ಪರಗಣಿ ಜತ್ತಿ ಉಮರಾಣಿ ದೇಶೇಕ ವಾಹೀಣಿ
ಆಳುವಂತಾ ಧಣಿ ಡಪಳೆ ಸರಕಾರಾ
ಜತ್ತಿ ಸಂಸ್ಥಾನ ಪೈಕಿ ಸಣ್ಣ ಹಳ್ಳಿ ಸಿಂಧೂರ
ಸಿಂಧೂರಾಗ ಲಕ್ಷ್ಮಣ ಹುಟ್ಟ್ಯಾನ ಬಂಟ ಅನಿಸ್ಯಾನ
ಕೊಟ್ಟ ವಚನ ಅವಾ ಎಂದೂ ತಪ್ಪಲಿಲ್ಲ
ಘಟಾ ಹೋಗುತನಕಾ ಹಿಡದ ಹಟಾ ಬಿಡಲಿಲ್ಲ
ಪಾಂಡವರೊಳಗ ಇದ್ಹಾಂಗ ಭೀಮ ಚೆಲುವ ಚಂದ್ರಾಮ
ಥೇಟ ಹೋಳೀಕಾಮಾ ರೂಪದಲಿ ಡೌಲ
ಎಂಥಾ ತಾಯಿ ಹೊಟ್ಟೆಲೆ ಹುಟ್ಟಿದಾನೋ ಪ್ರಬಲ ||…….

ಜನಪದ ಕವಿಯೋರ್ವ ಲಕ್ಷ್ಮಣನ ವೀರಗಾಥೆಯನ್ನು ವರ್ಣಿಸಿ ಜಾನಪದ ಪದ್ಯವಿದು.

ಲಕ್ಷ್ಮಣ ಹುಟ್ಟಿದ್ದು ಮಹಾರಾಷ್ಟ್ರ ನೆಲದಲ್ಲಿ. ಬ್ರಿಟಿಷರ ಪಿತೂರಿಯಿಂದಾಗಿ ಗುಂಡಿಗಾಹುತಿಯಾದ ಅವನ ಪಾರ್ಥಿವ ಶರೀರ ಮಲಗಿದ್ದು ಬೀಳಗಿಯ ಮಣ್ಣಿನಲ್ಲಿ! ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಉಕ್ಕುತ್ತಿದ್ದ ತರುಣ ವಯಸ್ಸಿನಲ್ಲಿ ಯಾವುದೋ ವಿಷ ಘಳಿಗೆಯಲ್ಲಿ ಹುಟ್ಟಿದೂರನ್ನೂ, ಹೆತ್ತ ತಾಯಿಯನ್ನೂ, ಕೈಹಿಡಿದ ಹೆಂಡತಿಯನ್ನೂ ತೊರೆದು ದೂರದ ನಾಡಿಗೆ ಬಂದು ಪ್ರಾಣ ಕಳೆದುಕೊಂಡದ್ದೊಂದು ವಿಧಿಯ ವೈಚಿತ್ರ್ಯ! ದೂರದ ನಾಡಿಗೆ ಬಂದು ಪ್ರಾಣ, ಬಡಜನತೆಯ ಶೋಷಣೆಯ ವಿರುದ್ಧ ಸಿಡಿದೆದ್ದು ಮಾಡಿದ ಹೋರಾಟ, ತೋರಿದ ಸಾಹಸ ವೀರಗಾಥೆಯಾಗಿ ಇಂದು ಜನಪದರ ನಾಲಿಗೆಯ ಮೇಲೆ ನಿಂತುಕೊಂಡಿದೆ. ಚಿತ್ರದುರ್ಗದ ವೀರ ಮದಕರಿನಾಯಕ, ಸುರಪುರದ ವೆಂಕಟಪ್ಪನಾಯಕ ಇವರ ಸಾಲಿನಲ್ಲಿ ಸೇರಿಕೊಳ್ಳಬೇಕಾದ ಇನ್ನೊಂದು ಹೆಸರು “ಸಿಂಧೂರ ಲಕ್ಷ್ಮಣನಾಯಕ”.

ಮಹಾರಾಷ್ಟ್ರದ ಜತ್ತ ಸಂಸ್ಥಾನದಲ್ಲಿ ಸಿಂಧೂರ ಒಂದು ಸಣ್ಣ ಹಳ್ಳಿ. ಅಲ್ಲಿ ನಾಯಕರ ಸಾಬಣ್ಣ ಮತ್ತು ನರಸವ್ವ ದಂಪತಿಗಳ ದೊಡ್ದ ಮನಸ್ಸಿನ ಈ ದಂಪತಿಗಳು ಎಲ್ಲರೊಡನೆ ಬೆರೆತು, ಬಡತನದಲ್ಲಿಯೇ ಬದುಕು ಸಾಗಿಸುತ್ತಿರುವ ಹೃದಯ ಶ್ರೀಮಂತರಾಗಿದ್ದರು. ಜತ್ತ ಸಂಸ್ಥಾನದ ಸೇವೆಯಲ್ಲಿದ್ದ ಗ್ರಾಮದ ಗೌಡರ ಬಳಿಯಲ್ಲಿ ಸಾಬಣ್ಣ ವಾಲೀಕರನಾಗಿದ್ದ. ಅವನ ಚಾಕರಿಗಾಗಿ ಸಂಸ್ಥಾನ ಸರ್ಕಾರ ಒಂದಿಷ್ಟು ಬೀಳು ಭೂಮಿಯನ್ನು ಉಂಬಳಿಯಾಗಿ ನೀಡಿತ್ತು. ಗಂಡ ಹೆಂಡತಿ ಅದೇ ಬೀಳು ಭೂಮಿಯನ್ನೇ ಹದಗೊಳಿಸಿ ಉತ್ತಿ ಬಿತ್ತಿ ಬೇಸಾಯ ಮಾಡುತ್ತಿದ್ದರು. ಭೂಮಿಯಲ್ಲಿ ದುಡಿಯುತ್ತಲೆ. ಸಾಬಣ್ಣ ಸರ್ಕಾರದ ಚಾಕರಿ ಮಾಡುತ್ತಿದ್ದ.

ಸಾಬಣ್ಣ ನರಸವ್ವ ದಂಪತಿಗಳ ಬದುಕಿನ ಡೋಣಿ ಸಂಸಾರ ಸಾಗರದಲ್ಲಿ ಹೀಗೆ ತೇಲುತ್ತಿರುವಾಗ ನರಸವ್ವ ಗರ್ಭವತಿಯಾದಳು. ನರಸವ್ವ ಹೆಣ್ಣು ಮಗುವಿಗೆ ಜನ್ಮವಿತ್ತಳು. ಸಾಬಣ್ಣನ ಆಸೆಗೆ ತಣ್ಣೀರೆರಚಿದ ಹಾಗಾಯಿತು. “ಪಹಿಲಾ ಬೇಟಿ ತೂಪ ರೋಟಿ” ಎನ್ನುವ ಪ್ರಚಲಿತ ಗಾದೆಯನ್ನು ಕೇಳಿದ್ದು ಚೊಚ್ಚಲ ಮಗು ಹೆಣ್ಣಾದರೆ ರೊಟ್ಟಿ ತುಪ್ಪದಲ್ಲಿ ಎಂದು ಸಮಾಧಾನ ತಾಳಿ, ಮುಂದಿನ ಮಗು ಗಂಡೇ ಅಗುತ್ತದೆನ್ನುವ ಭರವಸೆ ತಾಳಿದರು. ಮಗಳಿಗೆ ಸತ್ಯವ್ವ ಅಂತ ಹೆಸರಿಟ್ಟರು. ಸತ್ಯವ್ವ ಹುಟ್ಟಿದ ಮೂರು ವರ್ಷಕ್ಕೆ ಎರಡನೆಯ ಮಗಳು ಸಕ್ರವ್ವ ಹುಟ್ಟಿದಳು. ಹೆಣ್ಣು ಮಕ್ಕಳಿಬ್ಬರನ್ನೂ ನರಸವ್ವ ಚೆನ್ನಾಗಿ ಬೆಳಸುತ್ತಿದ್ದಳು. ಸತ್ಯವ್ವ ಸಕ್ರವ್ವ ಅಕ್ಕತಂಗಿಯರು ಅಕ್ಕರೆಯಿಂದ ಆಟವಾಡಿಕೊಂಡು ಅವ್ವನಿಗೆ ಮುದನೀಡುತ್ತ ಮನೆಗೆಲಸದಲ್ಲಿ ನೆರವಾಗುತ್ತಿದ್ದರು. ಆದರೂ ಸಾಬಣ್ಣ ನರಸವ್ವನಿಗೆ ಗಂಡು ಮಗುವಿನಾಶೆ ಬಿಟ್ಟಿರಲಿಲ್ಲ.

ಗಂಡು ಸಂತಾನಕ್ಕಾಗಿ ನರಸವ್ವ ಅಲ್ಲಲ್ಲಿ ಜ್ಯೋತಿಷ್ಯ ಕೇಳಿದಳು. ವ್ರತ ನೇಮಗಳನ್ನು ಆಚರಿಸುತ್ತ ಕುಲದೈವ ಆಂಜನೇಯ ಸ್ವಾಮಿಗೆ ಹರಕೆ ಹೊತ್ತಳು. ವರುಷ ಆರು ಕಳೆದವು. ದೇವರು ತಮ್ಮ ಹಣೆಯಲ್ಲಿ ಗಂಡು ಸಂತಾನವನ್ನಾದರೂ ಬರೆದಾನೋ ಇಲ್ಲವೋ ಎನ್ನುವ ಶಂಕೆ ಸಾಂಬಣ್ಣ ನರಸವ್ವರಲ್ಲಿ ಬೆಳೆಯಹತ್ತಿತು. ಮನೆಯಲ್ಲಿ ಗಂಡು ಮಗನೊಬ್ಬನಿರಲೇಬೇಕೆನ್ನುವ ಬಯಕೆಯಿಂದ ನರಸವ್ವ ತನ್ನ ಸಂಬಂಧಿಕರ ಮನೆಯಿಂದ ರಾಮನೆಂಬ ಅರು ವರ್ಷದ ಹುಡುಗನನ್ನು ಕರೆತಂದು ಮನೆಯಲ್ಲಿರಿಸಿಕೊಂಡಳು. ಇದು ಸಾಬಣ್ಣನ ಮನಸ್ಸಿಗೆ ಸಮಧಾನ ತರದಿದ್ದರೂ ಹೆಂಡತಿಯ ಮನಸ್ಸಿಗೆ ನೋವು ಮಾಡಬಾರದೆಂದು ಮೌನವಾಗಿದ್ದನು.

ನರಸವ್ವ ರಾಮನನ್ನು ತನ್ನ ಹೊಟ್ಟೆಯ ಮಗನಂತೆಯೇ ಸಾಕಿ ಸಲಹುತ್ತಿದ್ದಳು. ಹೀಗೆಯೇ ವರ್ಷ ಹಲವು ಉರುಳಿದ ಬಳಿಕ ರಾಮು ಮನೆಯಲ್ಲಿ ಕಾಲಿಟ್ಟ ಪ್ರಭಾವವೋ ಅಥವಾ ನರಸವ್ವ ಹೊತ್ತ ಹರಕೆ ಆಂಜನೇಯಸ್ವಾಮಿಗೆ ತಿಳಿಯಿತೋ ಏನಾದರಾಗಲಿ ಆರುವರ್ಷದ ಮೇಲೆ ನರಸವ್ವ ಮತ್ತೆ ಗರ್ಭೀಣಿಯಾದಳು. ಸಾಬಣ್ಣನಿಗೆ ಗಂಡು ಸಂತಾನದ ಆಸೆ ಮತ್ತೆ ಚಿಗುರೊಡೆಯಿತು. ಗರ್ಭಕ್ಕೆ ದಿನತುಂಬಿ ನರಸವ್ವ ವಸಂತಋತು, ಚೈತ್ರಮಾಸ, ಶುದ್ಧ ಸಪ್ತಮಿ ತಿಥಿ, ಮೃಗಶಿರಾ ನಕ್ಷತ್ರ ಶುಭ ಮುಹೂರ್ತದಲ್ಲಿ ಗುರುವಾರ ದಿನ ಗಂಡು ಮಗುವಿಗೆ ಜನ್ಮವಿತ್ತಳು.

ನರಸವ್ವ ಮುಖದಲ್ಲಿ ಎಲ್ಲಿಲ್ಲದ ಹರ್ಷ. ಇಷ್ಟು ವರ್ಷದ ಮೇಲಾದರೂ ಆಂಜನೇಯಸ್ವಾಮಿ ತನ್ನ ಬಯಕೆ ಈಡೇರಿಸಿದನಲ್ಲ ಎಂದು ಬಾಣಂತಿ ತನ್ನ ಮಗ್ಗುಲಲ್ಲಿ ನವಜಾತ ಶಿಶುವನ್ನಿರಿಸಿಕೊಂಡು ಮಲಗಿದ್ದ ಹೊರಸಿನ ಮೇಲೆಯೇ ಅದೆಷ್ಟು ಬಾರಿ ದೇವರಿಗೆ ಕೈಮುಗಿದಳೊ ಆ ಆಂಜನೇಯನಿಗೇ ಗೊತ್ತು. ಸಾಬಣ್ಣನಂತೂ ತನಗೆ ಗಂಡು ಮಗುವಾಯಿತೆಂದು ಊರಲ್ಲಿ ಅವರಿವರ ಮುಂದೆ ಹೇಳಿದ್ದೇ ಹೇಳಿದ್ದು. ಹೆರಿಗೆಯಾದ ಹನ್ನೆರಡನೆಯ ದಿನಕ್ಕೆ ತೊಟ್ಟಿಲಕ್ಕೆ ಹಾಕಿ ಕೂಸಿಗೆ ಲಕ್ಷ್ಮಣ ಅಂತ ಹೆಸರಿಟ್ಟರು. ಮೊದಲನೆಯ ಸಾಕುಮಗ ರಾಮ. ಈಗ ಹೊಟ್ಟೆಯ ಮಗ ಲಕ್ಷ್ಮಣ ರಾಮ ಲಕ್ಷ್ಮಣ ಸೋದರರಾದರು.

ಲಕ್ಷ್ಮಣ ಬಿದಿಗೆಯ ಚಂದಿರನಂತೆ ಬೆಳೆಯುತ್ತ ಹನ್ನೆರಡು ವರ್ಷದವನಾದ. ವಾರಿಗೆಯ ಗೆಳೆಯರೊಡನೆ ಕೂಡಿ ಆಡುತ್ತ ಅವರಿಗೆಲ್ಲ ತಾನೇ ಹಿರಿಮಣಿಯಾದ. ಗೆಳೆಯರನ್ನು ಕರೆದುಕೊಂಡು ಅಡವಿಗೆ ಹೋಗಿ ಕಲ್ಲು ಹೊಡೆಯುತ್ತ ಮೊಲಗಳ ಬೇಟೆಯಾಡುತ್ತಿದ್ದ. ಚಿಗರಿಯಂತೆ ಚಂಗನೆ ಜಿಗಿಯುತ್ತಿದ್ದ. ಗಿಡಮರಗಳನ್ನು ಸರಸರನೆ ಏರುತ್ತಿದ್ದ. ನೆಲದಲ್ಲಿ ಟಣ್ಣನೆ ಜಿಗಿದು ಎತ್ತರದ ಗೋಡೆಗಳನ್ನು ಹತ್ತುತ್ತಿದ್ದ. ಊರ ದೇವರು ಹನುಮಪ್ಪನ ಗುಡಿ ಮುಂದಿನ ಬಯಲು ಜಾಗೆಯಲ್ಲಿ ಶಕ್ತಿ ಪ್ರದರ್ಶನ ನಡೆದಾಗ ಲಕ್ಷ್ಮಣ ಸಂಗ್ರಾಣಿ ಕಲ್ಲು ಹಾಗೂ ಭಾರವಾದ ಕಲ್ಲಿನ ಗುಂಡುಗಳನ್ನು ಸಲೀಸಾಗಿ ಎತ್ತಿ ಜನರಿಂದ ಸೈ ಎನಿಸಿಕೊಳ್ಳಿತ್ತಿದ್ದ.

ಅಂದು ಊರ ಚಾವಡಿ ಮುಂದಿನ ಬಯಲಿನಲ್ಲಿ ಗುರಿ ಹೊಡೆಯುವ ಪಂದ್ಯ ಇತ್ತು. ಕವಣೀ ಬೀಸಿ ಕಲ್ಲು ಹೊಡೆದು, ಎದ್ದು ನಿಲ್ಲಿಸಿದ ಎಡೀಗದ ಕಣ್ಣೊಳಗಿಂದ (ತೂತಿನಿಂದ) ಪಾರುಮಾಡಬೇಕಾಗಿತ್ತು. ದೂರದಲ್ಲಿ ನಿಂತು ಲಕ್ಷ್ಮಣ ಕವಣಿ ಬೀಸಿ ಹೊಡೆದು ಕಲ್ಲು ನೊಗದ ಕಣ್ಣೊಳಗಿಂದ ಪಾರಾಗಿ ಆಚೆಗೆ ಹೋಗಿ ಬಿತ್ತು. ಕೂಡಿದ ಜನರು “ಭಲೆ ಲಕ್ಷ್ಮಣ ಭಲೇ” ಎಂದು ಹರ್ಷೋದ್ಗಾರದಿಂದ ಕೂಗಿ, ಅವನನ್ನು ಎತ್ತಿಕೊಂಡು ಸಂಭ್ರಮದಿಂದ ಕುಣಿದಾಡಿದರು.

ಲಕ್ಷ್ಮಣ ಅಂದು ಅಡವಿಗೆ ಹೋಗಿದ್ದ. ಅಲ್ಲಿ ಮೇಯುತ್ತಿದ್ದ ಕುರಿಗಳ ಹಿಂಡಿನ ಮೇಲೆ ಧಾವಿಸಿ ಬಂದ ತೋಳವು ಎರುಗುತ್ತಿರುವುದನ್ನು ನೋಡಿದ. ಲಕ್ಷ್ಮಣ ಕೈಯಲ್ಲೊಂದು ಹಿಡಿಗಲ್ಲು ತಗೊಂಡು ಬಲವಾಗಿ ಎಸೆಯಲು ಅದು ತೋಳದ ತಲೆಗೆ ಬಡಿದು ಪೆಟ್ಟಿನಿಂದ ತೋಳ ನೆಲಕ್ಕೆ ಬಿದ್ದು ಸತ್ತು ಹೋಯಿತು. ಕುರಿಗಾರರು ಬಂದು ಲಕ್ಷ್ಮಣನನ್ನು ಅಪ್ಪಿಕೊಂಡು ಅವನನ್ನು ಬಾಯ್ತುಂಬಾ ಹೊಗಳಿದರು. ಊರಿಗೆ ಹೋಗಿ ಲಕ್ಷ್ಮಣನ ಸಾಹಸವನ್ನು ಹೇಳಿದರು. ಆಗ ಊರವರು ತೋಳವನ್ನು ಊರಿಗೆ ತಂದು ಎತ್ತಿನ ಬಂಡಿಯ ಮೇಲೆ ನಿಲ್ಲಿಸಿ, ಲಕ್ಷ್ಮಣನ ತಲೆಗೆ ಹೊಸ ಪಟಕಾ ಸುತ್ತಿ, ಕೊರಳಲ್ಲಿ ಹಾರ ಹಾಕಿ, ಕೈಗೆ ಬೆಳ್ಳಿಯ ಕಡೆ ತೊಡಿಸಿ, ಬಂಡಿಯ ಮೇಲೆ ತೋಳದ ಮಗ್ಗುಲಲ್ಲೇ ಅವನನ್ನು ನಿಲ್ಲಿಸಿ ಊರತುಂಬ ಮೆರವಣಿಗೆ ಮಾಡಿದರು. ಆಗ ಲಕ್ಷ್ಮಣನ ಸಾಹಸದ ಸುದ್ಧಿ ಸಿಂಧೂರ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಹಬ್ಬಿ ಹೆಸರು ಮಾಡಿತು.

ಲಕ್ಷ್ಮಣನ ಅಕ್ಕಂದಿರಾದ ಸತ್ಯವ್ವ ಸಕ್ರವ್ವ ಮದುವೆಯಾಗಿ ಗಂಡನ ಮನೆಗೆ ಹೋದರು. ಹಿರಿಯ ಮಗಳು ಸತ್ಯವ್ವನನ್ನು ನರಸವ್ವ ರಡರಟ್ಟಿಯಲ್ಲಿ ತನ್ನ ತವರು ಮನೆಗೆ ಕೊಟ್ಟಿದ್ದಳು. ಚಿಕ್ಕವಳಾದ ಸಕ್ರವ್ವನನ್ನು ನೇಸೂರಿಗೆ ಕೊಟ್ಟಿದ್ದಳು. ಸತ್ಯವ್ವನಿಗೆ ಚೊಚ್ಚಲ ಮಗ ನರಸು ಹುಟ್ಟಿದ. ನಂತರ ಸತ್ಯವ್ವ, ಸಗರವ್ವ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದರು. ನೇಸೂರಿಗೆ ಸಕ್ರವ್ವನಿಗೆ ರಾಯಪ್ಪನೆಂಬ ಗಂಡು ಮಗ, ಚಂದ್ರವ್ವನೆಂಬ ಹೆಣ್ಣು ಮಕ್ಕಳಾದರು.

ಲಕ್ಷ್ಮಣನಿಗೀಗ ಹದಿನೆಂಟರ ಹರೆಯ. ಸಾಬಣ್ಣ ನರಸವ್ವ ಮಗನ ಮದುವೆಯ ಕುರಿತು ಮಾತಾಡಿದರು. ರೂಪದಲ್ಲಿ ಮನ್ಮಥ, ಮೈಕಟ್ಟಿನಲ್ಲಿ ಮೇರುಪರ್ವತ, ಬಲದಲ್ಲಿ ಮಹಾಭಾರತದ ಭೀಮನಂತಿರುವ ಲಕ್ಷ್ಮಣನಿಗೆ ಹೆಣ್ಣು ಕೊಡದವರಾರು? ಕನ್ಯಾ ಪಿತೃಗಳು ಸಾಲುಗಟ್ಟಿ ಸಾಬಣ್ಣನ ಮನೆಬಾಗಿಲಿಗೆ ಬರುತ್ತಿದ್ದರು. ಆದರೆ ನರಸವ್ವನಿಗೆ ನೇಸೂರಿನ ಸಕ್ರವ್ವನ ಮಗಳು ಚಂದ್ರವ್ವನನ್ನೇ ಲಕ್ಷ್ಮಣನಿಗೆ ತಂದುಕೊಳ್ಳುವ ಆಶೆ. ಅದಕ್ಕೆ ಗಂಡನ ಒಪ್ಪಿಗೆಯೂ ಸಿಕ್ಕಿತು. ಸಕ್ರವ್ವನೂ ತನ್ನ ಮಗಳು ಚಂದ್ರವ್ವನನ್ನೂ ಲಕ್ಷ್ಮಣನಿಗೆ ಕೊಡಲು ಒಪ್ಪಿಕೊಂಡಳು. ಚಂದ್ರವ್ವ ರೂಪದಲ್ಲಿ ರತಿ, ಗುಣದಲ್ಲಿ ಪಾರ್ವತಿಯಾಗಿದ್ದಾಳೆ. ಅವಳೊಡನೆ ಲಕ್ಷ್ಮಣ ಮದುವೆಯಾಯ್ತು. ಅಷ್ಟರೊಳಗಾಗಿ ಸಾಕುಮಗ ರಾಮನಿಗೆ ಮದುವೆಯಾಗಿ, ತನ್ನ ಹೆಂಡತಿಯೊಂದಿಗೆ ಅವನು ಬೇರೆ ಸಂಸಾರ ಹೂಡಿದ್ದ. ಚಂದ್ರವ್ವ ಗಂಡನ ಮನೆಗೆ ಬರುವ ಮೊದಲೇ ಲಕ್ಷ್ಮಣನ ತಂದೆ ಸಾಬಣ್ಣ ತೀರಿಕೊಂಡ. ಮಗ ಸೊಸೆಯರ ಸಂಸಾರ ಕಣ್ಣಲೆ ಕಾಣಲಿಲ್ಲ ಅಂತ ನರಸವ್ವ ಗಂಡನ ಸಾವಿನ ಶೋಕದಲ್ಲಿ ಮುಳುಗಿದಳು. ಸೊಸೆ ಬಂದು ಮನೆ ತುಂಬಿದ ಸಂತಸದಲ್ಲಿ ನರಸವ್ವನಿಗೆ ಗಂಡನ ಮರಣದ ದುಃಖ ಕ್ರಮೇಣ ಮರೆಯುತ್ತಲಿತ್ತು.

ಬಾಳಿನ ಹೊಸ್ತಿಲದಲ್ಲಿ ಕಾಲಿಟ್ಟ ಲಕ್ಷ್ಮಣ ಚಂದ್ರವ್ವರ ದಾಂಪತ್ಯ ಜೀವನ ಸುಖಮಯವಾಗಿ ಸಾಗಿತು. ಗಂಡ ಹೆಂಡಿರ ಪ್ರೀತಿ ಹಿರಿಹೊಳಿ ಯಂಗ ಉಕ್ಕಿ ಹರಿಯುತ್ತಿತ್ತು. ಅವರಿಬ್ಬರ ಪ್ರೀತಿಯ ದಾಂಪತ್ಯ ಕುರಿತಾಗಿ ನಾನು ಬರೆದ ನಾಟಕದ ಒಂದು ಹಾಡು ಹೀಗಿದೆ;

ಲಕ್ಷ್ಮಣ : ಚಂದ್ರಿ ನಿನ್ನ ಚೆಲ್ವಿಕಿ| ಚಂದ್ರಾಮನ್ಹೋಲಿಕಿ
ಬಂಗಾರ ಥಳ ಥಳ ಹೊಳೆಧಾಂಗ
ಮುಂಗಾರಿ ಕೋಲ್ಮಿಂಚು ಜಡಿಧಾಂಗ

ಚಂದ್ರಿ :  ಮಾಂವಾ ನೀ ನಗಿಮಾತು| ಆಡತೀದಿ ಯಾವೊತ್ತು
ಚಟಪಟ ಅಳ್ಳ ಹುರಧಾಂಗ
ಬಾಯಾಗ ಮುತ್ತ ಸುರಧಾಂಗ

ಲಕ್ಷ್ಮಣ : ನಿನ್ನ ನಗಿಯರ ಏನ| ನಾಯೇನ ಹೇಳೇನ
ಗರಿಗೆದರಿ ನೌಲ ಕುಣಧಾಂಗ
ಬಳ್ಳ್ಯಾಗ ಮಗ್ಗಿ ಬಿರತ್ಹಾಂಗ||
ಯಾವ ಜನ್ಮದರಿಣವೊ| ಅದು ನನ್ನ ಭಾಗ್ಯವೊ
ಅಕ್ಕನ ಮಗಳಾಗಿ ಹುಟ್ಟೀದಿ

ಚಂದ್ರಿ :  ಚಲುವ ಚಂದ್ರಾಮ| ಥೇಟ ಹೊಳಿಯಾಂವಾ
ಹುಲಿರಾಯನ್ಹಾಂಗ ಮೆರಿಯಾಂವಾ
ಸಿಂಧೂರ ಸೀಮ್ಯಾಗ ನನ ಮಾಂವಾ||
ಹ್ಯಾಂವಕ ಬಿದ್ದರ ಜೀವಾನ ಕೊಡತಾನ
ಬೇಡಿದ ಕರಿಯ ತರತಾನ
ಜಿದ್ದಿಗಿ ನಿಂತರ ನನ ಮಾಂವಾ||

ಇಬ್ಬರು: ಮಾವು ಮಲ್ಲಿಗಿ ಹಾಂಗ ಇಬ್ಬರು ಕೂಡೇವು
ಹಾಲಾಗ ಸಕ್ಕರಿ ಬೆರೆತ್ಹಾಂಗ| ಒಬ್ಬರಿಗೊಬ್ಬರು ತಕ್ಕಂಗ||

ಸಾಬಣ್ಣ ಮರಣಾನಂತರ ಸರ್ಕಾರಿ ಚಾವಡಿ ವಾಲೀಕಾರಕಿ ಚಾಕರಿ ಲಕ್ಷ್ಮಣನ ಪಾಲಿಗೆ ಬಂತು. ಬಿಳಿ ಧೋತರ ಉಟ್ಟು, ಮಲಮಲ್ ಅಂಗೀ ತೊಟ್ಟು, ಶಮನಾ ಬಿಟ್ಟು ಪಟಕಾ ಸುತ್ತಿ, ಕೈಯಲ್ಲಿ ಚಾಕರಿ ಕೋಲು ಹಿಡಿದು ಲಕ್ಷ್ಮಣ ಚಾವಡಿಗೆ ಹೊಂಟನೆಂದರೆ ಊರ ಹೆಂಗಳೆಯರಷ್ಟೇ ಯಾಕೆ ಗಂಡಸರೂ ನಿಂತು ನಿಂತು ಅವನನ್ನು ನೋಡುತ್ತಿದ್ದರು. ಅಷ್ಟು ಲಕ್ಷಣವಾಗಿದ್ದ ಲಕ್ಷ್ಮಣ.

ಚಾವಡಿಯ ಚಾಕರಿ ಮಾಡುತ್ತಲೆ ಲಕ್ಷ್ಮಣ ಸರ್ಕಾರ ಕೊಟ್ಟಿದ್ದ ಭೂಮಿಯಲ್ಲೇ ದುಡಿದು ಬೆಳೆ ತಗಿಯುತ್ತಿದ್ದ. ನರಸವ್ವ ಎಮ್ಮಿ ಕಟ್ಟಿಕೊಂಡು ಹೈನ ಮಾಡುತ್ತಿದ್ದಳು. ಚಂದ್ರವ್ವ ಅಡಿಗೆ ಕೆಲಸದೊಂದಿಗೆ ಹೊಲಕ್ಕೆ ಹೋಗಿ ಗಂಡನ ದುಡಿಮೆಯಲ್ಲಿ ಭಾಗಿಯಾಗುತ್ತಿದ್ದಳು. ಹೀಗೆ ಸಾಗಿತ್ತು ಲಕ್ಷ್ಮಣ ನಾಯಕನ ಜೀವನ ರಥ.

ವರ್ಷಗಳು ಉರುಳಿದವು. ಆ ವರ್ಷ ಮಳೆಯಾಗದೆ ಯಾವ ಭೂಮಿಯೂ ಬೆಳೆಯಲಿಲ್ಲ. ರೈತರೆಲ್ಲ ಕಂಗಾಲಾದರು. ಕೆರೆಬಾವಿಗಳು ಬತ್ತಿದವು. ಕುಡಿಯಲು ನೀರಿಲ್ಲದಾಯಿತು. ಮೇಯಲು ದನಕರುಗಳಿಗೆ ಹೊಟ್ಟು ಕಣಿಕೆ ಇಲ್ಲವಾಯಿತು. ಕಾಳುಕಡಿ ಸಿಗದೆ ಜನರು ಉಪವಾಸ ಗೋಳಾಡಬೇಕಾಯಿತು. ಸರ್ಕಾರಕ್ಕೆ ಭೂ ಕಂದಾಯ ಕಟ್ಟಲು ರೈತರ ಕೈಯಲ್ಲಿ ಹಣವಿರಲಿಲ್ಲ. ಕಂದಾಯ ವಸೂಲಿ ಅಧಿಕಾರಿಗಳು ಜಬರ್ ದಸ್ತಿಯಿಂದ ರೈತರ ಮನೆ ಜಪ್ತಿ ಮಾಡಲಾರಂಭಿಸಿದರು. ಅಧಿಕಾರಿಗಳ ಈ ವರ್ತನೆ ಲಕ್ಷ್ಮಣನಿಗೆ ಎಳ್ಳಷ್ಟೂ ಹಿಡಿಸಲಿಲ್ಲ. ಅವನು ಬಡರೈತರ ಪರವಾಗಿದ್ದ ಹೃದಯವಂತ.

ಚಾಕರಿ ಮುಗಿಸಿ ಚಾವಡಿಯಿಂದ ಸಂಜೆಹೊತ್ತು ಮನೆಗೆ ಬಂದಾಗ ತಾಯಿ ಹೆಂಡತಿಯ ಹೊಟ್ಟೆಯ ಸಲುವಾಗಿ ಚಿಂತಿಸುತ್ತಿದ್ದ. ಒಂದು ದಿನ ರಾತ್ರಿಯಾಗಿಯೇ ಮನೆಗೆ ಬಂದ. ಅಂದು ಮನೆಯಲ್ಲಿ ಊಟಕ್ಕೆ ಏನೇನು ಇರಲಿಲ್ಲ. ನರಸವ್ವ ಲಕ್ಷ್ಮಣನಿಗೆ “ಲಕ್ಷ್ಮಣ್ಣಾ, ಎಂಥಾ ಕಾಲ ಬಂತಪಾ ಇದು. ನಮ್ಮ ಹೊಟ್ಟಿಗೆ ಇರದಿದ್ರ ಹೋಗಲಿ, ಕೊಟ್ಟಿಗ್ಯಾಗಿನ ದನಾಕರಾ ಏನ ತಿನಬೇಕು”? ಎಂದು ಮೂಕಪ್ರಾಣಿಗಳ ಬಗ್ಗೆ ಚಿಂತಿಸಿದಳು.

“ನಮ್ಮ ಸಿಂಧೂರ ಸೀಮಿಗಷ್ಟ ಬಂದಿಲ್ಲವ್ವಾ ಈ ಬರಗಾಲಾ! ದಿಕ್ಕ ದೇಶೇಕ ದುಷ್ಕಾಳ ಬಂದೈತಿ” ಲಕ್ಷ್ಮಣ ತಾಯಿಗೆ ಸಮಾಧಾನ ಹೇಳಿದ. “ಮತ್ತಿನ್ನ ಮುಂದಿನ ಗತಿ?” ನರಸವ್ವ ಕೇಳಿದಳು.

“ದೇವರ… ಗತಿ! ಹುಟ್ಟಿಸಿದವನ… ಕಾಪಾಡಬೇಕು! ನಮ್ಮ ಕೈಯಾಗಿತ್ತಂದ್ರ ಮಳಿ ಬೆಳಿ ಹೋಗಿ ಬರಗಾಲ ಯಾಕ ಬರುತ್ತಿತ್ತು? ಪರಮಾತ್ಮಾ ಕೊಟ್ಟೂ ನೋಡುತಾನ, ಕಸಕೊಂಡೂ ನೋಡುತಾನ. ಭಗವಂತನಾಟಾ ಯಾರಿಗಿ ತಿಳದೈತೆವ್ವಾ? ಅವಾ ಆಡಿಸಿದ್ಹಂಗ ಆಡೂದಷ್ಟ…. ನಮ್ಮ ಕೆಲಸಾ” ಎಂದು ಲಕ್ಷ್ಮಣ ತಾಯಿಗೆ ಹೇಳಿದ.

“ಲಕ್ಷ್ಮಣ್ಣಾ, ಚಂದ್ರಿನ್ನ ನೋಡು. ತೌರಮನ್ಯಾಗ ಹೊಟ್ಟಿತುಂಬ ಉಂಡು ಸುಕದಿಂದ ಬೆಳದಾಕಿ. ನಮ್ಮ ಮನ್ಯಾಗ ಈಗ ಉಪ್ಪಾಸ ಬೀಳಬೇಕಾತು. ಹರೇದ ಜೀವಾ ಹೊಟ್ಟಿಗಿಲ್ಲದೆ ಮರಗಸಬಾರದು. ಒಂದ್ ನಾಕ ದಿನ ನಿನ್ನ ಹೇಣ್ತಿನ್ನ ನೇಸೂರಿಗೆ ಕರಕೊಂಡ ಹೋಗಿ ತೌರಮನಿಗೇರ ಕಳಿಸಿ ಬಾರೊ” ನರಸವ್ವ ಸೊಸೆಯ ಬಗ್ಗೆ ಕಾಳಜಿಯಿಂದ ಹೇಳಿದಳು.

“ಅತ್ತೇ ಏಸೂರ ತಿರಿಗಿದ್ರೂ ಬೀಸೂದ ಬೆನ್ನ ಬಿಡಲಿಲ್ಲ ಅಂದ್ಹಂಗ ಈ ಸಿಂಧೂರಿಗೆ ಬಂದಿರೊ ಬರಗಾಲ ಆ ನೇಸೂರಿಗೆ ಬಂದಿರಾಕಿಲ್ಲೇನು? ನೀವೆಲಾಇಲ್ಲಿ ಉಪ್ಪಾಸ ಗೋಳ್ಯಾಡುವಾಗ ತೌರುಮನೀಗಿ ಹೋಗಿ ನಾನು ಸುಕದಿಂದ ಇರಬೇಕ? ನನ್ನಿಂದಾಗಿಕಿಲ್ಲ. ಬರಗಾಲ್ಕ ಅಂಜಿ ಗಂಡನಮನಿ ಬಿಟ್ಟು ಉಂಡು ಬದುಕಾಕ ತೌರುಮನೀಗಿ ಬಂದ ಭಂಡ ಹೆಣ್ಣೀಕಿ ಅಂತ ಕಂಡವ್ರೆಲ್ಲಾ ನನಗ ಛೀ ಹಾಕಾಕಿಲ್ಲ? ಇವ್ರ ಒಂದ ಗುಟಕ ಗಂಜೀ ಕುಡಿದು ನಾನು ಇಲ್ಲೆ ಇರತೀನಿ. ಉಣ್ಣಾಕ ಇರದಿದ್ರ ನಿಮ್ಮ ಕೂಡ ಉಪ್ಪಾಸ ಸಾಯಾಕ ನಾನೂ ಗಟ್ಟಿ ಅದೀನಿ. ಇಂಥಾ ಯಾಳೇದಾಗ ಗಂಡಮನಿ ಬಿಟ್ಟ ಹೋಗೂದು ನನ್ನ ಧರ್ಮ ಅಲ್ಲಾ” ಗರತಿ ಚಂದ್ರವ್ವ ನರಸವ್ವನ ಮಾತಿಗೆ ಅಸಮ್ಮತಿ ಸೂಚಿಸಿದಳು.

“ಶಹಬ್ಬಾಶ್ ಚಂದ್ರಿ, ಹೆಣ್ಣಿನ ಗುಣಾ ಹೀಂಗಿರಬೇಕ ನೋಡು. ಸಾಯಲಿ ಬದುಕಲಿ ಹೆಣ್ಣಿಗೆ ಗಂಡನಮನೀನ ಗತಿ. ಚಂದ್ರಿ ನನ್ನ ಹೇಣ್ತಿ ಮಾತ್ರ ಅಲ್ಲಾ, ನನ್ನ ಭಾಗ್ಯಕ್ಕ ಬಂದಿರೊ ದೇವತಿ ನೀನು ದೇವತಿ”.

‘ಅಷ್ಟು ದೊಡ್ಡ ಮಾತು ನನಗ್ಯಾಕ? ನಿಮ್ಮ ಪಾದಸೇವಾ ಮಾಡಾಕ ಬಂದಿರೊ ನಾನು ನಿಮ್ಮ ದಾಸಿ. ನೀವ… ನನ್ನ ಭಾಗ್ಯದ ದೇವರು’.

“ನಾನು ದೇವರಾಗಿದ್ರ ಬರಗಾಲದಾಗ ಬಡವ್ರ ಗೋಳಾಟಾ ಕಣ್ಣೀಲೆ ನೋಡತಿದ್ನೇನು? ವಾಳಿ ಬೆಳಿ ಕೊಟ್ಟು ಜನರ್ನ ಕಾಪಾಡತಿದ್ನಿ. ಉಪವಾಸ ಬಿದ್ದಿರೊ ಜನರ ಹೊಟ್ಟ್ಯಾಗಿಂದ ಹೊರಟಿರೊ ಹಸಿವೀನ ಕೂಗು ಕಿವೀಲೆ ಕೇಳಲೇ ನಾನು. ದೇವರ ಹ್ಯಾಂಗ ಅದೇನು? ಶಕ್ತಿವಂತನಾ ಲಕ್ಷ್ಮಣನ ಬಾಯಿಂದ ಹೊರಟ ಅಸಾಹಾಕತೆಯ ಉದ್ಗಾರವದು”.

ರಾತ್ರಿ ಬಹಳವಾಗಿತ್ತು. ಆ ರಾತ್ರಿ ಊಟಕ್ಕಿಲ್ಲದೆ ಮೂವರೂ ಉಪವಾಸ ಮಲಗಿಕೊಂಡರು. ಲಕ್ಷ್ಮಣನಿಗೆ ನಿದ್ರೆ ಹತ್ತಲಿಲ್ಲ. ಯಾವದೊ ವ್ಯಕ್ತ ಯೋಚನೆಯೊಂದು ಮನದಲ್ಲಿ ಮೂಡಿ ಅವನನ್ನು ಕಾಡುತ್ತಿತ್ತು. ಮಧ್ಯರಾತ್ರಿಯಾಗಿರ ಬಹುದು. ದೂರದಲ್ಲಿ ಎಲ್ಲಿಂದಲೋ ನಾಯಿಗಳ ಬೊಗಳುವಿಕೆ ಕೇಳಿಬರುತ್ತಿತ್ತು. ಲಕ್ಷ್ಮಣ ಎಚ್ಚರವಾಗಿಯೇ ಇದ್ದ. ಆಗ ಮನೆಯ ಕದಾ ತಟ್ಟಿದ ಸದ್ದಾಯಿತು.

“ಯಾರವರು ಬಾಗಲು ಕದಾ ಬಡಿಯುವರು?” ಲಕ್ಷ್ಮಣ ಕೇಳಿದ.

“ನಾಂವಪೋ ಮಾಂವಾ, ರಡರಟ್ಟಿಯಿಂದ ನರಸು, ಸಾಬು, ಗೋಪಾಲಿ ಬಂದೀವಿ. ಬಾಗಲಾ ತಗಿ ಏಳು” ಹೊರಗೆ ನಿಂತು ಕಳ್ಳದನಿಯಲ್ಲಿ ಕೂಗಿದರು. ಹೆಂಡತಿಗೆ ದೀಪ ಏರಿಸಲು ಹೇಳಿ ಹೋಗಿ ಲಕ್ಷ್ಮಣ ಮುಚ್ಚಿದ ಕದಾ ತೆರೆದ. ಗಾಬರಿಯಲ್ಲೇ ಬಂದಿದ್ದ ಮೂವರೂ ಒಳಗೆ ಬಂದರು.

“ಯಾಕ್ರೆಪ್ಪ, ಇಂತಾ ಅಪರಾತ್ರ್ಯಾಗ ಬಂದ್ರಿ?” ಒಳಗೆ ಮಲಗಿದ್ದ ನರಸವ್ವ ಮುದುಕಿ ಎದ್ದು ಬಂದು ಮೊಮ್ಮಕ್ಕಳನ್ನು ಕೇಳಿದಳು.

“ನಾವೀಗ ಹಗಲ್ಹೊತ್ತು ತಿರುಗ್ಯಾಡು ಹಾಂಗಿಲ್ಲ. ಪೋಲೀಸರ ಕಣ್ಣಿಗಿ ಬಿದ್ದರ ಬೇಡಿ ಹಾಕಿ ನಮ್ಮನ್ನ ಜೇಲಿಗೆ ಒಯ್ಯತಾರಾ”. ನರಸು ಹೇಳಿದ.

“ಅಂಥಾ ಕೆಲಸಾ ಏನ್ ಮಾಡಿದಿರಿ”? ಲಕ್ಷ್ಮಣ ಪ್ರಶ್ನಿಸಿದ.

“ಬೇಡ ಖಾನಾಪೂರದಾಗ ಸಾವಕಾರ ನಮ್ಮನ್ನ ಮನಿ ದರೂಡಿ ಮಾಡಿದ್ವಿ”

“ಗುನ್ನೇ ಪತ್ತೆ ಹಚ್ಚಿ ಪೋಲಿಸರು ನಮ್ಮನ್ನ ಹಿಡಯಾಕ ಬಂದ್ರು”

“ರಾತ್ರೋರಾತ್ರಿ ಊರಬಿಟ್ಟು ಪರಾರಿಯಾಗಿ ಓಡಿ ಬಂದ್ವಿ” ಮೂವರೂ ಹೀಗೆ ಉತ್ತರಿಸಿದರು.

“ಥುತ್ ನಿಮ ಭಂಡ್ರ. ಗಂಡಸ್ರಾಗಿ ಯಾಕ ಹುಟ್ಟಿದ್ರೆಲೆ ಭೂಮಿಮ್ಯಾಗ? ದುಡದು ಉಣಬೇಕಾದದ್ದು ಗಂಡಸಿನ ಧರ್ಮಾ. ಅದನ್ನ ಬಿಟ್ಟು ಹೊಟ್ಟಿಗೆ ಇಲ್ಲಾಂತ ಹೇಳಿ, ಕಂಡವ್ರ ಮನಿ ಕಳವು ಮಾಡಿದ್ರ ಶಿವಾ ಮೆಚ್ಚತಾನೇನ್ರೆಲೆ? ನರಸ್ಯಾ, ನಿಮ್ಮಂತಾ ದರೋಡೆಖೋರರಿಗೆ ನನ್ನ ಮನ್ಯಾಗ ಜಾಗಾ ಇಲ್ಲ. ಮದ್ಲ ದಾಟ್ರಿ ನನ್ನ ಮನಿ ಬಾಗಲಾ|”

“ಮಳೀಗಿ ಅಂಜಿ, ಮರದ ಚಾಟಿಗೆಂತ ಬಂದ್ರ, ಮರಾನ ಮುರಕೊಂಡು ತೆಲಿಮ್ಯಾಗ ಬಿದ್ಹಾಂಗಾತು. ದಿಕ್ಕಿಲ್ಲದವರಿಗೆ ದೇವರ… ಗತಿ. ಸಾಬು ಗೋಪಾಲಿ ನಡ್ರೆಲೆ ಹೋಗೂನು” ನರಸು ಹೊರಡಲನುವಾದಾಗ ನರಸವ್ವ ಅವರನ್ನು ತಡೆದು ನಿಲ್ಲಿಸಿದಳು.

“ಲಕ್ಷ್ಮಣ್ಣಾ| ಈ ಭೂಮಿ ಮ್ಯಾಗ ಉಂಡು ಬದಕೊ ಹಕ್ಕು ಶ್ರೀಮಂತರಿಗಷ್ಟ ಬರಕೊಟ್ಟಾನೇನು ಆ ದೇವರು? ಇಂಥಾ ಬರಗಾಲದಾಗ ಹಸದವರ ಹೊಟ್ಟಿಗೆ ಅನ್ನಾ ಯಾಕ ಹಾಕಬಾರದು ಶ್ರೀಮಂತರೆಲ್ಲಾ ಕೂಡಿ.

“ಯಾರ ಹೊಟ್ಟಿ ಕಡದ್ರ ಯಾರ ಅಜಿವಾಣ ತಿಂತಾರವ್ವ ಬಡವರಾಗಿ ಹುಟ್ಟಿದ ತೆಪ್ಪಿಗೆ ಬಂದದ್ದನ್ನು ಒಲ್ಲ್ಯಾ ಅಂದ್ರ ಬಿಡತೈತಿ ಹ್ಯಾಂಗ?”

“ಬಡವರಾಗಿ ಹುಟ್ಟಿದರೆನ ತಪ್ಪಾತು? ಭಗವಂತನ ಈ ಜಗತ್ತಿನಾಗ ಭೂಮಿ, ನೀರು ಗಾಳಿ ಯಾವ ಶ್ರೀಮಂತನ ಸೊತ್ತು ಅಲ್ಲಾ ಅಂತ ಹೇಳತಾರ ಬಲ್ಲವರು. ಆದರೂ ಅವತ್ರ ಮ್ಯಾಲೆ ತಮ್ಮ ಹಕ್ಕಿನ ಮುದ್ರಿ ಒತ್ತಿ ಸುಖಾ ಉಂಡು ಸೊಕ್ಕ್ಯಾರಲ್ಲ ಶ್ರೀಮಂತರು. ಈ ಬರಗಾಲದಾಗ ಬಿಕ್ಕಿ ಬಾಯಿ ಬಿಡಿತಿರೊ ಬಡವರ ಹೊಟ್ಟಿಗೆ ತುತ್ತ ಅನ್ನಾ ಹಾಕಿದ್ದರ ಅವರ ಶ್ರೀಮಂತ್ಕಿ ಸವೆದ ಹೋಗತಿತ್ತಾ? ದೇವರು ಕೊಟ್ಟ ಕಾಲಕ್ಕ ದಾನಾ ಮಾಡಬೇಕು? ಅಂತಿದ್ದೆಲ್ಲಾ ಬಡವರ ಮ್ಯಾಲೆ ಇಷ್ಟೂ ದಯಾಮಯಾ ಇಲ್ಲದಂತಾ ಪಾಪಿಷ್ಟ ಶ್ರೀಮಂತರ ಮನಿ ಯಾಕ ದರೂಡಿ ಮಾಡಬಾರದು. ಈಗ ನರಸಣ್ಣವರು ಮಾಡಿದ್ದು ಇದನ್ನ”. ಎಂದು ಅಣ್ಣಂದಿರ ಪರವಾಗಿ ಚಂದ್ರವ್ವ ವಾದಿಸಿದಳು. ಅಜ್ಜಿ ನರಸವ್ವ ಮಧ್ಯಸ್ತಿಕೆಯಿಂದ ಮೂವರಿಗೂ ಮಾಂವನ ಮನೆಯಲ್ಲಿ ಆಶ್ರಯ ಸಿಕ್ಕಿತು. ರಾತ್ರಿಯಿಡೀ ಎಚ್ಚರವಾಗಿದ್ದ ಲಕ್ಷ್ಮಣನಿಗೆ ಹೆಂಡತಿ ಹೇಳಿದ “ಪಾಪಿಷ್ಟ ಶ್ರೀಮಂತರ ಮನಿ ಯಾಕ ದರೂಡಿ ಮಾಡಬಾರದು” ಎಂಬ ಮಾತು ಎದೆಯನ್ನು ಬಡೆದು ಎಚ್ಚರಿಸುತಿತ್ತು. ಅಳಿಯಂದಿರು ಹಿಡಿದ ದಾರಿ ಲಕ್ಷ್ಮಣನಿಗೆ ಸರಿಯೆನಿಸಿತು.

ಬೀಳೂರಲ್ಲಿ ಕುಲಕರ್ಣಿ ಮೋನಪ್ಪ ಸಾವಕಾರನ ಕಿರಾಣಿ ಅಂಗಡಿ ದರೂಡಿ ಆಯಿತು. ಅಂಗಡಿಯೊಳಗಿನ ದವಸ ಧಾನ್ಯದ ಮೂಟೆ, ಬೆಲ್ಲದ ಪೆಂಟಿ, ಖೊಬ್ರಿ, ಕಾರೀಕ, ಮನೂಕ ತುಂಬಿದ ಡಬ್ಬಿಗಳು ಎಲ್ಲಾ ಹೊತ್ತು ಅಂಗಡಿಯನ್ನು ಕಸ ಹೊಡಿದರು. ದರೂಡಿ ಮಾಡಿದ ಮಾಲಿನ ಗಂಟು ಮೂಟೆಗಳನ್ನು ಹೊತ್ತು ತರುವಾಗ, ಇನ್ನೂ ಬೆಳಕು ಹರಿಯದ ಮಬ್ಬುಗತ್ತಲೆಯಲ್ಲೇ ಹೊಲಕ್ಕೆ ಹೊರಟಿದ್ದ ಯಾರೋ ಒಬ್ಬರು ದರೋಡೆಕಾರರನ್ನು ಗುರುತಿಸಿದರು. ರಡ್ಡೇರಹಟ್ಟಿಯಿಂದ ಬಂದಿರುವ ಬೇಡರ ಜೊತೆಗೆ ಸಿಂಧೂರಿನ ಬೇಡರ ಹುಡುಗರನ್ನು ಸೇರಿಸಿಕೊಂಡು ಲಕ್ಷ್ಮಣನೇ ಈ ದರೂಡಿ ಮಾಡಿದ್ದಾನೆಂದು ಊರಲ್ಲಿ ಜನರು ಗುಸು ಗುಸು ಮಾತಾಡಲಾರಂಭಿಸಿದರು.

ಸಿಂಧೂರಿನಲ್ಲಿ ಹಿರೇಮಠದ ಸಿದ್ದಯ್ಯ ಊರಿಗೇ ಸಾಹುಕಾರ. ಊರಿಗೆ ಬಹಳಷ್ಟು ಮಂದಿ ಭದ್ರತೆಗಾಗಿ ತಮ್ಮ ಮನೆಯ ಬಂಗಾರವನ್ನು ಒಯ್ದು ಸಿದ್ದಯ್ಯನ ಮನೆಯಲ್ಲಿಟ್ಟಿದ್ದರು. ಎಲ್ಲರಂತೆ ಬೇಡರ ನಿಂಗಪ್ಪನು ಕೂಡ ತನ್ನ ಬಂಗಾರವನ್ನು ಸಿದ್ದಯ್ಯನ ಮನೆಯಲ್ಲಿಟ್ಟಿದ್ದ. ಆದರೆ ಅದನ್ನು ತಿರುಗಿ ಪಡೆದುಕೊಳ್ಳಲಾರದೆ ನಿಂಗಪ್ಪ ಸತ್ತುಹೋದ. ನಿಂಗಪ್ಪನ ಮಗ ಮಾರುತಿ ಹೋಗಿ “ಸ್ವಾಮೇರ ನಮ್ಮಪ್ಪ ನಿಮ್ಮ ಹತ್ತಿರ ಇಟ್ಟಿರೊ ಹನ್ನೆರಡು ತೊಲಿ ಬಂಗಾರ ನನಗೆ ಕೊಡಿರಿ. ಈಗ ನಮ್ಮ ತಂಗೀ ಲಗ್ನಾ ಮಾಡಬೇಕಾಗೇತಿ” ಅಂತ ಸಿದ್ದಯ್ಯನನ್ನು ಕೇಳಿದಾಗ “ನಿಮ್ಮಪ್ಪ ಇಟ್ಟಿದ್ದ ಬಂಗಾರ ಆವಾಗಲೆ ತಿರುಗಿ ತಗೊಂಡು ಹೋಗ್ಯಾನ” ಎಂದು ಸುಳ್ಳು ಹೇಳಿದ. ತಮ್ಮ ಬಂಗಾರ ನುಂಗುವ ಸಂಚಿನಿಂದ ಸಿದ್ದಯ್ಯ ಹೀಗೆ ಸುಳ್ಳು ಹೇಳುತ್ತಿದ್ದಾನೆಂದು ಮಾರುತಿ “ಸ್ವಾಮೇರ ಸುಳ್ಳ ಹೇಳಬ್ಯಾಡ್ರಿ. ಬಂಗಾರ ನಿಮ್ಮ ಹತ್ತರ ಐತೆಂತ ನಮ್ಮಪ್ಪ ಹೇಳಿ ಸತ್ತಾನ. ಒಳ್ಳೆ ಮಾತಿಲೆ ಬಂಗಾರ ಕೊಡದಿದ್ರ ನಾ ಬಿಡು ಪೈಕಿ ಅಲ್ಲಾ” ಅಂತ ಇಬ್ಬರಿಗೂ ಮಾತಿನ ಚಕಮಕಿ ನಡೆದಾಗ ಅಲ್ಲಿಗೆ ಲಕ್ಷ್ಮಣ ಬಂದ. ಮಾರುತಿ ಲಕ್ಷ್ಮಣನಿಗೆ ಸಿದ್ದಯ್ಯನ ಮಾತು ಹೇಳಿದಾಗ ಲಕ್ಷ್ಮಣ “ಸಿದ್ದಯ್ಯ ಒಳ್ಳೆ ಮಾತಿನಿಂದ ಮಾರುತಿಗೆ ಬಂಗಾರ ಕೊಟ್ರ ಸರಿ. ಇಲ್ಲದಿದ್ರ…” ಸಿದ್ದಯ್ಯ ಲಕ್ಷ್ಮಣನಿಗೆ “ಇಲ್ಲದಿದ್ರ ಏನ್ ಮಾಡತೀದಿ?” ಅಂತ ಕೇಳಿದ. “ನಿನ್ನ ಮನಿ ದರೂಡಿ ಮಾಡಿ ಬಂಗಾರ ತರತೀವಿ” ಅಂತ ಲಕ್ಷ್ಮಣ ಸಿದ್ದಯ್ಯನಿಗೆ ಎಚ್ಚರಿಕೆ ಕೊಟ್ಟ. “ಲಕ್ಷ್ಮಾ ದರೂಡಿ ಮಾಡಾಕ ಸರ್ಕಾರ ನಿನಗ ಲೈಸೆನ್ಸ್ ಕೊಟ್ಟೈತೇನಲೇ” ಅಂದಾಗ “ಪರೋಪಕಾರದ ಕೆಲಸಕ್ಕ ಲೈಸೆನ್ಸ್ ಯಾಕ ಬೇಕ್ರಿ ಸ್ವಾಮೇರ? ಕೊಟ್ಟಬಿಡ್ರಿ ಮಾರುತಿಗೆ ಬಂಗಾರ” ಎಂದು ಸಿದ್ದಯ್ಯನಿಗೆ ಹೇಳುತ್ತಿರುವಾಗಲೆ ಅಲ್ಲಿಗೆ ಊರ ಉಡಾಳ ಡೊಳ್ಳಿ ಭೀಮ ಬಂದ. ಭೀಮ ತನ್ನ ತಾಯಿಯ ಹೊಟ್ಟೆಗೆ ಹಾಕದೆ ಅವಳನ್ನು ಹೊಡೆದು ಮನೆಯಿಂದ ಹೊರಗಟ್ಟಿದ್ದ. ಆ ಮುದಿಕಿ ಬಂದು ಮಗ ಹೊಟ್ಟಿಗೆ ಹಾಕಲಾರದೆ ಹೊಡೆದು ಹೊರಗಟ್ಟಿದ್ದಾನೆಂದು ಲಕ್ಷ್ಮಣನ ಮುಂದೆ ಹೇಳಿದ್ದಳು. ಈಗ ಬಂದ ಭೀಮನಿಗೆ ಲಕ್ಷ್ಮಣ “ಭೀಮ, ನಿಮ್ಮವ್ವನ ಹೊಟ್ಟಿಗೆ ಹಾಕಲಾರದ ಅಕಿನ್ನ ಹೊಡೆದು ಹೊರಗಟ್ಟಿಯಂತಲ್ಲಲೆ? ಹೌದಾ?”

“ಅದನ್ನ ಕೇಳಾಕ ನೀ ಯಾರು?” ಭೀಮ ಲಕ್ಷ್ಮಣನಿಗೆ ಒರಟಾಗಿ ಉತ್ತರ ಕೊಟ್ಟ.

“ನಾ ಯಾರು ಅನ್ನೊದನ್ನ ಈಗ ತೋರಸ್ತಿನಿ ನೋಡು” ಅಂತ ಭೀಮನನ್ನು ಹಿಡಿದೆಳೆದು ನೆಲಕ್ಕೆ ಕೆಡವಿ ಒದೆಯುತ್ತ ‘ಗೊತ್ತ ಆಯಿತೇನೆಲೆ ಭೀಮಾ| ನಾ ಯಾರು ಅನ್ನೂದು’ ಲಕ್ಷ್ಮಣ ಕೇಳಿದ.

“ಬಿಡಲೆ ಲಕ್ಷ್ಮ್ಯಾ ಒಡಿಬ್ಯಾಡ ಬಿಡು, ಪಾಪ ಸತ್ತಗಿತ್ತೀತು” ಸಿದ್ದಯ್ಯ ಬಿಡಿಸಿಕೊಳ್ಳಲು ಹೋದ.

“ಸಾಯಲಿ ಬಿಡ್ರಿ ಸ್ವಾಮೇರ, ಇಂಥಾ ದುಷ್ಟರು ಬದುಕಿರಬಾರದು. ತಾಯಿನ್ನ ಜೋಪಾನ ಮಾಡದವರು ಮಂದೀ ಬಂಗಾರ ನುಂಗವರು ಸತ್ತರ ಪಾಡ. ಸ್ವಾಮೇರ ನಿಮಗ ಮತ್ತೊಮ್ಮೆ ಹೇಳತಿನಿ ಈ ಮಾರುತಿಗೆ ಅವರಪ್ಪನ ಬಂಗಾರಾ ಕೊಟ್ಟು ಒಳ್ಳೇಯವರಾಗ್ರಿ, ಕೊಡದಿದ್ರ ನಾಳೆ ಹಾಡ ಹಗಲ.. ನಿನ್ನ ಮನೀಗಿ ದರೂಡಿ. ಬಾ ಮಾರುತಿ ಹೋಗೂನು, “ಮಾರುತಿಯನ್ನ ಕರೆದುಕೊಂಡು ಲಕ್ಷ್ಮಣ ಹೋದನು. ನೆಲಕ್ಕೆ ಬಿದ್ದ ಡೊಳ್ಳಿ ಭೀಮ ಸಾವರಿಸಿಕೊಂಡು ಮೆಲ್ಲನೆ ಮೇಲಕ್ಕೆದ್ದನು. ಏನ್ರಿ ಸ್ವಾಮೇರ ಈ ಲಕ್ಷ್ಮಾ ನಿಮ್ಮ ಮನಿ ದರೂಡಿ ಮಾಡತೀನೆಂತ ನಿಮಗ ಸವಾಲ್ ಹಾಕಿ ಹೋದನಲ್ರೀ? ಇವರಿಗಿ ಹೇಳವರು ಕೇಳವರು ಯಾರು ಇಲ್ಲೇನ್ರಿ ಊರಾಗ?” ಭೀಮನ ಪ್ರಶ್ನೆಗೆ ಸಿದ್ದಯ್ಯ.

“ಯಾರಿಲ್ಲಾ? ಸರ್ಕಾರ ಏನ್ ಸತ್ತೈತೇನು? ಈಗ ನೀ ಒಂದ ಕೆಲಸಾ ಮಾಡು. ಸೀದಾ ಜತ್ತಿಗೆ ಹೋಗು. ಬೀಳೂರ ಕುಲಕರ್ಣಿ ಅಂಗಡಿನ ಲಕ್ಷ್ಮಾನ ದರೂಡಿ ಮಾಡ್ಯಾನ ಅನ್ನುವ ಬಾತ್ಮಿ ಸರಕಾರಕ್ಕೆ ಮುಟ್ಟಿಸು. ಪೋಲಿಸ್ ಪಾರ್ಟಿ ತಗೊಂಡ ಬರತಾರ. ಬೇಡಿ ಹಾಕ್ಕೊಂಡ ಒಯ್ಯತಾರ. ಹೋಗಿ ಬೀಳಲಿ ಮಗ ಜತ್ತಿ ಜೇಲಿನಾಗ ತಗಣೀ ಕಡಿಸಿಗೊಂತ. ನಡಿ ಹೋಗು” ಭೀಮಗೆ ಹೇಳಿದ.

ಸಿದ್ದಯ್ಯನ ಸೂಚನೆಯಂತೆ ಭೀಮ ಜತ್ತಿಗೆ ಹೋಗಿ ಸರ್ಕಾರಕ್ಕೆ ಲಕ್ಷ್ಮಣ ದರೂಡಿ ಮಾಡಿದ ಸುದ್ದಿ ತಿಳಿಸಿದ. ಜತ್ತಿಯಿಂದ ಪೋಲಿಸ ಪಾರ್ಟಿ ಗುನ್ನೆ ತಪಾಸ್ಕ ಬರತಿರನ್ನೂದು ತಿಳಿದು ಲಕ್ಷ್ಮಣ ಬೀಳೂರ ದರೂಡಿ ಮಾಡಿ ಮಾಡಿ ತಂದಿದ್ದ. ಮುದ್ದೆ ಮಾಲನ್ನೆಲ್ಲಾ ಮನೆ ಸಮೀಪದಲ್ಲಿದ್ದ ಬಾವಿಯಲ್ಲಿ ಸುರುವಿ ಖಾಲಿ ಚೀಲಗಳನ್ನು ತನ್ನ ಮನೆಯ ಹಿತ್ತಲದಲ್ಲಿ ಬಚ್ಚಿಟ್ಟನು. ಖೊಬ್ರಿ, ಕಾರೀಕ, ಕಡ್ಡಿ ಪೊಟ್ಟಣಗಳೆಲ್ಲ ಬಾವಿ ನೀರಿನ ಮೇಲೆ ತೇಲುತ್ತಿದ್ದವು. ಗುನ್ನೇ ತಪಾಸಿಗೆ ಬಂದ ಫೌಜದಾರ ಮೋಹನಲಾಲ ಕಲಾಲ ಸಾಹೇಬ ಬಾವಿಯಲ್ಲಿನ ತೇಲುತ್ತಿರುವ ಮಾಲನ್ನು ನೋಡಿ, ಲಕ್ಷ್ಮಣನ ಮನೆ ಘಸ್ತಿ ಮಾಡಿದಾಗ ಹಿತ್ತಲದಲ್ಲಿ ಬಚ್ಚಿಟ್ಟ ಖಾಲಿ ಚೀಲಗಳು ಕೈಗೆ ಸಿಕ್ಕವು. ಅವುಗಳ ಮೇಲೆ ಮೋಹನ ಜೀವಾಜಿ ಕುಲಕರ್ಣಿ ಅಂತ ವಿಳಾಸ ಬರೆದಿತ್ತು. ಈ ಪುರಾವೆಯಿಂದ ಲಕ್ಷ್ಮ್ಯಾನೇ ದರೂಡಿ ಮಾಡಿದ್ದಾನೆಂದು ಆರೋಪಿಸಿ ಅವನ ಕೈಗೆ ಬೇಡಿ ತೊಡಿಸಿ, ವಿಚಾರಣೆಗಾಗಿ ಸರಕಾರಿ ಚಾವಡಿಗೆ ಕರೆತಂದರು.

ಊರಿನ ಪೋಲಿಸ್ ಪಾಟೀಲ ಮಹದೇವಪ್ಪಗೌಡರಿಗೆ ವಾಲೀಕಾರ ಲಕ್ಷ್ಮ್ಯಾ ದರೂಡಿ ಮಾಡಿದ್ದಾನೆಂದು ತಿಳಿದು ಅಚ್ಚರಿಗೊಂಡರು. ಆದರೂ ಅವನ ಬಗ್ಗೆ ಮುಲ್ಕಿ ಪಾಟೀಲ ಭೀಮಣ್ಣಗೌಡನಿಂದ ಇಲ್ಲ-ಸಲ್ಲದ ಸಾಕಷ್ಟು ಪಿರ್ಯಾದಿ ಕೇಳಿದ್ದರು. ಲಕ್ಷ್ಮಣನ ಮೇಲಿನ ನಂಬಿಕೆಯಿಂದ ಭೀಮಣ್ಣಗೌಡನ ಮಾತನ್ನು ಅವರು ಕಿವಿಗೆ ಹಾಕಿಕೊಂಡಿರಲಿಲ್ಲ. ಈಗ ಭೀಮಣ್ಣಗೌಡನ ಮಾತೇ ನಿಜವೆನಿಸಿತು. “ಎಂಥಾ ಕೆಲಸಾ ಮಾಡಿದಿಯಲ್ಲೊ ಅಯೋಗ್ಯಾ” ಅಂತ ಲಕ್ಶ್ಮಣನಿಗೆ ಛೀ… ಥೂ ಅಂದರು. ಆ ಕಲಾಲ ಇನ್ಸ್‌ಪೆಕ್ಟರ್ “ಲಕ್ಷ್ಮ್ಯಾ ಬೀಳೂರ ಕುಲಕರ್ಣಿ ಅಂಗಡಿ ಯಾರ್ಯಾರ ಕೂಡಿ ದರೂಡಿ ಮಾಡಿದ್ರಿ?”

“ನಾನು, ನರಸ್ಯಾ, ಸಾಬು, ಗೋಪಾಲಿ, ಬಸ್ಯಾ, ರಾಮಾ, ಗುಂಡ್ಯಾ, ಮಹಿಪ್ಯಾ, ಮಾರುತಿ ಎಂಟಹತ್ತ ಮಂದಿ ಕೂಡಿದ್ವಿ”.

“ಅವರೆಲ್ಲಾ ಈಗ ಎಲ್ಲಿದ್ದಾರ” ಕಲಾಲ ಸಾಹೇಬ ಕೇಳಿದ.

“ನನಗೇನ ಗೊತ್ತು. ಸರ್ಕಾರದ ಸಂಬಳಾ ತಿಂತೀರ ಹೋಗಿ ಹುಡಕ್ರಿ. ಪೋಲಿಸ ಖಾತೇಕ ಮಿಕ್ಕೆತೇನ ಈ ಕೆಲಸಾ”.

“ಖಬರ್ ದಾರ್ ಈ ರೀತಿ ಒರಟ ಉತ್ತರಾ ಕೊಟ್ರ ನಿನ್ನ ಮೈ ಚರ್ಮ ಸುಲದ ಬಿಟ್ಟೇನು ಹುಶ್ಯಾರ್” ಕಲಾಲ ಗದರಿಸಿದ.

“ಸಾಹೇಬ್ರ, ನಾಲಗಿ ಕುಲಾ ಹೇಳಿತು ಅನ್ನು ಗಾದಿ ಮಾತು ಯಾಕ ಸುಳ್ಳ ಆದೀತ್ರಿ? ಕಟಕರ ಬಾಯಾಗ ಚರ್ಮಾ ಸುಲೀತೀನಿ ಅನ್ನೂದ ಬಿಟ್ರ ಇನ್ನ್ಯಾವ ಒಳ್ಳೆ ಮಾತ ಬಂದಾವು”

(ಇನ್ಸಪೆಕ್ಟರನ ಪಿತ್ತ ನೆತ್ತಿಗೇರಿತು.) “ಯಾಕಲೆ ಲುಚ್ಚ್ಯಾ, ನಾಲಿಗಿ ಉದ್ದಾತೇನಲೆ ಮಗನ” ಹೊಡೆಯಲು ಸ್ಟಿಕ್ ಎತ್ತಿದಾಗ ಲಕ್ಷ್ಮಣ ಅದನ್ನು ತಡೆದು

“ಸಾಹೇಬ್ರ, ಮಗನ ಪಗನ ಅಂತ ಹಗರ ಮಾತಾಡಿದ್ರ ಬಗಿ ಹರಿಯಾಕಿಲ್ಲ ನಮ್ಮಪ್ಪಗ ಹುಟ್ಟಿದ ಮಗಾರಿ ನಾನು”

“ಯಾವನ ಮಗಾ ಆದ್ರ ನನಗೇನು? ಈಗ ನೀನು ಆರೋಪಿ, ನಾನು ಪೋಲೀಸ್ ಅಧಿಕಾರಿ”

“ಅಧಿಕಾರಿ ಅಂದಷ್ಟಕ್ಕ ನಿವೇನು ಆಳೂವ ಸರ್ಕಾರ ಅಲ್ಲಾ. ಈ ಲಕ್ಷ್ಮಣಾ ನಿಮ್ಮ ಇನ್ಸ್‌ಪೆಕ್ಟರಿಗೆ ಯಾಕ, ಸಂಸ್ಥಾನದ ಮ್ಯಾಲಿನ ಇಂಗ್ರೇಜಿ ಸರ್ಕಾರ ಬಂದ್ರೂ ಸೊಪ್ಪ ಹಾಕಾಂವಲ್ಲಾ ಜಪ್ಪ ಅನ್ನಂವಲ್ಲಾ”

“ಭಪ್ಪರೆ ಹುಲಿಯ. ಶೂರ ಸಂಗೊಳ್ಳಿ ರಾಮಣ್ಣನಂಗ ಮಾತಾಡತೀಯಲ್ಲಲೆ ಲಕ್ಷ್ಮ್ಯಾ”

“ಈ ಸಿಂಧೂರ ಲಕ್ಷ್ಮಣನಾಯಕನೇನು ಸಾಮಾನ್ಯ ಅಂತ ತಿಳೀಬ್ಯಾಡ್ರಿ ಸಾಹೇಬ್ರ. ಸಂಗೊಳ್ಳಿ ರಾಯಣ್ಣಾ ಕಿತ್ತೂರ ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ರ ಈ ಲಕ್ಷ್ಮಣನ ಹೋರಾಟ ಹಸವಿಲೇ ಪ್ರಾಣಾ ಬಿಡವ್ರ ಹೊಟ್ಟೀ ಸಲುವಾಗೈತಿ. ಸಮುದ್ರಾ ದಾಟಿ ಬಂದು, ಸಂಸ್ಥಾನಿಕರನ್ನು ಕೀಲದಗೊಂಬಿ ಮಾಡಿ ಆಡಸ್ತಿರೊ ಫಿರಂಗಿ ಸರ್ಕಾರದ ವಿರುದ್ಧ ಐತಿ. ಸರ್ಕಾರದ ಅಧಿಕಾರಿ ಅಂತ ಎದೆ ಸೆಟಿಸಿ ಹೇಳತೀರಿ. ಬಂದಿರೊ ಬರಗಾಲದಾಗ ನೀವೇನ ಕೆಲಸಾ ಮಾಡಿದ್ರಿ? ಭೂಮೆಲ್ಲಾ ಬೆಳಗೇಡಿ ಆದುವಂತ ರೈತರಿಗೆ ಕಂದಾಯ ಸೂಟ ಮಾಡಿಸಿದ್ರ್ಯಾ? ದುಡೀತೀವಿ ಅನ್ನುವ ಕೂಲೀ ಜನರಿಗೆ ಉದ್ಯೋಗ ಕೊಡಿಸಿದ್ರ್ಯಾ? ಹಸಿದೀವಿ ಅನ್ನುವ ಬಡವ್ರ ಹೊಟ್ಟಿಗೆ ಅನ್ನ ಹಾಕಿದ್ರ್ಯಾ? ಏನ ಮಾಡಿದ್ರಿ ನೀವು? ಗುನ್ನೇ ತಪಸ್ಕಂತ ಪೋಲಿಸರನ್ನ ಕರಕೊಂಡ ಬರತೀರಿ, ಪಗಾರಾ ಹೆಚ್ಚಿಸಿಕೋಬೇಕಂತ. ಆರೋಪಿಗಳನ್ನ ಹಿಡಿದು ಸಿಕ್ಕಂಗ ಥಳಸ್ತೀರಿ. ಇದ… ಏನು ನಿಮ್ಮ ಅಧಿಕಾರಾ? ಇದನ್ನ ಮಾಡ್ರೆಂತ ನಿಮಗ ಹುಕುಂ ಕೊಟ್ಟೈತೇನ ಆ ಸರ್ಕಾರಾ?” ಲಕ್ಷ್ಮಣ ಗುಡುಗಿದ.

“ಏನ್ರಿ ಗೌಡ್ರ, ದೊಡ್ದ ಬ್ಯಾರಿಸ್ಟರನಂಗ ವಾದಸ್ತಾನಲ್ರಿ ಈ ನಿಮ್ಮ ವಾಲೀಕಾರಾ? ಹುಲಿ ಮುಖವಾಡ ಹಾಕ್ಕೊಂಡ ಒದರಿದ್ರ ಕತ್ತಿ ಎಂದಾರೆ ಹುಲಿ ಆಗತ್ತೇನು? ಕತ್ತಿ ಕತ್ತೀನ”

“ಕತ್ತಿ ನಾಯಾಕ ಆಗಲ್ರಿ ಸಾಹೇಬ್ರ… ಕತ್ತಿ ನಾಯಕ ಆಗಲಿ. ಈ ನೆಲಾ ಹುಲಿ ಹುಟ್ಟೊ ಗಂಡ ಭೂಮಿ. ಇಂಥಾ ಭೂಮ್ಯಾಗ ನಿಮ್ಮಂತಾ ಗುಳ್ಳೇನರಿ ಹುಟ್ಟಬಾರದಾಗಿತ್ತು. ಅಧಿಕಾರದಾಸೇಕ ಇಂಗ್ರೇಜಿ ಸರ್ಕಾರದ ಬಾಲಾ ಹಿಡಕೊಂಡು ತಿರಗತೀರಲ್ಲ ನೀವು ಕತ್ತಿ. ಈ ಲಕ್ಷ್ಮಣ್ಣಾ ಹುಲಿ ಹಾಲುಂಡ ಬೆಳದಾನ್ರಿ. ನಿಮ್ಮಂಗ ಫಿರಂಗೇರ ಪಾದಾ ತೊಳದ ನೀರು ಕುಡಿದಿಲ್ಲಾ. ಎಂದಿದ್ದರೂ ಈ ಲಕ್ಷ್ಮಣ್ಣಾ ದೇಶಾಭಿಮಾನಿ. ನಿಮ್ಮ ಎದಿಯಾಗ ಬರಕೊಳ್ರಿ ಈ ಮಾತು” ಎಂದವನೇ, ತಟ್ಟನೆ ಕೈ ಕೋಳ ಹರಿದುಕೊಂಡು, ‘ಜೈ… ಬಲಭೀಮ ಸಮರ್ಥಾ’ ಅಂತ ಘೋಷಣೆ ಕೂಗಿದವನೇ ಆಳೆತ್ತರವಾದ ಗಗ್ಗರಿಗಟ್ಟೆಯನ್ನು ಒಂದೇಟಿಗೆ ಜಿಗಿದು ವಾಯುವೇಗದಿಂದ ಓಡಿ ಕಣ್ಮರೆಯಾದ.