‘ಸಿಂಗಾರೆವ್ವ ಮತ್ತು ಅರಮನೆ’ ಮೊದಲು ಮುದ್ರಣವಾದದ್ದು ೧೯೮೨ರಲ್ಲಿ. ಪ್ರಜಾವಾಣಿ ಪತ್ರಿಕಾ ಬಳಗ ಪ್ರಕಾಶನ ಆರಂಭಿಸಿದಾಗ ಆ ಮಾಲಿಕೆಯಲ್ಲಿ ಸಿಂಗಾರೆವ್ವ ಮತ್ತು ಅರಮನೆ ಪ್ರಕಟವಾಗಿತ್ತು. ಅಲ್ಲಿಯೇ ಹಲವಾರು ಮುದ್ರಣಗಳನ್ನು ಕಂಡಿತು. ಈ ಕಾದಂಬರಿಯನ್ನು ನನ್ನಿಂದ ಬರೆಯಿಸಿ ಪ್ರಕಾಶ ಪಡಿಸಿದ ಪ್ರಜಾವಾಣಿಯ ಬಳಗಕ್ಕೆ ನನ್ನ ಹೃತ್ಪೂರ್ವಕ ವಂದನೆಗಳನ್ನು ಹೇಳುತ್ತೇನೆ. ನಂತರ ಅಕ್ಷರ ಪ್ರಕಾಶನದವರು ಈ ಕೃತಿಯ ಕೆಲವು ಮುದ್ರಣಗಳನ್ನು ಹೊರತಂದರು. ಈ ಕಾದಂಬರಿಯನ್ನು ಮುದ್ರಿಸಿ ಜನಪ್ರಿಯಗೊಳಿಸಿದ ಹಿಂದಿನ ಪ್ರಕಾಶಕರೆಲ್ಲರಿಗೂ ನನ್ನ ವಂದನೆಗಳು.

ಈ ಕೃತಿಯ ಇಂಗ್ಲಿಷ್ ಅನುವಾದಕ್ಕೆ ಖ್ಯಾತ ಮಲಯಾಳಂ ಸಾಹಿತಿ ಶ್ರೀ ಎಂ.ಟಿ. ವಾಸುದೇವನ್ ನಾಯರ್ ಅವರು ಮುನ್ನುಡಿ ಬರೆದಿದ್ದಾರೆ. ಅವರ ಇಂಗ್ಲಿಷ್ ಲೇಖನವನ್ನು ಹಾಗೆಯೇ ಉಳಿಸಿಕೊಂಡಿದ್ದೇನೆ. ಶ್ರೀ ಎಂ.ಟಿ. ವಾಸುದೇವನ್ ನಾಯರ್ ಅವರಿಗೆ ಹಾಗೂ ಇಂಗ್ಲಿಷಿಗೆ ಅನುವಾದಿಸಿದ ಶ್ರೀಮತಿ ಲಕ್ಷ್ಮಿ ಚಂದ್ರಶೇಖರ ಅವರಿಗೂ ನನ್ನ ನಮನಗಳು.

ಮಲಯಾಳಂನ ‘ಮಾತೃಭೂಮಿ’ ಪತ್ರಿಕೆಯಲ್ಲಿ ಈ ಕೃತಿಯ ಅನುವಾದ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಅದನ್ನು ಓದಿ, ಮೆಚ್ಚಿ, ಪ್ರತಿಕ್ರಿಯಿಸಿದ ಓದುಗರೆಲ್ಲರಿಗೆ ನನ್ನ ವಂದನೆಗಳು.

ಇದೀಗ ‘ಅಂಕಿತ ಪುಸ್ತಕ’ದವರು ಈ ಕೃತಿಯ ಹದಿನಾರನೆಯ ಮುದ್ರಣವನ್ನು ಹೊರತರುತ್ತಿದ್ದಾರೆ. ಅವರಿಗೆ;

ಮುದ್ರಿಸಿದ ಸ್ವ್ಯಾನ್ ಪ್ರಿಂಟರ್ಸ್‌ ಅವರಿಗೆ; ಮುಖಪುಟ ರಚಿಸಿದ ಶ್ರೀ ಹಾದಿಮನಿ ಅವರಿಗೆ ನನ್ನ ವಂದನೆಗಳು ಸಲ್ಲುತ್ತವೆ.

ಚಂದ್ರಶೇಖರ ಕಂಬಾರ