“ಸಾಕ್ಷಾತ್ ಶಿವನೇ ಹಾಗೆ ಬಂದು ಹೇಳಿ ಹೋದನೆಂದು ಸಿಂಗಾರೆವ್ವ ಸಂಪೂರ್ಣ ನಂಬಿದಳು. ಹಾಗಂತ ನಾನು ಸುಮ್ಮನಿರಲಿಲ್ಲ. ಅವರಿವರೆದುರಿಗೆ ಅವನ ವರ್ಣನೆ ಮಾಡಿ ಅವ ಯಾರು, ಏನು, ಎತ್ತ ಎಲ್ಲಾ ತಿಳಿಯಲು ಹವಣಿಸುತ್ತಿದ್ದೆ. ನಂಜಿ ಹಲಿವುಳ್ದಳಲ್ಲ. ಸಿಂಗಾರೆವ್ವನಿಗೆ ಬಂಜಿ ಎಂಬ ಶಬುದ ಖಾಯಂ ಅಂಟಿಕೊಂಡುಬಿಟ್ಟಿತು. ಮೊದಮೊದಲು ಎಷ್ಟೊಂದು ಜನ ಹೆಂಗಸರು ಅರಮನೆಗೆ ಬರುತ್ತಿದ್ದವು, ಬರಬರುತ್ತಾ ಕಮ್ಮಿಯಾಗಿ ಕೊನೆಗೆ ಅವರು ಬರುವುದು ನಿಂತೇ ಹೋಯಿತು. ಮಕ್ಕಳನ್ನೆತ್ತಿಕೊಂಡು ಹೋಗುತ್ತಿದ್ದ ಅವ್ವಕ್ಕಗಳು ಅರಮನೆ ಮುಂದೆ ಹಾಯುವಾಗ ಬಂಜಿ ದೊರೆಸಾನಿಯ ಕೆಟ್ಟದೃಷ್ಟಿ ತಾಗೀತೆಂದು ಮಕ್ಕಳ ಮೇಲೆ ಸೀರೆ ಸೆರಗು ಹೊದಿಸಿ ಮರೆಮಾಚಿಕೊಂಡು ದಾಟಿಹೋಗುತ್ತಿದ್ದರು. ಇದೆಲ್ಲ ಸಿಂಗಾರೆವ್ವನಿಗೆ ತಿಳಿಯಲಿಲ್ಲವೆಂದಲ್ಲ. ಈ ಜನ ಮಕ್ಕಳ ಬಗ್ಗೆ ಎಷ್ಟೊಂದು ಸೂಕ್ಷ್ಮ ಮತ್ತು ಅದೇ ಕಾರಣಕ್ಕಾಗಿ ಅವರು ಎಷ್ಟೊಂದು ನಿರ್ದಯಿಗಳಾಗಬಲ್ಲರೆಂಬುಕ್ಕೂ ಇದು ಸಾಕ್ಷಿಯಾಯಿತು. ಆದರೆ ಅದೇನೋ ಅಂತಾರಲ್ಲ – ಮುಳುಗುವವನಿಗೆ ಹುಲ್ಲುಕಡ್ಡಿಯೇ ಆಧಾರ ಅಂತ. ಹಾಗೆ ನಾವಂತೂ ಆ ಜಂಗಮನ ಮಾತಿಗೆ ಜೋತುಬಿದ್ದು ಶಿವನೇ ಎನ್ನುತ್ತ ಕುಂತೆವು. ಆ ಜಂಗಮನ ಹೆಸರು ಹುಚ್ಚಯ್ಯ ಅಂತ…”

ಇಲ್ಲಿ ಹುಚ್ಚಯ್ಯನ ಬಗ್ಗೆ ನನ್ನ ಒಂದೆರಡು ಮಾತು ಸೇರಿಸುತ್ತೇನೆ. ಹುಚ್ಚಯ್ಯನನ್ನು ಚಿಕ್ಕಂದಿನಲ್ಲಿ ನಾನು ನೋಡಿದ್ದೆ. ಅವನೊಂದಿಗೆ ಆಟ ಆಡಿದ್ದೆ. ಅವನ ಊರುಕೇರಿಗಳ ವಿಚಾರ ನಮ್ಮ ಊರಿನವರಿಗೂ ತಿಳಿಯದು. ಊರು ಕೇಳಿದರೆ ಶಿವನೂರು ಅನ್ನುತ್ತಿದ್ದ. ತಂದೆ  ತಾಯಿ ಬಗ್ಗೆ ಕೇಳಿದರೆ ಶಿವಪಾರ್ವತಿಯರ ಹೆಸರು ಹೇಳುತ್ತಿದ್ದ. ಇಂಥವನಿಂದ ಏನು ಬಿಚ್ಚಲಾದೀತು? ಅವನಿಗೊಂದು ಮನೆಯಿಲ್ಲ, ಮಠವಿಲ್ಲ, ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದ. ಕರೆದವರ ಮನೆಗೆ ಊಟಕ್ಕೆ ಹೋದರೆ ಹೋದ, ಇಲ್ಲದಿದ್ದರಿಲ್ಲ. ಕೆಲವು ಸಲ ಯಾರದೋ ಮನೆಗೆ ನುಗ್ಗಿ “ಇಂದು ಶಿವನ ಊಟ ಇಲ್ಲೇ” – ಎಂದು ಹೇಳಿ ಕೂತುಬಿಡುತ್ತಿದ್ದ. ಅವನಿಗೆ ಇಲ್ಲವೆಂದು ಹೇಳುವಂಥ ಧೈರ್ಯ ಅಥವಾ ಮನಸ್ಸು ನಮ್ಮೂರಿನಲ್ಲಿ ಯಾರಿಗೂ ಇರಲಿಲ್ಲ. ಅಷ್ಟೇ ಅಲ್ಲ. ಅವ ಉಂಡು ಹೋದರೆ ಸ್ವಯಂ ಶಿವನೇ ಬಂದು ಉಂಡುಹೋದಂತೆ ಧನ್ಯರಾಗುತ್ತಿದ್ದರು.

ಮಕ್ಕಳೆಂದರೆ ಅವನಿಗೆ ಪ್ರಾಣ. ಒಮ್ಮೊಮ್ಮೆ ಎಳೇ ಮಕ್ಕಳ ಹಾಗೆ ಬೆವರು ಸೀಪಿಕೊಂಡು ಮಣ್ಣಾಟ ಆಡುತ್ತಿದ್ದ. ನಾವೇನಾದರೂ ಚಿಣ್ಣಿದಾಂಡ, ಹುತುತು, ಸರಮಂಚ ಆಡುತ್ತಿದ್ದರೆ ಬಂದು ಸೇರಿಕೊಳ್ಳುತ್ತಿದ್ದ. ಆಟ ತಪ್ಪಿದರೆ ಎದುರಾಳಿಯ ಅಂಗಿ ಹಿಡಿದು ಮಕ್ಕಳಂತೇ ಬೈದಾಡಿ ಜಗಳವಾಡುತ್ತಿದ್ದ. ಗೆದ್ದರೆ ಕುಣಿದಾಡುತ್ತಿದ್ದ. ಸೋತರೆ ಬಾಡುತ್ತಿದ್ದ. ಒಮ್ಮೆ ಅವನೇ ಆಟ ತಪ್ಪಿ, ತಪ್ಪನ್ನೇ ಸಮರ್ಥಿಸಿಕೊಂಡಾಗ ಈ ನನ್ನ ಮಿತ್ರ ಶಿರಸೈಲ ಮತ್ತವನ ಹುಡುಗರು ಅವನನ್ನು ಮುತ್ತಿ ಥಳಿಸಿದ್ದರು. ಹುಚ್ಚಯ್ಯ ಅಳುತ್ತ ಶಿವನಿಗೆ ಹೇಳುವುದಾಗಿ ಕುಮುದವ್ವನ ಗುಡಿಯುತ್ತ ಹೋಗಿದ್ದ. ಆದರೆ ಹುಣ್ಣಿಮೆ ಅಮಾವಾಸ್ಯೆ ಬಂತೆಂದರೆ ಅದರ ಹಿಂದುಮುಂದಿನ ನಾಕೈದು ದಿನ ಮಾಯವಾಗುತ್ತಿದ್ದ. ಆಗ ಅವ ಎಲ್ಲಿ ಹೋಗುತ್ತಿದ್ದ, ಏನು ಮಾಡುತ್ತಿದ್ದ ಎಂಬುದ್ಯಾರಿಗೂ ತಿಳಿಯದು. ಆದರೆ ಆತನ ಬಗ್ಗೆ ಜನರಲ್ಲಿಯ ಭಯಭಕ್ತಿ ಮಾತ್ರ ಅಪಾರ. ಅದಕ್ಕೆ ಮುಖ್ಯ ಕಾರಣವೆಂದರೆ ಅವನ ನಾಲಗೆ. ಆ ಭಾಗದಲ್ಲಿ ಪ್ರಚಾರದಲ್ಲಿದ್ದ ಅವನ ಪವಾಡಗಳೂ ಹಾಗಿದ್ದವು. ಒಮ್ಮೆ ಕುಮುದವ್ವನ ಜಾತ್ರೆಯಲ್ಲಿ ಜನ ಊಟಕ್ಕೆ ಕುಳಿತಿದ್ದರು. ಜೋರಿನಿಂದ ಮಳೆ ಬಂತು. ಜನ ಬುದಿಂಗನೆ ಏಳಬೇಕೆನ್ನುವಾಗ ಇವನು “ಏಳಬ್ಯಾಡ್ರಿ, ಪಂಕ್ತಿ ಹಂಗಾs ಸಾಗಲಿ” ಎಂದು ಹೇಳಿ ಎರಡೂ ಕೂ ಎತ್ತಿದನಂತೆ. ಜನ ಊಟಕ್ಕೆ ಕೂತಲ್ಲಿ ಮಾತ್ರ ಮಳೆ ಇರಲಿಲ್ಲ. ಅದಷ್ಟು ಸ್ಥಳ ಬಿಟ್ಟು ಉಳಿದೆಲ್ಲಾ ಕಡೆ ಧೋ ಧೋ ಮಳೆ ಸುರಿದು ನೀರಾಡಿದಂತೆ!

ಇಷ್ಟಿದ್ದೂ ಆತ ಹೆಚ್ಚು ಖ್ಯಾತನಾದದ್ದು ತನ್ನ ಕಚ್ಚೆಹರಕುತನದಿಂದ. ಮತ್ತು ಅವನ ಈ ಬಗೆಯ ಪವಾಡಗಳೇ ಹೆಚ್ಚು ಜನಪ್ರಿಯವಾಗಿದ್ದವು. ಒಂದೆರಡು ಸ್ಯಾಂಪಲ್ ನೋಡಿರಿ: ಒಮ್ಮೆ ನಮ್ಮೂರಿನ ಠಕ್ಕಪ್ಪ ಗಾಡಿ ಹೂಡಿಕೊಂಡು ಗೋಕಾವಿಗೆ ಹೊರಟ್ಟಿದ್ದ. ಹುಚ್ಚಯ್ಯ ತಾನೂ ಬರುವುದಾಗಿ ಹೇಳಿ ಗಾಡಿ ಹತ್ತಿಕೂತ. ಅದೇ ದಾರಿಯಲ್ಲಿ ಬುಟ್ಟಿಹೊತ್ತು ಕೊಣ್ಣೂರಿಗೆ ಹೊರಟಿದ್ದ ಹೆಂಗಸೊಬ್ಬಳು ಸಿಕ್ಕಳು. “ದಣಿವಾಗೇತಿ ನನ್ನಷ್ಟ ಗಾಡಿ ಹತ್ತಿಸಿಕೊಳ್ರೆಪ್ಪ” ಎಂದು ಕೇಳಿಕೊಂಡು ಅವಳೂ ಹತ್ತಿದಳು. ಗಾಡಿ ತುಸು ಮುಂದೆ ಸಾಗುವಷ್ಟರಲ್ಲೇ ಹುಚ್ಚಯ್ಯ ಆ ಹೆಂಗಸನ್ನು ಮರುಳು ಮಾಡಿದ್ದ. ಗಾಡಿ ಹೊಡೆಯುತ್ತಿದ್ದ ಠಕ್ಕಪ್ಪನಿಗೆ ಹುಚ್ಚಯ್ಯ “ಮಗನs ಠಕ್ಕ್ಯಾ ಹಿಂದಿರಿಗಿ ನೋಡಬ್ಯಾಡ; ನೋಡಿದರೆ ನಿನ್ನ ಕಣ್ಣ ಹೋಗ್ತಾವಲೇ” – ಅಂದ. ಠಕ್ಕಪ್ಪನಿಗೆ ಕುತೂಹಲ ತಡೆದುಕೊಳ್ಳಲಾಗಲಿಲ್ಲ. ಮೆಲ್ಲಗೆ ಎಡಗಣ್ಣಿಂದ ಓರೆ ನೋಡಿದ. ಆದರೆ ನೋಡನೋಡುತ್ತಿದ್ದಂತೆ ಅವನ ಎಡಗಣ್ಣು ಕುರುಡಾಗಿಬಿಟ್ಟಿತು. ಈ ಪವಾಡ ನನಗೂ ಖಾತ್ರಿಯಾಗಿದೆ. ಯಾಕೆಂದರೆ ಈಗಲೂ ಠಕ್ಕಪ್ಪ ಜೀವಂತವಾಗಿದ್ದಾನೆ, ಎಡಗಣ್ಣು ಕುರುಡಾಗಿದೆ.

ಹುಚ್ಚಯ್ಯನೊಮ್ಮೆ ಸಾವಳಿಗಿ ಜಾತ್ರೆಗೆ ಹೋಗಿದ್ದಾಗ ಯಾವಳೋ ಒಬ್ಬ ಹೆಂಗಸಿನ ಮೇಲೆ ಆಸೆಯಾಯ್ತು. ನೆರೆದ ಭಾರಿ ಜಾತ್ರೆಯಲ್ಲಿಯೇ ಕೂಡಿಬಿಟ್ಟ. ತಕ್ಷಣ ನಮ್ಮೂರ ನಾಕೈದು ಜನ ಅವನ ಭಕ್ತರು ನೋಡಿ, ಓಡಿಹೋಗಿ ದಿಕ್ಕಿಗೊಬ್ಬೊಬ್ಬರು ಸುತ್ತುಗಟ್ಟಿ ನಿಂತು ಉಟ್ಟ ಧೋತ್ರಗಳನ್ನು ಕಳಚಿ ಅವರ ಸುತ್ತ ಪರದೆಯಂತೆ ಹಿಡಿದು ಮರೆಮಾಡಿದರಂತೆ!

ಇನ್ನೊಂದು ಪವಾಡ ಕೇಳಿರಿ: ಒಮ್ಮೆ ಒಬ್ಬ ಗೌಡನ ಮನೆಗೆ ಹುಚ್ಚಯ್ಯ ಬಿನ್ನಾಯಕ್ಕೆ ಹೋಗಿದ್ದ. ಊಟ ಬಡಿಸುತ್ತಿದ್ದ ಅವನ ಹೆಂಡತಿಯನ್ನು ನೋಡಿ ಹುಚ್ಚಯ್ಯ “ಗೌಡಾ, ಈಕೀನ ನನಗೆ ಕೊಡೋ” ಎಂದನಂತೆ. ಗೌಡ ಕೊಟ್ಟ. ಕೊಟ್ಟು “ನನಗೇನ ಕೊಡ್ತಿಯಪ್ಪ” – ಅಂದನಂತೆ. ಹುಚ್ಚಯ್ಯ “ತಗೋ” ಎಂದು ತನ್ನ ಕಾಲ್ಮರಿಯನ್ನೇ ಕೊಟ್ಟನಂತೆ. ಆ ಕಾಲ್ಮರಿಯನ್ನು ಈಗಲೂ ಆ ಮನೆತನದವರು ದೇವರ ಮನೆಯಲ್ಲಿಟ್ಟು ಪೂಜಿಸುತ್ತಿದ್ದಾರೆ! ನಮ್ಮೂರವರನ್ನು ಕೇಳಿದರೆ ಇಂಥ ಸಾವಿರ ಪವಾಡ ಹೇಳಿಯಾರು. ಇವನ್ನು ಪವಾಡವೆಂದು ಒಪ್ಪಿಕೊಂಡು ಕಥೆಮಾಡಿ ಹೇಳುವ ಈ ಜನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ನಮ್ಮ ಊರಿನಲ್ಲಿ ಆತ ಬಯಸಿಸ್ಸನ್ನು ಎರಡು ಮಾತಿಲ್ಲದೆ ಕೊಡುವ ಭಕ್ತರಿದ್ದಾರೆ. ಸುಳ್ಳಲ್ಲ, ಅವನು ಉಗಿದ ಉಗುಳನ್ನೂ ನುಂಗಿದ ಭಕ್ತರಿದ್ದಾರೆ. ಬಹುಶಃ ಎದುರಾಡಿದರೆ ಅವನು ನೊಂಡು ಏನಾದರೂ ಅಂದುಗಿಂದಾನೆಂದು, ಹಾಗೇನಾದರೂ ಅಂದರೆ ಅದು ಹುಸಿ ಹೋಗುವುದಿಲ್ಲವೆಂದು ಹೆದರಿಕೊಂಡು ಜನ ಅವನನ್ನು ಒಪ್ಪಿರಬೇಕು. ನನ್ನ ಇತ್ತೀಚಿನ ಅಂದಾಜಿನ ಪ್ರಕಾರ ಅವನೊಬ್ಬ ವಿಷಯಾಸಕ್ತನಾದ ತಾಂತ್ರಿಕ ಸಿದ್ಧ. ಕೆಲವು ವಿಲಕ್ಷಣ ಶಕ್ತಿಗಳು ಅವನಲ್ಲಿದ್ದದ್ದು ನಿಜ. ಮತ್ತು ಆ ಶಕ್ತಿಗಳ ದುಡಿಮೆಯಿಂದ ಅವನು ಚಕ್ರಬಡ್ಡಿ ಸಮೇತ ಸುಖ ಪಡೆಯುತ್ತಿದ್ದ. ಮುಖದ ವರ್ಚಸ್ಸಿನಿಂದಾಗಿ ಅವನು ಸಾಕ್ಷಾತ್ ಶಿವನೆಂದು ಸಣ್ಣ ದೊರೆಸಾನಿ ನಂಬಿದ್ದರೆ ಅದು ಹೆಚ್ಚಲ್ಲ. ಆದರೆ ಹೋಗಿ ಹೋಗಿ ಇಂಥವನ ಪ್ರಭಾವಕ್ಕೆ ಒಳಗಾದಳಲ್ಲ – ಎಂದು ನನಗೂ ಹಳಹಳಿಯಾಯಿತೆಂದು ಮಾತ್ರ ಹೇಳಬಲ್ಲೆ. ಈಗ ಶೀನಿಂಗವ್ವನ ಮುಂದಿನ ಕಥೆ ಕೇಳೋಣ:

“ಹುಚ್ಚಯ್ಯನ ಹೆಸರನ್ನು ಈ ಹಿಂದೆ ನಾವು ಕೇಳಿದ್ದೆವಾದರೂ ಅಷ್ಟು ಗಮನಕೊಟ್ಟಿರಲಿಲ್ಲ. ಊರ ಭಕ್ತರೊಂದಿಗೆ ಅಷ್ಟೊಂದು ವಹಿವಾಟಿದ್ದವನು ಅರಮನೆಗ್ಯಾಕೆ ಈತನಕ ಬಂದಿರಲಿಲ್ಲವೆನ್ನುವುದೂ ಸೋಜಿಗವೇ. ಈಗ ಕರೆಯದೆಯೇ ಅರಮನೆಗೆ ಬಂದಿದ್ದ. ಅವನ ನಾಲಗೆ ಹುಸಿ ಹೋಗುವುದಿಲ್ಲವೆಂದು ಅನೇಕರನ್ನು ಕೇಳಿ ಖಾತ್ರಿ ಮಾಡಿಕೊಂಡಿದ್ದೆ. ಅವನ ಬಗ್ಗೆ ಹೇಳುವ ಜನ ಮತ್ತೆ ಮತ್ತೆ ಆ ಮಾತನ್ನು ಹೇಳುವ ಹಾಗೆ ಮಾಡುತ್ತಿದ್ದೆ.

ಈ ಮಧ್ಯೆ ಸಿಂಗಾರೆವ್ವ ದೇಸಾಯಿಯ ಮನ ಒಲಿಸಿಕೊಳ್ಳುವ ಖಟಪಟಿ ಮಾಡುತ್ತಿದ್ದಳು. ಅವನ ಬಯಲಾಟದ ಖಯಾಲಿ ತಪ್ಪಿಸಿ ಮನೆಯಲ್ಲಿ ಬಿದ್ದುಕೊಳ್ಳುವ ಹಾಗೆ ಮಾಡಬೇಕಿತ್ತು. ಅದಕ್ಕಾಗಿ ತಾನೇ ಮುಂದಾಗಿ ಸಲಿಗೆ ಬೆಳೆಸಿಕೊಂಡಳು. ಊಟಕ್ಕೆ ನೀಡುತ್ತಿದ್ದಳು. ಜಳಕ ಮಾಡಿಸುತ್ತಿದ್ದಳು. ಕಾಲು ತಿಕ್ಕುತ್ತಿದ್ದಳು. ಒಮ್ಮೆ “ನಿಮಗ ನಾ ಹೆಚ್ಚೋ ಬಯಲಾಟ ಹೆಚ್ಚೋ?” ಎಂದು ಕೇಳಿಯೂ ಬಿಟ್ಟಿದ್ದಳು. ಆದರೆ ದೇಸಾಯಿ, “ಹಾ ಪ್ರಿಯೆ, ಪ್ರಶಾಂತ ಹೃದಯೆ” ಅಂತೇನೋ ನಾಟಕದ ಪ್ರಾಸ ಹೇಳಿ ತಪ್ಪಿಸಿಕೊಂಡಿದ್ದ.

ಅಂತೂ ಹುಚ್ಚಯ್ಯನ ವಾಕ್ಯೆ ಆಗಿ ಎಂಟು ತಿಂಗಳಾದರೂ ದೇಸಾಯಿ ಸಿಂಗಾರೆವ್ವನನ್ನು ಮುಟ್ಟುವ ಗೋಜಿಗೆ ಹೋಗಲೇ ಇಲ್ಲ. ಈ ಅವಧಿಯಲ್ಲಿ ಹುಚ್ಚಯ್ಯನು ಅರಮನೆ ಕಡೆ ಸುಳಿದಿರಲಿಲ್ಲ.

ಅವನೆಲ್ಲೋ ಯಾತ್ರೆ ಹೋಗಿದ್ದವನು ಬಂದಿದ್ದಾನೆಂದು ಸುದ್ದಿ ಬಂತು. ಆದರೆ ಅವನಿದ್ದದ್ದು ಕುಮುದವ್ವನ ಗುಡಿ ಕಡೆಯ ಖಾಲಿ ಗುಡಿಸಲಿನಲ್ಲಿ. ಈ ಊರಿನ ಹೆಂಗಸರು ಕುಮುದವ್ವನ ಹೆಸರು ಹೇಳುವರೇ ಹೊರತು ಅವಳ ಗುಡಿಯ ಕಡೆಗೆ ಕಾಲಿಡುವುದಿಲ್ಲ. ಅಷ್ಟೇ ಅಲ್ಲ, ಮೈಲಿಗೆ ಮುಡಿಚಟ್ಟಾದಾಗ ಆ ಕಡೆ ಮುಖ ಕೂಡ ಮಾಡುವುದಿಲ್ಲ. ನಾನು ಪರವೂರಿನಲ್ಲಿ ಹುಟ್ಟು ಬೆಳೆದವಳಾದುದರಿಂದ ಅಂಥ ಭಯಗಳೇನೂ ಇರಲಿಲ್ಲ. ಅಲ್ಲದೆ ಆ ಗುಡಿಸಲಿಗೂ ಕುಮುದವ್ವನ ಗುಡಿಗೂ ತುಂಬಾ ದೂರ. ಸಿಂಗಾರೆವ್ವನಿಗೂ ಹೇಳದೆ ಇಂದು ಹುಚ್ಚಯ್ಯನನ್ನು ನೋಡೇ ಬಿಡಬೇಕೆಂದು ಹೊರಟೆ. ಊರ ಸೀಮೆ ದಾಟಿರಬೇಕು, ಸುದೈವಕ್ಕೆ ಅವನೇ ಈ ಕಡೆ ಬರುತ್ತಿದ್ದ. ಅಡ್ಡಬಿದ್ದು,

“ಸ್ವಾಮಿ, ಗುರುತ ಸಿಕ್ಕಿತ?” – ಅಂದೆ.

“ನೀ ಅರಮನಿ ಶೀನಿಂಗವ್ವಲ್ಲಾ?” – ಅಂದ. ಅವನು ಗುರುತಿಸಿದ್ದಕ್ಕೆ ಸಂತೋಷಗೊಂಡು “ಹೌಂದ್ರಿಯಪಾ” – ಅಂದೆ.

“ಹೆಂಗೇನ್ರಿ ಮಕ್ಕಳಾಗತಾವಂತ ನಿಮ್ಮ ವಾಕ್ಯೆ ಆಗಿ ಎಂಟು ತಿಂಗಳಾಯ್ತು; ಇನ್ನs ಏನು ಆಗಲಿಲ್ಲ.”

– ಅಂದೆ. ಎದುರೆದುರಿಗೇ ನಿಮ್ಮ ನುಡಿ ಹುಸಿಯಾಯಿತೆಂದು ಹೇಳಿದ್ದು ಸರಿಯಾಗಲಿಲ್ಲವೆಂದು ಅನ್ನಿಸಿತು. ಯಾರು ಬಲ್ಲರು, ಅವ ಮೊದಲೇ ಹುಚ್ಚಯ್ಯ, ಇನ್ನೇನಾದರೂ ಆಡಿಬಿಟ್ಟರೆ ಒಂದು ಮಾಡಹೋಗಿ ಇನ್ನೊಂದಾಗಬಾರದಲ್ಲ ಎಂದು ಹೆದರಿದೆ. ಸದ್ಯ ಅಂಥದೇನೂ ನಡೆಯಲಿಲ್ಲ. ನನ್ನ ಮಾತು ಕೇಳಿ ಹುಚ್ಚಯ್ಯ ಹುಬ್ಬು ಗಂಟಿಕ್ಕಿಕೊಂಡು ಪಕ್ಕದ ಬಾಂದದ ಮೇಲೆ ಕೂತು. ನನ್ನ ಕಡೆಗೊಮ್ಮಿ ನೋಡಿ ಕಣ್ಣು ಮುಚ್ಚಿದ. ಬಹುಶಃ ಶಿವನೊಂದಿಗೆ ಮಾತಾಡುತ್ತಿದ್ದಾನೆ ಎಂದುಕೊಂಡೆ. ಶಿವನಿಗೆ ನಮ್ಮಾಸೆ ಮುಟ್ಟಲೆಂದು ನಾನೂ ಕೈ ಮುಗಿದು ಕೂತೆ. ಕಣ್ಣು ತೆರೆದ. ಶಿವನಾಜ್ಞೆ ಏನಾಯಿತೋ ಎಂದು ನನ್ನೆದೆ ಹಾರುತ್ತಿತ್ತು.

“ಹಗಲಲ್ಲ, ರಾತ್ರಿ ಅಲ್ಲ, ಮೂರು ಸಂಜಿಕ ಶಿವ ಅರಮನೀಗಿ, ಬರತಾನ, ನೀ ಮುಂದ ನಡಿ” ಅಂದ. ಎದೆ ಹಗುರಾಗಿ ಮನೆಕಡೆ ಓಡಿಬಂದೆ.

ಹುಚ್ಚಯ್ಯನಿಗೆ ಭೇಟಿಯಾದದ್ದನ್ನಾಗಲಿ, ಅವನು ಅರಮನೆಗೆ ಬರುವುದನ್ನಾಗಲಿ ಸಿಂಗಾರೆವ್ವನಿಗೆ ಹೇಳಲೇ ಇಲ್ಲ. ಉತ್ಸಾಹದಿಂದ ನಾನು ಕಳೆಕಳೆಯಾಗಿರುವುದನ್ನು ನೋಡಿ “ಅದೇನs ಅಷ್ಟೊಂದು ಉಮೇದಿ ಉಕ್ಕತೈತಿ?” ಎಂದು ಕೇಳಿಯೂ ಬಿಟ್ಟಳು. ನನ್ನ ಒಡತಿ ಯಾ ಗೆಳತಿಗೆ ಉಪಯುಕ್ತವಾದೊಂದು ಕೆಲಸವನ್ನ, ಅವಳಿಂದ ಹೇಳಿಸಿಕೊಳ್ಳದೆಯೇ ಮಾಡಿದ್ದು ಗೊತ್ತಾದಾಗ ಅವಳ ಬೆರಗಿನ ಮತ್ತು ಮೆಚ್ಚುಗೆಯ ಮುಖ ನೋಡಬೇಕೆಂದು ನನ್ನ ತವಕ. ಸಂಜೆಯಾಗುತ್ತಲೂ ಅರಮನೆಯ ತೊಲೆಬಾಗಿಲು ತೆರೆದಿಟ್ಟು ಅಲ್ಲೇ ಕಣ್ಣುನೆಟ್ಟು ಕೂತೆ. ಹೊತ್ತು ಮುಳುಗುತ್ತಿದ್ದರೂ ಆತ ಬರಲಿಲ್ಲ. ಅಷ್ಟರಲ್ಲಿ ಸಿಂಗಾರೆವ್ವ ಓಡಿಬಂದು “ಏ ಶೀನಿಂಗೀ, ಹಿತ್ತಲಾಗ ಹುಚ್ಚಯ್ಯ ಬಂದಾನ ಬಾರಗs” – ಎಂದು ಕರೆದಳು. ಇಬ್ಬರೂ ಅತ್ತ ಓಡಿದೆವು.

ಹುಚ್ಚಯ್ಯ ಹಿತ್ತಲ ಬಣಿವೆಯ ಬಳಿ ಕೂತಿದ್ದ. ಇಬ್ಬರೂ ಹೋಗಿ ನಮಸ್ಕಾರ ಮಾಡಿದೆವು. ಸಿಂಗಾರೆವ್ವನನ್ನು ಕುರಿತು “ಬಾ ತಾಯಿ” – ಅಂದ. “ಕೈ ತಾ” ಅಂದ. ಅವಳು ಬಲಗೈ ನೀಡಿದಾಗ ಅಂಗೈ ಗೆರೆ ಎಣಿಕೆ ಹಾಕಿ ನನ್ನ ಕಡೆ ಓರೆನೋಟ ಬೀರಿದ. ಅವನ ಚಂಚಲ ಕಣ್ಣುಗಳಲ್ಲಿ ಬೆಳಕಾಡುತ್ತಿತ್ತು. ಆ ಕರಿಮುಖದಲ್ಲೂ ಬಿಸಿನೆತ್ತರಾಡಿ ಕೆಂಪಗಾಗಿತ್ತು. ಅವಳ ಮುಖ ನೋಡುವುದಕ್ಕೆ ಅವನು ಹೆದರುತ್ತಿದ್ದನೋ ಏನೋ, ಅವಳ ಕೈ ಹಿಡಿದ. ಅವನ ಕೈ ನಡುಗುತ್ತಿದ್ದುದು ನನ್ನ ಗಮನಕ್ಕೆ ಬಂತು.

“ಫಲ ಉಂಟು ತಾಯಿ, ಆದರೆ ಅಮಾಸೀ ದಿನ ಶಿವನಿಗೆ ಒಂದು ಪೂಜಿ ಆಗಬೇಕು. ಈ ಪೂಜಿಗಿ ನೀ ಅಲ್ಲದs ಇನ್ನ್ಯಾರೂ ಇರಬಾರದು”

– ಈ ಮಾತು ಹೇಳುವಾಗ ಅವನ ಮುಖ ಬಿಳಿಚಿಕೊಂಡಿತು. ಎರಡು ಮೂರು ಸಲ ಉಗುಳು ನುಂಗಿದ. ನಾಲಗೆಯಿಂದ ತುಟಿ ಸವರಿಕೊಂಡು ಒದ್ದೆ ಮಾಡಿಕೊಂಡ. ಆದರೆ ಸಿಂಗಾರೆವ್ವ ಒಬ್ಬಳೇ ಇರಬೇಕೆನ್ನುವ ಮಾತನ್ನು ನಾನು ಒಪ್ಪಲಿಲ್ಲ. ಅವಳಂತೂ ಹೆದರಿ ಕೊಟ್ಟ ಕೈ ಹಿಂತೆಗೆದುಕೊಂಡು ಕಣ್ಣರಳಿಸಿ ಆದಾಗದೆಂದು ಹೇಳೆಂಬಂತೆ ನನ್ನ ಕಡೆ ನೋಡಿದಳು.

“ಅಧೆಂಗರಿ ಯಪಾ, ದೊರೆಸಾನಿ ಒಬ್ಬಾಕೀನs ಹೆಂಗಿದ್ದಾಳು? ಗುರು ಹಿರಿಯರಿದ್ದ ಮನಿ ಅಂದ ಮ್ಯಾಲ ಅವರ‍್ನ ಬಿಟ್ಟ ನಮಗೆ ನಾವs ಪೂಜೀ ಮಾಡಾಕಾದೀತ?” – ಎಂದೆ..

ಅವನು ಬೇರೆ ರೀತಿಯ ವ್ಯವಸ್ಥೆಗೆ ಒಪ್ಪಲೇ ಇಲ್ಲ. ಗಂಡ ಹೆಂಡತಿ ಇಬ್ಬರೂ ಪೂಜಿ ಮಾಡಲಿ – ಅಂದೆ. ಅದಕ್ಕೂ ಒಪ್ಪಲಿಲ್ಲ. ಕೊನೆಗೆ “ಇಚ್ಛಾ ಇಲ್ಲದಿದ್ದರ ಬಿಡರಿ” – ಅಂದ. ಇನ್ನೆಲ್ಲಿ ಅವನು ಎದ್ದುಹೋಗುತ್ತಾನೋ ಎಂದು ಆತಂಕವಾಗಿ.

“ಸಿಂಗಾರೆವ್ವನ ಜೋಡಿ ನಾ ಇದ್ದರ ಆದೀತೇನ್ರಿ?” – ಅಂದೆ, “ಶಿವನಿಚ್ಛೆ” – ಅಂದ. ಪೂಜೆ ಅರಮನೆಯಲ್ಲೇ, ಸರಿರಾತ್ರಿ ಸುರುವಾಗಬೇಕೆಂದ. ಪೂಜಾಸಾಮಾಗ್ರಿಯ ಪಟ್ಟಿ ಹೇಳಿದ. ಆ ದಿನ ರಾತ್ರಿ ಸುಮಾರಿಗೆ ಹಿತ್ತಲ ಬಾಗಿಲಿಂದ ಬರುವುದಾಗಿ ಹೇಳಿ ಅದೇ ಬಾಗಿಲಿನಿಂದ ಮಾಯವಾದ.

ನಾವು ಭಯ ಮತ್ತು ಸಡಗರ ಎರಡನ್ನೂ ಅನುಭವಿಸುತ್ತಿದ್ದೆವು. ಭಯ, ಇದು ಕಳ್ಳ ವ್ಯವಹಾರವಾಗಿದ್ದಕ್ಕೆ; ಸಡಗರ, ಹ್ಯಾಗೂ ಮಕ್ಕಳಾಗುತ್ತವಲ್ಲಾ – ಎಂಬುದಕ್ಕೆ. ಆದರೆ ಇದಕ್ಕೆ ಅಡಚಣೆಗಳಿದ್ದವು. ಸಿಂಗಾರೆವ್ವ ಎಷ್ಟೆಂದರೂ ಹೊಸಮನೆಗಿತ್ತಿ. ಹಿರಿಯರನ್ನು ನಿರ್ಲಕ್ಷಿಸಿ, ಇಂಥ ಪೂಜೆ ಮಾಡಿಸುವುದು ಸೊಸೆಯೊಬ್ಬಳಿಗೆ ಶೋಭಿಸುವ ನಡೆಯಲ್ಲ. ಮನೆಯಲ್ಲಿ ಗಂಡನಿದ್ದಾನೆ. ಅವನೇ ಮುಂದೆ ನಿಂತು ಮಾಡಿಸಿದ್ದರೆ ಅದು ಬೇರೆ ಮಾತು. ಗಂಡಸರ ಹೆದರಿಕೆಯಲ್ಲೇ ಬೆಳೆದ ನಮಗೆ ದೇಸಾಯಿಗೆ ತಿಳಿಸದೆ ಪೂಜೆ ಮಾಡಿಸೋದು ಹ್ಯಾಗೆಂದು ಹೆಜ್ಜೆಹೆಜ್ಜೆಗೆ ಚಿಂತೆಯಾಯಿತು. ನಾನು ಆ ರಾತ್ರಿ ಹಿರಿಯ ದೊರೆಸಾನಿಯ ಹತ್ತಿರ ಹೋಗಿ ಅದು ಇದು ಮಾತಾಡಿ, ಹುಚ್ಚಯ್ಯನ ದಯದಿಂದ ಮಕ್ಕಳನ್ನ ಪಡೆಯಬಹುದಲ್ಲಾ ಎಂದು ಸೂಚಿಸಿ ಅವಳ ಅಭಿಪ್ರಾಯ ತಿಳಿಯಲು ಪ್ರಯತ್ನಿಸಿದೆ. ಅವಳು ಹೌಂದಲ್ಲಾ ಎಂದರೆ ನಮ್ಮ ಕೆಲಸ ಸರಳವಾಗುತ್ತಿತ್ತು. ಹಿರಿಯಳಿಗೆ ತಿಳಿಸಿಯೇ, ಅವಳ ಅಪ್ಪಣೆಯಿಂದಲೇ ಪೂಜೆ ಮಾಡಿಸಿದ ಹಾಗಾಗುತ್ತಿತ್ತು. ನಾಳೆ ದೇಸಾಯಿ ಕೇಳಿದ ಎನ್ನೋಣ, ಅವರವ್ವನ ಕಡೆ ಬೆರಳು ಮಾಡಿ ತೋರಿಸಬಹುದಲ್ಲ – ಎಂದು ನಮ್ಮ ಲೆಕ್ಕ. ಆದರೆ ಆ ಮುದುಕಿ ಒಂದೇ ಮಾತಿನಲ್ಲಿ.

“ಬ್ಯಾಡs ಮಗಳs. ಜಂಗಮರಿಗೂ ಈ ಅರಮನಿಗೂ ಆಗಿ ಬರಾಣಿಲ್ಲ. ಹಿಂದೊಬ್ಬ ಜಂಗಮ ಈ ವಂಶ ನಿರ್ವಂಸಾಗಲೆಂತ ಅರಮನಿ ಮ್ಯಾಲ ಬೂದಿ ಹಾರಿಸ್ಯಾನ. ಆ ನನ್ನ ಹಾಟ್ಯಾ ಹುಚ್ಚಯ್ಯನೂ ಶಾಪ ಹಾಕ್ಯಾನ. ಅದಕ್ಕs ನಾವ್ಯಾರೂ ಜಂಗಮರ್ನ್ ಕರೆಯೋದೂ ಇಲ್ಲ. ಅವರ್ಯಾರೂ ಬರೋದೂ ಇಲ್ಲ. ಹುಚ್ಚಯ್ಯ ಮೊದಲ ನಾಡ ಹಲಕಟ್ಟ ಅವ. ಆ ಭಾಡ್ಯಾ ನಮ್ಮ ಮನ್ಯಾಗ ಕಾಲಿಡೋದs ಬ್ಯಾಡಾ”

ಎಂದು ಸ್ಪಷ್ಟವಾಗಿ ಹೇಳಿಬಿಟ್ಟಳು. ನನ್ನ ತೊಡೆಯೊಳಗಿನ ಕಸುವೇ ಉಡುಗಿ ಹೋಯಿತು. ಆ ರಾತ್ರಿ ನನಗೆ ನಿದ್ದೆ ಬರಲೇ ಇಲ್ಲ.

ಇತ್ತ ಸಿಂಗಾರೆವ್ವನಿಗೂ ಹಾಗೇ ಆಯಿತು. “ಹುಚ್ಚಯ್ಯನ ಮಾತ ಹುಸಿ ಹೋಗೋಣಿಲ್ಲಂತ, ಖರೇ ಏನು?” ಎಂದು ಮೆಲ್ಲಗೆ ದೇಸಾಯಿಯನ್ನು ಕೇಳಿದರೆ ಅವನು ಸಿಡಿದು “ಅವ ಲಘಂಗ ಸ್ವಾಮಿ. ಅವನ ಮಾತೇನ ಖರೆ ಬಂದಾವ, ತಗಿ ತಗೀರಿ” – ಎಂದನಂತೆ. ಅಂತೂ ಹುಚ್ಚಯ್ಯನಿಗೂ ಈ ಮನೆತನಕ್ಕೂ ಕೂಡಿ ಬರುವುದಿಲ್ಲವೆಂದಾಯಿತು. ನಾವು ಮಾಡಿಸಬೇಕೆಂದ ಪೂಜೆಗೆ ಹಿರಿಯರ ಸಮ್ಮತಿ ಇಲ್ಲವೆನ್ನುವುದೂ ಸ್ಪಷ್ಟವಾಯಿತು. ಬೆಳಿಗ್ಗೆದ್ದವರೇ ಹಲ್ಲು ಕೂಡ ಉಜ್ಜದೆ ಇಬ್ಬರೂ ಇದನ್ನೇ ಮಾತಾಡಿದೆವು. ಸಿಂಗಾರೆವ್ವ ತಾ ಕಂಡ ಕನಸನ್ನು ಬೇರೆ ಹೇಳಿದಳು. ಅರಮನೆಯ ಮೇಲೆ ಹದ್ದು ಹಾರುತ್ತಿದ್ದಂತೆ, ಬೆತ್ತಲೆ ಮೈಗೆ ಎಣ್ಣೆ ಹಚ್ಚಿಕೊಂಡು, ಕೆಂಪು ಹೂ ಮಾಲೆ ಧರಿಸಿದ್ದ ದೇಸಾಯಿ ಕೋಲಿನಿಂದ ಅವುಗಳ ಜೊತೆ ಆಟ ಆಡುತ್ತಿದ್ದಂತೆ ಕನಸಾಯಿತಂತೆ. ಕನಸಿನ ಅರ್ಥ ನಮಗಾಗಲಿಲ್ಲ. ಶುಭಲಕ್ಷಣವಂತೂ ಆಗಿರಲಾರದೆಂದು ತರ್ಕ ಮಾಡಿದೆವು.

ಹಿರಿಯ ದೊರೆಸಾನಿ ಹುಚ್ಚಯ್ಯನ ಶಾಪದ ವಿಚಾರ ಹೇಳಿದ್ದಳಲ್ಲ, ಅದೇನೆಂದು ಕೇಳಿದೆ. ಒಮ್ಮೆ ಹಿಂದಿನ ದೊಡ್ಡ ದೇಸಾಯಿ ಹೊಸ ಹೆಂಡತಿಯೊಂದಿಗೆ ಶಯ್ಯಾಗೃಹದಲ್ಲಿ ಮಲಗಿರಬೇಕಾದರೆ ಇದೇ ಹುಚ್ಚಯ್ಯ ಸರಿರಾತ್ರಿಯಲ್ಲಿ ಅದ್ಯಾವುದೋ ಮಾಯೆಯಿಂದ ಅರಮನೆಯಲ್ಲಿ ನುಗ್ಗಿದ್ದನಂತೆ. ಹೋಗಿ ದೇಸಾಯಿ ಮಲಗುವ ಕೋಣೆಯ ಬಾಗಿಲು ತಟ್ಟಿದ. ಇಷ್ಟು ಹೊತ್ತಿನಲ್ಲಿ ಅದ್ಯಾರು ಬಂದಿದ್ದಾರಪ್ಪ ಎಂದು ಬಾಗಿಲು ತೆರೆದರೆ ಎದುರಿಗೆ ಹುಚ್ಚಯ್ಯ ನಿಂತಿದ್ದ. ದೇಸಾಯಿಯ ನೆತ್ತರು ಕುದಿಯಿತು. ದೊರೆಸಾನಿ ಗಾಢ ನಿದ್ದೆಯಲ್ಲಿ ಅಸ್ತವ್ಯಸ್ತವಾಗಿ ಮಲಗಿದ್ದಳು. ಹುಚ್ಚಯ್ಯ ಏನು ಎತ್ತ ಅನ್ನದೆ “ದೇಸಾಯಿ, ಇಂದು ಶಿವನ ಹಾಸಿಗೆ ಇದs” ಎನ್ನುತ್ತ ಹೋಗಿ ದೊರೆಸಾನಿಯ ಪಕ್ಕದಲ್ಲಿ ಮಲಗಿದನಂತೆ! ದೇಸಾಯಿ “ಹುಚ್ಚಯ್ಯ, ಇಂದು ಶಿವನ ಸೇವಾ ಇದs” ಎಂದು ಹೇಳಿ ಕೋಲು ಹಿಡಿದುಕೊಂಡು ಹುಚ್ಚಯ್ಯನನ್ನು ಎಲ್ಲೆಂದರಲ್ಲಿ ಬಾರಿಸಿದ. ಹುಚ್ಚಯ್ಯ ಓಡಿ ಹೋಗುತ್ತ ಅರಮನೆಯ ಮೇಲೆ ಭಸ್ಮತೂತಿ ನಿನ್ನ ವಂಸ ನಿರ್ವಂಸವಾಗಲೆಂದು ಶಾಪ ಹಾಕಿದನಂತೆ.

ಶಾಪದ ವಿಚಾರ ಇಬ್ಬರಿಗೂ ಬಗೆಹರಿಯಲಿಲ್ಲ. ಯಾಕೆಂದರೆ ನಿರ್ವಂಸವಾಗಲೆನ್ನುವ ಶಾಪ ಒಂದು ಕಡೆ; ಮಕ್ಕಳಾಗುತ್ತವೆನ್ನುವ ಭರವಸೆ ಇನ್ನೊಂದು ಕಡೆ. ಯಾವುದನ್ನ ನಂಬಬೇಕು ಯಾವುದನ್ನ ಬಿಡಬೇಕು? ಅದೇನಾದರೂ ಆಗಿರಲಿ ಹುಚ್ಚಯ್ಯನ ಬಗೆಗಿನ ನಮ್ಮ ನಂಬಿಕೆಯಂತು ಹಾರಿತು. ಅವ ಹಿತ್ತಲ ಬಾಗಿಲಿನಿಂದ ಬಂದುದರ ಅರ್ಥವೂ ಸ್ಪಷ್ಟವಾಯಿತು. ಶಿವ ಮಾಡಿದಂತಾಗಲಿ, ಹಿರಿಯರ ಅನುಮತಿಯಿಲ್ಲದೆ ಇಂಥ ಕಾರುಬಾರಿಗೆ ಕೈಹಾಕುವುದೇ ಬೇಡವೆಂದು ತೀರ್ಮಾನಿಸಿದೆವು.

ಅಮವಾಸ್ಯೆ ಬಂತು. ಈ ಮಧ್ಯೆ ಹುಚ್ಚಯ್ಯನಿಗೆ ನಮ್ಮ ತೀರ್ಮಾನ ಹೇಳೇನೆಂದರೆ ಅವನು ಊರಲಿರಲಿಲ್ಲ. ಬಂದಾಗ ಹೇಳಿದರಾಯ್ತೆಂದುಕೊಂಡೆವು. ಆದರೆ ನಾವೋ ನರ ಮನುಷ್ಯರು; ನಮ್ಮ ನಮ್ಮ ಮನಸ್ಸುಗಳನ್ನೇ ತಿಳಿಯಲಾಗುವುದಿಲ್ಲ. ಇನ್ನು ಶಿವನ ಮನಸ್ಸನ್ನು ತಿಳಿಯಲಾದೀತೆ? ನಂದಗಾಂವಿಯಿಂದ ಸಿಂಗಾರೆವ್ವನ ಅಪ್ಪ, ಗೌಡ ಬಂದು ಒಕ್ಕರಿಸಿದ.

ಹೋದ ಸಲ ತಂದೆ ಮಗಳಿಗೆ ಜಗಳವಾಗಿತ್ತಲ್ಲ, ಇನ್ನು ಮೇಲೆ ಈ ಕಡೆ ಅವನು ಕಾಲಿಡಲಾರನೆಂದೇ ನಂಬಿದ್ದೆವು. ಆದರೆ ಅಮವಾಸ್ಯೆಯ ದಿನವೇ ಮಟಮಟ ಮಧ್ಯಾಹ್ನ ಸರಗಂ ದೇಸಾಯಿಯೊಂದಿಗೆ ನಗುನಗುತ್ತಾ ಅರಮನೆಗೆ ಬಂದ. ಹೋದ ಸಲದ ಅವಮಾನಗಳು ಅವನ ಮುಖದ ಮೇಲೆ ಒಂದೂ ಗೆರೆ ಮೂಡಿಸಿರಲಿಲ್ಲ. ಸಾಲದ್ದಕ್ಕೆ ಗೆಲುವಾಗಿದ್ದ, ಮತ್ತು ಯಾರೂ ಏನು ಹೇಳಿದರೂ ನಗಲು ಸಿದ್ದನಾಗಿದ್ದ. ಬಂದವನು ನನ್ನನ್ನೂ ಮಗಳನ್ನೂ ಸಂತೋಷದಿಂದಲೇ ಮಾತಾಡಿಸಿದ. ಊಟಕ್ಕೆ ಕೂತಾಗ ದೇಸಾಯಿಯನ್ನು ಹೊಗಳಿದ.

ಊಟವಾದ ಮೇಲೆ ಮಾವ ಅಳಿಯ ಇಬ್ಬರೂ ಎಲಡಿಕೆ ಹಾಕುತ್ತ ಕೂತಾಗ ಸಿಂಗಾರೆವ್ವನನ್ನು ಅಲ್ಲಿಗೆ ಕರೆಸಿದರು. ಲೋಕಾಭಿರಾಮವೆಂಬಂತೆ ಗೌಡ “ಏನವಾ ಸಿಂಗಾರೆವ್ವ, ಹೋದಸಲ ಬಂದಾಗ ಗಂಡಮಗನ್ನ ಹಡದ ನೋಡಾಕ ನನ್ನ ಕರಸ್ತೇನಂತ ಅಂದಿದ್ದಿ. ಭಾಳ ದಿನ ಕರಿಬರಿಲಿಲ್ಲ. ಅದಕ್ಕ ಹಡದಿದ್ದಿಯೋ ಹೆಂಗಂತ ನಾನs ನೋಡಿಕೊಂಡ ಹೋಗಾಕ ಬಂದೆ” ಅಂದ. ಕತ್ತರಿಸಿದ ಹಲ್ಲಿಯ ಬಾಲದಂತೆ ಮಗಳು ವಿಲಿವಿಲಿ ಒದ್ದಾಡಿದಳು. ಕೋಪದಿಂದ ಉಸರಿನ ರಭಸವೇರಿ ಅವಳ ಮೂಗಿನ ತುದಿ ನಡುಗುತಿತ್ತು. ಆಕೆ ಮಾತಾಡಲಿಲ್ಲ. ನನಗೂ ಧೈರ್ಯವಾಗಲಿಲ್ಲ. ಅಲ್ಲಿ ನಿಲ್ಲದೆ ಹೋಗಬೇಕೆಂದು ಹಿಂತಿರುಗುವಷ್ಟರಲ್ಲಿ – “ಅರರರ, ಹೇಳಬೇಕಾದ ಸುದ್ದೀನs ಮರತಬಿಟ್ಟಿನಲ್ಲಾ; ನಿನಗೊಬ್ಬ ತಮ್ಮ ಹುಟ್ಟ್ಯಾನವ್ವ! ನಿನ್ನ ಚಿಗವ್ವ ಗಂಡು ಮಗನ್ನ ಹಡದ್ದಾಳ; ಭಾಳ ದಿನಕ್ಕೆ ಹೆಂಗೂ ಒಬ್ಬ ಗಂಡ ಮಗ ಹುಟ್ಟಿದ, ಇನ್ನ ಮಕ್ಕಳು ಸಾಕೋ ಶಿವನs ಅಂದರ, ನಿನ್ನ ಇನ್ನೊಬ್ಬ ಚಿಗವ್ವನೂ ಬಸರಾಗ್ಯಾಳ! ಕೊಡೋ ದೇವರು, ನೋಡ್ರಿ ದೇಸಾಯರs, ಬ್ಯಾಡಂದವರಿಗಿ ಬೇಕಬೇಕಂತ ಕೊಡತಾನ, ಬೇಕಂದವರು ಉಡಿ ಒಡ್ಡಿ ಹಲುಬಿದರೂ ಕೊಡೋದಿಲ್ಲ! ಇದಕ್ಕೇನಂತೀರಿ?” ಎಂದು ದನಿಯೇರಿಸಿ ಹೇಳಿ, ಬಾಯಿಯೊಳಗೆ ಎಲೆ ತುರುಕಿ ಮಗಳ ಕಡೆ ನೋಡಿ ವ್ಯಂಗ್ಯ ನಕ್ಕ. ತಂದೆ ಮಗಳ ಸಂಬಂಧದ ಹುಳುಕು ದೇಸಾಯಿಗೇನು ಗೊತ್ತು? “ಕಂದನಾ ಆಗಮನದ ಮುಂದೆ ಇನ್ನುಳಿದ ಆನಂದಗಳು ಕುಂದೆಂಬುದರಲ್ಲಿ ಸಂದೇಹವೇನು ಮಾವಾ” ಎಂದೇನೋ ಪ್ರಾಸ ಒದರಿದ. ಆ ಪ್ರಾಸವನ್ನೇ ಮೆಚ್ಚಲಿದ್ದ ತಂದೆಯ ಮಾತನ್ನು ಕತ್ತರಿಸಿ ಸಿಂಗಾರೆವ್ವ ಹೇಳಿದಳು;

“ಭಾಳ ಚೆಲೋ ಆತ ಬಿಡಪ. ನಿನ್ನ ಸಂಸ್ಥಾನ ನಿನಗs ದಕ್ಕೂ ಹಾಂಗಾಯ್ತು. ಮರ್ಯಾ ತಿರಿಗಿ ಊರಿಗೆ ಬಂದಾದೇನು?”

ಹೀಗ್ಯಾಕೆ ಹೇಳಿದಳೆಂದು ನನಗೆ ಗೊತ್ತಿತ್ತು. ಗೌಡನಿಗೂ.

“ಸತ್ತ ಹೋದನಲ್ಲವಾ, ಸತ್ತವರು ಮತ್ತೆಲ್ಲಿ ಬರತಾರ? ಈ ಗೌಡನ ಎದುರಿಗೆ ಇನ್ನೂ ತನಕ ಯಾರೂ ನಿಂತಿಲ್ಲವಾ. ಅಂಥವರ್ನ ಇಲ್ಲಾ ದೇವರು ಮುರೀತಾನ, ಇಲ್ಲಾ ನಾ ಮುರೀತೀನಿ” ಗೌಡನ ಕಣ್ಣು ಕ್ರೂರವಾಗಿ ಇದು ನಿನಗೂ ಎಚ್ಚರಿಕೆ ಎಂಬಂತೆ ಮಗಳನ್ನು ನೋಡಿದವು. ಸಿಂಗಾರೆವ್ವ ಹತಾಶಳಾಗಿದ್ದಳು. ಇವಳನ್ನಿರಿಯುವುದಕ್ಕೆ ಅವನು ಮುದ್ದಾಂ ಪೂರ್ವ ತಯಾರಿ ಮಾಡಿಕೊಂಡು ಬಂದಿದ್ದ. ನೊಂದ ದನಿಯಲ್ಲಿ, ಆದರೂ ಕೊನೆಯ ಅಸ್ತ್ರದ ಹಾಗೆ “ಆಯ್ತಲ್ಲಪ್ಪ, ಗಂಡಮಗ ಹುಟ್ಯಾನಂತ ಅರಮನ್ಯಾಗ ಪಾಲಾ ಬೇಡಾಕ ಬಂದಿಲ್ಲ ಹೌಂದಲ್ಲೋ?” – ಎಂದಳು. ಆದರೆ ಗೌಡ ಚಂಡಾಲ. ಇಂಥ ಮಾತುಗಳನ್ನ ಮೊದಲೇ ನಿರೀಕ್ಷಿಸಿದ್ದಂತೆ “ಅದಕ್ಕs ಬಂದೀನವ ನಿನಗೂ ದೇಸಾಯರಿಗೂ ಹೇಳಿ ಹೋಗೋಣಂತ ಬಂದೆ; ನೀವ್ಯಾಕ ನನ್ನ ಮಗನ್ನ ದತ್ತಕ ತಗೋಬಾರದು?” ಅಂದ.

ಏನಪಾ, ತಂದೆಯೆಂಬವ ಮಗಳಿಗಾಡೋ ಮಾತುಗಳ ಇವು? ಬೇರು ಹಿಡಿದಲುಗಿದ ಬಳ್ಳಿಯ ಹಾಗೆ ಸಿಂಗಾರೆವ್ವ ಗಡಗಡ ನಡುಗಿ ಜೀವದಾನ ಮಾಡೆಂಬಂತೆ ಗೌಡನ ಕಡೆ ದೈನ್ಯದಿಂದ ನೋಡಿದಳು. ಈಸಲ ಕುಡಗೋಲಿನ ಹಾಗೆ ನಗೆಯನ್ನು ಬಳಸಿದ. ಸಿಂಗಾರೆವ್ವನಿಗೆ ಮತ್ತೆ ಕೋಪ ಬಂತು. ಈಗಷ್ಟೇ ಹೊತ್ತು ಮುಳುಗುತ್ತಿತ್ತಲ್ಲ. ಆ ಸಂಜೆ ಮುಗಿಲಿನ ಕೆಂಪೆಲ್ಲ ಅವಳ ಕಣ್ಣೊಳಗೆ ಗಟ್ಟಿಗೊಂಡ ಹಾಗಿತ್ತು. ಕಣ್ಣಂಚಿನಲ್ಲಿ ಒಡೆದ ಹನಿ ನೆತ್ತರಿನಂತೆ ಕಂಡಿತು. ಗೆದ್ದ ಗೌಡ ಕಿಸಕ್ಕನೆ ನಕ್ಕು ದೇಸಾಯಿಯ ಕಡೆ ನೋಡಿ “ನೋಡ್ರಿ ವಿಚಾರಮಾಡ್ರಿ ದೇಸಾಯರs ನನ್ನ ಮಗನ್ನ ಬೇಕಾದ್ರ ದತ್ತಕ ಕೊಡಾಕ ನಾ ತಯಾರಿದ್ದೀನಿ.” ಅಂದ. ದೇಸಾಯಿ ಸುಮ್ಮನೆ ಎದ್ದ.

ತಂದೆ ಮಗಳಿಬ್ಬರೂ ಪರಸ್ಪರ ವೈರಿಗಳಾಗಿದ್ದರು. ಸದ್ಯ ಬೇರೆ ಆಯುಧಗಳಿರಲಿಲ್ಲವಾದ್ದರಿಂದ ಮಾತುಗಳಿಂದಲೇ ಇನ್ನೊಬ್ಬರ ಎದೆ ಸೀಳಲು ಹವಣಿಸುತ್ತಿದ್ದರು. ಗೌಡನಂತೂ ಒಂದೊಂದು ಮಾತಾಡಿ, ಅದು ನಟ್ಟಿಯೋ ಇಲ್ಲವೋ ಎಂಬಂತೆ ಮಗಳ ಮುಖ ನೋಡುತ್ತಿದ್ದ. ನಿಜ ಹೇಳಬೇಕೆಂದರೆ ಅವನ ಪುತ್ರೋತ್ಸವವನ್ನು ಆನಂದದಿಂದ ಆಚರಿಸಲು ನಾವಿಬ್ಬರೂ ಸಿದ್ದರಿದ್ದೆವು. ಸಿಂಗಾರೆವ್ವನಿಗೇನು ಕರುಳಿಲ್ಲವೆ? ಆಕಳು ಕರು ಹಾಕಿದರೇ ಹಿಗ್ಗುವವಳು ತನ್ನ ಚಿಕ್ಕಮ್ಮ ಗಂಡು ಹಡೆದಾಗ ಸಂತೋಷಪಡದೆ ಇರುತ್ತಾಳೆಯೇ? ಆದರೆ ಗೌಡನ ಮಾತು ಅವಳೆದೆಯಲ್ಲಿ ವಿಷಬಿತ್ತಿ ಸಂತೋಷಗಳೇ ಮೊಳೆಯದ ಹಾಗೆ ಮಾಡಿದ್ದವು. ಗೌಡನಂತೂ ಹೇಳಿಕೇಳಿ ಅಗ್ಗದ ಮನುಷ್ಯ. ಈಗ ಸಿಂಗಾರೆವ್ವ ತುಸು ಹಣ ಚೆಲ್ಲಿದ್ದರೆ ಅಥವಾ ಒಂದು ಆಭರಣ ಎಸೆದಿದ್ದರೆ ಕುಲುಕುಲು ನಗುತ್ತ “ಹಾಂಗ ಮಗಳs. ಹೀಂಗ ಮಗಳ” – ಎಂದು ಹಸ್ತ ಹೊಸೆಯುತ್ತಿದ್ದನೆಂದು ನಾ ಬಲ್ಲೆ. ಹೀಗೆ ಮಾಡಿ ಇಡೀ ಅರಮನೆ ನುಂಗುವ ಸಂಚು ಮಾಡುತ್ತಿದ್ದನೆಂದೂ ಬಲ್ಲೆ. ಹೆಣಕ್ಕೇ ಮಗಳನ್ನು ಮದುವೆ ಮಾಡಿಕೊಟ್ಟವನು ಇನ್ಯಾವುದಕ್ಕೆ ಹೇಸಿಕೊಂಡಾನು?

ನಾನು ಹೋದಾಗ ಸಿಂಗಾರೆವ್ವ ಅಳುತ್ತಿರಲಿಲ್ಲ. ಎದೆಯನ್ನು ಕಲ್ಲಿನಂತೆ ಗಟ್ಟಿ ಮಾಡಿಕೊಂಡಿದ್ದಳು. ಮನಸ್ಸಿನಲ್ಲಿ ಅವಮಾನದ ಸುಳಿವಾಗಲೀ, ಸರಿತಪ್ಪುಗಳ ಹೊಯ್ದಾಟವಾಗಲೀ ಇರಲಿಲ್ಲ. ನನಗೆ ಸಮಾಧಾನವೇ ಆಯಿತು. ಮಾತಿಲ್ಲದೆ ಅವಳ ಪಕ್ಕದಲ್ಲಿ ಕೂತೆ.

ಎಷ್ಟು ಹೊತ್ತು ಹೀಗೇ ಕೂತಿದ್ದೆವೋ, ಆಗಲೇ ಮನೆಯಲ್ಲಿ ಕತ್ತಲಾಗಿತ್ತು. ಅಷ್ಟರಲ್ಲಿ ದೇಸಾಯಿ ಲುಟುಲುಟು ಬಂದು “ಮಾವನವರು ಊರಿಗೆ ಹೊರಟಾರ. ಅವರ‍್ನ ಕಳಿಸಿ ನಾವು ಹಂಗs ಪಕ್ಕದ ಹಳ್ಳಿಗಿ ಬಯಲಾಟ ನೋಡ್ಲಿಕ್ಹೋಗತೀವಿ” ಎಂದು ಹೇಳಿ ನೇತು ಹಾಕಿದ್ದ ಬಂದೂಕು ತಗೊಂಡು ಹೋಗಿಬಿಟ್ಟ. ನಾನು ದೀಪ ಹಚ್ಚಿ ಸಿಂಗಾರೆವ್ವನ ಮುಂದೆ ಇಡಬೇಕೆನ್ನುವಷ್ಟರಲ್ಲಿ ಅವಳು ಎದ್ದುನಿಂತು,

“ಶೀನಿಂಗಿ” ಎಂದಳು.

“ಎವ್ವ”

“ಹಿತ್ತಲ ಬಾಗಲಾ ತಗದಿಡು. ಹುಚ್ಚಯ್ಯ ಬರಲಿ. ಪೂಜಿ ಮಾಡೇಬಿಡೋಣು”

“ಹುಚ್ಚಯ್ಯ!…”

“ನಮ್ಮ ಶೀಲ ನಮ್ಮ ಕೈಯಾಗಿದ್ದರ ಯಾರೇನ ಮಾಡತಾರ? ಇಂದು ಶಿವನ ಪರೀಕ್ಷೆ!”

‘ಬ್ಯಾಡ ಯವ್ವಾ, ಶಿವನ ಪರೀಕ್ಷೆ ಮಾಡಾಕ ನಾವೆಷ್ಟರವರು?’ – ಎಂಬ ಮಾತು ನನ್ನ ತುದಿ ನಾಲಗೆಯ ತನಕ ಬಂದಿತ್ತು. ಆದರೆ ಅವಳ ಕಣ್ಣೊಳಗೆ ಉರಿಯುತ್ತಿದ್ದ ಪಂಜುಗಳನ್ನು ನೋಡಿ ಅದು ಗಂಟಲಲ್ಲೇ ಇಂಗಿಹೋಯಿತು.

* * *