ಲಕ್ಷ್ಮಣ ದಂಡೆಯಾತ್ರೆ ಅವ್ಯಾಹತವಾಗಿ ನಡದೇಯಿತ್ತು. ಅವನು ಶಿರೂರ ಗುಡ್ಡ, ಕಮತಗಿ ಗುಡ್ಡದಲ್ಲಿ ತಂಗಿ ಅಲ್ಲಿಂದ ದರೂಡಿ ನಡೆಸಿದ. ಮತ್ತೆ ಅಮಿನಗಡಕ್ಕೆ ಹೋಗಿ ಅಲ್ಲಿಯ ಸಾಹುಕಾರ ಗಾಣಿಗೇರ ಮನೆಯನ್ನು ದರೂಡಿ ಮಾಡಿದರು. ಹಾಗೆ ಮುಂದೆ ಸಾಗಿ ಚಿತ್ತರಗಿ, ದೋಟ್ಯಾಳ ಮೇಲಿಂದ ಹೋಗಿ ಮೊಗಲಾಯಿ ಸೀಮೆ ಸೇರಿದರು.

ಮೊಗಲಾಯಿ ಹದ್ದಿನ ಶಾಬಾದದಲ್ಲಿ ಪೂಜೇರಿ ಶರಣಪ್ಪನ ಪರಿಚಯವಾಯ್ತು. ಶರಣಪ್ಪ ಒಬ್ಬ ವಾಮಾಚಾರಿ. ಅವನಿಗೆ ಮಂತ್ರ ತಂತ್ರದ ವಿದ್ಯೆ ಗೊತ್ತಿತ್ತು. ಲಕ್ಷ್ಮಣನಿಗೆ ಅದರಲ್ಲಿ ನಂಬಿಕೆಯಿತ್ತು. ತಾನು ಪೋಲಿಸಿನವರ ಕೈಗೆ ಸಿಗಲಾರದಂತೆ ಶರಣಪ್ಪನಿಂದ ಮಂತ್ರಿಸಿದ ಒಂದು ತಾಯತ ಕಟ್ಟಿಸಿಕೊಂಡ. ಶರಣಪ್ಪ ಸಿಂಧೂರಿನ ಮಂದಿಗೆ ತನ್ನ ಮನೆಯಲ್ಲಿ ಸರಾಯಿ ಸರವರಾಜು ಮಾಡುವುದರೊಂದಿಗೆ ಊಟೋಪಚಾರವನ್ನು ಮಾಡುತ್ತಿದ್ದ. ಲಕ್ಷ್ಮಣ ಮಾಂಸದ ಊಟ ಮಾಡುತ್ತಿದ್ದ. ಆದರೆ ಮಧ್ಯಪಾನ ಮಾಡುತ್ತಿರಲಿಲ್ಲ. ನರಸ್ಯಾ ಸಾಬು ಗೋಪಾಲಿ ಮತ್ತು ದುಂಡ್ಯಾ ಇವರೆಲ್ಲರಿಗೂ ಮಧ್ಯ ಕುಡಿಯಲಿಕ್ಕೆ ಅಡ್ಡಿ ಮಾಡುತ್ತಿರಲಿಲ್ಲ. ಲಕ್ಷ್ಮಣನ ದಂಡಯಾತ್ರೆ ಹೀಗೆ ನಾಗರಾಳ ಗುಡ್ಡದಿಂದ ಮೊಗಲಾಯಿಯ ಶಾಬಾದದವೆರೆಗೂ ಆಗಾಗ ಸಾಗುತ್ತಲೆಯಿತ್ತು.

ಲಕ್ಷ್ಮಣನ ಪುಂಡಾಟಿಕೆ ಹೆಚ್ಚಿದಂತೆ ಅವನನ್ನು ಬಂಧಿಸಲಿಕ್ಕೆ ಪೋಲಿಸ ಕಾರ್ಯಾಚರಣೆಯೂ ತೀವ್ರ ಗತಿಯಿಂದ ನಡೆಯಿತು. ಸಿಂಧೂರಿನವರ ಹಾವಳಿ ಬ್ರಿಟಿಷ್ ಸರ್ಕಾರಕ್ಕೆ ದೊಡ್ಡ ಸಮಸ್ಸೆಯಾಯಿತು. ಆಗ ವಿಜಾಪುರದ ಡಿ.ಎಸ್.ಪಿ. ಗಾರ್ಮನ್ ಸಾಹೇಬನು ಇನ್ನೂರು ಪೋಲಿಸ ಪಡೆಯೊಂದಿಗೆ ಲಕ್ಷ್ಮಣನನ್ನು ಬಂಧಿಸುವ ಪಣತೊಟ್ಟು ಬೀಳಗಿಗೆ ಬಂದ. ಲಕ್ಷ್ಮಣನ ಠೋಳಿ ತುಮ್ಮರಮಟ್ಟಿ ಗುಡ್ಡದಲ್ಲಿರುವ ಬಾತ್ಮಿ ಗಾರ್ಮನ್ ನಿಗೆ ಬೀಳಗಿಯಲ್ಲಿ ವಾಲೀಕಾರ ಸುಸ್ತಾನಸಾಬನಿಂದ ಸುಳಿವು ಸಿಕ್ಕಿತು. ಕೂಡಲೇ ಗಾರ್ಮನ್ ತಮ್ಮರಮಟ್ಟಿ ಗುಡ್ಡಕ್ಕೆ ಹೋದ.

ಲಕ್ಷ್ಮಣ, ನರಸ್ಯಾ, ಸಾಬು, ಗೋಪಾಲಿ, ದುಂಡ್ಯಾ ಎಲ್ಲರೂ ಗುಡ್ಡದ ಮೇಲೆ ಇದ್ದರು. ಗಾರ್ಮನ್ ಸಾಹೇಬ ಗುಡ್ದದ ಕೆಳಗಿನಿಂದಲೆ ರಿವಾಲ್ವಾರಿನಿಂದ ಗುಂಡು ಹಾರಿಸಲು ಪ್ರಾರಂಭಿಸಿದ. ಗುಂಡು ಲಕ್ಷ್ಮಣನಿಗೆ ತಾಗುತ್ತಲೆಯರಲಿಲ್ಲ. ಆಗ ಗಾರ್ಮನ್ ನೊಂದಿಗೆ ಮಾತಿನ ಚಕಮಕಿ ನಡೆಯಿತು.

“ಯೂ.. ಬ್ಲಡೀ ಡೆಕೊಯಿಟ್ ಲುಚ್ಮ್ಯಾ… ವ್ಹೆಯರ್ ಯೂ ಹೈಡಿಂಗ್? ಯೂ ಕಾಂಟ್ ಎಸ್ಕೇಪ್ ಫ್ರಮ್ ಮಾಯ್ ಹ್ಯಾಂಡ್” ಎಂದು ಮತ್ತೆ ಗುಂಡು ಹಾರಿಸಿದ.

“ಎಲೆ, ವಿಲಾಯ್ತಿಯಿಂದ ಓಡಿ ಬಂದಿರುವ ಕೆಂಪು ಮೋತಿಯ ಕೋತಿ. ನಿಮ್ಮ ಇಂಗ್ರೇಜಿ ಸರ್ಕಾರದಿಂದ ವೀಳ್ಯಾ ಹಿಡದು ನಮ್ಮನ್ನ ಹಿಡಿಯಾಕ ಬಂದಿದ್ದ ಒಬ್ಬ ಪೋಲೀಸ ಇನ್ಸ್‌ಪೆಕ್ಟರ ಈಗಾಗಲೆ ಯಮಲೋಕ ಸೇರ್ಯಾನ. ಇನ್ನ ಇಂಗ್ರೇಜಿ ಮನಿಶ್ಯಾ ನೀ ಬದಕತಿಯಾ ಈ ಸಿಂಧೂರ ಹುಲಿಯ ಮೀಸಿಗೆ ಕೈ ಹಚ್ಚಿ” ಲಕ್ಷ್ಮಣ ಗುಡುಗಿದ.

“ವಾಟ್, ಆರ್ ಯೂ, ಟೈಗರ್? ಇಂಡಿಯಾದ ಒಬ್ಬ ಹೇಡಿ ಇನ್ಸ್‌ಪೆಕ್ಟರನ ಕೊಲೆ ಮಾಡಿ ಬಿಟ್ಟು ನೀನು ಟೈಗರ್ ಆಗಬಹುದ? ನೆವ್ಹರ್ ನೆವ್ಹರ್! ನಿನ್ನಂಥಾ ಎಷ್ಟೋ ಟೈಗರ್‌ಗಳನ್ನು ಶೂಟ್ ಮಾಡಿ ಬಂದಿರುತ್ತಾನೆ ಈ ಹಂಟರ್ ಗಾರ್ಮನ್. ಇಂಡಿಯಾದ ಹೇಡಿಗಳನ್ನು ಹೆದರಿಸಿದಷ್ಟು ಈಜಿ ಅಲ್ಲಾ ಶೂರರಾದ ಇಂಗ್ಲಿಷರನ್ನ ಹೆದರಿಸೋದು”.

“ಇಂಗ್ರೇಜಿಯವರು ಶೂರರು ಅಂತ ಯಾವ ಬಾಯಿಲೆ ಹೇಳಿ ಕೋಂತಿರೊ? ನೀವು ಶೂರರಾಗಿದ್ರ ನಮ್ಮ ದೇಶಕ ತಕ್ಕಡಿ ಹಿಡಕೊಂಡ ಯಾಕ ಬರತಿದ್ರಿ? ತಲವಾರ್ ಹಿಡಕೊಂಡ ಬರತಿದ್ರಿ” ನರಸ್ಯಾ ಹಾಸ್ಯ ಮಾಡಿದ.

“ವ್ಯಾಪಾರಕಂತ ಬಂದು, ಮೋಸದಿಂದ ಒಂದೊಂದು ಸಂಸ್ಥಾನಾ ನುಂಗಿ ನಮ್ಮದೇಶಾನ ಆಳಾಕ ಹತ್ತಿದ್ರಿ. ಎದುರಿಸಿ ನಿಂತು ಕತ್ತಿ ಹಿಡಿದು ನೀವ ಯಾವ ಕಾಳಗಾ ಮಾಡೀರಿ? ಒಳ ಸಂಚಮಾಡಿ, ಪಿತೂರಿ ಮಾಡಿ ಸಂಸ್ಥಾನಾ ದೋಚಿಕೊಂಡು ನಮ್ಮ ದೇಶದಾಗ ಸರ್ಕಾರ ಆಗಿ ನಿಂತ್ರೆಲ್ಲಾ ನಿಮ್ಮಂತಾ ಠಕ್ಕರಿಗೆ ಶೂರರು ಅಂತ ಯಾರ ಅನಬೇಕು” ಎಂದನು ಲಕ್ಷ್ಮಣ.

“ನಿನ್ನಂತಾ ಹಳ್ಳಿಗಾಡಿನ ಒಬ್ಬ ಹುಂಬ ಹೀಯಾಳಿಸದೆ ನಮ್ಮ ಶೌರ್ಯಕ್ಕೆ ಕುಂದು ಬರದಿಲ್ಲಾ. ನಮ್ಮ ಸಾರ್ವಭೌಮತ್ವ ಕುಸಿದು ಬೀಳೋದಿಲ್ಲ. ಇಂಗ್ಲೆಂಡಿಗರು ಬರಿ ಶೂರರಷ್ಟೇ ಅಲ್ಲಾ. ಸಪ್ತ ಸಾಗರಗಳನ್ನು ದಾಟಿ ಬಂದು ಸೂರ್ಯಸ್ತವಾಗದಂತೆ ಸಾಮ್ರಾಜ್ಯ ಕಟ್ಟಿ ಆಳುತ್ತಿರುವ ಸಾರ್ವಭೌಮರು. ಎಂಪ್ರರ್ ಆಫ್ ಇಂಡಿಯಾ. ಇಂಗ್ಲಿಷರ ಶೌರ್ಯಕ್ಕೆ ಸಿಕ್ಕು ಇಂಡಿಯಾದ ಎಷ್ಟೋ ಸಂಸ್ಥಾನಿಕರು ಮಣ್ಣು ಮುಕ್ಕಿ ಹೋಗಿರುತ್ತಾರೆ. ನಿನ್ನಂತಾ ಸಿಲ್ಲಿ ಡೆಕೊಯಿಟನ ಪಾಡೇನು”? ಎಂದ ಗಾರ್ಮನ್‌ನಿಗೆ.

“ನಮ್ಮ ದೇಶದ ಸಂಸ್ಥಾನಿಕರು ಮಣ್ಣ ಮುಕ್ಕಿದ್ದು ಇಂಗ್ರೇಜಿಯವರ ಶೂರತನದಿಂದಲೂ ಗಾರ್ಮನ್ನಾ. ಸ್ವಾರ್ಥಿಗಳಾದ ನಮ್ಮ ದೇಶದಾಗಿನ ಪಾಪಿಷ್ಠ ಪಿತೂರಿಗಳಿಂದ” ಎಂದ ಲಕ್ಷ್ಮಣ.

“ನೀವು ಕೊಡೋ ಹುದ್ದೆ, ವತನಿಗಳಿಗೆ ಬಾಯ್ತರೆದು ನಮ್ಮ ದೇಶದಾಗಿನ ಕೆಲವು ದ್ರೋಹಿಗಳು ಪಿತೂರಿಯಾಗಿ ನಿಮಗ ಸಹಾಯ ಮಾಡದ್ರ… ನೀವ ಯಾವ ಸಂಸ್ಥಾನಾ ಗೆದ್ದಕೊಳ್ಳತಿದ್ರಿ?” ನರಸ್ಯಾ ಕೇಳಿದ.

“ಕಿತ್ತೂರ ಸಂಸ್ಥಾನಾ ನಿಮ್ಮ ಶೂರತನದಿಂದ ಗೆದ್ದಕೊಂಡ್ರ್ಯೋ ಅಥವಾ ಕನ್ನೂರ ಮಲ್ಲಪ್ಪಶೆಟ್ಟಿಯ ಕುಟಿಲತನದಿಂದ ಗೆದ್ದಕೊಂಡ್ರ್ಯೋ?”

“ಬಾಬಾಸಾಹೇಬರ ಬಂಗಾರದಂಥಾ ನರಗುಂದ ಸಂಸ್ಥಾನ ನಿಮ್ಮ ಶೂರತನದಿಂದ ವಶ ಆಯಿತೋ ಅಥವಾ ಬನಿಯಾಬಾಪುನಂಥಾ ದೇಶದ್ರೋಹಿ ಪಿತೂರಿಯಿಂದ ವಶಪಡಿಸಿಕೊಂಡ್ರ್ಯೋ?”

ಕಾರಾಭಾರಿಯೊಬ್ಬನ ಕೈವಾಡ ಇರದಿದ್ರ ಹಲಗಲಿ ಹುಲಿಗಳಾದ ಜಡಗಣ್ಣ ಬಾಲಣ್ಣರನ್ನ ನೀವು ಹಿಡೀತಿದ್ರ್ಯಾ?

“ನೇಗಿನಾಳ ವೆಂಕನಗೌಡ ಪಿತೂರಿಯಾಗದಿದ್ರ ಹುಲಿಯಂಥಾ ಸಂಗೊಳ್ಳಿ ರಾಯಣ್ಣರನ್ನ ನೀವು ಶೆರೆ ಹಿಡೀತಿದ್ರ್ಯಾ?”

“ಥುತ್ ನಿಮ್ಮ ಶೌರ್ಯಕ್ಕೆ ಬೆಂಕೀ ಹಾಕಾ. ಎಂತೆಂಥಾ ಸಂಸ್ಥಾನಿಕರನ್ನ ಮಣ್ಣ ಮುಕ್ಕಿಸಿದ್ದಿ ಅಂತ ಬಡಾಯಿ ಕೊಚ್ಚಕೊಳ್ಳತೀಯಲ್ಲಾ ಗಾರ್ಮನ್ನಾ ಈ ಲಕ್ಷ್ಮಣ್ಣನ್ನ ಹಿಡೀ ಬಾ”

ಹೀಗೆ ಲಕ್ಷ್ಮಣ ನರಸ್ಯಾ ಒಬ್ಬರ ನಂತರ ಒಬ್ಬರು ಗಾರ್ಮನ್‌ನನ್ನು ಅವಮಾನಿಸಿದರು.

“ಲುಚ್ಚ್ಮ್ಯಾ…. ನಿನ್ನನ್ನು ಸೆರೆ ಹಿಡಿಯುವುದಕ್ಕಾಗಿಯೇ ಈ.ಡಿ.ಎಸ್.ಪಿ ಗಾರ್ಮನ್ ಬಿಜಾಪುರದಿಂದ ಫಾಯು ಹಂಡ್ರೆಡ್ ಪೋಲಿಸ್ ಪಡೆಯೊಂದಿಗೆ ಬಂದಿರುತ್ತೇನೆ. ಗುಡ್ಡಾ ಇಳಿದು ಕಮ್ ಡೌನ್ ಕಮ್ ಕೆಳಗೆ ಇಳಿದು ಬಂದು ಶರಣಾಗು”.

“ಲಕ್ಷ್ಮಣ್ಣಾ ಶರಣ ಮಾಡೂದು ಹಡದ ತಾಯಿಗೆ ಮತ್ತ ನಮ್ಮ ಕುಲದೇವರಾದ ಆ ಆಂಜನೇಯ ಸ್ವಾಮಿಗೆ. ನಿನ್ನಂತಾ ಫಿರಂಗಿಯವನಿಗೆ ಶರಣ ಬರೋ ಜಾತಿ ನಂದಲ್ಲಾ ತಿಳೀತಾ ಗಾರ್ಮನ್ನ”. ಎಂದವನೇ ಲಕ್ಷ್ಮಣ ತನ್ನ ಕೈಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಲು ಅದು ಗಾರ್ಮನ್‌ನ ತಲೆಮೇಲೆ ಹ್ಯಾಟಿಗೆ ತಾಗಿ ಅದು ಹಾರಿ ನೆಲಕ್ಕೆ ಬಿತ್ತು. ಆಗ ರೊಚ್ಚಿಗೆದ್ದ ಗಾರ್ಮನ್ ತನ್ನ ರಿವಾಲ್ವರಿನಿಂದ ಲಕ್ಷ್ಮಣನತ್ತ ಗುಂಡು ಹಾರಿಸಿದ. ಅಲ್ಲಿಂದ ತಪ್ಪಿಸಿಕೊಂಡ ಲಕ್ಷ್ಮಣನ ಠೋಳಿ ಅನಗವಾಡಿ ಹತ್ತರ ಘಟಪ್ರಭಾ ನದಿಯನ್ನು ದಾಟಿ ತುಳಸೀಗೇರಿಗೆ ಹೋಗಿ, ಅಲ್ಲಿ ಆಂಜನೇಯನ ದರ್ಶನ ಮಾಡಿ ನಮಸ್ಕರಿಸಿ ಅಂದು ರಾತ್ರಿ ಅದೇ ಗುಡಿಯಲ್ಲಿ ವಸ್ತಿ ಮಾಡಿದರು. ರಾತ್ರಿ ಲಕ್ಷ್ಮಣನ ಕನಸಿನಲ್ಲಿ ಬಂದು ಆಂಜನೇಯ ಅಭಯ ನೀಡಿದ.

ಗಾರ್ಮನ್‌ನಿಂದ ತಪ್ಪಿಸಿಕೊಳ್ಳಲು ಲಕ್ಷ್ಮಣನ ಠೋಳಿ ಮತ್ತೆ ಶಾಬಾದದ ಕಡೆಗೆ ಸಾಗಿತು. ಸಂಕಟ ಬಂದಾಗ ಅವರಿಗೆ ಶರಣಪ್ಪನ ನೆನಪು ಆಗುತ್ತಿತ್ತು. ಶಾಬಾದದ ಪೂಜೇರಿ ಶರಣಪ್ಪನ ಹತ್ತಿರ ಅವರಿಗೆ ಯಾವ ಭಯವೂ ಇರುತ್ತಿರಲಿಲ್ಲ. ಗಾರ್ಮನ್ ಸಾಹೇಬನ ಕಾರ್ಯಾಚರಣೆ ಶೀಘ್ರಗತಿಯಲ್ಲಿ ಸಾಗಿತು. ತುಮ್ಮರಮಟ್ಟಿ ಗುಡ್ಡದಿಂದ ತಪ್ಪಿಸಿಕೊಂಡು ಹೋದ ಲಕ್ಷ್ಮಣನ ಠೋಳಿ ತುಳಸಿಗೇರಿಯಲ್ಲಿದ್ದದ್ದು ತಿಳಿದು ಗಾರ್ಮನ್ ಅಲ್ಲಿಗೆ ಬಂದ. ಅಷ್ಟರೊಳಗಾಗಿ ಸಿಂಧೂರಿನವರು ಅಲ್ಲಿಂದ ಜಾಗಾ ಖಾಲಿ ಮಾಡಿದ್ದರು.

ಗಾರ್ಮನ್ ಮತ್ತೆ ತರ್ಕಕ್ಕೆ ಸಿಲುಕಿದ ಲಕ್ಷ್ಮಣನ ಠೋಳಿ ಮೊಗಲಾಯಿ ಹದ್ದಿನ ಶಾಬಾದದಲ್ಲಿರುವುದಾಗಿ ಅವನಿಗೆ ಸುದ್ದಿ ಬಂತು. ಕೂಡಲೆ ಗಾರ್ಮನ್‌ನ ಗಾಡಿ ಶಹಬಾದದತ್ತ ಸಾಗಿತು. ಶಹಬಾದದಲ್ಲಿ ಆರೋಪಿಗಳು ಪೂಜೇರಿ ಶರಣಪ್ಪನ ಮನೆಯಲ್ಲಿ ತಂಗಿರುವುದಾಗಿ ತಿಳಿಯಿತು. ಪೋಲೀಸ ಪಡೆಯೊಂದಿಗೆ ಗಾರ್ಮನ್ ಸಾಹೇಬ ಪೂಜೇರಿ ಶರಣಪ್ಪನ ಮನೆಗೆ ಮುತ್ತಿಗೆ ಹಾಕಲು ಬರುತ್ತಿದ್ದ.

ಮನೆಯ ಒಳಗಿನ ಪೂಜಾ ಕೋಣೆಯಲ್ಲಿ ಲಕ್ಷ್ಮಣ ಶರಣಪ್ಪನೊಂದಿಗೆ ಏನೇನೋ ಪ್ರಶ್ನೆ ಕೇಳುತ್ತಿದ್ದ. ಹೊರಗಿನ ಹಜಾರದಲ್ಲಿ ನರಸ್ಯಾ ಸಾಬು, ಗೋಪಾಲಿಯರು ಮಧ್ಯ ಸೇವನೆಯಲ್ಲಿ ನಿರತರಾಗಿದ್ದರು. ಶರಣಪ್ಪನ ಮನೆಯ ಮುಂದೆ ಎತ್ತರವಾದ ಬೇವಿನ ಮರವಿತ್ತು. ನಿಡೋಣಿ ದುಂಡ್ಯಾ ಬಂದೂಕ ಬಾರ್ ಮಾಡಿಕೊಂಡು ಬೇವಿನ ಮರವೇರಿ ಕುಳಿತು ಯಾವ ಕಡೆಯಿಂದ ಪೋಲೀಸರು ಬರುತ್ತಾರೆ ಎಂಬುದನ್ನು ನೋಡಲು ತನ್ನ ದೃಷ್ಟಿ ಬೀರುತ್ತಿದ್ದ ತೆಗ್ಗಿ ನಾಯಕರು ಕೊಟ್ಟಿದ್ದ ಕಾಡತೂಸಿನ ಸರಪಟ್ಟಿಯನ್ನು ದುಂಡ್ಯಾ ತನ್ನ ಎದೆಗೆ ಬಿಗಿದುಕೊಂಡಿದ್ದ.

ಪೋಲೀಸರೊಂದಿಗೆ ಗಾರ್ಮನ್ ಬರುತ್ತಿರುವುದನ್ನು ಮರದ ಮೇಲೆ ಕುಳಿತಿದ್ದ ದುಂಡ್ಯಾ ನೋಡಿದ. ಗುಂಡು ಹಾರಿಸಲು ತನ್ನ ಕೈಯಲ್ಲಿದ್ದ ಬಂದೂಕು ಸಜ್ಜು ಮಾಡಿಕೊಂಡ. ಹಜಾರದಲ್ಲಿ ಹೆಂಡ ಕುಡಿಯುತ್ತ ಕುಳಿತಿದ್ದ ನರಸ್ಯಾ ನೋಡಿದ. ಒಳಗಿನ ಕೋಣೆಯಲ್ಲಿದ್ದ ತನ್ನ ಮಾಂವ ಲಕ್ಷ್ಮಣನಿಗೆ ಗಾರ್ಮನ್ ಬರುತ್ತಿರುವುದನ್ನು ಹೇಳಿದ. ಕೂಡಲೆ ಲಕ್ಷ್ಮಣನು ಶರಣಪ್ಪನ ಮನೆಯ ಕಿಡಕಿಯನ್ನು ಮುರಿದು, ಹಿತ್ತಲದಲ್ಲಿ ಜಿಗಿದು, ಅಲ್ಲಿ ದಟ್ಟವಾಗಿ ಬೆಳೆದ ಡಬಗಳ್ಳಿ ಪೊದೆಯಲ್ಲಿ ಮರೆಯಾದರು. ಬೇವಿನ ಮರದ ಮೇಲೆ ಕುಳಿತಿದ್ದ ದುಂಡ್ಯಾ ಗಾರ್ಮನ್ ಸಾಹೇಬ ಶರಣಪ್ಪನ ಮನೆ ಬಾಗಿಲ ಮುಂದೆ ಬಂದಾಗ ತನ್ನ ಕೈಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿದ. ಗುರಿತಪ್ಪಿ ಅದು ಗಾರ್ಮನ್‌ನಿಗೆ ಬಡಿಯಲಿಲ್ಲ. ಆಗ ಗಾರ್ಮನ್ ಹೊರಳಿ ನೋಡಿ, ಮರದ ಮೇಲೆ ಕುಳಿತಿದ್ದ ದುಂಡ್ಯಾನನ್ನೂ ನೋಡಿದ, ಕೂಡಲೆ ತನ್ನ ಕೈಯಲ್ಲಿದ್ದ ರಿವಾಲ್ವರಿನಿಂದ ಗುಂಡು ಹಾರಿಸಲು ಅದು ದುಂಡ್ಯಾ ಎದೆಯನ್ನು ಸೀಳಿತು. ಅವನ ಕೈಯೊಳಗಿನ ಬಂದೂಕು ಜಾರಿ ಕೆಳಗೆ ಬಿತ್ತು. ಅದರೊಂದಿಗೆ ರಕ್ತದಿಂದ ತೊಯ್ದ ದುಂಡ್ಯಾನ ಮೃತದೇಹವೂ ಮರದಿಂದ ನೆಲಕ್ಕೆ ಬಿತ್ತು. ಕೂಡಲೆ ಪೋಲೀಸರು ಅಲ್ಲಿಗೆ ಬಂದು ಸೇರಿದರು. ದುಂಡ್ಯಾನ ದೇಹವನ್ನು ಎತ್ತಿ ನೋಡಿದಾಗ ಅವನ ಎದೆಯ ಮೇಲೆ ಕಾಡತೂಸಿನ ಬೆಲ್ಟಯಿತ್ತು. ಗಾರ್ಮನ್ ಅದನ್ನು ತೆಗೆದುಕೊಂಡು ನೋಡಿದ. ಅದರ ಮೇಲೆ ವೆಂಕಪ್ಪಗೌಡ, ಯಲ್ಲಪ್ಪನಾಯಕ ಪಾಟೀಲ ತೆಗ್ಗಿ ಅಂತ ಹೆಸರು ಬರೆದಿತ್ತು. ಅಗಲೆ ಗಾರ್ಮನ್‌ಗೆ ಗೊತ್ತಾಯಿತು. ಸಿಂಧೂರ ಲಕ್ಷ್ಮ್ಯಾನಿಗೆ ತೆಗ್ಗಿಯ ನಾಯಕನ ಸಹಾಯವಿದೆಯೆಂಬುದು ಖಾತ್ರಿಯಾಯ್ತು.

ಗಾರ್ಮನ್ ಸಾಹೇಬರು ತೆಗಿಯ ನಾಯಕನನ್ನು ಹಿಡಿದರೆ ಲಕ್ಷ್ಮ್ಯಾ ತಾನೇ ಸಿಗುತ್ತಾನೆಂದು ಬೀಳಗಿಗೆ ಬಂದನು. ಪೋಲೀಸರನ್ನು ಕಳಿಸಿ ತೆಗ್ಗಿಯ ವೆಂಕಪ್ಪಗೌಡರನ್ನು ಬೀಳಗಿಗೆ ಕರೆಸಿಕೊಂಡನು. ಬೀಳಗಿಯಲ್ಲಿ ತನ್ನ ಕ್ಯಾಂಪ್ ಆಫೀಸಿನಲ್ಲಿ ಗಾರ್ಮನ್ ಸಾಹೇಬ ತೆಗ್ಗಿಯ ನಾಯಕರನ್ನು ವಿಚಾರಿಸತೊಡಗಿದ.

“ಕಮಾನ್ ವೆಂಕಪ್ಪಗೌಡರೆ ಕಮಾನ್, ಪ್ಲೀಜ್ ಟೇಕ್ ಎ ಸೀಟ್”. ಗಾರ್ಮನ್ನ ಕುಳಿತುಕೊಳ್ಳಲು ಹೇಳಿ ನಾಯಕರಿಗೆ ಖುರ್ಚಿ ತೋರಿಸಿದ. ವೆಂಕಪ್ಪಗೌಡರು ಗಾರ್ಮನ್ ನಿಗೆ ಕೈ ಮುಗಿದು ನಮಸ್ಕಾರ ಹೇಳಿ ಕುಳಿತುಕೊಂಡರು.

“ಭೇಟ್ಟಿಗೆ ಬರಬೇಕಂತ ಪೋಲೀಸ್ರ ಕೂಡ ಹುಕುಂ ಕಳಿಸಿದ್ರಿ”

“ಯಸ್… ಯಸ್… ನಿಮ್ಮ ಕೂಡ ನಾವು ಒಂದು ಇಂಪಾರ್ಟಂಟ್ ವಿಷಯ ಸೀಕ್ರೆಟಾಗಿ ಮಾತಾಡಬೇಕಿತ್ತು” ಎಂದು ಹೇಳಿದ ಗಾರ್ಮನ್ ಅಲ್ಲಿ ನಿಂತಿದ್ದ ಪೋಲಿಸರನ್ನು ಹಾಗೂ ನಾಯಕರ ಜೊತೆಗೆ ಬಂದಿದ್ದ ವಾಲೀಕಾರ ಶಿವಪ್ಪನನ್ನೂ ಹೊರಗೆ ಕಳಿಸಲು ಗಾರ್ಮನ್

“ಆಲ್ ಆಫ್ ಯೂ ಗೆಟ್ ಔಟ್” ಎಂದು ಆರ್ಡರ್ ಮಾಡಿದ. ಕೂಡಲೆ ಎಲ್ಲರೂ ಹೊರಗೆ ಹೋದರು. ನಂತರ ವಿಚಾರಣೆಗೆ ಆರಂಭವಾಯಿತು.

“ವಿಷಯ ಏನ್ ಹೇಳ್ರಿ ಸಾಹೇಬ್ರ? ನನ್ನ ಯಾಕ ಕರಿಸಿಕೊಂಡ್ರಿ? ಗೌಡ್ರ ಪ್ರಶ್ನೆ”.

ನೋಡಿ ನಾಯಕರೆ, ನೀವು ನಮ್ಮ ಸರ್ಕಾರದಿಂದ ಜಮೀನು ವಥನೀ ಪಡೆದುಕೊಂಡಿರುತ್ತಾನೆ. ಇಷ್ಟು ದಿವಸ ನಿಮಗೆ ಪೋಲಿಸ ಪಾಟೀಲ್ಕಿ ಅಥಾರ್ಟ ಕೊಟ್ಟು ಬ್ರಿಟಿಷ್ ಸರ್ಕಾರಾ ನಿಮಗೆ ಉಪಕಾರ ಮಾಡಿರುತ್ತಾನೆ. ಈಗ ನಮ್ಮ ಸರ್ಕಾರಕ್ಕೆ ನಿಮ್ಮಿಂದ ಒಂದು ಹೆಲ್ಪ್… ಹೆಲ್ಪ… ಅಂದರೆ ಸಹಾಯ ಆಗಬೇಕು. ಮಾಡತ್ತೀರಾ.

ಇದೇನ್ರಿ ಸಾಹೇಬ್ರ, ಹಳ್ಳಿಗೌಡ ಅಂತ ತಿಳದು ಹುಡಗಾಟ ಮಾಡತೀರೇನ್ರಿ? ಅಲ್ರಿ… ನೀವು ನಮ್ಮ ದೇಶನಾ ಆಳತಿರೊ ಸರ್ಕಾರಾ? ನಾನು ನಿಮ್ಮಿಂದ ವತನಿ ಪಡಕೊಂಡಿರೊ ಒಬ್ಬ ಗೌಡ. ನೀವು ನನ್ನಿಂದ ಸಹಾಯ ಕೇಳಬೇಕ್ರೆ? ಛೇ…. ತಗೀರಿ, ನಾಯಕಾ ಇದನ್ನ ಮಾಡು ಅಂತ ನೀವು ಆರ್ಡರ್ ಮಾಡ್ರಿ ನನಗ.

ಮಾಡುತ್ತಾನೆ ಮಾಡುತ್ತಾನೆ. ನಿಮಗೆ ಆರ್ಡರ್ ಮಾಡುತ್ತಾನೆ ನೋಡಿ ನಾಯಕರೆ ಆ ದರೋಡೆಖೋರ ಮತ್ತೆ ಕೊಲೆಗಾರ ಆ ಸಿಂಧೂರ ಲಚ್ಮ್ಯಾಗೆ ನೀವು ಸಪೋರ್ಟ ಮಾಡತ್ತೀರಿ ಅಂತಾ ನಮಗೆ ರಿಪೋರ್ಟ ಬಂದಿರುತ್ತಾನೆ ಆ ಲಚ್ಮ್ಯಾ ದರೂಡಿ ಮಾಡಿದ ದುಡ್ಡು ತಂದು ನಿಮಗೆ ಕೊಡುತ್ತಾನೆ. ನೀವು ಬುತ್ತಿ ಕಳಿಸಿ ಅವನಿಗೆ ಊಟಕ್ಕೆ ಹಾಕುತ್ತಿರಿ ಅಂತಾ ಕೇಳಿದ್ದೇವೆ. ಈಜಿಟ್ ಟ್ರೂ…?

“ಛೇ…ಛೇ… ಯಾವ ಸಿಂಧೂರಾ ಅಲ್ಲಿಯ ಲಕ್ಷ್ಮಣಾ, ಏನು ಕತೆ ಇದೆಲ್ಲಾ ಸುಳ್ಳ ಬಿಡ್ರಿ ಸಾಹೇಬ್ರ. ನನ್ನ ಸೇರಲಾರದವ್ರ ಯಾರೊ ನಿಮ್ಮ ಮುಂದ ಈ ಸುಳ್ಳ ಸುದ್ದಿ ಹೇಳ್ಯಾರ. ಅವಾ ದರೂಡಿ ಮಾಡಿದ ದುಡ್ಡಿಗೆ ನಾಯಕ ಆಶೇ ಮಾಡಲ್ರಿ. ದೇವರು ನನಗ ಸಾಕಷ್ಟ ಶ್ರೀಮಂತ್ಕಿ ಕೊಟ್ಟಾನ. ನಾನು ದಿನಾ ಮನೀಗಿ ಬರೊ ಬಡಬಗ್ಗರಿಗೆ ದಾನಾ ಧರ್ಮ ಮಾಡತೀನಿ”.

“ದ್ಯಾಟೀಜ್ ರೈಟ್ ವೆಂಕಪ್ಪಗೌಡರೇ, ನೀವು ದಾನಾ ಧರ್ಮಾ ಮಾಡಿ ಬಡವರ ಬಂಧು ಅಂತ ಹೆಸರಾಗಬೇಕು. ಆದರೆ ನಿಮಗೆ ವಥನೀ ಹಾಕಿ ಕೊಟ್ಟ ಸರ್ಕಾರಕ್ಕೆ ಎದುರಾಗಿ ನಿಂತಿರೊ ಒಬ್ಬ ದರೋಡೆಖೋರನಿಗೆ ಸಪೋರ್ಟ ಮಾಡುತ್ಥೀರಿ ಅಂತಾ ಆರೋಪ ಹೊತ್ತು ಅಪರಾಧಿಯಾಗಬಾರದು ಯೂ… ಅಂಡರಸ್ಟ್ಯಾಂಡ್?…”

“ಸಿಂಧೂರ ಲಕ್ಷ್ಮಣ್ಣಾ ಈ ಸೀಮ್ಯಾಗ ಬಂದು ದರೋಡಿ ಮಾಡತಾನಾ ಅನ್ನು ಸುದ್ದಿ ನಾನು ಜನರ ಬಾಯಿಂದ ಕೇಳೀನಿ. ಆದ್ರ ಅವಾ ಎಂಥಾವ ಅದಾನೊ, ಹ್ಯಾಂಗ ಅದಾನೊ ಅವನ ಮಾರೀನೊ ನಾನು ನೋಡಿಲ್ಲಾ. ಸುಮ್ಮ ಸುಮ್ನ ಸಂಶೆ ತಗೊಂಡು ನನ್ನ ಮ್ಯಾಲೆ ಅಪರಾಧ ಹೊರಸಬ್ಯಾಡ್ರಿ”

“ನೋ.. ನೋ.. ಯೂ ಆರ್ ಟೆಲ್ಲಿಂಗ್ ಲಾಯ್. ನೀವು ಸುಳ್ಳು ಹೇಳುತ್ತೀರಿ ನಾಯಕರೆ ನೀವು ಸುಳ್ಳು ಹೇಳುತ್ತೀರಿ. ಸತ್ಯ ಸಂಗತಿ ಮುಚ್ಚಿ ನೀವು ಸರ್ಕಾರನ್ನ ವಂಚಿಸಲಿಕ್ಕೆ ಹೊರಟೀರಿ. ಆ ದರೋಡೆಖೋರ ಲಕ್ಷ್ಮ್ಯಾನಿಗೆ ನಿಮ್ಮ ಸಪೋರ್ಟ ಇರದಿದ್ದರೆ ಈ ನಿಮ್ಮ ಕಾಡತೂಸಿನ ಬೆಲ್ಟು ಅವನ ಹತ್ರ ಯಾಕೆ ಬರುತ್ತದೆ ನೋಡಿ, ಇದರ ಮೇಲೆ ನಿಮ್ಮ ಹೆಸರು ಬರೆದಿರುತ್ತದೆ. ಈಜಿಟ್ ನೊಟ್ ಯುವರ್ಸಾ?” ಬೆಲ್ಲು ತೋರಿಸುತ್ತಾನೆ. ಅವನ್ನು ನೋಡಿ ವೆಂಕಪ್ಪಗೌಡ ಗಾಬರಿಗೊಳ್ಳುತ್ತಾನೆ. ಬಾಯಿಂದ ಮಾತು ಹೊರಡದಾಯ್ತು. ಪ್ರಸಂಗದಿಂದ ಜಾರಿಗೊಳ್ಳಲೆತ್ನಿಸಿ.

“ಸಾಹೇಬ್ರ ಈ ಕಾಡಾತೋಸಿನ ಬೆಲ್ಟು ನಂದ…ಹೌದ್ರಿ”

“ನಿಮ್ಮ ಬೆಲ್ಟು ಆ ಲಚ್ಮ್ಯಾನ ಹತ್ತರ ಯಾಕೆ ಬರುತ್ತದೆ?”.

ನೋಡ್ರಿ ಸಾಹೇಬ್ರ, ಒಮ್ಮೆ ನಮ್ಮ ವಾಲೀಕಾರ ಸೋಮಾ ಬಂದೂಕ ತಗೊಂಡು ಬ್ಯಾಟಿಗೆ ಹೋಗಿದ್ದಾ, ಆವಾಗ ಅವಾ ಈ ಬೆಲ್ಟು ತನ್ನ ಎದೀಗೆ ಕಟಿಗೊಂಡಿದ್ದಾ. ಬ್ಯಾಟೀ ಆಡಿ ದಣುವ ಆರಿಸಿಕೊಳ್ಳಾಕಂತ ನಮ್ಮ ಸೋಮಾ ಕಪ್ಪರ ಪಡಿಯವ್ವನ ಗುಡಿಗೆ ಹೋಗಿದ್ದನಂತ. ಅಲ್ಲೆ ಅವಗ ಸಿಂಧೂರ ಲಕ್ಷ್ಮಣ್ಣಾ ಭೆಟ್ಟಿ ಆಗಿದ್ನಂತ, ಬ್ಯಾಟೀ ಆಡಾಕ ನಮ್ಮ ಬಂದೂಕಿಗೆ ಕಾಡತೋಸ ಇಲ್ಲಾ ಈ ಸರಪಟ್ಟಿ ನನಗ ಕೊಡು ಅಂತ ಲಕ್ಷ್ಮಣ್ಣಾ ಅದನ್ನ….”

“ನೋ… ನೋ… ನೋ ಆಯ್ ಡೋಂಟ್ ಬಿಲೀವ್ ಯಿಟ್. ನಿಮ್ಮ ಮಾತು ನಾನು ನಂಬುವುದಿಲ್ಲಾ. ಆ ಲಚ್ಮ್ಯಾಗೆ ಹೆದರಿ ನೀವು ಹೀಗೆ ಸುಳ್ಳುಚ್ಮ್ಯಾ ಹೇಳುತ್ತೀರಿ. ನೋ ಡೌಟ್ ಡೆಫಿನಿಟ್ಲೀ ದೆರೀಜ್ ಕ್ಲೋಜ್ ರಿಲೇಶನ್ ಬಿಟ್ವಿನ ಯೂ… ಅಂಡ್ ದ್ಯಾಟ್ ಬ್ಲಡೀ ಲಚ್ಮ್ಯಾ..ಗೌಡರೆ, ಡೋಂಟ್ ಬಿ ಅಫ್ರೆಡ್ ಆ ಲಚ್ಮ್ಯಾಗೆ ನೀವು ಹೆದರಬೇಕಾಗಿಲ್ಲ. ನಿಮ್ಮ ಪ್ರೊಟೆಕ್ಷನ್ನಿಗೆ ಪೋಲೀಸ್ ಪಾರ್ಟಿ ಕೊಡುತ್ತೇನೆ. ಆ ಲಚ್ಮ್ಯಾನ್ನ ನೀವು ನಮಗೆ ಸೆರೆಹಿಡಿದು ಕೊಡಬೇಕು ಅಥವಾ ಗುಂಡು ಹಾರಿಸಿ ಕೊಂದು ಅವನ ಹೆಣಾ ನಮಗೆ ಒಪ್ಪಿಸಬೇಕು.”

“ಏನಂದ್ರಿ ಆ ಲಕ್ಷ್ಮಣ್ಣನ್ನ ನಾನು ನಿಮಗ ಸೆರೆಹಿಡಿದ ಕೊಡಬೇಕ? ಗುಂಡ ಹಾರಿಸಿ ಅವನ್ನ ಕೊಲ್ಲಬೇಕ?”

“ಯಸ್… ಯಸ್… ಯೂ ಮಸ್ಟ್ ಡೂ ದಿಸ್. ನೀವು ಇದನ್ನು ಮಾಡಲೆಬೇಕು. ನಮ್ಮ ಸರಕಾರದಿಂದ ನಿಮಗೆ ಪ್ರಜೆಂಟ್ ಕೊಡಿಸುತ್ತೇನೆ. ಬಿರುದು ಕೊಡಿಸುತ್ತೇನೆ”.

“ಬೆಂಕಿ ಹಚ್ಚರಿ ಆ ನಿಮ್ಮ ಬಿರುದು ಬಹುಮಾನಕ್ಕ. ನನ್ನ ಆಶ್ರೇದಿಂದ ಬದುಕತೀನಿ ಅಂತ ನನ್ನ ನಂಬಿಕೊಂಡಿರೊ ಒಬ್ಬ ಜಾತಿ ಬಾಂಧವಗ ವಿಶ್ವಾಸಘಾತ ಮಾಡಿ ನಿಮ್ಮಿಂದ ನಾನು ಬಿರದು ಬಹುಮಾನಾ ಪಡಕೋಬೇಕ? ಸಾಹೇಬ್ರ ಇದಕ್ಕಾಗಿ ನೀವು ನನಗೆ ಇಡೀ ಬೀಳಗಿ ಪೇಠಾನ.. ಜಹಗೀರ ಹಾಕಿ ಕೊಟ್ಟರೂ ನನ್ನಿಂದ ಈ ಪಾಪದ ಕೆಲಸಾ ಆಗೂದಿಲ್ಲ”

ಡೊಇಟ್ ಸೇ ಲೈಕ್ ದ್ಯಾಟ್. ಗೌಡರೆ ಹಾಗೆ ಅನ್ನಬೇಡಿರಿ. ಆ ಲಚ್ಮ್ಯಾನ್ನ ಸಾಯಿಸಬೇಕು ಅಂತ ಸರ್ಕಾರಾ ನಿಮಗೆ ಆರ್ಡರ್ ಮಾಡುತ್ತೇದೆ

“ಸಾಹೇಬ್ರ…”

“ಸರ್ಕಾರದ ಆರ್ಡರ್ ಅಮಾನ್ಯ ಮಾಡಿದರೆ, ಅಫೆನ್ಸೀಗಾಗಿ ನಿಮ್ಮ ವಥ ನೀ ಬಾಲ್‍ಸಾತ್ ಮಾಡಿಸುತ್ತಾನೆ. ನಿಮಗೆ ವಥನೀ ಬೇಕೋ ಅಥವಾ ಅ ದರೋಡೆಖೋರ ಲಚ್ಮ್ಯಾ ಬೇಕೋ ವಿಚಾರ ಮಾಡಿ ನಮಗೆ ಉತ್ತರಾ ಹೇಳಿರಿ?”

ಯೋಚಿಸಿ ನಿರ್ಧಾರಕ್ಕೆ ಬರಲು ವೆಂಕಪ್ಪಗೌಡರಿಗೆ ಸ್ವಲ್ಪು ಅವಕಾಶಕೊಟ್ಟು ಗಾರ್ಮನ್ ಸಾಹೇಬ ಒಳಗೆ ಹೋದನು. ಲಕ್ಷ್ಮಣ್ಣ ಉಳಿಸಿಕೋ ಬೇಕಾದ್ರ ವತನೀ ಕಳಕೋಬೇಕು. ವತನೀ ಉಳಿಸಿಕೋ ಬೇಕಾದ್ರ ಲಕ್ಷ್ಮಣ್ಣನ್ನ ಕಳಕೋಬೇಕು. ಇದರಾಗ ಯಾವದ ಉಳಿಸಿಕೋಬೇಕು, ಯಾವದ ಕಳಕೋಬೇಕು. ತಿಳೀಲಾರದ ವೆಂಕಪ್ಪಗೌಡರು ಪೇಚಾಹ ಹತ್ತಿದರು.

“ಛೇ…. ಛೇ…. ಯಾವದೂ ತಿಳೀದಂಗಾತು. ಹೊನ್ನಿನ ರಾಶೀಮ್ಯಾಲ ಹಾವು ಹೆಡಿಯೆತ್ತಿ ಕುಂತಂಗಾತ್. ಹೊನ್ನಿಗೆ ಕ್ಐ ಹಾಕಿದ್ರ ಹಾವು ಕಚ್ಚತೈತಿ. ಹಾವು ಕಚ್ಚತೈತಂತ ಹೆದರಿ ಬಿಟ್ರ ಹೊನ್ನ ಕಳಕೋಬೇಕಾಗತೈತಿ. ಯಾವದೂ ತಿಳೀದಂಗಾಯಿತು. ಶಿವ್ಯಾ… ಲೇ ಶಿವ್ಯಾ” ಗೌಡರು ವಾಲೀಕಾರರನ್ನು ಕೂಗಿದರು. ಕೂಡಲೇ ಶಿವಪ್ಪ ಒಳಗೆ ಬಂದ.

“ಯಾಕೆಪ್ಪಾ… ಏನ ಕೇಳಿದ್ರು ಸಾಹೇಬ್ರು?”

ಸಾಹೇಬರು ನನ್ನ ಜೀವಾನ.. ಕೇಳೀದ್ರಲೆ ಶಿವ್ಯಾ ನನ್ನ ಜೀವಾನ ಕೇಳಿದ್ರು. ಇಷ್ಟ ದಿನಾ ವರ್ಚಸ್ಸಿನಿಂದ ಮೆರೆದಾಡಿದ ಈ ವೆಂಕಪ್ಪಗೌಡನ ವತನೀ ಈಗ ಮಣ್ಣಗೂಡ ಹೊತ್ತು ಬಂತಲೆ ಶಿವ್ಯಾ, ನನ್ನ ವತನೀಗೆ ಸಂಚಕಾರ ಬಂತು.

“ಅಂಥಾದ್ದೇನಾತೆಪ್ಪ ಈಗ”

“ಸಿಂಧೂರ ಲಕ್ಷ್ಮಣ್ಣಗ ನನಗ ಮದ್ದತ ಐತೆಂತ ಸೇರಲಾದವ್ರು ಯಾರೊ ಸರ್ಕಾರಕ್ಕ ಸುದ್ದಿ ಮುಟ್ಟಿಸ್ಯಾರ. ಅದಕ್ಕ ಸಾಕ್ಷಿ ಅನ್ನೂವಂಗ ನಾನು ಲಕ್ಷ್ಮಣ್ಣಗ ಕೊಟ್ಟಿದ್ದ ಕಾಡತೋಸಿನ ಪಟ್ಟಾ ಹ್ಯಾಂಗೋ ಸಾಹೇಬ್ರ ಕೈಗೆ ಸಿಕ್ಕತಿ”

“ಇದೆಂಥಾ ಕೆಲಸ ಆತಲ್ಲೆಪ್ಪಾ. ಹೆದರಕಿ ಇದ್ದ ಜಾಗಾದಾಗ ಹೊತ್ತು ಮುಣಗಿದಂಗಾತಲ್ಲ”

“ಲಕ್ಷ್ಮಣ್ಣನ ಸೆರೆ ಹಿಡಿದು ಸರ್ಕಾರಕ್ಕೆ ಒಪ್ಪಿಸಬೇಕು. ಅದು ಸಾಧ್ಯ ಆಗದಿದ್ರ ಗುಂಡ ಹಾಕಿಸಿ ಅವನ್ನ ಕೊಲ್ಲಸಬೇಕು. ಹೀಂಗಂತ ಸರ್ಕಾರಾ ಹುಕುಂ ಮಾಡಿತು. ಹುಕುಂ ಪಾಲಸಿದಿದ್ರ ಸರ್ಕಾರಾ ನಮ್ಮ ವತನೀ ಬಾಲ್‍ಸಾತ್ ಮಾಡತೈತಿ ಒಂದ ಕಡೆ ಊರು ಕೇರಿ ಮನಿ ಮಾರು ಬಿಟ್ಟ ಬಂದು ನನ್ನ ಬೆನ್ನಿಗೆ ಬಿದ್ದಿರೋ ಲಕ್ಷ್ಮಣ್ಣಾ. ಇನ್ನೊಂದ ಕಡೆ ನಮ್ಮ ವಂಶಲಕ್ಷ್ಮಿಯಾಗಿ ಮೆರೀತಿರೋ ವತನೀ ಯಾವದ ಉಳಿಸಿಕೊಬೇಕು ಯಾವದ ಕಳಕೋಬೇಕು? ತಿಳೀಲಾದಂಗಾತು”.

“ಬಿಡ್ರಿ ಇದಕ್ಯಾಕ ಇಷ್ಟ ಮಾಡತೀರಿಯೆಪ್ಪಾ. ಈಗ ಸುಮ್ಮನ ಸರ್ಕಾರ ಹೇಳಿಧಂಗ ಹೂಂ ಅಂದ ಬಿಡ್ರಿ”

“ಏನಲೆ ಶಿವ್ಯಾ, ಏನ್ ಹೇಳತೀ ನೀನು? ತನ್ನ ಜೀವದಕಿಂತ ಹೆಚ್ಚಾಗಿ ನನ್ನ… ನಂಬಿಕೊಮ್ಡಿರೊ ಆ ಲಕ್ಷ್ಮಣ್ಣಗ ವಿಶ್ವಾಸಘಾತ ಮಾಡಿದ್ರ ನಾನು ಮಿತ್ರದ್ರೋಹಿ, ಕುಲದ್ರೋಹಿ ಆಗಾಕಿಲ್ಲ? ನಾಳಿನ ಇತಿಹಾಸದಾಗ ನನ್ನ ಹೆಸರು ಯಾವ ಮನಿಯಿಂದ ಬರದಾರು? ಕೇಳಿದವ್ರೆಲ್ಲಾ ತೆಗ್ಗಿ ಹೆಸರಿಗೆ ಕೆಸರ ಉಗ್ಗಾಕಿಲ್ಲ”.

“ಎಪ್ಪಾ, ಬ್ಯಾನಿಯಿಲ್ಲದ ಮಂದಿ ಬಲ್ಲಂಗ ಮಾತಾದಿದ್ರ ಅದನ್ನ ನಾವಾಯಾಕ ಕಿವಿಗೆ ಹಾಕ್ಕೊಬೇಕೆಪ್ಪಾ. ನಮ್ಮ ಹೊಟ್ಟಿ ಕಡದಾಗ ನಾವ.. ಅಜಿವಾಣ ತಿನಬೇಕಪ್ಪಾ. ವತನೀ ಹ್ವಾದ ಮ್ಯಾಲೆ ಊರ ಪುಣ್ಯ ಏನ ಉಳಿತೈತಿ? ಗಡಿಗಿಯಿತ್ತಂದ್ರ ನುಚ್ಚ ಮಾಡಾಕ ಬರತೈತಿ. ಗಡಗೀನ ಒಡಿತಂದ್ರ ನುಚ್ಚ ಎದರಾಗ ಮಾಡಬೇಕಪ್ಪ. ನೀವು ಸುಮ್ಮನಿರಿ ಇದರಾಗೇನಾರ ಕೆಟ್ಟ ಹೆಸರ ಬಂದ್ರ ಹೊರಾಕ ನಾ ಗಟ್ಟಿ ಅದೀನಿ. ನೀವು ಈಗ ಸಮ್ಮನ ಸಾಹೇಬ್ರ ಹೇಳಿದ್ದಕ್ಕೆ ಹೂಂ ಅಂದಬಿಡ್ರಿ. ವಾಲೀಕಾರ ಶಿವಪ್ಪ ವೆಂಕಪ್ಪಗೌಡರಿಗೆ ವಿಪತ್ತಿನೊಳಗಿಂದ ಪಾರಾಗಲಿಕ್ಕೆ ಹಂಚಿಕೆಯನ್ನು ಹೇಳಿದ. ಅಷ್ಟರಲ್ಲಿ ಒಳಗಿನಿಂದ ಬಂದ ಗಾರ್ಮನ್,

“ಏನು ಮಾಡಿದಿರಿ ಗೌಡರೆ? ಯಾವ ನಿರ್ಧಾರಕ್ಕೆ ಬಂದಿರಿ ಕಮಾನ್ ಟೆಲ್ ಮಿ ಯುವರ್ ಡಿಸೀಜನ್”

ಸಾಹೇಬ್ರ ನಮ್ಮ ಗೌಡ್ರು ಹೇಳೂದ್ರಾಗ ಏನೈತ್ರಿ ಅವರು ನಿಮ್ಮ ಹುಕುಮಿನ ಪ್ರಕಾರ ನಡಕೊಂತಾರಾ ಆಯಿತ್ರ್ಯಾ”

ವ್ಹೆರಿಗುಡ್ ವ್ಹೆರಿಗುಡ್ ಥ್ಯಾಂಕ್ಯೂ, ವೆಂಕಪ್ಪಗೌಡರೆ ನಮ್ಮ ಕೆಲಸ ಎಂದು ಯಾವಾಗ ಮಾಡುತ್ತೀರಿ?

ಈ ನಮ್ಮ ವಾಲೀಕಾರ ಶಿವ್ಯಾ ಬಂದು ಮುಂದಿನ ಕೆಲಸದ ಬಗ್ಗೆ ನಿಮಗೆಲ್ಲಾ ಮಾಹಿತಿ ಕೊಡತಾನ್ರಿ. ಈಗ ನಮಗ ಹೋಗಾಕ ಪರವಾನಿಗಿ ಕೊಡ್ರಿ.

ಆಲ್ ರೈಟ್ ಹೋಗಿ ಬನ್ನಿ, ಗೌಡರೇ, ಹೋಗಿ ಬನ್ನಿ ಗುಡ್ ಬಾಯ್.

ಬೀಳಗಿಯಿಂದ ವೆಂಕಪ್ಪಗೌಡ ಮತ್ತು ವಾಲೀಕಾರ ಶಿವಪ್ಪ ತೆಗ್ಗಿಗೆ ಬಂದರು. ವೆಂಕಪ್ಪಗೌಡರಿಗೆ ತಳಮಳ ಸುರುವಾಯಿತು. ಲಕ್ಷ್ಮಣನನ್ನು ಕಳೆದುಕೊಳ್ಳುವುದು ಬೇಡಾ ಅಂತ ಅವರ ಹೃದಯ ಹೇಳುತ್ತಿತ್ತು. ಅವರ ವಾಲೀಕಾರರಿಗೆ ಗೌಡರ ವತನೀ ಉಳಿಯುವುದು ಬೇಕಾಗಿತ್ತು. ಗಾರ್ಮನ್ ಸಾಹೇಬನಿಗೆ ಕೊಟ್ಟ ಮಾತನ್ನು ಕಾರ್ಯರೂಪಕ್ಕೆ ತರಲು ವಾಲೀಕಾರ ಶಿವಪ್ಪ ಮುಂದಿನ ಯೋಚನೆಯನ್ನು ಮನದಲ್ಲಿ ಹೆಣೆಯುತ್ತಿದ್ದ.

ತೆಗ್ಗಿಯಲ್ಲಿ ವೆಂಕಪ್ಪಗೌಡರಿಗೆ ಬಂದೊದಗಿದ ವಿಪತ್ತಿನಿಂದಾಗಿ ಅವರಿಗೆ ಮಾನಸಿಕ ತೊಳಲಾಟ ನಡೆಯಿತು. ಗಾರ್ಮನ್ ಸಾಹೇಬನು ಮಾಡಿದ ಆರ್ಡರಿನಿಂದಾಗಿ ಗೌಡರು ಜರ್ಜಿತರಾಗಿದ್ದರು. ದಿನವಿಡೀ ಮತಿಗೆ ಮಂಕು ಕವಿದರಂತೆ ಯಾರೊಂದಿಗೂ ಮನಬಿಚ್ಚಿ ಮಾತನಾಡದೇ ಮೌನಿಯಾಗಿರುತ್ತಿದ್ದರು. ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡುತ್ತಿರಲಿಲ್ಲ. ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಗೌಡರ ಅವಸ್ತೆಯನ್ನು ನೋಡಿ ಮನೆಯವರೆಲ್ಲ ಚಿಂತೆಗೀಡಾದರು. ಗೌಡರ ಗೆಳೆಯರು, ಆಪ್ತ ಸಂಬಂಧಿಕರು ಭೆಟ್ಟಿಗಾಗಿ ಬಂದರು. ಗೌಡರ ಮನದ ಕೊರಗಿಗೆ ಕಾರಣ ಕೇಳಿದರು.

ಗೌಡ್ರ, ಯಾವಗಾಲೂ ನಗನಗ್ತಾಯಿರತಿದ್ದ ನೀವು ಈಗ್ಯಾಕ ಹಿಂಗ ಮಂಕಾಗಿ ಮನ್ಯಾಗ ಕುಂತೀರಿ? ಏನಾಗೇತ್ರಿ ನಿಮಗ?

ನನಗೇನೂ ಆಗಿಲ್ರಿಪಾ ನಾನು ಚನ್ನಾಗೇ ಇದ್ದೀನಲ್ಲಾ.

ಇಲ್ಲಾ, ಮನಸನ್ಯಾಗ ನೀವೇನೊ ಮುಚ್ಚಿ ಇಟಕೊಂತಿರಿ? ಮನಸಬಿಚ್ಚಿ ಹೇಳಿದ್ರಾ ಅದಕ್ಕ ಏನಾರ ಯವಸ್ತಾ ಮಾಡಾಕ ಬಂದೀತು. ಮನಸಿನಾಗ ಇಟಕೊಂಡು ನೀವು ಅದಕ್ಕ ಕೊರಗಿ ಸಣ್ಣಾಗಾಕ ಹತ್ತಿದ್ರ ನಮಗ ಹ್ಯಾಂಗ ಸಮಧಾನ ಆಗಬೇಕು? ಹೇಳ್ರಿ ಗೌಡ್ರ ಅಂಥಾ ಯಾಳೆ ನಿಮಗೇನ ಬಂದೈತಿ, ಅದರ ನಿವಾರಣಿ ಮಾಡಾಕ ನಾವಿಲ್ಲೇನ್ರಿ? ನಾವೆಲ್ಲಾ ಸತ್ತ ಹೋಗಿವೆಂತ ತಿಳಿದೀರೇನು? ಭೆಟ್ಟಿಗೆ ಬಂದಿದ್ದ ಬಂಧುಗಳು ಗೌಡರಿಗೆ ಬಂದಿದ್ದ ವಿಪತ್ತು ನಿವಾರಿಸುವ ಭರವಸೆ ನೀಡಿದರು.

ಅಗ ವಾಲೀಕಾರ ಶಿವಪ್ಪ ಮತ್ತು ಪಾಮಲಿ ಸೋಮಪ್ಪ ಅಲ್ಲಿಗೆ ಬಂದರು.

ನಮ್ಮ ಗೌಡ್ರಿಗೆ ಏನೂ ಆಗಿಲ್ರೀ. ನೀವು ಕಾಡಿಸಿ, ಪೀಡಿಸಿ ಕೇಳಿ ಅವರಿಗೆ ಕಾಟಾ ಕೊಡಬ್ಯಾಡ್ರಿ ಶಿವಪ್ಪ ಹೇಳಿದ.

ನಮ್ಮ ಗೌಡ್ರು ಸೇವಾಕ ನಾವೆಲ್ಲ ಯಾವಾಗಲೂ ಸಿದ್ಧ ಅದೀವಿ ಸೋಮಪ್ಪ ಹೇಳಿದ.

ನೋಡ್ರೆಪ್ಪಾ, ನೀವಿಬ್ರೂ ಕೂಡಿ ಗೌಡ್ರನ್ನ ಚೆನ್ನಾಗಿ ನೋಡಿಕೊಳ್ರಿ ಅಂತ ಬಂದಿರೊ ಗೆಳೆಯರು, ನೆಂಟರು, ಆಪ್ತ ಬಂಧುಗಳೆಲ್ಲ ಗೌಡರ ಮನೆಯಿಂದ ಹೊರಟು ಹೋದರು.