ಹನ್ನೆರಡು ಘಂಟೆ ಹೊಡೆದಾಗ ಅರಮನೆಯ
ಇರುಳಿನುಕ್ಕಡದೊಳಗೆ, ನರ್ತನದ ವರ್ತುಲ-
ದಿಂದ ಓಡಿದಳು ಬೆಡಗಿ. ಹೆಬ್ಬಾಗಿಲನು ದಾಟಿ
ಕತ್ತಲೆಗೆ ಕಾಲಿಟ್ಟಾಗ ಮಾಂತ್ರಿಕತೆಯೆಲ್ಲ-

ವೂ ಕರಗಿ, ಸರಳ ಸಾಧಾರಣದ ಬಡಕುಟುಂ-
ಬದ ಹುಡುಗಿ. ಸುತ್ತ ಛಳಿಗಾಳಿ, ನಡುಕ.
ಇನ್ನೂ ಕೇಳಿ ಬರುತ್ತಲಿದೆ ಅರಮನೆಯ ಝಗ-
ಮಗದ ಬೆಳಕಿನೊಳಗಿಂದ ಅಪ್ಸರ ಲೋಕ-

ದುತ್ಸಾಹಗಳ ಗೀತ ನೃತ್ಯಾದಿ ಮೃದುಮಧುರ
ನಿನಾದ. ಜತೆಗೆ ಏನೋ ಕೋಲಾಹಲ. ಎಲ್ಲಿ,
ಎಲ್ಲಿ ಹೋದಳು ಈ ಉತ್ಸವದ ಕೇಂದ್ರವಾ-
ಗುತ್ತ ಇದುವರೆಗು ನರ್ತಿಸಿದ ಅನಂಗನ ಬಳ್ಳಿ?

ದಿಗ್ಭ್ರಾಂತನಾದ ದೊರೆಗುವರನಪ್ಪಣೆಗೆ, ಸುತ್ತ
ಹತ್ತೂ ಕಡೆಯ ಕತ್ತಲಿನಲ್ಲಿ ಚಲಿಸಿದವು ದೀಪ.
ಹುಡುಕಾಡಿದರೆ ಎಲ್ಲೂ ಇಲ್ಲ, ಅವಳಿಲ್ಲ; ಬದಲು
ಕಂಡಿತ್ತು ಹೊಸ್ತಿಲ ಹೊರಗೆ ಬಲು ಅಪರೂಪ-

ವಾದ ಒಂದೇ ಒಂದು ಹೊಳೆಯುವ ಬೂಡ್ಸು ಅ-
ನಾಥವಾಗಿ ! ಕೈಗೆತ್ತಿಕೊಂಡ ರಾಜಕುಮಾರ
ಒಳಮನೆಯೊಳಗೆ ಕೂತ ಚಿಂತಾಕ್ರಾಂತ. ಇತ್ತ
ಸಿಂಡರೆಲಾ ಅಡುಗೆ ಮನೆಯೊಳಗೆ : ಸುಂದರ-

ವಾದ ಶ್ಲೋಕದಿಂದುದುರಿ ನಿರರ್ಥಕವಾದ ಪಾ-
ದದ ಹಾಗೆ, ಏಕಾಂಗಿಯಾಗಿ ಚಡಪಡಿಸುತ್ತ
ಪ್ರೀತಿ-ಪ್ರತಿಭೆಯ ಕರುಣೆ ಮತ್ತೆ ಹಿಡಿದೆತ್ತಿ
ಕೂಡಿಸುವ ಮಾಂತ್ರಿಕ ಮುಹೂರ್ತಕ್ಕೆ ಕಾಯುತ್ತ.