ಕಡ್ಲೇವಾಡ

ದೂರ:
ಜಿಲ್ಲಾ ಕೇಂದ್ರದಿಂದ-೯೦ ಕಿ.ಮೀ.
ತಾಲೂಕ ಕೇಂದ್ರದಿಂದ-೩೦ ಕಿ.ಮೀ.

ವಿಜಾಪುರದಿಂದ ಪೂರ್ವಕ್ಕೆ ೬೦ ಕಿ.ಮೀ. ಅಂತರದಲ್ಲಿ ತಾಲೂಕಾ ಸ್ಥಳ ಸಿಂದಗಿ ಇರುತ್ತದೆ. ಅಲ್ಲಿಂದ ಉತ್ತರಕ್ಕೆ ೩೦ ಕಿ.ಮೀ. ದೂರದಲ್ಲಿ ಕಡ್ಲೇವಾಡ ಇರುತ್ತದೆ. ಈ ಊರು ದೇವಣಗಾಂವ ಸಮೀಪದಲ್ಲಿ ಭೀಮಾನದಿಯ ದಂಡೆಯ ಮೇಲಿದೆ.

ಕಡ್ಲೇವಾಡದಲ್ಲಿ ಕಲ್ಯಾಣ ಚಾಳುಕ್ಯ ಶೈಲಿಯ ಸೋಮೇಶ್ವರ ದೇವಾಲಯವು ಒಂದು ಸಂಕೀರ್ಣ ಕಟ್ಟಡವಾಗಿದೆ. ಇದಕ್ಕೆ ದಕ್ಷಿಣ ಕಾಶಿ ಎಂದೂ ಇಲ್ಲಿನ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಸ್ಥಳೀಯವಾಗಿ ಸ್ವಾಮಿಲಿಂಗ ಅಥವ ಸೋಮನಾಥ ದೇವಾಲಯವೆಂದು ಕರೆಯಲಾಗುತ್ತಿದೆ.

ದೇವಾಲಯದ ಗರ್ಭಗೃಹವು ನಕ್ಷತ್ರ ಆಕಾರದ ತಳವಿನ್ಯಾಸ ಹೊಂದಿದೆ. ಮೇಲ್ಭಾಗದಲ್ಲಿದ್ದ ಕದಂಬ ನಾಗರ ಶೈಲಿಯ ಶಿಖರವು ಬಿದ್ದಿದೆ. ಒಳಗೆ ಪ್ರಾಚೀನ ಪಾಣಿಪೀಠದ ಮೇಲೆ ಬಾಣಲಿಂಗವಿದೆ. ದೇವಾಲಯದ ನವರಂಗದ ಮುಂಭಾಗದಲ್ಲಿ ಕಿರು ಅರ್ಧ ಮಂಟಪವಿದ್ದು, ಇದರ ಮುಂದೆ ಎರಡು ವಿಶಾಲವಾದ ಮುಖಮಂಟಪಗಳಿವೆ. ಅಲ್ಲಿರುವ ಸ್ತಂಭಗಳ ಮೇಲೆ ಸೂರ್ಯ, ಕಾಳಭೈರವ, ಶಿವ, ವಿಷ್ಣು, ನಾರಾಯಣ, ಗೋಪಾಲಕೃಷ್ಣ, ಬೇಡರ ಕಣ್ಣಪ್ಪ ಮೊದಲಾದ ದೇವ-ದೇವತೆಗಳ ಸುಂದರ ಉಬ್ಬು ಶಿಲ್ಪಗಳಿವೆ. ಇವು ನೋಡುಗನ ಮನಸ್ಸನ್ನಾಕರ್ಷಿಸುತ್ತವೆ.

ದೇವಾಲಯದ ಗೋಡೆಗಳ ನಕ್ಷತ್ರಾಕಾರವಾಗಿರುವ ಮೂಲೆಗಳಲ್ಲಿ ನಾಟ್ಯಭಂಗಿಯಲ್ಲಿರುವ ಮದನಿಕೆಯರ ವಿಗ್ರಹಗಳನ್ನು ಅತ್ಯಂತ ಆಕರ್ಷಕವಾಗಿ ಕೆತ್ತಲಾಗಿದೆ. ಈ ರೀತಿಯ ವಿಗ್ರಹಗಳು ದೇವಾಲಯದ ಸುತ್ತಲೂ ಕಂಡುಬರುತ್ತವೆ. ತಳಪಾಯದ ಮೇಲೆ ಭಿತ್ತಿಗಳಲ್ಲಿ ಅಂಕಣಗಳಿದ್ದು ಹಂಸಗಳ ಸಾಲು, ಆನೆಗಳ ಸಾಲು ಮತ್ತು ವಿವಿಧ ಅಲಂಕಾರಿಕ ಲತೆ, ಬಳ್ಳಿಗಳ ಅಲಂಕಾರವಿರುವುದು ಕಂಡು ಬರುತ್ತವೆ. ಈ ರೀತಿಯ ಶಿಲ್ಪಕಲೆಯು ಹಂಪಿಯ ಹಜಾರ ರಾಮ ದೇವಸ್ಥಾನದಲ್ಲಿಯೂ ಕಾಣಬಹುದು.

ಸೋಮೇಶ್ವರ ದೇವಾಲಯದ ಹಿಂಭಾಗದಲ್ಲಿ ಅನತಿ ದೂರದಲ್ಲಿ ಇನ್ನೊಂದು ಕಲ್ಯಾಣ ಚಾಳುಕ್ಯರ ಶೈಲಿಯ ತ್ರಿಕೂಟಾಚಲವಿದೆ. ಈ ದೇವಾಲಯವು ಶಿಥಿಲಾವಸ್ಥೆಯಲ್ಲಿದೆ.

 

ಸಿಂದಗಿ
ದೂರ: ಜಿಲ್ಲಾ ಕೇಂದ್ರದಿಂದ-೬೦ ಕಿ.ಮೀ.

ಶ್ರೀಸಂಗಮೇಶ್ವರ ದೇವಸ್ಥಾನದ ಹೆಬ್ಬಾಗಿಲು

ಸಿಂದಗಿಯು ತಾಲೂಕಾ ಸ್ಥಳವಾಗಿದೆ. ಇದು ವಿಜಾಪುರದಿಂದ ಪೂರ್ವಕ್ಕೆ ೬೦ ಕಿ.ಮೀ. ದೂರದಲ್ಲಿದೆ. ಸಿಂದಗಿಯನ್ನು ಕ್ರಿ.ಶ. ೧೨೦೦ರಲ್ಲಿ ಸಿಂದು ಬಲ್ಲಾಳ ಎಂಬ ಸಾಮಂತ ಅರಸನು ಕಟ್ಟಿದನೆಂಬ ಪ್ರತೀತಿ ಇದೆ. ಆದ್ದರಿಂದ ಈ ಊರಿಗೆ ಸಿಂದಗಿ ಎಂಬ ಹೆಸರು ಬಂದಿದೆ. ಇಲ್ಲಿರುವ ಸಂಗಮೇಶ್ವರ ದೇವಾಲಯವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಿತವಾಗಿದೆ. ದೇವಾಲಯದ ಗರ್ಭಗೃಹದ ಮೇಲೆ ಕದಂಬ ನಾಗರ ಶೈಲಿಯ ಶಿಖರ ಭಾಗವಿದೆ. ನವರಂಗದಲ್ಲಿ ಕಲ್ಯಾಣ ಚಾಲುಕ್ಯರ ನಾಲ್ಕು ಸ್ತಂಭಗಳಿವೆ. ಗೋಡೆಗಳಲ್ಲಿ ದೇವ ಕೋಷ್ಠಗಳಿರುತ್ತವೆ. ಬಿಡಿ ಲಿಂಗ, ವೇಣುಗೋಪಾಲ, ವಿಷ್ಣು ಅಥವಾ ನಾರಾಯಣ, ಭಕ್ತ ದಂಪತಿಗಳು ಮೊದಲಾದ ಬಿಡಿ ಶಿಲ್ಪಗಳು ಕಂಡುಬರುತ್ತವೆ.

ದೇವಾಲಯದ ಎದುರಿಗೆ ತೆರೆದ ಮಂಟಪದಲ್ಲಿ ಶಿವಲಿಂಗಗಳೂ, ಎರಡು ನಂದಿಗಳು, ಮಹಿಷ ಮರ್ಧಿನಿಯರ ಶಿಲಾಕೃತಿಗಳಿವೆ. ಸುತ್ತಲೂ ವಿಶಾಲವಾದ ಪ್ರಾಂಗಣವಿದೆ. ಪ್ರಾಂಗಣದಲ್ಲಿ ಮೂರು ಜನ ಯತಿಗಳು, ಪಾರ್ವತಿ, ಭೈರವ ಮೊದಲಾದ ವಿಜಯನಗರೋತ್ತರ ಶೈಲಿಯ ಬೃಹತ್ ಶಿಲ್ಪಗಳಿವೆ. ಪ್ರತಿ ವರ್ಷ ಸಂಕ್ರಮಣಕ್ಕೆ ಈ ದೇವಾಲಯದಲ್ಲಿ ಜಾತ್ರೆ ನಡೆಯುತ್ತದೆ.

ದೇವಾಲಯದ ಒಳ ಪ್ರಾಕಾರವು ವಿಶಾಲವಾಗಿದೆ. ಪ್ರದಕ್ಷಿಣಾ ಪಥದ ಬಲಭಾಗದಲ್ಲಿ ಪ್ರತ್ಯೇಕವಾದ ಭ್ರಮರಾಂಬಿಕಾ ದೇವಾಲಯವಿದೆ. ನರಸಿಂಹ ಮತ್ತು ಬನಶಂಕರಿಯ ಚಿಕ್ಕ ಗುಡಿಗಳು ಇರುತ್ತವೆ. ಅನೇಕ ಬಿಡಿ ವಿಗ್ರಹಗಳು ಈ ದೇವಾಲಯದಲ್ಲಿ ಇರುತ್ತವೆ.

ಶ್ರೀಸಂಗಮೇಶ್ವರ ದೇವಸ್ಥಾನದಲ್ಲಿನ ಯತಿಗಳ ಶಿಲಾ ಮೂರ್ತಿಗಳು


 

ಶ್ರೀಸಂಗಮೇಶ್ವರ ದೇವಸ್ಥಾನ ಹಾಗೂ ಭ್ರಮರಾಂಬಿಕಾ ದೇವಸ್ಥಾನ (ಬಲಬದಿ)


 

ನಿಮ್ಮ ಪ್ರವಾಸ ಸಂತಸದಾಯಕ ಹಾಗೂ ಸುಖಕರವಾಗಿರಲಿ