಾಗಿ ನಿಟ್ಟುಸಿರುಬಿಟ್ಟೆವು. ನಮ್ಮ ಮುಖ, ಭಾವ, ಬಟ್ಟೆ ಎಲ್ಲ ಅಸ್ತವ್ಯವಸ್ಥವಾಗಿದ್ದವು. ಕೋಣೆಯ ತುಂಬ ನೀರವರೆ, ನಿರಾಸೆ ತುಂಬಿ ಬಣಬಣಿಸುತ್ತಿತ್ತು. ಸಿಂಗಾರೆವ್ವ ಮೈಗಂಟಿದ ಕುಂಕುಮ, ಸೆಗಣಿಯ ಕೊಳೆ ಒರೆಸಿಕೊಳ್ಳುತ್ತಿದ್ದಳು. ಅವಳನ್ನು ತಬ್ಬಿಕೊಂಡು ಅಳೋಣವೆನ್ನಿಸಿತು. ಅವಳಿಗೂ ಹಾಗೆ ಅನ್ನಿಸಿತ್ತೇನೋ, ಹುಚ್ಚಯ್ಯನನ್ನು ಎಬ್ಬಿಸಿ ಮೊದಲು ಹೊರಗೆ ಕಳಿಸು ಎಂಬಂತೆ ಸನ್ನೆ ಮಾಡಿದಳು. ಹುಚ್ಚಯ್ಯನ ನೆನಪಾಗಿ ಹೌದಲ್ಲಾ ಎನ್ನಿಸಿ ಹೋಗಿ ಮೆಲ್ಲಗೆ ಗಾದೀ ತಿವಿದು “ಸ್ವಾಮೀ” ಎಂದೆ. ಏಳಲಿಲ್ಲ. “ಏ ಸ್ವಾಮೀ” ಎಂದೆ. ಏಳಲಿಲ್ಲ. “ಇವನೊಬ್ಬ ನಮಗ” ಎಂದು ಬೇಸರದಿಂದ ವಟಗುಟ್ಟುತ್ತ ಗಾದೆಯ ಸುರುಳಿ ಬಿಚ್ಚಿ “ಏ ಸ್ವಾಮೀ” ಎಂದು ತಿವಿದು ನೋಡಿದೆ; ಸ್ವಾಮಿ ಅಲ್ಲೆಲ್ಲಿದ್ದ? ಎದೆಯ ಮೇಲೆ ಕೈಜೋಡಿಸಿಕೊಂಡು ತೆರೆದಬಾಯಿ ತೆರೆದಂತೇ, ತೆರೆದ ಕಣ್ಣು ತೆರೆದಂತೇ ಹುಚ್ಚಯ್ಯ ಹರಾ ಎಂದಿದ್ದ! “ಎವ್ವಾ!” ಎಂದೊದರಿ ಗಟ್ಟಿಯಾಗಿ ಎದೆ ಹಿಡಿದುಕೊಂಡು ಹಿಂದೆ ಕುಸಿದೆ. ಸಿಂಗಾರೆವ್ವ ಅವಸರದಿಂದ ಬಂದು ಹೆಣ ನೋಡಿ “ಅಯ್ ನನ ಶಿವನ!” ಎನ್ನುತ್ತ ಬುಡ ಕಡಿದ ಮರದ ಹಾಗೆ ಖಬರು ಹಾರಿಬಿದ್ದಳು. ನಾನೇ ಅವಳ ಅಂಗಾಲು ತಿಕ್ಕಿ, ಕಿವಿಯಲ್ಲಿ ಗಾಳಿ ಊದಿ ಜೀವ ಬರಿಸಬೇಕಾಯ್ತು. ಇನ್ನು ನಾನೇ ಧೈರ್ಯ ತಗೋಬೇಕು.

ಈಗ ನೆನಪಾದರೆ ಅದನ್ನೆಲ್ಲ ಹ್ಯಾಗೆ ಮಾಡಿದನೋ ಎಂದು ನನಗೆ ಹೊಯ್ಕಾಗುತ್ತದೆ. ಧೈರ್ಯ ತಗೊಂಡೆನಪ್ಪ; ಮತ್ತೆ ಮೊದಲಿನಂತೆ ಹೆಣ ಮುಚ್ಚಿ ಕತ್ತಲಲ್ಲೇ ಓಡಿಹೋಗಿ ಹಿತ್ತಲ ಬಾಗಿಲು ದಾಟಿದೆ. ತುಸು ಓಡಿದರೆ ಸಾಕು, ಹೊಲೆಯರ ಗುಡಿಸಲು ಸಿಗುತ್ತವೆ. ಮೊದಲನೇ ಗುಡಿಸಲ ಕಟ್ಟೆಯ ಮೇಲೆ ಯಾವನೋ ಕಂಬಳಿ ಹೊದ್ದು ಕೂತಿದ್ದ. ಅಲುಗಿ “ದೊರೆಸಾನಿ ಕರೀತಾಳ ಬಾ” ಅಂದರೆ, ಆ ಹೊತ್ತಿನಲ್ಲಿ ಇಂಥಾ ಮಾತು ಕೇಳಿ ಅವನೇನೆಂದುಕೊಂಡನೋ, ಸುದೈವದಿಂದ ಯಾಕೆ, ಎತ್ತ, ಏನೊಂದೂ ಕೇಳಲಿಲ್ಲ. ಸುಮ್ಮನೆ ಬೆನ್ನುಹತ್ತಿ ಬಂದ.

ಒಂದೊಂದು ಬಾಗಿಲು ದಾಟುವಾಗಲೂ ಅವನು ಹೋಗುವುದೇ ಬೇಡವೇ ಎಂದು ಅನುಮಾನಿಸುತ್ತಿದ್ದ. “ಹೆದರಬ್ಯಾಡ, ಬಾ ಬಾ’ ಎಂದು ನಾನು ಧೈರ್ಯ ಹೇಳಿ ಕರೆಯುತ್ತಿದ್ದೆ. ಸಿಂಗಾರೆವ್ವ ಅಂತಸ್ತಿನ ಬಾಗಿಲಲ್ಲೇ ನಿಂತಿದ್ದಳು. ಅವಳ ಕೈ ಹಿಡಿದುಕೊಂಡು ಮೇಲೆ ಹತ್ತಿದೆ. ಅವಳ ಮೈ ಜ್ವರ ಬಂದು ಕಾದ ತಗಡಿನಂತೆ ಸುಡುತ್ತಿತ್ತು. ಮುಖ ಹೀರಿ ಬಾಡಿಹೋಗಿತ್ತು. ಅವನೂ ಮೇಲೆ ಬಂದು ಹೆದರಿ ಬಾಗಿಲಲ್ಲಿ ನಿಂತುಕೊಂಡ. ನಾನು ಒಳಕ್ಕೆ ಕರೆದುಕೊಂಡು ಹೋದೆ. ಅವನು ಬಿಟ್ಟು ಬಿಡದೆ ಅಗಲವಾಗಿ ತೆರೆದ ಕಣ್ಣಿನಿಂದ ಸಿಂಗಾರೆವ್ವನನ್ನೇ ನೋಡುತ್ತಿದ್ದ. ನಾನು “ಹೆದರಬ್ಯಾಡ, ದೊರೆಸಾನೀದೊಂದ ಕೆಲಸ ಮಾಡಬೇಕು. ನಿನಗ ಸಾಕಷ್ಟು ರೊಕ್ಕಾ ಕೊಡತೀನಿ” ಅಂದೆ. ಅವನು ಆಗಲೆಂಬಂತೆ ಕತ್ತು ಹಾಕಿದ. ಕೈಹಿಡಿದು ಕರೆದುಕೊಂಡು ಹೋಗಿ, ಹೊದಿಸಿದ ಗಾದಿ ತೆಗೆದು ಹೆಣ ತೋರಿಸಿ “ಇದನ್ನೊಯ್ದು ಯಾವುದಾದರೂ ಬಾಂವ್ಯಾಗ ಚೆಲ್ಲು, ಹೆದರಬ್ಯಾಡ, ನಿನಗೇನೂ ಆಗಧಾಂಗ ನೋಡಿಕೋತೀವಿ” ಅಂದೆ.

ಅವನು ಹೆಣ ನೋಡಿ ಸರಕ್ಕನೆ ಸಿಂಗಾರೆವ್ವನ ಕಡೆಗೆ ತಿರುಗಿ ಅವಳೆದೆಯ ಹುಳುಕನ್ನು ಬೆದಕುವಂತೆ ದುರುಗುಟ್ಟಿ ನೋಡಿದ. ಕೊಲೆಗಡುಕನೆದುರಿನ ದೀನ ಪ್ರಾಣಿಯ ಹಾಗೆ ಸಿಂಗಾರೆವ್ವ ತುಟಿ ಒಣಗಿಸಿಕೊಂಡು ಕಣ್ಣರಳಿಸಿಕೊಂಡು ನಿಂತಿದ್ದಳು. ಅವನ ಕಣ್ಣಿನಲ್ಲಿ ಭಯವಾಗಲಿ, ಆಶ್ವರ್ಯವಾಗಲಿ ಸುಳಿಯಲೇ ಇಲ್ಲ. ತಕ್ಷಣ ಸಂಶಯ ನಿವಾರಣೆಯಾದಂರೆ, ಇವಳನ್ನು ಗೆದ್ದನೆಂಬ ರಭಸದಿಂದ ಬೆರಳುಗುರು ಕಚ್ಚತೊಡಗಿದ. ಯೋಚಿಸುತ್ತಿದ್ದಾನೇನೋ ಎಂದೂ ಅಂದುಕೊಂಡೆ. ಅದಕ್ಕೆ ಅವಕಾಶವನ್ನೇ ಕೊಡದೆ ಇಬ್ಬರ ಕಡೆ ವಕ್ರನೋಟ ಬೀರಿ ತನಗೇನೇನೂ ಆಗದವನಂತೆ ಹೋಗಿ ಕುರ್ಚಿಯಲ್ಲಿ ಕೂತ! ನನಗೆ ವಿಚಿತ್ರವಾಯಿತು. ಸೊಕ್ಕಿನ ಹೊಲೆಯನೆಂದು ಗದರಬೇಕೆಂದೆ. ಅವನು ನಿಶ್ವಿಂತನಾಗಿ ದೋತರ ಗಂಟಿನಿಂದ ಬೀಡಿ ತೆಗೆದು ಹೊತ್ತಿಸಿದ. ನನಗೆ ಗುರುತು ಹತ್ತಿದಂತಾಯಿತು. “ನೀ ನಮ್ಮ ಚಾಕರಿ ಮನಶ್ಯಾ ಮರ್ಯಾ ಅಲ್ಲ?” ಎಂದೆ. ಸಿಂಗಾರೆವ್ವ ಹೌಹಾರಿ ತಿರುಗಿ ನೋಡಿದಳು. ಹೌದು, ಇವ ನಮ್ಮ ಮರ್ಯಾ! ಅದೇ ಮುಖ, ಈಗ ಹುಲುಸಾಗಿ ಕೆನ್ನೆ ಗದ್ದದ ತುಂಬ ಮುಳ್ಳು ಮುಳ್ಳು ಗಡ್ಡ ಬೆಳೆದಿವೆ. ದಷ್ಟಪುಷ್ಟಾಗಿ ಊರ ದೇವರ ಕೋಣೆಯ ಹಾಗೆ ಇಡೀ ಕುರ್ಚಿ ತುಂಬಿಕೊಂಡು ಕೂತಿದ್ದ. ಸಿಂಗಾರೆವ್ವ “ನಮ್ಮ ಮರ್ಯಾ!” ಎಂದು ಆನಂದದಿಂದ ಒದರಿದಳು. ನಾನು ಓಡಿ ಹೋಗಿ ‘ಮರ್ಯಾ, ಈಗಿಂದೀಗ ಈ ಹೆಣ ಎಲ್ಲಾದರೂ ಚೆಲ್ಲಿ ಬಾ, ಅಮ್ಯಾಲ ಎಲ್ಲಾ ಮಾತಾಡೋಣಂತ, ಮೊದಲೇಳು” ಎಂದು ಒಂದೇ ಉಸಿರಿನಲ್ಲಿ ಹೇಳಿದೆ. ನಮ್ಮ ಆನಂದ ಮತ್ತು ಸನ್ನಿವೇಶದ ತೀವ್ರತೆ ಅವನ ಚೇರಾಪಟ್ಟಿಯಲ್ಲೇನೂ ಬದಲಾವಣೆ ತರಲಿಲ್ಲ. ಬಾಯಿ ಮೂಗುಗಳಿಂದ ಭರ್ತಿ ಹೊಗೆ ಬಿಡುತ್ತ, ಉದ್ವೇಗವಿಲ್ಲದ ದನಿಯಲ್ಲಿ “ಹೆಣ ಚೆಲ್ಲಿ ಬಂದರ ನನಗೆ ಏನ ಕೊಡ್ತಿ?” ಎಂದು ಸಿಂಗಾರೆವ್ವನ ಕಡೆ ನೋಡಿದ.

“ನೀ ಕೇಳಿದಷ್ಟ ರೊಕ್ಕ ಕೊಡತೀವ ಬಾರೊ” – ಎಂದೆ. ಸನ್ನೆಮಾಡಿ ನಾನು ಸುಮ್ಮನಿರುವಂತೆ ಮಾಡಿ “ಅವಳs ಹೇಳಲಿ” ಅಂದ.

“ಸಾವಿರ ರೂಪಾಯಿ ಕೊಡೋಣ. ಮೊದಲ ಹೆಣ ಒಯ್ಯು” – ಎಂದಳು.

“ಆಗೋದಿಲ್ಲಂದರ…?”

“ಐದ ಸಾವಿರ…”

“ಇಷ್ಟ?”

“ಹತ್ತ ಸಾವಿರ ಕೊಡತೀನಿ ಒಯ್ಯು”

ಮರ್ಯಾ ಬುಸ್ ಅಂತ ಧೀಮಾಕಿನಿಂದ ಹೊಗೆಬಿಟ್ಟ. ಹಲ್ಲು ಕಾಣಿಸುವಂತೆ ನಕ್ಕು ಸಿಂಗಾರೆವ್ವನನ್ನು ಒಗರಿನಿಂದ ನೋಡಿ, “ನೀ ನಿನ್ನ ದೇಸಗತಿ ಕೊಟ್ಟರೂ ಬ್ಯಾಡ. ಈಗಿಂದೀಗ ನನ್ನ ಜೋಡಿ ಒಮ್ಮಿ ಮಲಗು, ಹೆಣ ಒಯ್ತೀನಿ. ಏನಂತಿ?”

ಸಿಂಗಾರೆವ್ವನ ಕಣ್ಣು ಕೆಂಪಗಾದವು: ಯಾರಿಗಾದರೂ ಕೇಳೀತೆಂದೂ ಚಿಂತಿಸದೆ, “ನನ್ನ ಮನಿ ಎಂಜಲಾ ಉಂಡ ಹೊಲೆಯಾ, ನನ್ನ ಜೋಡಿ ಮಲಗಂತ ಹೇಳೋ ಹಾಂಗಾದೇನೋ?” ಎಂದಳು.

“ಒದರಿ ತ್ರಾಸ ಮಾಡಿಕೊಬ್ಯಾಡ. ಬ್ಯಾಡಂದರ ಬಿಡು. ಇಕಾ ಹೊಂಟೆ. ಹುಚ್ಚಯ್ಯನ್ನ ದೊರೆಸಾನಿ ಕೊಂದಾಳ್ರೆಪೋ ಅಂತ ಹೇಳಿಕೊಂಡ ಹೋಗತೀನಷ್ಟ. ಮಂದಿ ಬೆಳಿಗ್ಗೆದ್ದ ಕಣ್ಣುಜ್ಜಿಕೊಂಡ ನೋಡತಾರ: ನಿನ್ನ ಕೈಯಾಗ ಬೇಡಿ ಹಾಕಿ ಪೊಲೀಸ ಪೋಜದಾರ ಎಳಕೊಂಡ ನಡದ್ದಾರ! ಬೇಕಾದರೆ ನಿಮ್ಮಪ್ಪಗ ನಾನs ಸುದ್ದಿ ಮುಟ್ಟೀಸ್ತೀನಿ. ಏ ಶೀನಿಂಗೀ, ಬರೋಬರಿ ಹೌಂದಲ್ಲ?”

ಎಂದು ಹೇಳಿ ಹೊರಟೇಬಿಟ್ಟ. ಒಂದು ಪೀಡೆಯನ್ನು ನಿವಾರಿಸಹೋಗಿ ಇನ್ನೊಂದನ್ನು ಕರೆತಂದಂತಾಯ್ತು. ಅವನೇನಾದರೂ ಹೊರಗೆ ಹೋದರೆ ಆಗೋ ಪರಿಣಾಮವೇನೆಂದು ನಮಗೀಗ ಗೊತ್ತಾಯ್ತು. ಕ್ಷಣ ತಪ್ಪಿದರೆ ಅನಾಹುತವಾದೀತೆಂದು ಹೋದವಳೇ ಅವನ ಕಾಲು ಹಿಡಿದು –

“ಮರೆಪ್ಪ, ಹಾಂಗ ಮಾಡಬ್ಯಾಡೋ; ನಿನಗ ಕದ್ದು ರೊಟ್ಟಿ ಹಾಕಿದ ಉಪಕಾರಕ್ಕಾದರೂ ನಮ್ಮನ್ನ ಬಚಾವ ಮಾಡೋ” ಎಂದೆ.

ಅವನು ನನ್ನನ್ನು ಹಿಡೆದೆತ್ತಲೂ ಇಲ್ಲ. ಕೈಯಿಂದ ಮುಟ್ಟಲೂ ಇಲ್ಲ. ಕೂತವಳು ಕೂತೇ ಇದ್ದೆ. ಸಿಂಗಾರೆವ್ವನಿಗೆ ಏನು ಹೊಳೆಯಿತೋ –

“ಶೀನಿಂಗೀ, ಯಾರ ಕಾಲ ಯಾಕ ಹಿಡೀತೀ ಬಿಡ. ಆದದ್ದಾಗಲೀ, ನಾನs ಹೋಗಿ ಬಾವೀ ಬೀಳತೀನಿ.”

– ಎಂದು ಹೊರಟಳು. ನಾನು ಅವಳೊಂದಿಗೆ ಸಾಯುವುದೇ ಸೈ ಎಂದು ಹೊರಟೆ. ಮರ್ಯಾ ಸಿಂಗಾರೆವ್ವನ ಸೆರಗು ಹಿಡಿದು,

“ಹೆಂಗೂ ಸಾಯಬೇಕಂತಿ, ನನ್ನ ಜೋಡಿ ಒಮ್ಮಿ ಮಲಗಿ ಸಾಯಲ್ಲ” ಅಂದ. ಅಂದವನೇ ಸೆರಗು ಜಗ್ಗಿ ಬರಸೆಳೆದು ಬಿಗಿದಪ್ಪಿ ಲಟಲಟ ಮುದ್ದಿಟ್ಟ. ಸಿಂಗಾರೆವ್ವನಿಗೆ ಪ್ರತಿಭಟಿಸುವ ಶಕ್ತಿಯೆ ಇರಲಿಲ್ಲ. ಅವನ ತೆಕ್ಕೆಯಲ್ಲಿ ಹಸಿ ಮಾಂಸದ ಮುದ್ದೆಯಂತೆ ಬಿದ್ದು “ಎವ್ವಾs” ಎಂದು ಕಿರಿಚಿ ಬೇಖಬರಾದಳು. ಹೊರಳಿ ನೋಡಿದರೆ ಗುದಮುರಿಗೆಗೆ ಗಡಂಚಿಯ ಮೇಲಿನ ಹುಚ್ಚಯ್ಯನ ಹೆಣ ಅವರ ಬಳಿಯೇ ಬಿತ್ತು!

ಮಾರಾಯನಿಗೆ ಕರುಣೆ ಬಂತೇನೊ, ಮರ್ಯಾ ಅವಳನ್ನು ಬಿಟ್ಟ. ಹೆಣವನ್ನು ಹಾಗೇ ಎತ್ತಿ ನಿಲ್ಲಿಸಿ, ಮೊಳಕಾಲಲ್ಲಿ ಮುರಿದು ಮುದ್ದೀ ಮಾಡಿ ಒಂದು ಕಂಬಳಿಯಲ್ಲಿ ಮೂಟೆ ಕಟ್ಟಿದ. ಪುಣ್ಯಾತ್ಮನ ಮುಖದಲ್ಲಿ ಮೊದಲಿನ ಬಿಗಿ ಇರಲಿಲ್ಲ. ರುಚಿಯುಂಡ ಹಲ್ಲು ಕಾಣುವ ಹಾಗೆ ಒಮ್ಮೆ ನಕ್ಕ. ಕಣ್ಣುಗಳಲ್ಲಿ ತೃಪ್ತಿಯ ಮಿಂಚಾಡುತ್ತಿತ್ತು. ಹೆಣವನ್ನು ಅಮಾತ ಬೆನ್ನಿಗೇರಿಸಿಕೊಂಡು ನಮ್ಮತ್ತ ನೋಡದೆ ಹಾಗೆ ಹೋದ. ಸಿಂಗಾರೆವ್ವ ನರಳುತ್ತ ಕಣ್ಣುಮುಚ್ಚಿ ಹಾಗೇ ಬಿದ್ದುಕೊಂಡಿದ್ದಳು.

ಅಮವಾಸ್ಯೆ ಮತ್ತು ಅರಮನೆಯ ಶಾಪ ಸಿಂಗಾರೆವ್ವನನ್ನು ಸರಿಯಾಗಿ ಶಿಕ್ಷಿಸಿದ್ದವು. ಯಾವುದಕ್ಕೂ ಒಂದು ತರ್ಕ ಇರುತ್ತದಲ್ಲವೇ ಇದು ತರ್ಕ ಮೀರಿದ ಕರ್ಮ, ಊಹಿಸಬಾರದ ದಿಕ್ಕುದಿಕ್ಕಿನ ಅನಿರೀಕ್ಷಿತಗಳೆಲ್ಲ ಒಂದು ಕಡೆ ಸೇರಿ ಒಟ್ಟಾಗಿ ಸಿಂಗಾರೆವ್ವನ ಜೀವದ ಮೇಲೆ ಬಿದ್ದು ಸಾಯಲೂ ಬಿಡದೆ ಘಾಸಿ ಮಾಡುತ್ತಿದ್ದವು. ಎಲ್ಲಿಯ ಗೌಡ, ಎಲ್ಲಿಯ ದೇಸಾಯಿ, ಎಲ್ಲಿಯ ಹುಚ್ಚಯ್ಯ, ಎಲ್ಲಿಯ ಶಾಪ, ಎಲ್ಲಿಯ ಮರ್ಯಾ – ನೆನೆದರೀಗಲೂ ಸಮಲೆಕ್ಕ ಸೇರುವುದೇ ಇಲ್ಲ. ಒಬ್ಬೊಬ್ಬರು ಹುಟ್ಟಿದ ಗಳಿಗೆ ಹಾಗಿರುತ್ತದಂತೆ. ಸಿಂಗಾರೆವ್ವ ಅಂಥಾ ಗಳಿಗೆಯಲ್ಲಿ ಹುಟ್ಟಿದ್ದಳು.

ಅವಳು ಆಗಾಗ ನರಳುತ್ತಿದ್ದಳು. “ಅಯ್ಯೋ ಅವ್ವಾ” ಎನ್ನುತ್ತಿದ್ದಳು. ಅವಳು ಅಳುತ್ತಿದ್ದಳೆಂದು ನನ್ನ ಭಾವನೆ. “ಎವ್ವಾ” ಅಂದರೆ ಇಲ್ಲಿ ಅವಳ ತಾಯಿ ಇದ್ದಳೆ? ನಾನಿಲ್ಲಿ ಇದ್ದೂ ಏನು ಮಾಡಬಲ್ಲೆ? ಹುಲಿಯ ಬಾಯಿಗಿಟ್ಟು ಸುಮ್ಮನಿದ್ದೆ. ಹೋಗಲು, ಅವಳ ತಾಯಿಯಾದರೂ ಗೌಡನಿಂದ ರಕ್ಷಿಸಿದಳೇ? ರಕ್ಷಣೆಗಾಗಿ ನಮ್ಮನ್ನು ಮೀರಿದ ತಾಯಿಯೊಬ್ಬಳನ್ನು ಅವಳು ಕರೆಯುವಂತಿತ್ತು. ಆ ತಾಯಿ ಎಲ್ಲಿದ್ದಳೋ! ಹೊರಗೆ ದಟ್ಟವಾದ ಕತ್ತಲಿತ್ತು. ಕತ್ತಲಿಗೆಲ್ಲಿಯ ಕರುಳು? ಎಷ್ಟನ್ನೆಲ್ಲಾ ತನ್ನಲ್ಲಿಟ್ಟುಕೊಂಡು ಮತ್ತೆ ತನ್ನಲ್ಲಿ ಏನೇನೂ ಇಲ್ಲವೆಂಬಂತೆ ಗುಂಭವಾಗಿತ್ತು.

ಕೆಳಗೆ ಹಿರಿಯ ದೊರೆಸಾನಿ ಹಾಡಿಕೊಳ್ಳುತ್ತಿದ್ದಳು:

ಚಿನ್ನದ ನಡಪಟ್ಟಿ ರನ್ನದ ನಡಪಟ್ಟಿ
ಚಿನ್ನರನ್ನದ ನಡಪಟ್ಟಿ ||ಸೋ||
ಚಿನ್ನರನ್ನದ ನಡಪಟ್ಟಿ ಕೊಡತೀನಿ
ಮೊಮ್ಮಗನ ಹಡೆದ ಸೊಸಿಮುದ್ದಿಗೆ ||ಸೋ||

* * *