ನಾಗಾಲೋಟದಿಂದ ಓಡುತ್ತ ಬಂದ ಲಕ್ಷ್ಮಣನಿಗೆ ಊರು ದಾಟಿದ ಮೇಲೆ ದಾರಿಯಲ್ಲಿ ಅವನಿಗೆ ಮಾರುತಿ ಜೊತೆಗೂಡಿದ. ಆಗ ನರಸ್ಯಾ ಸಾಬು ಗೋಪಾಲಿಯರು ಸಿಂಧೂರಿನಲ್ಲಿರಲಿಲ್ಲ. ಓಡುತ್ತ ಬಂದ ಲಕ್ಷ್ಮಣ ಮಾರುತಿ ಊರಾಚೆಗೆ ದೂರದಲ್ಲಿರುವ ಬಾಳಹಳ್ಳದ ದಟ್ಟಡವಿಯನ್ನು ಸೇರಿದರು. ಒಳ ಹೊಕ್ಕರೆ ಯಾರೊಬ್ಬರ ಕಣ್ಣಿಗೂ ಕಾಣಿಸದಂತಿರುವ ನಿಬಿಡಾರಣ್ಯವದು.ಆರೋಪಿ ಲಕ್ಷ್ಮ್ಯಾ ಪರಾರಿಯಾದ ವರ್ತಮಾನ ಕಲಾಲ ಇನ್ಪ್‌ಪೆಕ್ಟರ್ ಜತ್ತಿಗೆ ತಿಳಿಸಿ, ಅಲ್ಲಿಂದ ಪೋಲೀಸರ ದಂಡು ತರಿಸಿಕೊಂಡನು. ಸಿಂಧೂರಿನ ನಾಲ್ಕು ನಿಟ್ಟಿಗೂ ಅಲೆದಾಡಿ ಆರೋಪಿಯ ಶೋಧ ನಡೆಸಿದರು. ಲಕ್ಷ್ಮ್ಯಾಅಥಣಿಯ ಅಡವಿಯಲ್ಲಿದ್ದಾನೆ, ಜತ್ತಿಯ ಜಂಗಲ್‍ನಲ್ಲಿದ್ದಾನೆ, ಜಮಖಂಡಿ ಗುಡ್ಡದಲ್ಲಿದ್ದಾನೆ. ಅಂತ ಸುದ್ದಿ ಕೇಳಿ ಕಲಾಲ ಸಾಹೇಬ ಅಲ್ಲಲ್ಲಿಗೆ ತಿರುಗಾಡಿದ.

ಬಾಳಿಹಳ್ಳದ ದಟ್ಟ ಅಡವಿಯಲ್ಲಿ ಠಾವು ಮಾಡಿಕೊಂಡಿದ್ದ ಲಕ್ಷ್ಮಣ ಮಧ್ಯರಾತ್ರಿ ಗುಪ್ತವಾಗಿ ಮನೆಗೆ ಬಂದು ತಾಯಿಯ, ಹೆಂಡತಿಯ ಯೋಗಕ್ಷೇಮ ವಿಚಾರಿಸಿ ಒಂದೆರಡು ತಾಸು ಮನೆಯಲ್ಲಿದ್ದು ಅವರಿಗೆ ಧೈರ್ಯ ಹೇಳಿ ಹೋಗುತ್ತಿದ್ದ.

ಲಕ್ಷ್ಮಣ ಬಾಳಿಹಳ್ಳದಲ್ಲಿ ಅಡಗಿರುವ ಸುದ್ದಿಯನ್ನು ಡೊಳ್ಳಿ ಭೀಮ ಕಲಾಲ ಇನ್ಸ್‌ಪೆಕ್ಟರನಿಗೆ ತಿಳಿಸಿದ. ಸುದ್ದಿ ತಿಳಿದಿದ್ದೇ ತಡ ಇನ್ಸ್ ಪೆಕ್ಟರ್ ಹಾಗೂ ಉಮರಾಣಿಯ ಢಪಳೆ ಸರಕಾರದ ದಾದಾಸಾಹೇಬರು ಬಂದೂಕ ತಗೊಂಡು ಕುದುರೆ ಏರಿ ಬಾಳಿ ಹಳ್ಳದತ್ತ ಬಂದರು. ಕುದುರೆಯ ಖುರ ಪುಟದ ಸದ್ದು ಕೇಳಿ, ಪೋಲಿಸರು ಬರುತ್ತಿದ್ದಾರೆಂದು ತಿಳಿದು ಅವರಿಂದ ತಪ್ಪಿಸಿಕೊಳ್ಳಲು ಮುಂದೆ ಲಕ್ಷ್ಮಣ ಅವನ ಹಿಂದೆ ಮಾರುತಿ ಓಡುತ್ತಿರುವಾಗ ದಾದಾಸಾಹೇಬ ಬಂದೂಕಿನಿಂದ ಗುಂಡು ಹಾರಿಸಿದ. ಅದು ಮಾರುತಿಗೆ ಬಡಿದು ಅವನು “ಹಾಯ್ ಲಕ್ಷ್ಮಣಾ…” ಎಂದು ಅರಚಿ ನೆಲಕ್ಕೆ ಬಿದ್ದನು. “ಲಕ್ಷ್ಮಣಾ… ಸಿದ್ದಯ್ಯ ನನ್ನ ಬಂಗಾರ ಕೊಡಲಿಲ್ಲ. ನನ್ನ ತಂಗಿಗೆ ಲಗ್ನ ಆಗಲಿಲ್ಲ. ಅದನ್ನ ನೀನ… ಮಾಡಬೇಕು” ಎಂದು ಲಕ್ಷ್ಮಣನಿಂದ ವಚನ ತಗೊಂಡು ಮಾರುತಿ ಜೀವಬಿಟ್ಟ. ಮಾರುತಿಯ ಮೃತದೇಹವನ್ನು ತಬ್ಬಿಕೊಂಡು ಲಕ್ಷ್ಮಣ ಕಣ್ಣೀರಿಡುತ್ತಿರುವಾಗ ದಾದಾ ಸಾಹೇಬ “ಏಳು ಲಕ್ಷ್ಮ್ಯಾ, ಓಡಿ ಹೋಗಬೇಡ ಎದ್ದು ಬಾ” ಎಂದು ಹೇಳಲು ಲಕ್ಷ್ಮಣ ಬಾಯಲ್ಲಿ ಹುಲ್ಲುಕಡ್ಡಿ ಕಚ್ಚಿಕೊಂಡು ಬಂದು ದಾದಾಸಾಹೇಬರ ಪಾದಕ್ಕೆರಗಿದ.

“ಲಕ್ಶ್ಮ್ಯಾ, ಢಪಲೆ ಸರ್ಕಾರದಿಂದ ಶಹಬ್ಬಾಶ್‌ಗಿರಿ ಪಡೆದಿರುವ ನೀನು ಸಿಂಧೂರ ಸಿಂಹ ಅನಿಸಿಕೊಂಡು ಮೆರಿಬೇಕಾಗಿತ್ತು. ನಿನ್ನಿಂದ ನಮ್ಮ ಜತ್ತಿ ಸಂಸ್ಥಾನಕ್ಕ ಕೀರ್ತಿಯ ನಿರೀಕ್ಷೆಯಲ್ಲಿದ್ದಾಗ, ನೀನು ಕಳ್ಳರ ಗುಂಪು ಕಟ್ಟಿಕೊಂಡು ದರೋಡೆಖೋರನಾಗಿ ಸಂಸ್ಥಾನದ ಹೆಸರಿಗೆ ಬಟ್ಟಾ ತಂದಿ. ಮನೆಮಾರು ಬಿಟ್ಟು ತಲೆಮರೆಸಿಕೊಂಡು ಹೀಗೆ ಅಡವಿಯಲ್ಲಿರುವುದು ನಿನ್ನ ಚಾರಿತ್ರ್ಯಕ್ಕೆ ಒಳ್ಳೆಯದಲ್ಲ. ಸರ್ಕಾರ ನಿನ್ನ ತಪ್ಪು ಕ್ಷಮಿಸುತ್ತದೆ” ಎಂದು ಲಕ್ಷ್ಮಣನಿಗೆ ಅಭಯ ನೀಡುತ್ತಿರುವಾಗ, ಕುದುರೆಯ ಮೇಲೆ ರಭಸದಿಂದ ಬಂದ ಕಲಾಲ ಇನ್ಸ್‌ಪೆಕ್ಟರ್ ತನ್ನ ಕೈಯಲ್ಲಿದ್ದ ಭರ್ಜಿಯಿಂದ ಬಲವಾಗಿ ಲಕ್ಷ್ಮಣನ ತೊಡೆಗೆ ಹೊಡೆದು ಬಿಟ್ಟ. ಚಿಲ್ಲನೆ ರಕ್ತ ಚಿಮ್ಮಿತು. ಅದನ್ನು ನೋಡಿ ದಾದಾಸಾಹೇಬ.

“ಇನ್ಸ್‌ಪೆಕ್ಟರ್ ಇದನೇನು ಮಾಡದಿರಿ? ಈ ಸಿಂಧೂರಿನ ಈ ಸಿಂಹ ಒಯ್ದು ನಾವು ಜತ್ತಿಯಲ್ಲಿ ಸಾಕಬೇಕಾಗಿತ್ತು. ಲಕ್ಷ್ಮ್ಯಾನ ತೊಡೆಗೆ ಭರ್ಜಿ ಹೊಡೆದು ತಪ್ಪು ಮಾಡಿದಿರಿ”

“ತಪ್ಪು ಮಾಡಲಿಲ್ಲ ಸರ್ಕಾರ ಇಂಥಾ ಕ್ರೂರ ಪಶು ಸಂಸ್ಥಾನದಲ್ಲಿ ಬದುಕಿರಬಾರದು” ಎಂದವನೆ ಮತ್ತೆ ಭರ್ಜಿ ಎತ್ತಿ ಲಕ್ಷ್ಮಣನಿಗೆ ಹೊಡೆಯಲು ಹೋದ. ಆಗ ದಾದಾಸಾಹೇಬರು ತಡೆದು ನಿಲ್ಲಿಸಿದರು.

“ಇನ್ಸ್ ಪೆಕ್ಟರ್ ಕೇಳು, ಭರ್ಜಿ ಹೊಡೆದು ನನ್ನ ತೊಡೆಯಿಂದ ನೆತ್ತರು ಹರಿಸಿದಿ. ನನ್ನ ಮೈಯ ನೆತ್ತರದಲ್ಲಿ ತೊಯ್ದು ಕೆಂಪಾಗಿರುವ ಈ ಮಣ್ಣು ನೋಡು” ನೆತ್ತರ ಬಿದ್ದು ತೊಯ್ದು ಮಣ್ಣು ಕೈಗೆತ್ತಿಕೊಂಡು “ಈ ಕೆಂಪು ಮಣ್ಣಿನಿಂದ ನಮ್ಮೂರಿಗೆ ಸಿಂಧೂರ ಎನ್ನುವ ಹೆಸರು ಈಗ ಸಾರ್ಥಕವಾಯ್ತು. ಈ ಕೆಂಪು ಮಣ್ಣಿನ ಸಾಕ್ಷಿಯಾಗಿ ಸಾರಿ ಹೇಳತೀನಿ. ಕಾಲಕೂಡಿ ಬಂದಾಗ ನಿನ್ನ ಎದೆ ಸೀಳಿ ಈ ಭೂಮಿತಾಯಿಗೆ ನಿನ್ನ ರಕ್ತತರ್ಪಣ ಕೊಡದಿದ್ರ ನಾನು ಸಾಬಣ್ಣನ ಮಗಾ ಲಕ್ಷ್ಮಣನಾಯಕನೆ… ಅಲ್ಲಾ, ಬರಕೊ ಈ ಮಾತು ನಿನ್ನ ಎದಿಯಾಗ” ಲಕ್ಷ್ಮಣ ದಿಟ್ಟ ಪ್ರತಿಜ್ಞೆ.

ದಾದಾಸಾಹೇಬರ ಆಜ್ಞಾನುಸಾರ ಗಾಯಾಳು ಲಕ್ಷ್ಮಣನನ್ನು ಪೋಲಿಸಿನವರು ಕುದುರೆಯ ಮೇಲೆ ಒಯ್ದು ಜತ್ತಿ ದವಾಖಾನೆಯಲ್ಲಿ ಚಿಕಿತ್ಸೆಗಾಗಿ ಸೇರಿಸಿದವರು. ಲಕ್ಷ್ಮಣನಿಗೆ ತೊಡೆ ಸೀಳಿ ರಕ್ತ ಸುರಿದಿದೆಯಂಬ ಸುದ್ದಿ ತಿಳಿದ ತಾಯಿ ನರಸವ್ವ ಹೆಂಡತಿ ಚಂದ್ರವ್ವ ಜತ್ತಿ ದವಾಖಾನೆಗೆ ಬಂದರು. ಮಗನ ಅವಸ್ಥೆ ನೋಡಿದ ನರಸವ್ವ

“ಸರ್ಕಾರದ ಕೂಡ ನಿನಗ್ಯಾಕಪ್ಪ ಇಂಥಾ ವರ್ಮಾ? ಸರ್ಕಾರ ಎದುರ ಹಾಕ್ಕೊಂಡು ನಮ್ಮಂತಾ ಬಡವರು ಬದುಕಾಕ ಆಗೊದಿಲ್ಲ. ಮಾಡಿದ್ದು ತಪ್ಪ ಆಗೇತಂತ ಹೇಳಿ ಸರ್ಕಾರದ ಕಾಲ ಹಿಡಕೊಂಡ ಬಿಡೊ ನನ್ನ ಮಗನ..” ಮಗನ ಮೇಲಿನ ವಾತ್ಸಲ್ಯದಿಂದ ನರಸವ್ವ ನುಡಿದಳು.

“ಎವ್ವಾ ನೀನ… ಹೇಳತಿಯೇನಬೆ ಈ ಮಾತ್ನ? ಹುಲಿ ಹಡದಾಕೆವ್ವ ನೀನು ಹುಲಿ ಹಡದಾಕಿ. ನಿನ್ನಂತಾ ಬ್ಯಾಡರ ಮುದಿಕಿ ಬಾಯಾಗ ಇಂಥಾ ಹೇಡಿತನದ ಮಾತ ಬರಬಾರದವ್ವಾ… ಇಂಥಾ ಹೇಡಿತನದ ಮಾತು ಬರಬಾರದು. ಸರ್ಕಾರದ ಕಾಲ ಹಿಡಕೊ ಅಂತೀಯಲ್ಲ. ಭರ್ಜಿ ಹೊಡದು ತೊಡಿ ಹರಿಸಿದ ಆ ಕಟಕ ಇನ್ಸಪೆಕ್ಟರನ ಕಾಲ ಕಡದ ಬಾ ಮಗನ ಅಂತ ಹೇಳಬೇಕವ್ವಾ ನೀನು” ಗಾಯದ ನೋವಿನಿಂದ ಬಳಲುತ್ತಿದ್ದ ಲಕ್ಷ್ಮಣನ ಎದೆಯಿಂದ ಉಕ್ಕಿ ಬಂದ ರೋಷದ ಕಿಡಿನುಡಿಗಳಿವು.

ದವಾಖಾನೆಯಲ್ಲಿ ಉಪಚಾರದಿಂದ ಲಕ್ಷ್ಮಣನ ತೊಡೆಯ ಘಾಯ ಮಾಯ್ದ ನಂತರ ಅವನನ್ನು ಜತ್ತಿ ತುರಂಗದಲ್ಲಿರಿಸಲಾಯಿತು. ಬೀಳೂರ ದರೂಡಿ ನಂತರ ಬೇರೆಲ್ಲಿಗೂ ಹೋಗಿದ್ದ ರಡ್ಡೆರಟ್ಟಿಯ ಅಳಿಯಂದಿರರಿಗೆ ಲಕ್ಷ್ಮಣನಿಗೆ ಹೀಗಾಗಿ ಅವನನ್ನೀಗ ಜತ್ತಿಯ ಜೇಲಿನಲ್ಲಿ ಹಾಕಿದ ಸುದ್ದಿ ಕೇಳಿ, ನರಸು ಸಾಬು ಗೋಪಾಲಿ ಮೂವರೂ ರಾತ್ರೋರಾತ್ರಿ ಜತ್ತಿಗೆ ಬಂದು, ಜೇಲಿನಿಂದ ಲಕ್ಷ್ಮಣನನ್ನು ಪಾರು ಮಾಡಿಕೊಂಡು ಕ್ಷಣಾರ್ಧದಲ್ಲಿ ಕಣ್ಮರೆಯಾದರು.

ಜತ್ತಿ ತುರಂಗದಿಂದ ಪಾರಾಗಿ ಪರಾರಿಯಾದ ಲಕ್ಷ್ಮಣನನ್ನು ಮತ್ತೆ ಸೆರೆ ಹಿಡಿಯಲಿಕ್ಕೆ ಬ್ರಿಟಿಶ್ ಸರ್ಕಾರ ಅವನ ಮೇಲೆ ಬಂಧನದ ವಾರೆಂಟ್ ಹೊರಡಿಸಿತು. ಬ್ರಿಟಿಶ್ ಸರ್ಕಾರದ ಆಜ್ಞೆಯಂತೆ, ಕಲಾಲ ಸಾಹೇಬನು ಪೋಲಿಸ್ ಸಿಬ್ಬಂದಿಯನ್ನು ತಗೊಂಡು ಲಕ್ಷ್ಮಣನ ಶೋಧಕ್ಕೆ ಹೊರಟನು.

ತನ್ನ ಮೇಲೆ ಬಂಧನದ ವಾರೆಂಟ್ ಇರುವುದನ್ನು ತಿಳಿದು ಲಕ್ಷ್ಮಣ ಅದಕ್ಕೆ ಹೆದರದೇ ಆಗಾಗ ಸಿಂಧೂರಿಗೆ ಬಂದು, ಊರಲ್ಲಿ ನಡೆಯುತ್ತಿದ್ದ ಹನುಮಂತ ದೇವರ ಓಕಳಿಯಲ್ಲಿ ಅಂದು ನಡೆಯುವ ಆಟ ನೋಟದಲ್ಲಿ ಹಾಜರ ಇರುತ್ತಿದ್ದ. ಓಕಳಿಯ ದಿನ ಹನುಮಂತ ದೇವರ ಗುಡಿಯ ಮುಂದೆ ಬಯಲು ಅಟ್ಟದ ಮೇಲೆ ಕಾತ್ರಾಳ ಗಣ್ಯಾನ ಚಿಮಣಾ ಆಟವಿತ್ತು. ಊರ ಜನರೆಲ್ಲಾ ಆಟ ನೋಡಲು ಗುಡಿ ಮುಂದಿನ ಬಯಲಲ್ಲಿ ಕೂಡಿದ್ದರು. ಮಧ್ಯರಾತ್ರಿ ವೇಳೆಗೆ ಲಕ್ಷ್ಮಣನು ನರಸು ಸಾಬು ಗೋಪಾಲಿಯರೊಂದಿಗೆ ಸಿದ್ದಯ್ಯನ ಮನೆಗೆ ದರೂಡಿ ಹಾಕಿದರು. ಮಾರುತಿಯ ಅಪ್ಪ ಇಟ್ಟ ಬಂಗಾರ ಕೊಡಲಿಕ್ಕೆ ಕೇಳಿದರು. ಸಿದ್ದಯ್ಯ ಕೊಡಲೊಪ್ಪಲಿಲ್ಲ. ಒಳಗೆ ಹೋಗಿ ಪೆಟ್ಟಿಗೆ ಕೀಲಿ ಮುರಿದು ಇದ್ದ ಬಿದ್ದ ಬಂಗಾರ, ರೊಕ್ಕ ರೂಪಾಯಿ ಬಳಕೊಂಡು ತರುವಂತೆ ಲಕ್ಷ್ಮಣ ಅಳಿಯಂದಿರಿಗೆ ಹೇಳಿದ. ಸಾಬು ಗೋಪಾಲಿ ಮನೆಯ ಕೋಣೆಯೊಳಗೆ ಹೋದರು. ನರಸ್ಯಾ ಸಿದ್ದಯ್ಯನ ಹೆಂಡತಿ ರಾಚವ್ವನನ್ನು ನೋಡಿದ. ಅವಳ ಮೈಮೇಲೆ ತುಂಬಾ ಬಂಗಾರದೊಡವೆಗಳಿದ್ದವು. ನರಸ್ಯಾ ಅವುಗಳನ್ನು ದೋಚಿಕೊಳ್ಳಲು ರಾಚವ್ವನ ಕೊರಳಿಗೆ ಕೈ ಹಾಕಿದ. ರಾಚವ್ವ, “ಅಯ್ಯೋ.. ಲಕ್ಷ್ಮಣಾ” ಅಂತ ಅರಚಿಕೊಂಡಳು.

“ಲೇ ನರಸ್ಯಾ, ಸರಿ ಹಿಂದ್ಯ. ಆ ಗುರುತಾಯಿಯ ಕೊರಳಿಗೆ ಕೈ ಹಾಕಲು ನಿನಗೆಷ್ಟೋ ಸೊಕ್ಕು? ಈ ಅವ್ವನವರು ನಮ್ಮ ನರಸವ್ವ ತಾಯಿ ಇದ್ದಂಗ. ಮದ್ಲ ಅವರ ಪಾದಾಕ ಬಿದ್ದು ಕ್ಷಮಾ ಕೇಳು” ಲಕ್ಷ್ಮಣನ ಈ ಮಾತಿನಲ್ಲಿ ಅವನ ಪರನಾರೀ ಸಹೋದರತ್ವ ಗುಣ ಎದ್ದುಕಾಣುತ್ತಿತ್ತು. ಆಗ ರಾಚವ್ವನೇ ಮುಂದಾಗಿ ತನ್ನ ಕೊರಳಲ್ಲಿಯ ಆಭರಣಗಳನ್ನೆಲ್ಲ ಲಕ್ಷ್ಮಣನಿಗಿತ್ತು. ಕೊರಳಿನಲ್ಲಿ ತಾಳೀಸರ ಒಂದನ್ನು ಮಾತ್ರ ಉಳಿಸಿಕೊಂಡಳು.

ಬಾಳಿಹಳ್ಳದಲ್ಲಿ ಅಂದು ಮರಣ ಸಮಯದಲ್ಲಿ ಮಾರುತಿಗೆ ಮಾತುಕೊಟ್ಟಂತೆ ಸಿದ್ದಯ್ಯನ ಮನೆಯಿಂದ ಬಂಗಾರ ತಂದು ಲಕ್ಷ್ಮಣ ಮಾರುತಿಯ ತಂಗಿಯ ಮದುವೆ ಮಾಡಿ, ಕೊಟ್ಟ ವಚನ ಪಾಲಿಸಿದ. ಲಕ್ಷ್ಮಣನ ಶೋಧಕ್ಕಾಗಿ ಕಲಾಲ ಸಾಹೇಬ ಪೋಲಿಸ ಪಾರ್ಟಿ ತಗೊಂಡು ಅಥಣಿ, ಜಮಖಂಡಿ, ಬಬಲೇಶ್ವರ, ಕಾಖಂಡಕಿ, ಕಂಕಣವಾಡಿ ಹೀಗೆ ಎಲ್ಲ ಕಡೆಗೂ ದಾಳಿಯಿಟ್ಟರು. ಸಿಂಧೂರ ಬೇಡರ ಠೋಳಿಯ ಸುದ್ದಿ ಬ್ರಿಟಿಷರ ರಾಜ್ಯದ ತುಂಬ ಹಬ್ಬಿತು. ಸತ್ಯಕ್ಕಾಗಿ ಹೋರಾಟ ನಡೆಸಿದ ಲಕ್ಷ್ಮಣನ ಮೇಲೆ ಸರ್ಕಾರದ ವಾರಂಟ ಇದ್ದದು ತಿಳಿದು, ಅವನನ್ನು ರಕ್ಷಿಸಲು ಬಬಲೇಶ್ವರದ ಕರವೀರಪ್ಪ, ಕಂಕಣವಾಡಿ ಚನ್ನಪ್ಪ ಸಾವಕಾರ ಇವರೆಲ್ಲ ಆಶ್ರಯ ಕೊಟ್ಟರು. ಅವರೆಲ್ಲಾ ಕಂಕನವಾಡಿ ಕಬ್ಬಿನ ಪಡದಲ್ಲಿ ಅಡಗಿಕೊಂಡಿದ್ದರು.

ಒಂದು ದಿನ ಲಕ್ಷ್ಮಣ ನರಸ್ಯಾ ಗೋಪಾಲಿಗೆ ಹೇಳಿ ಸಿಂಧೂರಿಗೆ ಹೋಗಿದ್ದ. ಆಗ ಸಿಂಧೂರ ಠೋಳಿ ಕಂಕನವಾಡಿ ಕಬ್ಬಿನ ಪಡದಲ್ಲಿ ಅಡಗಿರುವ ಸುದ್ದಿ ತಿಳಿದು ಪೋಲಿಸ್ ಪಾರ್ಟಿ ಬಂದು ಕಬ್ಬಿನ ಪಡಕ್ಕೆ ಮುತ್ತಿಗೆ ಹಾಕಿತು. ಆದರೆ ಅವರಿಂದ ತಪ್ಪಿಸಿಕೊಳ್ಳಲು ನರಸ್ಯಾ ಸಾಬು ಗೋಪಾಲಿ ಓಡ ಹತ್ತಿದರು. ನರಸ್ಯಾ ಮುಂದೆ ಓಡುತ್ತಿದ್ದ ಸಾಬು ಗೋಪಾಲಿ ಹಿಂದೆ ಇದ್ದರು. ಓಡುತ್ತಿರುವಾಗ ದಾರಿಯಲ್ಲಿ ಹದಿನೈದು ಆಡಿ ಅಗಲದ ಬಾವಿಯೊಂದಿತ್ತು. ಓಡುವ ಭರದಲ್ಲಿ ಅದನ್ನು ಲೆಕ್ಕಿಸದೇ ನರಸ್ಯಾ ಬಾವಿಯ ಈಚೆಯಿಂದ ಆಚೆಯ ದಡಕ್ಕೆ ಒಂದೇಟಿನಲ್ಲೇ ಜಿಗಿದು ಬಿಟ್ಟ. ಸಾಬು, ಗೋಪಾಲಿಯವರು ಬೇರೆ ದಾರಿಯಲ್ಲಿ ಓಡಿದರು. ಬಾವಿಯನ್ನು ಜಿಗಿದು ನರಸ್ಯಾ ಬಿದ್ದು ಬಿಟ್ಟು ಆಗ ಪೋಲಿಸರು ಬಂದು ನರಸ್ಯಾನನ್ನು ಹಿಡಿದು ಬಿಟ್ಟರು.

“ಸಾಹೇಬ್ರ ನರಸ್ಯಾ ಸಿಕ್ಕಬಿಟ್ಟ” ಪೋಲಿಸರು ಕಲಾಲ ಸಾಹೇಬನಿಗೆ ಹೇಳಿದರು.

“ಇವನನ್ನು ಬೆಳಗಾವಿಯ ಹಿಂಡಲಗಾ ಜೇಲಿಗೆ ಎಳಕೊಂಡ ನಡೀರಿ” ಅಂತ ಕಲಾಲ ಇನಸ್ಪೆಕ್ಟರ್ ಪೋಲಿಸರಿಗೆ ಹೇಳಿದ.

ಮರೆಯಲ್ಲೇ ಅಡಗಿದ್ದ ಸಾಬು ಗೋಪಾಲಿ ಇದನ್ನು ಕೇಳಿ ಸಿಂಧೂರಿಗೆ ಬಂದು ಲಕ್ಷ್ಮಣನಿಗೆ ಸುದ್ದಿ ಮುಟ್ಟಿಸಿದರು. ನರಸ್ಯಾ ಪೋಲೀಸರಿಗೆ ಸಿಕ್ಕು ಜೇಲು ಸೇರಿದ ಸುದ್ದಿ ಕೇಳಿ ಲಕ್ಷ್ಮಣನಿಗೆ ಬಲವಾದ ಆಘಾತವಾಯಿತು.

“ಯಾಕಪ್ಪ ಲಕ್ಷ್ಮಣ ಏನಾಯ್ತೊ? ಇಷ್ಟ್ಯಾನ ಗಾಬರಿಯಾಗೀದಿ” ನರಸವ್ವ ಮಗನನ್ನು ಕೇಳಿದಳು.

“ಎವ್ವಾ ಪೋಲಿಸರು ನಮ್ಮ ನರಸ್ಯಾನ್ನ ಹಿಡದು ಬೆಳಗಾವಿ ಜೇಲಿಗೆ ಒಯ್ದರಂತ. ನರಸ್ಯಾ ಪೋಲಿಸ್ರ ಕೈಗೆ ಸಿಕ್ಕು ಜೇಲಿಗೆ ಬಿದ್ದಾ ಅಂದ್ರ ನನ್ನ ಬಲಗೈನ ಕತ್ತರಿಸಿ ಬಿದ್ದಂಗಾತು. ನರಸ್ಯಾ ಇಲ್ಲದ ನಾವ ಹ್ಯಾಂಗ ಇರೂನವ್ವಾ? ನರಸ್ಯಾನ್ನ ಜೇಲಿಗೆ ಕಳಿಸಿ, ನಾವ್ಯಾಕ ಹೊರಗ ಇರಬೇಕು? ನಾವೂ ಹೋಗಿ ಸರ್ಕಾರಕ್ಕೆ ಹಾಜರಾಗಿ ಜೇಲಿಗೆ ಬೀಳತೀವಿ. ಲಕ್ಷ್ಮಣನ ಹೋರಾಟದ ಕತಿ ಮುಗಧಂಗಾತು. ಜೇಲ ಸೇರಿದ ಮ್ಯಾಲೆ ನನಗ ಗೆಲುವೈತೋ, ಸೊಲೈತೋ ಹ್ಯಾಂಗ ಹೇಳಲಿ? ಭೀಮರಾಯ ನನ್ನ ಭವಿಷ್ಯಾ ಹ್ಯಾಂಗ ಬರದಾನೊ ಅವಗ…ಗೊತ್ತು”

“ಭೀಮರಾಯಾ ನಿನ್ನ ಭವಿಷ್ಯಾ ಬಂಗಾರ ಕಡ್ಡಿಲೆ ಬರದಾನ. ನಿನ್ನ ವಂಶದ ಬಳ್ಳಿ ಈಗ ಕುಡಿ ಬಿಟ್ಟೈತಿ” ಚಂದ್ರವ್ವ ಹೇಳಿದಳು.

“ಅಂದ್ರೇನಲೆ ಚಂದ್ರಿ?”

“ನಿನ್ನ ಹೇಣ್ತಿಗೆ ನೀರ ನಿಂತು ಮೂರ ತಿಂಗಳಾತಪ್ಪಾ ಭೀಮರಾಯ ಫಲಾ ಕೊಟ್ಟಾನ” ನರಸವ್ವ ಸೊಸೆಯ ಬಸುರಿಗೆ ವಿಷಯ ಹೇಳಿದಳು.

“ಹೌದಾ ಚಂದ್ರಿ? ಮದ್ಲ ಗುಡೀಗಿ ಹೋಗಿ ಹಣಮಂತ ದೇವರಿಗೆ ತುಪ್ಪದ ದೀಪಾ ಹಚ್ಚರೀ.. ಮನಿ ದೀಪಾ ಬೆಳಗಸಾಕ ಅಪ್ಪ ಸಾಬಣ್ಣ ಮತ್ತ ಹುಟ್ಟಿ ಬರ್ತಾನ. ಮಗಾ ಹುಟ್ಟಿದ್ದಿನಾ ಭೀಮರಾಯಗ ಅಭಿಷೇಕ ಮಾಡಸ್ರಿ. ಊರ ತುಂಬ ಸಕ್ರಿ ಹಂಚರಿ. ಎವ್ವಾ ನನ್ನ ಮಗ್ಗ ಸಾಬಣ್ಣ ಅಂತ ಅಪ್ಪನ ಹೆಸರ.. ಇಡ್ರಿ, ಎವ್ವಾ, ಚಂದ್ರಿ ರಿಣಾ ಇದ್ದರ ತಿರಗಿ ಊರಿಗಿ ಬಂದು ನಿಮ್ಮ ಮಾರಿ ನೋಡತೀನಿ. ರಿಣಾ ಮುಗದಿತ್ತು ಅಂದ್ರ ಸರ್ಕಾರದ ಕೈಯಾಗ ಸಿಕ್ಕು ಸಾಯತೀನಿ. ಸಾಬು, ಗೋಪಾಲಿ ನಡ್ರಲೆ ಹೋಗೂನು” ಮೂವರೂ ಹೊರಟು ಹೋದರು.

ಪೋಲಿಸರು ಲಕ್ಷ್ಮಣ, ಸಾಬು, ಗೋಪಾಲಿಯರನ್ನು ಬಂಧಿಸಿ ಬೆಳಗಾವಿ ಜೇಲಿಗೆ ಸೇರಿಸಿದರು. ನರಸಪ್ಪನೂ ಅಲ್ಲಿಯೇ ಇದ್ದ. ಮಾಂವ ಅಳಿಯಂದಿರು ಕೂಡಿ ಹಿಂಡಲಗಾ ಜೇಲಿನಲ್ಲಿ ನಾಲ್ವರೂ ಒಂದೇ ಸೆಲ್‍ನಲ್ಲಿದ್ದರು.

ಜೈಲಿನೊಳಗಿದ್ದು ಸರ್ಕಾರದ ವಿರುದ್ಧ ಸಡ್ಡು ಹೊಡೆದು ನಿಂತು ಯಾವ ಮಹತ್ಕಾರ್ಯ ಸಾಧಿಸಿದ ಹಾಗಾಯಿತೆಂದು ಮಾಂವ ಅಳಿಯಂದಿರು ಜೇಲಿನಲ್ಲಿ ಹಗಲಿರುಳು ಯೋಚಿಸುತ್ತಲೆ ಇದ್ದರು.

ತಮ್ಮನ್ನು ಈ ಸ್ಥಿತಿಗೆ ಗುರಿ ಮಾಡಿದ ಇಂಗ್ರೆಜಿ ಸರ್ಕಾರದ ವಿರುದ್ಧ ನಡೆಯುವ ಸಮರದಲ್ಲಿ ತಮ್ಮ ಶಕ್ತಿ ತೋರಿಸಲೇಬೇಕೆಂದು ಅವರು ಒಂದು ನಿರ್ಧಾರಕ್ಕೆ ಬಂದರು.

“ನರಸ್ಯಾ, ಈ ಜೇಲಿನ ಕಂಬಿ ನಮ್ಮ ರಟ್ಟ್ಯಾನ ಎಲಬಿನಕಿಂತ ಗಟ್ಟಿ ಅದಾವೇನೆಲೆ?”

“ಮಾಂವಾ ಇವ ಯಾವ ಗಟ್ಟಿ ಕಂಬಿ ಅಂತ ಹೇಳತೀದಿ? ನಮ್ಮ ರಟ್ಟ್ಯಾಗಿನ ಎಲುಬಿನ ಗಟ್ಟಿತನ ಈ ಕಂಬಿಗೆಲ್ಲಿಂದ ಬಂದೀತು? ಬೇಕಾರ ತೋರಸೆಲೆ ಮಾಂವಾ ನನ್ನ ರಟ್ಟ್ಯಾನ ಕಸುವ?” ಎಂದವನೇ ನರಸ್ಯಾ ತನ್ನ ಕೈಗಳಿಂದ ಜೇಲಿನ ಕಂಬಿಗಳನ್ನು ಬಲವಾಗಿ ಜಗ್ಗಿ ಮುರಿದು ಬಿಟ್ಟ. ಮತ್ತೆರಡು ಬಿಟ್ಟ. ಮತ್ತೆರಡು ಕಂಬಿ ಮುರಿದು ಜೇಲಿನಿಂದ ಹೊರಗೆ ಬರಲಿಕ್ಕೆ ದಾರಿ ಮಾಡಿಕೊಟ್ಟ.

“ಶಹಬ್ಬಾಶ್ ನರಸ್ಯಾ, ನಿನ್ನ ರಟ್ಟಾಗಿನ ಕಸುವಿನಿಂದ ನಾವು ಬಚಾವ್ ಆಗಿರತೀವಿ. ನಿನ್ನ ರಟ್ಟಿ ಗಟ್ಟಿಯಾಗಿರೋತನಕಾ ಯಾವ ಸರ್ಕಾರದ ಅಂಜ್ಕಿನೂಯಿಲ್ಲಾ”

ಜೈಲಿನಿಂದ ಪಾರಾಗಿ ಅಮವಾಸ್ಯೆಯ ಕಾರ್ಗತ್ತಲೆಯಲ್ಲೇ ಕಳ್ಳ ಹೆಜ್ಜೆಯಿಂದ ಸದ್ದು ಮಾಡದೆ ಓಡುತ್ತ ಬೆಳಗಾವಿ ನಗರವನ್ನು ದಾಟಿ, ಹೊಲ ಗದ್ದೆಗಳ ನಡುವೆ ಅಡ್ಡ ದಾರಿಯಲ್ಲೆ ಓಡುತ್ತ, ಬೆಳಕು ಹರಿಯುತ್ತಿರುವಾಗ ಬೇಡರ ಗುಂಪು ಅರಭಾಂವಿಗೆ ಬಂದಿತು. ಅಲ್ಲಿಗೆ ಬಂದೊಡೆನೆಯ ಅವರಿಗೆ ಶ್ರೀ ಮಹಾಂತ ಶಿವಯೋಗಿಗಳ ಸ್ಮರಣೆಯಾಯಿತು. ಸಿಂಧೂರಿನ ಈ ಮಂದಿ ಸ್ವಾರ್ಥಿ ಸಾಹುಕಾರರ, ಪರಕೀಯ ಸರ್ಕಾರದ ವಿರುದ್ಧ ನಡೆಸಿದ ಹೋರಾಟದ ವಿಷಯ ಪೂಜ್ಯ ಮಹಾಂತಶ್ರೀಗಳವರಿಗೆ ತಿಳಿದಿತ್ತು. ಜೇಲು ಬಟ್ಟೆಯಲ್ಲೇ ಬಂದಿದ್ದ ನಾಲ್ವರೂ ಸೂರ್ಯೋದಯವಾದ ಮೇಲೆ ಶ್ರೀ ಮಠಕ್ಕೆ ಹೋಗಿ ಪೂಜ್ಯರ ಶ್ರೀಪಾದಗಳ ಮೇಲೆ ಬಿದ್ದರು. ಇವರೇ ಸಿಂಧೂರಿನವರೆಂದು ತಿಳಿದು ಶ್ರೀ ಮಹಾಂತ ಶಿವಯೋಗಿಗಳು ಅಂತಃಕರುಣದಿಂದ ಅವರನ್ನು ಮೈದಡವಿ ಅನುಗ್ರಹಿಸಿ ಆಶೀರ್ವದಿಸಿದರು.

ಜೇಲಿನ ಬಟ್ಟೆ ತೆಗಿಸಿ ಅವರಿಗೆ ಹೊಸ ಬಟ್ಟೆ ತರಿಸಿಕೊಟ್ಟರು. ಅಂದು ಕೋಲೂರಿನ ಶ್ರೀಮಂತರೊಬ್ಬರು ಅರಭಾಂವಿ ಮಠಕ್ಕೆ ತಮ್ಮ ಮಗನ ಜವಳ ತಗಿಸಲು ಬಂದಿದ್ದರು. ಚಾವಳ ಕಾರ್ಯಕ್ರಮ ಮುಗಿದ ನಂತರ ಅವರು ನಡೆಸಿದ ಭೋಜನ ಪಂಕ್ತಿಯಲ್ಲಿ ಲಕ್ಷ್ಮಣ, ನರಸ್ಯಾ, ಸಾಬು ಗೋಪಾಲಿ ನಾಲ್ವರೂ ಕುಳಿತು ಊಟ ಮಾಡಿದರು.

ಅರಭಾಂವಿ ಬಿಟ್ಟು ಪೋಲೀಸರ ಕಣ್ಣು ತಪ್ಪಿಸುತ್ತಲೆ ಕಳ್ಳಮಾರ್ಗದಿಂದ ಜಮಖಂಡಿಗೆ ಬಂದರು. ಹತ್ತಿರದ ಕೃಷ್ಣಾ ನದಿಯಲ್ಲಿ ಈಜಾಡಿ ಜಳಕ ಮಾದಿದರು. ಆಗ ಜಮಂಖಂಡಿ ಸಂಸ್ಥಾನದ ಪರಶುರಾಮ ಮಹಾರಾಜರು ಮೊಸಳೆ ಬೇಟೆಯಾಡಲು ಹೊಳಿ ದಂಡೆಗೆ ಬಂದಿದ್ದರು. ಅವರು ಬಂದೂಕಿನ ಗುರಿಯಿಟ್ಟುಕೊಂಡು ನದಿ ಮಡುವಿನಲ್ಲಿ ಮೊಸಳೆಗಳನ್ನು ಹುಡುಕುತ್ತಿದ್ದರು. ಮಹಾರಾಜರು ನದಿ ದಂಡೆಗುಂಟ ಸಂಚರಿಸುತ್ತಿದ್ದಾಗ ಅವರ ಬಳಿಗೆ ಧಾವಿಸಿ ಬಂದ ಲಕ್ಷ್ಮಣ ಮಹಾರಾಜರಿಗೆ ಮುಜುರೆ ಮಾಡಿದವನೇ ಅವರ ಕೈಯೊಳಗಿನ ಬಂದೂಕನ್ನು ಕಸಿದುಕೊಂಡವನೇ ಹೊಳೆಯಲ್ಲಿ ಟಣ್ಣನೆ ಜಿಗಿದು ಈಜುತ್ತ ಆಚೆಯ ದಡಕ್ಕೆ ತಲುಪಿದನು. ನಂತರ ನಾಲ್ವರೂ ಕೂಡಿ ಚಿಕ್ಕ ಪಡಸಲಗಿಯತ್ತ ಸಾಗಿದರು.

ಲಕ್ಷ್ಮಣ ಬಂದೂಕು ಕಸಿದುಕೊಂಡ ಮೇಲೆ, ರೊಚ್ಚಿಗೆದ್ದ ಜಮಖಂಡಿಯ ಪರಶುರಾಮ ಮಹಾರಾಜರು ವಿಜಾಪುರಕ್ಕೆ ಸುದ್ದಿ ತಿಳಿಸಿ, ಲಕ್ಷ್ಮಣನನ್ನು ಬಂಧಿಸಲು ಪೋಲಿಸಪಾರ್ಟಿ ತರಿಸಿಕೊಂಡರು. ಇತ್ತ ಜತ್ತ ಸಂಸ್ಥಾನದ ಪೋಲೀಸ ಅಧಿಕಾರಿಯಾದ ಕಲಾಲ ಇನ್ಸ್ ಪೆಕ್ಟರ್ ಕೂಡ ಜಮಖಂಡಿಗೆ ಬಂದು, ಆರೋಪಿ ಲಕ್ಷ್ಮ್ಯಾನನ್ನು ಸೆರೆಹಿಡಿಯಲು ಮಹಾರಾಜರಿಂದ ವೀಳ್ಯ ಹಿಡಿದನು.

ಜಮಖಂಡಿಗೆ ಬಂದಿದ್ದ ಲಕ್ಷ್ಮಣನ ತಂಡ ಕಂಕನವಾಡಿ, ಕಾಖಂಡಕಿ ಬಬಲೇಶ್ವರ, ಹೊನವಾಡ, ಕನಮಡಿ ಊರುಗಳಲ್ಲಿ ಸಂಚರಿಸಿ, ಬಡ್ಡೀ ವ್ಯಾಪಾರದ ಸಾಹುಕಾರರನ್ನು ಸುಲಿದು, ಸೆದೆಬಡಿದು, ಬಡವರಿಗೆ ಬಂಗಾರ ನೀಡಿ, ಹೆಣ್ಣು ಮಕ್ಕಳನ್ನು ಅಕ್ಕ ತಂಗೆಂದಿರೆಂದು ಭಾವಿಸಿ ಅವರಿಗೆ ಸೀರೆಗಳ ಜೊತೆಗೆ ಆಭರಣಗಳನ್ನು ಕೊಡುತ್ತ ಆಲಮೇಲ ಹರನಾಳಗಳನ್ನು ಹಾಯ್ದು ಸಾತ್ಯಾಳಕ್ಕೆ ಬಂದರು.

ನರಸ್ಯಾನ ತಂಗಿ ರಡ್ಡೆರಟ್ಟಿಯ ಸತ್ಯವ್ವನನ್ನು ಸಾತ್ಯಾಳಕ್ಕೆ ಕೊಟ್ಟಿತು. ಗಂಡನೊಂದಿಗೆ ಸಂಸಾರದಲ್ಲಿ ನೆಮ್ಮದಿಯಿಲ್ಲದ ಕಾರಣ, ಲಕ್ಷ್ಮಣನ ತಂಡದಲ್ಲಿ ತನ್ನ ಅಣ್ಣ ನರಸಪ್ಪ ಬಂದಿರುವನೆಂದು ಗೊತ್ತಾಗಿ, ಕತ್ತಲೆಯ ರಾತ್ರಿಯಲ್ಲಿ ಸಿಂಧೂರ ವೀರರನ್ನು ಹುಡುಕುತ್ತ ಬಂದಳು. ತಾನು ಬಂದ ಕಾರಣ ಹೇಳಿದಳು. ಆಗ “ಲಕ್ಷ್ಮಣ ಹೆಣ್ಣಿಗೆ ಗಂಡನೇ ಗತಿಯವ್ವಾ, ಗಂಡನೇ ಬಂಗಾರ, ಸಿಂಗಾರ ಎಲ್ಲಾ! ಹೋಗಿ ಗಂಡನೊಂದಿಗೆ ಹೊಂದಿಕೊಂಡು ಬಾಳೇ ಮಾಡವ್ವ… ಹಂಗಿನ ತವರಮನಿಯಾಶೆ ಬ್ಯಾಡವ್ವಾ” ಎಂದು ಹೇಳಿದಾಗ

“ರೂಪದಲ್ಲಿ ಹೆಣ್ಣಾದರೂ ಧೈರ್ಯದಲ್ಲಿ ನಾನು ಗಂಡು. ನಮ್ಮವರಾದ ನೀವೆಲ್ಲಾ ಪೋಲೀಸ್ರ ಕಣ್ಣ ತೆಪ್ಪಿಸಿ ತಿರಗ್ಯಾಡತಿರುವಾಗ, ನಿಮ್ಮೆಲ್ಲರ ರಕ್ಷಣೆಗಾಗಿ ನಾನೂ ನಿಮ್ಮ ಕೂಡ ಬರತೀನಿ ಮಾಂವಯ್ಯ” ಸತ್ಯವ್ವನ ಸ್ಪಷ್ಟ ನುಡಿಯಿದು.

ಅವಳ ಮಾತನ್ನು ಮೆಚ್ಚಿ ಲಕ್ಷ್ಮಣ ಅವಳಿಗೆ ಗಂಡುಡುಗೆ ತೊಡಿಸಿ ಕೈಯಲ್ಲಿ ಖಡ್ಗ ಕೊಟ್ಟನು. ಗಂಡುಡುಗೆ ತೊಟಗೊಂಡು ಸತ್ಯವ್ವ ಗಂಡುಗಲಿಯಾಗಿ, ಕೈಯಲ್ಲಿ ಖಡ್ಗ ಹಿಡಿದು ವೀರವನಿತೆಯಾಗಿ, ಲಕ್ಷ್ಮಣನನ್ನು ಬಂಧಿಸಲು ಬರುವ ಪೋಲಿಸ ಫೌಜನ್ನು ಎದುರಿಸಲು ಸಿದ್ದಳಾದಳು. ಸಿಂದಗಿ ತಾಲೂಕಿನ ಸೀಮೆಯನ್ನು ಬಿಟ್ಟು ಹೋಗುವವರೆಗೂ ಸತ್ಯವ್ವ ಸಿಂಧೂರ ವೀರರನ್ನು ರಕ್ಷಣೆ ಮಾಡಿದಳು.

ಲಕ್ಷ್ಮಣನ ತಂಡ ಅಲ್ಲಲ್ಲಿ ತಿರುಗುತ್ತ ಕಲ್ಲೊಳ್ಳಿ ಗುಡ್ಡಕ್ಕೆ ಬಂದು, ಕಲ್ಲೊಳ್ಳಿ ಗುಡ್ಡದ ಗಡುಚಾದ ಜಂಗಲ್‍ನಲ್ಲಿ ಲಕ್ಷ್ಮಣನ ತಂಡ ಠಾವು ಮಾಡಿಕೊಂಡಿತು. ಸಿಂಧೂರ ಠೋಳಿ ಕಲ್ಲೊಳ್ಳಿ ಗುಡ್ಡದಲ್ಲಿರುವ ಸುದ್ದಿ ತಿಳಿದು ಕಲಾಲ ಇನ್ಸ್ ಪೆಕ್ಟರ್ ಪೋಲಿಸ ಪಾರ್ಟಿಯೊಂದಿಗೆ ಬಂದು ಕಲ್ಲೊಳಿ ಗುಡ್ಡಕ್ಕೆ ಮುತ್ತಿಗೆ ಹಾಕಿದನು. ಆ ಗುಡ್ಡದಲ್ಲಿ ದಟ್ಟವಾಗಿ ಬೆಳೆದ ಗಿಡಮರಗಳ ಗುಂಪಿನಲ್ಲೊಂದು ಎತ್ತರವಾದ ಹುಣಸೇಮರವೊಂದಿತ್ತು. ನರಸ್ಯಾ ಆ ಮರವನ್ನೇರಿ ಸುತ್ತೆಲ್ಲ ದೃಷ್ಟಿಬೀರಿ ಪೋಲೀಸರ ದಂಡು ಬರುವುದನ್ನು ನೋಡುತ್ತಿದ್ದ. ಪೋಲಿಸರ ಕುದುರೆಗಳು ಬರುತ್ತಿರುವುದನ್ನು ಕಂಡೊಡನೆಯ ನರಸ್ಯಾ ಮರದಿಂದ ಕೆಳಗಿಳಿದು ಬಂದು ಮಾಂವ ಲಕ್ಷ್ಮಣನಿಗೆ ತಿಳಿಸಿ ತಾನು ಕೈಯಲ್ಲಿ ಹಿಡಿಗಲ್ಲು ತಗೊಂಡು ಕುದುರೆಗಳು ಬರುವ ಕಡೆಗೆ ಬೀಸಿ ಬಗೆಯಲಾರಂಭಿಸಿದ.

ಲಕ್ಷ್ಮಣನ ಕೈಯಲ್ಲಿ ಜಮಖಂಡಿ ಮಹಾರಾಜರ ಬಂದೂಕು ಇತ್ತು. ಗುಡ್ದದ ಕಲ್ಲು ಬಂಡೆಗಳ ನಡುವೆ ಬಂದ ಕಲಾಲ ಇನ್ಸ್‌ಪೆಕ್ಟರ್ “ಎಲೆ ಲಕ್ಷ್ಮ್ಯಾ, ಎಲ್ಲಿ ಅಡಗಿ ಕುಳಿತಿಯಲೆ? ಬಾ ಬಯಲಿಗೆ” ಅಂತ ಗದ್ದರಿಸಿದ. ರಿವಾಲ್ವರಿನಿಂದ ಗುಂಡು ಹಾರಿಸಿದ. ಅದಕ್ಕೆ ಪ್ರತಿಯಾಗಿ ಹೆಬ್ಬಂಡೆಯ ಮರೆಯಲ್ಲಿಯೇ ಅವಿತುಕೊಂಡಿದ್ದ ಲಕ್ಷ್ಮಣ ಕೂಡ ಬಂದೂಕಿನ ಗುಂಡು ಹಾರಿಸಿದ. ಇಬ್ಬರಿಗೂ ಗುಂಡಿನ ಚಕಮಕಿ ನಡೆಯಿತು. ಕಲಾಲ ಸಾಹೇಬರ ಕೈಯಲ್ಲಿದ್ದ ರಿವಾಲ್ವರಿನೊಳಗೆ ಬುಲೆಟ್‍ಗಳು ಖಾಲೀ ಆದವು. ಆಗ ಇನ್ಸಪೆಕ್ಟರ್ ಪಿಸ್ತೂಲನ್ನು ನೆಲಕ್ಕೆ ಎಸೆದು ಲಕ್ಷ್ಮಣನನ್ನು ಮಲ್ಲಯುದ್ದಕ್ಕೆ ಆಹ್ವಾನಿಸಿದ. ಲಕ್ಷ್ಮಣನೂ ಸೆಡ್ಡು ಹೊಡೆಯುತ್ತ ಕಲಾಲನ ಹತ್ತಿರ ಬಂದು, ಕೈಕೊಟ್ಟು ಸಲಾಮ್ ಹೇಳಿ ಕುಸ್ತಿ ಆಡಲು ಸಿದ್ದನಾದನು. ಕಲಾಲನಿಗೂ ಲಕ್ಷ್ಮಣನಿಗೂ ಕುಸ್ತಿ ಕಾಳಗ ನಡೆಯಿತು. ಲಕ್ಷ್ಮಣ ಇನ್ಸ್ ಪೆಕ್ಟರನನ್ನು ಎತ್ತೆತ್ತಿ ಒಗೆದ. ಅವನ ಎದೆ ಮೇಲೆ ಕುಳಿತು ಗುದ್ದಲಿಕ್ಕೆ ಮುಷ್ಟಿ ಮಾಡಿ ಕೈ ಎತ್ತಿದ. ಆಗ ಇನ್ಸ್ ಪೆಕ್ಟರನು

“ಲಕ್ಷ್ಮ್ಯಾ ಶಸ್ತ್ರ ಕೈಯಾಗ ಇಲ್ಲದಾಗ ಶತ್ರುವಿನ ಕೊಲ್ಲೂದು ವೀರಗ ಒಪ್ಪುವ ಧರ್ಮ ಅಲ್ಲ ಈಗ ಕೊಂದು ನೀನು ಧರ್ಮದ್ರೋಹಿ ಯಾಗಬ್ಯಾಡಾ”.

“ಇದುವರೆಗೂ ಈ ಲಕ್ಷ್ಮಣ ಬದುಕಿದ್ದೇ ಧರ್ಮದ ಬಲದಿಂದ ಈಗ್ಯಾಕ ನಾ ಧರ್ಮದ್ರೋಹಿಯಾಗಲೀ ಹೋಗು ಕುನ್ನಿ ನಿನಗ ಜೀವದಾನ ಕೊಟ್ಟೀನಿ ಬದುಕಿಕೊ ಹೋಗು”!

ಲಕ್ಷ್ಮಣ ಕಲಾಲನ ಎದೆಯ ಮೇಲಿಂದ ಏಳುತ್ತಿರುವಾಗ ರಕ್ಕಸ ಕಲಾಲನು ಲಕ್ಷ್ಮಣನ ಕಾಲು ಜಗ್ಗಿ ಎಳೆದು ಅವನನ್ನು ನಿಲಕ್ಕೆ ಕೆಡವಿ, ಎದೆಯ ಮೇಲೆ ಕುಳಿತು; “ನನಗ ಜೀವದಾನಾ ಕೊಡತೀಯೇನಲೆ ಬ್ಯಾಡಾ. ಈ ಮೋಹನಲಾಲ ಯಾರಿಂದಲೂ ಜೀವದಾನಾ ಬೇಡುವಂತಾ ಹೇಡಿಯಲ್ಲ. ಈಗ ನಾನು ನಿನ್ನ ಜೀವ ತಗೊಂತೀನಿ. ನಿನ್ನ ಆಯುಷ್ಯಾ ತೀರಿತು. ಈಗ ನೆನಿಸ್ಕೊ ನಿನ್ನ ಭೀಮರಾಯನ್ನ” ಎಂದವನೇ ಜಂಭೆ ಎತ್ತಿ ಲಕ್ಷ್ಮಣನ ಎದೆಗೆ ಹೊಡೆಯುವಷ್ಟರಲ್ಲಿ ಅದನ್ನು ನೋಡಿದ ನರಸ್ಯಾ ಹಾರಿ ಬಂದು ಇನ್ಸ್ ಪೆಕ್ಟರನನ್ನು ಜಗ್ಗಿ ಹಿಂದಕ್ಕೆ ಕೆಡವಿ ಅವನ ಎದೆಯ ಮೇಲೆ ಕಾಲಿಟ್ಟು ನಿಂತನು.

“ಎಲೇ, ಇಂಗ್ರೇಜಿ ಸರ್ಕಾರದ ಎಂಜಲೆಲಿ ನೆಕ್ಕಿ ಬದುಕೋ ನಾಯಿ! ಶಸ್ತ್ರ ಕೈಯಾಗಿಲ್ಲದಾಗ ಶತ್ರುವಿನ ಕೊಲ್ಲೂದು, ವೀರಗೊಪ್ಪುವ ಧರ್ಮ ಅಲ್ಲಾ ಅಂತ ಬೊಗಳತಿದ್ದೆಲ್ಲಲೆ? ಅಂದು ಬಾಳೀ ಹಳ್ಳದಾಗ ಶರಣು ಬಂದಿನಿ ಅಂತ ಬಾಗಿ ಹುಲ್ಲಕಡ್ಡಿ ಕಚಿಕೊಂಡು, ಕೈ ಮುಕ್ಕೊಂಡು ದಾದಾಸಾಹೇಬ ಸರ್ಕಾರದ ಮುಂದ ನಿಂತಾಗ, ನಮ್ಮ ಮಾಂವನ ಕಾಲಿಗೆ ಭರ್ಚಿ ಹೊಡೆದು ನೆತ್ತರಾ ಹರಿಸಿದೆಲ್ಲಾ ಆವಾಗ ನಿನ್ನ ಧರ್ಮದ ಮಾತು ಧೂಳ ಮೆತ್ತಿ ಯಾವ ಮೂಲ್ಯಾಗ ಬಿದ್ದಿತ್ತು? ನಿನಗ ಜೀವದಾನಾ ಕೊಟ್ಟೀನಿ ಅಂತ ಎದಿಬಿಟ್ಟ ಏಳುವಾಗ ಕಾಲ ಜಗ್ಗಿ ಕೆಡವಿ ನಮ್ಮ ಮಾಂವನ ಎದೀಮ್ಯಾಲ ಕುಂತು ಜಂಬೇಎತ್ತಿ ಕೊಲ್ಲಾಕ ನಿಂತಿಯೆಲ್ಲಾ ಈಗ ನಿನ್ನ ಧರ್ಮ ಎಲ್ಲಿ ಹಾಳಾಗಿ ಹೋಗೇತಿ? ಬಾಯಾಗ ಶಾಸ್ತ್ರಾ. ಕೈಯಾಗ ಶಸ್ತ್ರ ಇದೆಯೇನ ಧರ್ಮ? ಲೇ ಕಟಕಾ…ನೀ ಮಾಡಿದ ಕರ್ಮನ ನಿನಗ ಮೃತ್ಯು ಆಯ್ತು. ನಡಿಯಿನ್ನ” ಅಂದವನೇ ನರಸ್ಯಾ ತನ್ನ ಕೈಯೊಳಗಿನ ಕೊಡಲಿಯಿಂದ ಕಟಕ ಇನ್ಸಪೆಕ್ಟರ್ ರುಂಡ ಚೆಂಡಾಡಿಬಿಟ್ಟ.

ಕಲ್ಲೊಳಿ ಗುಡ್ಡದಲ್ಲಿ ಕಟಕ ಇನ್ಸ್‌ಪೆಕ್ಟರನ ಕತೆ ಮುಗಿಸಿ ಸಿಂಧೂರ ವೀರರು ಅಲ್ಲಿಂದ ಹೊರಟು, ಕಂಕಣವಾಡಿಗೆ ಹೋಗಿ ನಿಡೋಣಿಯತ್ತ ಸಾಗಿದರು. ನಿಡೋಣಿಯ ಪಶ್ಚಿಮಕ್ಕೆ ಅಡವಿಯ ನಡುವೆ ಹರಿದಿರುವ ಹಳ್ಳದ ದಡದಲ್ಲಿ, ಹಳೆಯ ಕಾಲದ ರಾಮೇಶ್ವರ ಗುಡಿಯಲ್ಲಿ ತಂಗಿದರು. ಆ ಊರಿನಲ್ಲಿ ಕಟ್ಟು ಮಸ್ತಾದ ಕುಸ್ತಿ ಆಳು ಹೊಲೇರ ದುಂಡ್ಯಾನ ಪರಿಚಯವಾಯಿತು. ಸಿಂಧೂರ ವೀರರಿಗೂ ನಿಡೋನಿ ದುಂಡ್ಯಾನಿಗೂ ಆಚರಣೆಯಲ್ಲಿ ಸಾಮ್ಯವಿತ್ತು. ಲಕ್ಷ್ಮಣನ ಮುಂದೆ ದುಂಡ್ಯಾ ತನ್ನ ಶಕ್ತಿ ಪ್ರದರ್ಶನ ಮಾಡಿ ತೋರಿಸಿದ. ಮನೆ ಮರು, ಊರು ಕೇರಿ ಬಿಟ್ಟು ತಾನೂ ಲಕ್ಷ್ಮಣನ ತಂಡದಲ್ಲಿ ಸೇರಿಕೊಳುವ್ವ ಇಂಗಿತವನ್ನು ದುಂಡ್ಯಾ ಅವರಿಗೆ ತಿಳಿಸಿದ. ಅದಕ್ಕೆ ಲಕ್ಷ್ಮಣನ ಸಹಿ ಬಿತ್ತು.

ಇಲ್ಲಿಯವರೆಗೆ ನಾಲ್ಕು ಜನರಿದ್ದ ಸಿಂಧೂರಿನ ತಂಡದಲ್ಲಿ ಈಗ ಐದು ಜನರಾದರು. ದುಂಡ್ಯಾನ ಸಾಹಸಕ್ಕೆ ಮೆಚ್ಚಿನ ದ್ಯೋತಕವಾಗಿ ಲಕ್ಷ್ಮಣ ತನ್ನ ತಂಡದಲ್ಲಿ ಅವನಿಗೆ ವಿಶ್ವಸ್ಥ ಸ್ಥಾನ ನೀಡಿದ. ಐವರೂ ಕೂಡಿ ದಂದರಗಿ, ಹರನಾಳ, ರಬಿನಾಳ, ದಿಂಡವಾರ, ದೋಣೂರು, ಹೊನ್ನಟಗಿ, ಹುನಶ್ಯಾಳ, ಉಣ್ಣಿಬಾವಿ ಹೀಗೆ ಲಕ್ಷ್ಮಣ ತಿರುಗಿದ ಊರಿಲ್ಲ; ಅವನ ಗಾಳಕ್ಕೆ ಬೀಳದ ಸ್ವಾರ್ಥ ಶ್ರೀಮಂತ ಮೀನುಗಳಿಲ್ಲ. ಲಕ್ಷ್ಮಣ ದರೂಡಿ ಮಾಡಿದ ದುಡ್ಡು ಒಯ್ದು ಊರೊಳಗೆ ತಾನು ಶ್ರೀಮಂತನಾಗಿ ಬೆಳೆಯಬೇಕೆಂದವನಲ್ಲ. ಬಡ್ಡೀ ಹಣ ತಿಂದು ಬಡ ರೈತರನ್ನು ಶೋಷಿಸುತ್ತಿರುವ ಸೈತಾನ ಶ್ರೀಮಂತರನ್ನು ಸುಲಿದು ರೈತರನ್ನು ಬದುಕಿಸುವುದೇ ಅವನ ಹೋರಾಟದ ಮೊದಲ ಗುರಿಯಾಗಿತ್ತು. ತಮ್ಮಂಥ ಜನಸೇವಕರನ್ನು ದೇಶಾಭಿಮಾನಿಗಳನ್ನು ಬಂಧಿಸಿ, ಅಟ್ಟಹಾಸದಿಂದ ಬೀಗುವ ಪಣ ತೊಟ್ಟಿರುವ ಬ್ರಿಟಿಷ್ ಸರ್ಕಾರವನ್ನು ದೇಶದಿಂದ ಓಡಿಸುವದೂ ಆತನ ಕಾರ್ಯದೀಕ್ಷೆಯಾಗಿತ್ತು.

ಲಕ್ಷ್ಮಣನ ತಂಡ ಹೊಸೂರ ಹತ್ತರ ಹಿರಿಹೊಳೆಯನ್ನೂ ದಾಟಿ ಬೀಳಗಿ ಪೇಠಾ (ಈಗ ಬೀಳಗಿ ತಾಲೂಕು ಆಗಿದೆ)ದಲ್ಲಿ ಪ್ರವೇಶ ಮಾಡಿತು. ಬಾಡಗಿ ಬೂದ್ಯಾಳದಿಂದ ಯಡಹಳ್ಳಿಗೆ ಬಂದರು. ಯಡಹಳ್ಳಿಯಲ್ಲಿ ತಾರಾಚಂದ ಶೇಟಜಿ ಬಡ್ಡೀ ವ್ಯಾಪಾರ ಮಾಡುತ್ತಿದ್ದ. ಬಡವರಿಂದ ಸ್ಟಾಂಪಿನ ಮೇಲೆ ಅವರ ಹೊಲಮನೆ ಆಸ್ತಿ ಬರೆಸಿಕೊಂಡು ಬಡ್ಡೀ ಸಾಲ ಕೊಡುತ್ತಿದ್ದ. ಬಂಗಾರ ಒತ್ತೆಯಿಟಕೊಂಡು… ಬಡ್ಡೀ ಸಾಲಾ ಕೊಟ್ಟು, ಸಾಲ ತೀರಿಸಬೇಕಾದ ಅವಧಿ ಮುಗಿಯಿತೆಂದು ಸಾಲಗಾರರಿಗೆ ಹೇಳಿ ಅಡವಿಯಿಟ್ಟಿದ್ದ ಬಂಗಾರವನ್ನು ತನ್ನದಾಗಿಸಿಕೊಳ್ಳುತ್ತಿದ್ದ. ಇಂಥ ಲೇವಾ-ದೇವಿ ವ್ಯಾಪಾರದಿಂದ ತಾರಾಚಂದ ಸಾಕಷ್ಟು ಹಣ ಮತ್ತು ಚಿನ್ನವನ್ನು ಸಂಪಾದಿಸಿದ್ದ. ಶೇಡಜಿಯ ಈ ವ್ಯಾಪಾರದ ವರ್ತಮಾನ ತಿಳಿದು ಲಕ್ಷ್ಮಣ ಯಡಹಳ್ಳಿಗೆ ಬಂದು ತಾರಾಚಂದನ ಮನೆಗೆ ದರೂಡಿ ಹಾಕಿದ. ಶೇಡಜಿಯ ಕೈಕಾಲು ಕಟ್ಟಿ ಹಾಕಿ, ಅವನ ತಿಜೋರಿ ಒಡೆದು ಬೆಳ್ಳಿ ನಾಣ್ಯಗಳ ಸೂರ್ತಿ ರೂಪಾಯಿಗಳನ್ನು ಚೀಲದಲ್ಲಿ ತುಂಬಿಕೊಂಡು, ಬಂಗಾರದಾಭರಣಗಳನ್ನು ಬಳೆದುಕೊಂಡರು. ತಿಜೋರಿಯಲ್ಲಿದ್ದ ಬಡವರು ಬರೆದುಕೊಟ್ಟಿದ್ದ ಎಲ್ಲ ಸ್ಟಾಂಪಿನ ಕಾಗದಗಳನ್ನು ಸುಟ್ಟು ಹಾಕಿದರು.

ಯಡವಳ್ಳಿಯಿಂದ ಹೊರಟು, ಬಸನಾಳ ಕಡೆಗೆ ಬರುವಾಗ ದಾರಿಗುಂಟ ಶೇಡಜಿ ಮನೆಯಿಂದ ಚೀಲದಲ್ಲಿ ಹೊತ್ತು ತಂದಿದ್ದ ಸೂರ್ತಿ ರೂಪಾಯಿಗಳನ್ನು ತೂರುತ್ತ, ಶ್ರೀಮಂತರ ವಿರುದ್ಧ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ನಡೆದರು. ಬಸನಾಳ ಕೆರೆಯ ಹತ್ತಿರದ ಒಂದು ಗುಡಿಯಲ್ಲಿ ಅಂದಿನ ರಾತ್ರಿ ವಸ್ತೀ ಮಾಡಿ, ಬೆಳಗಾಗುವುದರೊಳಗಾಗಿ ತೆಗ್ಗಿ, ಸಿದ್ದಾಪುರ ಗುಡ್ದದ ಮೇಲಿಂದ ಹಾಯ್ದು ನಾಗರಾಳದ ಕಪ್ಪರ ಪಡಿಯವ್ವನ ಗುಡ್ದಕ್ಕೆ ಬಂದರು.

ಕಪ್ಪರ ಪಡಿಯವ್ವನ ಗುಡ್ಡ ಗಡುಚಾದ ದಟ್ಟ ಗಿಡಮರಗಳಿಂದ ಕೂಡಿದ ನಿಬಿಡಾರಣ್ಯವಾಗಿತ್ತು. ಅಂಥ ಅಡವಿಯಲ್ಲಿ ಭಾವುಕರಿಗೆ ಶಾಂತಳೂ, ಹಲವರಿಗೆ ಉಗ್ರಳೂ ಆದ ಪಡಿಯವ್ವ ದೇವತೆ ನೆಲೆಸಿದ್ದಳು. ನಾಗರಾಳದ ದಿಗಂಬರ ಮಠದ ಸ್ವಾಮಿಗಳು ಆ ದೇವಿಯ ಅರ್ಚಕರಾಗಿದ್ದರು. ಸಿಂಧೂರ ವೀರರು ಪಡಿಯವ್ವನ ದೇಗುಲಕ್ಕೆ ಬಂದು ದೇವಿಯ ಮುಂದೆ ಸಾಷ್ಟಾಂಗವೆರಗಿದರು. ಗುಡ್ಡವನ್ನೇರಿ ಹೋಗಿ ಹುಂಚೀಕೆರೆಯ ಹತ್ತಿರ ಕಲ್ಲುಬಂಡೆಗಳ ಸುತ್ತಿ ಗಿಡಗಂಟೆಗಳು ಬೆಳೆದಲ್ಲಿ ಠಾವು ಮಾಡಿಕೊಂಡುರು.

ಸಿಂಧೂರ ಲಕ್ಷ್ಮಣನ ಠೋಳಿ ಕಪ್ಪರ ಪಡಿಯವ್ವನ ಗುಡ್ಡಕ್ಕೆ ಬಂದಿದ್ದೆಯೆನ್ನುವ ಸುದ್ದಿ ಆಗಲೇ ಸುತ್ತೆಲ್ಲ ಹಳ್ಳಿಯ ಜನಕ್ಕೆ ಗೊತ್ತಾಗಿತ್ತು. ಲಕ್ಷ್ಮಣನ ಬಂಟಸ್ತನ ಅವರಿವರ ಬಾಯಿಂದ ಕೇಳಿದ ಹಳ್ಳಿಗಳ ಗಂಡು-ಹೆಣ್ಣುಮಕ್ಕಳು ಅವನನ್ನು ಕಣ್ಣಾರೆ ಕಾಣಬೇಕೆಂದು ಹಂಬಲಿಸುತ್ತಿದ್ದರು. ಆದರೆ ಲಕ್ಷ್ಮಣನ ದರ್ಶನ ಭಾಗ್ಯ ಎಲ್ಲರಿಗೂ ದೊರೆಯುವಂತಿರಲಿಲ್ಲ. ಯಾಕೆಂದರೆ ಅವನು ಸರ್ಕಾರದ ವಾರಂಟ್ ಹೊತ್ತಿರುವ ಆರೋಪಿ. ಆದರೂ ಲಕ್ಷ್ಮಣ ಜಪ್ಪಿಸಿ ಆಗಾಗ ಸಿದ್ದಾಪುರ ನಾಗರಾಳಕ್ಕೆ ಬಂದು ಹೋಗುತ್ತಿದ್ದ.

ಮುಂದೆ ತೆಗ್ಗಿ ವೆಂಕನಗೌಡನ ಆಶ್ರಯ ದೊರೆಯುತ್ತದೆ. ರಕ್ಷಣ ಪಡೆಯುತ್ತಾರೆ. ಲಕ್ಷ್ಮಣ ಆಗಾಗ ತೆಗ್ಗಿಗೆ ಬಂದು ವೆಂಕನಗೌಡರನ್ನು ಭೆಟ್ಟಿಯಾಗುತ್ತಿದ್ದ. ತನಗೆ ಊಟಕ್ಕೆ ಅವಶ್ಯವಾದ ಬುತ್ತಿ ಹಾಗೂ ಬಂದೂಕಿಗೆ ಬೇಕಾಗಿರುವ ಕಾಡತೂಸುಗಳನ್ನು ಪಡೆದುಕೊಳ್ಳುತ್ತಿದ್ದ.

ತೆಗ್ಗಿ ನಾಯಕರಿಂದ ಸಂರಕ್ಷಣೆಯ ಭರವಸೆ ಸಿಕ್ಕಮೇಲೆ ಲಕ್ಷ್ಮಣ ನಿರ್ಭೀತಿಯಿಂದ ಅಲೆಯ ಹತ್ತಿದ. ಕಪ್ಪರ ಪಡಿಯವ್ವನ ಗುಡ್ದದಲ್ಲಿ ವಾಸವಾಗಿದ್ದ ಲಕ್ಷ್ಮಣ ಅಲ್ಲಿಂದ ಜಾನಮಟ್ಟ ಹೋದ. ಆ ಊರಲ್ಲಿ ಬೇಡರ ಕುಲದ ಚಿಗರಿ ಯಮನಪ್ಪನೆಂಬವನು ಬಲಾಢ್ಯನಾಗಿದ್ದ. ಅವನೂ ಲಕ್ಷ್ಮಣನ ದಂಡಯಾತ್ರೆಯ ಸುದ್ದಿ ಕೇಳಿದ್ದ. ಅವನ ತಂಡವು ಕಪ್ಪರ ಪಡಿಯವ್ವನ ಗುಡ್ದದಲ್ಲಿರುವುದನ್ನು ಕೇಳಿದ ಚಿಗರಿಯಮನಪ್ಪ ಅಲ್ಲಿಗೆ ಹೋಗಿ ಲಕ್ಷ್ಮಣನನ್ನು ನೋಡುವ ತವಕದಲ್ಲಿದ್ದ. ಅಷ್ಟರೊಳಗೆ ಚಿಗರಿ ಯಮನಪ್ಪ ಬೇಡ ಕುಲಬಾಂಧವನೆಂದು ಅವನ ಹೆಸರನ್ನು ಕೇಳಿದ ಲಕ್ಷ್ಮಣನೇ ಯಮನಪ್ಪನನ್ನು ಕಾಣಲು ಜಾನಮಟ್ಟಿಗೆ ಬಂದ. ಲಕ್ಷ್ಮಣನೇ ತನ್ನ ಮನೆಗೆ ಬಂದದ್ದು ಯಮನಪ್ಪನಿಗೆ ಸಂತೋಷವಾಯಿತು.

ಯಮನಪ್ಪನ ಮುಂದೆ ಲಕ್ಷ್ಮಣ ತನ್ನೆಲ್ಲ ಸಮಾಚಾರವನ್ನು ಬಿಡದೇ ಹೇಳಿದ. ಅದನ್ನು ಕೇಳಿದ ಯಮನಪ್ಪನಿಗೆ ಹೃದಯದಲ್ಲಿ ತುಂಬ ಯಾತನೆಯಾಯಿತು.

“ಲಕ್ಷ್ಮಣ್ಣಾ, ನಾವು ಬೇಡರು ಜೀವಕ್ಕೆ ಜೀವಾ ಕೊಡುವ ಬಂಟರು. ನಿನ್ನ ಮ್ಯಾಲ ವಾರಂಟೈತಿ ಪೋಲಿಸರು ಹಿಡೀತಾರ ಅನ್ನು ಅಂಜ್ಕಿ ಬಿಟ್ಟ ಬಿಡು. ಪೋಲಿಸ್ರ ಕೈಗೆ ಸಿಗಲಾದಂಗ ನಿನ್ನ ನಾ ನೋಡಿಕೊಳ್ಳತೀನಿ” ಎಂದು ಲಕ್ಷ್ಮಣನಿಗೆ ಧೈರ್ಯ ಹೇಳಿ ಯಮನಪ್ಪ ಅವನಿಗೆ ಕುಡಿಯಲು ಆಡಿನ ಹಾಲು ಕೊಟ್ಟ.

ಲಕ್ಷ್ಮಣ ಜಾನಮಟ್ಟಿಯಲ್ಲಿ ಚಿಗರಿ ಯಮನಪ್ಪನ ಮನೆಯಲ್ಲಿದ್ದಾನೆಂದು ತಿಳಿದು ಅವನನ್ನು ಹಿಡಿಯಲು ಪೋಲಿಸರು ಅಲ್ಲಿಗೆ ಬಂದರು. ಆಗ ಚಿಗರಿ ಯಮನಪ್ಪ ತನ್ನ ನಾಲ್ಕಾರು ಮಂದಿ ಗೆಳೆಯರನ್ನು ಕರಕೊಂಡು ಬಮ್ದಿದ್ದ ಪೋಲಿಸರನ್ನೇ ಹಿಡಿದು ಕಂಬಕ್ಕೆ ಕಟ್ಟೆ ಚೆನ್ನಾಗಿ ಥಳಿಸಿದನು. ಅವರು ಪೋಲೀಸಿನವರೆಂದು ತಿಳಿದೂ ಯಮನಪ್ಪ ಹೀಗೆ ಮಾಡಿದ. ಹೊಡೆತ ತಿಂದು ಘಾಸಿಯಾದ ಅವರು ತಾವು ಪೋಲಿಸಿನವರೆಂದು ಹೇಳಿದಾಗ ಹೊಡೆತ ಯಮನಪ್ಪ ಅವರನ್ನು ಕಟ್ಟಿನಿಂದ ಬಿಚ್ಚಿ ಬಿಟ್ಟು,

“ಸಾಹೇಬ್ರ, ನಾವು ತಿಳದಿದ್ದ…ಬ್ಯಾರೆ, ಸಿಂಧೂರ ಲಕ್ಷ್ಮಣ ಒಮ್ಮೊಮ್ಮೆ ಭಿಕ್ಷುಕರ ಹಾಂಗ, ಒಮ್ಮೊಮ್ಮೆ ಪೋಲೀಸರ ಹಾಂಗ ಡಿರೇಸ ಹಾಕ್ಕೊಂಡ ಬರ್ತಾನಂತ ನಾವು ತಿಳದು ನಾವು ಕೇಳಿದ್ವಿ. ನೀವು ಬಂದಾಗ ಸಿಂಧೂರಿನವರ.. ಪೋಲಿಸರ ದಿರೇಸ ಹಾಕ್ಕೊಂಡ ಬಂದಾರಂತ ತಿಳದು ನಾವು ನಿಮ್ಮನ್ನ ಕಟ್ಟಿ ಹಾಕಿದ್ವಿ. ಸಿಂಧೂರ ಠೋಳಿ ಮಂದಿನ್ನ ನಾವು ಕಟ್ಟಿ ಹಾಕೀವಿ, ಹಿಡಕೊಂಡ ಹೋಗಾಕ ಬರ್ರಿ ಅಂತ ಇನ್ನ ನಾವು ಬೀಳಗಿ ಪೋಲಿಸ ಠಾಣೇಕ ತಿಳಸತಿದ್ವಿ. ಈಗ ಎಲ್ಲಾ ಫರಕ ಆತಲ್ರಿ? ಪೋಲಿಸರ… ನಮ್ಮನ್ನ ಕ್ಸಮಾ ಮಾಡ್ರಿ ಎಂದು ಯಮನಪ್ಪ ಅವರನ್ನು ಅಲ್ಲಿಂದ ಕಳಿಸಿಬಿಟ್ಟ.