ನಮ್ಮೂರಿನ ಅರಮನೆಯನ್ನು ಹರಾಜು ಹಾಕುವವರಿದ್ದಾರೆಂದು ಮಿತ್ರ ಹೇಳಿದಾಗ ನನಗೆ ಬಾರೀ ಆಶ್ಚರ್ಯ ಮತ್ತು ಆಘಾತವಾಯಿತು. ನಾನು ಊರು ಬಿಟ್ಟು ತುಂಬಾ ದಿನಗಳಾಗಿದ್ದರಿಂದ ಅಲ್ಲಿಯ ವಿದ್ಯಮಾನಗಳ ಅರಿವಿರಲಿಲ್ಲ.

“ಯಾಕ, ಹರಾಜ ಹಾಕೋವಂಥಾದ್ದೇನ ಬಂತೋ?” – ಅಂದೆ

“ಯಾಕೆಂದರ ರವಿಚಂದ್ರ ಅಲ್ಲಿ ಇರಾಕ ಒಲ್ಲ. ಅರಮನಿ ಮಾರಿ ಶಹರದಾಗ ಇರಬೇಕಂತಾನ. ಕಲಿತವರು ಹಳ್ಳ್ಯಾಗ ಇರಾಕ ಹೆಂಗ ಒಪ್ಪತಾರ, ಹೇಳು. ಬಾ ಅಂದರ ನೀ ಹಳ್ಳಿಗೆ ಬರತೀಯೇನ? ಹಂಗs ಅವನೂ”.

“ಅಲ್ಲಪ್ಪಾ, ನನಗ ನೌಕರಿ ಐತಿ, ಅದಕ್ಕ ನಾ ರ್ತೀಇಲ್ಲಿರ್ತೀನಿ. ಹಾಂಗ ಅವಗೇನೈತಿ?”

“ಇನ್ನೇನಿರಬೇಕಾಗಿತ್ತೋ? ಅರಮನಿ ಐತಿ, ಹೌಂದ? ಮಾರತಾನ, ರೊಕ್ಕ ಬರತೈತಿ, ಖರ್ಚು ಮಾಡಿಕೊಂಡ ಮಜಾಶೀರ ಶಹರದಾಗ ಇರತಾನಾಯ್ತು. ದೇಸಾಯರಂದ ಮ್ಯಾಲ ಕಷ್ಟಪಟ್ಟಗೊಂಡ ನಮ್ಮ ನಿಮ್ಹಾಂಗ ಯಾಕಿದ್ದಾರ ಹೇಳು?”

– ಅಂದ. ಅದು ನಿಜವೋ ಏನೋ. ದೇಸಗತಿಯ ಕೊನೆಯ ಕುಡಿಯಾದ ರವಿಚಂದ್ರ ಬುದ್ಧಿಗಲಿತಾಗಿನಿಂದ ಅಲ್ಲಿ ಇದ್ದವನಲ್ಲವೆಂದೂ, ಬರೀ ಬೆಂಗಳೂರಲ್ಲೇ ಇರುತ್ತಾನೆಂದೂ ಕೇಳಿದ್ದೆ. ಆದರೆ ಅವನೊಮ್ಮೆಯೂ ನನಗೆ ಭೇಟಿಯಾಗಿರಲಿಲ್ಲ.

“ಯಾಕ ಸುಮ್ಮನ ಕುಂತಿ?”

– ಎಂದು ನನ್ನ ಮಿತ್ರ ಕೇಳಿದ. ನನಗೆ ಮಾತಾಡುವ ಮನಸ್ಸಿರಲಿಲ್ಲ. ಖಿನ್ನನಾಗಿದ್ದೆ. ಆ ಅರಮನೆಯ ಬಗ್ಗೆಯೇ ಧೇನಿಸುತ್ತ ಕೂತೆ.

ನಿಜ ಹೇಳಬೇಕೆಂದರೆ ಆ ಅರಮನೆ ಎಂಥದಿತ್ತೆಂದು ಅದೇ ಊರಿನವನಾದರೂ ನಾನು ಈತನಕ ನೋಡಿರಲಿಲ್ಲ. ಮತ್ತು ನನ್ನ ಹಾಗೆ ಅದರ ಹೊಸ್ತಿಲು ಮೆಟ್ಟದ ಅನೇಕರು ನಮ್ಮೂರಲ್ಲಿದ್ದರು. ಅದರ ಬಗ್ಗೆ ನಾವೆಲ್ಲ ಕಥೆ ಕೇಳಿದ್ದೆವು. ಮತ್ತು ಕಥೆಯ ಪ್ರಕಾರ ಕಲ್ಪಿಸಿಕೊಂಡಿದ್ದೆವು.  ನಮ್ಮ ಕಲ್ಪನೆ ಎಷ್ಟು ಮಡಿಯಾಗಿತ್ತೆಂದರೆ – ಅರಮನೆ ಮತ್ತು ಹರಾಜು – ಇಂಥ ಶಬ್ದಗಳನ್ನು ಒಂದೇ ಉಸುರಿನಲ್ಲಿ ಹೇಳುವುದಾಗಲಿ, ಒಂದೇ ಕಿವಿಯಿಂದ ಕೇಳುವುದಾಗಲಿ ನಮ್ಮಿಂದಾಗುತ್ತಿರಲಿಲ್ಲ. ಅರಮನೆಯಲ್ಲಿ ನಮಗೆ ಪ್ರವೇಶವಿರಲಿಲ್ಲ ನಿಜ. ಆದರೂ ಅದು ನಮ್ಮ ಎಳೆತನದ ಭಾವಪ್ರಪಂಚದ ಒಂದು ಭಾಗವಾಗಿತ್ತು. ಊರ ಹಿರಿಯರು ಅಗತ್ಯವಿದ್ದಾಗ ಒಳಗೆ ಹೋದದ್ದುಂಟು ಮತ್ತು ಕೊನೆಯ ದೇಸಾಯಿ ಆಗಾಗ ಊರಿನಲ್ಲಿ ಬರುತ್ತಿದ್ದನಲ್ಲ, ಅವನನ್ನು ನಾನು ಕಂಡಿದ್ದೆ. ಊರವರು ಅರಮನೆಯ ವಿದ್ಯಮಾನಗಳ ಬಗ್ಗೆ ಆಡಿಕೊಳ್ಳುವುದಿತ್ತು. ಅವೆಲ್ಲ ನಮಗೆ ವಿಚಿತ್ರ ಪ್ರಪಂಚವೊಂದರ ಮಾತಾಗಿ ಕೇಳಿಸುತ್ತಿದ್ದವು. ಕೇಳಿದಂತೆಲ್ಲ ನನಗೆ ಅನ್ನಿಸುತ್ತಿತ್ತು: ಅರಮನೆಯ ಜೀವನಕ್ಕೂ ಹೊರಗಿನ ಜೀವನಕ್ಕೂ ಎಂದೂ ತಾಳೆಯಾಗುತ್ತಿರಲಿಲ್ಲ – ಎಂದು. ಘಟನೆಗಳು ಅಲ್ಲಿಯೂ ಜರುಗುತ್ತಿದ್ದವು. ಆದರೆ ಅವ್ಯಾವೂ ನಮ್ಮ ಮನಸ್ಸಿಗೆ ನೇರವಾಗಿ ನಿಲುಕುತ್ತಿರಲಿಲ್ಲ. ಮತ್ತು ಊರ ಜೀವನದಿಂದ ಅರಮನೆಯ ಜೀವನದ ಮೇಲಾದ ಪರಿಣಾಮವನ್ನು ತಿಳಿಯುವುದೂ ಎಳೆಯರಾದ ನಮಗೆ ಸಾಧ್ಯವಿರಲಿಲ್ಲ. ಹೊರಗೆ ರೈತರು, ಅವರ ಹೆಂಗಸರು, ಮಕ್ಕಳು ಹೊಲಗಳಿಗೆ ನುಗ್ಗಿ, ಬಿತ್ತನೆಯಂತೆ, ಸಾಲುಗೊಬ್ಬರವಂತೆ, ಮಳೆಯಂತೆ, ಬೆಳೆಯಂತೆ, ಕುಮುದವ್ವನ ಜಾತ್ರೆಯಂತೆ – ಹೀಗೆ ಎಷ್ಟೆಲ್ಲ ಕಾರ್ಯಗಳಲ್ಲಿ ತೊಡಗಿರುತ್ತಿದ್ದರು. ಆ ಹುರುಪಳಿಸುವ ಬಿಸಿಲು, ಮಳೆಗಾಲದ ಮಳೆಯ ಸೆಳಕು, ಸೂಸಿ ಬರುವ ಆಷಾಢದ ಗಾಳಿ, ಕಾಲಿಗಂಟುವ ಹಸಿಮಣ್ಣು, ಮೋಡಗಳ ಮರೆಯಲ್ಲಿ ಸೂರ್ಯ ಅಡಗುವ, ಹೊರಬರುವ ಕಣ್ಣಮುಚ್ಚಾಲೆಯಾಟ – ಇವ್ಯಾವೂ ಅರಮೆನಯಲ್ಲಿದ್ದವರ ಪಾಲಿಗೆ ಇರಲೇ ಇಲ್ಲ. ಅಲ್ಲೇ ಅವರ ಗೋಡೆಯಾಚೆ ಇರುವ ಋತುಮಾನಗಳು ಅರಮನೆಯ ಒಳಕ್ಕೆ ಕಾಲಿಡುತ್ತಿರಲಿಲ್ಲ. ಅಥಾ ಅರಮನೆಯ ಹವಾಮಾನ ನೋಡಿ ಹೊರಗೆ ಯಾವ ಋತುಮಾನ ಇದೆಯೆಂದು ಹೇಳುವುದು ಸಾಧ್ಯವಿರಲಿಲ್ಲ. ಹಾಗೆಂದೇ ಅರಮನೆಯಲ್ಲಿದ್ದವರ ನಿಟ್ಟುಸಿರು ಊರವರಿಗೆ ತಾಗುತ್ತಿರಲಿಲ್ಲ. ಅರಮನೆಯ ಒಳಗೊಂದು ಹವಾಮಾನ ಹೊರಗೊಂದು ಹವಾಮಾನ! ನಮ್ಮ ಪಕ್ಕದಲ್ಲಿದ್ದೂ ಅದು ನಮಗೆ ಪರಕೀಯವಾಗಿತ್ತು. ಕಥೆಯಾಗಿತ್ತು….

ನಾನು ಹೀಗೆ ಯೋಚನೆ ಮಾಡುತ್ತಿದ್ದಾಗ ನನ್ನ ಮಿತ್ರನ ದನಿ ಕೇಳಿಸಿತು.

“ಅಲ್ಲಪ್ಪಾ ನೀ ಯಾಕ ಆ ಅರಮನಿ ಬಗ್ಗೆ ಒಂದ ಕಾದಂಬರಿ ಬರೀಬಾರ್ದು?”

– ಕೂತು ಕೂತು ಬೇಸರವಾಯ್ತೆಂದು ತೋರುತ್ತದೆ, ಕೇಳಿದ್ದ. ಈ ಮಾತು ಕೇಳಿ ಒಮ್ಮೆಲೆ ಬೆಂಕಿ ತುಳಿದವರಂತೆ ಚುರುಕಾದೆ. ಇದು ತುಂಬ ಅನಿರೀಕ್ಷಿತ ಪ್ರಶ್ನೆ. ಈ ತನಕ ಇಂಥ ಆಲೋಚನೆಯೇ ನನಗೆ ಹೊಳೆದಿರಲಿಲ್ಲ. ಅರಮನೆಯ ಘಟನೆಗಳು ಕಥೆಯಾಗಿಯಾದರೂ ನನಗೂ ಅಷ್ಟಿಷ್ಟು ಗೊತ್ತಿರುವುದರಿಂದ ಈ ಪ್ರಶ್ನೆ ಕೇಳುವುದಕ್ಕೆ ಅವನ ಅಂತರಂಗದಲ್ಲೇನಾದರೂ ಕುಹಕವಿದೆಯೋ ಎಂದು ನೋಡಿದೆ. “ಹಂಗ್ಯಾಕ ನೋಡತೀಯೋ?” ಅಂದ.

“ಬರೀಬಹುದು”.

– ಎಂದು ಅರ್ಧ ಸ್ವಗತಕ್ಕೆ, ಅರ್ಧ ನನ್ನ ಮಿತ್ರನಿಗೆಂಬಂತೆ ಹೇಳಿದೆ.

“ಬರೀಭೌದೇನು? ಬರಿ ಅಂದರ…?

– ಎಂದು ಸಿಡುಕಿನಿಂದ ಆಜ್ಞೆಯನ್ನೇ ಮಾಡಿದ.

“ಬರಿ ಅಂದರ ಹೆಂಗೊ? ಎಷ್ಟಂದರೂ ನಾ ಅದನ್ನ ಹೊರಗಿನಿಂದ ಕಂಡವ. ನನಗೇನ ತಿಳಿದೀತು?”

– ಅಂದೆ.

“ನಿನಗ ನೋಡಪಾ. ಫಸ್ಟ್‌ಹ್ಯಾಂಡ್ ಇನ್‌ಫಾರ್ಮೇಷನ್ ಸಿಗಬೇಕಂದರ ಶೀನಿಂಗವ್ವನs ಸೈ. ಊರಿಗಿ ಹೋಗು. ಹೆಂಗೂ ಶೀನಿಂಗವ್ವಿನ್ನೂ ಜೀವಂತ ಇದ್ದಾಳ. ಕೇಳಿ ಬರಿ.”

– ಎಂದು ಹೇಳಿ, “ಯಾವಾಗ ಹೋಗ್ತಿ?” ಎಂದು ದುಂಬಾಲು ಬಿದ್ದ. ನಾನಿನ್ನೂ ಬರೆಯುವುದನ್ನೇ ನಿಶ್ಚಯಿಸಿರಲಿಲ್ಲ. ಆಗಲೇ ‘ಯಾವಾಗ ಹೋಗ್ತಿ?’ ಎಂದು ಕೇಳಿದರೆ ಏನು ಹೇಳಲಿ?

“ಹೋಗೋಣ, ಹೋಗೋಣ ಸಡುವಾಗಲಿ” – ಅಂದೆ.

“ನಿಂದ ಯಾವಾಗ್ಲೂ ಹಳೀಹಾಡ ಇದ್ದದ್ದs. ನಾಳಿ ಹರಾಜಾಗಿ ಹೋಯ್ತಂದರ ಮುಂದ ಅರಮನೀಗಿ ಯಾರು ಬರ‍್ತಾರೋ, ಎಂತೋ! ನೋಡಕ ಇದs ಆಕಾರದಾಗ ಸಿಕ್ಕೀತೋ ಇಲ್ಲೋ! ಇದs ಹರುಪಿನಾಗ ಹೋಗಿ ಬರದ ಬಿಡಲ್ಲ. ಈಗಂತೂ ಅವನವ್ವನ ಅರಮನಿ ಭೀಕೋ ಅಂತ ಕಂಡವರ ಕರುಳು ಬಾಯಿಗಿ ಬರೋಹಾಂಗ ಕಾಣತೈತಿ. ಹೋಗಿ ಒಂದ ಸಲ ನೋಡಿದರೆ ಸಾಕು, ಗ್ಯಾರಂಟಿ ನೀ ಏನಾರ ಬರದs ಬರೀತಿ. ನನ್ನ ಮಾತ ಖರೆ ಸುಳ್ಳೋ, ಬೇಕಾದರ ಒಮ್ಮಿ ಹೋಗಿ ನೋಡಿ ಬಾ, ನಿನಗs ಗೊತ್ತಾಗತೈತಿ.”

– ಎಂದು ಹೇಳಿ ಹೊರಟುಹೋದ.

ಅವನು ಹೋದಮೇಲೂ ಅದನ್ನೇ ಧ್ಯಾನಿಸುತ್ತ ಕೂತೆ. ನಾನಾಗಲೇ ಹೇಳಿದಂತೆ ಅರಮನೆಯ ನೇರ ಅನುಭವ ಇಲ್ಲದಿದ್ದರೂ ಒಳಗೆ ನಡೆದದ್ದಕ್ಕೆ ಹೊರಗಿನ ಅಂದರೆ ಊಡಿನ ಪ್ರತಿಕ್ರಿಯೆಗಳಲ್ಲಿ ಪ್ರತ್ಯಕ್ಷ ಭಾಗವಹಿಸಿದ್ದೆ. ಅದೇ ಧೈರ್ಯದಿಂದ ಬರೆಯುವ ಮನಸ್ಸು ಮಾಡಿದೆ. ಹಾಗೂ ಬರುವ ಸೂಟಿಗೆ ಶಿವಾಪುರಕ್ಕೆ ಹೋಗುವುದೆಂದು ನಿರ್ಧರಿಸಿದೆ.

ವಾಚಕ ಮಹಾಶಯರಲ್ಲಿ ಕ್ಷಮೆ ಕೋರಿ ಒಂದು ಮಾತನ್ನು ಈಗಲೇ ಸ್ಪಷ್ಟಪಡಿಸುತ್ತೇನೆ. ಶಿವಾಪುರದಂಥ ಹಳ್ಳಿಯಲ್ಲಿ ಅರಮನೆಯಿರುವುದೆಂದರೆ ಏನರ್ಥ? ಬಹುಶಃ ಇದು ಜನಪದ ಕಥೆಗಳಲ್ಲಿ ಬರುವಂಥ ಅರಮನೆಯಿರಬೇಕೆಂದು ನೀವು ಭಾವಿಸಬಹುದು. ಮೈಸೂರಿನ ಅರಮನೆಯನ್ನು ನಾನೂ ಕಂಡಿದ್ದೇನೆ. ಮೈಸೂರಿನದು ರಾಜರ ಅರಮನೆಯಾದರೆ ಶಿವಾಪುರದ್ದು ದೇಸಾಯರ ಅರಮನೆ. ವಿಸ್ತಾರ ಮತ್ತು ಗಾತ್ರದಲ್ಲಿ ಅದಕ್ಕಿಂತ ಇದು ಬಹಳ ಚಿಕ್ಕದು. ಆದರೆ ಅರಮನೆಗೆ ಭೌತಿಕ ಅಸ್ತಿತ್ವವಿರುವ ಹಾಗೆ ಮಾನಸಿಕ ಅಸ್ತಿತ್ವವೂ ಒಂದಿರುತ್ತದಲ್ಲ? ಶಿವಾಪುರದಲ್ಲಿ ಹುಟ್ಟಿ ಬೆಳೆದವರಿಗೆ ಇದು ಮೈಸೂರರಮನೆಗಿಂತ ಯಾವ ರೀತಿಯಲ್ಲೂ, ಕೊನೇಪಕ್ಷ ಕಡಿಮೆಯದಂತೂ ಅಲ್ಲ. ನಮ್ಮ ಊರಿನದು ಹದಿನಾಲ್ಕೂರಿನ ಇಪ್ಪತ್ತೆರಡು ಸಾವಿರ ಎಕರೆ ಜಮೀನಿನ ದೇಸಗತಿ. ಇಲ್ಲಿಯ ದೇಸಾಯರಿಗೂ ಮಹಾರಾಜರೆಂದೇ ಸಂಬೋಧಿಸುವ ಬಿರುದಾಳಿಗಳಿದ್ದವು. ಕೊನೆಯ ಸರಗಂ ದೇಸಾಯರಿಗೆ “ಮಹಾರಾಜ” ಎಂದು ಜನ ಕರೆಯುವುದನ್ನು ನಾನೇ ಕೇಳಿದ್ದೇನೆ. ಈ ಮನೆತನದ ಹಿಂದಿನ ಒಬ್ಬ ದೇಸಾಯರಿಗೆ ‘ಮೂರು ಲೋಕದ ಗಂಡ’ ನೆಂಬ ಬಿರುದಿತ್ತು. ಎಲ್ಲಾ ಅರಮನೆಗಿರುವಂತೆ ಇದಕ್ಕೂ ಚರಿತ್ರೆಯಿದೆ.

ಇದು ಒಂದು ಕಾಲಕ್ಕೆ ಈ ಭಾಗದಲ್ಲೆಲ್ಲ ಅದ್ದೂರಿಯಿಂದ ಮೆರೆದ ಅರಮನೆಯೆಂಬುದರಲ್ಲಿ ಸಂದೇಹವೇ ಇಲ್ಲ. ಹುಲಿ ಕೊಂದವರಿಂದ ಹಿಡಿದು ಯುದ್ಧ ಮಾಡಿ ಗೆದ್ದವರವರೆಗೂ ಇಲ್ಲಿಯವರ ವಂಶಾವಳಿಯಿದೆ. ಅರಮನೆಯ ಶ್ರೀಮಂತಿಕೆಯ ಬಗ್ಗೆ ಜನಪದ ಕಥೆಗಳೇ ಇವೆ. ಬೆಳ್ಳಿಯ ರೂಪಾಯಿಗಳನ್ನು ಕಲ್ಲಿನ ಮೇಲೆ ಬಾರಿಸಿ ಬಾರಿಸಿ ಪರೀಕ್ಷಿಸುತ್ತಿದ್ದ ಕಾಲ ಅದು. ಹಾಗೆ ಬಾರಿಸಿ ಬಾರಿಸಿ ತಗ್ಗುಬಿದ್ದು ಒಳಕಲ್ಲಾದ ನಾಕೈದು ಕಲ್ಲುಗಳು ಈಗಲೂ ಅರಮನೆಯಲ್ಲಿವೆಯೆಂದು ಹೇಳುತ್ತಾರೆ. ಹಿಂದಿನ ಒಬ್ಬ ದೇಸಾಯಿ ಬರೀ ಬೆಳ್ಳಿಯ ರೂಪಾಯಿ ಮತ್ತು ಚಿನ್ನದ ಆಭರಣಗಳನ್ನು ಏಳು ತಾಮ್ರದ ಹಂಡೆಗಳಲ್ಲಿ ಹಾಕಿ ಹುಗಿದಿರುವನೆಂದೂ ಜೋಡುಹೆಡೆಯ ಸರ್ಪವೊಂದು ಸದಾ ಆ ನಿಧಿಗೆ ಕಾವಲಿದೆಯೆಂದೂ ಜನ ಹೇಳುತ್ತಾರೆ. ಆದರೆ ಅಲ್ಲೊಂದು ಸರ್ಪವಿದ್ದದ್ದನ್ನು ಸ್ವಥಾ ನೋಡಿದ್ದಾಗಿ ನಮ್ಮಣ್ಣ ಹೇಳಿದ್ದು ನನಗೆ ನೆನಪಿದೆ.

ಅದರ ವೈಭವವನ್ನು ಹಾಡಿ ಹೊಗಳುವ ಜನರೇ ಇನ್ನೊಂದು ಕಥೆಯನ್ನೂ ಹೇಳುತ್ತಾರೆ. ಅದು ಅರಮನೆಯ ಶಾಪಕ್ಕೆ ಸಂಬಂಧಪಟ್ಟಿರುವಂಥದು. ಈಗಿನ ಅರಮನೆಯಿದೆಯಲ್ಲ, ಮೊದಲು ಅಲ್ಲಿ ಒಂದು ಪ್ರತೀಬನವಿತ್ತಂತೆ. ಅರಮನೆ ಕಟ್ಟುವುದಕ್ಕೆ ಅಷ್ಟೊಂದು ಉತ್ಕೃಷ್ಟವಾದ ಸ್ಥಳ ಬೇರೆ ಕಡೆ ಸಿಕ್ಕಲಿಲ್ಲವಾದ್ದರಿಂದ ಅಲ್ಲಿಯೇ ಕಟ್ಟಲು ಯೋಚಿಸಿ ಪ್ರತೀ ಗಿಡಿಗಳನ್ನು ಕಡಿಯುತ್ತ ಬಂದರು. ಅದಕ್ಕೆ ಜಂಗಮನೊಬ್ಬ ಅಡ್ಡಿಬಂದ. ದೇಸಾಯರ ಎದುರು ಒಬ್ಬ ಜಂಗಮ ಎದಕ್ಕೆ ಈಡಾದಾನು? ಅವನನ್ನು ಸರಿಸಿ ಕಟ್ಟತೊಡಗಿದರು. ಅದನು ಒದರ್ಯಾಡ ತೊಡಗಿದ. ಕೊನೆಗೆ ಪಾಯಕ್ಕೊಂದು ಬಲಿಯಾಗಬೇಕಿತ್ತಲ್ಲ, ಅವನನ್ನೇ ಹಾಕಿ ಕಟ್ಟಿದರು. ಸಾಯುವಾಗ ಅವನು ‘ಅರಮನ್ಯಾಗ ಪ್ರತೀಬನ ಬೆಳೀಲೋ’ ಎಂದು ಶಾಪಹಾಕಿ ಬೂದಿ ಎಸೆದನಂತೆ. ಶಾಪವಿಲ್ಲದ ಶ್ರೀಮಂತರ್ಯಾರಿದ್ದಾರೆ? ಈ ಕಥೆಯನ್ನು ನಮ್ಮೂರವರು ಕೇಳುವವರಲ್ಲಿ ಭಯವುಂಟಾಗುವ ಹಾಗೆ ಹೇಳುತ್ತಾರೆ. ಮತ್ತು ಈ ಕಥೆ ಅರಮನೆಯ ಚರಿತ್ರೆಯ ಒಂದು ಅವಿಭಾಜ್ಯ ಅಂಗವೆಂಬಂತೆ ಬೆಳೆದುಬಂದಿದೆ. ಒಬ್ಬೊಬ್ಬರು ಒಂದೊಂದು ಥರ ಹೇಳಿದರೂ ಒಟ್ಟು ಅರಮನೆ, ಪ್ರತೀಬನ, ಜಂಗಮ, ಶಾಪ – ಇವಿಷ್ಟು ವಿಷಯಗಳು ಪ್ರತಿಯೊಂದರಲ್ಲೂ ಬರುವುದರಿಂದ, ಅವರು ಸೇರಿಸುವ ಭಾವುಕ ವಿವರಗಳನ್ನು ಸುಲಿದು ಈ ಕಥೆಯ ಸಾರಾಂಶವಷ್ಟನ್ನೇ ನಿಮ್ಮ ಮುಂದೆ ಹೇಳಿದ್ದೇನೆ.

ಮುಂದೆ ಇನ್ನೊಬ್ಬ ಜಂಗಮ ಈ ಅರಮನೆಯ ಬದುಕಿನಲ್ಲಿ ಕಾಲು ಹಾಕುವುದಿದೆ. ಈ ವಂಶದ ಹಿಂದಿನ ಒಬ್ಬ ದೇಸಾಯಿಗೆ ತುಂಬಾ ಚೆಲುವೆಯಾದ ಹೆಂಡತಿಯೊಬ್ಬಳಿದ್ದಳು. ಅವಳೆಷ್ಟು ಚೆಲುವೆಯನ್ನುವುದಕ್ಕೆ ಒಂದು ಸಣ್ಣ ಉದಾಹರಣೆಯಿದೆ. ತೌರುಮನೆಯಿಂದ ಅವಳನ್ನು ಸ್ವಯಂ ದೇಸಾಯಿ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಕರೆತರುತ್ತಿದ್ದ. ಊರ ಸಮೀಪ ಬಂದಾಗ ರಾತ್ರಿಯಾಗಿ ಪಲ್ಲಕ್ಕಿ ಹೊತ್ತ ಒಬ್ಬ ಆಳು ಎಡವಿಬಿದ್ದು ಕಾಲ್ಮುರಿದುಕೊಂಡ. ತಕ್ಷಣ ದೇಸಾಯಿ ಆಳುಗಳು ಅವಳನ್ನು ಕಂಡಾರೆಂದು ಕಂಬಳಿಮೂಟೆಯಲ್ಲಿ ಅವಳನ್ನು ಸುತ್ತಿ ತಾನೇ ಹೊತ್ತುಕೊಂಡು ಅರಮನೆಗೆ ಬಂದನಂತೆ! ಒಮ್ಮೆ ಜಂಗಮನೊಬ್ಬ ಭಿಕ್ಷೆಗೆ ಬಂದಾಗ ಈ ಚೆಲುವೆಯಾದ ದೊರೆಸಾನಿಯೇ ನೀಡಲಿಕ್ಕೆ ಹೋದಳು. ಬಂದೊಡನೆ ಜಂಗಮ ಅವಳನ್ನೊಮ್ಮೆ ತೀಕ್ಷ್ಣ ದೃಷ್ಟಿಯಿಂದ ನೋಡಿ, ಏನು ಹೊಂಚಿದನೋ ಬೆನ್ನು ತಿರುಗಿಸಿ ಹೊರಟುಬಿಟ್ಟ. ಇವಳು “ಭಿಕ್ಷ ತಗೋ ಸ್ವಾಮಿ, ಭಿಕ್ಷ ತಗೋ ಸ್ವಾಮಿ” ಎಂದು ಹಲುಬುತ್ತ ಹೊಸ್ತಿಲು ದಾಟಿ, ಬೆನ್ನು ಹತ್ತಿದ್ದಳು. ಮುಂದೆ ಮುಂದೆ ಜಂಗಮ, ಹಿಂದೆ ಹಿಂದೆ ದೊರೆಸಾನಿ! ದೊರೆಸಾನಿಯ ಮುಖವನ್ನೇ ಕಾಣದ ಜನ ಅವಳ ಮತ್ತು ಜಂಗಮನ ಇಂಥ ವಿಚಿತ್ರ ವರ್ತನೆಗೆ ಬೆರಗಾಗಿ ಬಾಯ್ಗೆ ಬೆರಳಿಟ್ಟುಕೊಂಡು ನಿಂತವರು ನಿಂತಹಾಗೇ ನೋಡತೊಡಗಿದರು. ಜನ ನೋಡನೋಡುತ್ತಿದ್ದಂತೆ ಇಬ್ಬರೂ ಕುಮುದವ್ವನ ಹುಣಿಸೇ ಮೆರೆಯಲ್ಲಿ ಕಣ್ಮರೆಯಾದರಂತೆ! ಈ ಕಥೆಯಲ್ಲಿ ವಾಸ್ತವಾಂಶ ಎಷ್ಟಿದೆಯೆಂದು ನನಗೆ ತಿಳಿಯದು. ಅಂತೂ ಅರಮನೆಯವರಿಗೆ ಜಂಗಮರನ್ನು ಕಂಡರಾಗುವುದಿಲ್ಲವೆಂಬುದಂತೂ ನಿಜ. ಜಂಗಮರು ಭಿಕ್ಷೆ ಬೇಡುತ್ತ ಊರಾಡಿದರೂ ಅರಮನೆಯ ಹೊಸ್ತಿಲಿಗೆ ಮಾತ್ರ ಹೋಗುವುದಿಲ್ಲ. ಇವರೂ ಕರೆಯುವುದಿಲ್ಲ.

ಶಿವಾಪುರವೆಂದರೆ ದೇಸಾಯರ ಈ ಅರಮನೆಯೇ. ನೀವು ಅಷ್ಟು ದೂರದಿಂದ ನೋಡಿದರೆ ಒಡೆದು ಕಾಣುವುದು ಅದೊಂದೇ ಅರಮನೆ; ಎರಡಂತಸ್ತಿನ ಎತ್ತರವಾದ ಅರಮನೆ. ಉಳಿದ ಸುಮಾರು ನೂರಿನ್ನೂರು ಮನೆಗಳು ಮಣ್ಣಿನವು, ಮಣ್ಣಿನ ಮಾಳಿಗೆಯವು.  ಊರಿನ ಯಾವ ಭಾಗದಲ್ಲಿ ನಿಂತು ನೋಡಿದರೂ ಕಾಣುವ ಕೆಂಪು ಹಂಚಿನ ಶ್ರೀಮಂತ ಅರಮನೆ ಹಾಗೂ ಉಳಿದ ಮಣ್ಣಿನ ಬಡಮನೆಗಳ ನಡುವಿನ ವ್ಯತ್ಯಾಸ ಯಾರ ಕಣ್ಣಿಗಾದರೂ ಹೊಡೆದು ಕಾಣಿಸುವಷ್ಟು ಸ್ಪಷ್ಟವಾಗಿದೆ. ಅರಮನೆಯ ಸುತ್ತ ಎತ್ತರವಾದ ಪೌಳಿ (ಕೌಂಪೌಂಡ್) ಯಿದ್ದು ಎಷ್ಟು ದೂರದಿಂದ ನೋಡಿದರೂ ಅದರ ಮೊದಲನೇ ಅಂತಸ್ತು ಕಾಣಿಸುವುದೇ ಇಲ್ಲ. ಅರಮನೆಯ ಎದುರಿಗೆ ಒಂದು ದೊಡ್ಡ ಆಲದಮರದ ಕಟ್ಟೆಯಿದೆ. ಹಿಂದೆ ಊರವರ್ಯಾರಾದರೂ ದೇಸಾಯರನ್ನು ಭೇಟಿ ಮಾಡಬೇಕಾದಾಗ, ನ್ಯಾಯ ಕೇಳುವುದಿದ್ದಾಗ ಇಲ್ಲೇ ಕಾಯಬೇಕಿತ್ತು. ಪೌಳಿಯೊಳಗಿನ ಅರಮನೆ ನನಗೆ, ನನ್ನಂಥ ಅನೇಕರಿಗೆ ಈಗಲೂ ದೊಡ್ಡ ರಹಸ್ಯ. ಯಾಕೆಂದರೆ ಈತನಕ ನಾನು ಪೌಳಿಯೊಳಗೆ ಕಾಲಿಟ್ಟವನೇ ಅಲ್ಲ. ನಿಜ ಹೇಳಬೇಕೆಂದರೆ ಭೂತಸ್ಥಾನದಷ್ಟೇ ಈ ಅರಮನೆ ನನ್ನಲ್ಲಿ ಭಯ ಹುಟ್ಟಿಸುತ್ತಿತ್ತು. ರಾತ್ರಿ ಒಬ್ಬಂಟಿಯಾಗಿ ನಾನೇನಾದರೂ ಅದರ ಅಕ್ಕಪಕ್ಕ ಹಾದುಹೋಗುವ ಸಂದರ್ಭ ಬಂದರೆ ಕಿರಿಚಿ ಹಾಡುತ್ತ ಓಡಿಹೋಗುತ್ತಿದೆ. ಜೊತೆಯಲ್ಲಿ ಯಾರಾದರೂ ಇದ್ದರೆ ಅವರ ಮೈಗೆ ಅಂಟಿಕೊಂಡೇ ನಡೆಯುತ್ತಿದ್ದೆ. ರಾತ್ರಿ ಒಂದ ಮಾಡುವುದಿದ್ದಾಗ ಆ ಕಡೆ ಬೆನ್ನು ಮಾಡಿ ಕೂರುತ್ತಿರಲಿಲ್ಲ. ಅಂಥ ಸಂದರ್ಭಗಳಲ್ಲಿ ಅಕಸ್ಮಾತ್ ಒಳಗಿನಿಂದ ಯಾವುದಾದರೂ ದನಿ ಕಿವಿಗೆ ಬಿದ್ದರೆ ಹತ್ತಾರು ಭಯಾನಕ ದೃಶ್ಯಗಳನ್ನು ಕಲ್ಪಿಸಿಕೊಂಡು ನಡುಗುತ್ತಿದ್ದೆ. ಒಮ್ಮೆ ನಮ್ಮಣ್ಣನ ಜೊತೆ ಅಲ್ಲಿ ಹಾಗು ಹೋಗುತ್ತಿದ್ದಾಗ ಒಳಗೆ ಯಾರೋ ಕಿರಿಚಿದ್ದು ಕೇಳಿ ಅಣ್ಣನನ್ನು ತಬ್ಬಿಕೊಂಡು ನಾನೂ ಕಿರುಚಿದ್ದು ನನಗಿನ್ನೂ ನೆನಪಿದೆ. ನನ್ನಣ್ಣ ಅದು ದೇಸಾಯರ ದನಿಯೆಂದು ಹೇಳಿದ್ದ. ಆದರೆ ನನಗದು ಹೆಣ್ಣಿನ ದನಿಯಂತೆ ಕೇಳಿಸಿತ್ತು. ಹೆದರಿದ್ದ ನನ್ನನ್ನು ಅಣ್ಣ ಎತ್ತಿಕೊಳ್ಳಲಿಲ್ಲ. ಯಾಕೆಂದರೆ ನನ್ನ ಚಡ್ಡಿ ಒದ್ದೆಯಾಗಿತ್ತು.

ಅರಮನೆಯಿಂದ ಮೇಲೆ ಅದಕ್ಕೊಂದು ಪ್ರಭಾವಳಿ ಇರಬೇಕಲ್ಲ. ಆ ಪ್ರಭಾವಳಿಯಲ್ಲಿ ಜನಕ್ಕೆ ಪ್ರವೇಶವಿರಲಿಲ್ಲ. ಹೊರಗೆ ನಿಂತವರೋ ಪ್ರಭಾವಳಿಯ ಬಗ್ಗೆ ಕೊನೇಪಕ್ಷ ಹೆಮ್ಮೆ ತಾಳಬೇಕೆಂದು ತಿಳಿಯದವರು. ಹೀಗ್ಯಾಕೆಂದು, ಅರಮನೆ ಮತ್ತು ಜನರ ಸಂಬಂಧ ಎಂಥದೆಂದು ತಿಳಿಯಬೇಕಾದರೆ ನೀವು ಶಿವಾಪುರದ ಗ್ರಾಮದೇವತೆ – ಕುಮುದವ್ವನ ವಿಷಯ ತಿಳಿಯಬೇಕು. ಊರ ಪಶ್ಚಿಮಕ್ಕೊಂಡು ಹುಣಿಸೇ ಮೆಳೆಯಿದೆ. ಅಲ್ಲೇ ಕುಮುದವ್ವನ ಗುಡಿಯಿರೋದು. ಮರಗಳಲ್ಲಿ ಹುಗಿದಿರೋದರಿಂದ ಒಡೆದು ಕಾಣುವುದಿಲ್ಲ. ಹುಣಿಸೇ ಮೆಳೆಯ ಬಗ್ಗೆ ಆಮೇಲೆ ಹೇಳುತ್ತೇನೆ. ಗುಡಿ ಮಾತ್ರ ತುಂಬ ವಿಚಿತ್ರವಾಗಿದೆ. ಎತ್ತರವಾದ ಹುಣಿಸೇ ಮರಗಳ ಅಂಚಿನಲ್ಲಿ ಮೊಳಕಾಲೆತ್ತರದ ಒಂದು ಪೌಳಿ. ಅದರ ಮಧ್ಯೆ ಮಡಕೆಯಾಕಾರದ ಎರಡಾಳೆತ್ತರದ ಗುಡಿ. ಚಿಕ್ಕಬಾಗಿಲಿದೆ. ತೆರೆದರೆ ಎದುರಿಗೆ ಅಡ್ಡಿಬಿಟ್ಟ ಬಿಳಿ ಪರದೆ ಬಿಟ್ಟು ಬೇರೇನೂ ಕಾಣಿಸುವುದಿಲ್ಲ. ಚಿಕ್ಕಂದಿನಲ್ಲಿ ನಾವು ಈ ಪರದೆಯನ್ನೆತ್ತಿ ನೋಡಿದ್ದೆವು. ಒಳಗೆ ತೊಡೆ ಗೀಸಿ ಕುಳಿತ ಒಂದು ಬತ್ತಲೆ ಹೆಣ್ಣಿನ ಶಿಲ್ಪವಿದ್ದ ಅದರ ಎರಡೂ ಕೈಗಳಲ್ಲಿ ಒಂದೊಂದು ಕಮಲಗಳಿವೆ. ಈ ಮೂರ್ತಿಗೆ ತಲೆ ಇಲ್ಲ. ಬದಲು ಅದರ ಸ್ಥಳದಲ್ಲೊಂದು ಅರಳಿದ ಕಮಲವಿದೆ. ಗುಡಿಯ ಈ ದೇವಿ ಕುಮುದವ್ವ ನಮ್ಮ ಊರಿಗೆ ಪ್ರಸ್ತುತವಾದ ರೀತಿ ಮಾತ್ರ ವಿಚಿತ್ರವಾಗಿದೆ. ಕುಮುದವ್ವ ಎಂಬ ಹೆಸರೇನೋ ಸೈ. ಯಾಕೆಂದರೆ ಕೈಯಲ್ಲಿ ಕಮಲಗಳಿವೆ, ತಲೆ ರೂಪದಲ್ಲಿದೆ. ಹಿಂದೆ ಇದೊಂದು ತಾಂತ್ರಿಕರ ಸ್ಥಳವಾಗಿತ್ತೆಂಬುದರಲ್ಲೂ ಸಂದೇಹವಿಲ್ಲ. ಆದ್ದರಿಂದಲೇ ಏನೋ ಹೆಂಗಸರು ಈ ಗುಡಿಯ ಕಡೆಗೆ ತಪ್ಪಿ ಕೂಡ ಸುಳಿಯುವುದಿಲ್ಲ. ಹರಕೆ ಹೊತ್ತರೂ ಬೇಡಿಕೊಂಡರೂ ಸೇವೆ ಸಲ್ಲಿಸುವುದು ಮಾತ್ರ ಗಂಡಸರ ಮುಖಾಂತರವೇ. ಆದರೆ ಈ ದೇವಿಗೆ ಯಾರೇನು ಕಾಣಿಕೆ ಕೊಟ್ಟರೂ ಮುಡಿಪು ತೆತ್ತರೂ ಅದು ಕದ್ದು ತಂದುದಾಗಿರಬೇಕು. ಸ್ವಂತದ್ದಾಗಲಿ, ಸ್ವಂತ ಗಳಿಸಿದ್ದಾಗಲಿ ಖಂಡಿತ ಆಗಿರಕೂಡದು!

ವರ್ಷಕ್ಕೊಮ್ಮೆ ಯುಗಾದಿಯ ಸುತ್ತ ಈ ದೇವಿಯ ಜಾತ್ರೆಯಾಗುತ್ತದೆ. ಜಾತ್ರೆಯೆಂದರೆ ಅಕ್ಕಪಕ್ಕ ಊರವರು, ಗಂಡುಹೆಣ್ಣು ಸೇರಿ ಚಂದಾಗಿ ಆಚರಿಸುವಂಥದಲ್ಲ. ನಾಳೆ ಜಾತ್ರೆಯೆಂದರೆ ಈ ದಿನ ಮಧ್ಯಾಹ್ನದ ಹೊತ್ತು ಊರಿನ ಗಂಡಸರು ಮನೆಗೊಂದಾಳಿನಂತೆ ಬಂದು ಗುಡಿಯಲ್ಲಿ ಸೇರುತ್ತಾರೆ. ಎಲ್ಲರೂ ಬಂದರೆಂದಾಗ ದೇಸಾಯರ ಮನೆಯಿಂದ ಜೋಡು ತೆಂಗಿನಕಾಯಿ ತರುತ್ತಾರೆ. ಅವನ್ನು ಒಡೆದು, ಹಲಗೆ ಬಾರಿಸುತ್ತ ಬೆಳಗಾವಿಗೆ ಹೊರಡುತ್ತಾರೆ. ಹಲಗೆ ಸಪ್ಪಳ ಕೇಳಿದೊಡನೆ ಊರವರು ತಂತಮ್ಮ ಮನೆಯ ಬಾಗಿಲುಗಳನ್ನು ಭದ್ರಪಡಿಸಿಕೊಂಡು ಒಳಗೇ ಕುಂತಿರುತ್ತಾರೆ. ಮತ್ತೆ ಅವರು ಬಾಗಿಲು ತೆಗೆಯುವುದು ಬೆಳಗಾವಿಗೆ ಹೋದ ಗಂಡಸರು ತಿರುಗಿ ಬಂದ ಮೇಲೆಯೇ. ಅಲ್ಲೀತನಕ ಕೂಸುಕುನ್ನಿ ಅತ್ತರಿಲ್ಲ, ಕಿರಿಚಿದರಿಲ್ಲ, ಸತ್ತರೂ ಇಲ್ಲ.

ಗಂಡಸರೆಲ್ಲರೂ ಒಟ್ಟಾಗಿ ಬೆಳಗಾವಿಗೆ ಹೋಗುತ್ತಾರಲ್ಲ, ಜಾತ್ರೆಯ ಪರಿಕರಗಳನ್ನು ಅಂದರೆ ಸೀರೆ, ಖಣ, ತೆಂಗಿನಕಾಯಿ, ಗೋಧಿ, ಬೆಲ್ಲ, ಕುರಿ, ಕೋಳಿ – ಇವನ್ನು ತರುವುದಕ್ಕೆ. ಅವು ಇಷ್ಟಿಷ್ಟಿರಬೇಕೆಂದು ಒಂದು ಲೆಕ್ಕವಿದೆ. ಅಷ್ಟನ್ನೂ ಅವರು ಕದ್ದು ತರಬೇಕು. ಕೊಂಡಲ್ಲ! ದೇವಿಯ ಮಹಿಮೆಯ ಎಂಥಾದ್ದೆಂದರೆ, ಇಷ್ಟು ವರ್ಷ ಜಾತ್ರೆ ಮಾಡಿದ್ದಾರೆ, ಒಂದು ಸಲವೂ ಶಿವಾಪುರದ ಒಂದು ಕುಳವೂ ಕದಿಯುವಾಗ ಇನ್ನೊಬ್ಬರಿಗೆ ಸಿಕ್ಕುಬಿದ್ದಿಲ್ಲ! ಕಳುವಿನಲ್ಲಿ ಪಾಲ್ಗೊಂಡವರು ಹೇಳುವುದೇನೆಂದರೆ ಸ್ವಥಾ ಪೊಲೀಸರು ಅಲ್ಲೇ ನಿಂತಿರುತ್ತಾರೆ. ಅವರ ಕಣ್ಣೆದುರಿನಲ್ಲೇ ಇವರು ಕದ್ದರೂ ಅವರಿಗೆ ಕಾಣಿಸುವುದಿಲ್ಲವಂತೆ! ದೇವಿಯ ಮಹಿಮೆಯೋ ಇವರ ಚಾಲಾಕುತನವೋ ಅಥವಾ ಬೆಳಗಾವಿ ಪೊಲೀಸರ ಮತ್ತು ಅಂಗಡಿಯವರ ಜಂಟೀ ಧಡ್ಡತನವೋ ಅಂತೂ ನಮ್ಮ ಊರವರು ಜಾತ್ರೆಯ ಕಳ್ಳತನದಲ್ಲಿ ಇನ್ನೊಬ್ಬರ ಕೈಗೆ ಸಿಕ್ಕುಬಿದ್ದಿಲ್ಲವೆನ್ನುವುದಂತೂ ನಿಜ. ದೇವಿಯ ಈ ಮಹಿಮೆಯನ್ನು ‘ಸಾರಿಸಾರಿ ಹೇಳುವ’ ನಾಕೈದು ಜನಪದ ಹಾಡುಗಳು ನಮ್ಮಲ್ಲಿವೆ. ಹೀಗೆ ಕದ್ದಾದ ಮೇಲೆ ಮಾಲು ಸಮೇತ ಎಲ್ಲರೂ ಒಟ್ಟಾಗಿ ಊರಿಗೆ ಹೊರಡುತ್ತಾರೆ. ಹದಿನೆಂಟು ಮೈಲು ಬರಿಗಾಲಲ್ಲಿ ನಡೆದುಕೊಂಡೇ ಬರಬೇಕು. ಯಾಕೆಂದರೆ ಕದ್ದ ಮಾಲಿನಲ್ಲಿ ಎರಡು ಮೇಕೆಗಳೂ ಇರುತ್ತವೆ.

ಊರು ತಲುಪಬೇಕಾದರೆ ಮಾರನೇ ದಿನ ಹೊತ್ತು ನೆತ್ತಿಗೇರಿರುತ್ತದೆ. ಬರುವಾಗಲೂ ಹಲಗೆ ಬಾರಿಸಿಕೊಂಡು ಊರಿನಲ್ಲಿ ಹಾದುಕೊಂಡು ಕದ್ದಮಾಲನ್ನು ಪ್ರದರ್ಶಿಸಿಕೊಂಡು ಬರುತ್ತಾರೆ. ಆ ಸಪ್ಪಳ ಕೇಳಿಯೇ ಊರವರು ಬಾಗಿಲು ತೆರೆಯೋದು. ಕಳ್ಳಭಕ್ತರಿಗೆ ನೀರುನೀಡಿ, ಆಯಾಯ ಮನೆಯವರು ತಂತಮ್ಮ ಗಂಡಸರಿಗೆ ತಮ್ಮ ಮನೆಯ ಹರಕೆಯ ಬಲಿಪ್ರಾಣಿಯನ್ನು (ಅದೂ ಆಯಾ ವರ್ಷದ ಅವಧಿಯಲ್ಲಿ ಕದ್ದು ತಂದುದೇ) ಕೊಡುತ್ತಾರೆ. ಬಂಟರು ಹಾಗೇ ದೇವಿಯ ತನಕ ಬಂದು ಮೊದಲು ಬೆಳಗಾವಿಯ ಮೇಕೆಗಳನ್ನು ಬಲಿಕೊಟ್ಟು ಆಮೇಲೆ ತಂತಮ್ಮ ಬಲಿಗಳನ್ನು ಕತ್ತರಿಸಿ ಮನೆಗೆ ತರುತ್ತಾರೆ. ಅದನ್ನೇ ಅಡಿಗೆ ಮಾಡಿ ಉಂಡು ಬಯಲಾಟವಾಡಿ ಸಂತೋಷಪಡುತ್ತಾರೆ. ಇಲ್ಲಿಗೆ ಕುಮುದವ್ವನ ಜಾತ್ರೆ ಮುಗಿದಂತೆ. ಜಾತ್ರೆಯ ಒಟ್ಟಾರೆ ತತ್ವ ಏನೇ ಇರಲಿ, ಅದು ಬಂದಾಗ ನಮಗೆಲ್ಲ ಭಾರೀ ಆನಂದವಾಗುತ್ತಿತ್ತು. ಆ ಮೆರವಣಿಗೆ, ಆ ಕುಣಿತಗಳು, ಅವರು ಹೇಳುತ್ತ ಬರುವ ಕಳ್ಳತನದ ಪವಾಡಗಳು, ಅಂದಿನ ಬಯಲಾಟ – ಅಯ್ಯೋ ಈ ಹಬ್ಬ ಇಷ್ಟು ಬೇಗ ಕಳೆದು ಹೋಯಿತಲ್ಲಾ – ಎಂದು ಹಳಹಳಿಸುವಂತೆ ಮಾಡುತ್ತಿದ್ದವು. ಹಬ್ಬಹರಿದಿನಗಳಲ್ಲಿ ಈ ಜನ ಹಾಕುವ ಒಂದು ಜನಪ್ರಿಯ ವೇಷವಿದೆ. ‘ಗುಡದಪ್ಪನ ಸೋಗು’ ಎಂದು ಅದಕ್ಕೆ ಹೆಸರು. ಹಿಂದೆ ಗುಡದಪ್ಪ ಎಂಬಾತ ತಾಯಿ ಕುಮುದವ್ವನನ್ನು ಒಲಿಸಿಕೊಂಡಿದ್ದನಂತೆ. ಆತ ತಾಯಿಯ ಎದುರು ಕೂತು “ತಾಯೀ ಇಂದ ನಿನಗೇನ ಆದೆ ಆಗೇತಿ?” ಎಂದು ಕೇಳುತ್ತಿದ್ದನಂತೆ. ತಾಯಿ ಅವನಿಗೆ ಪ್ರತ್ಯಕ್ಷಳಾಗಿ “ಇಂಥಾ ಊರಿನ, ಇಂಥವನ ಮನೆಯನ್ನ, ಇಂಥಾ ಸಂಚಿನಿಂದ ಒಡೆದು ಇಂತಿಂಥಾ ವಸ್ತು ಒಡವೆ ಕದ್ದು ತಗಂಬಾ” ಎಂದು ಅಪ್ಪಣೆ ಕೊಡುತ್ತಿದ್ದಳಂತೆ! ಆ ದೇವಿಯೋ, ಆ ಭಕ್ತರೋ… ಸುಳ್ಳು ಯಾಕೆ, ಅಭಿಮಾನ ಬದಿಗಿರಿಸಿ ಹೇಳುತ್ತೇನೆ – ನನ್ನ ಊರಿನ ಜನ ಕಳ್ಳರೇ!

ಆದರೆ ನಮ್ಮ ಊರಿನಲ್ಲಿ ಮಾತ್ರ ಕಳ್ಳತನಗಳೇ ಆಗುವುದಿಲ್ಲ ಎನ್ನುವುದನ್ನು ನೀವು ಮರೆಯಬಾರದು. ಅದಕ್ಕೆ ದೇವಿಯ ಶಾಪವಿದೆ, ಕಠಿಣ ಶಿಕ್ಷೆಯಿದೆ. ಕಾರಣ ಹೀಗಿರಬಹುದು: ದೇಸಾಯರ ಮನೆತನವೊಂದನ್ನು ಬಿಟ್ಟರೆ ಊರಿನ ಎಲ್ಲರೂ ಬಡವರೇ, ಇದ್ದ ಜಮೀನೆಲ್ಲ ದೇಸಗತಿಯದು. (ಈಗೀಗ ‘ಉಳುವವನೇ ಭೂಮಿಯ ಒಡೆಯ’ ಎಂಬ ಕಾಯ್ದೆ ಬಂದಾಗಿನಿಂದ ಭೂಮಾಲೀಕರಾಗಿದ್ದಾರೆ ಅಷ್ಟೇ) ಆದ್ದರಿಂದ ಊರಿನ ಜನಗಳೆಲ್ಲ ಆ ಮನೆತನದ ಆಳುಗಳು; ಜೀತದಾಳುಗಳಾಗಿರಬಹುದು. ಚಾಕರಿಯವರಾಗಿರಬಹುದು, ಹರಕೆ ಆಳುಗಳಾಗಿರಬಹುದು, ಇಲ್ಲ ಮಾರಿಕೊಂಡವರಾಗಿರಬಹುದು. ಆಳುಗಳೆಂದ ಮೇಲೆ ಅವರಿಗೆ ಬೇಕಾದಷ್ಟು ಆಹಾರವಗೈರೆ ಸಿಕ್ಕದಿದ್ದಾಗ ಕಳ್ಳತನಕ್ಕಿಳಿಯುವುದು ಸಹಜ. ಆದರೆ ಸ್ವಂತ ಊರಿನಲ್ಲಿ ಮಾತ್ರ ಕಳ್ಳತನ ಮಾಡಬಾರದು. ಯಾಕೆಂದರೆ ಏನು ಕಳ್ಳತನ ಮಾಡಿದರೂ ದೇಸಗತಿಯೇ ಗುರಿಯಾಗುತ್ತದಾದ್ದರಿಂದ – ಹಿಂದಿನ ದೇಸಾಯರೇ ಕಳ್ಳತನಕ್ಕೆ ದೇವಿ ಆರಾಧನೆಯ ರೂಪ ಕೊಟ್ಟಿರಬಹುದು. ಇಲ್ಲದಿದ್ದರೆ ತಾಂತ್ರಿಕರ ದೇವಿಯೊಬ್ಬಾಕೆ ಕಳ್ಳತನ ಕಲಿಸುವುದು, ಕಳ್ಳಮಾಲು ಮಾತ್ರ ಸ್ವೀಕರಿಸುವುದು, ಊರಿನಲ್ಲಿ ಕಳ್ಳತನ ಮಾಡಬಾರದೆಂದು ಕಟ್ಟಳೆ ಮಾಡುವುದು – ಎಂದರೇನರ್ಥ ಕಳ್ಳರಾಗುವುದಕ್ಕೆ ಯಾರು ಬಯಸುತ್ತಾರೆ? ಶತಮಾನಗಳಿಂದ ತಾವು ಕಳ್ಳರಾಗಿ, ಅಪರಾಧಿಗಳಾಗಿ ಬಂದುದಕ್ಕೆ ಕುಮುದವ್ವನ ಮೂಲಕ ದೇಸಗತಿ ಮಾಡಿದ ವ್ಯವಸ್ಥೆಯೇ ಕಾರಣವೆಂದು ಜನರ ಕರಿಮನಸ್ಸಿಗೆ ಹೊಳೆಯುತ್ತ ಬಂದಿತ್ತು. ಅದು ಪೂರ್ತಿ ಗೊತ್ತಾಗಿ ಅವರು ಕಣ್ಣು ತೆರೆದಾಗ ಎದುರು ಸಿಕ್ಕವನು ಅರಮನೆಯ ಕೊನೆಯ ದೇಸಾಯಿ. ಅಪರಾಧಿ ಅವನಲ್ಲ ನಿಜ. ಅಷ್ಟೇ ಅಲ್ಲ, ಅವನು ಯಾವನೇ ದೊಡ್ಡಮನುಷ್ಯನಿಗಿಂತ ಕೊಂಚ ಮಾತ್ರ ಕಮ್ಮಿಯೆಂದು ನಾನು ಕೈ ಎತ್ತಿ ಹೇಳಬಲ್ಲೆ. ಆದರೆ ಆತ ಹಿಂದಿನದವರ ಆಸ್ತಿಗೆ ಮಾತ್ರವಲ್ಲ, ಅಪರಾಧಕ್ಕೂ ಹೊಣೆಗಾರನಾಗಬೇಕಾಯ್ತು. ಅವನು ಪಂಚಾಯ್ತಿ ಎಲೆಕ್ಷನ್ನಿಗೆ ನಿಂತಾಗ, ಜನ ಅವನನ್ನಲ್ಲ ಆ ವಂಶದ ಭೂತಕಾಲ ನೋಡಿ ಸೋಲಿಸಿಬಿಟ್ಟರು. ಒಮ್ಮೆ ಜನ ಸ್ವತಂತ್ರರಾದರೋ, ಮುಂದೆ ಅರಮನೆಯನ್ನು ಅದರಷ್ಟಕ್ಕೆ ಬಿಟ್ಟು ಊರಿನ ಯಾವ ಚಟುವಟಿಕೆಯಲ್ಲೂ ಅದು ಭಾಗಿಯಾಗದಂತೆ ನೋಡಿಕೊಂಡರು. ಹಾಗೂ ಅರಮನೆಯಲ್ಲಿ ಏನು ನಡೆದರೂ, ಅದಕ್ಕೆ ನಿರ್ಲಿಪ್ತರಾಗಿ ಉಳಿದರು. ಅರಮನೆಯ ಕೊನೆಗಾಲದ ಈ ಕಥೆಯನ್ನು ಹೇಳುವುದೇ ನನ್ನ ಉದ್ದೇಶ. ಆದರೆ ಅದರ ಪ್ರತ್ಯಕ್ಷ ಸ್ಪರ್ಶ ಇರಲಿಲ್ಲವೆಂದನಲ್ಲ, ಶೀನಿಂಗವ್ವನನ್ನು ಕೇಳುವುದಕ್ಕೆ, ಅವಳಿಂದ ಕಥೆ ಹೊರಡಿಸಲಿಕ್ಕೆ ಸೂಟಿಯಲ್ಲಿ ಶಿವಾಪುರಕ್ಕೆ ಹೋದೆ.

* * *